ಅಯ್ಯಾ ಮೂರು ಸಿರಸವು ವುಳ್ಳಾದವರು ಗುರುವು
ಅಯ್ಯಾ ಆದಿಸಕ್ತಿ ಗರ್ಭದಲಿ
ಬ್ರಹ್ಮದೇವರು ಹುಟ್ಟುತಾರೆ || ಸಿದ್ಧಯ್ಯ ||

ಬ್ರಹ್ಮದೇವರು ಹುಟ್ಟಿ ದೇವಾ
ಈಗಲೀಗಾ ತಾಯಮ್ನ ಮಕ ಕಣ್ಣಿಂದ ನೋಡಿಬಿಟ್ಟು
ತಾಯಿ ನೀವು ನಾನು ಮಗನೂ ಎನುತೇಳಿ
ಆದಿಶಕ್ತಿಗೆ ಕೈ ಎತ್ತಿ ಮುಗಿವಾಗ
ಕೇಳಿರಪ್ಪ ಗುರುದೇವಾ ಈವಾಗಲೀಗ
ಮಕ್ಕಳು ಎನುವಂತ ಆಶಯ ನನಗಿಲ್ಲ

ನನಗೆ ಪತಿ ಎನ್ನೋರು ಕಂಡರೆ
ನನಗೆ ಬಹು ಪ್ರೀತಿ ಎಂದರಂತೆ || ಸಿದ್ಧಯ್ಯ ||

ಕೇಳಪ್ಪ ಗುರುವು
ಪರಂಜ್ಯೋತಿಯವರಿಂದ ಅಪ್ಪಣೆ ಪಡೆದು
ನೀನು ಹುಟ್ಟಿದ ಮಕ್ಕಳಿಗೆ ಮಡದಿ ಆಗಬೇಕು
ಅಂತ ಹೆಳಿ ವರಕೊಟ್ಟವರೆ
ಈಗಲೀಗಾ ಮೂರು ನೇತ್ರವುಳ್ಳಾದಂತಹ
ಒಬ್ಬ ಮಗ ಹುಟ್ಟುದುರು
ಬೆನ್ನಿಂದ ಬರುತಕಂತವರಿಗೆ
ಮಡದಿ ಆಗಮ್ಮ ಅಂತ ಹೇಳಿ ಹೊರಟು ಹೋದುರು
ಅವರು ಹೊರಟು ಹೋದಂಗೆ
ನೀವು ಕೈಬುಟ್ಟು ಹೊರಟು ಹೋಗಬೇಡಿ
ನಿಮಗೆ ನಾನು ಮಡದಿಯಾಯ್ತಿನಿ
ನನಗೆ ನೀವು ಪತಿಯಾಗಬೇಕು ಅಂತ ಕೇಳುದುರು

ಅಯ್ಯಾ ಆದಿಶಕ್ತಿ ಮಾತು
ಕೇಳಿಕಂಡು ನನ ಗುರುಗು
ಈಗ ಮೂರು ಶಿರಸವುಳ್ಳಾದವರು
ನಾನಾಗೆ ತಾಯೇ ನಿನ್ನ
ಗುರುಭದಲ್ಲಿ ಹುಟ್ಟುದುವಾಕೆ
ಅವ್ವ ತಾಯಿ ನೀನು ಆಗಬೇಕು
ಮಗನೇ ನಾನಾಗಬೇಕು || ಸಿದ್ಧಯ್ಯ ||

ನಮ್ಮ ಮೇಗಳ ಆಸೆ ಬೇಡ ತಾಯಿ
ಈಗಲೀಗ ನಮ್ಮಿಬ್ಬರ ಮಕ್ಕಳಿಗಿಂತ ಕೂಡಾ
ಸುಂದರವಾದ ಪುರುಷ
ನಿಮ್ಮ ಒಲಿದು ಸಂತೋಷ ಪಡಿಸುವಂತ ಮಗ
ಕಟ್ಟಕಡೆಲಿ ಬರುತಾನೆ ತಾಯಿ

