ಯಾವಾಗ ಬಸವಣ್ಣನವರು
ಕಟುಗರ ಸಂಗಯ್ಯನಿಗೆ
ಒಳ್ಳೊಳ್ಳೆ ಜಂಗುಮುರ ಒಳಕ್ಕೆ ಬುಟ್ಟು
ಈ ಕಷ್ಟ ಕಾಯಿಲೆ ಉಳ್ಳದವರ್ನ
ಎರಡನೆ ಊಟಕೆ ಬುಡು
ಮೊದಲೆ ಕಷ್ಟ ಕಾಯಿಲೆಯವರ ಮಾತ್ರ
ಬುಡುಬ್ಯಾಡ ಅಂತ ಯಾವಾಗ
ಕಟುಗರ ಸಂಗಯ್ಯನಿಗೆ ಬಸವಣ್ಣನವರು ಹೇಳಿದ್ರೊ
ಉತ್ತುರ ಕಂಡದಲಿ ನಿಂತಿದ್ರು, ಯಾರು ? ಧರೆಗೆ ದೊಡ್ಡವರು

ಇವರು ಇಲ್ಲಿ ಆಡಿದ ಮಾತು ಅವರಿಗೆ
ಅಲ್ಲಿಗೆ ಅರುವಾಗುತಾದೆ || ಸಿದ್ಧಯ್ಯ ||

ಇವರು ಇಲ್ಲಿ ಆಡುದಂತಹ ಮಾತು ಗುರುವು
ಧರೆಗೆ ದೊಡ್ಡವರು ಮಂಟ್ಕಾದ ಲಿಂಗಪ್ಪ
ಜಗಂಜ್ಯೋತಿಯವರ ಪಾದಕೆ ಆರುವಾಯ್ತು
ನೋಡಿದ್ಯಾ
ಕಲ್ಯಾಣದಲ್ಲಿ ಅಗತಕಂತಹ ಕಳ್ಳತನ ಸುಳ್ಳುತಾನ
ಬಸವಣ್ಣನಲ್ಲಿ ಬರ್ತಕಂತಹ ವಾಕುತಾನ
ನನ್ನ ಉತ್ತರ ದೇಶಕ್ಕೆ ಗೊತ್ತಾಗಿ ಬುಡುತಲ್ಲ
ನನ್ನ ಕಣ್ಣಿಗೆ ಕಾಣುವಾಗೆ ಹೀಗಾದುಮ್ಯಾಲೆ
ಈ ಕಲ್ಯಾಣದಲಿ ಇನೇನಾಗಿದ್ದದೊ ಗೊತ್ತಿಲ್ಲಾ

ಈ ಕಲ್ಯಾಣದ ಸತ್ಯದುಡುವ
ನೋಡಬೇಕು ಎಂದರಂತೆ || ಸಿದ್ಧಯ್ಯ ||

ಅಯ್ಯ ಕಲ್ಯಾಣದ ಸತ್ಯ
ಕಲ್ಯಾಣದ ದುಡುವಾ
ನಾನೆ ನೋಡಬೇಕು
ಹಾಗಂದು ಗುರುವು
ಈಗ ಆದಿ ಕಲ್ಯಾಣಕ್ಕೆ ನನ್ನ
ದೇವರು ದಯಮಾಡುತಾರೆ || ಸಿದ್ಧಯ್ಯ ||

ಗುರುವೇ ಆದಿಕಲ್ಯಾಣಕೆ
ನನ್ನ ಪರಂಜ್ಯೋತಿಯವರು
ಪಾತಾಳ ಜ್ಯೋತಿಯವರು
ಧರೆಯ ತಂದವರು
ಧರೆಗೆ ದೊಡ್ಡವರು
ಅವರು ಓಡಿ ಓಡಿ ಬಂದರಲ್ಲಾ
ಹೆತ್ತಯ್ಯಾ ಮಂಟೇದು ಸ್ವಾಮಿ || ಸಿದ್ಧಯ್ಯ ||

