ಧರೆಗೆ ದೊಡ್ಡವರ
ಲಿಂಗದ ಬೆಳಕಿಗೆ
ಜಂಗನ ಶಬ್ದಕ್ಕೆ
ತಂಬೂರಿ ಲಾದಕ್ಕೆ
ಕಂಡಾಯದ ಕೆಳಗೆ
ಧರೆಗೆ ದೊಡ್ಡವರ ಮೈಮೆ ಮೈತ್ಗಾರಕ್ಕಾಗಿ
ನೋಡಿ ಕರಿವಂತ ಹಸ
ಜಲ್ಲನೆ ಬೆದ್ರುಬುಡ್ತು
ಆರ್ಸಂಡೆ ಒದ್ದು ಬಿಡ್ತು
ಅಂಡೆ ಒಡದೋಗುಬುಟ್ತು
ಮುದ್ದಮ್ಮನ ಹಾಲೆಲ್ಲ ಚೆಲ್ಲೋಯ್ತು
ಮಂಡಿಕೂಡ ಕಿತ್ತೋಯ್ತು
ಮೊಳಸಂದು ತರಚೋಯ್ತು
ಕೈಲಿರ್ತಕ್ಕಂತ ಚಿನ್ನದ ಕಡ್ಗ ಎಲ್ಲ ತಗ್ಗೋಯ್ತು

ಮುಂಗೈಲಿ ಇರುವಂತ
ಮುತ್ತೈದೆ ಬಳೆಗಳೆಲ್ಲ ಒಟ್ಟಿಗೆ ವಡ್ಡೋದೋ
ಬಲಗಡೆ ಬಿದ್ದು ಎಡಗಡೆ ಎದ್ದೂ
ಕಿತ್ತೋಗಿರುವಂತ ಮಂಡಿ ಮೊಳಸಂದು
ನೋಡ್ಕಂಡು ಮುದ್ದಮ್ಮ
ಮಡದೋಗಿರುವ ಮುತ್ತೈದೆ ಬಳೆ ನೋಡ್ಕಂಡು ತಾಯಿ
ಅವಳಿಗೆ ಬಂದಿತು ಬಲು ಕೋಪ
ಬಂದೋಯ್ತು ಬಲು ಸಿಟ್ಟು || ಸಿದ್ಧಯ್ಯ||

ಗುರುವೇ ಬಂದಿತು ಬಲಕ್ವಾಪ
ಬಂದೋಯ್ತು ಬಲು ಸಿಟ್ಟು
ಬಂದೋಯ್ತು ಬಲು ಕ್ಯಾಣಾ
ಬಾಚಿ ಬಸವಯ್ಯನ ಮಡದಿ
ತಾಯಿ ಮುದ್ದಮ್ಮ
ಅಮ್ಮ ಅನ್ನದ ಮದಕ್ಕೆ
ಅವಳು ಉಣ್ಣುವ ಊಟಕ್ಕೆ
ಬೆಳ್ಳಿ ಬಂಗಾರಕ್ಕೆ ಹಣ ಆಸ್ತಿಗೆ
ಅವಳು ಬಾಳುವ ಸಿರಿತನಕ್ಕೆ
ತಾಯಿ ಮುದ್ದಮ್ಮ
ನಾ ಬಾಳುತೀನಿಯೆಂತ
ಬದುಕುತೀನಿ ಯಂತ
ತಾಯಿ ಮುದ್ದಮ್ಮ
ನಾಳೆ ಬರುವ ಕಷ್ಟ
ನಾಳೆ ಬರುವ ಕೇಡು
ನಾಳೆ ಬರುವಂತ
ಬಂಧಾನ ತಾಯಿ
ತಿಳಿಯದೆ ಮುದ್ದಮ್ಮ
ಅವಳು ಬಿದ್ದ ಕ್ವಾಪಕ್ಕೆ ದೇವ
ಬಾಯಿಗ್ ಬಂದಂಗೆ ಬೋಯುತಾಳೆ || ಸಿದ್ಧಯ್ಯ||

