ಉತ್ತರ ದೇಸವನೆ ಬಿಟ್ಟು ಬಿಟ್ಟ ಗುರುವು
ಇಷ್ಟೊಂದು ಬಿರುದು ಲಾಂಚಾಣಗಳನೆ ಧರಿಸಿಕಂಡು
ಈಗಾ ಎಲ್ಲಿಂದ ಎಲ್ಲಿಗೆ ನಾನು ಹೋಗಬೇಕು ಎನುತ ಹೇಳಿ

ಜಗಂಜ್ಯೋತಿಯವರು
ಪರಂಜ್ಯೋತಿಯವರು ಪಾತಾಳ ಜ್ಯೋತಿಯವರು
ಅಲ್ಲಾಮ ಪ್ರಭು ಮಂಟೇದಾ ಲಿಂಗಪ್ಪ

ಈಗ ಆದಿ ಕಲ್ಯಾಣಕೆ ನಾನು
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಇದು ಆದಿ ಕಲ್ಯಾಣ,
ಆದಿ ಕಲ್ಯಾಣದ ಮಟಮನೆ ಎಂದರೆ
ಅದು ಒಂದನೆ ಕೈಲಾಸ
ಈ ಕಲ್ಯಾಣಕೆ ಹೋಗಬೇಕು
ಬಸವಣ್ಣದೇವರ ದುಡುವ ನೋಡಲೇಬೇಕು
ಅವರ ಮಡದಿ ನೀಲಮ್ಮನ ಸತ್ಯ ನೋಡಲೇಬೇಕು

ಆ ಗಂಡ ಹೆಂಡ್ತಿರ ದುಡುವ
ನಾವೇ ನೋಡಲೇಬೇಕು || ಸಿದ್ಧಯ್ಯ ||

ಅಯ್ಯ ಗಂಡನಲಿ ದುಡುವೋ
ಅವರ ಮಡದಿಯಲಿ ಬಕುತಿಯೋ
ನಾವಾಗೆ ನೋಡಬೇಕು

ಆ ಬಸವಣ್ಣನವರ ಬದುಕು ಕಳೆಯಬೇಕು
ಆ ನೀಲಮ್ಮನವರ ಪತುವರತಾನಗಳ ನಾನೆ ನೋಡಲೇಬೇಕು

ಅವರ ಗಂಡ ಹೆಂಡ್ತಿರ ದುಡಮನವ
ನಾವೇ ನೋಡಲೇಬೇಕು || ಸಿದ್ಧಯ್ಯ ||

ಆದಿ ಕಲ್ಯಾಣದ ಮಠಕೆ ದೇವಾ
ನಾನಾಗೆ ಹೋಗಬೇಕಲ್ಲಾ
ಈಗ ಬಸವಣ್ಣನ ದುಡ ನೋಡಬೇಕು
ಅವರ ಮಡದಿ ನೀಲಮ್ಮನವರ ಪತಿವ್ರತ ನೋಡಬೇಕು
ಅವರ ಸತಿ ಪತಿಗಳ
ಬುದ್ದಿ ಭಾವ ನೋಡಬೇಕಲ್ಲ ಅಂತಹೇಳಿ

ಅವರು ಧರೆಗೆ ದೊಡ್ಡವರು ಗುರುವು
ಅವರು ಯೋಚಿಣಿಯ ಮಾಡಿಕಂಡು || ಸಿದ್ಧಯ್ಯ ||

ಈಗ ಭಗುತಿವುಳ್ಳ ಬಸವಣ್ಣ
ನೀತಿ ಉಳ್ಳ ನೀಲಮ್ಮ
ಆಗಲೀಗಾ ಸತಿ ಪತಿಗಳೆಂದರೇ
ಆದಿ ಕಲ್ಯಾಣದಲ್ಲಿ ಕೋಟಿಗೊಬ್ಬ ಶರಣ
ಕುಲುಕೊಬ್ಬ ಭಕುತಾ
ಅರುವತ್ತಾರುಮಂದಿ ಜಂಗಮರು
ಮುವತ್ತು ಮೂರು ಮಂದಿ ಮುನಾದಾ ಮುನಿಗಳು
ಲಕ್ಷುದ ಮೇಲೆ ತೊಂಬತ್ತೇಳು ಕೋಟಿ
ಸತ್ಯ ಶರಣು ಮಾತುಮರು

