ಕಣ್ಣೀರಿನಲ್ಲಿ ಸ್ವಾಮಿ
ಪಾದ ತೊಳೆದುಬುಟ್ಟು
ಬಸವಾಚಾರಿ ಮುದ್ದಮ್ಮನವರು
ಜಗತ್ತು ಗುರುಗಳ ಮುಂಭಾಗದಲಿ
ಪಾದ ಜೋಡಿಸಿಕಂಡು
ಕಣ್ಣುನೇತ್ರ ಮುಚ್ಚಿಗಂಡು
ಕೈ ಎತ್ತಿ ಮುಕ್ಕಂಡು
ವಿಧವಿಧವಾದ ಸಂಕಟ ಪಟ್ಟುಬುಟ್ರಂತೆ
ಆ ಬಸವಚಾರಿ ಮುದ್ದಮ್ಮನ
ದುಃಖ ಸಂಕಟಗಳ ಕಣ್ಣಿಂದ ನೋಡುಬುಟ್ಟು
ಜಗತ್ತು ಗುರುಗಳಾಗಿರ್ತಕಂತ ಧರೆಗೆ ದೊಡ್ಡವರು
ಪಾಪ
ಇವರು ಯಂತಾ ಬಡಸ್ತಾನದಲಿ
ಬಾಳಿ ಬದುಕಿರಬಹುದು
ಹನ್ನೆರಡು ವರ್ಷದ ಕಾಲದಿಂದಾ
ಇಷ್ಟೇ ಬಡಸ್ತಾನದಿಂದ ಬಾಳಿ ಬದುಕುತೀವಿ ಅಂತೇಳಿ
ನನ್ನ ಪಾದದಲ್ಲೇ ಕಣ್ಣೀರ ತೋಳ್ದು ಬಿಟ್ರಲ್ಲಾ
ಇವರಿಗೆ ಬಡಸ್ತಾನ ಹಾಳುಮಾಡಿಬುಟ್ಟು
ಭಾಗ್ಯ ಕೊಡುಬೇಕಾದ್ರೆ
ಇವರಿಗೆ ಯಾವ ರೀತಿ ಒಳಗೆ
ಭಾಗ್ಯ ಕೊಡಬೇಕು ಅಂತೇಳಿ ನನ್ನಪ್ಪ
ಆಗ ಕಲ್ಯಾಣ ಪಟ್ಟಣ ಗೇಪನ ಬರುತಂತೆ
ಕಲ್ಯಾಣ ಪಟ್ಟಣ ನೆನಕಂದು
ಕಲ್ಯಾಣ ಪಟ್ಟಣದಲ್ಲಿ ಶರಣರ ಭಕುತಿ ನೋಡುಬುಟ್ಟು
ಅಲ್ಲಿ ವಾಸಸ್ತಾನ ಮಾಡುವಂತ
ಜಂಗುಮರ ಕಣ್ಣಿಂದ ನೋಡುಬಿಟ್ಟು
ಬಸುವಣ್ಣವರ್ಗೆ ವರಕೊಟ್ಟು
ಕಲ್ಯಾಣ ಪಟ್ಣ ಬುಟ್ಟು ಬರುವಾಗ
