ಆಕಾಶಕ್ಕೆ ವರಕೊಟ್ಟು ದೇವಾ
ಈಗ ಭೂಮಿ ಪಡದದ್ದಾಯ್ತು ಆಕಾಶ ಪಡೆದದ್ದಾಯ್ತು
ಈಗಲೀಗ ಎರಡುಲೋಕ ಪಡೆದೆನಲ್ಲಾ
ಈ ಎರಡು ಲೋಕ ಪಡೆದ ಮ್ಯಾಲೆ
ಇನ್ನು ನಾನು ಏನು ಪಡಿಬೇಕು ಅನ್ನುತೇಳಿ
ಕಂಡುಗ ಜ್ಞಾನದ ಬುಕ್ಕು ಕಾಲದ ಜ್ಞಾನದ ಬುಕ್ಕು
ಕಣ್ಣಿಂದ ನೋಡಿಕಂಡು ಗುರುವು
ಆ ಜಗತ್‌ಗುರು ಪರಂಜ್ಯೋತಿ ಮಂತ್ರೋಪದೇಶದಲ್ಲಿ

ಒಬ್ಬ ಶಿಶು ಮಗಳ ನಾನು
ಪಡಿಬೇಕು ಎಂದರಂತೆ || ಸಿದ್ಧಯ್ಯ ||

ಒಬ್ಬ ಶಿಶು ಮಗಳ ಗುರುವೇ ನಾನು
ಪಡೆಯಬೇಕು ಎಂತ
ಕಂಡಾಯ್ದ ಜ್ಯೋತಿ
ಪರಂಜ್ಯೋತಿಯವರು
ಆಯಾ ಅಗಾಲೀಗ ಗುರುವು
ಅಪ್ಪಾಜಿ ಗುರುವು
ಅವರು ಆರು ಶಾಸ್ತ್ರವ ಗುರುವೆ
ಓದವರೇ ದೇವಾ
ಮೂರು ಪುರಾಣ ಬರೆದವರೆ ನನ್ನಪ್ಪ
ಅವರು ಎರಡು ಪುರಾಣದಲ್ಲಿ
ಅಂಗೈನ ಮೇಲೆ ಒಬ್ಬ
ಆದಿಶಕ್ತಿ ಪಡೆದರಂತೆ || ಸಿದ್ಧಯ್ಯ ||

ಗುರುವೇ ಅಂಗೈನ ಮೇಲೆ
ಆದಿಶಕ್ತಿ ಪಡೆದು ಪರಂಜ್ಯೋತಿಯವರು
ಅವರ ಅಂಗೈನ ಮೇಲೆ ನಿಂತು
ಕಿಲಕಿಲಕಿಲನೆ ನಗುತಾಳಂತೆ || ಸಿದ್ಧಯ್ಯ ||

ಆಗಲೀಗಾ ಮಂತ್ರೋಪದೇಶದಲ್ಲಿ
ಅಂಗೈನಲ್ಲಿ ಆದಿ ಶಕುತಿ ಪಡೆದು
ಆದಿ ಶಕುತಿ ಅಂಗೈನ ಮೇಲೆ ನಿಂತುಕಂಡು
ಪರಂಜ್ಯೋತಿಯವರ ಮಕ ಕಣ್ಣಿಂದ ನೋಡಿಬುಟ್ಟು
ಆಗಲೀಗಾ ಕಿಲು ಕಿಲುನೆ ನೆಗನಾಡಿಕೊಂಡು ಗುರುವು

ಅಯ್ಯ ಪಡೆದಂತಹ ಗುರುವಿಗೆ
ನಾ ಪಾದ ಪೂಜೆಮಾಡಬೇಕು || ಸಿದ್ಧಯ್ಯ ||

ನನ್ನ ಪಡೆದಂತಹ ಗುರುವಿಗೆ ನಾನು
ಪಾದ ಪೂಜೆ ಮಾಡಬೇಕು
ಆಗಂದು ತಾಯಿ
ಸ್ನಾನ ಮಡಿಯ ಮಾಡಿ
ಮೀದು ಮಡಿಯ ಉಟ್ಟು
ಅವಳು ಸಣ್ಣ ಸೀರೆಯ ಉಟ್ಟುಗಂಡು
ಸಾಂಬುರಾಣಿ ಬೆಳಗುತಾಳೆ || ಸಿದ್ಧಯ್ಯ ||

