ಅಂತು ಮಗನಿಂದ ಕಂದಾ
ಮುಗುತಿ ಪಡೆಯಬೇಕು
ಈ ನರಲೋಕದ ಒಳಗೆ
ನಾನು ದೇವುರು ಆಗಬೇಕು
ಈಗ ದೇವುರು ಆಗಬೇಕಾದರೇ
ಕೇಳವ್ವ ನನ್ನ ಕಂದಾ
ಈ ಆಚಾರಿ ಮಗನ ನನ್ನ
ಮಠಕ್ಕೆ ನಾನು ತರಲೇಬೇಕು || ಸಿದ್ಧಯ್ಯ||

ನರಲೋಕಕ್ಕೆ ನಾನು ದೇವರಾಗೀ
ಬಾಳಿ ಬದುಕಬೇಕಾದರೇ ಕಂದಾ
ಈ ನರಲೋಕದ ಮಗನ್ನಾ ನನ್ನ
ಮಠಕ್ಕೆ ತಕ್ಕಂಡು ಬರಬೇಕು
ನರಲೋಕದ ಮಗನ ತಂದೂ

ನನ್ನ ರಾಜ ಬೊಪ್ಪಗಣ್ಣಪುರಕ್ಕೆ ದತ್ತು ಮಗನ
ಮಾಡ್ಕಬೇಕು
ಆ ಮಗನ್ನೆ ನನ್ನ ಮಗನ್ನ ಮಾಡ್ಕಬೇಕು ದೊಡ್ಡಮ್ಮ
ಬಸವಚಾರಿ ಮುದ್ದಮ್ಮನವರು
ಕರ್ಕಂಡು ಹೋಗಪ್ಪ ಜಗತ್ತು ಗುರುವೆ
ಧರೆಗೇ ದೊಡ್ಡಯ್ಯಾ ಮಂಟೇಸ ಲಿಂಗಪ್ಪ ಅಂತೇಳಿ
ನಾನೋಗಿ ಮಗನ ಕೇಳದೇಟಗೆಯೇ
ಮಗನ ಕೊಟ್ಟರೂ ಕಾಣೆ
ಇಲ್ಲವಾದರೇ ಮಗನ ಕೊಡೋದಿಲ್ಲ ಅಂದರೋ ಗೊತ್ತಿಲ್ಲ

ಅವರ ಗಂಡ ಹೆಂಡರ ದುಡುವ
ನಾನೇ ನೋಡಲೇಬೇಕು || ಸಿದ್ಧಯ್ಯ||

ಈಗ ಮಾರುವಳ್ಳಿ ಗ್ರಾಮಕ್ಕೆ ನಾನು
ಹೋಗಬೇಕು ಎಂದರಲ್ಲ || ಸಿದ್ಧಯ್ಯ||

ಈಗ ಮಾರುವಳ್ಳಿಗೆ ಕಂದಾ
ಹೋಗಬೇಕು ಕಂದಾ
ಬಸವಚಾರಿಯ ಕಂದಾ ಮುದ್ದಮ್ಮನವರ
ಸತ್ಯ ನೋಡಬೇಕು ದುಡುವ ನೋಡಬೇಕು
ಅವರ ಹೊಟ್ಟೆಲುಟ್ಟಿದ ಮಗನ ನಾನು
ಬಿಕ್ಷಕ್ಕೆ ಕೇಳಬೇಕು
ಅವರ ಹೊಟ್ಟೀಲುಟ್ಟಿದ ಮಗನಾ
ನಾ ಮಗನ ಮಾಡಕಬೇಕು
ಈ ಆಚಾರಿಯ ಮಗನಿಗೆ ನಾ ತಂದೆಯಾಗಬೇಕು
ಈ ಆಚಾರಿ ಮಗನು ನನಗೆ
ಶಿಷ್ಯ ಆಗಬೇಕು
ಅವರ ಸತಿಪತಿಗಳ
ಭಕ್ತಿ ದುಡುವ ನೋಡಬೇಕಾದರೆ ಕಂದಾ
ಅವರ ಹೊಟ್ಟೆಲುಟ್ಟಿದ ಮಗನಾ
ನಾ ಕೇಳಬೇಕಾದರೆ ಕಂದಾ
ಈ ರಾಜ ಬೊಪ್ಪೇಗಣ್ಣಪುರದ
ಈಗ ಬಿಡ್ತೀನಿ ದೊಡ್ಡಮ್ಮ

