ನೀವು ಕುಕ್ಕೋರು ಕಣಿವೆಗೆ
ಹೋಗಿ ನನ್ನ ಕಂದಾ
ಅಯ್ಯ ಕುಕ್ಕೋರು ಕಣಿವೆಗೂ
ತಲಕಾಡೂ ಮಾಲಂಗೀ
ಎಂದರೆ ಗುರುವೂ
ಅಲ್ಲೀ ಎರಡು ಹೊಳೆ ಕೂಡಿದಾ
ನದಿಯಲ್ಲಿ ನನ್ನ ಕಂದಾ
ನೀವು ಶಾಶ್ವತವಾಗಿ ಇರೂರಯ್ಯ || ಸುವ್ವಾ ಬಾ ಚನ್ನ ||

ಈಗಲೀಗ ಕುಕ್ಕೋರ ಕಡೆಗೂ
ತಲಕಾಡು ಮಾಲಂಗೀ
ಮಡೂನಳ್ಳಿಗೋಗಿ ವಾಸಾಸ್ತನ ಮಾಡಿ ಕಂದಾ
ನಿನಗೆ ವರ್ಷಕ್ಕೆ
ಒಂದುವಾರ್ತಿ ಶಿವಪೂಜೆ
ಆಗದೇ ಹೋದ್ರು ಕೂಡ
ಈಗಲೀಗ ಆದಿನಾರಾಯಣಸ್ವಾಮಿ ಪಡದು
ಭೂಲೋಕದಲ್ಲೀ ಬಿಟ್ಟಿದ್ದೀನಿ
ಈಶ್ವರ ಮಲ್ಲಯ್ಯನ ಪಡೆದು
ಈ ಭೂಲೋಕಕ್ಕೆ ಕಳುಗಿದ್ದೀನಿ
ಈಗಲೀಗ ಶಿವಾ ನಾರಾಯಣ ಇಬ್ಬರೂ ಸೇರಿದಂತೆ
ಮೂರನೆ ಪೂಜೆ ನಿಮಗಾಗಬೇಕಾದರೆ

ಅಯ್ಯ ಮೂರನೆ ಪೂಜೆ ಅಗಬೇಕಾದರೆ
ಅಯ್ಯ ನಾರಾಯಣನಾ ಹೆಸರೀಗೆ
ಅಯ್ಯ ಶ್ರಾವಣ ಶನಿವಾರ
ಎನತೇಳಿ ಕಂದಾ
ಐದುವಾರ ಬರಬೇಕು
ಅಯ್ಯ ನನ್ನ ಹೆಸರಿಗೆ
ಶಿವನ ಹೆಸರಿಗೆ
ಅಯ್ಯ ಕಾರ್ತಿಕದ ಸೋಮಾರ
ಎನತೇಳಿ ಕಂದಾ
ಐದು ವಾರಬರಬೇಕು
ಬಂದಂತ ಕಂದಾ ಗಳಿಗೇಯ ಒಳಗೆ
ತಿಂಗಳ ಸೇವೆ ಮಾಡ್ಸುತೀನಿ || ಸುವ್ವಾ ಬಾ ಚನ್ನ ||

ಅಯ್ಯ ಒಂದು ತಿಂಗಳು ಕಾಲ
ನಿಮ್ಮ ಲಿಂಗದ ಪೂಜೆಯು ಅಲ್ಲಿ
ನಡೆಯಲಿ ನನ್ನ ಕಂದಾ
ನೀವು ಮಾಲಂಗಿ ಮಡುವಿಗೆ ಹೊರಟೋಗಿರಯ್ಯಾ || ಸುವ್ವಾ ಬಾ ಚನ್ನ ||

