ಅಯ್ಯ ಸಾಧು ಸತ್ಪುರುಷರ
ಪಡದು ನನ್ನ ಕಂದಾ
ಭೂಮಿ ಭೂಲೋಕಕ್ಕೆ
ಬುಡರಮ್ಮ ಎಂದವರೇ
ನನ್ನ ಧರೆಗೇ ದೊಡ್ಡವರು
ನನ್ನ ಪರಂಜ್ಯೋತಿಯವರು
ಗುರುವೇ ಯಾವ ರೂಪಿನ ಒಳಗೆ
ಇದ್ದರು ಎನತೇಳಿ
ಅವರ ಅಚ್ಚು ಮೆಚ್ಚನೆ ತಾಯಿ
ಕಣ್ಣಿಂದ ನೋಡ್ಕಂಡು
ಅಯ್ಯೋ ಸಾದು ಸತ್ಪುರುಷರ ಅವಳು
ಮಣ್ಣಿನಲ್ಲೆ ಮಾಡುತಾಳೆ || ಸಿದ್ಧಯ್ಯ ||

ನಿಮ್ಮ ಅಂದ ಚೆಂದ ನಿಮ್ಮ ಅಚ್ಚು ಮೆಚ್ಚುಗೇ ಗುರುವು
ಸಾಧು ಸತ್ಪುರುಷರ ಮಾಡ್ತಿನಿ ಗುರುದೇವ ಎನುತೇಳಿ
ಭೂಮಿ ಮೊಣ್ಣನಲ್ಲಿ ಗುರುವು
ಸಾಧು ಸತ್ಪುರುಷರು ಪಡಿತ್ತಿದ್ದರಂತೆ
ಯಾರು? ತಾಯಾದ ವಿಧಿಯಮ್ಮ
ಆ ವಿಧಿಯಮ್ಮನಿಗೆ ಏನಂತ ಮಾತಾಡ್ತರೇ ಅಂದರೆ
ವಿಧಿಯಮ್ಮ
ಸಾಧು ಸತ್ಪುರುಷರು ಅಂದರೆ
ಇಬ್ಬರೆ ಪ್ರಾಣಿಗಳು ಅಂತ ತಿಳಿಯಬೇಡ
ನನಗೆ ಯಾವ ಯಾವ ಪ್ರಾಣೀಗಳು ಬೇಕು ಅಂದರೆ ಕಂದ
ಅಮ್ಮ ಸಾದುಗೊಳು ಆಗಬೇಕು
ನನಗೆ ಸತ್ಪುರುಷರು ಆಗಬೇಕು

ನೀನು ಸತ್ಯ ಸರಣಾರು ನನಗೆ
ಆಗಬೇಕು ಎಂದರಲ್ಲ || ಸಿದ್ಧಯ್ಯ ||

ಅಯ್ಯ ಸತ್ಪುರುಷರು ಕಂದ
ನನಗಾಗಬೇಕು ನನ್ನ ಕಂದ
ಈ ಸರಣರ ಕೈಯಿನ ಪೂಜೆ
ನನಗೆ ಸಲ್ಲಲು ಬೇಕು
ಅಯ್ಯಾ ಇದುವಲ್ಲದೇ ಕಂದ
ಕೋಟಿಗೊಬ್ಬ ಕಂದ
ಕುಲಕ್ಕೆ ಒಬ್ಬ ಶರಣ
ಇಂತ ಸತ್ಯು ಸರಣರ
ಪಡೆಯಬೇಕು ಎಂದರಲ್ಲಾ || ಸಿದ್ಧಯ್ಯ ||

ಕೋಟಿಗೆ ಒಬ್ಬ ಸರಣರಾಗಬೇಕು ಕಂದಾ
ಕುಲಕ್ಕೆ ಒಬ್ಬ ಭಕ್ತರಾಗಬೇಕು ಮಗಳೆ
ಸಾಧು ಸತ್ಪುರುಷನಾಗಬೇಕು
ಇಂತಿಂತ ಪ್ರಾಣಿಗಳ ಕಂದ ನೀವಾಗೆ ಪಡೆಯಬೇಕು
ನೀ ಪಡೆದು ಈ ಭೂಮಿ
ಭೂಲೋಕಕ್ಕೆ ಬುಡಬೇಕು
ಇಂತ ಸಾಧು ಸತ್ಪುರುಷರಗೆಲ್ಲಾ ಕಂದಾ

