ಈ ಕರಿಯೆಲೆ ರಾಚಪ್ಪಜಿಯವರ
ನನಗೆ ಶಿಷ್ಯನಾಗಿ ಕಳುಗು
ಮಗನಾಗಿ ಕಳುಗಪ್ಪ
ಕಲ್ಯಾಣದ ಬಸವಣ್ಣ ಎಂದರು
ಆಡಿದಂಥ ಮಾತುಕೇಳಿ ಬಸವಣ್ಣ
ಕೇಳಿ ಜಗತ್ತು ಗುರುವೇ
ಜ್ಯೋತಿ ಲಿಂಗಪ್ಪ
ಈ ಕರಿಯೆಲೆ ರಾಚಪ್ಪಾಜಿಯವರು
ನಿಮಗೆ ಶಿಶುಮಗನಾಗಿ ನಾನು ಕಳುಗಬೇಕೆ ದೇವ
ಆಗಲೀ ಗುರುವು

ಒಪ್ಪೀದೆ ಗುರುವು
ರಾಚಪ್ಪಾಜಿಯವರ ಶಿಶುಮಗನಾಗಿ ಗುರುವು
ಮಾಡತೀವಿ ಅನುತ್ಹೇಳಿ
ನನ್ನ ಕಲ್ಯಾಣದ ಬಸವಣ್ಣನವರು ನುಡಿದಾರು || ಸುವ್ವಾ ಬಾ ಚನ್ನ ||

ಈಗಲೀಗ ಗುರುದೇವಾ
ಇಂಥಾ ಕರಿಯೆಲೆ ರಾಚಪ್ಪಾಜಿಯವರ
ನಿಮಗೆ ಭಕುತನ ಮಾಡ್ತೀವಿ ಸ್ವಾಮಿ
ನಿಮಗೆ ಶಿಷ್ಯನ ಮಾಡ್ತೀನಿ ಅಂತ್ಹೇಳಿ
ಆ ಕರಿಯೆಲೆ ರಾಚಪ್ಪಾಜಿಯವರ ಕರೆದು
ಕಲ್ಯಾಣದ ಬಸವಣ್ಣನವರು
ಕೇಳಪ್ಪ ನನ್ನ ಕಂದ
ಆದಿ ಕಲ್ಯಾಣದಲ್ಲಿ ರಾಚಪ್ಪಾಜಿ
ನನಗೆ ಶರಣನಾಗಿ ನನಗೆ ಶಿಶುಮಗನಾಗಿದ್ದೆ ಕಂದ
ಇವತ್ತು ಕಲ್ಯಾಣದಿಂದ ಕಂದ
ಈ ಜ್ಯೋತಿ ತಂದಂಥ ಜ್ಯೋತಿ ಲಿಂಗಯ್ಯ
ಈ ಜಗತ್ತು ಗುರುಗಳಿಗೆ ಶಿಶುಮಗನಾಗಿ
ಇವರ ವಂದಿಗೆ ಹೋಗಿ

ಕಂದ ಆಸ್ತಿಪನಾಗಿ ಐಶುವಂತಿಗನಾಗಿ
ಈ ಧರೆಗೆ ದೊಡ್ಡವರಿಗೆ ಮಗನಾಗಿ || ಸುವ್ವಾ ಬಾ ಚನ್ನ ||

ಇಂಥಾ ಧರೆಗೆ ದೊಡ್ಡವರು
ಮಂಟೇದ ಲಿಂಗಯ್ಯನಿಗೆ
ಮಗನಾಗಿ ಕಂದ
ಇವರ ಒಂದ್ಗೂಡಿ ಕಂದ ಬದುಕಯ್ಯಾs || ಸುವ್ವಾ ಬಾ ಚನ್ನ ||

ಅಯ್ಯಾ ಕೈಹಿಡಿದು ದೇವಾ
ಕಲ್ಯಾಣದ ಬಸವಣ್ಣ
ನೀವು ಕೇಳಿದಂಥ ಗುರುವು
ಮಗನು ನನ್ನ ಗುರುವು
ನಿಮಗೆ ಶಿಷ್ಯನಾಗಿ ಶಿಶುಮಗನಾಗಿ
ನಾ ಕೊಡುತೀನಿ ಅನುತೇಳಿ
ರಾಚಪ್ಪಾಜಿಯವರ ಕೈಯ್ಯ ಹಿಡಿದು ಗುರುವು
ನನ್ನ ಧರೆಗೆ ದೊಡ್ಡವರಿಗೆ ಕೊಡುತಾರೆ || ಸುವ್ವಾ ಬಾ ಚನ್ನ ||

