ಗುರುದೇವಾ
ನನಗೆ ಹಿಂದೆ ಕೊಟ್ಟಿದ್ದ ಭಾಗ್ಯ
ನನಗೆ ಕೊಟ್ಟಿದ್ದೆ ವುಂಟಾದರೆ
ನೀವು ಒಪ್ಪಿದಂತ ಮಗನ
ಕೆಂಪಾಚಾರಿಯ ಸ್ವಾಮಿ
ನಿಮ್ಮ ಬೊಪ್ಪಗೌಡರ
ಮಠಮನೆಗೆ ಶಿಷ್ಯನಾಗಿ ಕಳುಗತೀನಿ ಗುರುವು
ನಿಮಗೆ ದತ್ತು ಮಗನ ಮಾಡ್ತೀನಿ ನನ್ನಪ್ಪ
ನನಗೆ ಹಿಂದೆ ಕೊಟ್ಟಿದ್ದ ಭಾಗ್ಯ
ಕೊಡಿ ಗುರುದೇವಾ ಎಂದುರು
ಮುದ್ದಮ್ಮ
ಈಗ ಬಡಸ್ತಾನ ಇರಿದು ಬಂದಾ ಕಾಲದಲ್ಲಿ
ನನ್ನ ಮಗನ ಕೊಡ್ತೀನಿ ಎಂದು ಕೇಳಿಯಾ ಕಂದಾ
ಮುದ್ದಮ್ಮ
ನಿಮ್ಮ ಮನೆಸ್ಥಾನದೋರ ಮಾತುಸ
ನಂಬೋದೆ ಬೋ ಕಷ್ಠ ಕಂದಾ
ಯಾತಕ್ಕೆ ಎಂದರೆ
ಒಂದು ದಿವಸಕ್ಕೆ ಅನ್ನೆರಡು ಗಾಡಿ ಸುಳ್ಳು ಕನ್ರಮ್ಮ

ನೀವು ಸುಳ್ಳು ಹೇಳದಿದರೆ ಕಂದಾ
ನಿಮಗೆ ಕಣ್ಣಿಗೆ ನಿದುರೆ ಬರುವುದಿಲ್ಲ || ಸಿದ್ಧಯ್ಯ||

ಕೇಳಪ್ಪ ಗುರುದೇವಾ
ಈಗಲೀಗ ಇಂದುಕ್ಕೆ ತೆಪ್ಪು
ಮುಂದಕ್ಕೆ ಬುದ್ದಿ ಗುರುವು
ಈಗ ಕಟ್ಟೋಗಿ ಬುಟ್ಟಿವ್ನಿ ಗುರುವು
ಆಡಿದ ಮಾತಿಗೆ
ಕೊಟ್ಟು ಭಾಷಿಗೆ ನಾನು ತೆಪ್ಪದಿಲ್ಲ ಗುರುದೇವಾ
ನಿಮ್ಮ ಕಂಡಾಯದ ಸಾಕ್ಷಿಯಾಗುವೇ ಗುರುವು
ನನ ಕಿರಿ ಕೆಂಪಣ್ಣನ ತಕೊಂಡು ಬಂದು ಗುರುದೇವಾ