ಗುರುವೇ ಬಾರಿ ಕಂಡಾಯ
ಕಣ್ಣಾರೇ ನೋಡಿಕಂಡು
ಬಾರಿಯ ಕಂಡಾಯ್ಕೆ ಹೋಗಿ
ರಜಾವನ್ನೇ ಹೊಡೆದು
ನನ್ನ ಪರಂಜ್ಯೋತಿ ಪಾದಕೆ
ಶರಣನೆ ಮಾಡಿ
ನಾನು ಮಾಡಿದಂತಹ ಶರಣು
ನಿನ್ನ ಪಾದಕೆ ಅರುವಾಗಲಪ್ಪ || ಸಿದ್ಧಯ್ಯ ||

ನಡುವನ್ನೇ ಕಟ್ಟುಗಂಡುs
ಕರಾ ಜೋಡಿಸಿಗಂಡು
ಪಾದ ಒಂದು ತಾವಕೆ ಮಡಿಕಂಡು
ಆದಿಸಕ್ತಿ ಗುರುವು
ನಾನು ಮಾಡಿದಂತಹ ಶರಣು
ನಿಮ್ಮ ಪಾದಕೆ ಅರುವಾಗಲಿ
ಜಗಂಜ್ಯೋತಿಯವರೇ ಎನುತೇಳಿ

ಅವರು ಜ್ಯೋತಿರ್ಲಿಂಗಯ್ಯ ಅಂತ
ಕೈಯೆತ್ತಿ ಮುಗಿದಳಂತೆ || ಸಿದ್ಧಯ್ಯ ||

ನೋಡಪ್ಪ ಇಂತಹ ಜಗಂಜ್ಯೋತಿಯವರು
ಆದಿಸಕ್ತಿ ಕೈಲಿ ಪರಂಜ್ಯೋತಿಯವರೆಂದು ಕೈ ಎತ್ತಿ ಮುಗಿಸಿ ಕಂಡ್ರು
ಈಗಲೀಗಾ ಭೂಮಿತಾಯಿ ಆದಿಸಕ್ತಿ ಆಡಿದ ಮಾತ ಕೇಳಿಕಂಡು
ಈ ಆದಿಶಕ್ತಿ ಜಗತ್ತು ಗುರುಗಳ ಪಾದ ಹಿಡಿದು
ಕೈ ಎತ್ತಿ ಮುಗುದು ವರ ಪಡಕಂಡ್ರಲ್ಲಾ
ಈಗ ಮಹಾಗುರುಗಳಿಗೆ ಪರಂಜ್ಯೋತಿ ಅಂತ ನಾಮಕರಣ ಕಟ್ಟುದ್ರು

ಈಗಲೀಗಾ ನಾನೊಂದು ಹೆಸರ ಕರಿಬೇಕು ಅನ್ನುತೇಳಿ ಭೂಮುತಾಯಿ
ಪರಂಜ್ಯೋತಿಯವರ ಮುಂಭಾಗಲಲಿ ನಿಂತಕಂಡು
ನನ್ನನ್ನೆ ಪಡೆದವರು ಈ ಜಗಂಜ್ಯೋತಿಯವರು
ಈಗಲೀಲಾ ನನಗೆ ಧರೆಗಾತ್ರದ ಸಕುತಿಯ
ಆನೆವುಳ್ಳ ಬಲ ಕೊಟ್ಟರು ಅಂತ ಹೇಳ