ಆದಿ ಕಲ್ಯಾಣಕೆ ಸ್ವಾಮಿs
ಆಗಲೀಗಾ ಕಜ್ಜಿಕೀವು
ಕುಷ್ಠರೋಗಿ ಯಾಸವ ತಾಳಿ
ಕೈ ಚೊತ್ತ ಕಾಲು ಚೊತ್ತ ಮಾಡಿ
ಬಂದುರು ಜಗತ್ತು ಗುರು ಧರೆಗೆ ದೊಡ್ಡಯ್ಯ
ಈ ಟೈಮಿನಲ್ಲಿ
ಬಸವಣ್ಣನವರ ಮಾತಿನ ಪರಕಾರವಾಗಿ
ಎಲ್ಲಾ ಶಿವಶರಣ ಮಾತುಮರು
ಆದಿ ಕಲ್ಯಾಣದ ಗುರುಮಠಕೆ ಬರುತಿದ್ದರು
ಬರುವಂತ ಕಾಲದಲ್ಲಿ ಗುರುವು
ಒಳ್ಳೊಳ್ಳೆ ಜಗುಮರೆಲ್ಲರ್ನುವೇ
ಕಟುಗರ ಸಂಗಯ್ಯನೋರು ಒಳಗಡೆ ಬಿಡುತಿದ್ದುರು
ಕೆಟ್ಟ ಜಂಗುಮರೆಲ್ಲಾರ್ನುವೆ ಕಣ್ಣಾರೇನೆ ಕಾದಿದ್ರು
ನೋಡಿದ್ಯಾ, ಬಸವಣ್ಣನವರ ಮಾತಿನ ಪರಕಾರವಾಗಿ
ಕಟುಗರ ಸಂಗಯ್ಯ
ಒಳ್ಳೆ ಜನರ ಮ್ಯಾಲೆ ಒಂದು ಕಣ್ಣು ಮಡ್ಗವನೆ
ಈಗಲೀಗ ನನ್ನಂತಹ ಕಷ್ಟ ಕಾಯಿಲೆಯವರ
ಮ್ಯಾಲೆ ಒಂದು ಕಣ್ಣು ಮಡಗಿ
ಕಾದು ಕುಳುತುಗಂಡು
ಈ ಬಂದಂತಹ ಒಳ್ಳೊಳ್ಳೆ ಶುಚಿಯಾಗಿರ್ತಕ್ಕಂತಹ
ಆಗಲೀಗ ಜಂಗುಮರ್ನೆ
ಕಲ್ಯಾಣದ ಗುರುಮಠಕೆ ಬುಡುತವನಲ್ಲಾ ಏನುತೇಳಿಬುಟ್ಟು
ಆ ಜಗತ್ತು ಗುರು ಧರೆಗೆ ದೊಡ್ಡಯ್ಯ

ಹಿಂದೆ ಏಳು ಜನ
ಶರಣರ ಬಿಟ್ಟುಗಂಡು
ಮುಂದೆ ಏಳುಜನ
ಶರಣರ ಬಿಟ್ಟುಗಂಡು
ಗುರುವೆ ಬಲದಲ್ಲಿ ಮೂರು ಜನ
ಶರಣರ ಬಿಟುಗಂಡು
ಎಡದಲಿ ಮೂರು ಜನ
ಶರಣರ ಬಿಟುಗಂಡು
ಅವರು ಮಧ್ಯಾದೊಳಗೆ ದೇವಾ
ಕಾಣದವರಂಗೆ ನುಗ್ಗುತಾರೆ || ಸಿದ್ಧಯ್ಯ ||

ಹಿಂದೆ ಜಗುಮರು ಮುಂದೆ ಜಂಗುಮರು
ಎಡದಲ್ಲಿ ಬಲದಲ್ಲಿ ಜಂಗುಮರ ಬಿಟ್ಟುಕಂಡು
ಈ ಕಟುಗರ ಸಂಗೈನ್ಗೆ ಗೊತ್ತಿಲ್ಲದ ರೀತಿ
ಹೊರಟು ಹೋಗಬೇಕು ಅಂತ ಹೇಳಿ
ನೊಡಪ್ಪ ಧರೆಗೆ ದೊಡ್ಡವರು ಬರುತವರೆ

