ಮಂಟೇಸ್ವಾಮಿ ಕಾವ್ಯದಲ್ಲಿ ‘ಆಚರಣೆ’ ಎಂಬುದೇ ವಿಶಿಷ್ಟ ಪದ. ಯಾಕೆಂದರೆ ಈ ಪರಂಪರೆಯ ಆಚರಣೆಗಳು ಹಾಗೆ ‘ಆಚರಣೆಗಳು’ ಎನಿಸಿಕೊಳ್ಳಲಾರವು. ಅಂದರೆ ಒಂದು ಸಂಪ್ರದಾಯದ ರಿಚ್ಯುವಲ್‌ಗೆ ಬೇಕಾದ ಸಾತತ್ಯ, ನಿಶ್ಚಿತತೆ, ನಿರ್ದಿಷ್ಟ ಕಾಲ ಮುಂತಾದವು ಇಲ್ಲಿ ಕಾಣುವುದಿಲ್ಲ, ಬದಲಾಗಿ ಮಂಟೇದ ಪರಂಪರೆಯ ಮೂಲ ಆಶಯದ ಈಡೇರಿಕೆಗೆ ಅಗತ್ಯವಾದ ವಿಕೇಂದ್ರೀಕೃತ ಪಾಲುದಾರಿಕೆ ಇಲ್ಲಿ ಕಾಣುತ್ತದೆ. ಆದರೆ ನೀಲಗಾರ ಪರಂಪರೆ ತನ್ನ ಒಕ್ಕಲಿನ ಆಚರಣೆಗಳನ್ನಾಗಿ ದೀಕ್ಷೆ, ಮಾದಲಿಪೂಜೆ, ಚಂದ್ರ ಮಂಡಲ ಕಟ್ಟುವುದು ಮುಂತಾದವುಗಳನ್ನು ಸಾತತ್ಯವಿಲ್ಲದಿದ್ದರೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳ ಸಂದರ್ಭದಲ್ಲಿ ನಡೆಸಿಕೊಂಡು ಬಂದಿದೆ. ಅಲ್ಲದೆ ನೀಲಗಾರ ಒಕ್ಕಲು ಮಂಟೇದನ ಚರಿತ್ರೆಯನ್ನು ಹಾಡುವ ಕಾಯಕವನ್ನೇ ಒಂದು ದೊಡ್ಡ ಆಚರಣೆಯನ್ನಾಗಿ ಬೆಳೆಸಿಕೊಂಡು ಬಂದಿದೆ.

ಆಧುನಿಕತೆಯ ಜೊತೆ ಜೊತೆಗೆ ಜಾತಿಯೂ ವಿಶಿಷ್ಟವಾಗಿ ಬಲಗೊಳ್ಳುತ್ತಿರುವ ಕಾಲಘಟ್ಟದಲ್ಲೇ ನಾವು ಮಂಟೇಸ್ವಾಮಿ ಪರಂಪರೆಯನ್ನು ಗಮನಿಸಿದಾಗ, ಅವರಿಗೆ ನಡೆದುಕೊಳ್ಳುವ ಸಮುದಾಯಗಳ ನಡುವೆ ಬಿರುಕುಗಳು ಸಾಮಾಜಿಕವಾಗಿ ಹೆಚ್ಚಿದ್ದರೂ ಯಾವುದೇ ಆಚರಣೆಗೆ ಇವರೆಲ್ಲರೂ ಒಂದಾಗದೇ ಇದ್ದರೆ ಆ ಆಚರಣೆ ನಡೆಯುವುದೇ ಇಲ್ಲ. ಇದು ನೀಲಗಾರ ಪರಂಪರೆಯಲ್ಲಿ ಪ್ರಮುಖವಾದ ದೀಕ್ಷೆಯ ಸಂದರ್ಭದಲ್ಲೇ ಉದಾಹರಣೆಗೆ ಸಿಕ್ಕುತ್ತದೆ. ಮಂಟೇಸ್ವಾಮಿ ಒಕ್ಕಲಿಗೆ ಸೇರಿದವರು ಕಡ್ಡಾಯವಾಗಿ ಮನೆಯ ಹಿರಿಯ ಮಗನಿಗೆ ದೀಕ್ಷೆ ಕೊಡಿಸಿ, ಗುಡ್ಡನನ್ನಾಗಿ ಬಿಡಬೇಕು. ಹೀಗೆ ಮಾಡುವಾಗ ಜಾತಿ – ಕುಲದ ಪ್ರಶ್ನೆ ಬರುವುದಿಲ್ಲ. “ದಲಿತರು, ಕುರುಬರು, ವಿಶ್ವಕರ್ಮರು, ಮಡಿವಾಳರು, ಉಪ್ಪರಿನ ಶೆಟ್ಟರು, ಕುಂಬಾರರು, ಗಾಣಿಗರು, ಗಂಗಡಕಾರ ಗೌಡರು, ಲಿಂಗಾಯಿತರು, ಅರಸರು, ಇವಿಷ್ಟು ಜಾತಿಗಳು ಇಂದು ನೀಲಗಾರ ದೀಕ್ಷೆ ಪಡೆದು ಮಂಟೇಸ್ವಾಮಿ ಒಕ್ಕಲಿನವರಾಗಿದ್ದಾರೆ” [ಇಂದ್ವಾಡಿ; ಮಂಟೇಸ್ವಾಮಿ ಪರಂಪರೆ, ಪು. ೧೦೧ – ೧೦೨]

