ಮಂಟೇದ ಲಿಂಗಪ್ಪನ ಮೊಕವ ತಾಯಿ
ಕಣ್ಣಾರ ನೋಡುಬುಟ್ಟು
ಆಚಾರ್ಯ ಮನೆದೇವತಿ
ಕುಲುಮೆ ಕಾಲಮ್ಮ ಕಾಳಕದೇವತಿ
ಗುರುದೇವ
ಇವತ್ತು ಮಟ್ಟ ಮಂಗಳವಾರುವಲ್ಲ
ಸುಟ್ಟೂ ಶುಕ್ರವಾರುವಲ್ಲ
ತುಂಬುದ ಸೋಮಾರವಲ್ಲವಲ್ಲ ಬುದ್ಧಿ
ಬಾವ್ವ ಮಾರವ್ವ ಬಾವ್ವ ಮಾರಮ್ಮ
ಅಂತೇಳಿ ಅತೀ ಪ್ರೇಮದಲ್ಲಿ ಕೂಗುದ್ರಿಯಲ್ಲಪ್ಪ
ಗುರುದೇವ
ಯಾತಕ್ಕೆ ನನ್ನ ಕರಿದ್ರೀ
ಹನ್ನೆರಡು ವರ್ಷದಿಂದ ಬುದ್ಧಿ
ನನಗೆ ಆಹಾರ ಕೊಡ್ಲಿಲ್ಲವಲ್ಲೋ ನನ್ನಪ್ಪಾ
ಹನ್ನೆರಡು ವರ್ಷದಿಂದ
ನನಗೆ ಕುರಿತಲೆಯಿಲ್ಲ
ಮರಿತಲೆಯಿಲ್ಲ ಕೋಣನ ಬಲಿ ಇಲ್ಲ
ನನ್ನಪ್ಪ
ಹನ್ನೆರಡು ವರ್ಷಕ್ಕೆ
ಇವತ್ತು ಕರ್ದಿದ್ದೀರಿ ಬುದ್ಧಿ
ಎಲ್ಲಿಗೆ ಹೋಗಬೇಕು
ಯಾತಾಕು ಹೋಗಬೇಕು

ಅಪ್ಪ ತೋರಪ್ಪ ನಿನ್ನ ವೈರಿಗಳ
ಒಂಟೋಯ್ತಿನಿ ಎಂದಾಳಂತೆ || ಸಿದ್ಧಯ್ಯ ||

ತೋರಿ ಗುರುದೇವ ನಿನ್ನ ವೈರಿಗಳ ನನ್ನಪ್ಪಾ
ಒಂಟೋಯ್ತಿನಿ ಗುರುವೇ
ಒಂಟೋಯ್ತಿನಿ ನನ್ನಪ್ಪ
ಎಲ್ಲಾಣೆ ಹೋಗಬೇಕು
ಯಾತವಾಕಾಣೆ ಹೋಗಬೇಕು
ಯಾರಟ್ಟಿ ಯಾರು ಮನೆಗೆ ಹೋಗಬೇಕು
ನೀವು ಹೇಳಿದ ಮನೆ ಬುಡೋದಿಲ್ಲ
ನೀನು ಬಿಟ್ಟು ತೋರ್ದ ಮನೆಗೆ
ನಾ ಒಂಡೋಯ್ತಿನಿ ಎಂದಳಂತೆ || ಸಿದ್ಧಯ್ಯ ||