ಕಟುಗರ ಸಂಗಯ್ಯನವರು
ಅಯ್ಯ ಏಳುಜನ ಶರಣಾರಾ
ಒಳಗಡೆ ಬಿಟ್ಟವರೇ
ಮೂರು ಜನ ಶರಣಾರಾ
ಒಳಗಡೆ ಬುಟ್ಟವರೇ
ಧರೆಗೆ ದೊಡ್ಡವರ ಹಿಂದೆ
ಮೂರು ಜನ ಶರಣರು
ಅವರ ಬೆನ್ನಿಂದೆ ಬರುವಂತ
ಏಳುಜನ ಬೆನ್ನಿಂದೆ ಬರುವಂತ
ಏಳುಜನ ಶರಣಾರಾ
ಇವನು ಕೊಳಕ ಜಂಗುಮ ಬಂದಾ ಅಂತ
ಎಲ್ಲಾರೂನು ತಡದಾರಾಂತೆ || ಸಿದ್ಧಯ್ಯ ||

ಆಗಲೀಗಾ ಕಟುಗರ ಸಂಗಯ್ಯ
ಹಿಂದೆ ಬರುವಂತ ಏಳುಜನ ಶರಣರಾ
ತಡಿರಪ್ಪ ಅಲ್ಲೆ ಇರಿ ಅಲ್ಲೆ ಇರಿ ಅನುತ ಹೇಳಿ
ಆ ಹಿಂದೆ ಬರುವಂತ ಶರಣರ್ನಾ
ಹಿಂದಕೆ ನಿಲ್ಲಿಸಿಬುಟ್ರು
ಯಾರು ? ಕಟುಗರ ಸಂಗಯ್ಯ
ಧರೆಗೆ ದೊಡ್ಡವರ ಎಡಚೆರಿ ಬರುವಂತ
ಮೂರುಜನ ಜಂಗುಮರ
ಮುಂದಕೆ ಹೋಗಿರಯ್ಯ ಅನುತೇಳಿ
ಮುಂದಕ್ಕೆ ತಳ್ಳಿ ಬುಟ್ಟುರು
ಆಗ ಹಿಂದಿದ್ದೋರು ಏಳುಜನ
ಹಾಗೆ ನಿಂತುಕಂಡುರು
ಬಲಗಡೆ ಎಡಗಡೆ ಇರ್ತಕಂತಹ ಜಂಗುಮರು
ಒಳಗಡೆ ಹೊರಟು ಹೋದರು
ಈಗಲೀಗಾ
ಕುಷ್ಟರೋಗಿಯಾಗಿ ಬಂದಿರುವಾ ಪರಂಜ್ಯೋತಿ ಧರೆಗೆ ದೊಡ್ಡವರ
ಕಣ್ಣಿಂದ ನೋಡಿಬುಟ್ಟುರು ಕಟುಗರ ಸಂಗಯ್ಯ