ನೀವು ನಾವು ಸೇರಿಕಂಡು
ಅವರೆಗೆ ಗುರು ಆಗಬೇಕು || ಸಿದ್ಧಯ್ಯ ||

ಅಯ್ಯಾ, ನೀವು ನಾವೆಲ್ಲ
ಅವರಿಗೆ ಗುರುವು ಆಗಬೇಕು ನನ್ನ ಕಂದ
ಈ ಸರಣಾರ ಕೈಯ್ಯಿನ ಪೂಜೇ
ನನಗೆ ಸಲ್ಲಬೇಕು
ಅಂಥ ಸಾಧು ಸತ್ಪುರುಷರ
ನೀವು ಪಡೆಯಬೇಕು ಎಂದರಲ್ಲ || ಸಿದ್ಧಯ್ಯ ||

ಇಂತಿಂತ ಸಾಧು ಸತ್ಪುರುಷರ
ಪಡೆಯಬೇಕು ಕಂದ ಎಂದರು
ಗುರುದೇವ
ಇಲ್ಲೀಗಂಟ ಇಷ್ಟೊಂದು ಪ್ರಾಣಿಗಳನ್ನು ನಾನು ಮಾಡಿದೀ
ಇಷ್ಟೊಂದು ಪ್ರಾಣೀಗಳೆಲ್ಲ ನಾನು ಜೀವ ಕೊಟ್ಟವು ತಂದೆ
ಇನ್ನು ಮತ್ತೆ ಬೇರೆ ಸಾಧು ಸತ್ಪುರುಷರ ಪಡೀರಿ
ಕೋಟಿಗೊಬ್ಬ ಸರಣರು ಪಡೀರಿ
ಕುಲಕೊಬ್ಬ ಭಕ್ತರು ಪಡೀರಿ ಅಂತೇಳುತ್ತೀರಲ್ಲ ಗುರುದೇವ

ನೀವು ಹೇಳಿದಂತ ಚಾಕ್ರಿ
ನಮಗೆ ಇಂದಿಗೆ ಸಾಕಾಯಿತಪ್ಪ || ಸಿದ್ಧಯ್ಯ ||

ಇಂದಿಗೆ ಸಾಕಾಯ್ತು ಗುರುದೇವ ಏನುತೇಳಿ
ವಿಧಿಯಮ್ಮ ಬ್ರಹ್ಮ
ಇಬ್ಬರು ಯೋಚನೆ ಮಾಡಿಕ್ಕಂಡು
ಸಾಧು ಸತ್ಪುರುಷರ ಪಡೀತಿದ್ದರಂತೆ
ಕೋಟಿಗೆ ಒಬ್ಬ ಸರಣ
ಕುಲಕ್ಕೆ ಒಬ್ಬ ಭಕ್ತ
ಕಾವಿ ಹೊದ್ದವರು ಜಡೆ ಬಿಟ್ಟವರು
ಋಷಮಾನವರು
ಇಂತಿಂತ ಪ್ರಾಣಿಗಳ ಗುರುವು

ಅಯ್ಯಾ ಇದಿಯನ್ನು ತನ್ನೊಳಗೆ
ಅವರು ತಿದ್ದು ಬರೆಯ ಬರದವರಲ್ಲ || ಸಿದ್ಧಯ್ಯ ||

ಅಯ್ಯ ಆವಿಧಿಯಮ್ಮನ ಮಾತು ಬ್ರಹ್ಮದೇವರ ಮಾತು
ಕರ್ಣದಲ್ಲಿ ಕೇಳಿ
ನನ್ನ ಪರಂಜ್ಯೊತಿಯವರು
ಈಗ ಬ್ರಹ್ಮನೂ ಪ್ರಾಣಿಗಳಿಗೆ ಜೀವ ಕೊಟ್ಟು
ಸಾಕಾಯ್ತು ಅನುತ್ತಾರೆ
ವಿಧಿಯಮ್ಮನು ಪ್ರಾಣಿಗಳ ಮಾಡಿ ಸಾಕಾಯ್ತು ಎನ್ನುತ್ತಾರೆ
ನನ್ನ ಮೈಮೆಯಿಂದ ನನ್ನ ಸಾಕಾರದಿಂದ
ಪ್ರಾಣಿಯ ಮಾಡಿ ಸಾಕಾಯ್ತು ಎನ್ನುತ್ತಾರೆ

