ನಿಮ್ಮ ಮೂರುವರು ಮಕ್ಕಳಿಗೆ ಕಂದಾ
ನರಮಾನವರ ಪೂಜೆ
ನಿಮಗೆ ಆಗಲಿ ನನ ಕಂದಾ
ಮಗನೆ ನಿಮಗಾಗೆ ಕಂದಾ
ಈ ಭೂಮಿಯ ಪಡೆದಿವಿನಿ
ನಿಮಗಾಗೆ ನನ ಕಂದಾ
ಎರೋ ಎಂಬತ್ತು ಕೋಟಿ
ಜೀವರಾಶಿ ಪಡೆದಿವಿನಿ
ಈ ನರಲೋಕದ ಒಳಗೆ ಕಂದಾ
ನರಮಾನವರು ಕಂದಾ
ಬಾಳಿ ಬದುಕಿದರೇ
ನಿಮಗೆ ದೇವಲೋಕದ ಒಳಗೆ ನಿಮಗೆ
ಮುಗುತಿ ಫಲ ದೊರೆಯಲಪ್ಪ || ಸಿದ್ಧಯ್ಯ ||

ನರರಿಂದ ನನ ಕಂದಾ
ಈಗಲೀಗಾ ದೇವಲೋಕದಲಿ ನಿಮಗೆ
ಮುಕುತಿ ದೊರೆಯಲಿ ಕಂದಾ
ಈಗಲೀಗಾ ಬೇಡಿದವರ ಕೊಟಕಂಡು
ಈ ನರ ಮಾನವರ ಕೈಲಿ
ಬ್ರಹ್ಮನ ಬರವಣಿಗೆಗೆ
ಯಾರು ತಪ್ಪಬಾರದು
ಬ್ರಹ್ಮನ ವಿಧಿ ಬರೆಯಕೆ ಕಂದಾ
ಯಾರು ಮೀರಿ ಬದುಕ ಬಾರದು

ನೀನು ಬರೆದ ಬರೆಯ ಒಳಗೆ
ಅವರು ಬಾಳಿ ಬದುಕಿ ಇರಬೇಕು || ಸಿದ್ಧಯ್ಯ ||

ಕಂದಾ ಬ್ರಹ್ಮನ ಬರೆಯ ಎನ್ನುವುದು
ಈ ಭೂಮಿ ಹುಟ್ಟುದ ಕಾಲದಿಂದಾ
ಈ ಭೂಮಿಯ ಕಳುದೋಗ ಕಾಲಕಂಟ
ಕರೆ ನಿನ್ನ ಬರೆಯ ಒಳಗೆ
ಬಾಳಬೇಕು ಕಂದಾ
ನಿನ್ನ ಬರೆಯ ಒಳಗೆಯಾದರೂ
ಬದುಕಬೇಕು ಕಂದಾ
ಅಪ್ಪ ಕಾಲ ಕಳೆದ ಮೇಲೆ ಅವರಿಗೆ
ಹುಟ್ಟು ಸಾವು ಕೊಡಬೇಕು || ಸಿದ್ಧಯ್ಯ ||

ನಿನ್ನ ಬರವಣಿಗೆ ಒಳಗೆ ಬಾಳಿ ಬದುಕಿ ಕಂದಾ
ಆಗಲೀಗಾ ಸತ್ತ ಪ್ರಾಣಿಗಳೆಲ್ಲನೂ
ಈಗಲೀಗಾ ಒತ್ತಿ ಮಣ್ಣು ಮಾಡಿ ನನಕಂದ
ಈ ಭೂಮಿ ದೇವಿಗೆ ಒಪ್ಪಿಸಬೇಕು ಕಂದಾ
ಈಗಲೀಗ ಹುಟ್ಟಿದಂತಹ ಪ್ರಾಣಿಗಳು
ಭೂಮಿದೇವಿಗೆ ಹೋದು ಮ್ಯಾಲೆ
ನರಲೋಕ ಬರಿಲೋಕ ಆಗಬಾರದು

