ಈ ಕೆಟ್ಟ ವಾರುತೆಯ ನಮ್ಮ ಕರಣದಲಿ ಕೇಳಬಹುದ ಸ್ವಾಮಿ
ನಮ್ಮ ಪಡೆದ ತಾಯಿ ಬಾಯಲ್ಲಿ
ಇಂತಹ ಮಾತು ಬರಬಹುದಾ ಸ್ವಾಮಿ
ಅದಕ್ಕಾಗಿ ಕೊಂದುಬುಟ್ಟೊ ಸ್ವಾಮಿ ಅಂದರು
ಅದಕ್ಕಾಗಿ ಕೊಂದುಬುಟ್ಟೊ ಗುರುದೇವಾ ಅಂದುರು

ಏನಿರಪ್ಪ
ಈಗ ನಾನು ಪಡೆದ ಮಗಳು
ಈಗಲೀಗಾ ಸುಟ್ಟು ಬೂದಿಯಾಗಿ ಬುಟ್ಟವಳೆ
ಈಗಲೀಗಾ ನಿಮ್ಮ ಮೂರು ಮಂದಿ ಮೂರುತಿಗಳಿಗೂವೇ
ನಾನು ಮೂರು ಜನಾ ಶಿಸು ಮಕ್ಕಳ ಪಡಿತಿನೀ ಕಂದಾ
ಅಗಲಾದ್ರು ಮೆಚ್ಚಿಕಂಡು

ನಾನು ಪಡೆದಂತಹ ಮಕ್ಕಳಿಗೆ
ನೀವು ಪತಿಯಾಗಿ ಎಂದರಂತೆ || ಸಿದ್ಧಯ್ಯ ||

ಸ್ವಾಮಿ
ನೀವು ಪಡೆದ ಮಗಳಿಗೆ ನಾವು ಪತಿಯಾಗಬೇಕಾ ಆಗಬಹುದು
ಈ ಕೆಟ್ಟತಾಯಿ ಕೊಂದಾಕಿವಿ
ಈಗ ನೀವು ಹೇಳಿದ ರೀತಿ ನಾವು ಕೇಳುತಿವಿ
ಈಗಲೀಗಾ ನೀವು ಪಡಕೊಟ್ಟಂತಹ
ಸತಿಯರಿಗೆ ನಾವು ಪತಿಯಾಯ್ತಿವಿ ಗುರುವು ಎಂದುರು
ಆಗ ಜಗಂಜ್ಯೋತಿ ಧರೆಗೆ ದೊಡ್ಡಯ್ಯ
ಮೂರು ಜನ ಮಕ್ಕಳಿಗೂ ಬುದ್ದಿವಾದವನ್ನೆ ಹೇಳಿಕಂಡು ಸ್ವಾಮಿ
ಆದಿಸತಿ ಸುಟ್ಪಾಕಿದ್ದಂತ

ಆಗಾಲೀಗ ಒಂದು ಗುಡ್ಡೆ ಬೂದಿನೇ
ಗುರುವು ಅವರು ಮೂರು
ಗುಡ್ಡೆಯ ಮಾಡುತಾರೆ || ಸಿದ್ಧಯ್ಯ ||

ಗುರುವೇ ಆದಿಸತಿಯ
ಕೊಂದಂತಹ ಸುಟ್ಟಂತಹ ಬೂದಿ
ಮೂರು ಭಾಗವ ಮಾಡಿ
ಗುರುವೇ ಮಾಯದ ಬೂದಿ
ಮಲೆಯಾಳದ ಕಪ್ಪು
ತಾವಾಗೆ ತಿಳಿದವರೆ
ಪರಂಜ್ಯೋತಿಯವರು
ಅವರು ಮಂತ್ರೋಪದೇಸ
ತಾವಾಗಿ ಮಾಡವರೇ
ಅವರು ಮೂರು ಜನ ಸ್ತೀಯರಾ
ತಾವಾಗೆ ಪಡೆಯುತಾರೆ || ಸಿದ್ಧಯ್ಯ ||