ನಿಮ್ಮ ಕಂತೆ ಭಿಗುಸಕ್ಕೆ ನಾನು
ದತ್ತು ಮಗನ ಮಾಡುತಿನಿ || ಸಿದ್ಧಯ್ಯ||

ನಿಮ್ಮ ಕಂಡಾಯ ಬೆಳಗದಕೆ ದೇವಾ
ನನ್ನ ಗಂಡು ಮಗ ಕೆಂಪಣ್ಣನಾ
ದಾನಕ್ಕೆ ಭಿಗುಷಕ್ಕೆ ಕೊಡ್ತೀನಿ ಸ್ವಾಮಿ
ನನಗೆ ಹಿಂದೆ ಇದ್ದ ಭಾಗ್ಯ ಕೊಡಿ ತಂದೆ ಎಂದುರು
ಮುದ್ದಮ್ಮ
ನನ್ನ ಕಂಡಾಯ ಬೆಳಗುದಕೆ
ಖಂಡುತವಾಗಿ ಮಗನ ಕೊಟ್ಟಿಯವ್ವ
ಖಂಡುತವಾಗಿ ಕೊಟ್ಟು ಬುಡ್ತೀನಿ ಸ್ವಾಮಿ ಎಂದುರು
ಮುದ್ದಮ್ಮ
ಕೊಟ್ಟು ನೋಡ್ತಿನಿ
ಕಿತ್ತು ನೋಡ್ತೀನಿ ಮಗಳೆ ಅಂತೇಳಿ
ಮುತ್ತಿನಾ ಜೋಳಿಗ್ಗೆ ಕೈ ಹಾಕಿ
ಕಪ್ಪು ದೂಳ್ತಾನೆ ತಗದು
ಜಗತ್ತು ಗುರು ಧರೆಗೆ ದೊಡ್ಡವರು
ಮುದ್ದಮ್ಮನವರ ಅಟ್ಟಿಗೆ ಉರುಬುದ್ರು
ನಿಜರೂಪವಾಗಿ ಕೊಡ್ಲಿಲ್ಲ ಭಾಗ್ಯನಾ
ಮಾಯದ ರೂಪನಲ್ಲಿ ತೋರ್ಸಿದ್ರಂತೆ
ಅಟ್ಟಿ ದನ ಕೊಟಿಗೆ ಕುರಿ ಎತ್ತು ಎಮ್ಮೆ
ಆರು ಜನ ಗಂಡುಮಕ್ಕಳು
ಆರುಜನ ಸೋಸೇರು
ಏಳು ಕೊಪ್ರಿಕೆ ದ್ರೌಭಾಗ್ಯ
ಎಲ್ಲಾ ಸರ್ವೆಂಟು ಭಾಗ್ಯನೆಲ್ಲಾ ತೋರ್ಸುದ್ರು
ಮುದ್ದಮ್ಮ
ಇದೇ ನಿನ್ನ ಭಾಗ್ಯ
ಎಲ್ಲಾನೂವೇ ನೀನೆ ಊಟ ಮಾಡವ್ವ

ಈಗ ಕೆಂಪಾಚಾರಿ ತಂದು ನನ್ನ
ಜ್ಯೋಳಿಗ್ಗೆ ದಾನ ನೀಡು ಮಗಳೇ || ಸಿದ್ಧಯ್ಯ||

ನನ್ನ ಕಂಡಾಯ ಬೆಳಗುದಕೆ
ಗಂಡುಮಗನ ಕೊಡು ಕಂದಾ|| ಸಿದ್ಧಯ್ಯ||

ಮಗನಾ ದಾನಕೆ ಕೊಡು ಕಂದಾ
ಧರ್ಮಕ್ಕೆ ಮಗನ ಕೊಡವ್ವ ಮುದ್ದಮ್ಮ ಎದುರು
ಸರ್ವೇಂಟು ಭಾಗ್ಯಾನೂ ಕಣ್ಣಿಂದ ನೋಡಿದಾ ತಾಯಿ
ಈಗಲೀಗಾ ನನ್ನ ಮನೆ ಭಾಗ್ಯ
ನನ್ನ ಮನೆಗೆ ಬಂದು ಬುಡ್ತು ಅಂತೇಳಿ
ಮುದ್ದಮ್ಮ
ಕುರಕ ಪದ ಹೇಳುತ್ತಾ
ಅಟ್ಟಿ ಅರಿಮನೆ ಸಿರಿ ಸಂಪತ್ತಿನಿಂದ
ಹೋಯ್ತಿದ್ಲಂತೆ ಸುಮ್ಮಗೆ
ಮುದ್ದಮ್ಮ
ಭಾಗ್ಯ ಕೊಟ್ಟುನೆಲ್ಲಾ ತಾಯಿ
ಸಿರಿ ಸಂಪತ್ತನೆ ಕೊಟ್ಟುನಲ್ಲಮ್ಮ
ಈಗ ನನಗೆ ಕಂಡಾಯ ಬೆಳಗುದಕೆಸ
ಮಗನ ಕೊಟ್ಟು ಬುಡವ್ವ ಅಂದ್ರು
ಛೆ ಮುಂಡೆ ಮಗನೆ
ಭಾಗ್ಯ ಕೊಟ್ನಲ್ಲ ಮಗನ ಕೊಡು ಅಂತಾ ಕೇಳಿದ್ಯಾ
ಕಣ್ಣಿಂದ ನೋಡಕಂಡು ಕೈಲಿ ಹಿಡಕಂಡು ಬಂದು
ನಾನು ಮಾತ್ರ ಕರಕಂಡು ಹೋಗು ಅಂತಾ ಕೊಡಿದಿಲ್ಲಾ
ಅವನಾಗಿದ್ದು ಅವನು

