ಅಯ್ಯಾ ಆದಿ ಗುರುಮಠಕ್ಕೆ ಗುರುವು
ನಾವೆಲ್ಲ ಬರಲೇ ಬಹುದ || ಸಿದ್ಧಯ್ಯ ||

ಕಲ್ಯಾಣ ಪಟ್ಟಣ ಬತ್ತಗೆಟ್ಟೋಯ್ತು
ಕಲ್ಯಾಣದ ಬಸವಣ್ಣ ಬತ್ತಗೆಟ್ಟೋದ
ಅವರ ಮಡದಿ ನೀಲಮ್ಮನು ಕೂಡ
ಬತ್ತಗೆಟ್ಟೋಗ್ಬುಟ್ಲು
ಈಗ ನಾವು ಸಾಧು ಸತ್ಪುರುಷರಾಗಿ
ಲಿಂಗ ಕಟ್ಟಿದ ಜಂಗುಮರಾಗಿ
ನಾವು ಸತ್ಯ ಶರಣಮಾತ್ಮುರಾಗಿ
ಈ ಆದಿ ಕಲ್ಯಾಣಕ್ಕೆ ಬಂದು
ಅನ್ನ ಊಟ ಮಾಡಬಹುದ ಎನುತೇಳಿ
ಎಲ್ಲ ಸರಣಮಾತ್ಮರು ಬಸವಣ್ಣ ನೀಲಮ್ಮನವರ ನೋಡುವಾಗ
ಮತ್ತೊಬ್ಬ ಸರಣುಮಾತ್ಮುರು ಹೇಳಿದ್ರಂತೆ
ಏನ್ರಯ್ಯಾ
ಅ ಬಸವಣ್ಣನೋರು ತೆಕ್ಕಂಡು ಹೋಗ್ತಾಯಿರೋದು ಏನು?
ಆ ನೀಲಮ್ಮ ನೋರು ಇಡ್ಕಂದು ಹೋಯ್ತಾಯಿರೋದು ಏನು?
ಏನರಯ್ಯಾ ಸರಣರೇ
ನಿಮ್ಮಗೇ ಎಳ್ಳಷ್ಟು ಗೊತ್ತಿಲ್ಲ
ಬಸವಣ್ಣನವ್ರು ಹೊತ್ಕಂಡೊಯ್ತಿರೋದು ಬಾಡಿನ ಪೊಟ್ಣ
ನೀಲಮ್ಮನವರು ಹಿಡ್ಕಂಡೋಯ್ತಿರೋದು
ಹೆಂಡದ ಸುರಾಯಿ ಗಡಿಗೆ

ಈ ಆದಿ ಕಲ್ಯಾಣ
ಕೆಟ್ಟೋಯ್ತು ಎಂದರಂತೆ || ಸಿದ್ಧಯ್ಯ ||

ಯಾವಾಗ
ಹೆಂಡದ ಸುರಾಯಿ ಗಡಿಗೆ
ಬಸವಣ್ಣ ಹೊತ್ಕಂಡೋಯ್ತಿರೋದು ಬಾಡಿನಪೊಟ್ಣ ಅಂತೇಳ್ಬುಟ್ರೋ

ಈ ಅನ್ನ ಉಣ್ಣುವ ಶರಣರೆಲ್ಲ
ಅನ್ನ ಬುಟ್ಟು ಹೋಗುತಾರೆ || ಸಿದ್ಧಯ್ಯ ||

ಗುರುವೇ ಅನ್ನ ಉಣ್ಣುವಂತ
ಸರಣರೆಲ್ಲ ಗುರುವು
ಅಯ್ಯ ನಾವುನು ಬತ್ತಗೆಟ್ಟೋ
ನಮ್ಮ ಲಿಂಗುವೂ ಬತ್ತಗೆಟ್ಟೋಯ್ತು
ಅನುತೇಳಿ ನನ್ನ ಗುರುವು
ಅವರು ಕಲ್ಯಾಣಿ ಕೊಳಕೆ ಗುರುವೇ
ಓಡಿ ಓಡಿ ಬರುತಾರೇ || ಸಿದ್ಧಯ್ಯ ||