ಹುಟ್ಟೋ ಮಕ್ಕಳಿಗೆಲ್ಲಾ
ನೀವು ವರವನೆ ಕೊಡಬೇಕು
ಕೇಳಪ್ಪ ನನಕಂದಾ
ಮುಕ್ಕಣ್ಣ ಮಲ್ಲಯ್ಯ
ಎರೊ ಎಂಬತ್ತು ಕೋಟಿ
ಜೀವ ಜಂತು ರಾಶಿಗೆ ನೀನು
ಅನ್ನ ಅಳೆಯಬೇಕು
ಓದು ಬರೆಯ ಒಳಗೆ ಬ್ರಹ್ಮ
ನೀನು ಬರಿಯಬೇಕು
ಅಪ್ಪ ಎಚ್ಚುದವರ ಕಂದಾ
ತಗ್ಗುಸಬೇಕು ಮಗನೇ
ತಗ್ಗದವರ ಕಂದಾ ಎಚ್ಚಿಸುಬೇಕು ಕಂದಾ
ಹುಟ್ಟಿದ ಮಕ್ಕಳಂತ
ಮಾ ವಿಷ್ಣು ಪರಮಾತುಮ
ಎನುತೇಳಿ ನನ ಕಂದಾ
ನೀ ನರ ಮಾನವರ ಕೈಲಿ
ಕೈ ಎತ್ತಿ ಮುಗಿಸಿಕೊಂಡು
ಅಯ್ಯ ಅವರ ನೆತ್ತಿ ಮೇಲೆ ನೀನು
ನಾರಾಯಣಾಗಿ ಇರಲೇಬೇಕು || ಸಿದ್ಧಯ್ಯ ||

ಕಂದಾ ಎರೊ ಎಂಬತ್ತು ಕೋಟಿ
ಜೀವ ಜಂತೆಯ ಪ್ರಾಣಿ
ನರಮಾನವರ ಕಂದಾ
ನೆತ್ತಿಮ್ಯಾಲೆ ಕಂದಾ
ನೀನೆ ವಾಲಾಡಬೇಕು ಮಗನೆ
ನೀನೆ ಇರಲು ಬೇಕು
ಅವರು ಎದ್ದ ಗಳಿಗೆಯ ಒಳಗೆ
ಹರಿನಾರಾಯಣ ಅಂತ
ನಿನ್ನ ಜ್ಞಾನ ಮಾಡಬೇಕು || ಸಿದ್ಧಯ್ಯ ||

ಹರಿನಾರಾಯಣ ಎನುತೇಳಿs
ಈಗಲೀಗಾ ನರ ಮಾನವರು
ನಿನ್ನ ಸ್ಮರಣೆ ಮಾಡಿ ಕೈ ಎತ್ತಿ ಮುಗಿಯಬೇಕು
ಅನ್ನ ಕೊಡುವಂತ ಶಿವನೆ ನೀನೆ ಗತಿ ಎನುತೇಳಿ
ಜೀವಜಂತಿ ಪ್ರಾಣಿಗಳೆಲ್ಲಾ
ನರಮಾನವರೆಲ್ಲಾ ನಿನಗೆ ಕೈ ಎತ್ತಿ ಮುಗಿಯಲಿ ಕಂದಾ
ನಿನ್ನ ಬರೆವೊಳಗೆ ಕಂದಾ
ಹುಟ್ಟು ಸಾವು ಇರಬೇಕು ಮಗನೆ
ಸತ್ತ ಪ್ರಾಣಿಗಳೆಲ್ಲಾ
ಹೊತ್ತು ಭೂಮಿ ತಾಯಿಗೆ ಮಣ್ಣು ಮಾಡಬೇಕು
ಈಗಲೀಗಾ ಹುಟ್ಟಿ ಬಾಳುವಂಥಾ ಪ್ರಾಣಿಗಳಿಗೆಲ್ಲಾ
ನೀನು ಬರೆ ಬರೆದು ಭೂಲೋಕಕೆ ಕಳುಗಬೇಕು
ನಿನ್ನ ಬರೆಯ ಒಳಗೆ ಬಾಳಿ ಬದುಕಬೇಕು ಅನುತ ಹೇಳಿ
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರುತಿಗಳು
ಮೂರ್ವರಿಗೂ ಸಾಪ ಕೊಟ್ಟು
ವಿಷ್ಣು ಈಶ್ವರ ಬ್ರಹ್ಮನ ಬುಟ್ಟು
ಈಗಲೀಗಾ ಗುರುವೇ ಗುರುದೇವಾ
ಪಾರ್ವತಿ, ಸರಸ್ವತಿ ಈಗಲೀಗ ಲಕ್ಷ್ಮೀದೇವಿ
ಮೂವರ ಮಂದಿ ಸ್ತ್ರೀಯರ ಕರೆದು

