ಮಂಟೇಸ್ವಾಮಿ ಪರಂಪರೆ ಅಥವಾ ಕಾವ್ಯದ ತಾತ್ವಿಕತೆಯಾಗಲೀ, ಆಚರಣೆಯಾಗಲೀ, ಸಂಘರ್ಷದ ನೆಲೆಗಳಾಗಲೀ ಇವೆಲ್ಲವೂ ಸಾಂಸ್ಕೃತಿಕ ನೆಲೆಯ ಭಾಗಗಳಾಗಿಯೇ ಇವೆ. ಆದರೆ ಈ ಭಾಗದಲ್ಲಿ ನನ್ನ ಗಮನ ಮಂಟೇಸ್ವಾಮಿ ಮೂಮೆಂಟ್ ತನ್ನ ಚಲನೆಯಲ್ಲಿ ಕಾವ್ಯವನ್ನು ಅಂದಿನಿಂದ ಇಂದಿನವರೆಗೂ ಹೇಗೆ ಬೆಳೆಸಿಕೊಂಡು ಬಂದಿದೆ ಎಂಬುದರ ಮೇಲೆ ಕೇಂದ್ರಿತಗೊಳ್ಳಬಹುದು. ಇದಲ್ಲದೆ ಮಲೆಮಾದೇಶ್ವರ, ಕರಿಬಂಟ, ಜುಂಜಪ್ಪ, ಒಗ್ಗಕಥಾ, ಬುರ್ ಕಥಾದಂತಹ ಜನಪದ ಮಹಾಕಾವ್ಯಗಳು ಬಿಡಿಬಿಡಿ ತಳಸಮುದಾಯಗಳು ತಮ್ಮ ಜಾತಿ ನರಕವನ್ನು ಮೀರಲು, ಪ್ರಧಾನ ಸಂಸ್ಕೃತಿಗಳೆದುರು ತಮ್ಮತನದ ಗಟ್ಟಿತನವನ್ನು ಕಟ್ಟಿಕೊಳ್ಳಲು ಸೃಷ್ಟಿ ಮಾಡುಕೊಂಡಿರುವ ಮಿಥ್‌ಗಳಾಗಿದ್ದು, ಮಂಟೇಸ್ವಾಮಿ ಕಾವ್ಯ ಆ ತರಹದ ಎಲ್ಲಾ ತಳ ಸಮುದಾಯಗಳು ಸೇರಿ ಸೃಷ್ಟಿಸಿಕೊಂಡ ಒಂದು ಸಂಘರ್ಷದ ಕಥನ. ತಮ್ಮದೇ ಆಗಿದ್ದ ರಾಮಾಯಣ, ಮಹಾಭಾರತದಂತಹ ಪುರಾಣಗಳನ್ನು ವೈದಿಕರು ಕದ್ದು, ತಮ್ಮ ಮೇಲೆಯೇ ಸವಾರಿ ಮಾಡಲು ಶುರುಮಾಡಿದಾಗ ಅವುಗಳೆದುರು ಕಟ್ಟಿಕೊಂಡ ಸ್ಥಳೀಯ ಸಂಕಥನಗಳ ಭಾಗವಾಗಿಯೇ, ಈ ರೀತಿಯ ಕಾವ್ಯಗಳನ್ನು ನೋಡಬೇಕಾಗಿದೆ. ವೈದಿಕರು ರಾಮನನ್ನು ಶ್ರೀರಾಮನನ್ನಾಗಿ ಮಾಡಿ ಭಾರತದ ದ್ರಾವಿಡ ಅನನ್ಯತೆಯನ್ನು ಹೊಡೆದುಹಾಕಲು ವಾಲಿ, ರಾವಣರಂಥ ದ್ರಾವಿಡ ನಾಯಕರನ್ನು ಕೊಲ್ಲುವ, ಅದಕ್ಕೆ ದುಷ್ಟಶಿಕ್ಷೆ – ಶಿಷ್ಟರಕ್ಷೆ ಎಂಬ ಮುಖವಾಡವನ್ನು ಹಾಕುವ ಹುನ್ನಾರ ಮಾಡಿದ್ದರಿಂದ ವೈದಿಕರು ಅಷ್ಟು ಸುಲಭವಾಗಿ ಮುಟ್ಟಲಾಗದ ಗಟ್ಟಿಯಾದ ಸಕೀಲ ಸಂಕೇತಗಳನ್ನು ತಳ ಸಮುದಾಯಗಳು ಸೃಷ್ಟಿಸಿಕೊಂಡವು. ಮಂಟೇಸ್ವಾಮಿ ಕಾವ್ಯದಲ್ಲಿ ಬರುವ ಮುತ್ತತ್ತಿರಾಯನನ್ನು ಹನುಮಂತ ಎನ್ನುವುದನ್ನು ಬಿಟ್ಟರೆ ಅಲ್ಲೆಲ್ಲೂ ರಾಮಾಯಣದಂತಹ ಮಹಾಕಾವ್ಯಗಳು ಜನಜೀವನದಲ್ಲಿದ್ದವು ಎಂಬ ಸುಳಿವೇ ಸಿಕ್ಕುವುದಿಲ್ಲ. ಆ ಹನುಮಂತನನ್ನೂ ಅಲ್ಲಿನ ಸ್ಥಳೀಯ ಸಾಂಸ್ಕೃತಿಕ ನಾಯಕನನ್ನಾಗಿ ನೋಡಿದರೆ ಅದು ಇನ್ನಷ್ಟು ದೇಸೀಯ ನೆಲೆಯನ್ನು ಪಡೆದುಕೊಳ್ಳುವ ವಿಚಾರವಾಗಿದೆ.

