ಜಗತ್‌ಗುರು
ಧರೆಗೆ ದೊಡ್ಡವರು ಭಂಗಿ
ಕುಡುದು ಬಿಟ್ಟಂತ ಹೊಗೆ
ಮಾರುವಳ್ಳಿ ಗ್ರಾಮವೆಲ್ಲ ಕತ್ತಲೆಗವುದೋಗುಬುಡ್ತು
ಸೂರ್ಯನ ಬೆಳಕೆ ಮಾಯವಾಗುಬುಡ್ತು
ಆ ಕೆಂಪಾಚಾರಿ ಕುಲುಮೆ ಮನೆ ಒಳಗೆ
ಕುಡುದು ಬಿಟ್ಟಂತ ಹೊಗೆ
ಬುಗುಬುಗುನೇ ಸುತ್ತುತ್ತಿತ್ತು
ಹೊಗೆ ಒಳಗೆ ಕೆಂಪಣ್ಣ ನಿಂತಗಂಡು
ಎಡಬಲ ಸುತ್ತಮುತ್ತ
ನೋಡುತ್ತಿದ್ದ ಕೆಂಪಣ್ಣ
ಇದು ಯಾರು ಬುಟ್ಟ ಹೊಗೆ ಅಂತ ನೋಡಿಯಪ್ಪ
ಕೆಂಪಣ್ಣ
ನಿನ್ನ ಕುಲುಮೆ ಹೊಗೆಯಲ್ಲ ಅದು
ನಾನು ಭಂಗೀ ಕುಡಿದು
ಬಿಟ್ಟಿರುವಂತ ಹೊಗೆ
ನಿನ್ನ ಕುಲುಮೆ ಕಛೇರಿ ಒಳಗೇ
ಯಾವ ರೀತಿ ಸುತ್ತುತ್ತದೆ ನೋಡು ಮಗು
ಕೆಂಪಣ್ಣ

ಈ ಹೊಗೆ ಸುತ್ತುದಂಗೆ ನಿನ್ನ
ಸುತ್ತುಸ್ತೀನಿ ನನ್ನ ಮಗನೆ || ಸಿದ್ಧಯ್ಯ ||

ಈ ಹೊಗೆ ಸುತ್ತುದಂಗೆ ನಿನ್ನ
ಸುತ್ತುಸ್ತೀನಿ ಕಂದ
ಆಗಂದು ಗುರುವು ಧರೆಗೆ ದೊಡ್ಡಯ್ಯ
ಗುರುವೇ ಎಲೆ ಕುಂದೂರು ಬೆಟ್ಟದ
ಕೊಡೆಯ ಕಲ್ಲಿನ ಮೇಲೆ
ಕೂತ್ಕಂಡು ನನ್ನಪ್ಪ
ಕೆಂಪಚಾರಿ ಮೊಕವ ಕಣ್ಣಾರ ನೋಡುತ
ಕೇಳಪ್ಪ ನನ್ನ ಮಗನೇ
ಕೇಳಲೋ ಕೆಂಪಣ್ಣ
ನಿನ್ನ ಆಂಕರಾಳು ಮಾಡುತೀನಿ
ದ್ವಾರಣ ಬಯಲು ಮಾಡುತೀನಿ || ಸಿದ್ಧಯ್ಯ ||

ನಿನ್ನ ಆಂಕಾರ ನನ್ನ ಕಂದ
ಆಳು ಮಾಡಿ ನನ್ನ ಕಂದಾ
ನಿನ್ನ ದ್ವಾರಣೆನೆಲ್ಲಾನು ಬಯಲು
ಮಾಡಿ ಮಗನೆ
ನಿನ್ನ ಅನ್ನದ ಮದ
ನೀರಿನ ಮದ
ನಿನ್ನ ಕ್ರಾಮ ಕ್ರೊದ
ನಿನ್ನ ರಕ್ತದ ಮದ ಎಲ್ಲಾನು
ಇಂದಗೆ ಆಳುಮಾಡ್ತಿನೀ ಮಗು
ಅಂತೇಳಿ ಧರೆಗೆ ದೊಡ್ಡವರು
ಕುಂದೂರು ಬೆಟ್ಟದ ಕೊಡೆ ಕಲ್ಲಿನಮ್ಯಾಲೆ
ಕೂತ್ಗಂಡು ಈಗ ಬಸವಚಾರಿ
ದುಡಾ ನೋಡ್ದಂಗೆ ಆಯ್ತು
ಮುದ್ದಮ್ಮನ ಪತವರತ್ತಾನ ಕಂಡಾಂಗಾಯ್ತು
ನಾನು ಪಡ್ಕಳುವಂತ ಶಿಶು ಮಗ ಕೆಂಪಣ್ಣನ
ಆ ಮಗನ ಶಕ್ತಿ ಕಂಡಂಗೇ ಆಯ್ತು
ಆ ಮಗನ ಭವ ತಿಳ್ದಂಗೆ ಆಯ್ತಲ್ಲ
ಇದೇ ಗಳಿಗೆ ಒಳಗೆ

