ಆದಿ ಒಳಗಲ ಜ್ಯೋತಿ ಬೀದಿ ಒಳಗಲ ಜ್ಯೋತಿ
ಅಂಗೈಲಿ ಉರಿವಂತ ಜ್ಯೋತಿ
ಜ್ಯೋತಿss
ತಿಪ್ಪೆ ಮೆಲೆ ಕಸಿ ಮಡಗಿದ್ರೆ ದೇವಾss
ಭಿನ್ನ ಭೇದವಿಲ್ಲದಂತೆ ಉರಿವಂತ ಪರಂಜ್ಯೋತಿ
ಸತ್ತವರ ಸಮಾದಿ ಮ್ಯಾಲೆ ಕಸಿ ಮಡಗಿದ್ರೆ ಗುರುವೂ
ಏಕವಾಗಿ ಉರಿವಂತ ಜಗಂಜ್ಯೋತಿs
ಮೂರು ಕೂಟದ ದಾರಿವೊಳಗೆ ಮಡಗಿದ್ರೆ ಸ್ವಾಮಿ
ಭಿನ್ನ ಭೇದವಿಲ್ಲದಂತೆ ಉರಿವಂತ ಪರಂಜ್ಯೋತಿ

ಇಂತಹ ಜ್ಯೋತಿ ತಂದವರು
ನನ್ನ ಜ್ಯೋತಿರ್ಲಿಂಗಯ್ಯನವರು
ಸಿದ್ಧಯ್ಯಾ ಸ್ವಾಮಿ ಬನ್ನಿ
ಮಂಟೇದ ಲಿಂಗಯ್ಯ ನೀವೇ ಬನ್ನಿ
ಗುರುವೆ ಸಿದ್ದು ಸಿದ್ಧರುಗೆಲ್ಲ
ನೀವು ಅತಿ ಮುದ್ದು ಘನ ನೀಲಿ
ಸಿದ್ಧಯ್ಯಾ ಸ್ವಾಮಿ ಬನ್ನಿ
ಮಂಟೇದಾ ಲಿಂಗಯ್ಯಾ ನೀವೇ ಬನ್ನಿ

ಇಂತಹ ಜ್ಯೋತಿ ತಂದವರು ಗುರುವು
ಜ್ಯೋತಿರ್ಲಿಂಗಪ್ಪ
ಅಲ್ಲಮಪ್ರಭು
ಮಂಟೇದಲಿಂಗಯ್ಯ
ಕಂಡಾಯ್ದ ಜ್ಯೋತಿ
ಇಂಥ ಧರೆಗೆ ದೊಡ್ಡವರ ಮಹಿಮೆ
ಎಷ್ಟು ಕೊಂಡಾಡಲಪ್ಪ || ಸಿದ್ಧಯ್ಯ ||

ಇಂತಹ ಭೂಮಿ ಪಡೆದವರು
ನನ್ನ ಭೂಲೋಕ ಪಡೆದವರು
ಸೂರ್ಯನ ಪಡೆದವರು
ನಮ್ಮ ಚಂದ್ರನ ಪಡೆದವರು
ವಿಷ್ಣುವ ಪಡೆದವರು
ನನ್ನ ಈಶ್ವರನ ಪಡೆದವರು
ಗುರು ಬ್ರಹ್ಮನ ಪಡೆದವರು
ಕೈಲಾಸ ಪಡೆದವರು
ಕಲ್ಯಾಣ ಪಡೆದವರು
ಇಂತಹ ಭೂಮಿ ಪಡೆದದ್ದಕ್ಕೆ ದೇವ
ಭೂಮಿಗೂ ದೊಡ್ಡವರು ಎಂದರು || ಸಿದ್ಧಯ್ಯ ||

