ಕೆಂಡ ತರುವುದಕೆ ಕಂದಾ
ಒಬ್ಬ ಗಂಡು ಮಗನ್ನ ಪಡಿಬೇಕಲ್ಲ ದೊಡ್ಡಮ್ಮ
ಈಗಲೀಗಾ ಈ ನಡುವೇ ನರಲೋಕದಲ್ಲಿ
ಭೂಮಿ ಭೂಲೋಕದಲ್ಲಿ

ನಾನು ಯಾವ ಊರಿಗೆ ಹೋಗಬೇಕು
ನಾನು ಯಾವ ಗ್ರಾಮಕ್ಕೋಗಬೇಕು || ಸಿದ್ಧಯ್ಯ||

ಗುರುವೆ ಯಾವ ಊರಿಗೆ ಕಂದಾ
ಹೋಗುಬೇಕು ಮಗಳೆ
ನಾನು ಯಾವ ಗ್ರಾಮಕೆ ಕಂದಾ
ಹೋಗನೆ ದೊಡ್ಡಮ್ಮ
ನಾನು ಯಾವು ಜಾತಿಯ ಒಳಗೆ
ಮಗುನಾ ಪಡಿಯಲೇಬೇಕು || ಸಿದ್ಧಯ್ಯ||

ಯಾವ ಊರಿಗೆ ಹೋಗಿ ಕಂದಾ
ಯಾವ ಗ್ರಾಮಕೆ ಹೋಗಿ ಬಿಟ್ಟು
ಯಾವ ಜಾತಿ ಯಾವ ಮತದಲ್ಲಿ ನಾನು
ಮಗನ ಕೇಳಬೇಕು ದೊಡ್ಡಮ್ಮ

ನನ ಪಾದುಕೆ ಬೇಕಾದ ಮಗುನು
ಎಲ್ಲಿ ಸಿಕ್ಕಾನೊ ಕಾಣೆ || ಸಿದ್ಧಯ್ಯ||

ನನಗೆ ಬೇಕಾದ ಮಗನು ಕಂದಾ
ಎಲ್ಲಿ ದೂರಕುವನೋ ಕಾಣೆ || ಸಿದ್ಧಯ್ಯ||

ನನಗೆ ಬೇಕಾದ ಮಗನು
ಒಪ್ಪಿದ ಶಿಸುಮಗ ಎಲ್ಲಿ ಸಿಕ್ಕನೋ
ಯಾತಾವ ಸಿಕ್ಕನೋ
ಯಾರ ಹೊಟ್ಟೇಲಿ ಹುಟ್ಟಿದಾನೋ
ಯಾರ ಗರ್ಭದಲಿ ಬೆಳದಿದಾನೋ
ಕಾಣೆನಲ್ಲೊ ದೊಡ್ಡಮ್ಮ
ಈ ನಡುವೆ ನರಲೋಕದಲ್ಲಿ
ನನಗೆ ಬೇಕಾದ ಮಗ ಎಲ್ಲಿ ಬೆಳಿತಾ ಇದ್ದಾನೋ ಗೊತ್ತಿಲ್ಲ
ಆಗಂದು ಜಗತ್ತುಗುರು ಧರೆಗೆ ದೊಡ್ಡಯ್ಯ
ಉರುಗದ್ದಿಗೆ ಮ್ಯಾಲೆ ಕುತ್ಕಂಡು
ಮನಸಲ್ಲಿ ಕೊರತೆ ಮಾಡುತಾ
ದೊಡ್ಡಮ್ಮನ ಕರೆದು ಬುದ್ದಿ ವಿವೇಕ ಹೇಳುತ ಗುರುವು

