ನನ್ನ ಹಸ್ತ ನನ್ನ ಕಂದಾ
ಉರ್ದೋದಂಗೇ ಮಗುನೇ
ನಿನ್ನ ವಂಶವೇ ಉರ್ದೋಗಲೀ
ಎಳೆಯವನೇ ಕೆಂಪಣ್ಣ
ನಿಮ್ಮ ಬಸವಾಚಾರಿ ಮನಸ್ತಾನವ ಕಂದಾ
ನಾನಾಳು ಪಟವ ಮಾಡುತ್ತೀನಿ || ಸಿದ್ಧಯ್ಯ ||

ನೀವು ಕಬ್ಬಣವಾ ಬಡದ್ರೂವೇ
ಹೊಟ್ಟೇಗಿಲ್ದಂಗೇ ಮಾಡುತ್ತೀನಿ || ಸಿದ್ಧಯ್ಯ ||

ಕಂದ ಒಣಗಬ್ಬಿಣ ಕಂದಾ
ಒಡುದ್ರುವೇ ನನ್ನ ಮಗುನೇ
ಹೊಟ್ಟೇಗಿಲ್ಲದಂಗೆ ಕಂದಾ
ನಾ ಮಾಡುತ್ತೀನಿ ಮಗು
ನಿನಗೆ ಬಟ್ಟೆಗೆ ಇಲ್ಲದಂಗೆ
ನಾ ಮಾಡುತೀನಿ ಕಂದಾ
ನಿಮ್ಮ ಹಡುಗಲ್ಲ ಹೊತ್ತುಗಂಡು
ಊರು ಊರು ತಿರ್ಗುಸ್ತೀನಿ || ಸಿದ್ಧಯ್ಯ ||

ಹಡಗಲ್ಲ ಹೊತ್ಗಂಡು ಕಂದಾ
ಊರು ಊರು ತಿರ್ಗುಸ್ತೀನಿ
ಮಗನೇ ಕೆಂಪಣ್ಣ
ಈಗ ನನಗೆ ಎಷ್ಟು
ಆಡಿದಿಯೆ ಎಷ್ಟು ಬೂದಿದೆಯೇ
ಎಷ್ಟು ಅಂದಿದೆಯೇ ಕಂದಾ
ಈ ಭೂಮಿ ಭೂಲೋಕ
ನಡುವೆ ನರಲೋಕದಲ್ಲಿ ಕಂದಾ
ನಾನು ಯಾವು ರೀತಿ
ಆಡುಸ್ತಿನೀ ಅನ್ನುಸ್ತೀನಿ
ಯಾವು ರೀತಿ ನಿನಗೆ
ಬೋಯ್ಸಿಸ್ತೀನಿ ಅಂದ್ರೆ ಕಂದಾ
ನಾಡು ನಾಡು ರಾಜರಾಜ್ಯದ ಮೇಲೆ
ಅಯ್ಯಾ ಕೂಡ್ರವ್ವ ತತ್ತರವ್ವ
ಕೂಡ್ರಕ್ಕ ತತ್ತರಕ್ಕ
ನಾನು ವಾಲೇ ನಾನು ಗುರುವೇ
ಕೊಳೆಯ ತಗೀತಿನೀ
ಕಡಗ ತಗೆಸುತೀನಿ
ಚೈನು ಬೆಸೆಯುತ್ತಿನೀ
ಡಾಬು ಮಾಡುತೀನಿ
ಅಂದುವಾಗಿ ಮಾಡುತೀನಿ ನಾನು
ಚಂದುವಾಗಿ ಮಾಡುತೀನಿ
ಕೊಡ್ರುವ್ವ ತತ್ತರವ್ವ
ಆಗನತೇಳಿ ನನ್ನ ಕಂದಾ
ಮಗನೇ ಗಂಡುಳ್ಳ ಗರತಿ
ಗಂಡ ಸತ್ತ ಬಳಿಕ ಮುಂಡೇರ ಪಲಕ
ಈಸ್ಗಳ್ಳಿ ನನ್ನ ಕಂದಾ
ಸಾವುರಾರು ರೂಪಾಯ್ನಿ ಒಡವೆ
ನಿಮ್ಮ ಕೈವಸ ಬಂದು ಮ್ಯಾಲೆ
ಅಯ್ಯಾ ಈವತ್ತು ಬಂದರೇ
ನಾಳಕೆ ಬನ್ನೆರವ್ವ
ನಾಳೆ ಬಂದರೇ
ಲೆಪ್ಪ ಹಾಕಿವ್ನಿ
ನಾಳಿದ್ದು ಬನ್ನರವ್ವ
ಆಗಂತೇಳಿ ನನ್ನ ಕಂದಾ
ಕಂದ ಮೂರು ದಿವಸ ಕಂದಾ
ಕಳೆದ ಮೇಲೆ ಮಗನೆ
ನೂರಾರು ರೂಪಾಯ್ನ ಬದುಕು
ನಿಮ್ಮ ಕೈವಸ ಬಂದ ಮೇಲೆ
ಕಂದ ರಾತ್ರೆಯಿಂದ ರಾತ್ರೆ
ಒಂದ್ಗಂಟೇ ರಾತ್ರೇಲೀ
ನಿಮ್ಮ ದನ ಕರವ ಅಟ್ಗೊಳ್ರಪ್ಪೆ
ಹೆಸ್ತಿ ಮಕ್ಳ ಕರಕಳ್ರಯ್ಯಾ || ಸಿದ್ಧಯ್ಯ ||