ಬೆಟ್ಟು ತೋರ್ದಂತ ಮನೆಗೆ ಸ್ವಾಮಿ
ನಾನು ನೆಟ್ಟಗೆ ಒಂಟೋಯ್ತಿನಿ ನನ್ನಪ್ಪ
ಯಾರಹಟ್ಟಿ ಯಾರು ಮನೆಗೆ
ಹೋಗಬೇಕು ಹೇಳ್ಬುಡಿ ಗುರುವೆ ಎಂದರು
ಅತ್ತಾಗಿತ್ತಾಗೆ ತಿರುಗಬ್ಯಾಡ
ಸುತ್ತು ಮುತ್ತ ನೋಡಬ್ಯಾಡ
ಬಾವ್ವ ನನ್ನ ಕಂದ ಬಾರೋ ಮಾರಿ ಎಂದರು
ಗುರುದೇವ
ಹೊಟ್ಟೇ ಹಸಿವು ತಡಿನಾರಿ ಬುದ್ಧಿ
ಹಸಿದು ಹಣ್ಣಾಗಿ
ದಣಿದು ದಾವಾಗಿ ಬಂದ್ಬುಟ್ಟಿವ್ನಿ ಗುರುವು
ಎಲ್ಲಾ ಮಾರೀರ್ನು ಕರಿಸ್ಬುಟ್ಟಿದ್ರಿಯಲ್ಲಪ್ಪ
ಎಲ್ಲಾ ಮಾರೀರ್ಗು ಮೊದಲಾಗಲೇ
ನಾನು ಒಬ್ಬಳೇ ಬಂದ್ಬುಟ್ಟಿವ್ನೀ
ನೀವು ತೋರ್ದ ಮನೆಗೆ ನಾ ಒಬ್ಬಳೇ
ಒಂಟೋಯ್ತಿನಿ
ಆ ಮಾರೀರು ಬರೂಗಂಟ
ನಾ ವಕ್ಕಲಾಡುಬುಡ್ತೀನಿ ಬುದ್ದಿ
ನನ್ನ ಹೊಟ್ಟೇ ಹಸಿವು
ತಡೀನಾರಿ ಹೇಳುಬಿಡಿ ನನ್ನಪ್ಪ ಎಂದರು
ಮಾರಮ್ಮ
ಆಗಾದರೇ ನಾ ಹೇಳ್ದ ಮನೆಗೆ ಹೋದಿಯಾ
ನಾ ತೋರಿದ ಹಟ್ಟಿಗೆ ಒಂಟೋದಿಯವ್ವ
ಒಂಟೋಯ್ತಿನೀ ಗುರುದೇವ ಅಂದ್ರು
ಮಾರಮ್ಮ
ಕಟ್ಟುದ ಮನೆ ನಿನ್ನದು
ಬಿತ್ತಿದ ಬೆಳೆ ನಿನ್ನದು
ಹುಟ್ಟಿರೊ ಮಕ್ಕಳು ನಿನ್ನ ಮಕ್ಕಳು
ನಿನ್ನ ಮನೆಗೆ ನೀನೆ ಹೋಗಿ
ಬೆಂಕಿ ಎಟ್ಟಿ ಬೇಯಿಸಬೇಕು
ನಿನ್ನ ಮನೆ ಮಕ್ಕಳ ನೀನೇ
ತಿನ್ಕಬೇಕು ನನ್ನ ಕಂದಾ
ನೀನು ಕಟ್ಟಿರುವಂತಗ ಮನೆ
ನೀನೆ ಮುರ್ದಾಕುಬುಟ್ಟ ಬರಬೇಕು
ಹೋದಿಯ ನನ್ನ ಕಂದಾ
ಹೋದಿಯವ್ವ ಎಂದರು
ಗುರುದೇವ
ಅಂಗದ್ರೇ ಏನು ನನ್ನಪ್ಪ
ಯಾವೂರು ಯಾವು ಗ್ರಾಮ
ಯಾರಟ್ಟಿ ಯಾರು ಮನೆಗೆ
ನಾನು ಹೋಗಬೇಕು ಗುರುದೇವ ಎಂದರು
ಮಾರಮ್ಮ
ಮಾರುವಳ್ಳಿ ಮನಸ್ತಾನಕ್ಕೆ
ಮನೆ ದೇವತಿ ಯಾರು?
ಆ ಊರಿಗೇ ನಾನೆ ಮನೆದೇವತಿಯಲ್ಲೂ ತಂದೆ ಎಂದರು
ಆ ಊರಲ್ಲಿ ಯಾರು ಮನೆಗೆ
ಹೋಗಬೇಕಪ್ಪಾ

ಅವ್ವಾ ಬಸವಚಾರಿ ಮನೆಗೆ
ನೀ ಹೋದಿಯವ್ವ ಎಂದಾರಲ್ಲ || ಸಿದ್ಧಯ್ಯ ||

ಅಮ್ಮ ಬಸವಚಾರಿ ಮನೆಗೆ
ಹೋದೆಯ ನನ್ನ ಕಂದಾ
ಮುದ್ದಮ್ಮನ ಮನೆಗೆ
ಹೋದೆಯ ನನ್ನ ಮಗಳೇ
ಅವ್ವ ಹೋದೆಯೊ ಹೋಗೋದಿಲ್ಲವೂ
ಹೇಳುಬುಡು ಎಂದಾರಲ್ಲ || ಸಿದ್ಧಯ್ಯ ||