ಅವರು ಉರಿಯಗದ್ದಿಗೆ ಮೇಲೆ ಸ್ವಾಮಿ
ಕುಳಿತವರಲ್ಲೋ ಮಾಯಕಾರ || ಸಿದ್ಧಯ್ಯ||

ಉರಿಗದ್ದಿಗೆ ಮೇಲೆ ಕೂತುಗಂಡು ನನ್ನಪ್ಪಾ
ಮನದಲ್ಲಿ ಯೋಚಣೆ ಮಾಡಿಕಂಡು ಕೊರತೆ ಮಾಡಿಕಂಡು
ಮನಸಲ್ಲಿ ಚಿಂತೆ ಪಡುವಾಗ
ಆ ದುಡುವುಳ್ಳ ದೊಡ್ಡಮ್ಮ ತಾಯಿ
ಧರೆಗೆ ದೊಡ್ಡವರ್ಗೆ ಹೇಳುತವರೇ
ಸ್ವಾಮಿ,
ಈ ನರಲೋಕುಕೆ ಹೋಗುಬುಟ್ಟು
ನರಲೋಕದ ಮಗನ್ನೆ ತಕಂಡು ಬಂದು
ಶಿಶುಮಗನ ಮಾಡ್ಕೊಬೇಕು ಅಂತ ಕೇಳ್ತಿರಿಯಲ್ಲಪ್ಪ?
ಶಿಶುಮಗ ಎಂದುರೆ ಯಾವ ಶಿಶುಮಗನಿಯಪ್ಪ
ದೊಡ್ಡಮ್ಮ
ನಿಮ್ಮಂತಾ ಶಿಶು ಮಕ್ಕಳ ಪಡಕಂಡು ಬಂದು ಫಲವಿಲ್ಲಾ
ಇದುವಲ್ಲದೆ ನನ ಕಂದಾ
ಭೂಮಿ ಭೂಲೋಕನೆ ಪಡೆದು
ಕಲ್ಯಾಣ ಕೈಲಾಸನೇ ಪಡೆದು
ಈ ಧರೆಗೆ ನಾನು ಬಂದುದಕೆ ದೊಡ್ಡಮ್ಮ
ಈ ಧರೆ ಒಳಗೆ ನನ ಕಂದಾ
ಇದುವಿಲ್ಲದಂತೆ
ಕಲ್ಯಾಣ ಪಟ್ಟಣಕೆ ಹೋಗ್ಬುಟ್ಟು
ರಾಚಪ್ಪಾಜಿ ಶಿಶುಮಗನಾ ಮಾಡಕಂಡು ಬಂದಿ
ನಿನ್ನ ಹಲಗೂರು ನಿಂಗಮ್ಮನ ಮಗಳು
ಸತ್ತೋದ ಹೆಣವ
ನಿನ್ನ ಪಡಕಂಡು ಜೀವರಾಶಿ ಮಾಡಕಂಡು
ದೊಡ್ಡಮ್ಮ ತಾಯಿ ಅಂತೇಳಿ ನಾಮಕರಣ ಕಟ್ಟಿಬುಟ್ಟು
ವಿಜಿನಗರದಲಿ ಗಾರುಡಿಗರ ಮಗಳು
ಚನ್ನಾಜಮ್ಮನ ಪಡಕಂಡು ಬಂದಿ ಕಂದಾ
ಆ ಚನ್ನಾಜಮ್ಮ ಶಿಶು ಮಗಳಾಗದಿಲ್ಲ
ನೀನು ರಾಚಪ್ಪಾಜಿಗೆ ಕಂದಾ
ಧರ್ಮಪತ್ನಿ ಆಗ್ಬುಟ್ಟಿ
ನೀವು ಮಡದಿ ಪುರುಷರುಳ್ಳವರಾಗಿಬುಟ್ರಿ
ನೀವು ನನಗೆ ಶಿಶು ಮಕ್ಕಳಾಗದಿಲ್ಲಾ
ನಮಗೆ ಶಿಸುಮಗನಾಗಬೇಕಾದ್ರೆ
ದತ್ತು ಮಗನಾಗಬೇಕಾದ್ರೆ ದೊಡ್ಡಮ್ಮ
ಒಬ್ಬ ತಾಯಿ ಹೊಟ್ಟೆಲಿ ಉಟ್ಟಿದ ಮಗನಾಗಬೇಕು ಕಂದಾ
ತಾಯಿ ತಂದೆ ಹೊಟ್ಟೇಲಿ ಹುಟ್ಟಿದ ಮಗ ಅಂದ್ರೆ
ನಮ್ಮ ತಾಯಿ ತಂದೆಯ ಮೊದಲನೆ ದೇವುರು
ಮಿಕ್ಕು ಒಕ್ಕನಾದ ದೇವುರು
ನಮಗ್ಯಾರು ಬ್ಯಾಡ ಎಂತ ಏಳಿ
ದಿನಕೆ ಮೂರುಸಾರಿ
ತಾಯಿ ತಂದೆ ಪಾದ ಪೂಜೆ ಮಾಡ್ತಕಂತ ಮಗನಾಗಬೇಕು
ತಂದೆ ತಾಯಿ ಪಾದ ಪೂಜೆ ಮಾಡುದಂತ
ಮಗನು ಮಾತ್ರ ನನಗೆ ಶಿಶುಮಗನಾಯ್ತನೆ
ಮಿಕ್ಕು ಒಕ್ಕುನಾದ ಯಾರೂ ಕೂಡ
ನನಗೆ ಶಿಸು ಮಗನಾಗದಿಲ್ಲ
ಅಂತ ತಾಯಿ ತಂದೆ ಪಾದ ಪೂಜೆ ಮಾಡುವಂತ
ಮಗನ ನಾನು ಕಂದಾ ಪಡಿಬೇಕಾದುರೇ ಮಗಳೇ
ಅವನು ಎಲ್ಲಿ ಇದ್ದನೋ ಕಾಣೆ
ಯಾತಾವು ಬೆಳುದನೋ ಕಾಣೆ || ಸಿದ್ಧಯ್ಯ||

