ಕಲಿಮನುಷ್ಯನಲ್ಲ ಕಂದಾs
ಕಲಿ ಪುರುಷ ಶನಿದೇವರಾಗಿ ಇಟ್ಟು ಮಗನೇ
ನೀನು ಸಾರ್ಕೊಂಡು ಬಂದಿರುವಂಥ
ಕಲಿಗಳ ನಾಳೆ ದಿವ್ಸ ನೀನೇ ಕಟ್ಟಾಳಪ್ಪ ಅಂತ್ಹೇಳಿ
ಆ ಕಲಿ ಮನುಷ್ಯನ್ಗೆ ವರ ಕೊಟ್ಬುಟ್ಟಿದ್ದೀನಿ ಕಂದಾ
ಆಗ ವರ ಕೊಟ್ಟು ಬಂದುದ ರೀತಿ
ಈಗ ಕಲಿ ಮನುಷ್ಯನ ಕಾಲ ಬಂದೋಯ್ತು ದೊಡ್ಡಮ್ಮ
ಈಗಲೀಗ ಕಲಿ ಕಾಲದಲ್ಲಿ ಕಂದಾ
ಕಲಿ ಮನುಷ ಹೋಗಿ ಕಲಿಪುರುಷ ಶನಿದೇವರಾಗಿ
ಈ ನರಲೋಕಕ್ಕೆ ಬರ್ತಾನೆ ಕಂದ
ಕಲಿ ಪುರುಷ ಹೋಗಿ ಕಲಿ ಮನುಷ್ಯನಾಗಿ
ಈ ನರಲೋಕಕ್ಕೆ ಬಂದ ಮೇಲೆ ದೊಡ್ಡಮ್ಮ
ಯಾವ ಕಲಿ ಯಾವ ಪದ್ದು ಯಾವ ಕೇಡು ಬರ್ತದೆ ಅಂದರೆ
ನಾಳೆ ಭೂಮಿಯಾದರೆ ಗುಡುಗುತಾರೆ
ಬಾಲಚುಕ್ಕಿ ಮೂಡುತಾದೆ || ಸಿದ್ಧಯ್ಯ ||

ನಾನು ಹೇಳುವಂಥ ಕಲಿಗಳ
ಬರ್ಕೊವ್ವ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ನಾಳೆ ಭೂಮಿ ಗುಡುಗತಾನೆ ಕಂದಾ
ಬಾಲಚುಕ್ಕಿ ಮೂಡುತಾವೆ
ಕೂತ್ತಿ ಮುಳುಗುಡುತಾದೆ
ಹನ್ನೆರಡೊರಸಾದಿಂದ
ಆಟ್ಟುವ ಮ್ಯಾಲೆ ಇರುವ
ಉಡುಗಬ್ಬಿಣ ನನ್ನ ಕಂದಾ

ಅಮ್ಮಾ ಹನ್ನೆರಡು ವರುಷದಿಂದ
ಇದ್ದಂತ ಕಂದ
ಉಡುಗಬ್ಬಣ ಕಂದ
ನಾಳೆ ನುಚ್ಚಾಗಿ ಉದುರಬೇಕು
ಗುರುಗಳು ಗುರುಗಳಿಗೆಲ್ಲಾ
ಗುದ್ದಾಟ ಬರಾಬೇಕು
ಅಮ್ಮಾ ಗುರುಗಳು ಗುರುಗಳು ಕಂದಾ
ಗುದ್ದಾಟ ಮಾಡಬೇಕು ಕೇಳವ್ವ ದೊಡ್ಡಮ್ಮ
ನಾನು ಹೇಳುವಂತ ಕಲಿಯ ನೀನು
ಗ್ಯಾನವಾಗಿ ಬರಿಯವ್ವಾ|| ಸಿದ್ಧಯ್ಯ ||