ಬಂದರೆ ಕರಕಂಡೋಗು
ಬರದೆ ಹೋದರೆ ಸುಮ್ಮನೆ ಹೋಗು || ಸಿದ್ಧಯ್ಯ||

ಬಂದರೆ ಕರಕಂಡೋಗು
ಬರದೆ ಹೋದರೆ ಸುಮ್ಮನೆ ಹೋಗು ಅಂತೇಳ್ಬುಟ್ಟು
ಮುದ್ದಮ್ಮ
ಈ ಜಂಗುಮ ಪುನಾ ಬಂದು
ಕಟೇ ಕಟೇ ಮಾಡ್ತಾನೆ ಅಂತ ಎಳಿ
ಧಡ್ಡನೆ ಬಾಗಲ ಒಚ್ಚಿಗಂಡು
ಅಟ್ಟಿ ಅರಮನೆಗೆ ಒರಟೋದಳು
ಒರಟೋದ ಮುದ್ದಮ್ಮನ ಕಣ್ಣಿಂದ ನೋಡಿದ್ರು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಛೇ ನಿನ್ನೊಂಶ ಹಾಳಾಗಾ
ನಿನ್ನೊಂಶ ತೊಡದೋಗಾ
ಈಗಾಡಿದ ಮಾತಾ ಈಗಲೇ
ಮರ್ತೋದಿಯಾ ಅಂತೇಳಿ
ನೋಡಪ್ಪ ಮತ್ತೊಂದು ಸತಿ
ಕಪ್ಪು ದೊಳ್ತು ಊದಿದ್ರು
ಹಿಂದೆ ಯಾವ ರೀತಿ ಲಯ ಮಾಡಿದ್ರೊ
ಅದೇ ರೀತಿ ಲಯವಾಯ್ತು
ಬಾಚಿ ಬಸವಯ್ಯ ಮುದ್ದಮ್ಮ
ಒಂದೇ ಮಂಚದ ಮೇಲೆ
ಕೊರಗಿ ಕೊರಗಿ ಪಕ ಪಕನೆ ಪ್ರಾಣ ಬುಟು ಬುಟುರು
ಪ್ರಾಣ ಬಿಟ್ಟ ಬುಟ್ಟ ಕಾಲದಲ್ಲಿ
ಅವರಟ್ಟಿನೆ ನಾಶನ ಮಾಡಿಬುಟ್ಟು ಧರೆಗೆ ದೊಡ್ಡವರು
ಹಿಂದಿರುಗಿ ಬರುತವರೆ
ಮಳವಳ್ಳಿ ಗ್ರಾಮದಲ್ಲಿ ಕೆಂಪಣ್ಣ
ಮಳವಳ್ಳಿ ಮಕ್ಕಳ ಕೈಲಿ
ಗುದ್ದಿಸಿಕಂಡು ತಳ್ಳಿಸಿಕಂಡು ಕಂದಾ
ದುಕ್ಕಳಿಸಿ ದುಃಖ ಪಡುತ ಬರುತಿದ್ದಸ
ಬರೋಮಗನ ಕಣ್ಣಿಂದ ನೋಡಿದುರು
ಧರೆಗೆ ದೊಡ್ಡವರು
ಕೆಂಪಣ್ಣ
ಮಳವಳ್ಳಿ ಮಕ್ಕಳ ಕೈಲಿ