ಆದಿ ಕಲ್ಯಾಣದಲ್ಲಿ ಪರಂಜ್ಯೋತಿ ಪಾವನ ಮೂರುತಿ
ಬಸವಣ್ಣನ ದುಡ ನೋಡಿ
ನೀಲಮ್ಮನವರ ಪತಿವ್ರತವನ್ನ ನೋಡಿ
ಆ ಕಲ್ಯಾಣದಲ್ಲಿರತಕ್ಕಂಥ ಸಾಧು ಸತ್ಪುರುಷರ ದುಡ ನೋಡ್ಕಂಡು
ಭಕ್ತಿಗೆ ಮೆಚ್ಚಿ
ಆ ಕಲ್ಯಾಣಕ್ಕೆ ಬೇಡಿದಂಥ ವರಾಕೊಟ್ಬುಟ್ಟು ಪರಂಜ್ಯೋತಿಯವ್ರು
ಕರಿಎಲೆ ರಾಚಪ್ಪಾಜಿಯವರುಶಿಶುಮಗನ ಮಾಡಿಕೊಂಡು
ಗುರುವೇ ರಾಚಪ್ಪಾಜಿಯವರ
ಗುರುವೇ ವಂದಿಗೆ ಕರಕೊಂಡು
ನನ್ನ ಪರಂಜ್ಯೋತಿಯವರು ಬರುತಾರೆss || ಸುವ್ವಾ ಬಾ ಚನ್ನ ||

ರಾಚಪ್ಪಾಜಿಯವರ ಕಂದಾs
ಬಾರಪ್ಪ ನನ್ನ ಕಂದ ಬಪ್ಪ ಶಿಶುಮಗನೆ ಎನುತೇಳಿ
ಆ ರಾಚಪ್ಪಾಜಿಯವರ ಸ್ವಾಮಿಯವರು
ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಕೈಯ್ಯನ ಇಡಕೊಂಡು ಗುರುವು
ಕಲ್ಯಾಣ ಬಿಟ್ಟುಬಿಟ್ಟು
ಕಡೇ ಬಾಗಿಲಿಗೆ ಬಂದರಂತೆ
ಕಲ್ಯಾಣ ಪಟ್ಟಣದ ಕಡೇ ಕೈಲಾಸದ ಬಾಗಿಲಲ್ಲಿ

ಅಯ್ಯ ಅಲ್ಲೊಬ್ಬ ಶರಣ
ಅಲ್ಲೊಬ್ಬ ಭಕುತ ಅಲ್ಲೊಬ್ಬ ಗುರುವು
ಶಿವಶರಣದೇವ ಅಲ್ಲಿ ತಾನಾಗಿ ಗುರುವೇ ಕುಳಿತಾರು || ಸುವ್ವಾ ಬಾ ಚನ್ನ ||

ಕಡೇ ಕೈಲಾಸದ
ಕಡೇ ಬಾಗಿಲಲ್ಲಿ ಗುರುವು
ಬಾಚಿ ಬಸವಯ್ಯ
ಈಗಲೀಗ ಕಡೇ ಕೈಲಾಸ್ದ ಬಾಗಿಲಲ್ಲಿ
ಮರಳಿನಲ್ಲಿ ಲಿಂಗ ಮಾಡಿಕೊಂಡು
ಈ ಮರಳು ಲಿಂಗವೇ ದೇವರು ಅಂತ್ಹೇಳಿ
ಆಗಲೀಗ ಕೈಯೆತ್ತಿ ಮುಗಿದು
ಹಾಸಿ ಅಡ್ಡಬೀಳ್ತಿದ್ದಂಥ
ಬಾಚಿ ಕೈ ಬಸವೇಶ್ವರನ ಕಣ್ಣಿಂದ ನೋಡ್ತಾ
ರಾಚಪ್ಪಾಜಿಯವರ ವಂದಿಗೆ ಕರಕೊಂಡು

ನನ್ನ ಧರೆಗೆ ದೊಡ್ಡವರು ಬರುತಾರೇs || ಸುವ್ವಾ ಬಾ ಚನ್ನ ||

ಗುರುವೇ ಧರೆಗೆ ದೊಡ್ಡವರು
ಗುರುವೇ ಗುರುದೇವ
ಅಯ್ಯಾ ಮರಳು ಲಿಂಗಾವ
ಕಣ್ಣಾರು ನೋಡವ್ರೆ
ಗುರುವೇ ಶಿವಪೂಜೆ ಮಾಡುವ
ಮಗನನ್ನೋ ನೋಡವ್ರೆ
ಅವರು ಬಾಳ ಯೋಚ್ನೆಯ ಸ್ವಾಮಿ ಪಡುತಾರೆss || ಸುವ್ವಾ ಬಾ ಚನ್ನ ||

ಬಾಚಿ ಕೈಯ ಬಸವಯ್ಯನ ದೇವಾs
ಕಣ್ಣಾರ ನೋಡ್ಕಂಡು ಜಗತ್ಗುರು ಧರೆಗೆ ದೊಡ್ಡಯ್ಯ
ಆ ಮಾಡಿಕೊಂಡಿರತಕ್ಕಂಥ ಮರಳು ಲಿಂಗಾನೆ ಕಣ್ಣಿಂದ ನೋಡ್ತ

ರಾಚಪ್ಪಾಜಿಯವರ ಬಲದಲ್ಲಿ ನಿಲ್ಲಿಸ್ಕಂಡು
ಅರಗಳಿಗೆ ನಿಂತು ಯೋಚ್ನೆ ಮಾಡಿ ನೋಡ್ತಿದ್ರಂತೆ
ಯಾರು? ಧರೆಗೆ ದೊಡ್ಡವರು
ಈ ಬಾಚಿ ಕೈ ಬಸವಯ್ಯ
ಇದೇ ದೊಡ್ಡದೇವರು
ಇದೆಯೇ ಶಿವಲಿಂಗ
ನನಗೆ ವರಕೊಡಪ್ಪ ನನಗೆ ವರಕೊಡೊ ಗುರುವೇ ಎನುತೇಳಿ

