ಹೊನ್ನಯ್ಯನ ಕೇರಿಗೆ ಚನ್ನಯ್ಯ ಕೇರಿಗೆ ಬಂದು
ದಾನ ಧರ್ಮ ಭಿಕ್ಷಮಾಡಿಕಂಡು ಗುರುದೇವಾ
ಮನೆ ಮನೆಗೂ ಪಾದ ಪೂಜೆ ಮಾಡಿಸಿಕೊಂಡು
ಪಾದಕೆ ಶರಣು ಮಾಡಿಸಿಕೊಂಡು ಮಾಗುರು ಮಂಟೇದುಸ್ವಾಮಿ
ಈಗಲೀಗಾ ಹೊನ್ನಯ್ಯ ಕೇರಿ
ಚನ್ನಯ್ಯನ ಕೇರಿ ಒಳಗೆ ಗುರುದೇವಾ
ಚಿನ್ನದ ಪುಂಟೇಸ್ವಾಮಿ ಅಂತೇಳಿ ಹೆಸರನೇ ಕಟ್ಟಿಸಿಕೊಂಡು
ಇವರ ಬೀದಿಗೆ ನಾಣು ಬಂದುದಕೆ
ಅಗಲೀಗಾ ಹೊನ್ನಯ್ಯನ ಕೇರಿ
ಚನ್ನಯ್ಯನ ಕೇರಿ ಒಳಗೆ

ಚಿನ್ನದ ಮಂಟೇಸ್ವಾಮಿ ಅಂತೇಳಿ
ನಾಮಕರಣವಾಯಿತಲ್ಲ
ಇಲ್ಲೊಂದೆಸರು ಪಡಕಂಡೆ ಅನುತೇಳಿ
ಹೊನ್ನಯ್ಯನ ಕೇರಿ ಚನ್ನಯ್ಯನ ಕೇರಿ ಒಳಗೆ
ಕೇಳಿರಪ್ಪ ಕಂದಾ
ಈಗಲೀಗಾ ನನಗೆ ನಗಾರಿ ಆಗಬೇಕು
ನೌಪತ್ತಾಗಬೇಕು
ಹೂವಿನ ಕೊಂಬಿನಾ ಕಾಳೆಯಾಗಬೇಕು
ನನಗೆ ಕಳತಮಟೆಯಾಗಬೇಕು ಕಣ್ರಪ್ಪ
ಈಗಲೀಗಾ ನೀವು ಎರಡೊಕ್ಕಲ ಜನಗಳು ಸೇರಿಕಂಡು

