ಬೇಸ್ತುವಾರದ ಕುಣತದ ಸ್ವಾಮಿ
ನನಗೆ ಕುಣಿತಿದ್ರು ನನ್ನಪ್ಪ
ಜಗುತ್ತು ಗುರು ಧರೆಗೆ ದೊಡ್ಡಯ್ಯಾ
ಅಂತವರ ಮನೆಗೆ ಹೋಗಬಾರ್ದು ಅಂತಿದ್ದೆ ಬುದ್ದಿ
ನೀವು ಹೊಡದೇಟಿಗೆ ನನಗೆ ಭಯ ಬಂದು ಬುಡುತು
ಈಗ ಒಂಟೋಯ್ತಿನಿ ನನ್ನಪ್ಪ
ಹೋಯ್ತಿನಿ ಬುದ್ದಿ ಎಂದುರೂ
ಮಾರಮ್ಮ
ಈಗ ಬಸವಚಾರಿ ಮನಿಗೆ ಹೊಯ್ತಿನಿ ಅಂತಿಯಲ್ಲವ್ವಾ
ನಿನಗೆ ಅಷ್ಟೆಲ್ಲನು ಮಾಡಿ
ಮಂಗಳಾರ ಬೇರೆ ಮಡೆ ಹುಯ್ಸಿ
ಬುದುವಾರ ಕೊಂಬು ತರಿಸಿ
ಬೇಸ್ತುವಾರದ ಕುಣಿತ ಕುಣಿತಿದ್ರ ಕಂದಾ
ಮಾರಮ್ಮ
ಯಂಗೆ ಕುಣಿತಿದ್ರವ್ವ

ನನ್ನ ಮುಂದ್ಗಾಡೆ ಕುಣಿಯವ್ವ
ನಾ ಕಣ್ಣಾರ ನೋಡುತೀನೀ || ಸಿದ್ಧಯ್ಯ ||

ಮಗಳೆ ಯಾವ ತರದಲ್ಲಿ ನಿನಗೆ
ಕುಣಿತ ಕುಣಿತಿದ್ದರೂ
ಯವುತರದ ಒಳಗೆ ನಿನಗೆ
ನಂಟಾs ಮಾಡುತ್ತಿದ್ದುರು
ನನ್ನ ಮುಂದ್ಗಾಡೆ ಕುಣಿಯುವಾ
ಕಣ್ಣಾರೆ ನೋಡುತೀನಿ || ಸಿದ್ಧಯ್ಯ ||

ಕುಣಿ ನನ್ನ ಕಂದಾ ಮಾರಮ್ಮ
ಕಣ್ಣಾರ ನೋಡ್ತಿನಿ ಕುಣಿಯವ್ವ ಮಗಳೆ ಎಂದುರು
ಮಾ ಗುರು ಮಂಟೇದು ಸ್ವಾಮಿ
ಜಗುತ್ತು ಗುರುಗಳ ಮಾತ ಕೇಳಿ ಮಾರಮ್ಮ
ಕೇಳಪ್ಪ ಗುರುವೇ ಗುರುದೇವಾ
ಕುಣಿತೀನಿ ನನ್ನಗುರುವೇ
ಆಗಂದು ನನ್ನಗುರುವೇ
ಆಚಾರ್ಯ ಮನೆ ದೇವತಿ ನನ್ನ
ಕುಲುಮೆ ಕಾಳಮ್ಮ
ಕಾಳಕ ದೇವುತಿ ಗುರುವು

ನನ್ನ ಧರೆಗೆ ದೊಡ್ಡೋರು ಮುಂದೆ ಅವಳು
ಜಗ ಜಗ ಜಗನೇ ಕುಣಿಯುತಾಳೆ || ಸಿದ್ಧಯ್ಯ ||

ಅವಳು ಜಗ ಜಗನೇ ಕುಣಿತಾಳೆ
ತೈ ತೈನೆ ನೆಗೆಯುತಾಳೆ || ಸಿದ್ಧಯ್ಯ ||

ಗುರುವೇ ತೈಯಾ ತೈಯಾನೆ ಗುರುವು
ನೆಗಿವಂತ ಮಾರಮ್ಮನ ಕಣ್ಣಾರೆ ದೇವಾ
ನೋಡಕಂಡು ನನ್ನಪ್ಪ ಧರೆಗೆ ದೊಡ್ಡಯ್ಯ
ಅವರು ಒಳಗೊಳಗೆ ನನ್ನ ಗುರುವು
ಉಸುನಗುವ ನಗಿಯುತಾರೆ || ಸಿದ್ಧಯ್ಯ ||

