ಈಗಲೀಗಾ ಗುರುವುs
ಮೈಮೆ ಮೈತಗಾರದಲ್ಲಿ ಗುರುದೇವ
ವಿಷ್ಣು, ಈಶ್ವರ, ಬ್ರಹ್ಮ ತ್ರಿಮೂರುತಿ
ಮೂರುವರಿಗೂ ಸೇರಿದಂತೆ ಗುರುವು
ತಮ್ಮ ಮಂತ್ರ ಉಪದೇಸದಲ್ಲಿ ಗುರುವು
ಸತಿಪತಿಗಳುಳ್ಳಾದವರ
ತ್ರಿಷ್ಣೆಕಾರ ಮಾಡಿ
ಅವರ ಹೊಟ್ಟೆಲಿ ಒಬ್ಬನಾ
ಪುತ್ರ ಸಂತಾನ ಕೊಟ್ಟು
ಈ ಮಗನಿಂದ ನಾನು
ಅಯ್ಯ ಸೂರ್ಯ ಚಂದ್ರ ಮಾಡಬೇಕು || ಸಿದ್ಧಯ್ಯ ||

ಮೂರುವರು ಮೂರ್ತಿಗಳಿಗೆ ದೇವಾs
ಸೇರದಿದ್ದ ಸತಿಪತಿಗಳ ಪಡೆದು
ಅವರ ಹೊಟ್ಟೆಲಿ ಒಬ್ಬ ಮಗನ ಕೊಟ್ಟು

ಅವರ್ಗೆ ಕಲಿ ಪುರುಷ ಯಂತಾ
ನಾಮಕರಣ ಪಡೆದು
ಅವರಿಗೆ ದೃಷ್ಟಿತಾನಗಳ
ಕೊಟ್ಟು ನನ್ನಪ್ಪ
ಅಯ್ಯ ಇವರಿಂದ ನಾನು
ಸೂರ್ಯದೇವನ ಪಡೆಯಬೇಕು || ಸಿದ್ಧಯ್ಯ ||

ಇವರಿಂದ ನಾನು
ಸೂರ್ಯ ದೇವನ ಪಡಿಬೇಕು ಚಂದ್ರನ ಪಡಿಬೇಕು ಎನುತೇಳಿ
ಆಗಲೀಗಾ ಕೆಟ್ಟತಾನಕೆ ಗುರಿಮಾಡಬೇಕಾದರೆ
ಇವರ ಹೊಟ್ಟೆಲಿ ಹುಟ್ಟಿದಂತಹ ಮಗನಿಂದ
ತಾಯಿತಂದೆಗೆ ಮರಣ ಬರುಬೇಕು
ಇವರ ಮರಣದಿಂದ
ಸೂರ್ಯಚಂದ್ರಾದಿಗಳ ಪಡಿಬೇಕು ಎನುತೇಳಿ
ಆಗಲೀಗಾ ಗುರುವೇ ಗುರುದೇವಾ
ಕಲಿಮನುಷ್ಯ ಅಂತ ಹೇಳಿ ನಾಮಕರಣವನ್ನೇ ಕೊಟ್ಟು
ತಂದೆ ತಾಯಿಗಳನ್ನೇ ಹಿಯ್ಯಾಳಿಸಿದಂತಹ ಕಾಲದಲ್ಲಿ
ಕಲಲಿ ಮನುಷ್ಯನ್ನೆ ಕಲಿ ಪುರುಷ ಅನುವಂತ
ನಾಮುಕರಣ ನಿನಗೆ ಉಂಟುಮಾಡಿ
ನಿಮ್ಮ ತಾಯಿ ತಂದೆಗಳ ಈ ಜನ್ಮದಲ್ಲಿ ಪ್ರಾಣ ತೆಗೆದು
ಮುಂದಿನ ಜಲ್ಮುಕ್ಕೆ ಸೂರ್ಯ ಚಂದ್ರಾದಿಗಳ ಪಡಿಬೇಕು ಎನುತೇಳಿ
ಆಗಲೀಗಾ
ಕಲಿಮನುಷ್ಯನ ತಾಯಿ ತಂದೆಗಳಿಗೆ ಕೊಂದು
ತಾಯಿ ತಂದೆ ಕಳಕಂಡಂತಹ
ಕಲಿ ಪುರುಷನ ಶನಿಪರಮಾತ್ಮ ಎಂತ ಹೇಳಿ

