ನನ್ನ ರಾಜ್ಯ ಬಪ್ಪಗೌಡ್ನಪುರದ
ಮಠಮನೆಗೆ ಗುರುದೇವಾ
ಈಗಲೀಗಾ ನನಗೆ ಇನ್ಯಾರಾಗಬೇಕು ಎನುತೇಳಿ
ಜಗಂಜ್ಯೋತಿಯವರು ಧರೆಗೆ ದೊಡ್ಡಯ್ಯ
ಅಗಲೀಗಾ ಬಪ್ಪಗೌಡ್ನಪುರ
ಬಿಟ್ಟು ಬಿಟ್ಟು ಗುರುದೇವಾ
ಇವತ್ತಿನಾ ದಿವಸದಲ್ಲಿ
ದೊಡ್ಡದಾದ ಮಠ ಆದಮೇಲೆ
ಈಗಲೀಗಾ ಮೂಡ ಪಡವ ತೆಂಕ
ಬಡಗಾ ಚಪ್ಪನೈವತ್ತಾರು ದೇಸದಾ
ಭಗುತಾದಿ ಭಗುತದೆಲ್ಲಾ
ನನ ಮಠ ಮನೆಗೆ ಬಂದು
ಈಗಲೀಗಾ ಕೈ ಎತ್ತಿ ಮುಗುದು
ನನ ಪಾದ ಪೂಜೆ ಮಾಡಬೇಕಾದಂತ
ಭಕ್ತುರು ಪಡಕಬೇಕಲ್ಲ
ಅಂತಪ್ಪ ಭಕ್ತರ್ನ ಎಲ್ಲೋಗಿ ಪಡಕಬೇಕು ಎನುತೇಳಿ
ಜಗತ್ತು ಗುರು ಧರೆಗೆ ದೊಡ್ಡಯ್ಯ
ರಾಜ ಬಪ್ಪಗೌಡ್ನಪುರದ ಉರಿಗದ್ದಿಗೆ ಮೇಲೆ ಕೂತ್ಕಂಡು
ಕಪಾಲದ ಮೇಲೆ ಕೈಮಡಿಕೊಂಡು
ಮನದಲಿ ಬಾಳವಾಗಿ ಚಿಂತೆಪಟ್ಟುಕಂಡು
ಬಾಳವಾಗಿ ಯತೆ ಮಾಡುಕಂಡು

ಈಗ ಬಾರಿಯ ಕಂಡಾಯ
ಹೆಗಲು ಮೇಲೆ ಹೊತ್ತುಕಂಡು
ಬಾರ್ಸುವ ತಂಬೂರಿಯಾ
ಎದೆ ಮೇಲೆ ಹೊತುಕಂಡು
ಹುಲಿಯ ಚರ್ಮ ದೇವಾ
ತಾವೆ ಉಟ್ಟಿಗಂಡು
ಹುಲ್ಲೇ ಚರ್ಮ ತಗುದು
ಬೆನ್ನಿಂದೆ ಬುಟ್ಟುಗಂಡು
ಗುರುವೇ ಬಲದನ ಪಾದಕ್ಕೆ
ಬಸುವಿನಾ ಪ್ರವಾಳ
ಎಡದನ ಪಾದಕ್ಕೆ
ಕಬ್ಬುಣದ ಎಳಬಾವಿ
ಇಂತಾ ಇಂಬಿ ಇಂಡುಗೋಲಾ
ಬಲಗೈಲಿ ಹಿಡುಕಂಡು
ಅವರು ಮುರುಳಿನ ಪಾವಾಡ
ಪಾದದಲ್ಲಿ ದರ್ಸಿಕಂಡು
ಇವರು ಕೈಲಾಸದ ಕಂಡಾಯವ
ಹೆಗಲ ಮೇಲೆ ಒತ್ತುಗಂಡು || ಸಿದ್ಧಯ್ಯ||

