ಗುರುವೇ ಉತ್ತರದೇಶದ ದೇವ
ಕಂಡಾಯದ ಗುರುವು
ಹೆಗಲಮ್ಯಾಲೆ ದೇವ
ಹೊತ್ತಗಂಡು ನನ್ನಪ್ಪ
ಅವರು ಎಪ್ಪತ್ತು ಮಾರುದ್ದ
ಜಡೆಗಳ ನನ್ನ ಗುರುವು
ಭೂಮಿ ಮ್ಯಾಲೆ ದೇವ
ತಾರ್ಸುತ್ತ ಗುಡುಸುತ್ತ
ಧರಾಧರನೇ ದೇವ
ಎಳಕ್ಕಂಡು ನನ್ನ ಗುರುವು
ಅವರು ರಾಜಬೋಪ್ಪಣ್ಣಪುರುವ ದೇವ
ಬೇಗದಲ್ಲಿ ಬಿಟ್ಟಾರಲ್ಲ || ಸಿದ್ಧಯ್ಯ||

ರಾಜ ಬೊಪ್ಪಣ್ಣಪುರವನ್ನ ಸ್ವಾಮಿ
ಬೇಗದಲ್ಲಿ ಬುಟ್ಟುಬುಟ್ಟು ಮಾಗುರು
ಮಂಟೇದ ಲಿಂಗಪ್ಪ
ಈಗ ಹೋಗಬೇಕು ಏನುತೇಳಿ ಧರೆಗೆ ದೊಡ್ಡವರು ಬರುವಾಗ
ದೊಡ್ಡಮ್ಮ
ಈಗ ಮಾರುವಳ್ಳಿ ಗ್ರಾಮಕ್ಕೆ ಹೋಗಿದ್ದು ಬರ್ತಿನೀ
ಬಸವಾಚಾರಿ ದುಡನೋಡ್ಕಂಡು
ಅವರ ಮಡದಿ ಮುದ್ದಮ್ಮನವರ
ಪತುವರತಾನಗಳ ನಾನಾಗಿ ತಿಳಕಂಡು
ಅವರ ಹೊಟ್ಟೇಲಿ ಹುಟ್ಟಿರ್ತಕ್ಕಂತ
ಕಿರಿ ಕೆಂಪಾಚಾರಿಗಯವರ
ಶಿಶು ಮಗನಾಗಿ ಮಾಡ್ಕಂಡು
ಬರ್ತೀನಿ ನನ್ನ ಕಂದ ದೊಡ್ಡಮ್ಮ
ನಿನಗೆ ಬಂದ ಕಷ್ಟ ಬಯಲಾಗಲಿ
ನಡುವೆ ನರಲೋಕಕ್ಕೆ ಮುತ್ತೈದೆ
ಭಾಗ್ಯ ತಂದಂತಹ ದೊಡ್ಡಮ್ಮ ತಾಯಿ
ನಿನಗೆ ಮುತ್ತೈದೆ ಭಾಗ್ಯ ಶುಭವಾಗಲೀ
ಮಗಳೇ ಅಂತೇಳಿ ಧರೆಗೇ ದೊಡ್ಡವರು
ಆ ದೊಡ್ಡಮ್ಮತಾಯಿಗೆ ಆರ್ಶಿರ್ವಾದವನ್ನೇ ಕೊಟ್ಟು