ಅಯ್ಯ ಚಾಯದೇವಿಯಂತ
ನಾಮಕರಣ ಪಡುದು
ಸೂರ್ಯದೇವಾ ಎಂತ
ನಾಮುಕರಣ ಪಡುದು
ಅಯ್ಯಾ ಮಂತ್ರಾ ಉಪಾಸ
ದ್ಯಾಸದಲ್ಲಿ ಗುರುವೇ
ಸೂರ್ಯ ಚಂದ್ರಾದಿಗಳು
ಅಣ್ಣ ತಮ್ಮ ನೀವಾಗಿ
ಹಗಲು ನಿನಪ್ಪ
ಕಾಲವ ಕಳಿರಪ್ಪ
ಇರುಳು ನನ್ನ ಮಗನೆ
ಬೆಳಕ ಕೊಡಪ್ಪ
ಈ ನಾನು ಪಡೆದ ನರಲೋಕದಲ್ಲಿ
ವಾಸವ ಮಾಡುರಯ್ಯ || ಸಿದ್ಧಯ್ಯ ||

ಅಯ್ಯ ಸೂರ್ಯ ಚಂದ್ರಾದಿಗಳಾ
ಈ ಪ್ರಪಂಚಕೆ ಬಿಟ್ಟು
ಅಪ್ಪಾಜಿ ನನ ಗುರುವು
ಈಗ ನಾನು ತಂದಾ ನರಲೋಕ
ಬೆಳಕಾಯ್ತು ಎಂದರಂತೆ || ಸಿದ್ಧಯ್ಯ ||

ಅಯ್ಯಾ ನಾನು ಪಡೆದ ದೇವಾ
ನರಲೋಕ ಗುರುವು
ಇಂದಿಗೆ ಗುರುವೇ ಬೆಳಕಾಯ್ತು ಎಂದು
ಅಯ್ಯ ನಾನು ಪಡೆದ ನರಾಲೋಕ
ಇಂದಿಗೆ ಶುಭಾವಾಯ್ತು ಎಂದು
ಅಯ್ಯ ನಾನು ಪಡೆದ ನರಲೋಕ
ಬಾಳ ಕಾಲ ಬಾಳಲಪ್ಪ || ಸಿದ್ಧಯ್ಯ ||

ನಾನು ಪಡೆದಂತಹ ನರಲೋಕದಲ್ಲಿ ನೂರುಕಾಲ
ಬಾಳಲಿ ಅಂತ ಶಾಪವನೆ ಕೊಟ್ಟು
ನನ್ನ ಧರೆಗೆ ದೊಡ್ಡವರು ನನ್ನ ಮಂಟೇದಾ ಲಿಂಗಪ್ಪ
ಮಾಯ್ಕಾರದ ಒಡೆಯ ನನ್ನ ಪರಂಜ್ಯೋತಿಯವರು
ಅವರು ಶಾಪವನೆ ಗುರುವು ಕೊಟ್ಟುಬುಟ್ಟು ನನ್ನಪ್ಪ

ಅವರು ಮಾಯದ ಬಿರುದಿನ ಒಳಗೆ
ದೇವರು ದಯಮಾಡುತಾರೆ || ಸಿದ್ಧಯ್ಯ ||

ಜಗತ್ತು ಗುರು ಧರೆಗೆ ದೊಡ್ಡಯ್ಯ
ಅಲ್ಲಾಮ ಪ್ರಭು ಮಂಟೇದ ಲಿಂಗಪ್ಪ
ಪರಂಜ್ಯೋತಿ ಪಾವನ ಮೂರುತಿ
ತಾನು ಪಡೆದಂತಹ
ದೈವ ದೇವಮಾನ್ರಿಗೆ ಗುರುವು
ಹರಸಿ ವರವ ಕೊಟ್ಟುಬುಟ್ಟು ಗುರುವು