ಹಾಸಿ ಅಡ್ಡಬಿದ್ದು ಕರವೆತ್ತಿ ಕೈ ಮುಗಿಯುವಾಗ
ಕಣ್ಣಿಂದ ನೋಡ್ಕಂಡ್ರು ಮಾಗುರು ಮಂಟೇದಸ್ವಾಮಿ

ಗುರುವೇ ಶಿವಪೂಜೆ ಮಾಡುವ
ಗುರುವೇ ಶಿಶುಮಗನ ಗುರುವು
ಕಣ್ಣಾರ ನೋಡುತ
ನನ್ನ ಪರಂಜ್ಯೋತಿಯವರು ಬರುತಾರೆs || ಸುವ್ವಾ ಬಾ ||

ಅಯ್ಯ ಕೈಯೆತ್ತಿ ಮುಗಿತಾನೆ
ಆರುಸತಿ ಅಡ್ಡಬೀಳ್ತನೆ ನನ್ನ ಗುರುವು
ಅಯ್ಯಮರಳು ಲಿಂಗಾದಲ್ಲಿ ಬೇಡುತಾನೆss || ಸುವ್ವಾ ಬಾ ಚನ್ನ ||

ನೋಡಿದೇಯಾ ಆದಿಕಲ್ಯಾಣದಲ್ಲಿ ಕತೃ ಬಸವಣ್ಣನವರು
ಜಾತಿಗೊಂದು ಬಗೆಯ ಪುಷ್ಪ ತಂದು
ಪಾದ ಪೂಜೆ ಮಾಡಿ
ಮಂಗಳಾರತಿ ಬೆಳಗುದ್ರು ಯಾರು
ಅಷ್ಟು ಕೋಟಿಶರಣಮಾತ್ಮುರು ಬಸವಣ್ಣನವರು
ಈ ಶಿಶುಮಗ ಕಡೇ ಕೈಲಾಸ್ದ ಬಾಗಿಲಲ್ಲಿ ಕೂತ್ಕಂಡು
ಬಸವಣ್ಣನವರು ಅಷ್ಟು ಮಂದಿಗೆ ಲಿಂಗ ಕಟ್ಕೊಂಡು ಬಾಳಿ ಬದುಕುತ್ತಿದ್ರೆ
ಈ ಕಡೇ ಕಲ್ಯಾಣದಲ್ಲಿ ಮರಳುಲಿಂಗ ಮಾಡಿಕೊಂಡು
ಹಣ್ಣಿಲ್ಲ ಕಾಯಿಲ್ಲ ಪುಸುಮಾವೇ ಒಂದಿಲ್ಲ
ಬರೀ ಮರಳು ಲಿಂಗಕ್ಕೆ ಕೈ ಮುಗಿದು ಅಡ್ಡಬಿದ್ದು
ವರ ಕೊಡು ಅಂತ ಕೇಳ್ತಾವ್ನಲ್ಲ
ಇವನು ಎಂಥಾ ಶಿಶುಮಗನು ಆಗಬಹುದು ಎನುತೇಳಿ
ಮರಳು ಲಿಂಗ ಪೂಜೆ ಮಾಡುವಂಥ
ಮಗನ ಬಳಿಗೆ
ಪರಂಜ್ಯೋತಿ ಪಾವನ ಮೂರುತಿ
ಅಲ್ಲಮಾಪ್ರಭು ಮಂಟೇದಲಿಂಗಪ್ಪ
ಈ ಮಗನ ದುಡ ನೋಡ್ಬೇಕು ಈ ಮಗನ ಸತ್ಯ ನೋಡ್ಬೇಕು
ಇಲ್ಲಿ ಕೈಯೆತ್ತಿ ಮುಗಿದು ಅಡ್ಡ ಬೀಳುವಂಥ ಮಗನ
ದುಡ ಪಡಿಸಲುಈಗಲೀಗ ಪರೀಕ್ಷೆ ಮಾಡಬೇಕಂತ್ಹೇಳಿ

ಧರೆಗೆ ದೊಡ್ಡವರು ಕಣ್ಣಿಂದ ನೋಡುತ್ತಾ
ಆ ಬಸುವಲಿಂಗಯ್ಯವರ ಎಡಭಾಗದಲ್ಲಿ ಹೋಯ್ತಿದ್ರು
ಹೋಗುವಂಥ ಧರೆಗೆ ದೊಡ್ಡವ್ರ ಕಣ್ಣಿಂದ ನೋಡ್ತಾ
ಈಗಲೀಗ ಮಾಡುವಂಥ ಶಿವಲಿಂಗನೇ ಬಿಟ್ಟು
ಹೋಗುವಂಥ ಧರೆಗೆ ದೊಡ್ಡವರ ಪಾದ ಹಿಡಿಕೊಂಡು
ಯಾರು? ಬಸವಲಿಂಗಯ್ಯ

ಓಡಿ ಬಂದು ಸ್ವಾಮಿಯ ಪಾಪ
ತಾನಾಗೆ ಹಿಡಕೊಂಡು
ಕರವೆತ್ತಿ ಕೈಮುಗಿದು
ಗುರುವೇ ಗುರುದೇವ
ಅವರು ಮತ್ತೇನ ಗುರುವು ನುಡಿದಾರು || ಸುವ್ವಾ ಬಾ ಚನ್ನ ||

ಧರೆಗೆ ದೊಡ್ಡವರ ಪಾದವ ಸ್ವಾಮಿ
ತಾನಾಗಿ ಹಿಡಕೊಂಡು
ಬಸವಲಿಂಗಯ್ಯನವರು
ಸ್ವಾಮಿ ನೀವು ಯಾರಪ್ಪ
ತಾವು ಯಾರು ಗುರುದೇವಾ
ಈ ಮಹಾನುಭಾವನ ಕರಕೊಂಡು ಎಲ್ಲಿಗೆ ಪಯಣ ಮಾಡ್ತಾಯಿದ್ದಿರಿ
ಈಗಲೀಗ ನಾನೂ ನಿಮ್ಮ ಜೊತೇಲಿ ಬರುತೇನಿ
ನಿಮಗೆ ಶಿಶುಮಗನಾಯ್ತೀನಿ ಸ್ವಾಮಿ
ನಿಮಗೆ ಭಕುತನಾಯ್ತಿನಿ ತಂದೆ
ನಿಮಗೆ ನಾನು ಮಗನಾಯ್ತಿನಿ
ನನ್ನ ಕರಕಂಡು ನಡೀರಿ ಸ್ವಾಮಿ ನಾನು ಬರ್ತೀನಿ ಎಂದರು
ಶಹಭಾಷ್ ನನ ಕಂದ ಶಹಬಾಷ್ ಮಗನೇ
ಬಸುಲಿಂಗಯ್ಯ ಈಗ ನಾನು ಉತ್ತರಕಾಂಡವನ್ನು ಬುಟ್ಬುಟ್ಟು
ಕಲ್ಯಾಣಕ್ಕೋಗ್ಬುಟ್ಟು ಕಲ್ಯಾಣದಲ್ಲಿ ಬಸವಣ್ಣನವರ ದುಡಾನೋಡ್ಬುಟ್ಟು
ಅಲ್ಲಿರತಕ್ಕಂಥ ಸತ್ಯ ಶರಣಮಾತ್ಮರ ಭಕ್ತಿ ನೋಡ್ಬುಟ್ಟು
ಈ ಕರಿಯೆಲೆ ರಾಚಪ್ಪಾಜಿಯವರ ಶಿಶುಮಗನ ಮಾಡಿಕೊಂಡು
ಈಗ ನಾನು ಹೊಯ್ತಾಯಿವ್ನಿ ಕಂದ
ಈ ಹೋಗೋ ಮಾರ್ಗದಲ್ಲಿ ಬಂದು ನನ್ನ ಪಾದ ಹಿಡ್ಕೊಂಡು
ನನ್ನನ್ನೂ ಕರಕೊಂಡು ನಡೀರಿ ಗುರುವು
ಮಗನಾಯ್ತಿದ್ದೀನಿ ಅಂತ ಬಂದಿದ್ದೀಯಲ್ಲೋ ಕಂದ
ಕಂದ ಈ ಜಲ್ಮಕ್ಕೆ ನೋಡಿದ್ರೆ
ಆರು ಸರತಿ ಹುಟ್ಟಿ ಆರು ಸರತಿ ಬಾಳಿಬದುಕಿ
ಆರು ಜಲುಮ ಹೆತ್ತು ಬಂದಿದ್ರು-ಕೂಡ ಕಂದ
ನೀನು ಮಾಡಿರತಕ್ಕಂಥ ಪಾಪ ಕರ್ಮ ಇನ್ನೂ ಕಳಿದಿಲ್ಲ ಕನಪ್ಪ
ಈ ಆರನೇ ಜಲ್ಮದಲ್ಲಿ ಮಗನೇ
ಮರಳುಲಿಂಗದ ಮುಂಭಾಗದಲ್ಲಿ ಕೂತ್ಕಂಡು ಮರಳುಲಿಂಗ ಪೂಜೆ ಮಾಡ್ತಿದ್ದೀಯೆ
ಆ ಲಿಂಗಕ್ಕೆ ನಿನಗೆ ಶಿವಪೂಜೆ ಮಾಡ್ತೀನಿ ಅಂದ್ರೆ ಪುಷ್ಮವೇ ಇಲ್ಲ
ಈಗ ಪುಷ್ಮಾ ಇಲ್ದಿದ್ದ ಮರಳು ಲಿಂಗಕ್ಕೆ ಶಿವಪೂಜೆ ಮಾಡ್ಕಂಡು
ಈ ಲಿಂಗದ ಮುಂಭಾಗದಲ್ಲೆ ಕರ್ಮ ಪಾಪ ಎಲ್ಲಾನೂ ಕಳೆದ್ಬುಡು

