ಅಲ್ಲಮಪ್ರಭು ಮತ್ತು ಮಂಟೇಸ್ವಾಮಿಗಳಿಬ್ಬರದೂ ಅಭಿನ್ನ ವ್ಯಕ್ತಿತ್ವ ಎಂಬ ಆಶಯವೇ ಮಂಟೇಸ್ವಾಮಿ ಕಾವ್ಯ ಅಥವಾ ಪರಂಪರೆಯ ಇಡೀ ತಾತ್ವಿಕ ನೆಲೆಯನ್ನು ನಿರ್ಧರಿಸಿ ಬಿಡುತ್ತದೆ. “ಮಂಟೇಸ್ವಾಮಿ ಅಸ್ಪಷ್ಟ ಚಾರಿತ್ರಿಕ ವ್ಯಕ್ತಿಯಾಗಿದ್ದರೂ ಈ ಮಹಾಕಾವ್ಯ ಕಥನ – ಕಸಿಯ ಮಾದರಿಯನ್ನು ಅನುಸರಿಸಿ ಆ ಮಹಾಗುರುವಿನ ಕಥೆ ಹೇಳುತ್ತದೆ. ಕಥನ – ಕಸಿಯ ಮಾದರಿ ಎಂದರೆ ಮಂಟೇಸ್ವಾಮಿಯ ಜೀವನದ ಘಟನೆಗಳ ಮೇಲೆ ಅಲ್ಲಮನ ವ್ಯಕ್ತಿತ್ವವನ್ನು ಇಟ್ಟು ಕಸಿ ಮಾಡುತ್ತಾ ಹೋಗುವುದು. ಈ ಜಾನಪದ ಮಹಾ ಕವಿಗಂತೂ ಮಂಟೇಸ್ವಾಮಿಯೇ ಅಲ್ಲಮಪ್ರಭು ಎಂಬುದು ವಿವಾದಾತೀತವಾದ ಶ್ರದ್ದೆಯಾಗಿದೆ. ಮಂಟೇಸ್ವಾಮಿ ಕಥೆಯಲ್ಲಿ ಬರುವ ಆಧ್ಯಾತ್ಮಕ ಧೈರ್ಯಕ್ಕೆ ಈ ನಂಬಿಕೆಯೇ ಬೇರು” [ಡಿ ಆರ್. ನಾಗರಾಜ್] ಈ ಆಧ್ಯಾತ್ಮಿಕ ಧೈರ್ಯದ ಹಿಂದೆ ಒಂದು ದೊಡ್ಡ ತಾತ್ವಿಕತೆಯೇ ಅಡಗಿದೆ.

೧೨ ನೇ ಶತಮಾನದಲ್ಲಿ ಅಲ್ಲಮ ಹುಟ್ಟು ಹಾಕಿದ ಆಧ್ಯಾತ್ಮಿಕ ಚಳವಳಿಯ ಭಾಗವಾಗಿ ಮಂಟೇಸ್ವಾಮಿಯನ್ನು ನೋಡುವಾಗ ಅಲ್ಲಿನ ಬೌದ್ದಿಕ ಸಂಘರ್ಷ ಇಲ್ಲಿ ಕ್ರಿಯೆಯಾಗಿ ಮಾರ್ಪಟ್ಟು ದೈನಿಕದ ನೆಲೆಯಲ್ಲಿ ಆಧ್ಯಾತ್ಮವನ್ನೂ ಕಂಡುಕೊಳ್ಳುವ ಕ್ರಮವಾಗಿ ಕಾಣುತ್ತದೆ. ಶರಣ ಚಳವಳಿಯ ಮೂಲ ಆಶಯ ಬಸವಣ್ಣನಂಥ ಸುಧಾರಣಾ ಸಮನ್ವಯವಾದಿಯ ಕೈತಪ್ಪಿ ಮರಳಿ ವೈದಿಕ ಚಹರೆಗಳನ್ನು ಪಡೆದುಕೊಳ್ಳುವ ಅಪಾಯವಿದ್ದಾಗ ಅಲ್ಲಮ ಅದಕ್ಕೂ ಹಿಂದೆಯೇ ದಾಸಿಮಯ್ಯನಂತಹ ತಳಸಮುದಾಯಗಳ ಶರಣರು ಭಿನ್ನವಾದ ಆಧ್ಯಾತ್ಮಿಕ ದಂಗೆಯನ್ನೇ ಹುಟ್ಟುಹಾಕಿದ್ದನ್ನು ಮತ್ತು ಈ ಪ್ರಯತ್ನಕ್ಕೆ ವ್ಯತಿರಿಕ್ತವಾಗಿ ಶರಣತತ್ವವನ್ನು ಒಂದೇ ಸಾಂಸ್ಕೃತಿಕ ಗೂಟಕ್ಕೆ ಕಟ್ಟಿಹಾಕಲು ಹವಣಿಸಿದ ಹಲವು ಪಟ್ಟಭದ್ರ ಶರಣರ ನಡುವಿನ ವಾಗ್ವಾದವನ್ನು ಮಂಟೇಸ್ವಾಮಿಗಳು ತಮ್ಮ ಚಳವಳಿಗೆ ನೆಪವಾಗಿ ಸ್ವೀಕರಿಸುತ್ತಾರೆ. ಬಸವಣ್ಣನ ಕಾಲದಲ್ಲೇ ಅಲ್ಲಮ ಮತ್ತವನ ಆಧ್ಯಾತ್ಮಿಕ ಪಡೆ ಸ್ಥಾವರಲಿಂಗ, ಪೂಜೆ, ಕೈಲಾಸ, ಷಟ್ ಸ್ಥಲ ಗಳನ್ನು ತಿರಸ್ಕರಿಸಿ, ಲಿಂಗವನ್ನು ತಮ್ಮಲ್ಲೇ ಕಂಡುಕೊಳ್ಳಲು ಯತ್ನಿಸಿದರು. ತಮ್ಮ ಆಲೋಚನೆ ಮತ್ತು ಇರುವಿಕೆಯೇ ಶರಣವೆಂದು ಪ್ರದಿಪಾದಿಸಿ ಕಾಯಕನಿಷ್ಠೆಯನ್ನು ಒತ್ತಿ ಹೇಳಿದರು. ಆನಂತರದಲ್ಲಿ ಚನ್ನಬಸವಣ್ಣನಂತವರು ಶರಣತ್ವವನ್ನು ಒಂದು ಆಚರಣಾ ಪ್ರಧಾನ ಸಾಂಸ್ಥಿಕ ಧರ್ಮವನ್ನಾಗಿ ಪರಿವರ್ತಿಸಲು ಹೆಣಗಿದರಲ್ಲದೆ, ಶೂನ್ಯ ಸಂಪಾದನೆಗಳನ್ನು ಬರೆದು ಅಲ್ಲಮನನ್ನು ದೇವರನ್ನಾಗಿಸಿಬಿಟ್ಟರು. ಇದರಿಂದ ಅವಮಾನಿತವಾದ ತಳಸಮುದಾಯಗಳು ಮಂಟೇದರ ರೂಪದಲ್ಲಿ ಅಲ್ಲಮನನ್ನು ಪುನರ್ ಸೃಷ್ಟಿಸಿ ೧೨ನೇ ಶತಮಾನದ ಅದೇ ತ್ವಾತ್ವಿಕ ವಾಗ್ವಾದವನ್ನು ಪುನರ್ ವಿಮರ್ಶೆಗೆ ಒಳಪಡಿಸಲು ಯತ್ನಿಸಿದರು. ಇದರಿಂದಾಗಿ ಅಲ್ಲಮಪ್ರಜ್ಞೆ ವಿಸ್ತಾರಗೊಂಡು ಅದೊಂದು ತಳಸಮುದಾಯಗಳ ಆಧ್ಯಾತ್ಮಿಕ ದಂಗೆಯ ವಿಭಿನ್ನ ಹಾಗೂ ತದ್ವಿರುದ್ಧ ನಡೆಯ ಸ್ವರೂಪವಾಗಿ ರೂಪು ತಳೆಯಿತು. ಈ ಕಾರಣಕ್ಕೆ ಮಂಟೇಸ್ವಾಮಿ ತಮ್ಮ ಪ್ರಯಾಣದ ಮೊದಲಿಗೇ ಕಲ್ಯಾಣ ಪಟ್ಟಣಕ್ಕೆ :