ಗುರುವೇ ಕೈಲಾಸದ ಗುರುವು
ಕಂಡಾಯವ ದೇವಾ
ಹೆಲಗ ಮೇಲೆ ಗುರುವು
ಹೊತ್ತುಗಂಡು ನನ್ನಪ್ಪ
ಅವರು ಮುರುಳಿನಾ ಪವಾಡ
ಪಾದ್ದಲ್ಲಿ ಬಿಟ್ಟುಗಂಡು
ಎಪ್ಪತ್ತು ಮಾರುದ್ದ
ಜಡೆಗಳ ದೇವಾ
ಬಿಕ್ಸ ಬದರಿಕಂಡು
ಗುರುವೆ ಎಪ್ಪತ್ತು ಮಾರುದ್ದ
ಜಡೆಗಳ ನನ ಗುರುವು
ತಾರ್ಸುತ್ತ ಗುಡುಸುತ್ತ
ಭೂಮಿ ಮೇಲೆ ದೇವಾ
ಧರ್ ಧರ್ನೆ ಎಳಕಂಡು
ಅವರು ನಿಲಘಟ್ಟದ ಗ್ರಾಮಕಾಣೆ
ಒಬ್ಬರೇ ದಯಮಾಡುತಾರೆ || ಸಿದ್ಧಯ್ಯ||

ಇಂಥಾ ರಾಜ ಬಪ್ಪಗೌಡ್ನಪುರ
ಬಿಟ್ಟು ಬಿಟ್ಟು ನನ್ನಪ್ಪ
ನಿಲುಗಟ್ಟುದ ದೇವಾ
ಗ್ರಾಮ ಕಾಣೆ ಸ್ವಾಮಿ
ಒಬ್ಬರೆ ಗುರುವೇ
ಬರುವ ಕಾಲದ ಒಳಗೆ
ಅಯ್ ನಿಲಘಟ್ಟದ ಒಳಗೆ
ಅರಳಿ ಕಟ್ಟೆ ಜಗಲಿ
ಹೊನ್ನರಳಿಯ ಮರ
ಮರದ ಬುಡದಲ್ಲಿ
ಅಯ್ಯ ಗಂಡನೆಸರು ಬಸವಾಚಾರಿ
ಮಡದಿ ಹೆಸರು ಮುದ್ದಮ್ಮ || ಸಿದ್ಧಯ್ಯ||

ನಿಲಗಟ್ಟದ ಬೀದಿಗಾಣೆ ಗುರುವು
ಪರಂಜ್ಯೋತಿ ಭೂಮಿ ಪಡೆದವರು
ಭೂಲೋಕ ಪಡೆದಂತಾ ಸ್ವಾಮಿ
ಜಗತ್ತು ಗುರು ಧರೆಗೆ ದೊಡ್ಡವರು ಬರುವಾಗ
ಇಷ್ಟು ಕೋಟಿ ಬಿರುದೆಲ್ಲಾನು ಧರ್ಸಿಕಂಡು
ನಿಲುಗಟ್ಟುದಾ ಗ್ರಾಮ ಕಾಣೆ
ಜಗತ್ತು ಗುರುಗಳು ಬರುತಿದ್ದುರು
ಆ ಧರೆಗೆ ದೊಡ್ಡೋರು ಬರುವಂತಾ ಕಾಲದಲ್ಲಿ
ಬಾಚಿ ಬಸವಾಚಾರಿ ಮಡದಿಯಾದ ಮುದ್ದಮ್ಮ
ನಿಲಘಟ್ಟದ ಜಗಲಿ ಮೇಲೆ ಕೂತುಗಂಡು
ಗಂಡನ ಮಕ ಮಡದಿ ನೋಡುತಾರೆ
ಮಡದಿ ಮಕ ಗಂಡಾ ನೋಡುತಾರೆ
ಯಾಕೆ ಎಂದುರೇ
ಮುದ್ದಮ್ಮ ನಿನ್ನ ತಂದಕಾಲಕ್ಕೂ
ಬಂದ ಕಾಲಕ್ಕೂ
ಮದುವೆಯಾದ ಕಾಲಕ್ಕೂ
ಶೋಭಾನವಾದ ಕಾಲಕ್ಕೂ
ಮಕ್ಕಳುಟ್ಟುದ ಕಾಲದಿಂದಾ ಮಡದಿ
ನಮ್ಮ ಸತಿ ಪತಿಗಳಿಗೆ
ಆ ಭಗವಂತ ನಮಗೆ ನಮಗೆ ಮಕ್ಕಳು ಕೊಟ್ಟುನಲ್ಲಾ