ಅವನು ಎಲ್ಲಿ ಇದ್ದನೋ
ಯಾತಾವು ಬೆಳದನೋ
ಯಾರು ಹೊಟ್ಟೆಯ ಒಳಗೆ ನನ ಕಂದಾ
ಹುಟ್ಟಿದನೋ ಕಾಣೆ
ಹೇಳವ್ವ ದೊಡ್ಡಮ್ಮ
ಇಂತ ತಂದೆ ತಾಯಿ ಪಾದ ಪೂಜುವ
ಮಗನ ಪಡಿಬೇಕು
ಹಾಗಂದು ನನ ಗುರುವು
ಉರಿಯ ಗದ್ದಿಗೆ ಮೇಲೆ
ಕುತಗಂಡ ನನಪ್ಪ
ಕಪಾಲದ ಮೇಲೆ ಗುರುವೆ
ಕೈಯ ಮಡಿಕಂಡು
ಗುರುವೇ ಪೂರವ ಪಶ್ಚಿಮ ಉತ್ತರ ದಕ್ಷಿಣ್ಯ
ಅವರು ನಾಕುಮೂಲೆ
ಎಂಟು ದಿಕ್ಕ ದೂರದ ದೃಷ್ಟಿ ಮಡಗುತ್ತಾರೆ || ಸಿದ್ಧಯ್ಯ||

