ಎತ್ತು ಮಾರುವನೊಬ್ಬ ಮುತ್ತು ಮಾರುವನೊಬ್ಬ ಕಂದಾ
ನಾಳೆ ತುತ್ತು ತಿಂದವನು ಕಂದ ನರಲೋಕದಲ್ಲಿ ಮಿತ್ತಾಗಿ ಬರುತಾನೆ ದೊಡ್ಡಮ್ಮ
ಸಂದೆಯಾದ ಮೇಲೆ ಒತ್ತು ಬಿದ್ದು ಅಸ್ತಂಗವಾದ ಮೇಲೆ
ಸಂತೇ ಕಿತ್ತು ಹೋದ ಮೇಲೆ ದೊಡ್ಡಮ್ಮಾ
ಯಾರ್ಯಾರಿಗೆ ಲಾಭ ಯಾರ್ಯಾರಿಗೆ ಮೋಸ ಅಂದರೆ

ನಾಳೆ ದಲ್ಲಾಳಿಗೆ ಲಾಭ ಕಣೋ
ಗಂಟ್ನೊನಿಗೆ ಮೂರು ನಾಮ ಕಣೋ || ಸಿದ್ಧಯ್ಯ ||

ಅಮ್ಮಾ ದಲ್ಲಾಳಿಗೆ ಲಾಭ
ಗಂಟ್ನೋವಿಗೆ ಮೂರು ನಾಮ
ಈ ನರಲೋಕದ ಒಳಗೆ
ಆಯ್ತದೆ ದೊಡ್ಡಮ್ಮ
ನಾ ಯೇಳುವಂತೆ ಕಲಿಗಳನು
ಬರಕೊಮ್ಮೆ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ಅವ್ವಾ ನಾಳೆ ಕಲಿವೊಳಗೆ
ಕೇಳವ್ವ ನನ ಕಂದಾ

ಏನೂ ತಿಳಿದಿದ್ದವಳಿಗೆ
ನಾಳೆ ಪಟ್ಟ ಕಟ್ಟುತಾರೆ
ಅವ್ವಾ ಗಂಡುಳ್ಳು ಗರತೀರ
ನಾಳೆ ಬಾಗಲಲ್ಲಿ ನಿಲ್ಲಿಸುತಾರೆ
ನಾಳೆ ಹಾದರಗಿತ್ತಿ ಗಂಡ
ಗರತಿಗೆ ದೇಸಾಂತ್ರಾ ಕಣೋ || ಸಿದ್ಧಯ್ಯ ||

ನಾಳೆ ಹಾದರಗಿತ್ತಿ ಗಂಡ
ನಾಳೆ ಗರತಿಗೆ ದೇಸಂತ್ರ
ಈ ಲೋಕದ ಮೇಲೆ ಕಂದಾ
ಆಯ್ತದೆ ದೊಡ್ಡಮ್ಮ
ಇಂತಾ ಹಾಳಾದ ಕಲಿಗಳು
ಭೂಮಿ ಮೇಲೆ ಬರುವುತಾರೆ || ಸಿದ್ಧಯ್ಯ ||

ಇಂತಿಂತಹ ಹಾಳು ಕಲಿಗಲು ಕಂದಾs
ಈ ಭೂಮಿ ಭೂಲೋಕದ ನಡುವೆ ನರಲೋಕದಲ್ಲಿ
ಬಂದು ಬುಡ್ತರಲ್ಲ ದೊಡ್ಡಮ್ಮ
ಈ ಪ್ರಪಂಚವೆಲ್ಲಾ ಬೆಳೆದುಬುಡ್ತಲ್ಲೋ ಕಂದಾ
ಈ ಕಲಿ ಬಂದ ಮೇಲೆ ಮಗಳೇ
ನಾ ಯಾವ ರೀತಿ ಸತ್ಯವಂತ ದೇವುರಂತ ಕಣ್ಣಿಂದ ನೋಡಿಕೊಂಡು
ಈ ನರಲೋಕದಲಿ ನಾನು ಬಾಳಿ ಬದುಕಬೇಕವ್ವ ದೊಡ್ಡಮ್ಮ

