ಮುತ್ತತ್ತಿರಾಯ ಮತ್ತು ಮಂಟೇದರು

ಚಿಕ್ಕಲ್ಲೂರು ಜಾತ್ರೆಯ ಕೊನೆಯ ದಿನ ಮತ್ತತ್ತಿರಾಯನಿಗೆ ಸಂಬಂಧಿಸಿದ ಆಚರಣೆಯೊಂದು ನಡೆಯುತ್ತದೆ. ಸಿದ್ದಪ್ಪಾಜಿಯವರು ಧರೆಗುರುಗಳ ಮಠಮನೆ ಕಟ್ಟಲು ಕಬ್ಬಿಣ ಭಿಕ್ಷೆಗೆ ಹಲಗೂರಿಗೆ ಬಂದಾಗ ಅಲ್ಲಿನ ಮಾರಿಯರನ್ನು ಮೊದಲು ಗೆಲ್ಲಬೇಕಾದ ಪ್ರಸಂಗ ಬರುತ್ತದೆ. ಆ ಮಾರಿಯರಿಗೆ ಹೆದರಿ ಭಿಕ್ಷೆಗೆ ಹೋಗಲು ಆಗದೆ ದಾರಿಯಲ್ಲೇ ಕಾಯ್ದುಕೊಂಡಿದ್ದ ಮುತ್ತತ್ತಿರಾಯನ ಪರಿಚಯವಾಗುತ್ತದೆ ಸಿದ್ದಪ್ಪಾಜಿಗೆ. ಆಗ ಸಿದ್ದಪ್ಪಾಜಿ ಮುತ್ತತ್ತಿರಾಯನನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಇದರ ನೆನಪಾಗಿ ದಾಸಯ್ಯನವರು, ದಾಸ ಒಕ್ಕಲಿನವರು, ನೀಲಗಾರರು, ಮಂಟೇಸ್ವಾಮಿ ಒಕ್ಕಲಿನವರು ಸೇರಿ ಆ ಆಚರಣೆ ಮಾಡುತ್ತಾರೆ. “ಆ ದಿನ ನೀಲಗಾರರೆಲ್ಲಾ ಮಟ್ಟಿಕಪ್ಪು ಧರಿಸದೇ ಮೂರು ನಾಮ ಹಕಿಕೊಂಡು ಅಪರಾ – ಗೋಪರ ಹಾಕಿ ಕಜ್ಜಾಯ ಮಣೆ ಸೇವೆ ಮಾಡುತ್ತಾರೆ” [ ಇಂದ್ವಾಡಿ; ಮಂಟೇಸ್ವಾಮಿ ಪರಂಪರೆ, ಪು. ೧೦೯]

ಈ ಸಂದರ್ಭ ಮಂಟೇದ ಪರಂಪರೆ ವಿಷ್ಣು ಭಕ್ತರ ಪರಂಪರೆಯೊಂದಿಗೆ ಮುಖಾಮುಖಿಯಾಗುವ ಒಂದು ವಿಚಿತ್ರ ಆಚರಣೆಯಾಗಿದೆ. ನಾಮ ಧರಿಸುವುದು ನಾರಾಯಣನ ಲಾಂಛನ. ಹೀಗೆ ನಾಮ ಹಾಕಿ ‘ಮಣೆ ಹಾಕುವ’ ದಾಸಯ್ಯಗಳು ಕರ್ನಾಟಕದಾದ್ಯಂತ ಹಂಚಿ ಹೋಗಿದ್ದು, ರಾಕ್ಷಸಾಕಾರದ ಕರಿಯಣ್ಣ, ಕೆಂಚಣ್ಣ ಎಂಬ ಮುಖವಾಡಗಳನ್ನಿಡಿದು ಮೃಗಗಳಂತೆ ಪ್ರಸಾದ ಮುಕ್ಕುವ ಆಚರಣೆ ಇವರು ವಾಸವಿರುವ ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುತ್ತದೆ. ಮೂಲತಃ ಮತ್ತತ್ತಿರಾಯ ವಾನರ. ಇವನು ರಾಮನ ಬಂಟನಾಗಿದ್ದ ಹನುಮನೇ ಆಗಿದ್ದು, ವೈದಿಕ ರಾಮನಿಗೆ ಗುಲಾಮನಾದ ಹನುಮಂತನನ್ನು ತಳಸಮುದಾಯಗಳು ಭಿನ್ನವಾಗಿ ಉಳಿಸಿಕೊಂಡ ಬಗೆ ಇರಬಹುದು ಇದು. ಒಟ್ಟಿನಲ್ಲಿ ಈ ಸಂದರ್ಭದಲ್ಲಿ ಎರಡು ಸಂಸ್ಕೃತಿಗಳು ತಮ್ಮ ನಾಯಕರ ಸ್ನೇಹದ ಕಾರಣಕ್ಕೇ ಬೆರೆತು ಒಂದು ಆಚರಣೆಯಲ್ಲಿ ತೊಡಗುವುದು ತುಂಬಾ ವಿಶಿಷ್ಟವಾಗಿದೆ. ಇಂಥ ಸಂದರ್ಭಗಳಲ್ಲಿ ವೈದಿಕ ಜಾತಿ ವಿಂಗಡಣೆಯನ್ನು ಬೇರೆಯ ರೀತಿಯಲ್ಲೇ ನೋಡಬೇಕಿದ್ದರೂ, ಕಾಲಾನಂತರ ಈ ಆಚರಣೆಗಳಲ್ಲೂ ಮೇಲು – ಕೀಳಿನ ಕಲ್ಪನೆ ಸುಳಿದಿರುವುದು ಸುಳ್ಳಲ್ಲ.

ಮುತ್ತತ್ತಿರಾಯ ಮತ್ತು ಸಿದ್ದಪ್ಪಾಜಿ ಪಂಥಗಳ ನಡುವೆ ಆಗಬಹುದಾಗಿದ್ದ ಸಂಘರ್ಷ ಸ್ನೇಹಕ್ಕೆ ತಿರುಗಿರಬಹುದಾದ ಸಾಧ್ಯತೆಯನ್ನು ಗುರುತಿಸಬಹುದು. ಮುತ್ತತ್ತಿರಾಯನ ವೈಷ್ಣವ ಪಂಥ ಸಿದ್ದಪ್ಪಾಜಿಯವರ ಜಾಗದಲ್ಲಿ ಬಿಕ್ಷೆ ಬೇಡುವ ಮೂಲಕ ತನ್ನ ಪಂಥವನ್ನು ಹರಡಲು ಯತ್ನಿಸಿದ್ದಿರಬೇಕೆಂಬ ಗುಮಾನಿಗಳಿವೆ. ಆದರೆ ಸಂಘರ್ಷವಾಗಬೇಕಾಗಿದ್ದ ಆ ಸನ್ನಿವೇಶ ಸ್ನೇಹಕ್ಕೆ ತಿರುಗುವಲ್ಲಿ ಮಂಟೇದ ಪರಂಪರೆಯ ಕುಲಸಮೀಕರಣ ತತ್ವ ಕೆಲಸ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಮಂಟೇಸ್ವಾಮಿಗಳು ಈಗಾಗಲೇ ಉತ್ತರದಿಂದ ಬಂದವರಾಗಿದ್ದು, ತಮ್ಮ ಪ್ರಯಾಣದ ಮಧ್ಯೆ ಈ ಥರದ ಹಲವಾರು ಪಂಥಗಳನ್ನು ಎದುರಾಗಿ ಬಂದಿರಬಹುದಾಗಿದ್ದು, ಅವರು ಅದರಿಂದ ಕಲಿತ ಕುಲ ಸಮೀಕರಣ ಚಾತುರ್ಯವನ್ನು ಇಲ್ಲಿ ಮೆರೆದಿರಬಹುದು. ಮಂಟೇದರ ಪ್ರಭಾವ ದಟ್ಟವಾಗಿದ್ದ ಕಾಲದಲ್ಲಿ ಮತ್ತತ್ತಿರಾಯನ ಅಸ್ತಿತ್ವವಿರುವುದನ್ನು ನಾವು ಶೈವ – ವೈಷ್ಣವ ಜಗಳಗಳ ಹಿನ್ನೆಲೆಯಲ್ಲಿಯೇ ನೋಡಬಹುದು. ಕ್ರಿ. ಶ. ೧೦೧೭ರಿಂದ ೧೧೩೭ರವರೆಗೆ ಜೀವಿಸಿದ್ದ ರಾಮಾನುಜಾಚಾರ್ಯರು ಕರ್ನಾಟಕದ ಬಹುಭಾಗಗಳನ್ನು ಆಳುತ್ತಿದ್ದ ಹೊಯ್ಸಳರ ದೊರೆ ವಿಷ್ಣುವರ್ಧನನನ್ನು ವೈಷ್ಣವನನ್ನಾಗಿಸುವ ಚಾರಿತ್ರಿಕ ಮತಾಂತರದ ವಾಸನೆ ಇಲ್ಲಿ ಕಂಡುಬರುತ್ತದೆ. ರಾಮಾನುಜರ ಕರ್ನಾಟಕ ಪ್ರವಾಸದ ಮಹತ್ವದ ಸುಳಿವೇ ಈ ಮುತ್ತತ್ತಿರಾಯನಿರಬಹುದು. ಏಕೆಂದರೆ ಹೊಯ್ಸಳರ ಆಳ್ವಿಕೆಗೆ ಮೇಲುಕೋಟೆ ಮತ್ತು ಶ್ರೀರಂಗಪಟ್ಟಣಗಳು ಪ್ರಮುಖ ಕೇಂದ್ರಗಳು. ಅಂದಿನ ಶೈವಪಂಥದ ಸೋಲು೧೬ – ೧೭ನೇ ಶತಮಾನದಿಂದಾಚೆಗೆ ಪುನರ್ ವಿಜೃಂಭಿಸುವ ಪ್ರತಿಮೆಯಾಗಿ ಈ ಸಂದರ್ಭವನ್ನು ವಿವರಿಸಿಕೊಳ್ಳಬಹುದು. ಹಾಗೂ ಮಂಟೇಸ್ವಾಮಿ ರೀತಿಯ ಪಂಥಗಳು ವೈಷ್ಣವ ಧರ್ಮದ ಪ್ರಭಾವಕ್ಕೆ ಇತ್ತೀಚೆಗೆ ಸಿಲುಕುತ್ತಿರುವ ದುರಂತವೂ ಇಲ್ಲಿ ಕಾಣುತ್ತದೆ. ಕೈವಾರ ತಾತಯ್ಯನವರ ಪಂಥವೂ ಇದೇ ದಾರಿಯಲ್ಲಿರುವುದನ್ನು ನಾವು ಕಾಣಬಹುದು. ರಹಮತ್ ತರೀಕೆರೆ ಮತ್ತು ಶಂಕನಪುರರ ಗುಮಾನಿಯಂತೆ “ಒಂದು ಹೊಸ ಪಂಥವು ಬೇರೊಂದು ಸಂಸ್ಕೃತಿಗಳಿರುವ ಜಾಗದಲ್ಲಿ ನೆಲೆಸುವಾಗ ನಡೆದಿರಬಹುದಾದ ಸಹಜ ತಿಕ್ಕಾಟಗಳನ್ನು ಈ ಮಿಥ್‌ಗಳು ಸೂಚಿಸಬಹುದಾದರೂ” [ರಹಮತ್ ತರಿಕೆರೆ; ಕರ್ನಾಟಕದ ಸೂಫಿಗಳು ಪು. ೧೨೫, ಮಹದೇವ ಶಂಕನಪುರ, ಚಿಕ್ಕಲ್ಲೂರು ಜಾತ್ರೆ, ಪು.೪೫] ಜಾತಿಗಳು ಬಲವಾಗಿದ್ದ ಈ ಭಾಗಗಳಲ್ಲಿ ಊಳಿಗಮಾನ್ಯ ದೊರೆಗಳ ಪ್ರಾಬಲ್ಯ ಹೆಚ್ಚಿದ್ದು, ಸಿದ್ಧರು ತಮ್ಮ ತಮ್ಮ ಪಂಥಗಳನ್ನು ಹರಡಲು ತುಂಬಾ ಕಷ್ಟ ಪಡಬೇಕಾಗಿತ್ತು. ಅಲ್ಲದೆ ಇಲ್ಲಿನ ಮುತ್ತತ್ತಿರಾಯ ರಾಮಾಯಣದ ಆಂಜನೇಯನೇ ಎಂದು ಹೇಳುವ ಯಾವುದೇ ಆಧಾರಗಳಿಲ್ಲ. ಮುತ್ತತ್ತಿರಾಯನ ಚಹರೆ ಮಂಗನಂತಿದ್ದು, ಕಾಲಾನಂತರದಲ್ಲಿ ಅದು ಹನುಮಂತನ ಗುಡಿಗಳಾಗಿ ಮಾರ್ಪಟ್ಟಿರಬಹುದಾಗಿದ್ದು, ಆತ ಸ್ಥಳೀಯ ಸಂಸ್ಕೃತಿಯೊಂದರ ಹಿರಿಯನಿದ್ದರೂ ಇರಬಹುದು. ಕಾವ್ಯದಲ್ಲಿ ಆತನನ್ನು ತೀರಾ ಮಾನವ ನೆಲೆಯಲ್ಲಿ ನೋಡುವುದು ಇದನ್ನು ಪುರಸ್ಕರಿಸುತ್ತದೆ. ಅಲ್ಲದೆ ಸಿದ್ದಪ್ಪಾಜಿಗಿಂತ ಶಕ್ತಿಯಲ್ಲಿ , ತೇಜಸ್ಸಿನಲ್ಲಿ ದೈವತ್ವದಲ್ಲಿ ಕಡಿಮೆ ಶಕ್ತಿವಂತನಾಗಿರುವುದು ಕಂಡು ಬರುತ್ತದೆ.

