ಬಿಡಿಸಿ ಹೇಳಿಕೂಡಿ ಸ್ವಾಮಿ
ತಂದು ದಾನ ಕೊಡ್ತೀನಿ ಸ್ವಾಮಿ ಎಂದರು
ಮುದ್ದಮ್ಮ
ಹೆಚ್ಚಿನ ಭಾಗ್ಯ ಅಂದರೆ ಅರ್ಥವಾಗದಿಲ್ವ
ಮಾತಾಡುವಂತ ಭಾಗ್ಯ ಅಂದರೇ
ಗೊತ್ತಾಗದಿಲ್ಲದ ಕಂದಾ
ಮುದ್ದಮ್ಮ
ಹೇಳ್ತಿನೀ ಕೇಳು
ಚಿನ್ನ ಬೆರಳೀ ಹಣ ಕಾಸು ಮತ್ತು ರತ್ನ
ಇದೇ ದೊಡ್ಡ ಭಾಗ್ಯ
ಇದೇ ಹೆಚ್ಚಿನ ಭಾಗ್ಯ
ಮಾತಾಡವಂತ ಭಾಗ್ಯ ಅಂದರೆ
ಅರ್ಥವಾಗದಿಲ್ಲ ಅಂತ ಹೇಳ್ತಿಯಲವ್ವ
ಮುದ್ದಮ್ಮ
ಚಿನ್ನ ಬೆರಳೀ ಹಣ ಕಾಸು ಮುತ್ತು
ರತ್ನ ಈ ಭೂಲೋಕಕ್ಕೆ ಎಂದುಗೂ
ಹೆಚ್ಚಿನ ಭಾಗ್ಯವಲ್ಲ
ಇದು ಎಂದಿಗೂ ದೊಡ್ಡ ಭಾಗ್ಯವಲ್ಲ ಕಂದಾ
ಹೆಚ್ಚಿನ ಭಾಗ್ಯದ ಹೆಸರೇಳ್ತಿನಿ ಕೇಳಮ್ಮ

ಅವ್ವ ಚಿನ್ನವ ಕಳಕಂಡ್ರೆ
ಚಿನ್ನ ಸಂಪಾದಿಸಬಹುದು
ಬೆರಳೀಯ ಕಳಕಂಡರೆ
ಬೆರಳೀಯ ಪಡೆಯಬಹುದು
ಅಮ್ಮ ಕಟ್ಟಿರುವ ಮನೆ
ಮುರ್ದು ಬಿದ್ದೋದರೆ
ಮತ್ತೊಂದು ಮನೆಯಾ
ಕಟ್ಟಗಂದು ಬಾಳಬಹುದು
ಅವ್ವ ಹಣವನ್ನೇ ಕಳಕಂಡ್ರೆ
ಹಣುವನ್ನೆ ಕಂದಾ
ಸಂಪಾದ್ನೆ ಮಾಡಬಹುದು
ಅಮ್ಮ ಸಿರ್ತನ ಎನ್ನುವುದು
ಅವ್ವ ಸ್ಥಿರವಿಲ್ಲ ನನ್ನ ಕಂದಾ
ಮೂರು ದಿವಸದ ಬಾಳು
ಅಮ್ಮ ಹೊಳೆ ಬಂದಂಗೆ
ಹೊಳೆ ನನ್ನ ಕಂದಾ
ಒಂಟೋದಂಗೆ ಕಂದಾ
ಅಮ್ಮ ಬಡ್ತನ ಎನ್ನುವುದು
ಈ ಲೋಕಕ್ಕೆ ಸ್ಥಿರವಮ್ಮ || ಸಿದ್ಧಯ್ಯ||