ಮೂರು ಜನ ಸ್ತ್ರೀಯರ ದೇವಾs
ತಮ್ಮ ತಮ್ಮ ಮಂತ್ರ ಉಪದೇಸದಲ್ಲಿ
ಜಗಂಜ್ಯೋತಿ ಧರೆಗೆ ದೊಡ್ಡವರು

ಅಯ್ಯ ಮೊದಲೇ ಗುರುದೇವಾ
ಪಾರ್ವತಿ ಪಡೆದವರೇ
ಎರಡ್ನೆದಾಗಿ ಗುರುವು
ನನ್ನಾ ಲಕ್ಷ್ಮೀದೇವಿ ಪಡೆದವರೇ
ಅಯ್ಯಾ ಮೂರನೆ ಜನಕೆ
ಗುರುವೇ ಗುರುದೇವಾ
ನನ್ನ ವಿದಿಯಮ್ಮ ಎಂಬುವವಳಾ
ತಾವಾಗಿ ಪಡೆದರಲ್ಲಾ || ಸಿದ್ಧಯ್ಯ ||

ಈಗಲೀಗ ಮೊದಲಾಗೆ ಗುರುವು ಪಾರ್ವತಿ ಪಡೆದು
ಎರಡ್ನೆದಾಗಿ ಗುರುವು ಲಕ್ಷ್ಮೀದೇವಿನೆ ಪಡೆದು
ಮೂರ್ನೆದ್ನಾಗಿ ಗುರುದೇವಾ ವಿದ್ಯೆದಾ ಒಳಗೆ
ಬುದ್ಧಿಶಾಲಿಯಾಗು ನನ್ನ ಕಂದಾ ಅಂತ ಹೇಳಿ

ಗುರುವೇ ವಿಧಿಯಮ್ಮನಾ ಗುರುವೇ
ತಾವಾಗಿ ಪಡೆದವರಲ್ಲ || ಸಿದ್ಧಯ್ಯ ||

ವಿದಿಯಮ್ಮನ ಪಡೆದರು ದೇವಾs
ಈಗಲೀಗಾs ಕೇಳಪ್ಪ ನನ ಕಂದಾ
ಮೂರು ಕಣ್ಣ ಉಳ್ಳಾದಂತಹ ಮುಕ್ಕಣ್ಣ ಮಲ್ಲಯ್ಯ
ಈಗಲೀಗ ನಾನು ಪಡೆದ ಶಿಸು ಮಗಳು ಅಂದರೇ
ಇವಳು ಅದಿಸತಿಯಲ್ಲ ಪಾರ್ವತಿ ಕಾನೋ

ಈ ಪಾರ್ವತಿಗೆ ಕಂದಾ ನೀ
ಪತಿಯಾಗಪ್ಪ ಎಂದರಲ್ಲಾ || ಸಿದ್ಧಯ್ಯ ||

ಅಯ್ಯಾ ಧರೆಗೆ ದೊಡ್ಡೋರಾ ಮಾತಿಗೆ
ಶಿರಭಾಗಿ ಶರಣೆಂದುರು || ಸಿದ್ಧಯ್ಯ ||

ಇಂತಹ ಜಗಂಜ್ಯೋತಿ ಮಾತಿಗೆ ಧರೆಗೆ ದೊಡ್ಡೋರಾ ದೇವಾ
ಮುಕ್ಕಣ್ಣ ಮಲ್ಲಯ್ಯಾ ಮೂರು ನೇತ್ರ ಉಳ್ಳಾದಂತ ಪುರುಷ
ಪರಂಜ್ಯೋತಿಗೆ ದೇವಾ
ಪಾರ್ವತಿಗೆ ನಾನು ಪತಿಯಾಯ್ತಿನಿ ಸ್ವಾಮಿ ಅಂತ ಹೇಳಿ
ಧರೆಗೆ ದೊಡ್ಡವರ್ಗೆ ಶಿರಭಾಗಿ ಶರಣ ಮಾಡಿದರಂತೆ
ಆಗಲೀ ಕಂದಾ ಆಗಲೀ ಮಗನೆ ಅಂತ ಹೇಳಿ
ಪಾರ್ವತಿ ಶಿವನಿಗೆ ಆಶೀರ್ವಾದವನ್ನು ಕೊಟ್ಟು
ಬಲಭಾಗದಲ್ಲಿ ಇರಿಸಿಕಂಡು