ನಾನು ಮಾರುವಳ್ಳಿ ಗ್ರಾಮಕ್ಕೆ
ಈಗ ಹೋಗುತ್ತೀನಿ ಎಂದರಲ್ಲ || ಸಿದ್ಧಯ್ಯ||

ಮಾರುವಳ್ಳಿ ಗ್ರಾಮಕ್ಕೆ ಕಂದಾ
ಈವಾಗ ಹೋಯ್ತಿನಿ ಕಂದ
ಹೋಯ್ತಿನಿ ಮಗಳೇ ದೊಡ್ಡಮ್ಮ ಎಂದರು
ಧರೆಗೇ ದೊಡ್ಡವರ ಮಾತುಕೇಳಿ
ದುಡವುಳ್ಳ ದೊಡ್ಡಮ್ಮ ತಾಯಿ
ಧರೆಗೆ ದೊಡ್ಡವರಿಗೆ ಕೈಮುಗಿದು
ಗುರುದೇವ
ಎಂತ ಮಾತು ಎಂತ ವಾರ್ತೆ ಹೇಳಿದ್ರಿಯಪ್ಪ
ಈ ಭೂಮಿ ಭೂಲೋಕ ನಡುವೆ
ನರಲೋಕದಲ್ಲಿ ಸ್ವಾಮಿ
ಈಗಲೀಗ ನರಮಾನವರು ಮಗನ
ಪಡ್ಕಂಡು ಬರಬೇಕು
ನಾಣು ಪಡ್ಕಂಡು ಬಂದ ಮಗನಿಗೆ
ನಾನು ತಂದೆಯಾಗಬೇಕು
ಅವರು ತಾಯಿ ತಂದೆ ಬುಡ್ಸಬೇಕು
ನನಗೇ ಮಗನು ಮಾಡ್ಕಬೇಕು
ನರಲೋಕದಲ್ಲಿ ಬಸವಚಾರಿ ಮಗನು
ಮುದ್ದಮ್ಮನ ಮಗನಾ
ದಾನಕ್ಕೆ ಬೀಕ್ಷಕ್ಕೆ ಕೇಳಕ್ಕಂಡು
ಬರ್ತಿನೀ ಎಂದು ಕೇಳ್ತಿರೀಯಲ್ಲಪ್ಪಾ
ಅಣ್ಣಯ್ಯ
ಈ ನರಲೋಕದಲ್ಲಿ ಕೀಳೆ ಮೇಲೆ
ಹುಟ್ಟಿದಂತಹ ನರಮಾನವರು
ಅಪ್ಪಾ ಕಟ್ಟಿದ ಮನೆಯಾ
ಅಪ್ಪಾ ಬಿತ್ತಿದ ಬೆಳೆಯ

ಹೆತ್ತಂತ ಮಗನಾ ಸಾಕಿದಂತ ಮಗನಾ
ಅಯ್ಯ ಕರ್ಕಂಡೋಗು ತಂದೆ
ಕರ್ಕಂಡೋಗಪ್ಪ ಧರೆಗೆ ದೊಡ್ಡಯ್ಯ
ಹಾಗಂದು ನನ್ನ ಗುರುವು
ಅಪ್ಪ ಹುಟ್ಟಿದ ಮಗನಾ ದೇವ
ಯಾರು ತಾನೇ ಕೊಟ್ಟಾರಪ್ಪ || ಸಿದ್ಧಯ್ಯ||