ಸತ್ತಮ್ಮೆ ಚಕಳವಾ
ಹೆಗಲಮೇಲೆ ಹೊತ್ಕಂಡು
ಆರುಖಂಡುಗ ಕಜ್ಜಿ
ಕೀವು ರಸಿಕನ ಒಳಗೆ
ಏಳುಗಿಣ್ಣಿನ ಬೆತ್ತ
ಕೈಯಲ್ಲಿ ಹಿಡಕಂಡು
ಕಾವಿಜೋಳುಗಾ ತಂದಾ
ತುಂಬಿದ ಸೋಮಾರದಿವ್ಸ
ಹನ್ನೆರಡ್ಗಂಟಾ ಒಳಗಾ
ಆದಿಯ ಕಲ್ಯಾಣಕ ತಂದ
ಅಲ್ಲಮನಾಗಿ ಬರುವರಂತ.
[ಇಂದ್ವಾಡಿ, ಧರೆಗೆ ದೊಡ್ಡವರ ಕಥೆ, ಪು.೧೫]

ಈ ರೀತಿಯಲ್ಲಿ ‘ಬಸವಣ್ಣದೇವರ ದುಡುವ ನೋಡಲೇಬೇಕು. ಅವರ ಮಡದಿ ನೀಲವ್ವನ ಸತ್ಯ ನೋಡಲೇಬೇಕು’ ಎಂದುಕೊಂಡು ಕಲ್ಯಾಣಕ್ಕೆ ಬಂದ ಮಂಟೇದರನ್ನು ಅಲ್ಲಿನ ಲಕುಷಕೋಟಿ ಜಂಗುಮರೆಲ್ಲಾ ‘ಛೇ! ಬೀದಿಯೊಳಗೆ ಭಿಕ್ಷಾ ಮಾಡುವ ತಿರುಕಾ’ ಎಂದು ಹೊರಕ್ಕೆ ತಳ್ಳುತ್ತಾರೆ. ಈ ರೀತಿಯ ಚಹರೆಗಳೊಂದಿಗೆ ಮಂಟೇಸ್ವಾಮಿ ಬರುವ ಕಾರಣ ಸಹಿಷ್ಣು ಸಂಸ್ಕೃತಿಯಾಗಿ ಬೆಳೆಯಬೇಕಿದ್ದ ಶರಣತ್ವ ಬರಬರುತ್ತಾ ಜಂಗಮರು ಹೀಗಿರಬೇಕು, ಹೀಗಿರಬಾರದು ಎಂದು ಪ್ರಮಾಣೀಕರಿಸಲು ಪ್ರಾರಂಭಿಸಿದ್ದರಿಂದ ಅದನ್ನು ತಿದ್ದುವುದೇ ಆಗಿದೆ. ಶೂನ್ಯ ಸಂಪಾದನೆಯೊಳಗೆ ಅಲ್ಲಮನೂ ಬಸವಣ್ಣನ ಕಣ್ಣಿಗೆ ಇದೇ ರೀತಿ ಕಾಣುವ ಸೋಜಿಗ ಇದೆ.

ಹಣೆಯ ಬಗುಟಿನ, ಕರಸ್ಥಲದ ಅನಿಮಿಷದಿಂ
ಬಹಿರಂಗವಧಾನ ತಪ್ಪಿ, ಇದಿರುಗೊಯ್ಲು ತಾಗಿ
ಪುರ್ಬೊಡೆದು, ಕಣ್ದೆರೆದು, ಕಿವಿ ಹರಿದು, ಜೋಲುವ;
ರಕ್ತ ಧಾರೆಯ, ಗಾಳಿಯ ಧೂಳಿನ ಮಳೆಯ ಜಾರಿನ
ಬೆನ್ನು ಬಾಸುಳದ, ಎಡಬಲದ ಬರೆಯ ತಟ್ಟಿನ,
ಮುಳ್ಳು ತರಹಿನ ಕಂಕುಳ ಸೀಳ,
ಕಂಡು ನೋಡುವ ಜನ ಬೆರಗಾಗೆ, ಪೊರೆವಾರಿನ
ಮನೆಯ ದಿಗಂಬರದಲ್ಲಿ ಬಣಗು ಸುರಿವುತ್ತ,
ಆಪ್ಯಾಯನವರಿತು, ಬಿದ್ದು ಮೊಣಕಾಲೊಡೆದು,
ಹೊಸ ಹುಣ್ಣಿನ ರಕ್ತದ ಜೋರ ಹಳೆಯ ಮುಂಗಾಲ
ಕಳೆ ಹೊಳೆದು ಕಣೆ ಕಾಲ ಸಂದು ತಪ್ಪಿದ
ಬಿರುಬೇಸಿಯ, ಎಡಹಿ ಬೊಟ್ಟೊಡೆದ ಗಾಯದ
ಉಗುರು ಟೊಂಕದ, ಪಿರುಪು ಗುಂಟನನೋಡಾ
ಚೆನ್ನಬಸವಣ್ಣ, ಅತ್ಯಂತ ಮಲಿನ.
ಕೂಡಲ ಸಂಗಮದೇವ ಸುಳುಹು ವಿಪರೀತ!
ನೋಡುವದೆ ಭಯಂಕರವಾಗಿದೆ ಅಯ್ಯ
[ಸಂ: ಎಲ್. ಬಸವರಾಜು, ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ, ಪು. ೧೮೮]

ಅಲ್ಲಮ ಮತ್ತು ಮಂಟೇದರನ್ನು, ಶೂನ್ಯಸಂಪಾದನೆ ಮತ್ತು ಮಂಟೇಸ್ವಾಮಿ ಕಾವ್ಯವನ್ನು ತೌಲನಿಕವಾಗಿ ಅಭ್ಯಸಿಸುವುದರ ಮೂಲಕ ಅರ್ಥಮಾಡಿಕೊಳ್ಳುವುದು ಅಷ್ಟು ಸಮಂಜಸವಲ್ಲದಿದ್ದರೂ ಒಂದು ಧಾರ್ಮಿಕ ಅಜೆಂಡಾ ಇರುವ ಶೂನ್ಯ ಸಂಪಾದನೆಯಲ್ಲಿಯೂ ಅಲ್ಲಮನ ದಂಗೆಕೋರತನ ಎಲ್ಲವನ್ನು ಮೀರಿ ಧಾರ್ಮಿಕರ ಕಣ್ಣಿಂದ ನುಸುಳಿ ಬಂದಿರಬಹುದಾದ್ದರಿಂದ ಅಲ್ಲಿರುವ ಅಲ್ಲಮನ ತಾತ್ವಕತೆಯನ್ನು ಧರೆಗುರುಗಳ ಜೊತೆಗಿಟ್ಟು ನೋಡಬಹುದು. ಇವರಿಬ್ಬರೂ ಧರಿಸಿರುವ ಈ ಚಹರೆಗಳು ಮಾನವ ಬದುಕಿನ ಅತ್ಯಂತ ದೀನ ಸ್ಥಿತಿಯಾಗಿದ್ದು, ಆಧ್ಯಾತ್ಮಕ್ಕೆ ಮನುಷ್ಯರ ಭೌತಿಕ ಚಹರೆಗಳು ಮುಖ್ಯವಾಗದೆ; ಅವರೆದೆಯೊಳಗಿನ ಜೀವಕಾರುಣ್ಯ ಮುಖ್ಯವಾಗುತ್ತದೆ ಎಂಬುದನ್ನು ಪ್ರತಿಪಾದಿಸುವ ಸಂಕೇತವಾಗಿದೆ. ಮಂಟೇಸ್ವಾಮಿ ಕಾವ್ಯದಲ್ಲಂತೂ ಇದು ಒಂದು ಮಗ್ಗುಲಲ್ಲಿ ಈ ದೇಶದ ಅಸ್ಪೃಶ್ಯರಾದ ತಳಸಮುದಾಯಗಳ ಸಾಂಸ್ಕೃತಿಕ ಚಹರೆಗಳಾದ ಸತ್ತೆಮ್ಮೆ ಚಕಳ, ಸುರೆಗಡಿಗೆಗಳ ಪ್ರಸ್ತಾಪವಿದ್ದು, ದಲಿತರು ಶರಣ ಚಳವಳಿಯೊಂದಿಗೆ ವಾಗ್ವಾದಕ್ಕಿಳಿಯುವ, ವಿಶಿಷ್ಟ ಪ್ರಯತ್ನದಂತೆ ಕಾಣುತ್ತದಲ್ಲದೆ, ಪ್ರಖರವಾದ ಸಾಮಾಜಿಕ ಬದಲಾವಣೆಯ ಜವಾಬ್ದಾರಿ ತಮ್ಮ ಮೇಲೇ ಇರುವುದನ್ನು ಹೇಳುತ್ತವೆ.ಒರಿಸ್ಸಾದ ಪೂರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸಿದ ಮಹಿಮಾ ಪಂಥದ ಆದಿವಾಸಿಗಳ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಯಾವ್ಯಾವುದು ಆ ದೈವಕ್ಕೆ ವರ್ಜ್ಯವೋ ಅದೇ ಚಹರೆಗಳೊಂದಿಗೆ ಆ ಪಂಥ ದಂಗೆಯೇಳುವುದು ಕೂಡಾ ಇದೇ ರೀತಿಯ ಆಧ್ಯಾತ್ಮಿಕ ಹಸಿವಿನ ಕಾರಣಕ್ಕೇ ಆಗಿದೆ.