ಸಿರಿಸ್ತಾನ ಎನ್ನುವುದು ಸ್ಥಿರವಿಲ್ಲ ಕಂದಾ
ಮೂರು ದಿವಸದ ಬಾಳು ಮುದ್ದಮ್ಮ
ಬಡಸ್ತಾನ ಎನ್ನತಕ್ಕದ್ದೇ
ನರಲೋಕದಲ್ಲಿ ಸಿರಂಜಾಯ ಕಂದಾ
ಚಿನ್ನ ಬೆರಳಿ ಮುತ್ತು ರತ್ನ
ಹೆಚ್ಚಿನ ಭಾಗ್ಯ ಅಂತ ಹೇಳಿದಿಯಲ್ಲಮ್ಮ
ಅದು ಎಂದಿಗೂ ಹೆಚ್ಚಿನ ಭಾಗ್ಯವಲ್ಲ
ಹೆಚ್ಚಿನ ಭಾಗ್ಯದ
ಹೆಸ್ರು ಹೇಳ್ತಿನೀ ಕೇಳು ತಾಯಿ
ನೀವು ಬಡ್ತಾನ ಇರುವಾಗ
ಅಮ್ಮ ದೇವರ ನೆನೆಯುತೀರಿ
ಅವ್ವ ಸಿರ್ತನ ಬಂದ ಮೇಲೆ ನೀವು
ದೇವ್ರ ಮರೆಯುತ್ತಿರೀ
ಅಮ್ಮ ಬಡವರಗೇ ನನ್ನ ಕಂದಾ
ಬಗವಂತನ ನೆರಳಗ್ಯಾನ
ಭಗ್ತರಗೇ ನನ್ನ ಕಂದಾ
ಶಿವನ ಮ್ಯೇಗಳ ಗ್ಯಾನ
ಅಮ್ಮ ಸ್ಥಿತವಂತರಗೆಲ್ಲ
ಪುಣ್ಯವಂತರಗೆಲ್ಲ
ಲಕ್ಷೀಕರಿಗೇ ಕಂದಾ
ಹಣಿನ ಮೇಲೆ ಆಸೆ
ಹೊಲದ ಮೇಲೆ ದಿಗಿಲು
ಗದ್ದೆ ಮ್ಯಾಗಳ ಗ್ಯಾನ
ಮನೆ ಮ್ಯಾಲೆ ದಿಗಲು
ನಮ್ಮ ಭಿಕ್ಷ ಮಾಡುವುರಿಗೇ ಕಂದಾ
ಮಕ್ಕಳ ಕಂಡ್ರೆ ಬಾಳ ಆಸೆ || ಸಿದ್ಧಯ್ಯ||

ನೀವು ಬಡಸ್ತಾನ ಇರುವಾಗ ಮಕ್ಕಳೇ
ದೇವ್ರ ನೆನಿತೀರಿ ತಾಯಿ
ಸಿರಿಸ್ತಾನ ಬಂದು ಮ್ಯಾಲೆ
ದೇವುರು ಮರ್ತು ಬಿಟ್ತೀರಿ ಮುದ್ದಮ್ಮ
ಬಡವರ್ಗೆಲ್ಲ ಕಂದಾ ಭಗವಂತನ
ಮ್ಯಾಗಳ ಗ್ಯಾನ
ಭಗ್ತರ್ಗೆಲ್ಲ ಶಿವನಮ್ಯಾಗಳ ಆಸೆ
ಈಗಲೀಗ ಸ್ಥಿತಿವಂತರು
ಪುಣ್ಯವಂರರ್ಗೆಲ್ಲ ಕಂದಾ
ಹಣಿನ ಮೇಲೆ ಗ್ಯಾನ ತಾಯಿ
ನಮ್ಮಂತ ಭಿಕ್ಷ ಮಾಡೆವರಿಗೆ
ಮಕ್ಕಳ ಮೇಲೆ ಬಾಳ ಆಸೆ ತಾಯಿ
ಚಿನ್ನ ಬೆರಳೀ ಬಂಗಾರ
ಮುತ್ತು ರವರತುನ
ಈ ಪ್ರಪಂಚಕ್ಕೆ ಹೆಚ್ಚು ಎಂದು
ಕೇಳಿದಿಯಲ್ಲೊ ಕಂದ
ಈ ಪ್ರಪಂಚಕ್ಕೆ
ಎಂದುಗೂ ಚಿನ್ನ ಬೆಳ್ಳಿ ಹಣಕಾಸು
ಮಾತ್ರ ಹೆಚ್ಚಲ್ಲ
ಇದು ಎಂದುಗೂ ದೊಡ್ಡ ಭಾಗ್ಯವಲ್ಲ ಮುದ್ದಮ್ಮ
ದೊಡ್ಡ ಭಾಗ್ಯ ಯಾವುದು ಅಂದರೆ