ಈ ಬ್ರಹ್ಮ ದೇವನ ಕರೆದರಲ್ಲಾ
ಹೆತ್ತಯ್ಯ ಮಂಟೇದು ಸ್ವಾಮಿ || ಸಿದ್ಧಯ್ಯ ||

ಕಂದಾ ಕೇಳಪ್ಪ ನನ ಕಂದಾ
ಕೇಳಪ್ಪ ಬ್ರಹ್ಮದೇವಾ
ಇವಳು ಬುದ್ಧಿಶಾಲಿ ಒಳಗೆ
ಬಾಳ ಬುದ್ದಿ ಉಳ್ಳಾದವಳು
ಇವರು ಸರಸ್ವತಿ ಕಣಪ್ಪ
ಈ ಸರಸ್ವತಿ ಎನುವಂತ
ನಾಮಕರಣವನ್ನು ನಾನೆ ಕಟ್ಟಿವುನಿ
ಈ ಸರಸ್ವತಿಗೆ ಕಂದಾ
ನೀ ಪತಿಯಾಗು ಎಂದರಲ್ಲ || ಸಿದ್ಧಯ್ಯ ||

ಸರಸ್ವತಿಗೆ ಕಂದಾs
ನೀನು ಪತಿಯಾಗು ಎಂದುರು
ಆಗಲಿ ಗುರುದೇವಾ
ನಿಮ್ಮ ಮಾತಿಗೆ ಅತಿ ಮಾತೇಳುವುದಕೆ ಗುರುವು
ನಮಗ ಸಗುತಿ ಸಾಸುವಿಲ್ಲ ನನ್ನಪ್ಪ ಅನುತೇಳಿ
ಈಗಲೀಗ ಸರಸ್ವತಿ ಬ್ರಹ್ಮದೇವಾ ಬಂದು
ಧರೆಗೆ ದೊಡ್ಡವರ ಪಾದಕೆ ಶರಣು ಮಾಡುವಾಗ ಗುರುವು
ಶಬಾಸ ಮಕ್ಕಳೆ ಎನುತೇಳಿ
ಸರಸ್ವತೀನೇ ಕರೆದು ಬ್ರಹ್ಮದೇವನೇ ಕರೆದು
ಎಡದಾ ಬಾಗಲಲ್ಲಿ ತಾವಾಗೆ ನಿಲ್ಲಿಸಿಕಂಡು
ಕಟ್ಟೆ ಕಡೆಗಾಲದಲಿ ಹುಟ್ಟುದಂತ

ಮಾ ವಿಷ್ಣು ಪರಮಾತುಮನಾ
ಮುಂದಕೆ ಕರೆದರಂತೆ || ಸಿದ್ಧಯ್ಯ ||

ಅಯ್ಯ
ಕೇಳಪ್ಪ ನನ ಕಂದಾ
ಕೇಳು ನನ ಕಂದಾ
ನೀನು ಹದಿನೆಂಟು ಅವತಾರ
ಉಳ್ಳಾದಾ ಮಗನು
ಮಾ ವಿಷ್ಣು ಅಂತ
ನಿನಗೆ ನಾಮಕರಣವಾಗಲಿ
ಈ ಲಕ್ಷುಮಾ ದೇವಿಗೆ
ನೀ ಪತಿಯಾಗು ಎಂದರಲ್ಲ || ಸಿದ್ಧಯ್ಯ ||

