ಮುದ್ದಮ್ಮ
ನಿನ್ನ ಪತಿ ದೇವರು ಆಡ್ತಕ್ಕಂತ ಮಾತು
ನನ್ನಗೆ ಮೊದಲೇ ಅರವಾಯ್ತು ಕನವ್ವ
ನಿನ್ನ ಮುತ್ತೈದೆ ಬಾಯ್ಲಿ ಯಾಕೆ
ಸುಳ್ಳು ಮಾತು ಬರಬೇಕು ಕಂದಾ
ಮುದ್ದಮ್ಮ
ನಿನ್ನ ಗಂಡ ಬಾಚಿ ಬಸವಯ್ಯ
ಏನೇಳುದ್ರು ಅಂದರೇ
ನನ್ನ ಮನೆಗೆ ಬಂದು ನನ್ನ ಮಗನು
ಕೇಳ್ದ ಜಂಗುಮನಿಗೆ
ಹಟ್ಟಿ ಜೀತ್ಗಾರು ಬುಟ್ಟು ಬುಟ್ಟುಸ
ಕತ್ತಿನಮ್ಯಾಲೆ ಗುದ್ದಿಸಿಬುಟ್ಟು
ಮನಿಂದ ಆಚೆಗೆ ತಳ್ಳಿಸಿಬುಡು ಅಂತ
ನಿನ್ನ ಪತಿ ಹೇಳುಲಿಲ್ವ ಕಂದಾ

ನಿನ್ನ ಗಂಡನಾಡ್ದ ಮಾತಾ ಕೇಳಿ
ಮನೆಯ ಬಿಟ್ಟು ಬಂದೇನಮ್ಮ || ಸಿದ್ಧಯ್ಯ||

ನಿನ್ನ ಗಂಡನ ಮಾತು ಕೇಳಿ
ನಿನ್ನಟ್ಟಿ ಅರಮನೆ ಬಿಟ್ಟು ಬುಟ್ಟು ತಾಯಿ
ನಾನಾಗಿ ಬಂದುಬಿಟ್ಟೆ ಮುದ್ದಮ್ಮ
ಬಾಳೋಗು ಕಂದ ಬದುಕೋಗವ್ವ
ಮುದ್ದಮ್ಮ
ನಿನ್ನ ಮನೆಬಿಟ್ಟೂ ಹೊರಟೋಯ್ತಾವ್ನಿ
ಹೋಗು ಕಂದಾ ಅಂತೇಳಿ
ಜಗತ್ತು ಗುರು ಧರೆಗೆ ದೊಡ್ಡಯ್ಯ
ಮುದ್ದಮ್ಮನ ಕಳುಗಿಸಿಬಿಟ್ಟು