ಬಸವಚಾರಿ ಮನೆಗೆ
ಮುದ್ದಮ್ಮನ ಮನೆಗೆ
ಹೋದೆಯಾ ನನ್ನ ಕಂದ
ಹೋದೆಯಾ ಮಾರಮ್ಮ
ಹೋದೆಯ ಹೋಗಿದಿಲ್ಲವೊ
ಹೇಳುಬುಡು ಕಂದಾ ಹೇಳವ್ವ ಮಗಳೆ ಎಂದರು
ಏನಪ್ಪ ಜಗತ್ತು ಗುರು
ಧರೆಗೆ ದೊಡ್ಡಯ್ಯ
ಹೇಳದು ಹೇಳ್ತ ಚಂದಾಗಿ
ಹೇಳುಬುಟ್ರೇ ನನ್ನಪ್ಪ
ಗುರುದೇವ
ನೀವು ಎಲ್ಲುಗೇಳುದ್ರು ಹೋಯ್ತಿನೀ
ನಾನಲ್ಲಿಗೆ ನಾನು ಹೋಗದಿಲ್ಲ || ಸಿದ್ಧಯ್ಯ ||

ಗುರುವೇ ಬಸವಾಚಾರಿ ಮನೆ
ಎಂದರೇ ನನ್ನ ಗುರುವು
ನನ್ನ ಮನೆಯಪ್ಪ ಧರೆಗೆ ದೊಡ್ಡಯ್ಯ
ಗುರುವೆ ಮುದ್ದಮ್ಮನ ಮಕ್ಕಳು
ಎಂದರೆ ನನ್ನಪ್ಪ ನನ್ನ ಮಕ್ಕಳು ಗುರುವು
ಕೇಳಪ್ಪ ನನ್ನ ಗುರುವು
ಅಪ್ಪಾ ನನ್ನ ಮನೆಗೆ ನಾನು ಹೋಗಿ
ಬೆಂಕಿಯಾಗೆ ತೋರಬೇಕು || ಸಿದ್ಧಯ್ಯ ||

ನನ್ನ ಮನೆಗೆ ನಾನು ಹೋಗಿ
ಬೆಂಕಿ ತಾನೆ ತೋರದೆಂಗಪ್ಪ
ನನ್ನ ಮನೆ ಮಕ್ಕಳ
ನಾನೆ ತಿನ್ನಕ್ಕಲದು ಯಂಗೆ ಬುದ್ಧಿ
ನಾನು ನೆಟ್ಟಿರುವಂತ ಗಿಡವ ಕಿತ್ತಾಕ್ಬುಟ್ಟು
ಬರೋದೆಂಗಪ್ಪ
ಗುರುದೇವಾ
ನೀವು ಎಲ್ಲಿಗೇಳುದ್ರು ಹೋಗುತ್ತಿನೀ
ನಾನು ಅಲ್ಲಿಗೆ ನಾ ಹೋಗಲಾರೀ || ಸಿದ್ಧಯ್ಯ ||

ಧರೆಗೆ ದೊಡ್ಡಪ್ಪ
ಯಾವ ಊರು ಯಾವ ಗ್ರಾಮ
ಯಾವ ಹಟ್ಟಿಗೋಗು ಅಂದ್ರು ಒಂಟೋಯ್ತಿನಿ
ಬಸವಾಚಾರಿ ಮನೆಗೆ
ಮುದ್ದಮ್ಮನ ಮನೆಗೆ
ಖಂಡುತ್ವಾಗು ನಾನು ಹೋಗೋದಿಲ್ಲ
ಬಸವಾಚಾರಿ ಮಕ್ಕಳು ಅಂದ್ರೆ
ವರುಷಕ್ಕೊಂಸು ಸತಿ ನನಗೆ ಹಬ್ಬ ಮಾಡ್ತರೇ
ಗುರುದೇವ