ಅವ್ವ ಕಡೇಲಿ ಹುಟ್ಟಿದ ಮಗನಿಂದ
ನೀನು ಸುಖಪಡೆ ಎಂದರಂತೆ || ಸಿದ್ಧಯ್ಯ ||

ಗುರುವೇ ಕಟ್ಟ ಕಡೆಗಾಲದಲ್ಲಿ
ಹುಟ್ಟುವ ಮಗನಾ
ಜ್ಞಾನವನ್ನೆ ಮಾಡಿಕಂಡು
ವಾಸವ ಮಾಡುವಾಗ
ಗುರುವೆ ಮಗುನು ಆಗುಬೇಕು ಅಂತಹೇಳಿ
ಅಯ್ಯಾ ಹದಿನೆಂಟು ತರದ
ಅವತಾರವುಳ್ಳಾದ
ಇಂತ ಕಡೆಗಾಲದ ಒಳಗೆ ನನ್ನ
ಮಹಾವಿಷ್ಣು ಹುಟ್ಟುತಾರೆ || ಸಿದ್ಧಯ್ಯ ||

ಕಟ್ಟಕಡೆಗಾಲದಲಿ ಗುರುವುs
ಕಿರಿಮಗನಾಗಿ ಮಹಾವಿಷ್ಣು ಪರಮಾತುಮ
ಹುಟ್ಟಿದಂತಹ ಕಾಲದಲಿ ಗುರುವು

ಗುರುವೆ ಹುಟ್ಟುದಂಥ ಮಗನನ್ನ ನೋಡಿ
ಸಂತೋಷಪಟ್ಟಳಂತೆ || ಸಿದ್ಧಯ್ಯ ||

ಕೇಳವ್ವ ತಾಯಿs
ಈಗಲೀಗಾ ನಿನ್ನ ಗರ್ಭದಲ್ಲಿ
ಹದಿನೆಂಟು ಅವತಾರವುಳ್ಳಾದ ಪುರುಷ್ಯ
ನಾನೆ ಹುಟ್ಟಿವಿನಿ ಅಂತ ಹೇಳಿ
ಆದಿ ಶಕುತಿ ಮುಂಭಾಗದಲಿ ಬಂದು ನಿಂತುಕಂಡುರು
ಇವರು ಮೊದಲು ಹುಟ್ಟಿದಂತಹ ಇಬ್ಬರೂ ಮಕ್ಕಳಿಗಿಂತ
ಎಷ್ಟು ಸುಂದರವಾದ ಪುರುಷ
ನನಗೆ ಪತಿ ಭಾಗ್ಯ ದೊರಕುವಂತ
ಮಗನು ಹುಟ್ಟುಬುಟ್ಟ ಅಂತ ಹೇಳಿ
ಕಟ್ಟ ಕಡೆಗಾಲದಲಿ ಹುಟ್ಟಿದಂತಹ
ಮಾ ವಿಷ್ಣು ಪರಮಾತ್ಮನ ನೋಡುಬುಟ್ಟು

ಮಡದಿ ಆಯ್ತಿನಿ ಎಂತ ಗುರುವೇ
ಆದಿಶಕ್ತಿ ನುಡಿದಳಾಗ || ಸಿದ್ಧಯ್ಯ ||

ಗುರುವೆ ಆದಿಶಕ್ತಿ ಮಾತಾ
ಕೇಳಿಕಂಡು ನನ ಗುರುವು
ಮಾ ವಿಷ್ಣು ಪರಮಾತುಮ
ಗುರುವೇ ಆದಿಶಕ್ತಿಯವರ ಅಂದಾಚಂದಾ
ರೂಪು ರೇಖೆ
ಅವರ ರೇಖ್ಯಾನೆಲ್ಲಾ ಕಣ್ಣಾರೆ ನೋಡಿಬುಟ್ಟು
ಅವರು ಮತ್ತೇನ ನುಡಿದರಷ್ಟೇ
ಮಾ ವಿಷ್ಣು ಪರಮಾತ್ಮ || ಸಿದ್ಧಯ್ಯ ||
ಈಗಲೀಗ ಆದಿಸತಿ ಮುಖವನೆ ನೋಡಿ
ಹದಿನೆಂಟು ಆಗಲೀಗ ಅವತಾರವುಳ್ಳ
ನನ್ನ ಮಾ ವಿಷ್ಣು ಪರಮಾತ್ಮ
ಹದಿನೆಂಟಾವತಾರ
ಉಳ್ಳಾದ ಪುರುಷ
ಇವರು ಆದಿಸತಿ ಮಾತ ಗುರುವೇ
ಗ್ಯಾನವಾಗಿ ಕೇಳುತಾರೆ || ಸಿದ್ಧಯ್ಯ ||