ಅವರು ಊರುಮುಂದ್ಲ ಅರಳಿ ಕಟ್ಟೇ ಜಗಲಿಗೆ
ಸ್ವಾಮಿ ದಯಮಾಡಾರೆ || ಸಿದ್ಧಯ್ಯ||

ಊರು ಮುಂದು ಅರಳಿ ಕಟ್ಟೇ
ಜಗಲಿಗೇ ನನ್ನಪ್ಪ
ತಾವಾಗೀ ಬಂದ್ರು ಜಗನ್‌ಜ್ಯೋತಿ
ಧರೆಗೇ ದೊಡ್ಡಯ್ಯ
ಅರಳೀ ಕಟ್ಟೇ ಜಗಲೀ ಕಣ್ಣಿಂದ
ನೋಡುಬುಟ್ಟೇ
ನವಲುಗಿರಿ ತೊಂಬೇ ಒಳಗೇ
ಅರಳೀ ಕಟ್ಟೇ ಜಗಲೀ ದುಂಬಾ
ದೂಳು ಗುಡ್ಸುಬುಟ್ಟು
ಹುಲಿ ಚರ್ಮ ಹಾಸುಬುಟ್ಟು
ಹುಲ್ಲೇ ಚರ್ಮತಗದು
ಬೆನ್ನಿಂದ ಬಿಟ್ಟೆಗಂಡೂ
ಭಾರಿ ಕಂಡಾಯ ತಗದು
ಬಳ್ಳೆರ ಮರಕೇ ವರಗ್ಸಿ ಬುಟ್ಟು
ನವಲುಗರಿ ತೊಂಬೆ ತಗದು
ಎಳೆ ಬೇವನು ಮರಕ್ಕೆ ಒರಗಿಸಿಬುಟ್ಟು
ಹುಲಿ ಚರ್ಮದ ಮೇಲೆ
ತಾವಾಗಿ ಬಂದು ಕೂತ್ಕಂಡು
ಧರೆಗೇ ದೊಡ್ಡವರು
ಕಪಾಲದ ಮೇಲೆ ಕೈಮಡ್ಕಂಡು ನನ್ನಪ್ಪ
ಮನದಲ್ಲಿ ಚಿಂತೆಮಾಡ್ಕಂಡು
ಮನಸ್ಸಿನಲ್ಲಿ ಕೊರತೆ ಮಾಡ್ಕಂಡು
ಈ ಕೀಳುನ ಮೇಲೆ ಹುಟ್ಟದಂತ
ನರಮಾನವರು
ಬಡ್ತಾನ ಇರುವಾಗ ದೇವರುಗ್ಯಾನ ಮಾಡ್ತರೆ
ಸಿರಿಸ್ತಾನ ಬಂದ ಮ್ಯಾಲೆ ದೇವ್ರುನ್ನೇ ಮರ್ತುಬುಡ್ತರೆ
ಈಗ ನಾನು ಕೊಟ್ಟು ಮಗನ
ನಾನು ಬಂದು ಕೇಳುದರೆ
ಬಸವಾಚಾರಿ ಮುದ್ದಮ್ಮ ಮಗನ ಕೊಡೋದಿಲ್ಲ
ಹೊರಟೋಗುಬಿಡು ಅಂತ ಕಳುಗುದ್ರಲ್ಲ
ಅವರು ಸತಿಪತಿ ದುಡ
ನೋಡ್ದಂಗಾಯ್ತು