ಸಿರಿ ಸಂಪತ್ತಿನ ಬಾಳಾಟ ಬದಕಾಟಕ್ಕಾಗಿ ತಾಯಿ
ನಾಳೆ ಬರುವ ಕಷ್ಟ
ನಾಳೆ ಬರುವಂತ ಭವ ಬಂಧಾನಗಳು
ತಿಳಿಯಲರದೆ ಮುದ್ದಮ್ಮ
ಭೂಮಿಗೆ ಬಿದ್ಬುಟ್ಟಂತ ಕ್ವಾಪಕ್ಕೆ
ಜಗತ್ತು ಗುರುಗಳ ಮೊಖ ಕಣ್ಣಿಂದ ನೋಡುಬುಟ್ಟು
ಈಗಲೀಗ ಹಟ್ಟಿ ಹಜಾರಕ್ಕೆ ಬಂದು
ಹಜಾರದಲ್ಲಿ ದುರುದುರನೇ
ಧರೆಗೆ ದೊಡ್ಡವ್ರ ನೋಡ್ತಾ ನಿಂತ್ಕಂಡಳು
ಎಪ್ಪತ್ತು ಮಾರುದ್ದ ಜಡೆಗಳ
ಸುತ್ತು ಮುತ್ತು ಬುಟ್ಟಗಂಡು
ಧರೆಗೇ ದೊಡ್ಡಯ್ಯ
ಉತ್ತರದೇಶದ ಕಂಡಾಯ ಹೆಗಲ ಮೇಲೆ ಒತ್ತಕೊಂಡು
ಬಾರ್ಸುವಂತ ತಂಬೂರಿ ಎದೆ ಮೇಲೆ ನ್ಯಾತಾಕಂಡು
ಅವರು ತೊಟ್ಟಿ ಕಲ್ಲಮ್ಯಾಲೆ ನಡಟ್ಟಿಲಿ
ತಲಬೊಕ್ಕಂಡು ನಿಂತ್ತಿದ್ರಂತೆ
ಬಂದು ಮದ್ದನ್ನು ನಡಹಟ್ಟಿ ಒಳಗೆ
ಧರೆಗೇ ದೊಡ್ಡವರ ಮೊಖ ದುರುದುರನೇ
ನೋಡುಬುಟ್ಟು
ಮಂಟೇದ ಲಿಂಗಯ್ಯನ ಮೊಖ
ಮಟಮಟನೇ ನೋಡಿ
ಲೋಕಕ್ಕೆ ದೊಡ್ಡವರ ಮೊಕವ
ಅಂತು ಅಂತು ನೋಡು ಬುಟ್ಟು ಮುದ್ದಮ್ಮ

ಅವಳಿಗೇ ಬಂದೋಯ್ತು ಬಲು ಕ್ವಾಪ
ಬಂದೋಯ್ತು ಬಲು ಚಿಟ್ಟು
ಬಂದೋಯ್ತು ಬಲು ಕ್ಯಾಣ
ಅವಳು ಬಿದ್ದೋದ ಕ್ವಾಪಕ್ಕೆ
ಬಾಯಿಗೆ ಬಂದಂಗೆ ಬಯ್ಯುತಾಳೆ || ಸಿದ್ಧಯ್ಯ||

ಗುರುವೆ ಬಿದ್ದುಬಿಟ್ಟೋದ
ಕ್ವಾಪಕ್ಕೆ ನನ್ನ ತಾಯಿ
ಏನಂತ ನನ್ನ ತಾಯಿ
ಬೊಯ್ತಳೇ ಎಂದರೇ
ಲೋ ಎತ್ತಲಿಂದ ಬಂದೊ ನೀನು
ಹುಚ್ಚು ಕಾಡ ಪರಾದೇಶಿ || ಸಿದ್ಧಯ್ಯ||