ಗುರುವೇ ಹಬ್ಬ ಮಾಡವರ ಮನೆಗೆ
ನಾನೊಬ್ಬಳೇ ನಾ ಹೋಗಲಾರೆ || ಸಿದ್ಧಯ್ಯ ||

ವರುಷಕ್ಕೆ ಒಂದು ಸಲ ದೇವ
ಬಸವಾಚಾರಿ ಮಕ್ಕಳು
ಮುದ್ದಮ್ಮನ ಮಕ್ಕಳು
ನನಗೆ ಹಬ್ಬ ಮಾಡ್ತರೆ ಗುರುದೇವ
ಹಬ್ಬ ಮಾಡ್ದ ಮನೆಗೆ ನಾ
ಒಬ್ಬಳೆ ಹೋಗೋದಿಲ್ಲ ಬುದ್ಧಿ
ನನ್ನ ಒಬ್ಬಳನ್ನೇ ಕಳುಗಿಸಬ್ಯಾಡಿ ಎಂದರು
ಮಾರಮ್ಮ
ಬಸವಚಾರಿ ಮನೆಗೆ ಆಗಾದ್ರೆ ಹೋಗಿದಲ್ವ
ಖಂಡಿತ್ವಾಗು ಹೋಗಿದಲ್ಲ ಗುರುವೆ
ಖಂಡಿತ್ವಾಗು ಅಪ್ಪಣೆ ಮಾಡುಬ್ಯಾಡಿ
ಖಂಡುತ್ವಾಗು ಕಳುಗಬ್ಯಾಡಿ ಎಂದರು
ಸಭಾಸು ಕಂದಾ ಮಾರಮ್ಮ
ಮಾರಮ್ಮ
ನೀನು ಹೋಗದಿದ್ರು ಪರವಾಗಿಲ್ಲ ಬಾವ್ವ
ಹೋಗೋವಂತ ಕಳುಗಿಸ್ತಿನಿ
ಬಾವ್ವ ಕಂದಾ ಎಂದರು
ಗುರುದೇವ
ಧರೆಗೆ ದೊಡ್ಡಯ್ಯ
ಅಕ್ಕ ಹೋಗಿದಿದ್ದ ಮನೆಗೆ
ತಂಗೇರು ತಾನೆ ಯಾರೋದರು
ಆ ಹೋಗೋ ಮಾರೀರ್ನ ನಾ ಕಳುಗ್ಬುಟ್ಟೀನಪ್ಪಾ
ಹೋಯ್ತಿನಿ ಅನ್ನುವಂತ ಮಾರೀರ
ನಾ ಮನೆಗೆ ಕೂಡಿನ ಬುದ್ಧಿ
ಹೋಯ್ತಿನಿ ಅನ್ನುವಂತ ಮಾರೀರ್ನು
ಕೂಡ ನಾ ಕಳುಗುಸುದಿಲಲ
ನಾನು ಕೂಡ ಹೋಗೊದಿಲ್ಲ
ಗುರುದೇವ ಎಂದರು
ಮಾರಮ್ಮ
ನೀನು ಹೋಗದಿಲ್ಲ
ಹೋಯ್ತಿನಿ ಅನ್ನುವಂತ
ಮಾರೀರ್ನು ಕಳುಗಸಕ್ಕಿಲ್ಲವ
ಖಂಡಿತ್ವಾಗು ಕಳುಗಸೋದಿಲ್ಲ ಗುರುದೇವ ಎಂದರು

ಮಾರವ್ವನ ಮಾತ
ಕೇಳಕ್ಕಂಡು ನನ್ನ ಗುರುವು
ಧರೆಗೆ ದೊಡ್ಡಯ್ಯ
ಮಂಟೇದ ಲಿಂಗಪ್ಪ
ಅಮ್ಮ ಕೇಳವ್ವ ಮಾರಮ್ಮ
ಕೇಳಮ್ಮ ನನ್ನ ಮಗಳೆ
ಕೇಳು ನನ್ನ ಕಂದ
ಒಂದು ಪಿಸು ಮಾತು ಹೇಳುತೀನಿ
ದಂಡುಕು ಬಾವ್ವ ಎಂದಾರಲ್ಲ || ಸಿದ್ಧಯ್ಯ ||

ಒಂದು ಪಿಸುಮಾತು ಹೇಳ್ತೀನಿ
ನನ್ನತ್ತಕ್ಕೆ ಬಾವ್ವ ಎಂದಾರಲ್ಲ || ಸಿದ್ಧಯ್ಯ ||

ಏನಪ್ಪ ಜಗುತ್ತು ಗುರುವೇ
ಎಂತ ಪಿಸುಮಾತು ಹೇಳಿರಿ ಬುದ್ಧಿ
ಯಾವು ಮಾತು ಹೇಳಿರೀಯಪ್ಪ ಎನ್ನತೇಳಿ
ಆಚಾರ್ಯ ಮನೆ ದೇವತಿ
ಕುಲುಮೆ ಕಾಳಮ್ಮ ಕಾಳಿಕಾದೇವತಿ
ಹಿಂದಲ ಹೆಜ್ಜೆಯ ತಗದು ಮುಂದಕ್ಕೆ
ಮಡ್ಗದ್ರು ಮಾರಿ
ಬರುವಂತ ಮಾರಿ ನೋಡುಬುಟ್ಟು
ಧರೆಗೆ ದೊಡ್ಡಯ್ಯ

