ಇಷ್ಟು ಮಂದಿ ಶರಣಮಾತ್ಮರು
ನಮ್ಮ ಆದಿಕಲ್ಯಾಣದಲ್ಲಿ ಉಳಿದವರೆ
ಇಷ್ಟು ಮಂದಿ ಶರಣ ಮಾತ್ಮರಿಗೂ
ಕಟ್ಟುಕೊಂಡು ಬಸವಣ್ಣ
ಈ ಕಲ್ಯಾಣ ಪಟ್ಟಣ
ಈಗಲೀಗ ಹೆಚ್ಚು ಒಕ್ಕಲಾಗಿ ಬಾಳಲಿ ಅಂತ್ಹೇಳಿ ನಾಮಕರಣ ಕಟ್ಟಿ
ನಿಮಗೆ ಕಲ್ಯಾಣ ಬಿಟ್ಟು ಮುಂದಕ್ಕೋಯ್ತಿನಿ ಕಂದ
ಇಷ್ಟು ಮಂದಿ ಶಿವಶರಣಮಾತ್ಮುರ ಕಟ್ಕೊಂಡು
ವಾಸಸ್ಥಾನ ಮಾಡು ಕಂದ ಎಂದರು
ಆಗ, ಜಗತ್ತು ಗುರು ಧರೆಗೆ ದೊಡ್ಡವರು
ಈ ಬಸವಣ್ಣನವರಿಗೇಳುವಾಗ
ಈ ಬಸವಣ್ಣನವರು ಧರೆಗೆ ದೊಡ್ಡವರಿಗೆ ಹೇಳುದ್ರುಂತೆ
ಗುರುದೇವಾ
ಇವತ್ತಿನ ದಿವ್ಸದಲ್ಲಿ
ನನ್ನ ಒಳ್ಳೋಳ್ಳೆ ಲಿಂಗಗಳು ಅಂದರೆ
ಎಲ್ಲಾ ಲಿಂಗಗಳನ್ನು ಕೂಡ ಕಿಳ್ಸಿ
ಕಲ್ಯಾಣ ಕೊಳದಲ್ಲಿ ಅಡಕವಾಗ್ಬುಟ್ಟವಲ್ಲ ಸ್ವಾಮಿ
ನಾನಾದಿ ಕಲ್ಯಾಣ ಪಟ್ಟಣದಲ್ಲಿ ಸತ್ತುವಂತ ಲಿಂಗಗಳನ್ನೇ ಕೊಟ್ಟು
ಈ ಶರಣ ಮಾತ್ಮರಲ್ಲಿ ನಾನು ಇಟ್ಟು
ಬಾಳಾಟ ಮಾಡುವುದಕ್ಕೆ
ಕಲ್ಯಾಣದ ಲಿಂಗುವೆಲ್ಲ ಭಂಗವಾಗ್ಬುಡ್ತು
ಲಿಂಗಗಳೆಲ್ಲ ಬರಿದಾಗೊಟೋಗ್ಬುಟ್ಟವಲ್ಲೋ ಸ್ವಾಮಿ ಅಂದರು
ಬಸವಣ್ಣ
ಲಿಂಗಾಗಳೆಲ್ಲ ಬರುದಾಗ್ಬುಟ್ಟೊ ಅಂಥ ಯಾಕಪ್ಪ ಚಿಂತೆ ಪಡ್ತೀಯೆ
ಯಾತಿಕ್ಕೆ ವ್ಯಥೆ ಪಟ್ಟೀಯೆ ಕಂದ
ಕಲ್ಯಾಣ ಪಟ್ಟಣಕ್ಕೆ ನಿನಗೆ ಬೇಕಾಗಿರತ್ತಕ್ಕಂಥವರು ಸತ್ಯಾಶರಣ ಮಹಾತ್ಮರು
ಆ ಶರಣ ಮಾತ್ಮುರಿಗೂ ಗುರುವಾಗಿ
ಆದಿಕಲ್ಯಾಣದಲ್ಲಿ ವಾಸ ನೀನು ಮಾಡು
ಈಗಲೀಗ ನಿನ್ನ ಲಿಂಗಗಳ ಕಂದ ಎಲ್ಲಿ ಬಚ್ಚಿಟ್ಟು ಮಡಗೀವ್ನಿ ಅಂದರೆ
ಕುಕ್ಕುರ ಕೋಡು ತಲಕಾಡು ಮಾಲಂಗಿ
ಎರಡೂ ಹೊಳೆ ಕೂಡುವ
ನದೀವೊಳಗೆ ಬಚ್ಚಿಟ್ಟು ಮಡಗಿವ್ನಿ ಕಂದ
ನಿನ್ನ ಲಿಂಗಗೊಳ ನೋಡಿ ಆನಂದ ಪಡಬೇಕಾದರೆ
ಈ ನಡುವೆ ನರಲೋಕದ ನರಮಾನವರೆಲ್ಲ
ಈ ಗುರುವಿನ ಲಿಂಗಗಳನ್ನ ಕಣ್ಣಿಂದ ನೋಡಬೇಕಾದ್ರೆ
ಐದು ಶ್ರಾವಣ ಕಂದ ಐದು ಕಾರ್ತಿಕ ಸ್ವಾಮಾರ ಎನುತೇಳಿ
ವರ್ಷಕ್ಕೆ ಒಂದು ಸಾರಿ ಕೂಡು ಆಗಲಿ ಕಂದ
ಐದು ಸೊಮಾರ ಐದು ಶನಿವಾರ ಬಂದಂಥ ಕಾಲದಲ್ಲಿ
ಒಂದು ದಿವಸ ಎರಡು ದಿವ್ಸವಲ್ಲ
ಒಂದು ತಿಂಗಳ ಕಾಲ
ಆಗಲೀಗ ಲಿಂಗದ ಪೂಜೆ ನಡಿಸ್ತೀನಿ ಮಗನೆ
ಈಗಲೀಗ ಲಿಂಗದ ಪೂಜೆ ಯಾವ ರೀತಿ ನಡಿಸ್ತೀನಿ ಅಂದರೆ

