ಎಲ್ಲಾ ಮಾರೀರುವೇ ದೇವಾ
ಬಸವಾಚಾರಿ ಮನೆಗೆ ನುಗುದುರು
ಎಲ್ಲಾ ಮಾರೀರು ಸುತ್ತಾಡಿಕಂಡು
ಒಕ್ಕೂಲಾಡಿ ಬರುವಾಗ

ಅವರ ಸಾಲಟ್ಟಿ ದನಗಳಿಗೆ
ದೊಡ್ಡ ರೋಗ ಕೊಟ್ಟವರೆ
ಸಾಲಟ್ಟಿ ಕುರುಗೊಳಗೆ
ಉಣ್ಣು ರೋಗ ಕೊಟ್ಟವರೆ
ಸಾಲಟ್ಟಿ ಆಡುಗಳಿಗೆ ದೇವಾ
ಕಸರೆ ರೋಗ ಕೊಟ್ಟು
ಅವರು ದೊಡ್ಡಿಯ ರಾಸುಗಳಿಗೆ
ದೊಡ್ಡು ರೋಗ ಕೊಟ್ಟಾರಲ್ಲ || ಸಿದ್ಧಯ್ಯ||

ಅವರ ಅರುಮಂದಿ ಜೀತುಗಾರ್ರ‍
ಊರು ಮುಂದೆ ಉಟ್ಟುಗಲ್ಲಾ ಗುರುವೇ
ಉಟ್ಟುಗಲ್ಲ ದೇವಾ ಮಾಡವರೆ ನನ್ನಪ್ಪ
ಅವರ ಮುತ್ತು ರತುನಾನೆಲ್ಲ ಗುರುವೇ
ಮಣ್ಣು ಪಾಲು ಮಾಡುತಾರೆ || ಸಿದ್ಧಯ್ಯ||

ಮುತ್ತುರತುನನೆಲ್ಲಾನು ದೇವಾಸ
ಮಣ್ಣು ಪಾಲು ಮಾಡಿದ್ರು ಜಗತ್ತು ಗುರು
ಈ ಮಾರೀರಾ ಆಟ ಪಾಠ ಎಲ್ಲಾನು
ಕಣ್ಣಿಂದ ನೋಡುತಾ
ಎಲೆ ಕುಂದುರು ಬೆಟ್ಟುದಾ
ಕೊಡೆ ಕಲ್ಲಿನ ಮೇಲೆ ಕುಂತಿದ್ರು ಧರೆಗೆ ದೊಡ್ಡಯ್ಯ
ಎಲ್ಲಾ ಮಾರೀರೂ ಒಕ್ಕಲಾಡಿಕಂಡು ಒಕ್ಕುಲಾಡಿಕೊಂಡು ಬರುವಾಗ

ಅವರ ಏಳುಗುಳಿಯ ಅಕ್ಕಿ
ಅಣ್ಣೆ ಬೀಜಾಮಾಡಿ
ಏಲುಗುಳಿ ಬೇಳೆ
ಅತ್ತಿ ಬೀಜ ಮಾಡಿ
ಅವರ ಏಲುಕೊಪ್ಪರಿಕೆ ದ್ರೌಭಾಗ್ಯ
ಇಜ್ಜುಲು ಮಸಿ ಮಾಡುತಾರೆ || ಸಿದ್ಧಯ್ಯ||

ಅವರ ಚಿನ್ನ ಬೆರಳಿ ಕಂಬಸಾಲು
ಮರುದ ಕಂಬಾ ಮಾಡುತಾರೆ || ಸಿದ್ಧಯ್ಯ||

ಗುರುವೇ ಮೊದಲು ಹುಟ್ಟಿದಂತಾ
ಏಳುಜನ ಮಕ್ಕಳಲ್ಲಿ
ಆರುಜನ ಗಂಡು ಮಕ್ಕಳ ಕಣ್ಣಾರೆ ದೇವಾ
ನೋಡವರೆ ಮಾರೀರು