ನಿನ್ನ ಮೈಮೆಯಿಂದ
ನನ್ನ ಸಾಕಾರದಿಂದ
ಪ್ರಾಣಿಯ ಹೊಟ್ಟೇಯ ಒಳಗೆ
ಪ್ರಾಣಿಗಳೇ ಹುಟ್ಟಬೇಕು || ಸಿದ್ಧಯ್ಯ ||

ಗುರುವೇ ಬಾಳಾ ಪ್ರಾಣಿಗಳ
ಹೊಟ್ಟೆ ಒಳಗೆ ಪ್ರಾಣಿಗಳು ಹುಟ್ಟಬೇಕು
ಗುರುವೇ ನಾನು ಪಡದಂತಹ
ಭೂಮಿ ಭೂಲೋಕ
ಬಾಳ ಕಾಲಗಂಟ
ಇರಬೇಕು ಎಂದರಲ್ಲ || ಸಿದ್ಧಯ್ಯ ||

ಪ್ರಾಣಿಗಳ ಹೊಟ್ಟೆ ಒಳಗೆ ಗುರುವು
ಪ್ರಾಣಿಗಳೇ ಹುಟ್ಟಬೇಕು
ನಾನು ಪಡೆದಿರ್ತಕ್ಕಂಥ ನರಲೋಕ
ಬಾಳ ಕಾಲ್ಗಂಟ ಬಾಳಿ ಬದುಕಿಸಬೇಕು ಎನುತೇಳಿ
ಪರಂಜ್ಯೋತಿ ಪಾತಾಳ ಜ್ಯೋತಿಯವರು

ಅವರು ಮನದ ಒಳಗೇ ಗುರುವೆ
ಅವರು ಚಿಂತೆಯನ್ನೇ ಪಡುತ್ತಾರೆ || ಸಿದ್ಧಯ್ಯ ||

ಈಗಲೀಗ ಮನದಲ್ಲಿ ಚಿಂತೆ ಮಾಡ್ಕಂಡು ಗುರುವೂ
ಆಗಲೀಗ ಸಾದು ಸತ್ಪುರುಷರು
ಕೋಟಿಗೊಬ್ಬ ಶರಣರು ಕುಲಕ್ಕೊಬ್ಬ ಭಕುತರು
ಎಲ್ಲರನ್ನು ಪಡೆದರು ವಿಧಿಯಮ್ಮ
ಪಡೆದಂತ ಪ್ರಾಣಿಗಳ್ಗೆಲ್ಲ ಜೀವ ಕಳೆ ತುಂಬಿ
ಭೂಮಿ ಭೂಲೋಕಕ್ಕೆ ಕಳುಹಿಸಿ
ಆಗಲೀಗ ಜಗನ್ ಜ್ಯೋತಿ ಧರೆಗೆ ದೊಡ್ಡವರಿಗೆ
ಗುರುದೇವಾ
ಎಲ್ಲ ಪ್ರಾಣೀನು ಪಡೆದು
ಈ ಭೂಲೋಕಕ್ಕೆ ಸ್ವಾಮಿ ಎಂದರೂ
ಕೇಳಿರಪ್ಪ
ಎಲ್ಲ ಪ್ರಾಣಿಗೂ ಜೀವಕಳೆ ತುಂಬಿದಿಯೇ ಕಂದಾ
ಖಂಡಿತವಾಗಿಯೂ ಕೊಟ್ಟೀವಿನಿ ಸ್ವಾಮಿ
ಎಲ್ಲ ಪ್ರಾಣೀಗಳನ್ನು ಪಡೆದು
ಭೂಲೋಕಕ್ಕೆ ಬುಟ್ಟುಬುಟ್ಟಿಯಾ ಮಗಳೇ ಎಂದರು
ಗುರುದೇವ
ಎಲ್ಲ ಪ್ರಾಣಿಗಳನ್ನು ಪಡೆದು
ಭೂಲೋಕಕ್ಕೆ ಬುಟ್ಟಿವಿನೀ ತಂದೆ ಎಂದರು
ಆಗಲೀಗ ಜಗನ್ ಜೋತಿ ಧರೆಗೆ ದೊಡ್ಡಯ್ಯಾ
ಮಂಟೇದ ಲಿಂಗಪ್ಪ
ಕೇಳಪ್ಪ
ಈಗಲೀಗ ನೀವು ಪ್ರಾಣಿಗಳು ಮಾಡಬೇಡಿ
ಪ್ರಾಣಿಗಳಿಗೆ ನೀನು ಜೀವಕಳೆ ತುಂಬಬೇಡ