ಮಂಟೇದರ ಕುಲ ಸಂವರ್ಧನೆಗಾಗಿ ಈ ಕಾವ್ಯ ಪ್ರಚಾರ ಮಾಧ್ಯಮವಾಗಿ ಕೆಲಸ ಮಾಡುವಾಗ ಅದಕ್ಕಾಗಿ ಒಂದು ನೀಲಗಾರರ ಪಡೆಯೇ ಸೃಷ್ಟಿಯಾಗುತ್ತದೆ. ಹೆಣ್ಣು – ಗಂಡು, ಮೇಲಿಜಾತಿ – ಕೀಳುಜಾತಿ ಭೇದವಿಲ್ಲದ ಆ ಪಡೆ ತಮ್ಮ ಕುಲದ ಹಿರಿಯರನ್ನು ನೆನಪಿಸಿಕೊಳ್ಳಲಿಕ್ಕೆ ಅಥವಾ ತಮ್ಮ ಕುಲದ ಪ್ರಚಾರಕ್ಕೆ ಅಥವಾ ತಮ್ಮ ಸಂಸ್ಕೃತಿಯ ಅನನ್ಯತೆಯ ನಿರಂತರತೆಗೆ ಕಾವ್ಯವನ್ನು ಬಳಸಿಕೊಳ್ಳುವುದು ಕಂಡುಬರುತ್ತದೆ. ಆಫ್ರಿಕನ್ ಬುಡಕಟ್ಟು ಸಂಸ್ಕೃತಿಗಳಲ್ಲಿ ತಮ್ಮ ಹಿರಿಯ ತಲೆಮಾರನ್ನು ನೆನಪಿಸಿಕೊಳ್ಳುವ ಇಂಥದೇ ಸಾಂಸ್ಕೃತಿಕ ಆಚರಣೆಗಳ ಭಾಗವಾಗಿ ವಿಭಿನ್ನ ಕಾವ್ಯಗಳಿರುವುದನ್ನು ಇಂದಿಗೂ ನೋಡಬಹುದಾಗಿದೆ.

ಮಂಟೇಸ್ವಾಮಿ ಕಾವ್ಯವನ್ನು ಹಾಡುವವರು ‘ನೀಲಗಾರರು.’ ‘ಲೀಲೆ’ ಎಂಬುದು ‘ನೀಲಗಾರ’ ಪದದ ಮೂಲ. ಈ ಕಲ್ಪನೆಯೇ ವಿಶಿಷ್ಟವಾದದು. ‘ಲೀಲೆ’ಗೆ ‘play’ ಎಂಬ ಅರ್ಥವಿದೆ. ಅದೊಂದು ಆಟ. ಮಂಟೇಸ್ವಾಮಿ ಆಡಿದ ಆಟವನ್ನು ಹಾಡುವವರು ನೀಲಗಾರರು. ಕನ್ನಡದಲ್ಲಿ ‘ಲೀಲೆ’ಗೆ ‘ಮಾಯಾ’, ‘ಪವಾಡ’, ‘ಆನಂದ’ ಎಂಬ ಅರ್ಥಗಳೂ ಇದ್ದು, ಆ ಪವಾಡ ಆಟಗಳನ್ನು ಮಂಟೇಸ್ವಾಮಿ ತನ್ನ ಕುಲದ ಸಂವರ್ಧನೆಗಾಗಿ ಆಡಿದ್ದಾರೆ. ಜಗತ್ತಿನ ಹಲವು ಸಂಸ್ಕೃತಿಗಳಲ್ಲಿ ಈ ‘play’ ಬಹುಮುಖ್ಯ ರೂಪಕವಾಗಿ ಬಳಕೆಯಲ್ಲಿದ್ದು ನೆಲದ ಸಂಸ್ಕೃತಿಗಳು ಮತ್ತ್ಯಾವುದೋ ಆಕ್ರಮಣಗಳ ವಿರುದ್ಧ ತಮ್ಮನ್ನು ಉರಿಗೊಳಿಸಿಕೊಳ್ಳಲು ಅದನ್ನು ಬಳಸಿಕೊಂಡಿರುವುದು