ಅನ್ನವರ ಅನ್ನದಿಲ್ಲ ಆಡವರ ಆಡದಿಲ್ಲ ಕಂದಾ
ಈಗಲೀಗ ಬಾಯೆತ್ತಿ ಬೋದವರ
ಬಾಯೆತ್ತಿ ಬೊಯ್ಯೊದಿಲ್ಲಸ
ಕೈಯೆತ್ತಿ ಹೊಡೆದವರ ಕೈಯೆತ್ತಿ ಹೊಡೆಯೋದಿಲ್ಲ
ಕಲ್ಲೆತ್ತಿ ವಡೆಯವರ ಕಂಡರೇ ಕಂದಾ

ಅಮ್ಮ ಕಲ್ಲೆತ್ತಿ ವಡೆಯವರ ಕಂಡರೆ
ಕೈಯೆತ್ತಿ ಮುಗಿಯುತೀನಿ || ಸಿದ್ಧಯ್ಯ||

ಅಮ್ಮ ಕಲ್ಲೆತ್ತಿ ಕಂದಾ
ಹೊಡೆಯವರ ಕಂದಾ ಕಂಡರೆ ನನ್ನ ಮಗಳೆ
ಕೈಯೆತ್ತಿ ನಾವು ಮುಗಿತೀನಿ ತಾಯಿ
ಅವ್ವ ಕೇಳವ್ವ ಕಂದಾ
ಕೇಳು ನನ್ನ ಮಗಳೇ ತಾಯಿ ಮುದ್ದಮ್ಮ
ಅಮ್ಮ ಆಡೂವಂತ ಮಾತ ನೀ
ಗ್ಯಾನವಾಗಿ ಕೇಳು ಕಂದಾ || ಸಿದ್ಧಯ್ಯ||

ಕಲ್ಲೆತ್ತಿ ಹೊಡೆಯವರ ಕಂಡರೆ ಅಮ್ಮ
ಎರಡು ಕೈ ಕೂಡ ಎತ್ತು ಮುಗಿತೀವಿ ಮುದ್ದಮ್ಮ
ನಾಳೆ ದಿವಸ ಕಂದಾ
ನಿಮ್ಮ ನಿಮ್ಮ ಭಕ್ತಿ
ನಿಮ್ಮ ನಿಮ್ಮ ದುಡ ನಾನೇ ನೋಡ್ಕಂಡು