ಪೂರ್ವ ಪಶ್ಚಿಮ ಉತ್ತರ ದಕ್ಷಿಣ್ಯ
ನಾಲ್ಕ ರಾಜ್ಯಗಳ ಗುರುವೇ ಗುರುದೇವಾ
ಏಕುವಾಗಿ ದೂರದ ದೃಷ್ಟಿ ಮಾಡಿ
ನೋಡುಬುಟ್ಟು ಧರೆಗೆ ದೊಡ್ಡವರು
ಆಗ ಧರೆಗೆ ದೊಡ್ಡವರು ದೊಡ್ಡಮ್ಮ ತಾಯಿಗೆ ಹೇಳುತವರೆ
ದೊಡ್ಡಮ್ಮ
ಮರುತೋಗಿ ಬುಟ್ಟಿದ್ದಿ ಕಂದಾ
ಈಗಲೀಗಾ ಕಲ್ಯಾಣ ಪಟ್ಟಣದಲ್ಲಿ
ಬಸವಣ್ಣರ ಬಕುತಿ ಸತ್ಯ ಏನು ನೋಡಿಕಂಡು
ಬಸವಣ್ಣನಿಗೆ ವರಕೊಟ್ಟು
ಕಲ್ಯಾಣ ಪಟ್ನ ಬಿಟ್ಟು ಬರೋವಾಗ
ಕಲ್ಯಾಣದ ಕಡೆ ಕೈಲಾಸದ ಭಾಗಲಲ್ಲಿ
ಲಿಂಗ ಜಂಗುಮಕೆ ಸೇರದಿದ್ದಂತ ಮಗ
ಬಸವಲಿಂಗಯ್ಯಾ ಎನುವಂತ ಶಿಶು ಮಗ
ಆ ಕಲ್ಯಾಣದ ಪಟ್ಟಣದ ಕಡೆಬಾಗುಲಲ್ಲಿ
ವಾಸುವಾಗಿದ್ದ ಕಂದಾ
ದೇವರು ದೈಯ್ಯ ಎಲ್ಲಾ ಈ ಮರಳುಲಿಂಗವೇ ಅಂತೇಳಿ
ಮರುಳು ಲಿಂಗ ಮಾಡಿಕಂಡೂ
ಮರಳು ಲಿಂಗಕ್ಕೆ ಕೈ ಎತ್ತಿ ಮುಕ್ಕಂಡು
ಆಸಾಸಿ ಅಡ್ಡ ಬಿದ್ದು
ಮರಬೇಡುತಿದ್ದ ಮಗ
ಆ ಮಗನ ತಕಂಡು ಬಂದು ಕಂದಾ
ಈಗಲೀಗಾ ಬಸವಾಚಾರಿ ಹೊಟ್ಗೆ ಹಾಕಿವ್ನಿ
ಮುದ್ದಮ್ಮನ ಗರ್ಭುಕ್ಕೆ ಸೇರಿಸಿವ್ನಿ
ಆ ಕಲ್ಯಾಣ ಪಟ್ಟಣದಲ್ಲಿ
ಬಸವಲಿಂಗಯ್ಯನಾಗಿದ್ದ
ಭೂಮಿಯಾವದಪ್ಪ
ಅವರು ವಾಸಮಾಡುವಂತ
ಸ್ಥಳ ಯಾವುದು ಜಗತ್ತು ಗುರುವೆ ಎಂದು ಕೇಳಿದರು
ದೊಡ್ಡಮ್ಮ
ಎಲ್ಲಿ ವಾಸಮಾಡ್ತರೇ
ಎಲ್ಲಿ ಅವರೆಂದು ಕೇಳ್ತಿಯ ದೊಡ್ಡಮ್ಮ
ಹೇಳ್ತಿನೀ ಕೇಳು ಕಂದಾ

ಅವರು ಹುಟ್ಟದ್ದು ನೀಲಘಟ್ಟ ಕಂದಾ
ಬೆಳದದ್ದು ಮಳವಳ್ಳಿ ಗ್ರಾಮ || ಸಿದ್ಧಯ್ಯ||

ಹೊನ್ನಾಯಕನಹಳ್ಳಿ ಅಮ್ಮ ಆದಿಹೊನ್ನಾಯಕನಹಳ್ಳಿ
ಅಮ್ಮ ಛಲಕ್ಕೆ ಮಳವಳ್ಳಿ ಗ್ರಾಮ
ಪೂಜೆಗೆ ಬಸವನಪುರ
ಅದು ಮಳವಳ್ಳಿ ತಾಲೋಕು
ಅವ್ವ ಮಾರುವಳ್ಳಿ ಗ್ರಾಮವಲ್ಲ || ಸಿದ್ಧಯ್ಯ||