ಆ ಕಲ್ಯಾಣ ಪಟ್ಣದ
ಕಡಬಾಗಲಲ್ಲಿ ಬಾಚಿಬಸವಯ್ಯಾ
ಈಗಲೀಗಾಗಲಿ ಮುದ್ದಮ್ಮನ ಮಗನಿಗೆ
ಆ ಕಡೆಯ ಬಾಗಲಲ್ಲಿ ಇದ್ದಂತಾ
ಬಸವಲಿಂಗಯ್ಯನ ಇವರ್ಹೋಟ್ಟಿಗೆ ಕೊಟ್ಟು
ಇವರ ಹೊಟ್ಟೆಲಿ ಹುಟ್ಟಿದಂತ ಮಗನಿಂದ
ಇವರ ದರಿದ್ರ ಹಾಳು ಮಾಡಿ
ಇವರಿಗೆ ಭಂಗ ಬಡಸ್ತಾನ
ದೂರ ಮಾಡಿಬುಡಬೇಕಲ್ಲ ಅಂತೇಳಿ
ಧರೆಗೆ ದೊಡ್ಡವರು
ಕಲ್ಯಾಣ ಪಟ್ಣದ
ಬಸವಲಿಂಗೈನ ರೂಪದಲ್ಲಿದ್ದಂತಾ
ಮಗನ ಗ್ಯಾಪನ ಮಾಡಿಕಂಡು
ಈ ಧರೆಗೆ ದೊಡ್ಡವರು
ಈ ಬಸವಚಾರಿ ಮುದ್ದಮ್ಮನಿಗೆ
ಒಂದು ಮಾತು ಕೊಡುತವರೆ
ಬಸವಚಾರಿ ಮುದ್ದಮ್ಮಾ
ಈ ನಿಲಘಟ್ಟದಲ್ಲಿರುವ ನಿಮಗೆ ಬಡಸ್ತಾನ
ಈ ಬಡಸ್ತಾನ ಹಾಳಾಗಿಬಿಟ್ಟು ನಿಮಗೆ
ಭಾಗ್ಯ ಕೊಡುಬೇಕಾದ್ರೆ ಕಂದಾ
ಈ ದರಿದ್ರವೆಲ್ಲ ಕಳುದು ಹೋಗಬೇಕಾದ್ರೆ
ನಿಲಘಟ್ಟ ಬಿಟ್ಟುಬಿಟ್ಟು ಕಂದಾ
ಮಳವಳ್ಳಿ ತಾಲೋಕು ಮಾರವಳ್ಳಿ ಗ್ರಾಮಕ್ಕೆ
ಹೋಗಿ ಸೇರಿಕಳ್ಳಿ
ಆ ಗ್ರಾಮಕ್ಕೋಗಿ ಸೇರಿದಾಗ
ನನ್ನ ವರದಲ್ಲೆ ಹುಟ್ತಾನೆ ಕಣಮ್ಮ
ಏಳನೆ ಮಗ ಎಳೇ ಕೆಂಪಣ್ಣ
ಆ ಕೆಂಪಚಾರಿ ಮಗನ
ನಿನ್ನ ಹೊಟ್ಟೆಗಾಕ್ತಿನಿ
ಆ ಮಗ ಹುಟ್ಟಿದ ಏಳೇ ದಿವುಸಕ್ಕೆ

