ನೀನು ಒತ್ಗಂಡು ಬಂದಿರುವ ಕಂಡಾಯ
ಈಗಲೀಗ ಯಾರು ಮಾಡುಕೊಟ್ಟರು ಕಂಡಾಯ ಪರದೇಶಿಸ
ನೀನು ಬಾರ್ಸಕಂಡು ಬಂದಿರುವಂತ
ತಂಬೂರಿ ಅದು ತಾನೇ ಯಾರು ಮಾಡುದ್ರು
ಈಗಲೀಗ ನೀನು ಕತ್ತಲಲ್ಲಿ
ಕಟ್ಟಿರುವಂತ ಲಿಂಗ
ಅದು ತಾನೇ ಯಾರು ಮಾಡುದ್ರು ಜಂಗುಮ
ನಿನ್ನ ಕಂಡಾಯ ಮಾಡ್ದವರು ನಾವು
ತಂಬೂರಿ ಮಾಡ್ದವರು ನಾವು
ಲಿಂಗ ಮಾಡ್ದವರು ನಾವು
ನಿನ್ನ ಜಗಟೆ ಮಾಡ್ದವರು ನಾವು
ಗಂಟೆ ಮಾಡ್ದವರು ನಾವು ಓಹೋ
ಈಗಲೀಗ ಹೇಳ್ತಿನೀ ಕೇಳು ಜಂಗಮ
ನಮ್ಮ ಆಚಾರ ಜಾತಿಯವರು ಮಾಡ್ಕೊಟ್ಟ
ಕಂಡಾಯ ನಮ್ಮ ಆಚಾರ ಜಾತಿಯವರು
ಮಾಡ್ಕೊಟ್ಟ ತಂಬೂರಿ
ನಮ್ಮ ಆಚಾರಿ ಜಾತಿಯವರು ಮಾಡ್ಕೊಟ್ಟ ಲಿಂಗ
ನಮ್ಮ ಆಚಾರಿಯವರು ಮಾಡಿಕೊಟ್ಟ ಜಾಗಟೆ ಗಂಟೆ
ನಾವು ಮಾಡ್ದ ಬಿರುದು ಲಾಂಛನ
ಒತ್ಗೊಂಡು ನಮ್ಮ ದಂಡ್ಯಕ್ಕೆ ಬಂದು
ನಾನು ಗುರು ನೀನು ಶಿಷ್ಯ ಅಂತ ಕೇಳಿದೆಯಾ
ಕಂಡಾಯ ಮಾಡೋರ್ಗೆ ಎಷ್ಟು ಕಷ್ಟ
ಒತ್ಕಂಡು ತಿರ್ಗವನ್ಗೆ ಕಷ್ಟವಿಲ್ಲ ಪರದೇಶಿ
ತಂಬೂರಿ ಮಾಡೋರ್ಗೆ ಎಷ್ಟು ಕಷ್ಟ
ಬಾರ್ಸೋನ್ಗೆ ಕಷ್ಟವಾ
ಲಿಂಗಾ ಮಾಡೋರ್ಗೆ ಎಷ್ಟು ಕಷ್ಟ
ಕಟ್ಕಬುಡೋನ್ಗೆ ಕಷ್ಟವೇನೋ
ಜಗಟೆ ಮಾಡೋರ್ಗೆ ಎಷ್ಟು ಕಷ್ಟ
ಬಡ್ಕೋಳವರ್ಗೆ ಕಷ್ಟವ
ಗಂಟೆ ಮಾಡವರ್ಗೆ ಎಷ್ಟು ಕಷ್ಟ
ಅಳ್ಳಾಡ್ಸೋದು ಕಷ್ಟವೇನೋ

