ನಾನು ಪಡೆದಿರುವಂತ ನರ್‌ಲೋಕಕ್ಕೆ ಕಂದಾ
ನಿನ್ನ ಭಂಗೀ ಸಿದ್ಧನ
ಮಾಡಿ ಬುಡುತ್ತೀನಿ ಮಗು ಕೆಂಪಣ್ಣ
ನಿನ್ನ ಹೆಂಡರಿಲ್ಲದವನಾ
ನಾ ಪುಂಡುಗಾರನ ಮಾಡುತೀನಿ|| ಸಿದ್ಧಯ್ಯ||

ನಿನ್ನ ಹುಟ್ದುದವನ ಹುಟ್ಟುದಾಗೆ
ನಾ ಭೂಮಿ ಮ್ಯಾಲೇ ಮಡಗುತೀನಿ || ಸಿದ್ಧಯ್ಯ||

ಹುಟ್ಟುದವನ ಹುಟ್ಟುದಂಗೆ ಕಂದಾ
ನಿನ್ನ ನಿಲ್ಲಿಸ್ತೀನೀ ಮಗನೇ ಕೆಂಪಣ್ಣ
ನಾನು ಪಡೆದಿರುವ
ನರ್‌ಲೋಕಕ್ಕೆ ಕಂದಾ
ನಿನ್ನ ಭಂಗೀಸಿದ್ಧನ ಮಾಡಿ ಬುಡ್ತೀನಿ ಎನತೇಳಿ
ಜಗನ್‌ಜ್ಯೋತಿ ಧರೆಗೆ ದೊಡ್ಡವರು
ಕೆಂಪಣ್ಣನ ಮುಂಭಾಗದಲ್ಲಿ
ಸುಮ್ಮನೇ ನಿಂತಿದ್ದರು

ಗುರವೇ ನಿಂತಿರುವ ಗುರುವಿನ ಮೊಕವ
ಮಟಮಟನೇ ನೋಡುತಾನೆ || ಸಿದ್ಧಯ್ಯ||

ನಿಂತಿರುವಂತ ಧರೆಗೆ ದೊಡ್ಡವರ
ಮೊಕವಾ
ಎರಡು ಕಣ್ಣಿಂದ ನೋಡ್ಕಂಡು ಕೆಂಪಣ್ಣ
ಏನೋ ಜಂಗುಮಾ
ಏನೋ ಭಿಗಸೀಕಾ
ನನ್ನ ಕುಲುಮೇ ಕಾರ್ಖಾನೆಗೆ
ಯಾತಕ್ಕೆ ಬರೋಕ್ಕೋದೇ
ನನ್ನ ಕುಲುಮೆ ಕಛೇರಿಗೆ
ಯಾಕೆ ಬಂದೆ ಜಂಗುಮ
ಊರೋರುಗೇ ವಂಟೋಗಿದ್ದರೇ
ರಾಗಿ ಜ್ವಾಳ ಸಿಕ್ತಿತ್ತು
ಆಗಲೀಗ ಮನೆಮನೆಗೆ ವಂಟೋಗುಬುಟ್ಟಿದ್ದರೇ
ಮುದ್ದೇ ಸಿಕ್ಕುತ್ತಿತ್ತು
ಮುದ್ದೇ ಇಸ್ಕಂಡು ಉಣ್ಣಕ್ಕಂಡು ತಿನ್ನಕ್ಕಂಡು
ಮಾರಿ ಚವಡೀಗೆ ಹೋಗಿ
ಬಿದ್ದಿದ್ದು ಕೆಡದಿದ್ದು
ಬೆಳಗಾದ ಮ್ಯಾಲೆ ಎದ್ದೋಗಬಹುದಾಗಿತ್ತು
ಇವತ್ತಿನ ದಿವಸ್ದಲ್ಲಿ
ನನ್ನ ಕುಲುಮೆ ಕಛೇರಿಗೆ ಬಂದೀದ್ದೀಯಲ್ಲ
ಈ ಕಬ್ಬಿಣ್ದಂಗಡಿ
ಒಳಗೆ ನೊಣಿಗೇನು ಹಗ್ಗುವಲ || ಸಿದ್ಧಯ್ಯ||