ಈ ದೀಕ್ಷೆಯ ಪ್ರಸಂಗವನ್ನು ನಾವು ಕುಲಸಮೀಕರಣ ತತ್ವದ ರೂಪಕಾಂಶವಾಗಿಯೇ ನೋಡಬೇಕು. ಕಾವ್ಯದಲ್ಲಿ ಕೆಂಪಾಚಾರಿ ಸಿದ್ದಪ್ಪಾಜಿಯಾಗಿ ದೀಕ್ಷೆ ಪಡೆಯುತ್ತಾನೆ. ಈ ಪ್ರಸಂಗ ಕಾವ್ಯದ ಪ್ರಮುಖ ಭಾಗ. ಯಾಕೆಂದರೆ ಮಂಟೇಸ್ವಾಮಿಯ ಶಿಶು ಮಕ್ಕಳಲ್ಲಿ ಅತಿಮುಖ್ಯವಾದ ಸಿದ್ದಪ್ಪಾಜಿಯ ಈ ಮೊದಲ ಹಲಗೂರು ಪಾಂಚಾಲದವರ ಶ್ರೀಮಂತ ವ್ಯಾಪಾರಿ. ಅವನ ಜಾತಿ ಮತ್ತು ಶ್ರೀಮಂತಿಕೆಯ ಹಮ್ಮನ್ನು ಇಲ್ಲವಾಗಿಸಲು ಕಾಳಿಂಗನ ಕಲ್ಲು ಗವಿಯಲ್ಲಿ ಹನ್ನೆರಡು ವರ್ಷ ಕೂಡಿ ಹಾಕಲಾಗುತ್ತದೆ. ಈ ಭಾಗದಲ್ಲಿ ಮಾನವ ತನ್ನ ಜಾತಿ ಸೂಕತನವನ್ನು ಮೀರಲು ತಾನು ಕೈಗೊಳ್ಳಬೇಕಾದ ಕಷ್ಟಸಾಧ್ಯ ಕೆಲಸ ಎಂಥದು ಎಂಬುದರ ಸೂಚನೆ ಇದೆ. ಮೇಲ್ಜಾತಿಯು ತನ್ನ ಆರ್ಥಿಕ ಸವಲತ್ತು ಗಳನ್ನು ಕ್ರೋಢಿಕರಿಸಿ ಕೊಂಡು ಕೊಬ್ಬಿ ಬೆಳೆದು, ತಳಸಮುದಾಯಗಳನ್ನು ತೊತ್ತುಗಳಾಗಿ ದುಡಿಸಿಕೊಳ್ಳುತ್ತಿದ್ದಾಗ, ಮಂಟೇದರು ಕೆಂಡದ ಭಿಕ್ಷೆ ಕೇಳುತ್ತಾರೆ. ಇಲ್ಲಿ ಸಂಪತ್ತು ಒಂದೇ ಕಡೆಯಲ್ಲಿ ಕೇಂದ್ರಿಕರಣಗೊಂಡಿರುವುದರಿಂದ ಅದನ್ನು ವಿಕೇಂದ್ರಿಕರಣಗೊಳಿಸುವ ಮಾರ್ಗವನ್ನಾಗಿ ಶಿಶು ಮಕ್ಕಳನ್ನು ಪಡೆಯುವ ತಂತ್ರವನ್ನು ಮಂಟೇದರ ಬಳಸಿರುವುದರಿಂದ ಆರ್ಥಿಕ ಅಸಮಾನತೆ ಮತ್ತು ಜಾತಿ ಅಸಮಾನತೆಗಳನ್ನು ಒಂದೇಪಟ್ಟಿಗೆ ನೇರ ಮಾಡಿಬಿಡುವ ತುಡಿತವಿದೆ. ಅದಕ್ಕಾಗಿ ಅವರು ಇಲ್ಲಾ ಜಾತಿ/ವರ್ಗದಿಂದ ಒಬ್ಬೊಬ್ಬರು ಶಿಶುಮಕ್ಕಳನ್ನು ಪಡೆದು ಬೇರೊಂದು ಜಾತ್ಯಾತೀತ ಕುಲವನ್ನೇ ಕಟ್ಟುತ್ತಾರೆ.