ನನ್ನ ಆದಿ ಬಪ್ಪಗೌಡ್ನಪುರಕೆ ನೀವು
ಮಕ್ಕಳಾಗಿ ಬರಲೇಬೇಕು || ಸಿದ್ಧಯ್ಯ||

ನೋಡಪ್ಪ ಜಗತ್ತುಗುರು ಧರೆಗೆ ದೊಡ್ಡವರು
ಬಸವಚಾರಿ ಮುದ್ದಮ್ಮನಿಗೆ ಆಗಲಿಗಾ ವರ ಕೊಟ್ಟುಬಿಟ್ಟು
ಕುರುಬನ ಕಟ್ಟೆಗೋಗಿ
ಕುರುಬನ ಕಟ್ಟೆ ಲಿಂಗಯ್ಯ ಅಂತೇಳಿ
ಹೆಸರ ಕಟ್ಟಿಗಂಡು ಒಕ್ಕಲ ಮಾಡಿಕಂಡು
ಹೊನ್ನಯ್ಯನ ಕೇರಿಗೆ ಹೋಗುಬುಟ್ಟು
ಚನ್ನಯ್ಯನ ಕೇರಿಗೆ ಹೋಗುಬುಟ್ಟು
ಚಿನ್ನದ ಮಂಟೇಸ್ವಾಮಿ ಅಂತೇಳಿ
ನಾಮಕರಣ ಪಡಕಂಡು
ಅಲ್ಲೂ ಒಂದು ಗದ್ದೆಗೆ ಪೂಜೆ ಮಾಡಿಸಿಕಂಡು
ಈಗ ಎಲ್ಲಿಗೆ ಹೋಗಬೇಕು ಎನುತೇಳಿ ಧರೆಗೆ ದೊಡ್ಡವರು
ಈಗ ನನಗೆ ಕುರುಬನ ಕಟ್ಟೆ ಲಿಂಗಯ್ಯ ಅಂತ ಎಸರಾಯ್ತು
ಹೊನ್ನಯ್ಯನ ಕೇರಿ ಒಳಗೆ
ಚಿನ್ನದ ಮಂಟೇಸ್ವಾಮಿ ಅಂತ ನಾಮಕರಣವಾಯ್ತು
ಎನುತೇಳಿ ಅತಿ ಪ್ರೀತಿ ಒಳಗೆ
ಜಗತ್ತುಗುರು ಧರೆಗೆ ದೊಡ್ಡಯ್ಯ
ಈಗಲೀಗಾ ಬಪ್ಪಗೌಡ್ನಪುರಕೆ ತಾವಾಗಿ ಬರುತಿದ್ದರು
ಬಸವಚಾರಿ ಮುದ್ದಮ್ಮ
ಧರೆಗೆ ದೊಡ್ಡವರು ಕೊಟ್ಟ ಶಾಪಕೆ ಮಾತ್ರ ತಪ್ಪಿಲ್ಲ
ಮೀರಿ ಬಾಳಿಲ್ಲ
ನಿಲಘಟ್ಟ ಬಿಟ್ಟುಬಿಟ್ಟು
ಆರುಜನ ಗಂಡು ಮಕ್ಕಳು ಸೇರಿ ಕಟುಗಂಡು
ಆಗಲೀಗಾ ಮಾರುವಳ್ಳಿ ಮನಸ್ಥಾನಕ್ಕೆ ಬಂದು
ಮಾರುವಳ್ಳಿ ಮನಸ್ಥಾನದಲ್ಲಿ ಸೇರು ಒಕ್ಕಲಾಗಿ
ವಾಸಸ್ಥಾನ ಮಾಡುತಿದ್ದುರು
ಧರೆಗೆ ದೊಡ್ಡವರ ಮೈಮೆ
ಮಯ್ತಿಗಾರದಿಂದ ಗುರುವು
ಕಲ್ಯಾಣ ಪಟ್ಟಣದ
ಕಡೇಬಾಗಲಲ್ಲಿರ್ತಕಂತಾ ಬಸವಲಿಂಗೈನೇ ತಂದು
ಮುದ್ದಮ್ಮ ಹೊಟ್ಟಿಗೆ ಕೂಡಿದ್ರು
ಬಸವಚಾರಿ ಮುದ್ದಮ್ಮನ ಹೊಟ್ಟೆ ಒಳಗೆ ಗುರುವು
ಈಗಲೀಗಾ ಬಸವಲಿಂಗಯ್ಯ ಹುಟ್ಟಿದ ಕಾಲದಲ್ಲಿ ಗುರುದೇವಾ
ಆ ಬಸಚಾಚಾರಿ ಮುದ್ದಮ್ಮನಿಗೆ
ಈ ಮಗನ ಅಂದ ಚಂದಾ ರೂಪುರೇಖೆ ಕಣ್ಣಾರೆ ನೋಡುಬುಟ್ಟು
ಮಗ ಹುಟ್ಟಿದ ಮೂರು ದಿವಸಕ್ಕೆ
ಏನಂತ ನಾಮಕರಣ ಕಡ್ಸವರೆ ಅಂದರೆ
ಆರು ಜನ ಮಕ್ಕಳಿಗೆ ಕಡೆಗಾಲದಲಿ ಹುಟ್ಟುವ ಮಗ
ಸುಂದರವಾದ ಮಗ ನನ್ನ ಹೊಟ್ಟೇಲಿ ಹುಟ್ಟುಬುಟ್ಟ ಅಂತೇಳಿ ಗುರುವು