ಅಮ್ಮ ನಿಮ್ಮ ಮನೆ ಮಾರಿ ಕರದು
ನಿಮ್ಮಾ ಮನೆಗೆ ಕೂಡುತೀವಿ || ಸಿದ್ಧಯ್ಯ||

ನಾಳೆ ನಿಮ್ಮ ಮನೆ ಮಾರಿ
ನಿಮ್ಮಾ ಮನೆಗೆ ಕೂಡುತೀನಿ || ಸಿದ್ಧಯ್ಯ||

ಮುದ್ದಮ್ಮ
ಈಗಲೀಗ ಹೇಳುವೆನು ಕೇಳು ಕಂದಾ
ನಾಳೆ ದಿವಸಾ ಕಂದಾ
ನಿಮ್ಮ ಮನೆ ಮಾರಿ ತಂದು
ನಿಮ್ಮ ಮನೆಗೇ ಕೂಡುವಂತ ಗುರು ನಾನು
ಈಗ ಇಷ್ಟ ಬಂದಂಗೆ
ಬೋದುಬುಟ್ಟೆ ಇಷ್ಟ ಬಂದಂಗೆ ಆಡುಬುಟ್ಟೆ
ಮುದ್ದಮ್ಮ
ನೀನು ಬೋದ್ರು ಬೇಧವಿಲ್ಲ
ಅಂದ್ರು ಕ್ರೋಧವಿಲ್ಲ
ಆಡುದ್ರು ನನಗೆ ಭಿನ್ನ ಬೇಧವಿಲ್ಲ
ಇವತ್ತಿನ ದಿವಸಾ ಕಂದಾ
ನಿನ್ನ ಮನೆ ಮಂಟೆಗಳವನೆ ಜಂಗುಮಾ
ಮನೆ ಬಿಟ್ಟು ಆಚೆಗೋಗೊ
ಮನೆಬಿಟ್ಟು ಕಡದೋಗೊ ಪರದೇಶಿ ಅಂತೇಳಿದಿಯಲ್ಲವ್ವ
ಅದಕ್ಕಾಗಿ ಒಂದು ಮಾತೇಳ್ತಿನಿ ಕೇಳು
ಮುದ್ದಮ್ಮ
ಈ ಭೂಮಿ ಭೂಲೋಕೆ ನಡುವೆ
ನರಲೋಕದಲ್ಲಿ ಕಂದಾ
ಯಾರ್ಯಾರೊ ಹೆಸರು ಕಟ್ಟುದ್ರು
ಯಾರ್ಯಾರೊ ನಾಮಕರಣ ಕಟ್ಟುದ್ರು ಮಗಳೆ
ಯಾರು ಹೆಸರ್ರು‍ಕಟ್ಟಿ ಯಾರು ನಾಮಕರಣ ಕರುದ್ರೂವೆಸ
ಈ ನರಲೋಕದಲ್ಲಿ ಸಾತೀಸುವಾದ ಹೆಸರು
ಸಾತೀಸುವಾದ ನಾಮಕರಣುವೆ ನನಗುಳಿಯಲಿಲ್ಲ
ಈ ಧರೆ ತಕ್ಕಂಡು ಬಂದುದಕೆ
ಧರೆಗೆ ದೊಡ್ಡವರು ಅಂತ ಹೆಸರಾಯ್ತು
ಭೂಮಿ ಪಡ್ಕಂಡು ಮುಂದಕ್ಕೆಸದ
ಭೂಮಿಗೆ ಹಿರಿಯವರು ಅಂತ ನಾಮಕರಣವಾಯ್ತು
ಕಲ್ಯಾಣ ಪಟ್ಟಣಕ್ಕೆ ಹೋಗಿದ್ದಿ
ಕಲ್ಯಾಣ ಪಟ್ಟಣದಲ್ಲಿ ಬಸವಣ್ಣ ನೀಲಮ್ಮ
ಸತ್ಯ ಸರಣ್ಮಾತ್ಮರೆಲ್ಲ
ಪರಂಜ್ಯೋತಿಯಂತ ನಾಮಕರಣ ಕಟ್ಟುದ್ರು
ಇದುವಲ್ಲದಂತೆ ಹಲವಾರುಕ್ಕೋಗಿ ನನ ಕಂದ
ಹಲವಾರು ಜ್ಯೋತಿಲಿಂಗಪ್ಪ ಅಂತ
ನಾಮಕರಣವಾಯ್ತು
ಕೊಡಿಗಲ್ಲಿಗೆ ಕೂಡ ಹೋಗಿ ಒರಗಿದ್ದಿ
ಕೋಡುಗಲ್ಲು ಮಂಟೇಸ್ವಾಮಿ ಅಂತ ಹೆಸರಾಯ್ತು
ಹೊನ್ನಯ್ಯ ಕೆರೆ ಚೆನ್ನಯ್ಯನ ಕೆರೆಗೆ
ಹೋದೀ ಹೊನ್ನಯ್ಯನ ಕೆರೆ ಒಳಗೆ
ಚೆನ್ನೇದ ಮಂಟೇಸ್ವಾಮಿ ಅಂತ ನಾಮಕರಣವಾಯ್ತು
ಇವತ್ತು ನಿನ್ನ ಮನೆಗೆ ನಾನು
ಬರುವತ್ತಿಗೆ ಕಂದಾ
ನಿನ್ನ ಮನಮಂಟ್ಗಳ್ಳ ಜಂಗುಮ
ಮನೆಬಿಟ್ಟೂ ಆಚೆಗೆ ಕಡದೋಗೂ
ಪರದೇಶಿ ಅಂತ ಹೇಳಿದಿಯಲ್ಲೋ ಕಂದಾ
ಮುದ್ದಮ್ಮ