ಅಪ್ಪ ಎಲ್ಲಿರುವೇ ಮಾಯುಕಾರ
ನೀ ಒದಗಿ ಬಾಪ್ಪ
ಧರ್ಮ ಗುರುವೇ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡಯ್ಯ
ಮಂಟೇದಾ ಲಿಂಗಪ್ಪ
ಅಲ್ಲಾಮ ಪ್ರಭು
ನನ್ನ ಪರಂಜ್ಯೋತಿಯವರು
ಈಗಾ ಆದಿ ಕಲ್ಯಾಣಕೆ ನಾನು
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಗುರುವೇ ಅದಿ ಕಲ್ಯಾಣಕೆ ಗುರುವೇ
ನಾನೆ ಹೋಗಬೇಕು
ಬಸವಣ್ಣನವರ ಗುರುವು
ಸತ್ಯ ನೋಡಲೇಬೇಕು
ಆ ನೀಲಮ್ಮನವರ ದೇವಾ
ಭಗುತಿ ತಿಳಿಯಬೇಕು
ಅವರ ಸತಿ ಪತಿಯ ದುಡುವ
ನಾನೆ ನೋಡಲೇಬೇಕು || ಸಿದ್ಧಯ್ಯ ||

ಅವರ ಮಡದಿಯ ದುಡುವು ಗೊತ್ತಿಲ್ಲಾ
ಇಲ್ಲಾ ಬಸವಣ್ಣನ ಭಕುತಿಯ ಕಾಣೆನಲ್ಲ
ಅವರ ಭಕುತಿ ಸತ್ಯನೋಡಬೇಕಲ್ಲ ಅಂತ
ಧರೆಗೆ ದೊಡ್ಡವರು
ಉತ್ತರ ಖಂಡದಲಿ ನಿಂತುಕಂಡು
ಆದಿ ಕಲ್ಯಾಣದ ಪಟ್ನ
ಕಣ್ಣಿಂದ ನೋಡುವಾಗ ಗುರುವು
ಆದಿ ಕಲ್ಯಾಣದ ಪಟ್ಟಣದಲಿ

ಹೊಲಿಯರ ಹೊನ್ನಪ್ಪ
ಅವನೊಬ್ಬ ಶಿವಶರಣ
ಮಾದಿಗರ ಚನ್ನಯ್ಯಾ
ಅವನೊಬ್ಬ ಶಿವಶರಣ
ನನ್ನ ಮಡಿವಾಳ ಮಾಚಪ್ಪ
ಒಬ್ಬ ಶಿವಶರಣಾs
ಸುವ್ವಾ ಬಾ ಚನ್ನ ಬಸವಣ್ಣಾ || ಸುವ್ವಾ ಬಾ||

ಅಯ್ಯ ಮಡಿವಾಳು ಮಾಚಪ್ಪs
ಅವನೊಬ್ಬ ಶಿವಶರಣ
ನನ ಕುಂಬಾರ ಗುಂಡಯ್ಯs
ಅವನೊಬ್ಬ ಶಿವಶರಣ
ನನ ಗಾಣಿಗರ ದಾಸಯ್ಯ
ಒಬ್ಬ ಶಿವಶರಣಾ || ಸುವ್ವಾ ಬಾ||

ನನ್ನ ಗಾಣಿಗರ ದಾಸಯ್ಯ
ಅವನೊಬ್ಬ ಶಿವಶರಣ
ನನ್ನ ಕುರುಬರ ಬೀರಪ್ಪ
ಅವನೊಬ್ಬ ಶಿವಶರಣ
ಒಕ್ಕಲಿಗರ ಮುದ್ದಯ್ಯ
ಅವನೊಬ್ಬ ಶಿವಶರಣ
ನನ್ನ ದೊಂಬರ ಕ್ಯಾತಯ್ಯಾ
ಒಬ್ಬ ಶಿವಶರಣಾs || ಸುವ್ವಾ ಬಾ||