ಕುಕ್ಕರ ಕೂಡುವಲ್ಲಿ
ತಲೆಕಾಡು ಮಾಲಂಗಿ
ಮಡುವಿನಲ್ಲಿ ಕಂದ
ಪಂಚಲಿಂಗನ ದರ್ಶನ
ಆಗಲೀ ಅನುತೇಳಿ
ಈ ನರಲೋಕಕ್ಕೆ ಹೆಸರು
ತರುತೀನಿ || ಸುವ್ವಾ ಬಾ ಚನ್ನ ||

ಅಯ್ಯಾ ಪಂಚುಲಿಂಗನ ದರ್ಶನ ಆಗಲೀ ಅಂಥ
ನರಲೋಕದ ಒಳಗೆ ನಾ ಮಾಡುಸ್ತೀನಿ ಕಂದ
ಈ ಪಂಚಲಿಂಗನ ಕಂದ ದರ್ಶನವಾಗುವಾಗ
ನೀ ಕಲ್ಯಾಣದ ಕಂದ ಬಿಟ್ಟುಬಿಟ್ಟು ನನ್ನ ಕಂದ
ಕಲ್ಲು ಬಸವನಾಗಿ ಒಡೆದು ಮೂಡಿಸುತೀನೀs || ಸುವ್ವಾ ಬಾ ಚನ್ನ ||

ಅಯ್ಯಾ ಕಲ್ಲಬಸವನಾಗಿ ನಿನ್ನೂವೆ ಕಂದ
ಒಡೆದು ನನ್ನ ಕಂದ ನಾ ಮೂಡುಸ್ತೀನಿ ಕಂದ
ಅಲ್ಲಿಗೇ ಹೋಗಿ ಲಿಂಗದ ಪೂಜೆ ನೋಡಯ್ಯಾ || ಸುವ್ವಾ ಬಾ ಚನ್ನ ||

ಪಂಚಲಿಂಗನ ದರ್ಶನ ಅನುತೇಳಿ ಕಂದಾ
ಈಗಲೀಗ ನಿನಗಾಗಿಯೇ ನರರ ಕೈಲಿ ಮಾಡಿಸ್ತೀನಿ ಮಗನೆ
ಆ ಪಂಚಲಿಂಗನ ದರ್ಶನ ಆಗುವಾಗ
ನಿನ್ನನ್ನೂ ಕೂಡ ನಾನು ಕಲ್ಲು ಬಸವನಾಗಿ ಅಲ್ಲಿಯೇ ಒಡೆದು ಮೂಡುಸ್ತೀನಿ
ಈಗಲೀಗ ಇವತ್ತು ಚಿಂತೆ ಪಡುವಂಥ ಕಾಲ ಬಂದದೆ
ನಾಳೆ ಪಂಚಲಿಂಗದ ದರ್ಶನ ಆಗುವಾಗ
ನೀನು ನೂರೊಂದು ಲಿಂಗ ನಿನ್ನ ಕಣ್ಣಿಂದ ನೋಡುವಾಗ ಕಂದ
ನಿನಗೆ ಸಂತೋಷ ಉಂಟಾಯ್ತದೆ ಕಂದ
ಅಲ್ಲಿಗೆ ಬಂದು ಕಂದ
ಇಳೆ ಮ್ಯಾಲೆ ಹುಟ್ಟಿದಂಥ ನರಮಾನವರು ಕಂದ
ನಿನ್ನ ಲಿಂಗದ ಪೂಜೆ ಮಾಡಿ
ಕೈಯೆತ್ತಿ ಮುಗಿದೋರಿಗೆ
ಅವರಿಗೆ ಸತ್ತಾಗ ಸ್ವರ್ಗ
ದೊರೆಯುತಾದೇ || ಸುವ್ವಾ ಬಾ ಚನ್ನ ||

ಅಲ್ಲಿ ಸತ್ತವರಿಗೆ ಸ್ವರ್ಗ ದೊರೀತಾದೆ ಕಂದ
ನೀನು ಹೆದುರುಬ್ಯಾಡ ಕಂದ ಬಸವಣ್ಣಾ || ಸುವ್ವಾ ಬಾ ಚನ್ನ ||

ಅಲ್ಲಿ ನಿನಗೆ ಆಗಲೀಗ
ಪಂಚಲಿಂಗ ದರ್ಶನವಾಯ್ತದೆ
ಲಿಂಗ ಕಣ್ಣಿಂದ ನೋಡಿ ಸಂತೋಷ ನಿನಗೆ ಬರತ್ತದೆ
ಅಲ್ಲಿ ಬಂದು ಇಳೆ ಮ್ಯಾಲೆ ಹುಟ್ಟಿದಂಥ ನರಮಾನವರು ಕಂದ