ಗುರುವೆ ಮುಂಚೆ ಉಟ್ಟಿದ ದೇವಾ
ಆರುಜನ ಗಂಡು ಮಕ್ಕಳಿಗೆ
ಹುಚ್ಚು ಕೊಟ್ಟವರೆ ಬೆಪ್ಪು ಕೊಟ್ಟವರೇ
ಮೊಲ್ಲಾಗ್ರ ಕೊಟ್ಟವರ
ಅವರು ಉಚ್ಚು ಬೆಪ್ಪಿನ ‌ಗ್ಯಾನದಲ್ಲಿ
ಊರು ಗದ್ದಲ ಮಾಡುತಾರೆ || ಸಿದ್ಧಯ್ಯ||

ಆರುಜನ ಗಂಡು ಮಕ್ಕಳಿಗೆ ದೇವಾ
ಹುಚ್ಚುನೆ ಕೊಟ್ಟು ಬೆಪ್ಪುನೆ ಕೊಟ್ಟು
ಮೊಲ್ಲಾಗ್ರ ಕೊಟ್ಟು ಗುರುವು
ಹುಚ್ಚು ಬೆಪ್ಪಿನ ಗ್ಯಾನದಲ್ಲಿ
ಊರಿಗೆ ಒಬ್ಬುನ ಮಾಡಿ
ಕೇರಿಗೆ ಒಬ್ಬುನ ಮಾಡಿ
ಬಾಚಿ ಬಸವಯ್ಯನ
ಆರುಜನ ಸೂಸೇರಿಗೆ ಗುರುವು
ಗಂಡುಗಾಳಿನೆ ಕೂಡಿ
ಕಲ್ಲು ಕಲ್ಲ ಕಡಿದು
ಮಣ್ಣು ಮಣ್ಣು ಮುಕ್ಕಿ
ಹಟ್ಟಿ ಹಜಾರದಲಿ ಪಕ ಪಕನೆ
ಪ್ರಾಣ ಬುಟ್ಟು ಬುಟ್ಟುರು
ಆ ಗಳಿಗೆ ಒಳಗೆ ಎಳೆ ಕೆಂಪಚಾರಿ ಮಗನು
ಕುಲುಮೆ ಕಛೇರಿ ಒಳಗೆ
ಏಳುನೂರು ಜನ ಆಳುಕಾಳು
ಜೀತ್ತಾಳು ಕಟ್ಟಿಕಂಡು
ಬಾರಿಬಾರಿ ಉದ್ಯೋಗ ಮಾಡುಸ್ತಾ
ಕುಳಿತಿದ್ದಂತಾ ಕೆಂಪಣ್ಣ
ಆಳುಕಾಳು ಜೀತಾಗಾರ್ರಿ‍ಗೆಲ್ಲ