ನಾನು ಹೇಳುವಂತ ಮಾತ ನೀನು
ಗ್ಯಾನವಾಗಿ ಕೇಳು ಕಂದಾ || ಸಿದ್ಧಯ್ಯ ||

ನಾನು ಹೇಳುವಂತ ಕಲಿಗಳೆಲ್ಲಾನೂ ಕಂದಾ
ಬರಿಯವ್ವಾ ನನ ಕಂದಾ ದುಡವುಳ್ಳ ದೊಡ್ಡಮ್ಮ ತಾಯಿ
ನಾನು ಹೇಳುವಂತಾ ಮಾತು ಗ್ಯಾನವಾಗಿ ಕೇಳು ಮಗಳೆ
ಎಂಬುದಾಗಿ ಜಗತ್ತುಗುರು ಧರೆಗೆ ದೊಡ್ಡವರು
ಕಂಡಗು ಜ್ಞಾನದ ಬುಕ್ಕು ಕಾಲಜ್ಞಾನದ ಬುಕ್ಕು ಓದುತ್ತ
ದೊಡ್ಡಮ್ಮ ತಾಯಿಗೆ ಗುರುದೇವ
ಬರುವಂತ ಕಲಿಗಳನೆಲ್ಲ ಕಣ್ಣಿಂದ ಹೇಳುತ್ತ

ಅನ್ನಾ ಇಲ್ಲ ಕಂದಾ
ಈ ನರಲೋಕದ ಒಳಗೆ
ಅನ್ಯಾಯ ಕಂದಾ
ಹೆಚ್ಚಯದೆ ಕೇಳವ್ವ
ನನ್ನ ಮಗಳೆ ನನ್ನ ಕಂದಾ || ಸಿದ್ಧಯ್ಯ ||

ಅಮ್ಮಾ ಅನ್ನುವೂ ಕಂದಾ
ಇಲ್ಲದಂಗಾಯ್ತದೆ ಮಗಳೆ
ಅನ್ಯಾಯ ಕಂದ
ಈ ಭೂಮಿ ಮೇಲೆ ಹೆಚ್ಚುತಾದೆ
ನಮ್ಮ ಕಾವಿ ಹೊದ್ದರೆಲ್ಲಾ
ಕಳ್ಳರಾಗಿ ತಿರುಗುತಾರೆ || ಸಿದ್ಧಯ್ಯ ||

ನಮ್ಮ ಕಾವಿ ಹೊದ್ದವರೆಲ್ಲಾ
ಕಳ್ರಾಗಿ ತಿರುಗುತಾರೆ
ಅಮ್ಮಾ ದಾಸಯ್ಯ ಗೀಸಯ್ಯರೆಲ್ಲ
ನಾಳೆ ದೇಸಾಂತ್ರ ಹೋಗುತಾರೆ
ನಾಳೆ ಜೋಗಯ್ಯ ಗೊರವಯ್ಯ
ನಾಳೆ ಗೋಳಾಡಿ ಸಾಯುತಾರೆ
ಈ ನರಲೋಕದ ಒಳಗೆ ಕೇಳವ್ವ ನನ ಕಂದಾ
ಈ ಭೂಮಿ ಭೂ ಲೋಕದಲ್ಲಿ
ಬರುವಂತ ಕಲಿಯ
ನಾ ಹೇಳುತೀನಿ ಮಗಳೆ
ನಾನು ಹೇಳುವಾಗ ನೀನು
ಕೇಳವ್ವಾ ನನ್ನ ಮಗಳೆ || ಸಿದ್ಧಯ್ಯ ||

ದೊಡ್ಡಮ್ಮ ನನ್ನಂತ ಕಾವಿ ಕಮಂಡಲ ಹೊದ್ದವರು
ನಾಳೆ ಕಲಿಗಾಲದಲ್ಲಿ ಕಳ್ರಾಗಿ ತಿರುಗಬೇಕು
ದಾಸಯ್ಯ ಜೋಗಯ್ಯ ನಾಳೆ ಗೋಳಾಡಿ ಸಾಯಬೇಕು ದೊಡ್ಡಮ್ಮಾ