ಈ ಕುಲವನ್ನು ಕಟ್ಟಲು ಅವರಿಗೆ ;

ತಾಯಿಯ ಮರತೋದ
ತಂದೆಯ ಮರತೋದ
ಅವನು ಅಣ್ಣ ತಮ್ಮಂದಿರಾ ಕಂದಾ
ಮರತೋದ ನನಕಂದಾ
ಅವನು ಹಟ್ಟಿ ದನಾ ಗುರುವೆ
ಕೊಟ್ಟಿಗೆ ಕುರಿ ದೇವ
ಎತ್ತು ಎಮ್ಮೆನ್ನೆಲ್ಲಾ
ಮರತುಗಂಡ ನನ ತಂದೆ
ಅವನ ಮನೆಯಲ್ಲಿರುವ
ಹನ್ನೆರಡು ಲಕ್ಷಭಾಗ್ಯ ಎಲ್ಲಾನು ಕಂದಾ
ತೊರಕಂಡ ನನ ಮಗು
ಅಯ್ಯಾ ಧರೆಗೆ ದೊಡ್ಡಯ್ಯ ಗುರುವೆ
ನೀನೆ ಗತಿಎನ್ನಬೇಕು
[ಹಿ.ಚಿ. ಬೋರಲಿಂಗಯ್ಯ; ಮಂಟೇಸ್ವಾಮಿ, ಪು.೫೮೩]

ಇದು ಕೆಂಪಾಚಾರಿ – ಸಿದ್ದಪ್ಪಾಜಿಯಾಗುವ ವಿಧಾನ. ಇಲ್ಲಿ ತಾಯಿಯ, ತಂದೆಯ ಮರೆಯುವುದು ಅಂದರೆ ಇದುವರೆಗೂ ಅನುಭವಿಸಿದ, ಬದುಕಿನ ಈ ಸಿದ್ದ ವ್ಯವಸ್ಥೆಯ ಜಾತಿ ಶ್ರೇಣೀಕರಣವನ್ನು ಅಸಮಾನತೆಯನ್ನು ಮರೆಯುವುದು ಎಂದರ್ಥ. ಕೆಂಪಾಚಾರಿ ಕಾಳಿಂಗನ ಕಲ್ಲು ಗವಿಯಿಂದ ಎದ್ದು ಹೊರಗೆ ಬರಲು ದೊಡ್ಡಮ್ಮ ಕೂಗಿಕೊಳ್ಳುವ ಪ್ರಸಂಗದಲ್ಲಿ ಇದು ಚೆನ್ನಾಗಿ ಕಾಣುತ್ತವೆ.

ದೊಡ್ಡಮ್ಮ ತಾಯಿ ಕೂಗಿದ ಕೆಂಪಾಚಾರಿ ಹೊರಗೆ ಬರದಿದ್ದಾಗ ಮಂಟೇದರ ಕುಂದೂರು ಬೆಟ್ಟದ ಮೇಲೆ ನಿಂತುಕೊಂಡು

ಅಪ್ಪಾ ಆಚಾರಿ ಮಗನೆ ಬಾರೋ
ಆಯ್ಸದಲ್ಲಿ ಪ್ರವೀಣ ಬಾರೋ
ಕಂದಾ ಆಚಾರಿಯ ಮಗನೇ
ಮುದ್ದಮ್ಮನ ಮಗನೇ
ಲೋ ಬಸವಚಾರಿ ಮಗನೇ
ಕೇಳಪ್ಪ ನನಕಂದ
ಕೆಂಪಾಚಾರಿ ಕೆಂಪಾಚಾರಿ
ಎದ್ದು ಬಾಪ್ಪಾ..
[ಹಿ.ಚಿ. ಬೋರಲಿಂಗಯ್ಯ; ಮಂಟೇಸ್ವಾಮಿ, ಪು.೫೯೧]

ಎಂದು ಕರೆಯುತ್ತಾರೆ. ಆಗ ಕಲ್ಲು ಗವಿಯೊಳಗಿನ ಕೆಂಪಾಚಾರಿ

ಕೆಟ್ಟಮುಂಡೆ ಮಕ್ಕಳ ಹೆಸರ
ಯಾತಕ್ಕೆ ಹೇಳಿಯಪ್ಪ
ನನ್ನ ತಂದೆ ತಾಯ ಹೆಸರ
ಹೇಳಬೇಡ ನನ್ನ ಗುರುವು
ನನ್ನ ಕೆಂಪಾಚಾರಿ ಎಂಥ
ಕರಿಬ್ಯಾಡ ನನ್ನಪ್ಪ
ಹಾಳಾದ ಹೆಸರು ಗುರುವೆ
ನನಗ್ಯಾಕೊ
[ಹಿ.ಚಿ. ಬೋರಲಿಂಗಯ್ಯ ; ಮಂಟೇಸ್ವಾಮಿ, ಪು ೫೯೧] ಎನ್ನುತ್ತಾರೆ.

ನಂತರ ‘ಅಯ್ಯಾ ಸಿದ್ದಪ್ಪಾಜಿ ಬಾಪ್ಪ’ ಎಂದ ಮೇಲೆ ದಡಬಡನೇ ಎದ್ದು ಓಡಿ ಬರುತ್ತಾನೆ. ಈ ಭಾಗವು ಜಾತಿನಿರಾಕರಣೆಯ ಮಟ್ಟದಲ್ಲಿ ಮಂಟೇದನ ಕುಲದವರು ಹಳೆಯ ಸೂತಕಗಳನ್ನು ಬಿಟ್ಟು ಹೊಸದನ್ನು ಕಟ್ಟಕೊಳ್ಳುವ ಸೂಚನೆ ಇದೆ. ಈ ರೀತಿಯ ಗುಡ್ಡನ ಬಿಟ್ಟು ಗುರುಮಣಿ ಆಚರಣೆ ಕಾವ್ಯದಲ್ಲಿರುವಂತೆಯೇ ಈಗಲೂ ಮಂಟೇಸ್ವಾಮಿ ಒಕ್ಕಲಿನ ಸಮುದಾಯಗಳಲ್ಲಿದೆ.