ಈಗಲೀಗ ನನ್ನ ಕಂದ
ನಾಳೆ ಬರುವಂಥ ಏಳನೇ ಜಲ್ಮ ಎತ್ತಿ ಬರುವಾಗ ಮಗನೇ
ನಿನ್ನ ಕರ್ಮ ಪಾಪ ಎಲ್ಲಾ ತೀರೋಯ್ತದೆ
ಏಳನೇ ಜಲ್ಮ ಎತ್ತಿ ಬರುವಾಗ
ಬಾಚಿ ಬಸವಯ್ನ ಗರ್ಭಕ್ಕೆ ನಿನ್ನ ಹಾಕ್ತೀನಿ
ಮುದ್ದಮ್ನ ಹೊಟ್ಟೇಗೆ ನಿನ್ನ ಕೂಡ್ತೀನಿ ಕಂದ
ಈಗ ಬಸುವಲಿಂಗಯ್ನಾಗಿದ್ದೀಯೆ
ನಾಳೆ ಏಳಾ ಜಲ್ಮ ಎತ್ತಿ ಹುಟ್ಟುವಾಗ
ಈಗ ಕಿರಿಕೆಂಪಾಚಾರಿಯಾಗಿ ಹುಟ್ಟಪ್ಪ
ನೀನು ಹುಟ್ಟಿದ ಏಳೇ ವರ್ಷಕ್ಕೆ ನಾನೇ ಬರತೀನಿ ಕಂದ
ನಾನೆ ಬಂದು ನಿನ್ನ ಮಗನ ಮಾಡ್ಕತೀನಿ
ಈ ಜಲ್ಮದಲ್ಲಿ ನಿನ್ನ ಕರ್ಮ ಕಳ್ಕೊಬುಡು ಅಂತ್ಹೇಳಿ
ಆ ಕಲ್ಯಾಣದ ಕಡೇ ಬಾಗಿಲಲ್ಲಿ
ಬಸುಲಿಂಗಯ್ನೆ ಬಿಟ್ಟು ಬಿಟ್ಟು

ಅವರು ಒಬ್ಬಾರೆ ಸ್ವಾಮಿ ಬರುತಾರೆ || ಸುವ್ವಾ ಬಾ ಚನ್ನ ||

ಪಾಪ ಈವತ್ತಿನ ದಿವ್ಸದಲ್ಲಿ
ಯಾರೊ ಮಹಾಮುನಿಗಳು ಯಾರೋ ಸಿಕ್ಕಿದ್ರು
ಈಗ ನಾಳೆ ಆರು ಜಲ್ಮ ಎತ್ತಿದ್ರೂ ಕರ್ಮ ತೀರಿನಲ್ಲ
ಏಳನೇ ಜಲ್ಮಕ್ಕೆ ಮಗ್ನ ಮಾಡ್ಕತೀನಿ ಅಂದ್ಬುಟ್ಟು
ಈ ಕಲ್ಯಾಣದ ಕಡೇ ಬಾಗ್ಲಲ್ಲಿ ಬಿಟ್ಬುಟ್ಟು ಹೊರಟೋದ್ರಲ್ಲ ಅಂತ್ಹೇಳಿ
ಆ ಬಸುಲಿಂಗಯ್ನವರು
ಅರವತ್ತಾರು ಟೈಮು ಮೂವತ್ತು ಮೂರು ಗಳಿಗೇಲೂ ಕೂಡ
ಮರಳು ಲಿಂಗದ ಪೂಜೆ ಮಾಡ್ಕಂಡು
ಕಡೇ ಕೈಲಾಸದ ಬಾಗಿಲಲ್ಲಿ ವಾಸ ಮಾಡ್ತಿದ್ದರಂತೆ
ರಾಚಪ್ಪಾಜಿಯವರು ಕರಕೊಂಡು ದೇವಾss
ಆದಿಕಲ್ಯಾಣ ಬಿಟ್ಟು ಬಿಟ್ಟು ಗುರುವು
ಧರೆಗೆ ದೊಡ್ಡವರು ಮಂಟೇದ ಲಿಂಗಪ್ಪ

ಅವರು ತಾವಾಗೆ ಸ್ವಾಮಿ ಬರುತಾರೆ || ಸುವ್ವಾ ಬಾ ಚನ್ನ ||

ಗುರುವೇ ತಾವಾಗೆದೇವ ಬರುತಾರೆ || ಸುವ್ವಾ ಬಾ ಚನ್ನ ||

ತಾವಾಗೆ ಬಂದು ಜಗತ್ತು ಗುರು ಧರೆಗೆ ದೊಡ್ಡವರು ಮಂಟೇದ ಲಿಂಗಯ್ಯ
ರಾಚಪ್ಪಾಜಿ ಬಲದಲ್ಲಿ ನಿಲ್ಲಿಸ್ಕಂಡು
ಕಲ್ಯಾಣ ಬಿಟ್ಟು ಹೊರಗಡೆ ಬಂದು

ಈಗ ಎಲ್ಲಿಂದ ಎಲ್ಲಿಗೆ ನಾನು ಹೋಗಬೇಕು ಎಂದರಂತೆ || ಸಿದ್ಧಯ್ಯಾ ||

ಅಯ್ಯಾ ರಾಚಪ್ಪಾಜಿಯವರ
ಕಟ್ಟುಕೊಂಡು ನನ್ನ ಗುರುವು
ಈಗ ಎಲ್ಲಿಗೆ ಹೋಗಬೇಕು
ಯಾತಕ್ಕೆ ಹೋಗಬೇಕು
ಹಾಗಂದು ಗುರುವು
ಧರೆಗೆ ದೊಡ್ಡಯ್ಯ
ಅವರು ಬಾಳ ಚಿಂತೆ ಮಾಡುತಾರೆ
ಎತ್ತಯ್ಯ ಪರಂಜೋತಿ || ಸಿದ್ಧಯ್ಯ ||