ಇಂತಹ ಧರೆಯ ತರುಲಾಗಿ ನಿಮ್ಮ
ಧರೆಗೆ ದೊಡ್ಡೋರು ಎಂದರು || ಸಿದ್ಧಯ್ಯ ||

ಜಗಂಜ್ಯೋತಿ ಧರೆಗೆ ದೊಡ್ಡಯ್ಯಾ
ಮಂಟೇದ ಲಿಂಗಪ್ಪ ಪರಾವಸ್ತು ಪಾವನ ಮೂರುತಿ
ಇಂತಹ ಭೂಮಿ ಭೂಲೋಕ ಕಲ್ಯಾಣ ಕೈಲಾಸ
ಈ ಮರ್ತು ಲೋಕನೆ ಪಡಕಂಡು ಬರಬೇಕು ಅಂತಹೇಳಿ
ಮಾಗುರು ಮಂಟೇದ ಲಿಂಗಪ್ಪ
ಈಗಲೀಗ ನನ್ನ ಹಿಡಿನೋಡಿ ವಿಷ್ಣು ತಿಳಿಯಕಿಲ್ಲ
ಮುಡಿ ನೋಡಿ ಬ್ರಹ್ಮ ಕೂಡ ತಿಳಿಯದಿಲ್ಲ
ಇಂತಹ ಮಹಾನ್ ಭಕ್ತುರ ನಾ ಪಡೆಯಬೇಕು
ಹಾಗೆಂದು ಗುರುವು

ಅವರು ಒಬ್ಬರೆ ಹುಟ್ಟಿ ಸ್ವಾಮಿ
ಒಬ್ಬರ ಯೋಚನೆ ಮಾಡುತಾರ || ಸಿದ್ಧಯ್ಯ ||

ಗುರುವೆ ಒಬ್ಬರೆ ತಾನು ಹುಟ್ಟಿ
ಯೋಚನೆ ಮಾಡಿ
ನನ್ನ ಅಲ್ಲಮ ಪ್ರಭು
ನನ್ನ ಪರಂಜ್ಯೋತಿಯವರು
ಈಗ ಎಲ್ಲಿಂದ ಎಲ್ಲಿಗೆ ನಾನು
ಹೋಗಬೇಕು ಎಂದರಲ್ಲಾ || ಸಿದ್ಧಯ್ಯ ||

ಗುರುವೆ ಎಲ್ಲಿಂದ ಈಗ
ನಾನು ಎಲ್ಲಿಗೋಗಬೇಕು
ಹಾಗಂದು ಗುರುವು
ನನ್ನ ಪರಂಜ್ಯೋತಿ ಪರಬ್ರಹ್ಮ
ಈಗ ಉತ್ತುರ ಖಂಡಕೆ ನನ್ನ ಸ್ವಾಮಿ
ದಯಮಾಡುತಾರೆ || ಸಿದ್ಧಯ್ಯ ||

ಗುರುವೆ ಉತ್ತುರ ಖಂಡಕೆ ಸ್ವಾಮಿ
ತಾವೆ ಬರುವಾಗ
ಅಪ್ಪಾಜಿ ನನ್ನ ಗುರುವು
ನಾನು ಒಬ್ಬನೆ ಇರುವದಕೆ
ಸಿಬ್ಬರಿ ಅಂತ ಹೇಳಿ
ಅಯ್ಯ ಬಲದಲಿ ನನ್ನ ಗುರುವು
ಉತ್ತೇಶ್ವರನ ಪಡಕಂಡು
ಎಡದಲ್ಲಿ ನನ್ನಪ್ಪ
ಮಹೇಶ್ವರನ ಪಡಕಂಡು
ಅವರು ಹೊನ್ನ ಹುತ್ತದ ಒಳಗೆ
ಉದ್ಭವವಾದರಂತೆ ದೇವಾ || ಸಿದ್ಧಯ್ಯ ||

ಗುರುವೆ ಹೊನ್ನ ಹುತ್ತದ ಒಳಗೆ
ಸ್ವಾಮಿ ಉದ್ಭವವಾಗಿ
ಅಪ್ಪಾಜಿ ನನ್ನ ಗುರುವು
ನನ್ನ ಪರಂಜ್ಯೋತಿಯವರು
ಅವರು ಎಪ್ಪತ್ತ ಏಳು
ಮಾರುದ್ದ ಗುರುವು
ಜಡೆಗಳ ಬುಟ್ಟುಗಂಡು
ಮೊಳದುದ್ದ ದೇವ
ಗಡ್ಡವ ಬುಟ್ಟುಗಂಡು
ಗೇಣುದ್ದ ಗುರುವು
ಮೀಸಿಯ ಬುಟ್ಟುಗಂಡು
ಅವರು ಪಂಚಮೊಕದ ರುದ್ರಾಕ್ಷಿಯ
ಕೊರಳಿನಲ್ಲಿ ಧರುಸುಗಂಡು || ಸಿದ್ಧಯ್ಯ ||