ಅವ್ವ ಭಾಗ್ಯ ಭಾಗ್ಯಕ್ಕೆಲ್ಲ ಮಗಳೆ
ಮಕ್ಕಳ ಭಾಗ್ಯ ದೊಡ್ಡದಮ್ಮ || ಸಿದ್ಧಯ್ಯ||

ಅಮ್ಮ, ಭಾಗ್ಯ ಭಾಗ್ಯಕ್ಕೆಲ್ಲ
ಮಕ್ಕಳೂ ಭಾಗ್ಯ ಅಂದರೇ
ಈ ಭೂಮಿಗೆ ದೊಡ್ಡ ಭಾಗ್ಯ
ಕೇಳವ್ವ ನನ್ನ ಕಂದಾ
ನಿನ್ನ ಹೊಟ್ಟೆಲಿ ಹುಟ್ಟಿರುವ
ಏಳುಜನ ಮಕ್ಕಳಲ್ಲಿ
ಮುಂಚೆ ಹುಟ್ಟಿದ ಮಕ್ಕಳು
ಮೊದಲು ಹುಟ್ಟಿದ ಮಕ್ಕಳು
ಆರುಜನ ಮಕ್ಕಳ ಕಂದಾ
ನೀನೆ ಮಡಿಕವ್ವ
ಅಮ್ಮ ಕಟ್ಟ ಕಡಾಗಾಲದಲ್ಲಿ
ಹುಟ್ಟಿರುವ ಮಗನು
ಭಾಗ್ಯವುಳ್ಳ ಮಗ
ಪುಣ್ಯಶಾಲಿ ಮಗ
ಬಂಗಾರದ ಗೊಂಬೆ
ಲಕ್ಷ್ಮೀ ಪುತ್ರ
ನಿನ್ನ ಕೆಂಪಚಾರಿ ಮಗನ ನನಗೆ
ದತ್ತು ಮಗನ ಕೊಟ್ಟೀಯವ್ವ || ಸಿದ್ಧಯ್ಯ||

ಮೊದಲು ಹುಟ್ಟಿದ ಅರ್ಜನ ಮಕ್ಕಳಲ್ಲೀ ಕಂದಾ
ಕಟ್ಟಕಡೆಗಾಲದಲ್ಲಿ ಹುಟ್ಟಿರುವ
ಭಾಗ್ಯವುಳ್ಳ ಮಗ
ಪುಣ್ಯಶಾಲಿ ಮಗ
ಬಂಗಾರ್ದ ಗೊಂಬೆ
ಲಕ್ಷ್ಮೀ ಪುತ್ರ
ಕಿರಿಕೆಂಪಣ್ಣನ ತಂದು ತಾಯಿ
ಒಂದೇ ದುಡ್ಡಲ್ಲಿ ಒಂದೇ ಭಕ್ತಿ ಒಳಗೆ ಮುದ್ದಮ್ಮಸ
ನಿನ್ನ ಮಗನು ಕೆಂಪಣ್ಣನ
ದತ್ತುವಾಗಿ ದಾನಕ್ಕೆ ಭಿಗಸಕ್ಕೆ
ನಿನ್ನ ಮಗನ ಕೊಟ್ಟುಬಿಟ್ರೆ ಕಂದಾ
ನಿನಗೆ ಈಗ ಕೊಟ್ಟರ್ತಕ್ಕಂತದ್ದು
ಸರಿಸಂಪತ್ತು ಸಕಲ ಭಾಗ್ಯವಲ್ಲ ಕಂದ