ಲಿಂಗಗಳ ಕಣ್ಣಿಂದ ನೋಡಿ ಕೈಯೆತ್ತಿ ಮುಗಿದವರಿಗೆ
ಸತ್ತರೂ ಸ್ವರ್ಗ ದೊರೀತದೆ ಕಂದ
ಇಂಥ ಸ್ವರ್ಗಲೋಕದ ಲಿಂಗ
ಮಾಲಂಗಿ ಮಡಿಲಲ್ಲಿ ಮಡಗುತೀನಿ ಕಂದ
ಹೆದರು ಬ್ಯಾಡ ಬಸವಣ್ಣಾ ಬಪ್ಪ
ಅಂತ್ಹೇಳಿ ನೋಡಪ್ಪ ಧರೆಗೆ ದೊಡ್ಡವರು
ಕಲ್ಯಾಣಿ ಕೊಳ ಬಿಟ್ಟುಬಿಟ್ಟರು
ಕಲ್ಯಾಣ ಪಟ್ಟಣಕ್ಕೆ ಬರುತಾವರೆ
ಆಗ ಬಸವಣ್ಣನವರು ಹೇಳ್ತಾವ್ರೆ
ಸ್ವಾಮಿ ಮಾಡಿರತ್ತಕ್ಕಂಥ ಬೋಜನ
ಈಗಲೀಗ ಎಲ್ಲಾ ಶರಣ ಮಾತ್ಮರೂ
ಅನ್ನ ಬಿಟ್ಟು ಹೋಟೋದ್ರು ದೇವ

ಗುರುವೇ ಅನ್ನಬಿಟ್ಟು ಬಿಟ್ಟು
ಹೋದರೂ ಗುರುವು
ಗುರುವೇ ಅಟ್ಟಂಥ ಅನ್ನ ಉಣ್ಣಲಿಲ್ಲ || ಸುವ್ವಾ ಬಾ ಚನ್ನ ||

ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ ಪರಾವಸ್ತು ಪಾವನ ಮೂರುತಿ
ಈ ಕಲ್ಯಾಣದಲ್ಲಿ ಸ್ವಾಮಿ
ಈಗಲೀಗ ಮಾಡಿದಂಥ
ಅಡಿಗೆ ಪರುಸಾದ ಉಳಿದೋಗ್ಬುಡ್ತಲ್ಲ ಗುರುವೇ ಎಂದರು
ಬಸವಣ್ಣ, ಎಲ್ಲಿರತ್ತಕ್ಕಂಥ
ಶಿವಶರಣ ಮಾತ್ಮುರು ಕಂದ
ನೀನು ಶರಣರಿಗೆ ಎಡೆಯ ಪಡುಸಯ್ಯ || ಸುವ್ವಾ ಬಾ ಚನ್ನ ||

ಅಯ್ಯಾ ಕೋಟಿಗೊಬ್ಬ ಶರಣ
ಕುಲಕ್ಕೊಬ್ಬ ಭಕುತ
ಇಲ್ಲಿ ಸತ್ಯ ಶರಣಾರು ಇರುವಾರು || ಸುವ್ವಾ ಬಾ ಚನ್ನ ||

ಅಯ್ಯಾ ಸತ್ಯ ಶರಣಾರು
ಇರುವಾರು ಬಸವಣ್ಣ
ನೀನು ಅನ್ನದಾನ ಮಾಡೋ ಬಸವಣ್ಣಾ || ಸುವ್ವಾ ಬಾ ಚನ್ನ ||

ಸತ್ಯ ಶರಣರೆಲ್ಲ ದೇವಾ
ಆದಿ ಕಲ್ಯಾಣದಲ್ಲಿ ಅವರಲ್ಲ ಬಸವಣ್ಣ
ಲಿಂಗವಂತರು ಹೊರಟೋದ್ರು ಅಂತ್ಹೇಳಿ
ಈಗಲೀಗ ದುಃಖ ಸಂಕಟ ಪಡುಬ್ಯಾಡಿ ಬಸವಣ್ಣ
ಬಸವಣ್ಣ ಈ ಮುಡುಕುತೊರೆ ಮಾಲಂಗಿ ಮಡಿಕಣಿವೇಲಿ ಸಿಗುವಂಥ
ಲಿಂಗಗಳ ಕಾಣಪ್ಪ

ನಮ್ಮ ಆತುಮದಲ್ಲಿರುವುದೇ ಶಿವ ಲಿಂಗ || ಸುವ್ವಾ ಬಾ ಚನ್ನ ||
ಅಯ್ಯಾ ಆತುಮದ ಲಿಂಗವೇ
ನನಗೆ ಶಿವಲಿಂಗ ಬಸವಣ್ಣಾ ಶಿವಲಿಂಗವೂ ನಮಗೆ ಇರುವಾಗ
ಮತ್ತೊಂದು ಲಿಂಗ ನಮಗ್ಯಾಕೋ || ಸುವ್ವಾ ಬಾ ಚನ್ನ ||

ಬಸವಣ್ಣಾ ಮಾತಾಡುವಂಥ ನಾಲಿಗೆ
ನಮ್ಮ ಶಿವಲಿಂಗ ಕಾಣಪ್ಪ || ಸುವ್ವಾ ಬಾ ಚನ್ನ ||

ಈಗಲೀಗ ನಾಲಿಗೆ ಶಿವಲಿಂಗ
ಈಗ ಲಿಂಗಗಳ ನೆನುಕೊಂಡು
ಲಿಂಗವಂತರೆಲ್ಲ ಹೊರಟೋದ್ರು ಅಂತ ಕೇಳ್ತೀಯಲ್ಲ
ಬಸವಣ್ಣ ಇವತ್ತು ಕಲ್ಯಾಣದಿಂದ
ಲಿಂಗ ಕಳಕೊಂಡು ಹೋಗಿರತಕ್ಕಂಥ
ಶರಣ ಮಾತ್ಮುರೆಲ್ಲ ನಾಳೆ ದಿವ್ಸ ಸತ್ತುಟ್ಟುವಾಗ
ಏನಂಥ ಹುಟ್ಟುತ್ತಾರೆ ಗೊತ್ತ