ಒಳಗೊಳಗೆ ಉಸಿ ನೆಗ ನೆಗಿತಿದ್ರು ಗುರುವು
ಅಕ್ಕನಿಗೆ ಒಡದಂತಾ ಏಟು
ಕುಣಿಸುವಂತ ಕುಣಿತಾ
ಮಿಕ್ಕುನಾದ ಮಾರೀರೆಲ್ಲಾ ಕಣ್ಣು ಬುಟ್ಟು ನೋಡಿಬುಟ್ಟು
ಮೂರು ಮೈಲಿ ದೂರ
ಬಿದ್ದು ಕೆಡ್ಡು ಓಡುತಿದ್ರು
ಒಡುವಂತಾ ಮಾರಿರಾ ನೋಡುದ್ರು
ಜಗುತ್ತು ಗುರು ಧರೆಗೆ ದೊಡ್ಡಯ್ಯ
ಚೇಳು ಚಂಡಿ ಚಾಮುಂಡಿ
ಓಡುವಂತಾ ಮಾರಿರಾ ಎಳಕಂಡು ಬಂದು
ನನ ಪಾದಕ ಕೆಡುವಿದ್ರೆ ಸರಿವಾಯ್ತು ಕಂದಾ
ಏನಾರು ಕೆಡಗದೆ ಹೋದ್ರೆ

ನಿನ್ನ ಮೂಗುಮುಂದಾಲೆ ಉಳಿಯದಿಲ್ಲಾ
ಮೈನಾ ಚರ್ಮ ಉಳಿಯಾದಿಲ್ಲಾ || ಸಿದ್ಧಯ್ಯ ||

ಮೂಗು ಮುಂದಾಲೆ ಉಳಿಯದಿಲ್ಲಾ ಕಂದಾ
ಮೈನಾ ಚರ್ಮ ಉಳಿಯದಿಲ್ಲಾ ಮಾರಮ್ಮ
ಕರಕಂಡು ಬಾ ಹೋಗು ಕಂದಾ ಎಂದುರು
ಧರೆಗೆ ದೊಡ್ಡವರ ಮಾತುಕೇಳಿ
ರಾಜರಾಜೇಶ್ವರಿ ರಾಜರ ಮನೆ
ಮನೆ ದೇವತಿ ಕುಲದೇವತಿ
ಚಂಡಿ ಚಾಮುಂಡಮ್ಮ
ಎಲ್ಲಾ ಮಾರೀರ್ನು ಗುರುದೇವಾ
ಬನ್ನಿರವ್ವ ಮಾರಿರೆ
ಬನ್ನಿರಮ್ಮ ದುರ್ಗೀರೇ
ಜಗತ್ತು ಗುರು ಧರೆಗೆ ದೊಡ್ಡವರು
ಕಂಡುತವಾಗಿಯೂ ನಮ್ಮ ಬಿಡೋದಿಲ್ಲಾ
ಇವತ್ತು ಗುರು ಕರಿತಾರೆ ಬನ್ರವ್ವ ಬನ್ನಿ ಕಂದಾ ಅಂತೇಳಿ
ಎಲ್ಲಾ ಮಾರಿರ್ನುವೀ
ಹಿಡುದು ಇಂಟುಮುರಿ ಕಟಕಂಡು
ಧೆರ ಧರನೆ ಎಳಕಂಡು ಬಂದು

