ಮಹಾಕಾವ್ಯವೆಂದರೆ ಹೀಗೇ ಇರಬೇಕು ಎಂಬ ಕಟ್ಟುಪಾಡಿನ ಕಾಲವೊಂದಿತ್ತು. ಸದ್ವಂಶಜನಾದ ಒಬ್ಬ ನಾಯಕ, ಉದಾತ್ತ ಗುಣಸ್ವಭಾವದ ರಾಜ, ಸದಾ ಕೆಟ್ಟದ್ದನ್ನೇ ಬಯಸುವ ಪ್ರತಿನಾಯಕರು ಅಷ್ಟಾದಶ ವರ್ಣನೆ ಇತ್ಯಾದಿಗಳೆಲ್ಲ ಒಂದು ಕಾವ್ಯಕ್ಕೆ ಇರಲೇಬೇಕಾದ ಕಡ್ಡಾಯ ಅಂಶಗಳಾಗಿದ್ದವು. ಇದುವರೆಗೆ ಮಹಾಕಾವ್ಯವನ್ನು ಕುರಿತ ಚರ್ಚೆ ನಡೆಯುತ್ತಲೇ ಇದೆ. ಮಹಾಕಾವ್ಯವೆಂದರೆ ಹೀಗಿರಬೇಕು ಎಂಬ ನಿರ್ಧಿಷ್ಟ ಕಲ್ಪನೆಯಲ್ಲಿಯೇ ಯೋಚಿಸಿದ ಇವರೆಲ್ಲ ಕೇವಲ ಶಿಷ್ಟಕಾವ್ಯಗಳನ್ನು ಕುರಿತಾದ ಏಕಮುಖ ಚರ್ಚೆಯನ್ನು ಮಾತ್ರ ಬೆಳೆಸುವ ಮೂಲಕ ಸಾಂಸ್ಕೃತಿಕ ವಲಯದ ಬಹುಮುಖ್ಯ ಭಾಗವಾದ ಮೌಖಿಕ ಮಹಾಕಾವ್ಯಗಳನ್ನು ಮರೆತರು ಎಂದೇ ಹೇಳಬಹುದು. ಅಥವಾ ಈ ಮೌಖಿಕ ಪರಂಪರೆ ಅವರಿಗೆ ಮುಖ್ಯವಾಗಿ ಕಂಡಿಲ್ಲದಿರಲೂಬಹುದು. ಆದರೆ ಪಾಶ್ಚಾತ್ಯ ಮೌಖಿಕ ಮಹಾಕಾವ್ಯಗಳೆನಿಸಿದ ಕಲೇವಾಲಾ, ಗಿಲ್ಗಮಿಷ್‌ ಮತ್ತು ಬೋವುಲ್ಫ್‌ಗಳಂಥ ಕಾವ್ಯಗಳನ್ನು ಅಪ್ಪಟ ಕಾವ್ಯ ಹೌದು ಎಂದು ಪರಿಗಣಿಸಿದ ಪಾಶ್ಚಾತ್ಯ ವಿದ್ವಾಂಸರು ಆ ಸಾಲಿನಲ್ಲಿ ಅವುಗಳನ್ನು ಸ್ಪಷ್ಟವಾಗಿ ದಾಖಲಿಸಿದರು. ಬಹುಶಃ ಇಂಥ ನಿಷ್ಪಕ್ಷಪಾತ ಧೋರಣೆಯಿದ್ದುದರಿಂದಲೇ ಸಿ.ಎಂ. ಬೋವ್ರನಂಥ ಒಬ್ಬ ಪ್ರಮುಖ ವಿದ್ವಾಂಸ ಈ ಮೌಖಿಕ ಮಹಾಕಾವ್ಯ ಮತ್ತು ಶಿಷ್ಟ ಮಹಾಕಾವ್ಯದ ಸ್ವರೂಪದ ಬಗ್ಗೆ ಚರ್ಚಿಸುತ್ತಾ” ಈ ಎರಡು ಬಗೆಯ ಮಹಾಕಾವ್ಯಗಳಲ್ಲಿ ವಾಚಿಕ ಮಹಾಕಾವ್ಯವೇ (Oral Epic) ಶುದ್ಧವಾದ, ಸಹಜಸ್ಕುರ್ತವಾದ, ನೇರವಾದ, ನಿರರ್ಗಳವಾದ ನಾಗರೀಕತೆಯಿಂದ ಕಲುಷಿತವಾಗದ ಕವಿಯವಾಣಿ”