ನನ್ನ ಕಬ್ಬಿಣ್ಣಂಗದಿಯೊಳಗೇ
ನೊಣೀಗೇನು ಹಗ್ಗ
ಕಾಯಿ ಮಾರೋ ಸಂತೆ ಒಳಗೆ
ನಾಯಿಗೇನೋ ಹಗ್ಗ
ನನ್ನ ಕುಲುಮೆ ಮನೆಗೇ ನೀನು
ಏನು ಬೇಡಕೇ ಬಂದೆ || ಸಿದ್ಧಯ್ಯ||

ಕುಲುಮೇ ಕಾರ್ಖಾನೆಗೇ
ಏನು ಬೇಡಕೆ ಬಂದಿದ್ದೀಯೊ ಜಂಗುಮಾ
ಊರೂರ್ಗೊಂಟೋಗ್ಬುಡು
ರಾಗಿ ಜ್ವಾಳ ಕೊಡ್ತರೇ
ಹೋಗೊ ಜಂಗುಮಾ
ಮನೆ ಮನೆಗೊಂಟೋಗು ಮುದ್ದೇ ಕೊಡ್ತರೇ
ಇದುವಲ್ದಂತೆ ಅಂಗಡಿ ಬೀದಿಗೆ ವೊಂಟೋದರೆ ನಿನ್ಗೆ
ಕಾಸು ದುಡ್ಡು ಕೊಡ್ತರೆ ಕಣೋ
ಈ ಕುಲುಮೆ ಕಛೇರಿಗೆ ಏನು
ಬೇಡಾಕೆ ಬಂದಿದ್ದೀಯೊ
ಹೊರಟೋಗುಬುಡು ಎಂದರು
ಏನಪ್ಪ ನನ್ನ ಕಂದ ಕೆಂಪಣ್ಣ
ಬಿಕ್ಷ ಮಾಡುವಂತ ಫಲವ
ನಾನು ಪೂರ್ವದಲ್ಲೇ
ಪಡ್ಕಂಡುಬುಟ್ಟೀ ಕಂದಾ
ಬಿಕ್ಷ ಮಾಡುವಂತ ಫಲ
ನಾನಾಗಲೇ ಪಡ್ಕಂಡಿ ಮಗನೇ
ಹೇಳ್ತೀನಿ ಕೇಳು ನನ್ನ ಕಂದ ಕೆಂಪಣ್ಣ
ಈ ಭೂಮಿ ಭೂಲೋಕ ನಡುವೇ
ನರ್‌ಲೋಕದಲ್ಲಿ ಕಂದಾ
ನಿನ್ನ ಕುಲುವೆ ಕಾರ್ಖಾನೆಗೆ
ಯಾತಕ್ಕೆ ಬಂದೀ ಅಂದ್ರೇ ಮಗನೇ
ದೂರದಲ್ಲಿ ನಿಂತ್ಕಂಡು
ನೋಡುದೀ ಕೆಂಪಣ್ಣ
ನಿನ್ನ ಕುಲುಮೆ ಮನಿಂದ
ಹೊಗೆ ಆಕಾಶಕ್ಕೆ ಹೋಯ್ತಿತ್ತು
ಹೊಗೆ ನೋಡುಬಿಟ್ಟು
ನಿನ್ನ ಕುಲುಮೆ ಕಛೇರಿಗೆ
ಬಂದ್ಬುಟ್ಟಿ ಕಂದಾ
ಯಾಕೇ ಅಂದ್ರೇ
ನನಗೇ ಊಟ ಊಟಕ್ಕೆಲ್ಲ
ಭಂಗೀ ಊಟ ಅಂದ್ರೇ
ಬಂಗಾರ್ದಂತ ಊಟ ಕಂದಾ
ಅದಕ್ಕಾಗಿ ನಿನ್ನ ಕುಲುಮೇ
ಕಛೇರಿಗೆ ಬಂದುಬುಟ್ಟಿ ಮಗನೇ