ನನ್ನ ಪರಂಜ್ಯೋತಿಯವರ
ವರದಲಿ ನನ ಕಂದಾ
ಮೂರು ಜನ ಮಕ್ಕಳು
ಇಬ್ಬರೂ ಮಕ್ಕಳು
ಕೈಬುಟ್ಟು ಹೊರಟೋದರು
ನೀ ಕಡೆ ಮಗನು ಆದ್ದರಿಂದ
ನನಗೆ ಪತಿ ಆಗಬೇಕು || ಸಿದ್ಧಯ್ಯ ||

ಇಂತಹ ಆದಿಸತಿ ಮಾತಕೇಳಿ
ಏನೆಂದು ನುಡಿದರಲ್ಲ || ಸಿದ್ಧಯ್ಯ ||

ಆದಿಸತಿ ಮಾತ ಕೇಳಿ ಮಾ ವಿಷ್ಣು ಪರಮಾತುಮ
ಏನಮ್ಮ ಈಗಲೀಗಾ ಕಡೆಗಾಲದಲ್ಲಿ ಹುಟ್ಟಿದ ಮಗನಿಗೆ
ನಾನು ಮಡದಿ ಆಗ್ತಿನಿ ಪರಿಯಾಗು ಅಂತ ಪ್ರಿಯದಲ್ಲಿ ಹೇಳಿ
ಈಗಲೀಗಾ ಯಾವ ರೀತಿ ಒಳಗೆ
ನೀವು ಪತಿಯಾದಿರಿ ತಾಯಿ ಅಂದರು
ಎಲ್ಲಾ ಕೇಳಪ್ಪಾ, ಸಂಪತ್ತು ನನಗುಂಟು
ಪತಿಭೋಗವು ಇಲ್ಲ
ನಾನು ಹುಟ್ಟಿದ ಗಳಿಗೆ ಒಳಗೆ
ಪರಂಜ್ಯೋತಿಯವರ ಪಾದ ಹಿಡ್ದು
ಪತಿ ಭಾಗ್ಯ ಕೇಳಿವ್ನಿ
ಈಗ ನೀವು ಕಡೇಲಿ ಹುಟ್ಟಿದ ಮಗನಿಂದ
ನನಗೆ ಪತಿ ಸುಖವಾಗಲೀ ಬೇಕು ಎಂದುರು
ಪತಿಸುಖ ಆಗಬೇಕು ಎನ್ನುವಾಗ ಆದಿ ಸತಿ
ಅಂಗೈನ ಕಣ್ಣಿಂದ ನೋಡಿದ್ರು ಮಾ ವಿಷ್ಣು ಪರಮಾತ್ಮ

ಅವಳ ಅಂಗೈಲಿ ಉರಿ ಹಸ್ತ
ಕಣ್ಣಿಂದ ನೋಡಿಕಂಡುರು || ಸಿದ್ಧಯ್ಯ ||

ಗುರುವೇ ಆದಿಸತಿ ಅಂಗೈಯಲಿ
ಇರುವಂತ ಗುರುವೇ
ಉರಿಯಸ್ತ ದೇವಾ
ಕಣ್ಣಾರೆ ನೋಡಿಕಂಡು
ಅಯ್ಯಾ ಅವಳ ಕೈಲಿ ಗುರುವೇ
ಅವಳ ಪ್ರಾಣ ತಗಿಲೇಬೇಕು || ಸಿದ್ಧಯ್ಯ ||

ಅವಳ ಕೈಯಾರನೆ ದೇವಾ
ಅವಳ ಪ್ರಾಣ ತೆಗದುಬುಡಬೇಕು ಅಂತ ಹೇಳಿ
ಮಾವಿಷ್ಣು ಪರಮಾತುಮ
ಕೇಳಮ್ಮ ಈಗಲೀಗ ಪತೀ ಸುಖ ನಿಮಗೆ ದೊರೆಯಬೇಕಾದುರೆ
ನಾನು ಪತಿಯಾಗ ಬೇಕಾದುರೆ
ನನಗೆ ನೀನು ಸತಿಯಾಗಬೇಕಾದುರೆ