ನನ್ನ ಮಂಟೇದ ಲಿಂಗಯ್ಯ ಅಂತ
ಲೋಕವೆ ಕೊಂಡಾಡಲವ್ವ || ಸಿದ್ಧಯ್ಯ||

ಅಮ್ಮ ಮಂಟೇದ ಲಿಂಗಯ್ಯ
ಏನತೇಳಿ ನನ್ನ ಕಂದಾ ಕೇಳು ನನ್ನ ಮಗಳೆ
ಕೇಳು ನನ್ನ ತಾಯಿ
ಈ ಊರು ಊರಿನ ಮ್ಯಾಲೆ
ನಾಡು ನಾಡಿನ ಮ್ಯಾಲೆ
ಈ ರಾಜ್ಯ ರಾಜ್ಯದ ಮೇಲೆ
ನನ್ನ ಮಂಟೇದ ಲಿಂಗಯ್ಯ ಅಂತ
ಕರಿಯಲಿ ನನ್ನ ಕಂದಾ
ಅವ್ವ ಮಂಟೇದ ಲಿಂಗಯ್ಯ ಅಂತ
ನರಲೋಕವೇ ಹೊಗಳಲಮ್ಮ || ಸಿದ್ಧಯ್ಯ||

ನನಗೆ ದೇವ ದೇಮಾನ್ರು
ಕಟ್ಟಿದ್ದ ಹೆಸರು ಇವತ್ತಿಗೆ ಕಂದಾ
ಆಳಾವಂಟೋಗಲೀ ನೀನು ನರಮನುಷ್ಯೆ ಕಂದಾ
ಕಟ್ಟಿದ ಹೆಸರು ನರಲೋಕದಲ್ಲಿ
ಸ್ಥಿರವಾಗಿ ಉಳಕಳಲೀ
ಅವ್ವ ಮಂಟೇದ ಲಿಂಗಯ್ಯ ಅಂತ
ನಾಮಕರಣ ಅಗಲಮ್ಮ || ಸಿದ್ಧಯ್ಯ||

ಮುದ್ದಮ್ಮ
ದೇವ ದೇವಮಾನ್ರು ಕಟ್ಟದಂತ ನಾಮಕರಣ
ಇವತ್ತಿಗೆ ಆಳಾಗಿ ವಂಟೋಗ್ಲಿ ತಾಯಿ
ನರಮನುಷ್ಯೆಯಾಗಿ ಮಗಳೇ
ಇವತ್ತು ನೀನು ಕಟ್ಟಿದ ಹೆಸರು
ನರಲೋಕದಲ್ಲಿ ಸ್ಥಿರವಾಗಿ ಉಳಕಳ್ಳಲಿ ತಾಯಿ ಮುದ್ದಮ್ಮ
ಮುದ್ದಮ್ಮ
ನನಗೆ ಮಂಟೇದ ಲಿಂಗಪ್ಪ
ಅಂತ ಹೆಸರು ಕರೆದಿಯಪ್ಪ
ನನಗೆ ನಾಮಕರಣ ಕರಿದೀಯ ಕಂದಾ
ಮುದ್ದಮ್ಮ ನನಗೆ ಹೆಸರು ಕಟ್ಟಿದ ಮೇಲೆ
ನಾಮಕರಣ ನೀನು ಕರೆದಮ್ಯಾಲೆ ತಾಯಿ

ಅವ್ವ ನೀನೆ ನನಗೆ ತಾಯಿಕವ್ವ
ನಾನೇ ನಿನ್ನ ಮಗ ಕನಮ್ಮ || ಸಿದ್ಧಯ್ಯ||

ಅವ್ವ ಹೆತ್ತತಾಯಿ ನೀನೆಕವ್ವ
ಪಡೆದ ಮಗನು ನಾನೇಕಮ್ಮ || ಸಿದ್ಧಯ್ಯ||

ಅವ್ವ ಒಂದನೇ ತಾಯಿ ನೀನೇಕವ್ವ
ಎರಡನೇ ಮಗನು ನಾನುಕಮ್ಮ || ಸಿದ್ಧಯ್ಯ||

ಅವ್ವ ಹೆತ್ತ ತಾಯಿ ನೀನು
ಪಡೆದ ಮಗ ನಾನು
ಒಂದನೇ ತಾಯಿ ನೀನು
ಎರಡನೇ ಮಗ ನಾನು
ಅವ್ವ ತಾಯಿ ನೀನಾದೆ
ಮಗ ನಾನಾದೇ ಕೇಳು ಮುದ್ದಮ್ಮ
ನೀನು ತೊಟ್ಟುತೂಡು ಹೇಳುತೀನಿ
ಪಟ್ಟು ಪಾಡು ಹೇಳುತೀನಿ || ಸಿದ್ಧಯ್ಯ||