ಇಂತಹ ಲಕ್ಷ್ಮೀದೇವಿಗೆ ಪತಿಯಾಗು ಕಂದಾs
ಹಾಗಂತ ಗುರುವು ಧರೆಗೆ ದೊಡ್ಡಯ್ಯ
ಗುರುವೇ ಮಾ ವಿಷ್ಣು ಪರಮಾತುಮನಿಗೆ ಬುದ್ದಿ ಹೇಳುವಾಗ

ನೀವು ಹೇಳಿದಂತೆ ಗುರುವೇ ನಾ
ಕೇಳತೀನಿ ಎಂದರಲ್ಲಾ || ಸಿದ್ಧಯ್ಯ ||

ಮೂರು ಜನ ಮಕ್ಕಳ ಪಡೆದೀs
ಮೂರು ಜನ ಸ್ತ್ರೀಯರ ಪಡೆದು
ನಾನು ಪಡೆದಂತಹ ನರರ್ಲೋಕ್ಕೆ ಮಕ್ಕಳ ಮಾಡಿಕಂಡೆ ಅಂತೇಳಿ
ಮಾಗುರು ಮಂಟೇಸ್ವಾಮಿ ಜಗಂಜ್ಯೋತಿಯವರು
ಆರು ಮಂದಿ ಶಿಸು ಮಕ್ಕಳಾ ಮುಂಭಾಗದಲಿ ನಿಲಿಸಿಕಂಡು ನನ್ನಪ್ಪ

ನೀವು ಸತಿ ಪತಿ ಆಗಿ ಕಂದಾ
ನಿಮಗೆ ದೀರ್ಘಾ ಆಯಸ ಆಗಲಿ ಅನುತೇಳಿ
ಅವರಿಗೆ ಎತ್ತಿ ವರವ ಕೊಟ್ಟರಂತೆ
ಹೆತ್ತಯ್ಯ ಮಂಟೇದಸ್ವಾಮಿ || ಸಿದ್ಧಯ್ಯ ||

ಎತ್ತಿ ಶಾಪ ಕೊಟ್ಟು ಜಗಂಜ್ಯೋತಿ
ಧರೆ ತಕ್ಕೊಂಡು ಬಂದಂತಹ ಧರೆಗೆ ದೊಡ್ಡವರು
ಈ ಭೂಮಿ ಪಡೆದಂತಹ ಕುರುತು
ಕೇಳಿರಪ್ಪ ನನ ಕಂದಾs
ಈಗಲೀಗಾ ಅಬ್ಬಗತಿಗೆ ಕಂದಾ ಈ ನರಲೋಕ ಪಡೆದಿವ್ನಿ

ದೇವಲೋಕದ ಒಳಗೆ ಕಂದಾ
ಕಂದಾ ನಿಮ್ಮ ನಿಮ್ಮ ಮಡದೀರಾ
ಕಟಗಂಡು ನನ್ನ ಕಂದಾ
ನೀವು ದೇವಾ ಲೋಕದ ಒಳಗೆ ಕಂದಾ
ಬಾಳಾಡಿ ಎಂದರಲ್ಲಾ || ಸಿದ್ಧಯ್ಯ ||

ಈಗಲೀಗಾ ದೇವಲೋಕ ಕಂದಾ
ನಿಮ್ಮ ಮೂರುಮಂದಿ ಮೂರ್ತುಗಳಿಗಾಗಿ ನಾನೆ ಪಡೆದಿವ್ನಿ
ಈ ದೇವಲೋಕದ ದೇವರಾಗಿ
ಈಗಲೀಗಾ ವಾಸಸ್ಥಾನ ಮಾಡ್ರಪ್ಪ ಅನುತೇಳಿ
ಸಾಕ್ಷಿಯಾದ ಪರಶಿವಾ ಸಾಕ್ಷಿಯಾದ ಬ್ರಹ್ಮದೇವಾ
ಮಾ ವಿಷ್ಣು ಪರಮಾತುಮ