ಮಕ್ಕಳು ಕೊಟ್ಟಂತ ಶಿವಾ
ಅನ್ನ ನಮಗೆ ಕೊಡುನಿಲ್ಲ || ಸಿದ್ಧಯ್ಯ||

ಕೇಳು ಮಡದಿ ಮುದ್ದಮ್ಮ
ನಮಗೆ ಮಕ್ಕಳ ಫಲಕೊಟ್ಟಂತಾ ಶಿವನು
ನಮಗೆ ಉಣ್ಣಕೆ ಅನ್ನಕೊಡ್ನಿಲ್ಲ
ಉಡುವುದಕೆ ಬಟ್ಟೆಕೊಡುಲ್ನಿಲ್ಲ
ಕುಡಿವದಕೆ ನೀರಿಲ್ಲ
ಆರುಜನ ಗಂಡುಮಕ್ಕಳು
ತಂದೆ ಬಸವಾಚಾರಿ
ಆಗಲೀಗಾ ಹಸುವ ತಡಿಯನಾರಿಯಪ್ಪ

ಅಯ್ಯ ಕೇಳುಲೇ ನನ ಮಡದಿ
ಕೇಳುಲೇ ನನ ಮಡುದಿ
ಮಡದಿ ಮುದ್ದಮ್ಮ
ನಮಗೆ ಉಣ್ಣಕ್ಕೆ ಅನ್ನ
ನಮಗಿಲ್ಲ ಮಡದಿ
ಉಡುವುದಕೆ ಬಟ್ಟೆ
ನಮಗಿಲ್ಲ ನನ ಮಡದಿ
ಈ ಭಂಗ ಬಡುಸ್ತಾನ ನಮುಗೆ
ತಪ್ಪುಲಿಲ್ಲಾ ಎಂದುರಲ್ಲಾ || ಸಿದ್ಧಯ್ಯ||

ನಮಗೆ ಭಂಗ ಬಡುಸ್ತಾನಾ
ಇನ್ನಾದ್ರು ಮಡದಿ ತಪ್ಪುನಿಲ್ಲ ಮಡದಿ ಹಾಗಂತೇಳಿ
ಗುರುವು ಬಾಚಿ ಬಸುವಯ್ಯ

ಅವನು ಮಡದಿ ಮಕವ ನೋಡುತಾನೆ
ಗುಳುಗುಳುನೆ ಅಳುತಾನೆ || ಸಿದ್ಧಯ್ಯ||

ಕೇಳು ಮಡದಿ ಮುದ್ದಮ್ಮ
ಹಸುವಿನಾ ಬಾದಿನೆ ತಡಿಲಾರೇ ತಂದೆ
ಇವಾಗ ನಮಗೆ ಉಣ್ಣಕೆ ಅನ್ನ ಕೊಡಪ್ಪ
ಕುಡಿವುದಕೆ ನೀರು ಕೊಡಿ ಗುರುವೆ ಎನುತೇಳಿ
ಆರುಜನ ಮಕ್ಕಳು ಬಂದು
ಮುಂಭಾಗದಲ್ಲಿ ಕೂತ್ಕಂಡು
ನನ್ನ ಪಾದದ ಮೇಲೆ ಬಿದ್ದುಕೊಂಡು
ವಿಧವಿಧವಾದ ದುಃಖ ಪಡುತಾರೆ ಮಡದಿ
ಮಕ್ಕಳಾ ದುಃಖ ನಾನು
ಕಣ್ಣಾರ ನೋಡುನಾರೆ || ಸಿದ್ಧಯ್ಯ||