ನಾಳೆ ಗುರುಗಳು ಗುರುಗಳಿಗೆಲ್ಲಾ
ಗುದ್ದಾಟ ಬರಬೇಕು || ಸಿದ್ಧಯ್ಯ ||

ಅವ್ವಾ ನಾಳೆ ಕಲಿ ಎಂದರೆ
ಕೇಳವ್ವಾ ನನ್ನ ಕಂದಾ
ನಾಳೆ ಪದ್ದು ಎಂದರೆ
ಕೇಳವ್ವಾ ನಮ್ಮ ಮಗಳೇ
ನಾಳೆ ಊರು ಕಾಡಾಗುತಾರೆ
ಕಾಡೇ ಊರಾಗುತಾರೆ || ಸಿದ್ಧಯ್ಯ ||

ಅಮ್ಮಾ ನಾಳೆ ಕಲಿ ಒಳಗೆ
ಕಾಡೆ ಊರಾಗಿ
ಊರು ಕಾಡಾಗಿ
ಕೇಳವ್ವ ನನ ಕಂದ
ನಾಳೆ ಧರ್ಮ ಎನ್ನುವುದು
ನಾಳೆ ಕಾಡು ಸೇರುತ್ತದೆ
ನಾಳೆ ಕರ್ಮ ಎನ್ನುವುದು
ಊರು ಸೇರುತದೆ
ನಾಳೆ ಆಡುವ ಮಕ್ಕಳ ಮಾತು
ಮುಂದೆ ಹರಿಯುತದೆ
ನಾಳೆ ತಲೆ ಬಲಿತವರ ಮಾತು
ನಾಳೆ ಹಿಂದೆ ನಡೆಯುತದೆ
ಅವ್ವಾ ಅತ್ತೆ ಸೊಸೆ ಆಗುತಾಳೆ
ಸೊಸೆ ಅತ್ತೆ ಆಗುತಾಳೆ || ಸಿದ್ಧಯ್ಯ ||

ಅಮ್ಮಾ ನಾಳೆ ಕಲಿ ಒಳಗೆ
ಅತ್ತೆ ಸೊಸೆ ಆಗಿ
ಅವ್ವಾ ಸೊಸೆ ಅತ್ತೆ ಆಗಿ
ಕೇಳವ್ವ ನನ್ನ ಕಂದ
ನಾಳೆ ಅತ್ತೆಗೆ ಅರಕಲು ಚಾಪೆ
ಸೊಸೆಗೆ ಮುಕ್ಕಾಳು ಮಂಚ || ಸಿದ್ಧಯ್ಯ ||

ದೊಡ್ಡಮ್ಮ ನಾಳೆ ಕಲಿಯುಗದಲ್ಲಿ
ಅತ್ತೆಗೆ ಹರಕಲು ಚಾಪೆ ಸೊಸೆಗೆ ಮುಕ್ಕಾಲು ಮಂಚವಾಯ್ತದೆ
ನನ್ನ ಕಂದ ದೊಡ್ಡಮ್ಮಾ
ನಾನು ಹೇಳುವಂತಾ ಕಲಿಗಳೆನ್ನಾನೂ ತಪ್ಪದೆ ಬರಿ ಕಂದಾ
ದೊಡ್ಡಮ್ಮಾ ಇನ್ನಾವ ಕಲಿ ಇನ್ನವಾ ಪದ್ದು
ಇನ್ನಾವ ಕೇಡು ಬರುತಾದೆ ಅಂದರೆ ಕಂದಾ