ಕಂದಾ ಭಂಗಿ ಸೇದೋದ್ಕೆ ಸ್ವಲ್ಪ
ಬೆಂಕೀ ಕೆಂಡ ಕೊಡೋ ಕಂದ || ಸಿದ್ಧಯ್ಯ||

ಅಪ್ಪ ಕೆಂಡ ಕೊಟ್ಟರೆ ನಿನಗೆ
ಬಾಳ ಧರುಮ ಬರುವುತಾದೆ || ಸಿದ್ಧಯ್ಯ||

ನನಗೆ ಬೆಂಕಿ ಕೊಟ್ಟರೇ ಕಂದಾ
ಬಾಳ ಪುಣ್ಯ ಬರುವುತಾದೇ || ಸಿದ್ಧಯ್ಯ||

ಬೆಂಕಿ ಕೆಂಡ ನನಗಾಗಿ ಕೊಟ್ಟರೇ ಕಂದಾ
ನಿನಗೆ ಬಾಳ ಧರ್ಮ ಬರ್ತದೇ ಕಂದ
ಬಾಳ ಪುಣ್ಯ ಬರ್ತದೆ ಮಗು
ಭಂಗಿ ಸೇದ್ಕಂಡು ವಂಟೋಗುಬುಡ್ತಿನೀ
ಕೆಂಡ ಕೊಡಪ್ಪ ಕಂದಾ ಎಂದರು
ಏನೋ ಜಂಗುಮಾ
ನನ್ ಕುಲುಮೆ ಕಛೇರಿಗೆ ಬಂದ್ಬುಟ್ಟು
ಭಂಗಿ ಸೇದಕ್ಕೆ ಬೆಂಕಿ ಕೆಂಡ
ಕೊಡು ಅಂತ ಕೇಳ್ದಿಯ

ಲೋ ಕೆಂಡ ಕೋಡೋದಕ್ಕೆ ಒಬ್ಬ
ಆಳು ತಗದು ಮಡ್ಗಿದ್ದೀಯ || ಸಿದ್ಧಯ್ಯ||

ನಿನಗೆ ಕೆಂಡ ಕೊಡುದಕ್ಕೆ
ಒಂದು ಆಳು ತಗದು ಮಡ್ಗಿದ್ದಿಯಾ || ಸಿದ್ಧಯ್ಯ||
|| ಸಿದ್ಧಯ್ಯ||

ನಿನಗೆ ಬೆಂಕಿ ಕೆಂಡ ಕೊಡೋಗಂಟಾ
ನನಗೆ ಒಂದು ಕಾರ್ಯ ಕಮ್ಮಿಯಾಯ್ತದೆ ಕಣೋ ಪರದೇಶಿ
ನಿನಗೆ ಬೆಂಕಿ ಕೆಂಡ ಕೊಟ್ರೂ ಕೊಡ್ಬೋದು
ನೀನು ಕೆಂಡ ಕೇಳಿದರೆ
ನಾನು ಯಾತುರಲಿ ಕೊಡಬೇಕು || ಸಿದ್ಧಯ್ಯ||

ಕೆಂಡ ಕೇಳ್ತಿಯೆ ಜಂಗುಮ
ಕೆಂಡ ಬೇಕಾದರೇ ಯಾತ್ರಲ್ಲಿ ಕೊಡಬೇಕು ಎಂದರು ಕೆಂಪಣ್ಣ
ಕೆಂಪಣ್ಣ
ಬೆಂಕಿ ಕೆಂಡ ಯಾತ್ರಲ್ಲಿ
ಕೊಡಬೇಕು ಅಂತ ಕೇಳ್ದಿಯಾ
ಕೆಂಪಣ್ಣ
ಹೇಳ್ತಿನೀ ಕೇಳು
ನಿನ್ನ ಕುಲುಮೆ ಮುಂಭಾಗದಲ್ಲಿ ಕಂದಾ
ಆಳುದ್ದ ರಾಶಿ ಹಾಕದಲ್ಲೇ ಕಂದಾ
ಆಳುದ್ದ ರಾಶಿ ಒಳಗೆ ಬಲಭಾಗದಲ್ಲಿ
ಬಿದ್ದದೆ ನೋಡು ಬಾಚಿ ಚಕ್ಕೆ
ಕೆಂಪಣ್ಣ
ಆಡುವಲ್ಲದಂತೆ
ನಿನ್ನ ಕುಲುಮೆ ಬೂದಿವಳಿಗೆ
ಬಿದ್ದದಲ್ಲಪ್ಪ ಗ್ವಾಡೆ ಬೆರಣಿ
ಕೆಂಪಣ್ಣ
ಬಾಚಿ ಚಕ್ಕಲೇ ಬೆಂಕಿ ಮಡಗೀ
ಗ್ವಾಡೆ ಬೆರಣೀ ಮುಚ್ಚುಕೊಡು || ಸಿದ್ಧಯ್ಯ||

ಬಾಚಿ ಚೆಕ್ಕೆಲೀ ಬೆಂಕಿ ಮಡುಗ್ಬುಟ್ಟು ಕಂದಾ
ಗ್ವಾಡೆ ಬೆರಣಿ ಮುಚ್ಚಿ ಕೊಡಪ್ಪಾ
ಕಂದಾ ಕೆಂಪಣ್ಣ ಎಂದರು
ಏ ಜಂಗುಮ
ಬಾಚಿ ಚೆಕ್ಕೇಲಿ ಬೆಂಕಿ ಮಡ್ಗುಬು‌ಟ್ಟು
ಗ್ವಾಡೆ ಬೆರಣಿಲಿ ಮುಚ್ಚುಕೊಟ್ಟುಬುಡು
ಅಂತ ಕೇಳ್ದಿಯಲ್ಲ
ಲೋ ಬಾಚಿ ಚೆಕ್ಕೆ ಎಂಬುದ
ನಿಮ್ಮಜ್ಜಯ್ಯ ಕೆತ್ತಿದನೇನೊ || ಸಿದ್ಧಯ್ಯ||

ಆ ಗ್ವಾಡೆ ಬೆರಣಿ ಎಂಬುದ
ನಿಮ್ಮಜ್ಜ ಹಾಕಿಸಿದನೇನೊ || ಸಿದ್ಧಯ್ಯ||

ಅಯ್ಯಾ ಕೇಳು ನನ್ನ ಕಂದಾ
ಕೇಳಪ್ಪ ನನ್ನ ಮಗನೇ
ಕೇಳು ನನ್ನ ಮಗು
ಎಳೆಯವನೇ ಕೆಂಪಣ್ಣ
ಲೋ ಅಜ್ಜಯ್ಯ ನನಗಿಲ್ಲ
ಅಜ್ಜಮ್ಮ ನನಗಿಲ್ಲ
ತಂದೆ ನನಗಿಲ್ಲ ತಾಯಿ ನನಗಿಲ್ಲ
ಅಣ್ಣ ತಮ್ಮ ಮೊದಲಿಲ್ಲ ನನ್ನ ಕಂದಾ
ನನಗೆ ಮಡದೀ ಸುಖ ಇಲ್ಲ
ಮಕ್ಕಳು ಕಾಟ ಇಲ್ಲ
ಸಂಸಾರದ ಸುಖ ನನಗಿಲ್ಲ ನನ್ನ ಕಂದಾ
ನಾ ಕಾಡಲ್ಲಿ ಹುಟ್ಟಿದವನು
ಮಗನೇ ಕಾಡಲ್ಲಿ ಬೆಳದವನು
ನಾ ಹೆಂಡೂರಿಲ್ಲದವನು
ನಾ ಪುಂಡ್ಗರ ನನ್ನ ಕಂದಾ
ಈ ಪುಂಡ್ಗಾರನ ವಂದ್ಗೇ
ನೀ ಹುಡುಗಾಟ ಆಡಬೇಡ || ಸಿದ್ಧಯ್ಯ||