ಲೋ ಗಂಟೆ ಮಾಡೋರು ಮೊದಲ್ನೆ ಗುರುವು
ಗಂಟೆ ಬಾರ್ಸೋನು ಎರಡ್ನೆ ಗುರುವು || ಸಿದ್ಧಯ್ಯ||

ಲೋ ಕಂಡಾಯ ಮಾಡೋರು ಮೊದಲ್ನೆ ಗುರುವು
ಹೊತ್ತಕ್ಕಂಡು ತಿರ್ಗೋನು ಎರಡ್ನೇ ಗುರುವು || ಸಿದ್ಧಯ್ಯ||

ಲೋ ತಂಬೂರಿ ಮಾಡೋರು ಮೊದಲ್ನೆ ಗುರುವು
ಅದುನ್ನ ಬಾರ್ಸೋನು ಎರಡ್ನೆ ಗುರುವು|| ಸಿದ್ಧಯ್ಯ||

ಅಯ್ಯಾ ಲಿಂಗ ಮಾಡೋರು ಮೊದಲ್ನೆ ಗುರುವು
ಕಟ್ಕಳವನು ಎರಡ್ನೆ ಗುರುವು || ಸಿದ್ಧಯ್ಯ||

ಲೋ ಮೊದಲ್ನೇ ಗುರುವು ನಾನು ಕಾಣೋ
ಎರಡ್ನೆ ಗುರುವು ನೀನು ಕಾಣೋ || ಸಿದ್ಧಯ್ಯ||

ಮೊದಲ್ನೇ ಗುರುವು ನಾವು
ಎರಡ್ನೇ ಗುರು ನೀನು ಕಾಣೋ ಪರದೇಶಿ
ನಾನು ನಿನಗೇ ಗುರು
ನೀನು ನನಗೆ ಶಿಷ್ಯ ಕನೋ
ಜಂಗುಮ ಎಂದರು
ಕೆಂಪಣ್ಣನ ಮಾತ ಕೇಳ್ಬುಟ್ಟು
ಧರೆಗೆ ದೊಡ್ಡಯ್ಯ
ಏನಪ್ಪ ನನ್ನ ಕಂದ ಕೆಂಪಣ್ಣ
ನೀನೆ ನನಗೆ ಗುರುವಾಗುಬಿಟ್ಟಿಯಾ ಕಂದಾ
ನಾನು ನಿನಗೆ ಶಿಷ್ಯನಾದೆನೆ ಮಗು
ಆಗು ಕಂದಾ
ಕೆಂಪಣ್ಣ
ನನಗೇ ನೀನು ಗುರುವಾಗು
ನಾನೇ ನಿನಗೆ ಶಿಷ್ಯನಾಯ್ತೀನಿ ಗುರು
ಕೆಂಪಣ್ಣ
ನನ್ನ ನೋಡಿಬುಟ್ಟು
ನಿನ್ನಂತ ನರಮಾನವ ಅಂತೇಳಿ ನನ್ನ ತಿಳ್ಕಂಡು
ನನ್ನೊಂದಿಗೆ ಮಾತಾಡಿಯಾ ಕಂದಾ
ಕೆಂಪಣ್ಣಾ

ನೊನೊಬ್ಬ ದೇವ್ರು ಕಣೋ
ನೀನೊಬ್ಬ ನರಮನುಷ್ಯ || ಸಿದ್ಧಯ್ಯ||

ನೀನೊಬ್ಬ ನರಮಾನವ ಕಂದಾ
ನಾನು ದೇವುರು ಕಣಪ್ಪ ಕೆಂಪಣ್ಣ ಎಂದರು
ಏ ಜಂಗಮ
ನಾನು ನರಮನುಷ್ಯ
ನೀನು ದೇವರೇನೂ
ಛೇ ಮುಂಡೇ ಮಗನೇ
ನಾವಿಲ್ಲದೆ ದೇವರೆಲ್ಬತ್ತೋ
ದೇವ್ರು ಪಡೆದವರು ನಾವು
ದೇವ್ರು ತ್ರಿಷಣ ಮಾಡ್ದವರು ನಾವು
ಈ ನರಲೋಕಕ್ಕೆ ದೇವ್ರ ತಂದವರು
ನಾವಲ್ಲದೆ ಪರದೇಶಿ

ಲೋ ನೀನಲ್ಲ ದೇವ್ರು ಕಾಣೋ
ಮೊದಲ್ನೇ ದೇವ್ರು ನಾವು ಕಾಣೋ || ಸಿದ್ಧಯ್ಯ||

ಅಯ್ಯಾ ನೀನಲ್ಲ ದೇವುರು
ಮೊದಲ್ನೇ ದೇವ್ರು ನಾವು
ಹಾಗಂದ ಕೆಂಪಣ್ಣ
ಈ ಕೆಂಪಣ್ಣನ ಮಾತ ಕೇಳಿ
ಏನು ಮಾತನಾಡತಾರೆ || ಸಿದ್ಧಯ್ಯ||