ಶರಣತ್ವವನ್ನು ಸಾಂಸ್ಥಿಕವಾಗಿಸಹೊರಟ ಇಷ್ಟಲಿಂಗಿಗಳು ಶೂನ್ಯ ಸಂಪಾದನೆಯನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಂಡಿದ್ದರಿಂದ ಅಲ್ಲಿ ಅಲ್ಲಮನನ್ನು ಹುಡುಕುವುದು ಅಪ್ರಸ್ತುತವೆಂದೇ ನನ್ನ ನಂಬಿಕೆ ಜನರ ಕಾವ್ಯವಾದ ಮಂಟೇಸ್ವಾಮಿಗೂ ಮಠದ ಕಾವ್ಯವಾದ ಶೂನ್ಯಸಂಪಾದನೆಗೂ ಇರುವ ತೌಲನಿಕ ಸಾದೃಶ್ಯ ವೈದೃಶ್ಯಗಳನ್ನು ಹುಡುಕ ಹೊರಟರೆ ಡಿ.ಆರ್.ಎನ್ ಹೇಳುವಂತೆ ಅದೊಂದು ತೌಲನಿಕ ತೆವಲಾಗಿಬಿಡುವ ಭಯದಿಂದ ಈ ಚರ್ಚೆಯನ್ನು ಇಲ್ಲಿಗೇ ಮುಗಿಸಬಹುದು.

ಮಂಟೇಸ್ವಾಮಿ ಪರಂಪರೆಯ ನಿಜವಾದ ತಾತ್ವಿಕತೆ ಇರುವುದು ‘ಲಿಂಗ’ ಕುರಿತ ಚರ್ಚೆಯಲ್ಲಿ… ಬಸವಣ್ಣ ತನ್ನ ಕಾಲದ ಆಧ್ಯಾತ್ಮಿಕ ತೆವಲಿಗೆ ವ್ಯತಿರಿಕ್ತವಾಗಿ ರೂಪಿಸಿಕೊಂಡ ಜೀವಪರ ಕಲ್ಪನೆ ಈ ಲಿಂಗ. ಈ ಲಿಂಗವೆಂಬುದು ಸಾಮಾಜಿಕ ನ್ಯಾಯದ ಭಿತ್ತಿಯಲ್ಲಿ ಸಮಾನತೆಯನ್ನು ಮೂಡಿಸುವ ಒಂದು ಅಲೌಕಿಕ ಆಧ್ಯಾತ್ಮಿಕ ಕಲ್ಪನೆಯಾಗಿದ್ದುದು. ಆದರೆ ಆನಂತರದ ಬೆಳವಣಿಗೆಗಳು ಬಸವಣ್ಣನನ್ನು ಅವನ ಕಾಯಕತತ್ವವನ್ನೂ ಮೀರಿ ಆಚರಣಾತ್ಮಕ ನೆಲೆಯಲ್ಲಿ ಸ್ಥಿರೀಕರಣಗೊಳಿಸಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆ ವಚನ ಚಳವಳಿಯಿಂದ ಭಂಗಗೊಂಡಂತಿದ್ದ ವೈದಿಕ ಪರಂಪರೆಯ ಹುನ್ನಾರವಾಗಿರುತ್ತದೆ. ಈ ಕಾರಣಕ್ಕೇ ಶರಣರ ಸರ್ವಸಮಾನತೆಯ ತಾತ್ವಿಕ ಅಡಿಪಾಯ ಕಳಚಿಕೊಳ್ಳುತ್ತಾ ಹೋಗುತ್ತದೆ. ಇದರ ಭಾಗವಾಗಿ ಆಧ್ಯಾತ್ಮಿಕ ತೆವಲುಗಳಿಗೆ ಮೈಗಳ್ಳರು ಶರಣರಾಗುತ್ತಾ, ಇಷ್ಷಲಿಂಗವನ್ನು ಪೂಜಿಸುತ್ತಾ ತಮ್ಮ ಮೂಲ ತಾತ್ವಿಕತೆಯನ್ನು ವ್ಯವಸ್ಥಿತವಾಗಿ ಔಸಿಡುತ್ತಾರೆ. ಹೀಗೆ ಔಸಿಟ್ಟ ತಾತ್ವಿಕತೆಯನ್ನು ಶೋಧಿಸಿ ಮುಖ್ಯನೆಲೆಗೆ ತಂದು ಶರಣತ್ವದ ಮೂಲ ತಾತ್ವಿಕತೆಯನ್ನು ನೆನಪಿಸುವುದೇ ಮಂಟೇದರ ಕೆಲಸ ಅಲ್ಲಮನ;

ಉಳಿ ಮುಟ್ಟಿದ ಲಿಂಗವ
ಮನಮುಟ್ಟಬಲ್ಲದೇ?”

ಎಂಬ ಪ್ರಶ್ನೆಯಿಂದಲೇ ಮಂಟೇಸ್ವಾಮಿ ಕೂಡ ಕಲ್ಯಾಣಕ್ಕೆ ಪ್ರವೇಶಿಸುತ್ತಾರೆ.

‘ಲಿಂಗ ಧರಿಸಿದವರೆಲ್ಲಾ ಲಿಂಗವಂತರಲ್ಲ, ಎಂದು ಲಕುಷಕೋಟಿ ಜಂಗಮರ ಲಿಂಗಗಳನ್ನೆಲ್ಲಾ ಮಾಯ ಮಾಡುತ್ತಾರೆ. ಅವರೆಲ್ಲಾ ಲಿಂಗ ಸಿಗದೆ ಬಸವಣ್ಣನನ್ನು ಶಪಿಸಿ ಹೊರಟೋದಾಗ’ ಪಂಚಲಿಂಗ, ಐದಲಿಂಗ, ಅಂಚಲಿಂಗ, ಎರಡಲಿಂಗ, ಆತ್ಮಲಿಂಗ, ಎಡ್ಡಲಿಂಗ ಜಗತ್ತಿಗೆ ಒಂಬತ್ತೇ ಲಿಂಗ’ ಕೊಟ್ಟು:

ಇಷ್ಟು ಮಂದಿ ಶರಣಮಾತ್ಮರು
ನಮ್ಮ ಆದಿಕಲ್ಯಾಣದಲ್ಲಿ ಉಳಿದವರೆ
ಇಷ್ಟು ಮಂದಿ ಶರಣಮಾತ್ಮರಿಗೂ
ಕಟ್ಟುಕೊಂಡು, ಬಸವಣ್ಣ
ಕಲ್ಯಾಣ ಪಟ್ಟಣ
ಈಗಲೀಗ ಹೆಚ್ಚು ಒಕ್ಕಲಾಗಿ ಬಾಳಲಿ
ಅಂತೇಳಿ ನಾಮಕರಣ ಕಟ್ಟಿ
ಮುಂದೆ ಹೋಗುತ್ತಾರೆ.