[1] ಎಂದು ಘೋಷಿಸಿದ. ಆದರೆ ನಮ್ಮಲ್ಲಿ ಇಂಥ ಅರಿವು ಮೂಡಲು ತಡವಾದ್ದಾದರೂ ಯಾಕೆ? ಬಹುಶಃ ರಾಮಾಯಣ ಮತ್ತು ಮಹಾಭಾರತಗಳು ಮಾತ್ರ ನಮ್ಮ ದೇಶದ ಮಹಾಕಾವ್ಯಗಳು ಎಂಬ ಸಾರ್ವತ್ರಿಕ ಅಭಿಪ್ರಾಯ ನಮ್ಮದಾಗಿತ್ತು. ಈ ಎರಡು ಮೇರು ಕೃತಿಗಳಷ್ಟೇ ಇಡೀ ಭರತ ಖಂಡದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥ ಶಕ್ತಿಯನ್ನು ಪಡೆದುಕೊಂಡಿವೆ ನಂಬಿಕೆ ನಮ್ಮದಾಗಿತ್ತು. ಭಾರತದಾದ್ಯಂತ ಅನೇಕ ಬುಡಕಟ್ಟುಗಳು ತಮ್ಮದೇ ಆದ ರಾಮಾಯಣ ಮಹಾಭಾರತಗಳನ್ನು ಹಾಡಿಕೊಳ್ಳುತ್ತಿದ್ದರಾದರೂ ಸ್ಥಾಪಿತ ಮೌಲ್ಯಗಳಿಗೆ ಅವು ವಿರುದ್ಧವಾಗಿದ್ದುದರಿಂದಾಗಿ ಅವುಗಳನ್ನು ಮಾನ್ಯಮಾಡಲಿಲ್ಲ. ಮಹಾಕಾವ್ಯವೆಂದರೆ ಅದು ನೂರಾರು ಘಟನೆಗಳ ಮೊತ್ತವಾದ್ದರಿಂದ ಅಕ್ಷರ ಬಲ್ಲವನು ಮಾತ್ರ ಅಂಥದ್ದನ್ನು ರಚಿಸಬಲ್ಲನೆಂಬ ತಿಳುವಳಿಕೆಯೂ ಈ ನಿರ್ಲಕ್ಷ್ಯಕ್ಕೆ ಕಾರಣವಿರಬಹುದು. ಇಡೀ ಭಾರತಕ್ಕೆ ಒಂದು ಸಂಸ್ಕೃತಿ ಇದೆ, ಅದೇ ‘ಭಾರತೀಯ ಸಂಸ್ಕೃತಿ’ ಎಂಬ ಏಕಮುಖೀ ಚಿಂತನೆ ಈ ಅಭಿಪ್ರಾಯಕ್ಕೆ ಕಾರಣವಾಗಿರಬಹುದು. ಆದರೆ, ಈಗ ಒಂದು ದೇಶಕ್ಕೆ ಒಂದೇ ಸಂಸ್ಕೃತಿ ಎಂಬುದಿರುವುದಿಲ್ಲ, ಅದರಲ್ಲೂ ಭಾರತದಂಥ ದೇಶ ಬಹುಮುಖೀ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ಸಂಕೀರ್ಣ ಭೂಪ್ರದೇಶವಾಗಿದ್ದು