ನನ್ಗಾದ್ರೆ ಮಗನ ಕೊಡೋದಿಲ್ಲ
ನಾಳೆ ಯಮ ಬಂದು ಮಗನ ಕೇಳಿದ್ರೆ ತಾಯಿ
ಯಮನ್ಗಾರು ಮಗನ ಕೊಟ್ಟುಟ್ಟಿಯಾ ಮುದ್ದಮ್ಮ ಎಂದರು
ಧರೆಗೆ ದೊಡ್ಡವನ ಮಾತಕೇಳಿ ಮುದ್ದಮ್ಮ
ಏನಪ್ಪ ಜಂಗುಮದೇವ
ನನಗಾದರೆ ಮಗನ ಕೊಡೋದಿಲ್ಲ
ನಾಳೆ ದಿವಸಾ ಯಮಾ ಬಂದು
ಮಗನ ಕೇಳದ್ರೇ ಯಮನಿಗೇ
ಮಗನ ಕೊಟ್ಟುಬಿಟ್ಟೆಯಾ ಎಂದು ಕೇಳ್ತೀರೀ ಗುರುವು
ಸ್ವಾಮೀ ಜಂಗುಮರೇ ಕೇಳಿ
ನನ್ನ ಪತಿವುಳ್ಳಾದ ಪುರುಷರಾಗಲಿ
ನನ್ನಂತಹ ಮಕ್ಕಳೆತ್ತ ಸ್ತ್ರೀಯರಾಗಲೀ
ಭೂಮಿ ಭೂಲೋಕ ನಡುವೆ
ನರಲೋಕದಲ್ಲಿ ದೇವ
ಹೆತ್ತಂತಹ ಮಕ್ಕಳ
ಯಮನ್ಗೆ ಮಾತ್ರ ಕೊಟ್ಟೀವೆ ಹೊರತು
ಮಿಕ್ಕು ವಕ್ಕುನಾದವರ್ಗೆ
ಯಾರ್ಗು ಕೂಡ ನಾವು
ಮಕ್ಕಳು ಕೊಡೀದಿಲ್ಲ
ನನ್ನ ಮಗನು ಕೆಂಪಚಾರಿಯ

ಯಮನಿಗೆ ಕೊಟ್ಟುರುವೆ
ನಿನಗೆ ನಾನು ಕೊಡುವುದಿಲ್ಲ || ಸಿದ್ಧಯ್ಯ||

ಅಯ್ಯಾ ಯಮನ್ಗೆ ಮಗನ
ನಾ ಕೊಟ್ಬುಟ್ಟುರುವೆ ದೇವ
ಇಂತ ಭಿಕ್ಷ ಮಾಡವನ್ಗೆ ನಾನು
ಮಗನ ದಾನ ಕೊಡುವುದಿಲ್ಲ || ಸಿದ್ಧಯ್ಯ||

ಇಂತ ಭಿಕ್ಷ ಮಾಡುವರ್ಗೇ
ನಾ ಮಗನ ಕೊಡೋದಿಲ್ಲ
ಈ ತಿರ್ಕಂಡು ತಿನ್ನೋನ್ಗೇ
ನನ್ ಕಂದ್ನ ಕೊಡೋದಿಲ್ಲ
ನನ್ನ ಗಂಡು ಮಗನ ಕೇಳು ಬ್ಯಾಡ
ಕಡದೋಗು ಎಂದಾಳಲ್ಲ || ಸಿದ್ಧಯ್ಯ||

ನನ್ನ ಮಗನ ಮಾತ್ರ
ಕಂಡಿತವಾಗು ಕೊಡೋದಿಲ್ಲ ಜಂಗುಮಾ
ನನ್ನ ಮಗ್ನ ಕೆಂಪಾಚಾರಿ ಕೇಳಬ್ಯಾಡ
ನನ್ನ ಮನೆ ಬಿಟ್ಟು ವಂಟೋಗುಬುಡು
ಜಂಗುಮಾ ಎಂದರು
ಮುದ್ದಮ್ಮ
ಯಮನ್ಗೇ ಮಗನ ಕೊಡ್ತಿನೀ
ಭಿಕ್ಷ ಮಾಡವನ್ಗೆ ಮಗ್ನ ಕೊಡೋದಿಲ್ಲ
ಅಂತ ಕೇಳ್ದಿಯವ್ವ
ಯಮನಿಗೇ ಮಗನ ಕೊಟ್ಟುಟ್ರೂವೇ
ತಿರ್ಕಂಡು ತಿನ್ನೂನ್ನಗೇ ಮಗನ ಕೊಡೋದಿಲ್ಲ
ಅಂದು ಕೇಳ್ದಿಯಾ ಕಂದಾ
ನಾನಾಗಿ ಬಂದು
ಅತೀ ಸಂತೋಷದಲ್ಲಿ ಮಗ್ನ
ಕೇಳದ್ರೇ ಮಗ್ನ ಕೊಡೋದಿಲ್ಲ ಅಂದು
ಹೇಳಿದಿಯಲ್ಲ ಕಂದಾ