ಡಿ. ಆರ್.ಎನ್. ಈ ಭಾಗವನ್ನು ತಮ್ಮ ‘ಮಂಟೇಸ್ವಾಮಿ; ಆಧ್ಯಾತ್ಮಿಕ ದಂಗೆಯ ಕೃತಿ’ ಎಂಬ ಲೇಖನದಲ್ಲಿ ಭಿನ್ನವಾಗಿ ಚರ್ಚಿಸುತ್ತಾರೆ. ಮಂಟೇಸ್ವಾಮಿಯ ಚಹರೆಗಳು ವಿಕಾರವಾಗಿದ್ದು, ಜಾತಿ ಸೂಚಕವಾಗಿದ್ದಾಗ, ರೋಗವಿದ್ದಾಗ “ನೀಲಮ್ಮ ಮತ್ತು ಬಸವಣ್ಣ ಅವರನ್ನು ಹೊತ್ತುಕೊಂಡು ಹೋಗಲು ಬರುತ್ತಾರೆ. ಹೀಗೆ ಮಾಂಸ ಕಿತ್ತುಬಂದರೂ ಹೊತ್ತು ಹೋಗಿ ಅನುಭವ ಮಂಟಪದೊಳಗೆ ಸತ್ತೆಮ್ಮೆ ಕರ, ಅವನ ಹೆಣ – ಅವನ ಚೂರು ಚೂರಾದ ಭಾಗಗಳು ಮತ್ತು ಹೆಂಡ – ಮೂರನ್ನೂ ಪ್ರತಿಷ್ಠಾಪಿಸಿ ಇದು ಅಲ್ಲಮಪ್ರಭುವಿನ ಜ್ಯೋತಿ ಇದನ್ನು ಅವಮಾನ ಮಾಡಬಾರದು ಅಂತ.ಇದರಿಂದ ಈ ಕಾವ್ಯದೊಳಗಡೆ ಒಂದು ಭಾರತೀಯ ಸಂಸ್ಕೃತಿಗೆ ವಿಶಿಷ್ಟವಾದ ಒಂದು ಘರ್ಷಣೆ ಯಾವುದಿದೆ, ಜಾತಿಸೂಚಕವಾದ ಅವಮಾನ ಸೂಚಕವಾದ ಸಂಕೇತಗಳು ಆತ್ಮಗೌರವದ ಸೂಚಕಗಳಾಗಿ ಪರಿವರ್ತನೆಯಾಗುತ್ತವೆ” [ಡಿ. ಆರ್. ನಾಗರಾಜ್ : ಸಂಸ್ಕೃತಿ ಕಥನ ಪು. ೫೦೬]

ಇದು ಕಲ್ಯಾಣದ ಶರಣತತ್ವದ ಆಶಯ. ಈ ಆಶಯ ಮಣ್ಣುಪಾಲಾದಾಗ ಮಂಟೇಸ್ವಾಮಿ ಅದನ್ನು ಪುನರ್ ಸೃಷ್ಟಿಸುವ ಮೂಲಕ ೧೨ನೇ ಶತಮಾನದ ಆಶಯವನ್ನು ಮೀರಿ ಮುಂದುವರೆಯುತ್ತಾರೆ. ಈ ಕಾರಣಕ್ಕೆ ಅವರು ತಳಸಮುದಾಯಗಳ ಸಾಂಸ್ಕೃತಿಕ ಚಹರೆಗಳಾದ “ಹೆಂಡ, ಮಾಂಸ ಎಲ್ಲವನ್ನೂ ಉನ್ನತೀಕರಿಸುವ, ಆಧ್ಯಾತ್ಮೀಕರಿಸುವ ಮೂಲಕ ಜಾತಿಪದ್ಧತಿಯ ಅವಮಾನಗಳನ್ನೂ ದಾಟುವ ಪ್ರಯತ್ನ ಮಾಡುತ್ತಾರೆ” [ಡಿ. ಆರ್. ನಾಗರಾಜ್ : ಸಂಸ್ಕೃತಿ ಕಥನ ಪು. ೫೦೭] ಅವರು ಈ ಉದ್ದೇಶದ ಈಡೇರಿಕೆಗಾಗಿ ಅತಿಮಾನುಷ ಪವಾಡಗಳನ್ನು ಮಾಡುವುದನ್ನು ಗಮನಿಸಿದಾಗ, ಶರಣಚಳವಳಿ ತನ್ನ ಆಶಯವನ್ನು ಇಂಡಿಯಾದಂತ ಜಾತಿ ವ್ಯವಸ್ಥೆಯ ಮಧ್ಯೆ ಇಟ್ಟು, ಅವರು ಅದನ್ನು ಒಪ್ಪಿಕೊಂಡರೂ, ಕೃತಿಯಲ್ಲಿ ಒಪ್ಪಿಕೊಳ್ಳದೆ, ತಮ್ಮೆದುರಿಗಿನ ವಾಸ್ತವಕ್ಕೆ ಪ್ರತಿವಾಸ್ತವವನ್ನು ಸೃಷ್ಟಿಸಿ ಜಾತಿಯಂತಹ ಅಮಾನವೀಯ ವ್ಯವಸ್ಥೆಯನ್ನು ಪೋಷಿಸಿಕೊಂಡು ಹೋಗುತ್ತಿರುವಾಗ. ಇಂಥವರನ್ನು ಮಣಿಸಲು ಧರೆಗುರು ಪವಾಡಗಳ – ಅತಿಮಾನುಷತೆಯ ಮೊರೆ ಹೋಗಬೇಕಾಗುತ್ತದೆ. ಇದರಿಂದ ಈ ವಾಸ್ತವದ ಜಗತ್ತಿನಲ್ಲಿ ಜಾತಿ ಸಮಾನತೆ ಎಂದಿಗೂ ಸಾಧ್ಯವಾಗದೆ ಶಾಶ್ವತ ವ್ಯವಸ್ಥೆಯಾಗಿದ್ದು, ಅದನ್ನೂ ಮೀರಲು ಕಲ್ಪನೆಗೆ ಮಾತ್ರ ಸಾಧ್ಯ ಎಂಬ ಗ್ರಹಿಕೆ ಬರುವುದೂ ಸಹಜವೇ. ಆದರೆ ಇಂಡಿಯಾದ ಜನ ತಮ್ಮ ತಲೆಮಾರುಗಳುದ್ದಕ್ಕೂ ಕಣ್ಣಿಗೆ ಕಾಣದ ಅತಿಮಾನುಷ ಶಕ್ತಿಯನ್ನೇ ನಂಬಿಕೊಂಡು ಬಂದಿದ್ದು, ಆ ಕಾರಣಕ್ಕೇ ಅವರು ಜಾತಿಯಂಥ ಮಡಿ ಮೂಲದ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿರುವುದನ್ನು ನೋಡಿದಾಗ ಮಂಟೇಸ್ವಾಮಿ ರೀತಿಯ ಅತಿಮಾನುಷ ಸಂಕೇತಗಳೂ ಕೂಡ ವಾಸ್ತವ ಜಗತ್ತಿನ ರೋಗಕ್ಕೆ ಮದ್ದಾಗುವ, ಕಳಚಿದ ಕೊಂಡಿಗಳಿಗೆ ಬೆಸುಗೆಯಾಗುವ ಸಾಧ್ಯತೆಯಿರಬಹುದು.

‘ಜಾತಿ’ ಎಂಬುದನ್ನಿಡಿದು ಮಂಟೇಸ್ವಾಮಿ ಪರಂಪರೆಯೊಳಗೆ ಇಳಿದರೆ ನಮಗೆ ಮತ್ತೆ ಮತ್ತೆ ಕಾಡುವ ಪ್ರಶ್ನೆ ಎಂದರೆ ‘ಜಾತಿ’ಯದ್ದೇ ಜಾತಿಯನ್ನು ನಿರಾಕರಿಸುವ ಪರಂಪರೆ ‘ಜಾತಿ’ ಎಂಬ ಪದವನ್ನು ಮತ್ತೆ ಮತ್ತೆ ಯಾಕೆ ಬಳಸುತ್ತಿದೆ. ಎಂಬ ಪ್ರಶ್ನೆ. ಇಡೀ ಮಂಟೇಸ್ವಾಮಿ ಕಾವ್ಯದ ತಾತ್ವಿಕತೆಯನ್ನು ಡಿ.ಆರ್.ಎನ್.ರ ಮಾತಿನಲ್ಲಿ ಹೇಳುವುದಾದರೆ “ಜಾತಿ ಒಳಗಡೆ ಇದ್ದು ಜಾತಿಯಿಂದ ಆಚೆಗೆ ಹೋಗುವ ಒಂದು ಆಧ್ಯಾತ್ಮಿಕ ದಂಗೆಯ ಮಾರ್ಗವನ್ನು ಈ ಕೃತಿ ಹೇಳುತ್ತದೆ” ಇಲ್ಲಿ ಒಳಗಡೆ ಇರಬೇಕಾದ ಜಾತಿ ಎಂದರೆ ಭಿನ್ನ ಸಮುದಾಯಗಳ ಸಾಂಸ್ಕೃತಿಕ ಚಹರೆಗಳು ಮತ್ತು ಬದುಕಿನ ಬಹುಮುಖೀ ಸ್ತರದ ಜೀವನಶೈಲಿಗಳಾಗಿದ್ದು, ಆಚೆಗೆ ಹೋಗಬೇಕಾದ ಜಾತಿ ಅಂದರೆ ಈಗಾಗಲೇ ಶ್ರೇಣಿಕೃತಗೊಂಡಿರುವ, ಮೇಲುಕೀಳಿನ ಕಪ್ಪು ಬಿಳುಪು ಚಹರೆಯುಳ್ಳ ಎಲ್ಲಾ ಸಮುದಾಯಗಳಿಗೂ ಏಕಾಕೃತಿಯ ಸಂಸ್ಕೃತಿಯನ್ನು ಹೇರುತ್ತಿರುವ ಜಾತಿ.