ಮಾಲಂಗಿ ಮಡುವಿಗೆ
ಹೊರಟೋಗಿರಪ್ಪ ಲಿಂಗಗಳೇ ಎಂದರು
ಸತ್ಯ ಸರಣಮಾತ್ಮರು ಗುರುವು
ಯಾವಾಗ ಕಿತ್ತೂ
ಕಲ್ಯಾಣ ಪಟ್ಟಣದ
ಕಲ್ಯಾಣಿ ಕೊಳಕ್ಕೇ ಇಟ್ಟದುವೊ
ಇಟ್ಟಂತಹ ಲಿಂಗಗಳೆಲ್ಲ
ಮಾಲಂಗಿ ಒಳಗೆ ಮೂಡುತಾವೆ || ಸುವ್ವಾ ಬಾ ಚನ್ನ ||

ಅಯ್ಯ ಮಾಲಂಗೀ ಒಳಗೆ
ಒಡದೂ ಮೂಡೂವಾಗ
ನನ್ನ ಪರ್ಮ ಜ್ಯೋತೀ ಏನಾ ನುಡಿದಾರೋ || ಸುವ್ವಾ ಬಾ ಚನ್ನ ||

ಅಗಲೀಗ ಜಗತ್ತು ಗುರು ಧರೆಗೆ ದೊಡ್ಡಯ್ಯ
ಪರಂಜ್ಯೋತಿ ಪಾವನಮೂರ್ತಿ
ಆಗಲೀಗ ಬಸವಣ್ಣನವರು
ಕಣ್ಣಿಂದ ನೋಡುಬಿಟ್ಟು
ಬಸವಣ್ಣ
ಈ ಲಿಂಗ ಜಂಗುಮರೆಲ್ಲ
ಲಿಂಗ ಕಿತ್ತೂ ಕೊಳಕಿಟ್ಟುಬಿಟ್ರೂ ಕಣಪ್ಪ
ಈಗಲೀಗ ಜಂಗುಮರೆಲ್ಲ
ನಿಮ್ಮ ನಿಮ್ಮ ಎದೆ ಬಕ್ಕಂಡು
ತಾನ ಮಡಿ ಮಾಡ್ಕಂಡು
ಶುಚಿಯಾಗಿರಪ್ಪ ಅಂದ್ರು
ಈಗಲೀಗ ಒಬ್ಬ ಜಂಗುಮರೂ
ಚಿಳ್ಳೂ ಉಗುರಲ್ಲಿ ತನ್ನ ಎದೆ ಬಗೆದ
ಬಗದೇಟ್ಟಗೆ ತಟಕ್ಕನೇ ಪ್ರಾಣಬಿಟ್ಟ
ಒಬ್ಬ ಜಂಗುಮಯ್ಯ ಯಾವಾಗ
ತಟಕ್ಕನೇ ಪ್ರಾಣ ಬಿಟ್ಟನೋ
ಇದ್ದವರ್ಗೆಲ್ಲ ಭಯ ಬಂದೋಯ್ತು
ಅಣ್ಣ
ಈ ಸರಣಮಾತ್ಮ ಇಂಥ ಒಳ್ಳೇ ಪುಣ್ಯಾತ್ಮ
ಈ ಕಲ್ಯಾಣದಲ್ಲಿ ನಾನು ಕಳ್ಳ ತಗದು
ಒಗದು ಮಡಿಮಾಡ್ಕತ್ತಿನಿ ಅಂದುಬಿಟ್ಟು
ಪ್ರಾಣನೆ ಬಿಟ್ಟು ಬಿಟ್ಟ
ಈ ಕಲ್ಯಾಣದ ಲಿಂಗೂ ನಮಗೆ ಬ್ಯಾಡ
ನಾವು ಪ್ರಾಣ ಬಿಡೋದು ಬ್ಯಾಡ ಅಂತೇಳೀ
ಎಲ್ಲ ಸರಣಮಾತ್ಮರುವೇ
ಕಲ್ಯಾಣ ಪಟ್ಟಣದಲ್ಲಿ
ಯೋಚನೇ ಮಾಡ್ಕಂಡೂ
ಮನದಲ್ಲಿ ಚಿಂತೇ ಪಟ್ಟಕ್ಕಂಡು

ಅವರು ಕಲ್ಯಾಣ ಬಿಟ್ಟೂ
ಸ್ವಾಮಿ ಹೋಗುತಾರೆ || ಸುವ್ವಾ ಬಾ ಚನ್ನ ||

ಅಯ್ಯ ಕಲ್ಯಾಣವಾ ದೇವ
ಬಿಟ್ಟುಬಿಟ್ಟೂ ನನ್ನ ಗುರುವೂ
ಅಯ್ಯ ಎಲ್ಲ ಸರಣರುವೆ
ಕಡಕಡದೊ ಹೋಗುವಾಗ
ನನ್ನ ದರೆಗೆ ದೊಡ್ಡವರು
ಏನ ನುಡಿದಾರು || ಸುವ್ವಾ ಬಾ ಚನ್ನ ||

ಬಸವಣ್ಣ
ನೋಡ್ರಪ್ಪ ನಿನ್ನ ಸರಣರ ಸತ್ಯನೋಡು
ಬಸವಣ್ಣ ಇವರೆಲ್ಲ ಕಳ್ಳ ಜಂಗುಮರು ಕಣಯ್ಯ
ಕಳ್ಳ ಜಂಗುಮರಗೆ ಲಿಂಗ ಕಟ್ಟುಕಂಡು
ವಾಸಸ್ಥಾನ ಮಾಡ್ತಿದ್ದೀಯಲ್ಲಪ್ಪ ಅಂತೇಳೀ
ಲಿಂಗ ಕಳಿಸಿ ಭಂಗ ಪಡಿಸಿ
ಜಗತ್ತು ಗುರು ಧರೆಗೆ ದೊಡ್ಡವರು
ಆಗ ಲಿಂಗ ಕಳದಾಕುಬಿಟ್ಟಿದ್ದ ಶರಣರೆಲ್ಲ
ಬಸವಣ್ಣರ ಬಳಿಗೆ ಬಂದು ಕೇಳಾವರೆ
ಬಸವಣ್ಣ
ನಿನ್ನ ಮನೆ ಅನ್ನ ಆಹಾರಾದಿಗಳೂ ನಮಗೆ ಬ್ಯಾಡ
ಇವತ್ತಿಗೆ ಗುರುದೇವಾ
ನಿಮ್ಮ ಕಲ್ಯಾಣಗೆ ಪಟ್ಟಣದಲ್ಲಿ
ನಿಮ್ಮ ಸೇವೆ ಮಾಡೋದು ಬ್ಯಾಡ
ಈ ಕಲ್ಯಾಣೀ ಕೊಳಕೆ ಲಿಂಗ
ಕಿತ್ತಾಕ್ಬುಟ್ಟೀವಿ
ನಮ್ಮ ಲಿಂಗ ತಗೀಸ್ಕೊಟ್ಬುಡಪ್ಪ
ಲಿಂಗ ಕಟ್ಕೊಂಡು ವಂಟೋಗ್ಬುಡ್ತೀವಿ
ನಾವೂ ಲಿಂಗವಂತರಾಗೇ ಬಾಳ್ತೀವಿ
ಎಂದು ಕೇಳಿದ್ರೂ
ಆಗ ಬಸವಣ್ಣರವರು ಹೇಳ್ತಾರೆ
ಕೇಳರಪ್ಪಾ ಸರಣಮಾತ್ಮರೇ
ನೀವು ಕಿತ್ತು ಇಟ್ಟಂತ ಲಿಂಗ
ನೀವೇ ಕರದ್ರೂ ಬಂದೂ ಬುಡ್ತವೆ ಕಣ್ರಪ್ಪ
ಈಗಲೀಗ ನೀವೇ ಕರೆದೂ
ಕೊರಳಿಗೆ ಧರಸಕೊಂಡು
ಕಲ್ಯಾಣದ ಮರವನ್ನೇ ಬಿಟ್ಟು ಬಿಟ್ಟೂ
ಹೊರಟೋಗ್ರಪ್ಪ ಅಂತೇಳುದ್ರು
ಆಗ ತಲಕಾಡಲ್ಲಿರುವಂತ ಲಿಂಗ
ಈ ಕಲ್ಯಾಣಿ ಕೊಳದಲ್ಲಿ ಎಲ್ಲಿ ಬಂದವು
ಲಿಂಗ ಬಪ್ಪಾ ಬಪ್ಪಾ ಅಂತೇಳೀ
ಸುತ್ತಾ ಓಡಾಡ್ತರೆ
ಲಿಂಗ ಬರೋದಿಲ್ಲ
ಧರೆಗೆ ದೊಡ್ಡವರು ಏನು ಹೇಳ್ತರೇ ಅಂದರೆ
ಶರಣರೇ
ದಡದಲ್ಲಿ ನಿಂತ್ಕಂಡು ಲಿಂಗ ಬಾ
ಅಂದರೆ ಖಂಡಿತವಾಗ್ಲೂ ಬರೊದಿಲ್ಲ ಕಣರಯ್ಯ
ಈ ಲಿಂಗ ನಿಮ್ಮ ಕಣ್ಣಗೆ
ಸಿಕ್ಕ ಬೇಕಾದರೆ
ನೀವೆಲ್ಲ ಸರಣಮಾತ್ಮರುವೇ
ಈ ಕಲ್ಯಾಣದ ಕೊಳದ ನೀರು
ತಗದು ಹೊರಗೆ ಊದುಬಿಡಿ
ನೀರಾಗಲೀಗ ನೀರೆಲ್ಲಾ ಹೋದ ಮೇಲೆ
ಬಂದಿಲ್ಲಿ ಲಿಂಗ
ನಿಮಗೆ ಸಿಕ್ಕುತಾವೇ || ಸುವ್ವಾ ಬಾ ಚನ್ನ ||

