ನಿನಗೆ ಬಾಳ ಕರ್ಮವು ಕಂದಾ
ಬರುತದೆ ಸಂಗಯ್ಯ
ನಿಮ್ಮ ಬಸವಣ್ಣನಿಗೆ ಕಂದಾ
ಕಷ್ಟ ತಪ್ಪೋದಿಲ್ಲ
ನನ್ನ ತಡೆಯದೇ ಕಂದಾ ನನ್ನ
ಕ್ವಾಟೆಗೆ ಬುಟ್ಟು ಬುಡಪ್ಪ || ಸಿದ್ಧಯ್ಯ ||

ಹೋಗಾ ಜಂಗುಮರು ಹೊಯ್ತಾ ಅವರೇ
ಬರುವಂತಹ ಜಂಗುಮರು ಬರ್ತಾ ಅವರೇ
ಈ ಜಂಗುಮನದೇ ಒಂದು ಹರಟೆ ಮಾತಾಯ್ತಲ್ಲ
ಹೋಗು ಅಂದರೆ ನಿನಗೆ ಧರ್ಮ ಬರ್ತಾದೆ ಪುಣ್ಯ ಬರ್ತಾದೇ
ಕ್ವಾಟೆಗೆ ಬುಡು ಅಂದು ಕೇಳ್ತಾನೆ
ಹೊಗಾಬ್ಯಾಡ ಕಣಯ್ಯ ಅಂದರೆ
ನಿಮ್ಮ ಬಸವಣ್ಣನಿಗೂ ಕರ್ಮ ಬಂದು ಬುಡ್ತದೆ ಎಂದು ಹೇಳ್ತಾ ಇದ್ದಾನಲ್ಲ
ಇವನು ಯಂತಾ ಅಂಕಾರಗೆಟ್ಟ ರೋಗಿ ಆಗಿರುಬಹುದು
ಇಂತಹ ರೋಗಿಷ್ಠನಿಗೆ ಕ್ವಾಟೆಗೆ ಬುಡ್ಲೆ ಬಾರ್ದು ಅಂತ್ಹೇಳಿ
ಕಟುಗರ ಸಂಗೈಯ್ಯನಿಗೆ ಹಟವಾಯ್ತು
ಹಟಾ ಮಾಡುಕಂಡು
ಜಗತ್ತು ಗುರು ಧರೆಗೆ ದೊಡ್ಡವರ
ಮುಖ ಕಣ್ಣಾರೇ ನೋಡಿಕಂಡು
ಏ ಜಂಗುಮ
ಆಡುದಾ ಮಾತಾ ಕೇಳಿಕಂಡು
ಆ ಕಡೆ ಬಾಗುಲಲ್ಲಿ ಕೂತುಕಂಡು
ಅನ್ನ ತರಿಸಿಕೊ ಊಟಾ ಮಾಡ್ಕಂಡು ಹೋಗೊದಾದ್ರೆ ಹೋಗು
ಹೆಚ್ಚು ಕಮ್ಮಿ ಮಾತನಾರೇ
ಇಲ್ಲೆ ಆಡ್ತಾ ನಿಂತುಕಂಡುದ್ದೇ ಆದ್ರೆ
ನಾನು ಇಡಿದಿರುವಂತ ದೊಣ್ಣೇ ಒಳಗೆ
ನಿನ್ನ ಎಕ್ಕತ್ತಿನಾ ಮ್ಯಾಲೆ
ಮೂರು ಏಟು ಹೊಡದುದ್ದೆ ಉಂಟಾದುರೇ

ನೀನು ಭೂಮಿ ಮ್ಯಾಲೆ ಬಿಳಾಬೇಕು
ಭಕ್ಕನೇ ರಕುತಾ ಕಕ್ಕಬೇಕು || ಸಿದ್ಧಯ್ಯ ||

ಅಯ್ಯಾ ಭೂಮಿಗೆ ಬಿಳಾಬೇಕು
ನೀ ರಕುತ ಕಕ್ಕಲೇಬೇಕು
ನೀ ಪ್ರಾಣ ಬುಡಲೇ ಬೇಕು
ಅಯ್ಯ ಅನ್ನ ಬೇಕಾದುರೇ
ನೀ ಅಲ್ಲಿಗೋಗಿ ಕೂತುಕೋ
ಬ್ಯಾಡದೆ ಹೋದಾರೆ
ನಮ್ಮ ಕಲ್ಯಾಣದಿಂದ ಹೊರಟೋಗು
ನೀನು ಹೆಚ್ಚು ಕಮ್ಮಿ ಮಾತಾಡಬ್ಯಾಡ
ಪೆಟ್ಟಾನಾದರೇ ತಿನ್ನ ಬ್ಯಾಡ || ಸಿದ್ಧಯ್ಯ ||