ಗುದ್ದಿಸಿಕಂಡು ತಳ್ಳಿಸಿಕಂಡು ಬರ್ತಾ ಇದ್ದಿಯಪ್ಪಾ
ಕೆಂಪಣ್ಣ
ಈಗಲೇ ನಿನ್ನ ಕರಕಂಡು ನಾನು
ಒಂಟೋಗ ಬಹುದಿತ್ತು
ನಿಮ್ಮ ತಾಯಿ ಮುದ್ದಮ್ಮ
ಬಂದರೆ ಕರಕೊಂಡೋಗು
ಬರದೆ ಹೋದರೆ ಸುಮ್ಮನೆ ಹೋಗು ಪರದೇಶಿ
ಅಂದುಬುಟ್ಟು ಪ್ರಾಣ ಬಿಟ್ಟು ಬುಟ್ರು
ಈಗ ನಿನ್ನ ಕರಕಂಡು ಒಂಟೋಗಿ ಬಿಟ್ರೆ ಮಗನೆ
ನಿಮ್ಮ ತಾಯಿ ಕೊಟ್ಟ ವಾಗತಾನಕೆ
ತಪ್ಪಿಸಿ ಕರಕಂಡು ಹೋದಂಗಾಯ್ತದೆ
ನಿಮ್ಮ ತಾಯಿ ಕೊಟ್ಟ ವಾಗುತಾನ ಉಳಿಬೇಕಾದ್ರೆ ಕಂದಾ
ನೀನಾಗಿದ್ದು ನೀನೆ ನನ್ನ ಎಲೆ ಕುಂದೂರು ಬೆಟ್ಟಕೆ
ಬರಬೇಕು ಮಗನೇ
ನೀನಾಗಿದ್ದು ನೀನು ಬಂದು
ನನಗೆ ಶಿಷ್ಯನಾಗಬೇಕೆಂದು ಹೇಳಿ ಧರೆಗೆ ದೊಡ್ಡವರು
ಮುತ್ತಿನ ಜೋಳಿಗೆ ಕೈ ಹಾಕಿ
ಕಪ್ಪು ದೂಳೂತ ತೆಗೆದು
ಕೆಂಪಚಾರಿ ಮಗನಿಗೆ ಉಫ್ ಅಂತಾ ಉರುಬಿದ್ರು
ಕಪ್ಪು ದೂಳುತಾ ಉರಿಬಿಟ್ಟು
ಎನಂತ ಮಾತಾಡ್ತಾರೇ ಅಂದರೇ
ಕೆಂಪಣ್ಣ
ಇದೆ ಗಳಿಗೆ ಒಳಗೆ ಕಂದಾ
ನನ್ನ ಕಪ್ಪು ದೂಳುತದ ಮೈಮೆ
ಇವಾಗ ತೋರಿಸ್ತಿನಿ ಮಗನೆ
ನನ ಕಪ್ಪು ದೂಳೂತ
ನಿನ್ನ ಮೈಮೇಲೆ ಬಿದ್ದ ಗಳಿಗೆ ಒಳಗೆ

ನಿನಗೆ ಉಚ್ಚು ಬಂದು ಬುಡಲಿ
ಬೆಪ್ಪು ಬಂದು ಬುಡಲಿ
ಮೊಲ್ಲಾಗ್ರಾರ ಬಂದು ಬುಡಲಿ
ಕಂದಾ ಉಚ್ಚು ಬೆಪ್ಪಿನ ಗ್ಯಾನದಲ್ಲಿ
ಉಟ್ಟಿರೋ ಬಟ್ಟೆ ಹರಿಯೋ ಮಗನೆ || ಸಿದ್ಧಯ್ಯ||