ಈಗ ರಾಜ ಬೊಪ್ಪಗಣ್ಣಪುರ ಬುಟ್ಟು
ನನ್ನ ರಾಜ ಗುರು ದಯಮಾಡಾರೆ || ಸಿದ್ಧಯ್ಯ||

ನೋಡಪ್ಪ
ರಾಜ ಬೊಪ್ಪಗಣ್ಣಪುರ ಬುಟ್ಟು ಬುಟ್ಟು
ಧರೆಗೆ ದೊಡ್ಡವರು
ಈಗಲೀಗ ತಾವಾಗಿ ಬರುವಾಗ ಗುರುವು
ಈಗ ಮಾರುವಳ್ಳಿ ಗ್ರಾಮಕ್ಕೆ ನಾನು ಹೋಗಬೇಕು ಅಂದರೇ
ನನಗೆ ಆರುವತ್ತು ವರುಷ ವಯಸಾ ಕಳುದೋಗುಬುಟ್ತು
ಮೃತ್ಯುವಿನ ಕಾಲ ಬಂದೋಯ್ತು
ಈಗ ಕಣ್ಣು ದೃಷ್ಟಿ ಸಾಲದಿಲ್ಲ
ದಾರಿ ಮಾರ್ಗವೇ ಕಾಣಸದಿಲ್ಲ
ಊರೂ ಗೊತ್ತಾಗದಿಲ್ಲ
ಮನೆಗಳ ನೆಪ್ಪು ತಿಳಿಯದಿಲ್ಲ ಅಂತೇಳಿ
ಧರೆಗೇ ದೊಡ್ಡವರು
ಬಾಳವಾಗಿ ದೃಷಟಿ ಮಡಿಕೊಂಡು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಯಾವ ದಾರಿ ಯಾವ ಮಾರ್ಗದಲ್ಲಿ
ಮಾರುವಳ್ಳಿಗೆ ಹೋಗಬೇಕು ಅಂತೇಳಿ
ಮನದಲ್ಲೆ ಯೋಚನೆ ಮಾಡ್ಕಂಡು
ಮನಸಲ್ಲಿ ಚಿಂತೆ ಪಡ್ತ ಜಗತ್ತು ಗುರುಗಳು
ಯಾವ ದಾರಿ ಮಾರ್ಗದಲ್ಲಿ
ಬತ್ತರೆ ಅಂದರೆ ಗುರುವು

ಅವರು ದಬ್ಬಳ್ಳಿ ದಾರಿಗಾಣೆ
ದಾಸು ನಾಯಕನ ದೊಡ್ಡಿಗಾಣೆ || ಸಿದ್ಧಯ್ಯ||

ಗುರುವೇ ದಬ್ಬಳ್ಳಿ ದಾರಿಗಾಣೇ
ದಾಸನಾಯ್ಕನ ಗುರುವು
ದೊಡ್ಡಿಗಾಣೆ ನನ್ನಪ್ಪ
ಚೊಟ್ನಳ್ಳಿ ಚೊರನಳ್ಳಿ
ಎಡಕ್ಕೆ ಬಿಟ್ಟವರೇ
ಬೆಟ್ಟಳ್ಳಿ ಬೇವನಳ್ಳಿ
ಬಲಕ್ಕೆ ಬುಟ್ಟವರೇ
ಗುರುವೇ ತೊರೆಕಾಡುನಳ್ಳಿ
ನಿಶಾನಿ ಮೂಲೆಗೆ ಬಿಟ್ಟುಗೊಂಡು ನನ್ನ ಗುರುವು
ಅವರು ಮಾಳಕಾಣೆ ಪುರುಕಾಣೆ
ಮಳವಳ್ಳಿಯ ಗ್ರಾಮಕಾಣೆ || ಸಿದ್ಧಯ್ಯ||

ಮಾಳುಕಾಣೆ ಪುರುಕಾಣೆ ಗುರುವು
ಮಳವಳ್ಳಿ ಗ್ರಾಮಕಾಣೆ
ಮಹಾಗುರು ಮಂಟೇದ ಲಿಂಗಾಪ್ಪಾಜಿ
ಜಗನ್‌ಜ್ಯೋತಿಯವರು