ಅವನು ಏನು ಮಾತೊಂದಾಡುತಾನೆ
ಏಳೆಯ ಕೆಂಪಣ್ಣ ಶರಣ|| ಸಿದ್ಧಯ್ಯ||

ಎಳೆಯವನು ನನ್ನ ಕಂದಾ ಚಿಕ್ಕವನು ಮಗನು ಕೆಂಪಣ್ಣ
ಎನ್ರಲಾ ಜೀತ್ತಾಳುಗಳೇ
ಕಾ ಕೋಳಿ ಕೂಗಿ ಬುಡ್ತು ಲೋಕ ಬೆಳಗಾಗಿ ಬುಡ್ತು
ಎಂಟುಗಂಟೆ ಜಾಮುವಾಗೋಯ್ತು
ಈಗ ನಮ್ಮ ತಾಯಿ ಮುದ್ದಮ್ಮನೋರು
ನನಗೆ ಹಾಲು ಕರುದು ಮಡುಗುವಂತ ಟೈಮು
ಹಟ್ಟಿ ಅರಮನೆಗೆ ಹೋಗು ಬುಟ್ಟು
ನಮ್ಮ ತಂದೆ ತಾಯಿ ಪಾದಪೂಜೆ ಮಾಡಿಬುಟ್ಟು
ನಮ್ಮ ತಾಯಿ ಮುದ್ದಮ್ಮನ ಕೈಲಿ
ಆಲಿಸಿಕಂಡು ಹಾಲು ಕುಡುಕಂಡು
ಊಟ ಮಾಡಕಂಡು
ಕುಲುಮೆ ಕಛೇರಿಗೆ ಬರುತಿನಿ
ನಾನು ಬರೋತನಕ
ಎತ್ತಿದ ಸುತ್ತಿಗೆ ಇಳುಕ ಬ್ಯಾಡಿ
ಒತ್ತಿದ ತಿದಿ ಬುಡ ಬ್ಯಾಡಿಸ
ಕೆಲ್ಸ ಮಾಡ್ರಲ ಅಂತ ಹೇಳಿ ಕೆಂಪಣ್ಣ
ಬಾರಬಾರಿ ಗಲಾಟೆ ಮಾಡಿ ಬುಟ್ಟು
ಆಳು ಕಾಳನೆ ಗುರುದೇವಾ
ಕುಲುಮೆ ಕಛೇರಿ ಒಳಗೆ ಬು‌ಟ್ಟು ಕೆಂಪಣ್ಣ

ಅವನು ಕುಲುಮೆ ಮನೆಯ ಬಿಟ್ಟಾನಂತೆ
ತನ್ನ ಮನೆಗೆ ಬರುವುತಾನೆ || ಸಿದ್ಧಯ್ಯ||

ಗುರುವೇ ಕುಲುಮೆ ಮನೆಯ ಗುರುವೆ
ಬಿಟ್ಟು ಬುಟ್ಟು ನನ ಕಂದಾ
ಏಳು ವರ್ಷದ ಮಗನು
ಎಳೆಯವನು ನನ ಕಂದಾ
ಚಿಕ್ಕವನು ಮಗನು
ಪುಟ್ಟವನು ಕಂದಾ
ಕಿರಿಯವನು ಕೆಂಪಣ್ಣ
ಗುರುವೇ ಓಡಿ ಓಡಿ ಬಂದು
ಹಟ್ಟಿ ಅರುಮನಿಯ
ಬಾಗುಲು ಮುಂದೆ ಕಂದಾ
ಬಂದು ನಿಂತುಗಂಡು
ಅವನು ಒಂದು ಪಾದವ ತಗುದನಂತೆ
ಒಳಗಡೆ ಮಡಗುತಾನೆ || ಸಿದ್ಧಯ್ಯ||

ತಾಯಿ ತಂದೆ ಪಾದ ಪೂಜೆ ಮಾಡಬೇಕು
ಹಾಲನೆ ಕುಡೀಬೇಕು ಎನುತೇಳಿ
ಆಸೆಯಿಂದ ಒಡೋಡಿ ಬಂದು ಕೆಂಪಣ್ಣ
ಬಲ್ದ ಪಾದ ತಗುದು ಬಸುಲಿಂದ
ಒಳಗಡೆ ಮಡಗಿದ
ಬಾಗಬಾಗಲಲ್ಲೆಲ್ಲಾ ಇಲಿ ಎಗ್ಗುಣ
ಕೋಳಿ ಕೊತ್ತುಗಳೆಲ್ಲಾ ಸತ್ತು ಸತ್ತು ಬಿದ್ದಿದ್ದೊ
ಬಿದ್ದಿರುವಂತ ಪ್ರಾಣಿಗಳ ನೋಡುಬುಟ್ಟು ಕೆಂಪಣ್ಣ
ಮುಂದುಕೆ ಮಡಗಿದ ಹೆಜ್ಜೆಯ
ಹಿಂದಕೆ ತಕಂಡು ಮಗು
ಬಲಗಡೆ ತಿರುಗಿ ನೋಡಿದ ಕಂದಾ
ಎತ್ತು ಎಮ್ಮೆಗಳೆಲ್ಲಾ ನಾಕು ಪಾದ
ಮೇಕೆ ಮಾಡಿಕಂಡು ಮೊಳುದ್ದ ನಾಲಗೆ ಇರಕಂಡು
ಸತ್ತು ಮಲಗಿದ್ದೋ
ಎಡಗಡೆ ತಿರುಗಿ ನೋಡಿದ ಕೆಂಪಣ್ಣ
ಆಡುಕುರಿಗಳೆಲ್ಲಾ
ಒಂದರ ತಲೆಗೆ ಒಂದು ಎಟ್ಟಿಗಂಡು
ಸತ್ತು ಸತ್ತು ಪ್ರಾಣ ಬಿಟ್ಟಿದ್ದೊ
ಅಟ್ಟಿ ಅಜಾರ ನೋಡಿದ ಮಗನು
ಅಟ್ಟಿ ಅಜಾರದಲಿ ಆರುಜನ ಅತ್ಗೇರು
ಸತ್ತು ಪ್ರಾಣ ಬಿಟ್ಟಿದುರು
ಸತ್ತು ಮಲಗಿರುವಂತಾ ಅತ್ಗೇರಾ
ಕಣ್ಣಿಂದ ನೋಡಿ ಬುಟ್ಟು