ಈಗಲೀಗ ಗುರುದೇವಾ ss
ನಾನು ಎಲ್ಲಿಂದ ಯಾತಾವುಕೆ ಹೋಗಬೇಕು ಎನುತೇಳಿ
ಪರಂಜ್ಯೋತಿ ಪಾವನಮೂರ್ತಿಯವರು
ರಾಚಪ್ಪಾಜಿ ಶಿಶುಮಗನ ಮಾಡಿಕೊಂಡು
ಕಲ್ಯಾಣದ ಬೀದಿಬುಟ್ಟು ಕಲ್ಯಾಣದ ಪಟ್ಟಣದ ಮೇಲೆ ಕಡದು
ರಾಚಪ್ಪಾಜಿ ವಂದಿಗೆ ಕರಕೊಂಡು
ಹೊನ್ನರಳಿ ಮರ ಕಣ್ಣಾರೆ ನೋಡುತ್ತಾ
ಈ ಹೊನ್ನರಳಿ ಮರದಡಿಗೆ
ನಾನು ಅರ್ಧಗಳಿಗೆ ಗುರುವು
ಪಾವಾಡಿಸಬೇಕು ಅನುತೇಳಿ

ನನ್ನ ಧರೆಗೆ ದೊಡ್ಡವು
ಮಂಟೇದ ಲಿಂಗಪ್ಪ
ಗುರುವೇ ತಾವೇ ದಯೆ ಮಾಡಿಕೊಂಡು
ನನ್ನ ಗುರುವು ನನ್ನ ಮಂಟೇದ ಲಿಂಗಯ್ಯ
ನನ್ನ ಮಾಯ್ಕಾರದ ಒಡೆಯ
ನನ್ನ ಪರಂಜ್ಯೋತಿಯವರು
ಗುರುವೇ ಹೊನ್ನರಳಿ ದೇವ
ಮರವನಳಿ ನೋಡಿ
ಅರಳೀಕಟ್ಟೆ ಜಗಲೀಗೆ ಓಡಿ ಓಡಿ ಬಂದು
ಅವರು ನವಿಲುಗರಿ ಸಂದಿಯಾವೊಳಗೆ
ಅರಳಿಕಟ್ಟೆ ಜಗುಲಿ
ದುಂಬು ಧೂಳ ದೇವ
ಹೊಡೆದವರೇ ನನ್ನಪ್ಪ
ಅವರು ಹುಲಿಯ ಚರ್ಮ ಹಾಸಿಕೊಂಡ್ರು
ಅವರು ಹರಡಿದರು ಊಬತ್ತಿಗಟ್ಟಿ
ಅವರು ಹುಲಿಯ ಚರ್ಮ ದೇವ
ಹಾಸುಕೊಂಡು ನನ್ನ ಗುರುವು
ಗುರುವೇ ಹುಲ್ಲೆ ಚರ್ಮ ದೇವ
ಹೊದ್ದುಕೊಂಡು ನನ್ನಪ್ಪ
ಅವರು ನವಿಲುಗರಿ ಗೊಂದಿಯಾ
ಎಳೆಯ ಬೇವಿನ ಮರಕೆ ಒರಗಿಸ್ಬುಟ್ಟು
ಅವರು ನಿಶಾನಿದ್ದೆಳಾದ ಗುರುವೇ
ಹೊನ್ನರಳಿ ಮರದ ಮೇಲಕ್ಕೆ ಏರಿಸಿಬುಟ್ಟು
ಭೂಮಿ ತೂಕದ ಗುಳಿಗೆ ತಕ್ಕಂಡು ನನ್ನ ಗುರುವು
ತಲೆಗೆ ದಿಂಬನ್ನೇ ಮಾಡ್ಕಂಡು ನನ್ನಪ್ಪ
ಅವರು ಅರಳಿಕಟ್ಟೆ ಮೇಲೆ ಮೋರ್ತ ಮಾಡುತಾರೆ || ಸುವ್ವಾ ಬಾ ಚನ್ನ ||