ಈಗ ಮಾರುವಳ್ಳಿ ಮನಸ್ತನಕ್ಕೆ
ದೇವರು ದಯಮಾಡುತಾರೆ || ಸಿದ್ಧಯ್ಯ||

ಮಾಳಕಾಣೆ ಗುರುವು
ಪುರಕಾಣೆ ನನ್ನಪ್ಪ
ಜಗನ್‌ಜ್ಯೋತಿ ಅಲ್ಲಮಾ ಪ್ರಭು
ಮಂಟೇದ ಲಿಂಗಯ್ಯನವರು
ಮಾರುವಳ್ಳಿ ಗ್ರಾಮಕ್ಕೆ ಬಂದೂ
ಮಾರುವಳ್ಳಿ ಗ್ರಾಮದಲ್ಲಿ ಗುರುದೇವ
ಶಿವಭಕ್ತರ ಮಠಮನೆಗೆ ಬಂದು
ಶಿವಭಕ್ತರ ಮಠಮನೆ ಒಳಗೆ ಸ್ವಾಮಿ
ಅರುಮನೆ ಮೂರು ಮನೆ
ಭಿನ್ನ ಭಿಕ್ಷ ಮಾಡಿಕಂಡೂ
ಮುತ್ತಿನ ಜೋಳಿಗ್ಗೆ
ದಾನ ಧರ್ಮ ಭಿಕ್ಷ ಇಸ್ಕಂಡು
ಭೂಮಿ ತೂಕದ ಜೋಳಗೆ ತುಂಬಸ್ಕಂಡು ಗುರುದೇವ
ಮುತ್ತುನ ಜೋಳಗೆ
ಮುಂಗೈಲಿ ಆಧಾರಮಾಡ್ಕಂಡು
ಈಗ ಕಾಕೋಳಿ ಕೂಗಿ ಲೋಕ ಬೆಳಗಾಗಿ
ಎಂಟು ಗಂಟೆ ಜಾಮುವಾಯ್ತು
ಬಸವಾಚಾರಿ ಮನೆಗೆ ಹೋಗಲಿಲ್ಲ
ಮುದ್ದಮ್ಮನವರ ಹಟ್ಟಿಗೆ ಹೋಗಲಿಲ್ಲ
ಬಸವಚಾರಿ ದುಡು ನೋಡ್ಲಿಲ್ಲ
ಅವರ ಮಡದಿ ಮುದ್ದಮ್ಮನವರ
ಷತುವರ್ತನ ನೋಡ್ಲಿಲ್ಲ
ಅವರ ಸತಿ ಪತಿ
ಗಂಡ ಹೆಂಡ್ತಿರ ದುಡ ಭಕ್ತಿ ನೋಡ್ಲಿಲ್ಲವಲ್ಲ
ಎನತೇಳಿ ಗುರುವು

ಈಗ ಮುದ್ದಮ್ಮನ ಮನೆಗೆ ನನ್ನ
ದೇವರು ದಯ ಮಾಡುತಾರೆ || ಸಿದ್ಧಯ್ಯ||

ಗುರುವೇ ಮುದ್ದಮ್ಮನ ಮನೆಗೆ ಗುರುವು
ಓಡಿ ಓಡಿ ಬಂದು ಅಲ್ಲಮ ಪ್ರಭು
ಮಂಟೇದ ಲಿಂಗಯ್ಯ ಕಂಡಾಯ್ದ ಜ್ಯೋತಿ
ಇಂತ ಬಾಚಿ ಬಸವಯ್ಯ
ತಾಯಿ ಮುದ್ದಮ್ಮ
ಪಾದ ತೊಳೀವಂತ ಪಚ್ಚೆ ಕಲ್ಲು ಗುರುವು
ನಡಟ್ಟಿಗೇ ಬಂದು ಪಚ್ಚೆ ಕಲ್ಲನ ಮ್ಯಾಲೆ
ಪಾದವ ಊರುಕ್ಕಂಡು
ಅವರು ಹಟ್ಟಿ ತೊಟ್ಟಿಗೆ ಬಂದು
ಮೂರ್ತವಾಗಿ ನಿಂತರಾಲ್ಲ || ಸಿದ್ಧಯ್ಯ||