ಅವನಿಗೆ ಕೆಂಪಾಚಾರಿ ಎಂತ ಗುರುವು
ನಾಮಕರಣ ಮಾಡುತಾರೇs || ಸಿದ್ಧಯ್ಯ||

ಗುರುವೆ ಕೆಂಪಾಚಾರಿಯಂತಾ
ಮಗ ಹುಟ್ಟುದ ದೇವಾ
ಮೂರು ದಿವಸಕೆ ಗುರುವು
ಮಗನಿಗೆ ನನ ಗುರುವು
ಹೆಸರನೆ ಕಟ್ಟಿಗಂಡು
ಅವರು ಮಾರುವಳ್ಳಿ ಗ್ರಾಮದಲ್ಲಿ
ವಾಸವನ್ನೆ ಮಾಡುವಾಗ
ಮಗ ಉಟ್ಟುದಾ ದೇವಾ
ಏಳು ದಿವಸಕೆ ಗುರುವು
ಅವರಿಗೆ ಹರುಬಿ ಹಣ ಆಯಿತಲ್ಲ
ಮೊರದ ಬಂಗಾರವಾಯಿತಲ್ಲ || ಸಿದ್ಧಯ್ಯ||

ಅವರ್ಗೆ ಹರುಬಿ ಹಣವಾಗಿ
ಮರದ ಬಂಗಾರವಾಗಿ
ಮಣ್ಣು ನಿಟ್ಟಿಗೆ ದೇವಾ
ಮಾಯವನ್ನೆ ಮಾಡವರೇ
ಚಿನ್ನಾದ ಇಟ್ಟಿಗೆ ನನ್ನ
ಜಗತ್ತು ಗುರು ಕೊಟ್ಟವರೇ
ಅವರು ಮಾರ್ವಳ್ಳಿ ಗ್ರಾಮದಲಿ
ಚಂದಾಗಿ ಬಾಳಾಡುತಾರ|| ಸಿದ್ಧಯ್ಯ||

ಧರಗೆ ದೊಡ್ಡವರು ಕೊಟ್ಟ ಭಾಗ್ಯದಲ್ಲಿ ದೇವಾ
ಅವರಿಗೆ ಹರಬಿ ಹಣವೆ ಆಗುಬಿಡ್ತು
ಮೊರದ ಬಂಗಾರವೇ ಅಗಿಬುಡುತು
ಮಣ್ಣುನಿಟ್ಟಿಗೆ ಮಾಯವಾಗಿಬುಡ್ತು
ಚಿನ್ನದಿಟ್ಟಿಗೆ ಕೊಟ್ಟುರು

ಅವರಿಗೆ ಸಾಲಟ್ಟಿ ದನಗೋಳು
ಸಾಲಟ್ಟಿ ಕುರುಗೋಳು
ಸಾಲಟ್ಟಿ ಸರಳೆಮ್ಮ
ಸಾಲಟ್ಟಿ ಆಡುಗಳು
ಅವರ್ಗೆ ನೇತ್ರ ನೋಡನಗಂಟಾ ಗುರುವು
ಜಾಗಿರಿ ಜಮೀನು ಆಗಿತ್ತು
ಈ ಮಾರ್ವಳ್ಳಿ ಗ್ರಾಮಕ್ಕೆ ಅವರು
ಪುಣ್ಯವಂತರಾದರಲ್ಲ || ಸಿದ್ಧಯ್ಯ||

ಮಾರ್ವಳ್ಳಿಯ ಗ್ರಾಮಕೆ ದೇವಾ
ಅವರು ಪುಣ್ಯವಂತರಾದರು ಸ್ಥಿತಿವಂತರಾದುರು
ಲಕ್ಷಿಕರಾದುರೂ ಈಗಲೀಗಾ
ಬಾಳ ಬಾಳಾಟದಲಿ ಗುರುದೇವಾ