ಆ ಕೆಂಪಾಚಾರಿ ದುಡುವಾ
ನಾನಾಗಿ ನೋಡಬೇಕು|| ಸಿದ್ಧಯ್ಯ||

ಕೆಂಪಾಚಾರಿ ದುಡ ಭಕ್ತಿ ನೋಡ್ಲಿಲ್ವಲ್ಲ
ಕಲ್ಯಾಣ ಪಟ್ಟಣದಿಂದ
ರಾಚಪ್ಪಾಜಿಯವರ ಶಿಶುಮಗನ ಮಾಡ್ಕಂಡು
ಬರುವಾಗ
ಆ ಎಳೆ ಕೆಂಪಣ್ಣ
ಬಸುಲಿಂಗಯ್ಯನ ರೂಪಿನಲ್ಲಿದ್ದ
ಅವತ್ತು ಓಡಬಂದು ನನ್ನ ಪಾದ
ಇಡ್ಕಂಡು
ನಾನು ನಿಮ್ಮ ಜೋತೇಲಿ ಬರ್ತಿನಿ ಗುರುವು
ನಾನು ಬಂದು ನಿಮಗೆ ಮಗನಾಯ್ತಿನಿ ಅಂತ ಕೇಳ್ದ
ಆ ಮಗ ಕೆಂಪಚಾರಿಗೆ
ಅವತ್ತೊಂದು ಮಾತೇಳಿದ್ದಿ
ಏನಯ್ಯಾ ಬದುಲಿಂಗಯ್ಯ
ಈಗ ನಿನ್ನ ಮಗನಾಯ್ತಿ ಅಂತೇಳಿ
ಬಂದು ನನ್ನ ಪಾದ ಇಡ್ಕಂಡಿದ್ದೀಯಲ್ಲ ನನ್ನ ಕಂದಾ
ಆರು ಜಲ್ಮೆ ಎತ್ತು ಬಂದಿದ್ದಿಯೋ ಕಂದಾ
ಆರು ಜಲ್ಮ ಎತ್ಬಂದಿದ್ದರೂ ಕೂಡ
ನಿನ್ನ ಕರ್ಮ ಕಳುದಿಲ್ಲವಲ್ಲೋ ಮಗು
ನಿನ್ನ ಪಾಪ ತೀರಿಲ್ವಲ್ಲೋ ಕಂದಾ
ಕೆಂಪಣ್ಣ
ಈ ಆರನೇ ಜಲ್ಮದಲ್ಲಿ
ನಿನ್ನ ಕರ್ಮ ಪಾಪ ಎಲ್ಲಾನು
ತೀರ್ಸುಬಿಡು ಕಂದಾ
ನಾಳೆ ಏಳುನೆ ಜಲ್ಮಾ ಎತ್ತಿ ಬರುವಾಗ
ಬಸವಾಚಾರಿ ಗರಬಕ್ಕೆ ಹಾಕುತ್ತಿನೀ
ಮುದ್ದಮ್ಮನ ಹೊಟ್ಟೆಗೆ ನಿನ್ನ ಕೂಡ್ತಿನಿ
ಈಗ ಬಸಲಿಂಗಯ್ಯನಾಗಿ ಹುಟ್ಟಿದ್ದೀಯೆ ಕಂದಾ
ನಾಳೆ ಏಳು ಜಲ್ಮಾ ಎತ್ತಿ ಬರುವಾಗ
ಕಿರಿ ಕೆಂಪಚಾರಿಯಾಗಿ ಹುಟ್ಟು ಕಂದಾ
ನೀನು ಹುಟ್ಟದ ಏಳು ವರ್ಷಕ್ಕೆ
ನಾನೇ ಬಂದು ಮಗನ ಮಾಡ್ಕತ್ತಿನಿ
ಹೋಗು ಕಂದಾ ಅಂತ ಹೇಳ್ಬುಟ್ಟು ಬಂದಿದ್ದಿ
ಅವತ್ತು ಆ ಮಗನಿಗೆ
ಗುರು ಭಗತಿ ಇತ್ತು
ಇವತ್ತು ಬಸವಾಚಾರಿ ಜಲ್ಮದಲ್ಲಿ
ಜನಿಸವನೆ
ಮುದ್ದಮ್ಮ ಹೊಟ್ಟಿಂದ ಹುಟ್ಟವನೆ
ಅನ್ನದ ಮದ ನೀರಿನ ಮದ
ಕ್ರಾಮಕ್ರೋಧ ರಕ್ತವೇ ಮದ ಹೆಚ್ಕಂಡು
ದುರುದುರು ಆಂಕಾರದಲ್ಲಿ ಮೆರೆದನೋ ಕಾಣೆ
ಇಲ್ವಾದ್ರೇ ಓಡಿ ಬಂದು ನನ್ನ
ಪಾದ ಇಡ್ಕಂಡು ಸರಣು ಮಾಡನೋ ಗೊತ್ತಿಲ್ವಲ್ಲ
ಆ ಕೆಂಪಣ್ಣ ಅಂದ್ರೆ
ಅವರ ತಂದೆ ತಾಯ್ಗಳಿಗವ ಮಗನಲ್ಲ
ನನ್ನ ವರ್ದಲ್ಲಿ ಹು‌ಟ್ಟಿರ್ತಕ್ಕಂತ ಮಗ
ನನ್ನ ಮಗ ಕೆಂಪಣ್ಣ

ಈಗ ನಾನು ಪಡ್ಕಳುವ ಮಗನ
ಸತ್ಯ ದುಡವ ನೋಡಬೇಕು || ಸಿದ್ಧಯ್ಯ||

ಈಗ ನನ್ನ ಮಗನ ದುಡುವ
ನಾನೇ ನೋಡಲುಬೇಕು || ಸಿದ್ಧಯ್ಯ||

ಈಗಲೀಗ ನಾಣು ಪಡ್ಕಳುವಂತ ಶಿಷ್ಯ
ಇವತ್ತು ನನ್ನ ಮಗನ ದುಡ ನಾನೇ ನೋಡಬೇಕು
ಒಂದೇ ದುಡ ಒಂದೇ ಭಕ್ತಿ ಒಳಗೆ
ಮೊದಲು ನಾನು ಮಗನಾಯ್ತಿನಿ ಗುರುದೇವ
ಅಂದು ಕೇಳ್ದಂಗೆ ಅಂತ ಇವತ್ತು ಕೇಳೋನೊ
ಅಥವಾ ಕೇಳೋದಿಲ್ವೊ ಗೊತ್ತಿಲ್ಲವಲ್ಲ