ಕಂದಾ ಉಟ್ಟಿರುವ ಬಟ್ಟೆನೆಲ್ಲಾ
ಒಟ್ಟು ಒಟ್ಟಾಗಿ ಕಂದಾ
ಹರಿಯಪ್ಪ ನನ ಮಗು
ನಿನ್ನ ಹೆಗಲಮೇಲೆ ಇರುವಾ
ವಜ್ಜುರುದ ಓಲೆ
ಕಿತ್ತು ಕಿತ್ತು ಕಂದಾ
ಇಟ್ಬುಡು ನನ ಕಂದಾ
ಲೋ ಉಟ್ಟುದ ಕಂದಾ
ನಿರ್ವಾಣ ನನ್ನ ಮಗುನೆ
ಮಾನದ ಮೇಲೆ ಕಂದಾ
ಅಂಗೈ ಅಗಲಾ ಬಟ್ಟೆ
ಇಲ್ಲದಂತೆ ನನ್ನ ಮಗು

ನೀನು ಉಟ್ಟುದ ನಿರುವಾಣ
ಊರು ಊರು ತಿರುಗು ಕಂದಾ || ಸಿದ್ಧಯ್ಯ||

ಉಟ್ಟುದ ನಿರುವಾಣ ನನ ಕಂದಾ
ಊರು ಊರು ತಿರುಗು ಮಗನೆ
ಬೀದಿ ಬೀದಿ ಸುತ್ತ ನನ್ನ ಕಂದಾ ಕೆಂಪಣ್ಣ
ಹುಚ್ಚು ಬೆಪ್ಪಿನ ಗ್ಯಾನದಲ್ಲಿ
ಕೇಳಪ್ಪ ಮಗುನೇ ಕೆಂಪಣ್ಣ
ನೀನು ಹುಚ್ಚಿನ ಗ್ಯಾನ ಬೆಪ್ಪಿನ ಗ್ಯಾನ
ಬೇರು ಗ್ಯಾನದಲ್ಲಿ ಮಗು
ಲೋ ಹಾದಿ ಕಲ್ಲ ಕಡಿ ಮಗನೆ
ಬೀದಿ ಮಣ್ಣ ಮುಕ್ಕು ಕಂದಾ || ಸಿದ್ಧಯ್ಯ||

ಕಂದಾ ಹಾದಿಕಲ್ಲ ಕಂದಾ
ಕಡಿ ನನ್ನ ಮಗನೆ
ಬೀದಿ ಮಣ್ಣ ಮಗನೆ
ಮುಕ್ಕಪ್ಪ ನನ ಕಂದಾ
ನನ್ನ ಹಸ್ತಾಕೆ ನನ ಕಂದಾ
ಲೋ ಬೆಂಕಿ ಕೆಂಡ ಮಗನೆ
ಕೊಟ್ಟಿದ್ದೆ ಕೆಂಪಣ್ಣ
ಈಗ ಬೆಂಕಿ ಒಳಗೆ ಮುಳುಗಿಸ್ತಿನಿ
ಬೆಂಕಿ ಒಳಗೆ ತೇಲುಸ್ತಿನಿ || ಸಿದ್ಧಯ್ಯ||

ನನ್ನ ಹಸ್ತಕ್ಕೆ ಮಗನೆ
ಬೆಂಕಿ ಕೆಂಡ ಕೊಟ್ಟಿದ್ದೆ ಕೆಂಪಣ್ಣ
ಈಗ ಬೆಂಕಿ ಒಳಗೆ ಮುಳುಗುಸ್ತೀನಿ
ಬೆಂಕಿ ಒಳಗೆ ತೇಲುಸ್ತಿನಿ ಮಗು
ಹಾದಿ ಕಲ್ಲು ಬೀದಿ ಮಣ್ಣು ತಿನ್ನಿ ಕಂದು ಕಂದಾ
ಈಗಲೀಗ ನಿನ್ನ ಕುಲುಮೆ ಮನೆಗೆ ನೀನೆ ಬಂದು ಮಗನೇ
ಬೆಂಕಿ ಕೆಂಡನೆಲ್ಲಾನು ನಿನ್ನ ಮೈ ಕೈಗೆ ಸುರುಕೊ
ಕಣ್ಣಿಗೆ ಬೇಕಾದ ಬೆಂಕಿ ಕೆಂಡ
ನಿನ್ನ ಜಲುಮಕ್ಕೆ ತಿನ್ನು
ಹುಚ್ಚು ಬೆಪ್ಪುನ ಗ್ಯಾನದಲ್ಲಿ ಕಂದಾ
ಹಾದಿಲಿ ಬರೋ ಜನಾ ನೋಡಿ
ಬಾಯೆತ್ತಿ ಬೊಯ್ಯಿ ಮಗನೆ