ಅವರು ಲಿಂಗವಿಲ್ಲದ
ಬಯಲು ಜನ ಆಗುತಾರೆss || ಸುವ್ವಾ ಬಾ ಚನ್ನ ||

ಅವರ ಲಿಂಗವಿಲ್ಲದ ಕಂದ
ಬಯಲು ಜನವಾಗಿ ಹುಟ್ಟುತಾರೆ ನನ್ನ ಕಂದ
ಅವರು ಹುಟ್ಟಿದ ಕಾಲದ ಒಳಗೆ ಕೇಳಪ್ಪಾ ಕಂದ
ಅವರು ದೈಯ್ಯ ದೇವಾರನ್ನೆ ಮರಿವಾರುss || ಸುವ್ವಾ ಬಾ ಚನ್ನ ||

ಅಯ್ಯ ದೆಯ್ಯ ದೇವಾರ ಗ್ಯಾನ ಅವ್ರು ಮರೀತಾರೆ ಬಸವಣ್ಣ
ಈ ಸತ್ಯಶರಣರ ಕಂದ ಮರೀತಾರೆ
ಅವರ ಬುದ್ಧಿ ಸ್ಥಾನದ ಒಳಗೆ ಬಾಳುತಾರೆ || ಸುವ್ವಾ ಬಾ ಚನ್ನ ||

ಬಸವಣ್ಣಾ
ದೇವ ದೇವಮಾನ್ರ ಗ್ಯಾನ ಮರೀತಾರೆ ಕಂದ
ಗುರು ಗ್ಯಾನ ಮರೀತಾರೆ ಕಮದ
ಅವರವರ ಬುದ್ಧಿ ಸ್ಥಾನದಲ್ಲಿ
ಬಾಳಿ ಬದುಕುತಾರೆ ಕಮದ ಸರಿಯಪ್ಪ
ನಾಳೆ ಕಾಲದಲ್ಲಿ ಲಿಂಗುವಿಲ್ಲದೆ
ಬಯಲು ಜನಗಳಾಗಿ ಬುಡ್ತರೇ ಮಗನೆ
ಇವತ್ತಿನ ದಿವ್ಸದಲ್ಲಿ ಇಲ್ಲಿ ಕಲ್ಯಾಣದಲ್ಲಿ ಉಳಿದಿರುವಂಥ
ಸತ್ಯ ಶರಣಮಾತ್ಮರು ಅಂದ್ರೆ ಬಸವಣ್ಣ

ಇವರು ಭೂಮಿಯಿರುವ ತನಕ
ಅವರು ದೇವರ ನೆನೆಯುತಾರೆ
ಈ ಭೂಮಿಯಿರುವ ತನಕ
ಕಂದ ನಿನ್ನ ಪಾದ ನನ್ನ ಪಾದ
ಅಯ್ಯಾ ದೈವ ದೇವಮಾನರ ಪಾದ
ನೆನೆಯುವಂತ ಕಂದ
ಈ ಕಲ್ಯಾಣದ ಒಳಗೆ ಕೇಳಪ್ಪ ಬಸವಣ್ಣ
ಈ ಶರಣಾರು ಕಂದಾ ಇರುತಾರೆ || ಸುವ್ವಾ ಬಾ ಚನ್ನ ||

ಕಲ್ಯಾಣದ ಒಳಗೆ ಇರುವಂಥ
ಸತ್ಯ ಶರಣ ಮಾತುಮರು ಬಸವಣ್ಣ
ಹೇಳುವೆನು ಕೇಳು ಕಂದ
ಬಸವಣ್ಣ ಎಲ್ಲಾ ಶರಣಮಾತ್ಮುರು ಕಳದೋಗಿ
ಈ ಕಲ್ಯಾಣದಲ್ಲಿ ಉಳಿದಿರುವಂಥ ಶರಣಮಾತ್ಮರು
ಬಾಳ ಸಾಧು ಸತ್ಪುರುಷರು ಕಣಪ್ಪ
ನಾಳೆ ಕಾಲದಲ್ಲಿ ಕಂದ
ತಲ್ದಿಂದ ತಲೆಗಂಟ ಬಸವಣ್ಣ
ನಿನ್ನ ಮಠಮನೆಗೆ ಮಕ್ಕಳಾಗಿರ್ತಿಕ್ಕಂಥ ಶರಣಮಾತ್ಮರು ಇವರೇ ಕಂದ

ಕಂದ ನನಗೂ ಬೇಕಾದವರೂ
ನಿನಗೂ ಬೇಕಾದವರೂ
ಅಣ್ಣಾ ಮುಕ್ಕಣ್ಣ ಮಲ್ಲಯ್ಯನ
ಪರಶಿವನಿಗೆ ಕಂದಾ
ಬೇಕಾದ ಶರಣರು ನನ್ನ ಆದಿ ನಾರಾಯಣನಿಗೆ
ಬೇಕಾದ ಭಕುತರು ಈ ಆದಿ ಬ್ರಹ್ಮನಿಗೆ
ಬೇಕಾದ ಶರಣರು
ಈ ಕಲ್ಯಾಣದವೊಳಗೆ ಇರವವರೂ || ಸುವ್ವಾ ಬಾ ಚನ್ನ ||