ನಿಮಗೆ ಹರುಬಿ ಹಣ ಮಾಡುತೀನಿ
ಮೊರದ ಬಂಗಾರ ಮಾಡುತೀನಿ || ಸಿದ್ಧಯ್ಯ||

ನಿಮಗೆ ಹರುಬಿ ಹಣ ಮಾಡಿ
ಮೊರದ ಬಂಗಾರ ಮಾಡಿ
ಮಣ್ಣನಿಟ್ಟಿಗೆ ಕಂದಾ
ಮಾಯ ಮಾಡುತೀನಿ
ಚಿನ್ನದ ಇಟ್ಟಿಗೆ
ನಿಮಗಾಗಿ ಕೋಡುತೀನಿ
ನೀವು ಕೇಳಿದ ಭಾಗ್ಯವ
ನಿಮಗಾಗಿ ಕೊಡುತೀನಿ ಎಂದರಲ್ಲಾ || ಸಿದ್ಧಯ್ಯ||

ಮುದ್ದಮ್ಮ
ಈ ನಿಲಘಟ್ಟ ಬುಟ್ಟುಬುಟ್ಟು
ಮಾರ್ವಳ್ಳಿ ಮನಸ್ಥಾನಕ್ಕೆ
ಹೋಗಿ ಸೇರ್ಕಳ್ಳಿ
ನನ್ನ ವರದಲ್ಲಿ ಕಿರಿ ಕೆಂಪಾಚಾರಿ
ಎನ್ನುವಂತ ಮಗ ಹುಟ್ಟುತಾನೆ
ಆ ಮಗ ಹುಟ್ಟಿದ ಏಳುದಿವಸಕ್ಕೆ
ಹರುಬಿ ಹಣ ಮಾಡ್ತಿನಿ
ಮೊರುದ ಬಂಗಾರ ಮಾಡ್ತಿನಿ ಕಂದಾ
ನಿಮಗೆ ಮಣ್ಣಿನ ಇಟ್ಟಿಗೆ ಮಾಯಾ ಮಾಡ್ತಿನಿ
ಚಿನ್ನದ ಇಟ್ಟಿಗೆ ಕೊಡ್ತೀನಿ ಹೋಗಿ ಕಂದಾ
ಈ ನಿಲಘಟ್ಟ ಬಿಟ್ಟು ಮಾರ್ವಳ್ಳಿ
ಮನಸ್ಥಾನಕ್ಕೆ ಹೋಗಿ ಸೇರ್ಕೊ ಹೋಗ್ರಮ್ಮ ಅಂತ ಹೇಳಿಬುಟ್ಟು
ಜಗತ್ತುಗುರು ಧರೆಗೆ ದೊಡ್ಡಯ್ಯ
ಬಸವಾಚಾರಿ ಮುದ್ದಮ್ಮನಿಗೆ

ವರವ ಕೊಟ್ಟು ಬುಟ್ಟು ಗುರುವು
ಈಗ ಇನ್ನು ನಾನು ಎಲ್ಲಿಗೆ
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ||

ಈಗ ಎಲ್ಲಿಂದ ಎಲ್ಲಿಗೆ
ನಾ ಹೋಗಬೇಕು ಎಂತಾ
ಅಲ್ಲಾಮಪ್ರಭು
ಮಂಟೇದ ಲಿಂಗಪ್ಪ
ಪರಂಜ್ಯೋತಿಯವರು
ಈಗ ನಿಲಘಟ್ಟದ ಗ್ರಾಮ
ಬಿಟ್ಟು ಬಿ‌ಟ್ಟು ನನ್ನ ಗುರುವು
ಅವರು ಕುರುಬುನ ಕಟ್ಟೆಗೆ ನನ್ನ
ದೇವರು ದಯಮಾಡುತಾರೆ || ಸಿದ್ಧಯ್ಯ||

ಈಗಲೀಗಾ ಗುರುವು
ಬಸವಾಚಾರಿ ಮುದ್ದಮ್ಮನಿಗೆ ಶಾಪ ಕೊಟ್ಟು
ನಿಲಘಟ್ಟದ ಗ್ರಾಮ ಬಿಡಿಸಿ
ಮಾರ್ವಳ್ಳಿ ಗ್ರಾಮಕ್ಕೆ ಕಳುಗಿಬಿಟ್ಟು
ಈಗಲೀಗ ನನ್ನ ಕುರುಬನ ಕಟ್ಟೆಗೆ ಹೋಗಬೇಕು
ಜಾತಿ ಒಳಗೆಹಾಳು ಮತೋಸ್ತುರು
ಹಾಲುಸಾಗ್ರವಾಗಿ ಬಾಳಿ ಬದುಕುತವರೆ
ಅಂತವರ ಬಳಿ ಹೋಗಿಬುಟ್ಟು
ನನ ರಾಜ ಬಪ್ಪಗೌಡ್ನಪುರಕ್ಕೆ
ಒಕ್ಕಲು ಮಾಡಬೇಕು
ಈಗಲೀಗಾ ಅವರ ದುಡ ಭಕುತಿ
ಸತ್ಯ ನೋಡಬೇಕು ಅಂತೇಳಿ ನನ ಗುರುವು
ನಿಲಘಟ್ಟದ ಗ್ರಾಮ ಬುಟ್ಟು ಬುಟ್ಟು