ಅಯ್ಯಾ ಧರೆಗೆ ದೊಡ್ಡವರು ಅಂತ
ನಾಮಕರಣ ಮಾಡುತಾಳೆ || ಸಿದ್ಧಯ್ಯ ||

ಅಯ್ಯಾ ಧರೆಗೆ ದೊಡ್ಡಯ್ಯ
ಹಾಗೆಂದು ನನ ಗುರುವು
ಭೂಮಿತಾಯಿ ಕೈಲಿ
ಎಸರ ಕರಿಸಿಕಂಡು
ಅಯ್ಯ ಪರಂಜ್ಯೋತಿಯಂತ
ಆದಿಶಕ್ತಿ ಕೈಲಿ ನಾಮಕರಣ ಪಡಕಂಡು
ಅವರು ಇಬ್ಬರ ಮಕ್ಕಳಿಗೆ ದೇವಾ
ಬುದ್ದಿ ವಾಕ್ಯ ಹೇಳುತಾರೆ || ಸಿದ್ಧಯ್ಯ ||

ಕೇಳವ್ವ ಕಂದಾ ಈಗಲೀಗ ಕೇಳವ್ವ ಮಗಳೇ ಆದಿಶಕ್ತಿ
ಕೇಳೆ ನನ ಕಂದ ಭೂಮಿ ದೇವಿ
ಈಗಲೀಗ ನಿಮ್ಮ ಇಬ್ಬರು ಶಿಸು ಮಕ್ಕಳ ಪಡೆದು ನಿಮ್ಮ ಕೈಲಿ
ಈಗಲೀಗ ಪರಂಜ್ಯೋತಿ ಅಂತ ನಾಮಕರಣ ಕಟ್ಸಿಕಂಡೆ
ಈಗಲೀಗ ನಿಮ್ಮ ಕೈಲಿ ಧರೆಗೆ ದೊಡ್ಡಯ್ಯ ಅಂತ
ನಾಮಕರಣ ಕಟ್ಸಿಕಂಡೆ
ನನಗೆ ನೀವು ಹೆಸರು ಕಟ್ಟಿದ ಮ್ಯಾಲೆ ನಾನು ಕಟ್ಟಿದಂತಹ ಹೆಸರು
ಈಗಲೀಗ ನಿಮಗೆ ಸ್ಥಿರವಾಗಲಿ ಅಂತ ಹೇಳಿ

ಆದಿಶಕ್ತಿ ಭೂಮಿದೇವಿಗೆ
ನಾಮಕರಣ ಮಾಡುತಾರೆ || ಸಿದ್ಧಯ್ಯ ||

ಆಗಲೀಗ ಇಬ್ಬರೂ ಮಕ್ಕಳ ಮುಂಭಾಗದಲಿ
ಜಗತ್ತು ಗುರುಗಳು ನಿಂತಿದುರು
ಆಗಾ ಕೇಳಿರಮ್ಮ
ನಮ್ಮ ಮುಂಭಾಗದಲಿ ನಿಂತುಕಂಡು
ಬಾಳ ಚಿಂತೆ ಪಡ್ತಾಯತೆ ಪಡ್ತಿರಲ್ಲಾ ಕಂದಾ
ಯಾಕರವ್ವ ಮಕ್ಕಳೆ ಅಂದುರು
ಆಗ ಭೂಮಿ ದೇವಿ ಹೇಳುತಾರೆ
ಸ್ವಾಮಿ ನನಗೆ ಚಿಂತೆಯತೆ ಏನು ಇಲ್ಲ
ಈಗಲೀಗ ಪಡೆದಂತಹ ನೀವೆ ನನಗೆ ತಂದೆ
ನಾನೆ ನಿಮಗೆ ಶಿಸು ಮಗಳು

ನಿಮಗೆ ಮಗಳಾಗಿ ನಾನು
ಇರುತೀನಿ ಎಂದಳಂತೆ || ಸಿದ್ಧಯ್ಯ ||

ಈ ಉತ್ತೇಶ್ವರ ಮಹೇಸ್ವರ ಇಬ್ಬರು ಮಕ್ಕಳು ಬಂದು
ಜಗಂಜ್ಯೋತಿಯವರ ಮುಂಭಾಗದಲಿ ನಿಂತುಕಂಡು
ಸ್ವಾಮಿ ಈಗ ನಮ್ಮನು ನೀವು ಪಡ್ದಿದ್ದೀರಲ್ಲ
ಈಗಲೀಗ ನಮಗೆ ವಾಸಮಾಡಲಿಕ್ಕೆ ಸ್ಥಳ ಯಾವುದಪ್ಪ ಅಂದರು
ಕೇಳಿರಪ್ಪ ಉತ್ತೇಸ್ವರ
ಆಗಲೀಗ ತನುವು ಇದ್ದು ತಾವು
ತಾವರೆ ಹುಟ್ಟಿದ ಪರಿಕಾರವಾಗಿ
ಈ ಭೂಮಿತಾಯಿ ಮೇಲೆ