ಕಕ್ಕೆ ಮರದ ಅಂಡಲ್ಲಿ ದೇವ
ಸಿದ್ದಪ್ಪಾಜಿಯವರ ನೋಡ್ಬುಟ್ಟು
ಅಡುಕ್ಕಂಡು ಗಡಗಡನೆ ನಡುಗ್ತ ಧರಧರನೆ ಒದರುತ್ತ
ಆಗಲೀಗ ಮೂಲಿಗ ಮುತ್ತತ್ತಿರಾಯ ಮೊಕ್ಕಡವಾಗಿ ಮಲಗಿದ್ದ
ಮನುಗಿದ್ದಂಥ ಮೂರ್ನಾಮದ ದಾಸಪ್ಪನನ್ನು
ಕಣ್ಣಿಂದ ನೋಡ್ಬುಟ್ಟು ಸಿದ್ದಪ್ಪಾಜಿ
ಏನಪ್ಪಾ ಮೂರ್ನಾಮದ ದಾಸಯ್ಯ
ಯಾಕೋ ಕಕ್ಕೆ ಮರದಡಿಯಲ್ಲಿ ಬಿದ್ದುಕೊಂಡು ಯಾಕೆ ಒದ್ದಾಡಿಯಪ್ಪ
[ಹಿ.ಚಿ. ಬೋರಲಿಂಗಯ್ಯ; ಮಂಟೇಸ್ವಾಮಿ , ಪು. ೬೭೩]

ಈ ಪ್ರಸಂಗ ಸಿದ್ದಪ್ಪಾಜಿಯನ್ನು ಮುತ್ತತ್ತಿರಾಯನಿಗಿಂತ ಅತಿಮಾನುಷನಂತೆ ವರ್ಣಿಸಿದ್ದು, ಮಂಟೇದ ಒಕ್ಕಲಿನ ಜನ ವೈಷ್ಣವರನ್ನು ತಮ್ಮ ಒಕ್ಕಲಿಗ ಸೇರಿಸಿಕೊಳ್ಳಲು ಅಥವಾ ಅವರಿಗಿಂತ ಹೆಚ್ಚಿನ ಸ್ಥಾನ ಗಿಟ್ಟಿಸಿಕೊಳ್ಳಲು ಈ ರೀತಿಯ ಸಂಕಥನವನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಈ ರೀತಿಯ ಸ್ವಪಂಥ/ನಾಯಕರ ಅತಿಮಾನುಷ ಶಕ್ತಿಯ ವಿಜೃಂಭಣೆ ಮತ್ತು ಇತರರ ಕಡಿಮೆ ಶಕ್ತಿಗಳನ್ನು ವರ್ಣಿಸುವ ಹಲವು ಸಂಕಥನಗಳು ನಮಗೆ ಎಲ್ಲಾ ಜನಪದ ಮಹಾಕಾವ್ಯಗಳಲ್ಲೂ ದೊರೆಯುತ್ತವೆ. ಈ ರೀತಿಯ ಸಂಕಥನಗಳು ಸಂಘರ್ಷದ ಕಾರಣಕ್ಕೆ ಹುಟ್ಟಿದ್ದರೂ, ಇಲ್ಲಿ ಅದು ಎಲ್ಲವನ್ನೂ ಒಳಗೊಳ್ಳುವ ಸಹಿಷ್ಣು ಸಂಸ್ಕೃತಿಯಾಗಿ ಕಂಡು ಸಂಘರ್ಷದ ಕಲ್ಪನೆಯೇ ಭಿನ್ನವಾಗಿ ಕಾಣುತ್ತದೆ. ಜಾತಿ ಅಧಿಕವಾಗಿರುವ ಸಮಾಜದಲ್ಲಿ ಆ ರೀತಿ ಎರಡು ಸಂಸ್ಕೃತಿಗಳು ನಿಖರ ವ್ಯಾಜ್ಯಕ್ಕೆ ಇಳಿಯುವ ಸಾಧ್ಯತೆಯೇ ಇರದೆ, ಬಹು ಜಾತಿಗಳ ನಡುವಿನ ಸಂಘರ್ಷ ಪಂಥಗಳ ಮೂಲಕವೇ ವ್ಯಕ್ತವಾಗುವ ವಿಭಿನ್ನ ಕ್ರಮ ಇಲ್ಲಿ ಕಾಣುತ್ತದೆ.

ಈ ಕಾರಣಕ್ಕೇ ಮಂಟೇಸ್ವಾಮಿ ಪರಂಪರೆಯ ಇಡೀ ಆಚರಣಾ ಜಗತ್ತು ಜಾತಿ – ಜಾತಿಗಳನ್ನು ಬೆಸೆಯುವ ಮಾಧ್ಯಮವಾಗಿ ಕಂಡು ಆ ಆಶಯದ ಈಡೇರಿಕೆಗಾಗಿ ‘ಮೀರಿದೋರ’ನ್ನು ಶಿಕ್ಷಿಸಿ ಜಾತ್ಯತೀತ ಕಲ್ಪನೆಗೆ ಒಗ್ಗಿಸುವ ಕಲ್ಪನೆಯಾಗಿದೆ.

ಈ ಪರಂಪರೆಯ ನೆಲೆ ಪ್ರಧಾನವಾಗಿ ಜಾತ್ಯಾತೀತವೇ ಆದರೂ ಇಲ್ಲಿ ದಲಿತರ ಪ್ರವೇಶಕ್ಕೆ ದೊಡ್ಡ ಅವಕಾಶಗಳಿವೆ. ರಹಮತ್ ತರೀಕೆರೆ ಹೇಳುವಂತೆ:

“ಸಾಮಾಜಿಕವಾಗಿ ಗುರುಪಂಥಗಳು ಜಾತಿಮತಗಳನ್ನು ನಿರಾಕರಿಸುತ್ತವೆ. ಜಾತ್ಯತೀತತೆ ಇವುಗಳ ಪ್ರಧಾನ ಲಕ್ಷಣ. ಗುರುಶಿಷ್ಯರ ಜಾತಿ ಸಾಮಾನ್ಯವಾಗಿ ಒಂದೇ ಅಲ್ಲ. ನಾಥ ಪಂಥದಲ್ಲಿ ಕೂಡ ಗುರುಗಳು ಹಾಗೂ ಅವರಿಗೆ ಭಕ್ತರಾಗಿ ನಡೆದುಕೊಳ್ಳುವ ಸಮುದಾಯಗಳು ಹಲವು ಜಾತಿಗಳಿಗೆ ಸೇರಿದವರು. ಜಾತ್ಯತೀತತೆಯ ಈ ಸಂಗತಿ ಸಹಜವಾಗಿ ದಲಿತರ ಪ್ರವೇಶಕ್ಕೆ ದೊಡ್ಡ ಅವಕಾಶ ಕಲ್ಪಿಸಿಕೊಡುತ್ತದೆ. ಮಂಟೇಸ್ವಾಮಿಯು ದಲಿತರೆಂದು ನಂಬಲಾಗಿದೆ. ಮಂಟೇಸ್ವಾಮಿ ಕಾವ್ಯವನ್ನು ಹಾಡುವ ಹೆಚ್ಚಿನ ಗಾಯಕರು ದಲಿತರು ಎಂಬುದು ವಾಸ್ತವವೇ ಆಗಿದೆ” [ ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಮುಖಾ ಮುಖಿ, ಪು. ೯೩]