ನನ್ನ ಕುರುಬನ ಕಟ್ಟೆಗೆ
ನನ್ನ ಸ್ವಾಮಿಯೆ ಬಿಜು ಮಾಡುತ್ತಾರೆ || ಸಿದ್ಧಯ್ಯ||

ಗುರುವೆ ಕುರಬನ ಕಟ್ಟೆಗೆ
ತಾವಾಗಿ ಬಂದವರೇ
ಅಯ್ಯಾ ಮನೆ ಮನಿಯ ಬಿಗುಸಾ
ತಾವಾಗೆ ಮಾಡವರೆ
ಅಲ್ಲಿ ನೂರೊಂದು ಒಕ್ಕಲಾ
ಜನಗಳ ಪಡುದವರೆ
ಗುರುವೇ ಕುರುಬನ ಕಟ್ಟೆಯ
ಲಿಂಗಯ್ಯನಾಗಿ
ನಾ ಮೂಂದಕೆ ಹೋಗಬೇಕು
ಹಾಗೆಂದು ನನ ಗುರುವು
ಅಯ್ಯ ಊರ ಮಧ್ಯದಲ್ಲಿ ಗುರುವೇ
ಅವರು ಒಪ್ಪೆಸಳ ನೋಡುತಾರೆ || ಸಿದ್ಧಯ್ಯ||

ಕುರುಬನ ಕಟ್ಟೆ ಲಿಂಗಯ್ಯ ಎನುತೇಳಿ
ನಾಮಕರಣ ಪಡೆದು
ಈಗಲೀಗಾ ನಾನು ಮುಂದಕೆ ಹೋಗಬೇಕು ಅಂತೇಳಿ
ಜಗತ್ತು ಗುರು ಧರೆಗೆ ದೊಡ್ಡವರು
ಊರು ಮಧ್ಯದಲಿ ಗುರುದೇವಾ
ಅರಳಿ ಕಟ್ಟೆ ಜಗಲಿ
ಅರಲಿ ಕಟ್ಟೆ ಮುಂಭಾಗದಲಿ ಗುರುವು

ಹಾಸಿದರು ಹುಲಿಯ ಚರ್ಮ
ಹರಡಿದರು ಊಭತ್ತಿ ಘಟ್ಟಿ || ಸಿದ್ಧಯ್ಯ||

ಗುರುವೆ ಹುಲಿಯ ಚರ್ಮ ಹಾಸಿ
ಉಲ್ಲೆ ಚರ್ಮ ಗುರುವು
ಬೆನ್ನಿಂದೆ ಬುಟ್ಟುಕಂಡು
ಅಪ್ಪ ಮಂಟೇದ ಲಿಂಗ
ಇಂತ ಕಂಡುಗ ದ್ಯಾನದ ಬುಕ್ಕು ಗುರುವೆ
ಕಾಲದ ಧ್ಯಾನದ ಬುಕ್ಕು
ತಾಮ್ರುದ ಚಪ್ಪೋಡ ತೊಡೆ ಮೇಲೆ ಮಡಿಕಂಡು
ಅವರು ಕೈಲಾಸದ ಕಂಡಾಯವ
ಅವರು ಜಡುದು ಭೂಮಿಗೆ ನಾಡಿಕಂಡು || ಸಿದ್ಧಯ್ಯ||