ನನ್ನ ಧರೆಗೆ ದೊಡ್ಡೋರು ಮುಂದೆ
ಅವರ ಕೆಡುಗುದ್ಲಂತೆ ಮಾಯಕಾತಿ || ಸಿದ್ಧಯ್ಯ ||

ಜಗತ್ತು ಗುರುಗಳ ಮುಂಭಾಗದಲಿ ತಂದು
ಕೆಡಗಿದಂತಾ ಕಾಲದಲ್ಲಿ ಗುರುದೇವಾ
ಎಲ್ಲಾ ಮಾರಿರುವೇ ಗಡ ಗಡನೆ
ನಡುಗುತಾ ತರತರನೆ ಒದುರುತಿದ್ರು
ಒದರುವಂತಾ ಮರಿರಾ ನೋಡುಬುಟ್ಟು
ಗುರು ಧರೆಗೆ ದೊಡ್ಡಯ್ಯ
ಮಾರಿರೆ
ಎದುರು ಬ್ಯಾಡಿ ಕಣ್ರಮ್ಮ
ಬೆಚ್ಚು ಬ್ಯಾಡಿ ನನ ಕಂದಾ
ಭಯ ಪಡುಬ್ಯಾಡಿ ಬನ್ನಿ ಕಂದಾ ಅಂತೇಳಿ
ಎಲ್ಲಾ ಮಾರಿರ್ಗು ಬುದ್ಧಿ ಹೇಳಿಕೊಂಡು
ಜಗುತ್ತು ಗುರು ಧರೆಗೆ ದೊಡ್ಡವರು
ಮಂಟೇದಸ್ವಾಮಿ ಜಗನ್ ಜ್ಯೋತಿ
ಎಲ್ಲಾ ಮಾರಿರ್ನ
ಒಂದಿಗೆ ಕಟ್ಟಿಕಂಡು ಹೋಗಬೇಕು ಎನುತೊಳಿ
ಕುರುಬೇ ಗೌಡ ಕುರಿಮಂದೆ ಗುರುವು
ಯಾವ ರೀತಿ ಹೊಡಕಂಡು ಬರ್ತಾರೋ
ಆದೀ ಪರಕಾರದಲ್ಲಿ ಜಗದ ಜ್ಯೋತಿ
ಧರೆಗೆ ದೊಡ್ಡಯ್ಯ

ಅವರು ಮಾರಿದಾ ಕರ್ದುಕಂಡು
ಮಾರುವಳ್ಳಿಗೆ ಬರುತಾರೆ || ಸಿದ್ಧಯ್ಯ ||

ಗುರುವೇ ಮಾರಿರಾ ಗುರುವು
ಕರಕಂಡು ನನ್ನಪ್ಪಾ
ಅಲ್ಲಮಪ್ರಭು ಮಂಟೇದಲಿಂಗಪ್ಪ
ಅವರು ಮಾರವಳ್ಳಿ ಮನಸ್ತಾನಕೆ ನನ್ನ
ಮಂಟೇಸ್ವಾಮಿ ಬರುತಾರೆ || ಸಿದ್ಧಯ್ಯ ||

ಮಾರ್ವಳ್ಳಿ ಮನಸ್ತಾನಕ್ಕೆ ಬಂದುರು
ಜಗತ್ತುಗುರು ಅಲ್ಲಮಪ್ರಭು ಮಂಟೇದಲಿಂಗಪ್ಪ
ಮಾರುವಳ್ಳಿ ಗ್ರಾಮದಲ್ಲಿ
ಮಾರುವಳ್ಳಿ ಹೊಂಗೆ ತೋಪು
ಹೊಂಗೆ ತೋಪಿಗೆ ತಂದು
ಮಾರಿರಾ ನಿಲ್ಲಿಸಿ ಬುಟ್ಟು ಜಗತ್ತು ಕರುತೃ ಮಹಾದೇವಾ
ಕೇಳಿರವ್ವಾ ಮಾರಿರೇ
ನಾನು ಕರಿಯನಾ ಗಂಟಾ ಬರಬ್ಯಾಡಿ ಕನ್ರಮ್ಮ
ಕೂಗಾನ ಗಂಟಾ ಬರುಬ್ಯಾಡಿ ಮಕ್ಕಳೇ
ಈ ಮಾರ್ವಳ್ಳಿ ಹೊಂಗೆ ತೋಪಿನಲ್ಲಿ ಆಟಪಾಠ ಆಡಿ
ನಾನು ಕರುದುದ್ದ ವೇಳೆ ವೇಳೆಗೆ ಬಂದು ಬುಡಿ ಕಂದಾ ಅಂತಾ ಹೇಳಿ
ಎಲ್ಲಾ ಮರೀರುನೂ ಮಾರ್ವಳ್ಳಿ ಹೊಂಗೆ ತೋಪಿನಲಿ ಬಿಟ್ಟು ಬಿಟ್ಟು

