ನಿಮ್ಮ ಕೆಟ್ಟ ದೇವರು ಎನ್ನುವದು
ನಿಮ್ಮ ದುಷ್ಟದೇವರು ಎನ್ನುವದು
ನಿಮ್ಮ ಮೈಮೆ ಮೈತುಗಾರಾ ನಾನು ತಿಳಿಲಿಲ್ಲ
ನಿಮ್ಮ ಮೈಯಿಮೆ ಕಂಡವರಿಲ್ಲಾ
ಮೈಥಗಾರವ ನಾನು ತಿಳೀಲಿಲ್ಲ ನನ್ನಪ್ಪ
ಅಯ್ಯ ಇವತ್ತು ನನ್ನ ಗುರುವು
ಕಾಳಿಂಗನ ಗವಿಗೆ ನನ್ನ ಕೂಡಿಯ ನನ್ನಪ್ಪ

ಇಂತ ಋಷಿಯ ಸೇರದಕ್ಕಿಂತ
ಇಸವ ಕುಡುದರೆ ಲೇಸು || ಸಿದ್ಧಯ್ಯ ||

ನಿಮ್ಮ ದುಸ್ಮಾನ್ರ ಸಂಘ ಗುರುವೇ
ಎಂದೆಂದಿಗೂ ಬ್ಯಾಡವಪ್ಪ || ಸಿದ್ಧಯ್ಯ ||

ಇಂಥ ಋಷಿ ಸೇರದಕ್ಕಿಂತಾ
ಕಾಳಿಂಗನಾ ಇಸ ಕುಡುದು ಪ್ರಾಣಬುಟುಬುಟ್ರೆ
ಬಹು ಲೇಸು ಗುರುವು
ಇಂಥ ದುಸುಮಾನ್ರ ಸಂಗ ಎಂದೆಂದಿಗೂ ಬ್ಯಾಡ ಗುರುದೇವಾ
ಇಂಥ ಮಂಟೇದಲಿಂಗಯ್ಯನ ಸೇರಿ
ನನ್ನ ಮನೆ ಬರುದು ಮಾಡಿಕಂಡು
ಈಗ ನಾನಾಗಿದ್ದು ನಾನು ಬಂದುದಕೆ ಗುರುವು
ಈ ಪಾಳುಬಾವಿಗೆ ನನ್ನ ಕೂಡುಬುಟ್ಟಿಯ
ಜಗತ್ತುಗುರು ಧರೆಗೆ ದೊಡ್ಡಯ್ಯ ಅಂತೇಳಿ
ಎಳೆ ಕೆಂಪಣ್ಣ ದುಕ್ಕಳಿಸಿ
ದುಃಖ ಪಡುತ ಜಗತ್ತು ಗುರುಗಳ ಮುಂಭಾಗದಲ್ಲಿ ನಿಂತಿದ್ದಾ
ಏಳುಜನ ಸಿದ್ದುರು
ದಡ ದಡನೆ ಬಂದು
ಏಳೆ ಕೆಂಪಣ್ಣನಾ ಯಕತ್ತಿನ ಮೇಲೆ
ಮೂರು ಮೂರು ಗುದ್ದನೆ ಗುದ್ದುಬುಟ್ಟು
ಅವನ ಕಾಳಿಂಗನ ಗವಿಗೆ
ದಡ್ಡೀರನೆ ಎತ್ತಾಕುತಾರೆ || ಸಿದ್ಧಯ್ಯ ||

ಗುರುವೆ ಕಾಳಿಂಗನ ಕಂದಾ
ಗವಿಗೆ ಗುರುವು
ಗುರುವೆ ಎತ್ತಾಕುದಂತ ಕಾಲದಲ್ಲಿ
ನನ್ನ ಏಳುವರುಸುದ ಮಗ
ಎಳಿಯ ಕೆಂಪಣ್ಣ
ಕಾಳಿಂಗನ ಗವಿಗೆ
ಬಿದ್ದನು ನನ್ನ ಕಂದಾ
ಅಯ್ಯಾ ಎಬ್ಬಿಯಾವು ಗುರುವು
ಬುಟ್ಟು ಬಾಯಿ ಬುಟ್ಟಾಂಗೆ
ಮಲಗಿತ್ತು ನನ ಗುರುವು
ಅಯ್ಯಾ ಬಿದ್ದಂತ ಮಗನು
ಕಚ್ಚುಗಂಡು ಹೋಗತಾದೆ || ಸಿದ್ಧಯ್ಯ ||

