ನೀನು ಮಾಡಿರುವ ಗೊಂಬೆ
ಈ ಮೂರುಮಂದಿಗಳೂ
ಮೂರು ಜನಗಳ ಕೈಲೂ ನೀ ಕೊಡಬೇಡ ನನ್ನ ಕಂದ
ಅಮ್ಮ ನನ್ನ ಕೈಯಲು ಕಂದಾ
ನೀ ಕೊಡಬೇಡ ನನ್ನ ಮಗಳೇ

ನೀನು ಮಾಡಿರುವಂತ ಗುರು ಗೊಂಬೆ ತಗದು
ನನ್ನ ಭೂಮಿ ಮ್ಯಾಲೇ ಮಡಗು ಕಂದಾ || ಸಿದ್ಧಯ್ಯ ||

ನೀನು ಮಾಡಿರುವಂತ ಗೊಂಬೆ ತಗದುs
ಭೂಮಿ ಮ್ಯಾಲೇ ಮಡಗು ಕಂದಾ
ಇವರು ಮೂರು ಜನ ಮೂರ್ತುಗಳ
ಕೈಲಿ ಕೊಡಬೇಡ ಮಗಳೇ
ನನ್ನ ಕೈಲು ಕೊಡಬೇಡ ಮಗಳೇ
ನನ್ನ ಕೈಲು ಕೊಡಬೇಡ ಕಂದಾ
ನಾನು ಮಾಡಿರ್ತಕ್ಕಂತ ಭೂಮಿ ಮ್ಯಾಲೇ
ಮಡಗವ್ವ ಅಂತೇಳೀ
ಆ ಪರಂಜ್ಯೋತಿಯವರು ಹೇಳುವಾಗ
ಗುರುವ ಮಾತಿಗೆ
ನಾನು ಪ್ರತಿ ಮಾತು ಹೇಳಕಾಗುದಿಲ್ಲ
ಉತ್ತರದ ಮಾತ ಹೇಳುವುದಕ್ಕಾಗುದಿಲ್ಲ
ಹಾಗಂದು ವಿಧಿಯಮ್ಮ
ಅಯ್ಯ, ಗುರುವಿನ ಮಾತನ್ನೆ ಕೇಳಿ ಕೇಳಿಕ್ಕಂಡು ನನ್ನ ತಾಯಿ
ಅವರು ಕಣ್ಣೀರ ಸುರಸುತ್ತಾ ದುಃಖವ ಮಾಡುತ್ತ
ಅವರ ಸೆರಗನಲ್ಲಿ ಮರೆಯಾಗಿ ಇದ್ದಂತಹ ಗೊಂಬೆ ತಗದು
ಭೂಮಿ ಮ್ಯಾಲೇ ಮಡುಗುಬಿಟ್ಟು

ಧರೆಗೆ ದೊಡ್ಡವರ್ಗೆ ದೇವ
ಕೈಯ್ಯೆತ್ತಿ ಮುಗುದರಂತೇ || ಸಿದ್ಧಯ್ಯ ||

ಧರೆಗೆ ದೊಡ್ಡವರ್ಗೆ ದೇವ
ಕೈಯ್ಯೆತ್ತಿ ಮುಗಿವಾಗ ಗುರುವು
ಬಲದಲ್ಲಿ ಸರಸ್ವತಿ ಬಂದು ನಿಂತ್ಕುಂಡರು
ಎಡದಲ್ಲಿ ಪಾರ್ವತಿ ಬಂದು ನಿಂತ್ಕುಂಡರು
ಪಾರ್ವತಿ ವಿಧಿಯಮ್ಮನ ಕಣ್ಣಿಂದ ನೋಡುಬಿಟ್ಟು ಗುರುವು
ಕೇಳಪ್ಪ ಬ್ರಹ್ಮದೇವ
ಈ ವಿಧಿಯಮ್ಮ ಮಾಡಿರಕ್ತಂತ ಗೊಂಬೇ ಇದಯ ಕಂದ
ಹೌದು ಗುರುದೇವ
ನೀನು ಯಾವ ರೀತಿ ಸೊಲ್ಲು ತುಂಬದೇ
ನಿಮ್ಮತ್ರ ವಿದ್ಯೇ ಬುದ್ಧೀ ಕಲಿತಿರುವುದರಿಂದ
ಈ ಕಾಲದಜ್ಞಾನದ ಬುಕ್ಕು
ಕಣ್ಣಿಂದ ನೋಡಕೊಂಡು
ಈಗಲೀಗ ನೀವು ಕೊಟ್ಟಂತಹ ಮಾಯ್ದ ಕಪ್ಪು
ಮಲೆಯಾಳದ ಬೂದಿ
ಈ ಕಾಲದ ಜ್ಞಾನದ ಜೀವತಗದು
ಈ ಗೊಂಬೇಗೆ ಕೂಡದೀ
ಮಾಡಿ ಮಡಿಗಿದಂತ ಗೊಂಬೆ ಮೇಲಕ್ಕೆ ಎದ್ದೇಳ್ತು