ಹಿಂದೂ ಧರ್ಮದ ಹೊರಗಿರುವ ದಲಿತರಿಗೆ ಜಾತಿಯೇ ಇಲ್ಲವೆಂಬುದು ಸುಸ್ಪಷ್ಟ ‘ದಲಿತ’ ಎಂಬುದು ಕೂಡ ಹಲವು ತಳ ಸಮುದಾಯಗಳನ್ನು ಸೂಚಿಸುವ ಹೆಸರಾಗಿದ್ದು, ಒಂದೇ ಅಲ್ಲ. ಮಂಟೇಸ್ವಾಮಿ ಚಳವಳಿಯ ಸಾಮಾಜಿಕ ನ್ಯಾಯದ ಆಶಯ ಸಹಜವಾಗಿ ಅವಲತ್ತು ವಂಚಿತ ದಲಿತರನ್ನು ಸೆಳೆದಿದೆ. ಭಾರತದ ಜಾತಿ ವ್ಯವಸ್ಥೆಯಿಂದ ದಣಿದಿದ್ದ ದಲಿತರು ಮಂಟೇದರ,

ಕೀಳುಮೇಲಗಬೇಕು
ಮೇಲು ಕೀಳಾಗಬೇಕು
ಜಾತಿ ಮತವೆಲ್ಲಾ ಹೋಗಬೇಕು
ಏಕವಾಗಿ ಬಾಳಬೇಕು.
[ಇಂದ್ವಾಡಿ; ಧರೆಗೆ ದೊಡ್ಡವರ ಕಥೆ, ಪು. ೧೯೨]

ಆಜಾತಿ ಈಜಾತಿ ಏಕಜಾತಿ ಆಯಿತದೆ
ಮೇಲೇ ಕೀಳಾಯಿತದೆ
ಕಿಳೇ ಮೇಲಾಯಿತದೆ
ಆಜಾತಿ ಈಜಾತಿ ಅಂತ ಇಂಗಡಿಸಿದವೇ
ಕೀಳು ಜಾತಿ ಆಯಿತಾನೆ
[ಜಿ.ಶಂ. ಪ.; ಮಂಟೇಸ್ವಾಮಿ ಕಾವ್ಯ ಪು. ೮೮]

ನಾಳೆ ಅರಸು ಆಳು ಆಗುತಾನೆ
ಆಳು ಅರಸು ಆಗುತಾನೆ
[ಹಿ.ಚಿ. ಬೋರಲಿಂಗಯ್ಯ: ಮಂಟೇಸ್ವಾಮಿ, ಪು.೫೬೪]

ಎಂಬ ಆಶಯಕ್ಕೆ ಮನಸೋತು ಒಕ್ಕಲಾಗಿದ್ದಾರೆ. ಅಲ್ಲದೆ ಯಾರು ಶೋಷಣೆಗೆ ಅನ್ಯಾಯಕ್ಕೆ ಒಳಗಾಗಿರುತ್ತಾರೋ ಅವರು ಸಿಡಿದೇಳುವುದು ಐತಿಹಾಸಿಕ ಸತ್ಯ. ಮಂಟೇದರೂ ದಲಿತ ಸಮುದಾಯದಿಂದ ಬಂದವರಾಗಿರುವುದರಿಂದಲೇ ಅವರಿಗೆ ಜಾತ್ಯಾತೀತತೆ ಮಹತ್ವ ತಿಳಿದಿದೆ.

ಇಂದ್ವಾಡಿಯವರು ಅಭಿಪ್ರಾಯ ಪಡುವಂತೆ

“ಈ ಕಥನದ ಮೂಲ ಪುರಷರು ಅಸ್ಪೃಶ್ಯರಾದ ‘ಮಂಟೇ’ದವರು. ಇದು ಅಸ್ಪೃಶ್ಯರ ಕಡೆಗೆ ಚಲಿಸಿರುವ ಕಥೆ”. [ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ, ಪು.೬] ಈ ಹೇಳಿಕೆ ಪ್ರಸ್ತುತ ಸಂದರ್ಭದ ನೀಲಗಾರರ ಪರಂಪರೆಯನ್ನು ಕುರಿತದ್ದಾಗಿದೆ: ಹಾಗೂ ಸಾಮಾಜಿಕ ಚಲನೆಯ ಅರಿವಿನ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಹಾಗೆ ನೋಡಿದರೆ ಮಂಟೇದರು ಅಸ್ಪೃಶ್ಯತೆಯ ಕಲ್ಪನೆಯನ್ನು ಲೇವಡಿ ಮಾಡಿದವರು. ಮಂಟೇಸ್ವಾಮಿ ಪರಂಪರೆಯಲ್ಲಿಯೇ ಮಿಂದೇಳುವ ಇಂದ್ವಾಡಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಆಶ್ಚರ್ಯ. ಏಕೆಂದರೆ ಮಂಟೇಸ್ವಾಮಿ ಪ್ರತಿಪಾದಿಸುವ ಕುಲಕ್ಕೆ ಹೊಸ ಮಾದರಿಯೊಂದರ ಅಗತ್ಯವೇ ಇಲ್ಲ. ‘ಅಸ್ಪೃಶ್ಯ’ ಪದದ ಹುಟ್ಟೇ ಹೊರಗಿನದು. ಇಡೀ ಮಂಟೇಸ್ವಾಮಿ ಪರಂಪರೆ ನಡೆದ ದಾರಿ ಗಮನಿಸಿದರೆ ಈ ತಳ ಸಮುದಾಯಗಳು ‘ಸ್ಪೃಶ್ಯ’ವಾಗುವ ಕ್ರಮದ ವಿರುದ್ಧವೇ ಇದೆ. ಅಂದರೆ ಬಸವ, ಗಾಂಧಿಯಾದಿಯಾಗಿ ದಲಿತರನ್ನು ‘ಶರಣ’ರಾಗಿಸುವ ದಿಕ್ಕಿನಲ್ಲಿ ಅವರ ‘ಹೀನತೆ’ಯನ್ನು ಉನ್ನತೀಕರಿಸುವ, ಅದಕ್ಕಾಗಿ ತಮ್ಮದೇ ಆದ ಬದುಕನ್ನು ತ್ಯಜಿಸಿ ‘ಮೇಲ್ಮುಖ’ಕ್ಕೆ ಚಲಿಸುವ ಪರಿಕಲ್ಪನೆಯನ್ನು ನಿರಾಕರಿಸುವುದೇ ಮಂಟೇಸ್ವಾಮಿ ಪರಂಪರೆಯ ಕಾಳಜಿಯಿರಬಹುದು. ಅಂದರೆ ಅವರು ಯಾವುದನ್ನು ` ಶ್ರೇಷ್ಠ ‘ ಎನ್ನುವರೋ ಅದು, ಅವರು ಯಾವುದನ್ನು ‘ಕನಿಷ್ಠ’ ಎನ್ನುವರೋ ಅದಕ್ಕಿಂತ ‘ಶ್ರೇಷ್ಠ’ವಲ್ಲ. ಇಡೀ ಜಗತ್ತಿನ ಎಲ್ಲಾ ಸಮುದಾಯಗಳಿಗೂ ಆಗಿ ಮಿಗಬಲ್ಲ ಜೀವನ್ಮುಖಿ ದ್ರವ್ಯ ಇಲ್ಲೇ ಇದೆ ಎನ್ನುವುದು ಮಂಟೇಸ್ವಾಮಿಯ ಶ್ರೇಷ್ಠತೆ.

