ಸಾಕಾಗೀ ಸಾಕಾಗೀ ಗುರುವು
ಆಗಲೀಗ ಜಗತ್ತು ಗುರುಗಳ
ಪಾದ ನೆನೀವಂತ ಕಾಲದಲ್ಲೀ
ಅವರು ನೆನೆದ ಗಳಿಗೆ ಒಳಗೆ ಜಗತ್ತು ಗುರು
ಪಾವನ ಮೂರ್ತಿಯವರು ಪಾತಾಳ ಜ್ಯೋತಿಯವರು ಗುರುವು
ತಾವಾಗಿ ಬಂದರೋ
ಲಕ್ಷ ಕೋಟಿ ಪ್ರಾಣಿಗಳೆಲ್ಲ
ಧರೆಗೇ ದೊಡ್ಡವರ ಸುತ್ತಮುತ್ತ
ಎಲ್ಲ ಪ್ರಾಣಿಗಳು ಒಂದುಗೂಡಿ
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರ್ತಿ
ಮೂರು ಮಂದಿ ಸ್ತ್ರೀಯರು
ಜಗತ್ತು ಗುರು ಪರಂಜ್ಯೋತಿಯವರು
ಎಲ್ಲ ಪ್ರಾಣಿಗಳನ್ನು ಕಣ್ಣಿಂದ ನೋಡಿಕಂಡು

ಬಾಳ ಸಂತೋಷ ಗುರುವೇ
ಪಟ್ಟರು ಮಾಯ್ಕಾರ || ಸಿದ್ಧಯ್ಯ ||

ಬಾಳ ಸಂತೋಷ ಪಡುವಾಗ ಗುರುವು
ವಿಧಿಯಮ್ಮ ಬಂದು
ಜಗತ್ತು ಗುರುಗಳ ಮುಂಭಾಗ ನಿಂತ್ತುಕ್ಕೊಂಡು
ಒಂದು ಮಾತು ಕೇಳದ್ರಂತೆ
ಸ್ವಾಮಿ
ನನಗೆ ಬುದ್ಧಿಗೆ ಬಂದಿರ್ತಕ್ಕಂತ
ಪ್ರಾಣಿಗಳೆಲ್ಲನೂ ಮಾಡಿವ್ನೀ
ಈ ಭೂಲೋಕಕ್ಕೆ ಬುಟ್ಟೀವ್ನೀ
ನಾನು ಮಾಡಿದಂತಹ ಪ್ರಾಣಿಗಳುಗೆಲ್ಲಿ
ನಮ್ಮ ಪತಿ ದೇವರು
ಎಲ್ಲ ಗೊಂಬೆಗಳಗ್ಗೂ ತಪ್ಪದಂತೆ ಜೀವ
ಕೊಟ್ಟವರೇ ಸ್ವಾಮಿ
ನಾನು ಮಾಡಿರುವಂತ ಪ್ರಾಣಿಗಳಲ್ಲಿ
ಯಾವ ಪ್ರಾಣಿ ಹೆಚ್ಚು
ಯಾವ ಪ್ರಾಣಿ ಕಮ್ಮೀ ಗುರುವು

ಈ ಪ್ರಾಣಿಗಳ ಬಗೆಯ ನನಗೆ
ಒಡಾದೇಳಿ ಎಂದಳಂತೆ || ಸಿದ್ಧಯ್ಯ ||

ಗುರುವೇ ವಿಧಿಯಮ್ಮನ ಮಾತು
ಕೇಳಕಂಡು ನನ್ನ ಗುರುವು
ನನ್ನ ಭೂಮಿಯ ಪಡೆದವರು
ಜಗತು ಗುರು ಸ್ವಾಮಿ
ಅವರು ಒಳಗೆ ಚಿಂತೆ ಮಾಡುತ್ತಾರೇ
ಬಾಳ ಯತೆಯ ಪಟ್ಟರಲ್ಲ || ಸಿದ್ಧಯ್ಯ ||