ಬಸವಚಾರಿ ಮನೆಗೆ ಬಂದೂ
ಉತ್ತರ ದೇಶ್ದ ಕಂಡಾಯ ಹೆಗಲ ಮ್ಯಾಲೆ
ಹೊತ್ತುಕ್ಕಂಡೂ
ಬಾರ್ಸುವಂತ ತಂಬೂರಿ ತಗದು
ಎದೆ ಮೇಲೆ ಧರಿಸಿಕ್ಕಂಡು
ಎಪ್ಪತ್ತು ಮಾರುದ್ದ ಜಡೆಗಳು ಸುತ್ತಾ
ಬುಟ್ಟಗಂಡು ಧರೆಗೇ ದೊಡ್ಡವರು
ಕೈಲಿ ಜಗಟೆ ಇಡ್ಕಂಡೂ
ಮುರಳಿನ ಪವಾಡದ ಮ್ಯಾಲೆ ನಿಂತ್ಕಂಡೂ

ಅವರ ಬಾಳವರ ಬಾಳಾಟನೆಲ್ಲ
ಕಣ್ಣಾರ ನೋಡುತಾರೆ || ಸಿದ್ಧಯ್ಯ||

ನೋಡಪ್ಪ
ಧರೆಗೇ ದೊಡ್ಡೋರು ಮಂಟೇದ ಸ್ವಾಮಿಯವರು
ಆ ಬಸವಚಾರರ ನಡುತೊಟ್ಟಿಗೆ ಬಂದು
ತೊಟ್ಟಿ ಒಳಗೆ ನಿಂತ್ಕಂಡು
ಬಾಳೋರ ಬಾಳಾಟನೆಲ್ಲ
ಎರಡು ಕಣ್ಣಾರ ನೋಡ್ತ ನಿಂತಿದ್ರು
ಕಣ್ಣಿಂದ ನೋಡ್ಕಂಡು ನನ್ನಪ್ಪ
ಈಗಲೀಗ ಬಾಚಿ ಬಸವಯ್ಯ
ತಾಯಿ ಮುದ್ದಮ್ಮ
ನಿಲಘಟ್ಟದಲ್ಲಿ ವಾಸಮಾಡುವಾಗ
ಇವರಗೆ ಬಾಳ ಬಡಸ್ತಾನವಿತ್ತು
ಈಗ ಮಾರುವಳ್ಳಿ ಗ್ರಾಮಕ್ಕೆ ಬಂದು
ಸೇರ್ಕಂಡು ಮ್ಯಾಲೆ
ಬಾಳ ಪುಣ್ಯವಂತರಾಗಿ ಬಾಳ್ತವರೆ
ಬಾಳಲಿ ಬಾಳಲಿ
ಈ ಮುದ್ದಮ್ಮ ಬಾಚಿ ಬಸವಯ್ಯ
ಇನ್ನೂ ಚೆನ್ನಾಗಿ ಬದಕಲೀ
ಎನತೇಳಿ ಅವರ ಬಾಳಾಟ ಎಲ್ಲಾನು
ಕಣ್ಣಿಂದ ನೋಡ್ಕಂಡು ಗುರುವು
ಬಾಳ ಸಂತೋಷ ಪಟ್ಟಗಂಡು
ಧರೆಗೇ ದೊಡ್ಡವರು
ಅವರು ನಡುತೊಟ್ಟಿ ಒಳಗೆ ನಿಂತಿದ್ರು
ಅದೇ ಒತ್ತಿನಲ್ಲಿ ಬಸವಾಚಾರಿ
ಮಡದಿ ಮುದ್ದಮ್ಮ
ಭಾಗ್ಯವುಳ್ಳ ಮಗ ಪುಣ್ಯಶಾಲಿ ಮಗ ಕಿರಿಕೆಂಪಣ್ಣ
ನನ್ನ ಭಾಗ್ಯವುಳ್ಳ ಕೆಂಪಾಚಾರಿ ನನ್ನ ಮನೆಗೆ
ಕುಲುವೆ ಕಾರ್ಖಾನೆಯಿಂದ ಬರು ಟೈಮಾಗುಬುಡ್ತು
ಈಗ ನನ್ನ ಭಾಗ್ಯವುಳ್ಳ ಮಗನಗೆ
ಹಾಲುಕೊಡಬೇಕು ಅಂತೇಳಿ ತಾಯಿ