ಹೆಡ್ತಿ ಮಕ್ಕಳ ಕರ್ಕಳ್ಳಿ ಕಂದಾ
ನಿಮ್ಮ ದನಕರ ಹಟ್ಕಳ್ಳಿ ಮಕ್ಕಳೇ
ನೀವು ಕಾಣ್ದಿದ್ದ ಊರಗೇ ಕಂದಾ
ಕದ್ದು ಕಡದೋಗಿರಪ್ಪ || ಸಿದ್ಧಯ್ಯ ||

ಕಾಣದಿದ್ದ ಊರಗೇ
ಕದ್ದು ನೀವು ಕಳ್ತಾನ್ದಲ್ಲಿ
ವಂಟೋಗ್ಬುಟ್ರೇ ಮಗುನೇ
ಈ ಊರು ಬುಟ್ಟು ಈ ಊರ್ಗು ಹೋದ್ರುವೇ
ನಿಮಗೇ ಕಟ್ದ ಮನೆ ಇರಬಾರದು
ಅಲ್ಲೂ ಕೂಡ ಕಂಡೋರ ಮನೆ
ಪಾಠಶಾಲೆ ಜಗಲೀ ಮ್ಯಾಲೆ
ವಾಸಮಾಡಿ ಕಂದಾ
ನೀವು ವಾಸಮಾಡುವಾಗ
ಆ ಊರಲ್ಲಿ ಕದ್ದುಕ್ಕಂಡು
ಬಂದಿರುವ ಆ ಒಡವೆ ಆಭರಣ
ಈ ಊರಲ್ದಾರೂ
ಮಾರ್ಕಂಡು ಜೀವ್ನ ಮಾಡಬೇಕು
ಒಂದಳ್ಳಿಲಾಗಲೀ ದಿಲಿಲಾಗಲೀ
ಒಂದು ಕೋಟೆಲಾಗಲೀ ಪೇಟೆಲಾಗಲೀ
ಒಂದು ಸಂತೆಲಾಗಲೀ

