ಬೆಂಕಿ ಕೆಂಡನೆಲ್ಲಾನು ಜಲುಮಕೆ ತಿಂದುಕಂಡು ಕಂದಾ
ಈಗಲೀಗಾ ಎಲೆ ಕೆಂಪಾಚಾರಿ ಮಗನು
ಹುಚ್ಚಿನ ಗ್ಯಾನದಲ್ಲಿ ಬೆಪ್ಪಿನ ಗಾನದಲ್ಲಿ ಕಂದಾ
ತಾಯಿ ಮರತೋದ ತಂದೆ ಮರೆತೋದಾ
ಅಣ್ಣ ತಮ್ದೀರ ತೊರದು ಬುಟ್ಟಾ
ತನ್ನ ಸಿರಿ ಸಂಪತ್ತು ಚಿನ್ನ ಬೆಳ್ಳಿ ತೊರೆದಾ
ಆರುಜನ ಅತ್ತಿಗೇರ್ನ ಮರೆತುಗಂಡಾ ಕಂದಾ

ಅವನು ಹುಚ್ಚು ಬೆಪ್ಪಿನ ಗ್ಯಾನದಲ್ಲಿ
ಕಂದಾ ಕುಂದುರು ಬೆಟ್ಟ ಹತ್ತುತಾನೆ || ಸಿದ್ಧಯ್ಯ||

ಗುರುವೇ ಹುಚ್ಚು ಬೆಪ್ಪಿನ ಗ್ಯಾನದಲ್ಲಿ ಕಂದಾ
ಎಲಿಯ ಕುಂದೂರು ಬೆಟ್ಟ ಗಲಗಲನೆ ಗುರುವೆ
ಹತ್ತಿಗಂಡು ಕೆಂಪಣ್ಣ
ಅವನು ಅಜ್ಜಿನಿಯ ಮೂಲೆಗಾಣೆ
ಕುಂದೂರುಬೆಟ್ಟ ಹತ್ತುತಾನೆ || ಸಿದ್ಧಯ್ಯ||

ಅಜ್ಜಿನಿಯ ಮೂಲೆಗಾಣೆ
ಕುಂದೂರುಬೆಟ್ಟ ಹತ್ತಗಂಡು ಮಗನು
ಕುಂದೂರು ಬೆಟ್ಟದ ಕೊಡೆಕಲ್ಲಿಗೆ ಬಂದಾ ಕೆಂಪಣ್ಣ
ಬಂದಂತ ಮಗನ ಕಣ್ಣಿಂದ ನೋಡುದುರು
ಜಗತ್ತು ಗುರು ಅಲ್ಲಮಾಪ್ರಭು
ಮಂಟೇದಲಿಂಗಪ್ಪ ಪರಂಜ್ಯೋತಿ
ಬಂದ ಮಗನ ನೋಡಿಬುಟ್ಟು
ಓಡೋಡಿ ಬಂದು ಕೆಂಪಾಚಾರಿ ಮುಂಗೈ ಇಡಕಂಡು
ಕೆಂಪಣ್ಣ
ಇವಾಗ ನನ್ನ ಬಳಿಗೆ ಬಂದಿಯಪ್ಪ
ಕೆಂಪಚಾರಿ
ಈಗ ತಾಯಿ ಮರ್ತಗಂಡಿಯ ತಂದೆಮರ್ತಗಂಡಿಯಪ್ಪ
ನಿನ್ನ ಸಿರಿ ಸಂಪತ್ತೆಲ್ಲ
ಇಂದಿಗೆ ಲಯ ವಾಯ್ತೋ ಮಗನೆ
ಸರ್ವಿಷ್ಟು ಬಂದು ಬಳಗಾ
ಜನ ಜಾತಿ ಎಲ್ಲಾನು ತೊರಕಂಡು ಮಗನೆ
ಈಗ ಗುರುವೇ ಗತಿ ಅಂತೇಳಿ
ಗುರುಗ್ಯಾನ ಮಾಡಕಂಡು
ಇವತ್ತು ನನ್ನ ಮನೆಗೆ ಬಂದಿಯಾ ಕಂದಾ
ನನ ಬಳಿಗೆ ಬಂದಿಯಾ ಮಗು
ಕೆಂಪಣ್ಣ