ಅವರು ಹೆಚ್ಚಿನ ಬಾಳಾಟದಲ್ಲಿ
ಬಾಳುತಾವ್ನೆ ಬಸವಾಚಾರಿ || ಸಿದ್ಧಯ್ಯ||

ಅವರು ಮಾರುವಳ್ಳಿ ಗ್ರಾಮದಲ್ಲಿ
ಬಾಳಾಟ ಬಾಳುತಾರೆ || ಸಿದ್ಧಯ್ಯ||

ಬಸವಚಾರಿ ಮುದ್ದಮ್ಮ
ಮಾರ್ವಳ್ಳಿ ಗ್ರಾಮದಲ್ಲಿ
ಸ್ಥಿತಿವಂತರಾಗಿ ಪುಣ್ಯವಂತರಾಗಿ
ಲಕ್ಷೀಕರಾಗಿ ಬಾಳಿಬದುಕಲಿದ್ದರೂ
ಬಾಳಿ ಬದುಕುವಾಗ ನೊಡಪ್ಪ ಜಗತ್ತು ಗುರು
ಧರೆಗೆ ದೊಡ್ಡವರು
ರಾಜ ಬಪ್ಪಗೌಡ್ನ ಪುರದಲ್ಲಿ ಗುರುವೇ
ಹುಲಿಚರ್ಮ ಹಾಸಿಗಂಡು ಉಲ್ಲೆ ಚರ್ಮ ತಗದು
ಬೆನ್ನಿಂದೆ ಬಿಟ್ಟುಗಂಡು
ಬಾರಿ ಕಂಡಾಯ ತಗುದು ಜಡಿದು
ಭೂಮಿಯನ್ನ ನಾಟಿಕಂಡು

ಅವರು ಉರಿಯ ಗದ್ದಿಗೆಯ ಮೇಲೆ
ಬಂದು ತಾವು ಕುಳಿತರಾಗ || ಸಿದ್ಧಯ್ಯ||

ಗುರುವೆ ಉರಿಯ ಗದ್ದಿಗೆಯ ಮೇಲೆ
ಬಂದು ಕೂತಗಂಡು
ಅಪ್ಪ ಮಂಟೇದಲಿಂಗಾ
ನನ್ನ ಪರಂಜ್ಯೋತಿಯವರು
ಪಾತಾಳಜ್ಯೋತಿಯವರು
ಮಗಳೆ ಬಾರವ್ವ ಬಾರವ್ವ ಕಂದಾ
ಮುತ್ತಿನ ದೊಡ್ಡಮ್ಮ ತಾಯಿ || ಸಿದ್ಧಯ್ಯ||

ನನ್ನ ದೊಡ್ಡವರ ಮನಿಯಾ
ದುಡುವುಳ್ಳೋ ದೊಡ್ಡಮ್ಮ ಬವ್ವಾ || ಸಿದ್ಧಯ್ಯ||

ಮಗಳೇ ಬಾರೊ ನನ್ನ ಕಂದಾ
ಬಾವ್ವ ದೊಡ್ಡಮ್ಮ
ಬಾರೆ ಶಿಸು ಮಗಳೆ
ಹಾಗಂದವರೆ ನನ ಗುರುವು ಧರೆಗೆ ದೊಡ್ಡಯ್ಯ
ನನ್ನ ದೊಡ್ಡವರ ಮನಿಯ ನನ್ನ
ದುಡುವುಳ್ಳ ದೊಡ್ಡಮ್ಮ ಬಾವ್ವ || ಸಿದ್ಧಯ್ಯ||