ಕೇಳವ್ವ ಕಂದ ಮುದ್ದಮ್ಮ
ತಾಯಿ ನೀನಾದೆ ಮಗನು ನಾನಾದೆ
ನೀನು ಇಂದಿಗೆ ಕೆಟ್ಟೋದ ಕೇಡು
ಈಗ ಬಾಳುವಂತ ಬಾಳಾಟ
ಎಲ್ಲಾನುಕೂಡ ನಿನ್ನ ಕಣ್ಣು ಮುಂದಗಾಡೆ
ಹೇಳುತೀನಿ ಮಗಳೇ

ನಾನು ಹೇಳುವಂತ ಮಾತ
ನೀ ಗ್ಯಾನವಾಗಿ ಕೇಳು ಕಂದ || ಸಿದ್ಧಯ್ಯ||

ಕೆಟ್ಟು ಕೇಡು ಪಟ್ಟ ಪಾಡು
ಎಲ್ಲಾನು ಸಾಂಗುವಾಗಿ ಹೇಳುತೀನಿ ಮಗಳೇ
ಗ್ಯಾನುವಾಗಿ ಕೇಳುತಾಯಿ
ಗ್ಯಾನುವಾಗಿ ಕೇಳು ಮುದ್ದಮ್ಮ ಅಂತೇಳಿ
ಆ ಜಗತ್ತು ಗುರು ಧರೆಗೇ ದೊಡ್ಡವರು
ಮುದ್ದಮ್ಮನ ಜೊತೆವಳಗೆ ಮಾತಾಡ್ತಾವರೆ
ಧರೆಗೆ ದೊಡ್ಡವರ ಮೊಕವ ಮಟಮಟನೇ
ನೋಡ್ತ ನಿಂತವಳೇ ಮುದ್ದಮ್ಮ
ಆಗಲೀಗ ಜಗತ್ತು ಗುರು
ಧರೆಗೆ ದೊಡ್ಡಯ್ಯ
ಮುದ್ದಮ್ಮನಿಗೆ ಏನು ಮಾತಾಡ್ತರೆ ಅಂದರೆ
ಮುದ್ದಮ್ಮ
ಈಗಲೀಗ ಹಿಂದಲು ಕಾಲದಲ್ಲಿ ಕಂದಾ
ಆರ ಜನ ಗಂಡ ಮಕ್ಕಳಿದ್ರು
ಆರುಜನ ಗಂಡು ಮಕ್ಕಳಿರುವಾಗ
ನಿಲಘಟ್ಟದಲ್ಲಿ ವಾಸಮಾಡ್ತಿದ್ದಿರೀ
ನಿಲಘಟ್ಟದಲ್ಲಿ ವಾಸಮಾಡುವಾಗ ಕಂದಾ
ನಿನಗೆ ಉಣ್ಣಕ್ಕೆ ಅನ್ನವಿರಲಿಲ್ಲ
ಊಟ್ಟಗಳ್ಳಕ್ಕೆ ಬಟ್ಟೆ ಇರಲಿಲ್ಲ
ಕುಡಿಯೋದಕೆ ನೀರು ಕೂಡ ಇರಲಿಲ್ಲ
ಒಂದು ಬಟ್ಟೆ ಅಂಗ ಬಟ್ಟೆಯಾಗುಬುಟ್ತು
ಅರಳಿ ಕಟ್ಟೆ ಜಗಲಿಮ್ಯಾಲೆ ಕಂದಾ
ನೀವು ಸತಿ ಪತಿ
ಗಂಡ ಹೆಡ್ತಿರಿಬ್ಬರು ಕೂತ್ಗಂಡು
ಆರುಜನ ಮಕ್ಕಳ ನೋಡಿ
ಬಹು ದುಃಖ ಪಡುತಿದ್ದಿರಿ || ಸಿದ್ಧಯ್ಯ ||

