ಗುರುವೆ ನಿಂದುಕರ ಮಾಡವರಾ
ಅಯ್ಯ ಮುಂಭಾಗದಲ್ಲಿ ನಿಲ್ಲಿಸಪ್ಪ
ಅಯ್ಯೊ ಮರುಗ ಮಲ್ಲಿಗೆ ನಮ್ಮ ಶಿವನೀಗೆ || ಸುವ್ವಾ ಹೇಳಮ್ಮ ||
ಮರುಗ ಮಲ್ಲಿಗೆ ತಂದು
ಶಿವನ ಲಿಂಗಕ್ಕೆ ಧರಿಸಿ
ನಿನಗೆ ದರ್ಶನದೊಳಗಾರುತಿ ಬೆಳಗುವೆವೂ || ಸುವ್ವಾ ಹೇಳಮ್ಮ ||

ಎತ್ತಿ ಮಂಗಳಾರತಿ ಬೆಳಗಿ
ಬಸವಣ್ಣ ನೀಲಮ್ಮನವರು
ಜಗತ್ತು ಗುರು ಧರೆಗೆ ದೊಡ್ಡವರ ಪಾದಕ್ಕೆ ಸರಣು ಮಾಡುವಾಗ
ಯಾವಾಗ ಬಾಳ ಭಕ್ತಿ ಬಾಳ ಸತ್ಯದಲ್ಲಿ
ನೂರಾರು ಜಾತಿ ಪುಷ್ಮನು ಕರೆದೂ
ಪೂಜೆ ಮಡಿ ಮಂಗಳಾರತಿ ಬೆಳಗಿ
ಧರೆಗೆ ದೊಡ್ಡವರಿಗೆ ಕೈಯೆತ್ತಿ ಮುಗಿವಾಗ

ಆಗಲೀಗ ಜಗತ್ ಗುರು ಪರಂಜ್ಯೋತಿ ಪಾತಾಳ ಜ್ಯೋತಿಯವರು
ಮಂಗಳಾರತಿ ಯಾವಾಗ ಅರ್ಪಿಸಿ
ಬೆಳಗದಂತಹ ಟೈಮನಲ್ಲಿ
ಆದಿ ಕಲ್ಯಾಣ ಪಟ್ಟಣದಲ್ಲಿದ್ದಂತಹ

ಹಗಲು ದೀಪಗಳೆಲ್ಲ
ಅಯ್ಯ ಪಕ್ಕಪಕ್ಕನೇ ದೀಪ ಕತ್ತಿಕೊಂಡೋss || ಸುವ್ವಾ ಬಾ ಚನ್ನ ||

ಅಯ್ಯೋ ಪಕ್ಕ ಪಕ್ಕನೇ ದೀಪಾ
ಕತ್ತಗೊಂಡೋ ಬಸವಣ್ಣ
ಕತ್ತಗೊಂಡೋ ನೀಲಮ್ಮ
ಅಲ್ಲಿ ಕಲ್ಯಾಣ ಪಟ್ಟಣ ಪ್ರಕಾಶವಾಯ್ತು || ಸುವ್ವಾ ಬಾ ಚನ್ನ ||

ಮಂಗಳಾರತಿ ಬೆಳಗುದರೊಳಗಾಗಿ ಗುರುವೂs
ಕಲ್ಯಾಣ ಪಟ್ಟಣದ ಹಗಲ ದೀವಿಗೆಗೊಳೆಲ್ಲ
ಧಗ ಧಗನೇ ಕತ್ತಿಕೊಂಡು
ಧಿಗೀ ಧಿಗಿನೇ ಉರಿತಿದ್ದೋ
ಬಸವಣ್ಣನವರ ಗುರುದೇವ
ಉರಿಯ ಗದ್ದುಗೆ ಮ್ಯಾಲೆ ಜಗತ್ತು ಗುರು ಧರೆಗೆ ದೊಡ್ಡಯ್ಯ