ಲಿಂಗಕೆಟ್ಟೋಯ್ತು
ಕಲ್ಯಾಣಕ್ಕೆ ಬಂದಿರತಕ್ಕಂತ ನಾವು
ಸೆರಣು ಮಾತ್ಮರೆಲ್ಲ ಬತ್ತಗೆಟ್ಟೋಗುಬುಟ್ಟೋ ಅಂತೇಳಿ
ಎಲ್ಲ ಸೆರಣುಮಾತ್ಮರುವೇ
ಉಣ್ಣತ್ತಿದ್ದಂತಹ ಅನ್ನನೇ ಬಿಟ್ಟುಬಿಟ್ಟು
ಕಲ್ಯಾಣ ಪಟ್ಟಣದ ಮುಂಭಾಗದಲ್ಲಿರುವಂತ
ಕಲ್ಯಾಣಿ ಕೊಳಕೆ ಸ್ನಾನಕ್ಕೆ ಹೊರಟೋದ್ರು
ಆದಿ ಬಸವಣ್ಣನವರು ಗುರುವು
ಹೊತ್ಗಂಡು ಬಂದಂತಹ ಪೊಟ್ಟಣ ತಕ್ಕಂಡು ಬಂದು
ಉರಿಗದುಗೇ ಮೇಲೆ ಮಡ್ಗುದ್ರು
ತಾಯಿ ನೀಲಮ್ಮನವರು
ಆಗಲೀಗ ತಲೆ ಹಿಡಕಂಡು
ಸುಮ್ನೆ ನಿಂತಿದ್ದರು
ನೀಲಮ್ಮ
ಈ ಜಂಗುಮುರನೆ ತಕಂಡು ಬಂದವಲ್ಲ
ಇದನ್ನೇ ಏನು ಮಾಡಬೇಕು ಮಡಿದ ಎಂದರು
ಸ್ವಾಮಿ
ಆ ಜಂಗುವರು ಮೊದಲು
ಯಾವ ಪರಕಾರದಲ್ಲಿ ಇದ್ದರೋ
ಅದೇ ಪರಕಾರ ಮಾಡಬೇಕಾದರೇ
ಆ ಜಂಗುಮರ ಮುಂಡ ತಗದು
ಉರಿ ಗದುಗೆ ಮ್ಯಾಲೆ ಮಡಿಗಿ ಅಂತೇಳಿ
ಉರಿಗದುಗೇ ಮೇಲೆ ಮಡಗಿಸಿಬುಟ್ಟು
ಕಾಲು ಕಾಲನಾಗೇ ಕಾಲಾಗಲೀಗ ಸೇರಿಸಿ
ಕೈಯಿ ಕೈನಾಗೇ ಸೇರಿಸಿ
ತಾನು ಹಿಡದಿದ್ದಂತ
ಉರೀ ಜ್ವಾಲೆ ತಡಿಲಾರಿ ಮಡದಿ
ಈ ಬಾದಿ ಬಂಧಾನ ಸೈರಿಸಲಾರಿ ಅನುತೇಳಿ
ಆಗಲೀಗ ಬಸವಣ್ಣನವರು
ಮಡದಿ ನೀಲಮ್ಮನಿಗೆ ಹೇಳಿದರು
ಸ್ವಾಮಿ
ನಾವು ಹೊತ್ಕಂಡು ಬಂದಿರತಕ್ಕಂತ
ಸ್ವಾಮಿಗೊಳು ಅಂದ್ರೇ
ಸಾಮಾನ್ಯವಾದ ಪರುಷರಲ್ಲ ದೇವ
ನಮಗಿಂತ ಹೆಚ್ಚಿನ ಮಹಾಗುರುಗಳು
ಈಗಲೀಗ ಈ ತಲೇ ತಗದು
ಅವರು ಮೊದಲು ಶಿರದ ಮೇಲಿತ್ತಲ್ಲ
ಅದೇ ಪರುಕಾರವಾಗಿ ಮಡಿಗಿ ಸ್ವಾಮಿ ಅಂತೇಳಿ
ತಲೇ ತಗದು ಬಸವಣ್ಣನವರ ಕೈಲಿ
ಕೊಟ್ಟರು
ಕೊಟ್ಟಂತಹ ತಲೆತಗದು ಬಸವಣ್ಣನವರು
ಅವರ ಶಿರದ ಮೇಲೆ ಮಡುಗಬುಟ್ಟು
ಆಗಲೀಗ ನೀಲಮ್ಮ ಬಸವಣ್ಣನವರು
ಈಗ ಜಂಗುಮರ ಪಾದಪೂಜೆ ಮಾಡಬೇಕು ಅಂತೇಳಿ
ಈಗಲೀಗ ಜಗತ್ತು ಗುರು ಧರೆಗೆ ದೊಡ್ಡವರ
ಶಿವಪೂಜೆಗೆ ಯಾವಯಾವ ಪುಷ್ಮ ಕರಿತಾರೆ ಅಂದ್ರೆ