ಇಡೀ ಮಂಟೇಸ್ವಾಮಿಯವರ ದಂಗೆಯೇ ಈ ಆಧಾರದ ಮೇಲೆ ನಿಂತಿದ್ದು ಆ ರೀತಿ ವೈದಿಕ ಚಹರೆಗಳನ್ನು ಹೊದ್ದುಕೊಂಡು ಮೇಲು – ಕೀಳಿನ ಸ್ತರಗಳಲ್ಲಿ ಶ್ರೇಣೀಕೃತವಾಗಿ ಬದುಕುತ್ತಿರುವ ಜಾತಿಗಳನ್ನು ಹುಡುಕಿ ಅವರಿಂದ ಸಮಾನತೆಯ ಭಿಕ್ಷೆ ಪಡೆದು ಒಂದು ಬೃಹತ್ತಾದ ಜಾತಿಯಿಲ್ಲದ ಕುಲಕಟ್ಟುವುದೇ ಆ ದಂಗೆಯ ಮುಖ್ಯ ಉದ್ದೇಶವಾಗಿದೆ. ಮಂಟೇಸ್ವಾಮಿ ಇದನ್ನು ಕಲ್ಯಾಣಪಟ್ಟಣದಿಂದಲೇ ಪ್ರಾರಂಭಿಸುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ ಬಸವಣ್ಣನಂತಹ ಸುಧಾರಕರು ಒಂದು ‘ಅನುಭವ ಮಂಟಪ’ ರಚಿಸಿ ಎಲ್ಲಾ ದುಡಿವ ಸಮುದಾಯಗಳನ್ನು ಅಲ್ಲಿ ಒಗ್ಗೊಡಿಸಿ ಜಾತ್ಯತೀತ ಸಮಾಜ ಕಟ್ಟಲು ಯೋಜಿಸಿದ್ದಾಗ ಅದು ಸಾಧ್ಯವಾಗದೇ ಹೋದದ್ದು. ಬಸವಣ್ಣ ಯೋಜಿಸಿದ ಶರಣರೆಂದರೆ ‘ತಾನು ಶರಣನೆಂಬುದನ್ನು ಅರಿತು ಮರೆತ ಶರಣ’. ಇಲ್ಲಿ ‘ಶರಣ’ ಎಂದರೆ ಜ್ಞಾನದ, ಮೇಲುಕೀಳಿಲ್ಲದ, ಸಮಾನತೆಯ ಸಂಕೇತ. ಅದರಿಂದ ಪಡೆದ ಸಮಾನತೆಯನ್ನು ಅದನ್ನು ನಾವು ಪಡೆದುಕೊಂಡಿದ್ದೇವೆ ಎಂಬುದನ್ನೇ ಮರೆತುಅದನ್ನು ಬದುಕಿನ ಸಹಜ ಲಯಗಳಿಗೆ ಒಗ್ಗಿಸಿಬಿಟ್ಟಾಗ ಅದು ನಿಜವಾದ ಶರಣತ್ವ ಆದರೆ ಅಲ್ಲಾದದ್ದು ತಾನು ಶರಣನಾದೆನೆಂದು ಅರಿತು ಆ ಶರಣತ್ವದ ಉದ್ದೇಶವನ್ನು ಮರೆತದ್ದು. ಈ ಕಾರನಕ್ಕೆ ಅಲ್ಲಮರಂಥ ಅರಿತುಮರೆತ ಶರಣರಿಗೆ ರೇಜಿಗೆ ಹುಟ್ಟುತ್ತದೆ. ಅಲ್ಲಮ ಅದಕ್ಕಾಗಿ ಬೇಸರ ಪಡುತ್ತಾನೆ.

ಅಂಗದ ಮೇಲಣ ಲಿಂಗವ ಹಿಂಗಿ
ಸ್ಥಾವರ ಲಿಂಗಕ್ಕೆರಗುವ ಭಂಗಿತರ
ಮುಖವ ನೋಡಲಾಗದು
ಹುಸಿಯನೆ ಪೂಜಿಸಿ ಗಸಣಿಗೊಳಗಾದರು ಗುಹೇಶ್ವರಾ

ಎನ್ನುತ್ತಾನೆ. ಈ ಕಾರಣಕ್ಕೆ ಅಲ್ಲಮನನ್ನು ಮರೆಮಾಡಲಾಗುತ್ತದೆ. ಆನಂತರದಲ್ಲಿ ಇಷ್ಟಲಿಂಗದ ಪ್ರತಿಷ್ಠಾಪನೆಯಾಗಿ “ಇಷ್ಟ ಭಾವವುಳ್ಳಾತನೇ ಭಕ್ತ, ತದ್ವಿರುದ್ದವಾಗಿ ಇರುವವನೇ ಭವೀ” ಎಂಬ ಠರಾವು ಹೊರಡುತ್ತದೆ.

[ಸಂ: ಈಶ್ವರ ಚಂದ್ರ ಅನುಭಾವ ಚಿಂತಾಮಣಿ]

ಇಷ್ಟ ಲಿಂಗ ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ
ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ನೋಡಾ!
ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನು
ಗುಹೇಶ್ವರ, ನಿಮ್ಮ ಶರಣ ಬಲ್ಲ.
[ಸಂ: ಈಶ್ವರ ಚಂದ್ರ, ಅನುಭಾವ ಚಿಂತಾಮಣಿ, ಪು.೨೫೩]

ಎಂಬ ಅಲ್ಲಮನೆದುರು ಇಷ್ಟಲಿಂಗವನ್ನು ಶರಣರ ಆತ್ಯಂತಿಕ ಸತ್ಯವೆಂದರು. “ಗುಹೇಶ್ವರಾ ನೀನು ಕಲ್ಲಾದಡೆ ನಾನೇನಪ್ಪೆನು?” ಎಂದಾಗ ಮೂರ್ತಿಪೂಜೆಯನ್ನು ಸಮರ್ಥಿಸಿಕೊಳ್ಳಲಾಯಿತು. ಮೂರ್ತಿಪೂಜೆಯು ಶಿವಜ್ಞಾನಕ್ಕೆ ಕಾರಣ. ಶಿವಜ್ಞಾನವು ಮುಕ್ತಿಗೆ ಕಾರಣ ಎಂಬ ಆಗಮೋಕ್ತಿಯನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಿ ದೃಢೀಕರಿಸಿಕೊಂಡತಾಗಿದೆ. ಅತಿ ಪುರಾತನವಾದ ಮೂರ್ತಿಪೂಜೆ ವೇದಾಗಮಾದಿಗಳಲ್ಲಿ ಹೊರ ಹೊಮ್ಮಿ ನಂತರ ಜೀವನದಲ್ಲಿ ನಿರ್ದಿಷ್ಟವೆನಿಸಿ ಭಾರತ ಸಂಸ್ಕೃತಿಯ ಜೀವಜೀವಾಳವಾಗಿದೆ” [ಎಂ. ಜಿ. ನಂಜುಂಡಯ್ಯ, ವೀರಶೈವಾಗಮ ಪ್ರಯೋಗರತ್ನಂ, ಪು xxiii]

ಈ ರೀತಿಯ ಮೂರ್ತ ಶರಣತ್ವದೊಳಗೆ ನಿಜ ಶರಣತ್ವದ ತಾತ್ವಿಕತೆ ಹುದುಗಿ ಹೋಯಿತು. ದೈವ, ಕೈಲಾಸವನ್ನು ತಿರಸ್ಕರಿಸಿ ಕಾಯಕನಿಷ್ಠೆಯಿಂದ ದುಡಿದ ಶರಣರು ಕ್ರಮೇಣ ಜಾತಿಗಳ ನಾಯಕರಾದರು. ಜಾತಿ ಸೂಚಕ ಸೂತಕದಲ್ಲಿ ಕಳೆದು ಹೋದರು.