ಅವರು ಬಸವಾಚಾರಿ ಮನೆಗೆ
ನನ್ನ ದೇವರು ದಯ ಮಾಡುತಾರೆ || ಸಿದ್ಧಯ್ಯ ||

ಬಸವಾಚಾರಿ ಮನೆಗೆ
ಮುದ್ದಮ್ಮನ ಮನೆಗೆ ಗುರುವು
ತಾನಾಗಿ ಬಂದು ಜಗತ್ತು ಕುರುತೃ
ಅಲ್ಲಮಪ್ರಭು ಮಂಟೇದಲಿಂಗಪ್ಪ
ಈಗ ಬಾಚಿ ಬಸವಚಾರಿ ಮನೆ ಒಳಗೆ
ಏಳು ಜನ ಲಕ್ಷಿಯರವರಲ್ಲಾ
ಆ ಏಳು ಜನ ಲಕ್ಷಿಯರ ಕರೀಬೇಕಲ್ಲ ಅಂತೇಳಿ ಜಗತ್ತು ಗುರು
ಏಳು ಮಂದಿ ಲಕ್ಷ್ಮೀರಾ
ಅತಿ ಪ್ರೇಮದಲ್ಲಿ ಏನಂತ ಕರೀತಾರೆಂದರೆ ಗುರುವು

ನನ್ನ ಪ್ರಿಯ ಲಕ್ಷ್ಮೀ ಬಾವ್ವ
ನನ್ನ ಪುಣ್ಯ ಲಕ್ಷ್ಮೀ ಬಾವ್ವ
ಅರುಷಣ ಲಕ್ಷ್ಮೀ ಬಾವ್ವ
ಕುಂಕುಮದ ಲಕ್ಷ್ಮೀ ಬಾವ್ವ
ನನ್ನ ಗಜುಲಕ್ಷ್ಮೀ ಕಂದಾ
ಓಡಬಾವ್ವ ನನ ಕಂದಾ
ನನ್ನ ಬಾಗುಲಡಿಲಿ ವಾಸ ಮಾಡುವ
ಭಾಗ್ಯಲಕ್ಷ್ಮೀ ಓಡುಬಾವ್ವ || ಸಿದ್ಧಯ್ಯ ||

ಬಾಗಿಲಡಿಲಿ ವಾಸಮಡುವಂತಾ
ಭಾಗ್ಯ ಲಕ್ಷ್ಮೀ ನನ ಕಂದಾ
ಓಡುಬಾವ್ವಾ ಮಗಳೆ
ಓಡುಬಾರೋ ಕಂದಾ ಎಂದುರು
ಏಳುಜನ ಲಕ್ಷ್ಮೀರು ಓಡೋಡಿ ಬಂದು
ಧರೆಗೆ ದೊಡ್ಡೊರ ಮುಂಭಾಗದಲ್ಲಿ

ಅವರು ನಡುವನ್ನೆ ಕಟ್ಟಿಗಂಡು
ಅಯ್ಯಾ ಕರುವನ್ನೇ ಜೋಡುಸುಗಂಡು || ಸಿದ್ಧಯ್ಯ ||

ನಡ ಕಟ್ಟುಗಂಡು ಕರ ಜೋಡ್ಸಿಗಂಡು
ದಿಂಡು ನಮಸ್ಕಾರ ಮಾಡಿಕಂಡು ಗುರುವು
ಜಗತ್ತು ಗುರು ಮಂಟೇದಲಿಂಗಪ್ಪನ ಮುಂಭಾಗದಲ್ಲಿ
ಬಂದು ನಿಂತುಕಂಡು ಏಳು ಜನ ಲಕ್ಷ್ಮೀಯರು