ಅಮ್ಮ ಓಣಿಲಿ ಹುಟ್ಟವಳೆ
ಓಣಿಲಿ ಬೆಳೆಯವಳೆ
ಹೋಗವರ ಸೆರಗ ಹಿಡಿಯವಾಳೆ
ಅಮ್ಮಾ ಹೋಗವರ ಸೆರಗ ಹಿಡಿವಂತ
ಗಂಡು ಉತ್ತುರಾಣೆ ತಾಳೆ
ಶಿವನಾ ಪೂಜೇಗೆ ಬರಬೇಕು

ಅಮ್ಮಾ ಬೇಲೀಲಿ ಹುಟ್ಟವಳೆ
ಬೇಲಿ ಮ್ಯಾಲೆ ಬೆಳಿಯವಳೆ
ನೀನು ನಲ್ಲರದ ನೆಗು ನಗಿಯವಾಳೇ
ಅಮ್ಮ ನಲ್ಲರದ ನೆಗುವಾ
ನಗೀವಂತಾ ತುಂಬೆಹೂವೇ
ಶಿವನಾ ಪೂಜೆಗೆ ಬರಬೇಕು

ಅಮ್ಮ ಮಾಳದಲ್ಲುಟ್ಟವಳೆ
ಮಾಳುದಲ್ಲಿ ಬೆಳಯವಳೆ
ಕುಳ್ಳು ಕುಳ್ಳಾಗಿ ಇರುವವಾಳೆ
ಅಮ್ಮ ಕುಳ್ಳು ಕುಳ್ಳಾಗಿ
ಪುಟ್ಟು ಪುಟ್ಟಾಗಿ
ಬೆಳೆವಂತ ತುಂಬೆ ಹೂವೆ
ಹರನ ಪೂಜೆಗೆ ಬರಬೇಕು

ಅಮ್ಮ ಬೆನೈದು ಬೆಸಳೈದು
ಅಮ್ಮ ಬನ್ನೀಸಿ ನೆಗುವ ನಗಿಯವಾಳೆ
ಅಮ್ಮ ಬನ್ನೀಸಿ ನೆಗುವ
ನಗುವಂತ ಕೆಂಗಲೂವೇ
ಶಿವನಾ ಪೂಜೆಗೆ ಬರಬೇಕು
ಅಮ್ಮಾ ಬೆಟ್ಟದಲ್ಲುಟ್ಟವಳೆ
ಕಲ್ಲುಬಂಡೇಲಿ ಬೆಳೆಯವಳೆ
ಅಮ್ಮಾ ಸೂರ್ಯನಿಗೆ ಕೈಯ ಮುಗಿಯವಾಳೆ
ಅಮ್ಮಾ ಸೂರ್ಯನಿಗೆ ಕೈಯ ನೀನು
ಮುಗಿವಂತ ಸೂರ್ಯಕಾಂತಿಯ ಹೂವೆ
ಶಿವನಾ ಪೂಜೆಗೆ ಬರಬೇಕು

ಅಮ್ಮಾ ನೀರಲ್ಲಿ ಹುಟ್ಟವಾಳೆ
ನೀರಲ್ಲಿ ಬೆಳಿಯಾವಳೇ
ನಲ್ಲರದ ನೆಗುವ ನೆಗಿಯೋವಳೆ
ಅಮ್ಮಾ ನಲ್ಲರದ ನೆಗುವ
ನೆಗುವಂತ ತಾವರೆ ಹೂವೇ
ಸ್ವಾಮಿ ಪೂಜೆಗೆ ಬರಬೇಕು