ನಾ ಹೇಳಿದಂತ ನಾಂಟ್ಯ ನೀ
ಮಾಡಬೇಕು ಎಂದರಂತೆ || ಸಿದ್ಧಯ್ಯ ||

ನಾನು ಮಾಡಿದ ನಾಂಟ್ಯ
ಅಮ್ಮ ತೆಪ್ಪು ಇಲ್ಲದ ರೀತಿ
ನೀ ಮಾಡಿದರೆ ನನ ತಾಯಿ
ನಿನಗೆ ಪತಿಯು ನಾನೆ
ಆಗುತೀನಿ ಎಂದರಂತೆ || ಸಿದ್ಧಯ್ಯ ||

ಪತಿಯು ನಾನಾಗಬೇಕಾದುರೆs
ಹೇಳಿದ ನಾಂಟ್ಯವನ್ನೆ ನೀವು ಮಾಡಿದ್ದು ಆಗಿಬುಟ್ಟುರೇ
ನನ ನಾಂಟ್ಯ ತಕ್ಕಾಗಿ ನೀವು ನಾಂಟ್ಯ ಮಾಡಿದುರೇ
ನಿಮಗೆ ಪತಿ ಆಯ್ತಿನಿ ಎಂದುರು

ಇವರು ನನಗೆ ಪತಿಯಾಗಬೇಕಾದುರೇ
ಇವರು ಮಾಡುವಂತ ನಾಂಟ್ಯ ಆಡಲೇಬೇಕು
ಈಗಲೀಗ ನನಗೆ ಪತಿಯ ಭಾಗ್ಯ ದೊರೆಯಲೇ ಬೇಕು ಅನುತೇಳಿ
ಆದಿಸತಿ ಗುರುವು
ಮಾ ವಿಷ್ಣು ಪರಮಾತುಮನ ಪಾದಕೆ ಶರಣು ಮಾಡಿ

ನೀವು ಮಾಡಿದಂತಹ ನಾಂಟ್ಯವ
ನಾನು ಮಾಡುತೀನಿ ಎಂದರಂತೆ || ಸಿದ್ಧಯ್ಯ ||

ನೀವು ಮಾಡುವಂತ ನಾಂಟ್ಯ
ನಾನಾಗೆ ಗುರುವೇ
ಮಾಡುತೀನಿ ಎಂತಾ
ಒಪ್ಪಿದಳಾ ತಾಯಿ
ಅವರು ನಾಂಟ್ಯಕೆ ಗುರುವು
ಅವರು ನಾಂಟ್ಯಕೆ ಗುರುವು
ಅವರು ನಿಂತರಲ್ಲ ಪರಮಾತ್ಮ || ಸಿದ್ಧಯ್ಯ ||

ಆಗಲೀಗಾ ಜಗಂಜ್ಯೋತಿ
ಧರೆಗೆ ದೊಡ್ಡವರ ನೆನಕಂಡು
ಮಾ ವಿಷ್ಣು ಪರಮಾತುಮ
ಆದಿ ಶಕ್ತಿ ಮಾತಿಗಾಗಿ
ಅವರು ನಲುದು ನಾಂಟ್ಯಾವಾಡುತ್ತಾರೆ
ಕುಣುತಾವ ಕುಣಿಯುತ್ತಾರೆ || ಸಿದ್ಧಯ್ಯ ||

ಅಯ್ಯ ನಂಟ್ಯಾವನ್ನೆ ಮಾಡಿದಾ
ಮಾ ವಿಷ್ಣು ಪರಮಾತ್ಮನ
ಕಣ್ಣಿಂದ ನೋಡಿಕಂಡು
ಆದಿಶಕ್ತಿ ಗುರುವು
ಅವರ ಮೆಚ್ಚಿದ ನಾಂಟ್ಯಾವ ತಾಯಿ
ತಾನಾಗಿ ಮಾಡುತಾಳೆ || ಸಿದ್ಧಯ್ಯ ||