ಅಮ್ಮ ಇನ್ನಿಷ್ಟು ಭಾಗ್ಯ ನಿನಗೆ
ಕೊಡುತೀನಿ ನನ್ನ ಮಗಳೆ || ಸಿದ್ಧಯ್ಯ||

ಕಂದ ಇನ್ನಿಷ್ಟು ಭಾಗ್ಯ
ಇನ್ನಷ್ಟು ಭಾಗ್ಯ
ನಿನಗಾಗಿ ಕಂದಾ
ನಾ ಕೊಡುತೀನಿ ನನ್ನ ಮಗುಳೆ
ಕೇಳವ್ವ ಮುದ್ದಮ್ಮ
ನಿನ್ನ ಮಗನ ಕೊಟ್ಟಿಯೋ ಕಂದಾ
ಕೊಡೋದಿಲ್ಲವ ಹೇಳುಬುಡವ್ವ || ಸಿದ್ಧಯ್ಯ||

ಮಗನು ಕೆಂಪಚಾರಿಯವರ
ದಾನಕ್ಕೆ ಕೊಟ್ಟಿಯಾ ಮುದ್ದಮ್ಮ
ಭಿಗಸಕ್ಕೆ ಕೊಟ್ಟಿಯೋ ಕಂದ
ಮುದ್ದಮ್ಮ
ಒಂದೇ ಭಕ್ತಿವೊಳಗೆ ನಿನ್ನ ಮಗನ
ಕೊಟ್ಟುಬುಟ್ರೇ
ಈಗ ಕೊಟ್ಟಿರುವುದು ಸಿರಿಸಂಪತ್ತು
ಸಕಲ ಭಾಗ್ಯವಲ್ಲ
ಇನ್ನಿಷ್ಟು ಭಾಗ್ಯವನ್ನೆ ಕಂದಾ
ನಿನಗಾಗಿ ಕೊಟ್ಟುಬುಡ್ತೀನಿ ಮುದ್ದಮ್ಮ
ನಿನ್ನ ಮಗನ ಕೆಂಪಣ್ಣನ ತಂದು
ದಾನಕ್ಕೆ ಭಿಕ್ಷಕ್ಕೆ
ಮಗನ ಕೊಟ್ಟು ಬಿಡವ್ವ ಎಂದರು

ಅಯ್ಯಾ ಧರೆಗೆ ದೊಡ್ಡವರ ಮಾತ
ಕೇಳಕಂಡು ಮುದ್ದಮ್ಮ
ನನ್ನ ಮಂಟೇದ ಲಿಂಗಯ್ಯನ
ಮಾತನ್ನೇ ಕೇಳುಬುಟ್ಟು
ಅವಳು ತಂದಿರುವ ದಾನ
ತಂದಿರುವ ಭಿಗಸ
ಭೂಮಿಗೆ ತಾಯಿ
ಮಡ್ಗುಬುಟ್ಟು ಮುದ್ದಮ್ಮ
ನನ್ನ ಧರೆಗೆ ದೊಡ್ಡವರ ನೋಡಿ
ಗುಳುಗುಳನೇ ಆಳುವುತಾಳೆ || ಸಿದ್ಧಯ್ಯ||