ಅಯ್ಯಾ ಎತ್ಲಿಂದ ಬಂದೆಯೊ ನೀನು
ಹುಚ್ಚು ಕಾಡ ಪರದೇಶಿ
ಭಿಕ್ಷವ ಮಾಡವನೆ
ಲೋ ತಿರ್ಕಂಡು ತಿನ್ನವನೇ
ಬೂದುಬಡಕ ಕೇಳೊ
ಈ ಭೀಕ್ಷೆ ಮಾಡೋ ಮುಂಡೆ ಮಕ್ಕಳಗೇ
ಹೊತ್ತು ಗೊತ್ತು ಒಂದೂ ಇಲ್ವ || ಸಿದ್ಧಯ್ಯ||

ಈ ತಿರ್ಕೊತ್ತಿನ್ನು ಪರದೇಶಿಗೆ
ಟೈಮು ಗಳಿಗೆ ಏನು ಇಲ್ಲವ || ಸಿದ್ಧಯ್ಯ||

ಈ ತಿರ್ಕುತ್ತಿನ್ನು ಮುಂಡೆ ಮಕ್ಕಳಿಗೇ
ಯಾರು ಬುದ್ದಿಕಲ್ಸಲಿಲ್ವ || ಸಿದ್ಧಯ್ಯ||

ಈ ಭಿಕ್ಷೆ ಮಾಡುವ ಸನ್ಯಾಸಿಗೆ
ಇನ್ನು ಬುದ್ಧಿ ಬರೂಲಿಲ್ಲವ || ಸಿದ್ಧಯ್ಯ||

ಛೇ ಮುಂಡೆ ಮಕ್ಕಳಾ
ಈ ಭಿಕ್ಷ ಮಾಡುವಂತ ಮುಂಡೆ ಮಕ್ಕಳಿಗೇ
ಯಾರು ಬುದ್ಧಿ ಕಲ್ಸಲಿಲ್ವ
ಈ ತಿರ್ಕಂಡು ತಿನ್ನುವಂತ ಪರದೇಶಿಗಳಿಗೆ
ಇನ್ನು ಬುದ್ದಿ ಬರ್ಲಿಲ್ವ
ಈ ಭಿಕ್ಷ ಮಾಡವಂತ ಮುಂಡೆ ಮಕ್ಕಳಿಗೆ
ಎಷ್ಟೊತ್ತು ಯಾವ ಗಳಗೆ ಒಳಗೆ
ದಾನಕ್ಕೆ ಹೋಗಬೇಕು
ಯಾವ ಟೈಮ್‌ನಲ್ಲಿ ಭಿಕ್ಷಕ್ಕೆ ಹೋಗಬೇಕು
ಯಾವ ಟೈಮ್‌ನಲ್ಲಿ ನಾ ತಿರ್ಕಳ್ಳಕ್ಕೆ
ಹೋಗಬೇಕು ಎನ್ನುವುದು
ಈ ಪರದೇಶಿ ಜಂಗಮರಿಗೆ
ಯಾರು ಹೇಳ್ಳಿಲ್ಲ
ಇವತ್ತಿನ ದಿವಸಾ
ಎಷ್ಟೊತ್ತು ಯಾವ ಗಳಿಗೆ ಒಳಗೆ
ಭಿಗಸ ಭಿಗಸ ಅಂತೇಳಿ
ಈ ಭಿಕ್ಷಕರು ನಮ್ಮ ಮನೆಗೆಯೇ ಬರ್ತಾರಲ್ಲ
ಈ ಭೀಕ್ಷ ಮಾಡುವಂತ ಮುಂಡೇ
ಮಕ್ಕಳಿಗೆ ಎದ್ದ ಗಳಿಗೇಲೆ
ಇವರು ಮೊಖ ನೋಡಬೇಕಲ್ಲ
ಈ ಪರದೇಶಿಗಳಿಗೆ
ಎಷ್ಟು ಸಾರಿ ಭಿಕ್ಷ ಕೊಟ್ಟು ಕಳಗಬೇಕು
ಛೇ ಮುಂಡೆ ಮಗನೆ
ಬರುವಾಗಲೆಲ್ಲ ಭಿಕ್ಷ ಕೊಡ್ಲೆ ಬಹುದಾಗಿತ್ತು
ನೀನು ಕೇಳದಾಗಲೆಲ್ಲ ನಾವು ಧರ್ಮ
ಮಾಡ್ಲೆಬಹುದಾಗಿತ್ತು
ಅಷ್ಟೋತ್ಲು ಇಷ್ಟೋತ್ಲು ಎರಡೊತ್ತನ್ನು
ಬಿಟ್‌ಬಿಟ್ಟು