ಏನಪ್ಪ ನನ್ನ ಕಂದಾ ಕೆಂಪಣ್ಣ
ನೀನೆ ಮೊದಲ್ನೆ ದೇವರಾದೀಯಾ ಕಂದಾ
ನಾನು ಎರಡ್ನೇ ದೇವರಾದ್ನಪ್ಪ
ಕೆಂಪಣ್ಣ
ನೀನು ಯಾವ ರೀತಿ ದೇವರಾದೆ
ನಾನು ಯಾವು ರೀತಿ ಎರಡನೇ
ದೇವುರಾದಿ ಕಂದಾ ಎಂದರು
ಏ ಜಂಗಮ
ನಾವು ಯಾವು ರೀತಿ ದೇವರಾದೋ ಗೊತ್ತಾ
ನಮ್ಮ ದೊಡ್ಡಪ್ಪನ ಮಕ್ಕು
ಚಿಕ್ಕಪ್ಪನ ಮಕ್ಳು
ನಾವು ಅಣ್ಣ ತಮ್ಮಂದಿರು
ಭಾವ ಭಾವೈ‌ಕ್ಳು
ನಾವು ಕಾಡಿಗೆ ಹೋಯ್ತೀವಿ
ಒಂದು ಕರಿತಲ್ಲ ತರಿತಿವಿ
ಆದ ಕಾಲಲ್ಲಿ ಮೆಟ್ಟಕ್ಕಂಡು
ಅದಕ್ಕೆ ಉಗಿತೀವಿ ತೊಳಿತೀವಿ
ಲೋ ದೊಡ್ಡ ಉಳಿಯ ತಗದು
ಚಿಕ್ಕ ಉಳಿಯ ತಗದು
ಸತ್ಗೀಯ ಇಡಕ್ಕಂಡು
ನಾವು ಹನ್ನೆರಡು ಉಳಯತಗದು
ನಾವು ಹನ್ನೆರಡು ಏಟ ವಡದು
ಒಂದು ವಿಗ್ರವ ಮಾಡ್ತೀವಿ
ಒಂದು ದೇವರನ್ನೆ ಮಾಡ್ತೀವಿ
ಅಯ್ಯ ನಾವು ಮಾಡ್ದ ವಿಗ್ರ
ನಾವು ದೊಡ್ಡ ದೇವ್ರು
ಆಗಂದಾರೆ ಜಂಗುಮ
ಲೋ ಚಿನ್ನದಲ್ಲಾದ್ರು ಸರಿಯೇ
ಬೆರಳಿಲಾದ್ರು ಸರಿಯೇ
ಕಂಚ್ನಿಲ್ಲಾದ್ರು ಸರಿಯೇ
ತಾಮ್ರದಲ್ಲೂ ಸರಿಯೇ
ಅಯ್ಯಾ ನಾವು ಮಾಡ್ದ ವಿಗ್ರ
ನಾವು ಮಾಡ್ದ ದೇವ್ರುರು
ನೀ ತಕ್ಕಂಡು ಹೋಯ್ತಿಯೆ
ಮನೆಯಲ್ಲಾದ್ರು ಸರಿಯೇ
ಮರ್ದಡಿಲ್ಲಾದ್ರ ಸರಿಯೇ
ನಾವು ಮಾಡ್ದ ವಿಗ್ರ
ನಾವು ಮಾಡ್ದ ದೇವರ
ನೀ ಪೂಜಿಕ್ಕಂಡು ಪರದೇಶಿ
ಅದಕ್ಕೆ ಕಾಯವಡಿತೀಯೆ
ನೀನು ಹಣ್ಣ ಮುರಿತೀಯೆ
ಕರ್ಪೂರ ಸಾಂಬ್ರಾಣಿ
ಲೋಭ ಬೆಳಗುತೀಯೆ
ನನಗೆ ವರ ಕೊಡೋ ದೇವ್ರು ಅಂತ
ಬಿದ್ದು ಬಿದ್ದು ಹೇಳುತೀಯೆ || ಸಿದ್ಧಯ್ಯ||