ನನ್ನ ಧರೆಗೆ ದೊಡ್ಡವರ ಮೊಕವ
ನೋಡ್ಕಂಡು ಮುದ್ದಮ್ಮ
ನನ್ನ ಮಂಟೇದ ಲಿಂಗಯ್ಯನ
ಮಾತ ಕೇಳ್ಕಂಡು
ಏನಯ್ಯ ಜಂಗುಮ
ಏನಪ್ಪ ಭಿಗುಸಿಕಾ
ನನ್ನ ಮನೆಗೆ ಬಂದುಬುಟ್ಟು
ಯೆಂತ ಮಾತು ಕೇಳ್ಬುಟ್ಟೆ
ನನ್ನ ಹಟ್ಟಿ ಅರಮನೆಗೆ
ದಾನಕ್ಕೆ ಬಂದವನು
ಭಿಕ್ಷಕ್ಕೆ ಬಂದವನು
ನೀನು ಕೇಳು ಜಂಗುಮ
ಅಯ್ಯೋ ಮನೆಗೆ ಬಂದ್ಬುಟ್ಟು
ನನ್ನ ಮಗನು ಕೆಂಪಣ್ಣನವರ
ದತ್ತುವಾಗಿ ದಾನಕ್ಕೆ
ಮಗನ ಕೊಡು ಅಂತ
ಕೇಳುಬುಟ್ಟೆ ಪರದೇಶಿ
ಅಯ್ಯಾ ತಿರಿಯಾಕೆ ಬಂದವರು
ಹಿರಿ ಸೊಸೆ ಬೇಡುದಂಗೆ
ಭಿಕ್ಷಕ್ಕೆ ಬಂದವರು
ಬಿಸಿ ಅನ್ನ ಕೇಳ್ದ ಹಾಗೇ
ನೀನು ತಿರಿಯಾಕೆ ನನ್ನ ಮನೆಗೆ ಬಂದು
ನನ್ನ ಕರಿಯಮಗನ ಕೇಳುಬಹುದಾ || ಸಿದ್ಧಯ್ಯ||

ನನ್ನ ಬಂಗಾರ್ದ ಗೊಂಬೆಯ
ನೀ ಬಾಯಿಬುಟ್ಟು ಕೇಳುಬಹುದು || ಸಿದ್ಧಯ್ಯ||

ಕೇಳು ಜಂಗುಮಯ್ಯ
ನೀನು ಹೇಳುವಂತ ಮಾತು ಕೇಳುದರೆ
ಭಿಕ್ಷಕ್ಕೆ ಬಂದವರು ಬಿಸಿ ಅನ್ನ ಕೇಳ್ದಂಗೆ ಆಯ್ತು
ತಿರಿಯಾಕೆ ಬಂದವರು
ಹಿರಿ ಸೊಸೆ ಬೇಡ್ಕಂಡಂಗೆ ಆಯ್ತು
ನೀನು ತಿರ್ಕಳಕ್ಕೇ ನನ್ನ ಮನೆಗೆ ಬಂದುಬಿಟ್ಟು
ಕಿರಿಮಗ ಕೆಂಪಣ್ಣನ
ದತ್ತುವಾಗಿ ದಾನಕ್ಕೆ ಭಿಕ್ಷಕ್ಕೆ
ಮಗನ ಕೂಡುಯೆಂದು ಕೇಳುಬುಟ್ಟಿಯಲ್ಲ
ನನ್ನ ಮಗನ ಕೇಳದಕ್ಕೆ
ನಿನಗೆ ಬಾಯಿ ತಾನೆ ಯಾಗೆಬಂತು || ಸಿದ್ಧಯ್ಯ||