ಜಾತಿ ಶ್ರೇಣಿಕರಣದ ವಿರುದ್ಧ ಸಂಘರ್ಷ

ಈಗಾಗಲೇ ಚರ್ಚಿಸಿರುವಂತೆ ಮಂಟೇಸ್ವಾಮಿ ಪರಂಪರೆಯ ಅಥವಾ ಕಾವ್ಯದ ಇಡೀ ಆಶಯವೇ ಜಾತಿ ನಿರಾಕರಣೆಯಾಗಿರುವುದರಿಂದ ಜಾತಿ ಜಾತಿಗಳ ನಡುವೆ ಸೃಷ್ಟಿಯಾಗಿದ್ದ ಮೇಲುಕೀಳಿನ ಭಾವನೆಯನ್ನು ತೊಡೆದು ಹಾಕಲು ಈಗಾಗಲೇ ಯಾವುದು ಕೀಳು ಎನ್ನಲಾಗಿತ್ತೋ ಅದೇ ಚಹರೆಗಳನ್ನು ಬಳಸಿಕೊಂಡು ಕಲ್ಯಾಣಕ್ಕೆ ಪ್ರವೇಶ ಮಾಡುತ್ತಾರೆ. ಶರಣರು ಜಾತ್ಯತೀತ ಆಶಯಗಳನ್ನಿಟ್ಟುಕೊಂಡಿದ್ದರು ಸಹ ಅವರುಗಳ ಕಾಯಕ ನಿಷ್ಠೆಗಳೇ ಒಂದೊಂದು ದ್ವೀಪಗಳಾಗಿ ಮಾರ್ಪಟ್ಟು ಸ್ಪೃಶ್ಯ ಅಸ್ಪೃಶ್ಯ ಕಲ್ಪನೆ ಹೆಚ್ಚಾಗುತ್ತದೆ. ಇಲ್ಲಾ ಜಾತಿಗಳು ಒಂದುಗೂಡಿ ಒಂದು ಜಾತ್ಯಾತೀತ ಪರಿಸರವಾಗಿ ನಿರ್ಮಾಣವಾಗಬೇಕಿದ್ದ ಶರಣ ಚಳವಳಿ ಲಿಂಗಾಯತ ಧರ್ಮ ಅಥವಾ ಜಾತಿಯಾಗಿ ಮಾರ್ಪಟ್ಟು, ಮತ್ತೆ ವೈದಿಕರ ತೆಕ್ಕೆಗೆ ಹೋಗಲು ಪ್ರಾರಂಭವಾಗುತ್ತದೆ. ಇದೇ ಸಂದರ್ಭದಲ್ಲಿ ಜಾತಿ ಆಧಾರಿತ ಶ್ರೇಷ್ಠ – ಕನಿಷ್ಠ ವೈರುಧ್ಯಗಳು ಹೆಚ್ಚಾಗುತ್ತವೆ. ಇಂತಹ ಸಂದರ್ಭದಲ್ಲಿ ಬಸವಣ್ಣನ ಗುರುವಾಗಿ ಕಲ್ಯಾಣ ಪ್ರವೇಶಿಸುವ ಮಂಟೇಸ್ವಾಮಿ ತಳಕುಲಗಳ ‘ಪರಂಜ್ಯೋತಿ’ ಕಲ್ಪನೆಗೆ ಮತ್ತೆ ಜೀವನೀಡಿ ಈ ಹಿಂದೆ ೯ ಫಣಗಳ ಮುಖಂಡತ್ವ ವಹಿಸಿ ನಡೆಸಿದ ತೀವ್ರ ಸಂಘರ್ಷ ಬಸವಣ್ಣನನ್ನೂ ದಾಟಿ ಅಮಾನವೀಯಗೊಳ್ಳುತ್ತಿದ್ದಾಗ ತಮ್ಮ ಒಗ್ಗಟ್ಟಿನ ಚಲನೆಯನ್ನು ಪುನರ್‌ಪ್ರತಿಷ್ಠಾಪಿಸಿ ಶ್ರೇಷ್ಠತೆ ಮೆರೆಯುತ್ತದೆ ಈ ‘ಪರಂಜ್ಯೋತಿ’ ಕಲ್ಪನೆ. ಇದು ಬಹುಪಾಲು ಅಗ್ಗಿಷ್ಟಿಕೆ, ಕುಲುಮೆಗಳ ಕಾವು ಮತ್ತು ಜಾತಿ ಕಾವಿನಿಂದ ರೂಪತಾಳಿರಬಹುದು. ಹೀಗೆ ನೋಡುವಾಗ ಕಾವ್ಯದಲ್ಲಿ ಬರುವ ‘ಲಿಂಗ ಕಟ್ಟುವ’ ಪ್ರಸಂಗ ಗುಮಾನಿಗೆ ಒಳಗಾಗುತ್ತದೆ. ಏಕೆಂದರೆ ಜಾತಿ ಜಾತಿ ನಡುವಿನ ಸಂಘರ್ಷದಿಂದ ತಳ ಸಮುದಾಯಗಳು ಏನನ್ನೂ ಪಡೆದಿಲ್ಲ ಎಂಬ ಸತ್ಯ ಇಷ್ಟೋಂದು ಬೃಹತ್ ಮಾನವೀಯ ಕಾವ್ಯವನ್ನು ಸೃಷ್ಟಿಸಿದವರಿಗೆ ತಿಳಿದಿರಲಿಲ್ಲವೇ? ಅಥವಾ ಕಾಲಾಂತರಗಳಲ್ಲಿ ಬದಲಾದ ಜಾತಿ ಕಲ್ಪನೆಗಳಿಗೆ ತಕ್ಕಂತೆ ಈ ಕಾವ್ಯದ ಹರಿವು ಬದಲಾಯಿತೇ?

ಒಂದು ಅಸ್ಪೃಶ್ಯ ಜಾತಿಗೆ ಸೇರಿದ ಮಂಟೇಸ್ವಾಮಿ ಹೊಸದೊಂದು ಕಲ್ಯಾಣವನ್ನು ನಿರ್ಮಿಸುವುದೇ ಬಹುಮುಖ್ಯ ಅಂಶ. ಇಲ್ಲಿ ಜಾತಿಗಳ ನಡುವಿನ ಸಂಘರ್ಷವು ಮಂಟೇದರ ಒಕ್ಕಲಾಗುವ ಮೂಲಕ ಕರಗಿ ಹೋಗಿ ಪರಸ್ಪರ ಅವಲಂಬನೆಯ ಕುಲಸ್ಥಾಪನೆಯಾಗುವ ಪವಾಡವಿದೆ.

ಮಂಟೇಸ್ವಾಮಿ ಕಾವ್ಯದ ಇಡೀ ಸಂಘರ್ಷದ ಭಾಗವು ಜಾತಿಯನ್ನೇ ಪ್ರಧಾನವಾಗಿಟ್ಟುಕೊಂಡು ಅದರ ಮೀರುವಿಕೆಗಾಗಿ ವಿವಿಧ ಸಂಘರ್ಷಗಳಿಗೆ ಎದುರಾಗುವ ಕ್ರಮ ಕಾಣುತ್ತದೆ.

ಕಲ್ಯಾಣದ ಫಟ್ಟಣದ ಸಾಲಿನಲ್ಲಿ ಬರುವ ದಾಸೋಹದ ಕಲ್ಪನೆ ಕಾವ್ಯದ ಬಹುಮುಖ್ಯ ಸಂಘರ್ಷದ ಭಾಗ. ವಿಭಿನ್ನ ಜಾತಿಗಳ ಜನ ಒಟ್ಟಿಗೆ ಕೂಡಿ ಒಂದೇ ಜಾಗದಲ್ಲಿ ಊಟ ಮಾಡುವ ಈ ದಾಸೋಹ ವ್ಯವಸ್ಥೆಯು ಜಾತ್ಯಾತೀತ ಸಮಾಜ ನಿರ್ಮಾಣದ ಬಹುಮುಖ್ಯ ಅಂಶ. ಇದನ್ನು ಮಹದೇವರ ‘ಕುಸುಮಬಾಲೆ, ಒಡಲಾಳ’ಗಳಲ್ಲಿ ಬರುವ ಊಟದ ಸಂಭ್ರಮಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡರೆ ಬಸವಣ್ಣ ದಾಸೋಹದ ಕಲ್ಪನೆಗಿಂತ ಉನ್ನತವಾದ ಪ್ರಜ್ಞೆಯೊಂದು ಗೋಚರಿಸುತ್ತದೆ. ಏಕೆಂದರೆ ಒಂದು ಸಮುದಾಯ ದಾಸೋಹ ಏರ್ಪಡಿಸುವ ಸ್ಥಿತಿಗೆ ಬರುವುದು ಆ ಸಮುದಾಯ ಈಗಾಗಲೇ ಉಳಿಸಿರಬಹುದಾದಂತಹ ಸಂಪತ್ತಿನ ಮರುಬಳಕೆಯಿಂದಲೇ ಎನ್ನಬಹುದು. ಆದರೆ ಚಿಕ್ಕಲ್ಲೂರಿನ ಸಂಭ್ರಮ ಬೇರೆ ರೀತಿಯದು. ಇಲ್ಲಿನ ‘food Gathering and Capturing’ ಭೌತಿಕವಲ್ಲ. ಕಾವ್ಯದಲ್ಲಿ ಈ ದಾಸೋಹ ಪ್ರಮುಖವಾಗಿ ಎರಡು ಕಡೆ ಬರುತ್ತದೆ. ಮೊದಲನೆಯದು ಮಂಟೇಸ್ವಾಮಿಗಳ ಪ್ರವೇಶವಾದಾಗ ನಡೆಯುವುದು ಇನ್ನೊಂದು ಕಲ್ಯಾಣ ಬರಿದುಮಾಡಿದ ನಂತರ ಊಳಿಮುಟ್ಟದ ಲಿಂಗ ಪಡೆದ ಜಂಗಮರೊಂದಿಗೆ ನಡೆಯುವುದು. ಮೊದಲನೆಯ ದಾಸೋಹದಲ್ಲಿ;

ಅರವತ್ತಾರು ಮಂದಿ ಜಂಗಮರು
ಮೂವತ್ತಾರು ಮಂದಿ ಮುನಾದು ಮುನಿಗಳು
ಲಕುಸದ ಮ್ಯಾಲೆ ತೊಂಬತ್ತೇಳು ಕೋಟಿ
ಶಿವಶರಣು ಮಾತುಮರು
[ಹಿ. ಚಿ. ಬೋರಲಿಂಗಯ್ಯ; ಮಂಟೇಸ್ವಾಮಿ , ಪು ೧೦೩]

ಪ್ರತಿನಿತ್ಯದಂತೆ ಊಟ ಮಾಡಲು ಸೇರಿದ್ದಾರೆ. ಹೀಗೆ ನಿಚ್ಚಬೋಜನ ಮಾಡಿಸುತ್ತಿದ್ದ ಬಸವಣ್ಣನವರ ಬಾಯಲ್ಲಿ ಒಂದು ಕೆಟ್ಟ ವಾರ್ತೆ ಬಂತು:

ಈಗ ಬೋಜಣಕೆ ಎಲ್ಲಾ ಶಿವಶರಣ ಮಾತುಮರು ಬರ್ತಾರೆ
ಬಂದವರ ಬಂದಾಗೆ ಬಿಟ್ಟು ಬಿಟ್ರೆ
ಕುಷ್ಟ ಕಾಯಿಲೆ ಇರೋರು ಬರುತ್ತಾರೆ.
ರೋಗುಳ್ಳಾದವರೂ ಕೂಡ ಬರುತ್ತಾರೆ.

