ಸ್ವಾಮಿ
ಕಲ್ಲೆತ್ತಿ ಹೊಡೆಯೋರ್ಗೇ
ಎರಡು ಕೈಯೆತ್ತಿ ಮುಗಿವಂತ
ಗುರುಗೊಳು ನಾವು ಕನ್ರಮ್ಮ ಅಂತ ಹೇಳ್ತರೇ
ಅಂತ ಮಾಮುನುಗಳೂ ನಮ್ಮಟ್ಟಿಗೆ
ಬಂದವರೇ ಸ್ವಾಮಿ ಎಂದರು
ಮಡದಿ ಮಾತ ಕೇಳ್ತ
ಬಸವಾಚಾರಿ
ಮನದಲ್ಲಿ ಯೋಚ್ನೆ ಮಾಡ್ಕಂಡು
ಮನಸ್ಸಲ್ಲಿ ಚಿಂತೆ ಪಡುವಾಗ
ಸ್ವಾಮಿ
ಇಷ್ಟೇ ಮಾತ ಹೇಳುದ್ರಾ ಆ ಜಂಗುಮರು
ಅಂತ ಕೇಳುಬ್ಯಾಡಿ
ನಾವು
ನಿಲಿಘಟ್ಟದಲ್ಲಿದಂತಹ
ಬಡಸ್ತಾನ ಹೇಳುದ್ರು
ಈ ಮಾರುವಳ್ಳಿ ಗ್ರಾಮದಲ್ಲಿ
ಬಾಳ್ತಕ್ಕಂತ ನಿರುಸ್ತಾನನೂ ಹೇಳುದ್ರು
ಅಂತ ಮಾನುಬಾವ ಬಂದು
ನಮ್ಮಟ್ಟೀಲಿ ನಿಂತವರೆ ಸ್ವಾಮಿ ಎಂದರು
ಮುದ್ದಮ್ಮ
ಆ ಭೀಕ್ಷಕ್ಕ ಬಂದಿರ್ತಕ್ಕಂತ ಮಾಮುನಿಗಳು
ನಾವು ಹಿಂದೆ ಪಟ್ಟ ಬಡ್ತಾನ ಹೇಳುದ್ರ
ಈಗ ಬಾಳ್ತಕ್ಕಂತ ಸಿರಸ್ತಾನ ಕೂಡ
ಹೇಳುಬುಟ್ರ ಮಡದಿ
ಮುದ್ದಮ್ಮ
ಅವರು ಭಿಕ್ಷಕರಲ್ಲ
ಲೋಕಾಳುವಂತ ಜಗದೇಶ್ವರ್ನೇ ನಮ್ಮ
ಮನೆಗೆ ಬಂದಿರಬಹುದು
ನಮ್ಮ ಗಂಡ ಹೆಡ್ತೀರು
ದುಡ ಭಕ್ತಿ ನೋಡಬೇಕಂತ
ನಮ್ಮಟ್ಟಿ ನೋಡಬೇಕಂತ
ನಮ್ಮಟ್ಟಿ ಅರಮನೆಗೆ ಬಂದಿರಬಹುದು ಮುದ್ದಮ್ಮ
ಮಾನುಬಾವನು ಮಾತ್ರ ಹಾಗೆಯೇ
ಕಳುಗಬೇಡ
ಚಿನ್ನ ಬೆರಳೀ ಹಣ ಕಾಸು ಮುತ್ತು ರತ್ನು
ಬೆತ್ತದ ಮೊರ್ದ ತುಂಬ ತುಂಬ್ಕಂಡು
ತಕ್ಕೊಂಡೋಗಿ ಜೋಳಿಗೆ
ತುಂಬ ತುಂಬ್ಬುಟ್ಟು
ತಲೆಮ್ಯಾಲೆ ಸೆರ್ಗಾಕ್ಕಂಡು
ಅವರು ಪಾದ ಮುಟ್ಟಿ ಶರಣು ಮಾಡುಬುಟ್ಟುಸ
ನನ್ನಟ್ಟಿಯಿಂದ ಆಚೆಗೆ ಗುಟ್ಟಾಗಿ
ಕಳುಗಿಸುಬುಡು ಮುದ್ದಮ್ಮ ಎಂದುರು
ಪತಿದೇವರೇ
ನೀವೇಳುವುದಕ್ಕೆ ಮೊದಲಾಗಿ ನಾನೆ
ದಾನ ಧರ್ಮ ಭಿಕ್ಷ ಕೊಂಡೋದಿ ಸ್ವಾಮಿಸದ
ಭಿಕ್ಷ ಬ್ಯಾಡ ಅಂತ ಹೇಳುಬುಟ್ರು ಗುರುದೇವ
ಆಗ ಬಸವಾಚಾರಿಗೆ ಎಲ್ಲೂ ಇಲ್ಲದ
ಸಿಟ್ಟು ಬಂದ್ಬುಡ್ತಂತೆ
ಹೇ ಮುದ್ದಮ್ಮ
ಬಿಕ್ಷಕೆ ಬಂದವನು ಬಿಕ್ಷನೇ
ಬ್ಯಾಡಂತ ಹೇಳುಬುಟ್ಟನಾ

