ಹಾವು ಚೌವುಳು ನೋಡಿಬುಟ್ಟು ಬಾಯಿಬಾಯಿ ಬಡ್ಕಂಡು
ಕೆಂಪಣ್ಣ ಅಟ್ಟಿ ಅರಮನೆ ಬಿಟ್ಟುಬುಟ್ಟು
ಪಕ್ಕದಲ್ಲಿ ಮಾದಮ್ಮನ ಮನೆಗೆ ಬಂದು
ಏನವ್ವ ತಾಯಿ ಮಾದಮ್ಮ
ನಮ್ಮ ತಂದೆ ತಾಯಿಗಳು ಸತ್ತೋಯ್ತಾ ಅವರೆ ತಾಯಿ
ನಮ್ಮ ತಾಯಿ ತಂದೆ ಇಬ್ಬರ್ನಾರು
ಬದುಕಸ್ಕತ್ತಿನಿ ತಾಯಿ
ನಿಮ್ಮ ಜಲಗೊಂಬಿನ ಹಸೀನಲಿ ಒಂದು ಪಾವು ಹಾಲು ಕೊಡವ್ವಾ
ಹಾಲು ಕೊಡು ತಾಯಿ ಎಂದುರು
ಕೆಂಪಣ್ಣ
ಬಾಳವರ ಬಾಳಾಟ ಎಂತಾ ಬಾಳಾಟವಾಯ್ತು ಮಗನೇ
ನಿನಗೆ ಮನೇಲಿ ಹಾಲು ಇಲ್ಲಂತ ಹೇಳಿನ ಕಂದಾ
ಮನೇಲಿ ಮಾತ್ರ ಹಾಲಿಲ್ಲಾ ಮಗು
ಹಸ ಕಟ್ಟಿತೀನಿ ಕರಬುಡ್ತಿನಿ ಕಂದಾ
ಕಂಚಿನಂಡೆ ಕೊಡ್ತಿನಿ ಮರದ ತೀವಟಿಗೆ ಕೊಡುತಿನಿ
ಕೈ ಎಣ್ಣೆ ಬಟ್ಟಲು ಕೊಡ್ತೀನಿ ಮಗನೇ
ಎಷ್ಟು ಹಾಲು ಬೇಕು ಕರಕಂಡು
ತಂದೆ ತಾಯಿಗಳ ಬುದಕುಸ್ಕೋ ಹೋಗು ಕಂದಾ ಎಂದುರು
ಹಸ ಕಟ್ಟಿಸಿಕಂಡು ಕರಬುಡಿಸಿಕಂಡು ಕಂದಾ
ಕಂಚಿನ ಅಂಡೆ ತಗದು
ಮಂಡೇಲಿ ಕೊಟಗಂಡು
ಕೈ ಎಣ್ಣೆ ಬಟ್ಟಳ ಬಲಗೈಲಿಡಕಂಡು
ಮರದ ತೇವಟಿಗೆ ಮೇಲೆ ಕುತಗಂಡು ಕೆಂಪಣ್ಣಾ
ಹಸಿನಲಿ ಹಾಲು ಕರಿಬೇಕಂತೇಳಿ
ಹಸಿನ ಎದೆಗೆ ಕೈ ಹಾಕಿದಾ
ಧರೆಗೆ ದೊಡ್ಡವರು ಕಣ್ಣಿಂದ ನೋಡಿದ್ರು
ಕೆಂಪಣ್ಣಾ
ಹಸಿನಲ್ಲಿ ಹಾಲು ಕರಿದಿಯಾ
ಕರಿ ಮಗನೆ
ಅದಕ್ಕೂ ಮಿತ್ತಾಗಿ ಬರುತೀನಿ
ಕರೀಲಾ ಅಂತೇಳಿ ಜಗತ್ತುಗುರು
ಕುಂದೂರು ಬೆಟ್ಟದ
ಕೊಡೆ ಕಲ್ಲನು ಮೇಲೆ ಕುಂತುಗಂಡು
ಮುತ್ತುನ ಜೋಳಿಗ್ಗೆ ಕೈ ಹಾಕಿ
ಕಪ್ಪು ದೂಳುತ ತಗುದು ಹಸಿಗೆ ಉರುಬುದ್ರು
ಎಳೆಯ ಕೆಂಪಾಚಾರಿಯ ಮಗನು
ಹಸಿನ ಎದೆ ಇಡಕಂಡು ಅಂಡೆಗೆ ಕರೆದಾ