ಈ ಜಂಗುಮರು ಹೇಳದ ಮಾತು ಒಳ್ಳೆದೇ
ನೀರ ತಗದು ಆಚೆಗೆ ಊದುಬಿಟ್ಟರೆ
ಲಿಂಗ ಎಲ್ಲಿಗೆ ಹೋದವು
ಒಳಗೇ ಇರತವೇ ಸಿಗತ್ತಾವೆ ಅಂತೇಳಿ
ಎಲ್ಲಾ ಸರಣಮಾತ್ಮರು ಸೇರಿಕಂಡು
ನೋಡಪ್ಪಾ ಕಲ್ಯಾಣಿ ಕೊಳದ
ನೀರು ತಗದು ಹೊರಗುಯ್ತರೆ
ಈ ಧರೆಗೇ ದೊಡ್ಡವರು
ಬಸವಣ್ಣನಿಗೇ ಹೇಳ್ತಾವರೇ
ಬಸವಣ್ಣ
ಹನ್ನೆರುಡು ವರ್ಷದ ಕಪ್ಪೆ
ಪಾಯಸ ಇತ್ತು ಕಾಣಪ್ಪ ಇಲ್ಲಿ
ಇವತ್ತು ಈ ನೀರೆಲ್ಲ ಹೊರಗೆ
ವಂಟೋದ ಮ್ಯಾಲೇ

ನಾಳೆಗೆ ಒಳ್ಳೆ ನೀರು
ಕಂದಾ ಇಲ್ಲಿಗೆ ಬರುತಾದೆ || ಸುವ್ವಾ ಬಾ ಚನ್ನ ||

ಅಯ್ಯ ಬಳ್ಳೇ ನೀರು ಕಂದಾ
ಬರುತ್ತದೆ ಬಸವಣ್ಣ
ಅಯ್ಯಾ ಚಿಂತೆ ಪಡಬ್ಯಾಡ
ನಿನ್ನ ಮನದಲ್ಲಿ || ಸುವ್ವಾ ಬಾ ಚನ್ನ ||