ನನ್ನ ಕಾಲಜ್ಞಾನದ ಬುಕ್ಕು
ನನ್ನ ಕಂಡುಗ ಜ್ಞಾನದ ಬುಕ್ಕು
ನೀ ಕಣ್ಣಾರೆ ನೋಡಕಪ್ಪಾ
ಲೋ ನೀನೊಂದು ಬುಕ್ಕ
ಬರೆಕಪ್ಪ ನನ್ನ ಮಗನೆ
ನಾಕಾಲವು ಗುರುವೆ
ಕಂಡುಗ ಜ್ಞಾನದ ಬುಕ್ಕು
ಕಾಲದ ಜ್ಞಾನದ ಬುಕ್ಕು ನಿಮ್ಗೆ
ಕಣ್ಣಿಂದ ನೋಡಲೀಕ್ಕೆ
ಕೊಡತೀನಿ ನನ್ನ ಕಂದಾ
ಈ ಧಾನದ ಧರ್ಮದ
ಭೂಮಿ ಭೂಲೋಕ ನಿಮ್ಮ
ಕೈಯಿಗೇ ಕೊಡವದಿಲ್ಲ || ಸಿದ್ಧಯ್ಯ ||

ಬ್ರಹ್ಮ ಬುಕ್ಕು ಅನತೇಳಿ ಕಂದಾ ನೀನೊಂದು ಬರೆಕಪ್ಪ ಅಂತೇಳಿ
ಕಂಡುಗ ಜ್ಞಾನದ ಬುಕ್ಕು ಕಾಲದ ಜ್ಞಾನದ ಬುಕ್ಕು
ಆಗಲೀಗ ಬ್ರಹ್ಮ ದೇವರ ಕೈಯಲ್ಲಿ ಕೊಟ್ಟರು
ಕಣ್ಣೀಗೆ ಕಂಡದ್ದು ಮನಸ್ಸಿಗೆ ತಿಳಿದಿದ್ದ ಮಾತ್ರ
ಆ ಬ್ರಹ್ಮದೇವರು ತಮ್ಮ ಬ್ರಹ್ಮ ಬುಕ್ಕೀಗೆ ಬರಕೊಂಡರಂತೆ

ಧರೆಗೇ ದೊಡ್ಡವರ
ಕಾಲಗ್ಯಾನ ಕಾಣಲಿಲ್ಲ || ಸಿದ್ಧಯ್ಯ ||

ಧರೆಗೆ ದೊಡ್ಡವರ ಗುರುವು
ಕಾಲಗ್ಯಾನ ಗುರುದೇವ
ವಿಷ್ಣ ಈಶ್ವರ ಬ್ರಹ್ಮ ತ್ರೀಮೂರ್ತು
ಅವರುಗೂ ಕೊಡ ಗೊತ್ತಾಗಲಿಲ್ಲವಂತೆ
ಕೇಳಿರಪ್ಪ ಬ್ರಹ್ಮದೇವ
ನೀನು ಬರಕೊಂಡಿರತಕ್ಕಂಥ ಬ್ರಹ್ಮ ಬುಕ್ಕಿನಲ್ಲಿ ಇರುವಂತೆ ಕಂದ
ಜೀವದ ಪ್ರಾಣಿಗಳ ಕೈಯಲ್ಲೀ
ಧೂಪ ಹಾಕಿಸಿಕೊಂಡು ದೀಪ ಹಾಕಿಸಿಕೊಂಡು
ಈ ಭೂಮಿ ಭೂಲೋಕದಲ್ಲಿ ವಾಸಸ್ತಾನ ಮಾಡಿ ಕಂದಾ
ನಿಮಗೇ ಒಪ್ಪಿದಂತಹ ಸ್ಥಳ ಅಂದರೆ