ನಾನು ಹಾಲು ಕರಿವ ಹೊತ್ತಗೆ
ನನ್ನಟ್ಟಿಗೆ ನೀ ಬರಬಹುದಾ || ಸಿದ್ಧಯ್ಯ||

ನಾನು ಹಾಲು ಕರೀವಂತ
ಹೊತ್ತಗೆ ಪರದೇಶಿ
ನನ್ನ ಮನೆಗೆ ಬರಬಹುದಾ
ನಾನು ಹಾಲು ಕರಿವ ಟೈಮ್‌ಗೆ
ನನ್ನಟ್ಟಿಗೇ ಬರಬಹುದಾ
ನನ್ನ ತೊಟ್ಟಿಕಲ್ಲನ ಮ್ಯಾಲೆ
ನೀ ಬಂದು ನಿಂತ್ಕಂಡು
ನೀ ಭಿಕ್ಷ ಸಾರಲು ಬಹುದಾ
ನಿನ್ನ ತಂಬೂರಿನಾದಕ್ಕೆ
ಗಗ್ಗರದ ಶಬ್ದಕ್ಕೆ
ನಿನ್ನ ಕಂಡಾಯಾದ ಕಳೆಗೆ
ಲಿಂಗದ ಬೆಳಕಿಗೆ
ನಿನ್ನ ಗಗ್ಗರದ ಶಬ್ದಕ್ಕೆ
ನನ್ನ ಹಸುವೇ ಬೆದರೋಯ್ತು
ಆರ್ಸಂಡ ಒದ್ದು ಬಿಡ್ತು
ಅಯ್ಯೋ ಹಾಲುವೆ ಚೆಲ್ಲೋಯ್ತು
ಅಂಡವೇ ವಡದ್ಯೋಯ್ತು
ನಾನುವೇ ಮಂಟೆಗಂಡಿ
ನನ್ನ ಕಡ್ಗವೇ ತಗ್ಗೋಯ್ತು
ನನ್ನ ಬಳೆಲ್ಲ ವಡದೋದೊ
ನನ್ನ ಮಂಡಿಯೇ ಕಿತ್ತೋಯ್ತು
ಮೊಳ ಸಂದುವೇ ಪರಚ್ಯೋಯ್ತು
ನನ್ನ ಹಾಲು ಕುಡಿವ ಮಗನಿಗೆ
ಹಾಲು ಇಲ್ಲದಂಗೆ ಆಯ್ತು || ಸಿದ್ಧಯ್ಯ||