ಗುರುವೆ ದೊಂಬರ ಕ್ಯಾತಪ್ಪ
ಅವನೊಬ್ಬ ಶಿವಶರಣ
ನನ ಕುರುಬರ ಬೀರಪ್ಪ
ಅವನೊಬ್ಬ ಶಿವಶರಣ
ನನ್ನ ಗುರುಕರ ಬೀರಯ್ಯ
ಒಬ್ಬ ಶಿವಶರಣಾ || ಸುವ್ವಾ ಬಾ||

ನನ್ನ ತುರುಕರ ಬೀರಯ್ಯ
ಅವನೊಬ್ಬ ಶಿವಶರಣ
ನನ್ನ ಅಂಬುಗರ ಚೌಡಯ್ಯ
ಅವನೊಬ್ಬ ಶಿವಶರಣ
ಅವರು ಇಂತಿಂತ ಶರಣರು
ಇರುತಾರೇ || ಸುವ್ವಾ ಬಾ||

ಕೋಟಿಗೆ ಒಬ್ಬ ಶರಣ
ಕುಲಕೆ ಒಬ್ಬ ಭಕುತಾ ದೇವಾ
ಈಗಲೀಗ ಕಲ್ಯಾಣದ ಬಸವಣ್ಣನವರು
ಆದಿ ಕಲ್ಯಾಣ ಪಟ್ಟಣಕೆ
ಎಂತಹ ಶಿವಶರಣ ಮಾತುಮರು ಎಂದರೆ
ಏನೇನೋ ಪಡದಂತಹ ಶರಣ ಮಾತುಮರು ಗುರುವೇ

ಇಂತಿಂತಹ ಶರಣ ಮಾತುಮರು ಗುರುವೂ
ಆದಿ ಕಲ್ಯಾಣ ಪಟ್ಟಣದಲ್ಲಿ
ವಾಸಸ್ಥಾನ ಮಾಡುವಾಗ ಗುರುವು
ಈ ಶಿವ ಶರಣ ಮಾತುಮರು ಅಂದುರೇ

ಅಂಗಾಲ ಜಡೆಯವರು
ಮುಂಗಾಲ ಜಡೆಯವರು
ಅವರು ಕೋಟಿಗೊಬ್ಬ ಶರಣಾರು
ಕುಲುಕೊಬ್ಬ ಭಕುತಾರು
ಅವರು ರುಂಡುಪುಂಡಾ ಜಂಗಮರು
ಎಂದವರೆ ನನ ಗುರುವು
ಅವರು ನಿದ್ರೆಯ ತೊರೆದವರು
ನೇಮವ ತೊರೆದವರು
ಗುರುವೇ ಶಿವ ಪೂಜೆ ತೊರೆದವರು
ಶಿವಜ್ಞಾನವ ಮರೆತವರು
ಹೆಣ್ಣನೆ ತೊರೆದವರು
ಮಣ್ಣನೇ ತೊರೆದವರು
ನಿದ್ರೆಯ ತೊರೆದವರು
ಅನ್ನವ ತೊರೆದವರು
ಆರಾದಿಗಳ ದೇವಾ ಮರೆತವರು ಶರಣಾರು
ಅವರು ಇಂತಿಂಥ ಶರಣಾರು ಇರುತಾರ || ಸುವ್ವಾ ಬಾ||