ಏನೇ ಬಿಕ್ಷ ಬೇಡ್ದಿದ್ದವನು
ಇನ್ನೇನು ಬೇಡಕ್ಕೆ ಬಂದ || ಸಿದ್ಧಯ್ಯ||

ಮಡದಿ ದಾನ ಬೇಡದಿದ್ದವನು
ಅವನು ಮತ್ತೇನು ಬೇಡಕ್ಕೆ ಬಂದ || ಸಿದ್ಧಯ್ಯ||

ದಾನ ಬೇಡ್ದ ಹೋದವನು
ಇನ್ನು ಏನು ಬೇಡಕ್ಕೆ ನನ್ನಟ್ಟಿಗೆ
ಬಂದಿದ್ದನು ಮುದ್ದಮ್ಮ
ಯಾತಕ್ಕೆ ನನ್ನ ಮನಗೆ ಬಂದಿದ್ದನು
ಮಡದಿ ಎಂದರು
ಸ್ವಾಮಿ
ಬಿಕ್ಷಕ್ಕೆ ಬಂದಿರ್ತಕ್ಕಂತ ಜಂಗುಮರು
ಏನು ಮಾತಾಡ್ತವರೆ ಅಂದರೇ
ನನ್ನ ಹೊಟ್ಟೆಲೀ ಹುಟ್ಟಿರುವ
ಏಳು ಜನ ಮಕ್ಕಳಲ್ಲಿ ಗುರುವು
ಮೊದಲು ಹುಟ್ಟಿದಂತ ಆರುಜನ
ಗಂಡುಮಕ್ಕಳು ಬ್ಯಾಡವಂತೆ
ಕಟ್ಟ ಕಡಗಾಲದಲ್ಲಿ ಹುಟ್ಟಿರ್ತಕ್ಕಂತ
ಕಿರಿ ಮಗ ಕೆಂಪಣ್ಣ
ಅವರ ಮುತ್ತೂ ಜೋಳಿಗ್ಗೆ ಮಗನ
ದತ್ತುವಾಗಿ ಕೇಳುತಾರೆ || ಸಿದ್ಧಯ್ಯ||

ನನ್ನ ಕೆಂಪಚಾರಿ ಮಗನ
ಅವರ ಮುತ್ತುನ ಜೋಳಿಗೆ
ದಾನಕ್ಕೆ ಕೇಳುತಾರೆ ಭೀಕ್ಷಕ್ಕೆ ದೇವ
ಕೇಳ್ತಾರೇ ನನ್ನ ಗುರುವು
ಅವರ ಕಂಡಾಯ ಬೆಳಗುದಕ್ಕೆ
ನನ್ನ ಗಂಡು ಮಗನ ಕೇಳುತಾರೆ || ಸಿದ್ಧಯ್ಯ||