ನನ್ನ ಮಠ ಮನೆಗೆ ಕಂದಾ
ನೀನು ಓಡಿಬಾವ್ವ ಎಂದರಲ್ಲ || ಸಿದ್ಧಯ್ಯ||

ಬಾರವ್ವ ನನ ಕಂದಾ
ಬಾರಮ್ಮ ಮಗಳೇ ದುಡುವುಳ್ಳ ದೊಡ್ಡಮ್ಮ
ಓಡುಬಾವ್ವ ನನ ಕಂದಾ ಓಡುಬಾವ್ವ ಮಗಳೆ ಎಂದುರು
ಧರೆಗೆ ದೊಡ್ಡಯ್ಯ
ಮುತ್ತಿನಳ್ಳಿ ತೋಪಿನಲ್ಲಿ ದೇವಾ
ಮುಟ್ಟಾಗಿ ವರಗಿದ್ದಂತ
ದುಡುವುಳ್ಳ ದೊಡ್ಡಮ್ಮತಾಯಿ
ಇವತ್ತು ತುಂಬಿದ ಸ್ವಾಮಾರದ ದಿವಸ
ನನ ಪಡದ ಗುರು ಕೂಗಿದರಲ್ಲೊ
ಸಾಕಿದಂತ ತಂದೆ ಕರದರಲ್ಲೋ
ಈಗ ಗುರು ಕರೆದ ಮಾತಿಗೆ ನಾನಾಗಿ
ಹೊರಟು ಹೋಗಬೇಕು ಅಂತೇಳಿ ದೊಡ್ಡಮ್ಮ

ಅವಳು ತಾನ ಜಳಕ ಮಾಡಿಕಂಡು
ಸಣ್ಣ ಮುಡಿಯ ಉಟ್ಟಿಕಂಡು || ಸಿದ್ಧಯ್ಯ||

ಗುರುವೇ ತಾನ ಜಳಕ ತಾಯಿ
ಮಾಡಿಕಂಡು ದೊಡ್ಡಮ್ಮ
ಮಡಿಯ ಸೀರೆ ತಾಯೇ
ಉಟ್ಟಕಂಡು ದೊಡ್ಡಮ್ಮ
ಅವಳು ಧರೆಗೆ ದೊಡ್ಡವರ ಬಳಿಗೆ
ಓಡಿ ಓಡಿ ಬಂದು
ದುಡುವುಳ್ಳ ದೊಡ್ಡಮ್ಮ
ತನ್ನ ಧರೆಗೆ ದೊಡ್ಡವರಿಗೆ
ಬಾಗಿ ಶರಣ ಮಾಡುತಾಳೆ || ಸಿದ್ಧಯ್ಯ||

ತಾನ ಜಳಕ ಮಾಡಿಕಂಡು ದೊಡ್ಡಮ್ಮ
ಮಡಿ ಸೀರೆ ಉಟ್ಟುಕಂಡು ತಾಯಿ
ಧರೆಗೆ ದೊಡ್ಡವರ ಬಳಿಗೆ ಬಂದು
ಧರೆಗೆ ದೊಡ್ಡವರ ಪಾದ ಮುಟ್ಟಿ ಶರಣ ಮಾಡಿಬುಟ್ಟು

ನನ್ನ ಧರೆಗೆ ದೊಡ್ಡವರಿಗೆ
ಸಾಂಬುರಾಣಿ ಬೆಳಗುತಾಳೆ || ಸಿದ್ಧಯ್ಯ||

ಇಂತ ಧರೆಗೆ ದೊಡ್ಡವರಿಗೆ
ಸಾಂಬೂರಾಣಿ ಬೆಳಗಿ
ಬಾರಿಯ ಕಂಡಾಯ್ಕೆ ರಜವನ್ನೆ ಒಡೆದು
ಜಗತ್ತು ಗುರು ಮಂಡೇದ ಲಿಂಗಪ್ಪನಾ
ಪಾದಕೆ ಸಾಂಬ್ರಾಣಿ ಬೆಳಗಿ
ನಡ ಕಟಕಂಡು ಕರ ಜೋಡಿಸಿಕಂಡು
ದುಂಡಿಗೆ ನಮುಸ್ಕಾರ ಮಾಡಿಕಂಡು
ದುಡುವುಳ್ಳ ದೊಡ್ಡಮ್ಮ ತಾಯಿ