ಅಮ್ಮಾ ಸ್ವಾಮಿ ಪೂಜೆಗೇ ನೀನು
ಬರಬೇಕು ಎನುತೇಳಿ
ತಾಯಿ ನೀಲಮ್ಮ ನುಡಿದಾಳು

ಅಮ್ಮಾ ಸಂದುಗು ಸೂತುಕವಾಗಿ
ಸರ್ರಾ‍ತ್ರಿಗೆ ಬಸುರಾಗಿ
ಮುಂಜಾನೆಗೆ ಮಗನ ಪಡೆಯೋಳೆ
ಅಮ್ಮ ಮುಂಜಾನೆಗೆ ಮಗನ
ಪಡೆವಂತ ಸಾಮಂತಗೆ ಹೂವೆ
ಶಿವನಾ ಪೂಜೆಗೆ ಬರಬೇಕು

ಅಮ್ಮ ಹರಿಸಿಣದ ಸೀರೆಗೆ
ಆರುವತೈದು ನೆರಿಯ ಊಡಿ
ಪುರುಷನಿಲ್ಲದ ಬಾಲೆ ಬಸುರಾಗಿ
ಅಮ್ಮ ಪುರುಷನಿಲ್ಲಾದ ಬಾಲೆ
ಬಸುರಾದ ಚೆಂಡುಮಲ್ಲಿಗ್ಹೂವೆ
ಶಿವನಾ ಪೂಜೆಗೆ ಬರಬೇಕು

ಅಯ್ಯ ಗಂಜಿಯ ಸೀರೆಗೆ
ಬಿನಕನಿಂದ ನೆರಿಯ ಊಡಿ
ಗಂಡನಿಲ್ಲದ ಬಾಲೆ ಗರ್ಭಿಣಿಯಾಗಿ
ಅಮ್ಮ ಗಂಡನಿಲ್ಲದ ಬಾಲೆ
ಗರ್ಭಿಣಿಯಾದೆ ಕಣಗಲೂವೆ
ಸ್ವಾಮಿ ಪೂಜೆಗೆ ಬರಬೇಕು

ಅಮ್ಮ ಕಾಗುಡುವಾಡಿಯ ಒಳಗೆ
ಜಾಲ್ನಾಡಿ ಬೆಳೀಯವಳೆ
ಕಾವಿಜೋತ್ರರೆ ಅಮ್ಮ ಬರುವಾಳೆ
ಅಮ್ಮ ಕಾವಿ ಜೋತುರ್ಕೆ ನೀನು
ಅಂಬರದ ಕೆಂಡ ಸಂಪಿಗೆ ಹೂವೇ
ಸ್ವಾಮಿ ಪೂಜೆಗೆ ಬರಬೇಕು

ಅಮ್ಮ ಅಂಡು ಮಲ್ಲಿಗೇ ಹೂವೆ
ದುಂಡು ಮಲ್ಲೀಗೆ ಹೂವೇ
ದಂಡು ಗೋಪುರದ ತುಳಸೀಯೇ
ಅಮ್ಮ ದಂಡುಗೋಪುರದ
ತುಳಸೀ ಪಚ್ಚೇಯ ತೆನೆಯೆ
ಸ್ವಾಮಿ ಪೂಜೆಗೇ ಬರಬೇಕು
ನಮ್ಮ ಸ್ವಾಮಿ ಪೂಜೆಗೆ ನೀವು
ಬರಬೇಕು ಎನುತೇಳಿ
ತಾಯಿ ನೀಲಮ್ಮ ನುಡಿದಾಳು