ನನ್ನ ಭಾಗ್ಯವುಳ್ಳ ಮಗನು
ಕೆಂಪಣ್ಣನ ಸ್ವಾಮಿ
ನನಗೆ ಕಂಡಾಯ ಬೆಳಗವರಿಲ್ಲ
ನನ್ನ ಮಠ ತೊಳೆಯವರಿಲ್ಲ
ನನ್ನ ಗದ್ಗೇ ವರಸವರಿಲ್ಲ
ನಾನು ಮಲ್ಗೀರುವಂತ ಹುಲ್ಲೆ ಚರ್ಮ ಮಡ್ಸವರಿಲ್ಲ
ನಾನು ತಪಸ್ಸು ಮಾಡುವಂತ
ಅದಕ್ಕಾಗಿ ನಿನ್ನ ಮಗನ
ನನ್ನ ಮಗನಾಗಿ ಕೊಟ್ಟು ಬುಡವ್ವ
ಈಗಲೀಗ ನನಗೆ ಮಗನಾಗಿ ಮಾಡ್ಕಂಡು
ನಿನ್ನ ಮಗನ ಕರ್ಕಂಡು ಹೋಯ್ತಿನಿ ಅಂತ
ಕೇಳ್ತರೇ ಸ್ವಾಮಿ

ನನ್ನ ಮಗನ ಕೊಡಬೇಕೊ ದೇವ
ಕೊಡಬಾರದೊ ಹೇಳಿ ಗುರುವೆ || ಸಿದ್ಧಯ್ಯ||

ನೀವು ಕೊಡು ಅಂದರೆ ಕೊಡುತೀನಿ
ಕೊಡಬ್ಯಾಡ ಅಂದರೆ ಕೊಡೋದಿಲ್ಲ || ಸಿದ್ಧಯ್ಯ||

ನನ್ನ ಪತಿ ಮಾತ ಮೀರಿ ನಾನು
ಕೊಡೋದಿಲ್ಲ ಎಂದಾಳಲ್ಲ || ಸಿದ್ಧಯ್ಯ||

ಕೈಯಿಡಿದ ಪತಿದೇವ್ರ ಮಾತ ಮೀರಿ ದೇವ
ನಾನು ಮಾತ್ರ ಖಂಡುತ್ವಾಗು
ಮಗನ ಕೊಡೋದಿಲ್ಲ ಗುರುವು
ನೀವು ಮಗನ ಕೊಟ್ಟುಬುಡು ಅಂದರೇ
ನಿಮ್ಮ ಮಾತು ಮೀರದಂತೆ
ಮಗನ ಕೊಟ್ಬುಡ್ತೀನಿ
ಕೊಡಬೇಕೋ ಕೊಡಬ್ಯಾಡವೊ ಹೇಳಿ ಸ್ವಾಮಿ ಎಂದರು
ಮಡದಿ ಆಡಿದ ಮಾತ
ಕರಣದಲ್ಲಿ ಕೇಳುದ್ರು
ಬಾಚಿ ಬಸವಚಾರಿ
ಏನು ಮಡದಿ ಮುದ್ದಮ್ಮ
ಭಿಕ್ಷಕೆ ಬಂದು ಜಂಗಮ
ಕಿರೀಮಗ ಕೆಂಪಣ್ಣನ
ದತ್ತು ಮಗನಾಗಿ ಮಗನ್ನೇ ದಾನಕ್ಕೆ ಕೇಳ್ದನ