ಏನು ಜಂಗಮ
ನನ್ನ ಮನೆಗೆ ಬಂದು ಧರ್ಮ
ದಾನ ಭಿಕ್ಷ ಸಾರು ಬುಟ್ಟೇ
ಕ್ವಾರಣ್ಯ ಕೇಳುಬುಟ್ಟೆ
ಇದುವಲ್ಲದೆ ತಂಬೂರಿ ಬಾರ್ಸು ಬುಟ್ಟೇ
ಡಿಕ್ಕಿ ಬಡದ್ಬುಟ್ಟೆ
ಹಸ ಕೂಡ ಬೆದ್ರುಬಿಟ್ಟು
ಆರ್ಸಂಡೆ ಒದ್ದಬಿಟ್ಟು
ಹಾಲೆಲ್ಲ ಭೂಮಿ ಪಾಲಾಗಬಿಡ್ತು
ನನ್ನ ಏಳು ವರ್ಷದ ಮಗ
ಎಳೆ ಕೆಂಪಣ್ಣನಿಗೆ
ಒಂದು ಟೈಮ್ ಹಾಲಿಲ್ಲದಂತೆ
ನನ್ನ ಮೊಗ ಏಳು ವರ್ಷದ ಕಾಲದಿಂದ
ನನ್ನ ಮನೇಲಿ ಬೆಳೆದಿರಲಿಲ್ಲ
ಇವತ್ತು ನನ್ನ ಮನೆಗೆ ಬಂದೂ ನೀನು
ಭಿಕ್ಷ ಕೇಳ್ದ ಕಾರಣ
ನನ್ನ ಮಗನಿಗೇ ಹಾಲೆ ಮೊದಲಿಲ್ಲ
ನನ್ನ ಹಾಲು ಕುಡಿಯೊ ಮಗನಿಗೆ
ಹಾಲಿಲ್ಲದಂಗೆ ಮಾಡುಬುಟ್ಟಿಯಲ್ಲೋ ಮುಂಡೆ ಮಗನೆ
ಕರದಂತಹ ಹಾಲು ಭೂಮಿ ಪಾಲಾಯ್ತಲ್ಲೊ ಜಂಗುಮಾ
ಛೇ ಮುಂಡೇ ಮಗನೇ
ನಾ ಎಷ್ಟು ಬೊಯ್ತಿದ್ರು
ಎಷ್ಟು ಅಡ್ತಿದ್ರುವೇ
ನನ್ನನೇ ನೋಡ್ತ ತೊಟ್ಟಿ ಕಲ್ಲಿನಮ್ಯಾಲೆ
ನಿಂತ್ತಿದ್ದೆಯಲ್ಲ ಪರದೇಶಿ
ನನ್ನ ಹಾಲು ಚೊಲ್ಲೋದಂಗೆ
ನಿನ್ನ ವಂಶವೇ ಚಲ್ಲೋಗ್ಲಿಯಪ್ಪ ಹೋಗುs || ಸಿದ್ಧಯ್ಯ||

ನನ್ನ ಹಾಲು ಚೆಲ್ಲೋದಂಗೆ
ನಿನ್ನ ವಂಶವೇ ಚೆಲ್ಲೋಗಲೀ
ನನ್ನ ಮಂಡಿ ಕಿತ್ತೋದಂಗೆ
ನಿನ್ನಟ್ಟಿಯೇ ಕಿತ್ತೋಗಲಿ
ನನ್ನ ಮೊಳಸಂದು ಪರಚೋದಂಗೇ
ನಿನ್ನ ಕೊಟ್ಟಗೆಯೇ ಬರುದಾಗಲೀ
ನನ್ನ ಬಳೆ ವಡದೋದಂಗೆ
ನಿನ್ನ ಬಳಗವೇ ವಡೋದಲಿ
ಅಯ್ಯಾ ನಾನು ಮಂಟೋದಂಗೆ
ನಿನ್ನ ಮನೆಯೇ ಮಂಟೋಗ್ಲಿಯಪ್ಪ || ಸಿದ್ಧಯ್ಯ||

ನಾನು ಮಂಟ್ಗಂಡಂಗೆ ಪರದೇಶೀ
ನಿನ್ನ ಮನೆ ಮಂಡ್ಗಳ್ಳಲ್ಲಿ ಕಣೊ ಜಂಗುಮ
ನನ್ನ ಮನೆ ಬುಟ್ಟು ಕಡದೋಗು
ನನ್ನ ಮನೆಬುಟ್ಟು ಆಚೆಗೆ ಹೋಗಲು
ಪರದೇಶಿ ಅಂತೇಳಿ ಮುದ್ದಮ್ಮ
ಗುಡಗುಡನೇ ಓಡಿಬಂದೂ
ಜಗತ್ತು ಗುರು ಧರೆಗೆ ದೊಡ್ಡವರ
ಮುಂಭಾಗದಲ್ಲಿ ಬಂದು ನಿಂತ್ಗಂಡು
ಏ ಜಂಗುಮಾ
ನನ್ನ ಮನೆ ಬಿಟ್ಟು ಆಚೆಗೆ ಹೋಗು
ನನ್ನ ಮನೆ ಬಿಟ್ಟು ಕಡೆದೋಗೊ
ನನ್ನ ಮನೆ ಬಿಟ್ಟು ಆಚೆಗೆ
ತೊಲಗೂ ಮುಂಡೆ ಮಗನೇ
ಅಂತೇಳಿ ಮುದ್ದಮ್ಮ
ಧರೆಗೆ ದೊಡ್ಡವರ ಎಕ್ಕತ್ತಿನ ಮ್ಯಾಲೆ ತಾಯೋ
ಕೈಹಾಕಿ ಮುದ್ದಮ್ಮ