ಓಡಿ ಓಡಿ ಬಂದಾನಂತೆ
ಅತ್ತಿಗೇರ ಮುಂದೆ ನಿಂತಗಂಡ || ಸಿದ್ಧಯ್ಯ||

ಗುರುವೇ ಓಡಿ ಓಡಿ ಬಂದು ಕಂದಾ
ಸತ್ತು ಮಲಗಿರುವ ಅತ್ತಿಗೇರಾ ಮುಂದೆ
ನಿಂತಗಂಡು ನನ್ನ ಕಂದಾ
ಆರುಜನ ಅತ್ತಿಗೇರಾ ಮುಖವನೇ ಕಂದಾ
ಕಣ್ಣಾರೆ ನೋಡಕಂದು

ಅವನು ಅತ್ತಿಗೇರ ಪಾದದ ಮೇಲೆ
ದಢೀರನೆ ಬಿದ್ದಾನಾಗ || ಸಿದ್ಧಯ್ಯ||

ಅತ್ತಿಗೇರ ಪಾದದ ಮೇಲೆ ಬಂದು
ಬಿದ್ದುಕಂಡು ಕಂದಾ
ಅತ್ತಿಗೇರ ಮುಖ ನೋಡಿಕಂಡು
ಅತ್ತಿಗೇರ ಪಾದ ಇಡಕಂಡು
ಅಯ್ಯೋ ಅತ್ತಿಗಮ್ಮ
ಹಿರಿ ಅತ್ತಿಗೂ ಒಂದೆ
ಅವ್ವ ಎತ್ತ ತಾಯುವೆ ಒಂದೆ
ನನ್ನ ಚಿಕ್ಕಂದಿನಿಂದ
ಕಿರಿ ಮೈದಾ ಎನುತಾ
ನನ್ನ ಎತ್ತಿಗಂಡು ಪತಗಂಡು
ಮುತ್ತಿಕ್ಕಿ ಮುದ್ದಾಡಿ
ಸಾಕಿ ಸಲುಗುಗಿದಿರಿ ಅಯ್ಯೋ ಅತ್ತಿಗಮ್ಮ

ನನ್ನ ದಿಕ್ಕು ಇಲ್ಲುದ ಮಗನ ಮಾಡಿ
ನೀವು ಪ್ರಾಣ ಬಿಡಲುಬಹುದ|| ಸಿದ್ಧಯ್ಯ||

ಅವ್ವ ನಿಮಗೆ ಬಂದಂತಾ ಮರಣ
ನನಗಾರು ಬರಬಾರಾದಾ || ಸಿದ್ಧಯ್ಯ||

ಅಯ್ಯೋ ಹಿಂಡು ಬಳಗದಲ್ಲಿ ಉಟ್ಟಿ ನಾನು
ಬೆಂಡಗಾರು ಮುಳ್ಳು ಆದೆನಲ್ಲ|| ಸಿದ್ಧಯ್ಯ||
ಗುರುವೇ ಕಡೆಯಲ್ಲಿ ನಾ ಉಟ್ಟಿ ದೇವಾ
ಕರಮಗೇಡಿ ಆದೆನಲ್ಲ || ಸಿದ್ಧಯ್ಯ||