“‘ಪುರಸಾನಿ’ ಎಂದು ಕರೆಸಿಕೊಳ್ಳುವ ಹಿರಿಯ ಗುಡ್ಡ ಈ ಆಚರಣೆಯನ್ನು ನೆರವೇರಿಸುತ್ತಾನೆ. ಇಲ್ಲಿ ಒಂಬತ್ತು ಮಂದಿ ಕಾಯಕ ವೃತ್ತಿಗಳು ಬರುವುದಿಲ್ಲ ಅವರು ಉತ್ಪಾದಿಸಿದ ವಸ್ತುಗಳಷ್ಟೇ ಸಾಂಕೇತಿಕವಾಗಿ ಇರುತ್ತವೆ” [ಇಂದ್ವಾಡಿ; ಮಂಟೇಸ್ವಾಮಿ, ಪರಂಪರೆ, ಪು.೧೦೧] ಆದರೆ ಇಲ್ಲಿನ ಕೊರತೆ ಎಂದರೆ ಕಾವ್ಯದಲ್ಲಿ ಬರುವ ೯ ಮಂದಿ ಕಾಯಕವೃತ್ತಿಗಳು ಬರದೆ, ಕೇವಲ ವಸ್ತುಗಳಷ್ಟೇ ಇರುವುದು. ಕಾವ್ಯದಲ್ಲಿ ದೀಕ್ಷೆಯ ಸಂದರ್ಭ;

ಕುರುಬರ ಬೀರಯ್ನ ಮನ ಉರಗದಾರ
ಕುಂಬಾರ ಗುಂಡಯ್ಯ ಮನ ದೇವ್ರ ಗಡ್ಗೆ
ಹಡಪದ ಅಪ್ಪಣ್ಣನ ಮನ ಹಡಪ ಪೆಟ್ಟಿ
ದೇವಾಂಗ ದಾಸಯ್ಯನ ಮನ ಅರಿಸಿಣ ಕೊನ
ಹೊಲಾರ ಹೊನ್ನಯ್ಯನ ಮನ ವಾದ್ಯ
ಮಾದಾರಿ ಚೆನ್ನಯ್ಯನ ಮನ ಗ್ವಾರಂದವನ್ನು
ಅಳಿಯ ಬಸವಣ್ಣ ಮನ ಗೋತ್ರದಲ್ಲಿ
ಕಲಸಿ ಗುಡ್ಡನ್ನು ಬಿಟ್ಟು ಗುರುಮಣಿ ಕಟ್ಬೇಕು
[ಇಂದ್ವಾಡಿ; ಮಂಟೇಸ್ವಾಮಿ, ಪರಂಪರೆ, ಪು.೯೯]

ಇವೆಲ್ಲವೂ ಬೇಕೆಬೇಕು. ಇದು ಕಾಲಾನಂತರದಲ್ಲಿ ಕೇವಲ ಆಚರಣೆಗಷ್ಟೇ ಸೀಮಿತವಾಗಿ ಕಾವ್ಯದ ಮೂಲ ಆಶಯವಾಗಿರುವ ಸಮುದಾಯಗಳ ಬಾಬುದಾರಿಕೆಯು ಮರೆಯಾಗುತ್ತದೆ. ಈ ಕಲ್ಪನೆ ಇಡೀ ದಕ್ಚಿಣ ಭಾರತ ಚರಿತ್ರೆಯಲ್ಲಿ ಒಂಬತ್ತು ಪಣ ಮತ್ತು ಹದಿನೆಂಟು ಪಣ ಸಮುದಾಯ ಕಲ್ಪನೆಯಲ್ಲಿ ಹರಡಿಕೊಂಡಿದೆ ಈ ಕಾರಣಕ್ಕೆ ಇವು ಕೇವಲ ಆ ಸಮುದಾಯಗಳ ಕೌಶಲ್ಯ ಫಲ ‘ಪ್ರಾಡಕ್ಟ್’ ಅಥವಾ ವೃತ್ತಿ ಸಂಕೇತ ಮಾತ್ರವೇ ಅಲ್ಲ ; ಅದಕ್ಕೂ ಮೀರಿದ ಕುಲತಾತ್ವಿಕ ಅನಿವಾರ್ಯತೆಯೊಂದು ಇದರ ಹಿಂದೆ ಇದ್ದಂತಿದೆ. ಅದನ್ನು ನಾವು ಸಾಮುದಾಯಿಕ ತಂತ್ರಜ್ಞಾನ ತಲೆಮಾರುಗಳಲ್ಲಿ ರೂಪಿಸಿಕೊಂಡು, ಉಳಿಸಿಕೊಂಡು ಬಂದ ಕೌಶಲ್ಯಗಳ ಫಲವೆಂದು ಅರ್ಥಮಾಡಿಕೊಳ್ಳುವುದು ಸೂಕ್ತ. ಆದರೆ ಕಾವ್ಯದಲ್ಲಿ ಚಿತ್ರಿತವಾಗಿರುವ ಈ ಪ್ರಸಂಗವು ೧೨ನೇ ಶತಮಾನದ ಶರಣ ಚಳವಳಿ ರೂಪಿಸಿದ ಜಾತ್ಯತೀತ ಪಾಲುದಾರಿಕೆಯು ಆನಂತರದಲ್ಲಿ ಮಸುಕಾಗಿ ಶರಣರೆಲ್ಲಾ ಲಿಂಗಾಯಿತ ಜಾತಿ ಕಟ್ಟಿಕೊಂಡು ಆಚರಣಾ ಪ್ರಧಾನ ಶರಣತ್ವವನ್ನು ಸ್ಥಾವರಿಸಿಕೊಂಡದ್ದಕ್ಕಾಗಿ ಮಂಟೇದ ರೂಪಿಸಿದ ಕುಲಗಳ ಪುನರ್ ಸಮೀಕರಣ ತತ್ವವಾಗಿ ರೂಪುಗೊಂಡಿದೆ. ಹಾಗೆ ರೂಪುಗೊಳಿಸುವಾಗ ಮೇಲುಕೀಳಿನ ಹಮ್ಮು ಬಿಮ್ಮುಗಳಿದ್ದು, ತಾವೇ ಶ್ರೇಷ್ಟವೆಂದು ತಿಳಿದಿದ್ದ ಸ್ಥಾವರಲಿಂಗಿಗಳಾದ ಕೆಲ ಜಂಗಮರನ್ನು ಕೈಬಿಟ್ಟು ಕೇವಲ ಒಂಬತ್ತೇ ಜಾತಿಗೆ ಲಿಂಗ ಕೊಡುತ್ತಾರೆ ಧರೆಗುರು.ಅವರ ಪ್ರಕಾರ ಈ ಕೆಳಕಂಡವರು ಮಾತ್ರ ಲಿಂಗವಂತರು.