ಈಗಲಾರೂವೆ ಕಂದಾ
ಲೋ ನನಗೆ ಮಗನಾದೆಯಪ್ಪ || ಸಿದ್ಧಯ್ಯ||

ಕಂದಾ ಈಗಲಾರುವೇ ಕಂದಾ
ನನಗೆ ಮಗ ಕಂದಾ
ಆದಿಯ ಮಗನೆ
ನನಗೆ ಶಿಷ್ಯ ಕಂದಾ
ಆದೆಯಪ್ಪ ಮಗು
ಈಗಲಾರೂ ನನಗೆ ಕಂದಾ
ದತ್ತಿ ಮಗನಾದಿಯೇನೊ || ಸಿದ್ಧಯ್ಯ||

ಈಗಲಾರ್ರು‍ನನಗೆ ದತ್ತು ಮಗನಾದೆಯ ಕಂದಾ
ಮಗನು ಆದೆಯೋ ಆಗದಿಲ್ಲೋ
ಏಳಪ್ಪ ಏಳು ಬುಡು ಎಂದುರು
ಜಗತ್ತು ಗುರು
ಧರೆಗೆ ದೊಡ್ಡೋರ ಮಾತ ಕೇಳಿ ಕೆಂಪಣ್ಣ
ಗುರುದೇವಾ
ನಿಮಗೆ ಮಗನಾಗಿ ಬುಟ್ರೆ
ನಿಮಗೆ ಸಿಸ್ಯ ನಾನಾಗಿ ಬುಟ್ರೆ

ಗುರುವೆ ನನಗೇನು ಭಾಗ್ಯಾವ
ಕೊಟ್ಟೆಯಪ್ಪ ಮಾಯಿಕಾರ || ಸಿದ್ಧಯ್ಯ||

ಅಯ್ಯಾ ಏನು ಭಾಗ್ಯಾವ ನನಗೆ
ಕೊಟ್ಟಿಯಪ್ಪ ಧರ್ಮ ಗುರುವು || ಸಿದ್ಧಯ್ಯ||

ನನಗೆ ಏನು ಭಾಗ್ಯವ ಕೊಟ್ಟಿರಿ ಸ್ವಾಮಿ
ಏನು ಭಾಗ್ಯ ಕೊಟ್ಟೀಯೆ ತಂದೆ ಎಂದುರು
ಕೆಂಪಣ್ಣ
ನನಗೆ ಮಗನಾದ್ರು ನಿನಗೆ ಭಾಗ್ಯ ಕೊಡಬೇಕಪ್ಪ
ಕೆಂಪಣ್ಣ
ಕುಲುಮೆ ಕಛೇರಿಗೆ ಬಂದಿದ್ದಾಗ
ನೀನೆ ಹೇಳಿದಿಯಲಾ ಕಂದಾ
ಏನಂತ ಅಂದುರೇ
ಊರೂರಿಗೆ ಹೋಗ್ಲ ರಾಗಿ ಕೊಡ್ತಾರೆ ಜ್ವಾಳ ಕೊಡ್ತಾರೆ
ಮನೆ ಮನೆಗೆ ಮುದ್ದೆ ಕೊಡುತಾರೆ
ಮುದ್ದೆ ಇಸಗಂಡು
ಮಾರಿಚೌಡಿಗೆ ಹೋಗಿ ಬಿದ್ದಿದ್ದು ಕೆಡವಿದ್ದು
ಬೆಳಗಾದ ಮೇಲೆ ಎದ್ದೊಂಟೋಗ್ಲ ಪರದೇಶಿ
ಅಂಗಡಿ ಬೀದಿಗೋಗೋ
ಕಾಸು ದುಡ್ಡು ಕೊಡ್ತಾರೆ ಅಂತಾ ಹೇಳಿದ್ದೀಲ್ಲಾಪ್ಪ
ಕೆಂಪಣ್ಣ
ನಾನು ರಾಗಿ ಬೇಡುವನು ಜ್ವಾಳ ಬೇಡುವನು
ಮನೆ ಮನೇಲಿ ಮುದ್ದೆ ಬೇಡ್ತಕಂತವನು
ಮಾರಿ ಚೌಡಿ ಒಳಗೆ ನಿದ್ರೆ ಮಾಡುವಂತ ಭಿಕ್ಷುಕ ನಾನು
ನಾನು ನಿನಗೆ ಏನು ಭಾಗ್ಯ ಕೊಡನಪ್ಪ
ಕೆಂಪಣ್ಣ
ನನಗೆ ದತ್ತು ಮಗ ಆಗಿಬುಟ್ರೆ
ನಿನಗೆ ಕೊಡುವದೆ ಒಂದೆ ಭಾಗ್ಯ
ಯಾವ ಭಾಗ್ಯ ಅಂದ್ರೆ ಮಗನೆ