ನೋಡದೆಯಾ ನಾನು ಪಡೆದ ಶಿಶು ಮಗಳೂ
ನನಗೇ ಉತ್ತರದ ಮಾತೂ ಹೇಳಿದ್ರಲ್ಲ
ಈಗ ಈ ವಿಧಿಯಮ್ಮ ಮಾಡಿರ್ತಕ್ಕಂತ ಪ್ರಾಣಿಗಳಲ್ಲಿ
ಈಗಲೀಗ ಯಾವುದು ಹೆಚ್ಚು
ಯಾವುದು ಕಮ್ಮಿ
ಈ ಪ್ರಾಣಿಗಳ ಬಗೆ ಒಡೆದು ಹೇಳಿಕೊಡಿ
ಎಂದು ಕೇಳು ಬುಟ್ರಲ್ಲ
ಎನುತೇಳಿ
ಧರೆಗೆ ದೊಡ್ಡವರು ಕಪಾಲದ ಮ್ಯಾಲೆ ಕೈಮಡಗಿ
ಮೂರು ಗಳಿಗೆ ವ್ಯಥೆಮಾಡಿಕಂಡು ಚಿಂತೆ ಪಟ್ಟಿಕ್ಕಂಡು
ವಿಧಿಯಮ್ಮ
ಈ ಪ್ರಾಣಿಗಳಲ್ಲಿ ಯಾವುದು ಹೆಚ್ಚು
ಯಾವುದು ಕೀಳು ಯಾವುದು ಮೇಲು ಎಂದು ಹೇಳಬಹುದವ್ವ

ಎಲ್ಲ ಪ್ರಾಣಿಗಳೂವೇ ನನಗೆ
ಒಂದೇ ಅಂತ ಅಂದರಲ್ಲ || ಸಿದ್ಧಯ್ಯ ||

ಎಲ್ಲಾ ಪ್ರಾಣಿಗಳೂ ನನಗೆ ಒಂದೇ ಮಗಳೇ
ಕೇಳವ್ವ ವಿಧಿಯಮ್ಮ
ಈ ಪ್ರಾಣಿಗಳಲ್ಲಿ ಹೆಚ್ಚು ಕೀಳು ಯಾವುದೆಂದು ಕೇಳಿದಿಯಲ್ಲ ನನ್ನ
ಕಂದ
ನನ್ನ ಮನಸ್ಸಿಗೆ ಮೆಚ್ಚಿದಂತೆ
ನನ್ನ ಆತ್ಮಕ್ಕೆ ಒಪ್ಪುವಂತೇ
ಎಲ್ಲ ಪ್ರಾಣಿಗಳನ್ನು ಮಾಡಿದಿಯೇ ಕಂದ

ನಾನು ಹುಟ್ಟಿ ಬರುವಾಗ ಕಂದಾ
ನನ್ನ ಮೈಮೇ ಕಂಡವರಿಲ್ಲ
ಮಾಯತ್ಗಾರ ತಿಳಿದವರಿಲ್ಲ ಮಗಳೇ
ಭೂಮಿ ಪಡೆಯುವುದಕ್ಕೂ ಮೊದಲೇ
ಭೂಲೋಕ ಹುಟ್ಟೋದುಕ್ಕೂ ಮೊದಲೇ
ನಾನು ಯಾವ ರೂಪಿನಲ್ಲಿದ್ದನೋ

ಆ ರೂಪಿನ ಪ್ರಾಣಿ ನೀನು
ಇನ್ನುವೇ ಪಡೆದೆಯಿಲ್ಲ || ಸಿದ್ಧಯ್ಯ ||

ಅವ್ವ ಅರೂಪುನ ಪ್ರಾಣಿ
ಯಾಕ್ಕವ್ವ ಪಡೆಲಿಲ್ಲ
ಅವ್ವ ಆ ರೂಪಿನ ಪ್ರಾಣಿ
ಒಂದುವೇ ಇಲ್ಲಿಲ್ಲ
ಅವ್ವ ನನ್ನ ರೂಪಿನ ಪ್ರಾಣಿ
ನೀನು ಪಡೆಯಬೇಕು ಎಂದರಲ್ಲ || ಸಿದ್ಧಯ್ಯ ||