ಇದೆಲ್ಲಾ ಆದ ಎರಡು ಮೂರು ಶತಮಾನಗಳ ನಂತರ ಜನಪದರ ಜೀವನಾಡಿಗಳಲ್ಲಿದ್ದ ಜೀವಕಾರುಣ್ಯದ ಸೆಲೆ ಮಂಟೇಸ್ವಾಮಿಯಂತಹ ದಂಗೆಕೋರರನ್ನು ಸೃಷ್ಟಿಸಿಕೊಂಡಿತು. ಈ ಮಧ್ಯೆ ೧೩ – ೧೪ ನೇ ಶತಮಾನದಲ್ಲಿ ಬಂದ ವೀರಶೈವ ಸಾಹಿತ್ಯವು ಕನ್ನಡ ಸಾಹಿತ್ಯದ ದಿಕ್ಕನ್ನೇ ಬದಲಾಯಿಸಿತಾದರೂ, ಅವು ಜನ ಸಮುದಾಯಗಳ ನಂಬಿಕೆಗಳಲ್ಲಿ ಈಗಾಗಲೇ ಇದ್ದ ಶರಣತ್ವ ಕಲ್ಪನೆಯನ್ನೇನೂ ಕದಲಿಸಲಾಗಲಿಲ್ಲ. ಹರಿಹರ, ರಾಘವಾಂಕನಂತಹ ಮೇರುಕವಿಗಳ ಸಾಹಿತ್ಯಕೃತಿಗಳು ಭಕ್ತಿಯನ್ನು ಮೊದಲಿ ನಂತೆಯೇ ವೈಭವೀಕರಿಸಿದವೇ ಹೊರತು ಅಲ್ಲೆಲ್ಲೋ ಕಳಚಿಹೋಗಿದ್ದ ಕೊಂಡಿಯನ್ನು ಬೆಸೆಯುವ ಪ್ರಯತ್ನ ಮಾಡಲಿಲ್ಲ. ಈ ಕಾರಣಕ್ಕೆ ಜನಪದ ಸಹೃದಯರ ಎದೆಗಳಲ್ಲಿ ಮಂಟೇದರ ಪರಂಜ್ಯೋತಿ ಹೊತ್ತಿಕೊಳ್ಳಲು ಶುರುವಾಯಿತು.

ಮಂಟೇಸ್ವಾಮಿ ತಮ್ಮೊಂದಿಗೆ ಈ ರೀತಿಯ ಸಿದ್ಧ ತಾತ್ವಿಕ ಮಾದರಿಯನ್ನೇನೂ ಹಿಡಿದುಬರದೆ, ಎಲ್ಲಾ ಸಿದ್ಧಪಂಥಗಳಂತೆ ಒಕ್ಕಲಾಗಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದರು, ಅವರ ಕ್ರಿಯೆಯ ಹಿಂದಿದ್ದ ಹೊಸ ತಾತ್ವಿಕತೆಯನ್ನು ನಾವು ಗುರುತಿಸಬಹುದು. ಅವರು ಜಾತಿ ಚಹರೆಗಳಿಲ್ಲದ ಕುಲಕಟ್ಟುವ ಕೆಲಸಕ್ಕೆ ಬಳಸಿಕೊಂಡ ಪವಾಡದಂಥ ಅತಿಮಾನುಷ ಕ್ರಿಯೆಗಳ ಹಿಂದೆ, ಆರ್ಥಿಕ, ಸಾಮಾಜಿಕ, ರಾಜಕೀಯ ಅಂಶಗಳಿದ್ದು, ಅವರ ಏರು ಪೇರು ನ್ಯಾರ ಮಾಡುವ ಕೆಲಸದಲ್ಲಿ ಅವೆಲ್ಲವೂ ಬೆರೆತಿದ್ದವು ಎನ್ನಬಹುದು. ಈ ರೀತಿಯ ಪವಾಡಗಳನ್ನು ಅವರು ಮಾತಿಗೆ ಬಗ್ಗದ ಮೀರಿದೋರನ್ನು ಎದುರಿಸಿ, ಹದರಿಸಿ ತಮ್ಮ ಕಡೆಗೆ ಒಲಿಸಿಕೊಳ್ಳುವ ಕಾಯಕಕ್ಕೇ ಬಳಸಿಕೊಂಡರು. ಅಲ್ಲದೆ ಅಷ್ಟೊತ್ತಿಗೆ ಭಾರತದ ತುಂಬಾ ವ್ಯಾಪಿಸಿದ್ದ ಜಾತಿ ಬೃಹದಾಕಾರವಾಗಿ ಬೆಳೆದಿತ್ತು. ಆಗಲೇ ಸ್ಪೃಶ್ಯ, ಅಸ್ಪೃಶ್ಯ ಕಲ್ಪನೆಗಳು ಹುಟ್ಟಿ, ಒಬ್ಬರಿಗೊಬ್ಬರು ಹೊಡೆದಾಡುವ ಸ್ತಿತಿ ತಲುಪಿತ್ತು. ಅದು ತಾರಕಕ್ಕೇರುತ್ತಿದ್ದ ಸಂದರ್ಭದಲ್ಲಿ ಜಾತಿವ್ಯವಸ್ಥೆ ಉಂಟು ಮಾಡುತ್ತಿದ್ದ ಅತ್ಯಂತ ವಿಕೃತ ಪರಿಣಾಮಗಳ ಕಾಲದಲ್ಲಿ ಮಂಟೇಸ್ವಾಮಿ ಹುಟ್ಟುತ್ತಾರೆ.

ಬಂಜಗೆರೆಯವರು ಹೇಳುವಂತೆ ‘ಮಂಟೇಸ್ವಾಮಿಗಳನ್ನು ಜಾತಿಗಳನ್ನು ಮೀರಿದ ತಾತ್ವಿಕತೆ ಅಂತ ನಾವು ಅಂದಾಗ ಜಾತಿಗಳ ಪ್ರಭಾವ ಒಂದು ಸಮಾಜದಲ್ಲಿ ತುಂಬಾ ಜಾಸ್ತಿ ಇದೆ ಅನ್ನೋ ಚರಿತ್ರೆ ಇಲ್ಲದೆ ನಮಗೆ ಮಂಟೇಸ್ವಾಮಿಯ ರೆಲೆವೆನ್ಸ್ ಅರ್ಥ ಆಗೊಲ್ಲ’ [ ಮಂಟೇಸ್ವಾಮಿ ಕಾವ್ಯ; ಸಾಂಸ್ಕೃತಿಕ ಮುಖಾಮುಖಿ, ಪು. ೧೧೫] ಹಾಗೂ ಈ ಸಮಾಜದಲ್ಲಿ ತೀವ್ರವಾದ ಜಾತಿವ್ಯವಸ್ಥೆ ಎಲ್ಲಿಯವರೆಗು ಇರುತ್ತದೋ ಅಲ್ಲಿಯವರೆಗೂ ಮಂಟೇಸ್ವಾಮಿ ರೆಲೆವೆನ್ಸ್ ಆಗುತ್ತಾರೆ.