ಅವರ ಮನಗೇ ಮಾರಿ ಕೂಡಬೇಕು
ಮನೆ ಬರ್ದ ಮಾಡಬೇಕು || ಸಿದ್ಧಯ್ಯ ||

ಅದರ ಮನೆಗೆ ದಾರಿ ಕೂಡಿ
ಮನೆ ಬರ್ದಾ ಮಾಡಿ
ಅವರಾ ಹಟ್ಟಿ ಆಳುಮಾಡಿ
ಕೊ‌ಟ್ಟಗೆ ಬರ್ದ ಮಾಡೀ
ಬರಬೇಕು ಎಂತ
ಧರೆಗೆ ದೊಡ್ಡಯ್ಯ
ಗುರುವೇ ಎಲೆಯ ಕುಂದೂರು ಬೆಟ್ಟದ
ಕೊಡೆಯ ಕಲ್ಲಿನ ಮೇಲೆ ಕೂತ್ಕಂಡು ನನ್ನಪ್ಪ
ಅವರು ದಿಕ್ಕುದೇಸ್ತ ಮಾರಿರ್ನೇಲ್ಲ
ಪ್ರೇಮದಲ್ಲಿ ಕೂಗುತಾರೇ || ಸಿದ್ಧಯ್ಯ ||

ಕುಂದೂರು ಬೆಟ್ಟದ
ಕೊಡೆ ಕಲ್ಲಿನ ಮೇಲೆ ಗುರುವು
ತಾನಾಗಿ ಬಂದು ಕೂತ್ಗಂಡು ಗುರುದೇವ
ದಿಕ್ಕು ದೇಸದಾ ಮಾರೀರಾ
ಏನಂತ ಕೂಗುತರೇ ಅಂದ್ರೇ ನನ್ನಪ್ಪ
ಅವ್ವ ಬನ್ರವ್ವ ಮಾರೀರೇ
ಬನ್ರವ್ವ ದುರ್ಗಿರೇ
ಬನ್ರವ್ವ ಚೌಡೀರೆ
ನನ್ನ ಶಿವ ಸಮುದ್ರದ ಮಾರವ್ವ
ಓಡು ಬಮ್ಮ ಎಂದಾರಲ್ಲ || ಸಿದ್ಧಯ್ಯ ||

ನನ್ನ ಶಿವ ಸಮುದ್ರದ ಮಾರಿ
ಎದ್ದೂ ಬಾವ್ವ ನನ್ನ ಕಂದಾ
ನನ್ನ ಹೆಬ್ಬೆಟ್ಟಿರಿಯ ದೇವತಿ
ಓಡು ಬಾವ್ವ ನನ್ನ ಕಂದಾ

ನನ್ನ ಕಟ್ಟು ಕಟ್ಟುಗೆಲ್ಲ
ಹಳ್ಳುಕದುವ ಮಾರಿ
ಎದ್ದು ಬಾವ್ವ ನನ್ನ ಕಂದಾ
ನನ್ನ ನಾಡಿನ ಮ್ಯಾಲೆ ಬರುವ
ನನ್ನ ನಾಗಳ ಮಾರಿ ಎದ್ದು ಬಾವ್ವ || ಸಿದ್ಧಯ್ಯ ||