ಸಂಗೈಯ್ಯನವರ ಮಾತು ಕೇಳಿs
ಏನಪ್ಪ ನನ ಕಂದಾ ಕಟುಗರ ಸಂಗಯ್ಯ
ಬಸವಣ್ಣವರ ಮನೆಗೆ
ಅನ್ನಕ್ಕಾಗಿ ಬರೋವತ್ತಿಗೆ
ಕ್ವಾಟೆ ಬಾಗಲ ಕಾದಿರ್ತುಕಂತಹ ನೀನು
ನನ್ನ ಎಕ್ಕತ್ತಿನ ಮ್ಯಾಲೆ ಹೊಡೆದು ರಕುತ ಕಕ್ಕಾಬೇಕು
ಪ್ರಾಣ ಕಟುಗರ ಸಂಗಯ್ಯ
ಹೋಗುವಂತ ಶರಣ್ರು ಜೊತೆ ಒಳಗೆ
ಒಳಗಡೆ ನನ ಕಳುವು
ಕಳುವುದಿಲ್ಲ ಅಂತ ಹೇಳುದ್ದೆ ಉಂಟಾದುರೇ

02_79_Mante-KUH

ಬಸವಣ್ಣ ಹೆಚ್ಚಲ್ಲಾ
ನೀನು ನನಗೆ ಹೆಚ್ಚಲ್ಲಾ || ಸಿದ್ಧಯ್ಯ ||

ನಿನ್ನ ಬಸವಣ್ಣ ಎಂದರೇ
ನನಗೆ ಬಾಳ ಹೆಚ್ಚಲ್ಲ
ನೀನು ಎಂದರೇ
ನನಗೆ ಬಾಳ ಹೆಚ್ಚಲ್ಲ
ನೀನು ದಾರಿಬುಡು ನನ ಕಂದಾ
ಹೋಗುತೀನಿ ಎಂದಾರಲ್ಲಾ || ಸಿದ್ಧಯ್ಯ ||

ನೋಡಪ್ಪ ಬಸವಣ್ಣ ಹೆಚ್ಚಲ್ಲಾ
ನೀನು ನನಗೆ ಹೆಚ್ಚಲ್ಲ
ಒಳಗಡೆ ಬುಡು ಹೊಯ್ತಿನಿ ಎನ್ನುವಂತಹ ಮಾತು
ಈ ಕಟುಗರ ಸಂಗೈಯ್ಯನಿಗೆ ಗೊತ್ತಾಗಿಬುಡ್ತು
ನೋಡಿದೆಯಾ
ಅರುವತ್ತಾರು ಮಂದಿ ಜಂಗುಮರು
ಮೂವತ್ತುಮೂರು ಮಂದಿ ಮುನಿಗಳು
ಲಕುಶದಾ ಮ್ಯಾಲೆ ತೊಂಬತ್ತೇಳು ಕೋಟಿ ಶರಣು ಮಾತುಮರು
ಬಸವಣ್ಣ ಹೆಚ್ಚಿನ ದೇವರು ಅಂತಹೇಳಿ
ಅಷ್ಟು ಕೋಟಿ ಜಂಗುಮರೆಲ್ಲಾ ಕೈ ಮುಗಿತವರೇ
ಈ ಕುಷ್ಠರೋಗಿ ಜಂಗುಮ ಬಂದು
ಬಸವಣ್ಣ ಹೆಚ್ಚಲ್ಲ
ನಿನಾದ್ರೆ ಹೆಚ್ಚಲ್ಲಾ
ನನ್ನರಮನೆಗೆ ದಾರಿ ಬುಡು ಅಂತ ಕೇಳಿ ಬುಟ್ನಾಲ್ಲ
ಇವನ ಅಹಂಕಾರ ಎಷ್ಟಾಗಿಬುಡ್ತು
ದ್ವಾರಣೆ ಎಷ್ಟಾಗಿಬುಡ್ತು ನೋಡಿದೆಯಾ ಅಂತ ಹೇಳಿ
ಕಟುಗರ ಸಂಗಯ್ಯ