ಅಪ್ಪ ಬೀದಿಲಿ ಬರುವ ಮಕ್ಕಳ ನೋಡಿ
ಕಲ್ಲೆತ್ತಿ ಹೊಡೆಯೋ ಕಂದಾ || ಸಿದ್ಧಯ್ಯ||

ಕಂದಾ ಬೀದಿಲಿ ಬರುವ ಕಂದಾ
ಮಕ್ಕಳು ನೋಡಿ ಮಗನೆ
ಕಲ್ಲೆತ್ತಿ ಹೊಡೆಯಪ್ಪ
ಹಗಲೆಲ್ಲ ನನ ಕಂದಾ
ಕಾಡು ಸೇರಪ್ಪ ರಾತ್ರಿಯಲ್ಲ ಒಂದು ಊರು ಸೇರಪ್ಪ

ಲೋ ಎಕ್ಕಾದಾಳ ಕುಡಿ ಮಗನೆ
ಕಳ್ಳಿ ಹಾಲ ಕುಡಿಯೋ ಕಂದಾ || ಸಿದ್ಧಯ್ಯ||

ಅಯ್ಯಾ ಕಳ್ಳಿ ಹಾಲ ಕುಡಿ ಮಗನೆ
ಮುಳ್ಳಿನ ಮೇಲೆ ಮಲಗು ಕಂದಾ || ಸಿದ್ಧಯ್ಯ||

ಯಕ್ಕದಾ ಹಾಲ ಕುಡುಕಂಡು
ಕಳ್ಳಿ ಹಾಲ ಕುಡದು
ಮುಳ್ಳನಾ ಮೇಲೆ ಮಲಗಿ ಕಂದಾ
ನಿನ್ನ ಹುಚ್ಚು ಬೆಪ್ಪಿನ ಗ್ಯಾನದಲ್ಲಿ
ನನ್ನ ಎಲೆ ಕುಂದೂರು ಬೆಟ್ಟಕ್ಕೆ ಬಾ ಮಗು
ಬಂದಾಗ ನಿನ್ನ ಮಗನ ಮಾಡಿಕತ್ತಿನಿ
ಅಂತ ಹೇಳಿ ಧರೆಗೆ ದೊಡ್ಡವರು
ಕಪ್ಪು ದೊಳ್ತಾ ತಗದು ಕೆಂಪಾ ಚಾರಿಗೆ ಉರುಬದ್ರು
ಯಾವಾಗ ಕಪ್ಪು ದೊಳ್ತಾ ಉರುಬಿದ ಕಾಲದಲ್ಲಿ
ಸ್ವಯಂ ಗ್ಯಾನ ಒಂಟೊಯ್ತು ಕೆಂಪಣ್ಣನಿಗೆ
ಸ್ವಯಂ ಬುದ್ದಿ ಒಂಟೋಯ್ತು
ಉಬ್ಬು ಗ್ಯಾನ ಬಂದು ಬುಡ್ತು ನನ ಕಂದಾ
ಬೆಪ್ಪು ಗ್ಯಾನ ಬಂದು ಬುಡ್ತು
ಬೀರುಗ್ಯಾನ ಬಂದು ಬುಡ್ತು ಕೆಂಪಣ್ಣ
ಉಬ್ಬಿ ಬೆಪ್ಪನಾ ಗ್ಯಾನ ಬಂದಾ ಕಾಲದಲ್ಲಿ ಕಂದಾ
ಅತ್ತ ಬೆರಳಿಲಿದ್ದ ಕೆತ್ತಾಟದ
ಅಪರಂಜಿ ಉಂಗುರಾ
ಕಳೆದುಕಳದು ಕಂದಾ
ತಿಪ್ಪೆಗೆ ಇಡುವುತಾನೆ