ಆರುಜನ ಗಂಡುಮಕ್ಕಳು
ಕಣ್ಣಿಂದ ನೋಡುಬುಟ್ಟು ತಾಯಿ
ನಿಲಘಟ್ಟದ ಅರಳಿಕಟ್ಟೆ ಜಗಲಿಮ್ಯಾಲೆ
ಕೂತ್ಗಂಡು
ಗಂಡನ ಮೊಕಾ ನೋಡಿ ಹೆಂಡ್ತಿ ದುಃಖ ಪಡ್ತಿದ್ದೇ
ಹೆಡ್ತಿ ಮೊಕಾ ನೋಡುಬುಟ್ಟು
ಪತಿ ಕೂಡ ದುಃಖ ಮಾಡ್ತಿದ್ದೆ
ಆರು ಜನ ಮಕ್ಕಳು ಕೊಟ್ಟು ಶಿವನು
ನನ್ನ ಮಕ್ಕಳಿಗೆ ಉಣ್ಣಾಕೆ ಅನ್ನ ಕೊಡ್ಲಿಲ್ಲ
ಉಟ್ಟಕಳಕೆ ಬಟ್ಟೆ ಕೊಡ್ಲಿಲ್ಲ ಅಂತೇಳಿ
ಬಹು ವಿಧವಾದ ದುಃಖ ಮಾಡ್ಕಂಡು
ನಿನ್ನ ಗಂಡ ಬಸವಯ್ಯ
ಉಟ್ಗೊಳ್ಳಕ್ಕೂ ಅಂಗೈಯ ಬಟ್ಟೆ ಇಲ್ಲದೆ
ಅಡಕೆ ಎಲೆ ಕಿತ್ಕಂಡು
ಮಾನ ಮರೆ ಮಾಡ್ಕಂಡು
ನೀನು ತಿಪ್ಪೇ ಮ್ಯಾಗಳ ಬಟ್ಟೇ
ಓಣಿ ಒಳಗಲ ಚಿಂದಿ ಬಟ್ಟೆ ಬೀಲಿ ಮ್ಯಾಗಳ ಬಟ್ಟೆ
ಉಟ್ಗಂಡು ಹಬ್ಬಸರಮನ ದಾರ ಸೂಜಿ
ಮಾಡ್ಕಂಡು
ಹಬ್ಬಸರಮನ ದಾರ ತಕ್ಕಂಡು
ಅಂಚಿ ಕಡ್ಡಿ ಸೂಜಿ ಮಾಡ್ಕಂಡು
ಮೂರು ಮೊಳ ತೂಡಪು ವಲ್ಕಂಡು ಮುದ್ದಮ್ಮ
ನನ್ನ ನಡಿಗೆ ಸುತ್ಕಳವ್ವ ಅಂದ್ರೆ
ಎದೆ ಕಾಣ್ತದೆ
ಎದೆ ಮರೆಮಾಡ್ಕತೀನಿ ಅಂದ್ರೆ ಮಾನ ಕಾಣ್ತದ ಅಂತೇಳಿ
ನಡಿನಿಂದ ಕೆಳೀಕೆ
ಎದೆಯಿಂದ ಮೇಲಕ್ಕೆ
ದುಂಡುಡುಗೆ ಉಟ್ಟಗಂಡು
ನಿನ್ನ ಗಂಡ ಬಾಚಿ ಬಸವಯ್ಯ
ಶಿವಭಕ್ತರ ಮನೆಗೋಗಿ ಧನಕಾಯ್ತಿದ್ದ
ನೀನು ಶಿವಭಕ್ತರ ಮನೆಗೋಗುಬಿಟ್ಟು
ರಾಗಿ ಹಸಿಟ್ಟು ತಂದ್ಬುಟ್ಟು ಉಂಡ್ತಿದ್ದೆ
ಆಡ ಶಿವ ಭಕ್ರ ಮನೆ ಊಟ
ಈಸ್ಕಂಡು ಬಂದು ನಿಲಘಟ್ಟದ
ಕಲ್ಲ ಕಟ್ಟೇ ಜಗಲಿಮ್ಯಾಲೆ
ಆರು ಮಂದಿ ಮಕ್ಕಳಿಗೆ ಊಟ ಕೊಟ್ಕಂಡು
ವಾಸಮಾಡ್ತಿದ್ದೆ ಮುದ್ದಮ್ಮ
ಆಗ ನಿಮಗೆ ಅಪಾರ ಬಡಸ್ತಾನವಿತ್ತು
ಬಡಸ್ತಾನ ಇರುವಾಗ ಕಂದಾ
ಇದೇ ಬಿರುದು ಇದೇ ಕಂಡಾಯ
ಇದೇ ಮುರಳಿನ ಪಾವಾಡ ಮೆಟ್ಟಗಂಡು
ನಿಮ್ಮ ಅರಳಿಕಟ್ಟೆಗೆ ನಾನು ದಾನಕ್ಕೆ
ಬಂದಿದ್ದಿ ಕನಮ್ಮ
ಬಡಸ್ತಾನ ಇದ್ದಾಗ
ಬಂದಂತ ಗುರು ನಾನು || ಸಿದ್ಧಯ್ಯ ||