ಅಮ್ಮ ಹಸುವನ್ನೆ ಕಟ್ಟುಗಂಡೂ
ಕರುವನ್ನೆ ಬುಟ್ಟುಗಂಡೂ
ಕಂಚುನ್ನಂಡೆ ತಗದು
ಗುರುವೆ ಮಂಡಿಗೆ ಕೊಟ್ಟಗಂಡೂ
ತಾಯಿ ಕೈಯೆಣ್ಣೆ ಬಟ್ಟಲ ತಗದು
ಬಲಗೈನ ಒಳಗೆ ಇಡ್ಕಂಡು ಮುದ್ದಮ್ಮ
ನಾನು ಹುಟ್ಟಿರುವಂತ
ಪಟ್ಟೆ ಸೀರೆ ಗುರುವೆ
ಮಾಸೊಯ್ತದೆ ಅಂತ
ನಾನು ಹುಟ್ಟಿರುವ ದೇವ
ಸೀರೆ ನನ್ನ ಗುರುವೆ
ಕೊಳೆಯಾಯ್ತದೆ ಎಂದು
ರನ್ನದ ತ್ವಾಟಗೇ ಮೇಲೆ
ತಾನೆ ಕೂತೇಗಂಡು
ಅವಳು ಕೆಂಪಚಾರಿ ಮಗನಿಗೆ
ಕಾಮುಜೇನು ಕರಿಯುತಾಳೆ || ಸಿದ್ಧಯ್ಯ||

ಭಾಗ್ಯವುಳ್ಳಾದ ಮಗನೂ
ಕಿರೀ ಕೆಂಪಾಚಾರಿಗೆ ತಾಯಿ
ಹಾಲುಕರೀತ ಕುಳಿತಿದ್ರು ಮುದ್ದಮ್ಮ
ಹಾಲು ಕರಿವಂತ ಮುದ್ದಮ್ಮನವರ
ಯಾರು ನೋಡ್ಕಂದ್ರು ಅಂದರೇ
ಈ ಜಗನ್ನ ಜ್ಯೋತಿ ಧರೆಗೇ ದೊಡ್ಡವರು
ನೋಡ್ಕಂಡ್ರು
ಹಾಲು ಕರಿವಂತ ಮುದ್ದಮ್ಮನ ಕಣ್ಣಿಂದ
ನೋಡುಬಿಟ್ಟು
ನಾನು ಕೊಟ್ಟ ಮಗ
ನನ್ನ ಮಗನಿಗೆ ಹಾಲು ಕರಿತಾವರೆ
ಈಗಲಿಗ ನನ್ನ ಮಗನಿಗೇ
ಹಾಲ ಕರಿವಂತ ಟೈ‌ಮ್ನಲ್ಲೀ
ಈಗಲೀಗ ನಾನೇ ಬಂದು ಇವರ
ತೊಟ್ಟಿ ಒಳಗೆ ನೀತ್ತಿವ್ನಲ್ಲ
ಎನ್ನತೇಳಿ ಮಾಗುರು ಮಂಟೇದ ಲಿಂಗಪ್ಪ
ಅಯ್ಯಾ ಮಗನಿಗೆ ಹಾಲು ಕರಿವಾಗ
ಕಣ್ಣಾರ ನೋಡ್ಕಂಡು ಸಂತೋಷದ
ಗುರುವೇ ಮನದಲ್ಲಿ ಪಟ್ಕಂಡು