ಹುಟ್ಟಿದಂತ ಮಕ್ಕಳ ಸ್ವಾಮಿ
ಕರ್ಕಂಡೋಗಿ ಜಗತ್ತು ಗುರು
ಧರೆಗೆ ದೊಡ್ಡವರೆ ಎನುತೇಳಿ
ಯಾರು ತಾನೇ ನಿಮಗೆ ಮಕ್ಕಳು ಕೊಟ್ಟಾರಪ್ಪ
ಯಾರು ತಾನೇ ಮಗನ ಕರ್ಕಂಡು
ಹೋಗು ಅಂತ ಕೊಟ್ಟರು ತಂದೆ
ಈಗಲೀಗ ಆಚಾರಿ ಮಗನ
ನೀವು ಖಂಡಿತವಾಗುಲೂ ಪಡಿಬಲ್ಲಿರೀಯಪ್ಪ ಎಂದರು
ದೊಡ್ಡಮ್ಮ
ಈ ಮಾತು ಆ ವಾರ್ತೆ ಹೇಳಿದ್ದಿಯಲ್ಲ
ಯಾತಕ್ಕವ್ವ
ಕಟ್ಟದ್ಮನೆ ಬಿತ್ತಿದ ಬೆಳೆ
ಹೆತ್ತ ಮಗನ ಯಾರು ಕೊಡೋದಿಲ್ಲ
ಎಂದು ಕೇಳ್ತಿಯಲ್ಲಮ್ಮ
ಈಗಲೀಗ ಕಲ್ಯಾಣ ಕೈಲಾಸ ಭೂಮಿ
ಭೂಲೋಕದಲ್ಲಿ
ಮುತ್ತುರವರತ್ನ ಬೆರಳಿ ಬಂಗಾರ
ಲಕ್ಷ ಕೋಟಿ ಭಾಗ್ಯವನ್ನೇ
ಈ ನರಲೋಕಕ್ಕೆ ತಂದಂತಹ ಜಗತ್ತು ಗುರು ನಾನು
ಈಗಲೀಗ ಈ ಮುತ್ತುರತುನ ಪಡೆದಂತ ಸ್ವಾಮಿಗೇ
ಹುಟ್ಟದ ಮಕ್ಕಳು ಬಾಳು ದೊಡ್ಡದ ಕಂದ
ಇದು ಎಂದಿಗೂ ದೊಡ್ಡದಲ್ಲವಲ್ಲೋ ಕಂದಾ ಎಂದರು
ಸ್ವಾಮೀ
ನೀವು ಬೆಳ್ಳಿ ಬಂಗಾರ ಮುತ್ತು ರತ್ನನೇ
ಪಡೆದಿರಬಹುದು

ಗುರುವೇ ಮತ್ತು ಮುತ್ತುಗೆ ಎಲ್ಲ ಗುರುವು
ಮಕ್ಕಳು ಮುತ್ತು ಬಾಳ ದೊಡ್ಡದು || ಸಿದ್ಧಯ್ಯ||

ಗುರುವು ಮುತ್ತು ಮುತ್ತುಗೆಲ್ಲ
ಎಂದರೆ ಗುರುವು ಮಕ್ಕಳ ಮುತ್ತು
ಬಹು ಮುತ್ತು ನನ್ನಪ್ಪ
ನೀವು ಮುತ್ತು ಪಡದಿದ್ದರೇನು
ಚಿನ್ನ ಬೆರಳಿ ಗುರುವೆ
ಬಂಗಾರ ಸ್ವಾಮಿ
ಪಡೆದಿದ್ದರೇ ಫಲವಿಲ್ಲ
ಅಪ್ಪ ಭಾಗ್ಯ ಭಾಗ್ಯಕೆಲ್ಲ ಕಂದ
ಮಕ್ಕಳ ಭಾಗ್ಯ ದೊಡ್ಡದು ಸ್ವಾಮಿ || ಸಿದ್ಧಯ್ಯ||