ಅವರು ನೆಗನೆಗತ
ಪರಂಜ್ಯೋತಿ ನಿಂತಾರಾಗ || ಸುವ್ವಾ ಹೇಳಮ್ಮ ||

ಧರೆಗೇ ದೊಡ್ಡವರ
ಮುಖವನ್ನೆ ನೋಡಿದರೂ
ಕಲ್ಯಾಣದ ಬಸವಣ್ಣ
ಅವರು ಕರವೆತ್ತಿ ಕೈಯ್ಯ
ಸ್ವಾಮಿ ಮುಗಿದಾರೂss || ಸುವ್ವಾ ಹೇಳಮ್ಮ ||

ಅಯ್ಯಾ ಬಲದಲ್ಲಿ ಬಸವಣ್ಣ
ಕರವೆತ್ತಿ ಕೈಮುಗುದು
ಎಡದಲ್ಲಿ ನೀಲಮ್ಮ
ಪಾದ ಜೋಡಿಸಿಗೊಂಡು
ಕಣ್ಣು ನೇತ್ರ ಮುಚ್ಚಿ
ಅವಳು ಎರಡು ಕೈಯೆತ್ತಿ
ಗುರುವೇ ಸರಣೆಂದss || ಸುವ್ವಾ ಹೇಳಮ್ಮ ||

ಸತಿ ಪತಿಗಳು ಕೈಯೆತ್ತಿ ಮುಗುದೂ
ಧರೆಗೇ ದೊಡ್ಡವರ ಮುಂಭಾಗದಲ್ಲಿ ನಿಂತಗೊಂಡರು
ಬಸವಣ್ಣ
ನಿನ್ನ ಸತ್ಯಕ್ಕೆ ಒಪ್ಪಿದೀ ಭಕ್ತಿಗೆ ಮೆಚ್ದಿ ಕಂದಾ ಅಂತೇಳಿ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಪರಂಜ್ಯೋತಿಯವರು
ಬಸವಣ್ಣ
ಉತ್ತರಕಾಂಡವನ್ನೇ ಬಿಟ್ಟುಬಿಟ್ಟು
ಆದಿ ಕಲ್ಯಾಣ ಪಟ್ಟಣ ಏನೇನು
ವಿಶ್ವಾರ್ತಿ ಅಂತೇಳೀ
ನಿಮ್ಮ ಸತ್ಯನು ಭಕ್ತಿ ನಾನೇ ತಿಳಿಬೇಕು ಅಂತೇಳಿ
ಆದಿ ಕಲ್ಯಾಣದ ಗುರು ಮಠಕ್ಕೆ ಬಂದಿ ಕಂದಾ

ನಿಮ್ಮ ಭಕ್ತಿ ಕಂಡಂಗಾಯ್ತು ಸತ್ಯ ಕಂಡಂಗಾಯ್ತು
ಈ ಆದಿ ಕಲ್ಯಾಣ ಪಟ್ಟಣ ನನ್ನ ಕಂದಾ
ಭೂಮಿ ಇರಗಂಟ
ಸ್ಥಿರುವಾಗಲಿ ಅನತೇಳಿ