ಅಯ್ಯಾ ಹಿಡಿದಿದ್ದ ದೊಣ್ಣೆ ಅವನು
ಭೂಮಿಗಾದರು ಮಡಗುತಾನೇ || ಸಿದ್ಧಯ್ಯ ||

ಹಿಡುದಿರುವಂತ ದೊಣ್ಣೆ ಭೂಮಿಗೆ ಮಡಗಿ
ಧರೆಗೆ ದೊಡ್ಡವರಾ
ಮುಂಗೈಯ ತೆಗೆದು ಎಡಗೈಲಿ ಇಡಕಂಡು
ಏನೋ ಜಂಗುಮ

ಏನಂತ ಹೇಳಿದೇ
ಬಸವಣ್ಣಾದುರೇ ಹೆಚ್ಚಲ್ಲ ನಿನಾದ್ರೆ ಹೆಚ್ಚಲ್ಲ
ಕ್ವಾಟೆಗೆ ಬುಡು ಅಂತಾ ಕೇಳಿದಿಯಾ
ನಿನ್ನ ಅಂಕಾರ ಎಷ್ಟಾಗಿ ಬುಡ್ತು ದ್ವಾರಣೆ ಎಷ್ಟಾಗಿ ಬುಡ್ತು ಅಂತ ಹೇಳಿ
ಹಲ್ಲು ಕಡಕಂಡು ಕಟುಗರ ಸಂಗಯ್ಯ
ಬಾಗಲಿಗೆ ಜಗಂಜ್ಯೋತಿ ಪರಂಜ್ಯೋತಿಯವರ
ಮುಖ ನೋಡುವಾಗ
ಆ ಬಸವಣ್ಣವರು ನೀಲಮ್ಮನವರು ನೋಡಪ್ಪ
ಕಲ್ಯಾಣದ ಕೊಳದಲ್ಲಿ ಸ್ನಾನ ಮಾಡುತಾವರೇ
ಕಲ್ಯಾಣ ಪಟ್ಟಣದಾs
ಕಲ್ಯಾಣಿ ಕೊಳಕೆ ಬಂದು ಆಗಲೀಗಾ ಆದಿ ಬಸವಣ್ಣನವರು
ಸ್ನಾನ ಮಡಿ ಮಾಡಿಕಂಡು
ಹೊಟ್ಟೆ ಒಳಗೆ ಲಿಂಗ ಕಳೆದು
ಅಂಗೈನಾ ಮೇಲೆ ಲಿಂಗಾ ಪೂಜಿಸ್ಕಂಡು
ಲಿಂಗಕ್ಕೆ ನೈವಾದನೆ ಮಾಡುವಾಗ
ಅವರು ಶಿವಾ ಶಿವಾ ಅಂತ ಏಳಿ
ಕೈ ಎತ್ತಿ ಮುಗಿಯುವ ವೇಳೆಗೆ

ಈ ಕಟುಗರ ಸಂಗಯ್ಯ
ಧರೆಗೆ ದೊಡ್ಡವರ
ಎಕ್ಕತ್ತಿನಾ ಮೇಲೆ ಗುರುವೇ
ಮೂರು ಗುದ್ದ ಗುದ್ದಿದನಂತೆ || ಸಿದ್ಧಯ್ಯ ||

ಅಯ್ಯಾ ಬಸವಣ್ಣ ಗುರುವು
ನೀಲಮ್ಮನವರು
ಕೈ ಎತ್ತಿ ದೇವಾ
ಮುಗಿಯುವಂತ ಕಾಲದಲ್ಲಿ
ಕಟುಗರ ಸಂಗಯ್ಯ
ಮಂಟೇದಾ ಲಿಂಗಯ್ಯನಿಗೆ
ಮೂರೇಟ ಹೊಡೆದಾಗ
ಅಯ್ಯಾ ಬಸುವಣ್ಣನ ಗುರುವೇ
ಎಕ್ಕತ್ತಿನ ಮೇಲೆ
ಎರಡು ಗುದ್ದು ಬೀಳುತು
ಅವರ ಮಡದಿ ನೀಲಮ್ಮನಿಗೆ
ಒಂದು ಗುದ್ದು ಬಿದ್ದೋಯ್ತು
ಇಲ್ಲಿ ನಾಲ್ಗೆ ಇಲ್ಲದ ಗಂಟೇ
ನಾದು ಶಬುತಾ || ಸುವ್ವಾ ಬಾ ||
ಗುರುವೇ ನಾದ ಇಲ್ಲುದ ಗಂಟೇ
ಧಣಿ ದಣಿನೇ ದೇವಾ
ಲಾದು ಸಬುತಾವಾಯ್ತಾದೇ
ಅಲ್ಲಿ ಕುಡುವಿಲ್ಲಾದ ನಾಗರೀ
ನುಡಿದಾವೋ || ಸುವ್ವಾ ಬಾ ||