ನನ್ನ ಮಗನು ಕೆಂಪಣ್ಣ
ಹಾಲ ಕುಡದು ಬಾಳುತಾನೆ || ಸಿದ್ಧಯ್ಯ||

ನಿಲಘಟ್ಟದಲ್ಲಿ ವಾಸಮಾಡುವಾಗ
ಈ ಮುದ್ದಮ್ಮನ ಮಕ್ಕಳು
ಶಿವಭಕ್ತರ ಮನೇಲಿ ಕೊಟ್ಟಂತ
ಅನ್ನ ಉಣ್ಕಂಡು ಬೆಳದರು
ನನ್ನ ಮಗ ಕೆಂಪಣ್ಣ
ಆ ಸ್ಥಿತಿ ಒಳಗೆ ಬಾಳ್ತಾಯಿಲ್ಲ ಬದುಕ್ತಯಿಲ್ಲ
ನಾನು ಕೊಟ್ಟರ್ತಕ್ಕಂತ ಭಾಗ್ಯದಲ್ಲಿ
ಹಾಲು ಸಾಗ್ರವಾಗಿ ಹಾಲು ಕುಡ್ಕಂಡು
ನನ್ನ ಮಗ
ಈ ಮುದ್ದಮ್ಮನ ಮನೆ ಒಳಗೆ
ಬೆಳವಳಿಕೆ ಬೆಳೆತಾವನೇ
ಏನತೇಳಿ ಧರೆಗೇ ದೊಡ್ಡವರು
ಆಗ ಮುದ್ದಮ್ಮನವರು ಪಾದ
ತೊಳೆವಂತ ಪಚ್ಚೆ ಕಲ್ಲಿನ ಮೇಲೆ ನಿಂತ್ಕಂಡು
ಈಗ ನಾ ಬಂದು ಬಾಳ ಹೊತ್ತಾಯ್ತು
ಈಗ ಧರ್ಮ ಧಾನ ಭೀಕ್ಷ ಸಾರಬೇಕು ಅಂತೇಳಿ
ಹೋಗಿ ಬಸವಚಾರಿ ಮನೆ ಒಳಗೆ
ಧರೆಗೆ ದೊಡ್ಡವರು ಭಿಕ್ಷ ಕೇಳ್ತಾವರೇ
ಯಾರವ್ವ ನನ್ನ ಕಂದಾ
ಯಾರವ್ವ ನನ್ನ ಮಗುಳೇ
ಈ ಬಾಳೂವ ಮನೆಯಲ್ಲಿ
ಅಮ್ಮ ಬದುಕುವ ಮನೆಯಲ್ಲಿ
ಮಗಳೆ ವಾಸ ಮಾಡೋರು
ಯಾರು ನನ್ನ ಕಂದ
ಯಾರವ್ವ ಮುದ್ದಮ್ಮ
ಅಯ್ಯೋ ಧಾನವೂ ಧಾನ
ಭೀಕ್ಷವೋ ಭಿಕ್ಷ ತಾಯಿ || ಸಿದ್ಧಯ್ಯ||

ಮಗಳೇ ದಾನವ್ವ ದಾನ ಕಂದಾ
ಭಿಕ್ಷವೋ ಭಿಕ್ಷ ಧರ್ಮವೋ ಧರ್ಮ
ಎಂದವರೇ ನನ್ನ ಗುರುವು
ದಾನವ ನೀಡವ್ವ ಭಿಕ್ಷವ ನೀಡಮ್ಮ
ಕ್ವಾರಣ್ಯವ ಕಂದಾ ನೀಡವ್ವ ನನ್ನ ತಾಯಿ
ನನಗೇ ಭಿಕ್ಷ ಕೊಟ್ಟವರಿಗೇ
ಲಕ್ಷ ಭಾಗ್ಯವಾಗಲಮ್ಮ || ಸಿದ್ಧಯ್ಯ||