ಕಂದಾ ಹಾಲು ಬರೋ ಎದೆ ಒಳಗೆ
ರಗುತ ಕರುದು ಬರುವುತಾದೆ || ಸಿದ್ಧಯ್ಯ||

ಅವನ ಹಸುನ ಎದೆ ಇಡಕಂಡು
ಗುಳು ಗುಳನೆ ಅಳುತಾನೆ || ಸಿದ್ಧಯ್ಯ||

ಹಸಿನ ಎದೆ ಇಡಕಂಡು ಕಂದಾ
ದುಕ್ಕಳಿಸಿ ದುಃಖ ಮಾಡಕಂಡು
ಒಕ್ಕುಒಕ್ಕಳ ಕಣ್ಣೀರ ಎದೆ ಮೇಲೆ
ದಾರಾವತಿಯಾಗಿ ಸುರಿಸ್ಕಂಡು ಕಂದಾ
ಈಗ ಏನು ಮಾಡಿ ನಮ ತಂದೆ ತಾಯಿಗಳ ಪ್ರಾಣ
ಉಳಿಸಿಕಳನೆ ಅಂತೇಳಿ ಮಗು
ಅಟ್ಟಿ ಅರಮನೆಗೆ ಬಂದು
ಕೂಳಿ ಕಂಬ್ಳನದ್ರೂ ಮಾಡಿ
ಆರುದುಡ್ಡು ಮೂರು ದುಡ್ಡನಾದ್ರು ಸಂಪಾದಿಸಿ
ಅರ್ಧ ಪಾವು ಆರಕನಾದ್ರು
ತಕಂಡು ಬಂದು
ಅಂಬಲಿನಾದ್ರು ಕಾಯ್ಸಿ
ನಮ ತಂದೆ ತಾಯಿಗಳ ಬಾಯಲ್ಲಿ ಬಿಟ್ಟು
ನಮ್ಮ ತಾಯಿ ತಂದೆ ಇಬ್ಬರ್ನಾರೂ ಬದುಕಿಸಬೇಕಂತೇಳಿ ಕಂದಾ
ಅಟ್ಟಿ ಅರಮನೆಗೆ ಬಂದು ಕೆಂಪಣ್ಣ

ದೊಡ್ಡ ಉಳಿಯ ತಗದು
ಚಿಕ್ಕು ಉಳಿಯ ತಗದು
ಸುತ್ತಿಗೆಯ ಇಡಕಂಡು
ಅಡುಗಲ್ಲ ಹೊತ್ತಗಂಡು
ಎಳು ವರ್ಷದ ಕಂದಾ
ಎಳೆಯವನು ಕೆಂಪಣ್ಣ
ಅವನು ಮಾರುವಳ್ಳಿ ಬೀದಿ ಒಳಗೆ
ಕೂಲಿ ಕಂಬುಳಾ ಸಾರುತಾನೆ|| ಸಿದ್ಧಯ್ಯ||