ಮಂಟೇಸ್ವಾಮಿಯನ್ನು ಶರಣತ್ವ, ಅಲ್ಲಮ, ಕಾಲದ ಹಂಗಿನಿಂದ ಬಿಡಿಸಿ ನೋಡಿದರೆ ಬಸವಣ್ಣನಿಗಿಂತಲೂ ಆಧುನಿಕವಾದ ಸಮಾನತೆಯ ಮಿಂಚು ಕಾಣುತ್ತದೆ. ಅದನ್ನು ಜಾತಿಯಿಂದ ಶೋಷಿತರಾಗಿ, ವಂಚಿತರಾಗಿ ತುಳಿತಕ್ಕೆ ಒಳಗಾಗಿರುವ ಸಮುದಾಯಗಳು ಬದುಕುತ್ತಿರುವ ಸಂಸ್ಕೃತಿಗಲಲ್ಲಿ ನಿಂತು ನೋಡಿದಾಗ ಯಾವುದು ತುಳಿತಕ್ಕೊಳಗಾಗಿತ್ತೋ, ವಂಚಿತವಾಗಿತ್ತೋ ಅದು ಈಗಾಗಲೇ ಮೇಲೆಂಬ ಅಹಂಕಾರವನ್ನು ಹೊಂದಿ ಸವಲತ್ತು ಪಡೆಯುತ್ತಿರುವ ವ್ಯವಸ್ಥೆಯ ಎದುರು ವಿಜೃಂಭಿಸುವ ಅದನ್ನು ಇಲ್ಲವಾಗಿಸಿ ತನ್ನ ಛಾಪನ್ನು ಮೂಡಿಸುವ ತೀರಾ ಭಾವನಾತ್ಮಕ ಜಗತ್ತಿನಂತೆ ಕಾಣುತ್ತದೆ. ಇದೇ ಸಂದರ್ಭದಲ್ಲಿ ಅದು ಹುಸಿ ವಿಜೃಂಭಣೆಯಾಗಿ ಊಳಿಗ ಮಾನ್ಯತೆಯ ಪ್ರಬಲ ಬಾಹುಗಳ ಕೆಳಗೆ ಮರೆಯಾಗಿ ವಿಸ್ಮೃತಿಗೆ ಸರಿದು ಬಿಡುವ ಸಾಧ್ಯತೆಯೂ ಇದೆ. ಈ ಕಾರಣಕ್ಕೇ ಮೂಲತಃ ಅಸ್ಪೃಶ್ಯ ಸಮುದಾಯದ ಮಂಟೇಸ್ವಾಮಿ ಊಳಿಗಮಾನ್ಯ ಸಮುದಾಯಗಳನ್ನು ಶಿಕ್ಷಿಸಿಯಾದರೂ ತನ್ನ ಒಕ್ಕಲಾಗಿ ಮಾಡಿಕೊಳ್ಳುತ್ತಾನೆ. ಇದಕ್ಕಿರುವ ಆರ್ಥಿಕ ನೆಲೆಯೆಂದರೆ ಈಗಾಗಲೇ ಊಳಿಗಮಾನ್ಯ ಪ್ರಭುಗಳ ಸುಪರ್ದಿನಲ್ಲಿ ಕೇಂದ್ರಿಕರಣಗೊಂಡಿರುವ ಸಂಪತ್ತನ್ನು ತನ್ನ ಪವಾಡಗಳ ಮೂಲಕ ಕರಗಿಸಿ ಭೂಮಿಯ ಮೇಲೆ ವಾಸಿಸುವ ಎಲ್ಲರನ್ನೂ ಸಮಾನವಾಗಿ ಮಾಡಿಬಿಡುವ ವಿಕೇಂದ್ರಿಕೃತ ಕಲ್ಪನೆ ಕಾಣುತ್ತದೆ.

ಮಂಟೇಸ್ವಾಮಿ ಒಕ್ಕಲಿನ ನೀಲಗಾರರು ಈ ಆಶಯದ ತಳಪಾಯವನ್ನಾಗಿ ಜಗತ್ತು ಸೃಷ್ಟಿಯ ಸಂಕಥನವನ್ನು ಸೃಷ್ಟಿಸುತ್ತಾರೆ. ಪ್ರತಿ ತಳಸಮುದಾಯಗಳ ಹಲವು ಸಂಸ್ಕೃತಿ ಮೂಲ ಸಂಕಥನಗಳೊಳಗೆ ಇದೇ ರೀತಿಯ ಜಗತ್ತು ಸೃಷ್ಟಿಯ ಕಲ್ಪನೆ ಇದ್ದು, ಅವೆಲ್ಲವೂ ತಮ್ಮ ಮುಂದಿನ ಕಾಲಗಳಲ್ಲಿ ಉಳಿಯುವ ಬಯಕೆಯೊಂದಿಗೆ ತಮ್ಮ ಸಂಕಥನವನ್ನು ಸೃಷ್ಟಿಸಿಕೊಂಡಿರುತ್ತಾರೆ. ಈ ಸೃಷ್ಟಿ ಸಂಕಥನಗಳು ಎಲ್ಲ ತಳ ಸಮುದಾಯಗಳಲ್ಲಿಯೂ ಇದ್ದು ಈ ಎಲ್ಲಾ ಸಂಕಥನಗಳ ವಿನ್ಯಾಸ ಕ್ರಮ ಒಂದೇ ರೀತಿ ಇರುವುದನ್ನು ಗಮನಿಸಬೇಕು. ನೀಲಗಾರರು ಈ ಸಂಕಥನವನ್ನು ಮಾದಿಗ ಸಮುದಾಯದ ‘ಆದಿಜಾಂಬವ’ ಸಂಕಥನವನ್ನು ಪಡಿಹಚ್ಚಾಗಿ ಬಳಸಿಕೊಂಡಂತೆ ಕಾಣುತ್ತದೆ. ಅಂದರೆ ಈ ತರಹದ ಸಮುದಾಯಗಳು ತಾವು ನಿಂತ ನೆಲೆಯಿಂದಲೇ ಚರಿತ್ರೆಯ ವಿಕಾಸದ ಹಾದಿಯನ್ನು ಕಟ್ಟುವ ಅಥವಾ ಅಂತಹ ಪುರಾಣೀಕೃತ ಸಂಕಥನಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತವೆ. ಮಂಟೇಸ್ವಾಮಿ ಎಲ್ಲರನ್ನೂ ಶಿಕ್ಷಿಸಿ, ಮೀರಿದೋರ ಮಿಂಡನಾಗಿ, ಭೂಲೋಕದ ಗಂಡನಾಗಿ ಒಕ್ಕಲು ಮಾಡಿಕೊಳ್ಲುವುದು ಅವರು ಧರೆಗೆ ದೊಡ್ಡವರು ಎಂಬ ಕಾರಣಕ್ಕೆ ಈ ಧರೆಗೆ ದೊಡ್ಡವರು ಎಂಬ ಸಂಕಥನದಿಂದಾಗಿ, ಅವರೇ ಭೂಮಿಯನ್ನು, ಆಕಾಶವನ್ನೂ, ನೀರನ್ನೂ, ಮಾನವರನ್ನೂ ಸೃಷ್ಟಿಸಿದ್ದರಿಂದ ಅವರ ಪವಾಡಗಳನ್ನು ಯಾವ ಮೇಲುಜಾತಿಗಳೂ ಅನುಮಾನಿಸಲು ಅಳುಕುತ್ತವೆ. ಅವರನ್ನು ಒಬ್ಬ ಕೆಳಜತಿಯ ಸಂತನೆಂದು ನೋಡಲು ಹಿಂಜರಿಯುತ್ತವೆ. ಆದರೆ ಇದು ಮಂಟೇಸ್ವಾಮಿಗಳು ಕೇವಲ ಕಲ್ಪನೆಯಾಗಿರುವ ಸಮಾಜದಲ್ಲಿ ಜಾತಿ ಶ್ರೇಣೀಕರಣವನ್ನು ಹಾಗೇ ಉಳಿಸಿಕೊಂಡು ಅದರ ಆಚರಣಾ ಜಗತ್ತು ಸಂಪ್ರದಾಯವಾಗಿಬಿಡುವ ಅಪಾಯವಿದೆ. ಇದು ಈಗಲೂ ಮಂಟೇಸ್ವಾಮಿ ಒಕ್ಕಲಿನ ಇರುವ ನಿಜಸ್ಥಿತಿ. ಇದರಿಂದ ಈ ಹಿಂದೆ ಇಂಥ ಶ್ರೇಣೀಕರಣವನ್ನು ಸೃಷ್ಟಿಸಿದ ಶಕ್ತಿ ಎಷ್ಟು ಬಲಿಷ್ಟವಾಗಿದ್ದಿರಬೇಕು ಎಂಬುದು ಅರಿವಿಗೆ ಬರುತ್ತದೆ. ಕಿ.ರಂ. ಹೇಳುವಂತೆ “ಈ ಜಾತಿಯ ಕಲ್ಪನೆ ಮೂಲತಃ ನಿರ್ಮಾಣವಾದದ್ದೇ ವರ್ಣಾಶ್ರಮ ಪದ್ಧತಿಯ ಮೂಲಕ. ಕ್ಷತ್ರಿಯ ಮತ್ತು ಬ್ರಾಹ್ಮಣ ಈ ಎರಡು ವಲಯಗಳಿಂದಲೇ ಜಾತಿ ಎಂಬುದು ನಿರ್ಮಾಣವಾಯಿತು. ಜಾತಿಯ ಸ್ವೀಕರಣ ಏರ್ಪಟ್ಟಿದ್ದು ಮನುವಿನಿಂದಲೇ” [ಮಂಟೇಸ್ವಾಮಿ ಕಾವ್ಯ; ಸಾಂಸ್ಕೃತಿಕ ಮುಖಾಮುಖಿ, ಪು.೫೫]

ಹೀಗಾಗಿ ಮನು ರೂಪಿಸಿದ ಅತಿದೊಡ್ಡ ಸಂಕಥನ ಪ್ರಬಲವಾಗಿದ್ದಾಗ ಮಂಟೇಸ್ವಾಮಿಗಳ ತಾತ್ವಿಕತೆ ಕೇವಲ ಕಲ್ಪನೆಯ ಸ್ತರದಲ್ಲೇ ಉಳಿದುಬಿಡುತ್ತದೇನೊ ಎಂಬ ಆತಂಕವಿದೆ.