ಆದಿಗೆ ಹೊನ್ನಾಯಕನಹಳ್ಳಿ
ಛಲಕ್ಕೆ ಮಳವಳ್ಳಿ ಗ್ರಾಮ
ಪೂಜೆಗೆ ಬಪ್ಪಗಣ್ಣಪುರ
ಮಳವಳ್ಳಿ ತಾಲೋಕು ಮಾರುವಳ್ಳಿ ಗ್ರಾಮದಲ್ಲಿ
ಮಾರುವಳ್ಳಿ ಗ್ರಾಮದಲ್ಲಿ ಕಂದಾ
ಬಾಚಿ ಬಸವಯ್ಯ ತಾಯಿ ಮುದ್ದಮ್ಮ
ಈಗಲೀಗ ಬಾಳು ಬಾಳಾಟದಲ್ಲಿ ಕಂದಾ
ಸ್ಥಿತಿವಂತರಾಗಿ ಪುಣ್ಯವಂತರಾಗಿ
ಲಕ್ಷ್ಮೀಕರಾಗಿ ಬಾಳಿ ಬದುಕ್ತವರೇ
ಯಾರು ಹುಟ್ಟಿದ ಮೇಲೆ?
ಕೆಂಪಚಾರಿ ಮಗ ಹುಟ್ಟಿದ ಮೇಲೆ

ಅವರು ಬಾಳು ಬಾಳಾಟದಲ್ಲಿ
ಚಂದಾಗಿ ಬಾಳಾಡುತಾರೆ || ಸಿದ್ಧಯ್ಯ||

ಬಾಳಾಟದಲ್ಲಿ ಚೆಂದಾಗಿ ಬಾಳಿ
ಬದಕ್ತವರೇ ಕಂದಾ
ನೀಲಘಟ್ಟದ ಗ್ರಾಮದಲ್ಲಿದ್ದಾಗ ಆರುಜನ ಗಂಡು
ಮಕ್ಕಳಿದ್ರು
ಆರು ಜನ ಗಂಡು ಮಕ್ಕಳಿರುವಾಗ ಅವರ್ಗೆ
ದಟ್ಟ ದರಿದ್ರವಾಗ್ಬುಟ್ಟಿತ್ತು
ಆ ದರಿದ್ರ ಇರುವಂತ ಕಾಲದಲ್ಲಿ ಉಣ್ಣಕ್ಕೆ ಅನ್ನವಿರಲಿಲ್ಲ
ಉಟ್ಕಳಕ್ಕೆ ಬಟ್ಟೆಯಿರಲಿಲ್ಲ
ಕುಡಿಯೋದಕೆ ನೀರು ಕೂಡ ಇರಲಿಲ್ಲ ದೊಡ್ಡಮ್ಮ
ಆರುವತ್ತಾರು ಗಳಿಗೇಲೂ
ಮೂವತ್ತು ಮೂರು ಟೈಮ್‌ನಲ್ಲು ಕಂದಾ
ದೇವರ್ ಗ್ಯಾನ ಮಾಡ್ತಿದ್ರು
ದುಃಖವಳಿಸಿ ದುಃಖನು ಪಡುತ್ತಿದ್ದರು
ಆ ಕಾಲದಲ್ಲಿ ನಾನೋಗಿ
ದಾನ ಧರ್ಮ ಭಿಕ್ಷ ಸಾರುಬುಟ್ಟಿ
ಓಡುಬಂದು ನನ್ನ ಪಾದ ಇಡುಕಂಡರು
ಬಸವಚಾರಿ ಮುದ್ದಮ್ಮ
ಬಡ್ತನ ಆಳು ಮಾಡಿ ಭಾಗ್ಯನ ಕೊಡ್ತಿನೀ
ಈ ನೀಲಘಟ್ಟದಲ್ಲಿ ನಿಮಗೆ ದರಿದ್ರ ಕಾಣಪ್ಪ
ನೀಲಘಟ್ಟದಲ್ಲಿ ಬಡಸ್ತಾನ ಮುದ್ದಮ್ಮ
ಈ ಊರು ಬಿಟ್ಟು ಮಾರುವಳ್ಳಿ ಗ್ರಾಮಕ್ಕೆ
ಹೋಗಿ ಸೇರಿಕ್ಕಳ್ಳಿ
ನನ್ನ ವರದಲ್ಲಿ ಕಿರಿ ಕೆಂಪಚಾರಿ ಎನ್ನುವಂತ
ಮಗ ಹುಟ್ತನೇ
ಆ ಮಗ ಹುಟ್ಟಿದ ಏಳೇ ದಿವಸಕ್ಕೆ
ಹರಬಿ ಹಣಮಾಡ್ತಿನೀ ಮೊರದ ಬಂಗಾರ ಮಾಡ್ತಿನೀ
ಹೋಗರಪ್ಪ ಅಂತೇಳಿದ್ದೀ
ನನ್ನ ಮಾತಕೇಳಬುಟ್ಟು
ಬಸವಚಾರಿ ಮುದ್ದಮ್ಮನವರು