ಇಂತಿಂಹ ಶರಣ ಮಾತುಮರು
ಆದಿ ಕಲ್ಯಾಣ ಪಟ್ಟಣದಲ್ಲಿ
ಬಸವಣ್ಣನವರಾ ಗದ್ದಿಗೆ ಒಳಗೆ
ರಂಡು ಪುಂಡು ಜಂಗಮರು
ಬೋಳು ಬೋಳು ಜಂಗಮರು
ಆದಿ ಕಲ್ಯಾಣ ಪಟ್ಟಣದಲ್ಲಿ ಅಡಕವಾಗಿದ್ದರಂತೆ
ಅಂತ ಆದಿ ಕಲ್ಯಾಣದಲ್ಲಿರುವಾಗ ಗುರುವೂ
ಪರಂಜ್ಯೋತಿ ಪಾವನ ಮೂರುತಿ
ಅಲ್ಲಮ ಪ್ರಭು ಮಂಟೇದ ಲಿಂಗಪ್ಪ
ಜಗಂಜ್ಯೋತಿಯವರು
ಈಗ ಆದಿ ಕಲ್ಯಾಣ ಪಟ್ಟಣಕ್ಕೆ ಹೋಗುಬೇಕಲ್ಲ
ಬಸವಣ್ಣ ನೀಲಮ್ಮನೋರಾ ಭಕುತಿ ಸತ್ಯ ನೋಡಬೇಕು

ಅಲ್ಲಿ ಇರುತಕಂತಹ
ಶರಣರ ದುಡುವಾ ನಾನೇ ನೋಡಲೇಬೇಕು || ಸಿದ್ಧಯ್ಯ ||

ಅಲ್ಲಿ ಇರುವಂತಹ ಗುರುವೇ
ಸತ್ಯ ಶರಣರ ದುಡುವ
ನಾನೇ ನೋಡಲೇಬೇಕು
ಶರಣರ ಭಕುತಿ
ನಾನೇ ತಿಳಿಯಲೇ ಬೇಕು
ಹಾಗೆಂದು ನನ ಗುರುವು
ಧರೆಗೆ ದೊಡ್ಡಯ್ಯ
ನನ್ನ ಮಂಟೇದಾ ಲಿಂಗಪ್ಪ
ನನ ಕಂಡಾಯದ ಮೂರುತಿ
ಅವರು ಉತ್ತುರು ಕಂಡವನ್ನೇ
ಬಿಟ್ಟುಬಿಟ್ಟು ನನ್ನಪ್ಪ
ಅವರು ಕಾಲು ಚೊತ್ತು ಮಾಡಿ
ಗುರುವೇ ಕೈಯಿ ಚೊತ್ತು ಮಾಡಿ
ಅವರು ಕುಷ್ಠ ರೋಗಿ ಯಾಸವನ್ನೆ
ತಾಳಿಕಂಡುರು ಮಾಯಿಕಾರ || ಸಿದ್ಧಯ್ಯ ||

ಗುರುವೇ ಕುಷ್ಠುರೋಗಿಯ ಗುರುವೇ
ಯಾಸವಾ ಗುರುವೂ
ತಾಳಿಕಂಡು ನನಪ್ಪ
ಧರೆಗೆ ದೊಡ್ಡಯ್ಯ
ಗುರುವೇ ಆರು ಕಂಡುಗಾ
ಯಗ್ಗಜ್ಜಿ ಮಾಡಿಕಂಡು
ಮೂರು ಕಂಡುಗಾ
ತುರುಗಜ್ಜಿ ಮಾಡಿಕಂಡು
ಗುರುವೇ ಆರು ಕಂಡುಗಾ ಕೀವು
ಆರು ಕಂಡುಗ ರಸುಗು
ಆರು ಕಂಡುಗ ರಕುತ
ಏಳು ಕೋಟಿ ಹುಳುವಾ
ಮೈತುಂಬ ಬುಟುಕಂಡು
ಅವರು ಕಲ್ಯಾಣ ಗುರುವೇ ಅವರು
ಕಣ್ಣೆತ್ತಿ ನೋಡುತಾರೆ || ಸಿದ್ಧಯ್ಯ ||