ನನ್ನ ಬಾಳುತಿದ್ದ ಮಗನು
ಬಾಳುಗೆಡಿಸಿ ನಿಲ್ಲಿಸಿದಿಯಪ್ಪ || ಸಿದ್ಧಯ್ಯ||

ನನ್ನ ಪುಣ್ಯವಂತರ ಮಗನ ತಂದು
ಇಂತ ಗತಿ ಮಾಡುಬವುದ || ಸಿದ್ಧಯ್ಯ||

ಅಯ್ಯಾ ಬೀದಿ ಬೀದಿಯ ಒಳಗೆ
ಕಂದಾ ಕೆಂಪಣ್ಣ
ಅಪ್ಪಾ ಕುರ್ಚಿ ಮಾಡುತೀನಿ
ಬೇಂಚು ಮಾಡುತೀನಿ
ಮಂಚ ಮಾಡುತೀನಿ
ಏನಾರುವೇ ಕೆಲಸ
ಮಾಡುತೀನಿ ಕನರಪ್ಪ
ಯಾವುದಾದ್ರು ಕೆಲಸವ
ಕೇಳ್ತಿನಿ ಕನ್ರಣ್ಣಾ
ಮಾಡುತಿನಿ ಕನಿರಪ್ಪ
ನನಗೆ ಕೆಲಸ ಏಳಿರಪ್ಪ
ಕೂಲಿ ಕೊಡಿರಯ್ಯ
ಹಾಗಂದು ಕಂದಾ
ಸಾರಿಕಂಡು ಬರುತಾನೆ
ಅಷ್ಟೊಂದು ಒಕ್ಕಲಲ್ಲಿ
ಯಾರು ಅವನ ಕರಿಯಲಿಲ್ಲಾ || ಸಿದ್ಧಯ್ಯ||

ಅಷ್ಟೊಂದು ಒಕ್ಕುಲಲ್ಲಿ
ಯಾರೂ ಕರೀಲಿಲ್ಲ ಕೆಂಪಣ್ಣ
ಕರುದು ಕೆಲಸ ಹೇಳಲಿಲ್ಲ
ಕೂಲಿ ಕೊಡ್ಲಿಲ್ಲ
ಈ ಮಾರುವಳ್ಳಿ ಗ್ರಾಮ
ಸಣ್ಣ ಗ್ರಾಮ ಚಿಕ್ಕ ಊರು
ಈ ಗ್ರಾಮದಲಿ ನಾನು ತಿರುಗಿದ್ರೆ
ಕೂಲಿ ಹುಟ್ಟದಿಲ್ಲಾ
ಜೀವುಣ ಆಗದಿಲ್ಲಾ
ಈ ಮಾರ್ವಳ್ಳಿ ಬುಟ್ಟು
ಮಳವಳ್ಳಿಗಾರು ಒಂಟೋದ್ರೆ
ಅದು ಕ್ವಾಟೆ ಪೇಟೇ ಆಗದೆ
ಅಲ್ಲಾದ್ರು ಹೋದ್ರೆ ಕೂಲಿ ಉಟ್ಟುಬಟ್ಟು
ಜೀವನ ಸಿಕ್ಕಿ ಬುಡ್ತಾದೆ ಎಂದು ಕೆಂಪಣ್ಣ