ಮಾಯದ ಬಿರುದಿನಲ್ಲಿ ಗುರುವು
ಅವರು ತಾವೇ ದಯಮಾಡುತಾರೆ || ಸಿದ್ಧಯ್ಯ ||

ಅಯ್ಯ ಬಹಳ ಬುದ್ದಿ ವಾಕ್ಯಗಳ
ಗುರುವೇ ಹೇಳುತಾರೆ ಮಾಯ್ಕಾರ || ಸಿದ್ಧಯ್ಯ ||

ಮಾಯದ ಬಿರುದಿನಲ್ಲಿ ಗುರುವು
ಈಗಲೀಗಾ ಹರಿಸಿ
ಆಶಿರ್ವಾದಕೊಟ್ಟು ಎತ್ತಿ ಶಾಪವನ್ನು ಇಟ್ಟು ಗುರುವು
ತಾವಾಗೆ ಗುರುದೇವಾ ಬರುವಂತಹ ಕಾಲದಲಿ

ಈ ಧರೆಗೆ ದೊಡ್ಡವರ ಮಹಿಮೆ
ಗುರುವೆ ಒಬ್ಬರು ತಿಳಿಯಲಿಲ್ಲ || ಸಿದ್ಧಯ್ಯ ||

ಗುರುದೇವಾ
ನಾವು ಮೂರು ಮಂದಿ ಮೂರ್ತಿಗಳ ಬಿಟ್ಟು ಬಿಟ್ಟು
ಈಗಲೀಗಾ ನಾನು ಪಡೆದ ನರಲೋಕ
ನೀವೇ ಆಳಿ ಬಾಳಿ ಕಂದಾ
ನರರ ಪೂಜೆ ತಕಳಿ
ನಿಮಗೆ ಮಠ ಮನಿ ಆಯ್ತದೆ ಕಂದಾ
ದೂಪ ದೀಪಾವಾಯ್ತದೆ ಅಂತಹೇಳಿ
ಈ ನರಲೋಕವನ್ನೇ ನಮಗೆ ವಯಿಸಿಬಿಟ್ಟು ಗುರುವು
ನಮ್ಮ ಕೈಬುಟ್ಟು ಹೊರಟೇ ಹೋಯ್ತಿರಲ್ಲಾ ಗುರುವು
ಈಗಲೀಗಾ ನಿಮ್ಮ ಮರುತು ಯಾವ ರೀತಿ
ಒಳಗೆ ಇರಬೇಕಪ್ಪ ಎಂದುರು
ಕೇಳಿರಪ್ಪ, ದೇವ ದೇವಮಾನ್ರು ಬಿಟ್ಟು
ಜಗತ್ತು ಗುರುಗಳು ಹೊರಟೋಯ್ದುರು ಅಂತಹೇಳಿ
ಯತೇ ಚಿಂತೆ ಪಡಬ್ಯಾಡಿ
ಈಗಲೀಗಾ ಹೇಳುತೀನಿ ಕೇಳು ಕಂದಾ

ಈ ನರ ಲೋಕದಾ ಒಳಗೆ
ಭೂಲೋಕದ ಒಳಗೆ
ಕೈಲಾಸದ ಒಳಗೆ
ನೀವು ನೆಂದಾ ಗಳಿಗೆ ಒಳಗೆ ಕಂದಾ
ನಾನುವೇ ಬರುವುದೀನಿ || ಸಿದ್ಧಯ್ಯ ||

ನೀವು ನಿಂದಾಗಳಿಗೆ ಒಳಗೆ
ನಿಮ್ಮ ಮನದಲ್ಲಿ ನಾ ಬರುತೀನಿ ನನ ಕಂದಾ
ನೀವು ಕೂಗುವಂತಹ ಗಳಿಗೇಲಿ ನಾನೆ ಬರುತೀನಿ