ಕುರುಬರ ಬೀರಯ್ಯ ಲಿಂಗ
ಮಡಿವಾಳ ಮಾಚಯ್ಯ ಲಿಂಗ
ಕುಂಬಾರ ಗುಂಡಯ್ಯ ಲಿಂಗ
ಹಡಪದ ಅಪ್ಪಣ್ಣ ಲಿಂಗ
ಹೊಲಾರ ಹೊನ್ನಯ್ಯ ಲಿಂಗ
ಮಾದಾರಿ ಚೆನ್ನಯ್ಯ ಲಿಂಗ
ದೇವಾಂಗ ದಾಸಯ್ಯ ಲಿಂಗ
ಗಂಗಟ್‌ಕಾರ ಗೌಡ ಲಿಂಗ
ಉಪ್ಪಲಿಗ ಶೆಟ್ಟಿ ಲಿಂಗ
ಜಗತ್ತಿನಲ್ಲಿ ಎರಡು ಕಟ್ಟಲಿಂಗ, ಇವೆರಡು ಆತ್ಮಲಿಂಗ
ಜಗತ್ತಿನಲ್ಲಿ ಒಂಬತ್ತೇಲಿಂಗ..
[ಇಂದ್ವಾಡಿ; ಧರೆಗೆ ದೊಡ್ಡವರ ಕಥೆ, ಪು.೨೨ – ೨೩]

ಈ ಲಿಂಗ ಕೊಡುವ ಪ್ರಸಂಗ ಶರಣರು ಒಂದು ಜಾತಿಯಾಗುವುದನ್ನು ತಿರಸ್ಕರಿಸುತ್ತದೆ; ಹಾಗೆ,

ಕ್ರಿಯಾಚಾರವಿಲ್ಲದ ಗುರುವಿನ ಕೈಯಲಿ
ದೀಕ್ಷೆ ಉಪದೇಶವ ಕೇಳಲಾಗದು
[ಚೆನ್ನಬಸವಣ್ಣ]

ಎಂಬ ಶಿಷ್ಟ ಸಂಸ್ಕೃತಿಯನ್ನು ಲೇವಡಿ ಮಾಡುತ್ತದೆ. ಹೀಗೆ ಏಳು ಮಂದಿಗೆ ಲಿಂಗ ಕೊಟ್ಟ ಮಂಟೇದರನ್ನು [ಎರಡು ಕಟ್ಟಲಿಂಗಗಳನ್ನು ಹೊರತುಪಡಿಸಿ] “ಇವ್ರು ಏಳುಮಂದಿಗೆ ಲಿಂಗ ಕೊಟ್ಟ ಕಾರಣವೇನು ಪ್ರಭು” ಎಂದು ಕೇಳುತ್ತಾರೆ. ಆಗ ಧರೆಗುರು ಹೇಳುತ್ತಾರೆ.