ಈ ನರಲೋಕದ ಕಲಿಯ ನಾನು
ನೋಡುನಾರೆ ಎಂದರಲ್ಲಾ || ಸಿದ್ಧಯ್ಯ ||

ಈ ನರಲೋಕದ ಕಲಿಯಾ
ಹಾಳಾದ ಕಲಿಗಳ
ನೋಡು ನಾರಿ ನನ ಕಂದಾ
ಈ ನರಲೋಕದ ಒಳಗೆ
ಇರಲಾರೆ ನನ ಮಗಳೆ
ಅವ್ವಾ ಸತ್ಯವಂತ ದೇವ್ರುವಂತ
ನಾನಾಗಿ ಹೇಳಲಾರೆ || ಸಿದ್ಧಯ್ಯ ||

ಸತ್ಯವುಳ್ಳಾದ ದೇವರು ಅಂತೇಳಿ
ಈ ನರಲೋಕದಲ್ಲಿ ನಾನು ಹೇಳಿಕೊಂಡು
ಈ ಕಲೀಯುಗದಲ್ಲಿ ಬಾಳಿ ಬದುಕಲಾರೆ ದೊಡ್ಡಮ್ಮ
ದೊಡ್ಡಮ್ಮ ಇದೇ ಕಲಿ ಅಂತ ತಿಳಿದುಬುಟ್ಟಿಯಾ
ಇದೇ ಪದ್ದು ಅಂತ ತಿಳಕಂಡಿಯಾ ಮಗಳೆ
ಇನ್ನೂ ಹೇಳುತೀನಿ ಕೇಳು

ನಾಳೆ ಕಲಿ ಅಂದರೆ ದೊಡ್ಡಮ್ಮಾ
ಅವ್ವಾ ಊರಲ್ಲಿ ಇರುವಂತ
ದೈವ ದೇವಮಾನ್ರು ಎಂದರೆ ನನ ಕಂದಾ
ಅವ್ವಾ ದೇವಮಾನವ್ರು ಅಂದರೆ ನನ್ನ ಮಗಳೆ

ನರಮಾನವರ ಪೂಜೆಗೆ
ಬೆರಕಂಡು ನನ ಕಂದಾ
ಊರು ಸೇರಿದರು
ಈ ನರಲೋಕದ ಒಳಗೆ
ಊರು ಊರಲಿರುವ
ಇರುವಂತ ದೇವರುಗಳು
ಅಮ್ಮಾ ದೀಪಧೂಪ ಇಲ್ಲದೆ
ಕಂದಾ ಪೂಮೆ ಪುನಸ್ಕಾರ ಇಲ್ಲದೆ
ಅವರು ಅಟ್ಟ ಸೇರಬೇಕು
ಒಂದು ಬೆಟ್ಟ ಸೇರಬೇಕು
ಒಂದು ಗುಡ್ಡ ಸೇರಲೇಬೇಕು
ಕೇಳವ್ವ ದೊಡ್ಡಮ್ಮಾ
ಅಮ್ಮಾ ಊರಲ್ಲಿ ಇರುವಂತ
ಮಾರೀರು ಮಸಣೀರು
ದುರ್ಗೀರು ಚವಡೀರು
ದೇವರುಗಳು ನನ ಕಂದ
ಅವರು ಬೆಟ್ಟ ಹತ್ತಿದ ಮೇಲೆ
ಇವರು ಕಾಡು ಮರಗಳ ಕಂದ
ಮಾರೀರು ಸೇರಬೇಕು || ಸಿದ್ಧಯ್ಯ ||