ನನ್ನ ಹರಕಲು ಜೋಳಿಗೆ ಕೊಡುತಿನಿ
ಮುರುಕು ಬೆತ್ತ ಹೊರಸುತಿನಿ || ಸಿದ್ಧಯ್ಯ||

ನನ್ನ ಹರಕ್ಲು ಜೋಳಿಗೆ ಕೊಟ್ಟು
ಮುರುಕಲು ಬೆತ್ತ ಹೊರಿಸಿ
ಕೇಳಪ್ಪ ನನ ಕಂದಾ
ನಿನ್ನ ಮೂರು ಮನೆ ಭಿಗುಸಕ್ಕೆ ಕಂದಾ
ಕಳುಗುತೀನಿ ಎಂದಾರಲ್ಲಾ || ಸಿದ್ಧಯ್ಯ||
ಕೆಂಪಣ್ಣ
ಅರಕಲು ಜೋಳಿಗೆ ಕೊಟ್ಟು
ಮುರುಕಲು ಬೆತ್ತ ಹೊರಿಸಿ
ಮೂರುಮನೆ ಭಿಗುಸಕೆ ನಿನ್ನ ಕಳುಗುತೀನಿ ಮಗನೆ
ಭಿಗುಸಕೆ ಕಳುಗುತೀನಿ
ಮಗನಾಗಪ್ಪ ಎಂದುರು
ಏನಯ್ಯಾ ಜಂಗುಮ
ಈ ಭಾಗ್ಯ ಕೊಡುದಕ್ಕೆ
ನಮ್ಮ ತಾಯಿ ತಂದೆ ಪ್ರಾಣ ತೆಗುದಿಯಾ
ಈ ಭಾಗ್ಯ ಕೊಡುದಿಕೆ ನಮ್ಮ ಆರುಜನ ಅಣ್ಣದಿರ
ದಿಕ್ಕಿಗೊಬ್ಬ ದೇಸಕೊಬ್ಬನು ಮಾಡ್ಬುಟ್ಟೀಯ
ಈ ಭಾಗ್ಯ ಕೊಡುದಿಕೆ ನಮ ಆರುಜನ ಅತ್ತಿಗೇರ
ಪ್ರಾಣ ತೆಗಿದಿಯಾ ಗುರುವು
ಈ ಭಾಗ್ಯ ಕೊಡಬೇಕಂತೇಳಿ
ನನ್ನ ಅಟ್ಟಿಲಿರ್ತಕಂತಾ ಸೌಭಾಗ್ಯನ್ನೆಲ್ಲಾನು
ಮಣ್ಣುಪಾಲು ಮಾಡಿದ್ಯ ಗುರುವು
ಎಲ್ಲ ಭಾಗ್ಯನು ಕಳಕಂಡು
ತಾಯಿ ತಂದೆ ಕಳಕಂಡು ಅಣ್ಣ ತಮ್ಮನ ಕಳಕಂಡು
ನನ್ನ ದ್ರೌಭಾಗ್ಯನೆಲ್ಲನು ಕಳಕಂಡು
ಈಗಲೀಗಾ ಉಚ್ಚಿನ ಗ್ಯಾನದಲ್ಲಿ
ಬೆಪ್ಪಿನ ಗ್ಯಾನದಲ್ಲಿ ಮೊಲ್ಲಾಗರ ಗ್ಯಾನದಲಿ
ಹಾದಿಕಲ್ಲು ತಿಂದು ಬೀದಿ ಮಣ್ಣ ಮುಕ್ಕಿ
ಎಕ್ಕದಾಲು ಕಳ್ಳಿ ಹಾಲು ಕುಡಕಂಡು
ಮುಳ್ಳುನ ಮೇಲೆ ಒರಗಿ
ಈಗಾ ಕೆಟ್ಟ ಕಾಲದಲ್ಲಿ
ನಿನ್ನ ಬಳಿಗೆ ನಾನಾಗೆ ಬಂದುದಕೆ ಗುರುವು
ನನ್ನ ದೊರೆ ಮಾಡಲಿಲ್ಲ
ನನಗೆ ದೊರೆತಾನ ಕೊಡನಿಲ್ಲ
ನನ್ನ ಗೌಡನ ಮಾಡಲಿಲ್ಲ
ನನಗೆ ಗೌಡತನ ಕೊಡಲಿಲ್ಲ
ನನ್ನ ರಾಜನ ಮಾಡಲಿಲ್ಲ
ರಾಜ ತಾನ ಕೊಡನಿಲ್ಲ
ಇಷ್ಟೊಂದು ಭಾಗ್ಯವ
ಬಿಟ್ಟುಬುಟ್ಟು ಗುರುವು
ಇಷ್ಟೊಂದು ಭಾಗ್ಯ ಕಳಕಂಡು ಗುರುವು
ಅಯ್ಯಾ ನಿನ್ನ ಬಳಿಗೆ
ನಾನಾಗಿ ಬಂದದಕೆ