ನನ್ನ ಬಂಗಾರದ ಮಗನಾ
ನೀ ಬಾಯಿ ಬುಟ್ಟು ಕೇಳಬಹುದ || ಸಿದ್ಧಯ್ಯ||

ನನ್ನ ಅಂಗುಳದಲ್ಲಿ ಆಡುವಂತ
ನನ್ನ ಅರಗಿಣಿಯ ಕೇಳುಬಹುದ || ಸಿದ್ಧಯ್ಯ||

ನನ್ನ ಅಂಗಳ್ದಲ್ಲಿ ಆಡ್ತಕ್ಕಿಂತಹ
ಅರಗಿಣಿ ಕೇಳಬಹುದಾ ಜಂಗುಮ
ನನ್ನ ಬಂಗಾರ್ದಂತಹ ಮಗನ
ಬಾಯಿಬಿಟ್ಟು ಕೇಳುಬುಟ್ಟಿಯಲ್ಲ
ಜಂಗುಮ
ನನ್ನ ಮಗುನು ಸುದ್ದಿಯೆತ್ತುದಕ್ಕೆ
ಎತ್ತಬಾರ್ದಂತದು ಆಣೆ ಇಕ್ಕತೀನಿ ಕೇಳು
ನನ್ನ ಕೊಟ್ಗೇ ಬರ್ದು ಮಾಡಿ
ಹೇಲ್ಗೆ ತಿಪ್ಪೇ ಮಾಡಿ ನಡಿಯೋ ರೋಡ್ ಮಾಡಿ ಗುರುವು
ನನ್ನ ಸಾಲಟ್ಟಿ ದನಗಳಿಗೆ
ದೊಡ್ಡ ರೋಗ ಕೊಟ್ಟುರುವೇ
ಸಾಲಟ್ಟಿ ಕುರುಗಳೂಗೇ ಉಣ್ಣು ರೋಗ ಕೊಟ್ರುವೇ
ಗುರುವೇ ಸಾಲಟ್ಟಿ ಆಡುಗಳ್ಗೇ
ಕಸರೇ ರೋಗ ದೇವ ಕೊಟ್ರೋವೆ ಸರಿಯಪ್ಪ
ನನ್ನ ಆರ್ಜನ ಜೀತುಗಾರ್ರು‍
ಊರು ಮುಂದೆ ಹುಟ್ಟುಗಲ್ಲು ಆದ್ರು ಸರಿಯೇ || ಸಿದ್ಧಯ್ಯ||

ಆರ್ಜನ ಜೀತ್ಗಾರು ಸ್ವಾಮಿ
ಊರು ಮುಂದೆ ಹುಟ್ಗಲ್ಲಾಗ್ಬುಟ್ರು ಸರಿಯೇ ಗುರುವು
ನನ್ನ ಮೊದಲು ಹುಟ್ಟದಾ
ಆರ್ಜನ ಗಂಡು ಮಕ್ಕಳಿಗೇ
ಗುರುವೇ ಹುಚ್ಚು ಇಡಕಳ್ಳಲೀ
ಬೆಪ್ಪು ಇಡಕಳ್ಳಲೀಸ
ಮೊಲ್ಲಾಗರ ಇಡಕಳ್ಳಲಿ
ನನ್ನ ಮೊದಲು ಹುಟ್ಟಿದ ದೇವ
ಆರುಜನ ಗಂಡು ಮಕ್ಕಳೂ
ಹುಚ್ಚು ಬೆಪ್ಪುನ ದೇವ ಗ್ಯಾನದಲ್ಲಿ ಗುರುವು
ಅವರು ಊರುಗೊಬ್ಬ ಆಗಿ
ಕೇರಿಗೊಬ್ಬ ಆಗಿ
ದೇಶಕ್ಕೊಬ್ಬ ಗುರು
ದಿವಾಳಿಗೊಬ್ಬ ಗುರುವು
ನನ್ನ ಕಣ್ಣೀಗೆ ಕಾನದಂಗೆ
ಎಲ್ಲಾರು ಗುರುವೆ ಹೊರಟೋದ್ರುವೇ ಸರಿ
ನನ್ನ ಆರುಜನ ಸೊಸೇರಿಗೆ
ಗಂಡು ಗಾಳಿ ಇಡುದ್ರು ಸರಿಯೇ || ಸಿದ್ಧಯ್ಯ ||

ಆರುಜನ ಸೊಸೇರ್ಗೆ ದೇವ
ಗಂಡ್ಗಾಳಿ ಇಡ್ಕಂಡು ಸ್ವಾಮಿ
ಕಲ್ಕಲ್ಲು ಕಡದು ಮೊಣ್ಮಣ್ಣು ಮುಕ್ಕಿ
ಅವರವರ ಮುಂದಲೇ
ಅವರವರೇ ಇಡ್ಕಂಡು
ಕಿತ್ತಾಡ್ಕಂಡು ಬಡ್ದಾಡ್ಕಂಡು
ನನ್ನಾರು ಜನ ಸೊಸೇರು
ಪಕಪಕ್ಕನೇ ಪ್ರಾಣ ಬುಟ್ಟುಟ್ರು ಸರಿಯೇ ಗುರುವು