ಇವನ ಕೈಲಿ ಮುಟ್ಟುಬಾರದ್ದು ಅಂತ
ದೋಣ್ಣೆ ಒಳಗೆ ತಡೆದರಂತೆ || ಸಿದ್ಧಯ್ಯ ||

ಈ ಕೊಳಕ ಜಂಗುಮನಾ
ಕೈಲಿ ಮುಟ್ಟುಬುಟ್ಟರೇ
ಇವನಲ್ಲಿರ್ತಕಂತಹ ಕೀವು ರಗುತವೆಲ್ಲಾ ನನ ಕೈಗಾಗುಬುಡ್ತದೆ
ಇವನಲ್ಲಿರ್ತಾಕಂತಹ ಕುಷ್ಟರೋಗಾ
ನನಗು ಬಂದು ಬುಡ್ತುದೇ
ಈ ಕುಷ್ಠುರೋಗ ಅನತಕಂತಹದ್ದು ಬಾಳ ಕೆಟ್ಟುದ್ದು
ಇಂತಹ ಕೆಟ್ಟರೋಗಿ ನಮ ಕಲ್ಯಾಣಕೆ ಬರುಬಹುದಾ
ಈ ಕೆಟ್ಟರೋಗಿ ನಮ್ಮ
ಆದಿ ಕಲ್ಯಾಣದ ಮಟಮನಿಗೆ ಬರುಬಹುದಾ
ಏನುತೇಳಿಬುಟ್ಟು ಕಟುಗರ ಸಂಗಯ್ಯ
ಆ ಜಗತ್ತು ಗುರು ಪರಂಜ್ಯೋತಿಗೇಳುತವರೇ
ಏನಯ್ಯ ಕುಷ್ಠುರೋಗಿ
ಈಗಲೀಗಾ ಮಾತುಕತೆ ಒಂದೂ ಇಲ್ಲದೇ
ಹೋಗುವಂತಹ ಜಂಗುಮರ ಮಧ್ಯದಲ್ಲಿ
ನೆಟ್ಟಗೆ ಬಂದು ಬುಟ್ಟಿಯಲ್ಲ
ನಿನ್ನ ಏನಾರೂ ಆಗಿ ಕಲ್ಯಾಣ ಪಟ್ಟಣಕೆ
ಬಿಟ್ಟು ಬಿಟ್ಟಿದುರೇ
ಲಕುಷು ಕೋಟಿ ಆಗಾಲಿಗಾ ಜಂಗುಮರೆಲ್ಲಾ
ಅನ್ನ ಆರಾದಿಗಳ ಊಟ ಮಾಡುತವರೇ
ಅಷ್ಟು ಕೋಟಿ ಜಂಗುಮರೆಲ್ಲಾ ಅನ್ನಾ ಆರಾಧಿಗಳ ಬುಟುಬಿಟ್ಟಿ
ಕಲ್ಯಾಣ ಬುಟ್ಟು ಕಡದು ಹೊರ್ಟೇಹೋಗು ಬುಡುತಿದ್ರು

ನೀ ಕುಷ್ಠ ರೋಗಿ ಜಂಗುಮ ನಮ್ಮ
ಕ್ವಾಟೇ ಒಳಗೆ ಹೋಗಬ್ಯಾಡ || ಸಿದ್ಧಯ್ಯ ||

ನೀನು ಕುಷ್ಠ ರೋಗಿ ಜಂಗುಮ ನಮ್ಮ
ಕ್ವಾಟೇ ಒಳಗೆ ಹೋಗಬ್ಯಾಡ || ಸಿದ್ಧಯ್ಯ ||

ನೀನು ಕುಷ್ಠ ರೋಗಿ ಎನ್ನುವನು
ನೀ ಕಲ್ಯಾಣದ ಕ್ವಾಟೇಗ
ನೀ ಕಾಲನೆ ಇಡುಬ್ಯಾಡ
ಈ ಕಡೆಯ ಬಾಗಲ ಒಳಗೆ
ಇಲ್ಲೆ ಕೂತುಕೋಬುಡು
ನಾನು ಬಸವಣ್ಣನಿಗೆ ಹೇಳಿ ನಿನಗೆ
ಅನ್ನ ತರಿಸಿ ಕೊಡುತೇನೆ || ಸಿದ್ಧಯ್ಯ ||

ಈಗಲೀಗಾ ಇಲ್ಲೇ ಕೂತುಕೊಬುಡು ಜಂಗುಮಾ
ಈಗಲೀಗಾ ನಿನಗೆ ಅನ್ನ ತರಿಸಿ
ಊಟಕೆ ಬಡಿಸ್ತಿನಿ
ಕಲ್ಯಾಣದ ಒಳಗಡೆ ಮಾತ್ರ ಹೋಗುಬ್ಯಾಡ ಅನುತೇಳಿ