ಗುರುವೆ ನಿನ್ನಂಗೆ ನನಗುವೇ
ಭಿಗುಸ ಮಾಡೋ ಯತಿಯ ಕೊಟ್ಟಿಯಾ || ಸಿದ್ಧಯ್ಯ||

ಈಗಲೀಗಾ ಗುರುದೇವಾ
ಇಷ್ಟೊಂದು ಭಾಗ್ಯ ಎಲ್ಲನುವೆ
ಕಳಕಂಡು ಬಂದದುಕೆ
ನಿನ್ನಂಗೆ ತಿರುಪೆ ಮಾಡುವಂತಾ
ಸುಖ ನನಗೆ ಕೊಟ್ಟಿಯಾ ಗುರುವು
ಈಗಲೀಗಾ ಹಾದಿಕಲ್ಲು
ಬೀದಿ ಮಣ್ಣು ತಿನಕಂಡು
ಯಕ್ಕದ ಹಾಲು ಕಳ್ಳಿ ಹಾಲು ಕುಡಕಂಡು
ಮುಳ್ಳಿನ ಮೇಲೆ ಮಲಗಿ
ಬೇಲಿಗೆ ತಲಿಯಾಗಿ
ಬಿಸಿಲಿಗೆ ಕಾಲಾಗಿ
ಕಾಡಡವಿಯೊಳಗೆ ಸತ್ತೋಗಿ
ಪ್ರಾಣ ಬಿಟ್ಟು ಬುಟ್ರು ಸರಿಯೇ

ನಿನಗೆ ಮಗನಾಗದಿಲ್ಲ
ನಾನು ಭಿಕ್ಷು ಮಾಡದಿಲ್ಲ || ಸಿದ್ಧಯ್ಯ||

ಗುರುವೇ ನಿಮನಗೆ ಮಗನು ನಾನಾಗದಿಲ್ಲ ಗುರುವು
ಮನೆಮನೆಗೆ ನಾನು ಭಿಕ್ಷಕೆ ಹೋಗದಿಲ್ಲ
ಹಾಗಂದ ಕೆಂಪಣ್ಣ

ಈಗ ಕೆಂಪಚಾರಿ ಮಾತ ಕೇಳಿ
ಏನಾ ಮಾತೊಂದಾಡುತಾರೆ || ಸಿದ್ಧಯ್ಯ||

ನಿನಗು ಮಾತ್ರ ಮಗನಾಗದಿಲ್ಲ
ನಾನು ಮನೆ ಮನೆ ಬಿಗುಸ ಮಾಡದಿಲ್ಲಾ
ಎಂಬುದಾಗಿ ಕೆಂಪಾಚಾರಿ ಮಗನು ಹೇಳುವಾಗ
ಛೆ ನಿನ್ನೊಂಸಾಳಾಗ
ಇನ್ನೂ ನಿನ್ನಾಂಕಾರಾಳಾಗ್ಲಿಲ್ಲ