ವರ ಕೊಡಪ್ಪ ದೇವ್ರೆ ಅಂತೇಳಿ
ಬಿದ್ದು ಬಿದ್ದು ಹೇಳ್ತಿಯೆ ಜಂಗಮ
ಆ ದೇವ್ರು ನಿನಗೆ ಯಾತಕ್ಕೆ ವರ ಕೊಡ್ತದೆ ಗೊತ್ತೇನೊ
ನನ್ನ ಪೂಜೆ ಮಾಡುವಂತ
ತಮ್ಡಿಗೆ ಮೋಸಮಾಡ್ಬಾರ್ದು ಅಂದ್ಬುಟ್ಟು
ಆ ದೇವ್ರು ನಿನಗೆ ವರ ಕೊಡ್ತದೆ
ಆ ದೇವರು ವರಕೊಟ್ಟುಬುಟ್ರೇ
ನೀನೇ ದೇವರಾದಿಯಾ
ದೇವ್ರಮಾಡೋರ್ಗೆ ಎಷ್ಟು ಕಷ್ಟ
ಪೂಜೆ ಮಾಡವನ್ಗೆ ಕಷ್ಟವಲ್ಲ ಪರದೇಶಿ

ಲೋ ದೇವರು ಮಾಡೋರು ಮೊದಲ್ನೆ ದೇವರು
ಪೂಜೆ ಮಾಡೋವ್ನು ಎರಡನೇ ದೇವರು || ಸಿದ್ಧಯ್ಯ||

ಅಯ್ಯಾ ಮೊದಲ್ನೇ ದೇವರು ನಾನು ಕಾಣೋ
ಎರಡ್ನೆ ದೇವರು ನೀನು ಕಾಣೋ || ಸಿದ್ಧಯ್ಯ||

ಮೊದಲ್ನೇ ದೇವರು ನಾನು ಪರದೇಶಿ
ಎರಡ್ನೇ ದೇವರು ನೀನು ಕಣೋ
ಜಂಗಮ ಎಂದರು
ಇಂತ ಕೆಂಪಚಾರಿ ಮಾತ ಕೇಳ್ಕಂಡು
ಜಗನ್‌ಜ್ಯೋತಿ ಧರೆಗೆದೊಡ್ಡವರು
ಕೆಂಪಣ್ಣ
ಆಗಾದರೇ ಮೊದಲ್ನೇ ದೇವರು
ನೀನಾದಿಯಪ್ಪ
ಎರಡ್ನೆ ದೇವರು ನಾನಾದನೋ ಕಂದ
ಆಗಲೀ ಮಗು ಕೆಂಪಣ್ಣ
ಕೆಂಪಣ್ಣ
ನನ್ನ ಮಹಿಮೆ ಮೈತ್ಗಾರ
ಈ ನರಲೋಕದಲ್ಲಿ ಕಂದ
ನರ ಮಾನವರು ಯಾರು ತಾನೆ ಬಲ್ಲರು ಕಂದಾ
ಕೆಂಪಣ್ಣ
ಭೂಮಿ ಭೂಲೋಕ ಕಲ್ಯಾಣ ಕೈಲಾಸ
ಈ ನಡುವೆ ನರ್‌ಲೋಕಕ್ಕೆ
ಮಗನಾಗಿರ್ತಕ್ಕಂತ
ಈ ನರ್ ಲೋಕಕ್ಕೆ ಗಂಡನಾಗಿರ್ತಕ್ಕಂತ
ಗಂಡು ದೇವರು ನಾನು ಕಂದಸದ
ನರಲೋಕಕ್ಕೆ ಮಗನೇ
ಗಂಡನಾಗಿರ್ತಕ್ಕಂತ ಗಂಡು ದೇವರು
ಜೊತೆಯೊಳಗೆ ಈ ರೀತಿ
ಮಾತಾಡಬೌದೇ ಕೆಂಪಣ್ಣಾ

