ಹರಹರ ಎನತೇಳಿ
ಎರಡು ನೇತ್ರ ಮುಚ್ಕಂಡರೂ
ಶಿವಶಿವ ಎನತೇಳಿ
ಎರಡು ಕರ್ಣ ಮುಚ್ಗಂಡ್ರು
ಮಹಾಗಾರು ಮಂಟೇದ ಸ್ವಾಮಿ
ಕೆಂಪಣ್ಣ
ಏಳು ವರ್ಷದ ಮಗ್ನೆ
ಎಳ್ನಾಗರು ಮರಿಯೇ
ನೀನು ಕಚ್ಚುದ್ರು ಇಸವಲ್ಲೊ ಕಂದಾ
ಮೂಸುದ್ರು ಇಸವಲ್ಲೊ ಕಂದಾ
ಕೆಂಪಣ್ಣ
ನಾನು ತಿರ್ಕಾ ವರ್ಕ
ಬೂದ್ಬಡ್ಕ ಭಿಕ್ಷಕ್ನ ಕಂದ
ನೀನು ಭಿಕ್ಷ ಮಾಡೋರು ಮೊಕಾ
ನೋಡದಿಲ್ವ ಮಗನೇ
ತಿರ್ಕಂಡು ತಿನ್ನೋರು ಮೊಕಾ
ನೀನು ನೋಡೋದಿಲ್ವಪ್ಪಾ
ನಮ್ಮಂತವ್ರ ಮೊಕಾ ನೋಡದ್ರೆ
ನಿನಗೇ ಕ್ವಾಪ ಬಂದದಾ ಕಂದಾ
ಕೆಂಪಣ್ಣ
ಇವತ್ತಿನ ದಿವಸ್ದಲ್ಲಿ ಮಗನೇ
ನಾನು ತಿರುಕಾ ವರಕ
ಬೂದ್ಬಡ್ಕ ಭಿಕ್ಷಕ ನಾನಾಗುಬುಟ್ಟೆ
ನೀನು ಬಾಳ್ದೋರು ಮಗ
ಬದಕ್ದೋರು ಮಗ
ಪುಣ್ಯವಂತರ ಮಗ ನೀನಾಗಿಬುಟ್ಟೇ ಕೆಂಪಣ್ಣ
ಹುಟ್ಟುದು ಏಳು ವರ್ಷಕ್ಕೆ
ಈ ರೀತಿ ಮಾತಾಡ್ದೆಯಲ್ಲಪ್ಪಾ
ನೀನು ಹುಟ್ಟಿ ಹತ್ತೊಂಬತ್ತು ವರ್ಷ
ವಯ್ಸ ಕಳ್ದೋಗ್ಬುಟ್ರೇ ಕಂದಾ

ಲೋ ನಾನು ಪಡದ ನರಲೋಕವ
ಲೋ ಬರಿಲೋಕ ಮಾಡುತೀಯೇ || ಸಿದ್ಧಯ್ಯ||

ಮಗನೇ ನಾನು ಪಡ್ದ ಕಂದಾ
ನರಲೋಕವಾ ಕಂದಾ
ಬರ್ಲೋಕ ಕಂದಾ
ಮಾಡ್ತಿಯೇ ನನ್ನ ಕಂದಾ
ಎಳೆಯವ್ನೇ ಕೆಂಪಣ್ಣ
ನನ್ನ ತಿರ್ಕು ವರಕ ಬೂದುಬಡ್ಕ
ಭಿಕ್ಷಕ ಅಂತ ಕರ್ದಿಯೇ ನನ್ನ ಮಗನೇ
ನನ್ನ ಭಿಕ್ಷುಕ ಅನತೇಳಿ
ಅಂದೀಯಾ ನನ್ನ ಕಂದಾ
ಕೆಂಪಣ್ಣ
ಲೋ ನಾನು ಹೊತ್ತಿರೋ ಜೋಳ್ಗೇ
ನಿನ್ನ ಕೈಲೀ ಹೊರಿಸ್ತೀನಿ
ನಾನು ಬಾರ್ಸೊ ತಂಬೂರಿಯಾ
ನಿನ್ನ ಕೈಲೀ ಬಾರ್ಸಿಸ್ತೀನಿ
ಮಗನೇ ನಾನು ಮಾಡುವ ಭಿಕ್ಷ
ನಿನ್ನ ಕೈಲೀ ನನ್ನ ಕಂದಾ
ನಾ ಮಾಡಸ್ತೀನಿ ಮಗನೇ
ನಿನ್ನ ಲಕ್ಷೀಕನ ಮಗನ ನಾಳೇ
ಭಿಕ್ಷಕನ ಮಾಡುತೀನಿ || ಸಿದ್ಧಯ್ಯ||