ಅನ್ನ ಊಟ ಮಾಡಬೇಕು ಅನ್ನುವ ಆಸೆಗೆ
ಕಲ್ಯಾಣಕ್ಕೆ ಬಂದುಬಿಡುತ್ತಾರೆ ಕನ್ರಪ್ಪ
ಒಳ್ಳೆ ಶುಭವಾಗಿ ಬರ್ತಕ್ಕಂತಹ ಶರಣ್ರ ಜೊತೆ ಒಳಗೆ
ಕೊಳಕು ಜಂಗಮರ ಒಬ್ಬರ ಬಿಡಬ್ಯಾಡಿ
[ ಹಿ.ಚಿ. ಬೋರಲಿಂಗಯ್ಯ: ಮಂಟೇಸ್ವಾಮಿ. ಪು ೧೦೪ – ೧೦೫]

ಕಾವ್ಯ ಇದನ್ನು ಕೆಟ್ಟವಾರ್ತೆ ಎನ್ನುತ್ತಿದೆ. ಒಂದು ಚಳವಳಿಯ ನೇತಾರ ಬಸವಣ್ಣನೇ ಮಾನವ ಬದುಕಿನ ಮೂಲಭೂತ ಅಗತ್ಯವಾದ ಊಟಕ್ಕೇ ಹೀಗೆ ಒಳ್ಳೆಯವರು ಮತ್ತು ಕೊಳಕು ಚಹರೆಗಳಿಂದ ಕಲ್ಯಾಣವನ್ನು ಬರಿದುಮಾಡುತ್ತಾರೆ. ಇದರಿಂದಾಗಿ ಈ ದಾಸೋಹದ ಕಲ್ಪನೆ ಅರ್ಥವಾತ್ತಾಗಿ, ಭೂಮಿಗೆ ಭಾರವಾಗಿ ಬದುಕದೆ, ದುಡಿದು ತಿನ್ನುವ ಕಾಯಕ ಜೀವಿಗಳಿಗೆ ಮಾತ್ರ ಬದುಕುವ ಹಕ್ಕಿರುವುದನ್ನು ಪ್ರತಿಪಾದಿಸುತ್ತದೆ. ಇಲ್ಲಿ ಬಸವಣ್ಣನ ತಾತ್ವಿಕತೆ ಇಷ್ಟು ಹೊತ್ತಿಗಾಗಲೇ ತನ್ನ ನಿಖರತೆಯನ್ನೂ ಮಹತ್ವವನ್ನು ಕಳೆದುಕೊಂಡಿರುವ ಸೂಚನೆಯಿದ್ದು, ತಾನು ಶರಣ ಎಂಬುದನ್ನು ಅರಿತು ಅದನ್ನು ಮರೆಯದೆ, ಗುರುವಾಗಲು ಬಯುಸುತ್ತಾನೆ. ಈ ಕಾರಣಕ್ಕಾಗಿ ಅವನು ಮಂಟೇಸ್ವಾಮಿಯವರಿಂದ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆನಂತರ ಮಂಟೇಸ್ವಾಮಿಯ ದೇಹವನ್ನು ಪೊಟ್ಟಣ ಕಟ್ಟಿ ಹೊತ್ತು ತರುವಾಗ ಊಟಕ್ಕೆ ಕೂತಿದ್ದ ಲಕುಷಕೋಟಿ ಜಂಗುಮರೆಲ್ಲಾ ಎದ್ದು ಹೋಗಿ ಬಿಡುತ್ತಾರೆ. ಆಗ ಮಂಟೇದರು ಅವರ ಎಲ್ಲಾ ಲಿಂಗಗಳನ್ನು ಇಲ್ಲವಂತೆ ಮಾಡುವ ಪ್ರಸಂಗ ಬರುತ್ತದೆ.

ಇನ್ನೊಂದು ದಾಸೋಹದ ಚಿತ್ರ ಧರೆಗುರು ಒಂಬತ್ತು ಜನಕ್ಕೇ ಲಿಂಗಕೊಟ್ಟ ನಂತರ ನಡೆಯುವುದು. ಈ ಸಂದರ್ಭದಲ್ಲಿ “ಲಿಂಗವಾಗಿರುವುವರೆಲ್ಲಾ ಯಾವಾಗ ಒಳಗೆ ಬೋಜನ ಮಾಡುತಿರುವಾಗ, ಕಲ್ಲುವಡ್ಡವರಾಗಿರುವಂತ ಲಿಂಗಾಯತರು ಕುತ್ಕಂಡು ನೋಡಿದ್ರು ಬಸವಣ್ಣನವರ ಕಾವಿವಸ್ತ್ರ ಗೋಪುರದ ಮೇಲಾ ಒಣಗಾಕಿತ್ತು. ವಾಸದೇವ ಸುಂಟರಗಾಳಿಯಾಗ ಬಂದು ಎತ್ತಬಿಸಾಕಬಿಟ್ಟ. ಆ ಕಾವಿ ಬಟ್ಟಗಾ ಒಂದು ಕಲ್ಲು ಕಟ್ಕಂಡು, ಕತ್ಕ ಕಟ್ಕಂಡು ಕಾವಿಬಟ್ಟಾ ಆಕಂಡು ಶಿವನ ರೂಪ್ದಲ್ಲಿ ಹೋಗಿ ನಾವು ಶಿವಭಕ್ತರು ಅಂತ ಊಟ ಮಾಡ್ತೀರುವಾಗ ಧರೆಗೆ ದೊಡ್ಡವರು ನೋಡಿದ್ರು; ಛೇ! ಈವೊತ್ತು ನಿಮ್ಗ ಕಲ್ಲವಡ್ಡರಾಗಿ ಗೇಯ್ಕತಿನ್ನಿ ಅಂತ ಶಾಪಕೊಟ್ವಿ, ಹೊರಚರಿ ನಿಮ್ಮ ನಾಮಕರಣವಾಗಲೆಪ್ಪಾ, ಲಿಂಗಾಯ್ತ ಅನ್ನಲ್ಯಾಪ್ಪ ಲಿಂಗ ಆಗದೆ ಹೋಗಲ್ಯಪ್ಪಾ” [ಇಂದ್ವಾಡಿ: ಧರೆಗೆ ದೊಡ್ಡವರ ಕಥೆ , ಪು. ೨೩ – ೨೪]

ಎಂದು ಶಾಪಕೊಟ್ಟರು. ಈ ಭಾಗವನ್ನು ಈ ಕಾವ್ಯವನ್ನು ಹೆಚ್ಚು ಹಾಡುವ ಎಡಗೈ ಬಲಗೈ ಸಮುದಾಯದವರು ಶೋಷಕ ಸಮುದಾಯವಾಗಿ ಮಾಪಾಟ್ಟಿರುವ ಲಿಂಗಾಯತರ ವಿರುದ್ಧದ ಸಿಟ್ಟಿಗೆ ಸೃಷ್ಟಿಸಿಕೊಂಡಿರುವ ಸಾಧ್ಯತೆ ಇದೆ. ಈ ಭಾಗ ಮಂಟೇಸ್ವಾಮಿ ಕುಲದ ಪ್ರಮುಖ ಆಶಯವನ್ನು ಅರ್ಥಮಾಡಿಕೊಂಡವರಲ್ಲಿ ಗುಮಾನಿ ಹುಟ್ಟಿಸುತ್ತದೆ. ಏಕೆಂದರೆ ಮಂಟೇಸ್ವಾಮಿ ಕಾವ್ಯವನ್ನು ಸೃಷ್ಟಿಸಿರುವ ಕುಲಗಳು ಪಾರಂಪರಿಕ ಹಸಿವಿನ ಅರಿವಿರುವವರು ನೀಗಿಸಿಕೊಳ್ಳವುದೇ ಮಾನವ ಜೀವನದ ಘನತೆ ಎಂದುಕೊಂಡಿರುವವರು. ಈ ರೀತಿ ಹಸಿವನ್ನು ಉಂಡವರು ಇನ್ನೊಬ್ಬರ ಊಟವನ್ನು ವ್ಯಂಗ್ಯ ಮಾಡಲಾರರು ಎಂಬುದನ್ನು ನಮಬಿದರೆ ಈ ಭಾಗ ನಿಧಾನಕ್ಕೆ ಕಾವ್ಯದ ಹೊರಗಡೆಯಿಂದ ಸೇರಿಕೊಂಡಿರುವ ಸಾಧ್ಯತೆ ಇದೆ. ಇಲ್ಲಿ ಗೌತಮ್ ಗೋಶ್ ನಿರ್ದೇಶಿಸಿರುವ ‘ಪಾರ್’ನಲ್ಲಿ ಬರುವ ಜನಾಂಗದ ಕಳ್ಳತನದ ಸಂದರ್ಭವನ್ನು ಗಮನಿಸಬಹುದು. (ಅಲ್ಲಿ ಕಳ್ಳತನವೇ ಕುಲಕಸುಬಾದ ಸಮುದಾಯವೊಂದರಿಂದ ಹೊರಗೆ ನಡೆದು ಭಿನ್ನ ಬದುಕು ರೂಪಿಸಿಕೊಳ್ಳುವ ನೆಲೆ ನಿಂತ ಹೆಣ್ಣುಮಗಳೊಬ್ಬಳು ಸಮಾರಂಭವೊಂದಕ್ಕೆ ಬಂದ ತನ್ನ ಕುಲದವರು ಕದ್ದಿರಬಹುದಾದ ವಸ್ತುಗಳನ್ನು ಪರೀಕ್ಷಿಸಿದಾಗ ಅವರೆಲ್ಲರೂ ಕದ್ದಿರುತ್ತಾರೆ. ಆದರೆ ಆಹಾರ ಪದಾರ್ಥಗಳನ್ನು ಮಾತ್ರ) ಲಿಂಗವನ್ನು ಹೊಂದಿರುವವರೇ ಲಿಂಗಾಯ್ತರು ಅಂತ ಕರ್ನಾಟಕದ ತುಂಬಾ ಪ್ರತಿಷ್ಠೆ ಯನ್ನು ಪಡೆದಿರುವ ಅವರಿಗೆ ಇದು ಲೇವಡಿಯ ಅಂಶವಾಗಿ ಕಾಣುತ್ತದೆ. ಕಾವ್ಯದಲ್ಲಿ ಲಿಂಗಾಯ್ತ ಅಂದರೆ ಲಿಂಗ ಆಗದೇ ಹೋವರು, ಲಿಂಗವಿಲ್ಲದವರು ಎಂವರ್ಥ ಇದೆ. ಇವತ್ತಿಗೂ ಅಸ್ಪೃಶ್ಯ ಜಾತಿಯಾದ ಹೊಲೆಯರಲ್ಲಿರುವ ಈ ಕುರಿತ ಸಂಕಥನ ಮಂಟೇಸ್ವಾಮಿ ಪ್ರಭಾವ ಇಲ್ಲದ ಪ್ರದೇಶಗಳಲ್ಲಿಯೂ ಇರುವುದನ್ನು ಕಾಣಬಹುದು. [ಹೊಲೆಯ ಸಮುದಾಯದ ಹಿರಿಯರು ಈ ಮೊದಲು ಲಿಂಗಾವಂತರಾಗಿದ್ದು, ಒಮ್ಮೆ ಅವರ ಲಿಂಗಗಳನ್ನು ಕೊಳದ ದಡದಲ್ಲಿ ಬಿಚ್ಚಿಟ್ಟು ಸ್ನಾನ ಮಾಡಲು ಹೋದಾಗ ಲಿಂಗಾಯ್ತರು ಕದ್ದುಕೊಂಡು ಹೋಗಿಬಿಟ್ಟರು ಎಂಬ ಕತೆ ಬಹುಭಾಗಗಳ ಜನಪದರಲ್ಲಿದೆ.ಕೆ. ರಾಮಯ್ಯನವರು ‘ಸಿಂದ್ ಮಾದಿಗರ ಸಂಸ್ಕೃತಿ’ಯಲ್ಲಿ ಮಾದಿಗರಲ್ಲೂ ಇರುವ ಈ ರೀತಿಯ ಕಥೆಯೊಂದನ್ನು ಉದ್ಧರಿಸಿದ್ದಾರೆ. ಅಲ್ಲಿ ಲಿಂಗದ ಬದಲು ಜನಿವಾರ ಬರುತ್ತದೆ. ದೇವನೂರರ ‘ಕುಸುಮಬಾಲೆ’ಯಲ್ಲಿ ಚೆನ್ನನ ಅಪ್ಪ ಲಿಂಗಾಯತರನ್ನು ಕುರಿತಾದ ಕಥೆಯೊಂದನ್ನು ಹೇಳುವ ಸಂದರ್ಭವನ್ನು ಇಲ್ಲಿ ಗಮನಿಸಬಹುದು]