ಬಸವಣ್ಣ
ಈಗ ಕಲ್ಯಾಣದಲ್ಲಿ ಉಳ್ದಿರತಕ್ಕಂಥ ಶರಣಮಾತ್ಮುರು ಅಂದ್ರೆ
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರುತಿ
ನಿನ್ನ ಕಲ್ಯಾಣಕ್ಕೆ ಬೇಕಾದಂಥ ಶರಣಮಾತ್ಮರು
ನನಗೆ ಬೇಕಾದಂಥ ಶಿವಶರಣರು ಕಾಣಪ್ಪ
ತಲಿಂದ ತಲೆಗಂಟ ಕಂದಾ
ಈಗಲೀಗ ಹುಟ್ಟಿದಂಥ ಮಕ್ಕಳ

ಬಸವಣ್ಣ ಎನುತೇಳಿ
ಹೆಸರು ಕರೆಯುತಾರೆ
ಕಂದಾ ಚಿಕ್ಕು ಬಸವಾ ಎಂತ
ನಾಮಕರಣ ಕಟ್ಟುತ್ತಾರೆ
ದೊಡ್ಡ ಬಸವಾ ಅಂತ
ನಮಗೆ ಹೆಸರು ಕರೀತಾರೆ
ಅಪ್ಪಾ ಹುಟ್ಟಿದ ಮಕ್ಕಳು
ನಮಗಾಗಿ ಹುಟ್ಟುತ್ತಾವೆ
ಬೆಳೆಯುವಂತ ನರಮಾನವರು
ನಮಗಾಗಿ ಬೆಳೆಯುತಾರೆ
ಈ ನನಗೆ ಒಕ್ಕಲಾಗಿರುವ
ಶರಣಾರ ಬಸವಣ್ಣ
ಕೈಬಿಡದೆ ನಾವು ಕಾಯಲೇಬೇಕು || ಸುವ್ವಾ ಬಾ ಚನ್ನ ||

ಅಯ್ಯಾ ಕೈ ಬಿಡದೆ ಕಂದಾ
ನೀನೂ ನಾವು ಕಾಯುಬೇಕು ಕಂದಾ
ಕೇಳಪ್ಪ ಬಸವಣ್ಣಾ
ಈ ನರಲೋಕ ಇವರ ಕೈಲಿ ಪಡಿಸಬೇಕು || ಸುವ್ವಾ ಬಾ ಚನ್ನ ||

ಅಯ್ಯಾ ನರಲೋಕದಲ್ಲಿ
ಇವರ ಕೈಯಲ್ಲಿ ನಾವು ಲೋಕ ಬೆಳೀಸಬೇಕು
ಈ ದೈವ ದೇವಮಾನವರಿಗೆ ಇವರು ಭಕುತರಾಗಬೇಕು
ಇಂಥಾ ಭಕುತಾರ ನಾವು ಕಾಯಲೇಬೇಕು || ಸುವ್ವಾ ಬಾ ಚನ್ನ ||

ತಲಿಂದ ತಲೆಗಂಟ ಕಂದ ಬಸವಣ್ಣಾ
ಹುಟ್ಟಿದ ಮಕ್ಕಳ ಹೆಸರು ಕೊಡ್ತಾರೆ ಕಂದ
ಚಿಕ್ಕು ಬಸವ ದೊಡ್ಡು ಬಸವ
ಪುಟ್ಟ ಬಸವ ಅಂತ್ಹೇಳಿ ನಿನಗೇ ನಾಮಕರಣ ಕೊಡ್ತರೆ
ಈಗಲೀಗ ನನಗೂ ಕೂಡ
ಚಿಕ್ಕುಮಂಟೆ ದೊಡ್ಡಮಂಟೆ ಅಂತ್ಹೇಳಿ
ಜ್ಯೋತಿಲಿಂಗ ಅಂತ್ಹೇಳಿ
ನನಗೂ ನಾಮಕರಣ ಕೊಡ್ತಾರೆ
ವಿಷ್ಣು ಈಶ್ವರ ಬ್ರಹ್ಮ ತ್ರೀಮೂರ್ತಿಗೂಳಿಗೂ ಹೆಸರು ಕೊಡ್ತಾರೆ
ಕಂದ
ಪ್ರಪಂಚಕ್ಕೆಲ್ಲ
ಆಗಲೀಗ ಸತ್ಯಪುರುಷರಾಗಿ
ದೇವಮಾನರಿಗೆಲ್ಲ ಸತ್ಯ ಶರಣರಾಗಿ
ಲಿಂಗವಿಲ್ಲದ ಬಯಲು ಜನಗಳಿಗೆಲ್ಲ
ಇವರೇ ಗುರುವಾಗಿ ಕಂದ
ಈ ನಾವು ಪಡೆದ ನರಲೋಕ ಬೆಳಿಸ್ತಾರೆ ಮಗನೆ
ಇಂಥ ಶರಣರಿಗೆ
ಅನ್ನದಾನವನ್ನು ಕೊಟ್ಟು
ನೀನು ಪುಣ್ಯ ಪಡಿಯಪ್ಪ ಬಸವಣ್ಣ || ಸುವ್ವಾ ಬಾ ಚನ್ನ ||