ಲಕ್ಷಿಕನ ಮಗನ ಕಂದಾ
ನಾಳೇ ದಿವಸ ಭಿಕ್ಷಕನ
ಮಾಡ್ತಿನಿ ಮಗನೇ ಕೆಂಪಣ್ಣ
ನನ್ನ ಭಿಕ್ಷಕ ಅಂಥ ಕರ್ದಿಯಾ ಕಂದ
ಈ ನರ್‌ಲೋಕ್ದಲ್ಲಿ ಕಂದಾ
ಭಿಕ್ಷ ಮಾಡುವಂತ ಫಲ ನಾನು
ಕೊಡದೆ ಹೋಗುಬುಟ್ರೆ
ನಿಮ್ಮ ಮನೆಗೆ ಹೋಗಿದಾಗ
ನಿಮ್ಮ ತಾಯಿ ಮುದ್ದಮ್ಮ
ನಿನ್ನ ಮನೇ ಮಂಟ್ಗಳವ್ನೆ
ಮನೆ ಬಿಟ್ಟು ಕಡ್ದೋಗೊ ಪರದೇಶಿ
ಅಂತ ಹೇಳಿದ್ದಲ್ಲಪ್ಪ
ನಾನು ಮಂಟೇದ ಲಿಂಗಯ್ಯಾ ಅಂತ
ಹೆಸರು ಕರ್ಕಂಡ್ರಲ್ಲೋ ಕಂದಾ
ನಿನ್ನ ಭಿಕ್ಷಕ್ನ ಮಾಡದೇ ಹೋದ್ರೆ ಕಂದಾ

ಲೋ ಮಂಟೇದ ಲಿಂಗಯ್ಯಾ ಅಂತ
ನಾಮುಕರಣ ನನಗ್ಯಾಕೋ || ಸಿದ್ಧಯ್ಯ||

ಮಂಟೇದ ಲಿಂಗಯ್ಯ ಎನ್ನುವಾs
ಹೆಸರು ನನಗ್ಯಾತ್ತಕ್ಕೆ ಮಗನೇ
ನಿನಗೇ ಭಿಕ್ಷ ಮಾಡುವಂತ
ಫಲ ಕೊಡ್ತಿನೀ ಅಂತೇಳಿ
ಧರೆಗೆ ದೊಡ್ಡವರು
ಆ ಕೆಂಪಾಚಾರಿ ಮೊಕಾ ನೋಡ್ತಾ
ಕುಲುಮೇ ಕಛೇರಿ ಒಳ್ಗಡೇನೆ ಬಂದ್ರು
ಬರುವಂತ ಗುರ್ಗಳು ಮೊಕಾ
ನೋಡ್ಬುಟ್ಟು ಕೆಂಪಣ್ಣ
ಏನ್ರಲ್ಲ ಜೀತ್ತಾಳುಗಳೇ
ಆ ತಿರುಕಾರವರ್ಕ ಬೂದ್ಬುಡ್ಕ ಬಿಕ್ಸಕ
ನಮ್ಮ ಕುಲುಮೆ ಕಛೇರಿಗೆ
ಬತವ್ನೆ ಕಣ್ರೋ
ಆ ಬಿಕ್ಸಕ್ನ ಮಾತ್ರ
ಯಾರು ಕಣ್ಣೆತ್ತಿ ನೋಡಬ್ಯಾಡಿ
ಅವನ ಒಂದಿಗೆ ಯಾರು
ಮಾತಾಡಬ್ಯಾಡೀ ಕಣ್ರಲ
ಕಣ್ಣೆತ್ತಿ ನೋಡ್ದವರ
ಒಂದ್ಗೆ ಮಾತಾಡ್ದವರಾ
ಕುಲುಮೆ ಕಛೇರಿ ಒಳಗೆ
ಖಂಡತ್ವಾಗೀ ಮಾಡ್ಗೋದಿಲ್ಲ
ನಿಮ್ಗೇ ತಿಂಗತಿಂಗಳ
ಸಂಬಳ ಕೂಡ ಕೋಡೋದಿಲ್ಲ
ತಲ್ಬಕ್ಕಂಡು ಕೆಲ್ಸ ಮಾಡ್ರುಲ್ಲ
ಕೆಲಸ ಮಾಡ್ರುಲ್ಲ ಅಂತೇಳಿ ಕೆಂಪಣ್ಣ
ಆಳು ಕಾಳ್ಗೆಲಲ ಬಾಳ ಬಾಳ
ಭಯ ಹುಟ್ಸುಬುಟ್ರಂತೇ
ಆಗ ಜಗತು ಗುರು ಧರೆಗೆ ದೊಡ್ಡಯ್ಯ