ನೀಲಘಟ್ಟ ಬುಟ್ಟುಬುಟ್ಟು
ಅವರು ಮಾರುವಳ್ಳಿಗೆ ಬಂದರಮ್ಮ || ಸಿದ್ಧಯ್ಯ||

ನೀಲಘಟ್ಟ ಬುಟ್ಟು
ಮಾರುವಳ್ಳಿ ಗ್ರಾಮಕ್ಕೆ ಬಂದೂ
ಮಾರುವಳ್ಳಿ ಗ್ರಾಮದಲ್ಲಿ ಸೇರುವಕ್ಕಲಾದ್ರು ಕಂದಾ
ಅಲ್ಲಿಗೆ ಬಂದು ಸೇರಿದ ಮ್ಯಾಲೆ
ನನ್ನ ವರದಲ್ಲಿ ಹುಟ್ಟದ
ಏಳನೇ ಮಗ ಕೆಂಪಚಾರಿ
ಆ ಮಗ ಹುಟ್ಟಿದಮ್ಯಾಲೆ ಕಂದಾ
ಹರಬಿ ಹಣವಾಗುಬುಡ್ತು
ಮೊರದ ಬಂಗಾರವಾಗುಬುಡ್ತು
ನೇತ್ರ ನೋಡೂನಗಂಟ
ಜಾಗೀರು ಜಮೀನುಂಟಾಯ್ತು

ಅವರಿಗೆ ಸಾಲಟ್ಟಿ ಧನಗಳೂ
ಅವರಿಗೆ ಸಾಲಟ್ಟಿ ಕುರಿಗಳೂ
ಅವರಿಗೆ ಸಾಲಟ್ಟಿ ಆಡುಗಳೂ
ಸಾಲಟ್ಟಿ ಸರಳೆಮ್ಮೆ
ಅವರಿಗೆ ನೇತ್ರ ನೋಡೋನಗಂಟ
ಜಾಗೆರೀ ಜಮೀನು
ಕೊಟ್ಟಿವಿನೀ ನನ್ನ ಕಂದಾ
ಈಗ ಬಾಳುಬಾಳಾಟದಲ್ಲಿ
ಚೆಂದಾಗಿ ಬಾಳಾಡುತಾರೆ || ಸಿದ್ಧಯ್ಯ||

ಬಾಳು ಬಾಳಾಟದಲ್ಲಿ ಕಂದಾ
ಪುಣ್ಯವಂತರಾಗಿ
ಸ್ಥಿತಿವಂತರಾಗಿ
ಲಕ್ಷೀಕರಾಗಿ ಬಾಳಿಬದುಕ್ತಾವರೇ ದೊಡ್ಡಮ್ಮ