ಚಿಂತೆ ಪಡಬ್ಯಾಡ ಬಸವಣ್ಣ ಅಂತೇಳೀ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಅಲ್ಲಮಾ ಪ್ರಭು
ಮಂಟೇದ ಲಿಂಗಪ್ಪನವರು
ಮನದಲ್ಲೀ ಯೋಚನೆ ಮಾಡುವಾಗ
ಆಗ ಎಲ್ಲಾ ಸರಣಮಾತ್ಮರು ನೀರ ತಗದು
ಹೊರಗೆ ಉಯ್ತಾ ಇದ್ದರೆ
ಬಸವಣ್ಣನವರು
ಸಂತೋಷ ಪಟ್ಟಕಂಡು
ಜಗತ್ತು ಗುರು ಪರಂಜ್ಯೋತಿ ಮುಂಭಾಗದಲಿ ನಿಂತ್ಕಂಡರಂತೆ
ನಿಂತಿರುವಂತ ಕಾಲದಲ್ಲಿ ಗುರುವೂ
ಅಗಲೀಗ ಕೊಳದ ನೀರೆಲ್ಲ ಬರಿದಾಯ್ತು
ಬದೀ ಒಳಗೆ ಎಲ್ಲಾ ಲಿಂಗಗಳು ತಡಕುತಾವರೆ
ಅಗ ಪರಂಜ್ಯೋತಿಯವರು ಹೇಳ್ತಾರೆ
ಸರಣಮಾತ್ಮರೇ
ಕೊಳದೊಳಗೆ ತಡಕಿದರೆ
ಬದೀಲಿ ಲಿಂಗ ಸಿಕ್ಕಕ್ಕಿಲ್ಲ ಕಣಪ್ಪಾ
ಆ ಬದೀನೂ ತಗದು ಹೊರಗಾಕಪ್ಪಾ

ಲಿಂಗ ತಡಕಿದರೆ ನಿಮಗೆ
ಬರೋದಿಲ್ಲ ಕಾಣಿರಪ್ಪ
ನೀವು ಬದಿಯ ಭೂಮಿಗೆ
ತಗೀರಯ್ಯ || ಸುವ್ವಾ ಬಾ ಚನ್ನ ||

ಕಷ್ಟ ಕಾಲದಲ್ಲಿ
ಈಗಲೀಗ ಲಿಂಗ ಹುಡುಕಿದರೆ
ಆ ಬದೀವೊಳಗೆ ಲಿಂಗ ಸಿಕ್ಕೋದಿಲ್ಲ ಕಣ್ರಪ್ಪ
ನಿಮ್ಮ ಆತುರಕೆ ಲಿಂಗಸಿಕ್ಕು ಅಂದ್ರೆ
ಮೊದಲಾಗಿ ಸಿಕ್ಕೋದಿಲ್ಲ
ಯಾಕೆ ಸಿಕ್ಕೋದಿಲ್ಲ ಅಂದರೆ
ನೀವು ಬದೀವೊಳಗೆ ತಡಕ್ತಾಯಿದ್ರೆ ಮತ್ತೂ ನೀರು ಹೆಚ್ಚಾಗ್ಬುಡ್ತದೆ
ಮೊದಲಿದ್ದಂಥ ನೀರು ಇನ್ನೂ ಜಾಸ್ತಿ ಬಂದ್ಬುಟ್ರೆ
ಮತ್ತೂ ನಿಮಗೆ ಕಷ್ಟವಾಗ್ಬುಡ್ತದೆ ಕಣ್ರಯ್ಯ
ಈ ಬದೀನೇ ತಗದು ಮೇಲುಕ್ಕಾಕ್ಬುಟ್ಟು
ಈಗ ದಡದಲ್ಲಿ ಬದಿಯಿದ್ದರೆ
ಇವತ್ತೊಬ್ರುಗೆ ಸಿಕ್ಕವೆ ಲಿಂಗ
ಇವತ್ತು ಸಿಕ್ದೆ ಹೋದರೆ ನಾಳಕೆ ಬಂದು ಹುಡುಕುದ್ರೂವೆ ಸಿಕ್ತವೆ
ನಾಳಿದ್ದು ಬಂದು ಹುಡುಕುದ್ರೂವೆ ನಿಮಗೆ ಲಿಂಗ ಆ ಬದೀವೊಳಗೆ
ಸಿಕ್ಕೇ ಸಿಕ್ತವೆ