ಅಯ್ಯಾ ಗಂಡುಳ್ಳ ಗರ್ತಿರ ಕಣ್ಣಿಗೇ
ಗಂಡಸತ್ತ ಮುಂಡೇರ ಕಣ್ಣಗೇ
ನೀವು ಸಿಕ್ಕುಬುಡಿ ನನ್ನ ಕಂದಾ
ಕಂದಾ ಅವರು ನಿಮ್ಮ ಕಂದಾ
ನೋಡ್ದು ಮೇಲೆ ಮಗನೇ
ಅಕ್ಕ ನಮ್ಮೂರಲ್ಲಿದ್ದವನು
ನನ್ನ ವಾಲೆ ಕದ್ದುಕ್ಕಂಡು ಬಂದ
ನನ್ನ ತಾಲಿ ಕದ್ದುಕ್ಕಂಡು ಬಂದ
ನನ್ನ ಡಾಬು ಕದ್ದುಕ್ಕಂಡು ಬಂದ
ಆವತ್ತುನಿಂದ ಇವತ್ತುಗೇ ಇವನೂ
ಸಿಕ್ಕಲಿಲ್ಲ ಕಣರವ್ವ
ಇವತ್ತು ನನ್ನ ಕಣ್ಣಿಗೇ
ಸಿಕ್ಕುಬುಟ್ಟು ಆನತೇಳಿ
ಅಯ್ಯಾ ಚೀ ಮುಂಡೇ ಮಗನೇ
ಆಚಾರ ಜಾತಿ ಮಗುನೇ
ನನ್ನ ಗಂಡುಳ್ಳ ಗರತಿ ಒಡುವೆ
ಗಂಡ ಸತ್ತ ಮುಂಡೇ ಬದುಕ
ತಿನ್ನಕ್ಕೆ ಬೇಕು ಅಂತ
ಎಲ್ಲಿಂದ ನೀನು ಕಾದಿದ್ದೇ ಅನತೇಳಿ
ಅವರು ಈ ಚಿರಕ್ಕ ಉಗುದ್ರೆ ಕಂದಾ
ಆಚರಕೆ ತಿರಿಕೊಳಪ್ಪ || ಸಿದ್ಧಯ್ಯ ||

ಅನ್ನವು ಕೈಲೀ ಅನ್ನಸ್ಕಳಿ ಕಂದಾ
ಆಡವ್ರು ಕೈಲೀ ಆಡಿಸ್ಕಳೀ ಮಗನೇ

ಉಗಿಸ್ಕಂಡು ತೊಡಿಸ್ಕಂಡು
ನಾನು ಕಂದ ನಡುವೆ ನರಲೋಕದ
ಮೇಲೆ ಕಂದ ಬಾಳ ಬದುಕಿ ಮಕ್ಕಳೇ
ಕೆಂಪಣ್ಣ
ಆಡ್ಕಂಡು ಅನ್ನಿಸ್ಕಂಡು
ಈಗಲೀಗ ನರ್‌ಲೋಕದಲ್ಲಿ
ನೀವು ಬಾಳಿ ಬದುಕುದ್ರವೇ ಕಂದಾ
ಯಾರು ಬೋದ್ರು
ಯಾರು ಅಂದ್ರು
ಯಾರು ಆಡದ್ರು ಕೂಡ
ನಮಗೆ ಬೈಲಿಲ್ಲ ನಮಗೆ ಅನ್ಲಿಲ್ಲ
ತಲೆ ಬೊಕ್ಕಂಡು ಹೊರಟೋಗುಬಿಡಿ
ನನ್ನ ಕಂದ
ಆಡಸ್ಕಂದು ಅನ್ನಸ್ಕಂಡು ನೀವು
ಬಾಳದ್ರು ಕೂಡ
ಈ ನರ್‌ಲೋಕದಲ್ಲಿ
ನಿಮ್ಮ ಛತ್ರಿಯ ಬುಡುಬ್ಯಾಡಿ
ನಿಮ್ಮ ಚಡಾವ ಬುಡುಬ್ಯಾಡಿ
ನಿಮ್ಮ ಕೋಟನ್ನೆ ಬುಡುಬ್ಯಾಡಿ
ನಿಮ್ಮ ಚೋಟವ ಬುಡುಬ್ಯಾಡಿ
ನಿಮ್ಮ ಪೇಟವ ಬುಡುಬ್ಯಾಡಿ
ದೇವ ಅರುಗಚ್ಚೇ ಬುಡುಬ್ಯಾಡಿ
ನಿಮ್ಮ ಅರಗು ಬೆರಗು ಮರೆಯಬೇಡಿ || ಸಿದ್ಧಯ್ಯ ||