ಇನ್ನು ನಿನ್ನ ದ್ವಾರಣೆ ಬಯಲಾಗಿಲ್ಲ ಅಂತೇಳಿ ಧರೆಗೆ ದೊಡ್ಡವರು
ಈ ಕೆಂಪಾಚಾರಿ ಮಗನ ಮುಂಗೈ ಇಡಕಂಡು
ಏಳು ಜನ ಸಿದ್ದರು ಎಂದರೆ
ಯಾವ್ಯಾವ ಸಿದ್ದರು ಕರೀತರೆ ಅಂದ್ರೆ ನನ್ನಪ್ಪ

ಲೋ ರಸಸಿದ್ದು ಬಾಪ್ಪ
ಋಷಿ ಸಿದ್ದು ಬಾರೋ
ಬದನಾಳ್ ಸಿದ್ದು ಬಾಪ್ಪ
ಬಸಟ್ಟಿಗೆ ಸಿದ್ದು ಬಾರೋ
ನನ್ನ ಕಾರೆ ಸಿದ್ದು ಬಾಪ್ಪ
ರೇವಣ್ಣ ಸಿದ್ದು ಬಾರೋ
ನನ್ನ ಚೌಳೂರು ಸಿದ್ದು ಬಾರೋ
ಲೋ ಏಳುಜನ ಸಿದ್ದರೇ ನೀವು
ಎದ್ದು ಬನ್ರೋ ಎಂದರಲ್ಲಾ || ಸಿದ್ಧಯ್ಯ||

ಬನ್ನರಪ್ಪ ನನ ಕಂದಾ
ಬನ್ನಿ ಮಕ್ಕಳೆ ಏಳು ಜನ ಸಿದ್ದರೆ
ಹನ್ನೆರಡು ಮಾರುದ್ದ ನೂಲಗ್ಗ ತಕಂಡು
ಓಡು ಬನ್ನಿರಪ್ಪ ಎಂದುರು
ಧರೆಗೆ ದೊಡ್ಡವರ ಅಪ್ಪಣೆ ಆಯ್ತು ಅಂತೇಳಿ
ಈಗಲೀಗಾ ಮಾಳಿಗೆ ಮಂಟಪದಲ್ಲಿ
ಒರಗಿದ್ದಂತ ಸಿದ್ದರು ಕಲ್ಲು ಗವಿ
ಒಳಗೆ ಮಾಸ ಮಾಡುತಿದ್ದಂತ ಸಿದ್ದುರು
ಎಳುಮಂದಿ ಸಿದ್ದರೂ ಓಡೋಡಿ ಬಂದು
ಜಗತ್ತು ಗುರುವಾಗಿರ್ತಕಂತಾ
ಧರೆಗೆ ದೊಡ್ಡವರ ಮುಂಭಾಗದಲಿ ನಿಂತುಕಂಡು
ನಡ ಕಟಗಂಡು ಪಾದ ಜೊಡಸಗಂಡು
ಕರವೆತ್ತಿಕೂಡ ಕೈ ಮುಕ್ಕಂಡು
ಧರೆಗೆ ದೊಡ್ಡವರ ಪಾದಕೆ ಶರಣು ಮಾಡಿ

ಅಪ್ಪ ಯತ್ತಲ ಚಾಕ್ರಿಗೆ ನಮ್ಮ
ಕರಿದಿರಿಯಪ್ಪ ಮಾಯಿಕಾರ || ಸಿದ್ಧಯ್ಯ||

ನಮ್ಮ ಯತ್ತಲ ಚಾಕ್ರಿಗೆ
ಕರೆದಿರಿ ನನ್ನ ಗುರುವು
ಯಾವ ಕಾರ್ಯಕೆ ನಮ್ಮ ಕೂಗಿದ್ರಿ ನನ್ನಪ್ಪ
ನಮ್ಮ ಕರೆದಂತಾ ರೀತಿಯ
ಒಡದೇಳಿ ಧರ್ಮ ಗುರುವೇ || ಸಿದ್ಧಯ್ಯ||