ನನ್ನ ಮಗನು ಕೇಳ್ದ ಮುಂಡೆ ಮಗನ
ಸುಮ್ನೆ ನಾನು ಬುಡವುದಿಲ್ಲ || ಸಿದ್ಧಯ್ಯ||

ನನ್ನ ಮಗನ ಕೇಳೋದ್ರೆ ಅವನ್ಗೆ
ಬಾಯ ತಾನೆ ಹ್ಯಾಗೆ ಬಂತು

ನನ್ನ ಬಂಗಾರ್ದ ಗೊಂಬಿಯ
ಅವನು ಬಾಯಬುಟ್ಟು ಕೇಳಬಹುದ|| ಸಿದ್ಧಯ್ಯ||

ನನ್ನ ಅಂಗಳ್ದಲ್ಲಿ ಆಡುವಂತ
ಅರಗಿಣಿ ಕೇಳುಬಹುದ || ಸಿದ್ಧಯ್ಯ||

ನನ್ನ ಬಂಗಾರ್ದ ಗೊಂಬೆಯ ಮಡದಿ
ಆ ಭಿಕ್ಷಕ ಬಾಯಿ ಬುಟ್ಟು
ಕೇಳಬಹುದಾ
ನನ್ನಂಗಳದೊಳಗೆ ಆಡ್ತಕ್ಕಂತ ಅರಗಿಣಿಯ
ಆ ಜಂಗುಮ ಕೇಳಬಹುದಾ
ಮುದ್ದಮ್ಮ
ನನ್ನ ಮಗನ ಕೇಳಕ್ಕೆ ಬಂದಿರುವ ಜಂಗುಮ
ನನ್ನ ಮನೆ ಬಿಟ್ಟು ಬುಟ್ಟು ಸುಮ್ನೆ
ಹೊರಟೋದರೆ ಸರುವೋಯ್ತು
ಏನಾರು ಹೋಗೋದಿಲ್ಲ ಅಂತ
ಹೇಳುಬುಟ್ರೆ ಮಡದಿ
ಅವನ್ಗೇ ಕಾದಿರುವ ಗುಳ ತಂದು
ಅಡ್ಡು ಬರೆಯ ಎಳೆಯುತೀನಿ|| ಸಿದ್ಧಯ್ಯ||

ಅವನ ಇಕ್ಕಳದಲ್ಲಿ ಇಡ್ಕತೀನಿ
ಮಡದಿ ರಾವುಗೋಲಲ್ಲಿ ಬಡಿಯುತೀನಿ || ಸಿದ್ಧಯ್ಯ||

ಇವನ ಇಕ್ಕಳದಲ್ಲಿ ಇಡಕಂಡು
ರಾವುಗೋಲಲ್ಲಿ ಬಡಿದು
ಕೇಳು ನನ್ನ ಮಡದೀ
ಮಡದಿ ಮುದ್ದಮ್ಮ
ಅವನ್ಗೇ ಕಾದು ಗಟ್ಟಿ ತಗದು
ಅವನ ಅಂಗೈನಮ್ಯಾಲೆ ಮಡಗಿ
ಲೇ ದೊಡ್ಡು ಬಾಚಿ ತಗದು
ನಾ ಚಿಕ್ಕೂ ಬಾಚಿ ತಗದು
ಅಡಗಲ್ಲಿನ ಮೇಲೆ ಅವನ
ಕೆಡಿಕಂಡು ನನ್ನ ಮಡದಿ
ಅವನ ಮರವ ಕೆತ್ತುದಂಗೆನಾನು
ತುಂಡುತುಂಡಾಗಿ ಕೆತ್ತುತೀನಿ || ಸಿದ್ಧಯ್ಯ||