ಕಂಡುಬರುತ್ತದೆ. ಗ್ರೀಕ್, ಆಫ್ರಿಕಾಗಳಲ್ಲಿ ಇದು ಹೆಚ್ಚು ಕಾಣುತ್ತದೆ. ಈ ‘ಲೀಲೆ’ಗಿರುವ ‘ಆನಂದ’ ಎಂಬರ್ಥವನ್ನೂ ನಾವು ಸೂಕ್ಷ್ಮವಾಗಿ ಗಮನಿಸಿದಾಗ ‘ಕಾವ್ಯದ ಉದ್ದೇಶವೇ ಅಂತಿಮವಾಗಿ ಆನಂದಾನುಭವವನ್ನು ಉಂಟು ಮಾಡುವುದಾಗಿದೆ’ ಎಂಬ ಕಾವ್ಯ ಮೀಮಾಂಸಕರ ಮಾತು ನೆನಪಾಗುತ್ತದೆ. ಗ್ರೀಕ್ ನ ಆಚರಣಾ ಜಗತ್ತು ಸೃಷ್ಟಿಸಿಕೊಂಡ ಕಾವ್ಯ – ನಾಟಕಗಳು ಇಡೀ ಬುಡಕಟ್ಟುಗಳು ಒಂದೆಡೆ ಕಲೆತು, ಗತವನ್ನು ನೆನಪಿಸಿಕೊಂಡು, ವರ್ತಮಾನದ ಬದುಕನ್ನು ಸಂಭ್ರಮಿಸುವ ಮಾಧ್ಯಮಗಳಾಗಿದ್ದು, ಅವು ತಮ್ಮೊಳಗೇ ಮಾನವ ವರ್ತನೆಗೆ ಬೇಕಾದ ವಿವಿಧ ತರಂಗಗಳನ್ನು ಎಬ್ಬಿಸುತ್ತಿದ್ದುದು ಕಂಡುಬರುತ್ತದೆ. ಅದೇ ರೀತಿ ಮಂಟೇದರ ಕಾವ್ಯ ತನ್ನೊಳಗಿನ ವಿವಿಧ ತರಂಗಗಳಿಗೆ ವಿವಿಧ ಜನವರ್ಗಗಳು ಅವರ ಅಗತ್ಯಗಳಿಗೆ ತಕ್ಕಂತೆ ಟ್ಯೂನ್ ಮಾಡಿಕೊಳ್ಳುವ ಸಾಧ್ಯತೆ ಹೊಂದಿದೆ.

ಮಂಟೇದರ ಪರಂಪರೆಯಲ್ಲಿ ‘ಆನಂದ’ ಅಂದರೆ ‘ನೀಲಿಗ್ಯಾನ’ ಎಂದು ಅರ್ಥ ಮಾಡಿಕೊಳ್ಳಬಹುದು. ಆ ನೀಲಿಗ್ಯಾನ ಲೌಕಿಕವನ್ನು ಮೀರುವ ಹುಚ್ಚು ಕೊಡುತ್ತದೆ. ಸಿದ್ಧಾಪ್ಪಾಜಿ ಹಲಗೂರು ಪವಾಡ ಮಾಡುವ ಮೊದಲು ಇಂಥ ಎಂಬತ್ತೆಂಟು ವಿವಿಧ

ಹುಚ್ಚು ನೀಲಿ
ಬೆಪ್ಪು ನೀಲಿ
ಆನಂದದ ನೀಲಿ
ಔತನದ ನೀಲಿ
ಮಣ್ಣು ತಿನ್ನುವ ನೀಲಿ
ಮಣ್ಣುಕರಗುವ ನೀಲಿ
ಕಲ್ಲು ತಿನ್ನುವ ನೀಲಿ
ರಸ ಸಿದ್ದನ ನೀಲಿ
ಋಷಿ ಸಿದ್ದನ ನೀಲಿ
ರೋಣಿ ಸಿದ್ದನ ನೀಲಿ
ಒಂದಲ್ಲ ಎರಡಲ್ಲ
ಎಂಬತ್ತೆಂಟು ನೀಲಿ..