ಅವರ ಕುಲುಮೆ ಬೆಂಬಳ ಸ್ವಾಮಿ
ಸಾರಿ ದಾನ ಕೇಳುತಾರೇ || ಸಿದ್ಧಯ್ಯ||

ಅವರ ಕುಲುಮೆ ಬೆಂಬಳ ಗುರುವೇ
ಕುಲುಮೆ ಬೆಂಬಳ
ಸಾರಿದಾನ ಗುರುವು
ಸಾರಿ ಭಿಕ್ಷ ದೇವ
ಕೇಳ್ತಾರೇ ನನ್ನಪ್ಪಾ
ಗುರುವೇ ಅಷ್ಟೊಂದು ಕುಲುಮೆ ಒಳಗೆ
ಒಬ್ಬರುವೇ ಮಾತಾಡಲಿಲ್ಲ || ಸಿದ್ಧಯ್ಯ||

ಅಷ್ಟೊಂದು ಕುಲುಮೆ ಒಳಗೇ ದೇವಾ
ಯಾರು ಮಾತಾಡ್ಲಿಲ್ಲ
ಅಷ್ಟೊಂದು ಕುಲುಮೆ ಒಳಗೆ
ಕೆಂಪಾಚಾರಿ ಭಯಕ್ಕೋಸ್ಕರವಾಗಿ
ಧರೆಗೆ ದೊಡ್ಡವರ
ಯಾರು ಕಣ್ಣೆತ್ತಿ ನೋಡ್ಲಿಲ
ಯಾರು ಮಂಟೇದ ಲಿಂಗಪ್ಪ
ಮೊಕಾ ಮಟಮಟ್ನೆ ನೋಡಲಿಲ್ಲ
ಆಗ ಜಗನ್‌ಜ್ಯೋತಿಯವರು
ಮಂಟೇದ ಲಿಂಗಪ್ಪ
ಧರೆಗೆ ದೊಡ್ಡವರು
ಎಲ್ಲ ಕುಲುಮೆ ಬೆಂಬಳ
ಭಿಕ್ಸ ಸಾರ್ಕಂಡು ಸಾರ್ಕಂಡು
ಕೆಂಪಾಚಾರಿ ಬಳಿಗೆ ಬಂದರು
ಕೆಂಪಣ್ಣನ ಮುಂಭಾಗದಲ್ಲಿ
ನಿಂತ್ಗಂಡು
ಏನಂತ ಮಾತಾಡ್ತರೇ ಅಂದರೇ

ಕಂದಾ ಯಾರಪ್ಪ ನನ್ನ ಕಂದಾ
ಯಾರಪ್ಪ ನನ್ನ ಮಗನೇ
ಯಾರಪ್ಪ ನನ್ನ ಮಗು
ಈ ಕುಲುಮೆ ಮನೆಯು ಒಳಗೆ ಕಂದಾ
ಪುಟ್ಟು ಪುಟ್ಟು ಯಜಮಾನಾ
ಯಾರು ನನ್ನ ಕಂದಾ
ಯಾರಪ್ಪ ನನ್ನ ಮಗನೇ
ಕಂದಾ ಕೆಂಪಚಾರಿ ಎನ್ನವನು
ಈ ಗುಂಪಿನೊಳಗೆ ಯಾರು ಕಂದಾ || ಸಿದ್ಧಯ್ಯ||

ಯಾರು ಕಂದಾ
ಯಾರಪ್ಪ ಮಗು ಎಂದರು
ಧರೆಗೆ ದೊಡ್ಡವರ ಮಾತ ಕೇಳಿ
ಕೆಂಪಣ್ಣ
ಛೇ ಮುಂಡೆಮಗನೆ
ಯಾವುನ್ಲೆ ಭಿಕ್ಸಕ
ಯಾವುನ್ಲ ಪರದೇಶಿ
ನನ್ನ ಕುಲುಮೆ ಕಾರ್ಖಾನೆಗೆ ಬಂದು
ಕೆಂಪಾಚಾರಿ ಅಂತ ಕರ್ದ
ಪರದೇಶಿ ಯಾವುನ್ಲ ಜಂಗುಮ
ಲೋ ಕೆಂಪಚಾರಿ ಎಂದ್ರೆ ನಿನ್ನ
ಸರ್ಮಾಡ್ತೀನಿ ಎಂದಾನಲ್ಲ || ಸಿದ್ಧಯ್ಯ||