ಕಂದಾ ನಾನಿದ್ದ ಮೇಲೆ ನಿಮಗೆ
ಬಯವೇಕೆ ಎಂದರಲ್ಲಾ || ಸಿದ್ಧಯ್ಯ ||

ನಾನಿದ್ದ ಮೇಲೆ ಬಯವೇಕೆ ಎನುತೇಳಿ ಗುರುವು
ಎತ್ತಿ ಆಶಿರ್ವಾದನೆ ಕೊಟ್ಟು
ಮೂರು ಮಂದಿ ಮೂರ್ತಿಗಳನೆ ಗುರುವು
ತಾವಾಗೆ ಬುಟ್ಟು ಬುಟ್ಟು ಗುರುವು
ನಾನು ಪಡೆದ ನರಲೋಕ ಗುರುವು
ನಾನು ಪಡೆದಂತಹ ಭೂಮಿ ಭೂಲೋಕ
ನನ್ನ ಶಿಸು ಮಕ್ಕಳು ಆಳಿ ಬಾಳಿ ಬರಲಿ ಅಂತಹೇಳಿ

ಅವರು ಮಾಯದ ರೂಪಿನ ಒಳಗೆ
ಅಡಕವಾಗಿ ಹೋದರಲ್ಲಾ || ಸಿದ್ಧಯ್ಯ ||

ಅವರು ಮಾಯ್ದಾ ಬಿರ್ದಿನ ಒಳಗೆ
ಅವರು ಪವಾಡಿಸಿದ್ದರಲ್ಲಾ || ಸಿದ್ಧಯ್ಯ ||

ಆಗಲೀಗಾ ಗುರುದೇವಾ
ಆಯಾಸದಿಂದಾ ಜಗತ್ತು ಗುರು
ಪಾವಡಿಸಿದಂತಹ ಕಾಲದಲಿ ಗುರುವು
ಇಂಥಹಾ ದೈವ ದೇವಮಾನವರು
ಎಲ್ಲಾ ಕೂಡಕಂಡು ಗುರುವು
ಅವರು ಬಹಳ ಚಿಂತೆ ಮಾಡುತಾರೆ
ಗುರುವೇ ಬಹಳ ಯತೆಯ ಪಟ್ಟರಂತೆ || ಸಿದ್ಧಯ್ಯ ||

ಗುರುವೆ ಅಸು ಮಕ್ಕಳಿಗೆ ಗುರುವೆ
ವರವನ್ನೇ ಕೊಡುತ್ತಾರೆ
ಮುಕ್ಕಣ್ಣ ಮಲ್ಲಯ್ಯ
ಶಿಶುಬಾಲೆರಿಗೆ ಗುರುವು
ವರವನ್ನೆ ಕೊಡುತಾರೆ
ಬೇಡಿ ಬೇಡಿದಾ ವರವ ದೇವ
ಕೊಟ್ಟಾರಲ್ಲ ಮಾಯಿಕಾರ || ಸಿದ್ಧಯ್ಯ ||

ವರ ಕೊಡುವಂತಹ ಕೆಲಸ ಕಾರ್ಯಗಳ ಆಗಲಿಗಾ
ಜಗದೀಶ್ವರ ಮಾಡುತಾ
ಈಗಲೀಗ ವಿದ್ಯೆ ಬುದ್ದಿ ಬರೆದು ಕಳುಹವಂತ
ವಿದ್ಯಕೆ ಒಡೆಯನಾಗಿ ಬ್ರಹ್ಮದೇವ್ರು ಬರಿತಾ
ಹೆಚ್ಚಿದವರಾರು ತಗದುವರ್ಯಾರು
ಇಂತಹವರ ಕಣ್ಣಾರೆ ನೋಡುತಾ
ಮಾ ವಿಷ್ಣು ಪರಮಾತುಮ
ನಡುವೆ ನರಲೋಕ ಆಳುವಾಗ