ಅಯ್ಯಾ ಪುಣ್ಯ ಪಡೀಯಪ್ಪ ಬಸವಣ್ಣ ಎಂತ
ನನ್ನ ಧರೆಗೆ ದೊಡ್ಡವರು ನುಡಿದಾರು || ಸುವ್ವಾ ಬಾ ಚನ್ನ ||

ಜಗತ್ತು ಗುರುಗಳ ಮಾತು
ಮಂಟೇದ ಲಿಂಗಯ್ಯನವರ ಮಾತು
ಕರ್ಣದಲ್ಲಿ ಕೇಳುಕೊಂಡು ಕಲ್ಯಾಣದ ಬಸವಣ್ಣ
ಆಗ ಕೋಟಿಗೊಬ್ಬ ಶರಣರು
ಕುಲಕ್ಕೊಬ್ಬ ಭಕುತರು
ಸತ್ಯಾ ಶರಣ ಮಾತ್ಮರೇನ ಕರೆದು
ಆಗಲೀಗ ಹಾಳೆಕೊಟ್ಟು ಅನ್ನ ಬಡಿಸಿ
ಕಲ್ಯಾಣದಲ್ಲಿ ಕುಂತು ಬಸವಣ್ಣ ನೀಲಮ್ಮನವರು
ಕಲ್ಯಾಣಕ್ಕೆ ಹೆಚ್ಚಿನ ಶಿವಶರಣ ಮಾತ್ಮುರು ಎನುವಂಥ
ನಾಮಕರಣಾನೇ ಶರಣರಿಂದ ಪಡೆದು
ಅನ್ನ ಊಟ ಮಾಡ್ದಂಥಹ ಶಿವಶರಣ ಮಾತ್ಮರಿಗೆ ಗುರುವು
ಅಯ್ಯಾ ವೀಳ್ಯ ಕೊಡಪ್ಪ ಶಿವಶರಣ || ಸುವ್ವಾ ಬಾ ಚನ್ನ ||

ಅಯ್ಯಾ ವೀಳ್ಯ ಕೊಡಪ್ಪ ಕಂದ ಶಿವಶರಣ ಎನುತೇಳಿ
ನನ್ನ ರಾಚಪ್ಪಜಿಯವರ ಕರೆದಾರು || ಸುವ್ವಾ ಬಾ ಚನ್ನ ||

ಅಯ್ಯಾ ಬಸವಣ್ಣನ ಮಾತ
ಕೇಳುಕೊಂಡು ರಾಚಪ್ಪಾಜಿ
ಊಟವ ಮಾಡಿ
ಕಲ್ಯಾಣದವೊಳಗೆ
ಇರುವಂಥ ಶರಣರ
ನೋಡ್ಕಂಡು ನನ್ನ ಗುರುವು
ಅಯ್ಯಾ ಶರಣರಿಗೆ ಈಳ್ಯವ ಕೊಡುತಾರೆ || ಸುವ್ವಾ ಬಾ ಚನ್ನ ||

ಸತ್ಯ ಶರಣರಿಗೆ ದೇವಾ
ಈಗಲೀಗ ಒಬ್ಬರಿಗೂ ತಪ್ಪಿಸದಂತೆ
ರಾಚಪ್ಪಾಜಿಯವರು ಶರಣಮಾತ್ಮರಿಗೆಲ್ಲ
ಕೈಗೆ ಈಳ್ಯ ಕೊಟ್ಕಂಡು ಬಂದ್ರಂತೆ
ವೀಳ್ಯ ಕೊಟ್ಕಂಡು ಬಂದು
ಈಗಲೀಗ ಬಲದಲ್ಲಿ ಬಸವಣ್ಣ
ಎಡದಲ್ಲಿ ನೀಲಮ್ಮ
ಮಧ್ಯಾದೊಳಗೆ ಗುರುವು
ಜಗತ್ತು ಗುರುಗಳಾಗಿರತಕ್ಕಂಥ ಪರಂಜ್ಯೋತಿ ಧರೆಗೆ ದೊಡ್ಡವರ
ಮೋರ್ತ ಮಾಡಿರುವಂಥ ಟೈಮ್ನಲ್ಲಿ ಗುರುವು
ಹಾಳೆ ಕೊಟ್ಟುಬಿಟ್ಟು ಅನ್ನ ಬಡಿಸಿಬಿಟ್ಟು
ವೀಳ್ಯ ಕೊಟ್ಟುಬಿಟ್ಟು ಆ ರಾಚಪ್ಪಾಜಿಯವರು ಬಂದು
ಮೂರು ಮಂದಿ ಮೂರ್ತಿಗಳ ಮಂಭಾಗದಲ್ಲಿ ಬಂದು ನಿಂತ್ಕಂಡರಂತೆ
ಬಸವಣ್ಣ ಎಲ್ಲಾ ಶರಣಮಾತ್ಮುರೂ ಊಟಮಾಡಿ
ವೀಳ್ಯ ಕೊಟ್ಟಿ ಸ್ವಾಮಿ
ಎಲ್ರೂಗೂ ಒಬ್ರೂಗು ತಪ್ಪಸ್ದೆ ಕೊಟ್ಯ ಕಂದ ಅಂತ್ಹೇಳಿ
ಆ ಜಗತ್ತು ಗುರುಗಳಾಗಿರತಕ್ಕಂಥ ಧರೆಗೆ ದೊಡ್ಡವ್ರು ಕೇಳುದ್ರು
ಗುರುದೇವಾ ಒಬ್ರೂಗು ತಪ್ಪಿಸ್ದಂತೆ
ತೆಪ್ಪದಂತೆ ಎಲೆ ಕೊಟ್ಕಂಡು ಬಂದಿದ್ದೀನಿ ಸ್ವಾಮಿ
ಇನ್ನು ಉಳಿದಿರೋದು ಒಂದೇ ಎಲೆ
ಇದು ಕರಿಯೆಲೆ ಸ್ವಾಮಿ ಅಂತ ಹೇಳಿದ್ರು
ಏನಪ್ಪ ನನ ಕಂದ
ಎಲ್ಲಾ ಭಕ್ತರಾದ ಭಕ್ತರು ಶರಣರಾದ ಶರಣರಿಗೆಲ್ಲ
ಎಲೆ ಕೊಟ್ಕೊಂಡು ಬಂದ್ಬುಟ್ಟು
ಉಳಿದಿರೋದು ಒಂದೇ ಎಲೆ
ಇದು ಕರೀಎಲೆ ಅಂತ ಕೇಳಿದ್ಯಲ್ಲ ಕಂದ
ಕೇಳಪ್ಪ ನನ್ನ ಕಂದ ರಾಚಪ್ಪಾಜಿ
ಇವತ್ತಿನ ದಿವ್ಸದಲ್ಲಿ ಉಳಿದಿರೋದು ಕಂದ
ಒಂದೇ ಎಲೆ ನಿನಗಾಗಿಯೇ ಉಳಿದದೆ ಕಂದ
ಇದು ಕರಿ ಎಲೆ ಅಂಥ ನೀನು ಹೇಳ್ಕಂಡಿಯಲ್ಲ
ಕರೆ ಎಲೆ ರಾಚಪ್ಪಾಜಿ ಎನ್ನುವಂಥ
ನಾಮಕರಣ ನಿಗಾಗಲೀ ಮಗನೇ ಅಂತ್ಹೇಳಿ