ಇಲ್ಲಿ ಧರೆಗೆ ದೊಡ್ಡವರಿಗೆ ಹೊಡೆದಂತ ಏಟು
ಕಟುಗರ ಸಂಗಯ್ಯ
ಧರೆಗೆ ದೊಡ್ಡವರಿಗೆ ಬೀಳ್ಳಿಲ್ಲಾ
ಸ್ನಾನ ಮಡಿ ಮಾಡ್ತಿದ್ದರಲ್ಲಾ ಬಸವಣ್ಣ
ಬಸುವಣ್ಣನವಿಗೆ ಎರಡು ಗುದ್ದು
ನೀಲಮ್ಮನಿಗೆ ಒಂದು ಗುದ್ದು ಬಿದ್ದಂತಹ ಕಾಲದಲ್ಲಿ
ದೂಪದುಂಡಿಗೆ ಹಿಡಕಂಡು ಬಸವಣ್ಣ
ಶಿವಶಿವಾ ಅಂತ ಕೈ ಮುಗಿತಿದ್ದವರು
ಧೂಪದುಂಡಿಗೆ ಭೂಮಿಗೆ ಬಿಟ್ಟುಬಿಟ್ಟು
ರಪ್ಪನೆ ಬಿದ್ರು, ಯಾತಕ್ಕೆ? ಭೂಮಿಗೆ
ನಿಲಮ್ಮನವರಾ
ಬೆನ್ನಿನಾ ಮೇಲೆ ಒಂದು ಗುದ್ದು ಗುದ್ದಿದೇಟಿಗೆ
ಅಶ್ ಅಂತ ಭೂಮಿಗೆ ಕೂತಕಂಡ್ರು
ಅವರು ಗಂಡ ಹೆಂಡ್ತಿರು ಮಾತಾಡ್ತಾವರೇ
ಯಾಕೆ ಸ್ವಾಮಿ ?
ನಾನೇನು ತಪ್ಪು ಮಾಡ್ದೇ
ನನಗ್ಯಾತಕೆ ಗುದ್ದಿಬುಟ್ರಿ ಅಂತ ನೀಲಮ್ಮ ಕೇಳ್ತಾರೆ
ನೀಲಮ್ಮ, ನಾ ಕಣ್ಣು ಮುಚ್ಚಿಕಂಡು
ಶಿವನಾ ಜ್ಞಾನ ಮಾಡುವಾಗ
ನನಗೆ ಎರಡೇಟು ನೀನು ಗುದ್ದಿಬುಟ್ಟು
ನನಗುದ್ದಿದಿಯಾ ಅಂತ ಹೇಳಿ