“ನಿಮ್ಮ ವಂಸ ಆಳಾಗೋಗ ಇವ್ರು ಏಳು ಮಂದಿಗ ಲಿಂಗ ಕೊಟ್ಟ ಕಾರಣವೇನು ಅಂತ ಕೇಳುತ್ತಿದ್ದರೆಲ್ಲಾ ಯಾರು ಕಲಿಯುಗದಲ್ಲಿ ಶುಭಲಗ್ನ ಮಾಡ್ಬೇಕಾದ್ರ, ಮಕ್ಕಳನ ಗುಡ್ಡನ ಬಿಟ್ಟು ಗುರುಮಣಿ ಕಟ್ಟಬೇಕಾದ್ರ ಕುರುಬನ ಬೀರಯ್ಯನ ಮನ ಉರಗದಾರ ಆಗ್ಬೇಕು, ಮಡಿವಾಳ ಮಾಚಯ್ಯನ ಮನ ಮಡಿಬಟ್ಟಾ ಆಗ್ಬೇಕು, ಕುಂಬಾರ ಗುಂಡಯ್ಯನ ಮನ ದ್ಯಾವರ ಗಡ್ಗೆ ಆಗ್ಬೇಕು, ಹಡಪದ ಅಪ್ಪಣ್ಣ ಬಂದು ಮಂಡಚೌರ ಮಾಡ್ಬೇಕು ಹೊಲಾರ ಹೊನ್ನಯ್ಯನ ಮನ ವಾದ್ಯ ಆಗ್ಬೇಕು, ದೇವಾಂಗ ದಾಸಯ್ಯನ ಮನ ಅರಿಸಿಣ ಕೊನೆತಂದು ಕಂಕಣ ಕಟ್ಟಬೇಕು. ಮಾದಾರಿ ಚೆನ್ನಯ್ಯನ ಮನ ಗ್ವಾರಂದ ತಂದು ಅಳಿಯ ಬಸವಣ್ಣ ಮನ ಗೋತ್ರದೊಳಗ ಕಲಸಿ ದೇಹಕ್ಕೆ ಕುಡಿಸಿ ಇಂಥಾ ಗುಡ್ಡನ ಬುಡಾಮುಂಡಾ ಮಗ್ನ ಜಲ್ಮಸುದ್ದ ಮಾಡೆಬೇಕು” [ ಇಂದ್ವಾಡಿ ; ಧರೆಗೆ ದೊಡ್ಡವರ ಕಥೆ, ಪು.೨೩]

ಇಲ್ಲಿ ಮಂಟೇಸ್ವಾಮಿ ತಳಸಮುದಾಯಗಳ ಸಾವಯವ ಒಗ್ಗೂಡುವಿಕೆಗೆ ಈಗಲೂ ಕೆಲ ಬುಡಕಟ್ಟುಗಳಲ್ಲಿರುವ ಪರಸ್ಪರ ಅವಲಂಬನೆ ಅಥವಾ ಪಾಲುದಾರಿಕೆಯನ್ನು ಮಾನವ ಬದುಕಿನ ಅತ್ಯಗತ್ಯವಿರುವ, ಅನಿವಾರ್ಯದ ಸಂಬಂಧ ಎಂದು ಹೇಳಲು ವೈಜ್ಞಾನಿಕ ಸಮುದಾಯ ಜೀವನವನ್ನು ಪ್ರತಿಪಾದಿಸುತ್ತಾರೆ. ಈ ಪಾಲುದಾರಿಕೆ ಕೇವಲ ಆರ್ಥಿಕ ಪರಿಕಲ್ಪನೆ ಮಾತ್ರವೇ ಅಲ್ಲ ಅಥವಾ ಗಾಂಧಿ ಪ್ರತಿಪಾದಿಸುವ ‘ಗ್ರಾಮ ಸ್ವಾವಲಂಬನೆ’ ಕಲ್ಪನೆ ಮಾತ್ರವೇ ಅಲ್ಲ. ಎದರ ಹೊರತಾಗಿ ಅಸ್ಪೃಶ್ಯ ಕೇಂದ್ರಿತವಾದ ಸಾಂಸ್ಕೃತಿಕ – ಚಾರಿತ್ರಿಕ ಪ್ರಜ್ಞೆ ರೂಪಿಸಿಕೊಂಡ ತದ್ವಿರುದ್ಧ ನೆಲೆಯತ್ತಣ ನಡೆ ಅಥವಾ ಚಲನೆ.