ಅಂತ ರೂಪಿನ ಪ್ರಾಣಿಯ ಕಂದಾ
ನೀನು ಯಾತಕೇ ಪಡಿಲಿಲ್ಲ ಮಗಳೇ
ಇಷ್ಟು ನೂರೆಂಟು ಪ್ರಾಣಿಗಳನ್ನು ನೋಡಿದ್ರು ಕೂಡ
ನಾನು ಭೂಮಿ ಕಟ್ಟುದುಕ್ಕು ಮೊದಲೇ
ಭೂಲೋಕ ಹುಟ್ಟುದುಕ್ಕು ಮೊದಲೇ
ಯಾವ ರೂಪುನಲ್ಲಿ ನಾ ಇದ್ದೀ
ಅಂತ ಪ್ರಾಣಿ ನೀನು ಪಡೆದಿಲ್ಲವಲ್ಲೋ ಮಗಳೇ ಎಂದುರು

ಗುರುದೇವ
ಯಾವ ರೂಪಿನಲ್ಲಿ ಹುಟ್ಟಿದರೀಯೋ
ಯಾವ ರೂಪಿನಲ್ಲಿ ನೀವು ಬೆಳದಿರೀಯೋ
ಯಾವ ರೂಪಿನಲ್ಲಿ ಈ ಭೂಮಿ ಪಡದಿರಿಯೋ
ನಮಗೆ ಗೊತ್ತಿಲ್ಲ ಸ್ವಾಮಿ
ನಮ್ಮ ಪಡದದ್ದೇ ನಮಗೆ ಗೊತ್ತಿಲ್ಲ ಗುರುವು
ಅಪ್ಪ ನಿನ್ನ ರೂಪಿನ ಪ್ರಾಣಿಯ
ನಾನ್ಯೆಂಗೇ ಪಡೆಯಲಪ್ಪ || ಸಿದ್ಧಯ್ಯ ||

ಅಯ್ಯೋ ನಿಮ್ಮ ರೂಪುನ ಪ್ರಾಣಿಯ
ನಾನ್ಯಾಂಗೇ ಪಡೆಯಾಲೀ
ಅಪ್ಪ ನಿಮ್ಮ ರೂಪಾ ಗುರುವು
ನಾ ಎಲ್ಲೊಗಿ ಕಾಣಾಲೀ
ನೀವು ನಿಂತಿರುವ ರೂಪಿನಲ್ಲೇ
ಗೊಂಬೆ ನಾನು ಮಾಡುತೀನಿ || ಸಿದ್ಧಯ್ಯ ||

ನೀವು ಬಂದು ನಮ್ಮ ಮುಂಭಾಗದಲ್ಲಿ ಗುರುವೋs
ಯಾವ ರೂಪುನಲ್ಲಿ ನಿಂತಿದಿರಿಯೋ ಗುರುವೋ
ಆ ರೂಪುನ ಗೊಂಬೇ ಮಾತ್ರ ಮಾಡ್ತಿನಿ ಸ್ವಾಮಿ
ಈ ಭೂಮಿ ಹುಟ್ಟದಕ್ಕೋ ಮೊದಲೇ
ಭೂಲೋಕ ಕಟ್ಟುದಕ್ಕೋ ಮೊದಲೇ
ನಾನು ಹುಟ್ಟುದಕ್ಕೋ ಮೊದಲೇ
ನೀವು ಹುಟ್ಟದ ರೂಪು ನೀವು ಬೆಳದಂತಹ ರೂಪು
ನಾನು ಪಡಿಲಾರಿ ಗುರುದೇವ ನಾನು ಮಾಡ್ಲಾರೀ ಅಂತೇಳದ್ರಂತೇ
ಸಭಾಷ್‌ನನ್ನ ಕಂದ ಸಭಾಷ್‌ನನ್ನ ಮಗಳೇ
ನನ್ನ ರೂಪು
ಸುರರ್ಗು ಗೊತ್ತಿಲ್ಲ ನರರ್ಗೂ ಗೊತ್ತಿಲ್ಲ
ಭೂಮಿ ಭೂಲೋಕಕ್ಕೆ ಗೊತ್ತಿಲ್ಲ ನನ್ನ ಕಂದ
ಎಲ್ಲ ನನ್ನಿಂದೇ ಬಂದಂತಹ ಪ್ರಾಣಿಗಳು
ನೀವೆಲ್ಲ ನನ್ನಿಂದೆ ಬಂದಂತಹ ಶಿಶುಮಕ್ಕಳು