ಅವನು ಬಂಗಾರದ ಉಂಗುರಾ
ಕಳೆದು ಕಳೆದು ಕಂದಾ
ತಿಪ್ಪೆಗೆ ಇಡುತಾನೆ
ಅವನ ಎಗಲ ಮೇಲೆ ಇದ್ದ
ಪಟ್ಟೆ ವಸ್ತ್ರವ ಕಂದಾ
ಬುಟ್ಟು ಬುಟ್ಟು ಹರಿತಾನೆ
ಅವನು ಇಕ್ಕಿರುವ ಬಟ್ಟೆನೆಲ್ಲಾ
ಕಿತ್ತು ಕಿತ್ತು ಇಡಿತಾನೆ || ಸಿದ್ಧಯ್ಯ||

ಗುರುವೆ ಇಕ್ಕಿರುವ ಬಟ್ಟೆನೆಲ್ಲಾ
ಕಿತ್ತ ಕಿತ್ತು ಇಟ್ಟುಬುಟ್ಟು
ಮಾನದ ಮೇಲೆ ಕಂದಾ
ಅಂಗೈ ಅಗಲ ಬಟ್ಟೆ ಇಲ್ಲದೆ ಕಂದಾ

ಅವನು ಉಟ್ಟುದ ನಿರ್ವಾಣ ಕಂದಾ
ಊರು ಊರು ತಿರುಗುತಾನೆ || ಸಿದ್ಧಯ್ಯ||

ಅವನು ಹಾದಿ ಮಣ್ಣ ನೋಡುತಾನೆ
ಬಕ್ಕ ಬಕ್ಕನೆ ಮುಕ್ಕುತಾನೆ || ಸಿದ್ಧಯ್ಯ||

ಅವನು ಬೀದಿ ಕಲ್ಲ ನೋಡಿತಾನೆ
ಕಡೇ ದವಡೇಲಿ ಕಡಿಯುತಾನೆ|| ಸಿದ್ಧಯ್ಯ||

ಹಾದಿ ಮೊಣ್ಣ ತಿಂತಾ ಕಂದಾ
ಬೀದಿ ಮೊಣ್ಣನೆ ಮುಕ್ಕುತಾ ಮಗನು
ಆದಿ ಕಲ್ಲು ನೋಡಿ
ಕಡೇ ದವಡೆ ಒಳಗೆ
ಕಟುಮೊ ಕುಟುಮುನ್ನೆ
ಕಡಿತಾ ತಿಂತಾ ಕಂದಾ