ಅವರ ಎಡಗೈನ ಒಳಗೆ ದೇವ
ಜಡದು ಮುಂದಲೆ ಇಡ್ದರಲ್ಲೋ || ಸಿದ್ಧಯ್ಯ ||

ಗುರುವೇ ಮಾರವ್ವನ ದೇವಾ
ಮುಂದಲೆಯ ಗುರುವು
ಎಡಗೈನ ಒಳಗೆ
ಹಿಡಿದು ದೇವಾ
ಇಡ್ಕಂದ್ರು ನನ್ನಪ್ಪ
ಗುರುವೇ ಮುತ್ತಿನ ಜೋಳಿಗೆ
ಕೈಹಾಕಿ ನನ್ನಪ್ಪ
ಉರುಸಿಂಗೀ ಕೊರಡಾವ
ಬೊಳ್ಳು ಬೊಳ್ಳನೇ ಎಳದು
ಅಯ್ಯಾ ಮಾರವ್ವನ ಕುಂಡಿ ಮೇಲೆ
ಮೂರು ಏಟು ಹೊಡೆದರಲ್ಲ || ಸಿದ್ಧಯ್ಯ ||

ಅಪ್ಪಾ ಉರುಗಣ್ಣ ಬುಡಬ್ಯಾಡ
ಉರ್ಪೊಯ್ತೀನಿ ಎಂದಾಳಲ್ಲ || ಸಿದ್ಧಯ್ಯ ||

ಅಪ್ಪಾ ಕೆಂಡ್ಗಣ್ಣ ಬುಡುಬ್ಯಾಡ
ಕೆಟ್ಟೋಯ್ತಿನಿ ಎಂದಾಳಲ್ಲೋ || ಸಿದ್ಧಯ್ಯ ||

ಉರುಗಣ್ಣ ಬುಡಬ್ಯಾಡ ಸ್ವಾಮಿ
ಉರ್ದೋಯ್ತಿನಿ ನನ್ನಪ್ಪ
ಕೆಂಡಗಣ್ಣ ಬುಡುಬ್ಯಾಡಿ ಗುರುವೇ
ಕೆಟ್ಟೋಗುಬುಡ್ತಿನೀ ಸ್ವಾಮಿ

ನಿಮ್ಮ ಕೆಟ್ಟು ದೇವರು
ಎನ್ನವದು ಅಪ್ಪ ನನಗೆ ಗೊತ್ತಾಗಲಿಲ್ಲ || ಸಿದ್ಧಯ್ಯ ||

ಕೆಟ್ಟ ದೇವರು ಎನ್ನುವದು ಸ್ವಾಮಿ
ದುಷ್ಟ ದೇವರು ಎನ್ನುವುದು ಗುರುವು
ನಿಮ್ಮ ಮೈಮೆ ಮೈತ್ಗಾರ ತಿಳಿಲಿಲ್ಲ
ನನ್ನಪ್ಪಾ ಜಗತ್ ಗುರು
ಧರೆಗೆ ದೊಡ್ಡಯ್ಯ
ಗುರುದೇವಾ
ಒಡದಂತ ಏಟುಗಳೇ ಸಾಕು ಬುದ್ಧೀ
ಸಾಕು ಗುರುದೇವ ಎಂದರು
ಮಾರಮ್ಮ
ಆಗಾದರೆ ಬಸವಾಚಾರಿ ಮನೆಗೆ ಹೋಗೋದಿಲ್ವ
ಹೋಯ್ತೀನಿ ಬುದ್ಧಿ
ಹೋಯ್ತೀನಿ ನನ್ನಪ್ಪ
ಗುರುವೇ ನಿನಗೆ ಬ್ಯಾಡದಿದ್ದ
ಒಕ್ಕಲು ನನಗ್ಯಾಕಪ್ಪ ಎಂದಾಳಂತೆ || ಸಿದ್ಧಯ್ಯ ||