ಭೂಲೋಕ ಕಂದಾ
ನಡುಗನ್ನಡ ಲೋಕ
ಶಿರವಿಲ್ಲ ನನ್ನ ಕಂದ
ನೀವು ಕೈಲಾಸದಲ್ಲಿ ಕಂದ
ಅಡಕವಾಗಿ ಹೋಗಿರಪ್ಪ || ಸಿದ್ಧಯ್ಯ ||

ಕೈಲಾಸದಲ್ಲೀ ಅಡಕವಾಗಿಬಿಡಿ ನನ್ನ ಕಂದಮ್ಮಾ ಏನತೇಳಿ
ಜಗತ್ತುಗುರು ಪರಂಜ್ಯೋತಿಯವರು ಹೇಳುವಾಗ
ಸ್ವಾಮಿ ವಿದ್ದೀ ಕಲಿತೋ ಬುದ್ಧಿ ಕಲಿತೋ
ನಮ್ಮ ಕೈಲೀ ಇಷ್ಟೊಂದು ಪ್ರಾಣೀಗಳೆಲ್ಲನೂ ತ್ರಿಷೇಣ ಮಾಡಿಸಿದ್ರಿ
ಇಷ್ಟ ಪ್ರಾಣಿಗಳಿಗೆಲ್ಲ ಜೀವಕಳೆ ಕೊಡಿಸಿದಿರಿ
ಈ ಪ್ರಾಣೀಗಳೆಲ್ಲಾನು ಪ್ರಪಂಚಕ್ಕೆ ಬುಟ್ಟು
ಈಗ ಕೈಲಾಸದಲ್ಲಿ ಅಡಕವಾಗಿರಿ
ಅಂತ ಹೇಳಿ ಬುಟ್ರೀಯಲ್ಲೋ ಗುರುವು
ಗುರು ತಂದೆ
ಈ ಹೆಣ್ಣುಗೊಂಬೆ ಗಂಡು ಗೊಂಬೆ
ತ್ರಿಷ್ಣೆ ಮಾಡಿ ಕಳುಹಿದ್ರೀಯಲ್ಲ
ಈ ಗೊಂಬೆಗಳು ಯಾವಸ್ಥಿತಿ ಏನು ಸ್ವಾಮಿ ಎಂದರು
ಈ ಎರಡು ಗೊಂಬೆಗಳು
ಆಗಲೀಗ ಮಾತಾಡಿ ಕುಣಿತ ಕುಣಿದು
ಸಾಕಾಗೀ ನಿಂತಿದ್ದೀವಂತೆ
ಕೇಳಪ್ಪ ವಿಧಿಯಮ್ಮ ಬ್ರಹ್ಮ
ಇವತ್ತಿನ ದಿವಸದಲ್ಲಿ ನನ್ನ ಕಂದಾ
ಗೊಂಬೆ ಮಾಡಿದವಳೂ ನೀನು
ಈಗಲೀಗ ಜೀವ ಕೊಟ್ಟವನು ನೀನು ಕಂದಾ
ಇಲ್ಲಿಗೇ ಇಷ್ಟು ಪ್ರಾಣಿ ಪಡೆದು
ಈ ಪ್ರಪಂಚಕ್ಕೆ ಬಡುತನಕ
ನಿಮ್ಮ ನ್ಯಾಯ ತೀರಿತು ಕಣ್ರಯ್ಯ

ಅಪ್ಪ ನಿನ್ನ ಜೀವವ ಕಂದಾ
ನೀನೆ ತಕ್ಕೊ ಮಗನೆ
ಅವ್ವ ನಿನ್ನ ಮೊಣ್ಣ ಮಗಳೇ
ನೀನೆ ತಕ್ಕೋಳವ್ವ
ಇದು ಹುಟ್ಟು ಸಾವು ಎನುತ ಹೇಳಿ
ತ್ರಿಷ್ಣೆ ಮಾಡಿ ಬಿಟ್ಟರಂತೇ || ಸಿದ್ಧಯ್ಯ ||

ಇದು ಹುಟ್ಟು ಸಾವು ಎನ್ನುತೇಳಿ ಗುರುವು
ಪರಂಜ್ಯೋತಿ ಧರೆಗೆ ದೊಡ್ಡಯ್ಯ
ಹರಸಿ ಆಶೀರ್ವಾದನೇ ಮಾಡಿ
ಈ ಪ್ರಾಣಿಗಳು ಜೀವಾನ
ಬ್ರಹ್ಮ ದೇವರು ತಕ್ಕಂಡರಂತೆ
ಮಾಡಿದುಗೊಂಬೆ ವಿಧಿಯಮ್ಮ ತಕ್ಕಂಡರಂತೇ
ಈಗಲೀಗ ಭೂಮಿ ದೇವಿ ಏನಂತ ಹೇಳುತಾಳೆಂದರೆ
ದೇವ ಇದು ನನ್ನದು ಮೊಣ್ಣು