ನನ್ನ ನಾಡಿನ ಮ್ಯಾಲೆ ಬರುವ
ನಾಗಳು ಮಾರಿ ಕಂದಾ
ಓಡುಬಾವ್ವ ನನ್ನ ಮಗಳೇ
ನನ್ನ ಮೈಸೂರ ಮನಸ್ತನಕೆ
ಬಸುಲು ಮಾರಿ ಕಂದಾ
ಎದ್ದು ಬಾವ್ವ ನನ್ನ ಕಂದಾ
ನನ್ನ ಕತ್ತಂಬಾಡಿ ಬಾಮ್ಮ
ಕೊಡಾಂಬಾಡಿ ಬಾವ್ವ
ಅದುವಲ್ದ ನನ್ನ ಕಂದಾ
ಕೇಳ್ರವ್ವ ಮಾರಿರೇ
ಅಮ್ಮ ಕಟ್ಟೂ ಕಟ್ಟುಗೆಲ್ಲ
ಹಳ್ಳು ಕಟ್ಟುವ ಮಾರಿ
ಎದ್ದು ಬಾವ್ವ ನನ್ನ ಕಂದಾ
ನನ್ನ ಗೂತ್ತಿಗೆ ಗೂಳಿ ಮಾರಿ
ನನ್ನ ಮೂಗೂರು ಸಿದ್ದಿ ದೇವತಿ
ನನ್ನ ಸ್ವಾಸಲಿ ಹೊನ್ನ ದೇವತೀ
ನನ್ನ ಕನ್ನಂಬಾಡೀ ಕಾವೇರಿ
ಬೆಳಗೊಳ್ದ ಹಿರಿಯ ದೇವತಿ
ನನ್ನ ಬನ್ನೂರಿನ ಯಾಮಾದ್ರಿ
ಬಂದೋಗಮ್ಮ ಎಂದಾರಲ್ಲ || ಸಿದ್ಧಯ್ಯ ||

ನನ್ನ ಬನ್ನೂರು ಯಾಮಾದ್ರಿ
ಓಡು ಬಾವ್ವ ನನ್ನ ಕಂದಾ
ನನ್ನ ಪಿರಿಯ ಪಟ್ಣದ ಮಾರಿ
ಎದ್ದು ಬಾವ್ವ ನನ್ನ ಕಂದಾ
ನನ್ನ ಭದ್ರು ಬಲುಮಕಾಳಿ
ನೀ ಎದ್ದು ಬಾವ್ವ ನನ್ನ ಕಂದಾ
ನನ್ನ ಮೂಗುರಲ್ಲೀ ಇರುವ
ತಿಬ್ಬಾದೇವತೀ ಬಾವ್ವ
ಅಮ್ಮ ಇದುವಲ್ದೆ ನನ್ನ ಕಂದಾ
ಕೇಳುರವ್ವ ಮಾರೀರೇ
ಕೇಳುರವ್ವ ದುರ್ಗಿರೇ
ನನ್ನ ಕಾಲು ಇಲ್ಲದ ಮಾರೀ
ಕುಂಟು ಮಾರಿ ಬಾಮ್ಮ
ಕೈಯಿ ಇಲ್ಲದ ಮಾರೀ
ಚೊತ್ತು ಮಾರಿ ಬಾವ್ವ
ಮಾತಾಡುದಿದ್ದ ಮಾರಿ
ನನ್ನ ಮೂಗು ಮಾರಿ ಬಾಮ್ಮ
ನನ್ನ ಕಣ್ಣು ಇಲ್ಲದ ಮಾರಿ
ಕುಂಡು ಮಾರಿ ಬಾವ್ವ
ಕಿವಿ ಕೇಳ್ದ ಮಾರಿ
ನನ್ನ ಕಿವುಡು ಮಾರಿ ಬಾವ್ವ
ಅಮ್ಮ ನಾಡುನ ಮೇಲೆ ಬರುವ
ನನ್ನ ನಾಗಳು ಮಾರಿ ಓಡು ಬಾವ್ವ || ಸಿದ್ಧಯ್ಯ ||

ನನ್ನ ನಾಡೂನ ಮೇಲೆ ಬರುವ
ನನ್ನ ನಾಗಳು ಮಾರಿ ಕಂದಾ
ಎದ್ದು ಬಾವ್ವ ನನ್ನ ಮಗಳೇ
ನನ್ನ ಜರ್ದು ಮಾರಿ ಬಾಮ್ಮ
ಉಣ್ಣು ಮಾರಿ ಬಾವ್ವ
ಸಿಡುಬುನ ಮಾರಿ ಬಾರೇ
ಜರ್ದ ಮಾರಿ ಬಾವ್ವಾ
ಪಳೇಕಾನ ಮಾರಿ ಬಾಮ್ಮ
ನನ್ನ ವಾಯ್ದಿ ಇಲ್ಲದ ಮಾರಿ
ನನ್ನ ವಾಂತ್ಬೇದಿ ಮಾರವ್ವ ಬಾವ್ವ || ಸಿದ್ಧಯ್ಯ ||