ಅಯ್ಯಾ ನೀನಲ್ಲ ಗಂಡ
ಮೊದಲ್ನೇ ಗಂಡ ನಾವು
ಕೇಳು ಪರದೇಶಿ
ಕೇಳು ಭಿಗಸಿಕ
ಆಗಂದವನೇ ಕೆಂಪಣ್ಣ
ಏನಪ್ಪ ಕಂದಾ
ಏನಪ್ಪ ಮಗನೇ
ಎಳೆಯವನೇ ಕೆಂಪಣ್ಣ
ನೀ ಯಾವು ರೀತಿಯೊಳಗೇ
ಗಂಡನಾದೇ ಕಂದಾ
ಯಾವು ರೀತಿಯೊಳಗೇ ಕಂದಾ
ಗಂಡನಾದೇ ಕಂದಾ
ಯಾವು ರೀತಿಯೊಳಗೇ
ಗಂಡನಾದೇ ನನ್ನ ಮಗನೇ
ನೀ ಗಂಡನಾದ ತರವ ಕಂದಾ
ಒಡದೇಳು ಎಂದಾರಲ್ಲ || ಸಿದ್ಧಯ್ಯ||

ಯಾವ ರೀತಿ ಒಳಗೆ ಕಂದಾ
ನೀನು ಗಂಡನಾದಿಯಪ್ಪ
ಎಳೇ ಕೆಂಪಣ್ಣ
ನೀನು ಗಂಡನಾದ ರೀತಿನಾರು
ಹೇಳ್ಬುಡು ಕಂದಾ ಎಂದರು
ಏ ಜಂಗುಮ
ನಾವು ಯಾವು ರೀತಿ
ಗಂಡನಾದೊ ಗೊತ್ತೇನು
ಊರು ಊರು ನಾಡು ನಾಡು
ರಾಜ್ಯ ರಾಜ್ಯದ ಮೇಲೆ
ಕುರುಚು ಕುಂಬಾರ್ಗೇರಿ
ಒಕ್ಕಲ್ಗೇರಿ ವಾಜರುಗೇರಿ
ಹೊನ್ನಯ್ಯನ್ಗೇರಿ ಚೆನ್ನಯ್ಯನಕೇರಿ
ನಿಮ್ಮ ಕುಲೆಂಟು ಜಾತಿ
ಮುಂಡೇ ಮಕ್ಕಳುವೇ
ಸಾವುರಾರು ರೂಪಾಯಿ ತಂದು
ನನ್ನ ಕೈಲಿ ಕೊಡ್ಬುಡ್ತೀರಿ
ಆಚಾರಪ್ಪ ಮಾಡ್ಕೋಡ್ರಪ್ಪ
ಆಚಾರಪ್ಪ ಮಾಡ್ಕೋಡ್ರಪ್ಪ
ಅಂತ ಬತ್ತೀರಿ ಮುಂಡ ಮಕ್ಕಳೆ
ನಮ್ಮ ಆಚಾರಿ ಜಾತಿಯವರು
ಏನ್ಮಾಡ್ತಿವಿ ಗೊತ್ತ
ಲೋ ಮುಂಡೆಗೆ ಮಕ್ಕಕ ಸಾವು
ಮಾಡ್ತೀವಿ ಪರದೇಶಿ
ಕತ್ತಿಗೆ ಪದಕ ನಾವು
ಮಾಡ್ತಿವೀ ಜಂಗುಮ
ಅಯ್ಯಾ ಕೈನ ಕಡ್ಗ ನಾವು
ಕೈನ ಬಳೆನಾವು
ಬೆಟ್ಟುನುಂಗುರ ನಾವು
ನಾವು ಒಡ್ಡನ ದಾಬ ನಾವು
ಮಾಡ್ತಿವಿ ಒರದೇಶಿ
ನಾ ಕಾಲಿನ ಚೈನ ನಾವು
ಮಾಡ್ತೀವಿ ಜಂಗುಮ
ಆ ಕಾಲುನು ಮುರಿ ನಾವು
ಮಾಡುತ್ತೀವಿ ಪರುದೇಶಿ
ಈ ಸುತ್ತು ಮಿಂಚು ನಾವು
ಮಾಡುತೀವಿ ಜಂಗುಮ
ಹನ್ನೊಂದೀಡು ನಿಮ್ಮದು ಕಣೋ
ಇನ್ನೊಂದೀಡು ನಾವೆ ಕಾಣೋ || ಸಿದ್ಧಯ್ಯ||