ಪುಂಡುಗಾರನ ವಂದಗೇ
ಹುಟುಕಾಟ ಆಡಬೇಡ ಮಗು ಕೆಂಪಣ್ಣ
ಭಂಗಿ ಸೇವನೆ ಮಾಡ್ಕಂಡು
ವಂಟೋಗುಬುಡ್ತೀನಿ
ಕೆಂಡ ಕೊಟ್ಟುಬಿಡಪ್ಪ ಎಂದರು
ಏ ಜಂಗಮ
ನಿನ್ನ ಜೊತೆ ಒಳಗೆ ನನಗೆ ಹುಡುಗಾಟವೇನೊ
ಈಗಲೀಗ ಕುಲುಮೆ ಕಾರ್ಖಾನೆಗೆ ಬಂದು
ಭಂಗಿ ಸೇದ್ಬೇಕು ಬೆಂಕಿ ಕೆಂಡ ಕೊಡು ಅಂತ ಕೇಳ್ದೆಯಲ್ಲ
ಈಗ ನಿನಗೆ ಕೆಂಡ ನಾನು ಕೊಡಬೇಕಾದ್ರೇ
ಬಾಚಿ ಚೆಕ್ಕೆ ಮ್ಯಾಲೇ ಮಡಗೀ
ಬೆರಣಿ ಮೇಲೆ ಮುಚ್ಚಿ
ಕೊಟ್ಟು ಬಿಡು ಅಂದು ಕೇಳ್ದಿಯಲ್ಲ ಪರದೇಶಿ
ನಿನಗೆ ಕೆಂಡಕೊಡ್ತಿನೀ
ಆದ್ರೂ ಕೂಡ ಹೇಳ್ತಿನಿ ಕೇಳು
ಬಾಚಿ ಚಕ್ಕೆ ಒಳಗೇ ಕೊಡೋದಿಲ್ಲ
ಬೆರಣಿ ಸುಂಟಿವಳಗೊ ಕೂಡ ಕೊಡೀದಿಲ್ಲ
ನಾನು ಎತ್ತಭಾರದ ಕೆಂಡ
ಇಕ್ಕಳ್ದಲ್ಲಿ ಇಡಕ್ಕಂಡು
ಈರುಳ್ಳಿ ಭಾವನಕ್ಕೆ
ಕೆಂಡ ರವರವನೇ ಕಾಯ್ಸಿಕ್ಕಂಡು
ಅಯ್ಯಾ ಎತ್ತಬಾರ್ದ ಕೆಂಡಾ
ಮುಂಭಾಗಕ್ಕೆ ನಾನು ತೂದು ಹಿಡುತಿನಿ
ನಿನಗೇ ಕೆಂಡ ಬೇಕಾದರೇ
ನಿನ್ನ ಎರಡು ಹಸ್ತ ಒಡ್ದೂ ಎಂದ || ಸಿದ್ಧಯ್ಯ||

ಬೆಂಕಿ ಕೆಂಡ ಬೇಕಾದ್ರೆ
ನಿನ್ನ ಎರಡಸ್ತ ಒಡ್ಡು
ನಿನ್ನ ಹಸ್ತಕ್ಕೆ ಕೆಂಡ ಕೊಡ್ತೀನಿ ಎಂದರು
ಕೆಂಪಣ್ಣ
ನನ್ನ ಹಸ್ತಕ್ಕೆ ಕೆಂಡ ಕೊಟ್ಟಿಯಪ್ಪ
ನನ್ನ ಹಸ್ತಕ್ಕೆ ಕೆಂಡ ಕೊಟ್ಟುರೇ ಕಂದ
ನನ್ನ ಹಸ್ತ ಉಳ್ದದಾ ಕೆಂಪಣ್ಣಾ
ಗೋಲಿಗಾತ್ರ ಗೆಜ್ಜದ ಗಾತ್ರ
ದಾಮದ್ಗಾತ್ರಾ ಕಂದಾ
ಅಳ್ಳಪ್ಪೆ ಚಿಳ್ಳಪ್ಪೆ ಎದ್ದು ಬಿಡ್ತವೇ
ಬ್ಯಾಡ ಕಣ್ಣಪ್ಪ ಎಂದರು
ಏ ಜಂಗುಮಾ
ಬೆಂಕಿ ಬೇಕದರೇ ಹಸ್ತಕ್ಕೆ ಈಸ್ಕೋ
ಬೆಂಕಿ ಬ್ಯಾಡದೇ ಹೋದ್ರೆ
ನನ್ನ ಕುಲುಮೆ ಕಾರ್ಖಾನೆ ಬುಟ್ಟು
ಆಚೆಗೆ ತೊಲಗೋಗೊ ಪರದೇಶಿ ಎಂದರು
ಕೆಂಪಣ್ಣ
ಹಾಗಾದ್ರೆ ನನ್ನ ಹಸ್ತಕ್ಕೆ
ಕೆಂಡ ಕೊಟ್ಟಿಯಪ

ಕೊಟ್ಟುಬುಡು ನನ್ನ ಕಂದಾ
ಕೊಟ್ಟುಬುಡು ನನ್ನ ಮಗು
ಆಗಂದು ನನ್ನ ಗುರುವು
ಧರೆಗೆ ದೊಡ್ಡಯ್ಯ
ಅವರು ಕೆಂಪಣ್ಣನ ಕುಲುಮೆ ಮುಂದೇ
ಎರಡು ಹಸ್ತ ಒಡ್ಡುತಾರೆ || ಸಿದ್ಧಯ್ಯ ||