ನೀನು ಮೂಗು ಹುತ್ತವಾಗಿ
ಹುಟ್ಟಪ್ಪ ನನ ಕಂದಾ
ನೀನು ಹೊನ್ನು ಹುತ್ತವಾಗಿ
ಬೆಳಿಯಪ್ಪ ಎಂದರಲ್ಲಾ || ಸಿದ್ಧಯ್ಯ ||

ಲೋ ನಾನು ಪಡೆದ ಭೂಮಿ ಮ್ಯಾಲೆ
ನೀವು ವಾಸ ಮಾಡಿ ಕಂದ || ಸಿದ್ಧಯ್ಯ ||

ನಾನು ಪಡೆದ ಭೂಮಿ ಮೇಲೆ ಕಂದಾ
ಈಗಲೀಗಾ ನೀನು ನನ ಕಂದ
ಮೂಗತ್ತವಾಗಿ ಹುಟ್ಟಪ್ಪ ಮಹೇಸ್ವರ
ನೀನು ಹೊನ್ನು ಹುತ್ತುವಾಗಿ ಹುಟ್ಟಿ
ಬೆಳೆಯಪ್ಪ ಮಹೇಸ್ವರ ಅನುತೇಳಿ
ಉತ್ತೇಸ್ಪರ ಮಹೇಸ್ವರನಿಗೆ ಆಗಲೀಗ ವಾಸಸ್ಥಾನಕ್ಕೆ
ಭೂಮಿತಾಯನೆ ಕಾವಲು ಕೊಟ್ಟು
ಈಗಲೀಗಾ ಜಗಂಜ್ಯೋತಿಯವರು ಗುರುವು
ಈಗ ಮೂರುಜನ ಶಿಸು ಮಕ್ಕಳಿಗೆ ವರ ಕೊಡುವಾಗ ಈ ಆದಿಶಕ್ತಿ

ಗುರುವಿನಾ ಪಾದಕೆ ಅವರು
ಪುನಾ ಶರಣು ಮಾಡದ್ರಂತೆ || ಸಿದ್ಧಯ್ಯ ||

ಎರಡನೆ ಸಾರಿ ಶರಣು ಮಾಡುವಾಗ ಗುರುವು
ಯಾರವ್ವ ಕಂದಾ ಯಾಕಮ್ಮ ಆದಿಶಕ್ತಿ
ಇವರು ಮೂರು ಜನಕೆ ವರ ಕೊಟ್ಟುರು
ನನಗೆ ವರಕೊಡ್ಲಿಲ್ಲ ಅಂತ ಹೇಳಿ
ಮತ್ತೂ ಒಂದು ಸಾರಿ ಕೈ ಎತ್ತಿ ಮುಗುದು
ಪಾದಕೆ ಬಿದ್ದು ಶರಣ ಮಾಡಿದ್ಯಾ ಕಂದಾ
ನಿನಗೇನು ವರ ಬೇಕಮ್ಮ
ಕೇಳುವಂತ ವರ ಕೇಳಿಕೋ ಕಂದಾ
ನೀನು ಬೇಡಿದಂತಹ ವರವ ನಾನು
ಕೊಡುತೀನಿ ಎಂದರಂತೆ || ಸಿದ್ಧಯ್ಯ ||