ಅವರು ಕಂಡಾಗ ಜ್ಞಾನದ ಬುಕ್ಕು
ಕಾಲುಜ್ಞಾನದ ಬುಕ್ಕು
ತಾಂಬುರದ ಚಪ್ರೋಡ
ಬಲದಲಿ ಬುಟುಗಂಡು
ಅವರು ಹೊನ್ನು ಹುತ್ತಾದ ಒಳಗೆ
ತ್ರಿಷ್ಣವಾಗಿ ಮಾಯಕಾರ || ಸಿದ್ಧಯ್ಯ ||

ಬಲದಲಿ ಉತ್ತೇಶ್ವರ ದೇವಾ
ಎಡದಲಿ ಮಹೇಶ್ವರನ ಪಡೆದು
ಹೊನ್ನು ಹುತ್ತದಲಿ ಗುರುವು
ಮೂರು ಮಂದಿ ಮೂರುತುಗಳು ತಾವಾಗಿ ಗುರುವು
ಅವರು ಕುಂತು ಯೋಚನೆ ಮಾಡುತಾರೆ
ಎತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಈಗಲಿಗಾ ಕೇಳಿರಪ್ಪ ಕಂದ ಶಿಶು ಮಕ್ಕಳೇ
ಈಗಲೀಗ ಬಲದಲ್ಲಿ ಉತ್ತೇಶ್ವರನ ಪಡಕಂಡೆ
ಎಡದಲ್ಲಿ ಮಹೇಶ್ವರನ ಪಡೆದಿ
ಈಗ ಮಧ್ಯದಲ್ಲಿ ನಾನು ಈಗಲೀಗ ಸಾದೃಷ್ಟದಿಂದ ಗುರುವು
ಸಾಧಿಸಿ ನಾನು ಬೆಳೆದು ಬಂದುದಕೆ
ಈವತ್ತಿನಾ ದಿವಸದಲ್ಲಿ ಗುರುವು
ಉತ್ತರ ದೇಸದಲ್ಲಿ ಹುಟ್ಟಿದಂತಾ
ಪರಂಜ್ಯೋತಿ ಅನುವಂತ ನಾಮಕರಣ ನನಗಾಗಲಿ ಕಂದಾ
ಉತ್ತೇಶ್ವರ, ಮಹೇಶ್ವರ ಅನುವಂತ
ನಾಮಕರಣ ನಿಮಗಾಗಲಿ ಅಂತಹೇಳಿ
ಉತ್ತೇಶ್ವರನ ಮಹೇಶ್ವರನ ಇಬ್ಬರನ್ನು ಬುಟ್ಟು ಗುರುವು

ಒಬ್ಬರೆ ದಯ ಮಾಡುತಾರೆ
ಎತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಗುರುವೇ ಇಬ್ಬರ ಶಿಶು ಮಕ್ಕಳಾ
ಬಿಟ್ಟುಬುಟ್ಟು ನನ ಗುರುವೆ
ಒಬ್ಬ ಸ್ವಾಮಿ ಬರುವಾಗ ನನ ಗುರುವು
ಅಯ್ಯಾ ಎಪ್ಪತ್ತು ಮಾರುದ್ಧ
ಜಡೆಗಳ ನನ ಗುರುವು
ತಾವೆ ಬುಟುಗೊಂಡು
ಇಂತ ಕಂಡುಗ ಜ್ಞಾನದ ಬುಕ್ಕ
ಕಾಲು ಜ್ಞಾನುದ ಬುಕ್ಕ
ಬಲಗೈಲಿ ಹಿಡಕಂಡು
ಈಗ ಒಬ್ಬರೆ ದಯಮಾಡುತಾರೆ
ಪರಂಜ್ಯೋತಿ ಪರಬ್ರಹ್ಮ || ಸಿದ್ಧಯ್ಯ ||