ಬಾಳ ಬಡಸ್ತಾನದಲ್ಲಿ ಬಾಳಿ ಬದುಕುತ್ತಿದ್ದಾಗ
ಬಂದಿದ್ದಂತಹ ಗುರುಗಳೂ ನಾವೇ ಕನಮ್ಮ
ಅಷ್ಟು ಬಸ್ತಾನದಲ್ಲಿ ಬಾಳಿ ಬದುಕುವಾಗ
ನೀವು ಸತಿ ಪತಿ ಗಂಡ ಹೆಡ್ತಿರು
ಓಡುಬಂದು ನನ್ನ ಪಾದ ಇಡ್ಕಂಡು
ವಿಧವಿಧವಾದ ದುಃಖ ಮಾಡಿದ್ರಿ
ಗುರುದೇವ
ಈ ಅರಳೀಕಟ್ಟೆ ಜಗಲಿಗೆ
ಯಾಗಕ್ಕೆ ಬಂದಿಯಪ್ಪ
ನಮಗೆ ಬಡತಾನ ಬಂದು ಬಾರಿ
ಹನ್ನೆರಡು ವರ್ಷ ತುಂಬೋಯ್ತುಲ ಬುದ್ದಿ
ಈ ಅರಳೀ ಕಟ್ಟೆ ಗಲಿಗೆ ಬಂದು
ಭಿಕ್ಷ ಕೇಳ್ತಿರಿ ನಾನೇನು ಭಿಕ್ಷ ಕೊಡನಿ
ಏನು ಧರ್ಮ ಕೊಡನೀ
ಈಗಲೀಗ ಉಣ್ಣಕ್ಕ ಅನ್ನವಿಲ್ಲ
ಕುಡಿಯಾದಕ್ಕೆ ನೀರಲ್ಲ
ಮನಿಕಳೂದಕ್ಕೆ ಮನೆಯಿಲ್ಲ
ಉಟ್ಟಕ್ಕತ್ತೀನಿ ಅಂದ್ರೆ ಬಟ್ಟೆಯಿಲ್ಲ
ಈ ಬಡಸ್ತಾನ ಬಂದು ಹನ್ನೆರಡು
ವರ್ಷ ತುಂಬೋಯ್ತು
ಹನ್ನೆರಡು ವರ್ಷದಿಂದ ಹುಲ್ಲುದೇವ್ರು
ಕಲ್ಲು ದೇವುರು
ಕಂಡ ಕಂಡ ಕಲ್ಲು ದೇವರುಗಳೂಗೆಲ್ಲ
ಕೈಯೆತ್ತಿ ಮುಗಿತೀನಿ
ಯಾವ ದೇವರ ಬೇಡ್ಕಂಡ್ರು
ಬಡಸ್ತಾನ ಬಯಲು ಮಾಡುಬುಟ್ಟು
ಭಾಗ್ಯ ಕೊಂಡುವಂತ ದೇವುರು ಒಬ್ಬರು ಬರ್ಲಿಲ್ಲ
ಇವತ್ತಾರು ಬಂದಿದ್ದರೀ ಸ್ವಾಮಿ
ಈ ಬಡಸ್ತಾನ ತಡಿನಾರೆ ಗುರುದೇವ
ನಮಗೆ ಭಾಗ್ಯ ಕೊಟ್ಟು ಕಾಪಾಡಪ್ಪ