ಗುರುವೇ ಮೊಣ್ಣಿನ ಜೀವ ನನ್ನ
ಮೊಣ್ಣಿಗೇ ಬರಲೇಬೇಕು || ಸಿದ್ಧಯ್ಯ ||

ಅಯ್ಯ ಮೊಣ್ಣಿನ ಜೀವ ಮೊಣ್ಣಿಗೇ ಬರಬೇಕು
ಆಗಂದು ಗುರುವೇ ನನ್ನ
ಭೂಮಿ ದೇವಿ ಕೇಳಿದಳು
ಅವ್ವ ಕೇಳವ್ವ ನನ್ನ ಕಂದಾ
ಕೇಳವ್ವ ನನ್ನ ಮಗುಳೇ
ಅಮ್ಮ ಹುಟ್ಟು ಸಾವು ಅಂತ
ಹೇಳಿವ್ನಿ ನನ್ನ ಕಂದಾ
ಬಾಳೀ ಬದಿಕೀ ಕಂದಾ
ನೀ ನರುಳ್ಳ ಎನುತೇಳಿ
ಇವಕೆ ನಾಮಕರಣ ಮಾಡಿರವ್ವ
ಈ ಹೆಣ್ಣು ಪ್ರಾಣೀ
ಗಂಡು ಪ್ರಾಣೀ ಎನ್ನುವುದು ಕಂದಾ
ಅಮ್ಮ ಅವರ ಹೊಟ್ಟೇ ಒಳಗೆ
ಅವರೇ ಹುಟ್ಟಲೇ ಬೇಕು
ಈ ನರಲೋಕದ ಒಳಗೇ
ಹುಟ್ಟಿದ ಪ್ರಾಣಿಗೇ ಅನ್ನಹಾರವ
ಕೊಡಬೇಕು ಕಂದಾ
ಕೇಳಪ್ಪ ಮಗನೇ
ನೀನು ಶಿವನು ಏನುತೇಳಿ
ನರಲೋಕದ ಒಳಗೇ
ಎರೋ ಏಂಬತ್ತು ಕೋಟಿ
ಜೀವಜಂತು ಪ್ರಾಣಿಗೂ
ಅನ್ನ ಕೊಡುವ ಶಿವ
ನೀನೇ ಗತಿ ಎನ್ನಬೇಕು || ಸಿದ್ಧಯ್ಯ ||

ಅನ್ನ ಕೊಡುವಂತ ಶಿವನೂ
ನೀನೇ ಅನ್ನುತೇಳಿ ಕಂದಾ
ಹುಟ್ಟಿದಂತಹ ಪ್ರಾಣಿಗಳೆಲ್ಲ
ನಿನಗೇ ಕೈಯೆತ್ತಿ ಮುಗಿಬೇಕು
ಈಗಲೀಗ ಕೇಳಪ್ಪ ನನ್ನ ಕಂದ
ಮಹಾ ವಿಷ್ಣು ಪರಮಾತ್ಮ
ಈಗ ವಿಧಿಯಮ್ಮ ತ್ರಿಷ್ಣೇ ಮಾಡಿ ಬಿಟ್ಟಿರುವಂತಹ
ಗೊಂಬೆಗಳೆಲ್ಲ ಪ್ರಪಂಚದಲ್ಲಿ ವಾಸಮಾಡ್ತವೆ
ಅನ್ನ ಕೊಡುವಂತ ಶಿವ ಅಂತೇಳಿ
ಶಿವನಿಗೆ ಕೈಯೆತ್ತಿ ಮುಗಿತವೆ

ಕಂದಾ ಪ್ರಾಣಿ ಪ್ರಾಣಿಗೆಲ್ಲಾ
ಯಾವ ಪ್ರಾಣಿ ಕಂದಾ
ಈ ನರ ಪ್ರಾಣಿ ಎಂದರೆ ಮಗನೇ
ಬಹಳ ದೊಡ್ಡದು ಕಂದಾ || ಸಿದ್ಧಯ್ಯ ||