ಒಬ್ಬರೆ ಬರುವಾಗ ಗುರುವು
ಇಂಥ ಜಗಂಜ್ಯೋತಿ
ಪಾತಾಳ ಜ್ಯೋತಿ ಪರಂಜ್ಯೋತಿಯವರು
ಈಗ ನಾನು ಹುಟ್ಟಿ ಬೆಳೆದು ಬರುವಾಗ
ಈಗಲೀಗ ಮಹೇಶ್ವರನ ಬುಟ್ಟಿ
ಉತ್ತೇಶ್ವರನ ಬಿಟ್ಟುಬುಟ್ಟಿ
ಈಗ ನಾನು ಒಬ್ಬನೇ ಬಂದೆನಲ್ಲಾ
ಈಗಲೀಗ ನಾನು ಒಬ್ಬನೆ ಬಂದು
ವಾಸಸ್ಥಾನ ಮಾಡಬೇಕಾದುರೇ
ಯಾವ ಬುದ್ದಿ ಕಲಿಬೇಕು
ಯಾವ ವಿದ್ಯಾ ಕಲಿಬೇಕು ಅಂತ ಹೇಳಿ ಗುರುವು
ಕಂಡುಗಜ್ಞಾನದ ಬುಕ್ಕು ಕಾಲದ ಜಾನದ ಬುಕ್ಕು
ತಾಂಬುರುದ ಚಪ್ಪೋಡಲಿ ಓದಿಕಂಡು ಗುರುವು
ಈ ಪ್ರಪಂಚದಲ್ಲಿ
ಈ ದೇವರಾಗಿ ನಾನು ಹುಟ್ಟಿ ಬೆಳದಿದ್ದಕ್ಕೆ ಗುರುವು

ನಾಣು ಒಂದು ಲೋಕವ
ಕಟ್ಟಬೇಕು ಎಂದರಂತೆ || ಸಿದ್ಧಯ್ಯ ||

ನಾನು ಒಂದು ಲೋಕ ಕಟ್ಟಬೇಕು ಅನ್ನುತೇಳಿ
ಮುತ್ತಿನಾ ಜ್ಯೋಳಿಗೆಗೆ ಕೈ ಹಾಕಿದ್ರು ನನ್ನಪ್ಪ
ಮುತ್ತಿನಾ ಜೋಳಿಗೆ ಒಳಗೆ ಆಗಲಿಗಾ ಮಾಯದ ಮಂತ್ರದ
ಈಬತ್ತಿ ಬಟ್ಟಿ ಇತ್ತಂತೆ
ಈಬತ್ತಿ ಉಂಡೆನೆ ಕಣ್ಣಿಂದ ನೋಡಿಬುಟ್ಟು ಗುರುವು

ಅಂಗೈನ ಒಳಗೆ
ಈಬತ್ತಿ ಉಂಡಿಯಾ
ತಾವೆ ಮಡಿಕಂಡು
ಆರು ಶಾಸ್ತ್ರವ ಓದಿ
ಹದಿನೆಂಟು ಪುರಾಣ
ಬರೆದವರೆ ನನ್ನಪ್ಪಾ
ಗುರುವೇ ಈ ಬತ್ತಿ ಉಂಡೇಗೆ ಗುರುವೇ
ಮಂತ್ರವ ಜಪಿಸುತಾರೆ || ಸಿದ್ಧಯ್ಯ ||

ಗುರುವೇ ಈಬತ್ತಿ ಉಂಡೆಗೆ
ಗುರುವೇ ಮಂತ್ರವನೆ ಜಪಿಸಿ
ಅವರು ಅಪ್ಪಾಜಿಯವರು
ನನ್ನ ಪರಂಜ್ಯೋತಿಯವರು
ಅವರು ನಾಗುಬೆತ್ತ ತೆಗೆದು
ಈಬತ್ತಿ ಉಂಡೆಗೆ ಗುರುವೇ
ಒಂದೇಟ ಹೊಡೆದು
ಅವರು ಒಂದು ಉಂಡೆಯ ಗುರುವೇ
ಎರಡು ಹೋಳು ಮಾಡುತಾರೆ || ಸಿದ್ಧಯ್ಯ ||

ಗುರುವೇ ಒಂದು ಉಂಡೆಯ ಗುರುವೇ
ಒಂದೇಟ ಹೊಡೆದು ಗುರುವೇ
ಎರಡು ಹೋಳ ಮಾಡಿ
ಒಂದು ಹೋಳ ತಗದು
ಭೂಮಿ ತಾಯ ಮಾಡಿ
ಗುರುವೇ ಮತ್ತೊಂದೋಳ ತಗದರಂತೆ
ಆಕಾಶ ಮಾಡುತಾರೆ || ಸಿದ್ಧಯ್ಯ ||