ಅವನು ಹುಚ್ಚು ಬೆಪ್ಪಿನಾ ಗ್ಯಾನದಲ್ಲಿ
ತನ್ನ ಕುಲುಮೆಗೆ ಮನೆಗೆ ಬರುತಾನೆ || ಸಿದ್ಧಯ್ಯ||

ಹುಚ್ಚು ಬೆಪ್ಪಿನ ಗ್ಯಾನದಲ್ಲಿ ಕಂದಾ
ಈಗಲೀಗಾ ಕುಲುಮೆ ಕಛೇರಿಗೆ
ಓಡೋಡಿ ಬರುತ್ತಿದ್ದ ಕೆಂಪಣ್ಣಾ
ಏಳುನೂರು ಜನ ಆಳು ಕಾಳುಗಳೆಲ್ಲಾ
ಕೆಂಪಾಚಾರಿ ನೋಡಕಂಡು
ಹುಚ್ಚುನವನು ಬಂದು ಬುಟ್ಟ
ಬೆಪ್ಪಿನವುನು ಬಂದು ಬುಟ್ಟ
ಮೊಲ್ಲಾಗರದವನು ಬಂದು ಬುಟ್ಟ ಅಂತೇಳಿ
ಏಳುನೂರು ಜನ ಆಳುಕಾಳುಗಳೆಲ್ಲಾ
ಕುಲುಮೆ ಮನೆಬಿಟ್ಟು
ಬಿದ್ದು ಬಿದ್ದು ಒರಟೋಗ್ಬುಟ್ರಂತೆ
ಏಳುನೂರು ಎಗ್ಗುಲುಮೆಗಳ
ಕಣ್ಣಿಂದ ನೋಡುತಾ ಕಂದಾ
ಓಡಿ ಓಡಿ ಕುಲುಮೆ ಕಛೇರಿಗೆ
ಬರುತಿದ್ದ ಕೆಂಪಣ್ಣ
ಕುಂದೂರು ಬೆಟ್ಟದ ಮೇಲೆ ಕೂತುಗಂಡು ಧರೆಗೆ ದೊಡ್ಡವರು
ಓಡುಬರುವಂತ ಮಗನ ಕಣ್ಣಾರೆ ನೋಡುತಿದ್ರು
ಕುಲುಮೆ ಮನೆಗೆ ಬಂದು ಕಂದಾ
ಕುಲುಮೆ ಬೆಂಕಿ ಕೆಂಡನೆಲ್ಲಾನೂ
ಕಣ್ಣಿಂದ ನೋಡ್ತಾ

ಅವನು ಕೆಂಡವನ್ನೇ ನೋಡುತಾನೆ
ಅವನು ಗೋರಿ ಮೈಗೆ ಸುರ್ಕತಾನೆ || ಸಿದ್ಧಯ್ಯ||

ಗುರುವೆ ಬೆಂಕಿ ಕೆಂಡಾನೆಲ್ಲಾ
ಮೈ ಕೈಗೆ ಕಂದಾ ಸುರ್ಕತ್ತಾನೆ ಮಗನು
ಕಣ್ಣಿಗೆ ಬೇಕಾದ ಕೆಂಡಾ
ತಕ್ಕಂಡು ನನ ಕಂದಾ
ಅವನು ಬೆಂಕಿ ಕೆಂಡಾನೆಲ್ಲಾ ಕಂದಾ
ಕರುಮ್ನೆ ಕರುಮ್ನೆ ತಿನ್ನುತಾನೆ || ಸಿದ್ಧಯ್ಯ||

ಬೆಂಕಿ ಕೆಂಡನೆಲ್ಲಾನುವೆ ಕಂದಾ
ತನ್ನ ಜಲ್ಮಕ್ಕೆ ತಿಂತಾ ಕುಳಿತಿದ್ದ ಕೆಂಪಣ್ಣ
ಕೆಂಡ ತಿನ್ನುವಂತ ಕೆಂಪಾಚಾರಿ ಮಗನ
ಕುಂದೂರು ಬೆಟ್ಟದ ಕೊಡೆ ಕಲ್ಲುನ ಮೇಲೆ
ಕೂತುಗಂಡು ಧರೆಗೆ ದೊಡ್ಡವರು ಕಣ್ಣಿಂದ ನೋಡಿದುರು
ಕೆಂಪಣ್ಣಸ
ಬೆಂಕಿ ಕೆಂಡನೆಲ್ಲಾನು ಜಲ್ಮುಕೆ ತಿಂತಿದ್ದಿಯಾ
ತಿನ್ನು
ಮತ್ತಷ್ಟು ತಿನ್ನು ಮಗನೆ

ಲೋ ಕೆಂಡ ತಿಂದ ಮೇಲೆ ನನಗೆ
ಗಂಡು ನೀನು ಆಗುತೀಯೆ || ಸಿದ್ಧಯ್ಯ||

ಮಗನೆ ಕೆಂಡ ತಿಂದ ಮೇಲೆ ನನಗೆ
ನೀನು ಗಂಡು ಮಗ ಕಂದಾ
ನೀ ಆಯ್ತಿಯೇ ನನ ಮಗನೇ
ಮಗನೆ ಮತ್ತಷ್ಟು ತಿನ್ನು ಕಂದಾ
ಕಣ್ಣಾರೆ ನೋಡುತೀನಿ || ಸಿದ್ಧಯ್ಯ||