ಈ ಮೂರು ಮಂದಿ ಮೂರ್ತಿಗಳಿಗೆ
ಹರಸಿ ವರವ ಕೊಟ್ಟರಲ್ಲ || ಸಿದ್ಧಯ್ಯ ||

ಮೂರು ಮಂದಿ ಮೂರ್ತಿಗಳ ದೇವಾs
ಈಗಲೀಗಾ ದೇವಲೋಕಕ್ಕೆ ಅಗಲೀಗ ಒಡೆದು ಮೂಡಿ
ದೇವಲೋಕದಲಿ ಬಿಟ್ಟು ಮಾ ಗುರು ಪರಂಜ್ಯೋತಿಯವರು
ಈಗಲೀಗಾ ಭೂಮಿ ಭೂಲೋಕ ಪಡೆದಿ
ಈಗಲೀಗಾ ಕೈಲಾಸ ಪಡೆದಿ ಈ ನಡುವೆ ನರಲೋಕ ಪಡೆದನಲ್ಲ

ಈಗ ಇನ್ನು ಎಲ್ಲಿಂದ ನಾನು
ಎಲ್ಲಿಗೆ ಹೋಗಲಿ ಬೇಕು || ಸಿದ್ಧಯ್ಯ ||

ಈಗ ನಾನೆಲ್ಲಿ ಹೋಗಬೇಕು ಎಂತಾ
ಪರಂಜ್ಯೋತಿಯವರು
ಧರೆಗೆ ದೊಡ್ಡವರು ನನ ಮಂಟೇದ ಲಿಂಗಪ್ಪ
ಅವರು ಏನು ಮಾತೊಂದಾಡುತ್ತಾರೆ
ಎತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಜಗಂಜ್ಯೋತಿಯವರು ದೇವಾs
ಈಗಲೀಗಾ ಮೂರು ಜನ ಮಕ್ಕಳನು
ದೇವಲೋಕದಲಿ ವಾಸಸ್ಥಾನ ಮಾಡಿರಪ್ಪ ಎಂದುರು
ಗುರುದೇವಾ ಈ ದೇವಲೋಕ ಕಟ್ಟಿವ್ನಿ
ದೇವಲೋಕಕೆ ಹೋಗಿಬುಟ್ಟು
ಈಗಲೀಗಾ ವಾಸಸ್ಥಾನ ಮಾಡಿ ಅಂತ ಕೇಳತಿರಿಯಲ್ಲ ಗುರುವು
ದೇವಲೋಕಕೆ ನಾವು ಹೊರಟೋದ ಮ್ಯಾಲೆ

ನಮಗೆ ವಿದ್ಯೆವ ಹೇಳುವರಿಲ್ಲ
ಬುದ್ದಿ ಕಲಿಸುವರಿಲ್ಲ || ಸಿದ್ಧಯ್ಯ ||

ಗುರುವೆ ನಿಮ್ಮ ಬುಟ್ಟು ಗುರುವು
ನಾವು ಹೋಗಲಾರೋ ಮಾಯಕಾರ || ಸಿದ್ಧಯ್ಯ ||

ವಿಷ್ಣು ಈಶ್ವರ ಬ್ರಹ್ಮತ್ರಿಮುರ್ತಿಗಳು ಗುರುವು
ಮೂರುಮಂದಿ ಮೂರ್ತಿಗಳು ಗುರುದೇವಾ
ಕೇಳಪ್ಪ ಗುರುವೆ ಗುರುದೇವಾ
ನಮ್ಮ ಪಡೆದು ಬಿಟ್ಟು ನೀವು
ದೇವಲೋಕಕೆ ಹೊರಟು ಹೋಗಿ ಅಂತ ಹೇಳ್ತಿರಲಾ
ನಿಮ್ಮ ಬಿಟ್ಟು ನಾವು ಹೊರಹೋದದ್ದೇ ಅದರೆ
ವಿದ್ಯಾ ಕಲಿಸವರಿಲ್ಲಾ
ಬುದ್ಧಿ ಹೇಳವರೆ ಗತಿ ಇಲ್ಲ ಗುರುವು
ನಿಮ್ಮನೆ ಮರೆತು ಗುರುದೇವಾ