ಕೆಲವರು ಊಹಿಸುವಂಥ ಒಂದೇ ಸಂಸ್ಕೃತಿ ಇರಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಗಟ್ಟಿಗೊಳ್ಳುತ್ತಿದೆ. ಪ್ರತಿಯೊಂದು ನೆಲದ ವಿವಿಧ ಭಾಷೆಗಳು, ಅಲ್ಲಿನ ಜನ, ಅವರ ಆಚಾರ ವಿಚಾರಗಳು, ರೂಢಿಸಿಕೊಂಡ ಮೌಲ್ಯ, ಅವರ ಲೋಕದೃಷ್ಟಿ ಇತ್ಯಾದಿಗಳನ್ನು ಅವಲೋಕಿಸಿದಾಗ ಸಾವಿರಾರು ಸಂಸ್ಕೃತಿ ವಿಶೇಷಗಳು ಕಣ್ಣ ಮುಂದೆ ತಾಕಲಾಡಿ ನಮ್ಮಲ್ಲಿ ದಿಗ್ಘ್ರಮೆ ಹುಟ್ಟಿಸುತ್ತವೆ. ವಾಸ್ತವವಾಗಿ ಸ್ಥಳೀಯವಾದ, ನೆಲದ ಗುಣ ಪಡೆದ, ಆಯಾ ಜನತೆಯ ಉಸಿರಿನೊಡನೆ ಬೆಳೆದು ಬಂದ ಈ ಸಾಂಸ್ಕೃತಿಕ ವಿಶೇಷಗಳು ಭಾರತೀಯ ಸಂಸ್ಕೃತಿಯ ಜೀವಕೋಶಗಳೇ ಹೊರತು ‘ಭಾರತಕ್ಕೆ ಒಂದೇ ಸಂಸ್ಕೃತಿ’ ಎಂಬುದು ಸುಳ್ಳು ಎಂದೇ ಹೇಳಬೇಕಾಗುತ್ತದೆ.

ಭಾರತದ ಬಹುಮುಖ್ಯ ಕಾವ್ಯಗಳೆಂದು ಪರಿಗಣಿಸಲ್ಪಟ್ಟ ರಾಮಾಯಣ ಮಹಾಭಾರತಗಳು ಒಬ್ಬ ಕರ್ತೃವಿನಿಂದ ರಚಿಸಲ್ಪಟ್ಟ ಕೃತಿಗಳಾದರೂ ಜನ ಸಾಮಾನ್ಯರ ನಡುವೆ ಅವು ವಿಸ್ತಾರಗೊಂಡ ರೀತಿ ವಿಸ್ಮಯ ಹುಟ್ಟಿಸುವಂಥದ್ದೇ. ಮೂಲತಃ ದೇವ ಭಾಷೆ ಎಂದು ಪರಿಗಣಿಸಲ್ಪಟ್ಟ, ಆದರೆ ಜನಸಾಮಾನ್ಯರ ನಡುವೆ ಇಂದು ಇಲ್ಲವಾಗಿರುವ ಭಾಷೆಗಳಲ್ಲಿ ರಚಿಸಲ್ಪಟ್ಟ ಈ ಕಾವ್ಯಗಳನ್ನು ವಿವಿಧ ದೇಶಭಾಷೆಗಳು ಅನುವಾದಿಸಿಕೊಂಡವು ಅಥವಾ ಪುನರ್‌ಸೃಷ್ಟಿ ಮಾಡಿಕೊಂಡವು. ಆಯಾ ನೆಲದ ಗುಣ ಸ್ವಭಾವಗಳನ್ನು ತಮ್ಮ ತಮ್ಮ ಶಕ್ತ್ಯಾನುಸಾರ ಕವಿಗಳು ಈ ಕಾವ್ಯಗಳಲ್ಲಿಯೇ ಪ್ರತಿಬಿಂಬಿಸದರಾದರೂ ತಮ್ಮವರಲ್ಲದ, ಇನ್ನೊಂದು ಭಿನ್ನ ಪ್ರದೇಶದ ವೈದಿಕವೀರರ ಕಥನವನ್ನಾಗಲೀ, ದಶಾವತಾರದ ಹಿನ್ನೆಲೆಯನ್ನಾಗಲೀ, ಆರ್ಯ ಸಂಸ್ಕೃತಿಯ ಗುಣ ವಿಶೇಷಗಳನ್ನಾಗಲೀ ಅಥವಾ ಅವರ ಸ್ಥಾಪಿತ ಮೌಲ್ಯಗಳನ್ನಾಗಲೀ ಬದಲಿಸಲು ಸಾಧ್ಯವಾಗಲಿಲ್ಲ. ‘ಅಖಿಲ ಭಾರತ’ ಪರಂಪರೆಯಲ್ಲಿ ಹರಿದು ಬಂದ ಈ ಎರಡು ಪುರಾಣಗಳು ಆಳುವ ವರ್ಗಗಳ ನಡುವಿನ ದ್ವೇಷ ವೈಷಮ್ಯಗಳನ್ನು, ಪ್ರೀತಿ ಪ್ರೇಮಗಳನ್ನು, ಆ ಮೂಲಕ ಸಾಮ್ರಾಜ್ಯಶಾಹಿ ವಿಸ್ತರಣೆಯನ್ನು ಕೇಂದ್ರವಾಗಿ ಇಟ್ಟುಕೊಂಡವುಗಳು. ಇವುಗಳನ್ನೇ ಮೌಲ್ಯಗಳೆಂದು ಒಪ್ಪಿ ನಮ್ಮ ದೇಶಭಾಷಾ ಕಾವ್ಯಗಳೂ ಪೋಷಿಸಿಕೊಂಡು ಬಂದವು. ಪಂಪನ ಭಾರತದಿಂದ ಹಿಡಿದು ಕುವೆಂಪುರವರ ರಾಮಾಯಣ ದರ್ಶನದವರೆಗೆ ಈ ಮಾತು ನಿಜ ಎಂದೇ ನನ್ನ ನಂಬಿಕೆ.

ಆದರೆ ಇದಕ್ಕೆ ಪ್ರತಿಯಾಗಿ ಸ್ಥಳೀಯ ಸಾಂಸ್ಕೃತಿಕ ವೀರರ ಕಥೆಗಳನ್ನು, ಪವಾಡ ಪುರುಷರು, ಬೈರಾಗಿಗಳು, ಸಾಧಕರ ಮಹಿಮೆಗಳನ್ನು, ಅವರ ಜೀವನ ಪ್ರೀತಿಯ ವಿಶೇಷಗಳೆನಿಸಿದ ಮದ್ಯ, ಮಾಂಸ, ಮೈಥುನ, ಭಂಗಿ ಸೇವನೆಯಂಥ ನಿರಾಕರಿಸಲಾಗದ ವಿಚಾರಗಳನ್ನು, ಸ್ತ್ರೀ ಪ್ರಧಾನವಾದ ದ್ರಾವಿಡ ಮೂಲ ಮೌಲ್ಯಗಳನ್ನು ಹಾಗೂ ಈ ಮೂಲಕ ತಮ್ಮದೇ ನೆಲದ ಗುಣವನ್ನು ಸಹಜವಾಗಿ ಹೊರಸೂಸುವ ದೀರ್ಘ ಕಥಾನಕಗಳು ನಮ್ಮಲ್ಲಿವೆ. ಈ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಇತಿಹಾಸವನ್ನು ನಿರೂಪಿಸಬಲ್ಲಂಥ ಶಕ್ತಿಪಡೆದವುಗಳು. ರಾಜಮಹಾರಾಜರ ಆಳ್ವಿಕೆಯ ವಿಧಾನಗಳೇ ನಮ್ಮ ಭವ್ಯ ಇತಿಹಾಸ ಎಂದು ಸಾರುತ್ತ ಬಂದಿರುವ ನಮ್ಮ ಬಹುಪಾಲು ಇತಿಹಾಸಕಾರರ ಕಣ್ಣು ತೆರೆಸಿ ಜನಸಾಮಾನ್ಯರ ಇತಿಹಾಸಕ್ಕಾಗಿ ಒತ್ತಾಯಿಸಬಲ್ಲ, ಆ ಬಗೆಗಿನ ಅರಿವು ಮೂಡಿಸಬಲ್ಲ ಶಕ್ತಿ ಈ ಕಥನಗಳಿಗಿದೆ. ಪರಂಪರಾಗತವಾದ ಶಿಷ್ಟ ಮನಸ್ಸಿನ ನಂಬಿಕೆಗಳಿಗೆ ತದ್ವಿರುದ್ಧವಾದ ಈ ಕಥನಗಳು ತಮ್ಮದೇ ಮೌಲ್ಯಗಳನ್ನು, ಜೀವನ ದೃಷ್ಟಿಯನ್ನು ಆ ಮೂಲಕ ಒಂದು ನಿರ್ದಿಷ್ಟ ನೆಲದ ಲೋಕ ದೃಷ್ಟಿಯನ್ನು ಹಾಗೂ ಅವರ ವಿವೇಕವನ್ನು ಹೇಳುತ್ತವೆ. ಜನಸಾಮಾನ್ಯರ ನಡುವಿನ ಸರಳ ವ್ಯಕ್ತಿತ್ವದ ಈ ಕಥನಗಳ ನಾಯಕರು ಸಂದರ್ಭ ಬಂದಾಗ ಮಾತ್ರ ತಮ್ಮ ಅಗಾಧತೆಯನ್ನು ಮೆರೆಯಬಲ್ಲವರು. ಸ್ವಾಭಿಮಾನಕ್ಕೆ ಕುಂದು ಬಂದಾಗ ಉಗ್ರವಾಗಿ ಪ್ರತಿಭಟಿಸಿ ನಿಲ್ಲಬಲ್ಲವರು. ಈ ನಾಯಕರಾದರೂ ಎಂಥವರು? ಮಾದಿಗನೆಂದು ಹೇಳಲಾಗುವ ಮಾದಪ್ಪ, ಹೊಲೆಯನೆಂದು ಕರೆಯಲಾಗುವ ಮಂಟೇಸ್ವಾಮಿ, ದನ ಕಾಯುವ ಅನಾಥ ಜುಂಜಪ್ಪ, ಕುರಿ ಕಾಯುವ ಮೈಲಾರಲಿಂಗ, ಕಾಡು ಮತ್ತು ನಾಡಿನ ನಡುವೆ ಸಂಬಂಧ ಸ್ಥಾಪಿಸಿಕೊಳ್ಳಬಲ್ಲ ಇವರು ಪ್ರಕೃತಿಯಲ್ಲಿನ ದುಷ್ಟ ಮೃಗಗಳನ್ನು ಒಲಿಸಿಕೊಂಡು ಅವುಗಳನ್ನು ಸ್ನೇಹದಿಂದ ಕಾಣಬಲ್ಲವರು, ಬೇಟೆಗಾರರಂತೂ ಅಲ್ಲ. ನಾಗರೀಕ ಸಮಾಜದ ಅಥವಾ ಪ್ರಭುತ್ವದ ದಬ್ಬಾಳಿಕೆಯಿಂದ ತಮ್ಮನ್ನು ನಂಬಿದ ಜನವರ್ಗಗಳನ್ನು ರಕ್ಷಿಸಬಲ್ಲವರು, ರಾಜ್ಯ ಆಳುವವರಂತೂ ಅಲ್ಲ. ದುಷ್ಟರು ಅಥವಾ ಹೆಡ್ಡರನ್ನು ಪಳಗಿಸಬಲ್ಲವರು, ಕೊಲ್ಲುವವರಲ್ಲ.