ನೀನು ಕೋಡೋದಿಲ್ಲ ಮಗ್ನ ಅಂದ್ರೆ
ಮಗನ ಬಿಡೋದಿಲ್ಲ ಎಂದರಲ್ಲ || ಸಿದ್ಧಯ್ಯ||

ಅಮ್ಮ ಕೊಡೋದಿಲ್ಲ ಮಗನ ಎಂದರೇ
ನನ್ನ ಕಂದಾ
ಬಿಡುವಂತ ಗುರುಗೊಳೂ
ನಾವಲ್ಲ ನನ್ ಕಂದಾ ಕೇಳವ್ವ ಮುದ್ದಮ್ಮ
ನನ್ನ ಕಪ್ಪು ದೂಳ್ತದ ಮೈಮೆ
ಕಂದಾ ನೋಡಬೇಕವ್ವ ಎಂದಾರಲ್ಲ || ಸಿದ್ಧಯ್ಯ||

ನನ್ನ ಕಪ್ಪು ದೂಳ್ತದ ಮೈಮೆ ಕಂದಾ
ನೋಡಿಯವ್ವ ಕಂದಾ
ನನ್ನ ಕಪ್ಪು ದೂಳ್ತದ ಮೈಮೆ
ನೋಡಬೇಕೆ ನನ್ನ ಕಂದಾ
ನನ್ನ ಕಪ್ಪು ದೂಳ್ತದ ಮೈಮೆ
ಇನ್ನು ನಿನಗೂ ತಿಳೀಲಿಲ್ವ || ಸಿದ್ಧಯ್ಯ||

ಈ ಮಂಟೇದ ಲಿಂಗಯ್ಯನ ಮರ್ಮ
ಇನ್ನು ಗೊತ್ತಾಗಲಿಲ್ವ || ಸಿದ್ಧಯ್ಯ||

ಮಂಟೇದ ಲಿಂಗಯ್ಯನ
ಮರ್ಮವು ಕಂದಾ
ನಿನಗೆ ಇನ್ನು ಗೊತ್ತಾಗಲಲಿಲ್ಲ ಮುದ್ದಮ್ಮ
ಈ ಜಗತ್ತು ಗುರುಗಳು ಮಹಿಮೆ
ನಿನಗೆ ಇನ್ನೂ ತಿಳಿಲಿಲ್ಲ
ಯಮನಿಗೆ ಮಗನಾ
ಕೊಟ್ಬುಟ್ರು ಕೂಡ
ನೀ ನನಗೆ ಮಗ್ನ ಕೊಡೋದಿಲ್ಲ ಅಂತ
ಹೇಳುಬುಟ್ಟೀಯಲ್ಲೋ ತಾಯಿ ಮುದ್ದಮ್ಮ
ಮುಟ್ಟಮಂಗಳ ವಾರ
ಸುಟ್ಟ ಶುಕ್ರವಾರ ಕಂದಾ
ಈಗಲೀಗ ಹಾಲು ಅನ್ನ
ಊಟಮಾಡ್ಕಂಡು ಪಾಲು ಪರ್ಸಾದ
ಊಟ ಮಾಡ್ಕಂಡೂ
ನಿಮ್ಮ ಮಗನಾದ ಕೆಂಪಾಚಾರಿ
ನಿಮ್ಮ ಸತಿ ಪತಿ ಮಧ್ಯದಲ್ಲಿ ಕೆಂಪಣ್ಣ
ನಿಮ್ಮ ಮಧ್ಯದಲ್ಲಿ ಮಗು ನಿದ್ರೆ ಮಾಡ್ತಾ ಮಲಗಿರುವಾಗ