ಇದಾದ ನಂತರ ಮಂಟೇಸ್ವಾಮಿಗಳು ಬಸವಣ್ಣನಿಗೆ ಇನ್ನೊಮ್ಮೆ ಕಲ್ಯಾಣದಲ್ಲಿ ಈ ರೀತಿಯ ಭೇದ ಕಂಡರೆ ಕಲ್ಯಾಣವನ್ನು ಬರಿದು ಮಾಡುತ್ತೇನೆ ಎಂಬ ಎಚ್ಚರ ಕೊಟ್ಟು ಮುಂದೆ ಹೋಗುತ್ತಾರೆ.

ಕುಲದ ಸಂವರ್ಧನೆಗಾಗಿ ಭಿಕ್ಷೆ

ಈ ರೀತಿಯ ಹಲವು ಬಗೆಯ ಸಂಘರ್ಷಗಳು ಯಾವುದೇ ಪಂಥಗಳು ಜನರನ್ನು ಕನ್‌ವಿನ್ಸ್ ಮಾಡುವಾಗ ಎದುರಾಗಿಯೇ ಇರುತ್ತದೆ. ‘ಬಿಕ್ಷೆ’ ಹೀಗೆ ಎಲ್ಲಾ ಪಂಥಗಳ ಮೂಲ ಲಕ್ಷಣ. ಕಿ.ರಂ. ಹೇಳುವಂತೆ ಮಂಟೇಸ್ವಾಮಿಗೆ ಭಿಕ್ಷೆ ಅವರ “ಕುಲದ ಸಂವರ್ಧನೆಗಾಗಿ ಬೇಕು”. [ಮಂಟೇಸ್ವಾಮಿ ಕಾವ್ಯ; ಸಾಂಸ್ಕೃತಿಕ ಮುಖಾಮುಖಿ, ಪು. ೫೨] ಎಲ್ಲಾ ಪಂಥಗಳಂತೆ ಮಂಟೇದರು ತಮ್ಮ ಜಾತಿಯಾಚೆಗಿನ ಕುಲಕಟ್ಟುವ ಕಾಯಕದಲ್ಲಿ ಭಿಕ್ಷೆ ಅತ್ಯಗತ್ಯವಾಗಿದ್ದರಿಂದ, ಇದರಿಂದೆ ಅವರ ಕುಲ ಸಂವರ್ಧನೆಯ ಉದ್ದೇಶವಿರುವುದರಿಂದ ಭಿಕ್ಷೆಯನ್ನು ಅವಲಂಬಿಸಿದ್ದಾರೆ. ಅದಕ್ಕೆ ಅಡೆತಡೆಗಳು, ಸ್ಥಳೀಯ ಪಂಥಗಳ ವಿರೋಧಗಳಿದ್ದುದರಿಂದ ಅವರು ಆ ರೀತಿಯ ಸಂಘರ್ಷಗಳಿಗೆ ಎದುರಾಗಲು ತಮ್ಮ ಅತಿಮಾನುಷ ಪವಾಡಗಳನ್ನು ಬಳಸಿಕೊಂಡಿರುವ ಸಾಧ್ಯತೆಗಳಿವೆ.

ಮಂಟೇದರು ಭಿಕ್ಷೆ ಕೇಳುವುದು ಆಹಾರವನ್ನಲ್ಲ, ಬದಲಾಗಿ ಮನುಷ್ಯರನ್ನು, ಕೆಂಡವನ್ನು, ಕತ್ತೆಕೊಟ್ಟಿಗೆ, ಕುರಿಕೊಟ್ಟಿಗೆ, ಕಬ್ಬಿಣಗಳನ್ನು ಅವರು ಹೀಗೆ ಭಿಕ್ಷೆ ಕೇಳುವ ಎಲ್ಲಾ ಸಂದರ್ಭಗಳಲ್ಲಿಯೂ ಅದು ಸಂಘರ್ಷಕ್ಕೆ ತಿರುಗಿ, ಒಬ್ಬ ತಾಯಿಯಿಂದ ಮಗನನ್ನು ಕಿತ್ತುಕೊಳ್ಳುವಾಗ ಅತಿರೇಕವೆನಿಸುವುದೂ ಉಂಟು. ಆದರೆ ತಾಯಿ – ತಂದೆಗಳಿಂದ ಮಕ್ಕಳನ್ನು ಬೇರೆ ಮಾಡುವುದು ಅವರ ಜನ್ಮಮೂಲದ ಜಾತಿಸೂತಕವನ್ನು ತೊಳೆಯುವ ಸಂಕೇತವಾಗಿದ್ದು, ಜಾತಿಯೇ ಇಲ್ಲದ ಒಂದು ದೊಡ್ಡ ಕುಲವನ್ನು ರಚಿಸುವ ಇರಾದೆಯಿರುವುದು ಕಂಡುಬರುತ್ತದೆ. ಮಾನವರ ಹುಟ್ಟು ಈ ಭೂಮಿಯ ಮೇಲೆ ಕೇವಲ ಅನಿವಾರ್ಯವಾಗಿದ್ದು, ಪ್ರಕೃತಿಯ ಕೊಡುಗೆಗಳಾದ ಅವರು ತಾಯಿ – ತಂದೆ – ಮಗ – ಮಗಳೆಂಬ ಭಾವಜಗತ್ತನ್ನು ಸ್ವತಃ ತಾವೇ ನಿರ್ಮಾಣ ಮಾಡಿಕೊಳ್ಳುವ ಸಂದರ್ಭದಲ್ಲಿ ಅದು ಕ್ರಮೇಣ ನಮ್ಮ ನಿಮ್ಮ ಎಂಬ ವಿಂಗಡಣಾ ಜಾತಿ ಸೂಚಕ ಸಂಕೇತಗಳಿಗೆ ಬಲಿಯಾಗಿಬಿಟ್ಟಿರುವುದರಿಂದ ಅದರಾಚೆಗಿನ ನಿಸರ್ಗ ಜೀವನಕ್ಕೆ ಮೇಲು – ಕೀಳಿಲ್ಲದ ಸಮಾನ ಜೀವನಕ್ಕೆ ಮಂಟೇದರು ಕರೆಕೊಡುತ್ತಾರೆ. ಹಾಗೂ ಅಂತಹ ಜೀವನ ವಿಧಾನವನ್ನು ಸೃಷ್ಟಿಮಾಡುತ್ತಾರೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಮಂಟೇಸ್ವಾಮಿ ಚಳವಳಿಯ ಇಡೀ ಸಂಘರ್ಷವು ಸಮಾನತೆಯ ಪರಿಸರವೊಂದನ್ನು ಸೃಷ್ಟಿಮಾಡುವ ಸಲುವಾಗಿ ನಡೆದಿರುವುದು ಕಂಡುಬರುತ್ತದೆ.

ಕೆ. ರಾಮಯ್ಯರವರು ಹೇಳುವಂತೆ “ರಕ್ತ ಸಂಬಂಧದಿಂದ ಬಿಡ್ಸಿ ಅವರನ್ನು ರಕ್ತ ಸಂಬಂಧದಾಚೆಗಿನ ಒಂದು ಸಂಬಂಧವನ್ನು ಮಾಡ್ತಾರೆ. ಅವರಿಗೆ ಗೊತ್ತಿರುತ್ತೆ ಏನು ಅಂತಂದ್ರೆ, ಜಾತಿ ಅನ್ನೋದು ಎಷ್ಟು ದೊಡ್ಡದು, ನೆನಪಿನಲ್ಲಿ ಅಥವಾ ರಕ್ತದಲ್ಲಿ ಉಳಿದುಬಿಡೋದು ಅಂತ”. ಇದರ ಭಾಗವಾಗಿ ಅವರು “ಕಬ್ಬಿಣದ ಬಿಕ್ಷೆಗೆ ಕೆಂಪಾಚಾರಿ ತನ್ನ ಜಾತಿಯವರತ್ರ ಹೋಗಲ್ಲ ಅಂತಾನೆ” [ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ, ಪು. ೨೨೪] ಎಂಬುದನ್ನು ‘ಸೂತಕ ತೊಳೆಯುವ ಕ್ರಿಯೆ’ಯಾಗಿ ಕಂಡು ಅದನ್ನು ‘ದುಡಿಮೆಯಾಚರಣೆಗೆ ಪರಿವರ್ತಿಸುವಂತೆ’ ಕಾಯಕದಂತೆ ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿ ಕೆ.ರಾಮಯ್ಯನವರ ‘ರಕ್ತ ಸಂಬಂಧದಾಚೆಗಿನ ಕುಲ ಕಟ್ಟುವ’ ಕಲ್ಪನೆಯು ಕಿ.ರಂ. ಪ್ರತಿಪಾದಿಸುವ ‘ಕುಲಸ್ಥಾಪನೆಯ ಯತ್ನ’ಕ್ಕೇ ಪುಷ್ಟಿಕೊಡುತ್ತದೆ. ಆದರೆ ಮಂಟೇಸ್ವಾಮಿ ಕಾವ್ಯ ಮತ್ತು ಪರಂಪರೆಯನ್ನು ಈ ಕಾಲದ ಹೊಸ ತಲ್ಲಣಗಳೆದುರು ಇಟ್ಟು ನೋಡಿದಾಗ ಅದು ಹೊಸದೊಂದು ಕುಲಸ್ಥಾಪನೆಯ ಯತ್ನವಾಗಿದ್ದರೂ ಕ್ರಮೇಣ ಕುಲಸಮೀಕರಣವಾಗಿ ಮಾರ್ಪಟ್ಟಿರುವುದು ಕಂಡುಬರುತ್ತದೆ. ಯಾಕೆಂದರೆ ಮಂಟೇಸ್ವಾಮಿಗೆ ನಡೆದುಕೊಳ್ಳುವ ಸಮುದಾಯಗಳು ತಮ್ಮ ತಮ್ಮ ಜಾತಿಗಳ ಐಡೆಂಟಿಟಿಗಳನ್ನು ಹಾಗೇ ಉಳಿಸಿಕೊಂಡು ತಮ್ಮ ಆಚರಣಾ ಜಗತ್ತಿನಲ್ಲಿ ಮಾತ್ರ ಮಂಟೇಸ್ವಾಮಿಯನ್ನು ತುಂಬಿಕೊಳ್ಳುವುದನ್ನು ಇಂದಿಗೂ ಕಾಣಬಹುದಾಗಿದೆ. ಅವುಗಳಲ್ಲಿ ಜಾತಿ ವ್ಯವಸ್ಥೆಯಿಂದ ಪೂರಾ ನಲುಗಿಹೋಗಿದ್ದ ಕೆಲವೇ ಸಮುದಾಯಗಳು ತಮ್ಮ ಜಾತಿಯನ್ನು ‘ಮಂಟೇದವರು’ ಎಂತಲೇ ಕರೆದುಕೊಳ್ಳುತ್ತಿರುವುದೂ ಉಂಟು.