ನಿಮಗೆ ಬ್ಯಾಡದಿದ್ದಂತಹ ಒಕ್ಕಲು ದೇವಾ
ನನಗೆ ತಾನೆ ಯಾತಕ್ಕೆ ಬೇಕಪ್ಪ
ಅಪ್ಪಣೆ ಮಾಡಬುಡೀ ಬುದ್ದಿ
ಈಗ ನಾನೆ ಒಂಟೋಗುಬುಡ್ತೀನಿ
ಜಗತ್ ಗುರು ಧರೆಗೆ ದೊಡ್ಡಯ್ಯ ಎಂದರು
ಮಾರಮ್ಮ
ಮೊದಲೆಲ್ಲ ಹೋಗೋದಿಲ್ಲ ಅಂತ
ಹೇಳದಿಯಲ್ಲ
ಗುರುದೇವ
ನಿಮ್ಮ ಹೊಡೆಯೋದಿಲ್ಲ ಅಂತೇಳಿ ಹೋಗಕ್ಕಿಲ್ಲ ಅಂದೀ
ನೀವು ಹೊಡೇದಮ್ಯಾಲೆ ಭಯ
ಬಂದುಬುಡ್ತು
ಒಂಟೋಯ್ತಿನಿ ನನ್ನಪ್ಪ ಕಳುಗಸಬೇಡಿ ಬುದ್ದಿ ಎಂದರು
ಮಾರಮ್ಮ
ಆಗಾದರೆ ಬಸವಾಚಾರಿ ಮನೆಗೆ ಹೋದಿಯಾ
ಮುದ್ದಮ್ಮನ ಹಟ್ಟಿಗೆ ಹೊರಟೋದಿಯ
ಕಂದಾ ಎಂದರು
ಹೋಯ್ತಿನಿ ನನ್ನಪ್ಪ ಹೋಯ್ತಿನಿ ಗುರುದೇವಾ
ಈಗಲೇ ಹೊರಟೋಗುಬುಡ್ತಿನೀ
ಅಪ್ಪಣೆ ಕೊಟ್ಟುಬುಡೀ
ನನ್ನಪ್ಪಾ ಎಂದರು
ಮಾರಮ್ಮ
ಬಸವಚಾರಿ ಮನೆಗೆ
ಯಾತಕ್ಕೆ ಹೋಗದಿಲ್ಲ ಅಂದಿಯವ್ವ
ಗುರುದೇವ
ನಾನು ಯಾತಕ್ಕೆ ಹೋಗದಿಲ್ಲ ಅಂದೀ ಗೊತ್ತಾ
ಬಸವಚಾರಿ ಮಕ್ಕಳ್ಳು
ವರ್ಷುಕ್ಕೆ ಒಂದು ಸಾರಿ
ನನಗೆ ಹಬ್ಬ ಮಾಡ್ತಿದ್ದುದು ಬುದ್ಧಿ
ಹಬ್ಬ ಮಾಡೋರು ಮನೆಗೆ
ಹೋಗಬಾರ್ದು ಅಂತದ್ದೀ
ಈಗ ನೀವು ಹೊಡದೇಟ್ಟಗೆ
ಭಯ ಬಂದುಬುಡ್ತು ಹೊಂಟೋಯ್ತಿನಿ ಎಂದರು
ನಿನಗೆ ಯಾವ ರೀತಿ ಒಳಗೆ
ಅಮ್ಮ ಯಾವು ತರದ ಒಳಗೆ
ಅವ್ವ ಬಸವಚಾರಿ ಮಕ್ಕಳು
ಮುದ್ದಮ್ಮನ ಮಕ್ಕಳು
ಹಬ್ಬ ಮಾಡುತಿದ್ದುರು
ಹೇಳುವ್ವಾ ನನ ಕಂದಾ
ನಿನಗೆ ಹಬ್ಬ ಮಾಡುವ ತರವ
ಕಂದ ಹೇಳವ್ವ ಎಂದುರಲ್ಲಾ || ಸಿದ್ಧಯ್ಯ ||

ಏನವ್ವ ನನ ಕಂದಾ ಮಾರಮ್ಮ
ಬಸವಚಾರಿ ಮಕ್ಕಳು ಮುದ್ದಮ್ಮನ ಮಕ್ಕಳು
ವರ್ಷಕ್ಕೆ ಒಂದು ಸಲ ನಮಗೆ
ಹಬ್ಬ ಮಾಡುತಿದ್ದುರು ಅಂತ ಹೇಳ್ತಿಯಲ್ಲಮ್ಮ
ಮಾರಮ್ಮ
ನಿನಗೆ ಯಾವ ತರದಲ್ಲಿ ಹಬ್ಬ ಮಾಡುತಿದ್ರು
ಹಬ್ಬ ಮಾಡುತ್ತಿದ್ದು ರೀತಿ ಹೇಳಿಬುಡವ್ವ ಎಂದುರು
ಕೇಳಪ್ಪ ಜಗತ್ತು ಗುರುವೇ
ಬಸವಚಾರಿ ಮಕ್ಕಳು ಗುರುದೇವಾ
ಯಾವ ರೀತಿ ಒಳಗೆ ನನಗೆ ಹಬ್ಬ ಮಾಡುತಿದ್ರು ಅಂದರೆ ಗುರುವು