ದೇವಲೋಕಕೆ ಗುರುವು
ನಾ ಹೋಗಲಾರೆ ಎಂದರಂತೆ || ಸಿದ್ಧಯ್ಯ ||

ಕಂದಾ ನಾವೆ ಹೊಯ್ತಿವಂತ
ಹೆದರಬೇಡಿ ಬೆಚ್ಚಬೇಡಿ ನನ ಕಂದಾ ನೀವು
ಬಯವ ಪಡು ಬ್ಯಾಡಿ

ನೀವು ಮುಂದ್ಮುಂದೇ ನಡೀರಿ ಮಕ್ಕಳೇ
ನಾ ಹಿಂದಿದೆ ಬರುತ್ತೀನಿ || ಸಿದ್ಧಯ್ಯ ||

ಗುರುವೇ ಮೂರು ಮೂರು ಮಕ್ಕಳ
ಗುರುವೇ ಮುಂದೆ ಮುಂದೆ ಬುಟುಕಂಡು
ಅಪ್ಪ ದೇವಗುರುವು ನನ್ನ ಪರಂಜ್ಯೋತಿಯವರು
ಈ ದೇವಲೋಕಕೆ ಗುರುವೇ
ತಾವೆ ದಯಮಾಡುತಾರೆ || ಸಿದ್ಧಯ್ಯ ||

ಮೂವರು ಮಕ್ಕಳಾ ಗುರುದೇವಾ ತಾನಾಗೆ ಕರಕಂಡು
ಜಗತ್ತು ಗುರು ಪರವಸ್ತು ಪಾವನ ಮೂರುತಿ
ದೇವ ಲೋಕಕೆ ಬಂದು ಗುರುದೇವಾ
ಈಗಲೀಗಾ ಮೂವರು ಮಕ್ಕಳ
ರೂಪು ರೇಖೆ ಕಣ್ಣಾರೆ ನೊಡಕಂಡು ಗುರುವು

ನಾನು ಪಡೆದ ಮಕ್ಕಳಿಗೆ
ನಾನೆ ವಿದ್ಯೆ ಕಲಿಸಬೇಕು || ಸಿದ್ಧಯ್ಯ ||

ಗುರುವೇ ನಾನು ಪಡೆದಂತ
ಮಕ್ಕಳ್ಗೆ ಗುರುವೇ
ನಾನೇ ಬುದ್ದಿ ಗುರುವೇ
ಕಲಿಸಬೇಕು ಎಂತ
ಪರಂಜ್ಯೋತಿಯವರು
ಪಾತಾಳು ಜ್ಯೋತಿಯವರು
ಅಯ್ಯ ಕೇಳಪ್ಪ ನನ ಕಂದಾ
ಕೇಳಪ್ಪ ನನ ಮಗು
ನನ್ನ ಕಂಡುಗಾ ಜ್ಞಾನದ ಬುಕ್ಕು
ಕಣ್ಣಾರ ನೋಡಿರಪ್ಪ || ಸಿದ್ಧಯ್ಯ ||

ನನ ಕಂಡುಗ ಜ್ಞಾನದ ಬುಕ್ಕ
ಕಣ್ಣಿಂದ ನೋಡಿರಪ್ಪಾ
ನನ್ನ ಕಾಲುಗ ಜ್ಞಾನದ ಬುಕ್ಕ
ನೀವು ಕಾಲವಾಗಿ ನೋಡಿರಪ್ಪ
ನನ್ನ ಕಾಲದ ಜ್ಞಾನವ ನೀವು
ಓದಿರಪ್ಪ ಎಂದರಂತೆ || ಸಿದ್ಧಯ್ಯ ||