ನನ್ನ ಧರೆಗೆ ದೊಡ್ಡವರ ಪಾದಕೆ
ಬಾಗಿ ಶರಣ ಮಾಡುತಾರೆ || ಸಿದ್ಧಯ್ಯ ||

ನನ್ನ ಧರೆಗೆ ದೊಡ್ಡವರ ಪಾದಕೆ
ಬಾಗಿ ಶರಣ ಮಾಡಿ
ಮಂಟೇದಲಿಂಗಯ್ಯನಿಗೆ
ಕೈ ಎತ್ತಿ ಮುಗುದು
ಏಳುಜನ ಲಕ್ಷ್ಮೀಯರು
ಅಪ್ಪಾ ಎತ್ತಲ ಚಾಕ್ರಿಗೆ ನಮ್ಮ
ಕರಿದಿರಿಯಪ್ಪ ಮಾಯಿಕಾರ || ಸಿದ್ಧಯ್ಯ ||

ಜಗತ್ತು ಗುರು
ಇವತ್ತು ನಮ್ಮ ಏಳುಜನ ಲಕ್ಷ್ಮಿಯರ್ನು
ಬನ್ರವ್ವ ಅಂತ ಕರ್ದು ಬುಟ್ರಿಯಲ್ಲಪ್ಪ
ಯಾತಕ್ಕಾಗಿ ಕರಿದ್ರಿ
ನಮ್ಮ ಯಾವ ಕಾರಣಕ್ಕೆ ಕೂಗಿ ಬುಟ್ರಿ ಎಂದುರು
ಲಕ್ಷ್ಮೀಯರೇ
ಯಾತಕ್ಕೆ ಏನು ಕಾರಣ ಕರಿದಿ ಎಂದುರೇ
ಬಸವಾಚಾರಿ ಮನೆ ಋಣ ನಿಮಗೆ ತೀರ್ತು ಕಂದಾ
ನಿಮ್ಮ ಋಣ ಅವರಿಗೂ ತೀರೋಗಿಬುಡ್ತು
ಬನ್ನಿ ಮಕ್ಕಳೆ ಬನ್ರವ್ವ ಎಂದುರು
ಗುರುದೇವಾ
ಇಷ್ಟು ದಿವುಸಗಂಟಾ
ಬಸವಾಚಾರಿ ಮನೆ ಒಳಗೆ ವಾಸವಾಗಿದ್ದುವಲ್ಲಪ್ಪ
ಇನ್ನು ನಾವು ಎಲ್ಲೋಗಿ ಸೇರಬೇಕು
ಯಾತಾವ ವಾಸಮಾಡಬೇಕು ಗುರುದೇವಾ ಎಂದುರು
ಲಕ್ಷ್ಮೀರೆ
ಎಲ್ಲಿಗೋಗಬೇಕು ಯಾತವುಕೋಗಬೇಕು ಎಂದುರೇ
ನಾಡು ನಾಡು ರಾಜ ರಾಜ್ಯದ ಮೇಲೆ
ಹೊರಟೋಗಿರಮ್ಮ
ಈ ರಾಜ್ಯದ ಮೇಲೆ ಯಾವ ರೀತಿ
ವಾಸ ಮಾಡಬೇಕೆಂದರೆ ಕಂದಾ