ಅರಳೀ ಕಟ್ಟ ಜಗಲೀಮ್ಯಾಲೆ ದೇವ
ಮೋರ್ತುವಾಗಿ ಮಾಗುರು ಮಂಟೇದಲಿಂಗಪ್ಪ ಪರಂಜ್ಯೋತಿಯವರು
ಕಂದ ರಾಚಪ್ಪಾಜಿ,
ಅರಳೀಕಟ್ಟೆ ಜಗಲೀಮ್ಯಾಲೆ ಅರ್ಧಗಳಿಗೆ ಕಂದ
ಪವಾಡಿಸಿ ನಿದ್ರೆ ಮಾಡ್ತೀನಿ ಕಂದ
ನಾನು ನಿದ್ರೆ ಮಾಡುವಾಗ ಕಂದ
ಆಯಾಸ ನಿನಗೆ ಉಂಟಾದರೆ
ಮೂಡುಲಾಗಿ ಹೋಗು ಕಂದ
ಆಯಾಸ ಉಂಟಾಗ್ಬುಟ್ರೆ ಕಂದ
ಆಗಲೀಗ ಪೂರ್ವ್‌ಕ್ಕೆ ಹೋಗಪ್ಪ
ಈಗಲೀಗ ಕಂದ ಪಶ್ಚಿಮಕ್ಕೆ ಹೋಗುಕಂದ
ದಕ್ಷಿಣ ದಿಕ್ಕಿಗೆ ಮಾತ್ರ ಹೋಗಬೇಡ ಕನಪ್ಪ ಅಂತ್ಹೇಳಿ
ಯಾತಕ್ಕೆ ಅಂದ್ರೆ ಕಂದ
ಮೂರು ದಿಕ್ಕು ಬಿಟ್ಟು ಒಂದು ದಿಕ್ಕಿಗೆ ನೀನು ಹೋದದ್ದೇ ಹೌದಾದರೆ
ನಿನಗೆ ಕಷ್ಟ ಬರ್ತದೆ ಕಂದಾ ಸುಖ ದೊರೆಯೋದಿಲ್ಲ
ಈಗಲೀಗ ಮೂರುದಿಕ್ಕಿಗೆ ಹೋಗು ಕಂದ
ಈ ದಿಕ್ಕಿಗೆ  ಹೋಗುಬ್ಯಾಡ ಎನುತೇಳಿ
ಅರಳೀಕಟ್ಟೆ ಜಗಲೀಮ್ಯಾಲೆ ಗುರುವು
ಒರಗಿದಂತಃ ಕಾಲದಲ್ಲಿ ಗುರುದೇವ
ಇಂಥ ರಾಚಪ್ಪಾಜಿಯವರು ಧರೆಗೆ ದೊಡ್ಡವರ ತಲೆದೆಸೆ
ನಮ್ಮ ಗುರುಗಳು ಭೋಗದಲ್ಲಿ ನಿದ್ರೆ ಮಾಡುತಾವ್ರೆ
ಅವರಿಗೆ ನಿದ್ರೆ ಭಂಗ ಮಾಡುಬಾರ್ದು ಅನುತೇಳಿ
ಧರೆಗೆ ದೊಡ್ಡವರ ತೆಲೆದೆಸೆ ಗುರುವು

ಅವರು ಕೂತು ಯೋಚನೆಯ ಮಾಡುತಾರೆ || ಸುವ್ವಾ ಬಾ ಚೆನ್ನ ||
ಅವರು ಕುಂತು ಯೋಚನೆಯ ಪಡುತಾರೆ || ಸುವ್ವಾ ಬಾ ಚೆನ್ನ ||

ಕುಂತು ಯಾಚನೆ ಮಾಡ್ಕಂಡು ನನ್ನಪ್ಪ
ನಮ್ಮ ಜಗತ್ತು ಗುರುಗಳು
ಮೂಡ್ಲಾಗ್ಹೋಗು ಪಡುಲಾಗ್ಹೋಗು
ಬಡಗಲಾಗೋಗಪ್ಪ ತೆಂಕಲಾಗೋಗಬ್ಯಾಡ ಅಂದ್ರಲ್ಲ ಯಾತಕ್ಕೆ?
ಅಲ್ಲಿ ಏನೇನು ವಿಷಯ ಇರಬಹುದು
ಅಲ್ಲಿ ಏನೇನು ವಾರ್ತೆ ಇರಬಹುದು
ಈಗ ನಮ್ಮ ಗುರುಗಳು ನಿದ್ರೆ ಬಂದು ಮಲಗಿರುವಂತೆ ಕಾಲ್ದಲ್ಲಿ
ನಾನೆ ಹೋಗಬೇಕಲ್ಲ
ಅಲ್ಲಿರ್ತಕ್ಕ ವಾರ್ತೆ
ನನ್ನ ಕಣ್ಣಾರೆ ನೋಡಿ ಬರಬೇಕು
ಹಾಗಂದು ರಾಚಪ್ಪಾಜಿವರು
ನಿದ್ರೆ ಮಾಡುವಂಥ ಜಗತ್ತು ಗುರುಗಳ ನೋಡಿ
ನಮದಲ್ಲಿ ಯೋಚನೆ ಮಾಡಿಕೊಂಡು
ಮನಸಲ್ಲಿ ಕೊರತೆ ಮಾಡಕೊಂಡು
ಈಗ ಅದೇ ದಿಕ್ಕಿಗೆ ಹೋಗ್ಬುಟ್ಟು ಬರಬೇಕಂತ್ಹೇಳಿ

ಅವರು ಹೇಳದೆ ಕೇಳದೆ
ನನ್ನ ದುಡುವುಳ್ಳ ರಾಚಪ್ಪಾಜಿ
ನನ್ನ ಧರೆಗೆ ದೊಡ್ಡವರ
ಪಾದವ ಬಿಟ್ಟಿಬಿಟ್ಟು
ನನ್ನ ಮಂಟೇದ ಲಿಂಗಪ್ಪನವರ
ಮೈಮೆಯ ಬಿಟ್ಟಿ ಬಿಟ್ಟು
ಅವರು ತಾವಾಗೆ ಬುರತಾರೆ
ಎತ್ತಯ್ಯ ಪರಂಜೋತಿ || ಸಿದ್ಧಯ್ಯ ||