ನನ್ನ ವಾಯ್ದಿ ಇಲ್ಲದ ಮಾರಿ
ವಾಂತ್ಬೇದಿ ಮಾರಮ್ಮ
ಎದ್ದು ಬಾವ್ವ ನನ್ನ ಕಂದಾ
ಆದುವಲ್ಲದೇ ನನ್ನ ಕಂದಾ
ಕೇಳವ್ವ ಮಾರೀರೇ
ನಮ್ಮ ಹೆತ್ತಮ್ಮ ಎಲನಾತ್ತಿ
ನನ್ನ ಚಿಕ್ಕಮ್ಮ ಚಿಕ್ಕುದೇವಿ
ನನ್ನ ಅಕ್ಕಾಜೀ ದೊಡ್ಡಮ್ಮ
ನನ್ನ ದಂಡುನ ಮೇಲೆ ಬರುವ
ನನ್ನ ದಂಡುನ ಮಾರಿ ಓಡೀ ಬಾವ್ವಾ || ಸಿದ್ಧಯ್ಯ ||

ನನ್ನ ದುಂಡುನ ಮೇಲೆ ಬರುವ
ಅಮ್ಮ ದಂಡುನ ಮಾರಿ ಕಂದಾ
ಓಡು ಬಾವ್ವ ನನ್ನ ಮಗಳೇ
ಆಗಂದವರೇ ನ್ನ ಗುರುವು
ಅವರು ಸುತ್ತೇಳು ಮಾರೀರ
ಪ್ರೇಮದಲ್ಲಿ ಕರುದರಲ್ಲ || ಸಿದ್ಧಯ್ಯ ||

ನನ್ನ ಅಮಾಸೆ ಕಾಳಮ್ಮ
ನೀ ಎದ್ದು ಬಾರೇ ಎಂದಾರಲ್ಲೋ || ಸಿದ್ಧಯ್ಯ ||

ಅಮಾಸೆ ಕಾಳಮ್ಮ
ಎದ್ದು ಬಾವ್ವ ನನ್ನ ಕಂದಾ
ಎದ್ದು ಬಾರೋ ಮಾರಿ ಎಂದರು
ಸುತ್ನೇಳು ಮಾರಿರೆಲ್ಲನ್ರು
ಅತೀ ಪ್ರೇಮದಲ್ಲಿ ಕುರುದ್ರು ಮಾಗುರು
ಮಂಟೇದ ಸ್ವಾಮಿ
ಈಗಲೀಗ ಸುತ್ತೇಳು ಮಾರೀರಿಗಿಂತ
ಹೆಚ್ಚುನ ಮಾರಿ ಅಂದ್ರೇ
ಸಾಮಾನ್ಯವಾದ ಮಾರಿಯಲ್ಲ
ಮಾರೀಮಾರಿಗಿಂತ
ಕೆಟ್ಟಾಮಾರಿ ದೃಷ್ಟಮಾರಿ
ಆಚಾರ್ರು‍ಮನೆದೇವತೆ ಕುಲುಮೆ ಕಾಳಮ್ಮ
ಕಾಳಾಕಾ ದೇವತಿ ಅಂದರೇ
ಏಳುನೂರು ಮಾರಿಗಿಂತ ಕೆಟ್ಟ ದೇವತಿಯಾದ
ಕಾಳಕದೇವಿ
ಯಾವು ರೀತಿ ವಾಸಸ್ಥಾನ
ಮಾಡ್ತಳೆ ಅಂದ್ರೆ ಮಾರಿ