ಅವ್ವ ಇವತ್ತಿದ್ದೋರ ಮನ್ಲಿ
ನಾಳಿಕೆ ಇರುಬೇಡಿ
ನಾಳೆ ಇದ್ದೋರ ಮನ್ಲಿ
ನಾಡಿದ್ದು ಇರಬೇಡಿ
ಅಮ್ಮ ಆಚೆ ನಾಡಿದ್ದು ಇದ್ದೋರ ಮನೆಯಲ್ಲಿ
ಆಚೆ ನಾಡಿದ್ದು ಇರುಬೇಡಿ ನನ ಕಂದಾ
ಅಮ್ಮ ದಾನಗಾರ್ರು‍ಕಂದಾ
ಧರ್ಮುಗಾರ್ರು ಕಂದಾ
ಮನಿಯಲ್ಲಿ ನನ ಮಕ್ಕಳೆ ನಿಮಗೆ
ಕಾಲವಿಲ್ಲ ಕಣಿರವ್ವ
ಅಮ್ಮ ಜೀನುಗಾ‌ರ್ರು‍ಕಂದಾ
ಜಿಪ್ಪುನುಗಾರ್ರು ಕಂದಾ
ಅವರ ಬಚ್ಚಲುಕೆ ದಂಡು ಒಳಗೆ
ವಾಸುಸ್ಥಾನ ಮಾಡಿರವ್ವ || ಸಿದ್ಧಯ್ಯ||

ಜೀನುಗಾರ್ರು‍ಜಿಪುಣಗಾರ್ರು‍
ಬಚ್ಚಲಿಕೆ ದಂಡೆ ಒಳಗೆ ಮಾಸಮಾಡಿ ಕಂದಾ
ಒಂಟೋಗಿರವ್ವ ಒಂಟೋಗಿಬುಡಿ ಮಕ್ಕಳೆ ಎಂದುರು
ಧರೆಗೆ ದೊಡ್ಡೋರ ಮಾತಕೇಳಿ
ಜಗಜೋತಿ ಅಲ್ಲಮ ಪ್ರಭು
ಮಂಟೇದಲಿಂಗಪ್ಪನ ಮಾತ ಕೇಳಿಕಂಡು
ಏಳು ಜನ ಲಕ್ಷ್ಮೀಯರು ಏನು ಮಾತಾಡ್ತರೆ ಎಂದುರೇ
ಗುರುದೇವಾ
ನಾಡು ದೇಸುದು ಮೇಲೆ ಓಗುಬುಟ್ಟು
ಜೀನುಗಾರ್ರು‍ಬಚ್ಚಲಿಕೆ ದಂಡೊಳಗೆ
ವಾಸಮಾಡ್ರಮ್ಮ ಅಂತ ಕೇಳುತಿಯಲ್ಲಪ್ಪ
ಜೀನುಗಾರ್ರ ಬಚ್ಚಲಿಕೆ ದಂಡೊಳಗೆ
ವಾಸಮಾಡದಕೆ ಸ್ವಾಮಿ
ನಮಗೆ ಬಾಳ ಭಯ ಉಂಟಾಯ್ತದಲಾ ಗುರುದೇವಾ ಎಂದುರು

ಲಕ್ಷ್ಮೀರೆ
ಜೀನುಗಾರ್ರ‍ಬಚ್ಚಲಿಕೆ ದಂಡೊಳಗೆ
ವಾಸಮಾಡಬೇಕಾದ್ರೆ ಬಾಳ ಭಯವಾದದ್ರವ್ವ
ಎದುರುಬೇಡಿ ಬೆಚ್ಚುಬೇಡಿ ಕಂದಾ
ಅಷ್ಟು ಭಯ ನಿಮಗುಂಟಾದ್ರೆ
ಈ ಭೂಮಿ ಆಳುತಕ್ಕಂತವನು
ಏಳುತಲೆ ಕರಿಕಾಳಿಂಗನ ಮಾಸೇಸ ಕಂಡ್ರಮ್ಮ
ಕಾಳಿಂಗ ಸರಪನ ನನ ಕಂದಾ
ನಿಮ್ಮ ಏಳುಜನ ಲಕ್ಷ್ಮೀಗುರು
ಕಾವಲು ಕೊಡುತೀನಿ ಮಕ್ಕಳೇ
ಈ ಸರ್ಪನ ಕರದುಕಂಡು
ನಾಡು ಮೇಲೆ ಹೋಗಿರಮ್ಮ || ಸಿದ್ಧಯ್ಯ||