ಈ ರೀತಿಯ ಗುಡ್ಡನಬಿಡುವ ಆಚರಣೆಯಿಂದ ಜಾತಿ ಸೂಚಕ ಸಮುದಾಯಗಳು ತಮ್ಮ ನಡುವಿನ ಜಾತಿಕೇಂದ್ರಿತ ಅಂತರವನ್ನು ತಡೆಹಿಡಿದು ಒಂದು ಬಹುದೊಡ್ಡ ಗುಡ್ಡರ ಕುಲವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಆ ಕುಲ ವೈದಿಕ ಜಾತಿ ಚಹರೆಗಳನ್ನು ಮರೆಸುವ ಹಾಗೂ ಮಾನವ ಬದುಕಿಗಾಗಿ ಸಂಬಂಧವನ್ನು ಗಟ್ಟಿಮಾಡುವ ಬೃಹತ್ ಆಶಯಕ್ಕಾಗಿ ಶ್ರಮಿಸುತ್ತದೆ. ಅದಕ್ಕಾಗಿ ಅವರು ಮಂಟೇಸ್ವಾಮಿಯನ್ನು ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ. ಈ ಕುಲದವರು ನಡೆಸುವ ಪ್ರತಿ ಆಚರಣೆಯ ಹಿಂದೆಯೂ ಈ ರೀತಿಯ ಜಾತ್ಯತೀತ ಆಶಯವಿರುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶ ಎಂದರೆ ದೀಕ್ಷೆ ಪಡೆದವರು ಮದುವೆಯಾಗಿ ಸಂಸಾರವನ್ನು ನಡೆಸಬಹುದು. ಜಗತ್ತಿನ ಆಧ್ಯಾತ್ಮಿಕ ಪರಿಸರದಲ್ಲಿ ಹೆಣ್ಣು ಅಸ್ಪೃಶ್ಯೆಯಾಗಿದ್ದು, ಅವಳು ಮುಕ್ತಿ ಹೊಂದಬೇಕಾದರೆ ಗಂಡಾಗಿ ಹುಟ್ಟಬೇಕು ಎಂಬ ನಂಬಿಕೆಯಿದೆ. ಆದರೆ ಇಲ್ಲಿ ಗಂಡು – ಹೆಣ್ಣು ಜೊತೆಯಾಗಿ ಬದುಕಿಯೂ ಆಧ್ಯಾತ್ಮವನ್ನು ಸಾಧಿಸುವ ಸಾಧ್ಯತೆ ಇದೆ.

ಜಾತ್ರೆಗಳು

ಮಂಟೇಸ್ವಾಮಿ ಪರಂಪರೆಯಲ್ಲಿ ಜಾತ್ರೆಗಳು ಬಹಳ ಮುಖ್ಯ. ಇಲ್ಲಿ ನಡೆಯುವ ಜಾತ್ರೆಗಳೆಲ್ಲವೂ ಅಬ್ರಾಹ್ಮಣ ಸಮುದಾಯಗಳು ನಡೆಸುವ ಪ್ರಮುಖ ಆಚರಣೆಗಳಾಗಿದ್ದು, ಯಾವುದೇ ನಿರ್ಬಂಧಗಳಿಲ್ಲದೆ, ಮೇಲು ಕೀಳುಗಳ ಭೇದವಿಲ್ಲದೆ ಒಲಿದಂತೆ ಹಾಡುವ ರೀತಿಯ ಅಥವಾ ತಮಗೆ ಸಾಧ್ಯವಾದಷ್ಟನ್ನು ಬಳಸಿ ಆಚರಿಸುವ ಆಚರಣೆಗಳಾಗಿವೆ. ಈ ಪ್ರತಿ ಜಾತ್ರೆಗಳಲ್ಲಿಯೂ ಕಾವ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಧುನಿಕ ನಾಗರಿಕ ಸಮಾಜದ ಜಾತಿ ಅಸಮಾನತೆಯನ್ನು ಮೀರಲು ಈ ತಳಸಮುದಾಯಗಳು ಗಕ್ಕನೆ ಕಾವ್ಯಕ್ಕೆ ಮರುಳುವ ಹಾಗೆ ಕಾಣಿಸುತ್ತದೆ. ಯಾಕೆಂದರೆ ಕಾವ್ಯದಲ್ಲಿರುವಷ್ಟು ಸುಲಭವಾಗಿ ಈ ಸಮಾಜದಲ್ಲಿ ಜಾತ್ಯತೀತ ಬದುಕನ್ನು ನಡೆಸಲಾಗದ, ಹಾಗು ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮತೆಯ ಕಾರಣಕ್ಕೆ ಎಲ್ಲರೂ ಒಂದೇ ಎಂದುಕೊಂಡು ಬೆರೆಯಲಾಗದ ಸ್ಥಿತಿ ಇರುವುದರಿಂದ ಕಾವ್ಯದೊಳಗಿನ ಅತಿದೊಡ್ಡ ಜಾತ್ಯಾತೀತ ಕ್ಯಾನ್ವಾಸಿಗೆ ಬಂದು ವಿಶ್ರಮಿಸಿಕೊಳ್ಳುತ್ತಾರೆ. ಆದರೆ ಅಷ್ಟೊಂದು ಗಟ್ಟಿಯಲ್ಲದ ಜಾತಿ ಭೇದದ ಭಾವನೆ ಈ ಮಂಟೇದನ ಒಕ್ಕಲಿನವರ ನಡುವೆ ಇರುವುದನ್ನು ನೋಡಿದಾಗ ಬೇರೆ ಯವುದೇ ಕಿರುಪರಂಪರೆಯಲ್ಲಿಯೂ ಕಾಣದ ಜೀವನ ವಿಧಾನವನ್ನು ಇಲ್ಲಿ ಕಾಣಬಹುದು ಎನಿಸುತ್ತದೆ. ಇಲ್ಲಿಯೂ ಕೂಡ ಕಾವ್ಯಕತೆಯನ್ನು ಹಾಡುವ ನೀಲಗಾರ ಕುಲಗಳಾದ, ದಲಿತರು, ಉಪ್ಪಾರರು, ಮಡಿವಾಳರು, ಗಾಣಿಗರು, ಕುರುಬರು, ಕುಂಬಾರರು ಮಾತ್ರ ಕಾವ್ಯವೇ ಅವರ ಬದುಕಾಗಿರುವ ಕಾರಣಕ್ಕೆ ಕಾವ್ಯದಲ್ಲಿರುವ ಜಾತ್ಯಾತೀತ ಪರಿಸರವನ್ನು ತಮ್ಮ ನಿಜಬದುಕೆಂದುಕೊಂಡು ಬದುಕುವ ಹಾಗೆ ಕಾಣುತ್ತದೆ.