ನಾನು ಮಾತಾಡ್ಡಂಗೇ
ಅದುವೇ ಮಾತಾಡುತಾದೇ || ಸಿದ್ಧಯ್ಯ ||

ಆಯ್ತು ಕಾಣಪ್ಪ ನಿನ್ನ ಮಾತನ್ನು ನೆಂಬದೀ
ಈಗಲೀಗ ಈ ಗೊಂಬೇ ಸಾದೃಷ್ಟ
ನಾನು ನೋಡಬೇಕಾದರೇ
ಈಗ ವಿಧಿಯಮ್ಮ ಗೊಂಬೆ ತಗದು
ಭೂಮಿಗೇ ಬುಟ್ಟವರೇ
ನೀನು ಜೀವ ತುಂಬು
ಈಗಲೀಗ ನಿನ್ನ ಸತ್ಯ ಸಾಹಸ
ಕಣ್ಣಿಂದ ನೋಡ್ತಿನೀ ಮಗನೇ ಎಂದರು
ಆಗ ಬ್ರಹ್ಮ ದೇವ
ಜಗತ್ತು ಗುರುಗಳ ಪಾದ ಬೇಡುತ್ತಾ
ಈ ಮೂರುಮಂದಿ ಮೂರುತಿಗಳ
ಗ್ಯಾನ ಮಾಡಿಕಂಡು
ಅದಕ್ಕೆ ಜೀವ ಕೊಟ್ಟರಂತೇ
ಮೊದಲು ಯಾವ ರೀತಿ
ಬ್ರಹ್ಮದೇವನ ಮುಂಭಾಗದಲ್ಲಿ ಎದ್ದು ನಿಂತುಕ್ಕಂಡು
ನಾಟ್ಯ ಆಡುಕಂಡು
ವಂದಗೇ ಮಾತಾಡುತ್ತಿತ್ತು
ಅದೇ ರೀತಿ ಮಾತಾಡುತ್ತಿತ್ತು
ವಿಷ್ಣು, ಈಶ್ವರ, ಬ್ರಹ್ಮ ಮೂರು ಮಂದಿ ಮೂರ್ತುಗಳು

ಈ ಗೊಂಬೇ ಆಟ ನೋಡಿಕಂಡು
ಕಿಲೀಕಿಲೀನೆ ನಗದರಲ್ಲ || ಸಿದ್ಧಯ್ಯ ||

ಅಯ್ಯ ನಗವಂತ ಗುರುವು
ಮೂರು ಮಂದಿ ಮೂರುಗಳ
ಮೂಖವನ್ನೇ ನೋಡುತ್ತ
ಮೂರುಜನ ಸ್ತ್ರೀಯರ
ಮುಖವನ್ನೇ ನೋಡುತ್ತ
ನನ್ನ ದೊರೆಗೇ ದೊಡ್ಡವರು
ಈ ಗೊಂಬೆಯಿಂದ ನಾನು ಒಂದು
ಮನಾಕಾಲ ಕಟ್ಟಬೇಕು || ಸಿದ್ಧಯ್ಯ ||

ಈ ಗೊಂಬೇಯಿಂದ ಗುರುವೇ
ನಾ ಮನಕಾಲ ಕಟ್ಟಬೇಕು
ಈ ಬಾಳಕಾಲ ಗುರುವು
ಈ ಗೊಂಬೇ ಬಳಸಬೇಕು
ಹಾಗಂದು ಗುರುವು ನನ್ನ ಪರಂಜ್ಯೋತಿಯವರು