ಅವ್ವ ಬಾಳವರ ಕಂದಾ
ಬದುಕವರ ಕಂದಾ
ಅಮ್ಮ ಪುಣ್ಯವಂತರ ಕಂದಾ
ಮನೆಯಲ್ಲಿ ನನ್ನ ಕಂದಾ
ಈ ನರಲೋಕದ ಒಳಗೆ ಕಂದಾ
ವಾಸ ಮಾಡಿ ನನ್ನ ಮಕ್ಕಳೆ || ಸಿದ್ಧಯ್ಯ ||

ಅಮ್ಮ ನಿಮ್ಮ ಪಾದ ಕಂದಾ
ನಮ್ಮಪಾದ ಮಗಳೇ
ಯಾರು ನೆನೆಯುತಾರೋ
ಅಂತಹವರ ಮನೆಯಲ್ಲಿ
ಅವರು ಮಣ್ಣು ಹಿಡುದುರು ಕಂದಾ
ಹೊನ್ನನ್ನೇ ಆಗುಲವ್ವ || ಸಿದ್ಧಯ್ಯ ||

ಅಮ್ಮ ನಿಮ್ಮ ಪಾದ ಕಂದಾ
ನನ್ನ ಪಾದ ಕಂದಾ
ಯಾರೂ ಮರೆತು ಕಂದಾ
ಬದುಕುವರೊ ಮಗಳೇ
ಅವರಿಗೆ ನನ ಕಂದಾ
ಚಿನ್ನ ಹಿಡಿದುರೂವೆ ನೀವು
ಮಣ್ಣು ಪಾಲು ಮಾಡಿರಮ್ಮ || ಸಿದ್ಧಯ್ಯ ||

ನಿಮ್ಮ ಪಾದ ನಮ್ಮ ಪಾದ ಕಂದಾ
ಯಾರು ನೆನಿತಾರೋ ಕಂದಾ
ಅಂತವರ ಮನೆಯೊಳಗೆ
ಈಗಲೀಗ ಅವರು ಮಣ್ಣಿಡಕಂಡು
ನಿನ್ನ ಪಾದ ಬೇಡಿದ್ರು ಚಿನ್ನ ಮಾಡಿ
ಈಗಲೀಗ ನಿನ್ನ ಪಾದ ನಮ್ಮ ಪಾದ ಮರೆತುಗಂಡು
ಚಿನ್ನ ಹಿಡಕಂಡು ಕೈ ಎತ್ತಿ ಮುಗುದುರು ಕೂಡ
ಮಣ್ಣು ಪಾಲು ಮಾಡುಬುಡಿ ನನ ಕಂದಾ

ಅವರ ಎಂದಿನ ಬಾಳಾಟ ನೀವು
ಎಂದಿನಾಗೆ ಮಾಡಿರಮ್ಮ || ಸಿದ್ಧಯ್ಯ ||

ಈಗಲೀಗಾ ಗುರುದೇವಾ
ಈಗಲೀಗಾ ಈ ಭೂಮಿ ಭೂಲೋಕ
ನಡುವೆ ನರಲೋಕ
ಕೈಲಾಸ ಕಲ್ಯಾಣ
ಎಲ್ಲಾ ನರಲೋಕಕ್ಕೂ ಕಂದಾ
ನೀವೆ ಹೆಚ್ಚಿನ ದೇವರುಗಳಾಗಿ