ಇವರು ಮಾಯದ ಬಿರುದಿನ ಒಳಗೆ
ಅಯ್ಯಾ ನೋಡಿದರಲ್ಲು ಮಾಯಕಾರ || ಸಿದ್ಧಯ್ಯ ||

ಗುರುವೇ ನಾನು ಪಡೆದಂತಹ
ನಡುವೆ ನರಲೋಕಾ ಅಸಲು ಆಗಬಾರದು
ಮಿಸುಲು ಆಗಬಾರದು
ಅಯ್ಯ ಕೋಟಿಗೊಬ್ಬ ಶರಣ ಕುಲಕ್ಕೆ ಒಬ್ಬ ಭಗುತಾ
ಪಡಕಂಡು ಗುರುವು ಅಪ್ಪಾಜಿಯವರು

ಈಗ ನಾನು ಪಡೆದ ನರಲೋಕ್ಕೆ
ಮಾರೀರ ಪಡೆಯ ಬೇಕು || ಸಿದ್ಧಯ್ಯ ||

ಈಗಲೀಗ ಮೂರು ಮಂದಿ ಮೂರ್ತಿಗಳಿಗೆ ದೇವಾ
ಕೈಗೆಲಸ ಮಾಡದಕೆ ಗುರುವು
ಮಾರಿರಾ ಪಡೆದು ಕೊಡಬೇಕು ಅಂತ ಹೇಳಿ
ಕಾಳಿ ಕಂಕಾಳಿ ಮಾಯಾ ಮೂದೂತಿ
ಇಂತಹ ಮಾರಿರಾ ಪಡೆದು
ಮೂರುಮಂದಿ ಮೂರ್ತಿಗಳು ಕೈವಶಕೆ ಹೋಗಿ
ಬಾಳಿ ಬದುಕಿರಮ್ಮ ಅಂತಹೇಳಿ
ವಿಷ್ಣು ಈಶ್ವರ ಬ್ರಹ್ಮದೇವರ ಬಳಿಗೆ

ಏಳುಜನ ಮಾರೀರ
ಅವರು ಕಳುಗುತಾರೆ ಮಾಯ್ಕಾರಾ || ಸಿದ್ಧಯ್ಯ ||

ನೋಡಿ ಧರೆಗೆ ದೊಡ್ಡವರುs
ಮಾಯ್ದಾ ಬಿರುದಿನಲಿ ಎಳುನೂರು ಜನ ಮಾರೀರ ಪಡೆದು
ಈಗಲೀಗಾ ನಾನು ಪಡೆದಂತ
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರ್ತಿಗಳ ಬಳಿಗೆ
ನೀವು ಮೂರು ಮಂದಿ ಏಳುಮಂದಿ ಮಾರೀರು ಹೋಗಿ
ಅವರು ಹೇಳಿದ ಕೆಲಸ ಮಾಡಿಕಂಡು
ಅವರು ಪಾದ್ದಲ್ಲಿ ತೋರಿದ್ರೆ
ಕೈಲಿ ಮಾಡಿಕಂಡು ವಾಸಮಾಡ್ರಮ್ಮ ಅಂತೇಳಿ
ಏಳುಮಂದಿ ಮಾರೀರ್ನೆ ಕಳಿಸಿ

ಮಿಕ್ಕನಾದ ಮಾರೀರಾ
ಅವರು ಬಚ್ಚಿಟ್ಟು ಅವುಸಿಕಂಡುರು || ಸಿದ್ಧಯ್ಯ ||

ಎಲ್ಲಾ ಮಾರಿರ್ನುವೆ ಗುರುವೆ
ಮುಚ್ಚಿಟ್ಟುಕೊಂಡು ಧರೆಗೆ ದೊಡ್ಡವರು
ಈಗಲೀಗಾ ನಡುವೆ ನರಲೋಕ ಆಳಿ ಬಾಳಿ ಬರುವಾಗ
ಆಗಲೀಗ ಅಪ್ಪಾಜಿ ಗುರು ಪರಂಜ್ಯೋತಿ
ಈ ಭೂಮಿ ತೂಕದ ಜೋಳಿಗೆ
ಗುರುವೆ ಮುತ್ತಿನಾ ಕೈಲಿ ಹಿಡಕಂಡು ನನ ಗುರುವೆ
ಗುರುವೆ ಭೂಮಿ ತೂಕದ ಜೋಳಿಗೆ
ಮುಂಗೈಗೆ ಆಧಾರವ ಮಾಡಿಕೊಂಡು ನನ್ನಪ್ಪ
ಗುರುವೇ ನಾನು ಪಡುದಂತಹ ನರಲೋಕ ಗುರುವು
ಮೂರುಮಂದಿ ಮೂರುತಿಗಳಿಗೆ ಶಿರುಬಾಗಲಿ ಎಂದು