ನನ್ನ ಧರೆಗೆ ದೊಡ್ಡವರ ಮುಖದ
ದುರುದುರನೆ ನೋಡುತಾಳ || ಸಿದ್ಧಯ್ಯ||

ನನ್ನ ಮಂಟೇದ ಲಿಂಗಯ್ಯನ ಮುಕುವ
ಮಟಾಮಟನೇ ನೋಡುತಾಳೆ || ಸಿದ್ಧಯ್ಯ||

ನನ್ನ ಮಂಟೇದ
ಲಿಂಗಯ್ಯನ ಮೊಕವ
ಮಟು ಮಟನೇ ನೋಡಿ
ಲೋಕಕೆ ದೊಡ್ಡವರ
ಮಕವನ್ನೇ ತಾಯಿ
ಕಣ್ಣಾರೆ ನೋಡಿಕಂಡು
ಮಕವನ್ನೆ ತಾಯಿ
ಕಣ್ಣಾರೆ ನೋಡಿಕಂಡು
ನನ್ನ ತೋಪುನ ದೊಡ್ಡಮ್ಮ
ಎನಪ್ಪ ಗುರುವು
ಏನು ನನ್ನ ತಂದೇ
ಪಡೆದಂತಾ ಗುರುವೇ
ನನ ಸಾಕುವಂತ ನನ್ನಪ್ಪ
ನನ್ನ ಎತ್ತಲ ಚಾ‌ಕ್ರಿಗೆ ನೀವು
ಕರಿದ್ರಿಯಪ್ಪ ಮಾಯಕಾರ || ಸಿದ್ಧಯ್ಯ||

ನನ್ನ ಏನು ಕಾರಣಕಾಗಿ
ನನ್ನ ಕೂಗಿದ್ರಿಯಪ್ಪ ಧರ್ಮಾ ಗುರುವು || ಸಿದ್ಧಯ್ಯ||

ಅಣ್ಣಯ್ಯ
ಇವತ್ತು ತುಂಬುದ ಸ್ವಾಮ್ವಾರಾ
ಬಾವ್ವ ದೊಡ್ಡಮ್ಮ
ಬಾರೊ ಮಗಳೇ ಅಂತೇಳಿ
ಅತಿ ಪ್ರೇಮದಲ್ಲಿ ಬವಣಿಕೆ ಮಾಡಿ
ಕರಿದ್ರಿಯಲ್ಲೊ ತಂದೆ
ಗುರುದೇವಾ ಯಾತಕಾಗಿ ನನ್ನ ಕರಿದ್ರಿಯಪ್ಪ
ನನ್ನಿಂದ ತಮಗೆ ಏನಾಗಬೇಕು ಸ್ವಾಮಿ ಎಂದುರು
ದೊಡ್ಡಮ್ಮ
ಇವತ್ತು ಯಾತಕ್ಕೆ ಏನು ಕಾರಣ ಕರೆದಿ ಎಂದರೆ
ಹೇಳುತಿನಿ ಕೇಳು ನನಕಂದ
ದುಡುವುಳ್ಳ ದೊಡ್ಡಮ್ಮ
ಈ ಭೂಮಿ ಭೂಲೋಕ ನನ ಕಂದಾ
ಕಲ್ಯಾಣ ಕೈಲಾಸ
ನಡುವೆ ನರಲೋಕ
ಈ ಪ್ರಪಂಚನ ಪಡಕಂಡು ಬಂದಿ ಕಂದಾ
ಆದಿ ಸಕ್ತಿಯ ಪಡೆದು
ಮಲಿಯಾಳದೇವುತಿ ಪಡೆದು
ವಿಷ್ಣ ಈಶ್ವರ ಬ್ರಹ್ಮ ತ್ರಿಮೂರುತಿ
ಅಷ್ಟ ಕೋಟಿ ಜಂಗುಮರ ಪಡಕಂಡು ಕಂದಾ
ಈ ನಡುವೆ ನರಲೋಕಕೆ ನಾನು ಬರನಗಂಟಾ ಕಂದಾ
ಅರವತ್ತು ವರುಷ ನನಗೆ ವಯಸ್ಸು ಕಳೆದೋಯ್ತು
ಅರಳೋ ಮರುಳೋ ಎನುವಂತ ಕಾಲ ಬಂದೊಯ್ತು ದೊಡ್ಡಮ್ಮ