ಕೆಂಪಣ್ಣನವರ ಕುಲುಮೆ ಮುಂಭಾಗದಲ್ಲಿ ದೇವಾ
ಎರಡು ಹಸ್ತ ಒಡ್ಡಿ ನಿಂತ್ಗಂಡರು
ಜಗತ್ತು ಗುರು ಧರೆಗೆ ದೊಡ್ಡವರು
ಮಂಟೇದಲಿಂಗಪ್ಪ
ಹಸ್ತ ಒಡ್ಕಂಡು ನಿಂತಿರುವಂತ
ಜಗತ್ಗುರುಗಳ ಮೊಕ ನೋಡುಬುಟ್ಟು ಕೆಂಪಣ್ಣ
ಎತ್ತು ಬಾರದ ಬೆಂಕಿ ಕೆಂಡ
ಇಕ್ಕುಳ್ದಲ್ಲಿ ಇಡಕ್ಕಂಡು
ಈರುಳ್ಳಿ ರವಕ್ಕೆ ರವರವನೇ
ಕೆಂಡಾ ಕಾಯ್ಸಕೊಂಡು ದೊಡ್ಡವರ ಹಸ್ತಕ್ಕೆ
ಬೆಂಕಿ ಕೆಂಡ ಇಡುವಂತ ಕಾಲ್ದಲ್ಲಿ
ಕೆಂಪಣ್ಣನ ಇಕ್ಕುಳ್ದಲ್ಲಿ ಇರುವಂತ
ಅಗ್ನಿದೇವತೆ
ಅವಳು ಗುಳುಗುಳನೇ ಅಳುತಾಳೆ
ಬಾಳ ದುಃಖ ಮಾಡುತಾಳೆ || ಸಿದ್ಧಯ್ಯ ||

ಆಗಲೀಗ ಅಗ್ನಿದೇವತೆ
ಕಣ್ಣೀರ ಸುರ್ಸಕ್ಕಂಡು
ದುಃಖ ಮಾಡ್ಕಂಡು
ಒಕ್ಕು ಒಕ್ಕಳ ಕಣ್ಣೀರ
ದಾರವತಿಯಾಗಿ ಸುರಿಸ್ತ ಅಗ್ನಿದೇವತೆ
ಕೆಂಪಣ್ಣ
ಈ ಭೂಮಿಗೆ ದೊಡ್ಡವರ
ಹಸ್ತಕ್ಕೆ ನನ್ನ ಕೊಡ್ತಿಯಲ್ವಪ್ಪ
ಈ ಜಗಕ್ಕೆ ದೊಡ್ಡವರ ಹಸ್ತಕ್ಕೆ
ನನ್ನ ಕೊಟ್ಟುಬುಟ್ಟು ಮ್ಯಾಲೆ
ಈ ಧರೆಗೆ ದೊಡ್ಡವರ ಹಸ್ತದ ಮ್ಯಾಲೆ
ನಾನೇನಾರು ಕತ್ತಿ ಉರ್ದುಬಿಟ್ರೇ ಕಂದಾ
ನಾಳೆ ಕಾಲ ನನ್ನಗೆ ಯಾವ ಕಷ್ಟ
ಕೊಟ್ಟುಬಿಟ್ಟರೊ ಯಾವ ಭವ ಭಂದಾನ
ಕೊಟ್ಟುಬಿಟ್ಟರೋ ಅಂತೇಳಿ ಅಗ್ನಿದೇವತೆ
ಧರೆಗೆ ದೊಡ್ಡವರ ಕೈಗೆ
ಆಗಲೀಗ ಹಸ್ತಕ್ಕೆ ಬರುವಾಗ
ಕೆಂಪಣ್ಣನ ಕಣ್ಣಿಗೇ
ದಗಧಗನೇ ಕತ್ತಿ ದಿಗದಿಗನೇ ಉರಿಯೋಳಂತೇ
ಧರೆಗೆ ದೊಡ್ಡವರ ಹಸ್ತಕ್ಕೆ
ಅಗ್ನಿದೇವತೆ ಬರುವಾಗ
ಯಾವು ರೀತಿ ಬರುತ್ತಾಳೆ
ಅಂದ್ರೇ ತಾಯಿ
ಪರಶಿವನ ಮಡ್ದಿ ಪಾರ್ವತಾದೇವಿ
ಪಾರ್ವತಾ ದೇವಿ
ಮಂಡೇಲಿರ್ತಕ್ಕಂತ
ಕೆಂಡದವರೇ ಪುಷ್ಮವಾಗಿ
ಧರೆಗೆ ದೊಡ್ಡೋರ ಹಸ್ತದಮೇಲೆ
ಅಗ್ನಿದೇವತೆ ಕುಳತಗಂಡಳು || ಸಿದ್ಧಯ್ಯ ||