ಮಕ್ಕಳ ದುಃಖ ಕಷ್ಟಗಳ ಮಡದಿ
ನಾನು ಕಣ್ಣಿಂದ ನೋಡುಲಾರಿ
ಮಡದಿ ಮುದ್ದಮ್ಮ
ಈ ಮಕ್ಕಳ ಕಟ್ಟುಗಂಡು
ನಿನ್ನ ಕಟ್ಟುಗಂಡು
ಈ ನಿಲಗಟ್ಟದಲಿ ಬಾಳಿದಿಕ್ಕೆ
ಫಲವಿಲ್ಲ ಮಡದಿ
ಈ ಬಡಸ್ತಾನ ಬಂದು ನಮಗೆ
ಹನ್ನೆರಡು ವರುಷ ತುಂಬೋಯ್ತು
ಈ ಬಡತಾನ ನಾನು
ತಾಳಲಾರೆ ಎಂದರಲ್ಲ || ಸಿದ್ಧಯ್ಯ||

ಭಂಗ ಬಡಸ್ತಾನವನ್ನು ಗುರುವು
ನಾನಾಗಿ ತಾಳಲಾರೆ ಮಡದಿ ಮು‌ದ್ದಮ್ಮ
ಎಂಬುದಾಗಿ ಬಾಚಿ ಬಸವಯ್ಯ
ಕೂಲಿನಾದ್ರು ಮಾಡಿ
ಆರು ಜನ ಮಕ್ಕಳ ಸಾಕಿ ಸಲಗಬೇಕು ಎನ್ನುವ ಅಂದರೆ
ಮಾನದ ಮಳೆ ಅಂಗೈ ಅಗಲ
ಬಟ್ಟೆ ಕೂಡ ಮೊದಲಾಗಿ ಇಲ್ಲವಲ್ಲ ಎನುತೇಳಿ
ಬಾಚಿ ಬಸವಾಚಾರಿಯವರು
ಅಡಕೆ ಎಲೆ
ಉಡುಪು ಉಟ್ಟುಕಂಡು
ಉಗುನಿ ಅಂಬ ಗುರುವು
ನಡಿಗೆ ಉಡುದಾರ ಮಾಡಿಕಂಡು

ಶಿವ ಭಕುತ್ರ ಮಠಮನೆಗೆ
ಬಸವಚಾರಿ ಬಂದರಲ್ಲ || ಸಿದ್ಧಯ್ಯ||

ಗುರುವೇ ಶಿವಭಕ್ತರ ಮನೆಯ
ಮಠಮಾನಿಗೆ ಬಂದು
ಬಾಚಿ ಬಸವಯ್ಯಾ
ಗುರುವೆ ಗುರುದೇವಾ
ಅವರ ಧನ ಕಾಯದಕೆ ದೇವಾ
ತಾನಾಗಿ ಬಂದನಾಗ || ಸಿದ್ಧಯ್ಯ||