ನಾನು ಎದ್ರೆ ಕುತ್ಕಳಾಲಾರಿ
ಕೂತುಕಂದುರೆ ಏಳುಲಾರಿ || ಸಿದ್ಧಯ್ಯ||

ಮಗಳೇ ಕೂತುಕಂಡರೆ ಕಂದಾ
ಮೇಲುಕೆ ಏಳುಲಾರಿ
ಎದ್ದರೆ ಮಗಳೇ ಕೆಳೀಕೆ ಕೂರಲಾರಿ
ನನ್ನ ಕಂಡಾಯವ ತಕಂಡು
ನನ್ನ ತಂಬೂರಿ ತಕಂಡು
ಬಸವನ ಹೊಡಕಂಡು
ದಾಳವ ಹೊತ್ತುಕಂಡು
ಅವ್ವ ಯಾವುದಾರಾ ಒಂದು ಊರಿಗೆ
ದಾನಕೆ ಹೋಗುಬೇಕು
ಯಾವುದಾರೂ ಗ್ರಾಮುಕೆ
ಭಿಕ್ಷುಕೆ ಹೋಗಬೇಕು
ಆಗಂದರೆ ನನ ಕಂದಾ
ನನಗೆ ಕಣ್ಣಿರಡು ಕಾಣದಿಲ್ಲ
ಕಿವಿ ಎರಡು ಕೇಳದಿಲ್ಲ || ಸಿದ್ಧಯ್ಯ||

ದೊಡ್ಡಮ್ಮ ಅರವತ್ತು ವರ್ಷ ವಯಸ್ಸ ಕಳೆದ ಮೇಲೆ
ಎದ್ರೆ ಕೂತ್ಕಳನಾರೆ ಕೂತ್ಕಂದ್ರೆ ಎದ್ದೇಳುನಾರೆ ದೊಡ್ಡಮ್ಮ
ಈಗಲೀಗ ನನಕಂದಾ ಯಾವದಾರಾ ಒಂದು ಊರಿಗೆ
ನನ್ನ ಬಿರಿದು ಲಾಂಚಾಣ ಹೊತುಕಂಡು
ದಾಳ ತಕ್ಕಂಡು, ಕಂಡಾಯ ಹೊತುಕಂಡು
ಬಸುವನ ಕರಕಂಡು
ಯಾವೂರಿಗಾರು ಭಿಕ್ಷುಕ್ಕಾರು ದಾನಕಾರು ಹೋಗುವ ಅಂದುರೇ

ಕಣ್ಣು ಕಾಣದಿಲ್ಲ, ಕಿವಿ ಕೇಳದಿಲ್ಲ ದೊಡ್ಡಮ್ಮ
ದಾರಿಮಾರ್ಗ ಒಂದು ಕಾಣ್ಸದಿಲ್ವಲ್ಲೋ ಕಂದಾ
ಇವತ್ತಿನಾ ದಿವಸದಲ್ಲಿ ಏನು ಮಾಡಬೇಕು
ಎಂತು ಮಾಡಬೇಕು ದೊಡ್ಡಮ್ಮ

ನಮಗೆ ಸ್ವಾಮಾರ ಶುಕ್ರವಾರ
ಪೂಜೆ ಮಾಡೋರು ಇಲ್ಲ || ಸಿದ್ಧಯ್ಯ||

ಅಮ್ಮ ಸ್ವಾಮಾರ ಶುಕ್ರವಾರ ನನಗೆ
ಪೂಜೆ ಮಾಡವರಿಲ್ಲ
ಮಗಳೇ ಪೂಜೆ ಮಾಡಬೇಕೆಂದರೆ
ನನಗೆ ಪುಷ್ಮ ತರುವರಿಲ್ಲ
ಅಗ್ನಿ ತರುವರಿಲ್ಲ
ಕೇಳವ್ವ ದೊಡ್ಡಮ್ಮ
ನನ್ನ ಮಠದ ತೊಳಿಯವರಿಲ್ಲಾ
ಕಂಡಾಯ ಬೆಳಗವರು ಇಲ್ಲ || ಸಿದ್ಧಯ್ಯ||