ಅವನು ಚಕ್ರುದ ದೊಣ್ಣೆ ಒಳಗೆ
ನೂಕಿ ಅವರ ತಡೆದ ಕಂದ || ಸಿದ್ಧಯ್ಯ ||

ಚಕ್ರುದೊಣ್ಣೆ ಒಳಗೆ ಕಡೆಕಂಡುರು
ತಡೆದಂತಹ ಕಟುಗರ ಸಂಗೈನ ಮಕವ ಕಣ್ಣಿಂದ ನೋಡಿದುರು
ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಏನಪ್ಪ ಕಟುಗರ ಸಂಗಯ್ಯ
ಅನ್ನ ಉಂಡು ಆರು ದಿವಸವಾಯ್ತು ಕಣಪ್ಪ
ಕಣ್ಣಿಗೆ ನಿದುರೆ ಮಾಡಿ ಮೂರು ದಿವಸ ತುಂಬುಡ್ತು ಕಂದಾ
ಅಸುದು ಅಣ್ಣಾಗಿ ದಣುದು ದಾವಾಗಿ
ಅದೇ ಕಲ್ಯಾಣದ ಪಟ್ಟಣದಲ್ಲಿ
ನಿಚ್ಚಬೋಜಣೆ ಬಡುಸ್ತುರಂತೆ
ಅಸ್ತು ಬರುವಂತಹ ಜಂಗಮರಿಗೆ
ಅನ್ನದಾನ ಕೊಡುತಾರಂತೆ ಅನುತೇಳಿ
ಕಲ್ಯಾಣದಿಂದಾಚೆ ದ್ವಾರಬಾಗಲಿನಲಿ
ಎಲ್ಲಾ ಶರಣರು ಮಾತಾಡ್ತಾ ಇದ್ರು ಕಣಪ್ಪ
ಶರಣರಾಡಿದಂತಹ ಮಠಮೆನೆಯೊಳಗೆ ಕಂದಾ
ಅನ್ನದಾನ ದೊರೀತದೆ ಅಂತಹೇಳಿ
ಇಂತಹ ಕೊಳಕ ಜಂಗಮರಿಗೆ ಅನ್ನ ಕೊಟ್ಟುರೇ
ಬಸವಣ್ಣನವರಿಗೆ ಪುಣ್ಯ ಬರ್ತದೆ ಅಂತ ಏಳಿಬುಟ್ಟು

ಹಸುವನ್ನೇ ತಡಿಯಲಾರದೇ
ನಾ ಬಂದಿವ್ನಿ ಕಣಪ್ಪ
ನನ್ನ ಒಳಗಡೆ ಬುಟ್ಟುರೇ ನಿನಗೆ
ಬಾಳ ಧರ್ಮ ಬರುತಾದೇ || ಸಿದ್ಧಯ್ಯ ||

ಒಳಗಡೆ ಬುಟ್ಟರೇ
ಬಾಳ ಧರ್ಮ ಬರ್ತಾದೆ ಕಣಪ್ಪ
ಕಟುಗರ ಸಂಗಯ
ಈಗಲೀಗಾ ಕಲ್ಯಾಣದ ಒಳಗಡೇ ಕಂದಾ
ದಾರಿ ಬುಟುಕೊಡು ಕಲ್ಯಾಣಕೆ ಹೊರ್ಟು ಹೋಗ್ತಿನಿ
ತಡದು ನಿಲ್ಲಿಸಿ ಕಂಡ್ರೆ
ಇವತ್ತು ಕಲ್ಯಾಣದಲ್ಲಿ ನನಗೆ ಅನ್ನ ಸಿಕ್ಕದಂಗಾಯ್ತದೆ ಕಂದಾ
ನಿನ್ಗೆ ಅನ್ನ ಕೊಟ್ಟು ಕಾಪಾಡ್ದಂತಹ ಫಲ ಬರ್ತಾದೆ ಕಂದಾ
ಕಲ್ಯಾಣದ ಒಳಗಡೆ ನನ್ನ ಬುಟ್ಟುಬುಡು ಕಂದಾ ಬುಟ್ಟುಬುಡು
ಅಯ್ಯಾ ಕಟುಗರ ಸಂಗೈನಾ ಮುಂದೇ
ಅವರು ನಿಂತು ಮಾತೊಂದಾಡುತಾರೆ || ಸಿದ್ಧಯ್ಯ ||