ಯಾತಕ್ಕಾಗಿ ಕರದ್ರಿ ತಂದೆ
ನಮ್ಮ ಕರದ ರೀತಿ ಹೇಳ್ಬುಡಪ್ಪ
ಹನ್ನೆರಡು ಮಾರುದ್ದ ನೂಲಗ್ಗ ತಕಬನ್ನಿ ಅಂದ್ರಲ್ಲ
ನೂಲಗ್ಗ ತಂದಿವಿ ಯಾತಕಪ್ಪ ಎಂದುರು

ಸಿದ್ದರೇ
ಈಗಲೀಗಾ ಹನ್ನೆರಡು ಮಾರುದ್ದ ನೂಲುಗ್ಗ ಯಾತಕೆ ಬೇಕೆಂದರೇ
ಇವನು ನಾಳೆ ದಿವಸ ಕಂದಾ
ನಿಮಗೆಲ್ಲಾ ಸಿದ್ರಿಗಿಂತ ಹೆಚ್ಚಿನವನು ಘನ ಸಿದ್ದಾಯ್ತಾನೆ ಕನ್ರೊ
ಇವನು ಘನಸಿದ್ದಾಗಬೇಕಾದ್ರೆ ಕಂದಾ
ನೀವು ವಾಸಸ್ಥಾನ ಮಾಡುವಂತ ಗವಿಗಳಲ್ಲಿ
ಯಾವ ಗವಿ ಕಾಲಿ ಇದ್ದದ್ರಪ್ಪ ಅಂದ್ರು
ಗುರುದೇವಾ
ನಾವು ವಾಸ ಮಾಡುವಂತ ಗವಿಯಂದ್ರೆ
ನೂರೊಂದು ಗವಿಯದೆ
ನೂರು ಗವಿ ಒಳಗೆ ನಾವೆ ವಾಸವಾಗಿವಿ
ಇನ್ನು ಒಂದು ಗವಿ ಅಂದ್ರೆ ಕೆಟ್ಟಗವಿ ನನ್ನಪ್ಪ
ಕೆಟ್ಟಗವಿ ಅಂದರೆ
ಹಾವು ಚವುಳು
ವಾಸಸ್ಥಾನ ಮಾಡ್ತಕಂತ ಗವಿ ಗುರುವು
ಅದರ ಹೆಸರು ಅಂದ್ರೆ ದೇವಾ
ಕಟೇ ಕಟೇ ಕಾಳಿಂಗನ ಗವಿ ಅಂತೇಳಿ
ಅದೆಕ ನಾಮಕರಣ ಉಂಟು
ಅದೊಂದು ಗವಿ ಮಾತ್ರ ಕಾಲಿಯದೆ ಬುದ್ದಿ ಅಂದ್ರು
ಸಿದ್ದರೇ
ಈ ಮಗನಿಗೆ ಬೇಕಾಗಿರೋದು ಅದೇ ಗವಿ ಕನ್ರೊ
ನೀವು ತಂದಿರುವಂತ ಹನ್ನೆರಡು ಮಾರುದ್ದ
ನೂಲಗ್ಗದಲ್ಲಿ ಕಂದಾ

ಇವನ ಕಾಲು ಕೈಯಿಗಳ ನೀವು
ಕಟ್ಬುಡ್ರುಪ್ಪ ಎಂದರಂತೆ || ಸಿದ್ಧಯ್ಯ ||
ಇವನ ಕಾಲು ಕೈಗಳ ಕಂದಾ
ಕಟ್ರಪ್ಪ ಎಂದವರೇ
ಏಳುಜನ ಸಿದ್ಧರುವೇ
ಹನ್ನೆರಡು ಮಾರುದ್ದ
ನೂಲುಗ್ಗ ತೆಗದವರೆ
ಸಿದ್ದರ ಮೊಕವ
ಕೆಂಪಚಾರಿ ನೊಡತಾರೆ
ಧರೆಗೆ ದೊಡ್ಡೋರು ಮಕವ
ಕೆಂಪಣ್ಣ ನೋಡುತಾರೆ
ನನ್ನ ಯಂತವನ ಮಗನ ತಂದು
ಏನು ಗತಿ ಮಾಡಿಯಪ್ಪ || ಸಿದ್ಧಯ್ಯ ||