ನಾಳೆ ಅರಸು ಆಳು ಆಗುತಾನೆಸ
ಆಳು ಅರಸು ಆಗುತಾನೆ || ಸಿದ್ಧಯ್ಯ ||

ಅವ್ವಾ ನಾಳೆ ಕಲಿ ಒಳಗೆ
ಅರಸು ಆಳು ಆಗಿ
ಆಳು ಅರಸು ಆಗಿ
ಕೇಳವ್ವ ನನ್ನ ಕಂದ

ನಾಳೆ ಹಾಳೆಯಲ್ಲುಣ್ಣುವುದು
ಅರಿವಾಣಕೆ ಬರುತಾರೆ
ಅಮ್ಮ ಹರಿವಾಣದಲ್ಲುಣ್ಣುವರು
ನಾಳೆ ಹಾಳೆಗೆ ಬರುತಾರೆ
ನಾಳೆ ರಾಜರಾಜರುಗಳಿಗೆಲ್ಲಾ ಕಂದಾ
ಗೋಜಲಾಟ ಬರುವುತಾದೆ || ಸಿದ್ಧಯ್ಯ ||

ನಾಳೆ ಕಲೀವಳಗೆ ಕಂದಾ
ರಾಜು ರಾಜರಿಗೆಲ್ಲಾ ಗೋಜಲಾಟ ಬರುತದೆ ದೊಡ್ಡಮ್ಮ
ಈ ರಾಜ್ಯದಲ್ಲಿ ಪಡೆದಿರುವಂತ ರಾಜುರೆಲ್ಲಾ
ನಲವತ್ತೆಂಟು ಜನ ರಾಜರು ರಾಜ್ಯ ಬುಡುತಾರೇ ದೊಡ್ಡಮ್ಮ
ನಾಳೆ ಮೈಸೂರು ಮಹಾರಾಜ
ರೈತರಾಗಿ ತಿರುಗುತಾನೆ || ಸಿದ್ಧಯ್ಯ ||

ಅವ್ವಾ ನಾಳೆ ಕಲಿವೊಳಗೆ ಮೈಸೂರು ಮಾರಾಜ
ರೈತುರಾಗಿ ತಿರುಗಬೇಕು
ಕೇಳವ್ವಾ ನನ್ನ ಕಂದಾ
ನನ್ನ ದುಡುವುಳ್ಳ ದೊಡ್ಡಮ್ಮ

ನಾಳೆ ಅಟ್ಟಾ ಬೆಟ್ಟಾ ಗುಡ್ಡಾ ಎಲ್ಲಾ
ಗದ್ದೆ ಹೊಲಾ ಆಗಬೇಕು || ಸಿದ್ಧಯ್ಯ ||

ಅವ್ವಾ ನಾಳೆ ಕಲಿಯುಗದಲ್ಲಿ
ನಾಳೆ ಕಲಿವೊಳಗೆ
ಅಟ್ಟ ಬೆಟ್ಟಾ ಗುಡ್ಡಾ ಎಲ್ಲಾ
ಗದ್ದೆ ಹೊಲಾ ಕಂದಾ
ಆಯ್ತದೆ ದೊಡ್ಡಮ್ಮಾ
ನಾಳೆ ರಾಜ್ಯ ರಾಜ್ಯಗಳ ಮೇಲೆ
ರಾಗಿಗೆ ನನ ಕಂದ
ನಾಳೆ ರೋಗ ತಗುಳಬೇಕು
ನಾಳೆ ಉಣ್ಣುವಂತ ಅನ್ನಗಳ
ತಕ್ಕಡಿವೊಳಗೆ ತೂಗಬೇಕು || ಸಿದ್ಧಯ್ಯ ||