ನೋಡಪ್ಪ ಬಸವಣ್ಣನವರು
ಕೊಳಕು ಜಂಗುಮರ ಬುಡುಬ್ಯಾಡ ಅಂತ್ಹೇಳಿ
ಒಂದೆ ಮಾತು ಕಟುಗರ ಸಂಗೈನಿಗೆ ಹೇಳಿರೋದ್ರಿಂದಾ
ಈ ಕಟುಗರ ಸಂಗೈಯ ತಡಕಂಡ್ರು
ತಡಕಂಡಂತಹಾ ಕಾಲದಲ್ಲಿ ಪರಂಜ್ಯೋತಿ ಧರೆಗೆ ದೊಡ್ಡವರು
ಅನ್ನಕ್ಕಾಗಿ ಕಟುಗರ ಸಂಗೈನ ಜೊತೆ ಒಳಗೆ ಮೂರು ಮಾತಾಡಿದ್ರು
ಅಡ್ಡಾ ಮಾತು ಆಗಲೀಗಾ ಮರತು ಗುರುದೇವಾ
ಕಟುಗರ ಸಂಗಯ್ನೂ
ಧರ್ಮಾನು ನೋಡ್ಲಿಲ್ಲಾ ಕರ್ಮನು ನೋಡ್ಲಿರ್ಲಾ
ಧರೆಗೆ ದೊಡ್ಡವರು ಪಾಪದ ಮಾತಾಡಿದ್ರೋ
ಪುಣ್ಯದ ಮಾತಾಡಿದ್ರೋ ಅನ್ನಾದೇ ತಿಳಿನಿಲ್ಲ
ಕಟುಗರ ಸಂಗಯ್ಯ ಏನಂತ ಮಾತಾಡ್ತಾನೆ ಅಂದರೆ

ಏನಯ್ಯ ಜಂಗಮ
ಕ್ವಾಟೆಗೆ ನಾ ಬಿಡುವೋದಿಲ್ಲ || ಸಿದ್ಧಯ್ಯ ||

ಅಯ್ಯಾ ಉಣ್ಣವರು ಜಂಗುಮರು
ಊಟವನೆ ಮಾಡುತಾರೆ
ಅಯ್ಯ ಹೋಗುವ ಜಂಗುಮರು
ಕಲ್ಯಾಣದಿಂದ ಹೋಗುತ್ತಾರೆ
ಅಯ್ಯಾ ನಿನ್ನನೇ ನೋಡಿದಾರೆ
ಅವರು ಅನ್ನ ಊಟ ಮಾಡಾದಿಲ್ಲ || ಸಿದ್ಧಯ್ಯ ||

ಅಯ್ಯಾ ನಿನ್ನ ನೋಡಿದರೆ
ಕೆಳಿ ಜಂಗುಮರೆ
ಅನ್ನವ ಉಣ್ಣವರು
ಅನ್ನಾ ಆರಾದಿಗಳ
ಅವರು ಊಟಮಾಡುವುದಿಲ್ಲಾ
ನಾಳೆ ಭೋಜಣಕ್ಕೆ ಶರಣರು
ಒಬ್ಬರು ಬರುವುದಿಲ್ಲಾ
ಈ ಕ್ವಳಕ ಜಂಗುಮರ ಮುಖವಾ
ನಾವಾಗೆ ನೋಡೋದಿಲ್ಲಾ || ಸಿದ್ಧಯ್ಯ ||

ಇಂತಹ ಕ್ವಾಳಕ ಜಂಗುಮರಾ
ಮಕವನ್ನೆ ನಾವು
ಎಂದೆಂದೂ ನಾವು
ನೋಡದಿಲ್ಲ ಜಂಗುಮರೆ
ನಿಮ್ಮ ಕುಷ್ಠರೋಗಿಗಳ
ನಾನೆಲ್ಲೂ ಕಾಣನಿಲ್ಲ || ಸಿದ್ಧಯ್ಯ ||