ರಂಡಾ ಪುಂಡಾ ಜಂಗುಮರು
ಭೋಳು ಬೋಳು ಜಂಗುಮರು
ಭಕುತಿ ಸತ್ಯ ನೋಡ ಬೇಕಾದುರೇ
ಆ ಬಸವಣ್ಣನವರ ಭಕುತಿ ತಿಳಿಬೇಕಾದುರೇ
ಈಗಾ ನಾನು ತಾಳಿಕಂಡಿರುವಂತ
ಕುಷ್ಠು ರೋಗಿ ಅಂದುರೇ
ಈ ಭೂಮಿ ಭೂಲೋಕ ನಡುವೇ ನರಲೋಕದಲ್ಲಿ
ನನ್ನಂತಹ ರೋಗಾದಿಗಳು ಒಬ್ಬರುಗೂ ಇಲ್ಲಾ
ಅಂತಹ ರೋಗಾದಿ ಯಾಸ ತಾಳಿಕಂಡು ನಾನೋಗಿ
ಬಸವಣ್ಣನವರ ಭಕುತಿ ದುಡ ನೋಡಬೇಕು ಅನುತೇಳಿ
ಆ ಜಂಗಜ್ಯೋತಿ ಧರೆಗೆ ದೊಡ್ಡವರು ಯೋಚಣೆ ಮಾಡುವಾಗ
ಆದಿಕಲ್ಯಾಣ ಪಟ್ಟಣದಲ್ಲಿ
ಕುಂತು ಕಲ್ಯಾಣದ ಬಸವಣ್ಣ
ಈ ಕಲ್ಯಾಣ ಕಟ್ಟುದ ಕಾಲದಿಂದಾ
ಕಲ್ಯಾಣ ಹುಟ್ಟುದ ಕಾಲದಿಂದಾ
ಕಲ್ಯಾಣ ಪಟ್ಟಣದಲ್ಲಿ
ಈಗಲೀಗಾ ಲಕುಶು ಕೋಟಿ ಜಂಗುಮರೆಲ್ಲಾ
ಬಸವಣ್ಣನೇ ಹೆಚ್ಚಿನ ಶರಣ ಅಂತ
ನನ್ನನೆ ಕೊಂಡಾಡುತವುರೇ
ಈಗಲೀಗಾ ಕಲ್ಯಾಣ ಕೈಲಾಸ ಭೂಮಿ ಭೂಲೋಕ
ಬಸವಣ್ಣನವರೇ ದುಡುವಂತುರು ಭಕುತಿವಂತರು ಅಂತೇಳಿ
ಕೈಲಾಸ ಕಲ್ಯಾಣವೆಲ್ಲಾ ಹೊಗುಳುತಾದೇ
ಅಷ್ಟು ಕಾಲದಿಂದ ಇಷ್ಟು ಕಾಲಗಂಟಾ
ನಮಗಿಂತ ಹೆಚ್ಚಿನ ಗುರುಗಳು ಅಂದರೆ ಒಬ್ಬುರು ಬರುನಿಲ್ಲಾ
ಹೆಚ್ಚಿನ ಗುರುಗಳು ನಾ ಎಲ್ಲೂ ಕಾಣಲಿಲ್ಲ
ಅಂತಹ ಶರಣರು ಅಂತಹ ಭಕುತ್ರು
ತಾವಾಗಿ ಕಲ್ಯಾಣಕೆ ಪ್ರವೇಶ ಮಾಡುಬೇಕಾದ್ರೆ
ಈ ಕಡೆ ಕೈಲಾಸದ ಭಾಗದಲ್ಲಿ

ನಾಲಗೆ ಇಲ್ಲದ ಗಂಟೆ
ಬಾಗುಲಲಿ ಕಟ್ಟುಬೇಕು
ಕಂಡುವಿಲ್ಲದಾ ನಗಾರಿ
ಬಾಗುಲಲಿ ಇರುಬೇಕು
ನಮಗಿಂತ ಶರಣರು
ನಮ ಕಲ್ಯಾಣಕೆ ಬಂದರೇ
ಅಲ್ಲಿ ನಾಲಗೆ ಇಲ್ಲದ ಗಂಟೇ
ಲಾದ ಸಬುದಾ || ಸುವ್ವಾ ಬಾ ||