ಆಗಲೀಗಾ ಕೈಲಾಸದ ಕಂಡಾಯ ದೇವಾ
ಜಡ್ದು ಭೂಮಿಗೆ ನಾಟಿಕಂಡು ಗುರುದೇವಾ
ಆಗಲೀಗಾ ಮುಕ್ಕಾಲುಗಳಿಗೆ ಮೂರ್ತುವಾಗಿ ವರುಗಿದ್ರು
ವರಗಿ ಪವಾಡ್ಸುವಂತಾ ಕಾಲದಲ್ಲಿ
ನೂರು ಒಂದು ಒಕ್ಕಲು ಜನಗಳಲ್ಲಿ ಗುರುವು
ಇವರು ಯಾರಾಗಿರಬಹುದು ನಮ್ಮ
ಗ್ರಾಮದ ಕಲ್ಲು ಕಟ್ಟೆ ಜಗಲಿಗೆ ಬಂದು
ಈ ಹುಲಿಚರ್ಮ ಹಾಸಿಗಂಡು
ಉಲ್ಲೆ ಚರ್ಮ ಬೆನ್ನಿಂದೆ ಬಿಟ್ಟುಕಂಡು
ಪಾವಡಿಸಿ ಮಲಗವರಲ್ಲ
ಇವರು ಯಾರಾಗಿರಬಹುದು ಎಂಬುದಾಗಿ ಗುರುವು
ನೂರೊಂದೊಕ್ಕಲು ಜನಗಳೆಲ್ಲ ಒಂದು
ನೀವು ಯಾರಪ್ಪ ಯಂತು ಗುರುದೇವಾ
ಈಗಲೀಗಾ ನಮ್ಮ ಮಠಮನೆಗೊಳಲ್ಲಿ
ಗುರುದೇವ ಮಲಗಿದ್ದಿಕ್ಕೆ ಸ್ಥಳ ಉಂಟಲ್ಲಪ್ಪ
ನಿಮಗೆ ಸಲ್ಸದಿಕ್ಕೆ ಊಟ ಉಂಟು
ಪಾದ ಪೂಜೆ ಮಾಡ್ತಕಂತ ಗ್ರಾಮ್ದ ಜನಗಳು
ನಮ್ಮ ಊರಲ್ಲುಂಟು
ಅಂತವರ ಮಠಮನೆಗಳೆಲ್ಲಾನು ಬಿಟ್ಟು ಬಿಟ್ಟು ಗುರುದೇವಾ
ಈ ಅರಳಿ ಕಟ್ಟೆ ಜಗಲಿಗೆ ಯಾತಕೆ ಬಂದ್ರಿಯಪ್ಪ
ನಮ್ಮಗಳ ಮನಿಗೆ ಬಂದ್ಬುಡಿಸ್ವಾಮಿ ಎಂದುರು
ಕೇಳಿರಪ್ಪ ಈಗಲೀಗಾ ನಿಮ್ಮ ಗ್ರಾಮಕ್ಕೆ
ನಿಮ್ಮ ಊರಿಗೆ ಯಾತುಕೆ ಬಂದೆ ಅಂದ್ರೆ ಕಂದಾ
ನೀವು ಒಂದಟ್ಟಿ ಎರಡಟ್ಟಿ
ಒಕ್ಕಲು ಪಡಿಬೇಕು ಎಂದು ಬಂದಿಲ್ಲ

ಈ ಧರೆಯ ತಂದವರು ನಾವು
ಧರೆಗೆ ದೊಡ್ಡಯ್ಯನವರು || ಸಿದ್ಧಯ್ಯ||

ಈ ಭೂಮಿ ಪಡೆದವರು
ಭೂಲೋಕ ಪಡೆದವರು || ಸಿದ್ಧಯ್ಯ||

ಇಂತ ಭೂಮಿ ಭೂಲೋಕ ಗುರುವೆ
ಕಲ್ಯಾಣ ಕೈಲಾಸ ನಡುವೆ ನರಲೋಕ
ಪಡೆದಂತಾ ಗುರುವು ಕೇಳು ನನ್ನ ಕಂದಾ
ನಿಮ್ಮ ಊರಲ್ಲಿ ಕಂದಾ ನನಗೆ
ಮಠಮನೆ ಆಗಬೇಕು || ಸಿದ್ಧಯ್ಯ||