ಅವ್ವ ನಾನು ಇದ್ದ ರೂಪಕಂದ
ನಾನೀಯೇ ಹೇಳುತೀನಿ || ಸಿದ್ಧಯ್ಯ ||

ಅಯ್ಯೋ ನನ್ನ ರೂಪನ್ನೇ
ನಾನೇ ಹೇಳುತೀನಿ
ನಾ ಮೊದಲು ಇದ್ದ ಕಾಲ
ಈಗಲೆ ಹೇಳುತೀನಿ
ನಾನು ಇದ್ದಂತಹ ರೂಪಿನಲ್ಲಿ
ಗೊಂಬೇ ನೀನು ಮಾಡು ಮಗಳೇ || ಸಿದ್ಧಯ್ಯ ||

ಆಗಲೀಗ ಗುರುದೇವs
ನಾನು ಇದ್ದ ರೂಪನಲ್ಲೀ
ನಾನೇ ಹೇಳುಕೊಡ್ತಿನೀ ಕಂದ
ನಾನು ಮೊದಲಿದ್ದಂತ ರೂಪು
ಈ ಭೂಮಿ ಭೂಲೋಕಕ್ಕೆ
ನೀವು ಮಾಡಿರ್ತಕ್ಕಂತ ಹಕ್ಕಿ ಪಕ್ಷಿ ಜೀವ ಜಂತು ಪ್ರಾಣಿ
ಎರೋ ಎಂಬತ್ತು ಕೋಟಿ ಪ್ರಾಣಿಗಳಿಗೂ ಗೊತ್ತಾಗಬೇಕಾದರೆ
ನಾನೇ ಹೇಳ್ತಿನೀ ಮಾಡು ನನ್ನ ಕಂದ ಅಂತೇಳಿ
ತಾವು ಯಾವ ರೂಪಿನಲ್ಲಿದ್ರು ಅಂದರೇ

ಅಮ್ಮ ಇದೇ ಒಂದು ಹುಳೀನ ರೂಪ
ಬರೆಯವ್ವ ಎಂದರಂತೆ || ಸಿದ್ಧಯ್ಯ ||

ಅಮ್ಮ ಈ ರೂಪಿನ ಒಳಗೆ
ಗೊಂಬೇಯ ಮಾಡವ್ವ
ಆಗಂದು ನನ್ನ ಗುರುವು
ಪ್ರಾಣಿ ಪ್ರಾಣಿಗಿಂತ
ಸಣ್ಣ ಪ್ರಾಣಿಯಾಗಿ
ಗೊಂಬೇ ಒಳಗೆ ಕಂದಾ
ಜೀವ ಇರಲೇ ಬೇಕು
ಈ ಗೊಂಬೇ ಒಳಗೆ ಕಂದಾ
ಜ್ಯೋತಮ್ಮ ಉರಿಬೇಕು
ಈ ತರದ ಗೊಂಬೇ ನೀನು
ಮಾಡಬೇಕು ಎಂದರಲ್ಲ || ಸಿದ್ಧಯ್ಯ ||