ಅಯ್ಯಾ ಎಲ್ಲಾ ಬದೀನೂವೆ ತಗೀರಯ್ಯ || ಸುವ್ವಾ ಬಾ ಚನ್ನ ||

ಅಯ್ಯಾ ಧರೆಗೆ ದೊಡ್ಡವರ ಗುರುವೇ
ಮತನ್ನೇ ಕೇಳುಕೊಂಡು
ಎಲ್ಲಾ ಶರಣರು ಅವರು
ಬದಿಯಾ ತಗುದು ಹಾಕುತಾರೇ || ಸುವ್ವಾ ಬಾ ಚನ್ನ ||

ಎಲ್ಲ ಶರಣ ಮಾಹಾತ್ಮರೂ
ಬದೀತಗದು ಕೊಳದ ಸುತ್ತ ಏರಿ ಕಟ್ಟುಬುಟ್ಟುರು
ಆಗ ಪರಂಜ್ಯೋತಿಯವರು
ಬಸವಣ್ಣನವರಿಗೆ ಹೇಳ್ತರೆ
ಬಸವಣ್ಣ ಮೊದಲಿದ್ದಂಥ ನೀರನ್ನೂ ನೋಡಿ
ಈಗ ಬರುವಂಥ ನೀರನೂ ನೋಡಪ್ಪ
ನಾಳೆ ಬೆಳಿಗ್ಗೆ ಪ್ರಾತಃಕಾಲಕ್ಕೆ ಬಂದು
ಈ ಕಲ್ಯಾಣಿ ಕೊಳ ನೋಡಿದ್ರೆ
ಪನ್ನೀರು ಕಂದಾ ಇರುತಾವೇ || ಸುವ್ವಾ ಬಾ ಚನ್ನ ||

ಪನ್ನೀರು ಇರ್ತದೆ ಕಣ್ರಪ್ಪ ಅಂತ್ಹೇಳಿ
ಆಗ ಜಗತ್ತುಗುರು ಧರೆಗೆ ದೊಡ್ಡವರು ಬಸವಣ್ಣನಿಗೆ ಹೇಳ್ತಾವ್ರೆ
ಈ ಶರಣ ಮಾತ್ಮರೆಲ್ಲ
ಬದೀ ತಗದು ದಡಕ್ಕಾಕೊಂಡು
ನೋಡಪ್ಪ ಬದೀನೇ ಹುಡುಕೀ ತಡಕೀ ನೋಡ್ತಾವ್ರೆ
ಎಲ್ಲಾ ಶರಣ ಮಾತ್ಮುರೂವೆ
ಬದೀಗ್ಹೋಗಿ ಹುಡುಕುವಾಗ
ಆ ಬದೀವೊಳಗೆ ಏನು ಸಿಕ್ತು ಗೊತ್ತಾ ಸಿಕ್ಕುವರಿಗೆ
ಕಲ್ಲು ಸಿಕ್ತು

ಅಯ್ಯಾ ಲಿಂಗ ಅನುತೇಳಿ ಅವರು ಕಲ್ಲನೇ ಹೊತ್ತುಕೊಂಡು
ಅವರು ಕಲ್ಯಾಣಿ ಕೊಳವ ಬಿಟ್ಟು ಬರುತಾರೆ || ಸುವ್ವಾ ಬಾ ಚನ್ನ ||