ಇಂತ ಲಕ್ಷ್ಮೀಕರ ಮನೆಗೆ ನಾನು
ಭಿಕ್ಷಿಕನಾಗಿ ಹೋಗಬೇಕು || ಸಿದ್ಧಯ್ಯ||

ಇಂತಹ ಪುಣ್ಯವಂತರ ಅರಮನೆಗೆ
ತಿರುಕನಾಗಿ ಹೋಗಬೇಕು || ಸಿದ್ಧಯ್ಯ||

ಇಂತ ಲಕ್ಷವಂತರ ಮನೆಗೆ ಕಂದಾ
ಪುಣ್ಯವಂತರ ಮನೆಗೆ
ಬಾಳವರ ಬಾಗಿಲಿಗೆ
ದಾನಕ್ಕೋಗಬೇಕು
ಪುಣ್ಯವಂತರ ಮನೆಗೆ
ನಾ ಭಿಕ್ಷಕ್ಕೆ ಹೋಗಬೇಕು
ಅವರ ಬಾಳು ಬಾಳಾಟನೆಲ್ಲ
ಕಣ್ಣಾರೆ ನೋಡಬೇಕು || ಸಿದ್ಧಯ್ಯ||

ಲಕ್ಷವಂತರ ಮನೆಗೆ
ಪುಣ್ಯವಂತರ ಮನೆಗೆ ಕಂದಾ
ದಾನಕ್ಕೆ ಹೋಗಬೇಕು
ಭಿಕ್ಷಕ್ಕೆ ಹೋಗಬೇಕು ದೊಡ್ಡಮ್ಮ
ಅವರು ಬಾಳವರ ಬಾಳಾಟ
ಎರಡು ಕಣ್ಣಿಂದ ನೋಡ್ಕಂಡು ಬರಬೇಕು
ಬಸವಚಾರಿ ಮುದ್ದಮ್ಮ ಅಂದರೆ ಕಂದಾ

ಅವರಿಗೆ ಬುಡಸ್ಥಾನ ಇರುವಾಗ
ಅಮ್ಮ ದೇವ್ರು ನೆನೆಯುತ್ತಾರೆ
ಸಿರಿತನ ಬಂದ ಮೇಲೆ ಅವರು
ದೇವ್ರ ಮರೆಯುತಾರೆ
ಇಂತ ಮರ್ತವರ ಮನೆಗೆ
ನಾ ಹೋಗಬೇಕು ಎಂದಾರಲ್ಲ || ಸಿದ್ಧಯ್ಯ||

ಬಡಸ್ತಾನ ಇರುವಾಗ ಕಂದಾ
ದೇವ್ರು ಮೇಗಳ ಗ್ಯಾನವಿತ್ತು ಮಗಳೆ
ಈಗ ಬಡಸ್ತಾನ ಹಾಳುಮಾಡುಬುಟ್ಟು
ಸಿರಿಸ್ತಾನ ಕೊಟ್ಟವಿನೀ
ಸಿರಿಸ್ತಾನ ಕೊಟ್ಟ ಮೇಲೆ ನನ್ನ ಗ್ಯಾನ
ಮಾಡರೋ ಕಾಣೆ
ಬಡ್ತಾನು ಹೋಗಿ
ಸಿರ್ತಾನ ಬಂತು ಅಂತೇಳಿ
ಎಲ್ಲಿ ನನ್ನ ಗ್ಯಾನ ಮರ್ತಿದ್ದರೂ ಗೊತ್ತಿಲ್ಲ ದೊಡ್ಡಮ್ಮ

ಅವರ ಗಂಡ ಹೆಂಡಿರು ದುಡವ
ನಾನೇ ನೋಡಲು ಬೇಕು || ಸಿದ್ಧಯ್ಯ||

ಅವರ ಗಂಡನಲ್ಲಿ ದುಡುವು
ಅವರ ಮಡದಿಯಲ್ಲಿ ಭಕ್ತಿ
ಇರುವುದೊ ಕಾಣೆ
ಕೇಳವ್ವ ನನ್ನ ಕಂದಾ
ಅವರ ಗಂಡ ಹೆಂಡ್ತಿರು ದುಡುವ
ನೋಡಬೇಕು ಎಂತ
ಧರೆಗೇ ದೊಡ್ಡಯ್ಯ
ಇಂತ ಬಸವಚಾರಿಯ ಮಗನು
ಮುದ್ದಮ್ಮನ ಮಗನೂ
ಅಮ್ಮ ಏಳನೇ ಮಗನೂ
ಎಳೆಯವನು ಕಂದಾ
ಚಿಕ್ಕವನು ನನ್ನ ಮಗನು
ಆ ಕೆಂಪಚಾರಿಯ ಮಗನ
ನಾ ದತ್ತು ಮಗನಾಗಿ ಮಾಡಬೇಕು || ಸಿದ್ಧಯ್ಯ||