ಊರಲ್ಲಿ ಇರುವ ಮಾರಿಮಸಣೀರೆಲ್ಲಾ
ಮರಮುಂಡಿ ಕಾಡು ಸೇರಬೇಕು ದೊಡ್ಡಮ್ಮ
ಇದೂ ಇಲ್ಲದೆ ನನ ಕಂದಾ
ದೆವ್ವ ದೇವಮಾನ್ರು
ಮಾರಿ ಮಸಣೀಯ ದುರ್ಗೀ ಚವಡೀರು
ಅಪ್ಪಾ ಬೆಟ್ಟ ಗುಡ್ಡ ಸೇರಿಕಂಡರು
ಮಾರೀರು ಎಲ್ಲಾ ಕಾಡು ಸೇರಿದಂತ ಕಾಲದಲ್ಲಿ ಕಂದಾ
ಈ ಊರಲ್ಲಿರುವ ನರಮಾನವರು ಕಂದಾ
ಬಾಳಿ ಬದುಕುವಾಗ ಮಗಳೆ

ಅವರ ಅಂಗದ ಒಳಗೆ
ಅವರೆ ಬಾಳಾಡಬೇಕು || ಸಿದ್ಧಯ್ಯ ||

ಅಯ್ಯಾ ದೇವ್ರೆ ಗತಿ ಎಂದವರಿಗೆ
ಬಾಯೆತ್ತಿ ಬೈಯುತಾರೆ
ದೇವರಿಲ್ಲಾ ಎಂದವರಿಗೆ
ಕೈಯೆತ್ತಿ ಮುಗಿಯುತಾರೆ
ಅವ್ವಾ ದೇವಮಾನ್ರ ಮಠ ಕಂದಾ
ದೀಪಯಿಲ್ಲದಂಗೆ ಮಾಡ್ತಾರೆ
ಅವ್ವಾ ದೇವ್ರುಯಿರುವ ಸ್ಥಾನದೊಳಗೆ
ಜ್ಯೋತಿಯಿಲ್ಲದಂಗೆ ಮಾಡುತಾರೆ
ಇಂತಿಂತ ನರಮಾನವರು
ಭೂಮಿ ಮೇಲೆ ಹುಟ್ಟುತಾರೆ || ಸಿದ್ಧಯ್ಯ ||

ಇಂತಿಂತ ನರಮಾನವರು ಕಂದಾs
ಭೂಮಿ ಮೇಲೆ ಹುಟ್ಟಿ ಬದುಕಿ ಬಾಳುತಾರೆ ದೊಡ್ಡಮ್ಮ
ಈಗಲೀಗ ಹೇಲಿತೇನಿ ಕೇಳವ್ವ ಮಗಳೇ
ನಾಳೆ ಊರಲ್ಲಿರುವಂತೆ ದೈವ ದೇವ ಮಾನವರು
ಮಠಮನೆಗಳಿಗೆ ದೀಪಾ ಧೂಪ ಏನೂ ಇಲ್ಲದಂಗೆ
ದೇವಸ್ಥಾನ ಯಾವ ರೀತಿ ಪಾಳಾಗ ಬಿಡ್ತದೋ ದೊಡ್ಡಮ್ಮ

ಆ ದೇವಸ್ಥಾನ ಪಾಳಾದಂಗೆ
ಆ ಊರೇ ಪಾಳಾಗುತಾವೆ || ಸಿದ್ಧಯ್ಯ ||

ಇದು ಅಲ್ಲದೆ ಹೇಳುತೀನಿ ಕೇಳವ್ವ ಶಿಶು ಮಗಳೆ ದೊಡ್ಡಮ್ಮ

ನಾಳೆ ತಿರುಗಾಳಿ ತಿರುಗಬೇಕು
ಬಿರುಗಾಳಿ ಬೀಸಬೇಕು || ಸಿದ್ಧಯ್ಯ ||

ಅಮ್ಮಾ ತಿರುಗಾಳಿ ತಿರುಗಬೇಕು
ನಾಳೆ ಬಿರುಗಾಳಿ ಬೀಸಬೇಕು
ಕೆಂಡನ ಮಾಡ ಕಟ್ಟಿ
ಈ ಬೆಂಕಿ ಮಳೆ ಕಂದಾ
ನರಲೋಕಕ್ಕೆ ಕಂದಾ
ಬೀಳಬೇಕು ದೊಡ್ಡಮ್ಮಾ
ಈ ನಡುವೆ ನರಲೋಕದಲ್ಲಿ
ಸುಟ್ಟು ಬೂದಿಯಾಗಬೇಕು || ಸಿದ್ಧಯ್ಯ ||