ಈಗಲೀಗಾ ಉತ್ತರ ಕಾಂಡವನ್ನೆ ಬಿಟ್ಟು ಬಿಟ್ಟು
ದಕ್ಷಣ್ಯ ಕಾಂಡದಿಂದ ಬರ್ತಾ ಇವ್ನಿ ಕಂದಾ
ಈಗಲೀಗಾ ರಾಜ ಬಪ್ಪಗೌಡ್ನ ಪುರದಲ್ಲಿ ಕಂದಾ
ಹಾಲು ಮತ್ತೊಸ್ತುನಿಗೆ ಹಾಳುಶಾಗ್ರವ ಕೊಟ್ಟು
ಈಗಲೀಗಾ ಕುರುಬ ಗೌಡ್ರಟ್ಟಿ
ಹೆಗ್ಗಡ ಗೌಡ್ರ ಮನೆ ಮಠಮನೆ ಮಾಡಕಂಡು
ಮಠ ತೋಪ ಮಾಡಕಂಡು
ಮಠದ ಮುಂಭಾಗದಲ್ಲಿ ಮಜ್ಜಣದ ಭಾವಿ ಕೂಡ ಮಾಡಿಕಂಡು
ಮಡಿವಾಳ ಮಾಚಪ್ಪನ ಉಬ್ಬೆವಲೆ
ಉರಿಗದ್ದಿಗೆ ಮಾಡಿಕಂಡು
ಉರಿಗದ್ದಿಗೆ ಮಳೆ ಒಡೆದು ಉದ್ಭವವಾಗಬೇಕು ಅಂತೇಳಿ
ಈ ಉರಿಗದ್ದಿಗೆ ಮೇಲೆ ಪಾವಾಡ್ಸಬೇಕು ಎಂಬುದಾಗಿ
ಈ ರಾಜು ಬಪ್ಪಗೌಡ್ನ ಪುರ ಅಂತೇಳಿ
ನಾಮಕರಣವನ್ನೆ ಕಟ್ಟಿ
ಈಗಲೀಗಾ ರಾಜ್ಯಕ್ಕೆ ಗುರುವಾಗಿ ನಾನು ಬಂದಿವ್ನಿ ಕಂಡ್ರಪ್ಪ
ನೀವು ನನ್ನ ರಾಜ ಬೊಪ್ಪಗೌಡ್ನ ಪುರಕ್ಕೆ
ನೀವು ನೂರೊಂದು ಒಕ್ಕಲು ಜನಗಳೆಲ್ಲ ಬಂದು
ಈಗಲೀಗಾ ನಿಮ್ಮಿಂದ ಕೊಂಡು ಕಹಳೆಯಾಗಬೇಕು
ನಿಮ್ಮಿಂದ ನನಗೆ ಬೀಸಣಿಗೆ ಚೌಲು ಆಗಬೇಕು
ನಿಮ್ಮಿಂದ ನನಗೆ ಆಗಲೀಗಾ
ನೂರೊಂದು ಬಿರುದು ಲಾಂಚಣಗಳೇ ಬರುಬೇಕು
ನಿಮ್ಮಿಂದ ನನಗೆ ಛತ್ರಿ ಚಾಮರವಾಗಬೇಕು
ಈಗಲೀಗಾ ರಾಜ ಬಪ್ಪಗೌಡ್ನಪುರದಲಿ ನಾನು
ಪಾವಡಿಸಿ ಮಲಗಿವ್ನಿ ಕಂದಾ