ದೊಡ್ಡ ಬಾಚಿ ಚಿಕ್ಕ ಬಾಚಿ ತಗದು
ಅಡಗಲ್ಲಿನ ಮೇಲೆ ಅವನ ಮುದ್ದಮ್ಮ
ಮರಕೆತ್ತದಂಗೆ ತುಂಡುತುಂಡಾಗಿ
ಕಿತ್ಬುಡ್ತೀನಿ ಮುದ್ದಮ್ಮ
ಆ ಭಿಕ್ಷಕ ಬಂದು ನನ್ನ ಮಗನು
ಕೇಳುಬುಟ್ಟ ಅಂದ್ಬುಟ್ಟು
ಹಟ್ಟಿ ಅರಮನೆ ಬಿಟ್ಟುಬುಟ್ಟು
ಇಲ್ಲಿಗಂಟ ದೂರು ತಂದಿಯಾ ಮಡದಿ
ಏ ಮುದ್ದಮ್ಮ
ಆ ಭಿಕ್ಷುಕನ ಮನೆ ಬಿಟ್ಟು
ಹೊಂಟೋಗು ಅಂತ ಕೇಳು
ಅವನೇನಾರು ಸುಮ್ನೆ ಹೊಂಟೋಗುಬುಟ್ರೇ
ಸರುವೋಯ್ತು
ಏನಾರೂ ಹೋಗೊದಿಲ್ಲ ಅಂತ ಹೇಳುಬುಟ್ರೆ ಮಡದಿ
ಹಟ್ಟೀಲಿ ಇರುವ
ಆಳು ಕಾಳು ಜೀತ್ಗಾರು ಕರ್ದುಬಿಟ್ಟು
ಅವನ ಕತ್ತುನ ಮೇಲೆ ಗುದ್ದಿಸುಬುಡು
ಹಟ್ಟಿಂದಾಚ್ಗೆ ತಳ್ಳಿಸಿಬುಡು|| ಸಿದ್ಧಯ್ಯ||

ನನ್ನ ಮನೆಯು ಬು‌ಟ್ಟು ಅವನ
ತಳ್ಳಿಸಿಬುಡು ಎಂದಾರಲ್ಲ || ಸಿದ್ಧಯ್ಯ||

ನನ್ನ ಹಟ್ಟಿ ಅರಮನೆಯಿಂದ
ಹೊರಗೆ ತಳ್ಳಿಸಿಬುಡು ಮಡದಿ ಮುದ್ದಮ್ಮ ಎಂದರು
ಪತಿ ಆಡ್ಡ ಮಾತ ಕರ್ಣದಲ್ಲಿ ಕೇಳ್ತ ಮುದ್ದಮ್ಮ
ಬಾಚಿ ಬಸವಾಚಾರ್ರು‍ಮುಂಬಾಗದಲ್ಲಿ ನಿಂತವರೇ
ಧರೆಗೆ ದೊಡ್ಡವರು ಅಲ್ಲಮ ಪ್ರಭು
ಮಂಟೇದ ಲಿಂಗಪ್ಪ
ಬಸವಾಚಾರಿ ನಡುತೊಟ್ಟಿ ಒಳಗೆ
ತಾನಾಗಿ ನಿಂತವರೆ
ಈ ಬಸವಾಚಾರಿಯವರು
ಮಡದಿ ಮುದ್ದಮ್ಮನಿಗೆ ಆಡ್ತಕ್ಕಂತ ಮಾತು
ಅವರ ತೊಟ್ಟಿ ಒಳಗೆ ನಿಂತಿದ್ದಂತ
ಗುರುವೆ ಧರೆಗೆ ದೊಡ್ಡವರ ಪಾದಕ್ಕೆ
ಆಗಲೇ ಅರುವಾಗಿತ್ತಲ್ಲ || ಸಿದ್ಧಯ್ಯ||

ಗುರುವೆ ಕುಲುಮೆ ಮನೇಲಿ
ಬಾಸಿ ಬಸವಯ್ಯ
ಆಡಿದಂತ ಮಾತು
ಧರೆಗೆ ದೊಡ್ಡವರ
ಪಾದಕ್ಕೆ ಅರುವಾಯ್ತು
ಗುರುವೇ ಹರ ಹರ ಎಂದವರೆ
ಎರಡು ನೇತ್ರ ಮುಚ್ಚವರೇ
ಶಿವಾಶಿವಾ ಎಂದವರೇ
ಎರಡು ಕರ್ಣ ಮುಚ್ಚವರೆ
ನನ್ನ ಬಸವಾಚಾರಿ ಮನೆಯ ಬಿಟ್ಟು
ದೇವರ ದಯಮಾಡುತಾರೆ || ಸಿದ್ಧಯ್ಯ||