ಇವರು ಸತಿಪತಿಗಳು
ಇವರೇ ಮಾತಾಡುತಾರೆ || ಸಿದ್ಧಯ್ಯ ||

ಇವರು ಸತಿ ಪತಿಗಳು ದೇವಾ ಇಬ್ಬರೂ ಮಾತಾಡಿಕಂಡು
ಸ್ವಾಮಿ
ನಾನು ಮುಕ್ಕಣ್ಣ ಮಲ್ಲಯ್ಯ
ಪರಮೇಶ್ವರನಾಣೆಗೂ ಕೂಡಾ
ನಾನು ಮಾತ್ರ ನಿಮ್ಗೇ ಹೊಡಿನಿಲ್ಲಪ್ಪ
ಏ ನೀಲಮ್ಮ
ನಾನೂ ಕೂಡಾ
ಲಿಂಗದಾ ಸಾಕ್ಷಿಯಾಗಿ ಒಂದೇಟು ನಿನಗೆ ಹೊಡೆದಿಲ್ಲ
ಎನುತೇಳಿ
ಬಸುವಣ್ಣ ನೀಲಮ್ಮ ಇಬ್ಬುರೂ ಮಾತಾಡುತವರೇ
ಕಲ್ಯಾಣದ ಕಡೆ ಬಾಗಲಲಿ ಇತ್ತಲ್ಲ ಗಂಟೇ
ನಾಲಿಗಿಲ್ಲದ ಗಂಟೇ
ಧಣ ಧಣನೇ ಅಲ್ಲೆ ಸಬುದವಾಯ್ತು
ಕುಡುವಿಲ್ಲದ ನಾಗಾರಿ
ಧಿಮುಧಿಮನೆ ನುಡಿದೋಯ್ತು
ಕಲ್ಯಾಣದಲ್ಲಿ ಕತ್ತಿ ಉರಿತಿದ್ದಾ

ಹಗಲು ದೀವಿಗೆಗಳೆಲ್ಲಾ
ಪಟ್ಟನೇ ಕೆಟ್ಟೆಹೋಯ್ತು || ಸಿದ್ಧಯ್ಯ ||

ಅಯ್ಯಾ ಗುರುವೇ ಗುರುದೇವಾ
ಹಗಲುದೀವಿಗೆಗಳೆಲ್ಲಾ ಪಕ್ಕನೇ ಗುರುವೇ
ಕೆಟ್ಟೋಯ್ತೊ ನನ ಗುರುವು
ಕಲ್ಯಾಣ ಪಟ್ಟಣವೆಲ್ಲಾ
ಕಣ್ಣೀಗೆ ಕಾಣೋದಿಲ್ಲ || ಸಿದ್ಧಯ್ಯ ||

ಕಲ್ಯಾಣ ಪಟ್ಟಣಾs
ಬಸವಣ್ಣ ನೀಲಮ್ಮನ ಕಣ್ಣಿಗೆ ಗೋಚರವಾಗಲಿಲ್ಲ
ಈ ಕಲ್ಯಾಣದ ಕಡೆ ಬಾಗಲ ಗಂಟೇ ಮಾತ್ರ
ಧಣು ಧಣುನೇ ಸಬುದಾವಾಯ್ತಾ ಅದೆ
ಕುಡುವಿಲ್ಲಾದ ನಾಗರಿ ಸಬುತಾವಾಯ್ತಾ ಅದೆ
ಆಗಾ ಬಸುವಣ್ಣ ನೀಲಮ್ಮನವರು ಯೋಚುಣೆ ಮಾಡುತವುರೆ
ನೀಲಮ್ಮ ಕಡೆ ಕೈಲಾಸ ಬಾಗುಲಲಿ ಕಟ್ಟಿದ್ದುವಲ್ಲ
ನಾಲ್ಗಿಲ್ಲದ ಗಂಟೇ ಸಬುತವಾಯ್ತದೇ ನೋಡು
ಕುಡುವಿಲ್ಲದ ನಗಾರಿ
ಧಿಮುಧಿಮುನೆ ಸಬುತಾ ಕೇಳಿಬರ್ತಾ ಅದೆ ಮಡದಿ
ಕಲ್ಯಾಣ ಪಟ್ಟಣಕೆ ನಾವೇ
ಹೆಚ್ಚಿನ ಶರಣ ಮಾತುಮರು ಅಂತ ಬಾಳಬಾರುದು
ನಮಗಿಂತ ಹೆಚ್ಚಿನ ಮುನಿಗಳು
ನಮ್ಮ ಆದಿ ಕಲ್ಯಾಣಕೆ ಬಂದಿರಬಹುದು
ಮೊದಲು ನಡಿ ಮಡದಿ ನಡಿ ಮಡದಿ ಅಂತೇಳಿ
ನೋಡಪ್ಪ ಅತ್ಲಿಂದಾ ಬಸುವಣ್ಣನವರು ನೀಲಮ್ಮನವರು
ಓಡೋಡಿ ಬರುತವರೇ
ಯಕ್ಕತ್ತಿನಾ ಮ್ಯಾಲೆ ಗುದ್ದಿಸಿಕಂಡು ಧರೆಗೆ ದೊಡ್ಡವರು
ಕಲ್ಯಾಣ ಬಿಟ್ಟು
ಬಸುವಣ್ಣವರು ದೇವಾ ಬರುವ ದಾರಿ ಒಳಗೆ