ಹಿಂಡು ಬಳಗದಲ್ಲಿ ಹಟ್ಟಿ ದೇವಾ
ಬೆಂಡುಗಾರು ಮುಳ್ಳು ನಾನಾದೆ ಗುರುವು
ಕಡೆಯಲಿ ನಾನು ಹುಟ್ಟಿ
ಕರಮಗೇಡಿ ಅದೆನಲ್ಲ
ಈಗಲೀಗಾ
ಗುರುವೇ ಗುರುದೇವಾ

ಇಂಥ ಮಂಟೇದಲಿಂಗಯ್ಯನ ಮರೆತು
ಮನೆ ಬರುದು ಆಯಿತಲ್ಲ || ಸಿದ್ಧಯ್ಯ||

ನಮ್ಮ ಆರುಜನ ಅಣ್ಣದೀರು ದೇವಾ
ಏನು ಆದರೋ ಕಾಣೆ || ಸಿದ್ಧಯ್ಯ||

ನಮ್ಮ ಆರುಜನ ಅಣದಿರು ದೇವಾ
ಏನಾಗು ಬುಟ್ರೊ ಗೊತ್ತಿಲ್ಲ
ನಮ್ಮ ಆರುಜನ ಅಣ್ಣದಿರು
ಎಲ್ಲಿ ಹೊರಟೋದ್ರೋ ಕಾಣೆನಲ್ಲ ಅಂತೇಳಿ
ಅಟ್ಟಿ ಮನೆನೆಲ್ಲನು ಉಡಕಾಡಿಕಂಡು ಬಂದ ಕೆಂಪಣ್ಣ
ಆರು ಜನ ಅಣ್ಣಂದಿರಾ ದುರುಷಣವೇ ಇಲ್ಲ
ಏಳುಗುಳಿ ಅಕ್ಕಿ ನೋಡಿದ
ಅಣ್ಣೆ ಬೀಜವಾಗಿತ್ತು
ಏಳುಗುಳಿ ಬೇಳೆ ನೋಡಿದಾ
ಅತ್ತಿ ಬೀಜವಾಗಿತ್ತು
ಏಳು ಕೊಪ್ಪರಿಕೆ ದ್ರೌಭಾಗ್ಯನೆಲ್ಲನೂ ನೋಡಿದಾ
ಇಜ್ಜಲು ಮನೆಯಾಗಿತ್ತು
ಚಿನ್ನ ಬೆಳ್ಳಿ ಕಂಬಾ ಸಾಲು ನೋಡಿದಾ ಕಂದಾ
ಎಲ್ಲಾ ಮರದ ಕಂಬವಾಗಿದ್ದೊ

ಯಂತವರ ಮಗನು ನಾನು
ಏನುಗತಿ ಆದೆನಪ್ಪ || ಸಿದ್ಧಯ್ಯ||

ಗುರುವೆ ಎಂತವರ ಮಗನು ನಾನು
ಏನು ಗತಿ ಆದಿ
ಅಯ್ಯೋ ಭಗವಂತ
ಅಯ್ಯೋ ನನ್ನ ಗುರುವು
ಎನತೇಳಿ ನನ್ನ ಕಂದಾ
ನಮ್ಮ ತಂದೆ ತಾಯಿಗಳು ದೇವಾ
ಏನು ಆದರೋ ಕಾಣೆ || ಸಿದ್ಧಯ್ಯ||