ನನಗೆ ದಾನಕೊಟ್ಟವರಿಗೆ
ಜ್ವಾಳಿಗೇ ಹೊನ್ನಾಗಲಪ್ಪ || ಸಿದ್ಧಯ್ಯ||

ದಾನವೋ ದಾನ ಭಿಕ್ಷವೋ ಭಿಕ್ಷ ಕಂದಾ
ಭಿಕ್ಷ ಕೊಟ್ಟವರಿಗೇ ಲಕ್ಷ ಭಾಗ್ಯವಾಗಲೀ
ದಾನ ಕೊಟ್ಟವರಿಗೇ ಕಂದಾ
ಜ್ವಾಳಿಗೇ ಹೊನ್ನಾಗಲೀ ಮುದ್ದಮ್ಮ
ಧರ್ಮ ನೀಡು ನನ್ನ ತಾಯಿ
ಭೀಕ್ಷ ನೀಡವ್ವ
ಧರ್ಮ ನೀಡು ತಾಯಿ ಎಂದರು
ಮಾಗುರು ಮಂಟೇದ ಲಿಂಗಪ್ಪ
ಆ ಜಗತ್ತು ಗುರು ಮಂಟೇದ ಸ್ವಾಮಿಯವರು
ಮುದ್ದಮ್ಮನವರ ತೊಟ್ಟಿಕಲ್ಲಿನ ಮ್ಯಾಲೆ
ನಿಂತ್ಕಂಡು
ಧರ್ಮವೋ ದಾನ ಭೀಕ್ಷವೂ ಭಿಕ್ಷ
ಅಂತೇಳಿ ಭಿಕ್ಷಾ ಸಾರ್ತನಿಂತವರೇ
ಆ ತಾಯಿ ಮುದ್ದಮ್ಮನವರು
ಹಾಲು ಕರಿತಲೇ ಕೂತವರೇ
ಅವಳಿಗೇ ದಾನವಂದರೇ ಗ್ಯಾನವಿಲ್ಲ
ಭಿಕ್ಷ ಅಂದರೇ ಲಕ್ಷ್ಯವಿಲ್ಲ || ಸಿದ್ಧಯ್ಯ||

ಅಮ್ಮ ದಾನವಂದರೇ ತಾಯಿ
ಗ್ಯಾನವೇ ಬರಲಿಲ್ಲ
ಅವಳಿಗೆ ಭಿಕ್ಷ ಅಂದರೇ
ತಾಯಿ ಲಕ್ಷ್ಯವೇ ಬರಲಿಲ್ಲ
ಅಯ್ಯಾ ಅವಳ ಸಿರಿ ಒಳಗೆ
ಅವಳ ಸಂಪತ್ತುನ ಒಳಗೆ
ಚಿನ್ನ ಬೆರಳಿ ಗುರುವು
ಭಾಗ್ಯದ ಸಂಪತ್ತಗೆ
ತಾಯಿ ಮುದ್ದಮ್ಮ
ಅವಳ ದಾನ ಧರ್ಮದ ಗ್ಯಾನ
ಮನದಲ್ಲಿ ಬರಲಿಲ್ಲ
ಅವಳಗೆ ಭಿಕ್ಷ ಅಂಬುವ ಶಬ್ದ
ಮನಸ್ಸಲ್ಲಿ ಬರಲಿಲ್ಲ
ಅವಳೊ ಹಾಲನ್ನೆ ಕರಿಯುತ್ತ
ಕುಳ್ತವಳೆ ಮುದ್ದಮ್ಮ ತಾಯಿ || ಸಿದ್ಧಯ್ಯ||