ಲೋ ಕೆಂಪಚಾರಿ ಎಂದ್ರೆ ನಿನ್ನ
ಸಮಾಡ್ತೀನಿ ಕಾಣೋ
ಹುಚ್ಚು ಕಾಡು ಪರದೇಶಿ
ನಿಮ್ಮಪ್ಪ ಕಟ್ದಾ ಹೆಸರೇನೊ
ನಿಮ್ಮವ್ವ ಕಟ್ದ ನಾಮಕರಣವೇನೊ || ಸಿದ್ಧಯ್ಯ||

ಕೆಂಪಾಚಾರಿ ಎನ್ನವರು ಯಾವನೋ ಪರದೇಶಿ
ನಿಮ್ಮಪ್ಪ ಕಟ್ದ ಹೆಸರೇನೊ
ನಿಮ್ಮವ್ವ ಕಟ್ದ ನಾಮಕರಣವೇನೊ ಪರದೇಶಿ
ನನ್ನ ಕುಲುಮೆ ಕಾರ್ಖಾನೆಗೆ ಬಂದು
ಕೆಂಪಾಚಾರಿ ಅಂದು ಕರ್ದ
ಮುಂಡೇ ಮಗ ಯಾವುನ್ಲ ಜಂಗುಮ ಎಂದರು
ಯಾಕಪ್ಪ ಕೆಂಪಣ್ಣ

ಏನಂತ ನಿನ್ನ ಕರಿಬೇಕಪ್ಪ
ನಿನ್ನ ಕರಿವಂತ ರೀತಿನಾರು
ಹೇಳುಬುಡು ಕಂದಾ
ಹೇಳಪ್ಪಾ ಎಂದರು
ಛೇ ಮುಂಡೇಮಗನೇ
ನನ್ನ
ಹೆತ್ತ ತಾಯಿ ಹುಟ್ಟಸ್ತ ತಂದೆ
ನನ್ನ ಏಳನೂರು ಜನ ಜೀತಗಾರ್ರು‍
ಮೂವತ್ತಮೂರಳ್ಳಿ ಜನಗಳು
ದೊಡ್ಡವರು ಚಿಕ್ಕವರು
ಮುಪ್ಪನಕಾಲದ ಮುದುಕ್ರು
ಯಾರೂ ಕೂಡ ನನ್ನ ಕೆಂಪಚಾರಿ
ಅಂತ ಕರಿಲಿಲ್ಲ
ಈ ಭೀಕ್ಷ ಮಾಡು ಮುಂಡೇ ಮಗ ನನ್ನ
ಕೆಂಪಚಾರಿ ಎನ್ನಬಹುದಾ || ಸಿದ್ಧಯ್ಯ||

ಈ ತಿರ್ಕತಿನ್ನೋ ಜಂಗುಮಾ
ನನ್ನ ಕೆಂಪಚಾರಿ ಎನ್ನಬಹುದಾ|| ಸಿದ್ಧಯ್ಯ||

ಭಿಕ್ಸ ಮಾಡುವಂತ ಪರದೇಶಿ
ನನ್ನ ಕೆಂಪಚಾರಿ ಅಂತ ಕರ್ದುಬುಟ್ಟಿಯಲ್ಲೋ
ನಿನ್ನ ಅಹಂಕಾರೂ ಎಷ್ಟಾಗುಬುಡ್ತು
ನಿನ್ನ ಅಹಂಕಾರೂ ಎಷ್ಟಾಗುಬುಡ್ತು
ದೋರಣೆ ಎಷ್ಟಾಯ್ತುಲ್ಲ ಪರದೇಶಿ ಎಂದರು
ಕೆಂಪಣ್ಣ ಕೆಂಪಣ್ಣಾ
ನಿನ್ನ ಏನಂತ ಕರಿಬೇಕಪ್ಪ
ಕರಿವಂತ ರೀತಿನಾರು ಹೇಳುಬುಡು
ಕಂದಾ ಕೇಳವ್ವ ಎಂದರು
ಹೇ ಜಂಗುಮ
ಹೇ ನನ್ನ ಏನಂತ ಕರಿತರೇ ಗೊತ್ತೇನೋ
ದೊಡ್ಡ ಬುದ್ಧಿ ಚಿಕ್ಕ ಬುದ್ಧಿ
ಪುಟ್ಟ ಬುದ್ಧಿ ರಾಜು ಬುದ್ಧಿ
ಕೆಂಪಣ್ಣ
ಕೆಂಪಪ್ಪ ಅಂತ ಕರಿತರೇ ಪರದೇಶಿ
ನೀನು ಬಂದು ಕೆಂಪಾಚಾರಿ
ಅಂತ ಕರ್ದು ಬುಟ್ಟಿಯಲ್ಲ