ಈಗ ಕೆಂಪಚಾರಿ ಬಳಿಗೆ ನಾ
ಹೋಗಬೇಕು ಎಂದರಲ್ಲ || ಸಿದ್ಧಯ್ಯ||

ಕೆಂಪಚಾರಿ ಬಳಿಗೆ
ನಾನಾಗಿ ಹೊರಟೋಗಬೇಕು
ಇವತ್ತು ನನ್ನ ಮಗನ ದುಡುವ ನಾನೇ ನೋಡಬೇಕು
ನನ್ನ ಮಗನ ಭಗತಿ
ನನ್ನ ಮಗನ ಸತ್ಯ ನಾನೇ ತಿಳಿಬೇಕು ಎನ್ನತೇಳಿ
ಮಾಗುರು ಮಂಟೇದ ಲಿಂಗಪ್ಪ
ಈಗಲೀಗ ಗುರುವೇ ಗುರುದೇವ
ಹಾಸಿದಂತ ಹುಲಿ ಚರ್ಮ
ಬೆನ್ನಿಂದೆ ಬುಟ್ಕಂಡಿರ್ತಕ್ಕಂತ
ಹುಲ್ಲೆ ಚರ್ಮ ಎಲ್ಲಾನು ಒತ್ಕಂಡು
ಉತ್ತರದೇಶದ ಕಂಡಾಯ ತಕ್ಕಂಡು
ನವುಲಗರಿ ತೊಂಡೆ ಇಡ್ಕಂಡು
ಅರಳೀ ಕಟ್ಟೇ ಜಗಲೀ ಬಿಟ್ಟುಬುಟ್ಟು

ಅವರು ಮುರುಳೀನ ಪಾವಾಡ್ದ ಮೇಲೆ
ಬೊಳ್ಳ ಬೊಳ್ಳನೆ ಬಂದಾರಲ್ಲ || ಸಿದ್ಧಯ್ಯ||

ಗುರುವೇ ಮುರುಳೀನ ಪವಾಡ
ಪಾದದಲ್ಲಿ ಮೆಟ್ಟಕೊಂಡು
ಅಲ್ಲಮಪ್ರಭು ಮಂಟೇದ ಲಿಂಗಪ್ಪ
ಪರಂಜ್ಯೋತಿಯವರು
ನನ್ನ ಕೆಂಪಚಾರಿ ಕುಲುಮೆ ಮನೆಗೆ
ಓಡಿ ಓಡಿ ಬರುವುತಾರೆ || ಸಿದ್ಧಯ್ಯ||

ಕೆಂಪಣ್ಣನ ಕುಲುಮೇ ಕಛೇರಿಗೆ
ತಾನಾಗಿ ಬರುತಿದ್ರು ಜಗನ್‌ಜ್ಯೋತಿ
ಧರೆಗೆ ದೊಡ್ಡಯ್ಯ
ಬರುವಂತ ಕಾಲದಲ್ಲಿ ಎಳೇ ಕೆಂಪಣ್ಣ
ಏಳು ವರ್ಷದ ಮನಗಾದ್ರು ಕೆಂಪಚಾರಿ
ದೇವ ಲೋಕದಲ್ಲಿ ದೇವೀಂದ್ರಾಯ್ನಂಗೇ
ಪದವೀ ಅಂದ್ರೇ
ಈ ನಡುವೇ ನರಲೋಕಕ್ಕೆ
ದೇವಿಂದ್ರಾಯನ ಮಗನಾಗಿ ಕೆಂಪಣ್ಣ
ಹತ್ತ ಬೆರಳಿಗೆ ಕೆತ್ತಾಕ್ದ ಅಪರಂಜಿ ಉಂಗುರ ಇಕ್ಕಂಡೂ
ವಜ್ರದ ವಲ್ಲೀಯ ಹೆಗಲಮ್ಯಾಲೆ ಹಾಕ್ಕಂಡು ಕೆಂಪಣ್ಣ
ಚಿನ್ನ ಬೆರಳೀ ಪಾದರಾಕ್ಷಿಯ ಪಾದದಲ್ಲಿ ಮೆಟ್ಟಿಗಂಡು
ಬಂಗಾರ್ದ ಪಟ್ಟೇ ಮಂಚದ ಮ್ಯಾಲೆ
ಕೂತ್ಗಂಡು ಕೆಂಪಚಾರಿ
ಏಳು ವರ್ಷದ ಮಗನಾದ್ರುವೇ
ಏಳುನೂರ ಹೆಗ್ಗುಲಮೆಯ ನೋಡ್ಕಂಡು
ಏಳುನ್ನೂರು ಜನ ಜೀತ್ಗಾರನ್ನ ಕಟ್ಟಕ್ಕಂಡು
ಕಬ್ಬುಣ ಕಾರ್ಖಾನೆ ಒಳಗೇ
ಆಳು ಕಾಳಿಗೆಲ್ಲ ಏನಂತ ಮಾತಾಡ್ತಾನೇ ಅಂದ್ರೇ
ಏನ್ರಲ್ಲ ಜೀತ್ತಾಳುಗಳೆ