ಈ ಕುರುಬನ ಕಟ್ಟಿಯಿಂದಾ ನಾನಗೆ
ಬಾರಿ ಕಂಡಾಯ ಬರುಲೇಬೇಕು || ಸಿದ್ಧಯ್ಯ||

ಸ್ವಾಮಿ, ನಮ್ಮಿಂದ ನಿಮಗೆ
ಶಿವಪೂಜೆಯಾಗಬೇಕಾ
ಅಗತ್ಯವಾಗಿ ಆಗಬಹುದು ಸ್ವಾಮಿ
ಅಗತ್ಯವಾಗಿ ಗುರುವೇ ಗುರುದೇವಾ
ಈಗಲೀಗಾ ಛತ್ರಿ ಚಾಮರ ಸಹಿತವಾಗಿ
ನಿಮ್ಮ ಉರಿ ಕಂಡಾಯ್ದ ಸಹಿತವಾಗಿ
ಈ ಬಸವನ ಸಯಿತವಾಗಿ
ನಿಸಾಯಿನಿ ದಾಳ ಸಯಿತವಾಗಿ
ಈಗಲೀಗಾ ಕೊಂಬುಕಹಳೆ ಸಯಿತರಾಗಿ ಗುರುದೇವಾ
ನಮ್ಮ ಕುರುಬನ ಕಟ್ಟೆಯಿಂದ ಗುರುವು
ಈಗಲೀಗಾ ರಾಜ ಬಪ್ಪುಗಣ ಪುರದ
ಮಠಮನಿಗೆ ಶಿಶು ಮಕ್ಕಳಾಯ್ತಿನಿ ಗುರುವು
ಅದಕ್ಕೂ ಮೊದಲಾಗಿ
ಈ ಕುರುಬನ ಕಟ್ಟೆ ಲಿಂಗಯ್ಯ ಅಂತೇಳಿ
ನಮಗೆ ನಾಮಕರಣ ಕೊಟ್ಟುಬುಟ್ರಿ
ನೀವು ಕುರುಬುನ ಕಟ್ಟೆ ಲಿಂಗಯ್ಯ ಅಂತ
ಹೆಸರೇ ಆಗಿಬುಟ್ರೆ
ಈಗಲೀಗಾ ವಾರ ವಾರ ಎಂಟುದಿವಸ
ತುಂಬದ್ರೊಳಗಾಗಿ ಗುರುವು
ನಿಮಗೆ ಕುರುಬನ ಕಟ್ಟೆ ಒಳಗೆ ಮಠ ಕಟ್ತಿವಿ
ಈ ಕುರುಬನ ಕಟ್ಟೆ ಒಳಗೆ ಸ್ವಾಮಿ
ಕುರುಬನ ಕಟ್ಟೆ ಲಿಂಗಯ್ಯ ಅಂತ ಏಳಿ

ನಮ್ಮ ಊರಿನಲ್ಲಿ ನೀವು
ತಾವಾಗಿ ಇರಲೇಬೇಕು || ಸಿದ್ಧಯ್ಯ||

ಆಗಬಹುದು ನನ್ನ ಕಂದಾ
ಆಗಬಹದು ಎನುತೇಳಿ ಧರೆಗೆ ದೊಡ್ಡವರು
ಕುರುಬನ ಕಟ್ಟೆ ಒಳಗೆ ಮಠ ಕಟ್ಸಿಕಂಡು
ಮಠದ ಮುಂಭಾಗದಲ್ಲಿ ನಿಸ್ಸಾನಿ ಧಾಳ ಹಾಕಿಸಿಕಂಡು
ಉತ್ತುರ್ ದೇಸ್ದ ಕಂಡಾಯನೇ
ಮಠಮನೆಯೊಳಗೆ ಮಡಗಿ
ಆಗಲೀಗಾ ಉಲಿ ಚರ್ಮ ಹಾಸಿಕಂಡು
ಉಲ್ಲೆಚರುಮ ಮಾಡಿಕಂಡು
ಈಗಲೀಗಾ ಅಗಲು ಮೂರು ರಾತ್ರೆ ಮೂರು
ಕುರುಬನ ಕಟ್ಟೆ ಲಿಂಗಯ್ಯ ಅಂತೇಳಿ ನಾಮಕರಣನೇ
ಅಲ್ಲೆ ಪಡ್ಸಿಕಂಡು
ಈಗ ಛತ್ರಿ ಚಾಮರವಾಯ್ತು ಬಸವನಾಯ್ತು
ಈಗಲೀಗಾ ಕೊಂಬು ಕಾಳೆ ತ್ರಿಷ್ಣು ಮಾಡಿಕಂಡೆನಲ್ಲ
ಈಗಲೀಗಾ ನಾನು ಎಲ್ಲಿಂದ ಎಲ್ಲಿಗೋಗಬೇಕು ಅಂತೇಳಿ
ಕುರುಬನ ಕಟ್ಟೆಲ್ಲಿ
ಬಕುತರ ಪಡಕಂಡು ಧರೆಗೆ ದೊಡ್ಡವರು
ಈಗಲೀಗ ನನಗೆ ಕಳತಮಟೆ ಆಗಬೇಕು