ಗಂಡನಲ್ಲಿ ಭಕ್ತಿಯಿದ್ದುದೋ
ಮಡದಿಯಲ್ಲಿ ದುಡ್ಡವಿದ್ದನೋ ಕಾಣೆ
ಅವರ ಸತಿ ಪತಿ ಗಂಡ ಎಡ್ತೀರ
ಭಕ್ತಿ ನೋಡಬೇಕು ದುಡನೋಡಬೇಕು
ಸತ್ಯ ಪರೀಕ್ಷೆ ಮಾಡಬೇಕು
ಅವರ ಹೊಟ್ಟೆಲೀ ಹುಟ್ಟಿರುವಂತ
ಏಳನೇ ಮಗನು ಏಳೇ ಕೆಂಪಣ್ಣ
ಆ ಕೆಂಪಚಾರೀ ಮಗನ
ನನ್ನ ರಾಜ ಬೊಪ್ಪಣ್ಣ ಪುರದ ಮಠಮನೆಗೆ
ಆ ಮಗನ ಶಿಶುಮಗನಾಗಿ
ಪಡಕಂಡು ಬಂದು
ನಾನು ಪಡ್ಕಂಡು ಬಂದಂತಹ ಮಗನುಗೇ
ಧರೆಗೇ ದೊಡ್ಡವರಿಗೇ ದತ್ತು ಮಗ ಅನ್ನುವಂತ
ನಾಮಕರಣವನ್ನೇ ಆ ಮಗನಿಗೆ ಕಟ್ಟಿ
ಈಗಲೀಗ ನನ್ನ ರಾಜ ಬಪ್ಪಗಣ್ಣಪುರಕೆ
ಆ ಮಗನ ದತ್ತು ಮಗನ ಮಾಡ್ಕಬೇಕಿಲ್ಲ ದೊಡ್ಡಮ್ಮ
ದತ್ತು ಮಗನ ಮಾಡ್ಕಬೇಕು ಅಂದರೇ
ಆ ಕೆಂಪಚಾರಿ ಮಗ
ನನ್ನ ಮಗನಾಗಬೇಕು
ಅವರ ತಾಯಿ ತಂದೆ ಮಗನಾಗಬಾರದು
ಆ ರೀತಿ ಮಾಡ್ಕಬೇಕಲ್ಲ ದೊಡ್ಡಮ್ಮ

ಈಗ ಮಾರವಳ್ಳಿಗೆ ಹೋಗಬೇಕು
ನಾನು ಮಗನ ನಾನು ಪಡೆಯಬೇಕು || ಸಿದ್ಧಯ್ಯ||

ನಾನು ಮಾರುವಳ್ಳಿಗೆ ಹೋಗಿ
ಮಗನನ್ನೆ ಪಡಕಂಡು ನಾ ಬರಬೇಕು ನನ್ನ ಕಂದಾ
ಈ ರಾಜ ಬೊಪ್ಪಗಣ್ಣಪುರಕ್ಕೆ
ನನಗೇ ಮಗ ಆಗಬೇಕು
ಈ ಬೊಪ್ಪೇಗೌಡ್ನ ಪುರಕ್ಕೆ ನನಗೆ ಶಿಷ್ಯಾ ನಾಗಬೇಕು
ಮಗನಿಂದ ನನ್ನ ಕಂದಾ
ಹಗಲು ಪೂಜೆ ನನಗೇ
ಇರುಳು ಪೂಜೆ ನನಗೇ ಆಗಬೇಕು ನನ್ನ ಕಂದಾ
ಆ ಮಗನಿಂದ ಕಂದಾ
ನಾನು ಮುಗುತಿ ಪಡೆಯಬೇಕು || ಸಿದ್ಧಯ್ಯ||