ಆಗಲೀಗಾ ಗುರುವು ಗುರುದೇವಾs
ಮೂರುಮಂದಿ ಮಕ್ಕಳ ಮುಂಭಾಗದಲ್ಲಿ
ಕಂಡುಗ ಜ್ಞಾನದ ಬುಕ್ಕು
ಕಾಲದ ಜ್ಞಾನದ ಬುಕ್ಕು
ಮುಂಭಾಗದಲಿ ಮಡಗುದ್ದು
ಈಗಲೀಗಾ ಬಲದಲ್ಲಿ ಜಗದೀಶನ ಕುಂಡಿರಿಸಿ
ಎಡದಲ್ಲಿ ಗುರುದೇವಾ ಮಾ ವಿಷ್ಣು ಪರಮಾತುಮನ ಕುಂಡ್ರಿಸಿ
ಮದ್ಯದಲಿ ಗುರುವು ಬ್ರಹ್ಮದೇವರ ಕುಂಡುರಿಸಿ

ಅಯ್ಯ ಬ್ರಹ್ಮದೇವರ ಮುಂದೇ ಗುರುವೇ
ಕಾಲದ ಜ್ಞಾನದ ಬುಕ್ಕ ಬ್ರಹ್ಮದೇವರ ಮುಂಭಾಗದಲಿ ಮಡಗುವಾಗ
ಮಾ ವಿಷ್ಣು ಪರಮಾತುಮ

ಕಾಲದ ಜ್ಞಾನವ ಗುರುವು
ಕಲಿಲಾರೆ ನನ್ನಪ್ಪ ಎನುತೇಳಿ
ಮಾ ವಿಷ್ಣು ಪರಮಾತುಮ
ಪರಂಜ್ಯೋತಿಯವರಿಗೆ ಹೇಳುವಾಗ
ಕಂದಾs

ನೀನಾಡುವಂತ ಮಾತು ನನಗೆ ಚಂದಾಗಿ ಗೊತ್ತು ಕಂದಾ
ಈಗಲೀಗ ನೀನು ಹದಿನೆಂಟು ಅವತಾರವುಳ್ಳ ಪುರುಷ
ನನ್ನ ಕಾಲದ ಜ್ಞಾನ ನಿನಗೆ ಬೇಕಾಗೆ ಇಲ್ಲ
ಈಗಲೀಗಾ ನಿನಗೂ ಕಲಿವಂತ ಇದ್ಯಾ ಕಲಿಸುತೀನಿ ಕಂದಾ ಎನುತೇಳಿ
ಬಲದಲ್ಲಿರುವಂತ ಈಶ್ವರ ಮಲ್ಲಯ್ಯನ ಕೇಳಿದುರು
ಈ ಕಾಲಜ್ಞಾನದ ಓದಿ ಪೂರೈಸು ಕಂದಾ ಎಂದರು
ಗುರುದೇವಾs
ಈಗಲೀಗಾ ನೀವು ಹೇಳಿದಂತಹ
ಕಾರ್ಯ ಕೆಲಸ ಕೊಟ್ಟುಬುಡಿ

ಈ ಓದು ಬರೆಯುವ ಗುರುವು ನಾ
ಓದಲಾರೆ ಎಂದರಂತೆ || ಸಿದ್ಧಯ್ಯ ||

ಅಯ್ಯ ಎಡದಲ್ಲಿರುವಂತಹ ಈಸ್ಪುರ ಮಲೈನ
ಮಾತನ್ನೆ ಗುರುವು
ಕಿವಿಯಾರೆ ಗುರುವೆ
ಕೇಳಿಕಂಡು ಬ್ರಹ್ಮದೇವಾ
ಎಡದಲಿ ಇರುವಂತಹ
ಮಾ ವಿಷ್ಣು ಗುರುವೆ
ಪರಮಾತುಮನ ಮಾತ
ಕೇಳಿಕಂಡು ಬ್ರಹ್ಮದೇವಾ
ಅಯ್ಯ ಗುರುವಿಗೆ ಗುರುವೇ
ಬಾಗಿ ಶರಣು ಮಾಡುತಾರೆ || ಸಿದ್ಧಯ್ಯ ||