ಗುರುದೇವs
ಈಗಲೀಗ ನೀವು ಯಾವ ಯಾವ ತರದಲ್ಲಿ ಹೇಳ್ತಿರೋ ಸ್ವಾಮಿ
ಅದೇ ತರದಲ್ಲೀ
ಮಾಡ್ತಿನೀ ನನ್ನಪ್ಪ ಮಾಡ್ತಿನೀ ಗುರುವು ಎನುತೇಳೀ
ಹುಳಿನ ರೂಪದಲ್ಲಿ ಹುಟ್ಟಿರಿಯಪ್ಪ
ಹೌದು ಕಂದಾ,
ಈ ರೂಪದಲ್ಲೀ ನೀವು ಹುಟ್ಟಿದರಯ್ಯ ಗುರುದೇವ ಎಂದರು
ಇದೇ ನನ್ನ ರೂಪು ಕಂದಾ ಎಂತೇಳಿ
ಜಗತ್ತು ಗುರು ಧರೆಗೆ ದೊಡ್ಡವರು
ವಿಧಿಯಮ್ಮನಿಗೆ ತಮ್ಮ ಅಚ್ಚು ಮೆಚ್ಚಿನ ರೂಪು ಬರೆಯಿಸುವಾಗ
ಧರೆಗೆ ದೊಡ್ಡವರು ಹೇಳಿದಂತ ರೀತಿ
ಆಗಲೀಗ ಒಂದು ಜೀವ ಪ್ರಾಣೀಯನ್ನೇ ಬರೆದರೂ
ಏನಪ್ಪ ಬ್ರಹ್ಮದೇವ
ಇದಕ್ಕೆ ಜೀವ ಕೊಡಪ್ಪ ಅಂತೇಳಿದ್ರು
ಬ್ರಹ್ಮದೇವ ಜೀವಾ ಕೊಟ್ಟರು

ಅದಕ್ಕೆ ಸೂಲು ಆಗಲೇ ತುಂಬಿತ್ತಂತೆ
ಪಕ್ಕನೆ ದೀಪ ಕತ್ತೀತಂತೆ || ಸಿದ್ಧಯ್ಯ ||

ಅಯ್ಯಾ ಜೀವ ಕೊಟ್ಟ ಗಳಗೇಲ್ಲಿ
ಪಕ್ಕನೇ ಜ್ಯೋತಿ
ಈ ಪ್ರಾಣೀಯ ಒಳಗೇ
ಹತ್ತಿತು ನನ್ನ ಗುರುವು
ಅವ್ವ ಇದೇ ರೂಪುನು ಒಳಗೆ
ನಾನು ಬಾಳುತ್ತಿದ್ದೆ ನನ್ನ ಮಗಳ || ಸಿದ್ಧಯ್ಯ ||

ಗುರುದೇವ
ನಾವು ಮಾಡಿರ್ತಕ್ಕಂತ ಪ್ರಾಣಿಗಳಲ್ಲೀ
ಈಗಲೀಗ ಒಂದರಲ್ಲೂ ಕೂಡ
ಬೆಳಕು ಅನ್ತಕ್ಕಂತ ಪ್ರಾಣೀಯೆ ಇಲ್ಲ
ಈ ಒಂದು ಪ್ರಾಣಿ ಹೊಟ್ಟೇಲಿ ಗುರುವು
ಜೀವ ಉಂಟಲ್ಲಪ್ಪ
ಜ್ಯೋತುವೇ ಉಂಟಲ್ಲ ಸ್ವಾಮಿ
ಎಂಬುದಾಗಿ ಜಗತ್ತು ಗುರುಗಳು ಹೇಳುವಾಗ
ಕೇಳವ್ವ ವಿಧಿಯಮ್ಮ,

ಇದೇ ರೂಪುನ ಒಳಗೆ ನಾನು
ಒಬ್ಬನೇ ಬಾಳಾಡುತ್ತಿದ್ದೇ || ಸಿದ್ಧಯ್ಯ ||

ಅಯ್ಯಾ ಅದೇ ರೂಪಿನಲ್ಲೀ
ನಾ ಇದ್ದೇನು ನನ್ನ ಕಂದಾ || ಸಿದ್ಧಯ್ಯ ||

ಅಮ್ಮ ಇದೇ ರೂಪಿನ ಒಳಗೆ
ನಾ ವಾಸವ ಮಾಡುತ್ತಿದ್ದೀ
ನಾಣು ಇದ್ದಂತ ರೂಪ ಕಂದಾ
ನೋಡಮ್ಮ ಎಂದರಲ್ಲ || ಸಿದ್ಧಯ್ಯ ||