ಅವರು ಬಸವಣ್ಣನಿಗೆ ಆಶೀರ್ವಾದ
ಗುರುವೇ ಕೋಡುತ್ತಾರೆss || ಸುವ್ವಾ ಬಾ ಚನ್ನ ||

ಕಲ್ಯಾಣಕೆ ಬಸವಣ್ಣ
ಹೆಚ್ಚಿನ ಭಗುತ ಸರಣಾ
ಎನ್ನುವಂತ ಹೆಸರು
ಈ ಆದಿಕಲ್ಯಾಣ ಗುರುಮಠಕೆ ಉಂಟಾಗಲಿ ಕಂದಾ ಅಂತೇಳಿ
ಪರಂಜ್ಯೋತಿ ಧರಗೆ ದೊಡ್ಡವರು
ಬಸವಣ್ಣನವರಿಗೆ ಹರಸೀ ಆಶೀರ್ವಾದ ಕೊಟ್ಟರು
ಆಗ ಬಸವಣ್ಣನವರು
ಧರಗೆ ದೊಡ್ಡವರಿಗೆ ಹೇಳುತಾವರೆ
ಸ್ವಾಮೀ
ಲಕ್ಷ ಕೋಟಿ ಜಂಗುಮರೆಲ್ಲಾ
ಊಟಕ್ಕೆ ಕುಳಿತಿದ್ದರು
ನಿಮ್ಮ ಹೊತ್ತಗಂಡು ನಾನು ಬರುದ
ನೋಡುಬಿಟ್ಟು
ನಮ್ಮ ಮಡದಿ ನೀಲಮ್ಮನವರು
ನಿಮ್ಮ ತಲೇ ಇಡಕ್ಕಂಡು
ಬರುವುದು ಕಣ್ಣಾರೆ ನೋಡುಬಿಟ್ಟು
ಸತ್ಯ ಸರಣಮಾತ್ಮರೆಲ್ಲ
ಏನಂತ ಕೊಂಡಾಡ್ಕಂಡು ಕಲ್ಯಾಣ
ಬಿಟ್ಟು ಬಿಟ್ಟು ಹೊರಟೋದ್ರು ಅಂದರೆ ಸ್ವಾಮಿ
ನೋಡು ಬಸವಣ್ಣ ಅಲ್ಲಿಂದ ಕಟ್ಟದರೂ
ಜಂಗುಮ ರುಸ್ತುಮರು ಕಾವೀ ಕಾಮಳ್ಳಿ ಗೆದ್ದವರೂ
ಕಲ್ಯಾಣಕ್ಕೆ ಲಿಂಗವಂತ ಅಂತ ತಿಳಕ್ಕಂಡು
ನಾವು ಊಟಕ್ಕೆ ಬಂದಿದ್ದೊ
ಈ ಕಲ್ಯಾಣದ ಬಸವಣ್ಣ
ಮಾಂಸದ ಪೊಟ್ಟಣ ಹೊತ್ಗಂಡೋಯ್ತಾವರೆ
ಇವರು ಮಾಂಸ ತಿನ್ನಬಹುದು
ನೀಲಮ್ಮ ಸುರಾಯದ ಗಡಗೆ
ತಕ್ಕೊಂಡೋಯ್ತರೆ ಹೆಂಡ ಕುಡಿ ಬೌದು ಅಂತೇಳಿ
ಎಲ್ಲಾ ಸರಣಮಾತ್ಮರು ಗುರುದೇವ
ಉಣ್ಣೋ ಅನ್ನ ಬಿಟ್ಟುಬಿಟ್ಟು
ಕಲ್ಯಾಣದಿಂದ ಕಡದುಹೊರಟೋದ್ರು ಸ್ವಾಮಿ
ಎನತೇಳಿ ಗುರುವೂ

ನನ್ನ ಬಸವಣ್ಣ ಗುರುವೇ
ಕೈಯೆತ್ತಿ ಮುಗಿವಾಗ
ನನ್ನ ಧರೆಗೆ ದೊಡ್ಡವರು
ಮಂಟೇದ ಲಿಂಗಪ್ಪ
ಮಾಯ್ಕಾರದ ಒಡೆಯ
ನನ್ನ ಪರ್ಮಜ್ಯೋತಿಯವರು
ಅವರು ಮತ್ತೇನು ಗುರುವೂ
ನುಡಿದಾರೂ || ಸುವ್ವಾ ಬಾ ಚನ್ನ ||

ಬಸವಣ್ಣ
ಈ ಕಲ್ಯಾಣದಲ್ಲಿ
ಈಗಲೀಗ ಎಲ್ಲ ಜಂಗುಮರೂ
ಕಲ್ಯಾಣ ಬಿಟ್ಟು ಹೊರಟೋದ್ರೂ ಅಂತ ಕೇಳ್ತಿಯಲ್ಲಪ್ಪ
ಬಸವಣ್ಣ
ನಿನ್ನ ಕಲ್ಯಾಣದಲ್ಲಿರ್ತಕ್ಕಂತ
ಸರಣ ಮಾತ್ಮರೆಲ್ಲ
ಒಳ್ಳೇ ಶರಣಾರಲ್ಲ ಕಣ್ಣಯ್ಯ
ಒಳ್ಳೆಯವರು ಯಾರು
ಕೆಟ್ಟವರು ಯಾರು ಎನುವುದು
ನಿನಗೆ ಎನ್ನೂ ಗೊತ್ತಿಲ್ಲ ಬಸವಣ್ಣ