ಕೆಂಪಾಚಾರಿ ಎಂದ್ರೇ ನಿನ್ನ
ಸರ್ಮಾಡ್ತಿನೀ ಎಂದಾರಲ್ಲ || ಸಿದ್ಧಯ್ಯ||

ಲೋ ಆಚಾರಿ ಎನ್ನುವನಿಗೇ
ಗಾಚಾರ ಬಿಡಿಸಬೇಕು || ಸಿದ್ಧಯ್ಯ||

ಆಚಾರಿ ಎನ್ನವನಿಗೆ
ಗಾಚಾರ ಬಿಡಿಸ್ಬೇಕ ಪರದೇಶಿ ಎಂದರು

ಧರೆಗೆ ದೊಡ್ಡವರು
ಮಂಟೇದ ಲಿಂಗಪ್ಪ
ಪರಂಜ್ಯೋತಿ ಪಾತಾಳ ಜ್ಯೋತಿಯವರು
ಕೆಂಪಾಚಾರಿ ಮಾತನ್ನೇ ಕೇಳಬುಟ್ಟು
ಏನಪ್ಪ ನನ್ನ ಕಂದಾ ಕೆಂಪಣ್ಣ
ಕೆಂಪಪ್ಪ
ಹೇಳ್ತಿನಿ ಕೇಳು ಕಂದಾ
ಆಗಲೀ ನನ್ನ ಕಂದಾ
ಆಗಲೀ ಕೆಂಪಣ್ಣ
ಆಗಲೀ ಮಗು ಕೆಂಪಣ್ಣಾ
ನೀನಾಡ್ತಕ್ಕಂತ ಮಾತು
ನನಗೆ ಅರ್ಥವಾಯ್ತು ಮಗನೆ
ನನಗೆ ಗೊತ್ತಾಯ್ತು ಕಂದಾ
ಆಗಂದು ಜಗತ್ತು ಗುರು ಧರೆಗೆ ದೊಡ್ಡಯ್ಯ

ಕೆಂಪಾಚಾರಿ ಮುಂದೇ ಗುರುವೇ
ಬಾಳ ಚಿಂತೆ ಮಾಡುತಾರೆ || ಸಿದ್ಧಯ್ಯ||

ಕೆಂಪಣ್ಣನ ಕುಲುಮೆ ಮುಂದೆ ದೇವ
ನಿಂತ್ಗಂಡು ಯೋಚನೆ ಮಾಡ್ಕಂಡು
ಜಗನ್‌ಜ್ಯೋತಿ ಪಾತಾಳ ಜ್ಯೋತಿಯವರು
ಕೆಂಪಣ್ಣ
ನಾನು ಯಾರು ಏನು ಅನ್ನುವುದು
ನನ್ನ ಮೈಮೆ ಮೈತ್ಗಾರ ನಿನಗೆ
ಇನ್ನೂ ಗೊತ್ತಿಲ್ಲ ಕಂದಾ

ನಾನೊಬ್ಬ ಗುರು ಕಾಣೋ
ಅಪ್ಪಾ ನೀನು ನನಗೆ ಶಿಷ್ಯ ಕಾಣೋ || ಸಿದ್ಧಯ್ಯ||

ನಾನೊಬ್ಬ ಗುರು ಕಂದಾ
ನೀನು ನನಗೆ ಸಿಸು ಮಗ ಕಣೋ
ಕಂದಾ ಕೆಂಪಣ್ಣ ಎಂದರೂ
ಧರೆಗೆ ದೊಡ್ಡವರ ಮಾತು
ಎರಡು ಕರ್ಣದಲ್ಲಿ ಕೇಳ್ಬುಟ್ಟು ಕೆಂಪಣ್ಣ
ಛೇ ಮುಂಡೆ ಮಗನೆ
ನೀನು ನನಗೆ ಗುರು
ನಾನು ನಿನಗೇ ಶಿಷ್ಯಾನೇನೋ