ಈ ಕಾರಣದಿಂದ ಮಂಟೇದರ ಪ್ರಯತ್ನವನ್ನು ಒಂದು ‘ಸಾಂಸ್ಕೃತಿಕ ಸಂಯೋಜನೆ’ಯನ್ನಾಗಿ ನೋಡಬೇಕು. ಬಂಜಗೆರೆಯವರ ಮಾತಿನಲ್ಲಿ ಹೇಳುವುದಾದರೆ “ರಂಡ ಪುಂಡ ಜಂಗಮ, ಕಾಳಾಮುಖಿ ಶನಿವೇಸಿ ಮಂಟೇಸ್ವಾಮಿಗೆ ಪರಿತ್ಯಕ್ತ ಕೆಳವರ್ಗದ ಜನರ ಹೊಸಬಗೆಯ ಸಾಮಾಜಿಕ ಏಳ್ಗೆಯೇ ಮುಖ್ಯಲಕ್ಷ್ಯವಾಗಿತ್ತಾದ್ದರಿಂದ ಈ ಬಗೆಯ ಸಾಂಸ್ಕೃತಿಕ ಸಂಯೋಜನೆಯನ್ನು ರೂಪಿಸಿದ್ದಾನೆ”.[ ಮಂಟೇಸ್ವಾಮಿ: ಕಾವ್ಯ ಸಾಂಸ್ಕೃತಿಕ ಮುಖಾಮುಖಿ, ಪು. ೧೧೪] ಬಂಜಗೆರೆ ಪರಂಪರೆಯಲ್ಲಿ ಸಿದ್ದಪ್ಪಾಜಿ ಪಾತ್ರ ಕುರಿತು ಮಾತನಾಡುವಾಗ “ಹಿಂದೂ ಜಾತಿ ಏಣಿಶ್ರೇಣಿಯನ್ನು ತಾತ್ವಿಕ ಹಾಗೂ ಧಾರ್ಮಿಕಾಚರಣೆಯ ಮಟ್ಟದಲ್ಲಾದರೂ ನಿರಾಕರಿಸಿ ರೈತಾಪಿ, ಪಶುಗಾಹಿ, ಕುಶಲಕರ್ಮಿ ಹಾಗು ದಲಿತ ಜಾತಿಗಳನ್ನು ಹೊಸದೊಂದು ಸಾಮಾಜಿಕ ಸಂಯೋಜನೆಗೆ ತೊಡಗಿಸಿವ ಈ ಕಾರ್ಯಚರಣೆಯಲ್ಲಿ ಸಿದ್ದಪ್ಪಾಜಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ” ಎನ್ನುತ್ತಾರೆ. [ ಮಂಟೇಸ್ವಾಮಿ ಕಾವ್ಯ : ಸಾಂಸ್ಕೃತಿಕ ಮುಖಾಮುಖಿ , ಪು. ೧೪೬]

ಇಲ್ಲಿ ಹೇಳಲಾಗಿರುವ ರೈತಾಪಿ, ಪಶುಗಾಹಿ, ಕುಶಲಕರ್ಮಿ ಹಾಗು ದಲಿತ ಜಾತಿಗಳನ್ನು ಹೊಸ ಸಾಮಾಜಿಕ ಸಂಯೋಜನೆಗೆ ತೊಡಗಿಸುವ ಕೆಲಸ ಅಷ್ಟು ಸುಲಭವಲ್ಲ. ಭಾರತದ ನೆಲದಲ್ಲಿ ಅದನ್ನು ಕಲ್ಪಿಸಿಕೊಳ್ಳುವುದೂ ಕೂಡ ಪವಾಡವೇ. ಮಂಟೇದ ಪರಂಪರೆ ಹಾಗೆ ಮಾಡುವಲ್ಲಿ ಎಂತಹ ಸಂಘರ್ಷದ ಹಾದಿಯನ್ನು ಸವೆಸಿರಬಹುದೆಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಕಾರಣಕ್ಕೇ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿಗಳು ಮಾಡುವ ಪವಾಡಗಳು ಅಷ್ಟು ತೀವ್ರವಾದ ಅತಿಮಾನುಷ ಶಕ್ತಿಯನ್ನು ಹೊಂದಿರುವುದು. ಅದಕ್ಕಾಗಿ ಅವರು ಬೆಳೆಸಿಕೊಂಡಿರುವ ಮಟ್ಟಿಕಪ್ಪು, ನೀಲಿ, ಭಂಗಿಫಲಾರ, ಉರಿಸಿಂಗಿಕರಡು, ನಗಬೆತ್ತಗಳು ಕಳಾಮುಖಿಶಾಕ್ತರ ಅತಿಮಾನುಷ ಸಾಧನಗಳಾಗಿವೆ.

ಈ ರೀತಿಯ ಸಂದರ್ಭಗಳನ್ನು ಚರ್ಚಿಸುವಾಗ, ಮಂಟೇದ ಒಕ್ಕಲನ್ನು ಒಂದು ಪಂಥ ಎಂದು ನೋಡುವಾಗ ಬಂಜಗೆರೆಯವರು ಹೇಳುವ “ಮಂಟೇಸ್ವಾಮಿ, ಸಿದ್ದಪ್ಪಾಜಿಗಳು ಶ್ರಮಜೀವಿ ಜಾತಿಗಳನ್ನು ಒಂದು ಹೊಸ ಜಾತಿ ಒಕ್ಕೂಟವಾಗಿ ರಚಿಸಿದರು. ಅದನ್ನೊಂದು ಕುಲಸಮೀಕರಣ ಎನ್ನಬಹುದು” [ ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ, ಪು. ೪೬ – ೪೭] ಎಂಬ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವ ಸರಳದಾರಿಗಳು ಮುಚ್ಚಿಕೊಳ್ಳುತ್ತವೆ. ಏಕೆಂದರೆ ಜಾತಿ ಒಕ್ಕೊಟ, ಕುಲಸಮೀಕರಣ ಎಂದರೆ ಈಗಾಗಲೇ ಇರುವ ಜಾತಿ ಮತ್ತು ಕುಲಗಳನ್ನು ಒಗ್ಗೂಡಿಸುವ , ಸಮೀಕರಿಸುವ ಕ್ರಿಯೆಯಾಗಿಯೇ ಕಾಣುತ್ತದೆ ಹೊರತು ಅದನ್ನೊಂದು ಹೊಸ ಪಂಥವಾಗಿ ನೋಡಲುಬಾರದು. ಆದರೆ ಇಲ್ಲಿನ ‘ಹೊಸಜಾತಿ ಒಕ್ಕೂಟ’ ಎಂಬ ಕಲ್ಪನೆ ಹೆಚ್ಚು ಚರ್ಚೆಯನ್ನು ಅಪೇಕ್ಷಿಸುತ್ತದೆ.

ಇದನ್ನೆಲ್ಲಾ ವಿವರಿಸಿಕೊಳ್ಳುವಾಗ ಮಂಟೇಸ್ವಾಮಿ ಕಾವ್ಯ ಅಥವಾ ಪರಂಪರೆಗಿರುವ ಸಂಘರ್ಷಾತ್ಮಕ ನೆಲೆ ಕಾಲಕಳೆದಂತೆ ಆ ಕಾಲದ ಚಲನೆಯೊಂದಿಗೆ ಹೊಸ ಹೊಸ ಪಟ್ಟುಗಳನ್ನು ಮೈಗೂಡಿಸಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಭಾರತದ ಎಲ್ಲಾ ದೇವರುಗಳಂತೆ ಮಂಟೇಸ್ವಾಮಿಯೂ ಮತೀಯ ಶಕ್ತಿಗಳ ಒಗ್ಗಟ್ಟು ಹೊಡೆಯುವ ಕುತಂತ್ರಕ್ಕೆ ಸಾಧನವಾಗಿಬಿಡುವ ಅಪಾಯವಿದೆ. ಹಾಗು ಈಗಾಗಲೇ ಮಂಟೇದ ಒಕ್ಕಲು ಕೇವಲ ಆಚರಣೆಯನ್ನಷ್ಟೇ ಉಳಿಸಿಕೊಂಡಿರುವ ಪ್ರಸ್ತುತ ಜಾತಿಗಳು ತಮ್ಮ ವೈದಿಕ ಚಹರೆಗಳನ್ನು ಒಳಗೊಳಗೇ ವಿಸ್ತರಿಸಿಕೊಂಡುಬಿಡುವ ಸಾಧ್ಯತೆ ಇದೆ.