ನಿಮ್ಮ ಊರುಪಂಚೆ ಬುಡುಬ್ಯಾಡಿ
ನಿಮ್ಮ ಕುಲಬಡಾಯ ಮರೆಯಬ್ಯಾಡಿ || ಸಿದ್ಧಯ್ಯ ||

ಎಷ್ಟೂ ಚಿನ್ನ ಬೆರಳಿ
ಬಂಗಾರ ಕದ್ಕಂದ್ರೂವೆ ಮಗನೇ
ಈಗಲೀಗ ಎಷ್ಟೂ ಬೆರಳೀ ಚಿನ್ನ
ಕದ್ದರು ಕೂಡ
ಕೋರ್ಟು ಕಛೇರಿಗೆ ಮಾತ್ರ
ಹತ್ತ ಬ್ಯಾಡಿ ಕಂದ
ಕೋರ್ಟು ಕಛೇರಿಗೆ ಹತ್ತುಬುಟ್ಟರೇ ಮಗನೇ
ಈಗಲೀಗ ಬಿನ್ನವೇ ಆಗುಬುಡ್ತಿರಿ ಕಂದಾ
ಕೋರ್ಟು ಕಛೇರಿಗೆ ಹತ್ತುದ್ರು ಕೂಡ
ನಿಮ್ಮ ಮಾತೇ ಕಟ್ಟಬೇಕೆ ವರತ್ತು
ಅವರು ಮಾತುಕಟ್ಟಬಾರ್ದು ಕಂದ
ಈಗಲೀಗ ಭೂಮಿ ಭೂಲೋಕದಲ್ಲಿ
ಬಾಳಿ ಬದುಕವಾಗ ಕಂದ
ನಿಮ್ಮ ಮಡ್ದಿರಾದ್ರು ಸರಿಯೇ
ನಿಮ್ಮ ಮಕ್ಕಳಾದ್ರು ಸರಿಯೇ
ನಿಮ್ಮ ಮಡ್ದಿ ಮಕ್ಕಳಾ ಕಂದ

ಕಂಡವರ ಮನೆಗೆ ನೀವು
ಕೂಲಿ ಕಂಬಳಕೆ ಕಳಗಬೇಡಿ || ಸಿದ್ಧಯ್ಯ ||

ಒಪ್ಪತ್ತು ಊಟ ಮಾಡಿ ಕಂದ
ಒಪ್ಪತ್ತು ಉಪಾಸ ಇದ್ರುವೇ ಮಗನೇ
ನಿಮ್ಮ ಮಡದಿ ಮಕ್ಕಳು ಮಾತ್ರ
ಕಂಡವರ ಮನೆಗೇ ಕೂಲಿ
ಕಂಬಳಕೇ ಕಳುಗುಸಬ್ಯಾಡಿ ಕಂದ
ಬಾಳಿ ಬದುಕಿ ನನ್ನ ಕಂದಾ
ಸಾಯುವಂತ ಕಡಗಾಲದಲ್ಲಿ
ನಿಮಗೆ ಪ್ರಾಣವೋಗೋದ್ಕು ಮೊದಲೇ
ನಾಲಗೇ ನಿಂತೋಗಲಪ್ಪ || ಸಿದ್ಧಯ್ಯ ||

ನಿಮಗೇ ಜೀವ ಹೋಗದ್ಕು ಮೊದಲೇ
ನಾಲಿಗೇ ನಿಂತೋಗುಲಯ್ಯ || ಸಿದ್ಧಯ್ಯ ||

ನಾನು ಕೊಟ್ಟಂತ ಶಾಪ ನಿಮಗೆ
ರಾಮೋಕ್ಷವಾಗಲಪ್ಪ || ಸಿದ್ಧಯ್ಯ ||

ನಾನು ಕೊಟ್ಟಂತಹ ಶಾಪ ಕಂದಾ
ಈ ಭೂಮಿ ಭೋಲೋಕ ನಡುವೆ
ನರ್‌ಲೋಕದಲ್ಲಿ ಕಂದಾ
ರಾಮೋಕ್ಷವಾಗಲೀ ಮಗನೇ
ಆಗಂದು ಜಗತ್ತು ಗುರು ಧರೆಗೆ ದೊಡ್ಡಯ್ಯ
ಇಂತ ಆಚಾರಿ ಮನಸ್ತನದಲ್ಲಿ ಇರ್ತಕ್ಕ
ಕೆಂಪಚಾರಿಗೆ ಶಾಪ ಕೊಟ್ಟುಬುಟ್ಟು
ಆಗಲೀಗ ಜಗತ್ ಗುರು ಧರೆಗೆ ದೊಡ್ಡಯ್ಯ