ನೋಡಪ್ಪ ಕಲ್ಲು ಸಿಕ್ಕದಂತಹ ಶರಣಮಾತ್ಮರು
ಕಲ್ಲೇ ಲಿಂಗ ಅಂತ್ಹೇಳಿ
ಆ ಬದಿವೊಳಗೆ ಕಲ್ಲು ಸಿಕ್ದವ್ರು ಕಲ್ಲು ಎತ್ಕೊಂಡು
ಲಿಂಗ ಅಂದ್ಬುಟ್ಟು ಹೊಯ್ತಾವ್ರೆ
ಕಲ್ಲು ಸಿಕ್ದೆಯಿದ್ದಂತಹ ಶರಣರೆಲ್ಲ
ಜಂಗುಮರು ಹೇಳವ್ರಲ್ಲ ಉತ್ತುರದೇಸದವರು
ಇವತ್ತು ಸಿಕ್ದೇ ಹೋದ್ರೆ ನಾಳಕೆ ಬಂದು ಹುಡುಕುದ್ರೂ ಸಿಕ್ತವೆ ಅಂತ
ನಾಳಕ್ಕೆ ಬಂದು ಹುಡೀಕಂಡು ತಕ್ಕೊಳವ್ವ ಅಂದ್ಬುಟ್ಟು

ಅವರು ಕಡದು ಕಡದು
ದೇವಾ ಬರುತಾರೆ || ಸುವ್ವಾ ಬಾ ಚನ್ನ ||

ಕಡದು ಕಡದು ಈ ಕಳ್ಳ ಜಂಗುಮರುಗಳೆಲ್ಲ ಹೊರಟೋದ್ರು
ಈ ಸಾಧು ಸತ್ಪುರುಷರೆಲ್ಲ ಬಸವಣ್ಣವ್ರ ಗುರುಮಠ ಬಿಟ್ಟು ಒಬ್ರೂ ಹೋಗಲಿಲ್ಲ
ಯಾವ ಯಾವ ಶರಣಮಾತ್ಮರು ಆದಿ ಕಲ್ಯಾಣದಲ್ಲಿ ಉಳ್ಕಂಡ್ರು ಅಂದ್ರೆ

ಕೋಟಿಗೊಬ್ಬ ಶರಣರು
ಕುಲಕ್ಕೊಬ್ಬ ಭಕ್ತರು ಗುರುವೇ ಅಂಗೈನ ಒಳುಗೆ
ಲಿಂಗವ ಪಡೆದವರು ಅಯ್ಯ ಇಂತಿಂಥ
ಶರಣರು ಇರುತಾರೇ || ಸುವ್ವಾ ಬಾ ಚನ್ನ ||

ಈಗಲೀಗ ಎಲ್ಲರೂ ಹಾಳಾಗ್ಬುಟ್ರು ಕೂಡ
ತಮ್ಮ ತಮ್ಮ ಕರಡಿಗೆಗೊಳು ತಮ್ಮ ತಮ್ಮ ಅಂಗೈಗೇ ಬಂದು
ಕೂತ್ಕೊಬೇಕು