ಅವರ ಎದೆಯ ಮನ ಕರಗುವಂತೆ
ಬಾಳ ಬುದ್ಧಿ ಹೇಳುತ್ತಾರೆ || ಸಿದ್ಧಯ್ಯ ||

ಈ ಗೊಂಬೇಯಿಂದ ಗುರುವೋs
ನಾನೊಂದು ಮನಕಾಲ ಕಟ್ಟಬೇಕು ಎನ್ನುತೇಳಿ
ಪರಂಜ್ಯೋತಿ ಧರೆಗೆ ದೊಡ್ಡವರು
ಆಗಲೀಗ ಮೂರು ಜನ ಸ್ತ್ರೀಯರು
ಮೂರು ಮಂದಿ ಮೂರ್ತುಗಳ
ಮದ್ಯದಲ್ಲಿ ನಿಂತುಕೊಂಡು ಗುರುವು
ವಿಧಿಯಮ್ಮ
ನೀ ಮಾಡಿರ್ತಕ್ಕಂತ ಗೊಂಬೇ ಎಂದರೇ
ಇದು ನಿನ್ನ ಜಲ್ಮದಂತ ಗೊಂಬೇಯೇ
ಇಲ್ಲವಾದ್ರೇ ನಿಮ್ಮ ಪತಿ ಅಂತಹ ಗೊಂಬೇಯವ್ವ ಎಂದುರು
ಗುರುದೇವ
ನಮ್ಮ ಪತಿಯಂತ ಗೊಂಬೇಯ ನಾನು ಮಾಡಿಲ್ಲ
ನನ್ನಂತಹ ಸ್ತ್ರೀ ಗೊಂಬೇ ಮಾಡಿವ್ನೀ ಸ್ವಾಮಿ
ಆಗಲೀ ಮಗಳೇ
ಈ ಗೊಂಬೇಯಂತದನ್ನೇ ನೀನು ಮಾಡ್ಕಂಡಿದೇಯೇ
ನಿನಗೆ ಬೇಕಾಗಿರ್ತಕ್ಕಂತದ್ದು ಹೆಣ್ಣು ಗೊಂಬೇ
ನಿನ್ನ ಪತಿಗೇ ಬೇಕಾಗಿರ್ತಕ್ಕಂತದ್ದು ಒಂದು ಗಂಡು ಗೊಂಬೆ

ಒಂದು ಗಂಡು ಗೊಂಬೇ ಮಾಡು ಮಗಳೇ
ಕಣ್ಣಾರೆ ನೋಡಿತೀನಿ || ಸಿದ್ಧಯ್ಯ ||

ಅಯ್ಯೋ ಗಂಡು ರೂಪೀನ ಗೊಂಬೇ
ನಾ ಮಾಡುತೀನಿ ಅಂತೇಳಿ
ತಾಯಿ ವಿಧಿಯಮ್ಮ
ಅವಳು ಭೂಮಿ ಮೊಣ್ಣ ತಗದಳಂತೇ
ಗಂಡು ಗೊಂಬೆ ಮಾಡುತಾಳೇ || ಸಿದ್ಧಯ್ಯ ||

ಈಗಲೀಗ ಗುರುವೇ ಗುರುದೇವs
ಭೂಮಿ ಮಣ್ಣ ತಗದು
ಗಂಡು ಗೊಂಬೇಯ ಕೂಡ ಮಾಡಿ
ಧರೆಗೇ ದೊಡ್ಡವರ ಮುಂಭಾಗದಲ್ಲಿ ಮಡಗುದಳು
ಆಗ ಗುರುವು ಬ್ರಹ್ಮದೇವರ ಕರೆದು
ಕೇಳಪ್ಪ ಬ್ರಹ್ಮದೇವ
ಅದು ಹೆಣ್ಣು ಗೊಂಬೇಕಣಯ್ಯ
ನಿಮ್ಮ ಮಡದಿ ಅಂತಹದ್ದು
ಇದು ಗಂಡು ಗೊಂಬೇ
ನಿಮ್ಮ ಮೂರು ಮಂದಿ ಮೂರ್ತುಗಳಂತಹದ್ದು
ಆ ಹೆಣ್ಣು ಗೊಂಬೆಗೆ ಜೀವ ತುಂಬಿದ್ದೀಯಲ್ಲ
ಅದೇ ರೀತಿಯಾಗಿ ಈ ಗಂಡು ಗೊಂಬೆಗೂ ಜೀವ
ತುಂಬಪ್ಪ ಅಂದ್ರು