ನಮ್ಮ ತಾಯಿ ತಂದೆ ದೇವಾ
ಏನು ಆಗುಬುಟ್ರೊ ಎಂತಾಗಿಬುಟ್ರೋ ಗೊತ್ತಿಲ್ಲವಲ್ಲ
ನಮ್ಮ ತಾಯಿ ತಂದೆ ನೋಡಬೇಕಲ್ಲ
ಅಂತೇಳಿ ಕೆಂಪಣ್ಣ
ತಾಯಿ ತಂದೆ ಮಲಿಕತಿದ್ದಂತ
ಪಟ್ಟೆ ಮಂಚದ ಬಳಗೆ ಬಂದಾ
ಬಸವಾಚಾರಿ ಮುದ್ದಮ್ಮನಿಗೆ
ಕಾಲುಸೇದೋಗಿತ್ತು ಕೈಯ್ಯು ಸೇದೋಗಿತ್ತು
ನಾಲಗೆ ಸೇದೋಗಿತ್ತು

ಗಂಡ ಎಡತೀರಾ ದೇವಾ
ಕಣ್ಣುನ ನೇತ್ರ ಇಂಗೆ ಹೋಯ್ತು || ಸಿದ್ಧಯ್ಯ||

ಗಂಡ ಎಡತೀರಾ ದೇವಾ
ಕಣ್ಣನಾ ನೇತ್ರ ಇಂಗೋಗಿರುವಂತ ಕಾಲದಲ್ಲಿ
ತಾಯಿ ತಂದೆ ಬಳಿಗೆ ಬಂದು
ತಂದೆ ತಾಯಿಗಳ ಮುಂಭಾಗದಲಿ
ನಿಂತುಕಂಡು ಕೆಂಪಣ್ಣ
ಯಾಕವ್ವ ತಾಯಿ ಮುದ್ದಮ್ಮ
ಯಾಕಪ್ಪ ತಂದೆ ಬಸವಾಚಾರಿ
ನಿಮ್ಮ ಭಾಗ್ಯವುಳ್ಳ ಮಗ
ನಿಮ್ಮ ಪುಣ್ಯಸಾಲಿ ಮಗ
ಬಂಗರದ ಗೊಂಬೆ
ಲಕ್ಷ್ಮೀಪುತ್ರ
ಕೆಂಪಚಾರಿ ನಾನು ಬಂದಿವಿನಿ ಗುರುವು
ನಾನು ಬಂದಿವಿನಿ ತಾಯಿ