ಈಬತ್ತಿ ಉಂಡೆ ತೆಗದು ದೇವಾs
ನಾಗಬೆತ್ತದಲ್ಲಿ ಹೊಡೆದು ಎರಡು ಹೋಳು ಮಾಡಿ
ಪರಂಜ್ಯೋತಿಯವರು
ಈಗಲೀಗ ಒಂದು ಹೋಳು ತೆಗೆದು ಭೂಮಿನೇ ಮಾಡಿ
ಮತ್ತೊಂದು ಹೋಳು ತೆಗೆದು ಆಕಾಶ ಮಾಡಿ

ಅಯ್ಯ ಭೂಮಿಯ ಅಪ್ಪಾಜಿ ಅಂತ
ನಾಮುಕರಣ ಪಡೆಯುತಾರೆ || ಸಿದ್ಧಯ್ಯ ||

ಅಯ್ಯ ಕೇಳಪ್ಪ ನನ ಕಂದಾ
ಬಾರಪ್ಪ ನನ್ನ ಮಗನೇ
ಬಪ್ಪ ನನ್ನ ಮಗು
ಅಯ್ಯಾ ಉತ್ತೇಶ್ವರ ಬಾರೋ
ಮಹೇಸ್ಪುರ ಬಾರೋ
ಈಗ ನಾನೊಂದು ಭೂಲೋಕ
ಮಾಡುತಿನಿ ಎಂದರಂತೆ || ಸಿದ್ಧಯ್ಯ ||

ಈಗಲೀಗ ಕೇಳಿರಪ್ಪ ಉತ್ತೇಸ್ಪುರ ಮಹೇಸ್ಪುರ
ನಾನು ಒಬ್ಬನೆ ಹುಟ್ಟಿ ಒಬ್ಬನೇ ಬೆಳೆದು
ನಿಮ್ಮ ಇಬ್ಬರು ಶಿಸು ಮಕ್ಕಳ ಪಡೆದೇನೆ ಕಂದ
ಈಗಲೀಗ ನಾನು ಮುತ್ತಿನ ಜೋಳಿಗೇಲಿರುವಂತ
ಈ ಮಲ್ಲೆ ಈಬತ್ತಿ ಉಂಡೆ ಒಳಗೆ
ನಾಗ ಬೆತ್ತದಲಿ ಹೊಡೆದು ಎರಡು ಹೋಳುಮಾಡಿ
ಈಗ ಒಂದು ಉಂಡೆ ಭೂಮಿಯ ಮಾಡಬೇಕು
ಮತ್ತೊಂದು ಉಂಡೆ ಆಕಾಶ ಮಾಡಬೇಕು
ನಾನು ಹುಟ್ಟಿ ಬೆಳೆದುದ್ದಕ್ಕೆ

ನಾನೊಂದು ರಾಜ್ಯವ
ಕಟ್ಟಾಬೇಕು ಅಂದರಂತೆ || ಸಿದ್ಧಯ್ಯ ||

ಅಯ್ಯ ಭೂಮಿ ತಾಯಿಯಂತ
ನಾಮಕರಣ ಮಾಡಿ
ಅಯ್ಯಾ ಭೂಮುತಾಯಿ ಮೇಲೆ ಗುರುವು
ಬಲದ ಪಾದ ಊರುತಾರೆ || ಸಿದ್ಧಯ್ಯ ||

ಬಲದಲಿ ಉತ್ತೇಸ್ಪುರ
ಎಡದಲಿ ಮಹೇಸ್ಪುರ
ಮಧ್ಯದಲಿ ಪರಂಜ್ಯೋತಿ
ಜಗಂಜ್ಯೋತಿಯವರು ನಿಂತುಕಂಡು
ಈಗಲೆ ಈಬತ್ತಿ ಉಂಡೇಲಿ ಆಕಾಶ ಭೂಮಿ ಎರಡನೆ ಮಾಡಿ
ಈಗಲೀಗ ಭೂಮಿ ತಾಯಿಯ ಮೇಲೆ ಬಲದ ಪಾದ ಮಡಗುದುರು