ಅವರು ಕೆಂಪಚಾರಿ ಮನೆಯ ದೇವ
ಬೇಗದಲ್ಲಿ ಬಿಡುವರಲ್ಲ || ಸಿದ್ಧಯ್ಯ ||

ಅವರು ಕೆಂಪಣ್ಣನ ಕುಲುಮೆ ಮನೆಯ
ಬೇಗದಲ್ಲಿ ಬಿಡುವರಲ್ಲ || ಗಂಗಾಧರ ||

ಗುರುವೇ ಕೆಂಪಣ್ಣನ ದೇವ
ಕುಲುಮೆ ಕಾರ್ಖಾನೆಯ
ಬಿಟ್ಟುಬಿಟ್ಟು ನನ್ನಪ್ಪಾ
ಧರೆಗೆ ದೊಡ್ಡವರು
ಅವರು ಎಲೆಯ ಕುಂದೂರು ಬೆಟ್ಟಕ್ಕೆ
ದೇವರು ದಯ ಮಾಡುತಾರೆ || ಸಿದ್ಧಯ್ಯ ||

ಕೆಂಪಣ್ಣನ ಕುಲುಮೆ ಕಛೇರಿ ಬುಟ್ಟು
ಜಗನ್‌ಜ್ಯೋತಿ ಅಲ್ಲಮಪ್ರಭು
ಮಂಟೇದ ಲಿಂಗಪ್ಪನವರು
ಎಲೆ ಕುಂದೂರು ಬೆಟ್ಟ
ಕಣ್ಣಾರ ನೋಡ್ತ

ಅವರು ಅಜ್ಜನ ಮೂಲೆಗಾಣೆ
ಕುಂದೂರು ಬೆಟ್ಟ ಹತ್ತುತಾರೆ || ಸಿದ್ಧಯ್ಯ ||

ಅವರು ಎಲೆಯ ಕುಂದೂರು ಬೆಟ್ಟ
ಗುರುವೇ ಗಳಗಳನೆ ಹತ್ತುತಾರೆ || ಸಿದ್ಧಯ್ಯ ||

ಅಜ್ಜನ ಮೂಲೆಗಾಣೆ
ಕುಂದೂರು ಬೆಟ್ಟ ಹತ್ತಗಂಡು
ಜಗತ್ತು ಕರುತು ಧರೆಗೆ ದೊಡ್ಡವರು
ಮಂಟೇದ ಸ್ವಾಮಿ
ಕೊಡೆಕಲ್ಲಗೆ ಬಂದು ನನ್ನಪ್ಪ
ಕೊಡೆಕಲ್ಲಿನ ಮ್ಯಾಗೆ ಕೂತ್ಕಂಡು
ಧರೆಗೆ ದೊಡ್ಡವರು
ಆಗಲೀಗ
ಕುಂದೂರು ಬೆಟ್ಟಕ್ಕೆ ಬಂದು ಮ್ಯಾಲೆ
ಕೊಡೆ ಕಲ್ಲಿಗೆ
ಬಂದು ಪಾವಾಡಿಸಿ ಧರೆಗೆ ದೊಡ್ಡವರು
ಮುತ್ತಿನ ಜೋಳಿಗ್ಗೆ
ಕೈಯಿಕ್ಕಿ ನನ್ನ ಗುರುವು

ಗುರುವೇ ಆರುಕಟ್ಟು ಉಡುಭಂಗಿ
ಆರುಕಟ್ಟು ತುಡು ಭಂಗೀ
ಆರುಕಟ್ಟು ಹೊಗೆ ಸೊಪ್ಪು
ಆರ್ಕಟ್ಟು ಭಂಗಿ ಸೊಪ್ಪು
ಇಪ್ಪತ್ತು ನಾಲ್ಕು ಕಂಡ್ಗ ಭಂಗಿ ಸೊಪ್ಪು ತಗದು
ಅಂಗೈನ ಮೇಲೆ ಸುರ್ಕಂಡು ನನ್ನ ಗುರುವು
ಗುರುವೇ ನಾಗರಾವಿನ ವಿಷ
ಯಾಕ್ಕುದಾಲ್ನ ರಸ
ಗುರುವೇ ಕಳ್ಳಿ ಹಾಲ ರಸ
ಪಂಚು ಪತುರೇ ರಸ
ಭಂಗಿ ಸೊಪ್ಪನ ರಸ
ಐದುವೇ ಕೂಡಿದ್ರುವೇ ದೇವ
ಪಂಚೈದು ಲೋಭ
ಅವರು ಪಂಚೈದು ಲೋಭದಲ್ಲಿ
ತೀಡಿ ಗಾಂಜ ಮಾಡುತಾರೆ || ಸಿದ್ಧಯ್ಯ ||