ಈಗಲೀಗ ತಿರುಗಾಳಿ ತಿರುಗಿ ಬಿರುಗಾಳಿ ಬೀಸಿ
ಕೆಂಡದಾ ಮೋಡ ಕಟ್ಟಿ ಬೆಂಕಿ ಮಳೆ ಪ್ರಪಂಚಕ್ಕೆ ಬಿದ್ದು
ಈ ನರಲೋಕದಲ್ಲಾ ಸುಟ್ಟು ಬೂದಿಯಾಗಬೇಕು ದೊಡ್ಡಮ್ಮಾ
ನರಲೋಕವೆಲ್ಲಾ ಸುಟ್ಟು ಬೂದಿಯಾದ ಕಾಲದಲ್ಲಿ
ಕಂಕಾಲಿ ಯಮದೂತ ಎನುತೇಳಿ ಎರಡು ಕಾರು ಮಳೆ
ಕಾರುಮಳೆ ಕತ್ತರಿಸಬೇಕು ಉಯಿಲು ಮಳೆ ಉತ್ತರಿಸಬೇಕು
ಈ ನರಲೋಕವೆಲ್ಲಾ ಕಂದ ತಂಪಾಗಬೇಕು
ಕೇಳವ್ವಾ ನನ ಕಂದಾ ದುಡುವುಳ್ಳ ದೊಡ್ಡಮ್ಮಾ
ಇದಲ್ಲದೆ ಇನ್ಯಾವ ಕಲಿ ಇನ್ಯಾವ ಪದ್ದು
ಇನ್ಯಾವ ಕೇಡು ಬರುತದೆ ಎಂದ್ರೆ ಕಂದಾ

ಅವ್ವಾ ಹಂಪೆಯಲ್ಲಿರುವ ಕಂದಾ
ಕಲ್ಲಿನ ರಥಮಗಳೆ
ನಾಳೆ ಕಂಚಿನ ರಥಾ ಮಗಳೆ
ಆಗಬೇಕು ನನ ಕಂದಾ
ಅಮ್ಮಾ ಚಾಮುಂಡಿ ಬೆಟ್ಟದ ಮೇಲೆ
ಇರುವಂತಾ ಕಂದಾ
ಕಲ್ಲು ಬಸವ ಕಂದಾ ನಾಳೆ
ಜೀವದ ಬಸವ ಆಗಬೇಕು
ಅದು ಉಕ್ಕಿನ ಕಳ್ಳೆ ತಿಂದು
ನಾಳೆ ಉರುಗಳ್ಳೆ ಮಾಡಬೇಕು
ಅಮ್ಮ ಆಕಸಿಕ್ಕೆ ಕಂದಾ
ಬಸವ ಏರಬೇಕು
ನನ್ನ ಎಲೆ ಕುಂದೂರು ಬೆಟ್ಟಕ್ಕೆ
ಆ ಬಸವ ಬರಲೇಬೇಕು
ಅಮ್ಮ ಪಟ್ಟಣದಲ್ಲಿ ಇರುವ
ರಂಗಸ್ವಾಮಿ ಕಂದಾ
ಬಲದ ಮಗ್ಗಲ ಒಳಗೆ
ಮೇಲಕ್ಕೆ ಎದ್ದು
ಕುಕ್ಕುರಕು ಒಡದು
ತಲಕಾಡು ಮಾಲಂಗಿಗೆ
ಅದೇ ರಂಗಸ್ವಾಮಿ
ಬರಬೇಕು ನನ ಕಂದಾ
ಅಮ್ಮಾ ಕುಕ್ಕುಮ ಕಡಬಿನ ಒಳಗೆ
ತಲಕಾಡು ಮಾಲಂಗಿ ಒಳಗೆ ಕೇಳವ್ವಾ ಕಂದಾ
ಚಿನ್ನದ ಕೊಳಗ ತಗದು
ಬೆರಳಿ ಕೊಳಗ ಕಡದು
ಅಯ್ಯಾ ರಂಗಸ್ವಾಮಿ ಕಂದಾ
ದಪ್ಪಮರಳು ಮಗಳೆ
ಸಣ್ಣಮರಳು ಕಂದಾ
ಏಳೇಳು ಗಾವುದ
ಅಳೀಬೇಕು ದೊಡ್ಡಮ್ಮಾ
ಅವ್ವಾ ಏಳು ಗಾವುದ ಕಂದಾ
ಆಳದಮೇಲೆ ಕಂದಾ
ದಿನವೂ ಮದ್ಯಾಣಕೆ
ದಪ್ಪ ಮರಳು ಕಂದಾ
ದಪ್ಪ ಬೇಳೆ ಆಗಬೇಕು
ಸಣ್ಣ ಮರಳು ಕಂದಾ
ನಾಳೆ ಸಣ್ಣ ಬೇಳೆ ಆಗಬೇಕು
ಅವ್ವಾ ಕರೀಗಟ್ಟಾದಲ್ಲಿರುವ
ಕಲ್ಲುಕೋಳಿ ಕೂಗಬೇಕು || ಸಿದ್ಧಯ್ಯ ||