ಧರೆಗೆ ದೊಡ್ಡೋರ ಹಸ್ತದ ಮೇಲೆ
ಅಗ್ನುದೇವತೆ ತಾನಾಗಿ
ಕೂತಗಂಡಳು
ಕೂತ್ಗಂಡಂತಹ ಕಾಲದಲ್ಲಿ
ಎಳೆಯವನು ಕಂದಾ
ಚಿಕ್ಕವ್ವನು ಮಗನು ಕಿರಿಕೆಂಪಣ್ಣ
ಈ ಬಿಕ್ಷಿಕನ ಕೈಗೆ
ಬೆಂಕಿ ಕೊಟ್ಟು ಬುಟ್ಟಿ ಅನತೇಳಿ

ಅವನು ಕಿಲಕಿಲನೇ ನಗುತಾನೆ
ಮಂಚದಲ್ಲಿ ಕುಳಿತವನೇ || ಸಿದ್ಧಯ್ಯ ||

ಕಿಲಕಿಲನೆ ನೆಗುನಾಡಿಕ್ಕೊಂಡು
ಪಟ್ಟೇ ಮಂಚದ ಮೇಲೆ
ಕೂತ್ಗಂಡ ಕೆಂಪಣ್ಣ
ಆಗಲೀಗ ಕೊಟ್ಟಂತಹ ಅಗ್ನುದೇವತೆ
ಕೆಂಡದಾವರೆ ಪುಷ್ಮವಾಗಿ ಬಂದು
ಧರೆಗೆ ದೊಡ್ಡವರ ಹಸ್ತದ ಮೇಲೆ
ಅಗ್ನಿದೇವತೆ ಕೂತ್ಕಂಡರು
ಕೂತ್ಕಂಡಂತಹ ಅಗ್ನುದೇವತೆ
ತಗದು ಮುತ್ನು ಜೋಳ್ಗೇಲೀ
ಮಡೀಗಂಡು ಧರಗೆ ದೊಡ್ಡವರು
ಕೆಂಪಣ್ಣ
ಈ ಭಿಕ್ಷಕನ ಕೈಗೆ
ಬೆಂಕಿ ಕೊಟ್ಟುಬಿಟ್ಟೆ ಅಂತೇಳಿ
ಹಿಗ್ಗು ಬ್ಯಾಡ ತಗ್ಗುಬ್ಯಾಡ
ಅನ್ನದ ಮದ
ನೀರ್ನ ಮದ
ಕ್ರಾಮ ಕ್ರೋಧ ಹೆಚ್ಕೊಂಡು
ಮೇರೀ ಬೇಡ ಕಂದಾ
ಕೆಂಪಣ್ಣ
ಇವತ್ತು ತುಂಬ್ದ ಸೋಮಾರ
ನನ್ನ ಹಸ್ತಕ್ಕೆ ಕೆಂಡ ಕೊಟ್ಯಾ ಮಗನೇ
ಈಗ ನನ್ನ ಹಸ್ತಕ್ಕೆ ಕೆಂಡ
ನೀನು ಕೊಟ್ಟುಟ್ಟ ಮೇಲೆ
ನಾನು ಇಟ್ಟುಬಿಟ್ಟು ಹೋದ್ರೆ ವರ
ಕೊಟ್ಟುಟ್ಟೋದ್ರೆ ಶಾಪ
ಇವತ್ತು ನನ್ನ ಹಸ್ತಕ್ಕೆ
ನೀನು ಬೆಂಕಿ ಕೆಂಡ
ಕೊಟ್ಟ ಮೇಲೆ ಮಗನೇ

ನನ್ನ ಹಸ್ತ ಉರುದೋದಂಗೆ
ನಿನ್ನ ವಂಶವೇ ಉರುದೋಗಲಪ್ಪ || ಸಿದ್ಧಯ್ಯ ||