ಈಗ ಮಾರುವಳ್ಳಿ ಬುಡುವುತಾನೆ
ಮಳವಳ್ಳಿಗೆ ಬರುವುತಾನೆ || ಸಿದ್ಧಯ್ಯ||

ಮಾರುವಳ್ಳಿ ಗ್ರಾಮಾನೆ ಬಿಟ್ಟು ಬುಟ್ಟು
ಮಳವಳ್ಳಿ ಗ್ರಾಮಕೆ ಬರುತಿದ್ದ ಕೆಂಪಣ್ಣ
ಬರುವಂತ ಕೆಂಪಾಚಾರಿ ಮಗನ
ಜಗತ್ತು ಗುರು ಧರೆಗೆ ದೊಡ್ಡವರು
ಕಣ್ಣಿಂದ ನೋಡಿದುರು
ಕೆಂಪಣ್ಣಾ
ಈ ಮಾರುವಳ್ಳಿ ಗ್ರಾಮದಲಿ ಕೂಲಿ ಹುಟ್ಟಲಿಲ್ಲ
ಜೀವನ ಸಿಕ್ಕಲಿಲ್ಲ ಅಂತ ಏಳಿ
ಈ ಮಾರುವಳ್ಳಿ ಬಿಟ್ಟು ಮಳವಳ್ಳಿಗೆ ಹೋದಿಯಪ್ಪ
ಕೆಂಪಣ್ಣ ನಡಿ
ಅಲ್ಲಿಗೂ ಮಿತ್ತಾಗಿ ಬರುತೀನಿ ನಡಿ ಎನುತುಳಿ
ಧರೆಗೆ ದೊಡ್ಡವರು
ಕುಂಬಳ್ಳಿ ಶಾನುಭೋಗರ ಯಾಸ ತಾಳಿಕಂಡು ಗುರುವು
ಜಗಂಜ್ಯೋತಿಯವರು ಮಂಟೇದಲಿಂಗಪ್ಪ
ಅವರು ಹುಲಿಯ ಚರಮ ತೆಗದು
ಕಚ್ಚೆಯ ಹಾಕವರೆ
ಉಲ್ಲೇ ಚರ್ಮ ತಗದು
ಕೋಟನೆ ಮಾಡವರೇ
ಗುರುವೆ ಎಪ್ಪತ್ತು ಮಾರುದ್ದ ಜಡೆಯ
ಪೇಟಾ ಮಾಡವರೆಸ
ನಾಗು ಬೆತ್ತ ತಗದು
ಛತ್ರಿಯ ಮಾಡವರೇ
ಮರುಳಿನ ಪಾವಾಡ
ತಕ್ಕಂಡು ಗುರುವು
ಗಿರ್ಕಿಚಡಾವ
ಮಾಡ್ಕಂಡು ನನ್ನಪ್ಪ
ಅವರು ಕುಂಬಳ್ಳಿ ಶಾನುಭಾಗರ
ಯಾಸವನ್ನೆ ತಾಳಿ ಕಂಡುರು || ಸಿದ್ಧಯ್ಯ||