ನನ್ನ ಏಳು ಗುಳಿ ಅಕ್ಕಿ
ಅಣ್ಣೇ ಬೀಜವಾಗಿ ಏಳು ಗುಳಿ ಬ್ಯಾಳೆ
ಹತ್ತಿ ಬೀಜವಾಗಿ
ನನ್ನ ಏಳು ಕೊಪ್ಪುರ್ಕೆ ದ್ರೌಭಾಗ್ಯ
ಇಜ್ಜಲು ಮಸಿ ಆದ್ರು ಸರಿಯೇ || ಸಿದ್ಧಯ್ಯ ||

ನನ್ನ ಏಳು ಕೊಪ್ಪುರ್ಕೆ
ದ್ರಭಬಾಗ್ಯವು ಸ್ವಾಮಿ
ಇಜ್ಜಲು ಮಸಿದೇವ
ಆಗೋದ್ರು ಸರಿಯೇ
ಕೇಳು ಜಂಗುಮ
ನನ್ನ ಚಿನ್ನ ಬೆರಳಿ ಕಂಬ್ಸಾಲು
ಮರ್ದ ಕಂಭವಾದ್ರು ಸರಿಯೇ || ಸಿದ್ಧಯ್ಯ ||

ನಮ್ಮ ಚಿನ್ನ ಬೆರಳಿ ಕಂಭ್ಯಸಾಲೆಲ್ಲ
ಮರದ ಕಂಭ ಆಗುಬುಟ್ರು ಸರಿಯೇ ಗುರುವು
ನನ್ನ ಗಂಡ ಬಾಚಿ ಬಸವಯ್ಯ
ನಾನು ಇಬ್ಬುರೂವೆ ದೇವ
ಹಾಲು ಅನ್ನ ಊಟ ಮಾಡಿ
ಪಾಲು ಪರ್ಸಾದ ಸಲ್ಲಿಸ್ಕಂಡು

ತಾಂಬ್ರದ ವೀಳ್ಯಾ ತಗದು ಕೈಲಿಡ್ಕಂಡು
ನಾವು ಸತಿಪತಿ ಗಂಡಾ ಹೆಡ್ತೀರು
ಒಂದೇ ಪಟ್ಟೇ ಮಂಚದ
ಮೇಲೆ ಸ್ವಾಮೀ
ಮನಗೀ ನಿದ್ರೆ ಮಾಡುವಂತ
ಟೈಮ್‌ನಲ್ಲಿ ಗುರುವು
ನಮ್ಮ ಗಂಡ ಹೆಡ್ತೀರಿಗೆ
ಕಾಲು ಸೇದೋಗಲೀ
ಕೈಯಿ ಸೇದೋಗಲಿ
ನಾಲೀಗೆಯೇ ಸೇದೋಗಲೀ

ನಮ್ಮ ಕಣ್ಣಿನ ನೇತ್ರ ಇಂಗೋದ್ರುವೇ
ಮಗನ ನಾನು ಕೊಡುವುದಿಲ್ಲ || ಸಿದ್ಧಯ್ಯ ||

ನನ್ನ ಮಗನ ಕೇಳುವ
ಮುಂಡೇಮಗನ ಮನೆಬಿಟ್ಟು ಆಚುಗೋಗೇ || ಸಿದ್ಧಯ್ಯ ||

ಹೇ ಜಂಗಮ
ನಮ್ಮ ಗಂಡಾ ಹೆಂಡ್ತೀರ
ಕಣ್ಣಿನ ನೇತ್ರ ಇಂಗೋದ್ರು ಕೂಡ
ನಾನು ಮಾತ್ರ ಮಗನಾದ ಕೆಂಪಣ್ಗಣನ
ನಿನಗೆ ದಾನಕ್ಕೆ ಮಗನ ಕೊಡೋದಿಲ್ಲ
ಭಿಕ್ಷಕ್ಕೆ ಮಗನ ಕೊಡೋದಿಲ್ಲ
ನಿನಗೆ ಮಾತ್ರ ನಾನು ದತ್ತುವಾಗಿ ಕೂಡ
ಮಗನ ನಾನು ಖಂಡುತವಾಗಿ ಕೊಡೋದಿಲ್ಲ
ನನ್ನ ಮಗನ ಕೇಳುಬ್ಯಾಡ
ಮನೆ ಬಿಟ್ಟು ಹೊರಟೋಗುಬುಡು ಎಂದರು ಮುದ್ದಮ್ಮ