ಎಕ್ಕತ್ತಿನ ಮೇಲೆ ಮೂರು ಮೂರು ಗುದ್ದನೆ ಗುದ್ದಿ
ಏಳುಜನ ಸಿದ್ದುರು ಕಾಳಿಂಗನ ಗವಿಗೆ
ಕೆಂಪಣ್ಣನ ದಢೀರನೆ ಎತ್ಹಾಕಿದ್ರು
ಈಗಲೀಗಾ ಎಳೆ ಕೆಂಪಣ್ಣ
ಕಾಳಿಂಗನ ಗವಿಗೆ ಬಿದ್ದ ಕಾಲದಲ್ಲಿ
ಗವಿ ಒಳಗೆ ಎಬ್ಬಾವು
ಬುಟ್ಟು ಬಾಯಿ ಬುಟ್ಟಂಗೆ ಮಲಗಿತ್ತು
ಬಿದ್ದಂತ ಕೆಂಪಾಚಾರಿ ಮಗನಾ
ಎಬ್ಬಾವು ಕಚ್ಚಿಗಂಡು
ಹನ್ನೆರಡು ಆಳುದ್ದ ಪಾತಾಳಕೆ ಹೊರಟೋಯ್ತು
ಈ ಕೆಂಪಚಾರಿ ಬಾವಿ ಬುಟ್ಟು
ಎಲ್ಲಾದ್ರು ಹೊರಟೋಯ್ತನೆ ಅಂತೇಳಿ
ಆನೆಗಾತ್ರದ ಪಡಗುಂಡು ತಗುದು
ಜಗತ್ತುಗುರು ಧರೆಗೆ ದೊಡ್ಡಯ್ಯ
ಕಟೆ ಕಟೆ ಕಾಳಿಂಗನಾ ಗವಿಗೆ
ಪಡುಗುಂಡನೆ ಚಾಚಿ ಬುಟ್ಟುರು
ಬಾರಿ ಪಡುಗಂಡು ಬಾಗಿಲಿಗೆ ಚಾಚು ಬುಟ್ಟು
ಬಾರಿ ಪಡುಗುಂಡಿನ ಮೇಲೆ ನಿಂತುಗಂಡು ಧರೆಗೆ ದೊಡ್ಡವರು
ಹನ್ನೆರಡಾಳುದ್ದ ಬಾವಿ ಒಳಗಿರುವಂತ
ಕೆಂಪಚಾರಿ ಮಗನಿಗೆ ಎನಂತ ಶಾಪ ಕೊಡುತಾರೆಂದುರೇ
ಕೆಂಪಣ್ಣ
ಈ ಕಾಳಿಂಗನ ಗವಿಗೆ ನಿನ್ನ ಸೆರೆ ಮಡಿಗಿವ್ನಿ

ಕಂದಾ ಒಂದು ವರುಷವಲ್ಲ
ಎರಡು ವರುಷವಲ್ಲ
ಮಗನೆ ಮೂರು ವರುಷವಲ್ಲ
ಒಂದಾರು ವರುಷವಲ್ಲ
ಅಪ್ಪ ಒಂಬತ್ತು ವರುಷವಲ್ಲ
ಕೇಳು ನನ ಮಗನೇ
ಎಳಿಯವನೇ ಕೆಂಪಣ್ಣ
ಮಗನೆ ಬಾರಿ ಹನ್ನೆರಡು ವರುಷ
ಬಾವಿ ಒಳಗೆ ಬಾಳು ಕಂದಾ || ಸಿದ್ಧಯ್ಯ ||