ಇಷ್ಟೊಂದು ಪುಷ್ಮ
ಎಲ್ಲರನ್ನೂ ಕರದುರು
ಎಲ್ಲ ಪುಷ್ಮಗಳು ಗುರುವು
ನೀಲಮ್ಮನವರು ಕರದ ಗಳಿಗೆಗೆ
ತಪ್ಪದೇ ಬಂದವಂತೆ
ಅಗಲೀಗ ಎಲ್ಲಾ ಪುಷ್ಮನೂ ತಗದು ಕಣ್ಣು ಮೂಗಿಗೇ ಹೊತ್ತಗಂಡು
ನೀಲಮ್ಮ ಬಸವಣ್ಣನವರು
ಆ ಧರೆಗೆ ದೊಡ್ಡವರ
ಅಗಲೀಗ ಪಾದಕ್ಕೆ ಎಲ್ಲ ಪುಷ್ಮನೂ ಧರಿಸಿ
ಆಗ ನೀಲಮ್ಮನವರು ಯೋಚನೆ ಮಾಡಿದರಂತೆ
ನೋಡಿ ಸ್ವಾಮಿ ಬಸವಣ್ಣ
ಎಲ್ಲ ಪುಷ್ಮಗಳು ಕೂಡ
ಕೂಗ್ದ ಗಳಿಗೆಗೆ ಎಲ್ಲ ಬಂದುಬುಟ್ಟೋ
ಒಂದು ಪುಷ್ಮ ಬರಲಿಲ್ಲ
ಆ ಬರದೇ ಇದ್ದಂತಹ ಪುಷ್ಮಕ್ಕೆ ಶಾಪ ಕೊಡ್ಬೇಕು ಅಂತೇಳಿ
ಆ ನೀಲಮ್ಮನವರು ಹೇಳ್ತಾವರೆ

ಅಮ್ಮಾ ಎಲ್ಲ ಹೂಗಳು ಬಂದೋ
ಅಮ್ಮಾ ಹುಡುಗಿ ನೀ ಯಾಕೆ ಬರಲಿಲ್ಲ
ಅಮ್ಮ ಎಲ್ಲ ಹೂಗಳು ಬಂದೋ
ಅಮ್ಮ ಹುಚ್ಚೀ ನೀಯಾಕೆ ಬರಲಿಲ್ಲ
ಅಯ್ಯಾ ಹುಚ್ಚು ನೀನ್ಯಾಕೆ
ಬೆಪ್ಪೀ ನೀನ್ಯಾಕೇ ಬರಲಿಲ್ಲ ಏನತೇಳೀ
ತಾಳೇ ಹೂಗೆ ಶಾಪ ಕೊಡುತಾರೆ

ಅಯ್ಯಾ ತಾಳೇ ಹೂವಿಗೇ ಶಾಪ
ಕೊಡ್ತಾರೆ ನೀಲಮ್ಮ
ನೀನು ಹಳ್ಳದ ಕೇರೀಲಿ ಬೆಳಿ ಹೋಗು

ಅಮ್ಮ ಹಳ್ಳದ ಕೇರೀಲಿ
ನೀರಿರುವ ಸ್ಥಳದಲ್ಲಿ
ಬೆಳಿ ಹೋಗು ತಾಳೆ ಹೂವೆ
ನೀನು ಮೂರು ಮೈಲಿಗೆ ಗಮನಾಗು

ಅಮ್ಮ ಮೂರು ಮೈಲಿಗೆ ನೀನು
ಗಮನಾಗು ತಾಳೆ ಹೂವೇ
ಕತ್ತೆ ಲದ್ದಿಯಾಗಿ ಉದುರೋಗು

ನೀನು ಕತ್ತೆ ಲದ್ಯಾಗಿ ನೀನು
ಉದುರೋಗು ತಾಳೆ ಹೂವೆ
ಬ್ರಾಹ್ಮಣರ ಬೀದೀಲಿ ಮೆರಿ ಹೋಗು

ಅಯ್ಯ ಬ್ರಾಹ್ಮಣರ ಬೀದಿಲಿ
ಹಾರವರ ಕೇರಿಲಿ
ನೀನು ಮೆರೆಯೋಗು ತಾಳೆ ಹೂವೆ
ನಿನ್ನ ಮುಡಿದವರಿಗೆ ಮೂರು ದಿನ ತಲೆ ನೋವು