ನಾನು ಯಮನಾಗಿ ಬರುವುತೀನಿ
ಬಂದು ಕರ್ಕೊಂಡೋಗುತೀನಿ || ಸಿದ್ಧಯ್ಯ||

ಅಮ್ಮಾ ಯಮನಾಗಿ ಕಂದಾ
ಬರ್ತೀನಿ ನನ್ನ ಕಂದಾ
ಬಂದು ನನ್ನ ಮಗಳೆ
ಮಗನ ಕರ್ಕೊಂಡು
ಹೊಯ್ತೀನಿ ನನ್ನ ಕಂದಾ
ನನ್ನ ಕಪ್ಪುಧೂಳ್ತದ ಮೈಮೆ ಕಂದ
ನಾಳೆ ದಿವ್ಸ ನೋಡು ಮಗಳೇ || ಸಿದ್ಧಯ್ಯ||

ಈ ಧರೆಗೆ ದೊಡ್ಡಯ್ಯರ ಮರ್ಮ
ಆಗ ನಿನಗೆ ತಿಳಿಯುತಾದೆ || ಸಿದ್ಧಯ್ಯ||

ನನ್ನ ಕಪ್ಪು ಧಳ್ತದ ಮೈಮೆ ಕಂದಾ
ನಾಳೆ ದಿವ್ಸ ನೋಡು ಮುದ್ದಮ್ಮ
ಈ ಧರೆಗೆ ದೊಡ್ಡವರ ಮೈಮೆ
ಮಂಟೇದ ಲಿಂಗಪ್ಪನ ಮರ್ಮ
ಈ ಕಂಡಾಯ್ದವರ ಸಾಸ ಏನು ಎಂತು ಎನ್ನುವದು
ನಿನಗೆ ಗೊತ್ತಾಯ್ತದೇ ಕಂದ
ನಿನಗೆ ತಿಳೀತದೆ ಮುದ್ದಮ್ಮ
ಮಗನ ಕೊಡೋದಿಲ್ಲ ಅಂದರೆ
ಕಂಡಿತವಾಗೂ ಮಗನ ಬಿಡುವಂತ ಗುರುಗಳಲ್ಲ

ನಾಳೆ ಯಮನಾಗಿ ಬಂದು ನಾನು
ಮಗನ ಕರ್ಕೊಂಡೋಗುತೀನಿ || ಸಿದ್ಧಯ್ಯ||

ನನ್ನ ಧರೆಗೆ ದೊಡ್ಡವರ ಮಾತಕೇಳಿ
ಗುಳೂಗುಳನೆ ಅಳುವುತಾಳೆ || ಸಿದ್ಧಯ್ಯ||

ಅವಳು ಕಣ್ಣೀರ ಕೆಡುವುತಾಳೆ
ಬಾಳ ಸ್ವಾಕ ಮಾಡುತಾಳೆ || ಸಿದ್ಧಯ್ಯ||

ಕಣ್ಣೀರು ಸುರೀಸ್ಕಂಡು
ದುಃಖ ಪಟ್ಕಂಡೂ
ಧರೆಗೆ ದೊಡ್ಡೋರು ಮೊಕ ಕಣ್ಣಿಂದ
ನೋಡ್ಕಂಡರು ಮುದ್ದಮ್ಮ
ಅಯ್ಯಾ ಗುರುವೇ ಗುರುದೇವ
ಹೆತ್ತ ಮಗನ ಕೊಡೊದಕ್ಕೆ ಹೊಟ್ಟೆ ಉರಿತದೆ
ಮಗನ ಕೊಡೊದಿಲ್ಲ ಅಂತ ನಾ ಹೇಳ್ದರೆ
ನಾಳೆ ದಿವಸ ಯಮನಾಗಿ ಬಂದೂ
ಮಗನ ಕರ್ಕಂಡೂ
ಒಂಟೊಯ್ತಿನಿ ಎಂದು ಕೇಳ್ತಿರಿಯಲ್ಲ ಗುರುವು
ಜಂಗುಮ ದೇವ
ನಾನು ಹಟ್ಟಿ ಅರಮನೆಲಿರ್ತಕ್ಕಂತವಳು
ಒಂದು ಕಾಸಿನ ಹೆಣ್ಣೆಂಗ್ಸು
ನನ್ನ ಬಳಗೆ ಬಂದು ಸ್ವಾಮಿ
ಮಗನ ಕೊಟ್ಟುಬುಡು ಮುದ್ದಮ್ಮ
ಅಂದು ಕೇಳ್ತೀರೀ ಗುರುದೇವ
ಅಪ್ಪ ಮಗ ಕೊಡದ್ಕೆ ದೇವ
ನನ್ಗಿಷ್ಟವಿಲ್ಲ ಗುರುದೇವ || ಸಿದ್ಧಯ್ಯ||

ಮಗನ ಕೊಡೋದ್ಕೆ
ನನ್ನಾ ಇಷ್ಟ ನನ್ನ ಕುಷೀ
ನನ್ನ ರಾಜಿಯಿಲ್ಲ ನನ್ನಪ್ಪಾ ಎಂದರೂ ಮುದ್ದಮ್ಮ
ನನ್ನ ಗಂಡ ಬಸವಯ್ಯನವರ
ಕೇಳು ಬೇಕು ಎಂದಾಳಂತೆ || ಸಿದ್ಧಯ್ಯ||

ನನ್ನ ಗಂಡ ಬಸವಾಚಾರಿಯವರ
ಕೇಳಬೇಕು ಎಂದಾಳಲ್ಲ || ಸಿದ್ಧಯ್ಯ||

ಮರ್ತಿದ್ದಿ ನನ್ನ ಕಂದಾ
ಮರ್ತೋಗಿದ್ದಿ ಮುದ್ದಮ್ಮ
ಸತಿ ಪತಿ ಆದ ಮೇಲೆ ತಾಯಿ
ಸತಿ ಮಾತ ಪತಿ ಮೀರೋದಿಲ್ಲ
ಪತಿ ಮಾತ ಸತಿ ಮೀರೋದಿಲ್ಲ ಕಂದಾ

ನಾನೇ ಮರ್ತೋಗ್ಬುಟ್ಟಿದ್ದೀ ಕಂದಾ
ನಿಮ್ಮ ಪತಿ ದೇವ್ರಾದ
ಬಸವಾಚಾರಿ ಎಲ್ಲೋಗಿದ್ರವ್ವ
ಆವುರ್ನೇ ಕೇಳುಬುಟ್ಟು ಮಗನ
ಕೊಡವ್ವ ತಾಯಿ ಮುದ್ದಮ್ಮ ಎಂದರು
ಸ್ವಾಮಿ ಜಂಗುಮರೆ
ನನ್ನ ಪತಿ ದೇವರು
ಅಟ್ಟಿ ಅರಮನೇಲಿಲ್ಲ ಸ್ವಾಮಿ
ಮಾರುವಳ್ಳಿ ಗುರುವು
ಪಟ್ಟಣದಲ್ಲಿ ನನ್ನ ಪತಿಯಲ್ಲಿ ಗುರುದೇವ
ಊರು ಮುಂಭಾಗದಲ್ಲಿ
ಅರಳಿ ಕಟ್ಟೆ ಜಗಲಿ
ಆ ಜಗಲಿ ಮುಂಭಾಗ್ದಲ್ಲಿ
ಎಳುನೂರು ಜನ ಜೀತದಾಳು ಕಟ್ಟಕ್ಕಂಡು
ನನ್ನ ಪತಿದೇವರು
ಬಾರಿ ಬಾರಿ ಉದ್ಯೋಗ ಮಾಡಿಸ್ತಾವರೆ ಗುರುವು
ನನ್ನ ಪತಿದೇವರು
ಬಸವಾಚಾರಿ ಅಂದ್ರೆ ಮೂವತ್ತಹಳ್ಳಿ
ಗ್ರಾಮಕ್ಕೂ ದೊಡ್ಡ ಯಜಮಾನ್ರು
ಇವತ್ತು ನ್ಯಾಯ ಮಾಡ್ತವರೆ
ಏಳುನೂರು ಜನ ಅಳುಗಳ್ಗೆಲ್ಲ
ಸಂಬಳ ಕೊಡ್ತಾವರೆ ಸ್ವಾಮಿ
ಅವರು ಬಳಿಗೋಗುಬಿಟ್ಟು ಕೇಳ್ತಿನಿ ಗುರುವು
ಮಗನ ಕೊಟ್ಟು ಕಳುಗುಬುಡೋಗು ಮುದ್ದಮ್ಮ
ಅಂತೇನಾದ್ರು ಹೇಳುಬುಟ್ರೇ
ಮಗನ ಕೊಟ್ಟುಬುಡ್ತಿನೀ ಕರ್ಕೋಂಡೊಂಟೋಗಿ
ಅವರೇನಾದ್ರು ನನ್ನ ಮಗನು
ಕೊಡಬ್ಯಾಡ ಅಂತ ಹೇಳುಬುಟ್ಟರೇ