ಮೆಚ್ಚಿದಂತ ನಾಂಟ್ಯಗಳನೆ ದೇವಾs
ಆಗಾಲಿಗಾ ಮಾ ವಿಷ್ಣು ಪರಮಾತುಮರು ಆಡುತಾರೆ
ಆದಿಶಕ್ತಿ ಕೂಡ ನಾಂಟ್ಯ ಮಾಡುವಾಗ
ನಾಂಟ್ಯ ಮಾಡಿ ಮಾಡಿ
ಅವಳು ಮಂಕು ಮರುಳಾದಂತೆ
ದಿಂಕುದಿರುಳಾದಳಂತೆ || ಸಿದ್ಧಯ್ಯ ||

ಮಂಕು ಮರುಳಾಗಿ ದಿಂಕುದಿರುಳಾಗಿ ದೇವಾs
ನಾಂಟ್ಯವನ್ನೆ ಮಾಡ್ಸಿ ಮಾಡ್ಸಿ
ಮಾ ವಿಷ್ಣು ಪರಮಾತುಮ
ಆದಿಶಕ್ತಿ ಗುರುವು
ಮನಸ್ಸು ಕೆಟ್ಟೋಯ್ತು
ನಾಂಟ್ಯವನ್ನೆ ಮಾಡಿ ಮಾಡಿ
ಆಯಾಸ ಬಂದೋಯ್ತು
ಆಯಾಸ ಬಂದಂಥಾ ಕಾಲದಲ್ಲಿ
ಮಾ ವಿಷ್ಣು ಪರಮಾತುಮ
ಈ ತಾಯಿ ಆದಿ ಸಕುತಿ ಕೊಲ್ಲು ಬೇಕಾದುರೆ
ಇದೇ ಸಮಯ ಸರಿ ಅಂತ ಹೇಳಿ

ಅಯ್ಯ ತನ್ನವೆರಡು ಕೈ ತಗುದು
ಅವರು ತನ್ನ ತಲೆಗೆ ಇಟ್ಟಾರಲ್ಲಾ || ಸಿದ್ಧಯ್ಯ ||

ಗುರುವೇ ತನ್ನವೆರಡು ಕೈಯ
ತನ್ನ ತಲೆಯ ಮೇಲೆ
ಇಟ್ಟುಕಂಡ ನನ ಗುರುವು
ಮಾ ವಿಷ್ಣು ಮರಮಾತುಮ
ಅಯ್ಯ ಕೈ ಮಾಡಿ ಕಂದಾ
ಮಾ ವಿಷ್ಣು ಗುರುವು
ಕಣ್ಣಿಂದ ನೋಡಿ ಕಂದು
ಆದಿಶಕ್ತಿಯವರು
ಅವಳು ತನ್ನವೆರಡು ಕೈಯ ತಗುದು
ತನ್ನ ತಲೆಗೆ ಇಟ್ಟಳಂತೆ || ಸಿದ್ಧಯ್ಯ ||

ಮಾ ವಿಷ್ಣು ಪರಮಾತುಮ
ತನ್ನ ಅಂಗೈ ಹಸ್ತ ತಗುದು ತನ್ನ ತಲೆಮ್ಯಾಲೆ ಮಡುಗಿದ್ರು
ಆಗಾಲಿಗಾ ಮಾವಿಷ್ಣು ಕೈಲಿ ಉರಿ ಹಸ್ತ ಇರಲಿಲ್ಲಾ
ಆದಿಸತಿ ಗುರುವು
ಉರಿ ಹಸ್ತ ಇತ್ತು
ತನ್ನ ಉರಿ ಹಸ್ತ ತಗುದು
ತನ್ನ ನೆತ್ತಿಮ್ಯಾಲೆ ಮಡಿಕಂಡು