ಕುಂಬಳ್ಳಿ ಶಾನುಭಾಗರಾ
ಯಾಸ ತಾಳಿಕಂಡು ಪರಂಜ್ಯೋತಿ
ಪಾವನ ಮೂರುತಿ ಧರೆಗೆ ದೊಡ್ಡಯ್ಯ
ಮಳವಳ್ಳಿ ಪಟೇಲ್ರು ಮನೆಗೆ ಬಂದು
ಏನ್ರಪ್ಪ ಮಳವಳ್ಳಿ ಪಟೇಲರೇ
ನಾವು ಕುಂಬಳ್ಳಿ ಮಠದ ಶಾನುಭಾಗರು ಕನ್ರಯ್ಯ
ಗುರುದೇವಾ
ನೀವು ಕುಂಬಳ್ಳಿ ಶಾನುಭಾಗರಾದ್ರೆ
ನಮ್ಮ ಊರಿಗೆ ಬಂದು ಬುಟ್ರ
ಗ್ರಾಮಕೆ ಬಂದುಬುಟ್ರೆಯಲ್ಲಾ ಗುರುವು
ಬನ್ನಿ ನನ್ನಪ್ಪ ಅಂತೇಳಿ
ಕರದು ಪಟ್ಟೇ ಮಂಚದ ಮೇಲೆ ಕುಂಡ್ರಿಸಿಗಂಡು
ಮಳವಳ್ಳಿ ಪಟೇಲ್ರು ಏನು ಹೇಳ್ತಾರೆ ಅಂದ್ರೆ
ಏನು ಗುರುತಿಟ್ಟು ಬಂದ್ರಿಯಪ್ಪ
ಯಾತಕಾಗಿ ಬಂದುಬುಟ್ರಿ ಸ್ವಾಮಿ ಎಂದುರು
ಕೇಳಪ್ಪ ಮಳವಳ್ಳಿ ಪಟೇಲ್ರೆ
ನಿಮ್ಮ ಊರು ಮುಂಬಾಗದಲಿರ್ತುಕಂತಾ
ಮಾರುವಳ್ಳಿ ಗ್ರಾಮ
ಬಸವಾಚಾರಿ ಮುದ್ದಮ್ಮನ ಮನೆಗೆ
ಕಾಲ್ರ ಪ್ಲೇಗು ತಗುಳಿಬುಡ್ತು ಕಣ್ರಯ್ಯ
ಅವರಟ್ಟಿ ಒಳಗೆ
ಕೊಕ್ಕೂ ಅಂತ ಕೂಗುತೀನಿ ಅಂದ್ರೆ
ಕೋಳಿ ಇಲ್ಲಾ
ಮ್ಯಾ ಅಂತ ಅರುಚಗತ್ತಿನಿ ಅಂದ್ರೆ
ದನಕುರಿ ಆಡು ಕುರಿ ಎತ್ತು ಎಮ್ಮೆ ಒಂದೂ ಇಲ್ಲ
ಆರುಜನ ಗಂಡು ಮಕ್ಕಳು
ಆರುಜನ ಸೊಸೆಯರು
ಅವರ ಮುತ್ತು ರವರತುನ
ಬೆಳ್ಳಿ ಬಂಗಾರವೆಲ್ಲ ಮಣ್ಣು ಪಾಲಾಗಿ
ಒಂಟೋಯ್ತು ಕಣ್ರಪ್ಪ
ಅವರ ಹೊಟ್ಟೇಲಿ ಹುಟ್ಟುವುದಕ್ಕೆ
ಕಿರಿ ಕೆಂಪಣ್ಣ ಅನ್ನದಂತಾ
ಕೆಂಪಾಚಾರಿ ಮಗ ಒಬ್ಬನೇ ಉಳಿದಿರದು ಕನಯ್ಯಾ
ಆ ಮಗನು ದಿಕ್ಕೆಟ್ಟು ನಿಮ್ಮ ಊರಿಗೆ ಬರುತವನೆ ಕಣ್ರೊ
ಕಾಲ್ರ ಅಂದ್ರೆ ಕೆಟ್ಟ ಕಾಯಿಲಾ ಕಂಡ್ರಪ್ಪ
ಸತ್ತ ಕುದ್ರೆ ನೊಣ ಇದ್ದು ಕುದ್ರೆಗೆ ಮುತ್ತಿಗಂಡಂಗೆ
ಆ ಕೆಂಪಾಚಾರಿ ಮಗನ ಮಾತ್ರ
ಊರಿಗೆ ಯಾರು ಸೇರಿಸಬ್ಯಾಡಿ
ಯಾವ ದಾರಿ ಯಾವ ಮಾರ್ಗದಲಿ ಮಂದ್ರು ಕೂಡಾ