ಈಗ ನನಗೆ ಬೇಕಾದ ಬಿರುದಾ
ಪಡೆಯಬೇಕು ಎಂದರಲ್ಲ || ಸಿದ್ಧಯ್ಯ ||

ಗುರುವೇ ನನಗೆ ಬೇಕಾದ
ಬಿರುದುಗಳು ನಾನೆ ಪಡೆಯಬೇಕು
ನನಗೆ ತಕ್ಕಂತಹ ಬಿರುದು ಗುರುವೇ
ನನಗಾಗಬೇಕು ಎಂತ ಧರೆಗೆ ದೊಡ್ಡಯ್ಯ

ಈಗ ಯಾವ ಯಾವ ಬಿರುದ ನಾನು
ಪಡೆಯಬೇಕು ಎಂದರಲ್ಲ || ಸಿದ್ಧಯ್ಯ ||

ಗುರುವೇ ಅರವತ್ತಾರು ಕಾಸು
ಮೂವತ್ತು ಮೂರು ಬಿರುದು
ಅಷ್ಟ ಕಂಡುಗದ ಜೋಳಿಗೆ
ನೆಟ್ಟಂಗೆ ತಿರುಶೂಲ
ಅವರ್ಗೆ ಹಕ್ಕಿಗೂಡ ಹಕ್ಕಿಯಪ್ಪಾಜಿ
ಹೊಕ್ಕಳಗಂಟ ಹುಲ್ಲೆ ಚರುಮಾ || ಸಿದ್ಧಯ್ಯ ||

ಗುರುವೇ ಹುಲ್ಲೆಯ ಚರುಮ ಗುರುವು
ಉಟ್ಟುಕಂಡು ನನ್ನಪ್ಪ
ಹುಲ್ಲೇ ಚರುಮ ದೇವಾ
ಬೆನ್ನಿಂದೆ ಬುಟುಕಂಡು
ಅವರ ಹಣೆಯಲಿ ಬಸುಮಾಂಗ
ಗುರುವೆ ಹಣೆಯಲ್ಲಿ ಮಟ್ಟಿಕಪ್ಪು
ಅವರ್ಗೆ ಕೊರಳು ತುಂಬ ದೇವಾ
ರುದ್ರಾಕ್ಷಿ ಐದು ಸರ
ಗುರುವೆ ಬದ್ರಾಕ್ಷಿ ಐದು ಸರ
ಗುರುವೆ ರೂಪಾಯಿ ಗಾತ್ರ ಗುರುವು
ಸಜ್ಜಲಿಂಗ ತೆಗುದು
ಕೊರಳಲಿ ಕಟ್ಟಿಕಂಡು
ಅವರು ಕೆಂಪುಲಕ್ಕಿ ಗೂಡಾ ಗುರುವೇ
ಎಡಗೈಲಿ ಹಿಡದುಕೊಂಡು || ಸಿದ್ಧಯ್ಯ ||

ಗುರುವೆ ಕೆಂಪುಲಕ್ಕಿಗೂಡು
ಎಡದ ಕೈನಾ ಒಳಗೆ
ಅಯ್ಯಾ ಹಿಡಕಂಡು ನನ್ನಪ್ಪ
ಪರಜ್ಯೋತಿಯವರು
ಅವರ ಹಿಂಡುಹಿಂಡಿಗೆ ದೇವ
ಬೆನ್ನಿಂದೆ ಬುಟುಕಂಡು
ಗುರುವೆ ಜಾಗಟೆಯ ತಕ್ಕಂಡು
ಗಗ್ಗರವೆ ಹಿಡುಕಂಡು