ಕಂದಾ ಬಾರಿ ಹನ್ನೆರಡು
ವರುಸಗಂಟ ಕಂದಾ
ಬಾವಿಯವಳಗೆ ನೀ
ಬಾಳಪ್ಪ ನನ ಮಗನೇ
ಕಟ ಕಟೇ ಕಾಳಿಂಗನ
ಗವಿಯಲಿ ನನ್ನ ಕಂದಾ
ನೊರೊಂದಾವು ಚೌವುಳು
ನಿನ್ನ ರ್ವಾಮ ರ್ವಾಮದ ಕುಳಿಯ
ಕಚಗಂಡು ಕಚುಗಂಡು
ಮಗನೆ ಇಶುವ ಕಕ್ಕಲಿ
ಲೋ ನಿನ್ನಿಸ ಕಂದಾ
ಹಾವಿಗೆ ಇಳಕಳ್ಳಲಿ
ಹಾವಿನಿಸ ಕಂದಾ
ನಿನಗೆ ಇಳಕಳ್ಳಲಿ
ಕಟೆ ಕಟೆ ಕಾಳಿಂಗನ
ಗವಿಯಲಿ ನನ ಮಗನೆ
ನಿನಗೆ ಬಲಕೆ ಹೊಳ್ಳವ ಅಂದರೆ
ನಾಗುರಾವುನ ಆಟ
ಎಡಕೆ ಒಳ್ಳಿತೀನೆಂದರೆ ನಿನಗೆ
ಯಬ್ಬಿಯಾವಿನ ಕಾಟ
ಇಲ್ಲೆ ಮಲಗುತೇ ನೆಂದರೆ
ನನಗೆ ಯಮು ಚೋಳನಾ ಆಟ
ನಿನಗೆ ಹಾವು ಹಾಸಿಗೆ ಆಗಲಪ್ಪ
ಚೋಳು ತೆಲದಿಂಬಾಗಲಯ್ಯ|| ಸಿದ್ಧಯ್ಯ ||

ಹಾವು ಹಾಸಿಗೆಯಾಗಿ
ಚೌವುಳು ತಲದಿಂಬಾಗಿ ಕೆಂಪಣ್ಣ
ನಿನಗೆ ಅಸುವಾದರೆ
ಹಾವಿನಿಸ ನಿನಗೆ ಅಮೃತವಾಗಲಿ
ಹಾವಿಗೆ ಅಸುವಾದರೆ ಕಂದಾ
ನಿನ್ನಿಸ ಹಾವುಗೆ ಅಮೃತವಾಗಲಿ ಮಗನೇ
ಹನ್ನೆರಡು ವರ್ಷಕ್ಕಂಟ
ಈ ಕಾಳಿಂಗನ ಗವಿ ಒಳಗೆ ವಾಸಸ್ಥಾನ ಮಾಡು ಕಂದಾ
ಹನ್ನೆರಡು ವರ್ಷಕಂಟ ಕಂದಾ
ಇಂತಾ ಕಾಳಿಂಗನ ಗವಿ ಒಳಗೆ ಕೆಂಪಣ್ಣ
ವಾಸ ಮಾಡುವಾಗ
ನೀನು ಕಾಳಿಂಗನ ಗವಿ ಒಳಗೆ ನೀನು ಇರುವಾಗ ಮಗನೇ
ಹನ್ನೆರಡು ವರ್ಷಕಂಟ
ಈ ಕಾಳಿಂಗನ ಗವಿ ಒಳಗೆ ನಿನಗೆ
ಏನೇನು ಬರಬೇಕೆಂದುರೇ
ನಿನಗೆ ನತ್ತಿ ಮೇಲೆ ಕಂದಾ
ಮತ್ತಿ ಮರ ಬೆಳೆಯಲಿ
ಹಣೆಯಲಿ ನನ ಕಂದಾ
ನಿನಗೆ ಬಸುಮಂಗ ಉಟ್ಟಲಿ
ಲೋ ಎರಡು ಕಣ್ಣಿನ ಒಳಗೆ ನಿನಗೆ
ಕಡ್ಜ ಮರಿ ಮಾಡಲಿ
ಮೂಗುನ ಮೇಲೆ ಕಂದಾ ನಿನಗೆ
ಮೂಗುತ್ತ ಬೆಳೆಯಲಿ
ಲೋ ಬಾಯಿನ ಒಳಗೆ ಮಗನೆ ನಿನಗೆ
ಹೊನ್ನುತ್ತ ಬೆಳೆಯಲಿ
ಎರಡು ಕರಣದಲ್ಲಿ ಗಿಜಿಲಕ್ಕಿ
ಮರಿ ಮಾಡಲಿ ಕಂದಾ
ಸಿಪುಲಕ್ಕಿ ಮರಿಮಾಡಲಿ
ಬುಜದ ಮೇಲೆ ಕಂದಾ ನಿನಗೆ
ಬೂರ್ಗುದ ಮರ ಬೆಳೆಯಲಿ
ಲೋ ಬೆನ್ನಿನ ಮೇಲೆ ಕಂದಾ ನಿನಗೆ
ಬಿಲ್ಪತ್ರೆ ಬೆಳೆಯಲಿ
ಎರಡು ಕಂಕಳ ಒಳಗೆ
ಹೆಜ್ಜೇನು ಕಟ್ಟಲಿ ಮಗನೆ
ಕಿರುಜೇನು ಕಟ್ಟಲಿ
ನಿನಗೆ ಎದಿಯ ಗೂಡಿನ ಮೇಲೆ
ನಾಗ್ರವು ಮಂದಿ ಮಾಡಲಿ
ಲೋ ಒಕ್ಕಳು ಒಳಗೆ ಕಂದಾ
ನಿನಗೆ ಅರಳಿ ಮರ ಹುಟ್ಟಲಿ
ಲೋ ಅಂಗೈಯಿನ ಒಳಗೆ ಮಗನೆ
ಅಂಬಲಿತ ಬೆಳೆಯಲಿ
ಲೋ ಪಾದದಲಿ ಕಂದಾ ನಿನಗೆ
ಪಾದ್ರಾಕ್ಷಿ ಬೆಳೆಯಲಿ