ಅವಳು ಧಗ ಧಗನೆ ಕತ್ತಳಂತೆ
ಧಿಗಿ ಧಿಗಿನೆ ಉರಿದಳಂತೆ || ಸಿದ್ಧಯ್ಯ ||

ಧಗ ಧಗನೆ ಕತ್ತಿ ದೇವಾs
ಧಿಗ ಧಿಗನೆ ಉರಿದು ಗುರುವು
ಸುಟ್ಟು ಬೂದಿಯಾದ ಕಾಲದಲ್ಲಿ ಗುರುದೇವಾ

ನಾನು ಪಡೆದಂತ ತಾಯಿಯನ್ನು
ಕೊಂದೆ ಬುಟ್ಟೆ ಎಂದರಂತೆ || ಸಿದ್ಧಯ್ಯ ||

ಗುರುವೇ ಕರುಮದ ಮಾತುs
ದೋಸುದಾ ಮಾತು
ಪಾಪದ ಮಾತಾ
ಆಡಿದ ತಾಯಾ ನಾ
ಕೊಂದುಬುಟ್ಟೆ ಅಂತ ಹೇಳಿ
ಅವರು ಕೈ ಎತ್ತಿ ಮುಗಿದುಕಂಡು
ಕಿಲೀ ಕಿಲೀನೆ ನಗುವರಲ್ಲಾ || ಸಿದ್ಧಯ್ಯ ||

ಈ ಕೆಟ್ಟ ತಾಯ ಹೊಟ್ಟೆ ಒಳಗೆ ನಾವು ಹುಟ್ಟಬಹುದಾ
ಈಗಲೀಗಾ ಈ ಕೆಟ್ಟ ತಾಯಿ
ಪಡೆದ ಮಗ ಎನ್ನುದ ತಿಳಿದು
ಕೆಟ್ಟ ವಾರುತೇ ಹೇಳಬಹುದಾ
ಈ ಕೆಟ್ಟ ವಾರುತೆ ಹೇಳಿದಾ ತಾಯ
ಸುಟ್ಟಿ ಭಸ್ಮ ಮಾಡಿಬುಟ್ಟಿ ಅಂತ ಹೇಳಿ
ಮಾ ವಿಷ್ಣು ಪರಮಾತುಮ
ಉರಿದು ಬೆಂದೋಯ್ತಾ ಇರುವಂತ
ಆದಿಸತಿ ಮುಖ ನೋಡಿಕಂಡು
ಶಿರಭಾಗಿ ನಿಂತುದುರು

ನನ್ನ ಪರಶಿವಾ ಬಂದವರೇ
ನನ್ನ ಬ್ರಹ್ಮದೇವಾ ಬಂದವರೇ
ಅಯ್ಯ ಸುಟ್ಟು ಬೇಯುವ ತಾಯಿಯ
ಕಣ್ಣಾರೆ ನೋಡುತಾರೆ || ಸಿದ್ಧಯ್ಯ ||

ಗುರುವೆ ಸುಟ್ಟುಬೇಯುವ
ಆದಿಸತಿಯನ್ನು
ಮೂರು ಮೂರಿತಿಗಳು
ಕಣ್ಣಾರೇ ನೋಡುತಾ
ಅವರು ಗುರುವಿನ ಬಳಿಗೆ ಸ್ವಾಮಿ
ಓಡಿ ಓಡಿ ಬಂದಾರಂತೆ || ಸಿದ್ಧಯ್ಯ ||
ನನ್ನ ಧರೆಗೆ ದಡ್ಡೋರಾ ಬಳಿಗೆ
ಓಡಿ ಓಡಿ ಬಂದಾರಲ್ಲಾ || ಸಿದ್ಧಯ್ಯ ||