ಅಮ್ಮ ನೀನು ಮಾಡಿದ ಪ್ರಾಣಿ
ಎಲ್ಲಾನು ನೋಡವ್ವ
ಅಮ್ಮ ನಾನು ಇದ್ದ ಪ್ರಾಣೀ
ನೀನಾಗಿ ನೋಡಮ್ಮ
ಇದು ಯಾವ ಪ್ರಾಣಿ ಅಂತ ನೀನು
ತಿಳಿಯವ್ವ ಎಂದರಲ್ಲಾ || ಸಿದ್ಧಯ್ಯ ||

ಯಾವ ಪ್ರಾಣಿ ಅನ್ನುವದ ಕಂದಾs
ನೀವಾಗಿ ನೋಡವ್ವ ಮಗಳೇ
ಈ ಹುಳೀನ ರೂಪಿನಾಗೇ ಹುಟ್ಟಿ
ಈ ಹುಳೀನ ಎಂದರಂತೇ ನಾನು ಬೆಳೆದು

ಈಗ ನಿಂತಿರುವ ರೂಪಿಗೆ
ನಾ ಬಂದೆನಲ್ಲ ಎಂದರಂತೇ || ಸಿದ್ಧಯ್ಯ ||

ಜಗತ್ತು ಗುರುಗಳ ಮಾತ ಕೇಳಿ ಗುರುವೋ
ಇಂತ ಆದಿಶಕ್ತೀ
ಧರೆಗೆ ದೊಡ್ಡವರ ಮೈಮೆ ಮೈತಗಾರ
ಜೀವಪ್ರಾಣಿ ಕಣ್ಣಿಂದ ನೋಡ್ತಾ ಗುರುದೇವ
ನಾನು ಮಾಡಿರ್ತಕ್ಕಂತ ನೂರಾರು ಪ್ರಾಣಿಗಳಿಗೋ ಗುರುವು
ಬೆಳಕನ್ನೇ ಕೊಟ್ಟು ಪ್ರಾಣಿ ಮಾಡಿಲ್ಲ
ಈಗ ನೀವು ಮಾಡಿಸಿರುವಂತ ಪ್ರಾಣಿ ನೋಡಿದ್ರೇ ಗುರುವು

ಈ ಪ್ರಾಣಿಯೊಂದಿಗೆ ಗುರುವು
ಜೋತಿ ಕತ್ತಿ ಉರಿಯುತಾರೇ || ಸಿದ್ಧಯ್ಯ ||

ಈ ಪ್ರಾಣೀ ನೋಡಿದ್ರೇ ಸ್ವಾಮೀ
ಜ್ಯೋತೀ ಇದರ ಹತ್ರದಲ್ಲೇ ಉರಿತದಲ್ಲ ನನ್ನಪ್ಪ
ಈ ರೂಪುನಲ್ಲೀ ನೀವಿದ್ದರೂ ಪರವಾಗಿಲ್ಲ ಈಗಲೀಗ ನೀವು ಹೇಳ್ದಂತ ರೀತಿ