ಮೂವತ್ತು ಮೂರು ಮಂದಿ ಮುನಾದಿ ಮುನಿಗಳು ಲಿಂಗಕಟ್ಕೊಂಡು
ಅರುವತ್ತಾರು ಮಂದಿ ಜಂಗುಮರಿಗೂ ಕೂಡ ಲಿಂಗ ಕಟ್ಟುಕೊಂಡು
ಲಕ್ಕಷದ ಮ್ಯಾಲೇ ತೊಂಬತ್ತೇಳು ಕೋಟಿ ಶಿವಶರಣಾಮಾತ್ಮರಿಗೆಲ್ಲ
ಲಿಂಗಕಟ್ಕಂಡು ಬಸವಣ್ಣ
ಈ ಕಲ್ಯಾಣದಲ್ಲಿ ವಾಸಮಾಡ್ತೀಯಲ್ಲಪ್ಪ
ಕಳ್ಳರು ಯಾರು
ಸತ್ಯ ಪುರುಷರು ಯಾರು ಎನ್ನುದ
ನಿನ್ನ ಕಣ್ಣು ಮುಂಭಾಗದಲ್ಲೆ ತೋರಿಸ್ತೀನಿ ಮಗನೆ

ನನ್ನ ಒಂದಿಗೆ ಬಪ್ಪ ಬಸವಣ್ಣ || ಸುವ್ವಾ ಬಾ ಚನ್ನ ||
ಅಯ್ಯಾ ಒಂದಿಗೇ ಬಪ್ಪ ಬಸವಣ್ಣ ಎನುತೇಳಿ
ಅವರು ಕಲ್ಯಾಣಿ ಕೊಳಕೆ ಬರುತಾರೆ || ಸುವ್ವಾ ಬಾ ಚನ್ನ ||

ಈಗಲೀಗ ಕಲ್ಯಾಣಿ ಕೊಳಕೆ ಬಂದರು
ಕಲ್ಯಾಣಿ ಕೊಳದ ದೂರದಲ್ಲಿ
ಆ ಬಸವಣ್ಣೋರ ನಿಲ್ಲಿಸಿಬುಟ್ಟು
ನೋಡಪ್ಪ ಸತ್ಯ ಸರಣರ ಬಳಿಗೆ ಬಂದರು
ಯಾರು? ಧರೆಗೆ ದೊಡ್ಡವ್ರು
ಆಲದೆಲೆ ಅಳ್ಳಾಡ್ದಂಗೆ ತೂರಾಡ್ತ ಗುರುವು
ನೂರು ವರ್ಷದ ಹಣ್ಣಣ್ಣು
ಜಂಗುಮರ ಅವತಾರ ತಾಳಿಕೊಂಡು
ಆ ಸತ್ಯ ಸರಣುಮಾತ್ಮರ ಬಳಿಗೆ ಬಂದವರೆ
ಬಸವಣ್ಣನವರು ದೂರದಲ್ಲಿ
ನಿಂತುಕೊಂಡು ಸರಣಮಾತ್ಮರ ನೋಡ್ತಾವರೆ
ಈಗ ಬಸವಣ್ಣೋರು ಬಲಗಡೆ ತಿರುಗಿ ನೋಡುವಾಗ
ಬಸವಣ್ಣ
ಈಗ ಅತ್ತಗೆ ನೋಡಬೇಡ ಇತ್ತಗೆ ನೋಡು

ಇಲ್ಲಿ ಸರಣಾರ ಸತ್ಯವ ತೋರುತ್ತೀನಿ || ಸುವ್ವಾ ಬಾ ಚನ್ನ ||

ಅಯ್ಯಾ ಶರಣಾರ ಸತ್ಯವ
ತೋರ್ತಿನೀ ಎನತೇಳಿ
ನನ್ನ ಪರಂಜ್ಯೋತಿ ಸ್ವಾಮಿಯವರು ನುಡಿದಾರೂss || ಸುವ್ವಾ ಬಾ ಚನ್ನ ||