ನೀವು ಸತಿ ಪತಿ ಬಂದಿರೀ ಕಂದಾ
ನನ್ನ ಪಾದ ಹಿಡಿದಿರಿಯಲ್ಲ || ಸಿದ್ಧಯ್ಯ||

ಮುದ್ದಮ್ಮ
ನೀವು ಸತಿ ಪತಿ ಬಂದೂ
ಅವತ್ತಿನ ದಿವಸ ನನ್ನ ಪಾದ ಇಡ್ಕಂಡಿದ್ರಿ
ನಿಮ್ಮ ನೋಡುಬುಟ್ಟು
ನಿಮ್ಮ ಭವಾ ನೋಡುಬುಟ್ಟು
ಬಂಧಾನ ತಿಳಿದುಬುಟ್ಟು
ಹೊಟ್ಟೆ ಉರಿದು ಮನಾನೊಂದುಬುಟ್ಟು
ಅವತ್ತು ನಿಮಗೇ ಒಂದು ಮಾತೇಳಿದ್ದಿ ಕಂದಾ
ಇವತ್ತಿಗೆ ನಿಮಗೆ ಬಡಾಸ್ತಾನ
ಲಯ ಮಾಡುಬುಡ್ತಿನೀಕನ್ರಮ್ಮ
ಭಾಗ್ಯ ಕೊಡ್ತಿನೀ
ಈ ನಿಲಘಟ್ಟದಲ್ಲಿ ಇರುವಾಗ
ಆರುಜನ ಗಂಡುಮಕ್ಕಳು ನಿನ್ನ
ಜಲ್ಮದಲ್ಲಿ ಜನಿಸಿರುವಾಗ ನಿಮಗೆ ಬಾಳ ಬಡ್ತಾನ
ಬಡಸ್ತಾನ ಹೋಗಿ
ಸಿರಿಸ್ತಾನ ಬರಬೇಕಾದರೇ
ನಿಮ್ಮ ಬಾಳಾಟ ಹೆಚ್ಚೊಕ್ಕಲಾಗಬೇಕಾದರೆ
ಈ ನಿಲಘಟ್ಟ ಬಿಟ್ಟು ಬಿಡಿ
ಮಾರುವಳ್ಳಿ ಮನಸ್ತಾನಕ್ಕೆ ಹೋಗಿ ಸೇರ್ಕಳ್ಳಿ
ಆ ಗ್ರಾಮಕ್ಕೋಗಿ ಸೇರ್ದ ಮ್ಯಾಲೇ
ನನ್ನ ವರದಲ್ಲಿ ಹುಟ್ತನೇ ಏಳನೇ ಮಗ
ಎಳೇ ಕೆಂಪಣ್ಣಾ
ಆ ಕೆಂಪಾಚಾರಿ ಮಗ ಹುಟ್ಟದ
ಏಳು ದಿವಸಕ್ಕೆ

ನಿಮಗೆ ಹರಬೀ ಹಣ ಮಾಡುತೀನಿ
ಮೊರದ ಬಂಗಾರ ಮಾಡುತೀನಿ || ಸಿದ್ಧಯ್ಯ||

ನಿಮಗೆ ಹರಬೀ ಹಣವ ಕಂದಾ
ಮಾಡ್ತಿನೀ ನನ್ನ ಕಂದಾ
ಮೊರದ ಬಂಗಾರದ ಮಾಡುತ್ತಿನಿ ನನ್ನ ಮಗುಳೇ
ಹೋಗ್ರವ್ವ ಅನ್ನುತೇಳಿ
ನಾ ಹೇಳಿದ್ದಿ ನನ್ನ ಕಂದಾ
ನಾ ಆಡಿದಮಾತಾ ತಾಯಿ ತಿಳಿಕ್ಕಂಡೆ ಮುದ್ದಮ್ಮ
ನೀವು ನಿಲಘಟ್ಟದ ಬುಟ್ಟರೀ ಮಗಳೇ
ಮಾರುವಳ್ಳಿಗೆ ಬಂದ್ರಿ ಕಂದಾ || ಸಿದ್ಧಯ್ಯ||