ನಾನು ತಂದ ಭೂಮಿ ಮ್ಯಾಲೆ
ನೀವು ಬಾಳಾಡಿ ಎಂದರಂತೆ || ಸಿದ್ಧಯ್ಯ ||

ನಾನು ಪಡೆದಾ ಕೈಲಾಸ
ನಾನು ಪಡೆದ ಭೂಲೋಕದಲ್ಲಿ ಕಂದಾ
ಬಾಳಿ ಬದುಕ ಅನುತೇಳಿ

ಮೂರು ಮಂದಿ ಮೂರುತಿಗಳಿಗೆ
ವರವನ್ನೆ ಕೊಟ್ಟಾರಪ್ಪ || ಸಿದ್ಧಯ್ಯ ||

ಮೂರು ಮಂದಿ ಮೂರುತಿಗಳಿಗೆ ವರಕೊಟ್ಟು
ವಿಷ್ಣು ಈಶ್ವರ ಬ್ರಹ್ಮತ್ರಿಮೂರ್ತಿಗಳು ಎನುತೇಳಿ
ನಾಮಕರಣವನ್ನೆ ಪಡೆದು
ಈಗಲೀಗಾ ಪಾರ್ವತಿ, ಲಕ್ಷ್ಮೀ, ಸರಸ್ವತಿ ಅನುತೇಳಿ
ನಾಮಕರಣವನ್ನೆ ಪಡೆದು
ಈಗಲೀಗಾ ಪಾರ್ವತಿ, ಲಕ್ಷ್ಮೀ, ಸರಸ್ವತಿ ಅನುತೇಳಿ
ಮೂರು ಮಂದಿ
ಹೆಣ್ಣು ದೇವತೆಗಳನ್ನೇ ಪಡೆದು
ನಡುವೆ ನರಲೋಕಕ್ಕೆ ಗುರುವು
ನರರೋ ಸುರರೋ
ಗರುಡ ಗಂಧರ್ವರ ಪಡೆದು
ಈಗಲೀಗ ಜಗತ್ತುಗುರು ಧರೆಗೆ ದೊಡ್ಡಯ್ಯ
ಎಲ್ಲಾ ಪ್ರಾಣಿಗಳನೂ
ಈ ಭೂಲೋಕಕೆ ತಂದಾರಲ್ಲ || ಸಿದ್ಧಯ್ಯ ||

ಅಯ್ಯಾ ಎಲ್ಲಾ ಪ್ರಾಣಿಗಳ
ಭೂಲೋಕಕ್ಕೆ ತಂದು
ಭೂಲೋಕದ ಒಳಗೆ
ಬಿಟ್ಟರು ನನ್ನಪ್ಪ
ಅವರು ಮರ್ತ್ಯ ಲೋಕದ ಒಳಗೆ
ಮರೆಯಾಗಿ ಹೋದರಂತೆ || ಸಿದ್ಧಯ್ಯ ||

ಗುರುಕೊಟ್ಟಾs
ವಾಕುತಾನ ಕರ್ಣದಲ್ಲಿ ಕೇಳಿಕಂಡು
ವಿಷ್ಣು ಈಶ್ವರ ಬ್ರಹ್ಮ ತ್ರಿಮೂರ್ತಿಗಳು
ಈಗಲೀಗಾ ಭೂಲೋಕದಲ್ಲಿ ವಾಸಸ್ಥಾನ ಮಾಡ್ತಕ್ಕಂತ
ಜೀವ ಜಂತಿ ಪ್ರಾಣಿಗಳಿವೆ ಕಾವಲಾಗಿ
ನರರಿಗೆ ಸುರರಿಗೆಲ್ಲಾ ಕಾವಲಾಗಿ

ಅವರು ಮಾಡಿದಂತಹ ಗುರುವು
ಗುರುವೆ ಕಾರ್ಯಗಳ ಗುರುವೆ
ಸಿದ್ಧಾಂತ ಕೊಟುಕಂಡು
ಈ ಭೂಮಿ ಭೂಲೋಕದಲ್ಲಿ
ನೀವು ಅಡ್ಕವಾಗಿ ಬಾಳಬೇಕು || ಸಿದ್ಧಯ್ಯ ||

ಎಲ್ಲಾ ದೈವ ದೇವಮಾನವರ ಪಡೆದು
ಭೂಮಿನೇ ಪಡೆದು ಭೂಲೋಕನೆ ಪಡೆದು
ಜಗತ್ತು ಗುರು ಅಲ್ಲಾಮಪ್ರಭು
ಈಗಲೀಗಾ
ನರರಿಗೆಲ್ಲಾ ಸುರರಿಗೆಲ್ಲಾ ಗುರುದೇವಾ
ಹಗಲು ಇರುಳಾಗಬೇಕು