ಅವರು ಹಟ್ಟಿಂದ ಹೋರಟೋಗಂತ
ನೂಕಿ ನೂಕಿ ತಳ್ಳುತಾಳೆ || ಸಿದ್ಧಯ್ಯ||

ನನ್ನ ಮನೆಯನ್ನು ಬಿಟ್ಟುಬಿಟ್ಟು
ಹೊರಟೋಗು ಜಂಗುಮ
ಹೊರಟೋಗು ಪರದೇಶಿ
ಹಾಗಂದು ನನ್ನ ತಾಯಿ
ನನ್ನ ಧರಗೆ ದೊಡ್ಡವರ
ಜಾಡ್ಸಿ ಜಾಡ್ಸಿ ನೂಕುತಾಳೆ || ಸಿದ್ಧಯ್ಯ||

ಅವಳು ಎಷ್ಟು ತಳ್ಳಿದ್ರು
ಎಷ್ಟೂ ನೂಕುದ್ರು
ಎಷ್ಟೂ ಜಾಡಿಸೀ ತಳ್ಳುದ್ರು ನನ್ನಪ್ಪ
ಅವರು ಮಂದಲ ಕಾಲ
ಹಿಂದಕ್ಕೆ ಮಡ್ಗಲಿಲ್ಲ
ಹಿಂದ್ಲ ಪಾದವ ತಗದು
ಮುಂದಕ್ಕೆ ಮಡಗಲಿಲ್ಲ
ಅವರ ತೊಟ್ಟೀ ಕಲ್ಲಿನ ಮ್ಯಾಲೆ
ಧರೆಗೆ ದೊಡ್ಡಯ್ಯ
ಅವರು ಸುಮ್ಮಾನೇ ನಿಂತವರೆ
ಅಪ್ಪಾಜಿ ನನ್ನ ಗುರುವು
ಅವರು ಮುದ್ದಮ್ನ ಮೊಕ ನೋಡಿ
ಉಸು ನೆಗುವ ನೆಗುದುರಲ್ಲಾ || ಸಿದ್ಧಯ್ಯ||

ನೋಡಿ ಮುದ್ದಮ್ಮನವರು
ಜಗತ್ತು ಗುರು ಧರೆಗೆ ದೊಡ್ಡವರ
ಎಕ್ಕತ್ತಿನ ಮ್ಯಾಲೆ ಕೈಹಾಕಿ
ನೂಕಿನೂಕಿ ತಳ್ತಾವರೆ
ಜಾಡಿಸೀ ನೂಕುತಾರೇ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಹಿಂದ್ಲ ಪಾದವ ತಗದು ಮುಂದಕ್ಕೇ ಮಡ್ಗಲಿಲ್ಲ
ಅವರ ಹಟ್ಟಿ ತೊಟ್ಟಿ ಕಲ್ಲಿನ ಮ್ಯಾಲೆ
ಉಸೀ ನೆಗಾ ನೆಗಿತಾ ನಿಂತ್ಕಂಡ್ರಂತೇ
ಆಗ ಮುದ್ದಮ್ಮ ನಗೀವಂತವರ ನೋಡ್ಕಂಡು ಮಾತಾಡ್ತವರೇ
ಛೇ ಮುಂಡೆ ಮಗನೇ
ಈಗಲೀಗ ನಾನು ಎಷ್ಟು ತಳ್ಳುದ್ರು
ಎಷ್ಟು ನೂಕುದ್ರು
ತರ್ಬುಬುಟ್ಟು ಮರ್ದಾಗೆ ನಿಂತಿದ್ದಿಯಲ್ಲೋ
ನೀ ಯಾವೂರು ಪರದೇಶಿ
ನನ್ನ ಮನೆಬಿಟ್ಟು ಆಚೆಗೆ ಹೋಗು
ನಿನ್ನ ಮನೆ ಮಂಟಗೊಳ್ಳಲಿ ಅಂತೇಳಿ
ಪುನಃ ತಳ್ಳುದ್ರು ಮುದ್ದಮ್ಮ
ಅವರ ಹಟ್ಟಿ ಗ್ವಾಡೇ ವರಕ್ಕಂಡು
ಮಂಟಗಂಡು ನಿಂತರಂತೆ || ಸಿದ್ಧಯ್ಯ||