ಉಯ್ನ ಕೊಂಡುನ ಕಾಳೆ ಆಗಬೇಕು
ಎನುತೇಳಿ ಗುರುದೇವಾ

ಅವರು ಇನ್ನು ಮುಂದಕೆ ಬರುತಾರೆ
ಮನೆಗೆ ಮಂಟೇದುಲಿಂಗು || ಸಿದ್ಧಯ್ಯ||

ಇಂತ ಕುರುಬನ ಕಟ್ಟೆಯ
ಲಿಂಗಯ್ಯ ಎಂತ
ಹೆಸರನೇ ಪಡೆದು
ಅಪ್ಪಾಜಿ ಗುರುವು
ಅವರು ಹೊನ್ನಾಯ್ಕನಳ್ಳಿಗೆ ನನ್ನ
ಸ್ವಾಮಿಯೆ ದಯ ಮಾಡುತಾರೆ || ಸಿದ್ಧಯ್ಯ||

ಈಗಲೀಗಾ ಗುರುವೇ ಗುರುದೇವಾ
ಹೊನ್ನಾಯ್ಕನಳ್ಳಿಗೆ ಬಂದು ಗುರುದೇವಾ
ಈಗಲೀಗಾ ಹೊನ್ನಯ್ಯಾ ಚನ್ನಯ್ಯ ಎನ್ನುವಂತ
ಎರಡು ಒಕ್ಕಲು ಜನಗಳ
ತಾನಾಗೆ ಪಡಕಂಡು ಗುರುವು
ಅಗಲೀಗಾ ಜಗತ್ತು ಗುರುವು ಧರೆಗೆ ದೊಡ್ಡವರು
ಮಾಗುರು ಮಂಟೇದು ಸ್ವಾಮಿ

ಅವರು ಬಾರಿಯ ಕಂಡಾಯ
ಹೆಗಲಲಿ ಹೊತ್ತವರೇ
ಬಸುವಿನ ಪ್ರವಾಳ
ಪಾದದಲಿ ದರುಶವರೆ
ಬಾರಿಯ ಡಮರುಗವ
ಬೆನ್ನಿಂದೆ ಕಟ್ಟವರೆ
ಬಾರ್ಸುವ ತಂಬೂರಿಯ
ಎದೆ ಮೇಲೆ ಹೊತ್ತವರೆ
ಅವರು ಮುಳ್ಳಿನ ಪಾವಾಡ
ಪಾದದಲಿ ಮೆಟ್ಟಿಕಂಡು
ಕೈಲಾಸದ ಕಂಡಾಯ
ಹೆಗಲ ಮೇಲೆ ಹೊತ್ತುಕಂಡು
ಅವರು ಇನ್ನು ಮುಂದುಕೆ ಬಂದರಲ್ಲ
ಮನೆಗೆ ಮಂಡೇದಸ್ವಾಮಿ || ಸಿದ್ಧಯ್ಯ||

ಗುರುವೆ ಹೊನ್ನಯ್ಯನಕೇರಿಗೆ ನನ್ನ ಸ್ವಾಮಿಯೇ
ಬಿಜು ಮಾಡುತಾರೆ || ಸಿದ್ಧಯ್ಯ||

ಗುರುವೆ ಹೊನ್ನಯ್ಯ ಕೇರಿಗೆ
ಬಂದವರೆ ನನ್ನಪ್ಪ
ಗುರುವೆ ಚನ್ನಯ್ಯನ ಕೇರಿಗೆ
ಬಂದವರೆ ನನ ಗುರುವು
ಧರೆಗೆ ದೊಡ್ಡಯ್ಯ
ಅವರು ಬೀದಿ ಬಿದಿ ಒಳಗೆ ದೇವ
ಭಿಕ್ಷಾನಾದುರೆ ಮಾಡುತಾರೆ || ಸಿದ್ಧಯ್ಯ||