ಇಂತ ಶಿವಭಕ್ತರ ಮಠಮನೆ ಒಳಗೆ ದೇವಾ
ಧನನಾದ್ರು ಕಾದು ಗುರುದೇವಾ
ನನ್ನ ಮಕ್ಕಳ ಸಾಕಿ ಸಲಹಬೇಕೆಂತುಹೇಳಿ ಬಾಚಿ ಬಸವಯ್ಯಾ
ಆ ಶಿವಚಾರುದು ಮಠ ಮನೆಯೊಳಗೆ
ಧನ ಕಾಯ್ಕಂಡು ಕಾಲಕಳಿತಿದ್ರಂತೆ
ಕಾಳ ಕಳಿವಾಗ ಗುರುವು
ಅವರ ಮಡದಿ ಮುದ್ದಮ್ಮನಿಗೆ ದೇವಾ
ಉಡುವದಕೆ ಬಟ್ಟೆ ಇಲ್ಲದೆ
ತಿಪ್ಪೆಮ್ಯಾಗಳ ಬಟ್ಟೆ ಒಬ್ಬೆಮೇಗಳ ಚಿಂದಿ
ಒಣಿ ಒಳಗಲ ಬಟ್ಟೆ
ತರತರದ ಬಟ್ಟೆಗಳ ಎತ್ತಿಕಂಡು
ಆಗಲೀಗಾ ಗುರುವೇ ಗುರುದೇವಾ
ಸೆಣುಬಿನ ದಾರ ತಕಂಡು
ಅಂಚಿಕಡ್ಡಿ ಸೂಜಿ ಮಾಡಿಕಂಡು
ಒಂದಕ್ಕೆ ಒಂದು ಹೊಲಕಂಡು
ಮೂರು ಮೊಳ ತೊಡುವಪು ಹೊಲಕಂಡು ಮುದ್ದಮ್ಮ
ಈಗಲೀಗ ಮೂಡು ಮಳ ತೊಡಪನೆ ತಗುದು ತಾಯಿ
ಇದನ್ನಾರು ಸುತ್ತಿಕಂಡು
ನನ ಮಾನ ಮರೆಮಾಡ್ಕಬೇಕು ಅಂದರೇ
ನಡಿಗೆ ಸುತ್ತಿಕಳುವ ಅಂದರೆ
ಎದೆ ಕಾಣ್ತದೆ
ಎದೆ ಮರೆ ಮಾಡ್ಕಳುವ ಎಂದುರೇ
ನನ್ನ ಮಾನ ಕಾಣ್ತದೆ ಅಂತೇಳಿ ಮುದ್ದಮ್ಮ
ನಡಿನಿಂದ ಕೆಳೀಕೆ ಎದಿಂದ ಮೇಲಿಕೆ
ದುಂಡುಡಿಗೆ ಉಟ್ಟುಕಂಡು
ಅದೇ ಶಿವಭಕ್ತುರ ಮನೆಗೆ ಬಂದು ತಾಯಿ

ಅವಳು ರಾಗಿಯ ಬೀಸುತಾಳೆ
ಅಸಿಟ್ಟಾ ತುಂಬುತಾಳೆ|| ಸಿದ್ಧಯ್ಯ||

ರಾಗಿ ಬಿಸಿಕೊಂಡು ಅಸಿಟ್ಟಾ ತಂಬಿಗೆಗೆ ತುಂಬಿ
ಶಿವಭಕ್ತರ ಮನೇಲಿ ಕೊಟ್ಟಂತಾ
ಊಟ ಇಸುಕಂಡು ಬಂದು
ನಿಲಗಟ್ಟದ ಕಲ್ಲುಕಟ್ಟೆ ಜಗಲಿಯ ಮೇಲೆ
ಸತಿ ಪತಿ ಇಬ್ರು ಸೇರಿಕಂಡು
ಆರುಜನ ಗಂಡುಮಕ್ಕಳಿಗೆ
ವಾಸಸ್ತಾನ ಮಾಡಿಕಂಡು ಊಟ ಕೊಡುತಿದ್ರಂತೆ
ಶಿವಭಕ್ತರ ಮನೆ ಊಟ ಇಸ್ಕಂಡು ಬಂದು
ಆರು ಮಂದಿ ಮಕ್ಕಳಿಗೆ ಕೊಡುವಂತ ಟೈಮಿನಲ್ಲಿ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಅವರು ನಿಲಗಟ್ಟದ ಬೀದಿವೊಳಗೆ
ದಾನ ಧರ್ಮ ಸಾರುತಾರೆ || ಸಿದ್ಧಯ್ಯ||

ಗುರುವೆ ನಿಲಗಟ್ಟದ ಗುರುವು
ಬೀದಿ ಒಳಗೆ ದೇವಾ
ದಾನ ಸಾರುತ್ತ
ಭಿಕ್ಷಾ ಸಾರುತ್ತ
ಅಪ್ಪಾಜಿ ಗುರುವು
ಕಂಡಾಯದ ಮೂರುತಿ
ಈ ಬಸವಚಾರಿಯವರು ಮುದ್ದಮ್ಮನವರು
ವಾಸಸ್ತಾನ ಗುರುವು
ಮಾಡುವ ದಿವಸ