ಸರಣರ ಬಳಿಗೆ ಬಂದರು
ಏನ್ರಪ್ಪ ಸರಣಾತ್ಮರೇ
ಈ ಕಲ್ಯಾಣದ ಕೊಳದ ಸುತ್ತ
ಇಷ್ಟೊಂದು ಶಿವನರಣಮಾತ್ಮರೆಲ್ಲ
ಸ್ನಾನ ಜಪ ಮಡಿ ಮಾಡ್ತರಲ್ಲ ಯಾಕರಪ್ಪ?
ಸ್ವಾಮಿ ಜಂಗುಮರೆ
ನೀವು ಯಾವ ನಾಡೂ ಜಂಗುಮರು ಹೇಳಿರಪ್ಪ
ನಾವು ಉತ್ತರ ದೇಶದ ಕಡೆ ಜಂಗುಮರು
ಉತ್ತರ ದೇಶದಿಂದ
ನನ್ನ ಕಲ್ಯಾಣದ ಗುರುಮಠಕ್ಕೆ ಯಾತಕ್ಕೆ ಬಂದಿರಿ ಸ್ವಾಮಿ
ಕಲ್ಯಾಣ ಪಟ್ಟಣದಲ್ಲಿ ಏನು ಏನು
ವಿಶ್ವಾರ್ತಿ ಅಂತೇಳಿ
ನಿಮ್ಮಗೊಳ ಮಾತ ಕೇಳಬೇಕು ಅಂತೇಳಿ
ಕಲ್ಯಾಣಕ್ಕೆ ಬರಬೇಕಾಗ್ಬುಡ್ತು ಕಾಣರಯ್ಯ
ನೀವಾಡ್ತಕ್ಕಂತ ಮಾತು
ನೀವಾಡ್ತಕ್ಕಂತ ವಾರ್ತೆಗಳೆಲ್ಲ
ನಮಗೇ ಉತ್ತರ ದೇಶಕ್ಕೆ ಗೊತ್ತಗುಬುಡ್ತು ಕಣರಪ್ಪಾ
ಜಂಗುಮರೇ
ಇವತ್ತೋ ಬಂದಿರೀಯೋ
ನೆನ್ನೇ ಬಂದಿರಿಯೋ
ಮೊನ್ನೆ ಬಂದಿರೀಯೋ?
ಇದೇ ಗಳಿಗೆ ಒಳಗೆ ಬಂದೂ
ಈ ಕೊಳದ ಏರಿ ಮ್ಯಾಲೆ ನಿಂತಿವ್ನಿ ಕಣಪ್ಪ
ಏನು ವಿಶೇಷವಾದ ವಾರ್ತೆ ನಿಮ್ಮ ಕಲ್ಯಾಣದಲ್ಲಿ ಎಂದರು
ಹಂಗಲ್ಲ ಸ್ವಾಮಿ
ಕಲ್ಯಾಣದ ಬಸವಣ್ಣನವರು
ಪ್ರತಿದಿವಸವೂ ಕೂಡ
ಲಕ್ಕಷ ಕೋಟಿ ಜಂಗುಮರಿಗೆಲ್ಲ
ಅನ್ನಕೊಟ್ಟು ನಿತ್ಯು ಭೋಜನ ಮಾಡ್ತಿದ್ರು
ಪ್ರತಿ ಕಾಲದಲ್ಲೂ ಬಂದು ಊಟ ಮಾಡಿ
ವೀಳ್ಯಾ ತಕ್ಕಂಡೂ ಹೋಗುತ್ತಿದ್ದೊ ಸ್ವಾಮಿ
ಇವತ್ತೂ
ತಿಳಿಯದೇ ಬಂದು ಬುಡುವತ್ತಗೆ
ನಮ್ಮಗೆಲ್ಲ ಅನ್ನ ಇಕ್ಕುತ್ತಿದ್ದರು
ಯಾರೂ? ನೀಲಮ್ಮ
ಬಸವಣ್ಣೊರೋ ಸಾರುಬಿಡ್ತಿದ್ದರೂ