ನಿನಗೆ ಎಪ್ಪತ್ತು ಮಾರುದ್ದ ಜಡೆ
ಹಸ್ತಂಬಾಗಿ ಹೋಗಲಪ್ಪ || ಸಿದ್ಧಯ್ಯ ||

ಕಂದಾ ಎಪ್ಪತ್ತು ಮಾರುದ್ದ
ಜಡೆಗಳು ನನ್ನ ಕಂದಾ
ಮಗನೆ ಹಂಬಾಗಿ ಕಂದಾ
ಹರದೋಗಲಿ ಮಗು
ನಿನ್ನ ಕೈನ ಉಗುರು ಕಂದಾ
ಕಾಲುನ ಉಗುರು ಮಗನೆ
ನಿನ್ನ ಇಪ್ಪತ್ತು ಬೆರಳಿನ ಉಗುರು
ಭೂಮಿ ಹೆಪ್ಪಾಲಗಪ್ಪ || ಸಿದ್ಧಯ್ಯ ||

ಇಪ್ಪತ್ತು ಬೆರಳಿನ ಉಗುರೆಲ್ಲಾ
ಭೂಮಿಗೆ ಹೆಪ್ಪಾಗಲಿ ನನ ಕಂದಾ ಕೆಂಪಣ್ಣ
ಅನ್ನೆರ್ಡು ವರುಸಗಂಟ ಮಗನೆ
ತಾಯಿ ತಂದೆ ಅಣ್ಣ ತಮ್ಮ
ಜನ ಜಾತಿ ಎಲ್ಲಾರ್ನು ಮರತುಕೊ
ನಿನ್ನ ಸಿರಿ ಸಂಪತ್ತು ಎಲ್ಲಾನು ಮರತುಬುಡು ಕಂದಾ

ನಿನಗೆ ದುರುಳು ಗ್ಯಾನ ಹೋಗಿ ಕಂದಾ
ಗುರುಗ್ಯಾನ ಬರಲಿ ಮಗನೆ || ಸಿದ್ಧಯ್ಯ ||

ನಿನ್ನ ದುರುಳು ಗ್ಯಾನ ಕಂದಾ
ಒಂಟೋಗುಲಿ ಮಗನೆ
ಗುರುಗ್ಯಾನ ಕಂದಾ
ಬರಲಿ ನನ್ನ ಕಂದಾ
ನೀನು ಗುರುಗ್ಯಾನ ಬರೋಗಂಟಾ
ಬಾವಿ ಒಳಗೆ ಬಾಳುಕಂದಾ || ಸಿದ್ಧಯ್ಯ ||