ಮೂರು ಮೂರುತಿಗಳು ದೇವಾs
ಪರಂಜ್ಯೋತಿಯವರ ಬಳಿಗೆ ಓಡೋಡಿ ಬಂದು

ನನ್ನ ಗುರುವಿನ ಪಾದಕೆ ಗುರುವೆ
ಬಾಗಿ ಶರಣ ಮಾಡುತಾರೆ || ಸಿದ್ಧಯ್ಯ ||

ನನ್ನ ಪರಂಜ್ಯೋತಿಯವರಿಗೆ
ಕೈ ಎತ್ತಿ ಮುಗಿತಾರೆ || ಸಿದ್ಧಯ್ಯ ||

ಗುರುದೇವಾ ಜಗಂಜ್ಯೋತಿ
ಈಗಾಲೀಗಾ ನನಗೆ
ಹುಟ್ಟುದ ತಾಯಮ್ಮನಾ
ಈ ಮಾ ವಿಷ್ಣು ಪರಮಾತುಮ
ಕೊಂದು ಬಿಟ್ಟರು ಸ್ವಾಮಿ ಎಂದುರು
ಎನರಪ್ಪ ನನ ಕಂದಾ ಶಿಸುಮಕ್ಕಳೇ
ಹುಟ್ಟುದಾ ತಾಯಿನೆ ಕೊಂದು ಬಿಟ್ಟೊ ಅಂದರೆ ಏನು ಕಂದಾ
ಹಾಗಲ್ಲ ಸ್ವಾಮಿ ನಮ್ಮ ಪಡದಾ ತಾಯಿ
ಸಾಕಿದಂತ ತಾಯಿ ಎಂದರೇ ಅಂತಿಂತಾ ತಾಯಿಯಲ್ಲ
ಹುಟ್ಟುಟ್ಟದ ಮಕ್ಕಳಗೆಲ್ಲ ಕೆಟ್ಟ ವಾರುತ ಹೇಳಿದಂತಾ ತಾಯ
ಈಗಲೀಗಾ ಮಾ ವಿಷ್ಣು ಕೂಡಾ
ಕೊಂದಾಕಿಬುಟ್ಟುರು ಸ್ವಾಮಿ ಎಂದುರು
ಕೇಳಿರಪ್ಪ ಯಾವ ಸ್ಥಳ ? ಯಾವ ಭೂಮಿ
ಒಳಗೆ ಕೊಂದು ಬುಟ್ಟಿದ್ದಿರಿ ಎನುತಾ ಕರಕಂಡು
ಪರಂಜ್ಯೋತಿಯವರು ನಮ್ಮ ಧರೆಗೆ ದೊಡ್ಡವರು

ಗುರುವೆ ಆದಿಸತಿ ಸತ್ತ ಸ್ಥಳಕೆ
ಬಂದುರು ದೇವಾ
ಜಗಂಜ್ಯೋತಿ ಪಾತಾಳಜ್ಯೋತಿಯವರು
ತಾವಾಗೆ ಬಂದು ಗುರುವು

ಅವರು ಏನು ಮಾತೊಂದಾಡುತಾರೆ
ನನ್ನ ಹೆತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಎನಿರಪ್ಪ ನನ ಕಂದಾs
ಈ ಮಗಳಿಂದಾ ಲೋಕ ಕಟ್ಟುಬೇಕು
ಈ ರಾಜ್ಯ ಪಡಿಬೇಕು ಎನುತೇಳಿ
ಈ ಆದಿಸತಿ ಎನುವಂತ ಮಗಳ
ಅಂಗೈಮೇಲೆ ಪಡೆದಿದ್ದ ಕಂದಾ
ಈಗಲೀಗಾ ನಾನು ಪಡೆದಾ ಮಗಳ
ಕೊಂದುಬುಟ್ಟುರಲ್ಲೊ ಕಂದಾ ಎನುತೇಳಿ
ಜಗಂಜ್ಯೋತಿ ಧರೆಗೆ ದೊಡ್ಡವರು
ಮನದಲ್ಲೆ ಚಿಂತೆ ಮಾಡುತ್ತಿದ್ದವರು
ಗುರುದೇವಾs
ಇಂತಹಾ ಸಾದು ಸತ್ಯಪುರುಷರು ನೀವಾಗಿ
ಪರಂಜ್ಯೋತಿ ಅಂತ ಹೇಳಿ ನಾಮಕರಣನೇ ಪಡೆದು
ಆಕಾಶ ಭೂಮಿನೇ ಪಡೆದು
ಉತ್ತೇಶ್ವರ ಮಹೇಸ್ಪರನೇ ಪಡೆದು
ಈಗಾಲೀಗಾ ಗುರುವೇ ಗುರು ತಂದೆ
ಈ ಧರೆ ತಕಂಡು ಬಂದುದಕ್ಕೆ
ಧರೆಗೆ ದೊಡ್ಡವರು ಎಂತಹೇಳಿ
ನಾಮಕರಣನೇ ಪಡೆಕಂಡು
ಇಂತಹ ಕೆಟ್ಟ ಮಗಳ ನೀವು ಪಡಿಬಹುದಾ ಗುರುವು
ನೀವು ಪಡೆದ ಮಗಳಿಂದಾ

ಕೆಟ್ಟವಾರುತೆಯ ಗುರುವು ನಮ್ಮ
ಕರುಣದಲಿ ಕೇಳಬಹುದಾ || ಸಿದ್ಧಯ್ಯ ||