ಆ ಕಡೇ ಬಾಗಲಲಿ ಒಬ್ಬ
ಕಟುಗರ ಸಂಗಯ್ಯನ ಇರಿಸೀಕಂಡವರೆಪ್ಪ
ಆ ಸಂಗಯ್ಯ ಬಸವಣ್ಣ ನೀಲಮ್ಮ ಅಂತ
ಕೂಗುಬಿಟ್ಟರೇನೊ ಅನ್ನ ಇಕ್ಕುತ್ತಿದ್ದನ್ನೂ ಬುಟ್ಬುಟ್ರು
ಸಾರು ಬುಡ್ತಿದ್ದನೂ ಬುಟ್ಟು ಬುಟ್ರು
ಆ ಸಂಗಯ್ಯದಿಕ್ಕೆ ನೋಡುಬಿಟ್ಟು ಎದ್ದೊಂಟೋದ್ರು
ಹೋಗ್ಲೀ ಅಂದುಬಿಟ್ಟು
ನಾವೆಲ್ಲ ಕೂತಿದ್ದರೆ
ಅತ್ಲಿಂದ ಏನು ತಂದರು ಗೊತ್ತ ಸ್ವಾಮಿ ?
ಬಾಡಿನ ಪೊಟ್ನ
ತಲೆಮ್ಯಾಲೆ ಹೊತ್ತಕ್ಕಂಡು ಬಸವಣ್ಣ ಬಂದ
ಹೆಂಡದ ಗಡೆಗೆ ತಕ್ಕಂಡು
ನೀಲಮ್ಮ ಬಂದರು
ಇವರು ಮಡ್ಡೀ ಮಾಂಸ ತಿನ್ನುವರೂ
ಈವಾಗಲೀಗ ಇವತ್ತೀನ ದಿವಸದಲ್ಲಿ
ಬಸವಣ್ಣೋರು ಬತ್ತಗೆಟ್ಟವರು ಅಂತೇಳಿ
ಈ ಬತ್ತಗೆಟ್ಟೂರ ಮನೇಲಿ
ಅನ್ನ ಉಂಡುಬಿಟ್ಟು ನಾವು ಸುದ್ದವಾಗ್ಲಿಲ್ಲ
ಅಂತೇಳಿ ಸ್ವಾಮೀ
ಇಕ್ಕಿದ್ದ ಬಟ್ಟೇನೆಲ್ಲಾನು ಒಗದು ಮಡಿ ಮಾಡಿ
ತಾನ ಮಾಡಿ
ಮಡಿ ಮಾಡಿ
ಈಗ ಜಾತಿಗೆಟ್ಟ ಮನುಷ್ಯರಾಗಬಾರುದ್ದು
ನಾವೂ ಒಳ್ಳೇಯವರಾಗಬೇಕಂತೇಳೀ
ಸುಚೀಯಾಗತಾಯಿವಿ ಸ್ವಾಮಿ ಅಂದರೆ
ಏನ್ರಪ್ಪ ಸರಣಾರೇ
ನೀವಾಡಿದ ಮಾತು ಗೊತ್ತಾಯಿತು ಕಣಿರಯ್ಯ
ಮೈತೊಳಕತ್ತೀವಿ ಗುರುವೂ
ನಿಮ್ಮ ಮೈನ ಕೊಳೆ ಓಂಟೋಯ್ತದೇ
ಬಟ್ಟೇ ಒಕ್ಕತ್ತಿರೀ
ಬಟ್ಟೇ ಮಡಿಯಾಯ್ತದೇ ಅಷ್ಟೆ
ಬಟ್ಟೆ ಕೊಳೆವಂಟೋಯ್ತದೆ
ನಾಲಿಗೆ ಉಜ್ಜಿಗಂದೂ
ವ್ಯಾ ಅಂತೇಳಿ ನೀರಿಗೆ ಬೊಗ್ಗಿ
ಉಗುಳಿದುರೆ
ಹೊಟ್ಟೆಲಿರುವ ಅನ್ನ ಈಚೆಗೆ ಬರಕಿಲ್ಲ ಕನಪ್ಪ