ಬೇಡಿದ ವರವ ಕೊಡತೇನಿ ಮಗಳೇ
ನೀನು ಒಪ್ಪುವಂತಹ ವರ ಕೊಡುತಿನಿ
ಏನು ವರ ಬೇಕವ್ವ ಎಂದರು
ಸ್ವಾಮಿ, ಜಗಂಜ್ಯೋತಿಯವರೇ
ಈಗಲೀಗ ಏನು ವರಬೇಕು ಎಂದು ಕೇಳಿದರೆ ದೇವಾ
ನೀವು ಕೊಟ್ಟಿರುತಕ್ಕಂತಹ ವರ
ನನ್ನ ಮೈ ಕೈಲಿ ಮುತ್ತು ರತ್ನ
ಬಂಗಾರವೇ ಆಗದೆ ಸ್ವಾಮಿ
ಈಗಲೀಗ ನನಗೆ ಸುಖ ಸಂಪತ್ತಾಗಬೇಕು
ಸುಖ ಸಂಪತ್ತು ಅಂದರೆ

ನೀವು ಪತಿಯ ಭಾಗ್ಯದ ನನಗೆ
ಕೊಡಬೇಕು ಮಾಯ್ಕಾರ || ಸಿದ್ಧಯ್ಯ ||

ಆದಿಶಕ್ತಿಯ ಮಾತ ದೇವಾ
ಕರ್ಣದಲಿ ಕೇಳದ್ರು ಜಗಂಜ್ಯೋತಿ
ಬಾಳ ಚಿಂತೆ ಬಂದೊಯ್ತು
ಬಾಳ ಯತೆ ಬಂದೊಯ್ತು

ಈ ಶಿಸು ಮಗಳ ಪಡೆದು ನಾನು
ಗತಿಗೆಟ್ಟೆ ಎಂದರಂತೆ || ಸಿದ್ಧಯ್ಯ ||

ಗುರುವೇ ಆದಿಶಕ್ತಿ ಮಾತು
ಕರ್ಣದಲ್ಲಿ ಕೇಳಿs
ಅಲ್ಲಮ ಪ್ರಭು ಜಗಂಜ್ಯೋತಿಯವರು
ಅವರು ಶಿವ ಶಿವಾ ಎಂತಾ
ಎರಡು ಕರಣ ಮುಚ್ಚಿಕಂಡರು
ಅವರು ಹರ ಹರ ಎಂತ
ಎರಡು ನೇತ್ರ ಮುಚ್ಚಿಕಂಡರು
ಈಗ ಕೆಟ್ಟ ವಾಕ್ಯ ನನಗೆ
ಕರಣಕೆ ಬಿದ್ದೊಯಿತಲ್ಲ || ಸಿದ್ಧಯ್ಯ ||

ಗುರುವೇ ಕೆಟ್ಟವಾಕ್ಯವು
ನನ ಕರಣ ಕೇಳಿಬುಟ್ಟೆ
ಈ ದುರುಳುವಾದ ವಾಕ್ಯ
ನನ್ನ ಮನಸ್ಸಿಗೆ ಬಂದುಬುಡುತು
ಈ ಕೆಟ್ಟ ವಾಕ್ಯ ಗುರುವೇ
ನಾ ಕೇಳಿದೆನಲ್ಲ ಎಂದರಂತೆ || ಸಿದ್ಧಯ್ಯ ||

ಒಬ್ಬನೆ ಹುಟ್ಟಿ ಒಬ್ಬನೆ ಬೆಳೆದು ದೇವಾ
ಉತ್ತೇಸ್ಪರನ ಪಡೆದು ಮಹೇಸ್ವರನ ಪಡೆದು
ಆಕಾಶನೆ ಪಡೆದು ಈ ಭೂಮಿ ತಾಯನೆ ಪಡೆದು
ಈಗ ಕಟ್ಟ ಕಡೆಯಲಿ ಆದಿಶಕ್ತಿಯನೆ ಪಡೆದದಕ್ಕೆ
ಆನಂದವಾದಂತ ವಚನ
ನನ್ನ ಕರ್ಣಕೆ ಬೀಳ್ಳಿಲ್ವಲ್ಲಾ
ಈಗ ಕೆಟ್ಟ ವಾರ್ತೆಯನ್ನು ನನ್ನ ಕರ್ಣಕೆ ಕೇಳಿ ಬುಟ್ಟೆನಲ್ಲ ಎನುತೇಳಿ