ಭೂಮಿತಾಯಿ ಎಂಬುವವರು
ಗಡಗಡನೆ ನಡುಗುತಾರೆ || ಸಿದ್ಧಯ್ಯ ||

ನೋಡಪ್ಪ ಭೂಮಿತಾಯಿ ಮೇಲೆ ಜಗಂಜ್ಯೋತಿ ಪರಂಜ್ಯೋತಿ
ಈಗಲೀಗ ಬಾಳು ಬೆಳಗುವ ಜ್ಯೋತಿ ಬಂಗಾರದ ಜ್ಯೋತಿ
ಯಾವಾಗ ಭೂಮಿ ತಾಯಿಯ ಮ್ಯಾಲೆ ಪಾದ ಮಾಡುಗುದ್ರೊ
ಆ ಪರಂಜ್ಯೋತಿಯವರ ಆಗಲೀಗ ಪಾದದಲ್ಲಿರಕ್ತಂತಹ
ಬಾಳುಬೆಳಗುವ ಜ್ಯೋತಿ ಬಂಗಾರದ ಜ್ಯೋತಿ ಎನುವಂತಹ
ಪರಂಜ್ಯೋತಿಯವರ ಪಾದ ಭೂಮಿ
ತಾಯವರ್ನೆ ಸೋಕದಾಗಾ

ಮುತ್ತು ರತ್ನವೆಲ್ಲಾ ಗುರುವೇ
ಭೂಮಿಗೆ ಬಂದೋಯಿತಂತೆ || ಸಿದ್ಧಯ್ಯ ||

ಅಯ್ಯಾ ಧರೆಗೆ ದೊಡ್ಡವರ ದೇವಾ
ಕೊರಳಲ್ಲಿ ಇದ್ದಂತ
ರುದ್ರಾಕ್ಷಿ ಬದ್ರಾಕ್ಷಿ
ಎಂಬುವುದು ಗುರುವು
ಭೂಮಿಗೆ ದೃಷ್ಟಿ
ಮಡಗಿದ ಕಾಲದಲಿ
ಅಯ್ಯಾ ರುದ್ರಾಕ್ಷಿಯ ಒಳಗೆ
ಗಿಡಮರ ಆಗಲಿ ಅಂತ
ಎತ್ತಿ ಶಾಪ ಕೊಟ್ಟರಂತೆ || ಸಿದ್ಧಯ್ಯ ||

ಗುರುವೇ ಕಾಯಿನ ಲಿಂಗ
ಕೊರಳಲಿ ಇರುವಾಗ
ಈ ನಾನು ಪಡದಂತ
ಭೂಮಿ ತಾಯಿಯ ಮೇಲೆ
ಗಿಡ ಮರ ಗುರುವೇ
ಆಗಬೇಕು ಎನುತೇಳಿ
ಎತ್ತಿ ಶಾಪ ಕೊಟ್ಟು
ಈ ಭೂಮಿ ತಾಯ ಮೇಲೆ
ಹುಟ್ಟಿದಂತ ಗುರುವೇ
ಗಿಡ ಮರಗಳೆಲ್ಲಾ
ನಾನು ಪಡೆದಂತ ಮಕ್ಕಳಿಗೆ
ಆಹಾರವಾಗಲೆಂದರಂತೆ || ಸಿದ್ಧಯ್ಯ ||

ಈಗಲೀಗ ಜಗತ್ತು ಗುರುs
ಈಗಲೀಗ ಕೈನ ಲಿಂಗ ಕೊರಳಿಗೆ ಕಟ್ಟಿಕೊಂಡು
ಬಂಗಾರದ ಪಾದ ಭೂಮಿ ಮೇಲೆ ಮಡಗಿದಾಗ
ಈಗಲೀಗ ಜಗತ್ತು ಗುರು ಪರಂಜ್ಯೋತಿಯರ ಪಾದದಲ್ಲಿ
ಈಗಲೀಗಾ ಬಂಗಾರದಂತ ಭೂಮಿ ತಾಯಿ ಆದರು
ಈಗಲೀಗಾ ಜಗಜ್ಯೋತಿಯರ ಕೊರಳಲ್ಲಿದ್ದಂತಹ
ಕಾಯ್ನ ಲಿಂಗವೆಲ್ಲಾ ಈ ನರಲೋದಲ್ಲಿ
ಗಿಡ ಮರಗಳಾಗಿ ಹುಟ್ಟಲಿ
ನಾನು ಪಡೆದಂತಹ ಭೂಮಿ ತಾಯಿ ಮೇಲೆ ಹುಟ್ಟಿದಂತ
ಗಿಡಮರಗಳಲ್ಲಿನ