ಒತ್ತರ್ಲ ತಿದಿಯ
ಕಾಸಿರ್ಲ ಕಬ್ಬುಣದ
ಒಡೀರ್ಲ ಒಡೀರ್ಲ
ಆಗನತೇಳಿ ಕೆಂಪಣ್ಣ
ಗುರುವೇ ಬಾರೀ ಬಾರೀ ಗಲಾಟಿ
ಮಾಡುತ ನನ್ನ ಕಂದಾ
ಕುಳಿತಿದ್ದ ಕೆಂಪಣ್ಣ
ಗುರುವೇ ಅದೇ ಒತ್ತಿನವೊಳಗೆ ನನ್ನ
ಸ್ವಾಮಿಯೆ ದಯ ಮಾಡುತಾರೇ || ಸಿದ್ಧಯ್ಯ||

ಗುರುವೇ ಅದೇ ಒತ್ತಿನಲ್ಲಿ ಗುರುವೇ
ಅದೇ ಟೈಮಿನಲ್ಲಿ
ಅದೇ ಗಳಿಗೆ ಒಳಗೆ
ಕೆಂಪಣ್ಣನ ದೇವಾ
ಕುಲುಮೆ ಮನೆಗೆ ಸ್ವಾಮಿ
ಓಡಿ ಓಡಿ ಬಂದೂ
ಅಯ್ಯಾ ಎಳೆಯವನೂ ಕೆಂಪಣ್ಣನ
ಕುಲುಮೆ ಮನೆಯ ಗುರುವೇ
ಕಣ್ಣಾರ ನೋಡಕಂಡು
ಅವರ ಕೆಂಪಾಚಾರಿ ಮೊಕವ ದೇವ
ಮಟಾಮಟನೇ ನೋಡುತಾರೆ || ಸಿದ್ಧಯ್ಯ||