ಅಪ್ಪ ಹಾದಿ ರಜವ ಒಡದು
ಬೀದಿ ರಜವ ಒಡದು
ಹಾದಿಗೆ ನೀರ ಇಟ್ಟು
ಬೀದಿಗೆ ನೀರ ಇಟ್ಟು
ಗುರು ಹಾದಿಗೆ ರಂಗಲೇ ಬಿಟ್ಟು
ಗುರುವೇ ಬೀದಿಗೆ ರಂಗಲೇ ಬಿಟ್ಟು
ಹಾದಿಗೆ ತ್ವಾರಣ ಕಟ್ಟಿಸಿ
ಬೀದಿಗೆ ತ್ವಾರಣ ಕಟ್ಟಿಸಿ
ಹಾದಿಗೆ ಮುತ್ತ ಚೆಲ್ಲಿ ದೇವಾ
ಬೀದಿಗೆ ಮುತ್ತ ಚೆಲ್ಲಿ
ಗುರುವೇ ತಾರ್ಸಿ ಗುಡುಸಿಕಂಡು
ಸ್ನಾನವ ಮಾಡಿಕಂಡು
ಮಡಿಯನ್ನೆ ಉಟ್ಟುಗಂಡು
ಒಳ ಕೆರೆಯಿಂದಾ ಮನೆದೇವ್ತಿ ಮಾರವ್ವನ
ನಾವು ತರಬೇಕು ಎನುತೇಳಿ
ಅವರು ಹಸುದು ಸುಲುದು ದೇವಾ
ಯಾಲಕ್ಕಿ ಪಾಲಾರದಲ್ಲಿ || ಸಿದ್ಧಯ್ಯ ||

ಹಸುದು ಹಲುಸುಲದು
ಯಾಲಕ್ಕಿ ಪಲಾರದಲ್ಲಿ ಸ್ವಾಮಿ
ಆಗಲೀಗಾ ಒಳೆಕೆರೆಗೆ ಬಂದು
ಹಸಿ ಮಣ್ಣಿನಲ್ಲಿ ಹೊಸದಾಗಿ ನೆನವಿಗೆ ಮಾಡಿಕಂಡು

ನನ್ನ ಕೈ ಕೈಯಿನಾಗೆ
ಕಾಲು ಕಾಲುನಾಗೆ
ಬಟ್ಟೆ ಬಾವ ತಿದ್ದಿ
ಎದೆಯ ಭಾವ ಗುರುವು
ತಿದ್ದಿಕಂಡು ನನ್ನ ಗುರುವು
ನನ್ನ ಮೂಗುನ ಚಂದಾ ತಿದ್ದಿ
ಅಣೆಯಾ ಬಾವ ಮಾಡಿ
ಮಂಡೆ ಬಾವ ಮಾಡಿ
ಬಸವಾಚಾರಿ ಮಕ್ಕಳು
ನಮ್ಮಂದ ಚಂದಕೆ ದೇವಾ
ರೂಪು ರೇಖೆಗೆ ಗುರುವು
ಬಾಯಿನ ಚೆಂದಾ ದೇವಾ
ಮಾಡಿಕಂಡು ನನ ಗುರುವು
ನನ್ನ ಮನೆದೇವುತಿ ಕಾಳಮ್ಮ
ಎಷ್ಟು ಚೆಂದಾಗಿ ಎನುತೇಳಿ
ನನಗೆ ಅರುಷಣ ಸೀರೆ ಉಡಿಸಿ
ಕುಂಕುಮದ ರವಿಕೆ ಇಕ್ಕಿಸಿ
ಗುರುವೇ ಮಂಡಗುಮಲಕ ದರಿಸಿ
ಜಡೆಗೂ ಜಡೆಗುಬ್ಬಿ ಧರಿಸಿ
ಕತ್ತುಗು ಪದಕ ಧರಿಸಿ
ಆರು ಸಾವಿರ ಹವಳ
ಮುನ್ನೂರು ಸಾವಿರ ಮಣಿ
ಮತ್ತೆ ರೂಪಿನ ಚಿನ್ನ
ನನ್ನ ಮೈ ತುಂಬ ಧರುಸುವಂತಿದ್ದುರು
ಗುರುವೇ ಆಗಲೀಗಾ ಗುರುವು
ಕೇಳಪ್ಪ ನನ್ನ ಗುರುವು
ಧರೆಗೆ ದೊಡ್ಡಯ್ಯಾ
ಮಂಟೇದಾಲಿಂಗಪ್ಪ
ಗುರುವೇ ಒಂದು ಖಂಡುಗ ಅರುಷುಣದ
ಮೊಕತುಂಬ ಬಳಿತಿ‌ದ್ದುರು
ಒಂದು ಖಂಡುಗ ಕುಂಕುಮದ
ನನ್ನಾಣೆಗಿಕ್ಕುತಿದ್ದುರು
ಗುರುವೇ ನಂದೀವಿಗೆ ಬೆಳಕಲ್ಲಿ ಗುರುವೇ
ನೆಂದಿ ಮೂರುತಾ ಮಾಡಿ
ಅಲ್ಲಮ ಪ್ರಭು ಮಂಟೇದಾಲಿಂಗಯ್ಯ
ಅಪ್ಪ ನಂದೀವಿಗೆ ಬೆಳಕಲ್ಲಿ ನಾ
ನಲ್ಲರ್ಕಂಡು ಬರುತಿದ್ದಿ || ಸಿದ್ಧಯ್ಯ ||