ಗುರುವೇ ಮುದ್ದಮ್ಮನ ಮಾತ ಕೇಳಿ
ನನ್ನ ಧರೆಗೇ ದೊಡ್ಡವರು || ಸಿದ್ದಯ್ಯ ||

ಮುದ್ದಮ್ಮನ ಮಾತು ಕೇಳಿ
ಜಗನ್ ಜ್ಯೋತಿ ಅಲ್ಲಮ ಪ್ರಭು
ಮಂಟೇದ ಲಿಂಗಪ್ಪ
ಶಿವಾಶಿವಾ ಎನತೇಳಿ ಎರಡು ನೇತ್ರ ಮುಚ್ಚಿಕ್ಕಂಡ್ರು
ಕರ್ಣ ಕೂಡ ಮುಚ್ಚಗಂಡು
ಮುದ್ದಮ್ಮ
ಕಣ್ಣಿನೇತ್ರ ಇಂಗೋದ್ರು
ಮಗನ ಕೊಡೋದಿಲ್ವಮ್ಮ
ಜಂಗುಮ
ಕಂಡಿತ್ವಾಗೀ ಮಗನ ಕೊಡೋದಿಲ್ಲ
ಕಂಡಿತವಾಗಿ ಮಗ್ನ ಕೇಳಬ್ಯಾಡಿ
ಹೊರಟೋಗಿಬಿಡಿ ಎಂದರು
ಪಾಪ ಮುದ್ದಮ್ಮ
ನವನಾರು ಒಂಬತ್ತು ತಿಂಗಳು
ಮಗನ ಹೊಟ್ಟೇಲಿ ತುಂಬ್ಕಂಡು
ಮಗ್ನ ಎತ್ತಗಂಡು ತತ್ತಗಂಡು
ಮಗ್ನಗೇ ಎದೆಪಾಲು ಕೂಡ ಕೊಟ್ಕಂಡು
ಸಾಕಿ ಸಲಗಿದಂತ ಹೆತ್ತ ತಾಯಿ
ಮಗ್ನ ಕೊಡೋಕೆ ಕಂದಾ
ಹೊಟ್ಟೇ ಉರಿತದೇ ಮುದ್ದಮ್ಮ
ಮನನೊಂದುಬುಡ್ತದೇ ಕಂದಾ
ಹೆತ್ತ ತಾಯಿಗೇ ಮಗನ ಕೊಡೋಕೆ
ಮನಸ್ಸು ಬರೋದಿಲ್ಲ
ಹೇಳ್ತೀನಿ ಕೇಳವ್ವ ಮುದ್ದಮ್ಮ

ಅವ್ವ ನಾನು ಬಂದು ತಾಯಿ
ಮಗನ ಕೇಳಿದರೆ
ಮಗನ ಕೊಡೋದಕ್ಕೆ
ಹೊಟ್ಟೆ ಉರೀತದೆ
ನಿನಗೆ ಮನ ನೋಯ್ತದೆ
ಅಮ್ಮ ನೀರು ಬರುವ ಕಣ್ಣೀನಲ್ಲಿ
ರಕ್ತ ನನ್ನ ಕಂದ ಬರ್ತುದೆ ನನ್ನ ತಾಯಿ
ಕೇಳವ್ವ ಮುದ್ದಮ್ಮ
ಅವ್ವ ನನಗಾದರೇ ಕಂದಾ
ಮಗ್ನ ಕೊಡೋಕಿಲ್ಲ ಅಂತೀಯ ನನ್ನ ಕಂದಾ
ಅಮ್ಮ ನನ್ಗಾದ್ರೇ ಕೊಡೋದಿಲ್ಲ
ನಿನ್ನ ಯಮುನ್ಗಾದ್ರೇ ಕೊಟ್ಟೀಯವ್ವ || ಸಿದ್ಧಯ್ಯ||