ಅವಳೆ ಬೆಟ್ಟದ ಗಾತ್ರ ಮಾರೀ
ಹೊಟ್ಟೆಯ ಬುಟ್ಟಗಂಡು
ಗುಡ್ಡೇಗಾತ್ರ ಮಾರಿ
ತಲೆಯನ್ನೇ ಬುಟ್ಟಗಂಡು
ತೊಂಡೆಗಾತ್ರ ಮಾರಿ
ಮೂಗನ್ನೇ ಬುಟ್ಟಗಂಡು
ಎರಡು ವಂದ್ರೀಯಗಲ ಮಾರಿ
ಕಣ್ಣನೇ ಬುಡ್ಗಂಡು
ಗವಿ ಅಗಲ ಮಾರವ್ವ
ಬಾಯನ್ನೆ ಬುಟ್ಟಗಂಡು
ಅವಳು ಎಪ್ಪತ್ತುಮೊಳದ ಸೀರೆ
ಒಂದೆ ಸುತ್ತಿಗೆ ಸುತ್ತಿಗಂಡು || ಸಿದ್ಧಯ್ಯ ||

ಗುರುವೇ ಎಪ್ಪತ್ತು ಮೊಳದ ಸೀರೆ
ಒಂದೇ ಒಂದು ಸುತ್ತಗೆ
ಸುತ್ತಗಂಡು ಮಾರಮ್ಮ
ಅವಳು ಒಂದ್ಕಂಡ್ಗ ಕುಂಕುಮವಾ
ಹಣೆಗಚ್ಚಿಗಂಡು
ಒಂದ್ಕಂಡ್ಗ ಅರಿಶಿಣವಾ
ಮೊಕ ತುಂಬ ಬಳಕಂಡು
ಅವರು ಅರುವತ್ತಾರು ಹೆಣವಾ
ಅಂಗೈಲಿ ಇಡಕ್ಕಂಡು
ಮುವತ್ತುಮೂರೆಣವ ಮುಳ್ಳಲ್ಲಿ ಕಟ್ಟಿಗಂಡು
ಒಂಬಂಬತ್ತು ಹೆಣವ ಅವಳು
ಹಲ್ಲಲೀ ಕಚ್ಚಗಂಡು
ವಕ್ಕಡೆ ಕಿವಿಯ ಆಸ್ಗಂಡು ಮಲಗವಳೇ
ಅಮ್ಮ ವಕ್ಕಡೆ ಕಿವಿಯ ಮಾರಿ
ವದಿಕಂಡು ಮಲಗವಳೇ

ಅವಳು ಹನ್ನೆರಡಂಕಣ ಗುಡಿವಳಗೆ
ಒಬ್ಬಳೇ ಒಳ್ಳಾಡುತಾಳೆ || ಸಿದ್ಧಯ್ಯ ||

ಈಗಲೀಗ ಮಾರಮ್ಮ
ಈಗಲೀಗ ಎಪ್ಪತ್ತು ಮೊಳದ
ಸೀರೆ ಒಂದೆ ಸುತ್ತಗೆ ಸುತ್ತಗಂಡು
ಆರುವಾತ್ತಾರೆಣವಾ ಅಂಗೈಲಿ ಇಡ್ಕಂಡು
ಮೂವತ್ತು ಮೂರೆಣವ ಮೊಡ್ಲಲ್ಲಿ ಕಡ್ಗಂಡು
ಒಂಬಂಬತ್ತು ಹೆಣವ ಹಲ್ಲಲೀ
ಕಚ್ಚಗಂಡು ಮಾರಮ್ಮ
ವಕ್ಕಡೆ ಕಿವಿ ಆಸ್ಗಂಡು ಮಲಗಿದ್ದ
ವಕ್ಕಡೆ ಕಿವಿ ಒದ್ಕಂಡು ಮಲಗಿದ್ದ
ಅವಳು ಹನ್ನೆರಡಂಕಣ ಮಠಾದಲ್ಲಿ
ಒಬ್ಬಳೆ ಒಳ್ಳಾಡುತಾಳೆ || ಸಿದ್ಧಯ್ಯ ||

ಗುರುವೇ ಹನ್ನೆರಡಂಕಣ ತಾಯಿ
ಮಠದಲ್ಲಿ ಮಾರವ್ವ
ಒಬ್ಬಳೇ ಒರುಳುತ್ತಾ ಮನಗಿದ್ದ ಮಾರಮ್ಮ
ಅವಳು ಎಡದಿಂದ ಬಲಕ್ಕೆ
ಒಳ್ಳ ಬೇಕಾದರೆ ಮಾರೀ
ಎಡದಿಂದ ಬಲಕೆ ಏಳಬೇಕಾದರೆ ಮಾರಿ
ಅವಳು ಮುಕ್ಕರ್ಕಂಡು ಒಳ್ಳುತ್ತಾಳೆ
ಮುಕ್ಕರ್ಕಂಡು ಏಳುತಾಳೇ || ಸಿದ್ಧಯ್ಯ ||