ಬಸವಾಚಾರಿ ಮಾತ ಕೇಳುಬುಟ್ಟು
ಈಗಲೀಗ ಎರಡು ಕರಣ ಮುಚ್ಚಗಂಡು
ಧರೆಗೆ ದೊಡ್ಡಯ್ಯ
ಎರಡು ಕಣ್ಣ ನೇತ್ರ ಕೂಡ ಮುಚ್ಚಗಂಡು
ಬಸವಾಚಾರಿ
ನಿನ್ನಟ್ಟಿಲಿರ್ತಕ್ಕಿಂತ ಜೀತ್ಗರು ಕೈಲಿ
ಕತ್ತನಮ್ಯಾಲೆ ಗುದ್ದಿಸ್ಕೊಂಡು
ತಳ್ಳಿಸ್ಕೊಂಡು ನೂಕಿಸ್ಕಂಡು
ಹೋಗಬೇಕಪ್ಪ
ನಾನು ಯಾತಗೇ ತಳ್ಳುಸ್ಕಂಡು ಗುದ್ದಿಸ್ಕಂಡು
ಹೋಗಬೇಕು ಕಂದಾ
ಬಸವಾಚಾರಿ
ನೀನಾಡ್ತಕ್ಕಂತ ಮಾತು ನನಗೆ ಗೊತ್ತಾಯ್ತು
ನಿನ್ನಟ್ಟಿ ಅರಮನೆ ಬುಟ್ಟುಬುಟ್ಟು
ಹೊರಟೋಯ್ತಿನಿ ಕಂದ ಅಂತೇಳಿ
ಧರೆಗೆ ದೊಡ್ಡವರು
ಬಸವಾಚಾರಿ ಮನೆ ಬುಟ್ಟು
ಇತ್ತಿಂದ ಬರುತ್ತಾವರೆ
ಮುದ್ದಮ್ಮ
ಪತಿದೇವ್ರ ಬಸವಚಾರಿ ಆಡ್ದುಮಾತ
ಕೇಳ್ಕಂಡು ಅತ್ತಿಂದ ಬತ್ತಾವರೆ

ಅಯ್ಯೋ ಬರುವ ಗುರುವನೆ ನೋಡಿ
ಪಾದಕ್ಕಾದ್ರೇ ಬಿದ್ದಳಂತೆ || ಸಿದ್ಧಯ್ಯ||

ಬರುವಂತ ಗುರುಗೊಳು ಮೊಕ ನೋಡುಬುಟ್ಟು
ಮುದ್ದಮ್ಮ
ಓಡೋಡಿ ಬಂದು ತಾಯಿ
ಜಗತ್ತು ಗುರುಗಳಾ ಪಾದದ ಮೇಲೆ ಬಿದ್ದುರು
ಪಾದಕ್ಕೆ ಬಿದ್ದು ಮುದ್ದಮ್ಮ ಕಣ್ಣಿಂದ
ನೋಡುಬಿಟ್ಟು ಧರೆಗೆ ದೊಡ್ಡವರು
ಮುದ್ದಮ್ಮ
ಯಾತುಕವ್ವಾ ಪಾದಕ್ಕೆ ಬಿದ್ದೀಯೆ
ಪಾದ ಬುಟ್ಟು ಮೇಲಕ್ಕೆದ್ದೇಳು ಕಂದಾ
ಪಾದ ಬುಟ್ಟು ಏಳು ಕಂದಾ
ನಿನ್ನ ಗಂಡ ಬಸವಾಚಾರಿ
ಏನ್ನಂತ ಹೇಳುದ್ರವ್ವಾ
ಮುದ್ದಮ್ಮ
ಮಗನ ಕೊಟ್ಟುಬುಡು ಅಂತ ಹೇಳದ್ರ ತಾಯಿ
ಮಗನ ಕೊಡಬ್ಯಾಡ ಅಂತ ಹೇಳದ್ರೆ
ಮಗಳೇ ಎಂದರು