ಅವರ ಹಟ್ಟಿಗ್ವಾಡೆ ವರೀಕಂಡು ಸ್ವಾಮಿ
ಮಂಟ್ಗಂಡು ನಿಂತ್ಕಂಡ್ರು ಜಗನ್‌ಜ್ಯೋತಿ
ಅಲ್ಲಮಾ ಪ್ರಭು ಮಂಟೇದ ಲಿಂಗಪ್ಪ
ಗ್ವಾಡೇ ವರಿಕಂಡು ನಿಂತ್ಕಂಡು
ಈಗಲೀಗ ಮುದ್ದಮ್ಮನ ಮೊಕಾ ನೋಡಕ್ಕಂಡು
ಉಸೀ ನೆಗಾ ನೆಕ್ಕಂಡು
ತಲೆ ಮೈಯ ಕೆರಿತಾ
ಹೊಟ್ಟೆ ಕೂಡ ಸವರ್ತ ಧರೆಗೆ ದೊಡ್ಡವರು
ಸಭಾಷ್ ನನ್ನ ಕಂದಾ
ಸಭಾಷ್ ನನ್ನ ಮಗಳೇ ಮುದ್ದಮ್ಮ
ಸಭಾಸೂ ನನ್ನ ಕಂದಾ
ಹೇಳುತೀನಿ ಕೇಳವ್ವ
ಇವತ್ತಿನ ದಿವಸ್ದಲ್ಲಿ ಕಂದ ಮುದ್ದಮ್ಮ
ನಿಮ್ಮ ಮನೆಗೆ ದಾನಕ್ಕೆ ಭಿಕ್ಷಕೆ
ಕ್ವಾರಣ್ಯಕ್ಕೆ ಬಂದುಬುಟ್ಟಿ
ನೀ ನನ್ನ ಇಷ್ಟ ಬಂದಂಗೆ ಭೂಯ್ತಿ
ನಿನ್ನಿಷ್ಟ ಬಂದಂಗೆ ಆಡ್ತಿಯೇ ಕಂದಾ
ಮುದ್ದಮ್ಮ
ಈಗಲೀಗ ಇಷ್ಟ ಬಂದಂಗೆ ಆಡ್ತೀಯೆ ಕಂದಾ
ಇಷ್ಟ ಬಂದಂಗೇ ಬೋದಿಯಾ ಕಂದಾ
ನಾನು ಯಾರು ಏನು ಅನ್ನುವುದು
ಈ ಮುದ್ದಮ್ಮನಿಗೆ ಗೊತ್ತಿಲ್ಲ
ಯಾರೊ ಭಿಕ್ಷಿಕ ಬಂದು ಬುಟ್ಟವರೆ
ಅಂತೇಳಿ ಬಾಯಿಗೆ ಬಂದಂಗೆ
ಮಾತಾಡ್ತುವಳೇ
ಇಂತ ಮುದ್ದಮ್ಮನ ಭಕ್ತಿ ಸತ್ವ ನೋಡಬೇಕಂತೇಳಿ
ಅವರ ಹಟ್ಟಿ ಗ್ವಾಡೆವರೀಕ್ಕಂಡು
ಮಂಟ್ಗಂಡವ್ನಂಗೆ ನಿಂತಕಂಡು ವರೀಕ್ಕಂಡು
ಮುದ್ದಮ್ಮ
ಸಭಾಸು ಕಂದಾ
ಈ ಬಾಳುವಂತ ಬಾಳಾಟದಲ್ಲಿ
ಇನ್ನು ಬಾಳ ಹೆಚ್ಚೊಕ್ಕಲಾಗಲಿ
ನಿನಗೆ ಬಂದಂತ ಕಷ್ಟ ಪರಿಹಾರವಾಗಲಿ
ಈಗ ಬಾಳ್ತಿರ್ತಕ್ಕಂತ ಬಾಳಾಟಕ್ಕಿಂತ ಇನ್ನು ಹೆಚ್ಚಿನ
ಬಾಳಾಟಲ ಆಗಲೀ