ಕರೀಘಟ್ಟದಲ್ಲಿರುವಂತ ಕಂದಾs
ಕಲ್ಲುಕೋಳಿ ಕೊಕ್ಕಂತ ಕೂಗಬೇಕು ದೊಡ್ಡಮ್ಮಾ
ಹಂಪೆಯಲ್ಲಿರುವಂತ ಕಲ್ಲಿನರಥ ಕಂಚಿನ ರಥವಾಗಬೇಕು
ಆಗ ಕಂಚಿನ ರಥ ಹರಿಯುವಾಗ
ಕಲ್ಲಿನ ಕೋಳಿ ಕೂಗಬೇಕು || ಸಿದ್ಧಯ್ಯ ||

ಅಮ್ಮಾ ಕಲ್ಲು ಕೋಳಿ ಕಂದಾ
ಮೊದಲು ಕೂಗಿದ ಮೇಲೆ
ಕಂಚಿನ ರಥಾ ಕಂದಾ
ಗಲಿಗಲಿನೆ ಹರೀ ಬೇಕು
ಸೂರ್ಯ ಚಂದ್ರರುಗಳು
ತೆಂಕಲಿಂದ ಬಡಗಲಾಗೆ
ಕಾಲು ನಡಿಗೆಯೊಳಗೆ
ಅವರು ಮಾತಾಡಿಕೊಂಡು ಕಂದಾ
ನಡಕೊಂಡು ಬರಬೇಕು
ಆಗ ಜೋಡು ಸೂರ್ಯ ಮೂಡುತಾದೆ
ಭೂಮಿ ತಳಕ ಹಾಕುತಾದೆ || ಸಿದ್ಧಯ್ಯ ||

ಕೇಳವ್ವ ಮಗಳೆ ದುಡುವುಳ್ಳ ದೊಡ್ಡಮ್ಮ
ಈಗಲೀಗ ಕರೀಘಟ್ಟದಲ್ಲಿರುವಂತ ಕಲ್ಲಿನಕೋಳಿ ಕೂಗಬೇಕು
ಹಂಪೆಯಲ್ಲಿರುವಂಥ ಕಲ್ಲಿನ ರಥ ಕಂಚಿನ ರಥವಾಗಿ ಭೂಮಿ ಮ್ಯಾಲೆ ಹರೀಬೇಕು
ಸೂರ್ಯ ಚಂದ್ರಾದಿಗಳು ಕಾಲು ನಡಿಗೆಯೊಳಗೆ ನಡಕಂಡು
ಮಾತಾಡಿ ಕೊಂಡು ನರಲೋಕದಲ್ಲಿ ಬರಬೇಕು ದೊಡ್ಡಮ್ಮ
ಅಲ್ಲಿಗೆ ಭೂಮಿ ತಳಕಾಗಬೇಕು ಮಗಳೆ
ಜೋಡು ಸೂರ್ಯ ಮೂಡಬೇಕು ನನ ಕಂದಾ