ಅಯ್ಯ ಮುಡದವರಗೆ ಮೂರುದಿನ
ತಲೆ ನೋವು ಬರಲೀಯೆಂದು
ತಾಳೆ ಹೂವಗೆ ಶಾಪ ಕೊಡುತಾರೆ

ತಾಳೇ ಹೂವಿಗೆ ದೇವಾs
ಶಾಪ ಕೊಟ್ಟೂss
ತಾಯಿ ನೀಲಮ್ಮನವರು
ಪತಿದೇವರೇ ಬಸವಣ್ಣ
ಇನ್ನು ಒಂದು ಪುಷ್ಮ ಬಂದಿಲ್ಲ
ಅದಕ್ಕೂ ಶಾಪ ಕೊಡ್ತೀನಿ ಅಂತೇಳಿ

ಅಯ್ಯಾ ಎಲ್ಲಾ ಹೂಗಳು ಬಂದೊ
ಹುಡುಗೀ ನೀನ್ಯಾಕೆ ಬರಲಿಲ್ಲ

ಅಯ್ಯಾ ಹುಡುಗಿ ನೀನ್ಯಾಕೇ
ಬೆಡಗೀ ನೀನ್ಯಾಕೇ ಬರಲಿಲ್ಲಾ
ಷಣ್ಮುಖದ ಸಣ್ಣಾ ಗರತಿ
ಎನ್ನುತೇಳಿ ನೀಲಮ್ಮ
ಎಕ್ಕದ ಹೂಗೆ ಶಾಪ ಕೊಡುತಾಳೆ

ಎಕ್ಕದೂವಿಗೆ ಶಾಪ
ಕೋಡುತಾಳೆ ನೀಲಮ್ಮ
ನೀನು ಪಾಳು ಗ್ವಾಡೇಲಿ ಬೆಳಿ ಹೋಗು

ಅಮ್ಮ ಪಾಳೂ ಗ್ವಾಡೆಲಿ ನೀನು
ಬೆಳಿಹೋಗು ಎಕ್ಕದೂವೆ ಹೂಳೇ
ನೀನು ಮಾಟ್ಲ ಕೂಟ್ಲಕ್ಕೆ ವಲಿಯೋಗು

ಮಾಟ್ಲ ಕೂಟ್ಲಕ್ಕೆ ಅಯ್ಯೋ ನೀನು
ವಲಿಯೋಗು ಎಕ್ಕದೂವೆ
ಅಂತ್ರ ಮಂತ್ರಕ್ಕೆ ವಲಿಯೋಗು

ಅಮ್ಮಾ ಅಂತ್ರ ಮಂತ್ರಕ್ಕೆ
ವಲಿಯೋಗು ಎಕ್ಕದೂವೆ
ಶಿವನಾ ಪೂಜೆಗೆ ಮರೆಯಾಗು

ನೀನು ಶಿವನಾ ಪೂಜೆಗೆ
ಮರೆಯಾಗು ಎಕ್ಕದೂವೆ
ಲಿಂಗದ ಪೂಜೆಗೆ ಸಲುಬ್ಯಾಡss

ನೀನೂ ಲಿಂಗದ ಪೂಜೆಗೆ ನೀನು
ಸಲಬೇಡ ಎನತೇಳಿ
ಎಕ್ಕದೂವಿಗೆ ಶಾಪ ಕೊಡುತಾಳೆ

ಎಕ್ಕದೂವಿಗೇ ಶಾಪಕೊಟ್ಟುs
ಇಂಥಾ ಪತಿವ್ರತಿ ನೀಲಮ್ಮ
ಇನ್ನೂ ಒಂದು ಪುಷ್ಮ ಬಂದಿಲ್ಲ
ಆ ಬರದಿದ್ದ ಪುಷ್ಮಕ್ಕೂ ಶಾಪ ಕೊಡಬೇಕು ಅಂತೇಳಿ