ಹಾಲು ಕರಿತ ಕುತ್ಕಂದ್ರು ಮುದ್ದಮ್ಮ
ಧರ್ಮ ಸಾರುನಗಂಟ ಸಾರುದ್ರು
ಭೀಕ್ಷ ಕೇಳನುಗಂಟ ಕೇಳುದ್ರು
ಮಹಾಗುರು ಮಂಟೇದ ಲಿಂಗಪ್ಪ
ಜಗನ್‌ಜ್ಯೋತಿ ಪಾತಾಳ ಜ್ಯೋತಿಯವರು
ಈ ಮುದ್ದಮ್ಮನಿಗೆ ದಾನ ಧರ್ಮದ
ಗ್ಯಾನವೇ ಬರ್ಲಿಲ್ಲ
ಹಾಲು ಕರಿತಲೇ ಕೂತ್ಕಂಡ್ರು
ನೋಡಿದಿಯಾ
ತಾಯಿ ಮುದ್ದಮ್ಮನವರು
ನಾನು ಬಂದು ತೊಟ್ಟಿ ಕಲ್ಲು ಮ್ಯಾಲೆ
ನಿಂತ್ಕಂಡು ಭಿಕ್ಷ ಸಾರುದ್ರು ಕೂಡಾ
ಅವಳಗೇ ಹಾಲು ಕರಿವಂತ ಚಾಕ್ರಿ
ಹೆಚ್ಚಾಯ್ತು
ಹಾಲು ಕರಿವಂತ ಚಾಕ್ರಿ ಬುಟ್ಟು ಬುಟ್ಟು
ನನ್ನ ಪಾದ ಮುಟ್ಟಿ ಶರಣೂ ಮಾಡ್ಲಿಲ್ಲ
ನನಗೇ ಭಾಗ್ಯ ಕೊಟ್ಟ ಗುರು ಬಂದ್ರು
ಅಂತೇಳಿ ನನ್ನ ಮುಖ ಕೂಡ ನೋಡ್ಲಿಲ್ಲ
ನನ್ನ ಬಾರಿ ಕಂಡಾಯಕ್ಕೆ ಕೈಮುಗುದು
ಬಾರ್ಸುವಂತ ತಂಬೂರಿಗೇ
ಗಂಧದ ಕಡ್ಡಿ ಕಸ್ಲಿಲ್ಲವಲ್ಲ
ಈ ಮುದ್ದಮ್ಮನಿಗೆ ಹಾಲು ಕರಿವಂತ
ಚಾಕ್ರಿಯೇ ಹೆಚ್ಚಾಗುಬುಟ್ತಾ
ಇವಳಿಗೆ ನನ್ನ ಮೈಮೆ ಮೈತ್ಗಾರ
ತೋರ್ಸ ಬೇಕಂತೇಳಿ ಜಗತ್ತು ಗುರು
ಧರೆಗೆ ದೊಡ್ಡಯ್ಯ

ಅವರು ಹಿಂದಲ ಪಾದ ತಗದು
ಮುಂದಕ್ಕೆ ಮಡಗವರೇ
ಗುರುವೇ ಮುಂದಲ ಪಾದ ತಗದು
ಹಿಂದಕ್‌ಎ ಮಡಗವರೇ
ಗುರುವೇ ಹಿಂದ್ಲು ಪಾದದಲ್ಲಿ
ಇನ್ನೂರು ಜಂಗು ಜಲೀರಂದವೇ
ಮುಂದ್ಲು ಪಾದದೊಳಗೆ
ಮೂನ್ನೂರು ಜಂಗು ಗಲ್ಲೀರು ಎಂದವೇ
ಅವರ ತಂಬೂರಿ ಲಾದಕೆ
ಗಗ್ಗರ್ದ ಶಬ್ಧಕ್ಕೆ ಕಂಡಾಯದ ಕೆಳಗೆ
ಧರೆಗೆ ದೊಡ್ಡವರ ಮೈಮೆ ಮೈತ್ಗಾರಕ್ಕೆ
ಅವರು ಕರಿವಂತ
ಹಸ ಗುರುವೇ ಜಲಾ ಜಲ್ಲನೆ ಬೆದಿರಿತಲ್ಲ || ಸಿದ್ಧಯ್ಯ||

ಗುರುವೇ ಕರಿವಂತ ಗುರುವು
ಹಸ ನನ್ನಪ್ಪ
ಜಲಾಜಲ್ಲನೇ ಬೆದುರೋಯ್ತು
ಆರ್ಸಂಡೆ ಒದ್ದು ಬುಡ್ತು
ಅಂಡೆ ಹೊಡದೋಯ್ತು
ಹಾಲು ಚೆಲ್ಲೋಯ್ತು
ಅವಳ ಮಂಡೆ ಕಿತ್ತೋಯ್ತು
ಮೊಳಸಂದು ತರಚೋಯ್ತು
ಅವಳ ಕೈಲಿದ್ದ ಬಳೆ ಎಲ್ಲ ವಡೆದೋದೂ
ಅವಳು ಬಲಗಡೆ ಬಿದ್ದಳಂತೆ
ಎಡಗಾಡೆ ಏಳುತಾಳೆ || ಸಿದ್ಧಯ್ಯ||