ಅವನ ಕತ್ತೂನ ಮೇಲೆ ಗುದ್ದೂರಪ್ಪ
ಉರಿಂದಾಚೆಗೆ ತುಳ್ಬುಡ್ರಯ್ಯಾ || ಸಿದ್ಧಯ್ಯ||

ಊರಿಂದ ಹೊರಗೆ ಅವನ ತಳ್ಳಿ ಬುಡ್ರಪ್ಪ
ಅವರಟ್ಟಿ ಹಾಳಾಗಿರಂಗೆ
ನಾಳೆ ದಿವಸ ನಿಮ್ಮ ಊರು ಹಾಳಾಗಿ ಬುಡ್ತದೆ ಕಣ್ರೋ ಅಂತೇಳಿ
ಚಾಡಿ ಮಾತೇಳಿ ಬುಟ್ಟು ಜಗತ್ತು ಗುರು
ಮಳವಳ್ಳಿ ಗ್ರಾಮ ಬಿಟ್ಟು ಬುಟ್ಟ
ಮಾರ್ವಳ್ಳಿ ಗ್ರಾಮಕೆ ಕಾಣ್ದಂಗೆ ಬರುತಿದ್ರಂತೆ
ಬರುವಂತ ಕಾಲದಲಿ ಬಾಚಿ ಬಸವಯ್ಯ ಮುದ್ದಮ್ಮ
ಪಟ್ಟೆ ಮಂಚದ ಮೇಲೆ
ಕೊರಗುತಾ ಕೊರಗುತಾ ಮನಿಕಂಡು
ಆಗಲೀಗಾ ಮನದಲ್ಲಿ ಮನಸಲ್ಲಿ
ಯಾವ ಯೋಚಣೆ ಮಾಡ್ತಾರೆ ಎಂದುರೇ
ನಮ್ಮ ಮನೆಗೆ ಯಾವ ಕಷ್ಠ ಕಾಯಿಲೆ ಬಂದು ಬುಡ್ತು
ನಮ್ಮ ಬಾಳಾಟ ಬದುಕಾಟ ನೋಡಲಾರದೇ
ನಮ್ಮ ಮನೆಗೆ ಯಾರೋ ಮಾಟ್ಲಾ ಮಾಡ್ಸಿಬುಟ್ರೋ ಗೊತ್ತಿಲ್ಲಾ
ಯಾವ ಮಾರಿ ನಮ್ಮನೆಗೆ
ಒಕ್ಕು ಬುಟ್ಲೊ ಕಾಣೆ
ನಮ್ಮ ಬಾಳವರಾ ಬಾಳಾಟ
ಇಂತಾ ಬಾಳಾಟ ಆಗಿಬುಡ್ತಲ್ಲ ಅಂತೇಳಿ ಮುದ್ದಮ್ಮ
ಮನಿದೇವತಿ ಪಾದ ನೆನಿತಾ
ಕಾಳಕ ದೇವಿಗೆ
ನಾಲಕ್ಕಾಣೆ ಮೊಂಡುಗೈಲಿ ತಕಂಡು ಅದಕೆ ಕಟ್ಕತಿದ್ಲಂತೆ

ಅವರ ಮನೆದೇವತಿ ಕಾಳಮ್ಮ ಬಂದು
ಕಣ್ಣ ನೇತ್ರ ಕಿತ್ತೆಗಂಡ್ಲು || ಸಿದ್ಧಯ್ಯ||

ಕಣ್ಣನ ನೇತ್ರ ಕಿತ್ತಗಂಡ ಕಾಲದಲ್ಲಿ
ಇತ್ತಿಂದ ಜಗತ್ತು ಗುರು
ಧರೆಗೆ ದೊಡ್ಡೋರು ಬರುತವರೇ
ತಾಯಿ ಮುದ್ದಮ್ಮ ಏನು ಯೋಚಣೆ ಮಾಡ್ತಾಳೆ ಎಂದುರೇ
ನಮ್ಮ ಮನೆಗೆ ಯಾವ ಕಷ್ಟ ಕಾಯಿಲೆಯೂ ಬಂದಿಲ್ಲಾ
ಇವತ್ತಿಗೆ ಎಂಟು ದಿವಸದಲ್ಲಿ
ತುಂಬಿದ ಸ್ವಾಮಾರಾ
ಯಾರೊ ಮುನಿಗಳು ಖಂಡಾಯ ಒತ್ತಗಂಡು
ನಮ್ಮ ಮನೆಗೆ ಬಂದು
ನಿನ್ಮಗನ ಕೆಂಪಣ್ಣನ
ದತ್ತವಾಗಿ ದಾನಕ್ಕೆ ಭಿಕ್ಷಕ್ಕೆ ಮಗನನ್ನ ಕೊಡಮ್ಮ ಅಂತ ಕೇಳಿದ್ರುದ
ನನ್ನ ಮಗನಕೇಳಿದ್ದಿಯಾ ಪರದೇಶಿ
ನನ್ನ ಮಗನ ಕೊಡದಿಲ್ಲ ಒಂಟೋಗು
ಅಂತಾ ಬೋದ್ಬುಟ್ಟಿ
ಆ ಮಾನುಭಾವ ಕೊಟ್ಟಿರೋ ಕಷ್ಟ ಹೊರತು
ಯಾರು ನನಗೆ ಕಷ್ಟ ಕೊಟ್ಟಿಲ್ಲಾ
ಇವತ್ತಿಗೆ ಎಂಟುದಿವಸದಲಿ
ನನ್ನ ಮಗನ ಕೇಳಿದ ಸ್ವಾಮಿ
ಇವತ್ತು ಕೊಟ್ಟಿರೊ ಕಾಲದಲಿ ಬಂದು
ನನ್ನ ಮಗನ ಕೇಳ್ಬುಟ್ರೆ
ನನ್ನ ಮಗನ ಕೊಟ್ಟು ಬುಟ್ಟು
ನನ್ನ ಮನಕಾಲ ಉಳಿಸುತಿನಿ|| ಸಿದ್ಧಯ್ಯ||