ಅಮ್ಮ ಎಲ್ಲ ಹೂಗಳು ಬಂದೋ
ಮುದುಕೀ ನೀನ್ಯಾಕೇ ಬರಲಿಲ್ಲಾss

ಅಮ್ಮ ಮುದುಕಿ ನೀನ್ಯಾಕೇ
ಸದಕಿ ನೀನ್ಯಾಕೆ ಬರಲಿಲ್ಲ ಎನತೇಳಿ
ಅವರು ಮರಗಣಿಗಲೆಗೆ ಶಾಪ ಕೊಡುತಾರೆ
ಅಮ್ಮ ಮರದಗಣಿಗೆಲೆಗೆ
ಶಾಪ ಕೊಡ್ತಾರೆ ನೀಲಮ್ಮ
ನೀನು ಮಾರೀರ ಮಂಡೇಲಿ ಮುಡಿ ಹೋಗು

ಅಮ್ಮ ಮಾರೀರ ಮಂಡೇಲಿ
ದುರ್ಗೀರ ಮಂಡೇಲಿ
ಮುಡಿಹೋಗು ಮರಗಣಿಗೆಲೆ ಹೂವೆ
ನೀನು ತೆಂಬಿಟ್ನಾರ್ತೀಲಿ ಮೆರಿಯೋಗು
ಮೆರಿಹೋಗು ಎನತೇಳಿ
ಶಿವನಾ ಪೂಜೆಗೆ ಸಲುಬ್ಯಾಡ

ನನ್ನ ಹರನಾ ಪೂಜೆಗೆ ನೀನು
ಸಲಬ್ಯಾಡ ಎನ್ನತೇಳಿ
ಅವರು ಮರಗಣೆಗೆಲಿಗೆ ಶಾಪ ಕೊಡುತಾರೆ

ಮರಗಣೆಗೆಲೇಗೆ ಶಾಪಕೊಟ್ಟೂ
ಅಗಲೀಗ ಕಟ್ಟಾ ಕಡೆಗಾಲದಲ್ಲಿ ಗುರುವು
ಬಾಳೆನಾರು ಬಂದು
ಬಸವಣ್ಣ ನೀಲಮ್ಮನ
ಬಲದಲ್ಲಿ ನಿಂತಗಂಡು
ಆಗಲೀಗ ಕೇಳಪ್ಪ ಗುರುದೇವ
ನನ್ನಗೂ ಕೂಡ ಶಿವನಾ ಮೋಕ್ಷ ದೊರಕಿಸಿ ಗುರುವೆ
ಈಗಲೀಗ ನನಗೂ ಕೂಡ
ಶಿವನ ದರ್ಶನ ಆಗಿಲೀ ಸ್ವಾಮಿ ಅಂತೇಳೀ
ಬಾಳೆ ನಾರು ಬಂದು ಬೇಡ್ಕಂಡಾಗ
ಆ ನೀಲಮ್ಮನವರು ಏನೇಳ್ತರೆ ಅಂದರೆ

ಅವರು ಮತ್ತೇನ ತಾಯಿ ನುಡಿದಾಳುs || ಸುವ್ವಾ ಬಾ ||
ಅಯ್ಯಾ ನಾರಿಗೆ ಶಾಪ ಕೊಟ್ಟುಬಿಟ್ಟೂ ನೀಲಮ್ಮ
ಅವರು ಮತ್ತೇನು ತಾಯಿ ನುಡಿದಾಳು || ಸುವ್ವಾ ಬಾ ||

ಪತಿದೇವರೆ ಬಸವಣ್ಣ
ಎಲ್ಲ ಪುಷ್ಮಾದಿಗಳನ್ನೂವೆ
ಈ ಸ್ವಾಮಿಗೆ ಧರಿಸಿದ್ದಾಯಿತು
ಈಗ ಇವರಿಗೆ ಈಬತ್ತಿ ಬಸುವಂಗ ಧರಿಸಬೇಕು ಅಂತೇಳಿ
ಬಸವಣ್ಣ ನೀಲಮ್ಮನವರು
ಈಬತ್ತಿ ಬಸುವಂಗ ಯಾವ ರೀತಿ ಧರಿಸ್ತರೆ ಅಂದರೆ
ಅಯ್ಯ ಗಂಡು ಗುಂಡುಕೆ ತೈಲತಗದು
ಅದನ್ನ ಬೆಂಬೂದಿವೊಳಗೆ ಹದಮಾಡಿ
ಅಮ್ಮ ಬೆಂಬೂದಿಯೊಳಗೆ ಹದಮಾಡಿ
ಈಬುತ್ತಿಯ ಸಂಭ್ರಮದಿಂದ ಧರುಸ್ಯಾರು
ಅವರು ಸಂಭ್ರಮದಿಂದ ಧರಸಿದಾರೋss