ಆದಿ ಕಲ್ಯಾಣದಲ್ಲಿ ಅವರಿಗೆ
ಕಲ್ಯಾಣದ ಒಳಗೆ ಹೆಸರ ಕರೆದಾರು || ಸುವ್ವಾ ಬಾ ಚನ್ನ ||

ಕಲ್ಯಾಣದಲ್ಲಿ ಗುರುವು
ಕರಿಯೆಲೆ ರಾಚಪ್ಪಾಜಿ ಎನುತೇಳಿ
ರಾಚಪ್ಪಾಜಿಯವರಿಗೆ ಸ್ವಾಮಿ
ಧರೆಗೆ ದೊಡ್ಡವರು ಯಾವಾಗ ಹೆಸರುಕೊಟ್ಟು ನಾಮಕರಣ ಪಡೆದರೋ
ಕಲ್ಯಾಣವಾದ ಕಲ್ಯಾಣ ಪಟ್ಟಣವೆಲ್ಲ
ಹಗಲು ದೀಪಗಳೆಲ್ಲ ಧಗ್ಗನೆ ಕತ್ತುಕೊಂಡು
ನೋಡಪ್ಪ ಬಸುವಣ್ಣ
ಕರಿಯೆಲೆ ರಾಚಪ್ಪಾಜಿಯವರು ನಾಮಕರಣ ಕರದೇಟಿಗೆಯೇ
ಕಲ್ಯಾಣದಲ್ಲಿರತಕ್ಕಂಥ ಹಗಲು ದೀಪಗಳೆಲ್ಲ
ಆಗಲೀಗ ಹಗಲು ಮತಾಪು ಕಸ್ತಂತೆ
ಕಲ್ಯಾಣ ಪಟ್ಟಣದಲ್ಲಿ ಹಗಲು ದೀಪುಗಳೆಲ್ಲ ಕತ್ತು ಉರೀತಾವೆ
ನೋಡು ಕಂದ ಅಂದ್ರು
ಧರೆಗೆ ದೊಡ್ಡಪ್ಪ ರಾಚಪ್ಪಾಜಿಯವರಿಗೆ ನೀವು ಹೆಸರು ಕಟ್ಟಿದುದಕಲ್ಲ
ಹಗಲು ದೀಪ ಕತ್ತಿ ಉರೀಬೇಕಾಗಿರೋದು
ನೀವು ಜ್ಯೋತಿ ಲಿಂಗಯ್ಯ ನೀವು ಆದದ್ದರಿಂದ ಗುರುವು

ನನ್ನ ಕಲ್ಯಾಣದ ಜ್ಯೋತಿಯೆಲ್ಲ ಬೆಳಗಿದವು || ಸುವ್ವಾ ಬಾ ಚನ್ನ ||

ಅಯ್ಯಾ ಕಲ್ಯಾಣವೆಲ್ಲ
ಜ್ಯೋತಿ ಬೆಳಗವೆ
ಗುರುವೇ ಗುರುದೇವ
ಇದು ನಿಮ್ಮ ಮಹಿಮೆ ಗುರುವು
ನಿಮ್ಮ ಶಾಸನವಪ್ಪ
ನಿಮ್ಮ ಮೈಮೆ ಕಂಡವರೆ ಮೊದಲಿಲ್ಲ || ಸುವ್ವಾ ಬಾ ಚನ್ನ ||