ಅವ್ವಾ ನನ್ನ ಒಂದಿಗೆ ತಾಯಿ
ಒಂದು ಮಾತು ಆಡು ತಾಯಿ || ಸಿದ್ಧಯ್ಯ||

ಅಪ್ಪ ನೀನು ಪಡೆದ ಮಗನ ಮೇಲೆ
ನಿನಗೆ ಕರುಣ ಇಲ್ಲವಪ್ಪ || ಸಿದ್ಧಯ್ಯ||

ನೀವು ಪಡೆದ ಮಗನ ಮೇಲೆ
ನಿಮಗೆ ಕರುಣ ಇಲ್ವಾ ತಂದೆ
ನೀನು ಹೆತ್ತ ಮಗನ ಮೇಲೆ ನಿನಗೆ
ಪ್ರೀತಿ ಇಲ್ವಾ ತಾಯಿ
ನನ್ನ ಜೋತೆಲಿ ಒಂದು ಮಾತನಾದರು ಆಡ್ರಪ್ಪ
ಒಂದು ಮಾತಾದ್ರು ಆಡು ತಾಯಿ ಎನುತೇಳಿ ಕೆಂಪಣ್ಣ
ತಾಯಿ ತಂದೆ ಕೆನ್ನೆ ಮಿದ್ದಿಸಿ ಮಾತಾಡುವಾಗ
ಬಸವಚಾರಿ ಮುದ್ದಮ್ಮನಿಗೆ
ಕಣ್ಣು ಬುಟ್ಟು ಮಗನ ಮುಖನಾರು ನೋಡನಾ ಅಂದ್ರೆ
ಕಣ್ಣು ನೇತ್ರವಿಲ್ಲ
ಬಾಯಿಬುಟ್ಟು ಮಗನೊಂದಿಗೆ
ಮಾತಾಡುವಾ ಅಂದ್ರೆ
ನಾಲಗೆ ಕೂಡ ಇಲ್ಲಾ
ಮೊಂಡಗೈಲಿ ಮಗನ ಕೈಯ ಸವರುತ್ತಾ
ಮೂಗನ ಸೊಲ್ಲಿನಲ್ಲಿ ಮಗನಿಗೆ
ಏನು ಮಾತಾಡ್ತಾರೆ ಎಂದುರೆ
ಕೆಂಪಣ್ಣ
ನಮ್ಮ ಬಾಳೋರ ಬಾಳಾಟ
ಯಂತಾ ಬಾಳಾಟವಾಯ್ತು ಮಗು
ಈ ಕಾರ್ಲು ಕೊಳಕು
ತಗುಲಿದ ಮನೆಗೆ ನೀನು ಯಾತಕೊ
ಬರಕ್ಕೋದಿಯಪ್ಪ
ನನ್ನ ವಂಸಕೆ ನೀನು ಒಬ್ಬ
ಮಗ ಉಳಿದಿದ್ದಿಯಾ ಕಂದ
ನನ್ನ ಆರುಜನ ಅಣ್ಣದಿರು ಕಂದಾ
ನಿನ್ನ ಆರು ಜನ ಅತ್ತಿಗೇರು
ಏನಾಗಿ ಬುಟ್ರೊ ಗೊತ್ತಿಲ್ಲ ಮಗನೆ
ಅಟ್ಟಿ ದನ ಕೊಟ್ಟಿಗೆ ಕುರಿ
ಎತ್ತು ಎಮ್ಮೆ ಆಡು ಏನಾದವೋ ಕಾಣೆ
ನಿನ್ನ ಸಿರಿ ಸಂಪತ್ತೆಲ್ಲಾ ಏನಾಯ್ತು
ಗೊತ್ತಿಲ್ಲ ಮಗನೆ
ಈ ಮನೆಗೆ ನೀನು ಯಾತಕೆ ಬರಕೋದಿಯಪ್ಪ

ಕಂದಾ ತಂದೆ ಆಸೆ ಮರಿ
ತಾಯಿ ಆಸೆ ಮರಿ
ಅಣ್ಣನಾಸೆ ಮರಿ ಕಂದಾ
ತಮ್ಮನಾಸೆ ಮರಿ ಕಂದಾ
ನಿನ್ನ ಸಿರಿ ಸಂಪತ್ತನೆಲ್ಲಾ
ಇಂದಿಗೆ ನನ ಕಂದಾ
ಮರ್ತುಬುಡು ನನ್ನ ಮಗನೆ
ಅಪ್ಪ ಎಲ್ಲಾರುವೆ ಕಂದಾ
ಒಂಟೋಗು ನನ ಮಗು
ಯಾವತಕಾರು ಕಂದಾ
ಒರಟೋಗು ನನ ಕಂದಾ
ನೀನು ಯಾರುನ್ನಾರ ಸೇರ್ಕಂಡು
ಬದುಕೋಗು ಎಂದರಲ್ಲಾ || ಸಿದ್ಧಯ್ಯ||