ಹೊಟ್ಟೆ ಒಳಗೆ ಓಡಾಡಿ
ನೀಲಿ ಬಂದ ಗ್ಯಾನದಲ್ಲಿ
ಒಂದ್ ಕಾಕ ಹೊಡೆದರಂತಾ
ಥೈತಕ್ಕನಾ ಕುಣಿದರಂತಾ
[ಇಂದ್ವಾಡಿ : ಧರೆಗೆ ದೊಡ್ಡವರ ಕಥೆ, ಪು ೭೭,೭೮]

ಇಂಥ ನೀಲಿಗಳನ್ನು ಮಂಟೇಸ್ವಾಮಿ ಭಂಗಿಫಳಾರ ಮಾಡಿ ಪಡೆಯುತ್ತಾರೆ ಹಾಗೂ ಅದನ್ನೇ ಸಿದ್ಧಪ್ಪಾಜಿಗೂ ಹೇಳಿಕೊಡುತ್ತಾರೆ. ಭಾರತದಂತಹ ಸಮಾಜಗಳ ಜಾತಿಯ ಕಟ್ಟುಗಳನ್ನು (ಕಣ್ಕಟ್ಟು) ಹೊಡೆಯಲು, ಅಥವಾ ಜಾತಿಯ ಕೋಟೆಗಳನ್ನು ವಿವಿಧ ರೀತಿಯ ಪವಾಡಗಳನ್ನೂ ಗೆಲ್ಲಲು ಇಂಥ ‘ನೀಲಿ’ಯ ಅಗತ್ಯವಿದೆ. ನೀಲಗಾರರು ಆ ಮಂಟೇದ ಸಿದ್ದಪ್ಪಾಜಿಯವರ ಲೀಲೆಗಳನ್ನು ಹಾಡುತ್ತಲೇ ಒಂದು ದೊಡ್ಡ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿದ್ದಾರೆ. ಹಾಗು ಈ ನಿಟ್ಟಿನಲ್ಲಿ ದಲಿತ – ಹಿಂದುಳಿದ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಯನ್ನು ವಿಶಿಷ್ಟ ಕ್ಯಾನ್ವಾಸಿನಲ್ಲಿ ಪ್ರತಿಷ್ಠಾಪಿಸಿದ ಮತ್ತು ಅದನ್ನು ಯಾವ ಬೆಲೆ ತೆತ್ತಾದರೂ ಉಳಿಸಿಕೊಳ್ಳುವ ಪಟ್ಟು ಹಿಡಿದಿದ್ದಾರೆ. ಮಂಟೇಸ್ವಾಮಿ ಪರಂಪರೆಯ ಸಾಂಸ್ಕೃತಿಕನೆಲೆ ಅವರ ಒಕ್ಕಲಿನ ಆಚರಣೆಗಳು, ಕಾವ್ಯಗಳಲ್ಲಿ ಹರಡಿಕೊಂಡಿದೆ.

ಮಂಟೇದರ ಪರಂಪರೆ ಒಂದು ಚಳವಳಿಯ ಸ್ವರೂಪ ಹೊಂದಿರುವುದರಿಂದ ಆ ಚಳವಳಿಗೆ ಅಗತ್ಯವಿರುವ ಸಾಂಸ್ಕೃತಿಕ ತಾಕತ್ತನ್ನು ಕಾವ್ಯ ತುಂಬಿಕೊಳ್ಳುತ್ತದೆ. ೨೦ ನೇ ಶತಮಾನದ ಅಂತ್ಯ ಭಾಗ ಮಂಟೇಸ್ವಾಮಿಯನ್ನು ಅರ್ಥೈಸಿಕೊಳ್ಳಲು ಯತ್ನಿಸಿದ್ದನ್ನು ಒಂದು ಸಾಂಸ್ಕೃತಿಕ ರಾಜಕಾರಣದ ಭಾಗವಾಗಿಯೇ ನೋಡಬೇಕು. ಕನ್ನಡ ಸಾಹಿತ್ಯ ಚಳವಳಿಗಳು ತಮ್ಮ ತಮ್ಮ ತಾತ್ವಿಕ ನೆಲೆಗಳಲ್ಲಿ ಅತೀ ಆದರ್ಶವನ್ನು ಪ್ರತಿಪಾದಿಸುತ್ತಾ ಈ ದೇಶದ ಜಾತಿ ಮತ್ತು ಲಿಂಗ ಅಸಮಾನತೆಗಳಿಗೆ ಸರಿಯಾದ ಕಾರಣಗಳನ್ನು ಕಂಡುಹಿಡಿಯಲು ಹೆಣಗುತ್ತಿದ್ದಾಗ, ತಳಸಮುದಾಯಗಳು ಇವೆಲ್ಲವುಗಳ ಎದುರು ರೂಪಿಸಿಕೊಂಡ ಸಾಂಸ್ಕೃತಿಕ ತಾಕತ್ತಾಗಿ ಮಂಟೇಸ್ವಾಮಿ ಕಾವ್ಯ ಕಾಣುತ್ತದೆ. ಈಗಾಗಲೇ ಜನಜೀವನದಲ್ಲಿ ಬೇರು ಬಿಟ್ಟಿದ್ದ ಮಂಟೇಸ್ವಾಮಿ ಕಾವ್ಯ ಕೇವಲ ಒಂದು ಜನಪದ ಪ್ರಕಾರವಾಗಿ, ಪುರಾಣವಾಗಿ ಚರ್ಚೆಯಾಗುತ್ತಿತ್ತು. ಜೀಶಂಪರಂಥವರು ಜಾನಪದ ಸಂಶೋಧನೆಯ ಭಾಗವಾಗಿ ಮಂಟೇಸ್ವಾಮಿ ಕಾವ್ಯವನ್ನು ಮುದ್ರಣಕ್ಕೆ ತಂದರು (೧೯೭೩). ಇದಕ್ಕೂ ಹಿಂದೆ ಶ್ರೀಮತಿ ಮಂಜುಳಾದೇವಿಯರು ‘ಧರೆಗೆ ದೊಡ್ಡವರು ಮಂಟೇಸ್ವಾಮಿ’ ಎಂಬ ಗದ್ಯ ಪಠ್ಯವನ್ನು ರಚಿಸಿದ್ದರು (೧೯೭೧). ಈ ನಂತರ ಮಂಟೇಸ್ವಾಮಿ ಕಾವ್ಯ ೬೦ ರ ದಶಕದಿಂದೀಚೆಗೆ ಹೆಚ್ಚು ಚರ್ಚೆಗೆ ಬಂದಿತು. ದೇಶದಲ್ಲಿ ಭುಗಿಲೆದ್ದ ಕೋಮು ದಳ್ಳುರಿ, ಪ್ರಖರವಾದ ಹುಡುಕಾಟಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಸಾಹಿತ್ಯ ವಿಮರ್ಶಾ ಕ್ಷೇತ್ರ, ಅರ್ಥ ಕಳೆದುಕೊಂಡ ಚಳವಳಿಗಳು ಇಂಥವೇ ಸಾಮಾಜಿಕ ತಲ್ಲಣಗಳು ಮಂಟೇಸ್ವಾಮಿಯನ್ನು ಹೆಚ್ಚು ಚರ್ಚಿಸಲು ಅನುವು ಮಾಡಿಕೊಟ್ಟವು. ಈ ಕಾಲದಲ್ಲೇ ವೆಂಕಟೇಶ್ ಇಂದ್ವಾಡಿಯವರು ಸಂಪಾದಿಸಿದ ‘ಧರೆಗೆ ದೊಡ್ಡವರ ಕತೆ’ (೧೯೯೬) ಹಿ.ಚಿ. ಬೋರಲಿಂಗಯ್ಯನವರು ಸಂಪಾದಿಸಿದ ‘ಮಂಟೇಸ್ವಾಮಿ’ (೧೯೯೭) ಅಚ್ಚಾದವು. ಡಿ ಆರ್. ನಾಗರಾಜ್, ಕಿ.ರಂ. ನಾಗರಾಜ್‌ರಂತಹ ವಿಮರ್ಶಕರು ಇದರ ಬಗ್ಗೆ ಸೂಕ್ಷ್ಮ ಅಧ್ಯಯನಕ್ಕೆ ತೊಡಗಿದರಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಕೊಟ್ಟರು. ಶಿಷ್ಟ ಸಾಹಿತ್ಯ ಪರಂಪರೆ ರೂಪಿಸಿಕೊಂಡಿದ್ದ ಅಕ್ಷರ ರೂಪಿ ಕಥನ ಕ್ರಮದ ಎದುರು ಮಂಟೇಸ್ವಾಮಿಯನ್ನು ವಿಭಿನ್ನ ನೆಲೆಗಳಲ್ಲಿ ಮಂಡಿಸುವ ಕೆಲಸ ಆರಂಭವಾಯಿತು. ಆ ಮೂಲಕ ಮಂಟೇಸ್ವಾಮಿ ಕಾವ್ಯವನ್ನು ಒಂದು ಬಹುಜನ ಪರಿಕಲ್ಪನೆಯ ಸಂಕೇತವಾಗಿ ಮಾರ್ಪಡಿಸಿಕೊಳ್ಳಲಾಯಿತು. ‘past should be altered by present as much as present is directed by the past’ ಎಂಬ ಎಲಿಯಟ್‌ನ ಹೇಳಿಕೆಯಂತೆ ಕನ್ನಡ ಸಂಸ್ಕೃತಿಯ ವರ್ತಮಾನ ತನ್ನ ಕಾಲದ ಹಲವು ಸಾಂಸ್ಕೃತಿಕ ತಲ್ಲಣಗಳೆದುರು ಮಂಟೇಸ್ವಾಮಿ ಕಾವ್ಯದಂತಹ ಪರಂಪರೆಯ ನಿರ್ದೇಶನದ ತುರ್ತನ್ನು ಮನಗಂಡು ತನಗೆ ಅಗತ್ಯವಿರುವ ನಿರ್ದೇಶನಗಳಿಗೆ ತಕ್ಕಂತೆ ಅದನ್ನು ಮಾರ್ಪಾಡುಗೊಳಿಸುತ್ತಾ ಬಂದಿದೆ. ಇದರ ಫಲವಾಗಿ ಈ ಹೋತ್ತು ನಡೆಯುತ್ತಿರುವ ಕನ್ನಡ ಸಂಸ್ಕೃತಿಯ ಯಾವುದೇ ಚರ್ಚೆಯ ಸಂದರ್ಭದಲ್ಲಿ ಮಂಟೇಸ್ವಾಮಿಯನ್ನು ಒಳಗೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದನ್ನು ಕಾಣಬಹುದು. ಅಲ್ಲದೆ ದಲಿತ ಸಂಘಟನೆಗಳು, ಬಹುಜನ ಚಳವಳಿಗಳು, ರಾಜಕೀಯ ಪಕ್ಷಗಳು ಮಂಟೇಸ್ವಾಮಿ ಬಗೆಗೆ ವಿಶಿಷ್ಟ ಒಲವು ಬೆಳೆಸಿಕೊಂಡಿರುವುದು ಮತ್ತು ತಮ್ಮ ಚಳವಳಿಯ ಭಾಗವಾಗಿ ಅದನ್ನು ಪರಿಭಾವಿಸುತ್ತಿರುವುದು ಸಣ್ಣ ವಿಷಯವಲ್ಲ. ೧೨ ನೇ ಶತಮಾನದ ಶರಣ ಚಳವಳಿಯನ್ನು ‘Alter’ ಮಾಡಿದ ಮಂಟೇಸ್ವಾಮಿ ಮೂಮೆಂಟ್ ೨೦ ನೇ ಶತಮಾನದಲ್ಲಿ ರೂಪುಗೊಂಡ ಶರಣ ಚಳವಳಿಯ ಬಗೆಗಿನ ಚರ್ಚೆಯನ್ನು ಹಲವು ರೀತಿಯಲ್ಲಿ ನಿರ್ದೇಶಿಸಿದೆ. ಲಂಕೇಶರು ಬರೆದ ಸಂಕ್ರಾಂತಿ, ಹೆಚ್.ಎಸ್. ಶಿವಪ್ರಕಾಶರ ಮಹಾಚೈತ್ರ, ಕಾರ್ನಾಡರ ತಲೆದಂಡ ರೀತಿಯ ಸಾಹಿತ್ಯ ಚಟುವಟಿಕೆಗಳೂ, ಶೂನ್ಯ ಸಂಪಾದನೆಗಳನ್ನು ಕುರಿತು ಸಾಹಿತ್ಯಕ ಜಿಜ್ಞಾಸೆಗಳೂ, ಡಿ. ಆರ್. ನಾಗರಾಜ್, ಕಿ.ರಂ. ಬಂಜಗೆರೆ ರೀತಿಯ ವಿಮರ್ಶಕರು ಶರಣ ಚಳವಳಿಯನ್ನು ಅರ್ಥ ಮಾಡಿಕೊಳ್ಳಲು ಬಳಸಿದ ವಿಮರ್ಶಾ ಕ್ರಮಗಳು ಇವೆಲ್ಲವುಗಳ ಹಿಂದೆ ಮಂಟೇಸ್ವಾಮಿ ಮೂಮೆಂಟ್‌ನ ಎಳೆಗಲಿರುವುದನ್ನು ಗುರ್ತಿಸಬಹುದಾಗಿದೆ. ಇಟೇ ಅಲ್ಲದೆ ಅಲ್ಲಮನನ್ನು ಈ ಹೊತ್ತಿನಲ್ಲಿ ಅಥೈಸಿಕೊಳ್ಳುವ, ಬಸವಣ್ಣ ಮತ್ತು ಅಲ್ಲಮರ ನಡುವಿನ ತಾತ್ವಿಕ ಭಿನ್ನತೆಗಳನ್ನು ಕಂಡುಕೊಳ್ಳುವ, ತಳ ಸಮುದಾಯಗಳ ವಚನಕಾರರನ್ನು ವಿಶಿಷ್ಟಾಧ್ಯಯನಕ್ಕೆ ಒಳಪಡಿಸುವ ಕ್ರಮಗಳ ಹಿಂದೆಯೂ ಮಂಟೇಸ್ವಾಮಿ ಪ್ರಭಾವ ಇಲ್ಲದಿಲ್ಲ.

ಮಂಟೇಸ್ವಾಮಿ ಸಂಸ್ಕೃತಿಯ ಅನನ್ಯತೆಯ ತಾಕತ್ತನ್ನು ನಾವು ಇನ್ನೊಂದು ರೀತಿಯಲ್ಲಿ ಗ್ರಹಿಸಬಹುದು.