ಆದರೆ ನೀಲಗಾರರಾರೂ ಕಾವ್ಯವನ್ನು ಹಾಡದ ಲಿಂಗಾಯತ, ಗೌಡ, ಅರಸು ಮನೆತನದವರು ಕಾವ್ಯವನ್ನು ಅಷ್ಟಾಗಿ ಬದುಕಿನ ಭಾಗವಾಗಿಸಿಕೊಂಡಿಲ್ಲದ ಕಾರಣ ಜಾತಿಯ ಎಲ್ಲಾ ರೀತಿಯ ಸೂತಕಗಳಿಗೂ ಬಲಿಯಾಗಿದ್ದಾರೆನ್ನಬಹುದು. ಅಥವಾ ಸಾಮಾಜಿಕವಾಗಿ ಮೇಲರಿಮೆಯನ್ನೂ, ಸವಲತ್ತುಗಳನ್ನೂ ಅನುಭವಿಸುತ್ತಿರುವ ಕಾರಣಕ್ಕೆ ಬೀದಿ ಬೀದಿಯಲ್ಲಿ ತಂಬೂರಿ ಹಿಡಿದು ತಂಡ ಕಟ್ಟಿ ಹಾಡುವ ಕಾಯಕಕ್ಕೆ ಈ ಬಂಧಿತ ಜಾತಿಗಳು ಹೋಗಿಲ್ಲವೆಂದೇ ಹೇಳಬೇಕು. ಆದರೂ ಈ ಕುಟುಂಬಗಳೂ ತಂಡ ಕಟ್ಟಿ ಹಾಡುವ ನೀಲಗಾರರನ್ನು ತಮ್ಮ ಮನೆಯ ಶುಭ ಸಂದರ್ಭದಲ್ಲಿ ಕರೆದು ಹಾಡಿಸಿಕೊಳ್ಳುತ್ತಾರೆ. ಹೀಗೆ ಹಾಡುವ ನೀಲಗಾರರನ್ನು ನಡುಮನೆಯವರೆಗೆ ಬಿಡದಿದ್ದರೂ, ದಲಿತರಾಗಿ ಹೊರಗೇ ನಿಂತು ಹಾಡಿದರೂ ಅಪಾರ ಗೌರವ ಭಕ್ತಿಯಿಂದ ಕೇಳುವ ಧ್ಯಾನಿಸುವ ಪರಿಪಾಠ ಇದೆ. ಹಾಗಾಗಿ “ಮೇಲು ಜಾತಿಯವರ ಸಿರಿತನ, ಅಂತಸ್ತು, ಜಾತಿಯತೆಯನ್ನೆಲ್ಲಾ ಒಂದಾಗಿಸುವ ಸ್ವಾತಂತ್ರ ಕಾವ್ಯದಲ್ಲಿ ಮಾತ್ರ ಇದೆ” ಇದು ನಿರಂತರವಾಗಿ ಯಾವುದೇ ಶುಭ ಸಂದರ್ಭದಲ್ಲಿ ನಡೆಯಬಹುದಾದ ಆಚರಣೆಯಾಗಿದ್ದು, ಜಾತ್ರೆಗಳಲ್ಲಿ ಮಾತ್ರ ತೋಪುಗಳಲ್ಲಿ ಹಾಕಿರುವ ಬಿಡದಿಗಳಲ್ಲಿ ಕತೆಯನ್ನು ಹಾಡುವ ನೀಲಾಗಾರರು ಹೆಚ್ಚಾಗಿ ತಳಸಮುದಾಯಗಳಿಗೆ ಸೇರಿದವರೇ ಆಗಿರುತ್ತಾರೆ. ಇದನ್ನು ಚಿಕ್ಕಲ್ಲೂರು ಜಾತ್ರೆಯಲ್ಲಿ ಹೆಚ್ಚಾಗಿ ಕಾಣಬಹುದು. ಚಂದ್ರಮಂಡಲದ ದಿವಸ ತಾವು ತಂದಿರುವ ಕಂಡಾಯಗಳನ್ನು ಒಂದೆಡೆ ತಳಮಾಡಿ ನೆಟ್ಟು, ಸುತ್ತ ಬೆಂಕಿ ಹಾಕಿ ಕೂತು, ಪುಟ್ಟ ಪುಟ್ಟ ಗುಂಪುಗಳಲ್ಲಿ ಇಡೀ ಕುಟುಂಬದವರು ಕೂತು ಕತೆಗಳನ್ನು ಹಾಡಿಕೊಳ್ಳುತ್ತಾರೆ.