ಆದರೆ ಮಂಟೇದರ ಪರಂಪರೆಯ ತಾತ್ವಿಕತೆಯನ್ನು ವಿಸ್ತಾರ ಮಾಡಿರವ ಕಾವ್ಯ ಆ ಕೊರತೆಯನ್ನು ನೀಗಿಸಬಲ್ಲದು. ಕಾವ್ಯ ಮಾನವ ಜಗತ್ತಿನ ಆದಿಮ ಅಗತ್ಯ. ಮನುಷ್ಯ ತನ್ನ ತವಕ ತಲ್ಲಣಗಳ ಗಳಿಗೆಗಳಲ್ಲಿ ಕುಣಿತ – ಕಾವ್ಯಗಳಂಥ ಪ್ರಕಾರಗಳನ್ನು ತನ್ನೊಡನೆ ಇರಿಸಿಕೊಂಡು ಬಂದಿರುವುದರಿಂದ ಪ್ರತಿಯೊಬ್ಬರ ಅಗತ್ಯವಾಗಿ ಬೆಳೆದಿದೆ. ಹಾಗು ಅದು ಅವರ ಮನಸ್ಸಿಗೆ ಸಂಬಂಧಿಸಿದ್ದು. ಈ ಕಾರಣಕ್ಕೆ ಮಂಟೇಸ್ವಾಮಿ ಕಾವ್ಯ ಕೇಳುಗರ ಮನಸ್ಸಿನೊಳಗೆ ಹೊತ್ತಿಸುವ ಒಂದು ಜಾತ್ಯತೀತ ಮಿಂಚು ಪರಂಜ್ಯೋತಿಯಾಗಿ ಬೆಳೆಯಬೇಕೆಂಬುದು ಆ ನೀಲಾಗಾರ ಕುಲದ ಆಶಯ. ವಿಶ್ವಾತ್ಮಕ ನೆಲೆಗಟ್ಟಿನ ಈ ಕಾವ್ಯ ಕೆಲವೇ ಪ್ರದೇಶಕ್ಕೆ ಸೀಮಿತವಾಗಿದ್ದು, ಅದು ಇಂಡಿಯಾದಂತ ಸಾಂಸ್ಕೃತಿಕ ಪರಿಸರವನ್ನೆಲ್ಲಾ ಪಸರಿಸಿದರೆ ಮಾತ್ರ ಇಲ್ಲಿನ ಎಲ್ಲಾ ಜಾತಿವಂತ ಮನಸ್ಸುಗಳೊಳಗೆ ಆ ಜಾತ್ಯತೀತ ಆಶಯದ ಜ್ಯೋತಿ ಹೊತ್ತಿಕೊಳ್ಳಬಹುದು. ಇದಕ್ಕೇ ಇಡೀ ಮಂಟೇಸ್ವಾಮಿ ಕಾವ್ಯವೇ ಸಾಕ್ಷಿಭೂತವಾಗಿರುವುದರಿಂದ ಈ ಭಾಗದಲ್ಲಿ ನಾನು ಹೆಚ್ಚು ಉದಾಹರಣೆಗಳನ್ನು ಕಾವ್ಯದಿಂದ ಬಳಸಿಕೊಂಡಿಲ್ಲ.

ಈ ರೀತಿಯ ಆಶಯವನ್ನು ನಾವು ಹಿಂದೆ ಚರ್ಚಿಸಿದ್ದೇವೆ. ಕಾವ್ಯದಲ್ಲಿ ಬರುವ ಅಪ್ಪ ಅವ್ವನ ಮರೆತೋಗುವ ಪ್ರಸಂಗ, ಪರಂಪರೆಯಲ್ಲಿ ಇಂದಿಗೂ ದೀಕ್ಷೆಹೊಂದಿ ಗುಡ್ಡರಾಗುವ ಪ್ರಸಂಗ, ಹಾಗು ಕುಲಸ್ಥಾಪನೆಯ ಕೆಲಸಕ್ಕೆ ಪೂರಕವಾದ ರೂಪಕವಾಗಿ ಬರುವ ಭಿಕ್ಷೆ, ಪವಾಡಗಳು, ಎಲ್ಲವೂ ಈ ಆಶಯಕ್ಕೆ ಮೌಲ್ಯವನ್ನು ತಂದುಕೊಟ್ಟಿವೆ.

ಮಂಟೇಸ್ವಾಮಿ ಕಾವ್ಯ ಅಥವಾ ಪರಂಪರೆಯೊಳಗಿನ ತಾತ್ವಿಕತೆಯ ಬಗ್ಗೆ ಮಾತಾಡುವಾಗ ಉಂಟಾಗುವ ಆತಂಕವೆಂದರೆ ಅಷ್ಟು ದೊಡ್ಡ ಒಂದು ಜನಪದ ತತ್ವದರ್ಶನವನ್ನು ಅಕ್ಷರರೂಪೀ ಜಿಜ್ಞಾಸೆಯೊಳಗೆ ತೀರಾ ಸರಳೀಕರಿಸಿಬಿಡುತ್ತೇವೇನೋ ಎನ್ನುವುದು. ನಾವು ಮೊದಲೇ ಚರ್ಚಿಸಿದಂತೆ ಮಂಟೇದರ ಪರಂಪರೆ ಅಥವಾ ಕಾವ್ಯ ಪೆನ್ನಿಗೆ, ಹಾಳೆಗೆ ದಕ್ಕುವುದಲ್ಲ. ಬದಲಾಗಿ ಅದೊಂದು ಪ್ರಜ್ಞೆಗೆ ಸಂಬಂಧಿಸಿದ, ಇಡೀ ದೇಹ ಮತ್ತು ಮನಸ್ಸುಗಳನ್ನೊಳಗೊಂಡ ಎಚ್ಚರದ ಸ್ಥಿತಿ. ಈ ಸ್ಥಿತಿ ಯಾವಿದೋ ಕಾಣದ ಮಾಯದ ಲೋಕದ ಋಷಿಯೊಬ್ಬ ಉಗ್ರ ತಪಸ್ಸು ಮಾಡಿ ಪಡೆದದ್ದಲ್ಲ. ಅದು ಒಂದು ಬಹುಜನರ ಸಾಂಸ್ಕೃತಿಕ ಇತಿಹಾಸದ ಬದುಕಿನೊಳಗೆ ಮೊಳೆತು ಹೆಮ್ಮರವಾದದ್ದು. ಹೆಚ್. ಎಸ್. ಶಿವಪ್ರಕಾಶರು ಹೇಳುವಂತೆ “ಮಂಟೇಸ್ವಾಮಿ ಒಂದು ದೇಹವಲ್ಲ, ಮಂಟೇಸ್ವಾಮಿ ಎಂದರೆ ಒಂದು ವ್ಯಕ್ತಿಯಲ್ಲ. ಅವನು ಒಂದು ಜೀವಂತ ಪರಂಪರೆ” [ ಹೆಚ್. ಎಸ್. ಶಿವಪ್ರಕಾಶ್ : ಮಂಟೇಸ್ವಾಮಿ ಕಾವ್ಯ; ಸಾಂಸ್ಕೃತಿಕ ಮುಖಾಮುಖಿ, ಪು.೪೦]