ಭಾರತದ ಎಲ್ಲಾ ಸಮುದಾಯಗಳ ಸಾಂಸ್ಕೃತಿಕ ಕೇಂದ್ರಗಳು, ಸಾಂಸ್ಕೃತಿಕ ಸಂಕೇತಗಳು ಈಗಿನ ಕೋಮುವಾದದ ಸಾಧನಗಳಾಗಿಬಿಟ್ಟಿವೆ. ಲಿಂಗಾಯಿತ ಧರ್ಮದ ಹೆಸರಲ್ಲಿ ಹುಟ್ಟಿದ ಬಹುತೇಕ ಮಠಗಳೂ ಸಹ ಅದೇ ದಾರಿಯನ್ನು ಹಿಡಿದುಬಿಟ್ಟಿವೆ. ಇಂಥ ಸಂದರ್ಭದಲ್ಲಿ ಕೋಮುವಾದ ಮಂಟೇಸ್ವಾಮಿಯನ್ನು ಮುಟ್ಟಲಾಗಿಲ್ಲ ಎಂಬುದು ಕುತೂಹಲಕರ ಸಂಗತಿ. ಆ ಪರಂಪರೆಗಿರುವ ಪ್ರಾದೇಶಿಕ ಮಿತಿಯನ್ನು ಇದಕ್ಕೆ ಕಾರಣವಾಗಿಸಿದರೂ ಸಹ ಮಂಟೇಸ್ವಾಮಿ ಪರಂಪರೆ ಏಕರೂಪೀ ಸಂಸ್ಕೃತಿಯನ್ನು ಜನತೆಯ ಮೇಲೆ ಹೇರುವ ಹುನ್ನಾರ ಹೊಂದಿರುವ ಕೋಮುವಾದದಂತಹ ಕಲ್ಪನೆಗೆ ತನ್ನೊಳಗೆ ಪ್ರವೇಶವನ್ನು ನಿರಾಕರಿಸುತ್ತದೆ. ಈ ಕಾರಣಕ್ಕೆ ಬಹುಜನರು ಆ ಚಳವಳಿಯ ಭಾಗವಾಗಿರಲು ಸಾಧ್ಯವಾಗಿದೆ ಹಾಗೂ ಕೋಮುವಾದ ಸೃಷ್ಟಿಸುತ್ತಿರುವ ಏಕರೂಪಿ ಸಾಂಸ್ಕೃತಿಕ ಸಂಕಥನಗಳನ್ನು ನಿರಚನೆಗೊಳಿಸುವ ಶಕ್ತಿಯನ್ನು, ಮಂಟೇಸ್ವಾಮಿ ಪರಂಪರೆಯ ತಳ ಸಮುದಾಯಗಳು ಮೈಗೂಡಿಸಿಕೊಂಡಿವೆ. ಇದರ ಭಾಗವಾಗಿ ಈಗಾಗಲೇ ಕರ್ನಾಟಕದ ಕೋಮುವಾದ ವಿರೋಧಿ ವೇದಿಕೆಗಳಲ್ಲಿ, ಮಂಟೇಸ್ವಾಮಿ ಪರಿಚಯವಿರುದ ಪ್ರದೇಶಗಳಲ್ಲಿಯೂ ಅವರ ಕಾವ್ಯವನ್ನು ಹಾಡಿಸುವ, ಆ ಕುರಿತು ಉಪನ್ಯಾಸ ಚರ್ಚೆಗಳನ್ನು ಏರ್ಪಡಿಸುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಂಟೇಸ್ವಾಮಿ ಪರಂಪರೆ ಮತ್ತು ಕಾವ್ಯವನ್ನು ಕೇವಲ ಅಧ್ಯಯನ, ಸಂಶೋಧನೆಯ ಮಿತಿಗೆ ಒಳಪಡಿಸಿದೆ ಅದನ್ನು ಸಮಕಾಲೀನ ಪರಿಸ್ಥಿತಿಯ ಬಹುಮುಖತೆಯ ರೂಪೀಕರಣದ ಭಾಗವಾಗಿ ಹುಡುಕಾಟ ನಡೆಸುವ ದಿಕ್ಕಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವೆಂಕಟೇಶ್ ಇಂದ್ವಾಡಿ, ಹಿ.ಚಿ ಬೋರಲಿಂಗಯ್ಯ ಹಾಗೂ ಕರ್ನಾಟಕದ ಸೂಕ್ಷ್ಮ ಸಂವೇದನೆಯ ವಿಮರ್ಶಕರಾದ ಕಿ.