ಅವರು ಅರಳಿ ಕಟ್ಟೆ ಜಗಲಿಯ
ಕಣ್ಣಾರೆ ನೋಡಿಕಂಡುರು || ಸಿದ್ಧಯ್ಯ||

ನಿಲಘಟ್ಟದ ದೇವಾ
ಅರಳಿ ಕಟ್ಟೆ ಜಗಲಿ ಕಣ್ಣಿಂದ ನೋಡಿಬುಟ್ಟು
ಪರಂಜ್ಯೋತಿ ಪಾವನ ಮೂರುತಿ
ಈ ಧರೆನೆಲ್ಲ ಆಳಿಬಾಳಿ ಬಂದಿರುವಂತ ಜಗತ್ತು ಗುರು

ಅವರು ಅರಳಿಕಟ್ಟೆ ಜಗಲಿಗೆ
ನನ್ನ ಮಾಯ್ಕಾರ ಬರುವುತಾರೆ || ಸಿದ್ಧಯ್ಯ||

ಗುರುವೇ ಅರಳಿ ಕಟ್ಟೆಯ
ಜಗುಲಿಗೆ ದೇವಾ
ತಾವೆ ಬಂದವರೆ
ಪರಂಜ್ಯೋತಿಯವರು
ಪಾತಾಲ ಜ್ಯೋತಿಯವರು
ಅವರು ಅರಳಿಕಟ್ಟೆ ಗುರುವು
ಜಗಲಿ ಮೇಲೆ ದೇವಾ
ಬಂದು ನಿಂತುಕಂಡು

ಅವರು ದಾನ ದರುಮ ಸಾರುತಾರೆ
ಧರ್ಮ ಗುರು ಮಂಟೇದು ಸ್ವಾಮಿ || ಸಿದ್ಧಯ್ಯ||

ದಾನವೊ ದಾನ ಭಿಕ್ಷುವೋ ಭಿಕ್ಷ ಎನುತೇಳಿ
ದಾನ ಸಾರಿದ್ರು ಭಿಕ್ಷೆ ಕೇಳಿದ್ರು
ಜಗತ್ತು ಗುರು ಧರೆಗೆ ದೊಡ್ಡಯ್ಯ
ಧರ್ಮ ದಾನ ಭಿಕ್ಷಸಾರಿದ ಕಾಲದಲ್ಲಿ
ಬಸವಾಚಾರಿ ಮುದ್ದಮ್ಮನವರು
ಧರೆಗೆ ದೊಡ್ಡವರ ಪಾದ ಮಟ ಮಟನೇ ನೋಡಿದ್ರು
ದೇವಲೋಕದ ಜಂಗುಮರ ಮಕವಾ
ಕಣ್ಣಿಂದ ನೋಡಿಕಂಡ್ರು ಬಾಚಿ ಬಸವಯ್ಯಾ
ನೀತಿಯುಳ್ಳ ಮುದ್ದಮ್ಮ