ಹನ್ನೊಂದೀಡಿ ನಿಮ್ಮದು
ಇನ್ನೊಂದೀಡು ನಮ್ಮದು ಕಣೋ ಜಂಗುಮ
ಹನ್ನೊಂದೀಡು ಬಡಬಂಗಾರವೆಲ್ಲ ನಿಮ್ಮದು
ಇನ್ನೊಂದೀಡು ನಮ್ಮದು
ಏ ಜಂಗುಮ
ನಮ್ಮೀಡು ಬರೋಗಂಟಾ
ನಿನ್ನ ಮನೆಕಾಲವೇ ನಡೆಯೋದಿಲ್ಲ
ನಮ್ಮೀಡು ಬರೋಗಂಟಾ
ನಿನ್ನ ಹೆಡ್ತಿಗೆ ನೀನು ಗಂಡನೇ ಆಗದಿಲ್ಲ
ನಮ್ಮೀಡು ಬರೂತನಕ
ನಿನ್ನ ಹೆಡ್ತಿಗೆ ನೀನು
ಗಂಡನಾಗೋದಿಲ್ಲ ಗೊತ್ಲ ಪರದೇಶಿ ಎಂದರು
ಕೆಂಪಣ್ಣ
ಅದು ಯಾವೀಡಪ್ಪ
ಅದೇನು ಹೇಳುಬುಡು ಕಂದಾ
ಹೇಳುಬುಡು ಮಗು ಎಂದರು
ಏ ಜಂಗುಮಾ

ನಾವು ಮಾಡ್ದ ತಾಲಿ
ನೀ ತಕ್ಕಂಡು ಹೊಯ್ತಿಯೆ
ಕೂಡುವ ಕುಲದಲ್ಲಿ
ಸೇರಿದ ಸಭೆಯಲ್ಲಿ
ಅಯ್ಯಾ ಸೀತಾಳ ಚಪ್ಪರದಲ್ಲಿ
ಏನಪ್ಪ ಕುಲದವರೇ
ಏನಪ್ಪ ಮಠದವರೇ
ಏನಪ್ಪ ಜಾತ್ಯಯವರೇ
ನನ್ನ ಹೆಂಡ್ತಿಯಾ ಕತ್ತಿಗೆ
ತಾಲಿಯ ಕಟ್ಬುತ್ತಿನೀ
ಅಪ್ಪಣೆಯಾ ಕೊಟ್ಟೀರಿಯಾ
ಆಗನತೇಳಿ ಕೇಳ್ತಿಯಾ
ಅವರೆಲ್ಲ ನಿನ್ನ ಮಾತ ಕೇಳುಬಿಟ್ಟು
ದೇವ್ರಪ್ಣೆ ಕಟ್ಟಪ್ಪ
ಸ್ವಾಮಿ ಅಪ್ಪಣೆ ಕಟ್ಟಯ್ಯ
ನಿನ್ನ ಹೆಡ್ತಿ ಕತ್ಗೆ
ತಾಲೀಕಟ್ಟು ಅಂತ ಹೇಳ್ತರೆ
ನಿನ್ನ ಹೆಂಡ್ತಿ ಕತ್ತಿಗೆ ನೀನು
ತಾಲಿ ಕಟ್ಟುಬುಟ್ಟರೇ
ನಿನ್ನ ಹೆಂಡ್ತಿಗೆ ನೀನು ಗಂಡನಾ
ತಾಲಿ ಮಾಡವ್ರಗೆ ಎಷ್ಟು ಕಷ್ಟ
ತಾಲಿ ಮಾಡವನ್ಗೇ ಎಷ್ಟಿದದೊ ಕಷ್ಟ
ಕಟ್ಟು ಬುಡವನಿಗೆ ಕಷ್ಟವೇನೊ
ಪರದೇಶಿ
ಲೋ ತಾಲಿಮಾಡೋನು ಮೊದಲ್ನೇ ಗಂಡ
ಕಟ್ಟುದವನು ಎರಡ್ನೇ ಗಂಡಾ || ಸಿದ್ಧಯ್ಯ||