ಅಯ್ಯ ಅದಿಸಕ್ತಿ ಮುಖವ
ಕಣ್ಣಿಂದೇ ನೋಡಿ
ಅಪ್ಪಾಜಿ ಗುರುವು
ಪರಂಜ್ಯೋತಿಯವರು
ನನ್ನ ಧರೆಗೆ ದೊಡ್ಡಪ್ಪ
ಅವಳ್ಗೆ ಎತ್ತ ಶಾಪ ಕೋಟ್ಟಾರಲ್ಲ
ಎತ್ತಯ್ಯ ಪರಂಜ್ಯೋತಿ || ಸಿದ್ಧಯ್ಯ ||

ಈಗಲೀಗ ಜಗಂಜ್ಯೋತಿ ಮಂಟೆದಲಿಂಗಪ್ಪ
ಧರೆ ತಂದುಗುರು
ಈ ಭೂಮಿ ಪಡೆದಂತಹ ಗುರುವು
ಆದಿಶಕ್ತಿಗೆ ಶಾಪಕೊಟ್ಟು ಮುಂದಕೆ ಹೋಗಬೇಕು ಅಂತಹೇಳಿ
ಕೇಳೋ ನನ ಕಂದಾ
ಈಗಲೀಗಾ ನಾನು ಒಬ್ಬನೇ ಹುಟ್ಟಿ ಒಬ್ಬನೇ ಬೆಳೆದು
ಈಗ ಈ ವಾರ್ತೆ ನಿನ್ನ ಬಾಯ್ಲಿ ನನ್ನ ಕರ್ಣಕೆ ಕೇಳಿ ಬುಟ್ಟಿತು
ಅನೇಕ ಕರ್ಮ ಬಂದೋಯ್ತು
ನನಗೆ ಪಾಪ ಬಂದು ಬುಡ್ತು ಅಂತ ಹೇಳಿ
ನಿನಗೆ ಪತಿಬೇಕಾದ್ರೆ
ನನ್ನ ಮಂತ್ರ ಉಪದೇಸದಲ್ಲಿ
ನಿನ್ನ ಗರ್ಭದಲಿ ಕಂದಾ

ಮೂರು ಮಕ್ಕಳ್ನ ಕಂದಾ
ಕೊಡ್ತಿನಿ ಎಂದರಂತೆ || ಸಿದ್ಧಯ್ಯ ||

ಈಗಾಲೀಗ ನಾಕೊಟ್ಟ ವರದಲ್ಲಿ ಮೂರು ಮಂದಿ
ಮಕ್ಕಳು ನಿನ್ನ ಗರ್ಭದಲ್ಲಿ ಹುಟ್ಟಲಿ
ಈ ಸತ್‌ವಂತ ದೇವರು
ಪರಂಜ್ಯೋತಿ ಎನುವಂತ ನಡೆನುಡಿ ಗೊತ್ತಿಲ್ಲವೆ
ಈ ಕೆಟ್ಟ ವಾರುತೆ ನಿನ ಬಾಯ್ಲಿ ಬಂದುದಕೆ

ನಿನ್ನ ಹೊಟ್ಟೆಲುಟ್ಟಿದ ಮಕ್ಕಳಿಗೆ
ಮಡದಿ ಆಗು ಎಂದುರಲ್ಲ || ಸಿದ್ಧಯ್ಯ ||

ಹೀಗೆಂದು ಶಾಪ ಕೊಟ್ಟುರಲ್ಲ
ಮಾಯ್ಯಾರ ಮಂಟೇಯ ಸ್ವಾಮಿ || ಸಿದ್ಧಯ್ಯ ||

ಅಯ್ಯಾ ಎತ್ತಿ ಶಾಪವನ್ನು
ಕೊಟ್ಟು ಬುಟ್ಟು ಗುರುವು
ಅಲ್ಲಮಪ್ರಭು ಪರಂಜ್ಯೋತಿಯವರು
ಅವರು ಆದಿಶಕ್ತಿ ಬುಟ್ಟೆ ಬುಟ್ಟು
ಮತ್ತೆ ಮುಂದಕೆ ಬರುತಾರೆ || ಸಿದ್ಧಯ್ಯ ||