ಗುರುಗ್ಯಾನ ಬರೋತನಕ ಕಂದಾ
ಇಂತ ಕಟ ಕಟೇ ಕಾಳಿಂಗನ ಗವಿ ಒಳಗೆ
ವಾಸಮಾಡು ಮಗನೇ
ಕೆಂಪಣ್ಣ

ಲೋ ನಾನಾಗಿ ಕರಿಯೋಗಂಟ
ನೀನಾಗಿ ಬರಬ್ಯಾಡ || ಸಿದ್ಧಯ್ಯ ||

ನಾನಾಗಿ ಕರಿಯ ತನಕ
ನೀನಾಗಿ ಬರಬ್ಯಾಡ ಮಗನೇ
ಬಾವಿಲಿ ಬಾಳುಕಂದಾ
ಅಂತೇಳಿ ಧರೆಗೆ ದೊಡ್ಡವರು
ಕೆಂಪಚಾರಿ ಮಗುನ್ಗು ಶಾಪ ಕೊಟ್ಟು
ಹನ್ನೆರಡು ವರುಷ ಕಾಳಿಂಗನ ಗವಿ ಒಳಗೆ ಸರೆ ಇಟ್ಟು
ಜಗತ್ತು ಗುರುಗಳಾಗಿರ್ತಕಂತಾ
ಧರೆಗೆ ದೊಡ್ಡವರು
ಆ ಕಟ ಕಟೇ ಕಾಳಿಂಗನ ಗವಿ ಒಳಗೆ
ಕೆಂಪಚಾರಿ ಮಗನ ಬಿಟ್ಟ ಬುಟ್ಟು ಗುರುವು

ಅವರು ರಾಜ ಬಪ್ಪಗೌಡನ ಪುರಕೆ
ನನ್ನ ರಾಜಗುರು ದಯಮಾಡುತಾರೆ || ಸಿದ್ಧಯ್ಯ ||
ಇಂಥ ಬಪ್ಪಗೌಡ್ನ ಪುರಕೆ
ನನ್ನ ಸ್ವಾಮಿಯೆ ದಯ ಮಾಡುತಾರೆ|| ಸಿದ್ಧಯ್ಯ ||

ಬಪ್ಪೆಗೌಡ್ನ ಪುರಕೆ ಬಂದು
ಜಗತ್ತು ಗುರು ಅಲ್ಲಪ ಪ್ರಭು
ಮಂಟೇದ ಲಿಂಗಪ್ಪ
ಪರಂಜ್ಯೋತಿ ಪಾತಾಳ ಜ್ಯೋತಿಯವರು
ಆಗಲೀಗಾ ರಾಜ ಬಪ್ಪಗೌಡ್ನ ಪುರುದಲ್ಲಿ
ಹುಲಿಚರ್ಮ ಹಾಸಿಗಂಡು ಉಲ್ಲೇ ಚರ್ಮ ತಗದು
ಬೆನ್ನಿಂದೆ ಬುಟ್ಟುಗಂಡು
ಬಾರಿ ಖಂಡಾಯ ತಗದು
ಜಡುದು ಭೂಮಿಗೆ ನಾಟಗಂಡು
ಕಂಡುಗ ಗ್ಯಾನದ ಬುಕ್ಕು
ಕಾಲುಗ ಧ್ಯಾನದ ಬುಕ್ಕುದ
ತಾಮ್ರದ ಚಪ್ಪೋಡ ತಗುದು
ತೊಡೆ ಮೇಲೆ ಮಡಿಕಂಡು ಧರೆಗೆ ದೊಡ್ಡಯ್ಯ