ಸರಪನ ಕರಕಂಡು ನಾಡಮೇಲೆ
ಒಂಟೋಗ್ರಿ ಎಂತಾ ಏಳಿ
ಏಳುಜನ ಲಕ್ಷ್ಮೀರ ನಾಡು ರಾಜ್ಯದ ಮೇಲೆ
ಕಳುಗಿಸಿಬುಟ್ಟು ಧರೆಗೆ ದೊಡ್ಡವರು
ಕಂಡಾಯದ ಮೂರೂತಿ
ಬಸವಾಚಾರಿ ಮುದ್ದಮ್ಮನ ಮನೆಗೆ ಬಂದು
ದರಿದ್ರ ಲಕ್ಷ್ಮೀ ಕರದು ಅವರ ಮನೆಗೆ ಕೂಡಿದ್ರಂತೆ
ದರಿದ್ರ ಲಕ್ಷ್ಮೀ ಕೂಡಿ ಬುಟ್ಟು ಜಗತ್ತು ಗುರು
ಬಾಚಿ ಬಸವಯ್ಯ ತಾಯಿ ಮುದ್ದಮ್ಮನವರ
ಪಾದ ತೊಳಿವಂತೆ ಪಚ್ಚೆ ಕಲ್ಲು
ಆ ಪಚ್ಚೆ ಕಲ್ಲುನ ಮೇಲೆ ಬಂದು
ನಡಟ್ಟಿ ಒಳಗೆ ನಿಂತುಕಂಡು
ಮುತ್ತಿನ ಜೋಳಿಗ್ಗೆ ಕೈಯಾಕಿ ಧರೆಗೆ ದೊಡ್ಡವರು
ಕಾದ ಗಟ್ಟಿಯನ್ನ ತಗದು
ಅಂಗೈ ಮೇಲೆ ಮಡಿಕಂಡು ನನ್ನಪ್ಪ
ಓ ನಮ ಶಿವಾಯ ಓ ನಮ ಭಗವತಿ
ಓ ನಮ ನಾರಾಯಣ ಅಂತೇಳಿ
ಅರ್ ಶಾಸ್ತ್ರ ಅದುನೆಂಟು ಪುರಾಣ ಪಾರಾಯಣ
ಓದುಬುಟ್ಟು ಗುರುವು

ಅವರು ಕಾದುಗಟ್ಟಿ ತಗುದರಂತೆ
ನಡೆಟ್ಟೀಲಿ ಒಡೆದಾರಂತೆ || ಸಿದ್ಧಯ್ಯ||

ಕಾದಗಟ್ಟಿತಗದು
ಅವರ ನಡಟ್ಟಿ ಒಳಗೆ ಒಡದು
ಜಗತ್ತು ಗುರು ಧರೆಗೆ ದೊಡ್ಡೋರು ಮಂಟೇದುಸ್ವಾಮಿ
ಏನವ್ವ ನನ್ನಕಂದಾ ಬಾಚಿ ಬಸವಯ್ಯನ ಮಡದಿ ಮುದ್ದಮ್ಮ
ನಿನ್ನಟ್ಟಿ ಒಳಗೆ ನನ್ನ ಗಟ್ಟಿ ಒಡದೋಯ್ತು ನನ್ನ ಕಂದಾ
ನನ ಗಟ್ಟಿ ಒಡದೊಯ್ತಲ್ಲೋ ಮಗಳೇ

ನನ್ನ ಗಟ್ಟಿ ಒಡದೋದಂಗೆ
ನಿನ್ನ ಹುಟ್ಟಿಯೇ ಒಡೆದೋಗಲವ್ವ|| ಸಿದ್ಧಯ್ಯ||

ನನ್ನ ಗಟ್ಟಿ ಒಡದೊದಂಗೆ ನಿಮ್ಮ
ಹಟ್ಟಿಯೇ ಒಡದೋಗಲಿ
ನನ ಗಟ್ಟಿ ಚೂರಾದಂಗೆ
ನಿನ್ನಟ್ಟಿಯೇ ಚೂರಾಗಲಿ
ನನ್ನ ಗಟ್ಟಿ ಬರುದಾದಂಗೆ
ನಿಮ್ಮಟ್ಟಿ ಎಲ್ಲಾ ಬರುದಾಗಲಮ್ಮ || ಸಿದ್ಧಯ್ಯ||