ಅವರು ಬಂಗಾರ್ದ ಚಿಲುಮೆಗೆ
ಜಡಿದು ಜಡಿದು ತುಂಬುತ್ತಾರೆ || ಸಿದ್ಧಯ್ಯ ||
ಅವರು ಜಡೆದು ಜಡಿದು ತುಂಬುತಾರೆ
ಅಪ್ಪ ಹಡದು ಹಡದು ತುಂಬುತಾರೆ || ಗಂಗಾಧರ ||

ಇಪ್ಪತ್ತುನಾಲ್ಕು ಕಂ‌ಡ್ಗ ಭಂಗೀ ಸೊಪ್ಪಾ
ಅಂಗೈಲೀ ತಿಡೀ ಮಿಷ್ಟಮಾಡ್ಕಂಡು
ಜಗತು ಗುರು ಧರೆಗೆ ದೊಡ್ಡಯ್ಯ
ಇಪ್ಪತ್ತು ನಾಲ್ಕು ಕಂಡ್ಗ ಭಂಗೀ ಸೊಪ್ಪು
ಬಂಗಾರದ ಚಿಲುಮಿಗೆ
ತುಂಬ್ಕಂಡು
ಅವರು ಚಕಮುಖಿ
ಒಡಿದರಂತೆ ತುರುಮೆ ಕೆಂಡ ತೆಗೆದರಂತೆ || ಸಿದ್ಧಯ್ಯ ||
ಗುರುವೇ ಚಕಮುಖಿ ಒಡೆದು
ತುರುಮೆ ಕೆಂಡಾ ತಗದು ಕಸ್ವಿ
ಪರಂಜ್ಯೋತಿ ಅಪ್ಪಾಜಿ ನನ್ನ ಗುರುವು
ಅವರು ಒಂದು ದಮ್ಮಸೇದಾರಲ್ಲ
ಬಲಗಾಡೆ ಜೋಲುತಾರೆ || ಗಂಗಾಧರ ||

ಅವರು ಎರಡು ದಮ್ಮ ಸೇದಾರಲ್ಲಸದ
ಎಡಾಗಾಡೆ ಜೋಲುತಾರೆ|| ಸಿದ್ಧಯ್ಯ ||
ಅವರು ಮೂರು ದಮ್ಮ ಸೇದಾರಲ್ಲ
ಕೂತು ತಾವೇ ಜೋಲುತಾರೆ || ಸಿದ್ಧಯ್ಯ ||

ಗುರುವೇ ಇಪ್ಪತ್ನಾಲ್ಕು ಕಂಡ್ಗ
ಭಂಗೀ ಸೊಪ್ಪು ಗುರುವು
ಧರೆಗೆ ದೊಡ್ಡಯ್ಯ ಮಂಟೇದಲಿಂಗಪ್ಪ
ಅದು ಒಂದು ಧಮ್‌ಗೆ ದೇವ
ತೀರ್ಲಿಲ್ಲ ಗುರುವು
ಅದು ಎರಡು ಧಮ್‌ಗೆ ಗುರುವೆ
ಉಳಿಲಿಲ್ಲ ನನ್ನಪ್ಪಾ
ಗುರುವೆ ಮೂರು ಧಮ್‌ಗೆ ದೇವ
ಬೂದಿಯಾಗಿ ಸುರುದೋಯಿತಲ್ಲ || ಸಿದ್ಧಯ್ಯ ||