ಈ ನಡುವೆ ನರಲೋಕವೆಲ್ಲಾ
ಬರೂ ಲೋಕವಾಗಬೇಕು || ಸಿದ್ಧಯ್ಯ ||

ಅವ್ವಾ ಮರ್ತ್ಯಲೋಕಕೆ ಕಂದಾ
ನಾ ಮರೆಯಾಗಿ ನನ ಕಂದಾ
ಹೋಗಬೇಕು ದೊಡ್ಡಮ್ಮ
ನಾನು ಮರ್ತ್ಯಲೋಕದೊಳಗೆ ಕಂದ
ಮರೆತು ನಿದ್ರೆಮಾಡಬೇಕು || ಸಿದ್ಧಯ್ಯ ||

ಇಂತ ದುರುಳವಾದ ಕಲಿಗಳ ಕಂದಾs
ಇಂತಾ ಕೇಡಗಾಲದ ಕಲಿಗಳ
ನನ್ನ ಕಣ್ಣಿಂದ ನೋಡಿ ಕೊಂಡು ಕಂದಾ
ಈ ನರಲೋಕದಲ್ಲಿ ಬಾಳನಾರಿ ಬದುಕನಾರಿ ದೊಡ್ಡಮ್ಮ
ಕಲೀ ತೀರುತನಕ ಖಂಡುಗ ದ್ಯಾನ ಒದಿಯತನಕ
ಈ ನರಲೋಕವೆಲ್ಲ ಬರುಲೋಕ ಆಗೊತನಕ ಕಂದಾ
ಮರ್ತ್ಯಲೋಕಕೆ ನಾನು ಮರೆಯಾಗಿ ಹೋಗಬೇಕು ದೊಡ್ಡಮ್ಮಾ
ಈಗಲೀಗ ನನರ ಹಂಗು ಎಳ್ಳಷ್ಟು ಬೇಡ ಮಗಳೆ
ನನ್ನ ಹಂಗು ನರರಿಗಿರಲಿ ನನ ಕಂದಾ

ಈಗ ಪಾತಾಳಲೋಕಕೆ ನಾನು
ಹೊಂಟೋಯ್ತೀನಿ ಎಂದರಲ್ಲಾ || ಸಿದ್ಧಯ್ಯ ||

ಈಗ ಪಾತಾಳಲೋಕಕ್ಕೆ ನಾನು
ಹೊರಟೋಯ್ತೀನಿ ಮಗಳೆ
ದುಡುವುಳ್ಳು ದೊಡ್ಡಮ್ಮ
ನಾನು ಪಾತಾಳಲೋಕಕೆ
ಹೋದ ಮೇಲೆ ನನ ಕಂದಾ
ನನಗೆ ದೇವಲೋಕದವೊಳಗೆ
ನನಗೆ ಮಡಿ ಪೂಜೆ ಆಗಬೇಕು
ಈ ಪಾತಾಳಲೋಕದ ಒಳಗೆ
ಪಾದಪೂಜೆ ಆಗಬೇಕು
ಈ ನಡುವೆ ನರಲೋಕದಲಿ
ನರರ ಪೂಜೆ ನಡೆಯಬೇಕು || ಸಿದ್ಧಯ್ಯ ||