01_79_Mante-KUH

ಡಿಕ್ಕಿಯ ತಕಂಡು
ಬಾರಿಸುವ ತಂಬೂರಿಯ
ಎದೆಯ ಮೇಲೆ ಧರಿಸಿ
ಅವರ ಮುಂದೆ ಪಾದಕೆ ಗುರುವು
ಕಬ್ಬುಣದ ಎಳುಬಾರಿ
ಎಡದೆ ಪಾದಕೆ ದೇವಾ
ಬಸುವಿನ ಪ್ರವಾಳ
ಅವರು ಹಕ್ಕಿಗೂಡಕ್ಕಿಯಪ್ಪಾಜಿ
ಹೊಕ್ಕಳಗಂಟ ಹುಲ್ಲೆ ಚರಮ || ಸಿದ್ಧಯ್ಯ ||

ಜಾಗಟೆ ತಕ್ಕಂಡರು ಡಿಕ್ಕಿ ಹಿಡಕಂಡರು ದೇವಾ
ಭಾರಿ ಡಂಗುರಾ ತಗುದು ಬೆನ್ನಿಂದೆ ಬುಟುಕಂಡು
ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಆಗಲೀಗಾ
ಧರೆ ತೂಕದ ದುಂಡುಕೋಲ ತಗುದು ಮುಂಗೈಲಿ ಊರಿಕಂಡು
ಅವರ್ಗೆ ವೀರೂ ಜಡೆ ಇಂಬಿಹಣ್ಣು
ಗುರುವೆ ಕಾಸಿ ಕಂಡಾಯುವಲ್ಲ || ಸಿದ್ಧಯ್ಯ ||

ಗುರುವೇ ವೀರುಜಡೆ ಇಂಬಿ ಹಣ್ಣು ಕಾಸಿ ಕಂಡಾಯ
ಅವರು ಹೆಗಲ ಮೇಲೆ ಗುರುವು
ಹೊತ್ತುಕಂಡು ಗುರುವು

ಅವರು ಹರುಜಡೆ ಬುಟ್ಟಾವರೆ
ಪುರು ಜಡೆಯ ಬುಟ್ಟಾವರೆ
ಅವರು ನಾಗರ ಜಡೆಯ ಜುಟ್ಟು
ಅಪ್ಪಾಜಿ ನನ ಗುರುವು
ಅವರು ಎಪ್ಪತ್ತು ಮಾರುದ್ದ
ಜಡೆಗಳ ನನ ಗುರುವು
ಗುರುವೆ ತಾರುಸುತ್ತ ಗುಡಿಸುತ್ತ
ಭೂಮಿಮ್ಯಾಲೆ ಗುರುವು
ಧರ ಧರನೆ ಎಳಕಂಡು
ಅವರು ಮುಳ್ಳಿನ ಪಾವಾಡವನ್ನು
ಪಾದದಲ್ಲಿ ಧರಿಸಿಕಂಡು || ಸಿದ್ಧಯ್ಯ ||

ಉತ್ತರದೇಸದ ಖಂಡಾಯ ಗುರುವು
ಹೆಗಲಮೇಲೆ ಹೊತ್ತಕಂಡು
ಚಿಂತ ಕೆಂಪುಲಕ್ಕಿ ಗೂಡು
ಎಡಗೈಲಿ ಹಿಡಕಂಡು ಗುರುವು
ಈಗ ಎಲ್ಲಿಂದ ಎಲ್ಲಿಗೆ ನಾನು
ಹೋಗುಬೇಕು ಎಂದುರಲ್ಲ || ಸಿದ್ಧಯ್ಯ ||

ಗುರುವೇ ಅಷ್ಟೊಂದು ಬಿರುದುಗಳ
ಹೊತ್ತುಗಂಡು ನನ್ನಪ್ಪ
ಈಗ ಎಲ್ಲಿಂದ ಎಲ್ಲಿಗೆ ನಾ ಹೋಗುಬೇಕು ಎನುತೇಳಿ

ಈಗ ಉತ್ತರ ಖಂಡವನ್ನು ಗುರುವೇ
ಬಿಟ್ಟಾರಂತೆ ಮಾಯುಕಾರ || ಸಿದ್ಧಯ್ಯ ||