ಅವಳು ತ್ಯಾಗದ ಮರವ ಕಿತ್ತಗಂಡು
ಅಮ್ಮ ಊರುದೊಣ್ಣೆಯ ಮಾಡಿಕ್ಕಂಡು || ಸಿದ್ಧಯ್ಯ ||

ಗುರುವೇ ತ್ಯಾಗದ ಮರವ ಕಿತ್ತು
ಉರುದೊಣ್ಣೆಮಾಡಿ
ಅಡಕೆ ಮರವೆ ಕಿತ್ತೂ
ಅವಳು ಹಲ್ಲನ್ನೇ ಚುಚ್ಚುದಕೆ
ಹಲ್ಲು ಕಡ್ಡಿಯ ಮಾಡಿ
ಬೇವನ ಮರವ ಕಿತ್ತು
ಬುಡುವು ಸಹಿತ ಮಾರಿ
ಬೇರು ಸಹಿತ ಮಾರವ್ವ
ಅವಳು ಹಲ್ಲನ್ನೇ ಉಜ್ಜುತಾಳೆ
ನಾಲಗೆಯ ತೀಡುತಾಳೆ || ಸಿದ್ಧಯ್ಯ ||

ಹಲನ್ನೆ ಉಜ್ಜುತ ನಾಲಗೆ ತೀಡುತ ಮಾರಮ್ಮ
ಹನ್ನೆರಡು ಅಂಕಣ ಮಠಮನೆ ಒಳಗೆ
ಒಬ್ಬಳೇ ಒರಳುತಿದ್ಲು ಮಾರೀ
ಒರಳವಂತ ಕಾಲ್ದಲ್ಲಿ ಗುರುವೇ ಗುರುದೇವಾ
ಈ ಜಗತ್‌ಗುರು ಧರೆಗೆ ದೊಡ್ಡಯ್ಯ
ಮಂಟೇದ ಸ್ವಾಮಿಯವರು
ಕೂಗದ ಕೂಗು
ಸಾರ್ದುದಂತಹಾ ಗಲಗು
ಕರ್ದಂತಹ ಶಬ್ದ ಕೇಳುಬಿಟ್ರು ಮಾರಮ್ಮ
ಆಚಾರ್ರು‍ಮನೆದೇವತಿ
ಕುಲುಮೆ ಕಾಳಮ್ಮ ಕಾಳಕ್ಕದೇವತೆ

ಅವಳು ಬಿಚ್ಚಿದಮಂಡೇ ಕಟ್ಟುನಿಲ್ಲ
ಬಿಳೋಗ್ಯಾನ ಬುಡಲಿಲ್ಲ || ಸಿದ್ಧಯ್ಯ ||

ಅಮ್ಮ ಬಿಚ್ಚಿದ ಮಂಡೆ ತಾಯಿ
ಅವಳು ಕಟ್ಟನಿಲ್ಲ ಮಾರವ್ವ
ಅವಳು ಧರೆಗೆ ದೊಡ್ಡವರ ಕೂಗ
ಕಿವಿಯಾರ ಕೇಳಕ್ಕಂಡು
ನನ್ನ ಗುರು ಕೂಗುತಾರೆ
ಮಂಟೇದ ಲಿಂಗಪ್ಪ ಇವತ್ತು ಕರೀತಾರೆ
ಅಯ್ಯಾ ಗುರುಕರ್ದ ಮಾತುಗೆ
ನಾ ಹೋಗಬೇಕು ಎಂತ
ಆಚಾರ್ಯ ಮನೆದೇವತೆ ಕುಲುಮೆ ಕಾಳಮ್ಮ
ನನ್ನ ಧರೆಗೆ ದೊಡ್ಡವರ ಒಳಗೆ
ಬಿದ್ದು ಕೆಡದು ಬರುವುತಾಳೆ || ಸಿದ್ಧಯ್ಯ ||