ಪತ್ರೆಯೋ ಗುರುವೇ
ನನ್ನ ಪಾದಪೂಜೆಗೆ ಆಗಲಯ್ಯ || ಸಿದ್ಧಯ್ಯ ||

ಅಯ್ಯ ಪತ್ರೆಯ ಪೂಜೆ ನನಗೆ
ಪಾದಕೆ ಗುರುವೇ ಪುಷ್ಮವಾಗಲಿ ಎಂತ

ಅವರು ಎತ್ತಿ ಶಾಪ ಕೊಟ್ಟರಂತೆ
ಪರಂಜ್ಯೋತಿ ಪರಬ್ರಹ್ಮ || ಸಿದ್ಧಯ್ಯ ||

ಈಗಲೀಗ ಜಗಂಜ್ಯೋತಿಯವರು
ಅಗಾಲೀಗ ಭೂಮಿತಾಯಿಗೆ ಗುರುವು
ಅಗಲೀಗ ಪಡೆದು ಬಿಟ್ಟು ಕಣ್ಣಿಂದ ಗುರುವು
ಪಾದಕೆ ಪುಷ್ಮವಾಗಲಿ ಅಂತ ಹೇಳಿ
ಜಗಂಜ್ಯೋತಿ ಧರೆಗೆ ದೊಡ್ಡವರು ಪಾತಾಳ ಜ್ಯೋತಿಯವರು
ಭೂಮಿ ತಾಯಿ ಮೇಲಿರುವಂತ
ಗಿಡಮರಗಳಿಗೆ ಶಾಪ ಕೊಟ್ಟು
ಕೊಡೋದೊರಳಗಾಗಿ ಗುರುವು

ಭೂಮಿ ದೇವಿ ಎದ್ದರಂತೆ
ನನ್ನ ಗುರುವಿನ ಪಾದ ನೋಡುತಾರೆ || ಸಿದ್ಧಯ್ಯ ||

ಗುರುವೆ ಕೇಳಪ್ಪ ನನ್ನ ಗುರುವು
ಕೇಳಪ್ಪ ನನ್ನಪ್ಪ ಕೇಳಿ ನನ್ನ ಗುರುವು
ಗುರುವೇ ನನ್ನನ್ನೇ ಪಡೆದಿರಿ
ನನಗೆ ಏನು ವರ ಕೊಡುವೆ ನೀ
ಕೊಟ್ಟೆಯಪ್ಪ ಮಾಯ್ಯಾರ || ಸಿದ್ಧಯ್ಯ ||

ಕೇಳವ್ವ ಕಂದಾ
ಈಗಲೀಗ ನಿನ್ನನೆ ಪಡೆದಿವ್ನಿ ಕಂದಾ
ಭೂಮಿತಾಯಿ ಅನ್ನುತೇಳಿ ನಾಮಕರಣ ನೀನು ಪಡೆದು
ಗುರುವೆ ಇಂದಲ್ಲ ಕಂದಾ ನಾಳೆ ನನ್ನ ಮಗಳೇ
ಬೇಡಿದಾ ಭಾಗ್ಯ ಕೇಳಿದ ವರವ ನಾ ನೊಡುತೀನಿ ಅನ್ನುತೇಳಿ
ನನ್ನ ಪಾತಾಳ ಜ್ಯೋತಿಯವರು ಪರಂಜ್ಯೋತಿ ಗುರುವು

ಅವರು ಇನ್ನು ಮುಂದಕ್ಕೆ
ನನ್ನ ದೇವರು ದಯಾ ಮಾಡುತಾರೆ || ಸಿದ್ಧಯ್ಯ ||

ಇನ್ನು ಮುಂದಕೆ ಬಂದು ದೇವಾs
ಈಗಲೀಗ ಭೂಮಿ ತಾಯಿಗೆ ವರಕೊಟ್ಟು
ಆಕಾಶಕೆ ಬಂದು
ಈಗಲೀಗ ದೇವಲೋಕ ಇಂದಿಲ್ಲ ನಾಳೆ ಆಗಲಿ ಅನ್ನುತೇಳಿ
ಆಕಾಶಕೆ ವರಕೊಟ್ಟು ಜಗಂಜ್ಯೋತಿಯವರು

ಗುರುವೇ ಆಕಾಶಕ್ಕೆ ನನ್ನ ಗುರುವು
ಅವರು ವರವನ್ನೆ ಕೊಟ್ಟರಂತೆ || ಸಿದ್ಧಯ್ಯ ||