ಜಗನ್‌ ಜ್ಯೋತಿ ಧರೆಗೆ ದೊಡ್ಡಯ್ಯ
ಕೆಂಪಣ್ಣನ ಕುಲುಮೆ ಕಛೇರಿಗೆ ಬಂದು
ಕೆಂಪಚಾರಿ ಕುಲುಮೆ
ಕಛೇರಿ ಭಾಗಲಲ್ಲಿ ನಿಂತಕಂಡರು
ಧರೆಗೇ ದೊಡ್ಡವರು ಮೊಕವಾ
ಆ ಕಿರಿಕೆಂಪಣ್ಣ
ಪಟ್ಟೇ ಮಂಚದ ಮ್ಯಾಲೆ ಕೂತ್ಕಂಡು ನೋಡ್ತಾವರೇ
ಧರೆಗೇ ದೊಡ್ಡವರು ಕೆಂಪಚಾರಿ ಮೊಕಾ ಕೂಡ
ಧರೆಗೇ ದೊಡ್ಡವರು ಕಣ್ಣಿಂದ ನೋಡ್ತಾವರೇ
ಧರೆಗೆ ದೊಡ್ಡವರು
ಆ ಕೆಂಪಚಾರಿ ಮೊಕಾ ನೋಡುಬುಟ್ಟು
ಕುಲುಮೆ ಕಛೇರಿ ಒಳಗಡೆ ಬಂದು
ಎಡಬಲ ಸುತ್ತುಮುತ್ತ ತಿರುಗಿ ನೋಡುದ್ರು
ತಿರುಗಿ ನೋಡುವಾಗ
ಕುಲುಮೆ ಕಛೇರಿ ಒಳಗೆ
ಜಂತಿ ರಿಫೀಸು ತೊಲೆ ಅಡಕಿದ್ದೊ
ಅಲ್ಲಿಗೆತಕ್ಕಂಡು ಹೋಗಿ
ಬಾರೀ ಕಂಡಾಯ ಕೂಡ ವರಗಿಸ್ಬುಟ್ಟು
ನಿಶಾನೀದಾಳ ಕೂಡ ಮಡಗುಬಿಟ್ಟು
ನವಲಗಿರಿ ತೊಂಡೇನು ಕೂಡ ಮಡಗಬುಟ್ಟು
ಧರೆಗೆ ದೊಡ್ಡವರು
ಬಾರ್ಸುವಂತ ತಂಬೂರಿಯಾ
ಎದೆಮ್ಯಾಲೆ ಒತ್ತುಗಂಡು
ಕೆಂಪಾಚಾರಿ ಮೊಕಾ ದೂರದ ದೃಷ್ಟಿ
ಮಡಗೀ ನೋಡುದ್ರು
ಕಲ್ಯಾಣ ಪಟ್ಟಣ ಕಡೆ ಬಾಗಿಲಲ್ಲಿದ್ದಂತ
ಪರಮಭಕ್ತ
ಬಸುಲಿಂಗಯ್ಯ
ಆ ಜಲ್ಮನೆ ಅಳಿಸಬುಟ್ಟು
ಈ ಮುದ್ದಮ್ಮನ ಗರ್ಭಕ್ಕೆ
ನಿನ್ನಾಕ್ಕದಕ್ಕೆ ಕಂದಾ
ಬಂಗಾರ್ದ ಪಟ್ಟೇ ಮಂಚದ ಮೇಲೆ ನನ್ನ
ಮಗ ಕುಳಿತವನೇ
ನನ್ನ ಮಗ ಅಂದ್ರೇ
ಅಂದವಾದ ಮಗ
ಚಂದವದ ಮಗ
ರೂಪುಳ್ಳ ಮಗ ರೇಖೆವುಳ್ಳಾದ ಮಗ
ಬಂಗಾರದ ಗೊಂಬೆ
ಕೆಂಪಣ್ಣ
ನನ್ನ ಶಿಶುಮಗ ನನಗೆ ಎದರಾಗಿ ಕುಂತವನೇ ಅಂತೇಳಿ
ಧರೆಗೇ ದೊಡ್ಡವರು ಕೆಂಪಚಾರಿ ಮೊಕಾ ನೋಡು ಬುಟ್ಟು
ಸಂತೋಷಪಡ್ತಾವರೆ
ಧರೆಗೆ ದೊಡ್ಡವರ ಮೊಕವ
ಕೆಂಪಣ್ಣ ನೋಡುಬುಟ್ಟು ಏನೇಳ್ತಾವನೆ ಅಂದ್ರೇ
ಏನ್ರುಲ್ಲಾ ಜೀತ್ತಾಳುಗಳೇ
ಯಾವುನೋ ತಿರ್ಕವರ್ಕ ಬೂದುಬದ್ಕ
ಯಾವುದೋ ಬೀಕ್ಷುಕ ನನ್ನ ಕುಲುಮೆ
ಕಛೇರಿಗೆ ಬಂದ್ಬುಟ್ನಲ್ರೊ
ಈ ಭಿಕ್ಷ ಮಾಡು ಮುಂಡೆ ಮಕ್ಕಳ
ಮೊಕಾ ನಾನು ನೋಡುಬಾರ್ದು || ಸಿದ್ಧಯ್ಯ||

ಈ ತಿರ್ಕುತಿನ್ನೋ ಪರದೇಶಿಯ
ಕಣ್ಣಾರ ನೋಡಬಾರ್ದು || ಸಿದ್ಧಯ್ಯ||

ಈ ಜೋಳಿಗೇ ಹೊತ್ತವರ
ನೋಡದ್ರೇ ದೇವ
ಈ ಕಂಡಾಯ ಹೊತ್ತವರ
ಕಣ್ಣಿಂದ ನೋಡಿದರೆ
ಈ ತಂಬೂರಿ ಬಾರ್ಸವನ
ಮೊಕವನ್ನೆ ನೋಡಿದರೆ
ಈ ಭಿಕ್ಷಕರ ನೋಡಿದ್ರೇ
ಬಾಳ ಕ್ವಾಪ ಆಗುತ್ತಾದೆ || ಸಿದ್ಧಯ್ಯ||