ಗುರುವೇ ಜಗತ್ತು ಗುರುವೇ
ಶರಣನೇ ಮಾಡವರೇ
ಕೈ ಎತ್ತಿ ಮುಗುದು
ನೀ ಮಂಗೈ ಹಸ್ತದಿಂದಾ
ನನ ಮುಂಭಾಗಕ್ಕೆ ಗುರುವು
ಈ ಕಂಡುಗ ಜ್ಞಾನದ ಬುಕ್ಕಾ
ಈ ಕಾಲದ ಜ್ಞಾನದ ಬುಕ್ಕಾ
ನೀವು ಕೊಟ್ಟಂತಹ ಕಾಲದ ಜ್ಞಾನದ
ಬುಕ್ಕ ಕಣ್ಣಿಂದ ಓದುತ್ತೀನಿ || ಸಿದ್ಧಯ್ಯ ||

ನಾನು ಕಾಲ್ಡ ಜ್ಞಾನದ ಗುರುವೇ
ಕಣ್ಣಿಂದ ಗುರುವು
ನಾ ಓದುತೀನಿ ಅಂತೇಳಿ
ಬ್ರಹ್ಮದೇವಾರು ಹೇಳುವ ಕಾಲದಲ್ಲಿ
ಈ ಬ್ರಹ್ಮದೇವರ ಮಾತ ಕೇಳಿ
ಸಂತೋಷ ಪಟ್ಟರಂತೆ || ಸಿದ್ಧಯ್ಯ ||

ಬ್ರಹ್ಮದೇವರ ಮಾತ ಕೇಳಿ ಬಹಳ ಸಂತೋಷ ಪಟ್ಟುಕಂಡು
ಜಗತ್ತು ಗುರು ಪರಂಜ್ಯೋತಿಯವರು
ಕಂದಾ ಮೂರುಜನ ಶಿಸು ಮಕ್ಕಳು
ಈಗ ನಾನಾಗಿ ಪಡೆದುದಕ್ಕೆ

ನಾನು ಒಪ್ಪಿದ ಮಗನಾಗಿ
ನೀನು ಸಿಕ್ಕಿದೆ ಎಂದರಂತೆ || ಸಿದ್ಧಯ್ಯ ||

ನೋಡಪ್ಪs
ಆ ಜಗತ್ತು ಗುರು ಈ ಬ್ರಹ್ಮದೇವರ ಮಾತ ಕೇಳಿಕಂಡು
ಬಹು ಸಂತೋಷ ಪಟ್ಟುಕಂಡು
ನನಗೆ ಮೆಚ್ಚಿದಂತಹ ಮಗ ನೀನು ದೊರಕಿದೆ ಕಂದಾ
ನಿನ್ನ ಮಾತ ಕೇಳಿ ಬಹು ಸಂತೋಷ ಉಂಟಾಯ್ತು ಅಂತ ಹೇಳಿ
ಮೂರುಜನ ಮಕ್ಕಳ ಮುಂಭಾಗದಲಿ ಕೂತುಕಂಡು ಗುರುವು
ಬ್ರಹ್ಮದೇವರಿಗೆ ಗುರುವು

ಅವರು ಓದು ಬರೆಯ ಕಲುಸುತ್ತಾರೆ
ಪರಜೋತಿ ಪರಬ್ರಹ್ಮ || ಸಿದ್ಧಯ್ಯ ||

ಇದು ಕಾಲುಜ್ಞಾನದ ಬುಕ್ಕು
ಎಂದರೆ ಕಂದಾ
ಇದು ಕಾಲ ಇರುವ ತನಕ ಮಗನೆ
ಬಾಳುತಾದೆ ಎಂದರಂತೆ || ಸಿದ್ಧಯ್ಯ ||