ಗುರುವೆ ಹಗಲೆಲ್ಲಾ ನನ ಗುರುವು
ಅಯ್ಯಾ ಅವರೆ ಬಾಳಲುಬೇಕು
ಇರುಳೆಲ್ಲಾ ನನ ಗುರುವು
ದೇವಮಾನ್ರೆ ಕಾಯಬೇಕು
ಈ ನರ ಮಾನವರ ಬಂದಾನವ
ನಾವೆ ನೋಡಲೇಬೇಕು || ಸಿದ್ಧಯ್ಯ ||

ಅಯ್ಯಾ ನರಮಾನವರ ಬಂದಾನವ
ನಾವೇ ನೋಡಬೇಕು
ಹಾಗೆಂದು ಗುರುವು
ವಿಷ್ಣು ಈಶ್ವರ ಗುರುವೇ
ಬ್ರಹ್ಮ ತ್ರಿಮೂರುತಿ
ಅವರು ಮನದಲಿ ನನ ಗುರುವು
ಚಿಂತೆ ಮಾಡಿಕಂಡು
ಮನಸ್ಸಿನಲ್ಲಿ ಗುರುವೇ
ಕೊರತೆ ಮಾಡಿಕಂಡು
ಈಗ ಹಗಲು ಇರುಳು ನಾವು
ಮಾಡಬೇಕು ಎಂದರಲ್ಲ || ಸಿದ್ಧಯ್ಯ ||

ಅಯ್ಯ ಗುರು ಕೊಟ್ಟಂತಹ
ಸಾಕಾರದ ಒಳಗೆ
ಅಯ್ಯ ಗುರು ಕೊಟ್ಟಂತಹ
ವಿದ್ಯ ಬುದ್ದಿಯ ಒಳಗೆ
ಅವರು ಸಾಕಾರದಲ್ಲಿ
ಗುರುವೇ ಗುರುದೇವಾ
ಈಗ ಸೂರ್ಯ ಚಂದ್ರ ದೇವಾದಿಗಳ
ಪಡೆಯಬೇಕು ಎಂದರಲ್ಲಾ || ಸಿದ್ಧಯ್ಯ ||

ಗುರುವೆ ಸೂರ್ಯಚಂದ್ರಾದಿಗಳ
ನಾವೆ ಪಡೆಯ ಬೇಕು
ಹಾಗೆಂದು ಗುರುವೆ
ಚಿಂತೆಯನ್ನ ಮಾಡುವರೇ
ಈ ಗುರುಪಾದ ದೊರೆಯದಂತೆ
ಸೂರ್ಯ ಚಂದ್ರ ದೊರೆಯದಿಲ್ಲ || ಸಿದ್ಧಯ್ಯ ||

ನನ್ನ ಪರಂಜ್ಯೋತಿಯವರ
ದಯವು ಇಲ್ಲದಂತೆ
ನನಗೆ ಧರೆಗೆ ದೊಡ್ಡವರ
ಮಾತು ಇಲ್ಲದಂತೆ
ಸೂರ್ಯ ಚಂದ್ರಾದಿಗಳು ನಮಗೆ
ದೊರೆಯದಿಲ್ಲ ಎಂತ
ಅವರು ಧರೆಗೆ ದೊಡ್ಡವರ
ಎಡ ಬಿಡದೆ ಕೂಗುತಾರೆ || ಸಿದ್ಧಯ್ಯ ||

ಏನಪ್ಪ ನನ ಕಂದಾ
ಈ ಭೂಮಿ ಭೂಲೋಕ ಪಡೆದು ನರರ ಪಡೆದು
ನರರ ಕೈನ ಪೂಜೆ ತಕಂಡು
ವಾಸಸ್ಥಾನ ಮಾಡಿ ಬಾಳಿ ಬದುಕಿ ಅಂತ ಹೇಳಿ
ವರಕೊಟ್ಟು ಮರ್ತ್ಯ ಲೋಕಕೆ ಮರ್ಯಾಗಿದ್ದನಲ್ಲಪ್ಪ
ಮತ್ತೆ ನನ ಧ್ಯಾ ನ ನನ ಸ್ಮರಣೆ ಸೂಚನೆ ಮಾಡ್ತಿರಲ್ಲಾ ಕಂದಾ ಎಂದರು