ಅಪ್ಪ ನಾನು ಪಡೆದ ಮಗನ
ನಾನು ಮಾತ್ರ ಕೊಡುವದಿಲ್ಲ || ಸಿದ್ಧಯ್ಯ||

ಕಂಡುತ್ವಾಗು ಗುರುದೇವ
ಅವರು ಕೊಡು ಅಂದ್ರೆ ಮಗನ ಕೊಡ್ತಿನೀ
ಕೊಡಬ್ಯಾಡ ಅಂದ್ರೆ ಮಗನ ಮಾತ್ರ
ಕೊಡದಿಲ್ಲ ಎಂದರು
ಸಭಾಷ್ ಮುದ್ದಮ್ಮ
ಮುದ್ದಮ್ಮ
ಬಸವಾಚಾರಿಯೋರ ಹೋಗಿ ಕೇಳೋಗು ಕಂದಾ
ಏನಾರು ಮಗನ ಕೊಟ್ಟುಬುಡು ಅಂದ್ರೆ
ಕೊಟ್ಟುಡು ಕರ್ಕಂಡೋಯ್ತಿನಿ
ಅವರೇನಾರು ಮಗನ ಕೊಡಬ್ಯಾಡ ಅಂದ್ರೆ
ಖಂಡಿತ್ವಾಗೂ ಕೊಡಬ್ಯಾಡ ಮಗಳೇ

ನಾನು ಬಂದವನು ಬಂದಂಗೆ
ನಾ ಒಂಟೋಯ್ತಿನಿ ಅಂದರಲ್ಲ || ಸಿದ್ಧಯ್ಯ||

ಗುರುವೆ ಬಂದವನು ನಾನು
ಬಂದಂಗೆ ನನ್ನ ಕಂದಾ
ಹೋಯ್ತೀನಿ ನನ್ನ ಕಂದಾ
ಕೇಳು ನನ್ನ ಮಗಳೆ
ನಿನ್ನ ಬಸವಾಚಾರಿಯವರ
ಕೇಳ್ಕೊಂಡು ಬಾರೊ ಕಂದಾ || ಸಿದ್ಧಯ್ಯ||

ಆಗಲಿ ಗುರುದೇವಾ
ನನ್ ಪತಿದೇವರ ಕೇಳ್ಕಂಡು ಬರ್ತಿನೀ ಅಂತೇಳಿ
ಮುದ್ದಮ್ಮ
ತಂದಿರ್ತಕ್ಕಂತ ದಾನ ಧರ್ಮ
ಬೆತ್ತದಾ ಕಟ್ಟಿನ ಮೊರಾ
ಹಿಂದಕ್ಕೆ ತಕ್ಕಂಡು
ಹಟ್ಟಿ ಅರಮನೆಗೆ ಬಂದು ಮುದ್ದಮ್ಮ
ನಡುಮನೆಯೊಳಗೆ
ದಾನಧರ್ಮ ಬೆತ್ತದ ಕಟ್ಟಿನ ಮೊರ
ನಡುಮನಯೊಳಗೆ ಮಡುಗುಬುಟ್ಟು
ಎಡಗೈಲಿ ಸೀರೆ ಎತ್ತಿಡ್ಕಂಡು