ಮುಕ್ತಾಯ

ಮಂಟೇಸ್ವಾಮಿ ಪರಂಪರೆಯ ತಾತ್ವಿಕತೆಯ ಹಿಂದೆ ಬಹುದೊಡ್ಡ ಶೈವತಾತ್ವಿಕತೆಯಿದೆ. ಹಾಗೆಯೇ ಅದೊಂದು ನಾಥ ಸಿದ್ಧಪರಂಪರೆಯೂ ಆಗಿದ್ದು, ತನ್ನೊಳಗೆ ಬೌದ್ಧಸಿದ್ಧ, ಶೈವಸಿದ್ಧ ಪಂಥಗಳನ್ನು ಒಳಗೊಂಡಿದೆ. ಮಂಟೇಸ್ವಾಮಿಗಳ ಪವಾಡ ಮತ್ತವರ ಚಟುವಟಿಕೆಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. “ಕರ್ನಾಟಕದ ಸಿದ್ಧ ಪರಂಪರೆಯು ಶಿವಸಂಸ್ಕೃತಿಗೆ ಸಂಬಂಧಿಸಿದೆ. ಇಲ್ಲಿ ಬರುವ ಗದ್ದುಗೆ , ಸಾವು, ಹೆಣ, ಬೂದಿ, ಉರಿಗದ್ದುಗೆ, ಶೂನ್ಯಸಿಂಹಾಸನ, ತ್ರಿಶೂಲ, ವಿಭೂತಿ, ನಾಗಬೆತ್ತ, ಕಪ್ಪಡಿಕೈಲಾಸ.. ಮುಂತಾದ ಸಂಗತಿಗಳು ಶಿವಸಂಸ್ಕೃತಿಗೆ ಸೇರಿದವು” [ ರಹಮತ್ ತರೀಕೆರೆ, ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ, ಪು, ೯೩] ಹಾಗೆಯೇ ಮಂಟೇಸ್ವಾಮಿ ತಮ್ಮ ತಾತ್ವಿಕತೆಯನ್ನು ಆರೂಢ, ಬೌದ್ಧ ಮುಂತಾದ ಸಿದ್ಧಪರಂಪರೆಯಿಂದಲೂ ಪಡೆದಿದ್ದಾರೆ. ಅಥವಾ ಆ ಪರಂಪರೆಗಳ ಮುಂದುವರಿಕೆಯೇ ಇವರಾಗಿದ್ದಾರೆ ಎಂದು ಈಗಾಗಲೇ ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಟೇಸ್ವಾಮಿಯನ್ನು ಚರ್ಚಿಸುವಾಗ ಅವರಿಗೊಂದು ಜಾತಿಯನ್ನು ಆರೋಪಿಸುವುದು ಅಸಂಗತವೆನಿಸುತ್ತದೆ. ಮಂಟೇಸ್ವಾಮಿಗಳು ಹೊಲೆಯ ಸಮುದಾಯಕ್ಕೆ ಸೇರಿದವರು ಎಂಬ ಊಹೆಯನ್ನು ಅವರು ಬಳಸುವ ಸಾಂಸ್ಕೃತಿಕ ಚಹರೆಗಳಿಂದ ಗುರುತಿಸುವ ಕಾರ್ಯ ನಡೆದಿದ್ದರೂ, ಅದು ಈ ಪ್ರಬಂಧದಲ್ಲಿ ಅಷ್ಟು ಮುಖ್ಯವೆನಿಸುವುದಿಲ್ಲ. ಯಾಕೆಂದರೆ ಈಗಾಗಲೇ ಸಾಹಿತ್ಯ ವಲಯದಲ್ಲಿ ಆಳವಾಗಿ ಬೇರೂರಿರುವ ಅಕ್ಷರ ರೂಪಿ ಸಂಕಥನಗಳೆದುರು ಮಂಟೇಸ್ವಾಮಿಯಂತ ಜಾತ್ಯತೀತ ಪರಿಕಲ್ಪನೆಯನ್ನು ಚರ್ಚಿಸುವಾಗ ಹಾಗು ಈಗಾಗಲೇ ದುಡಿವ ಸಮುದಾಯಗಳ ನಡುವಿನ ಎಡಗೈ ಬಲಗೈ ರೀತಿಯ ವಿಂಗಡಣೆಯಿಂದಾಗಿ ಆತಂಕ ಹುಟ್ಟಿರುವ ಸಂದರ್ಭದಲ್ಲಿ ಮಂಟೇಸ್ವಾಮಿಯಂತಹ ಸಾಂಸ್ಕೃತಿಕ ನಾಯಕರಿಗೆ ಜಾತಿಯನ್ನು ಆರೋಪಿಸಿದರೆ ಆ ರೀತಿಯ ಕ್ಷೋಭೆಗೆ ಪ್ರಚೋಧನೆ ನೀಡಿದಂತಾಗುತ್ತದೆ. ಅಂಬೇಡ್ಕರ್, ಬುದ್ಧರಿಗೆ ಹೇಗೆ ಜಾತಿ ಇಲ್ಲವೋ ಹಾಗೆ ಮಂಟೇಸ್ವಾಮಿಗೂ ಸಹ ಇಲ್ಲ ಎಂಬುದು ನನ್ನ ಅಭಿಪ್ರಾಯ. ಇವೆಲ್ಲದರ ನಡುವೆಯೂ ನಾವು ಬಂಜಗೆರೆ ಜಯಪ್ರಕಾಶ್ ಹೇಳುವ “ಮಂಟೇಸ್ವಾಮಿಗಳದ್ದು ಜಾತಿಗಳನ್ನು ಮೀರಿದ ತಾತ್ವಿಕತೆ ಅಂತ ನಾವು ಅಂದಾಗ, ಜಾತಿಗಳ ಪ್ರಭಾವ ಒಂದು ಸಮಾಜದಲ್ಲಿ ತುಂಬಾ ಜಾಸ್ತಿ ಇದೆ ಅನ್ನೋ ಚರಿತ್ರೆ ಇಲ್ಲದೆ ನಮಗೆ ಮಂಟೇಸ್ವಾಮಿಯ ರಿಲವೆನ್ಸ್ ಅರ್ಥವಾಗೊಲ್ಲ” ಎಂಬ ಮಾತುಗಳಲ್ಲಿನ ಎಚ್ಚರವೂ ಸಹ ನಮಗೆ ಇರಬೇಕಾಗುತ್ತದೆ.

ಈ ಪುಸ್ತಕ ಅಕ್ಷರರೂಪೀ ಸಂಕಥನಗಳ ವಿರೋಧಿಯಾಗಿ ಕಂಡು, ಒಂದು ಜೀವಂತ ಮೌಖಿಕ ಪರಂಪರೆಯ ವಿಶ್ಲೇಷಣೆ ಮಾಡಿದಂತೆ ಕಂಡರೂ, ತನ್ನ ವಿಶ್ಲೇಷಣೆಗೆ ಆ ಪರಂಪರೆಯ ಬಗೆಗಿನ ಅಕ್ಷರರೂಪೀ ಆಕರಗಳನ್ನು ಬಳಸಿರುವುದು ವಿಪರ್ಯಾಸದಂತೆ ಕಾಣಬಹುದು. ಒಂದು ಮೌಖಿಕ ಪರಂಪರೆಯನ್ನು ಅರ್ಥೈಸಿಕೊಳ್ಳುವಾಗ ಈ ರೀತಿಯ ಅಧ್ಯಯನ ಮಾದರಿ ಅಷ್ಟೊಂದು ಪರಿಪೂರ್ಣವಾದುದಲ್ಲದಿದ್ದರೂ ಒಂದು ಅಧ್ಯಯನ ಪ್ರಬಂಧದ ಮಿತಿಯೊಳಗೆ ಆ ಅಧ್ಯಯನಕ್ಕೆ ಬೇಕಾದ ಶಿಸ್ತನ್ನು ಅಷ್ಟಾಗಿ ದಾಟಿಲ್ಲ ಎನ್ನಬಹುದು.

ಈ ಬರವಣಿಗೆಯ ಉದ್ದಕ್ಕೂ ಇದುವರೆಗೂ ಜಾನಪದ ವಿದ್ವಾಂಸರು, ಮಂಟೇಸ್ವಾಮಿ ಒಕ್ಕಲಿನವರು ಮಂಟೇಸ್ವಾಮಿಯ ಜಾತ್ಯತೀತ ತಾತ್ವಿಕತೆಯನ್ನು ವ್ಯಾಖ್ಯಾನಿಸಿದ್ದರ ಭಾಗವಾಗಿಯೇ ಆ ವ್ಯಾಖ್ಯಾನಗಳನ್ನು ವಿಸ್ತರಿಸುವ ಕೆಲಸ ಮಾಡಿದೆ. ಈಥರದ ಪರಂರೆಯ ವ್ಯಾಖ್ಯಾನಕ್ಕೆ ಬೇರೆಯದೇ ರೀತಿಯ ಶಿಸ್ತಿನ ಅಗತ್ಯವಿದೆ. ಇಲ್ಲಿ ಬಳಸಿಕೊಂಡಿರುವ ಪಠ್ಯಗಳಾದ್ದರಿಂದ ಈ ಅಧ್ಯಯನಕ್ಕೆ ಕೊಂಚ ಪರಿಪೂರ್ಣತೆ ಪ್ರಾಪ್ತವಾಗಿರುವ ಸಾಧ್ಯತೆ ಇದೆ. ಮಂಟೇದ ಕುಲದ ಹೊರಗಿನವನಾಗಿ ಆಧುನಿಕತೆಯ ವಿಚಿತ್ರ ತಲ್ಲಣಗಳ ಮಧ್ಯೆ ನಿಂತು ಮಂಟೇಸ್ವಾಮಿಯನ್ನು ನೋಡಲು ಯತ್ನಿಸಿರುವುದರಿಂದ ಒಂದು ರೀತಿಯ ಗೊಂದಲ ಸೃಷ್ಟಿಯಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇವೆಲ್ಲದರ ನಡುವೆಯೂ ಮಂಟೇಸ್ವಾಮಿಯನ್ನು ವರ್ತಮಾನದ ವಿಚಿತ್ರ ತಲ್ಲಣಗಳ ನಡುವೆ ಮೌಲ್ಯಾತ್ಮಕವಾಗಿ ಪ್ರತಿಷ್ಠಾಪಿಸಲು ಶ್ರಮವಹಿಸಿರುವ ಬಂಜಗೆರೆ, ಕಿ.ರಂ. ಕೋಟಿಗಾನಹಳ್ಳಿ ರಾಮಯ್ಯ ತರಹದ ಕೈಮರಗಳಿರುವುದರಿಂದ ನನ್ನ ಕೆಲಸ ಸುಲಭವಾಗಿದೆ.