ಆ ಗಂಡು ಗೊಂಬೇಗೆ ಗರುವೆ
ಜೀವವನ್ನೇ ಕೊಟ್ಟರಂತೆ || ಸಿದ್ಧಯ್ಯ ||

ಗಂಡು ಗೊಂಬೇಗೆ ಗುರುವೋs
ಜೀವ ಕೊಟ್ಟರು ಗುರುದೇವ
ಆ ಗಂಡು ಗೊಂಬೇ ಆಗಲೀಗ
ಮಾಡಿ ಮಡಗೀದಂತಹ ಗೊಂಬೇ
ಈ ಬ್ರಹ್ಮದೇವ ಜೀವಕೊಟ್ಟಂತಹ ಕಾಲದಲ್ಲೀ
ಆಗಲೀಗ ಗುರುವೇ ಗುರುದೇವ

ಆಟು ಪಾಠವ ಆಡುತಾದೆ
ಒಂದಗೆ ಮಾತ ಹೇಳುತಾರೆ || ಸಿದ್ಧಯ್ಯ ||

ಅಯ್ಯ ಒಂದಿಗೇ ನನ್ನ ಗುರುವೇ
ಮಾತನ್ನೇ ಆಡುತ್ತಾದೇ
ನನ್ನ ದರೆಗೇ ದೊಡ್ಡವರು ಮುಖವ
ಮಟಮಟನೆ ನೋಡುತ್ತಾರೇ
ಈ ಮೂರು ಮಂದಿಗಳ ಮುಖವ
ಕಣ್ಣಾರ ನೋಡುತ್ತದೇ
ತನ್ನ ಪಡದಂತಹ ಗುರುಜನುವ
ಕೈಯೆತ್ತಿ ಮುಗಿಯುತ್ತದೆ || ಸಿದ್ಧಯ್ಯ ||

ಗುರುವೇ ಮೂರು ಮಂದಿ ಮೂರ್ತುಗಳಿಗುವೇ
ಕೈಯೆತ್ತಿ ಮುಗುದು
ಧರೆಗೇ ದೊಡ್ಡವರಿಗೇ ಭಾಗ್ಯ ಶರಣು ಮಾಡಿ

ಗುರುವೇ ನಾನು ಹುಟ್ಟುಲಾಗಿ ನನಗೆ
ಗುರು ದರ್ಶನ ಆಗಿತಲ್ಲ || ಸಿದ್ಧಯ್ಯ ||

ಈವಾಗ ನಮ್ಮ ಪಡೆದಿರಿ ಗುರುವೋ
ನಿಮ್ಮ ನಾಲ್ವರ ಮೂರ್ತಿಗಳ
ದರ್ಶನ ನಮಗಾಯ್ತು ಗುರುವೇ
ಎನುತೇಳಿ ವಿದಿಯಮ್ಮ ಮಾಡಿದಂಥ
ಎರಡು ಗೊಂಬೆಗಳು ಬಂದೋ
ಮೂರು ಮಂದಿ ಮೂರ್ತುಗಳು
ಪಾದಕ್ಕೂ ಕೂಡ ಕೈಯೆತ್ತಿ ಮುಗುದು ಶರಣು ಮಾಡಿ
ಧರೆಗೆ ದೊಡ್ಡವರ ಪಾದಕ್ಕೇ ಕೂಡ
ಶರಣು ಮಾಡಿ ಕೈಯೆತ್ತಿ ಮುಗುದು

ನಮ್ಮಗೇ ಹೆಚ್ಚಿನಾ ದೇವುರು
ನೀವು ಅನ್ನುತೇಳಿ
ಎರಡು ಗೊಂಬೇಗಳು ಗುರುವೇ
ಆಟಪಾಟ ಆಡುತಾವೆ || ಸಿದ್ಧಯ್ಯ ||