ನಾಳೆ ಉಟ್ಟುಕೊಳ್ಳುವ ಬಟ್ಟೆಗಳ
ತಕ್ಕಡಿಗಳಲ್ಲಿ ತೂಗಬೇಕು || ಸಿದ್ಧಯ್ಯ ||

ಅವ್ವಾ ಕೇಳವ್ವ ನನ ಕಂದಾ
ಕೇಳವ್ವ ನನ ಮಗಳೆ
ನಾಳೆ ಕಲಿ ಎಂದರೆ
ತಾಯಿ ದೊಡ್ಡಮ್ಮ
ನಾಳೆ ಗರತಿ ಗೌಡಿಯಾಗಿ
ಗೌಡಿ ಗರತಿಯಾಗಿ
ನಾಳೆ ಹುಟ್ಟುದ ಮಕ್ಕಳಿಗೆ
ಅನ್ನವು ಸಿಗದಂತೆ
ಆಯ್ತದೆ ದೊಡ್ಡಮ್ಮ
ಅವ್ವಾ ಮಾತು ಕಲಿತ ಜನರು
ಹೊಟ್ಟೆ ತುಂಬ ಉಣ್ಣುತಾರೆ || ಸಿದ್ಧಯ್ಯ ||

ಅಮ್ಮಾ ಮಾತು ಕಲಿತ ಜನರು
ಹೊಟ್ಟೆ ತುಂಬ ಕಂದಾ
ಈ ನರಲೋಕದೊಳಗೆ
ಉಣುತಾರೆ ನನ ಕಂದಾ
ಅವ್ವಾ ಮಾತು ಕಲಿದಿದ್ದಾ
ನರಮಾನವರು ಕಂದಾ
ಅವ್ವಾ ಅನ್ವಯಿಲ್ಲದೆ ನರಳಿ ನರಳಿ
ಸತ್ತು ಸ್ವರ್ಗಾ ಸೇರುತಾರೆ || ಸಿದ್ಧಯ್ಯ ||

ಮಾತು ಕಲಿತಂತ ನರ ಮಾನವರು
ಹೊಟ್ಟೆ ತುಂಬಾ ಉಂಡಿ ಬಾಳಿ ಬದುಕುತಾರೆ ಮಗಳೆ
ಮಾತು ಕಲಿದಿದ್ದಂತ ನರ ಮಾನವರು
ಅನ್ನ ಆರಾದನೆ ತೊರೆದು ನಿದ್ರೆ ನೇಮಗಳನ್ನೆ ತೊರೆದು
ದೆವ್ವ ದೇವ ಮಾನವರ್ನೆ ಮರೆತು
ಪೂಜೆ ಪುನಸ್ಕಾರಗಳನು ಎಲ್ಲಾ ಬಿಟ್ಟು
ಕೆಟ್ಟ ಕಾಲದಲ್ಲಿ ದೇವರಿಲ್ಲಾ ಏನುತೇಳಿ

ತಟ್ಟನೆ ಕಂದಾ
ಪ್ರಾಣವನ್ನೆ ಬಿಡುವುತಾರೆ || ಸಿದ್ಧಯ್ಯ ||

ಅವ್ವಾ ಕೆಟ್ಟಾಗ ನನ್ನ ಕಂದಾ
ದೇವರಿಲ್ಲಾ ಎನುತಾರೇ
ಒಳ್ಳೆ ಕಾಲಕೆ ಕಂದಾ
ನೆಂಟರು ಇಲ್ಲ ಎನುತಾರೆ
ಕೆಟ್ಟಾಕಾಲಕೆ ನನ ಕಂದಾ
ದೇವರಿಲ್ಲಾ ಎನುತಾರೆ
ಅವ್ವಾ ಬುದುಕುವಾ ಪ್ರಾಣಿ ಕಂದಾ
ಇಂದೆಯೇ ಸಾಯುತಾರೆ || ಸಿದ್ಧಯ್ಯ ||

ನಾಳೆ ಸತ್ತು ಸ್ವರ್ಗ ಸೇರುವಂತಾ ನರಮಾನವರು ಕಂದಾs
ಇಂದೇ ಸತ್ತು ಸ್ವರ್ಗ ನಿಯಮ ಶಿವಪೂಜೆ ಶಿವಗ್ಯಾನ ಮರೆತು
ಅನ್ನ ಇಲ್ಲದಂತೆ ಕಣ್ಣು ಮುಚ್ಚಿ ಪ್ರಾಣ ಬಿಡುವ ಪ್ರಾಣಿಗಳು
ಸತ್ತು ಹುಟ್ಟಿ ಹೋಗುವಾಗ ಕಂದ
ಅಲ್ಲೂ ಸ್ವರ್ಗ ಸಿಗದೆ ನಾಯಾಗಿ ನರಳುತಾರೆ ದೊಡ್ಡಮ್ಮ
ಈ ನರಳುವ ಮಕ್ಕಳ ದುಃಖ
ನಾನಾಗಿ ನೋಡುನಾರೆ || ಸಿದ್ಧಯ್ಯ ||