ನನ್ನ ಮಗನನ್ನೆ ಕೊಟ್ಟು ಬುಟ್ಟು
ನನ್ನ ಮನಕಾಲದ ದೇವಾ
ಉಳುಸುತಿನಿ ಎಂತಾ
ತಾಯಿ ಮುದ್ದಮ್ಮ
ನನ್ನ ಧರೆಗೆ ದೊಡ್ಡವರ ಪಾದ
ಹೊತ್ತು ಹೊತ್ತಿಗೆ ನೆನೆಯುತಾಳೆ|| ಸಿದ್ಧಯ್ಯ||

ಧರೆಗೆ ದೊಡ್ಡವರ ಪಾದವ
ಹೊತ್ತು ಹೊತ್ತಿಗೆ ನೆನಿತಿದ್ರು ಮುದ್ದಮ್ಮ
ನೆನಿವಂತ ಮುದ್ದಮ್ಮನ ಕಣ್ಣಿಂದ ನೋಡಿಕಂದ್ರು
ಜಗತ್ತುಗುರು ಧರೆಗೆ ದೊಡ್ಡಯ್ಯ
ನೋಡಿದೆಯಾ ಬಾಚಿ ಬಸವಾಚಾರಿ ಮಡದಿ ಮುದ್ದಮ್ಮಸ
ಈಗಲೀಗ ಬಡಸ್ತಾನ ಬಂದ ಕಾಲದಲಿ
ದೇವರ ಗ್ಯಾನ ಮಾಡ್ತಾರೆ
ಸಿರಸ್ತಾನ ಬಂದ ಕಾಲದಲಿ ದೇವರ್ನ ಮರಿತಾರೆ
ಈಗ ಕೆಟ್ಟೋಗಿರ ಕಾಲದಲ್ಲಿ
ಈಗ ನನ್ನ ಪಾದ ಬೇಡುತವಳೇ
ಈಗ ನನ್ನ ಗ್ಯಾನ ಮಾಡುತವಳೆ
ಕೊಟ್ಟು ನೋಡುತೀನಿ ಕಿತ್ತನೋಡುತೀನಿ
ಅಂತೇಳಿ ಜಗತ್ತು ಗುರು ಧರೆಗೆ ದೊಡ್ಡಯ್ಯ
ಬಸವಾಚಾರಿ ಮುದ್ದಮ್ಮನ ಮನೆಗೆ ಬಂದ್ರು
ದುಃಕ್ಕಳಿಸಿ ದುಃಖ ಪಡ್ತಾ ಮನಗಿರುವಂತ ಮುದ್ದಮ್ಮನಿಗೆ
ಕಪ್ಪು ಧೂಳೂತ ತಗುದು ಉಫ್ ಅಂತ ಉರುಬಿದುರು
ಬಸವಚಾರಿ ಮಡದಿ ಮುದ್ದಮ್ಮನಿಗೆ ದೇವಾ
ಕೈಕಾಲು ಬಂದು ಬಡುತು
ಕಣ್ಣು ನೇತ್ರ ಬಂದು ಬಡುತು
ಮಾತನಾಡದಂತ ನಾಲಗೆ ಕೂಡ ಬಂತು