ಎರಡು ಗೊಂಬೆಗಳುವೇ ಗುರುವೋ
ಕೈಯೆತ್ತಿ ಮುಗುದು ಗುರುದೇವ
ನಾಲ್ಕು ಜನ ಮೂರ್ತುಗಳ ಮುಂಭಾಗದಲ್ಲಿ
ಆಟಪಾಠ ಆಡುವಾಗ
ಆಡುವಂತ ಗೊಂಬೆಗಳ ಗುರುವು
ಇವರು ಮೂರು ಮಂದಿ ಮೂರ್ತಿಗಳೂ
ಮೂರು ಜನ ಸ್ತ್ರೀಯರು
ಆಗಲೀಗ ಪರಂಜ್ಯೋತಿಯವರು

ಎಲ್ಲ ದೇವಮಾನ್ರು ಕೂಡಿ
ಅವರು ಗೊಂಬೆಯಾಟ ನೋಡುತ್ತಾವ್‌ರೆ || ಸಿದ್ಧಯ್ಯ ||

ಗೊಂಬೇ ಆಟಗಲ ಗುರುವೋ
ಎಲ್ಲಾ ದೇವ ದೇವಮಾನರು ಸೇರಿ
ಕಣ್ಣಾರ ನೋಡುವಾಗ
ಆಗ ಧರೆಗೆ ದೊಡ್ಡವರು ಹೇಳುತಾರೆ
ಏನಮ್ಮ ವಿಧಿಯಮ್ಮ
ಇದು ಎರಡೆ ಗೊಂಬೆ ಮಾಡ್ತಿಯೋ
ಇಲ್ಲವಾದ್ರೇ ನಿನ್ನ ಬುದ್ಧಿಶಕ್ತಿ ಒಳಗೆ
ಯಾವ ಯಾವ ಗೊಂಬೆ ಮಾಡಬಲ್ಲೆ ಕಂದ ಅಂದರು
ಗುರುದೇವ
ಕಣ್ಣಿಂದ ನೋಡಿದಂಥ ಕಾರ್ಯವ
ಕೈಲೇ ಮಾಡುಬುಡ್ತಿನೀ ಸ್ವಾಮಿ

ನೀವು ಮೆಚ್ಚೀದಂತ ಗೊಂಬೇ
ನಾ ಮಾಡುತ್ತಿನಿ ಎಂದರಲ್ಲಾ || ಸಿದ್ಧಯ್ಯ ||

ಏನಮ್ಮ
ನಾನು ಮೆಚ್ಚೀದಂತಹ
ಗೊಂಬೇಯ ನೀ ಮಾಡೀಯ ಕಂದ?
ಖಂಡಿತವಾಗಿ ಮಾಡ್ತಿನೀ ಗುರುವೇ
ಆಗಲೀಗ ಜಗತ್ತು ಗುರು ಪರಂಜ್ಯೋತಿ ಪಾವನ ಮೂರ್ತಿ
ಧರೆ ತಕ್ಕಂಡು ಬಂದಂತಹ ಧರೆಗೆ ದೊಡ್ಡವರು
ಅವರ ಅಂಗೈನೊಳಗೆ ಬೆತ್ತ ಇತ್ತಂತೆ
ಅಮ್ಮ
ನಾ ಹಿಡಿದಿವುನಲ್ಲ ಈ ಅಂಗೈನಂತ ಬೆತ್ತವ
ಈಗಲೀಗ ನೀನು ಮಾಡಿ ನನ್ನ ಕಂದ
ಈ ಭೂಮಿಗೆ ತಂದು ಮಡ್ಗಮ್ಮ ಅಂದ್ರು
ಭೂಮಿ ಮೊಣ್ಣ ತಗದು
ಈಗಲೀಗ ಜಗತ್ತು ಗುರುಗಳ ಬೆತ್ತವನ್ನೇ ಕಣ್ಣಿಂದ ನೋಡುಬುಟ್ಟು
ಆ ಬೆತ್ತದಂತಹ ಮೊಣ್ಣಿನ ಗೊಂಬೇ ಮಾಡಿ
ಭೂಮಿಗೇ ಮಡಗಿದರಂತೆ
ಆಗಲೀಗ ಗುರುವೇ ಗುರುದೇವ
ಬ್ರಹ್ಮದೇವರ ಕರದು
ಆಗಲೀಗ ಗುರುವೇ ಗುರುಪಾದವೇ
ಜೀವ ತುಂಬಪ್ಪ ಮಗನೇ ಎಂದರು
ಯಾವಾಗ ಮೊಣ್ಣಿನ ಬೆತ್ತಕ್ಕೆ
ಜೀವ ತುಂಬಿದ್ರೋ