ಕೇಳಯ್ಯ ಜಂಗುಮರೇs
ನಿನ್ನಂತಹ ಕೊಳಕು ಜಂಗುಮರು
ಅನ್ನಕ್ಕೆ ಬಂದವರು ನಮ್ಮ ಕಲ್ಯಾಣ ಕಟ್ಟುದಾಗಲಿಂದ ಇಲ್ಲಾ
ನಿನ್ನಂತಹ ಕುಷ್ಠರೋಗಿಗಳ ನಾನು
ಆದಿಕಲ್ಯಾಣದಲಿ ಎಲ್ಲೂ ನೋಡಲಿಲ್ಲಾ
ಇಂತಹ ಕುಷ್ಠರೋಗಿಗಳು ಬಂದ ಕಾಲದಲ್ಲಿ
ಕಲ್ಯಾಣ ಪಟ್ಟಣಕ್ಕೆ
ಕಡೆ ಬಾಗುಲಿಗೂ ನಾವು ಸೇರಿಸಬಾರ್ದಾಗಿತ್ತು
ಈ ಕಲ್ಯಾಣದಾ ಕ್ವಾಟೆ ಬಾಕುಲಿಗೆ ಬಂದು ಬುಟ್ಟಿದ್ದಿಯೇ
ನಮ್ಮ ಬಸವಣ್ಣವರು ಪ್ರತಿ ಕಾಲದಲ್ಲಿಯೇ
ಅನ್ನಾದಾನ ಕೊಟ್ಟು ಪುಣ್ಯ ಪಡಕತ್ತವರೆ
ಅಂತಹ ಪಟ್ಟಣಕ್ಕೆ ನೀನು ಬಂದಿರುವುದಿರಿಂದ
ನಿನ್ನ ಹಾಗೆ ಮಾತ್ರ ಕಳುವುದಿಲ್ಲಾ
ಕ್ವಾಟೆ ಒಳಗೆ ಬುಡಾದಿಲ್ಲಾ

ಈ ಬಾಗಲಲ್ಲೆ ಹಾಳೆ ಕೊಟ್ಟು
ಅನ್ನ ನಿನಗೆ ಕೊಡುಸುತೀವಿ || ಸಿದ್ಧಯ್ಯ ||

ಬಾಗಲಲ್ಲೆ ಹಾಳೆ ಕೊಟ್ಟು ಇಲ್ಲಿಗೆ ಅನ್ನ ತರಿಸಿ
ನಿನಗೆ ನನ್ನಿಂದೆ ಊಟಕ್ಕೆ ಬುಡುಸ್ತಿನಿ
ನನ ಮುಂಭಾಗದಲಿ ನಿಂತಿರುಬ್ಯಾಡಾ
ನೋಡು ಆಚೆಕಡೆ ಕ್ವಾಟೆ ಬಾಕುಲಿಗೆ ಹೋಗಿ
ಅ ಬಾಗಲಲಿ ಕೂತುಕೋ
ಈಗಲೀಗಾ ನನ್ನ ಕಡೆ
ಶರಣರೇನಾದ್ರು ಬಂದಿದ್ದಾದರೆ
ಇದೆ ಗಳಿಗೆ ಒಳಗೆ ಅನ್ನ ತರಿಸಿ ಊಟಕ್ಕೆ ಬಡುಸ್ತಿನಿ
ಹೋಗಲ್ಲಿ ಕೂತ್ಕೊ ಅಂತಹೇಳಿ
ನೋಡಪ್ಪ ಕಟಗೇರ ಸಂಗಯ್ಯ
ನಾನು ಹೇಳಿದಂತಹ ಸ್ಥಳಕೆ ಹೋಗು
ಹೊರಟು ಹೋಗಯ್ಯ ಅಂತ ಹೇಳಿ
ಹಿಡಿದಿರುವ ದೊಣ್ಣೇವಳಗೆ
ನನ್ನ ದೇವುರನ್ನೆ ತಳ್ಳುತಾನೆ || ಸಿದ್ಧಯ್ಯ ||

ಗುರುವೇ ಸಂಗಯ್ಯನ ಮಾತಾ
ಕೇಳಿ ನನ್ನಪ್ಪ
ಧರೆಗೆ ದೊಡ್ಡವರು
ಮಂಟೇದ ಲಿಂಗಯ್ಯ
ಅಯ್ಯಾ ಉತ್ತುರು ದೇಸದಲ್ಲಿ
ನೆನಕಂಡ ಮಾತು
ಇದೆ ಕಲ್ಯಾಣದಲ್ಲಿ
ನನಗೆ ಆರುವಾಯಿತೆಂದರಲ್ಲ || ಸಿದ್ಧಯ್ಯ ||