ಈಗಲೀಗ ಮುತ್ತು ರತ್ನಪಡೆದಿರಬಹುದು
ಮುತ್ತು ರತ್ನಗಿಂತ ಮಕ್ಕಳ ಮುತ್ತು ಅಂದರೇ
ಬಹು ಮುತ್ತು ಸ್ವಾಮಿ
ನೀವು ಚಿನ್ನ ಬೆರಳೀ ಬಂಗಾರ ಪಡೆದಿರಬಹುದು
ಮಕ್ಕಳ ಭಾಗ್ಯವೇ ದೊಡ್ಡ ಭಾಗ್ಯ
ಈ ಹೆತ್ತ ಮಗನ ಯಾರು ತಾನೇ
ಕೊಟ್ಟರಪ್ಪ ಎಂದರು ದೊಡ್ಡಮ್ಮ
ಮಕ್ಕಳ ಮುತ್ತೆ ಬಾಳ ದೊಡ್ಡದು
ಮಕ್ಕಳ ಭಾಗ್ಯವೇ ದೊಡ್ಡದು
ಹೆತ್ತ ಮಗನ ಯಾರು ಕೊಟ್ಟರು ಅಂತ ಕೇಳ್ತಿಯಲ್ಲಮ್ಮ

ನನ್ನ ಯಾವ ದೇವುರು ಎನ್ನುವದು
ಇನ್ನೂವೆ ಗೊತ್ತಾಗಲಿಲ್ಲವ || ಸಿದ್ಧಯ್ಯ||

ನನ್ನ ಯಾವ ದೇವ್ರು ಎನ್ನುವುದು
ನನ್ನ ಮಹಿಮೆ ಮೈತ್ಗಾರ
ಇನ್ನುವೇ ನನ್ನ ಕಂದಾ ಗೊತ್ತಾಗಲಿಲ್ವ ಮಗಳೇ
ನನ್ನ ಮೈಮೆ ಕಂಡವರು
ನರರ್ಗೆ ಗೊತ್ತಿಲ್ಲ ಸುರರ್ಗೆ ಗೊತ್ತಿಲ್ಲ
ಕೇಳವ್ವ ದೊಡ್ಡಮ್ಮ
ಅಮ್ಮ ಮಂದಿ ಮನುಷರಿಗೂ
ಯಾರಿಗೂ ಗೊತ್ತಿಲ್ಲ ಕೇಳವ್ವ ದೊಡ್ಡಮ್ಮ
ಈ ಭೂಮಿ ಭೂಲೋಕದಲ್ಲಿ ದುಡುವುಳ್ಳು ದೊಡ್ಡಮ್ಮ
ಈ ಪ್ರಪಂಚಕ್ಕೆ ನಾನು ಗುರುವು ನನ್ನ ಕಂದಾ

ನಾನು ಕಡೆದ ಕೆತ್ತಿದ ಲಿಂಗವಲ್ಲ
ಒಡೆದು ಮೂಡ್ದ ಲಿಂಗವಲ್ಲ || ಸಿದ್ಧಯ್ಯ||

ಕಡೆದು ಕೆತ್ತಿದ ಲಿಂಗ ನಾನಲ್ಲ
ಒಡದು ಮೂಡ್ದ ದೇವುರು ನಾನಲ್ಲ ನನ್ನ ಕಂದಾ
ದೊಡ್ಡಮ್ಮ

ಏಕುವಾಗಿ ಕಂದಾ
ಈ ಭೂಮಿಯ ಪಡೆದವರು ನಾವು || ಸಿದ್ಧಯ್ಯ||

ಭೂಮಿ ಪಡೆದವರು ನಾವು
ಭೂಲೋಕ ಪಡೆದವರು ನಾವು ಕಂದಾ
ಸೂರ್ಯ ಚಂದ್ರಾದಿಗಳ ಪಡೆದಂತ
ಜಗತ್ತು ಗುರು ನಾವು
ಈ ಭೂಮಿ ಪಡ್ಕಂದ ಬಂದಂತವರಿಗೇ
ಮಗನ ಪಡೆಯೋದು ಅತಿಶಯವಲ್ಲ ಕಂದಾ
ದೊಡ್ಡಮ್ಮ
ಈಗ ಮಾರುವಳ್ಳಿಗೆ ಹೋಯ್ತಿನಿ