ಅವ್ವಾ ಇದುವಲ್ಲದ ಕಂದ
ಈ ನರಲೋಕದ ಕಲಿ
ಎಂದರೆ ನನ್ನ ಕಂದ
ನಾಳೆ ಎರಡು ಕೋಟಿ ಕಂದಾ
ಎಣ್ಣು ಜನ್ಮ ಇದ್ದರೆ
ನಾಳೆ ಏಳು ಕೋಟಿ ಕಂದಾ
ನಾಳೆ ಹೆಣ್ಣು ಜನ್ಮ ಇರಬೇಕು
ಗಂಡು ಎರಡು ಕೋಟಿ
ಹೆಣ್ಣು ಏಳುಕೋಟಿ ಆದಮೇಲೆ
ಅವ್ವಾ ಹೆಣ್ಣಿಗೆ ನನ್ನ ಕಂದಾ
ಗುಂಡಿಲ್ಲದಂಗೆ ಆಗುತಾದೆ || ಸಿದ್ಧಯ್ಯ ||

ಅಣ್ಣಯ್ಯಾ ಜಗತ್ತು ಗುರು ಧರೆಗೆ ದೊಡ್ಡಪ್ಪ
ಗಂಡು ಎರಡು ಕೋಟಿ ಹೆಣ್ಣು ಏಳುಕೋಟಿ ಆಗಬೇಕಾದರೆ
ಯಾವ ಕಾರಣಕ್ಕೆ ಹುಟ್ಟಿದರೋ ಗುರುವು
ಯಾವ ಪ್ರಾಣಕ್ಕೆ ಬೆಳೆದರೋ ಸ್ವಾಮಿ ಎಂದರು
ದೊಡ್ಡಮ್ಮಾ ಎರಡುಕೋಟಿ ಗಂಡು ಜಲುಮ
ಏಳು ಕೋಟಿ ಹೆಣ್ಣು ಜಲುಮ
ಆಗಬೇಕಾದರೆ ಏನು ಕಾರಣ ಗೊತ್ತಾ
ಈ ನರಲೋಕದಲ್ಲಿ ಕಂದಾs
ನಾಳೆ ಕಲಿಯುಗದಲ್ಲಿ ದೊಡ್ಡಮ್ಮಾ
ನಾಳೆ ಏಳು ವರ್ಷದ ಮಗಳು ಋತುಮಲೆ ಆಗುತಾಳೆ
ಅಮ್ಮಾ ಏಳುವರ್ಷದ ಮಗಳು ನಾಳೆ
ಋತು ಮನುಷ್ಯಳಾಗುತಾಳೆ
ಅವ್ವಾ ಏಳುವರ್ಷದ ಮಗಳು
ಎರಡು ಮಕ್ಕಳಿಗವಳು
ಕಂದಾ ಎರಡು ತೊಟ್ಲು ಕಟ್ಟುತಾಳೆ