ಏನಪ್ಪ ಕಟುಗರ ಸಂಗಯ್ಯ
ಇಂತಾ ವಾರ್ತೆ ಇಂತಾ ಮಾತು
ನಿನಗೆ ಹೇಳುದವರ್ಯಾರು
ಕ್ವಾಟೇ ಬಾಗಲಲ್ಲಿ
ನನ್ನ ತಡ್ಕೊ ಅಂತ ಹೇಳಿದವರ್ಯಾರು
ಎಲ್ಲಾ ಶರಣಮಾತ್ಮರ ಕಲ್ಯಾಣಕೆ ಬುಡ್ತಿಯಲ್ಲಾ
ನನ್ನ ಯಾತುಕೆ ಬುಡದಿಲ್ಲಾ ಕಂದಾ ಎಂದುರು
ಜಂಗುಮರೇ
ನಮ್ಮ ಬಸುವಣ್ಣವ್ರು
ಈಗ ತಾನೆ ಬಂದು ನಮಗೆ
ಏನಂತ ಆಗಣೇ ಮಾಡವರೇ ಗೊತ್ತಾ
ಒಳ್ಳೊಳ್ಳೆ ಶುಚಿಯಾದಂತಹ ಜಂಗುಮುರು ಬಂದುರೆ
ಮೊದಲನೆ ಊಟಕ್ಕೆ ಬುಡು
ಕಷ್ಠ ಉಳ್ಳಾದವರು ಕಾಯಿಲೇ ಉಳ್ಳಾದವರು
ರೋಗ ಉಳ್ಳಾದವ್ರು ಏನಾದ್ರು ಬಂದರೇ
ಇಲ್ಲೆ ತಡ್ದು ನಿಲ್ಲಿಸಿಕೊ
ಒಳ್ಳೆ ಜಂಗುಮುರಾ ಊಟ ಮೊದಲು
ಕೆಟ್ಟ ಹಂಗುಮುರಾ ಊಟ ಎರಡನೇ ಊಟ
ಈ ರೀತಿ ಒಳಗೆ ಕಲ್ಯಾಣದ ಬಾಗಲಿಂದ
ಒಳಗಡೆ ಬುಡು ಅಂತ ಹೇಳಿ
ಬಸವಣ್ಣನವರು ಆಗಣೇ ಮಾಡಾವರೇ

ನನ್ನ ಗುರುವಿನಾ ಮಾತಾ ಮೀರಿ
ಕ್ವಾಟೆಗೆ ನಾ ಬಿಡುವುದಿಲ್ಲ || ಸಿದ್ಧಯ್ಯ ||

ಗುರುವಿನಾಗಣೇ ಮೀರಿs
ಕ್ವಾಟೇ ಒಳಗಡೆ ನಾನು ಬುಡುವುದಿಲ್ಲ ಎಂದುರು ಕಟುಗರ ಸಂಗಯ್ಯ
ಆಗ ಪರಂಜ್ಯೊತಿಯವರು
ಕಟುಗರ ಸಂಗಯ್ಯನಾ ಮುಖನೋಡಿಬಿಟ್ಟು
ಆ ಸಂಗೈನ ಜೊತೆ ಒಳಗೆ ಮಾತಾಡ್ತಾ ಅವರೇ ನೋಡಿ
ಎನಪ್ಪ ಕಟುಗರ ಸಂಗಯ್ಯ?
ಲಕುಶ ಕೋಟಿ ಜಂಗುಮರಿಗೆ ಬಸವಣ್ಣ
ಅನ್ನ ಇಕ್ಕಿ ಪುಣ್ಯ ಪಡಿಬಹುದು
ಅನ್ನಾಯದ ಜಂಗುಮರು ಅಂತೇಳಿ
ನನ್ನ ಕಡೇ ಬಾಗುಲಲ್ಲಿ ತಡೆದು ನಿಲ್ಲಸಬ್ಯಾಡಾ

ನನ್ನ ತಡೆದರೆ ನಿನಗೆ
ಬಾಳ ಕರ್ಮ ಬರುವುತಾದೆ || ಸಿದ್ಧಯ್ಯ ||