ಈ ತಾನ ಮಡಿಯ ನಾನು ಒಪ್ಪುವನಲ್ಲಾ || ಸುವ್ವಾ ಬಾ ಚನ್ನ ||

ಈ ತ್ಥಾನ ಮಡಿಯ
ನಾವೋಪ್ಪದಿಲ್ಲ ಕಣರಯ್ಯ
ಈ ಕಲ್ಯಾಣಾದ ತಾನ
ನಮಗೆ ಸರಿಯಿಲ್ಲ ಕಾಣಾ || ಸುವ್ವಾ ಬಾ ಚನ್ನ ||

ನಿಮ್ಮ ಕಲ್ಯಾಣ ಪಟ್ಟಣದ ಸ್ಥಾನ
ನಮಗೆ ಸರಿಯಿಲ್ಲ ಕಾಣರಪ್ಪ ಅಂದುರು
ಸ್ವಾಮಿ
ಏನಾರುವೇ
ತಿಳಿಯದೆ ಕುಲ ಹದಿನೆಂಟು ಜಾತಿಯವರ ಮನೆಗೂ ನಾವು
ಭಿನ್ಯಕ್ಕೆ ವಂಟೋಗುಬಿಟ್ಟು
ಏನಾದ್ರು ಊಟ ಮಾಡುಬುಟ್ರೇ
ಸುಚಿಯಾಗಬೇಕಾದರೆ ಹೆಂಗೆ? ಅಂದರು
ನೋಡಯ್ಯ
ಕುಲಹದಿನೆಂಟು ಜಾತಿಯೋರು ಮನೆಗ
ಹೋಗಿ ಊಟ ಮಾಡುಬುಟ್ಟು
ಶುಚಿಯಾಗುಬೇಕೆಂದರೆ ಸರಿ
ಶುಚಿಯಾಗಕ್ಕೇ ಹೇಳ್ತಿನೀ ಕೇಳ್ರಪ್ಪ
ನಾವೇನೂ ನಮ್ಮ ದೇಹವನ್ನೇ ತೊಳೆದು
ಶುಚಿ ಮಾಡ್ಕಬೇಕಾದರೆ
ನಮ್ಮ ಕತ್ತಿಲಿರುವಂತ ಲಿಂಗಗಳೆಲ್ಲನೂ
ಕಳದು ನೀರುಗಿಟ್ಟು ಬಿಡಬೇಕು
ನಮ್ಮ ನಮ್ಮ ಚಿಳ್ಳುಗುರುನ್ನೇ ತಕ್ಕಂಡು
ನಮ್ಮ ಎದೆನೆ ಬೊಕ್ಕಬೇಕು
ಒಳಗಿರ್ತಕ್ಕಂತ
ಕಳ್ಳು ತೊಳ್ಳೆಯೆಲ್ಲಾನೂ
ಹರೇ ಕಲ್ಲು ಮ್ಯಾಲೇ ಮಡಿಗಿ
ಸಗಟಾಗಿ ತೊಳೆದೂ