ಇಂತ ಕೆಟ್ಟ ಸ್ತ್ರೀಯಳ ಮಗಳಾs
ಕಣ್ಣಿಂದ ನೋಡಬಾರದು ಎನುತೇಳಿ
ಪರಂಜ್ಯೋತಿಯವರು ಆದಿಶಕ್ತಿ ಬಿಟ್ಟು

ಅವರೊಬ್ಬಾರೆ ಬಿಜು ಮಾಡುತಾರೆ
ಪರಂಜ್ಯೋತಿ ಪರಬ್ರಹ್ಮ || ಸಿದ್ಧಯ್ಯ ||

ತಾವಾಗಿ ಬರುವಾಗ ಗುರುವು ಆಗಲೀಗ ಜಗತ್ತು ಗುರುಗಳು
ಕೊಟ್ಟಂತಹ ವರದಲಿ ಗುರುವು ಆದಿಸತಿ ಗರುಭದಲ್ಲಿ

ಅಯ್ಯಾ ಒಬ್ಬ ಮಗನು ಗುರುವೇ
ಅಯ್ಯ ವರದಲ್ಲಿ ಹುಟ್ಟಿದನಾಗ || ಸಿದ್ಧಯ್ಯ ||

ಅಯ್ಯಾ ವಿಷದ ಹೊಗೆ ಒಳಗೆ
ಕಾಲವನ್ನೆ ಕಳೆವಂತ
ನನ್ನ ಈಶ್ವರ ಮಲ್ಲಯ್ಯನವರು
ಮೊದಲಾಗಿ ಹುಟ್ಟಿದರಲ್ಲಿ || ಸಿದ್ಧಯ್ಯ ||

ಆದಿಸಕ್ತಿ ಗರ್ಭದಲ್ಲಿ ಗುರುವು
ಈಶ್ವರ ಮಲ್ಲಯ್ಯ ಅಂತಹೇಳಿ
ಮೊದಲನೆಮಗ ಹುಟ್ಟಿದ ಕಾಲದಲಿ ಗುರುವು
ಗುರುವೆ ಹುಟ್ಟಿದಂತ ಮಗನ
ಅಂದಚೆಂದ ನೋಡುತಾಳೆ || ಸಿದ್ಧಯ್ಯ ||

ಹುಟ್ಟಿದಂತಹ ಗುರುವು ಈಶ್ವರ ಮಲ್ಲಯ್ಯನವರು
ಕಣ್ಣಿನಿಂದಾ ನೋಡಿ ಬುಟ್ಟು ಆದಿಶಕ್ತಿ ಕೇಳವ್ವಾ ತಾಯಿ
ನಿನ್ನ ಹೊಟ್ಟೇಲಿ ಹುಟ್ಟಿದಾ
ಮಗನು ತಾಯಿ ಎಂದರಂತೆ

ಮಗನು ಎನ್ನಲು ಬ್ಯಾಡ
ಕೇಳಪ್ಪ ಎಂದರಂತೆ || ಸಿದ್ಧಯ್ಯ ||

ನನ್ನ ಮಗನು ನೀನು ಅಗುಬ್ಯಾಡ ಕಂದಾ
ತಾಯಿ ನಾನು ನಿನಗೆ ಆಗುದಿಲ್ಲ ಎಂದವರೇ
ನೀನು ಗುರು ಕೊಟ್ಟ ವಾಕುತನಕೆ
ನನಗೆ ಪತಿಯು ನೀನಾಗಬೇಕು || ಸಿದ್ಧಯ್ಯ ||