ಅಮ್ಮ ಮಾರಿಸ್ವಕ್ಕ ಮುರಿಯುತ್ತೀನಿ
ಮಗನ ನಾನು ಕೇಳುತೀನೀ || ಸಿದ್ಧಯ್ಯ||

ಈಗಲೀಗ ನನ್ನ ಕಂಡಾ
ಮಾರುವಳ್ಳಿ ಗ್ರಾಮಕ್ಕೋಯ್ತಿನಿ
ಮಾರಿಸೊಕ್ಕ ಮುರಿತ್ತೀನಿ
ಮಗನ ಕೇಳ್ತೀನಿ ದೊಡ್ಡಮ್ಮ
ನನಗೇ ಭಾಗ್ಯ ಕೊಟ್ಟ ಗುರು
ಇವತ್ತು ನಮ್ಮನಗೇ ಬಂದವರೇ
ದಾನ ಸಾರ್ತವರೇ ಭಿಕ್ಷ ಕೇಳ್ತವರೇ ಅಂತೇಳಿ
ಬಾಚಿ ಬಸವಚಾರೀ
ತಾಯಿ ಮುದ್ದಮ್ಮ
ಮಗನ ಒಳ್ಳೆ ಭಗುತಿ ಒಳ್ಳೆ ದುಡದಲ್ಲಿ
ಮಗನ ತಕ್ಕಂಡು ಬಂದು
ನನ್ನ ಕೈಯಿಡಿಸಿಬುಟ್ಟು
ಪಾದಕ್ಕೆ ಶರಣುಮಾಡಿ ಕೈಯೆತ್ತಿ ಮುಗುದು
ಭಾಗ್ಯ ಕೊಟ್ಟ ಸ್ವಾಮಿ
ಮಗನಾ ಕೊಟ್ಟಿದೀನೀ
ನಾನು ಕೊಟ್ಟ ಮಗನ ಕೈಲೀ
ಶಿವಪೂಜೇ ಮಾಡ್ಸಿಕ್ಕಂಡು
ನರಲೋಕದಲ್ಲಿ ಪೂಜೇ ತಕ್ಕಂಡು
ಬಾಳೋಗಿ ತಂದೆ ಅಂತೇಳಿ
ಒಂದೇ ಭಕ್ತಿವಳಗೆ ಮಗನ ಕೊಟ್ಟು ಬಿಟ್ಟರೇ

ಅವರಿಗೇ ಈಗ ಕೊಟ್ಟಿರೊ ಭಾಗ್ಯದಲ್ಲಿ
ಇನ್ನು ಭಾಗ್ಯ ಕೊಡುವುತೀನಿ || ಸಿದ್ಧಯ್ಯ||

ಅಮ್ಮ ಈಗ ಕೊಟ್ಟಿರುವಂತ
ಭಾಗ್ಯದಲ್ಲಿ ಮಗಳೇ ಇನ್ನು ಭಾಗ್ಯ ಕಂದಾ
ಕೊಡ್ತಿನಿ ನನ್ನ ಕಂದಾ
ಇನ್ನುವೆ ಸಿರಿಯ ಕೊಡ್ತಿನಿ ನನ್ನ ಕಂದಾ
ಇನ್ನು ಲಕ್ಷ ಭಾಗ್ಯ ನಾ ಕೊಟ್ಟುಬಿಟ್ಟು ಬರುತೀನಿ
ಏನದ್ರುವೇ ಕಂದಾ
ಅಹಂಕಾರದಲ್ಲಿ ಆಡಿ ದ್ವಾರಣೆವೊಳಗೆ ಬೋದು
ಹಾಗೇ ನನ್ನನೇ ಕಳುಗದರೇ ನನ್ನ ಕಂದಾ