ಲ್ಲೋ ನೀನಲ್ಲ ಗುರು ಕಾಣೋ
ಮೊದಲ್ನೆ ಗುರುವು ನಾನು ಕಾಣೋ || ಸಿದ್ಧಯ್ಯ||

ಕೇಳೋ ಜಂಗಮಾ
ನಮ್ಮ ಆಚಾರ ಜಾತಿಯವರು
ಬ್ರಹ್ಮ ಕುಲ್ದವರು
ಒಕ್ಕಲು ಪಂಚಾಳ್ದವರು ಅಂದ್ರೆ
ಈ ಪ್ರಪಂಚಕ್ಕೆ ನಾವೇ ಗುರುಗಳು
ನಮಗಿಂತ ಗುರುಗಳು
ಯಾರಿದ್ದರ್ಲ ಪರದೇಶಿ
ನಮ್ಮ ಬಳಿಗೇ ಬಂದು
ನಾನು ಗುರು ನೀನು ಶಿಷ್ಯಾ
ಅಂತ ಕೇಳದಿಯಾ
ನೀನೆಂದ್ಗೂ ಗುರುವಲ್ಲ

ನಾನು ನಿನಗೆ ಗುರು ಕಾಣೋ
ನೀನು ನನಗೆ ಶಿಷ್ಯಾ ಕಾಣೋ || ಸಿದ್ಧಯ್ಯ||

ಗುರುವೇ ಕೆಂಪಣ್ಣನ ಮಾತು
ಕರ್ಣದಲ್ಲಿ ಕೇಳಿ
ಅಲ್ಲಮಪ್ರಭು ಮಂಟೇದಲಿಂಗಯ್ಯ
ನನ್ನ ಮಾಯ್ಕಾರದ ಒಡೆಯ
ಏನಪ್ಪ ನನ್ನ ಕಂದಾ
ಏನಪ್ಪ ನನ್ನ ಮಗನೇ
ಕೇಳಪ್ಪ ನನ್ನ ಕಂದಾ
ಎಳೆಯವನೆ ಕೆಂಪಣ್ಣ
ನೀ ಯಾವು ರೀತಿ ಒಳಗೆ
ನೀ ಗುರುವಾದೆ ನನ್ನ ಕಂದಾ
ನಾನು ಯಾವು ರೀತಿಯೊಳಗೆ ನಿನ್ನ
ಶಿಷ್ಯಾನಾದೆ ನನ್ನ ಕಂದಾ
ನೀನು ಗುರುವಾದ ತೆರುವ ಕಂದಾ
ಹೇಳಪ್ಪ ಎಂದಾರಲ್ಲ || ಸಿದ್ಧಯ್ಯ||

ಹೇಳಪ್ಪ ನನ್ನ ಕಂದಾ ಕೆಂಪಣ್ಣ
ಯಾವ ರೀತಿ ನೀನು ಗುರುವಾದೇ ಕಂದಾ
ನಾನು ಯಾವು ರೀತಿ ನಿನಗೇ
ಶಿಷ್ಯಾನಾದ್ನೆಪ್ಪಾ
ನೀನು ಗುರುವಾದ ರೀತಿನಾರು
ಹೇಳು ಕಂದಾ ಎಂದರು
ಹೇ ಜಂಗುಮಾ
ನಾನು ಯಾವ ರೀತಿ ಗುರುವಾದೇ
ನೀ ಯಾವ ರೀತಿ ಶಿಷ್ಯನಾದೆ ಅಂದ್ರೇ
ಹೇಳ್ತಿನೀ ಕೇಳು

ನೀನು ಹೊತ್ತಿರುವ ಕಂಡಾಯ
ಯಾರು ತಾನೇ ಮಾಡಿದವರು || ಸಿದ್ಧಯ್ಯ||

ನೀನು ಬಾರ್ಸುವ ತಂಬೂರಿ
ಅದನ್ಯಾರು ಮಾಡಿದವರು|| ಸಿದ್ಧಯ್ಯ||

ನೀನು ಕಟ್ಟಿರುವ ಲಿಂಗ
ಅದನ್ಯಾರು ಮಾಡಿದವರು|| ಸಿದ್ಧಯ್ಯ||