ನಂದೀವಿಗೆ ಬೆಳಕಲ್ಲಿ ಸ್ವಾಮಿ
ನಲ್ಲರ್ಕಂಡು ನಾನು ಬರುತಿದ್ದೆ ನನ್ನಪ್ಪ
ಒಳೆ ಕರೆಯಿಂದಾ
ಬಸವಚಾರಿ ಮಕ್ಕಳು
ನನ್ನ ಊರಿಗೆ ತರುವಾಗ ಗುರುವು
ನನಗೆ ಹಿಂದೆ ಡಂಗುರ ಡೋಳು
ಮುಂದೆ ಡಂಗುರ ಡೋಳು
ಚಿತ್ತ ಜಿಜ್ಜಿಕೆ ತಾಳ
ಉಯ್ಯಿನಕೊಂಬಿನ ಕಾಳೆ
ಕಾಳ ತಮಟೆ ತಾಳತಮಟೆ ನನಗೆ
ಒಡಿತಿದ್ರು ನನ ಗುರುವು
ಇಂತಾ ಮುದ್ದಿನ ಬೆಳಕಿನಲ್ಲಿ
ಏಳು ವರ್ಷದ ಮಗಳ ಮೇಲೆ
ಒಲುಮೆ ಬಂದ್ವಾಲಾಡುತಿದ್ದೆ || ಸಿದ್ಧಯ್ಯ ||

ಏಳು ವರ್ಷದ ಮಗಳ ಮೇಲೆ ನನ್ನಪ್ಪ
ಒಲುಮೆ ಬಂದು ವಾಲಾಡುತಿದ್ದೆ ಗುರುದೇವಾ
ಬಸವಾಚಾರಿ ಮಕ್ಕಳು
ಮುದ್ದಮ್ಮನ ಮಕ್ಕಳು
ನನ್ನಕರೆತಂದು ಗುರುದೇವಾ
ಊರು ಮಧ್ಯದಲ್ಲಿ
ಹೂವಿನ ಚಪ್ಪರಾ ಹಾಕಿಸಿ
ಹೂವಿನ ಚಪ್ಪರದಲ್ಲಿ ನನ್ನ ತಂದು ಇರಿಸಿಬುಟ್ಟು
ನನ್ನ ಮನೆದೇವತೆ ಕಾಳಮ್ಮನಿಗೆ
ಹಾರಾ ಕೊಡಬೇಕು ಅಂತೇಳಿ ಗುರುವೇ
ನನಗೆ ಹೊಯ್ಮರಿ ಹೋಯ್ತಿದ್ರು
ಕುಯ್ಮರಿ ಕುಯ್ತಿದ್ರು
ಪೀಡೆ ಮರಿ ಅಂತೇಳಿ ಪೀಡೆ ಮರಿ ಹೊಡಿತಿದ್ರು
ಪೀಡೆ ಮರಿ ಹೊಡ್ದು ಬುಟ್ಟು
ಮಡಿಯನ್ನ ಬೆಯ್ಸಿಬುಟ್ಟು ನನ್ನಪ್ಪ
ನನ್ನ ಮನೆ ದೇವತಿಗೆ ಇದೆ ಹಾರಾ ಏನುತೊಳಿ
ಅನ್ನಕೆ ರಗುತಾ ಕಲೆಸಿ
ಊರುಸುತ್ತ ನನಗೆ ರಸ ಮುದ್ದೆ ಇಡುತ್ತಿದ್ರು
ಹಸು ಮುದ್ದೆ ಎಸಿತಿದ್ರು ಗುರುವು
ಇದುವಲ್ಲದೆ ಬಸವಾಚಾರಿ ಮಕ್ಕಳು
ಇನ್ನೇನು ಮಾಡುತಿದ್ರು ಅಂದರೆ

ನನಗೆ ಮಂಗಳವಾರ ಮಡೆ ಉಯ್ಲಿ
ಬುಧುವಾರ ಕೊಂಬು ತರಿಸಿ
ಅಪ್ಪ ಬೇಸ್ತುವಾರದ ಕುಣುತ ನನಗೆ
ಜಗ್ಗುಣ ಗುಣುತ ಕುಣಿಯುತಿದ್ರು || ಸಿದ್ಧಯ್ಯ ||