ಈ ಪ್ರಾಣಿ ಪಡದರೂ ಕೂಡ
ಈ ಭೂಲೋಕಕೆಲ್ಲಾ
ಈ ಪ್ರಾಣಿಗಳ ಈ ಪ್ರಾಣೀನೇ ಬಿಟ್ಟುಡ್ತೀನಿ ಸ್ವಾಮೀ
ನಿಮ್ಮ ಮೈಮ ಮೈತಗಾರ
ನೀವು ಪಡದಿರ್ತಕ್ಕಂತ ಜಗತ್ತೀಗೆ ಗೊತ್ತಾಗಲೀ ಗುರುವು
ಇದಕ್ಕೆ ಯಾವುದಾದರೊಂದು ನಾಮಕರಣ ಕರೆದು
ಈ ಭೂಲೋಕಕ್ಕೇ ಬುಟ್ಟು ಬಿಡಿ ಅಂದರು
ಕೇಳಿರಪ್ಪ ವಿಷ್ಣು ಈಶ್ವರ ಬ್ರಹ್ಮಾದೀ ಮೂರ್ತಿ
ಈ ಹುಳಿನ ರೂಪುನಲ್ಲಿ
ಹುಟ್ಟಿ ನಾನು ಬೆಳೆದು ನಿಮ್ಮಗಳ ಪಡೆದು
ಈ ಭೂಮಿ ಪಡೆದು ಭೂಲೋಕ ಪಡೆದುದಕ್ಕೆ
ಈ ನನ್ನ ರೂಪುನ ಪ್ರಾಣಿಗೇ
ನೀವೇ ನಾಮಕರಣ ಕಟ್ಟುಬಿಡೀ ಕಂದಾ
ಆ ಮೂರು ಮಂದಿ ಮೂರ್ತುಗಳು
ಆಗಲೀಗ ಆ ಪ್ರಾಣಿಗೆ ಏನಂತ ನಾಮಕರಣ ಕರೀತರೆ ಅಂದ್ರೆ

ಅಯ್ಯಾ ಬೆಳಕನ್ನೆ ಪಡೆಕ್ಕಂಡೂ
ಬಂದಂತಹ ಪ್ರಾಣಿಗೆ
ಇದ ಬೆಳಕಿನ ಹುಳ ಅಂತ ಕರೆದಾರು || ಸುವ್ವಾ ಬಾ ಚನ್ನಬಸವಣ್ಣಾ ||

ಕೈಗೇ ಸಿಕ್ಕುವದಿಲ್ಲ ಗುರುವು
ಈಗಲೀಗ ಬೆಳಕು ಇಲ್ಲದೇ ಹೋದೇ ಈ ಪ್ರಾಣೀನೇ ಗೊತ್ತಾಗುದಿಲ್ಲ
ಇದೋ ಇದರಲ್ಲಿ ಗುರುವು ಬೆಳಕಿರುವ ಪ್ರಕಾರ
ಇದು ಮಿಣಕಿನುಳ ಅಂತ ಅದಕೆ
ನಾಮಕರಣ ಕರದರಂತೆ || ಸಿದ್ಧಯ್ಯ ||

ಈ ಮಿಣೂಕುನುಳ
ಎನ್ನುತೇಳಿ ನನ್ನ ಗುರುವು ನಾಮಕರಣ ಪಡೆದು

ಅವರು ಭೂಮಿ ಭೂಲೋಕಕ್ಕೆ
ಬುಟ್ಟರೋ ಮಾಯಿಕಾರ || ಸಿದ್ಧಯ್ಯ ||

ಇಂತ ಜಗತ್ತು ಗುರು ಪರಂಜ್ಯೋತಿಯವರ ಮಾತ ಕೇಳಿ
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರ್ತಿಗಳು
ಗುರುದೇವ
ಈ ಬೆಳಕನಲ್ಲೇ ಹುಟ್ಟೀ ಬೆಳಕನಲ್ಲೇ ಬೆಳದು
ಈ ಭೂಮಿ ಭೂಲೋಕಕ್ಕೆಲ್ಲ
ಜ್ಯೋತಿ ಲಿಂಗಯ್ಯ ಅಂತೇಳಿ ನಾಮುಕರಣ ಪಡೆದು
ಈ ರೂಪನಲ್ಲೀ ನನ್ನ ಮುಂಭಾಗದಲ್ಲಿ
ನಿಂತಿದ್ದೀಯರಲ್ಲ ಗುರುವು