ಅವರ ಹಟ್ಟಿ ಹಾಳು ಮಾಡುತೀನಿ
ಕೊಟ್ಟುಗೆ ಬರುದ ಮಾಡುತೀನಿ || ಸಿದ್ಧಯ್ಯ||

ಅವರ ಹುಟ್ಟಿ ಹಾಳುಮಾಡಿ
ಅಮ್ಮ ಕೊಟ್ಟಗೇ ಬರುದ ಮಾಡಿ
ಹೇಲೋರತಿಪ್ಪೆ ಮಾಡಿ ಕಂದಾ
ನಡೆಯೋ ರೋಡು ಮಾಡಿ
ಅವರ್ಗೆ ಹಿಂದಲ ಪಾದ ನೆನಸಿ ಕಂದಾ
ಹಿಮ್ಮಡಿ ಕೊಳೆಯ ತೊಳೆಸಿ
ನಾ ಬರ್ತುನೀ ಕಂದಾ
ಅಷ್ಟು ಕಷ್ಟ ಕಂದಾ
ಅಂತ ಭಾಧಿಯು
ಅಂತ ಬಂಧಾನ
ನಾ ಕೊಟ್ರುವೇ ನನ್ನ ಕಂದಾ
ಅಮ್ಮ ನಾನು ಕೊಟ್ಟ ಮಗನ ಕಂದಾ
ನಾನು ಮಾತ್ರ ಬಿಡುವುದಿಲ್ಲ || ಸಿದ್ಧಯ್ಯ||

ಅಷ್ಟು ಭವ ಬಂಧಾನ
ಕೊಟ್ಟರು ಕೂಡ ದೊಡ್ಡಮ್ಮ
ನನ್ನ ವರದಲ್ಲಿ ಹುಟ್ಟಿರುವ
ಕೆಂಪಾಚಾರಿ ಮಗನ ಮಾತ್ರ ಕಂಡತ್ವಾಗಿ ಬುಡೋದಿಲ್ಲ
ಆ ಮಗನ ತಕ್ಕಂಡು ನನ್ನ
ರಾಜ ಬೊಪ್ಪಗೌಡ್ನಪುರದ ಮಠಮನೆಗೆ
ಬಂದೇ ಬರ್ತಿನಿ ಕಂದಾ
ದೊಡ್ಡಮ್ಮ
ಈಗ ಮಗನ ಕೊಡೊದಿಲ್ಲ ನರ್‌ಮಾನವರು
ಅಂತ ನಿನ್ನ ಬಾಯಿಲ್ಲಿ ಬಂದೋಯ್ತು
ಈಗ ನಾನು ಹೋಯ್ತಿನಿ
ಮಗನಾ ನಾನು ಕೇಳ್ತಿನಿ
ಮಗನ ಕೊಟ್ಟರೊ ಕೋಡೋದಿಲ್ಲವೋ
ಅವರ ಭಕ್ತಿ ದುಡಾ ನೋಡ್ತಿನೀ
ಹಾಗಂದು ಜಗತ್ತು ಗುರು ಧರೆಗೆ ದೊಡ್ಡಯ್ಯ
ದೊಡ್ಡಮ್ಮ
ಈಗ ನಾನೋಗಿ ಬಸವಾಚಾರಿ ಮನೇಲಿ
ನಿಂತು ಮಗನ ಕೇಳಬೇಕಾದರೇ
ಅವರಿಗೇ ಬಡಾಸ್ತಾನ ಇರುವಾಗ ಕಂದಾ
ಯಾವ ರೂಪದಲ್ಲಿ
ಹೋಗಿ ನಾನು ಭಾಗ್ಯ ಕೊಟ್ಟುಬಿಟ್ಟು ಬಂದನೋ
ಅದೇ ರೂಪನಲ್ಲೋಗಿ ನಿಂತ್ಕಂಡು ಮಗನ ಕೇಳ್ದರೇ
ಬಸವಚಾರಿ ಮುದ್ದಮ್ಮನವರು
ನನಗೇ ಭಾಗ್ಯ ಕೊಟ್ಟ ಸ್ವಾಮಿ
ಇವತ್ತು ಬಂದವರೇ
ಇದಕ್ಕೆ ಏಳು ವರ್ಷದ ಕಾಲ್ದಲ್ಲಿ ಬಂದುಸ
ಭಾಗ್ಯ ಕೊಟ್ಟುಬುಟ್ಟು ಹೋರಟೋಗಿದ್ರು
ಏಳು ವರ್ಷದ ಕಾಲ್ದಿಂದ ಇವತ್ತಿನವರೆಗೂ
ನನ್ನ ಮನೆಗೆ ಇವರು ಬಂದಿರಲಿಲ್ಲ
ಇವತ್ತು ಮಾನುಭಾವ ತುಂಬ್ದ ಸ್ವಾಮಾರಾ ಬಂದುಬುಟ್ಟುರು ಅಂತೇಳಿ
ನನ್ನ ಪಾದಕ್ಕೂ ಶರಣುಮಾಡಿ
ಕಂಡಾಯ್ಕು ಕೈಮುಗುದು
ಮಗನಾ ಕರ್ಕಂಡು ಹೋಗಪ್ಪ ಅಂದು
ಕೊಟ್ಟುಬುಡ್ತಾರೆ ದೊಡ್ಡಮ್ಮ
ಮೊದಲು ಯಾವ ರೂಪನಲ್ಲಿ ಹೋಗಿ
ಭಾಗ್ಯ ಕೊಟ್ಟುಬು‌ಟ್ಟು ಬಂದೆನೋ
ಅದೇ ರೂಪದಲ್ಲಿ ಹೋಗಬೇಕು ಅಂತೇಳಿ
ಅದೇ ರೂಪದಲ್ಲಿ ಹೋಗಬೇಕಾದರೇ