ಬಟ್ಟೆಯ ವರೆದಂಗೆ ಅದುನ್ನೂವೆ ವಗೆದು
ನಾವು ಬೇಲಿಯಾ ಮೇಲೆ ಹಾಕಲುಬೇಕು || ಸುವ್ವಾ ಬಾ ಚನ್ನ ||

ಬಟ್ಟೆ ಒಗೆವಂಗೇ ಕಳ್ಳು ತೊಳ್ಳೇನೂ ಒಗೆದು
ಬೇಲಿಮ್ಯಾಲೇ ಒಣಗಾಕು ಬಿಟ್ಟು
ಅದನ್ನೇ ತಗದು ಜನ್ಮಕ್ಕೇ
ನಾವು ಸ್ನಾನ ಮಾಡಿ ಮಾಡುಬುಟ್ಟು
ಅದ ತಗದು ನಮ್ಮ ದೇಹಕ್ಕೆ ಧರಿಸ್ಕಂಡರೇ
ನೋಡಪ್ಪ ನಾವು ಸುಂಗಾರ ಹಾಗಗಂಟ
ನಮ್ಮ ಲಿಂಗೂ ನೀರನ್ನೊಳಗೆ ಸ್ನಾನ ಮಾಡ್ಕಂಡಿರ್ತದೇ
ಆ ಸುಂಗಾರವಾದಂತ ಲಿಂಗತಗದು ಕೊರಳಿಗೆ ಧರಿಸ್ಕಂಡರೆ
ನಾವು ಬಂಗಾರದಂತ ಶುಚಿಯಾಯ್ತಿವಿ ಕನಪ್ಪ
ಸ್ವಾಮೀ ಜಂಗುಮರೇ
ಕಳ್ಳು ತಗದು ಒಗೆದು ಮಡಿ ಮಾಡೋದು
ಯಾವ ಲೋಕದಲ್ಲಿ ಉಂಟು
ನಮ್ಮ ಉತ್ತರ ದೇಶದ ಕಡೇ
ಬತ್ತಗೆಟ್ಟದ ಮನುಷ್ಯರೆಲ್ಲ ಮಾಡ್ಕೋಳ್ಳೋದು ಹಿಂಗೆ ಕಣರಪ್ಪ ಅಂದರು

ಅಂಗರೆ ಏನೂ ಆಗಕಿಲ್ವ ಸ್ವಾಮಿ
ಏನು ಆಗದಿಲ್ಲ
ನೀವು, ನಾವು ಮಾಡಿದಂಗೇ
ಮಾಡಕಬೇಕಾದರೇ
ಮೊದಲಾಗಿ ನಿಮ್ಮ ಲಿಂಗಗಳು ಕಳೆದೂ
ನೀರ್ಗಿಟ್ಟು ಬಿಡ್ರಪ್ಪಾ ಅಂದರು
ಈಗಲೀಗ
ಎಲ್ಲಾ ಜಂಗುಮರು ಉತ್ತರ ದೇಶದ
ಜಂಗುಮರ ಮಾತೀನಂತನೇ ಮಾಡ್ಕಬೇಕು
ಅಂತೇಳಿ
ನೋಡಪ್ಪ ಎದೆ ಬಕ್ಕೊಳಕ್ಕೂ
ಮೊದಲಾಗಿ ಲಿಂಗಗಳು ಕಳದು ಕಳದು
ಅಯ್ಯಾ ಕೊಳಕ್ಕೆ ತಗೆದು ಇಡುತಾರೆ || ಸುವ್ವಾ ಬಾ ಚನ್ನ ||

ಎಲ್ಲಾ ಲಿಂಗಗಳನೂ ದೇವಾ
ಕಳದು ಕೊಳಕೆ ಇಟ್ಟರೂ ಸ್ವಾಮಿ
ಈ ಸತ್ಯ ಸರಣಮಾತ್ಮರೂ
ಲಿಂಗಗಳಿಗೆಲ್ಲ
ಧರೆಗೇ ದೊಡ್ಡವರೂ ಮಂಟೇದ ಲಿಂಗಪ್ಪಾ
ಈಗಲೀಗ ಏನಂತ ಶಾಪಕೊಡ್ತಾರೆ ಅಂದರೇ
ಕೇಳಿರಪ್ಪ
ಈ ಕಳ್ಳ ಜಂಗುಮರೂ
ಕೊರಳಲ್ಲಿರತಕ್ಕಂತ ಲಿಂಗುಗೊಳೇ
ಇವರ ಕೊರಳಲ್ಲೀ ಕಾಲ ಕಳಿಬೇಡಿ ಕಂದಾ
ಈ ಕಲ್ಯಾಣ ಪಟ್ಟಣದ ಕಲ್ಯಾಣಿ ಕೊಳದಲ್ಲಿ ನಿಮಗೆ ಸ್ಥಳವಿಲ್ಲ
ಇವರು ಬಿಚ್ಚೀ ಇಟ್ಟ ಗಳಿಗೇ ಒಳಗೆ
ನೀವು ಶುಚಿಯಾಗಬೇಕಾದರೆ
ನೀವು ಕೊಕ್ಕೋರು ಕಣಿವೆಗೆ ನೀವು ಹೋಗಿರಯ್ಯ || ಸುವ್ವಾ ಬಾ ಚನ್ನ ||