ಮುದ್ದಮ್ಮ
ನಾನಾಡಿದ ಮಾತು ಕೇಳಿಬುಟ್ಟು ನೀವು
ಸತಿಪತಿ ಗಂಡ ಹೆಡ್ತೀರು
ಆರಜನ ಗಂಡಮಕ್ಕಳ ಕಟ್ಟಗಂಡು
ನೀಲಘಟ್ಟು ಬುಟ್ಟು ಬುಟ್ಟು
ಮಾರುವಳ್ಳಿ ಮನಸ್ತಾನಕ್ಕೆ ಬಂದು ಸೇರಕ್ಕಂಡ್ರೀ
ಮುದ್ದಮ್ಮ
ಈ ಮಾರುವಳ್ಳಿ ಮನಸ್ತಾನಕ್ಕೆ ಬಂದು
ಸೇರ್ದ ಮ್ಯಾಲೆ
ನನ್ನ ವರದಲ್ಲಿ ಹುಟ್ಟದ ಕಂದಾ
ಏಳನೇ ಮಗನು ಎಳೆಯ ಕೆಂಪಣ್ಣ ತಾಯಿ
ಆ ಕೆಂಪಚಾರಿ ಮಗ ನಿಮ್ಮ ಗರ್ಭದಲ್ಲಿ
ಹುಟ್ಟದ ಮ್ಯಾಲೆ
ಆ ಕೆಂಪಚಾರಿ ಮಗನು ನಿಮ್ಮ ಜಲ್ಮದಲ್ಲಿ
ಜನಿಸ್ತಮ್ಯಾಲೆ
ಆ ಮಗ ಹುಟ್ಟಿದ ಏಳೇ ದಿವಸಕ್ಕೆ

ನಿಮಗೆ ಹರಬೀ ಹಣ ಆಗಿತ್ತವ್ವ
ಮೊರ್ದ ಬಂಗಾರವಾಗಿತ್ತಮ್ಮ || ಸಿದ್ಧಯ್ಯ||

ನಿಮಗೆ ಹರಬಿ ಹಣ ಮಾಡಿ
ಮೊರದ ಬಂಗಾರ ಮಾಡೀ
ಕೇಳವ್ವ ನನ್ನ ಕಂದಾ
ನಿಮಗೆ ಮೊಣ್ಣೀನಿಟ್ಟಿಗೆ ಕಂದಾ
ಮಾಯ ಮಾಡುಬುಟ್ಟು
ಚಿನ್ನಾದ ಇಟ್ಟಗೇ ಕೊಟ್ಟನಲ್ಲ ಮುದ್ದಮ್ಮ
ನಿಮ್ಮಗೆ ಭಾಗ್ಯ ಕೊಟ್ಟವರು ನಾವು
ಜಗತ್ತು ಗುರು ಎಂದಾರಲ್ಲ || ಸಿದ್ಧಯ್ಯ||

ಮುದ್ದಮ್ಮ
ಮೊಣ್ಣಿನಿಟ್ಟಗೇ ಮಾಯಮಾಡಿ
ಚಿನ್ನದಿಟ್ಟಗೆ ಕೊಟ್ಟು
ನಿನಗೇ ಲಕ್ಷ ಭಾಗ್ಯಕೊಟ್ಟಂತಹ
ಜಗತ್ತು ಗುರುಗಳು ನಾವೇ ತಾಯಿ
ಮುದ್ದಮ್ಮ
ಹಿಂದೆ ಪಟ್ಟ ಬಡಸ್ತಾನ ಹೇಳದೀ
ಈಗ ಬಾಳ್ತಕ್ಕಂತಹ
ಸಿರಿಸ್ತಾನನು ಕೊಂಡಾಡ್ತಿನಿ ಕೇಳವ್ವ ಮುದ್ದಮ್ಮ

ಅವ್ವ ಆಡುವಂತ ಮಾತ ನೀ
ಗ್ಯಾನವಾಗಿ ಕೇಳು ಮಗಳೇ || ಸಿದ್ಧಯ್ಯ||

ನಾನು ಹೇಳುವಂತ ಮಾತೂs
ಗ್ಯಾನವಾಗಿ ಕಂದಾ
ಕೇಳು ನನ್ನ ಮಗುಳೇ
ಹಾಗನುತೇಳಿ ನನ್ನ ಗುರುವು
ಅವರು ಮುದ್ದಮ್ಮನ ಮೊಕವ ನೋಡಿ
ಏನು ಮಾತುನ್ನಾಡುತಾರೆ || ಸಿದ್ಧಯ್ಯ||