ಅದು ನಾಗರಾವು ಆಗಿ ಗುರುವೇ
ಭೂಮಿಲೀ ಒರಳಾಡುತಾದೆ || ಸಿದ್ಧಯ್ಯ ||

ನಾಗರಾವಾಗಿ ಗುರುವುs
ಭೂಮಿಲೀ ಒರಳಾಡಿದ್ರು
ಒರಳಾಡುವಾಗ ಗುರುದೇವ
ಮೂರಮಂದಿ ಮೂರ್ತಿಗಳು ಕಣ್ಣಿಂದ ನೋಡುದ್ರು
ಸ್ವಾಮಿ
ನಿಮ್ಮ ಕೈಲೀರ್ತಕ್ಕಂತದ್ದು ಏನು
ಕೇಳಿರಪ್ಪ
ನನ್ನ ಅಂಗೈಲಿರ್ತಕ್ಕಂತದ್ದು ನಾಗಬೆತ್ತ ಕಂಡ್ರೋ
ಈ ನಾಗಬೆತ್ತದಂತ ಆ ಮೊಣ್ಣಿನ ಗೊಂಬೆ ಮಾಡಿ
ಭೂಮಿಗೆ ಮಡಗಿದ್ರೆ
ಅದಕ್ಕೆ ಜೀವಕೊಡು ಹೊತ್ತಿಗೆ
ನನ್ನ ಕೈಲಿರ್ತಕ್ಕಂತದ್ದು
ಜೀವದ ಬೆತ್ತ ಕಣ್ರಪ್ಪ
ಈಗಲೀಗ ಇದು ಕೂಡ ನೀನಗೇ
ಒಡವೆ ಕಣಪ್ಪ ಅಂತ ಹೇಳಿ
ಒರಳಾಡುವಂತ ನಾಗರಾವು ತಗದು

ನನ್ನ ಮುಕ್ಕಣ್ಣ ಮಲ್ಲಯ್ಯನಿಗೆ
ಕೊರಳಿಗೆ ಧರಿಸುತ್ತಾರೆ || ಸಿದ್ಧಯ್ಯ ||

ಕೇಳಪ್ಪ, ಈಗಲೀಗ ಸರ್ಪ ಭೂಷಣದಿಂದ
ಈಗಲೀಗ ನಿನಗೆ ಕಂದ ವಿಷಪಾನವೇ ಉಂಟಾಗಲೀ ಮಗನೇ
ಹಾವಿನ ವಿಷ ನಿನಗೆ ಅಮೃತವಾಗಲೀ
ನಿನ್ನ ವಿಷ ಹಾವುಗೇ ಅಮೃತವಾಗಲೀ

ನೀನು ಹುಟ್ಟಿ ಕಂದ
ನೀ ಬಾಳು ತನಕ ಕಂದ
ಈ ಹಾವಿನಾ ವಿಷದಾ ಒಳಗೆ ಬಾಳಪ್ಪ
ನನ್ನಾ ಮಗನೇ || ಸಿದ್ಧಯ್ಯ ||

ನನ್ನ ಮುಕ್ಕಣ್ಣ ಮಲ್ಲಯ್ಯನಿಗೆ
ಹರಸಿ ವರವ ಕೊಟ್ಟರಲ್ಲ || ಸಿದ್ಧಯ್ಯ ||

ಈ ಹಾವಿನ ವಿಷದಿಂದ ಕಂದಾs
ನಿನಗೇ ಆಹಾರವಾಗಬೇಕು
ಈ ವಿಧಿಯಮ್ಮ ಪಡೆದಿರ್ತಕ್ಕಂತ
ಈ ಗೊಂಬೆಗಳೂಗೆಲ್ಲ
ನೀನೇ ಆಹಾರ ಕೊಡಬೇಕು ಕಂದ
ಕೇಳವ್ವ ವಿದಿಯಮ್ಮ
ನಿನ್ನಾತ್ಮದಲ್ಲಿ ಏನೇನು ಉಂಟಾಯ್ತದೋ
ಇದೇ ರೀತಿ ನಾನು ಪಡೆದ ಭೂಮಿ ಮಣ್ಣಿನಲ್ಲಿ ಮಾಡಿ
ಈ ಭೂಲೋಕಕ್ಕೆಲ್ಲ ಬುಟ್ಟುಬುಡು ಕಂದ
ಈಗಲೀಗ ಎಲ್ಲಾ ಪ್ರಾಣಿಗಳಿಗೂ ಬ್ರಹ್ಮದೇವ
ಈ ವಿಧಿಯಮ್ಮ ಮಾಡಿದ ಪ್ರಾಣಿಗಳೊಳಗೆಲ್ಲ
ನೀನು ವರ ಕೊಟ್ಟು ಜೀವ ತುಂಬಿದ್ದು ಸರಿ