ನಿಮ್ಮ ಮಾಯ ಮೈತ್‌ಗಾರವ
ಕಂಡವರೇ ಮೊದಲಿಲ್ಲ || ಸಿದ್ಧಯ್ಯ ||

ನಿಮ್ಮ ಮಹಿಮೆ ಕಂಡವರಿಲ್ಲ
ಮೈತ್‌ಗಾರ ತಿಳಿದವರಿಲ್ಲ
ನಿಮ್ಮ ಮಾಯ ಕಂಡವರಿಲ್ಲ
ಅಪ್ಪ ಸತ್ಯ ಕಂಡವರೇ ಗುರುವೇ
ಒಬ್ಬರಿಲ್ಲ ಎಂದರಲ್ಲ || ಸಿದ್ಧಯ್ಯ ||

ನಿಮ್ಮ ಮಹಿಮೆ ಮೈತ್ಗಾರ ಸ್ವಾಮಿ
ಯಾರು ತಾನೇ ಬಲ್ಲರಪ್ಪ ಜಗನ್ ಜ್ಯೋತಿ
ಧರೆಗೆ ದೊಡ್ಡವರೇ ಎನುತೇಳಿ
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರ್ತಿ
ತಾಯಿಯಾದ ತಾಯಿ ವಿಧಿಯಮ್ಮ
ಜಗುತ್ತು ಗುರುಗಳಿಗೇ ಕೈಯೆತ್ತಿ ಮುಗುದು
ದೇವಾs
ಈ ಹುಳಿನ ರೂಪದಲ್ಲಿ ಹುಟ್ಟಿ ಬೆಳೆದು
ನಮ್ಮಗಳೆಲ್ಲನು ಪಡೆದು
ಈ ರೂಪಗೆ ಬಂದು ನಿಂತಿದರೀಯಲ್ಲಪ್ಪ
ಎನುತೇಳಿ ಮನದಲ್ಲಿ ಯೋಚನೆ ಮಾಡುವಾಗ
ಕೇಳವ್ವ ಆದಿಶಕ್ತಿ
ನಿಮ್ಮ ಕಣ್ಣಗೇ ನಾನು ಯಾವ ರೂಪುನಲ್ಲಿದ್ದೆನಮ್ಮ

ನಿಮಗೆ ಕಾಣುವಂತ ರೂಪ
ಹೇಳಿರವ್ವ ಎಂದರಲ್ಲ || ಸಿದ್ಧಯ್ಯ ||

ಯಾವರೂಪದಲ್ಲಿದ್ದೆನೋ ಕಂದಾ
ಹೇಳರವ್ವ ಮಕ್ಕಳೆ ಎಂದರೂ
ಗುರುದೇವ
ನಮ್ಮ ಕಣ್ಣಿಗೆ ಯಾವ ರೂಪನಲ್ಲಿ ಇದ್ದೀರಿ ಎಂದರೆ
ಸಾದು ಸತ್ಪುರುಷರಂಗೆ ಕಾಣುತ್ತೀರಿ ಗುರುವು
ಬಾಳ ಬುದ್ಧಿವುಳ್ಳಾದವರಂಗೆ ಕಾಣಿಸ್ತೀರಿ ಸ್ವಾಮಿ
ಕೇಳವ್ವ ನನ್ನ ಕಂದ
ಈವಾಗ ನಾನು ಸಾಧು ಸತ್ಪುರುಷ
ಬಾಳ ಬುದ್ಧಿವುಳ್ಳಾದವರೆಂದು
ನಿಮ್ಮ ಬಾಯಿಲೇ ಬಂದ ಮ್ಯಾಲೆ ಕಂದಾ
ಅಮ್ಮ ಸಾಧುಗಳ ಪಡೀರವ್ವ
ಅಮ್ಮ ಸತ್ತುವಂತರ ಪಡೀರಮ್ಮ
ಪಡದು ಭೂಲೋಕಕ್ಕೆ
ನೀವು ಬುಡುರವ್ವ ಎಂದರಲ್ಲ || ಸಿದ್ಧಯ್ಯ ||