ಈ ತಂಬೂರಿ ಹೊತ್ತವರು
ಈ ಕಂಡಾಯ ಹೊತ್ತವರು
ಈ ಜೋಳ್ಗೆ ಇಡ್ದವರು ನೋಡದ್ರೇ
ಬಹು ನಾಚಿಕೆ ಕಣ್ರೋ
ಯಾವನೋ ಭಿಕ್ಷಕ
ನನ್ನ ಕುಲುಮೆ ಕಛೇರಿಗೆ ಬಂದುಬಿಟ್ಟು ಕಣ್ರುಲ್ಲಾ
ಈ ಬಿಕ್ಷ ಮಾಡು ಮುಂಡೆ ಮಕ್ಕಳ್ನ
ಮೊಕಾ ನೋಡುಬ್ಯಾಡದು
ಈ ತಿರ್ಕಂದು ತಿನ್ನುವಂತ ಮುಂಡೆ ಮಕ್ಕಳ್ನ
ದರ್ಶನ ಮಾಡಬಾರ್ದು
ಇವತ್ತು

ಲೋ ಸಿದ್ದ ಬಂದವನೇ ಕಣ್ರೋ
ಸುದ್ದ ಮಾಡಿ ಕಳುಗಬೇಕು || ಸಿದ್ಧಯ್ಯ||

ಈ ಸಿದ್ದ ಎನ್ನವನಿಗೇ
ನಾ ಬುದ್ಧಿ ಕಲಿಸಿ ಕಳುಗಬೇಕು || ಸಿದ್ಧಯ್ಯ||

ಸಿದ್ಧ ಎನ್ನವನ್ಗೇ
ಬುದ್ಧಿ ಕಲಿಸಿ ಕಳುಗಬೇಕು ಕಣ್ರೋ
ಅವನು ಇತ್ತಾಗಿ ಬಂದನೋ ಕಾಣೆ
ಅತ್ತಾಗಿ ಹೋದನೊ ಕಾಣೆ || ಸಿದ್ಧಯ್ಯ||

ಅವನು ಇತ್ತಾಗೇ ಬಂದನೋ
ಅವನು ಅತ್ತಾಗೇ ಹೋದನೋ
ಗೊತ್ತಿಲ್ಲ ಎಂತ
ಎಳೆಯವನು ಕೆಂಪಣ್ಣ
ನನ್ನ ಧರೆಗೆ ದೊಡ್ಡವರ ಮೊಕವ
ಕಣ್ಣಾರ ನೋಡುತ್ತಾನೆ || ಸಿದ್ಧಯ್ಯ||

ಸಿದ್ಧ ಬಂದವ್ನೇ ಕಣ್ರೋ
ಅವ್ನಗೇ ಚೆನ್ನಾಗಿ ಬುದ್ಧಿ ಕಲಿಸಿ ಕಳುಗಬೇಕು ಕಣ್ರಲ್ಲ
ಇತ್ತಾಗಿ ಬಂದನೊ ಕಾಣೆ
ಅತ್ತಾಗೇ ಹೋರಟೋಗುಬುಟ್ಟನೊ
ಗೊತ್ತಿಲ್ಲ ಅಂತೇಳಿ
ಜಗನ್‌ಜ್ಯೋತಿ ಧರೆಗೆ ದೊಡ್ಡವರ
ಮೊಕಾನೋಡ್ಕಂಡು
ಕೆಂಪಣ್ಣ ಮಾತಾಡುವಾಗ

ಈಗ ಕೆಂಪಾಚಾರಿ ಮಾತು ನನ್ನ
ಸ್ವಾಮಿಗೆ ಅರುವಾಯಿತಲ್ಲ || ಸಿದ್ಧಯ್ಯ||

ಗುರುವೇ ಕೆಂಪಾಚಾರಿಯವರು
ಗುರುವೆ ಆಡಿದಂತ ಮಾತು
ನನ್ನ ಧರೆಗೇ ದೊಡ್ಡವರ
ಪಾದಕ್ಕೆ ಆರುವಾಯ್ತು
ಅವರು ಹರಹರ ಎಂದರಲ್ಲ
ಎರಡು ನೇತ್ರ ಮುಚ್ಚುತ್ತಾರೆ || ಸಿದ್ಧಯ್ಯ||