ಈಬತ್ತಿ ಬಸುಮಂಗವನ್ನು ಧರಿಸಿs
ಆದಿ ಕಲ್ಯಾಣದ ಬಸವಣ್ಣ ನೀಲಮ್ಮನವರು
ಪತಿದೇವರಿಗೆ ಮತ್ತೇನು ಮಾತಾಡ್ತರೆ ಅಂದರೆ
ಸ್ವಾಮಿ
ಸ್ವಾಮಿ ಈಗ ಈಭತ್ತಿ ಬಸುಮಂಗ ಧರಿಸಿದೋ
ಇವರಿಗೆ ರುದ್ರಾಕ್ಷಿ ಮಾಲೆ ಧರಿಸಬೇಕು ಅಂತೇಳಿ
ಯಾವ ರೀತಿ ರುದ್ರಾಕ್ಷೀ
ಮಾಲೆ ಧರಿಸ್ತರೆ ಅಂದರೆ

ಅಯ್ಯಾ ತಾನತಾನಕ್ಕೆ ಬಚ್ಚಿಟ್ಟತಾನ
ತೋಳಲ್ಲಿ ರುದ್ರಾಕ್ಷಿ
ನೋಡ್ದವಗೆ ಪಾಪ ಪರಿಯಾರ
ನೋಡ್ದವರಿಗೆ ಕರ್ಮ ಪರಿಯಾರ
ಅಯ್ಯಾ ನೋಡ್ದವರಿಗೆ ಕರ್ಮ
ಪರಿಯಾರ ಎನತೇಳಿ ಭೂಷಣದಿಂದ ಧರಿಸಿದಾರೂss

ಭೂಷಣದಿಂದ ಗುರುವೂ
ರುದ್ರಾಕ್ಷಿ ಮಾಲೆನೆ ಧರಿಸಿ
ಈಗ ಸ್ವಾಮಿ ಪೂಜೆಗೆ ಗುರುವು
ದೂಪ ಸಾಂಬ್ರಾಣಿ ತರಬೇಕಂತೇಳಿ
ದೂಪ ಸಾಂಬ್ರಾಣಿ ಯಾವ ರೀತಿ ಕರಿತಾರೆ ಅಂದರೆ

ಅಯ್ಯಾ ಕೆಂಡದ ಮ್ಯಾಲೆ ಮಡಿಗಿದಾರೆ
ಗಗನಕ್ಕೆ ಏರುವುದು
ಗಂಧಕರ ಅಂಗಡೀಲಿ ಇರುತಾದೆ
ಅಯ್ಯಾ ಗಂಧಕರ ಅಂಗಡೀಲಿ
ಇರುವುದೂ ಮಾರುವುದೂ
ಧೂಪ ಸಾಂಬ್ರಾಣಿ ತಂದು
ಬೆಟ್ಟಿ ಮಂಗಳಾರತಿ ಬೆಳಿಗಾಳೂss

ಗಂಧಕರ ಅಂಗಡೀವಳಗಿರುವಾ
ಧೂಪ ಸಾಂಬ್ರಾಣಿನೆ ಕರೆದು
ಜಗತ್ತು ಗುರು ಧರೆಗೆ ದೊಡ್ಡವರಿಗೆ
ಏನಂತ ಎತ್ತಿ ಮಂಗಳಾರತಿ ಬೆಳಗ್ತರೆ ಅಂದರೆ

ಹರಹರ ಎನ್ನುವರ
ನೆರೆಯಲ್ಲಿ ಇರುಸಯ್ಯ
ಅಪ್ಪ ಮಲ್ಲಿಕಾರ್ಜುನನಾ ನೆನೀರಯ್ಯ
|| ಸುವ್ವಾ ಹೇಳಮ್ಮ ದೇವಾರು ದೇವ ಸುವ್ವಿ ||