ಗುರುದೇವಾ ಈಗಲೀಗಾ
ಯಾತಕಾಗಿ ಏನು ಕಾರಣ ಕರದೆವು ಎಂದರೆ
ಹಗಲಾಗಬೇಕು ದೇವಾ ಇರುಳಾಗಬೇಕು ಗುರುವು
ನರಮಾನವರು ಅರವತ್ತಾರು ಟೈಮು
ಮೂವತ್ತು ಮರು ಗಳಿಗೇಲೂ ಕೂಡ
ಕಣ್ಣಿಂದ ನೋಡಲಾರರು
ಇವರ ಬಾದೆ ಬಂದಾನಾ ಸುಖ ಸಂಪತ್ತು
ನಾವು ನೋಡಕಮಡು ಕೈಲಾಸದಲ್ಲಿ ಬಾಳಬೇಕಾದರೆ
ನಮಗೆ ಸೂರ್ಯ ಚಂದ್ರಾದಿಗಳು
ಆಗಬೇಕು ಎಂದರಲ್ಲ || ಸಿದ್ಧಯ್ಯ ||

ಕೇಳಿರಪ್ಪ ನನ ಕಂದಾs
ಸೂರ್ಯ ಚಂದ್ರಾದಿಗಳಾಗಬೇಕಾದ್ರೆ ಕಂದಾ
ಹಗಲು ಇರುಳಾಗಬೇಕಾದ್ರೆ

ನಿಮಗೆ ಅದಕೊಂದು ವರವ
ಕೊಡುತೀನಿ ಅಂತ
ಧರೆಗೆ ದೊಡ್ಡವರು
ಮಂಟೇದಾಲಿಂಗಪ್ಪ
ಅವರಿಗೆ ಎತ್ತಿ ಶಾಪ ಕೊಟ್ಟಾರಲ್ಲ
ಎತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಕಂದಾ ಕೇಳಿರಿ ಕಂದಾ
ಕಾಲ ಬರುವ ತನಕ
ನೀವು ವಾಸವ ಮಾಡಿರಪ್ಪ
ಕಂದಾ ಕಾಲ ಬಂದಾದ ಮ್ಯಾಲೆ
ನಾ ಸೂರ್ಯ ಚಂದ್ರಾದಿಗಳ
ನಾನೀಯೇ ಪಡೆದು ಮಗನೆ
ಹಗಲು ಇರುಳು ಮಾಡುತೀನಿ || ಸಿದ್ಧಯ್ಯ ||

ಹಗಲು ಇರುಳು ಕಂದಾs
ಈಗಲೀಗಾ ನರರಿಗಾಗೆ ಮಾಡುತಿನಿ
ಸುರಪತಿಗಳಿಗಾಗೆ ಮಾಡುತೀನಿ ಮಗನೆ ಅಂತ ಹೇಳಿ
ಜಗತ್ತುಗುರು ಧರೆಗೆ ದೊಡ್ಡಯ್ಯ ಮಂಟೇದ ಲಿಂಗಪ್ಪನವರು
ಪರವಸ್ತು ಪಾವನ ಮೂರುತಿ

ಈಗ ಏನು ಮಾತೊಂದಾಡುತಾರೆ
ನನ್ನ ಎತ್ತಯ್ಯ ಮಂಟೇದಾ ಸ್ವಾಮಿ || ಸಿದ್ಧಯ್ಯ ||

ಈಗಲೀಗಾ ಜಗತ್ತು ಗುರುs
ಸೂರ್ಯ ಚಂದ್ರಾದಿಗಳನ್ನೇ ಯಾವ ರೀತಿ ಪಡಿಬೇಕು ಎನುತೇಳಿ

ಅವರು ಕಂಡುಗ ಜ್ಞಾನದ ಬುಕ್ಕು
ಕಾಲುದ ಜ್ಞಾನದ ಬುಕ್ಕು
ತಾಮ್ರದ ಚಪ್ಪೋಡಾ
ತೊಡೆ ಮೇಲೆ ಮಡಿಕಂಡು
ಅವರು ಕಂಡುಗ ಜ್ಞಾನ ಓದುತಾರೆ
ಕಾಲುದ ಜ್ಞಾನ ಓದುತಾರೆ || ಸಿದ್ಧಯ್ಯ ||