ಅವಳು ಗಂಡನಿದ್ದ ಬಳಿಗೆ ದೇವ
ಓಡಿ ಓಡಿ ಬರುವುತಾಳೆ || ಸಿದ್ಧಯ್ಯ||

ಗಂಡ ಇದ್ದ ಬಳಿಗೆ
ಓಡಿ ಓಡಿ ಬಂದು ತಾಯಿ ಮುದ್ದಮ್ಮ
ಪತಿ ದೇವರ ಪಾದದೆ ಮೇಲೆ
ದಢೀರನೆ ಬಿದ್ದರು
ಪಾದಕ್ಕೆ ಬಂದು ಬಿದ್ದಂತಹ ಮುದ್ದಮ್ಮನ ನೋಡ್ಕಂಡು
ಬಸವಾಚಾರಿ
ಯಾತಕ್ಕೆ ಮಡದಿ ಮುದ್ದಮ್ಮ
ಯಾತಕ್ಕೆ ಮಡದಿ
ಹೇಳ್ತೀನಿ ಕೇಳು ಮುದ್ದಮ್ಮ
ನಾವು ನಿಲುಘಟ್ಟ ಬಿ‌ಟ್ಟುಬುಟ್ಟ
ಮಾರುವಳ್ಳಿ ಮನಸ್ತಾನಕ್ಕೆ ಬಂದು
ಸೇರುಕ್ಕಂಡು ದಿವಸದಿಂದ
ಬಡಸ್ತಾನ ಒಂಟೋಗುಬುಟ್ಟು
ನಮಗೆ ಸಿರಿಸ್ತಾನ ಬಂದ ಕಾಲದಿಂದ ಮಡದಿ
ಯಾವತ್ತು ಕೂಡ ಅಟ್ಟಿ ಅರ್ಮನೇವೊಳಗೆ ವಾಸವಾಗಿದ್ದವಳು
ನನ್ ಕುಲುಮೇ ಮನೆಗೆ ಯಾವತ್ತು ಬಂದಿರ್ಲಿಲ್ಲ
ಇವತ್ತು ಹಟ್ಟಿ ಅರಮನೆ ಬಿಟ್ಟಬಿಟ್ಟು
ನನ್ನ ಕುಲುಮೇ ಕಾರ್ಖಾನೆಗೆ ಬಂದುಬಿಟ್ಟಿಯಲ್ಲ
ಮುದ್ದಮ್ಮ ಮುದ್ದಮ್ಮ
ಯಾತಕ್ಕೆ ಕುಲುಮೆ ಕಛೇರಿಗೆ ಬಂದೆ

ಹೆಣ್ಣೇ ಚಿನ್ನ ಸಾಲ್ದೆ ಬಂದ್ಯ
ಬೆರಳಿ ಸಾಲದೆ ಬಂದೆಯಾ
ಮಡದಿ ಮುತ್ತು ಸಾಲದೆ ಬಂದೆಯಾ
ರತ್ನ ಸಾಲದೆ ಬಂದೆಯಾ
ಮಡದಿ ಹಣ ಇಲ್ಲದೆ ಬಂದೆಯಾ
ಕೇಳಲೊ ನನ್ನ ಮಡದಿ
ಬಳೆಯ ಮುದ್ದಮ್ಮ
ಹೆಣ್ಣೇ ಮಕ್ಕಳಿಲ್ಲದೆ ಬಂದೆಯಾ
ನನ್ನ ಜೀತ್ಗರಿಲ್ಲದೇ ಬಂದೆಯಾ
ಕೇಳು ನನ್ನ ಮಡದಿ
ಹೆಣ್ಣೆ ಏನು ಬೇಕಾಗಿ ನನ್ನ
ಕುಲುಮೆ ಮನೆಗೆ ನೀನು ಬಂದೆ || ಸಿದ್ಧಯ್ಯ||