ಗುರುವೇ ಧರೆಗೆ ದೊಡ್ಡವರೇ
ಮಂಟೇದ ಲಿಂಗಪ್ಪ
ಮಾಯ್ಕಾರದ ಒಡೆಯ
ನನ್ನ ಪರಂಜ್ಯೋತಿ ಪರಬ್ರಹ್ಮ
ನಿಮ್ಮ ಪಾದವೇ ನಮಗೆ ಗತಿ ಎನುತೇಳಿ
ಅವರು ರಾಚಪ್ಪಾಜಿಯವರು
ಗುರುವೇ ಗುರುದೇವ
ಅವರು ತೆಂಕಲಾ ದಿಕ್ಕು ಗಾಣೆ ಬರುತಾರೆ || ಸುವ್ವಾ ಬಾ ಚನ್ನ ||

ತೆಂಕಲ ದಿಕ್ಕುಗಾಣೆ ಗುರುವು
ತಾವಾಗಿ ಬರುತ್ತದ್ದು
ಆಗಲೀಗ ರಾಚಪ್ಪಾಜಿವರಯ
ರಾಚಪ್ಪಾಜಿಯವರು ಬರುವಾಗ
ಅಲ್ಲಿ ಮೋಡಿಕಾರರು ಗುರುವ ಇರುತಾರೆ || ಸುವ್ವಾ ಬಾ ಚನ್ನ ||

ಗುರುವೇ ತೆಂಕಲು ದಿಕ್ಕಿನ ಒಳುಗೇ
ಕಾಲ ಕಳಿಯುವಂಥ
ಅವರು ಮೋಡಿ ಮಸ್ತುಮಕಾರರು
ಎಂದಾರೆ ನನ್ನ ಗುರುವ ಅಯ್ಯಾ ವಿದ್ಯಾಬುದ್ಧಿಕಾರರಲ್ಲಿ
ಬಾಳ ಬುದ್ಧಿ ಉಳ್ಳವರು
ಗುರುವೇ ಮಂತ್ರಕಾರದಲ್ಲಿ
ಬಾಳ ದೊಡ್ಡವರು
ಅಂಥ ಮೋಡಿಕಾರರ ಗುರುವೇ
ಬಳಿಗೆ ನನ್ನ ಗುರುವು
ಕಿಡುಗಣ್ಣ ರಾಚಪ್ಪಾಜಿ
ತಾವಾಗಿ ಸ್ವಾಮಿ ಬರುತಾರೆ || ಸುವ್ವಾ ಬಾ ಚನ್ನ ||

ಮೋಡಿಕಾರರು ದೇವ
ಈಗಲೀಗ ರಣಮೋಡಿಕಾರರು ಗುರುವು
ಆ ದಿಕ್ಕಿನಲ್ಲಿ ಬಾಳಿ ಬದುಕುವಾಗ
ಮೋಡಿ ಮಸ್ತಪಕಾರರು ಅಂತ್ಹೇಳಿ

ನಾಮಕರಣನೇ ಪಡೆದು
ವಿದ್ಯೆದಲ್ಲಿ ಬಹಳ ಬುದ್ಧಿವುಳ್ಳವರು
ಮೋಡಿವೊಳಗೆ ಹೆಸರಾಗಿ ಬಾಳಿ ಬದುಕುತಿರುವರು
ಅಂಥವರ ಬಳಿಗೆ ದೇವ
ಕಿಡುಗಣ್ಣ ರಾಚಪ್ಪಾಜಿಯವರು ಗುರುವು
ಧರೆಗೆ ದೊಡ್ಡವರ
ತಲೆ ದೆಸೆ ಮಡಗಿದ್ದಂಥ
ಮುತ್ತಿನ ಜೋಳಿಗೆ ಮುಂಗೈಗೆ ಆಧಾರಮಾಡಿಕೊಂಡು
ಧರೆಗೆ ದೊಡ್ಡವರ ಜೋಳಿಗೆಯಲ್ಲಿರತಕ್ಕಂಥ
ಮಟ್ಟೀಕಪ್ಪನೇ ತಕ್ಕಂಡು
ಈಬತ್ತಿ ಬಸುವಂಗನೇ ತಕ್ಕೊಂಡು

ಮೋಡಿ ಮಸ್ತಪಗಾರರ ಬಳಿಗೆ ಗುರುವು ಬರುತಾನೆ || ಸುವ್ವಾ ಬಾ ಚನ್ನ ||

ಅಯ್ಯಾ ಧರೆಗೆ ದೊಡ್ಡವರ
ಪಾದವ ನೆನೆಯುತ
ಮಂಟೇದ ಲಿಂಗಪ್ನ
ಮೈಮೇರು ತಿಳಿಯುತ
ಗುರುವೇ ಪರಂಜ್ಯೋತಿಯವರ
ಪಾದವ ನೆನೆಯುತ
ಕಿಡುಗಣ್ಣ ರಾಚಪ್ಪಾಜಿ
ಅವರು ತಾವಾಗಿ ತಾವೇ ಬರುತಾರೆ || ಸುವ್ವಾ ಬಾ ಚನ್ನ ||