ನನ್ನ ಮಠಮನೇ ತೊಳಿಯುವರಿಲ್ಲ ಕಂದಾ
ನನ್ನ ಕಂಡಾಯ ಬೆಳಗುವರು
ಮೊದಲಾಗಿ ಇಲ್ವಲ್ಲೋ ದೊಡ್ಡಮ್ಮ
ನಾನು ಮನಗಿರ್ತಕಂತಾ
ಹುಲಿ ಚರ್ಮ ಮಡಿಸವರಿಲ್ಲ
ನಾನು ತಪಸ್ಸು ಮಾಡುವಂತ ಕಂದಾ
ಉಲ್ಲೇ ಚರ್ಮ ಎತ್ತಿ ಮಡಗವರೇ
ಮೊದಲಾಗಿಲ್ವಲ್ಲೋ ದೊಡ್ಡಮ್ಮ
ಈ ಭೂಮಿ ಭೂಲೋಕ ನಡುವೇ
ನರಲೋಕದಲ್ಲಿ ಕಂದಾ
ಈ ರಾಜಬಪ್ಪಗೌಡ್ನಪುರದಲ್ಲಿ ನಾನು
ವಾಸಸ್ಥಾನ ಮಾಡಬೇಕಾದ್ರೆ ಮಗಳೇ

ನನಗೆ ಸ್ವಾಮಾರ ಶುಕ್ರವಾರ
ಮಗಳೇ ಪೂಜೆ ಮಾಡುವಂತ
ಮಗನ ಪಡಿಬೇಕು
ನನ್ನ ಮಠದ ತೊಳಿಯೋದಕೆ
ಒಬ್ಬ ಮಗನ ಪಡಿಯಬೇಕು
ಕಂಡಾಯ ಬೇಲಗುವದಕೆ ಶಿಷ್ಯನಾಗಲೇಬೇಕು
ನನ್ನ ಪೂಜೆ ಮಾಡೋದಕೆ
ಒಬ್ಬ ಶಿಶು ಮಗನ ಪಡಿಯಬೇಕು || ಸಿದ್ಧಯ್ಯ||

ಈಗಲೀಗ ನನ್ನ ಮಠಮನೆಗೆ ತಕ್ಕಂಥ
ಈಗಲೀಗ ಒಬ್ಬ ಶಿಶುಮಗನ ಪಡಿಬೇಕಲ್ಲಾ ದೊಡ್ಡಮ್ಮ
ನನ್ನ ಕಂಡಾಯ ಬೆಳಗುವದಕೆ
ಒಬ್ಬ ಗಂಡುಮಗನ ಪಡಿಬೇಕು
ಇದುವಲ್ಲದೆ ನನಕಂದ ದೊಡ್ಡಮ್ಮ
ಗಳಿಗೆಗೆ ನನ ಕಂದಾ ಹನ್ನೆರಡು ಸಾರಿ
ನಾನು ಭಂಗಿ ಸೇವನೆ ಮಾಡಬೇಕು

ನನಗೆ ಭಂಗಿ ಸೇದುದಕೆ
ಅಯ್ಯಾ ಕೆಂಡವನ್ನೆ ತರಲೇಬೇಕು || ಸಿದ್ಧಯ್ಯ||

ಅಮ್ಮ ಬೆಂಕಿ ಕೆಂಡಾ ತರುವುದಕೆ
ಒಬ್ಬ ಮಗನ ಪಡಿಯಲೇ ಬೇಕು || ಸಿದ್ಧಯ್ಯ||