ಸ್ವಾಮಿ, ನಿಮ್ಮ ಮೈಮೆ ಮೈತ್ಯಗಾರದಿಂದ
ಈ ರೀತಿ ದೀಪಗಳೆಲ್ಲ ಕತ್ತಿ ಉರಿತಾವೆ ದೇವ
ನಮ್ಮ ಆದಿಕಲ್ಯಾಣಕ್ಕೆ ಬಂದು
ಅಜ್ಞಾನವೇ ದೂರಮಾಡ್ಬುಟ್ಟು
ಸುಜ್ಞಾನವೇ ಕೊಟ್ಟು
ಈಗಲೀಗ ಲಿಂಗವಂತರನ್ನೇ ಕಳೆದು
ಗುರುವಿಗೆ ಶಿಶು ಮಕ್ಕಳಾಗಿರತಕ್ಕಂಥ
ಸತ್ಯ ಶರಣರನ್ನೇ ನನಗೆ ಮಕ್ಕಳು ಮಾಡುವುದಕ್ಕೆ
ಈಗಲೀಗ ಜ್ಯೋತಿ ಲಿಂಗಪ್ಪ ನೀವೇ ನನ್ನಪ್ಪ ಎನುತೇಳಿ

ಅಯ್ಯಾ ಜ್ಯೋತಿ ಲಿಂಗಯ್ಯ ಎಂದು
ಹೆಸರನ್ನೇ ಕರಿದಾರು
ಅವರು ಶರಣರು ಚಪ್ಪಾಳೆಯ ಹೊಡೆದಾರು || ಸುವ್ವಾ ಬಾ ಚನ್ನ ||

ಅಯ್ಯೂ ಶರಣರು ಚಪ್ಪಾಳೆಯ
ಗುರುವೇ ಹೊಡೆದಾರು ನನ್ನ ಗುರುವು
ಧರೆಗೆ ದೊಡ್ಡಯ್ಯ
ಅವರು ಪರಂಜ್ಯೋತಿ ಎಂದು ಹೆಸ್ರ ಕರಿದಾರು || ಸುವ್ವಾ ಬಾ ಚನ್ನ ||

ಪರಂಜ್ಯೋತಿ ಜ್ಯೋತಿಲಿಂಗಯ್ಯ ಎನ್ನಿಸ್ಕೊಂಡು
ಹೆಸರು ಕರೀಸ್ಕಂಡು ಧರೆಗೆ ದೊಡ್ಡವರು
ನಾಮಕರಣ ಕಟ್ಟಿಸ್ಕಂಡು ಎಲ್ಲಾ ಸತ್ಯಾಶರಣಮಾತ್ಮುರ ಕೈಲಿ
ಕೈ ಚಪ್ಪಾಳೆ ಹೊಡಿಸ್ಕಂಡು
ಕಲ್ಯಾಣದ ಉರಿಗದ್ದುಗೆ ಬಿಟ್ಟು
ಧರೆಗೆ ದೊಡ್ಡವರು ಬಂದು ಬಸವಣ್ಣನವರ ಮುಂಭಾಗದಲ್ಲಿ ನಿಂತ್ಕಂಡ್ರು
ಬಸವಣ್ಣ ಇವತ್ತು ನಿಮ್ಮ ಆದಿಕಲ್ಯಾಣ ಪಟ್ಟಣಕ್ಕೆ
ನಾನು ಬಂದಿದ್ದಕ್ಕೆ ನನ್ನ ಕಂದ
ಕಲ್ಯಾಣ ಪಟ್ಟಣದಲ್ಲಿ ಕಂದ
ಈ ಶರಣ ಮಾತುಮರಲ್ಲಿ
ಈಗಲೀಗ ನಿಮಗೆ ಬೇಕಿಲ್ಲದಂಥ ಒಬ್ಬ ಶರಣರ
ಯಾರನ್ನಾರು ಒಬ್ರ
ಕಂದ ನನ್ನ ವಂದಿಗೆ ಮಗನೇ
ನೀನು ಶಿಶುಮಗನಾಗಿ ಕಳುಗಯ್ಯ || ಸುವ್ವಾ ಬಾ ಚನ್ನ ||

ಈಗಲೀಗ ಕಲ್ಯಾಣದಿಂದ ಕಂದಾ
ಇಷ್ಟು ಕೋಟಿ ಶರಣರಲ್ಲಿ
ಒಬ್ಬರೇ ನನಗೆ ಸಾಕು ಕಂದ
ನನಗೆ ಶಿಶುಮಗನಾಗಿ ಕಳುಗಪ್ಪ ಎಂದರು
ಗುರುದೇವ,
ಈಗಲಿನೆ ಇಲ್ಲಿರತಕ್ಕಂಥ ಸತ್ಯ ಶರಣಮಾತ್ಮರಲ್ಲಿ
ನಿಮಗೆ ಯಾವ ಶಿಶುಮಗ ಬೇಕು ದೇವ
ಈಗಲೀಗ ಬೇಕಾದಂಥ
ಶಿಶುಮಗನ ಕರಕೊಳೋ ನನ್ನಪ್ಪ ಒಪ್ಪುಸ್ಕಳೀ ಗುರುವೇ ಎಂದರು
ಬಸವಣ್ಣ, ಈ ಕೋಟಿಗೊಬ್ಬ ಶರಣರು ಕುಲಕ್ಕೊಬ್ಬ ಭಕುತರಲ್ಲಿ
ಎಲ್ಲಾ ಶರಣರನ್ನೂ ಕೂಡ ಕಲ್ಯಾಣದಲ್ಲಿ ಅಡಕವಾಗಿ ಮಡಿಕೋ ಕಂದ
ಈ ಕರಿಯೆಲೆ ನನಗುಳೀತು ಅಂತ ಹೇಳಿದ್ರಲ್ಲ
ಆ ಕರಿಯೆಲೆ ರಾಚಪ್ಪಾಜಿಯ

ನನಗೆ ಮಗನಾಗಿ ಕಳುಗಯ್ಯಾ || ಸುವ್ವಾ ಬಾ ಚನ್ನ ||