ಗುರು ಕೊಟ್ಟ ಮಾತಿನ ಪರಿಕಾರ
ನನಗೆ ನೀವು ಪತಿಯಾಗಬೇಕು ಎಂದುರು
ಆದಿಶಕ್ತಿ ಮಾತ ಕೇಳಿಕಂಡು ಈಶ್ವರ ಮಲ್ಲಯ್ಯ
ಶಿವಶಿವಾ ಅಂತಹೇಳಿ ಎರಡು ಕರ್ಣ ಮುಚ್ಚಿಕಂಡ್ರು
ಹರ ಹರಾ ಎಂತ ಹೇಳಿ ಎರಡು ನೇತ್ರ ಮುಚ್ಚಿಕಂಡುರು
ಏನವ್ವ ತಾಯಿ ಈಗ ಹುಟ್ಟಿ ಈಗ ಬೆಳದಂತ ಮಗ ನಾನು
ಈಗ ನಿನ್ನ ಗರ್ಭದಲ್ಲಿ ಹುಟ್ಟಿ

ಈ ಕೆಟ್ಟ ವಾರ್ತೆಯ ಗುರುವು
ಕೇಳಲಾರೆ ಎಂದರಲ್ಲಾ || ಸಿದ್ಧಯ್ಯ ||

ಕೆಟ್ಟ ವಾರ್ತೆ ಕೇಳಲಾರೆ
ಹಾಗೆಂದು ಈಶ್ವರ ಮಲ್ಲಯ್ಯನವರು
ಕೇಳವ್ವ ತಾಯಿ ಆಡಿದ ಮಾತೆ ಸಾಕು
ಈಗಲೀಗಾ ನನಗೆ ನೀವು ಮಡದಿಯಾಗಬೇಡಿ
ನನ್ನ ಬೆನ್ನಿಂದೆ ಇನ್ನೊಬ್ಬ ಬರುತಾನೆ

ಬಂದಂತಹ ಮಗನಿಗೆ
ಮಡದಿಯಾಗು ಎಂದರಲ್ಲಾ || ಸಿದ್ಧಯ್ಯ ||

ಅಮ್ಮ ಬಂದತಂಹ ಮಗನಿಗೆ
ಮಡದಿಯಾಗು ಯಂತ
ಗುರುವೆ ಆದಿಶಕ್ತಿಗೆ
ಅವರು ಕೈ ಎತ್ತಿ ಮುಗುದು
ಅವರು ಹೆತ್ತತಾಯಿ ಎನ್ನುವುದ ಮರೆತು
ಮುಂದಕೆ ಹೊರಟರಂತ || ಸಿದ್ಧಯ್ಯ ||

ಈಗಲೀಗಾs
ಈ ಕೆಟ್ಟ ತಾಯಿ ವಾಗುತಾನ ನನಗೆ ತರವಲ್ಲ ಅಂತಹೇಳಿ
ಈಶ್ವರ ಮಲ್ಲಯ್ಯ
ಆಗಲೀಗ ತಾವು ಮುಂದಕೆ ದಯ ಮಾಡಿಸುದೋರು
ಈಗಲೀಗ ಮೂರೂ ನೇತ್ರ ಉಳ್ಳಾದಂತಹ
ಮಗನಿಗೆ ನಾನು ಮಡದಿ ಆಗಲಿಲ್ಲವಲ್ಲಾ ಎಂತ ಹೇಳಿ
ಆದಿಶಕ್ತಿ ಚಿಂತೆ ಒಳಗೆ ಇರುವಾಗ
ಈ ಮೂರು ನೇತ್ರವುಳ್ಳಾದವರು ನನ್ನ ಒಪ್ಪಲಿಲ್ಲಾ ಮೆಚ್ಚುನಿಲ್ಲ
ಇವರ ಹಿಂದೆ ಬರುವಂತಹವರು
ನನಗೆ ಪತಿಯಾಗಿಬುಡ್ಲಿ ಅಂತ ಹೇಳಿ
ಹಗಲು ಇರುಳುವೆ
ಹುಟ್ಟುವಂತಹ ಮಕ್ಕಳ ಗ್ಯಾನನೇ ಮಾಡುತ
ಆದಿ ಶಕುತಿ ಕಾಲ ಕಳೆವಾಗ

ಇವರು ಮೂರು ಶಿರಸ ವುಳ್ಳಾದವರು
ನನ್ನ ಬ್ರಹ್ಮದೇವರು ಹುಟ್ಟುತಾರೆ || ಸಿದ್ಧಯ್ಯ ||