ಮಗಳೆ ನರಲೋಕದ ಬಗ್ಗೆ
ನರರಪೂಜೆ ಕಂದಾ
ಈ ನರ ಲೋಕದ ಪೂಜೆ
ನನಗೆ ಬ್ಯಾಡಾ ನನ ಕಂದಾ
ಬ್ಯಾಡ ನನ ಮಗಳೇ
ಈ ನನ್ನ ಹಂಗುನಿಂದ
ನಾನು ಪಡೆದ ಭೂಮಿಮೇಲೆ
ನರಮಾನವರು ಬಾಳಲಿ ಕಂದಾ
ಈ ನರಮಾನವರೆ ಕಂದಾ
ಬದುಕಲಿ ನನ ಮಗಳೆ
ಈಗ ನಾನು ಪಡೆದ ಕಂದಾ
ನರಲೋಕವ ಕಂದಾ
ನಾನೆ ಬಿಟುಬುಟ್ಟು
ಈ ನರಮಾನವರಿಗೆ ಕೊ‌ಟ್ಟು ನಾನು
ಹೊಂಟೋಯ್ತೀನಿ ಎಂದಾರಲ್ಲ || ಸಿದ್ಧಯ್ಯ ||

ನಾನು ಪಡೆದು ನಾನು ತಂದ ಭೂಮಿs
ನಾನು ಪಡೆದ ಸೂರ್ಯ ಚಂದ್ರಾದಿಗಳು ಕಂದಾ
ನಾನು ಪಡೆದಂತ ಬ್ರಮ್ಮ ವಿಷ್ಣು ಈಶ್ವರ ತ್ರಿಮೂರ್ತಿಗಳು
ಈ ನರಮಾನವರಲ್ಲೆ ಬಿ‌ಟ್ಟು
ನಾನು ಒಬ್ನೆ ಹೊಂಟೋಯ್ತೀನಿ ಮಗಳೆ
ಈ ನರಲೋಕದಲ್ಲಿ ನರಮಾನವರೆ ಬಾಳಿ ಬದುಕಲಿ ದೊಡ್ಡಮ್ಮಾ
ಈ ಹಾಳು ಕಲಿಗಳ ಕಣ್ಣಿನಲ್ಲಿ ನೋಡಲಾರಿ
ಕರಣದಲಿ ಕೇಳಲಾರಿ
ಕಲೀ ಬಂದು ಬುಟ್ಟ
ನನ ಕಣ್ಣಿಗೆ ನಿದ್ರೆ ಬಾಳ ಜೋಲುತಾದೆ ಕಂದಾ
ಹನ್ನೆರಡಾಳುದ್ದ ಪಾತಾಳು ಲೋಕಕ್ಕೆ ನಾನು ಹೊರಟೋಗಬೇಕಂದ್ರೆ
ಹನ್ನೆರಡಾಳುದ್ದ ಮಚ್ಚುನ ಬಾವಿ ಆಗಬೇಕು ದೊಡ್ಡಮ್ಮ
ಬಾವಿ ತೋಡಬೇಕಾದರೆ ಮಗಳೆ ಕಬ್ಬಿಣ ಇಲ್ಲದಂತೆ
ಯಾವ ಕೆಲಸ ಕಾರ್ಯಗಳು ಆಗೋದಿಲ್ಲ ದೊಡ್ಡಮ್ಮ

ನನಗೆ ಹಾರೆಮೂರು ಆಗಬೇಕು
ಎಲಗುಂದ್ಲಿ ಮೂರಾಗಬೇಕು || ಸಿದ್ಧಯ್ಯ ||

ಕಂದಾ ಹಾರೆ ಮೂರು ಕಂದಾ
ಎಲಗುದಲಿ ಮೂರು
ದಬುಕ ಮೂರು ಕಂದಾ
ಆರು ಮೂರು ಮಗಳೆ
ಒಂಬತ್ತು ನನಗೆ
ಕಬ್ಬಿಣ ನನಗೆ ಆಗಬೇಕು
ಅವ್ವಾ ಕಬ್ಬಿಣ ತರುವಂತ
ಮಗನು ಎಲ್ಲಿ ಇದ್ದಾನೋ ಕಾಣೆ || ಸಿದ್ಧಯ್ಯ ||