ರಂ. ಪ್ರಖರ ಯುವ ಚಿಂತಕರಾದ ಬಂಜಗೆರೆ ಜಯಪ್ರಕಾಶ್ , ಕವಿ ಹೋರಾಟಗಾರರಾದ ಹೆಚ್ ಗೋವಿಂದಯ್ಯ, ಸಂಸ್ಕೃತಿ ಚಿಂತಕ ಕೆ. ರಾಮಯ್ಯ ಮುಂತಾದವರು ಶ್ರಮಿಸುತ್ತಿದ್ದಾರೆ. ಡಾ. ಸಿದ್ದಲಿಂಗಯ್ಯನವರು ವಿಚಾರ ಸಂಕಿರವೊಂದರಲ್ಲಿ ಮಾತನಾಡುತ್ತಾ “ಸಾಮಾಜಿಕ ಬದಲಾವಣೆಗೆ ಹಾಗೂ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸುವುದಕ್ಕೆ ಮಂಟೇಸ್ವಾಮಿ ಪರಂಪರೆ ಮತ್ತು ಈ ಬಗೆಯ ಪರಂಪರೆಗಳು ನಮಗೆ ಸ್ಪೂರ್ತಿ ನೀಡುವ ಸಾಧ್ಯತೆ”ಯನ್ನು ಹೇಳಿದ್ದಾರೆ. ಅವರು ಮುಂದುವರಿದು “ಜಾಗತೀಕರಣವನ್ನು ಎದುರಿಸುವುದಕ್ಕೆ ಬಲವಾಗಿ ಬೆಳೆಯುತ್ತಿರುವ ಕೋಮುವಾದಿ ಶಕ್ತಿಗಳನ್ನು ಎದುರಿಸುವುದಕ್ಕೆ ಹಾಗೂ ಕೆಳಸ್ತರದ ಜನಗಳ ಆತ್ಮವಿಶ್ವಾಸವನ್ನು, ಸಂಘಟನಾ ಶಕ್ತಿಯನ್ನು ವೃದ್ಧಿಸುವುದಕ್ಕೆ ಮಂಟೇಸ್ವಾಮಿ ಯಾವ ರೀತಿ ಪೂರಕವಾಗುತ್ತಾರೆಂಬುದನ್ನು ಚರ್ಚಿಸುವ” ಕರೆ ಕೊಡುತ್ತಾರೆ. ಅಲ್ಲದೆ ಆಧುನಿಕ ಬಿಕ್ಕಟ್ಟುಗಳಿಗೆ ಮಂಟೇಸ್ವಾಮಿ ಪರಂಪರೆಯಿಂದ ಉತ್ತರ ಹುಡುಕುವ ಪ್ರಯತ್ನ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

ನಾವು ಸಿದ್ದಲಿಂಗಯ್ಯನವರ ಮಾತುಗಳ ಮೂಲಕವೇ ಮಂಟೇಸ್ವಾಮಿಯ ಸಾಂಸ್ಕೃತಿಕ ಜಗತ್ತನ್ನು ಪ್ರವೇಶಿಸುವ ತುರ್ತು ಈ ಹೊತ್ತಿನಲ್ಲಿದೆ. ವರ್ತಮಾನದ ತಲ್ಲಣಗಳೊಳಗೆ ಜಾತಿ ಕಲ್ಪನೆ ವಿಶಿಷ್ಟ ರೂಪ ಪಡೆದು, ಮಾನವರ ನಡುವಿನ ಪರಸ್ಪರ ಸಂಬಂಧವೇ ಹಿಪೋಕ್ರಸಿಗೆ ಬೀಳುತ್ತಿರುವ ಈ ಸಂದರ್ಭದಲ್ಲಿ, ಹುಸಿ ಜಾತ್ಯತೀತ ಹೇಳಿಕೆಗಳ ಮೂಲಕ ಜನವರ್ಗಗಳ ಮೇಲೆ ಸವಾರಿ ಮಾಡುತ್ತಿರುವ ಏಕರೂಪೀ ಸಂಸ್ಕೃತಿಗಳ ವಕ್ತಾರರು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಮಂಟೇಸ್ವಾಮಿಯೊಳಗೆ ಇಳಿಯುವ ಅರ್ಥಪೂರ್ಣ ಅಗತ್ಯ ಇದೆ. ಈ ಭಾಗದಲ್ಲಿ ಚರ್ಚಿಸಲಾಗಿರುವ ಸಂಗತಿಗಳು ಈ ನಿಟ್ಟಿನವುಗಳಾಗಿದ್ದು, ಜಾತಿ ನಿರಾಕರಣೆಯ ಸಾಂಸ್ಕೃತಿಕ ನೆಲೆಯನ್ನು ಮಂಟೇಸ್ವಾಮಿಯಲ್ಲಿ ಕಂಡುಕೊಳ್ಳುವ ಈ ಪ್ರಯತ್ನವನ್ನು ವರ್ತಮಾನದ ತುರ್ತು ನಿರ್ದೇಶಿಸಿರಬಹುದು. ಆ ಕಾರಣಕ್ಕಾಗಿ ಸಮಕಾಲೀನ ಸವಾಲುಗಳೆದುರು ಮಂಟೇಸ್ವಾಮಿಯನ್ನು ಒಂದು ಮಾನವೀಯ ಮೌಲ್ಯದ ಸಂಕೇತವಾಗಿ ಕಟ್ಟಿಕೊಳ್ಳವ ಕೆಲಸವನ್ನು ಈ ಭಾಗದಲ್ಲಿ ಮಾಡಲಾಗಿದೆ.