ನಿನ್ನ ಗಂಡನಾಡ್ಡ ಮಾತ ಕಂದಾ
ಹೇಳುಬುಡವ್ವ ಎಂದಾರಲ್ಲ || ಸಿದ್ಧಯ್ಯ||

ಗಂಡನ್ನಾಡ್ದ ಮಾತ ಹೇಳುಬುಡು ಕಂದಾ ಎಂದರು
ಜಗತ್ತು ಗುರುಗಳ ಮಾತ
ಕೇಳ್ಬುಟ್ಟು ಮುದ್ದಮ್ಮ
ಈಗ ನನ್ನ ಪತಿ ಹೇಳ್ದ ಮಾತು
ಈ ಜಗತ್ತು ಗುರುಗಳ್ಗೆ ಹೇಳದ್ರೆ
ಎಲ್ಲಿ ಸಿಟ್ಟು ಕ್ವಾಪವಾಗುಬುಟ್ಟರೊ ಗೊತ್ತಿಲ್ಲಲ
ಈಗಲೀಗ ನನ್ನ ಪತಿ
ಮಾನ ಉಳಿಸಿಕೊಳ್ಳುವುದು
ನನ್ನ ಸತಿ ಧರ್ಮವಲ್ವ ಅಂತೇಳಿ ಮುದ್ದಮ್ಮ
ಈ ಜಂಗುಮಲ್ಗೆ ನನ್ನ ಗಂಡಾ
ಆಡ್ದ ಮಾತ ಹೇಳ್ಬಾರ್ದು
ನನ್ನ ಗಂಡ ಆಡ್ದ ಮಾತ ಹೇಳುಬುಟ್ಟರೆ
ಸಿಟ್ಟು ಕ್ವಾಪವಾಗುಬುಡ್ತಾರೆ
ನನ್ನ ಗಂಡನ ಮಾನ ನಾನೆ
ಕಾಪಾಡ್ಕಬೇಕು ಅಂತೇಳಿ
ಧರೆಗೆ ದೊಡ್ಡವರಿಗೇ ಸುಳ್ಳು ಮಾತು
ಹೇಳದ್ರಂತೆ ಯಾರು ಮುದ್ದಮ್ಮ
ಸ್ವಾಮಿ ಜಂಗುಮರೆ
ನಿಮ್ಮ ಮಾತು ಕೇಳುಬುಟ್ಟು
ನಮ್ಮ ಪತಿದೇವರು ಬಳಿಗೋಗಿದ್ದೀ
ನನ್ನ ಗಂಡ ಬಸವಾಚಾರಿ
ಏನಂತ ಹೇಳುಕಳ್ಗುದ್ರು ಅಂದರೇ
ಆ ಕಿರಿಮಗ ಹುಟ್ಟದ ಮ್ಯಾಲೆ
ನಮಗೆ ಏಳು ಕೊಪ್ಪುರ್ಕೆ ದ್ರೌಭಾಗ್ಯ ಬಂತು
ಭಾಗ್ಯವುಳ್ಳ ಮಗನು ಕೆಂಪಣ್ಣನ
ಜಂಗುಮರು ಬಂದು ಧಾನಕ್ಕೆ ಭಿಕ್ಷಕ್ಕೆ
ಮಗನ ಕೇಳ್ತರೆ ಅಂತ ಹೇಳ್ತಿಯಲ್ಲ
ಆ ಮಗನ್ನೇನೊ ಕೊಟ್ಟು ಬಿಡಬಹುದಾಗಿತ್ತು
ಆ ಮಗನ ನಾನೇನು ಕೊಟ್ಟು ಬಿಡ್ತೀನಿ
ಆ ಜಂಗಮರು ಕರ್ಕಂಡು ವಂಟೋಯ್ತಾರೆ
ಅವರು ಹೋರಟೋದ ಮ್ಯಾಲೆ
ನನ್ನ ಮಗನು ಕಾಲ್ನಡೀಲಿ ಬಂದಿರ್ತಕ್ಕಂತ ಭಾಗ್ಯ
ನನ್ನ ಮಗನ ಕಾಲ್ನಡಗ ಒಳಗೆ ಕಡ್ದು ವಂಟೋದ್ರೆ
ನಾನು ಏನು ಮಾಡ್ಲಿ
ಮುದ್ದಮ್ಮ
ಆ ಭಾಗ್ಯವುಳ್ಳ ಮಗನ ಮಾತ್ರ
ಮನೆಯಿಂದ ಆಚೆಗೇ ಕೊಡಕ್ಕಾಗದಿಲ್ಲ
ಮೊದಲುಟ್ಟಿದ ಆರುಜನ ಗಂಡು ಮಕ್ಕಳಲ್ಲಿ
ಯಾವ ಮಗನ ಕೇಳ್ಕತರೆ
ಕೇಳ್ಕಂಡ ಮಗನ ಮಾತ್ರ ಕೊಟ್ಟುಬುಡೂ
ಮಡದಿ ಅಂತ ಹೇಳುದ್ರು ಸ್ವಾಮಿ
ಮೊದಲುಟ್ಟದ ಆರುಜನ ಗಂಡು ಮಕ್ಕಳಲ್ಲಿ
ಯಾರ್ನಾರು ಕೇಳ್ಕಳೀ ಕೊಟ್ಟುಬುಡ್ತಿವಿ
ಕಿರೀ ಕೆಂಪಚಾರಿ ಮಾತ್ರ ಕೊಡೋದಿಲ್ಲ
ಇನ್ನೊಂದು ಮಾತು ಏನೇಳುದ್ರು ಅಂದ್ರೇ
ನನ್ನ ಪತಿ ದೇವರು