ಇತ್ತಿಂದಾ ಪರಂಜ್ಯೋತಿ
ಮೆತ್ತ ಮೆತ್ತಗೆ ಬರುತಾರೆ || ಸಿದ್ಧಯ್ಯ ||

ಗುರುವೇ ಬರುವಂತ ದೇವಾ
ಧರೆಗೆ ದೊಡ್ಡವರಾ
ಬಸವಣ್ಣ ಗುರುವು
ಗುರ್ತುಸಲೇ ಇಲ್ಲ
ನೆಪ್ಪು ಕಾಣನಿಲ್ಲ ತಿಳೀಲಿಲ್ಲ
ಬರುವಂತ ನಿಲಮ್ಮನಾ
ಭಕುತಿಯನ್ನೆ ದೇವಾ
ನೋಡುಬೇಕು ಎಂತಾ
ಬಸುವಣ್ಣವರ ದುಡುವಾ
ನೋಡುಬೇಕು ಎಂತಾ
ನನ್ನ ಧರೆಗೆ ದೊಡ್ಡವರು
ಅವರು ಇಬ್ಬರಾ ಮಧ್ಯದ ಒಳಗೆ
ಇತ್ತಿಂದಾ ಬಂದಾರಲ್ಲಾ || ಸಿದ್ಧಯ್ಯ ||

ನೋಡಪ್ಪ
ಧರೆಗೆ ದೊಡ್ಡವರ ಮಹಿಮೆ ಮೈತುಗಾರ
ಆ ಬಸುವಣ್ಣ ನೀಲಮ್ಮಗೂ ಕೂಡ ತಿಳಿದಿಲ್ಲ
ಈಗಲೀಗಾ ಗುರುವು
ಇತ್ತಿಂದಾ ಬಸುವಣ್ಣ ಅತ್ತಿಂದಾ ಧರೆಗೆ ದೊಡ್ಡವರು ಬರುವಾಗ
ನೋಡಿ, ಕಟುಗರ ಸಂಗಯ್ಯನ
ಹೋಗಿ ನಾವು ಮೊದಲು ತಿಳಿಬೇಕು
ಕಲ್ಯಾಣದ ಕ್ವಾಟೆ ಬಾಗಲಲಿ
ಎನಾಗಿದಾದೋ ಗೊತ್ತಿಲ್ಲಾ ಅಂತ ಹೇಳಿ
ಬಸುವಣ್ಣ ಬಲಚೆರಿ
ನೀಲಮ್ಮ ಧರೆಗೆ ದೊಡ್ಡೋರ ಎಡಚೆರಿ ಕಡದೋದ್ರು
ಈ ಪರಂಜ್ಯೋತಿಯವುರು ಬಂದವರೆ ಎನ್ನುವುದು
ಎಳ್ಳೋಷ್ಟು ತಿಳೀಲಿಲ್ಲಾ
ಬಸುವಣ್ಣ ನೀಲಮ್ಮನವರು
ಕಲ್ಯಾಣದಲಿ ಏನೋ ನಡೆದು ಹೋಗಿರಬಹುದು
ವಾರ್ತೆ ಎಂದುಬುಟ್ಟು ಓದ್ತಾವರೇ
ಹೋಗಲಿ ಹೋಗಲಿ ಎನುತೇಳಿ
ಪರಂಜ್ಯೋತಿ ಪಾತಾಳ ಜ್ಯೋತಿಯವರು
ಹೋಗುವಂಥ ಬಸುವಣ್ಣ ನೀಲಮ್ಮನ ನೋಡುತ್ತಾ
ಧರೆಗೆ ದೊಡ್ಡವರು ಒಂದೊಂದೆಜ್ಜೆ ಒಂದೊಂದೆಜ್ಜೆ
ಇಟ್ಟುಕಂಡು ಬರುತಾವರೆ
ಕಟ್ಟುಗರ ಸಂಗೈನ ಬಳಿಗೆ ಬಂದು ಬಸವಣ್ಣ
ಏನಪ್ಪ ನನ್ನ ಕಂದಾ ಕಟ್ಟುಗರ ಸಂಗೈಯ್ಯ
ಈ ಕಲ್ಯಾಣ ದ್ವಾರಬಾಗುಲಲಿ ಎನೇನಾರೂ ಕೆಲಸ ಕಾರ್ಯಗಳು ಆದುವಪ್ಪ
ಸ್ವಾಮಿ
ಕಲ್ಯಾಣ ಕಡೆ ಬಾಗಲಲ್ಲಿ ಏನೂ ಕೆಲಸ ಕಾರ್ಯ ಆಗಿಲ್ಲ
ನಿಮ್ಮ ಮಾತಿನ ಪರಿಕಾರವಾಗಿ
ಬರುವಂತಹ ಜಂಗುಮರಲ್ಲಿ
ಒಳ್ಳೆವರ ಕೆಟ್ಟವರಯಾರು ಎಂದು ಕಾದೇ ಇದ್ದೆ
ಒಳ್ಳೊಳ್ಳೆ ಜಂಗುಮರೇ ಇವತ್ತು ಬಂದಿರುವರು
ಎಲ್ಲಾರ್ನು ತಡೀದಂತೆ ಕ್ವಾಟೀಗೆ ಬುಟುಬುಟ್ಟೆ
ಒಬ್ಬನೇ ಒಬ್ಬ ಕುಷ್ಠರೋಗಿ ಬಂದುಬುಟ್ಟಿದ್ದ ಸ್ವಾಮಿ