ನನಗೆ ತಾಯಿ ಆಸೆ ಇಲ್ಲ
ಗುರುವೇ ತಂದೆ ಆಸೆ ಇಲ್ಲ
ಅಣ್ಣನಾಸೆ ಇಲ್ಲ
ತಮ್ಮನಾಸೆ ಇಲ್ಲ
ನನ್ನ ಬಂಧು ಬಳಗದ ಸುಖ
ನನಗಿಲ್ಲ ನನ್ನ ಗುರುವು
ನನ್ನ ಜನ ಜಾತಿ ಆಸೆ
ನನಗಿಲ್ಲ ನನ್ನಪ್ಪ
ನನ್ನ ಬಾಳುತಿದ್ದ ಮಗನಾ
ಇಂತ ಗತಿ ಮಾಡಬವುದಾ || ಸಿದ್ಧಯ್ಯ ||

ಬಾಳುತಿದ್ದ ಮಗನಾ
ಬದುಕುತಿದ್ದಂತ ಮಗನಾ ದೇವಾ
ಇಂತ ಗತಿ ಮಾಡಬಹುದಾ ಎನುತೇಳಿ ಕೆಂಪಣ್ಣ
ಧರೆಗೆ ದೊಡ್ಡೋರ ಮುಖ ನೋಡುತಾ
ಏಳುಜನ ಸಿದ್ರು ಮೊಕ ನೋಡುತಾ ನಿಂತಿದ್ದ
ಜಗತ್ತು ಗುರುಗಳ ಅಪ್ಪಣೆ ಆಯ್ತು ಅಂತೇಳಿ
ಏಳುಮಂದಿ ಸಿದ್ದುರು
ಎಳೆ ಕೆಂಪಣ್ಣನ ಎಳೆದು
ಹನ್ನೆರಡು ಮಾರುದ್ದ ನೂಲಗ್ಗದಲ್ಲಿ ಕಾಲುಕೈಯನ್ನೇ ಬಿಗಿದು
ಕಟ್ಟಿಬುಟ್ಟು
ಜಗತ್ತು ಗುರುಗಳ ಮುಂಭಾಗದಲ್ಲಿ ನಿಂತುಕಂಡ್ರು
ಗುರುದೇವಾ
ಇವನ ಕಾಲು ಕೈಯ ಕಟ್ಟಿ ಬುಟ್ಟೊ ಸ್ವಾಮಿ
ಆಯ್ತು ಕಂದಾ
ಸಿದ್ದರೇ