ಅಯ್ಯಾ ಗುಡು ಗುಡನೆ ಬಂದರಂತೆ
ಗುರುವಿನ ಪಾದದ ಮೇಲೆ ಬಿದ್ದರಂತೆ || ಸಿದ್ಧಯ್ಯ||

ಗುಡುಗುಡನೆ ಬಂದು
ಜಗಂಜ್ಯೋತಿ ಧರೆಗೆದೊಡ್ಡವರ
ಪಾದದ ಮೇಲೆ ತಾಯಿ
ಬಸವಚಾರಿ ಮುದ್ದಮ್ಮ
ಇಬ್ಬುರು ಬಂದು ಎರಡು ಪಾದ ಇಡಕಂಡು
ಗುರುದೇವಾ
ನಾವು ಹುಟ್ಟಿ ಬೆಳೆದ ಕಾಲದಿಂದಾ
ಒಂದು ದಿವಸಕ್ಕೆ ಮೂವತ್ತು ಸತಿ ಕೂಡ
ನಮ್ಮ ಕಷ್ಟಕ್ಕೆ ಯಾವ ದೇವರು
ಇಲ್ವಪ್ಪ ಇಲ್ವಪ್ಪ ಅಂತೇಳಿ
ಹುಲ್ಲುದೇವುರು ಕಲ್ಲು ದೇವುರು
ಕಂಡ ಕಂಡಾ ದೇವರುಗಳಿಗೆಲ್ಲ
ಕೈ ಎತ್ತಿ ಮುಗಿತಿದ್ದೊ
ಯಾವ ದೇವರು ನಮ್ಮ ಬಳಿಗೆ ಬಂದು
ದಾನ ಧರ್ಮ ಭಿಕ್ಷಾ ಸಾರ್ಲಿಲ್ಲಪ್ಪ
ಇವತ್ತು ತುಂಬಿದ ಸ್ವಾಮಾರ
ಈ ಕಲ್ಲುಕಟ್ಟೆ ಜಗಲಿಗೆ ಬಂದು
ಧರ್ಮ ನೀಡಮ್ಮ ಬಿಕ್ಷಾ ನೀಡ್ರಪ್ಪ
ಎಂದು ಕೇಳ್ತಿರಲ್ಲ ದೇವಾ

ಅಪ್ಪ ಏನು ಧರ್ಮ ನಿನಗೆ ದೇವಾ
ನಾನಾಗಿ ಕೊಡಲಪ್ಪ || ಸಿದ್ಧಯ್ಯ||

ಏನು ಧರ್ಮ ದಾನ ಕೊಡವ ದೇವಾ
ಏನು ಭಿಕ್ಷ ಕೊಡುವುದಪ್ಪ ಎಂದುರು
ನಮಗೆ ಬಡಸ್ತಾನ ಬಂದು
ಹನ್ನೆರಡು ವರುಷ ತಂಬೋಯ್ತು ದೇವಾ
ಹನ್ನೆರಡು ವರುಷದಿಂದಾ
ಎಲ್ಲಾ ದೇವರುಗಳಿಗೂ ಕೈಎತ್ತಿ ಮುಗಿತೀವಿ ಸ್ವಾಮಿ
ಯಾವ ದೇವರೂ ಕೂಡ
ನಮ್ಮ ಕಷ್ಟಕ್ಕೆ ಬಂದು
ಬಡಸ್ತಾನ ಹಾಳುಮಾಡುಬುಟ್ಟು
ಭಾಗ್ಯಕೊಡುವಂತ ದೇವರು
ಒಬ್ಬರು ಬರ್ಲಿಲ್ಲಾ
ದೇವಾ ಕಟ್ಟಕಡೆಗಾಲದಲ್ಲಿ
ನೀವಾದ್ರು ಬಂದಿದ್ದಿರಿ
ಈ ಬಡಸ್ತಾನ ತಡಕಳನಾರೋ ಗುರುವೇ
ಈ ಬಡಸ್ತಾನ ದೂರಮಾಡಿಬುಟ್ಟು
ಭಾಗ್ಯ ಕೊಟ್ಟು ಕಾಪಾಡು ದೇವಾ ಎನುತೇಳಿ

ನನ್ನ ಧರೆಗೆ ದೊಡ್ಡವರ ಪಾದುಕೆ
ಕೈ ಎತ್ತಿ ಮುಗುದರಾಗ || ಸಿದ್ಧಯ್ಯ||

ನನ್ನ ಧರೆಗೆ ದೊಡ್ಡವರ
ಪಾದಕೆ ಗುರುವು
ಕೈ ಎತ್ತಿ ಮುಗುದವರೆ
ಪಾದಕೆ ಗುರುವು
ಶರಣನೇ ಮಾಡವರೆ
ಅವರ್ಕಣ್ಣೀರಿನೊಳಗೆ ನನ್ನ
ಗುರುಪಾದ ತೊಳೆದರಲ್ಲ || ಸಿದ್ಧಯ್ಯ||