ಕಜ್ಜೀ ಕೀವುವುಳ್ಳ ಕುಷ್ಟು ರೋಗಾ
ಕೈಯು ಚೊತ್ತಾ ಕಾಲು ಚೊತ್ತಾ
ಎಳುವಾದಿ ಜಂಗುಮ ಬಂದಿದಕ್ಕೆ
ಅಷ್ಟು ಕೋಟಿ ಜಂಗುಮರು ಊಟ ಮಾಡುತಾ ಅವುರೇ
ಕಲ್ಯಾಣಕೆ ನಾ ಬುಡೋದಿಲ್ಲಾ
ಈ ಕಡೆ ಬಾಗಲಲಿ ಅನ್ನ ತರಿಸಿ ಊಟಕೆ ಇಕ್ಕುತೀನಿ
ಇಲ್ಲೆ ಕೂತುಕೊ ಅಂತ ತಡೆದಿ
ನಾನಿಲ್ಲ ಕಣಪ್ಪ ಉಣ್ಣವರಂತೆ ಉಣ್ಣುಬೇಕು
ವೀಳ್ಯ ಇಸುಕೊಳ್ಳವರಂತೆ ಇಸ್ಕೋ ಬೇಕು
ಜಂಗುಮರೊಂದಿಗೆ ಹೋಗಿ ಜಂಗುಮರೊಂದಿಗೆ ಬರುಬೇಕು ಅಂತ ಕೇಳ್ದ
ಏ ಜಂಗುಮ
ನಿನ್ನನೇ ಜಂಗುಮರ ಜೊತೇಲಿ ಬುಟ್ಟುಬುಟ್ರೆ
ಅನ್ನ ಉಣ್ಣವರು ಅನ್ನ ಊಟ ಮಾಡದಿಲ್ಲ ಕಣೋ
ಇವನು ಕುಷ್ಠರೋಗಿ ಎಂದುಬುಟ್ಟು
ಅನ್ನ ಉಣ್ಣವರು ಬುಟುಬುಟ್ಟು ಹೋದ್ರೆ
ಎಲ್ಲಾರನ್ನ ನೀನು ಉಣ್ಣಾಕಾದಾದಾ
ಅದಾಗದಿಲ್ಲಾ ಕ್ವಾಟಗೆ ಮಾತ್ರ ಬುಡಾದಿಲ್ಲ
ಇಲ್ಲೇ ಕೂತ್ಕೊ ಅನ್ನ ಕೊಡುಸ್ತೀನಿ
ಉಣ್ಣು ಬೇಕು ಅಂದ್ರೆ ಇರು
ಬ್ಯಾಡ ಅಂದ್ರೆ ಹೊರಟಹೋಗು ಅಂತೇಳಿ
ನಾನಾಡಿದ ಮಾತ ಕೇಳಿ ಬುಟ್ಟು
ಹೇ ಇವೆಲ್ಲನೂವೆ ನಿನಗೆ ಆಗಣೇ ಇತ್ತು ಹೇಳಿದವರು ಯಾರಯ್ಯ
ಎಲ್ಲ ಜಂಗುಮರಂತೆ ನನ್ನ ಬುಟ್ಟುಬುಡು ಅಂತ ಹೇಳಿ
ಆಂಕಾರದ ಮಾತಾಡದ
ಆಡದ ಮಾತ ಕೇಳಿಬುಟ್ಟು ಗುರುವೇ
ಬಾಳಾ ಸಿಟ್ಟು ಬಾಳ ಕ್ವಾಪ ಬಂದೋಗಿ ಬುಡ್ತು