ಅಂಥಂಥ ಲಿಂಗವಂಥರು ನೋಡು
ಆದಿ ಕಲ್ಯಾಣದಲ್ಲಿ ಸ್ಥಿರವಾಗಿ ಉಳಿದುಕೊಂಡರಂತೆ
ಆದಿ ಕಲ್ಯಾಣದ ಪಟ್ಟಣದಲ್ಲಿ ಸ್ಥಿರವಾಗಿ ಉಳಿದಾಗ
ಆ ಧರೆಗೆ ದೊಡ್ಡವರು ಹೇಳ್ತರೆ
ಬಸವಣ್ಣ, ನೋಡಪ್ಪ, ಕಳ್ಳ ಜಂಗುಮರೆಲ್ಲ
ಕಲ್ಯಾಣ ಬಿಟ್ಟು ಹೊರಟೋದ್ರು
ನೋಡು ಸತ್ಯ ಸರಣಮಾತ್ಮರೂ ಅಂದ್ರೆ ಅವರೆ ಕಣಯ್ಯ
ಇಂಥಾ ಶಿವಶರಣಮಾತ್ಮರೂ
ಆದಿ ಕಲ್ಯಾಣ ಪಟ್ಟಣದಲ್ಲಿ
ಸಾಶ್ವಿತವಾಗಿ ಉಳಿದಿರೋವಾಗ
ಇವರಿಗೆ ನಾಮಕರಣ ಕಟ್ಟುಕೊಂಡು
ಕಲ್ಯಾಣದ ಗುರುಮಠ
ಉದ್ಧಾರ ಆಗಲೀ ಅಂತೇಳಿ ಹೆಸರನ್ನೇ ಇಟ್ಕೊಂಡು
ಈ ಕಲ್ಯಾಣದಲ್ಲಿ ನೀನು ಬಾಳಿ ಬದುಕಬೇಕು ಕಂದ ಅಂದರು
ಸ್ವಾಮಿ, ಈ ಕಲ್ಯಾಣ ಪಟ್ಟಣದ ಶರಣರು
ಇವರೆಲ್ಲ ಉಳಿದವರು ಯಾರು ಅಂಥ ತಿಳಿಯೋನಿ
ಎನುತೇಳಿ ಕಲ್ಯಾಣದ ಬಸವಣ್ಣ ಧರೆಗೆ ದೊಡ್ಡವರ ಕೇಳುವಾಗ

ಇವರು ಹೊಲೆಯರ ಹೊನ್ನಪ್ಪ ಮಾದಿಗರ ಚೆನ್ನಯ್ಯ
ಈ ಮಡಿವಾಳ ಮಾಚಯ್ಯ
ಒಬ್ಬ ಶಿವಶರಣಾ || ಸುವ್ವಾ ಬಾ ಚನ್ನ ||

ಅಯ್ಯಾ ಮಡಿವಳ ಮಾಚಪ್ಪ
ಇವನೊಬ್ಬ ಶಿವಶರಣ
ನನ್ನ ಗಾಣುಗರ ದಾಸಪ್ಪ
ಇವನೊಬ್ಬ ಶಿವಶರಣ
ನನ್ನ ಅಂಬುಗ್ರ ಚೌಡಯ್ಯ
ಒಬ್ಬ ಶಿವಶರಣ || ಸುವ್ವಾ ಬಾ ಚನ್ನ ||

ಅಯ್ಯಾ ಅಂಬುಗರ ಚೌಡಯ್ಯ
ಇವನೊಬ್ಬ ಶಿವಶರಣ
ನಮ್ಮ ಈಡಿಗರ ಕ್ಯಾತಪ್ಪ
ಇವನೊಬ್ಬ ಶಿವಶರಣ
ನಮ್ಮ ತುರುಕರ ಬೀರಯ್ಯ
ಒಬ್ಬ ಶಿವಶರಣ || ಸುವ್ವಾ ಬಾ ಚನ್ನ ||

ನಮ್ಮ ತುರುಕರ ಬೀರಯ್ಯ
ಅವನೊಬ್ಬ ಶಿವಶರಣ
ನನ್ನ ಗಾಣಗರ ದಾಸಪ್ಪ
ಅವನೊಬ್ಬ ಶಿವಶರಣ
ನನ್ನ ಅಂಬಿಗರ ಚೌಡಯ್ಯ
ಅವನೊಬ್ಬ ದುಡುಶರಣ
ನನ್ನ ಹಡಗಲಂಪಣ್ಣನವರು
ಅವರೊಬ್ಬ ಶಿವಶರಣ
ನನ್ನ ಕುರುಬರ ಬೀರಯ್ಯ
ಒಬ್ಬ ಶಿವಶರಣ || ಸುವ್ವಾ ಬಾ ಚನ್ನ ||