ನಾಳೆ ಜಂಗಮರ ಮಠದಲ್ಲಿ
ಜೋಡು ತೊಟ್ಲು ಕಟ್ಟುತಾಳೆ || ಸಿದ್ಧಯ್ಯ ||

ಏಳು ವರ್ಷದ ಮಗಳು
ಎರಡು ಮಕ್ಕಳಿಗೆ ಜೋಡು ತೊಟ್ಲು ಕಟ್ಟುತಾಳೆ ಕಂದಾ
ನನ್ನ ಮಗಳು ಏಳು ವರ್ಷದವಳು ಎರಡು ಮಕ್ಕಳು ಪಡೆದಳು ಅಂತೇಳಿ
ಊರು ಊರು ಜಂಗಮರ ಮಠಕ್ಕೆ ಸುದ್ಧಿ ಕೊಡುತಾರೆ
ಜಂಗಮರು ಬಂದು ಕಂದಾ
ಎರಡು ಮಕ್ಕಳು ಹೆತ್ತತಾಯಿ
ಬಾಳ ಸತ್ಯಶೀಲೆ ಪತಿವ್ರತೀ ತಕ್ಕಂಬಂದು
ಜಂಗಮರ ಮಠದಲ್ಲಿ ಎರಡು ಮಕ್ಕಳಿಗೆ
ಜೋಡು ತೋಟ್ಲ ಅವರೆ ಇರಿಸಿ
ಅವರೇ ಜೋಗುಳ ತೂಗುತವರೆ ಕಂದಾ
ಮಕ್ಕಳು ಹುಟ್ಟಿರುವಾ ಗಳಿಗೆ ನೋಡುವರಿಲ್ಲಾ
ಅವರ ಮಕ್ಕಳ ಸಾಕೋ ರೀತಿಯ ಕಂಡವರೆ ಮೊದಲಿಲ್ಲ

ಅವರ ಮನಸಿಗೆ ಬಂದಂಗೆ ಕಂದಾ
ಮಾತನ್ನೆ ಆಡುತಾರೆ || ಸಿದ್ಧಯ್ಯ ||

ಅವ್ವಾ ಕಲಿಯು ಮುಳುಗುತಾವು ಕಂದಾ
ಕಲ್ಲೂರು ತೋಪು ಏಳಬೇಕು ನನ ಮಗಳೆ
ಅವ್ವಾಕಲ್ಲೂರು ತೋಪುನಲ್ಲಿ
ವಾರಕ್ಕೆ ಒಂದು ದಿವಸ
ಸಂತೆ ಕಟ್ಟಲೆ ಬೇಕು
ಅಮ್ಮಾ ಸಂತೇವೊಳಗೆ ಕಂದಾ
ಏನೇನು ವ್ಯಾಪಾರ
ಏನೇನು ಸಾಪಾರ
ಹಾಗಂದರೆ ನನ ಕಂದಾ
ನಾಳೆ ಎತ್ತಿನ ಬೆಲೆಗೆ ಕಂದಾ
ನಾಳೆ ಎಮ್ಮೆ ಮಾರಲೇಬೇಕು
ಅವ್ವಾ ಎಮ್ಮೆ ಬೆಲೆಗೆ
ನಾಳೆ ಟಗರು ಮಾರಬೇಕು
ನಾಳೆ ಟಗರಿನ ಬೆಲೆಗೆ ಕಂದ
ನಾಳೆ ಕೋಳಿ ಮಾರಲೇಬೇಕು
ನಾಳೆ ಕೋಳಿ ಬೆಲೆಗೆ ಕಂದ
ನಾಳೆ ಕೊತ್ತಿ ಮಾರಲೇಬೇಕು
ನಾಳೆ ಹುಟ್ಟು ಹುಟ್ಟಿದ
ಹೆಣ್ಣು ಮಕ್ಕಳ ಸಂತೆವೊಳಗೆ ಮಾರಬೇಕು|| ಸಿದ್ಧಯ್ಯ ||

ಅವ್ವಾ ಎತ್ತು ಮಾರುವನೊಬ್ಬ
ಮುತ್ತು ಮಾರುವನೊಬ್ಬ
ನಾಳೆ ಕಲಿವೊಳಗೆ
ಕೇಳವ್ವ ನನ ಮಗಳೆ
ಇಂದು ತುತ್ತು ತಿಂದವನು ನಾಳೆ
ಮಿತ್ತಾಗಿ ಬರುತಾನೆ || ಸಿದ್ಧಯ್ಯ ||