ಇಪ್ಪತ್ತು ನಾಲ್ಕು ಕಂಡ್ಗ ಭಂಗಿ ಸೊಪ್ಪ ದೇವ
ಒಂದು ಧಮ್‌ಗೆ ತೀರ್ಲಿಲ್ಲ
ಎರಡು ಧಮ್‌ಗೆ ಉಳೀಲಲ್ಲ
ಮೂರು ಧಮ್‌ಗೆ ಬೂದಿಯಾಗಿ
ಜ್ವಳ ಜ್ವಳನೆ ಸುರ್ದೋಯ್ತು ಗುರುವು
ಆರು ಕಂಡ್ಗ ಬೂದಿಯಾಯ್ತು
ಆರು ಕಂಡ್ಗ ಬೂದಿತಗದು
ಭೂಮಿ ಮ್ಯಾಲೆ ಸುರ್ದು ಬುಟ್ಟರು
ಜಗತ್ ಗುರು ಧರೆಗೆ ದೊಡ್ಡಯ್ಯ
ಇಪ್ಪತ್ತು ನಾಲ್ಕು ಕಂಡ್ಗ ಭಂಗೀ ಸೊಪ್ಪನ
ಹೊಗೆಯ
ಒಂದು ಚೂರು ಹೂಗೆ ಗುರುವು

05_79_Mante-KUH

ಹೊರಗಡೆ ಬುಡಲಿಲ್ಲ ನನ್ನಪ್ಪ
ಗುರುವೇ ಬಂದ ಬಂದ ಹೊಗೆಯ
ಗುರುವೇ ಗೊಟ ಗೊಟನೆ ಕುಡುದವರೇ
ಹೊಟ್ಟೆಗೆ ನುಂಗವರೇ
ಅವರು ಭಂಗೀ ಕುಡಿದ ಗ್ಯಾನದಲ್ಲಿ
ಪ್ರಪಂಚ ಮರತೋದರಲ್ಲ || ಸಿದ್ಧಯ್ಯ ||

ಇಪ್ಪತ್ತು ನಾಲ್ಕು ಕಂಡ್ಗ
ಭಂಗೀ ಸೊಪ್ಪಿನ ಹೊಗೆಯ
ಹೊಟ್ಟೆಲಿ ತುಂಬ್ಕಂಡು
ಜಗತ್ತು ಗುರು ಧರೆಗೆ ದೊಡ್ಡವರು
ಮಂಟೇದಸ್ವಾಮಿ
ಎಲೆ ಕುಂದೂರು ಬೆಟ್ಟದ ಮ್ಯಾಲೆ ಕೂತ್ಗಂಡು
ಕೆಂಪಚಾರಿಯವರ ಕುಲುಮೆ ಕಛೇರಿ
ಕಣ್ಣಿಂದ ನೋಡದ್ರು
ಎಲೇ ಕುಂದೂರು ಬೆಟ್ಟದಲ್ಲಿ
ಕೆಂಪಣ್ಣನ ಕುಲುಮೆ ಕಾರ್ಖಾನೆ
ನೋಡಬುಟ್ಟು
ಧರೆಗೆ ದೊಡ್ಡಯ್ಯ
ಇಪ್ಪತ್ತುನಾಲ್ಕು ಕಂಡ್ಗ
ಭಂಗೀ ಸೊಪ್ಪಿನ ಹೊಗೆಯ
ಹೊಟ್ಟೇಲಿ ಕುಡ್ಕಂಡಿದ್ರು ಗುರುವು

ಅವರು ಕೆಂಪಚಾರಿ ಕುಲುಮೆ ಮನೆಗೆ
ಉಫ್ ಅಂತ ಉರುಬುತಾರೆ || ಸಿದ್ಧಯ್ಯ ||

ಗುರುವೆ ಇಪ್ಪತ್ತು ನಾಲ್ಕು ಕಂಡ್ಗ
ಗುರುವೆ ಭಂಗಿ ಸೊಪ್ಪಿನ ಹೊಗೆಯ
ಕೆಂಪಚಾರಿ ಕುಲುಮೆ ಮನೆಗೆ
ಉಫ್ ಅಂತ ಉರುಭವರೇ
ಧರೆಗೆ ದೊಡ್ಡಯ್ಯ ಬಿಟ್ಟಂತ ಹೊಗೆ
ಅಯ್ಯಾ ಮಾರುವಳ್ಳಿ ಗ್ರಾಮವೆಲ್ಲ
ಕತ್ತಲೆ ಕವಿದೋಯತಲ್ಲ || ಸಿದ್ಧಯ್ಯ ||