ಅಯ್ಯಾ ನಾಲಗೆ ಇಲ್ಲದ ಗಂಟೆ
ಧಣಿ ಧಣಿನೆ ಗುರುವೇ
ಲಾದ ಶಬುದಾ ಆಗುಬೇಕು
ಅಲ್ಲಿ ಕುಡುವಿಲ್ಲಾದ
ನಗಾರಿ ನುಡೀಬೇಕು || ಸುವ್ವಾ ಬಾ ||

ಅಯ್ಯಾ ಕುಡುವಿಲ್ಲಾದ ನಗಾರಿ
ನುಡಿಬೇಕು ಎನುತೇಳಿ
ಅಯ್ಯಾ ಕಡೆಯ ಬಾಗುಲ ಒಳಗೆ
ಗಂಟೇಯ ಇರಿಸವರೇ
ಅಲ್ಲಿ ಶರಣರಿಗೆ
ಬುದ್ಧಿವಾದ ಹೇಳುತಾರೇ || ಸುವ್ವಾ ಬಾ ||

ನೋಡಪ್ಪ
ಅಗಲೀಗಾ ಕಲ್ಯಾಣ ಪಟ್ಟಣದಲ್ಲಿ
ನಾಲಿಗಿಲ್ಲದ ಗಂಟೆ ಬಾಕ್ಲುಗೆ ಕಟ್ಟಿ
ಕುಡುವಿಲ್ಲದ ನಗಾರಿಯನ್ನು
ಕಡೆಬಾಗುಲಲಿ ಮಡಿಕಂಡು ಬಸವಣ್ಣನವರು
ಅರವತ್ತಾರು ಮಂದಿ ಮುನಾದು ಮುನಿಗಳು
ಲಕುಸದ ಮ್ಯಾಲೆ ತೊಂಬತ್ತೇಳು ಕೋಟಿ
ಶಿವಶರಣು ಮಾತುಮರನೇ
ಆದಿ ಕಲ್ಯಾಣಕ್ಕೆ ಬರಮಾಡಿಕಂಡು
ದಿನಾ ದಿನಾ ಒಂದು ದಿವಸಾ ತಪ್ಪುದಂತೆ ಕೂಡಾ
ನಿಚ್ಚ ಬೋಜನ ಮಾಡುತಿದ್ದರಂತೆ
ನಿಚ್ಚ ಬೋಜನ ಅಂದರೆ
ಕಲ್ಯಾಣದಲಿ ಅನ್ನದಾನ ಮಾಡುತಿದ್ದುರು
ಅನ್ನದಾನ ಮಾಡುವ ಬಸವಣ್ಣನಾ
ಪುಣ್ಯ ಸ್ನಾನಗಳ ನಾನಾಗಿ ನೋಡಬೇಕು ಎನುತೇಳಿ
ಕುಷ್ಠರೋಗಿಯಾಗಿ ಧರೆಗೆ ದೊಡ್ಡವರು
ಕಲ್ಯಾಣ ಪಟ್ನ ಅಂತ ನೋಡುವಾಗ
ನೋಡಪ್ಪ, ಬಸವಣ್ಣೋರ ಬಾಯಲ್ಲಿ
ಒಂದು ಕೆಟ್ಟಾ ವಾರ್ತೆ ಬತ್ತಂತೆ
ಏನು ಕೆಟ್ಟಾವಾರ್ತೆ ಎಂದರೇ
ಕಲ್ಯಾಣದ ಕಡೆ ಬಾಗುಲಲ್ಲಿ
ಕಟುಗರ ಸಂಗೈಯ್ಯ ಅಂತಕಂತವರು ಒಬ್ಬ ಕಾವಲುಗಾರ