ಕಿರೀ ಮಗನ ಬುಟ್ಟು
ಹಿರಿಮಗನ ಕೇಳುದ್ರೇ ನೀ ಕೊಟ್ಟುಬುಡು ಎಂದಾರಲ್ಲ || ಸಿದ್ಧಯ್ಯ||

ಅವರು ಹಿರಿಮಗನ ಕೊಟ್ಟಾರಂತೇ
ಕಿರೀಮಗನ ಕೊಡುವದಿಲ್ಲ || ಸಿದ್ಧಯ್ಯ||

ಹಿರಿಮಗನ ಕೊಟ್ಟರಂತೆ ಸ್ವಾಮಿ
ಕಿರಿ ಮಗನ ಕೊಡೋದಿಲ್ಲ ಅಂತ
ಹೇಳ್ಬುಟ್ರು ದೇವ ಎಂದರು
ಮುದ್ದಮ್ಮನ ಮಾತು ಕೇಳಿ
ಅಲ್ಲಮಾ ಪ್ರಭು ಮಂಟೇದಲಿಂಗಪ್ಪ
ಜಗನ್‌ಜ್ಯೋತಿ ಧರೆಗೇ ದೊಡ್ಡವರು
ಮುದ್ದಮ್ಮ
ನಿನ್ನ ಬಾಯ್ಲಿ ಯಾಕೆ ಸುಳ್ಳು
ಮಾತು ಬರಬೇಕವ್ವ

ನಿನ್ನ ಗಂಡನಾಡ್ದ ಮಾತು ನನಗೆ
ಮೊದಲೇ ಅರುವಾಗಿತ್ತಮ್ಮ || ಸಿದ್ಧಯ್ಯ||

ನಿನ್ನ ಗಂಡನಾಡ್ದ ಮಾತು
ಆಗಲೇ ಅರುವಾಗಿತ್ತವ್ವ || ಸಿದ್ಧಯ್ಯ||