ನಿನ್ನ ಹೆಂಡ್ತಿಗೆ ನೀನಲ್ಲ ಗಂಡಾ ಕಣೋ
ಮೊದಲ್ನೇ ಗಂಡಾ ನಾನು ಕಾಣೋ || ಸಿದ್ಧಯ್ಯ||

ಅಯ್ಯಾ ಮೊದಲ್ನೇ ಗಂಡ ನಾವು ಕಾಣೋ
ಎರಡ್ನೇ ಗಂಡ ನೀನು ಕಾಣೋ || ಸಿದ್ಧಯ್ಯ||

ನಿನ್ನ ಹೆಂಡ್ತಿಗೇ
ಮೊದಲ್ನೇ ಗಂಡ ನಾವು
ಕಾಣೋ ಜಂಗುಮ
ಎರಡ್ನೇ ಗಂಡ ನೀನು ಕಣೋ
ಪರದೇಶಿ ಎಂದರೂ ಎಳೇ ಕೆಂಪಣ್ಣ
ಕೆಂಪಣ್ಣನ ಮಾತ ಕೇಳಿ ಮಹಾಗುರು
ಮಂಟೇದಲಿಂಗಪ್ಪ
ಏನಪ್ಪ ನನ್ನ ಕಂದಾ ಕೆಂಪಣ್ಣ
ಈ ನರ್ ಲೋಕದ ಹೆಣ್ಣು ಮಕ್ಕಳ್ಗೆಲ್ಲ
ನೀನೆ ಮೊದಲ್ನೆ ಗಂಡನಾದಿಯಪ್ಪ
ಕೆಂಪಣ್ಣ
ನಾವೆಲ್ಲ ಎರಡನೇ ಗಂಡನಾದವಾ ಕಂದಾ
ನೀನು ಹಾಡಿದಂತ ಮಾತು ಮಗನೇ
ಈ ನಡುವೆ ನರ್‌ಲೋಕಕ್ಕೆಲ್ಲ
ತೆವಳುಬಲ್ಲದ ಮಗು
ಈ ನರಲೋಕಕ್ಕೆಲ್ಲ ಆಗಬಲ್ಲದಪ್ಪ
ಕೆಂಪಣ್ಣ
ನಾನಾಡಿದ ಮಾತು ಎಳ್ಳಷ್ಟು
ನಿನಗೆ ಹುಸಿಯಾಗದಿಲ್ಲ
ಈ ನರ್‌ಲೋಕದ ಹೆಣ್ಣು ಮಕ್ಕಳ್ಗೆಲ್ಲ
ಮೊದಲ್ನೇ ಗಂಡ ನಾನು ಅಂತ
ಕೇಳ್ದಿಯಲ್ಲೋ ಮಗನೇ
ಕೆಂಪಣ್ಣ

ನಿನಗೆ ತಾಯಿ ಬುಡಸುತ್ತೀನಿ
ತಂದೆ ಬುಡುಸುತ್ತೀನಿ
ಅಣ್ಣನ ಬುಡುಸ್ತೀನಿ
ನಿನಗೆ ತಮ್ಮಾನ ಬುಡಸ್ತೀನಿ
ನಿನಗೆ ಅಣ್ಣಾನ ಆಸೆ ಇಲ್ದೇ
ತಮ್ಮನಾಸೆ ಇಲ್ದೇ
ಬಂಧು ಬಳಗದ ಆಸೆ
ಇಲ್ಲದಂತೆ ನನ್ನ ಕಂದಾ
ನಿನಗೆ ಮಡದಿ ಸುಖ ಮಕ್ಕಳ ಸುಖ ಇಲ್ದೇ
ಲೋ ಸಂಸಾರದ ಸುಖ
ಇಲ್ಲದಂತೆ ನನ್ನ ಕಂದಾ
ಲೋ ನಾನು ಪಡೆದ ನರಲೋಕಕ್ಕೆ
ನಿನ್ನ ಭಂಗಿ ಸಿದ್ಧನ ಮಾಡುತೀನಿ || ಸಿದ್ಧಯ್ಯ||