ಅವರು ಸಂಗೈನ ಬಳಿಗೆ ಬರುತಾರ || ಸುವ್ವಾ ಬಾ ||
ಗುರುವೆ ಸಂಗೈನಾ ಬಳಿಗೆ
ಬಂದರು ಬಸವಣ್ಣ

ಅವರು ಸಂಗೈನಿಗೆ ಒಂದು ವಾರ್ತೆ ಹೇಳುತಾರೆ || ಸುವ್ವಾ ಬಾ ||

ಸಂಗೈನ ಬಳಿಗೆ ಬಂದು ಬಸವಣ್ಣ
ಈಗಲೀಗಾ ಚಕ್ಕುರುದಾ ಕೋಲು
ಬಲಗೈಲಿ ಹಿಡುಕಂಡು
ಕಡೆ ಬಾಗುಲಲಿ ಕಟುಗರ ಸಂಗಯ್ಯ
ಕಾದುನಿಂತವರೇ
ಆ ಸಂಗೈನ ಬಳಿಗೆ
ಬಸವಣ್ಣನವರು ಬಂದು ಒಂದು ಮಾತು ಹೇಳುತವರೆ
ಏನ್ರಪ್ಪ ಕಟುಗರ ಸಂಗಯ್ಯ
ಈಗ ಕಲ್ಯಾಣದಲಿ ಬೋಜನಕ್ಕೆ ಟೈಮಾಯ್ತು ಕನ್ರೊ
ಈಗ ಬೋಜಣಕೆ ಎಲ್ಲಾ ಶಿವಶರಣ ಮಾತುಮುರು ಬರ್ತಾರೆ
ಬಂದವರ ಬಂದಾಗೆ ಬಿಟ್ಟು ಬಿಟ್ರೆ
ಕುಷ್ಟ ಕಾಯಿಲೆ ಇರೋರು ಬರುತಾರೆ
ರೋಗ ಉಳ್ಳಾದವರೂ ಕೂಡಾ ಬರುತ್ತಾರೆ
ಅನ್ನ ಊಟ ಮಾಡಬೇಕು ಅನ್ನುವ ಆಸೆಗೆ
ಕಲ್ಯಾಣಕೆ ಬಂದುಬುಡ್ತಾರೆ ಕನ್ರಪ್ಪ
ಈ ರೋಗ ಉಳ್ಳಾದವರು
ಕುಷ್ಠ ಉಳ್ಳಾದವರು
ಕಾಯಿಲೆ ಉಳ್ಳಾದವರು
ನಮ್ಮ ಕಲ್ಯಾಣಕೆ ಬರುವುದೇ ಸತ್ಯ
ಬಂದಂತಹ ಶಿವಶರಣ ಮಾತುಮರು
ಕಾಯಿಲೇ ಕಷ್ಟದವರು
ಒಂಬತ್ತು ಜನಾ ಬಂದೆರೇ
ಸುಕಾವಾಗಿರ್ತಕಂತಹ
ಪುಣ್ಯವುಳ್ಳಾದವರು
ನೂರುಜನ ಬರ್ತಾರೆ ಕನ್ರಪ್ಪ
ಆ ಒಳ್ಳೆ ಶುಭವಾಗಿ ಬರ್ತಕ್ಕಂತಹ ಶರಣ್ರ ಜೊತೆ ಒಳಗೆ
ಈ ಕೊಳಕು ಜಂಗಮರ ಒಬ್ಬರ ಬುಡಬ್ಯಾಡಿ
ಅಂದಚಂದಾವುಳ್ಳಾದವರು ಬಂದುಬುಟ್ರೆ
ಮೊದಲನೆ ಊಟಕೆ ಬುಟ್ಟುಬುಡು
ಏನಾರೂ ಕಷ್ಟ ಕಾಯಿಲೆಯವರು ಬಂದುದಾದರೆ
ಅವರು ಊಟವಾಗಗಂಟ
ಕಡೇ ಬಾಗ್ಲಲ್ಲಿ ಇಲ್ಲೆ ಕಾಯಿಸು

ಎರಡನೇ ಊಟಕೆ ಕಂದಾ ಅವರ
ಕಲ್ಯಾಣಕೆ ಬುಡು ಮಗನೆ || ಸಿದ್ಧಯ್ಯ ||