ಅಯ್ಯ ಬಂದಂತಹ ಕ್ವಾಪುಕೆ
ಮುಂಗೈಯ್ಯ ನಾನು
ಇಡಕಂಡು ನನ ಗುರುವು
ಅವನ ಯಕ್ಕತ್ತಿನ ಮೇಲೆ
ಮೂರು ಗುದ್ದು ಗುದ್ದಾ
ಗುದ್ದಿಬುಟ್ಟು ನನ್ನಪ್ಪಾ
ಅವನ ಮೂಡ್ಲಾಗಿ ತಳ್ಳಿ ಬುಟ್ಟೆ
ಅಲ್ಲಿ ಹೋಯ್ತಾ ಅವನೆ ಅಂದನಂತೆ || ಸಿದ್ಧಯ್ಯ ||

ಸ್ವಾಮಿ ಕ್ವಾಪ ತಡಕೊಳಕಾಗಲಿಲ್ಲಾ
ಅದಕಾಗಿ ಅವನ ಎಡಗೈ ಹಿಡಕಂಡು
ಗರಗರನೆ ಮೂರು ಸುತ್ತು ತಿರುಗಿಬುಟ್ಟು
ಅವನ ಎಕ್ಕತ್ತಿನಾ ಮೇಲೆ ಮೂರೇ ಮೂರು ಗುದ್ದು ಗುದ್ದಿದೇ ನೋಡಿ
ಗುದ್ದಿಬುಟ್ಟು ಮೂಡ್ಲಾಗಿ ತಳ್ಳಿ ಬಟ್ಟೆ
ನೋಡಿಸ್ವಾಮಿ ನಾ ತಳ್ಳಿದೇಟಿಗೆ
ಇಂತ ಪೆಟ್ಟು ತಿಂದದ್ದು ಬ್ಯಾಡಾ
ಈ ಕಲ್ಯಾಣದ ಅನ್ನವೇ ನನಗೆ ಬ್ಯಾಡ ಅಂದುಬುಟ್ಟು
ಅಲ್ಲಿ ಹೊಯ್ತಾವನೆ ನೋಡಿ ಸ್ವಾಮಿ ಅಂದುರು
ಏನಪ್ಪ ಕಟುಗರ ಸಂಗಯ್ಯಾ
ಎಲ್ಲಿ ಹೊಯ್ತಾ ಇದಾರಪ್ಪ
ಯಾತಾವು ಹೊಯ್ತಿದಾರಪ್ಪ
ಎಲ್ಲಿ ಕಳುಹಿ ಬುಟ್ಟಿಯೋ ಕಂದಾ ಅಂತೇಳಿ
ದಿಕ್ಕು ದಿಕ್ಕನೇ ನೋಡುತವರೇ
ಯಾರು? ಬಸುವಣ್ಣ ನೀಲಮ್ಮ
ಬಸುವಣ್ಣ ನೀಲಮ್ಮನ ಕಣ್ಣಿಗೆ
ಧರೆಗೆ ದೊಡ್ಡವರು ಗೋಚರವಿರಲಿಲ್ಲ
ಕಡುಗರ ಸಂಗೈನಾ ಕಣ್ಣಿಗೆ ಮಾತ್ರ ಗೋಚರವಾಯ್ತಿತ್ತು
ಸ್ವಾಮಿ
ನಿಮಗೇನು ಕಾಣ್ಸದಿಲ್ವಾ

ಅಲ್ಲೆ ಹೊಯ್ತಾವನೇ
ಇಲ್ಲಿ ಬನ್ನಿ ಅಂತಾನಲ್ಲ || ಸಿದ್ಧಯ್ಯ ||