ಇದರ ಆಟ ಪಾಠವನ್ನೆಲ್ಲ ನಾನು
ಕಣ್ಣಾರ ನೋಡುತ್ತೀನಿ || ಸಿದ್ಧಯ್ಯ ||

ಅಯ್ಯಾ ಬೇಕು ಬೇಕಾದಂತಹ
ಪ್ರಾಣಿಗಳ ಗುರುವೇ ವಿಧಿಯಮ್ಮ ಮಾಡುತ್ತಾರೇ
ಅಯ್ಯಾ, ವಿಧಿಯಮ್ಮ ಮಾಡಿರುವ ಗೊಂಬೇಗಳುಗಲ್ಲ
ಬ್ರಹ್ಮದೇವರು ಜೀವವ ಕೊಡುತ್ತಾರೆ
ಅವರು ಜೀವ ಕೊಟ್ಟ ಗೊಂಬೆಗಳ
ಕಣ್ಣಾರ ನೋಡುತಾರೆ || ಸಿದ್ಧಯ್ಯ ||

ಅಯ್ಯಾ ನೂರಾರು ಹೆಣ್ಣು ಗೊಂಬೇ
ಮಾಡಿದ ವಿಧಿಯಮ್ಮ
ನೂರಾರು ಗಂಡು ಗೊಂಬೇ
ಮಾಡಿದ ವಿಧಿಯಮ್ಮ
ಅವರು ನೂರಾರು ಚವಳು
ಮಾಡಿದ ವಿಧಿಯಮ್ಮ
ನೂರಾರು ಸರ್ಪಾನ
ಮಾಡಿದ ವಿಧಿಯಮ್ಮ
ಅವಳು ಹಾವು ಚೇಳು ಮಾಡುತ್ತಾಳೇ
ಅಗಸ ಪಗಸಿ ಗೇಯುತ್ತಾಳೆ || ಸಿದ್ಧಯ್ಯ ||

ಗುರುವೇ ಹಾವು ಚೇಳು
ಗೊದ್ದ ಗೋಸುಂಬೇ
ಅಗಸೀ ಪಗಸೀ
ನೂರೇಂಟು ಜೀವ ಪ್ರಾಣಿಗಳ
ಮಾಡಿದ ವಿಧಿಯಮ್ಮ
ಅವರು ಎಲ್ಲ ಪ್ರಾಣಿಗೂ
ಶಿವನೇ ಸೊಲ್ಲನ್ನೇ ಕೊಟ್ಟರಲ್ಲ || ಸಿದ್ಧಯ್ಯ ||

ಈಗಲೀಗ ಗುರುವೇ ಗುರುದೇವ
ಹಾವು ಚೇವಳು ಗೊದ್ದ ಗೊಸುಂಬೆ
ಅಗಸೀ ಪಗಿಸೀ
ಜೀವಜಂತೀ ಪ್ರಾಣಿಗಳನ್ನೇ
ವಿಧಿಯಮ್ಮ ಮಾಡಿ ಮಾಡಿ ಸಾಕಾದರಂತೆ
ಈಗಲೀಗ ಬ್ರಹ್ಮದೇವ ವಿಧಿಯಮ್ಮ ಮಾಡಿದಂತ
ಗೊಂಬೆಗಳೊಳಗೆಲ್ಲ
ಜೀವ ಕೊಟ್ಟು ಸಾಕಾದರಂತೇ

ಸಾಕಾದ ಕಾಲದಲ್ಲೀ
ಮಂಕು ಮರಳು ಆದರಂತೇ || ಸಿದ್ಧಯ್ಯ ||