ಅಯ್ಯಾ ನರಪ್ರಾಣಿ ಎಂದರೇ
ನನ ಕೇಳಪ್ಪ ಕಂದಾ
ಅಯ್ಯ ಭೂಮಿಗೆ ದೊಡ್ಡದು
ಭೂಲೋಕ್ಕೆ ಹಿರಿಯದು
ಅಯ್ಯಾ ನಾನು ಪಡೆದ ನರಲೋಕಕ್ಕೆ
ಬಹಳ ದೊಡ್ಡದು ಎಂದರು || ಸಿದ್ಧಯ್ಯ ||

ಪ್ರಾಣಿ ಪ್ರಾಣಿಗೆಲ್ಲ ಕಂದಾ ಮೇಲಾದ ಪ್ರಾಣಿ ಎಂದರೆ
ನರಪ್ರಾಣಿ ಎನತಕ್ಕದ್ದೆ
ಈ ನರಲೋಕಕೆ ದೊಡ್ಡ ಪ್ರಾಣಿ ಕಂದಾ

ಈ ನರಮಾನವರು ಎಂದರೇ ಕಂದಾ
ನನಗೆ ಬೇಕಾದವರು || ಸಿದ್ಧಯ್ಯ ||

ಕಂದಾ ನರಮಾನರು ಎಂದರೇ
ಕೇಳಪ್ಪ ಕಂದಾ
ನನಗೆ ಬೇಕಾದವರು
ಕಂದಾ, ನಿನಗೆ ಬೇಕಾದವರು
ಮಾ ವಿಷ್ಣುವಿಗೆ ಬೇಕಾದವರು
ನಮ್ಮ ಎಲ್ಲಾ ದೇವಮಾನ್ರುಗೂವೆ
ಬೇಕಾದ ಪ್ರಾಣಿ ಮಗನೆ || ಸಿದ್ಧಯ್ಯ ||

ಎಲ್ಲಾ ದೈವ ದೇವಾಮಾನ್ರುಗುವೆ ಕಂದಾ
ಬೇಕಾದಂತಹ ಪ್ರಾಣಿ ನನ ಕಂದಾ
ಈ ನರಾಳುಗಳಿಗೆಲ್ಲಾ ಕಂದಾ
ಜೀವ ಜಂತಿ ಪ್ರಾಣೆಗಳಿಗೆಲ್ಲಾ
ಈಗಲೀಗಾ ನೀವು ಮೂರು ಮಂದಿ
ಮೂರ್ತಿಗಳು ಸೇರಿಕಂಡು
ಕೈಲಾಸದಲಿ ಕೂತುಕಂಡು
ಎಲ್ಲಾ ಪ್ರಾಣಿಗಳಿಗೂವೆ ತಪ್ಪದೆ
ಅನ್ನ ಆಹಾರಾದಿಗಳ ಕೊಡ್ರಯ್ಯ
ಎನುತೇಳಿ ಮುಕ್ಕಣ್ಣ ಮಲ್ಲಯ್ಯ
ಜಗದೀಶ್ವರನಿಗೆ ವರಕೊಟ್ಟು
ಇಂತಹ ಬ್ರಹ್ಮದೇವರ ಕರೆದು
ಕೇಳಪ್ಪ
ಪರುಷರು ಹೊಟ್ಟೆ ಒಳಗೆ
ಪುರುಷರ ಕೊಡಬೇಕಾದ್ರೆ ಕಂದಾ
ಈಗಲೀಗ ನಡುವೆ ನರಲೋಕದಲ್ಲಿ

ಒಂದು ಹೆಣ್ಣಿನ ಕಂದಾ
ಹೊಟ್ಟೇಲಿ ನನ ಕಂದಾ
ಗಂಡು ಮಗನಾಗಬೇಕು
ಹೆಣ್ಣು ಮಗಳಾಗಬೇಕು
ಹೆಣ್ಣಿನ ಕೈನ ಪೂಜೆ
ಗಂಡಿನ ಕೈನ ಪೂಜೆ
ನಿಮ್ಮ ಮೂರುವರು ಮಕ್ಕಳಿಗೆ
ಸಲಗಲಪ್ಪ ಎಂದರಲ್ಲಾ || ಸಿದ್ಧಯ್ಯ ||