ಎಲ್ಲಿಗಾರೂ ಯಾತಕಾರೂ ಹೋಗು ಮಗನೇ
ಯಾರ್ನಾರೂ ಸೇರಿಕಂಡು ಬಾಳು ಬದುಕೋಗು ಕಂದಾ
ನಮ್ಮಗಳಾಸೆ ಮರ್ತು ಬುಡಪ್ಪ ಎಂದುರು
ತಾಯಿ ಆಡಿದ ಮಾತು
ಮಗನಿಗೆ ತಿಳಿಯೋದಿಲ್ಲಾ
ಮಗನಾಡಿದ ಮಾತ ತಾಯಿತಂದೆ
ಕಿವಿಲಿ ಕೇಳುತಾರೆ ದುಃಖಳಿಸಿ
ದುಃಖ ಪಡುತಾರೆ
ಆ ಕಾಲದಲಿ ಕೆಂಪಣ್ಣ
ನಮ್ಮ ತಂದೆ ತಾಯಿಗಳು ಇನ್ನು ಸತ್ತೋಗಿಲ್ಲ
ನಮ್ಮ ತಾಯಿತಂದೆ ಜೀವಗವುರೆ
ಒಂದು ಪಾವಾಲ್ನಾರು ತಂದು
ತಂದೆ ತಾಯಿಗಳ ಬಾಯಿಗೆ ಬುಟ್ಟು ಬುಟ್ರೆ
ನಮ್ಮ ತಾಯಿ ತಂದೆ ಇಬ್ರಾರು
ಬದಿಕತ್ತರೆ ಅಂತೇಳಿ ಕೆಂಪಣ್ಣ
ತಾಯಿ ತಂದೆ ಪಟ್ಟೆ ಮಂಚವನ್ನ ಬುಟ್ಟು
ಗುಡು ಗುಡನೆ ಓಡಿ ಬರುತಿದ್ದ ಕಂದಾ
ಆಗಲೀಗ ನಿಲಿನ ಮೇಲೆ ಹಾಲಿನ ಗಡಿಗೆ ಮಡಗಿತ್ತು
ಆ ಹಾಲಿನ ಗಡಿಗೆ ಒಳಗೆ
ಹಾಲು ತಕಬೇಕು ಅಂತೇಳಿ
ಕೆಂಪಚಾರಿ ಮಗನು
ಹಾಲಿನ ಗಡಿಗೆ ದಂಡುಗೆ
ಕೂಡಿ ಬರುತ್ತಿದ್ದ
ಬರುವಂತ ಕೆಂಪಾಚಾರಿ ಮಗನಾ
ಕುಂದೂರು ಬೆಟ್ಟದ ಕೊಡೆಕಲ್ಲಿನ ಮೇಲೆ
ಕೂತುಗಂಡು ಧರೆಗೆ ದೊಡ್ಡವರು
ಕಣ್ಣಿಂದಾ ಕೆಂಪಣ್ಣನ್ನ ನೋಡಿದುರು
ತಾಯಿ ತಂದೆಗೆ ಹಾಲುಕೊಟ್ಟು
ಪ್ರಾಣ ಉಳಿಸಬೇಕು ಅಂತ ಒಯ್ತಿದ್ದೀಯಾ
ಅದಕ್ಕೂ ಮಿತ್ತಾಗಿ ಬರುತೀನಿ ನಡಿ ಮಗನೆ ಅಂತೇಳಿ
ಕಪ್ಪು ಧೂಳ್ತ ತಗುದು
ಹಾಲಿನ ಗಡಿಗೆಗೆ ಉರುಬುದ್ರು
ಕೆಂಪಣ್ಣ ಓಡುಬಂದು
ಹಾಲಿನ ಗಡಿಗೆಗೆ ಕೈ ಆಕಿದಾ

ಕಂದಾ ಹಾಲಿನ ಗಡಿಗೆಯ ಒಳಗೆ
ಹಾವು ಚೇಳು ಆಡುತಾವೆ || ಸಿದ್ಧಯ್ಯ||

ಹಾಲಿನ ಗಡಿಗೆ ಒಳಗೆ ಕಂದಾ
ಹಾವು ಚೇಳು ಆಡುತಿದ್ದೊ
ಅವನು ಹಾವು ಚವುಳ ನೋಡುತಾನೆ
ಬಾಯಿ ಬಾಯಿ ಬಡಿಯುತಾನೆ || ಸಿದ್ಧಯ್ಯ||

ಅವನು ಬಾಯಿ ಬಾಯಿ ಬಡಿಯುತಾನೆ
ಗುಡುಗುಡು ಗುಡನೆ ಬರುವುತಾನೆ || ಸಿದ್ಧಯ್ಯ||