ನನ್ನ ಬಿರುದು ಲಾಂಛನವನೆಲ್ಲ
ಹೊತ್ಗಬೇಕು ಎಂದರಂತೆ || ಸಿದ್ಧಯ್ಯ||

ನನ್ನ ಬಿರ್ದು ಲಾಂಛನ ಎಲ್ಲನು ದೇವ
ನಾ ಹೊತ್ತಕ್ಕಂಡು ಹೊಗಬೇಕು
ಹಾಗಂದು ನನ್ನಪ್ಪ
ಆವರು ನೂರೊಂದು ಬಿರುದುಗಳ
ದೇಹದಲ್ಲಿ ಧರಿಸುತಾರೆ|| ಸಿದ್ಧಯ್ಯ||

ಅಯ್ಯಾ ಅರುವಾತ್ತಾರು ಕಾಸು
ಮೂವತ್ತುಮೂರು ಬಿರುದು
ಅಷ್ಟ ಖಂಡ್ಗದ ಜೋಳಗೆ
ನೆಟ್ಟಂಗೇ ತಿರುಶೂಲ
ತಾಮ್ರದ ಮೈಜ್ವಾಲೆ
ಅವರಿಗೇ ಹಕ್ಕಿಯಗೂಡೆ ಹಕ್ಕಿಯಪ್ಪಾಜಿ
ಹೊಕ್ಕಳುಗಂಟ ಹುಲಿಚರ್ಮ|| ಸಿದ್ಧಯ್ಯ||