ಅವ್ವ ಬೋದಿಯೋ ನನ್ನ ಕಂದಾ
ಬೊಯವ್ವ ನನ್ನ ತಾಯಿ
ಅಂದಿಯೇ ನನ್ನ ತಾಯಿ ಅನ್ನವ್ವ ಮುದ್ದಮ್ಮ
ಮಗಳೇ ಆಡಿಯೇ ನನ್ನ ಕಂದಾ
ಆಡವ್ವ ತಾಯಿ ಅನ್ನು ನನ್ನ ಮಗುಳೇ
ನೀನು ಬೋದ್ರುವೇ ಭೇದವಿಲ್ಲ
ಅಂದ್ರುವೇ ಕ್ರೋಧವಿಲ್ಲ || ಸಿದ್ಧಯ್ಯ||

ಮುದ್ದಮ್ಮ
ಇವತ್ತು ತುಂಬ್ದ ಸ್ವಾಮಾರಾ
ನಿನ್ನಟ್ಟಿ ಅರಮನೆಗೆ ಕಂದಾ ದಾನಕ್ಕೆ ಬಂದು ಬುಟ್ಟಿ ಮಗಳೆ
ಭಿಕ್ಷಕ್ಕೆ ಬಂದುಬುಟ್ಟೆ ಮುದ್ದಮ್ಮ
ಕ್ವಾರಣ್ಯಕ್ಕೆ ನಾನು ಬಂದಿ
ನೀನಿಷ್ಟ ಬಂದಂಗೆ ಆಡ್ತಿಯೇ ಕಂದಾ
ಇಷ್ಟ ಬಂದಂಗೆ ಬೊಯ್ತಿಯೆ ಮಗಳೆ
ಬೊಯ್ಯಿ ಕಂದಾ ಬೊ‌ಯ್ಯಿ
ಆಡುವಷ್ಟು ಆಡು ಅನ್ನುವಷ್ಟು ಅನ್ನು
ಮುದ್ದಮ್ಮ

ನೀನು ಬೋದೆ ಎನುತೇಳಿ
ನೀನು ಅಂದುಬಿಟ್ಟೆ ಎನತೇಳಿ
ಆಡುಬುಟ್ಟೇ ಅಂತ
ನನಗೇ ಕ್ವಾಪ ಬರಾಲಿಲ್ಲ

ನನಗೆ ಕ್ಯಾಣ ಬರಲಿಲ್ಲ
ಕೇಳವ್ವ ನನ್ನ ಕಂದಾ ತಾಯಿ ಮುದ್ದಮ್ಮ
ನಾನು ಬಾಯೆತ್ತಿ ಬೋದವರ
ನಾ ಬಾಯೆತ್ತಿ ಬೋಯದಿಲ್ಲ
ಅಮ್ಮ ಕೈಯೆತ್ತಿ ವಡೆದವರಾ
ನಾ ಕೈಯೆತ್ತಿ ವಡೆಯೋದಿಲ್ಲಾ
ಅವ್ವ ಕಲ್ಲಲೀ ವಡೆದವರಾ
ನಾ ಕಲ್ಲಲ್ಲಿ ವಡೇಯೋದಿಲ್ಲ
ಅಮ್ಮ ಕಲ್ಲೆತ್ತಿ ವಡೆಯವರ ಕಂಡ್ರೆ
ಕೈಯೆತ್ತಿ ಮುಗಿಯುತೀನಿ || ಸಿದ್ಧಯ್ಯ||