ನನ್ನ ಗಟ್ಟಿ ಬರುದಾದಂಗೆ
ನಿಮ್ಮಟ್ಟಿ ಬರುದಾಗಲಿ ತಾಯಿ ಮುದ್ದಮ್ಮ
ಎನುತೇಳಿ ಜಗತ್ತ ಗುರು ಧರೆಗೆ ದೊಡ್ಡಯ್ಯ
ಬಸವಾಚಾರಿ ಅಟ್ಟಿ ಅರಮನೆ ಬಿಟ್ಟು ಬುಟ್ಟು ಗುರುವು
ಇವತ್ತು ತುಂಬುದ ಸ್ವಾಮವಾರ
ನನ್ನ ಗಟ್ಟಿ ಬರುದಾಗಿ ಬುಡ್ತು ಅನುತೇಳಿ
ಬಸವಾಚಾರಿ ಮನೆ ಬುಟ್ಟು ನನ್ನಪ್ಪ

ಅವರು ಎಲೆಯ ಕುಂದೂರು ಬೆಟ್ಟಕೆ
ಓಡಿ ಓಡಿ ಬರುತಾರೆ || ಸಿದ್ಧಯ್ಯ||

ಅವರು ಅಜ್ಜನ ಮೂಲೆಗಾಣೆ
ಕುಂದೂರು ಬೆಟ್ಟ ಹತ್ತುತ್ತಾರೆ || ಸಿದ್ಧಯ್ಯ||

ಅಜ್ಜನ ಮೂಲಗಾಣೆ ದೇವಾ
ಕುಂದುರು ಬೆಟ್ಟ ಹತ್ತಗಂಡು
ಜಗತ್ತು ಕರ್ತೃ ಧರೆಗೆ ದೊಡ್ಡಯ್ಯ
ಕುಂದೂರು ಬೆಟ್ಟದ ಕಡೆ ಕಲ್ಲಿನ ಮೇಲೆ
ಬಂದು ಕೂತುಗಂಡರು
ಆಗ ಏಳುನೂರುಜನ ಮಾರೀರ ಕಣಿಂದ ನೋಡಿಬುಟ್ಟು
ಓಗ್ರವ್ವ ನನ ಕಂದಾ ಓಗಿ ಮಾರೀರೆ
ನುಗ್ರಿ ನನ್ನ ಕಂದ ಎಂದರು
ಏಳುನೂರು ಜನ ಮಾರೀರಲ್ಲಿ ಮುಂದಾದ ಮಾರಮ್ಮ
ಬಸವಾಚಾರಿ ಮನೆಗೆ ಯಾವ ಮಾರಮ್ಮ
ನುಗ್ಗುತಾಳೆಂದರೆ

ಅಯ್ಯೋ ಕಣ್ಣು ಕಾಣದ ಮಾರವ್ವ
ಹುಡುಕಾಡ್ಕೊಂಡು ನುಗ್ಗುತಾಳೆ || ಸಿದ್ಧಯ್ಯ||

ಅಯ್ಯಾ ಮಿಕನಾದ ಮಾರೀರೆಲ್ಲ
ಹಿಂದೆ ಹಿಂದೆ ನುಗ್ಗುತ್ತಾರೆ || ಸಿದ್ಧಯ್ಯ||

ಗುರುವೆ ಮಾರಿ ಹೊಕ್ಕಿದ ಮನೆಯೊಳಗೆ
ಇಲಿ ಎಗ್ಗಣ ಸಾಯುತಾವೆ || ಸಿದ್ಧಯ್ಯ||

ಅಪ್ಪ ಇಲಿ ಎಗ್ಗಣ ಸತ್ತಮನ್ಲಿ
ಸಾಲು ಹೆಣವ ಕೆಡವುತಾರೆ || ಸಿದ್ಧಯ್ಯ||