ಮುದ್ದಮ್ಮ
ಏನು ಬೇಕಾಗಿ ನನ್ನ ಕುಲುಮೆ
ಕಛೇರಿಗೆ ಬಂದೆ ಮಡದಿ
ಬಂದ ರೀತಿ ಹೇಳ್ಕೊಡು
ಮುದ್ದಮ್ಮ ಎಂದರು
ಏನಪ್ಪ ಪತಿದೇವರೆ
ನಿಮ್ಮ ಜೋತೇಲಿ ಏನಂತ ಹೇಳಬೇಕು ದೇವ
ನಾನಾಗಿ ಹೇಳಬಾರದು
ನೀವಾಗಿ ಕೇಳಬಾರದು
ಸ್ವಾಮಿ
ಇವತ್ತು ತುಂಬುದ ಸ್ವಾಮಾರ
ಎಂಟು ಗಂಟೆ ಜಾಮದಲ್ಲಿ
ಯಾರೋ ಧರೆಗೆ ದೊಡ್ಡವರಂತೆ
ಕಂಡಾಯ ಹೊತ್ತಗಂಡು
ನನ್ನಟ್ಟಿ ಅರಮನೆಗೆ ಬಂದೂ
ನಡುತೊಟ್ಟಿಯೊಳಗೆ ನಿಂತಿದ್ರು
ಅವರು ನಿಂತಿರುವಂತ ಟೈಮ್‌ನಲ್ಲಿ
ನಾನು ಕಿರಿ ಕೆಂಪಾಚಾರಿಯವರೆಗೆ
ಹಾಲು ಕರೀತ ಕುಳಿತ್ತಿದ್ದೀ
ಹಾಲು ಕರಿವಂತ ಹೊತ್ನಲ್ಲೀ
ತಂಬೂರಿ ಬಾರಿಸುಬುಟ್ರು
ಡಿಕ್ಕಿ ಹೊಡ್ದು ಬುಟ್ರು
ಬಿಕ್ಷ ಸಾರು ಬುಟ್ರು
ಅವರು ಎಷ್ಟಸಾರಿ ಬಿಕ್ಷ ಸಾರುದ್ರೊ
ಮನಸ್ಗೆ ತಕ್ಕಳದೇ
ಹಾಲು ಕರೀತ ಕೂತ್ತಿದ್ದೀ
ತಂಬೂರಿ ಬಾರ್ಸುಬುಟ್ರು
ಡಿಕ್ಕಿ ಹೊಡ್ದುಬಟ್ರೋ ಬಾರೀ ಡಂಗುರ
ಕೂಚುಮಾಡಿ ಹೊಡುಡ್ರು
ನನ್ನ ಹಸುವೇ ಬೆದ್ರು ಬಡ್ತು
ಆರ್ಸಂಡೆ ಒದ್ದುಬುಟ್ತು
ಅಂಡೆ ವಡ್ಡೋಗುಬುಟ್ತು
ಹಾಲು ಚೆಲ್ಲೋಗುಬುಟ್ತು
ನಾನು ಮಂಟ್ಗೊಂಡು ಬುಟ್ಟಿ
ಮಂಡಿ ಕಿತ್ತೋಯ್ತು
ಮೂಳಸಂದು ತರಚೋಯ್ತು ದೇವಾ
ಚಿನ್ನದ ಕಡ್ಗ ತಗ್ಗೋಗ್ಬುಡ್ತು
ಮುತೈದೆ ಬಳಗಳೆಲ್ಲ ಹೊಡೆದೋಗಿ
ಬಿದ್ದುಬುಟ್ಟು ಕ್ವಾಪಕ್ಕೆ
ಆ ಮಾನಗೆಟ್ಟ ಮಾನುಬಾವನ
ಬಾಯ್ಗಿ ಬಂದಂಗೆಲ್ಲ ಬೋದುಬುಟ್ಟಿ
ನಾನು ಎಷ್ಟು ಬೋದ್ರುವೇ
ಅವರ್ಗೇ ಕ್ವಾಪನೇ ಬರೋದಿಲ್ಲವಂತೆ
ನಾನು ಎಷ್ಟು ಆಡುದ್ರು ಅವರ್ಗೇ
ಸಿಟ್ಟು ಬರೊದಿಲ್ಲವಂತೆ
ನಾವು ಬೋದವರ ಬೊಯ್ಯಕಿಲ್ಲ
ಆಡವರ ಆಡಾಕಿಲ್ಲ
ಅನ್ನವರ ಅನ್ನಕಿಲ್ಲ ಮುದ್ದಮ್ಮ
ಬಾಯೆತ್ತಿ ಬೋದವ್ರ ಬಾಯೆತ್ತಿ ಮಾತ್ರ
ಬೋಯೋದಿಲ್ಲ
ಕೈಯೆತ್ತಿ ಹೊಡ್ದವರ್ಗೆ
ಕೈಯೆತ್ತಿ ಮಾತ್ರ ಹೊಡೆಯೋದಿಲ್ಲ
ಕಲ್ಲಲ್ಲಿ ಹೊಡೆದವರ
ಕಲ್ಲಲ್ಲಿ ನಾವು ಕಂಡಿತವಾಗೂ ಹೊಡೇಯೊದಿಲ್ಲ

ಕಲ್ಲೆತ್ತಿ ಹೊಡೆಯೋದಾ ಕಂಡರೇ
ಕೈಯೆತ್ತಿ ಮುಗಿಯೊರು ನಾವು || ಸಿದ್ಧಯ್ಯ||