ಗುರುವೇ ಕಂಡುಗಾ ಜ್ಞಾನ ಓದಿ
ಕಾಲುದ ಜ್ಞಾನ ಓದಿ
ಅಪ್ಪಾಜಿ ನನ ಗುರುವು
ಅಯ್ಯಾ ಏನೆಂದು ನುಡಿದಾರಲ್ಲ
ಎತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಕಾಲ ಬರೋತನಕs
ನಾನೇ ಕಾದು ಕಾಪಾಡಬೇಕು ಎನತೇಳಿ
ಕಂಡುಗ ಜ್ಞಾನದ ಬುಕ್ಕು ಕಾಲದ ಜ್ಞಾನದ ಬುಕ್ಕು
ಕಣ್ಣಾರಾ ಓದುಕಂಡು
ಪರಂಜ್ಯೋತಿ ಪಾವನ ಮೂರುತಿಯವರು
ಆಗಲೀಗಾ
ಭೂಮಿ ಭೂಲೋಕ ಕಲ್ಯಾಣ ಕೈಲಾಸ
ಎಲ್ಲಾ ಪ್ರಪಂಚನು ಪಡೆದು ಗುರುವು
ಸೂರ್ಯ ಚಂದ್ರಾದಿಗಳಿಗಾಗಿ

ಅವರು ಚಿಂತೆ ಯತೆ ಪಡುತಾ
ಒರಗ್ಯವರಲ್ಲೊ ಮಾಯಕಾರ || ಸಿದ್ಧಯ್ಯ ||

ನಾನು ಯಾವ ರೂಪಿನ ಒಳಗೆ
ನಾ ಸೂರ್ಯನ ಪಡಿಬೇಕು
ನಾನು ಯಾವ ರೂಪಿನ ಒಳಗೆ
ನಾ ಚಂದ್ರನ ಪಡಿಬೇಕು
ನಾನು ಯಾವ ರೂಪಿನ ಒಳಗೆ
ನಾ ಹಗಲು ಮಾಡಬೇಕು
ನಾನು ಯಾವ ರೂಪಿನ ಒಳಗೆ
ನಾ ಹಗಲು ಮಾಡಬೇಕು
ನಾನು ಯಾವ ರೂಪಿನ ಒಳಗೆ
ನಾ ಇರುಳು ಮಾಡಲೇಬೇಕು
ನಾನು ಯಾವ ರೂಪಿನ ಒಳಗೆ
ನರರೆಲ್ಲರ ಪೂಜೆ ನನಗೆ
ಸಲ್ಲಾಬೇಕು ಎಂದರಲ್ಲಾ || ಸಿದ್ಧಯ್ಯ ||

ನನ್ನ ಮೈಮೆಯಿಂದ ಗುರುವೆ
ಮೈತ್ಗಾರದಿಂದ ಗುರುವು
ಒಬ್ಬ ಕಲಿ ಮನುಷ್ಯನ ನಾನೇ
ನಾನಾಗಿ ಮಾಡಬೇಕು
ಈಗ ಬ್ರಹ್ಮ ಸೃಷ್ಟಿಯಿರಬಾರದು
ಮಾ ವಿಷ್ಣುವಿನ ಸೃಷ್ಟಿ
ಮೊದಲೆ ಇರಲೇಬಾರದು
ಈ ಶಿವನಾ ಸೃಷ್ಟಿ
ಮೊದಲೆ ಇರಬಾರದು
ನನ್ನ ದೃಷ್ಟಿಯ ಒಳಗೆ
ನಾನೆ ಪಡೆಯಲೇಬೇಕು || ಸಿದ್ಧಯ್ಯ ||

ಅಯ್ಯ ಮಾಯದ ರೂಪಿನಲ್ಲಿ
ಅಯ್ಯ ಒಬ್ಬ ತಾಯಿ ಪಡೆದವರೆ
ಅಯ್ಯ ಮಾಯದ ರೂಪಿನಲ್ಲಿ
ಒಬ್ಬ ಪುರುಷನ ಪಡೆದವರೇ
ಅವರ ಇಬ್ಬರಾ ದೇಹದಲ್ಲಿ
ಒಬ್ಬ ಮಗನ ಕೊಟ್ಟಾರಲ್ಲಾ || ಸಿದ್ಧಯ್ಯ ||