ಧರೆಗೆ ದೊಡ್ಡವರ ಬಳಿಗೆ ಮಾರಮ್ಮ
ಬಿದ್ದೂ ಕೆಡದು ಓಡೋಡಿ
ಬರುತ್ತಿದ್ಲು ಮಾರೀ
ಮಾರವ್ವ ಓಡಿ ಬರುವಂತ ರೋಸಿಗೆ
ಗುರುವೇ ಹಾದಿಕಲ್ಲು ಗುರುವು
ಬೀದಿಕಲ್ಲು ಗುರುವು
ಗುರುವೇ ಆನೆಗಾತ್ರ ಕಲ್ಲು
ಕತ್ತೆ ಗಾತ್ರ ಕಲ್ಲು
ಒಂಟೇ ಗಾತ್ರ ಕಲ್ಲು
ಮಾರವ್ವ ಬರುವಂತ
ರೋಸಿಗೆ ನನ್ನ ಗುರುವು
ಅಯ್ಯಾ ಮಾರಿಯ ಕಾಲೀಗೆ
ಸಿಕ್ಕುದಂತಹ ಕಲ್ಲುಗಳು

ಅವ್ರ ಭೂಮಿನೆ ಕಿತ್ತೂಗಂಡು
ಆಕಾಶಕೆ ಹಾರುತಾವೆ || ಸಿದ್ಧಯ್ಯ ||

ಅವು ಬುಗುರೀ ತಿರುಗುದಂಗೆ ದೇವ
ಬುಗುಬುಗುನೇ ತಿರುಗುತಾವೇ || ಸಿದ್ಧಯ್ಯ ||

ಗುರುವೇ ಮಾರವ್ವನ ಗುರುವೇ
ಕಾಲೀಗೆ ಸಿಕ್ಕಿದಂತಹ
ಕಲ್ಸಗಳೆಲ್ಲ ಗುರುವು
ಆಕಾಶಕೆ ಹಾರಿ ಬುಗುರೀ ತಿರ್ಗದಂಗೇ
ಬುಗುಬುಗುನೇ ತಿರುಗುತ್ತಾ
ಒಂದು ಮೈಲೀ ದೂರ
ಎರಡು ಪರ್ಲಾಂಗ ದೂರ
ಒಂದು ಪರ್ಲಾಂಗ ದೂರ
ಎಲ್ಲ ಕಲ್ಲುಗಳೂವೆ ಗುರುವೇ ಗುರುದೇವಾ
ಅವು ಅಣ್ಣೇ ಕಲ್ಲು ಬಿದ್ದಂಗವು
ತಪುತುಪ್ಪನೇ ಬಿಳುವುತಾನೆ || ಸಿದ್ಧಯ್ಯ ||

ಅಣ್ಣೆ ಕಲ್ಲು ಬಿದ್ದಂಗೆ ದೇವಾ
ಎಲ್ಲ ಕಲ್ಲುಗಳು ಗುರುವು
ಭೂಮಿ ಮೇಲೆ ತಪ್ಪತುಪ್ಪನೆ ಬೀಳುತ್ತಿದೋ
ಬಿಳುವಂತ ಕಾಲದಲ್ಲಿ
ಆಚಾರ್ಯ ಮನೆದೇವತೆ
ಕುಲುಮೆ ಕಾಳಮ್ಮ ಕಾಳಿಕಾ ದೇವತೆ
ಧರೆಗೆ ದೊಡ್ಡವುರ ಪರಂಜ್ಯೋತಿ ಬಳಿಗೆ ತಾಯಿ
ಬಿದ್ದು ಕೆಡದು ಓಡು ಬಂದು
ಧರೆಗೆ ದೊಡ್ಡವರ ಮುಂಭಾಗದಲ್ಲಿ ನಿಂತ್ಕಂಡು

ನನ್ನ ಧರೆಗೆ ದೊಡ್ಡವರ ಮೊಕವ
ದುರುದುರನೇ ನೋಡುತಾಳೆ || ಸಿದ್ಧಯ್ಯ ||

ನನ್ನ ಮಂಟೇದ ಲಿಂಗಯ್ಯನ ಮೊಕೆವ
ಮಟಾಮಟನೇ ನೋಡುತಾಳೆ || ಸಿದ್ಧಯ್ಯ ||

ನನ್ನ ಲೋಕಕೆ ದೊಡ್ಡವರ ಮೊಕ
ಅಂತು ಆಂತು ನೋಡುತಾಳೆ || ಸಿದ್ಧಯ್ಯ ||