ಗುರುವೇ ಹುಲಿಯ ಚರ್ಮ ದೇವ
ಉಟ್ಟವರೇ ನನ್ನಪ್ಪಾ
ಅವರು ಹುಲಿಯ ಚರ್ಮದೇವ
ಉಟ್ಟುಗಂಡು ಗುರುವು
ಹುಲ್ಲೆಚರ್ಮ ದೇವ ಬೆನ್ನಿಂದೆ ಬುಟ್ಟುಗಂಡು
ಅವರಿಗೆ ಹಣೆಯಲಿ ಬಸುವಂಗ
ಹಣೆಯಲ್ಲಿ ಮತ್ತಿ ಕಪ್ಪು
ಅವರಿಗೆ ಕೊರುಳು ತುಂಬ ಗುರುವು
ರುದ್ರಾಕ್ಷೆದು ಸರ ಭದ್ರಾಕ್ಷೆದು ಸರಾ
ರೂಪಾಯಿಗಾತ್ರ ದೇವ
ಸಜ್ಜೆ ಲಿಂಗವ ತಗದು ಕೊರಳಲಿ ಕಟ್ಟಗಂಡು
ಅವರು ಎಪ್ಪತ್ತು ಮಾರುದ್ಧ ಜಡೆಯ
ಬಿಚ್ಚಿ ತಾವು ಒದರಿಕೊಂಡು || ಸಿದ್ಧಯ್ಯ||

ಎಪ್ಪತ್ತು ಮಾರುದ್ದ ಜಡೆಗಳ ಸ್ವಾಮಿ
ಬಿಚ್ಚಿ ವದರುಬಿಟ್ಟು ಮಾ ಗುರು ಮಂಟೇದ ಲಿಂಗಪ್ಪ
ಜಗನ್‌ಜ್ಯೋತಿ
ಅವರು ಹೆರ್ ಜಡೆ ಬುಟ್ಟವರೇ
ಅಪ್ಪ ಕಿರುಜಡೆ ಬುಟ್ಟವರೇ
ನಾಗರ್ಜಡೆಯ ಬಿಟ್ಟೂ
ಗುರುವೇ ಎಪ್ಪತ್ತು ಮಾರುದ್ದ ಜಡೆಗಳ ನನ್ನ ಗುರುವು
ತಾರ್ಸುತ್ತ ಗುಡುಸುತ್ತ ಭೂಮಿಮ್ಯಾಲೆ ದೇವ
ಧರಧರನೇ ಎಳಕಂಡು

ಅವರು ಕೆಂಪುಲಕ್ಕಿ ಗೂಡ ತಗದು
ಎಡಗೈಲಿ ಇಡಕೊಂಡು || ಸಿದ್ಧಯ್ಯ||

ಗುರುವೇ ಕೆಂಪುಲಕ್ಕಿ ಗೂಡು
ಎಡಗೈನ ಒಳಗೆ ಇಡ್ಕಂಡು ನನ್ನಪ್ಪ
ಧರೆಗೆ ದೊಡ್ಡಯ್ಯ
ಅವರು ಹಿಂಡಿಂಡ್ಗೆ ಡೋಲ
ಬೆನ್ನಿಂದೇ ಬುಡುಗೊಂಡು
ಧರೆಗೆ ದೊಡ್ಡವರು ಮಂಟದಾ ಲಿಂಗಪ್ಪ
ಅವರು ಜಾಗಟೇಯ ಇಡಕ್ಕಂಡರು

ಡಿಕ್ಕಿಯ ತಕ್ಕಂಡರು
ಬಾರ್ಸುವ ತಂಬುರಿಯ
ಎದೆಯ ಮ್ಯಾಲೆ ಗುರುವು
ಹೊತ್ತಕ್ಕಂಡು ನನ್ನಪ್ಪ
ಅವರಗೇ ಬಲದನ ಪಾದಕ್ಕೆ ಗುರುವೇ
ಬಸುವಿನ ಪ್ರವಾಳ
ಎಡದನ ಪಾದಕ್ಕೆ ಕಬ್ಬುಣದ ಎಳುಬಾರಿ
ಮರುಳಿನ ಪಾವಾಡ ಪಾದದಲ್ಲಿ ಧರಸಿಕೊಂಡೂ
ಅವರಿಗೆ ವೀರು ಜಡೆ ಇಂಬಿ ಹಣ್ಣು
ಸ್ವಾಮಿ ಕಂಡಾಯವಲ್ಲ || ಸಿದ್ಧಯ್ಯ||