ಇವನ ಕಾಳಿಂಗನಾ ಗವಿಗೆ
ಇವನ ಎಳಿಕಂಡು ನಡಿರಯ್ಯಾ || ಸಿದ್ಧಯ್ಯ ||

ಕಟೆ ಕಟೆ ಕಾಳಿಂಗನ ಗವಿಗೆ ದೇವಾ
ಇವನ ಎಳಕಂಡು ನಡೀರಪ್ಪ ಸಿದ್ದರೆ ಎಂದುರು
ಏಲುಜನ ಸಿದ್ದುರು
ಕೆಂಪಚಾರಿ ಎಳಕಂಡು
ಕಾಳಿಂಗನ ಗವಿಗೆ ಬಂದುರು
ಸಿದ್ದರೇ
ಈ ಕಾಳಿಂಗನ ಗವಿಗೆ ಮಾತ್ರ ಹಾಗೆ ಎತ್ತಾಕಬೇಡ ಇವನ
ಇವರಟ್ಟಿಗೆ ಹೋಗಿದ್ದಾಗ ಇವರಪ್ಪ
ಒಂದು ಮಾತೇಳಿದ್ದ ಕನ್ರೊ
ತಾಯಿ ತಂದೆ ಮಾಡ್ತಕಂತ ದಾನ ಧರ್ಮ
ಮಕ್ಕಳ ಮೊಳ್ಳಲಿರಬೇಕು
ತಂದೆ ತಾಯಿ ಮಾಡುದಂತ ಪಾಪ ಕರ್ಮ
ಮಕ್ಕಳ ಬುಜದ ಮೇಲೆ ಬುತ್ತಿಕಟ್ಟಿ ಮಡಗಿರಬೇಕು
ಇವರ ತಂದೆ ಬಾಚಿ ಬಸವಯ್ಯನ ಮನೆಗೆ ನಾನು ಹೋಗಿ
ಮಗನ ಕೇಳಿದಾಗ ಇವರಪ್ಪ
ಏನು ಹೇಳಿದ ಎಂದರೇ
ನನ್ನ ಮನೆಗೆ ಬಂದು ನನ ಮಗನ ಕೇಳಿದ ಭಿಕ್ಷುಕನಿಗೆ
ಅಟ್ಟಿ ಜೀತ್ಗಾರ ಬುಟ್ಟು
ಕತ್ತಿನ ಮೇಲೆ ಗುದ್ದಿಸಿ ಬುಟ್ಟು
ಅಟ್ಟಿಂದಾಚೆಗೆ ತಳ್ಳಿಸಿಬುಡು ಅಂತ
ಇವರಪ್ಪ ಹೇಳಿದ್ದ ಕನ್ರಪ್ಪ
ಅಪ್ಪ ಆಡಿದ ಮಾತು ಮಕ್ಕಳ ತಲೆ ಮೇಲಿರಬೇಕು

ಇವನ ಕತ್ತಿನ ಮೇಲೆ ಗುದ್ದಿರಯ್ಯ
ಇವನ ಎತ್ತಿ ಗವಿಗೆ ಇಟ್ಟುಬುಡಿರಪ್ಪ || ಸಿದ್ಧಯ್ಯ ||

ಇವನ ಕಾಳಿಂಗನ ಗವಿಗೆ
ಇವನ ಎತ್ತಾಕುಬುಡಿ ಎಂದುರಲ್ಲಾ|| ಸಿದ್ಧಯ್ಯ ||

ಕಟ ಕಟಾ ಕಾಳಿಂಗನ ಗವಿಗೆ
ಈ ಮಗನಾ ಎತ್ತಾಕಿಬುಡಿ ಕಂದಾ ಎಂದುರು
ಧರೆಗೆ ದೊಡ್ಡೋರ ಮಾತ ಸಿದ್ರು ಕೇಳಿಕಂಡರು
ಧರೆಗೆ ದೊಡ್ಡೋರ ಮಾತ ಕಿರಿ ಕೆಂಪಣ್ಣ
ಕಿವಿಯಾರೆ ಕೇಳಿಕಂಡಾ
ಅಯ್ಯ ಗುರುದೇವಾ ಧರೆಗೆ ದೊಡ್ಡಯ್ಯ
ಯಂತಾ ವಾರ್ತೆ ಹೇಳ್ದೆ ಗುರುವು
ಯಂತಾ ಮಾತ ಹೇಳಿಬುಟ್ರಿ ನನ್ನಪ್ಪ

ನನ್ನ ಬಾಳುತಿದ್ದ ಮಗನ ತಂದು
ಬಾವಿಗೆ ನನ್ನ ಹಾಕಿಯಪ್ಪ || ಸಿದ್ಧಯ್ಯ ||

ನನ್ನ ಬಾಳುತಿದ್ದ ಮಗನಾ
ಬದುಕುತಿದ್ದ ಮಗನಾ
ಕರತಂದು ನನ್ನ ಗುರುವು
ಪುಣ್ಯವಂತರ ಮಗನಾ
ಕರೆತಂದು ನನ್ನಪ್ಪ
ಈ ಪಾಳು ಬಾವಿಗೆ ನನ್ನ
ಹಾಕಿಯ ನನ್ನ ಗುರುವು
ನಿಮ್ಮ ಕೆಟ್ಟ ದೇವರು ಎನ್ನವುದು
ನಾನಾಗಿ ತಿಳಿಯಲಿಲ್ಲ|| ಸಿದ್ಧಯ್ಯ ||