ನನ್ನ ಧರೆಗೆ ದೊಡ್ಡೋರ ಮುಖವ
ಕಣ್ಣು ಬುಟ್ಟು ನೋಡುತಾಳೆ || ಸಿದ್ಧಯ್ಯ||

ಧರೆಗೆ ದೊಡ್ಡೋರ ಮುಖವ ಕಣ್ಣು ಬುಟ್ಟುನೋಡಿ
ಗುರುವೇ ತಾಯಿ ಮುದ್ದಮ್ಮ
ಕಣ್ಣನೇ ಬುಟ್ಟು ಧರೆಗೆ ದೊಡ್ಡವರ
ಮುಖವನೇ ನೋಡಿಕಂಡು

ಇಂಥ ಮಂಟೇದಲಿಂಗಯ್ಯನಿಗೆ
ಕೈ ಎತ್ತಿ ಮುಗುದಳಾಗ || ಸಿದ್ಧಯ್ಯ||

ಮಂಟೇದಲಿಂಗಪ್ಪನಾ
ಮೊಕ ಕಣ್ಣಾರೆ ನೋಡಕಂಡು ತಾಯಿ ಮುದ್ದಮ್ಮ
ಆಗಲೀಗ ಕೈ ಎತ್ತಿ ಮುಗುದು
ಗುರುದೇವಾ
ಇವತ್ತಿಗೆ ಎಂಟು ದಿವಸದಲಿ ಬಂದು
ನನ ಮಗನ ಕೇಳಿದ ಸ್ವಾಮಿಯೇ ನೀವು ಗುರುವು
ನನ್ನ ಕೆಂಪಾಚಾರಿ ಮಗನ ಕೇಳದ ಸ್ವಾಮಿ ನೀವು ನನ್ನಪ್ಪ
ಗುರುದೇವಾ
ನೀವು ಕೊಟ್ಟ ಕಷ್ಟವೇ ಒರತು
ಮತ್ಯಾರು ನಮಗೆ ಕಷ್ಟ ಕೊಟ್ಟಿಲ್ಲ ಗುರುವು

ನನಗೆ ಹಿಂದೆ ಕೊಟ್ಟಿದ್ದ ಭಾಗ್ಯವ
ಅಪ್ಪ ಕೊಟ್ಟು ಬುಡು ಮಾಯಿಕಾರ || ಸಿದ್ಧಯ್ಯ||

ಹಿಂದೆ ಕೊಟ್ಟಿದ್ದಂತ ಭಾಗ್ಯದ ಸ್ವಾಮಿ
ಕೊಟ್ಟುಬುಡಪ್ಪ ಜಗಂಜ್ಯೋತಿ ಧರೆಗೆ ದೊಡ್ಡವರೆ ಮಂಟೇದಲಿಂಗಪ್ಪ

ನಮಗೆ ಹಿಂದೆ ಕೊಟ್ಟಿದ್ದ ಭಾಗ್ಯ
ನಮಗಾಗಿ ಕೊಟ್ಟುಬುಟ್ರೆ

ನನ್ನ ಕೆಂಪಚಾರಿ ಮಗನಾ
ನಿಮಗೆ ದತ್ತು ಮಗನ ಮಾಡುತೀನಿ || ಸಿದ್ಧಯ್ಯ||

ನಿಮ್ಮ ಬೊಪ್ಪಗೌಡನ ಮಠಕೆ
ನನ್ನ ಮಗನ
ದಾನ ಕೊಡುವುತೀನಿ || ಸಿದ್ಧಯ್ಯ||