ಅವರು ಉರಿಯ ಗದ್ದಿಗೆ ಮೇಲೆ
ಬಂದು ಮೂರ್ತವಾದರಲ್ಲ || ಸಿದ್ಧಯ್ಯ ||

ಗುರುವೆ ಉರಿಯ ಗದ್ದಿಗೆ ಮೇಲೆ
ಬಂದು ಕೂತಗಂಡು ಅಪ್ಪಾಜೀ ಗುರುವು
ನನ್ನ ಖಂಡಾಯ್ದ ಮೂರುತಿ

ಅವರು ತೋಪಿನ ದೊಡ್ಡಮ್ಮನವರ
ಪ್ರೇಮದಲ್ಲಿ ಕೂಗುತಾರೆ || ಸಿದ್ಧಯ್ಯ ||

ಮಗಳೆ ಬಾರೋ ಬಾರವ್ವ ಕಂದಾ
ತೋಪಿನ ದೊಡ್ಡಮ್ಮ ತಾಯಿ || ಸಿದ್ಧಯ್ಯ ||

ನನ್ನ ದೊಡ್ಡವರ ಮನಿಯ
ನನ್ನ ದುಡುವುಳ್ಳು ದೊಡ್ಡಮ್ಮ ಬಾವ್ವ || ಸಿದ್ಧಯ್ಯ ||

ಜಗತ್ತು ಗುರುವಾಗಿರ್ತಕಂತ ಧರೆಗೆ ದೊಡ್ಡಯ್ಯ
ಇಂತ ರಾಜ ಬೊಪ್ಪಗೌಡ್ನಪುರುದ
ಮಠಮನೆಗೆ ಬಂದು
ಉರಿಗದ್ದಿಗೆ ಮೇಲೆ ಕೂತುಗಂಡು
ಬಾರವ್ವ ಕಂದಾ ಬಾರಮ್ಮ ಶಿಶು ಮಗಳೇ
ಬಾವ್ವ ನನ ಕಂದಾ ದುಡುವುಳ್ಳು
ದೊಡ್ಡಮ್ಮ ತಾಯಿ ಎಂದುರು
ಮುತ್ತುನಳ್ಳಿ ತೋಪುನಲ್ಲಿ
ಮುಟ್ಟಾಗಿ ಒರಗಿದಂತಾ ದೊಡ್ಡಮ್ಮ
ಇವತ್ತು ಯಾತಕೊ ಧರೆಗೆ ದೊಡ್ಡವರು ಕೂಗುತವರೇ
ನನ್ನ ಸಾಕಿದಂತ ಗುರು ಕರಿತಾರೆ
ನನ್ನ ಪಡೆದಂತ ತಂದೆ ಕೂಗುತವರೆ
ಗುರು ಕರದ ಮಾತ್ರಕೆ
ನಾನಾಗಿ ಒಂಟೋಗಬೇಕು ಅಂತೇಳಿ ದೊಡ್ಡಮ್ಮ
ಅವರು ತಾಣ ಜಳಕ ಮಡಿಯ ಮಾಡಿಕಂಡು
ಸಣ್ಣ ಮಡಿಯ ಉಟ್ಟಿಗಂಡು|| ಸಿದ್ಧಯ್ಯ ||

ಅಮ್ಮ ಸಣ್ಣ ಮಡಿಯ ಉಟ್ಟಿಗಂಡು
ಸಾಂಬೂರಾಣಿ ಬೆಳಗುತಾಳೆ || ಸಿದ್ಧಯ್ಯ ||

ಅವಳು ಬಾರಿ ಖಂಡಾಯಕ್ಕೋಗಿ
ಕೈ ಎತ್ತಿ ಮುಗುದಾಳಾಗ || ಸಿದ್ಧಯ್ಯ ||

ಬಾರಿ ಖಂಡಾಯಕ್ಕೋಗಿ ಕೈ ಮುಗುದು
ಬಾರುಸುವಂತ ತಂಬೂರಿಗೆ
ಗಂಧದ ಕಡ್ಡಿ ಕಸ್ಸಿಬುಟ್ಟು ದೊಡ್ಡಮ್ಮ ತಾಯಿ
ನಡೆ ಕಟ್ಟಿಗಂಡು ಪಾದ ಜೊಡಿಸಿಕಂಡು
ದಿಂಡು ನಮಸ್ಕಾರ ಮಾಡಿಕಂಡು

ನನ್ನ ಧರೆಗೆ ದೊಡ್ಡವರ ಮುಕುವಾ
ಅವಳು ದುರುದುನೇ ನೋಡುತಾಳೆ || ಸಿದ್ಧಯ್ಯ ||

ನನ್ನ ಮಂಟೇದಲಿಂಗಯ್ಯನ ಮುಖವಾ
ಮಠಮಠನೇ ನೋಡುತಾಳೆ || ಸಿದ್ಧಯ್ಯ ||

ನನ್ನ ಲೋಕಕೆ ದೊಡ್ಡವರ ಮೊಕವ
ಅಂತು ಅಂತು ನೋಡುತಾಳೆ || ಸಿದ್ಧಯ್ಯ ||