ಮಲೆಮಾದೇಶ್ವರ ಕಾವ್ಯದ ಮಾದಪ್ಪನದು ಸದಾ ಪಯಣದ ಬದುಕು. ಭಿಕ್ಷೆ ಬೇಡುವುದೇ ಅವರ ವೃತ್ತಿ. ಆದರೆ ಅವನಿಗೆ ಒಬ್ಬ ಸಾಮಾನ್ಯ ವ್ಯಕ್ತಿಗಿರಬಹುದಾದ ಆಸೆಗಳಿವೆ. ತನ್ನ ಒಕ್ಕಲುಗಳನ್ನು ಹೆಚ್ಚಿಸಿಕೊಂಡು ಒಂದು ಕಡೆ ನೆಲೆ ನಿಲ್ಲಬೇಕೆಂಬ ತವಕ ಅವನದು. ಈ ಆಸೆಯಿಂದಲೇ ಹಲವು ಜನವರ್ಗಗಳ ಪ್ರಮುಖರನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಹೂಡುತ್ತಾನೆ. ಫಲಿಸದಿದ್ದಾಗ ಮಾಟ ಮಂತ್ರಗಳ ಕಡೆಗೆ ವಾಲುತ್ತಾನೆ. ಅಂತೂ ಹೇಗೋ ಗೆಲ್ಲಬೇಕು. ಅವರನ್ನು ತನ್ನ ಪರಿಧಿಗೆ ಸೇರಿಸಿಕೊಂಡು ಅವರ ಜೀವನ ಹಸನುಗೊಳಿಸಬೇಕು ಎಂಬುದು ಅವನ ಉದ್ದೇಶ. ಮಂಟೇಸ್ವಾಮಿ ಜಗತ್ತನ್ನೇ ಸೃಷ್ಟಿಸಬಲ್ಲ ಭೈರಾಗಿ, ಕಟ್ಟುವ ಲಿಂಗದ ಬದಲಾಗಿ ಆತ್ಮಲಿಂಗದ ಶ್ರೇಷ್ಠತೆಯನ್ನು ಸಾರುವ ಒಬ್ಬ ಜ್ಯೋತಿ ಪುರುಷ. ಎಂಥ ಕಟುಕರನ್ನೂ ಕರಗಿಸಬಲ್ಲ ಆತ್ಮಬಲ ಪಡೆದವನು. ತನಗೆ ತಕ್ಕನಾದ ಶಿಶುಮಗನನ್ನು ಪಡೆದನಂತರ ಪಾತಾಳ ಬಾವಿಯಲ್ಲಿ ಪ್ರಾಣನೀಗುವ ತವಕ ಅವನಿಗೆ, ಜುಂಜಪ್ಪನ ಅನಾಥತೆ, ಆ ಸ್ಥಿತಿಯೇ ಅವನನ್ನು ಸ್ವಾಭಿಮಾನಿಯನ್ನಾಗಿ ಬೆಳೆಸುವ ರೀತಿ ಅನನ್ಯವಾದದ್ದು. ಮೈಲಾರಲಿಂಗ ಕೊಮಾಲೆಯನ್ನು ಪಡೆಯುವ ಬಗೆಯಾಗಲಿ, ಕುರುಬರ ಮಾಳವ್ವನನ್ನು ಅಪಹರಿಸುವುದಾಗಲಿ ಅತ್ಯಂತ ಸಹಜ ಕ್ರಿಯೆಗಳು. ಮೈಲಾರಲಿಂಗ ಕುರುಬರ ಮಾಳವ್ವನನ್ನು ಪಡೆಯಲು ಶ್ರೀರಾಮನಂತೆ ಆಗಸದಲ್ಲಿ ತಿರುಗುವ ಮೀನಿಗೆ ಬಾಣ ಬಿಡುವುದಿಲ್ಲ. ಶಿಷ್ಟ ಮಹಾಕಾವ್ಯಗಳಲ್ಲಿ ಹೀಗೆ ಹೆಣ್ಣುಗಳನ್ನು ಅಪಹರಿಸಿಕೊಂಡು ಹೋಗುವ ಸಂದರ್ಭಗಳಿಲ್ಲ ಎಂದಲ್ಲ. ಮಹಾಭಾರತದಲ್ಲಿ ಈ ಪ್ರಸಂಗಗಳು ಹೇರಳವಾಗಿ ಬರುತ್ತವೆ. ಭೀಷ್ಮ ಅಂಬೆ-ಅಂಬಾಲಿಕೆಯರನ್ನು ಸೆರೆ ಹಿಡಿದು ತರುತ್ತಾನೆ. ಕೃಷ್ಣ ರುಕ್ಮಿಣಿಯನ್ನು ಅಪಹರಿಸುತ್ತಾನೆ. ಅರ್ಜುನ ವೇಷ ಮರೆಸಿ ಸುಭದ್ರೆಯನ್ನು ಲಪಟಾಯಿಸುತ್ತಾನೆ. ಆದರೆ ಇಲ್ಲೆಲ್ಲಾ ಅವರು ಮೈಲಾರಲಿಂಗನಂತೆ ಹೆಣ್ಣಿಗಾಗಿ ಗಂಟು ಬೀಳುವವರಲ್ಲ. ಕೃಷ್ಣ-ಅರ್ಜುನರೆಲ್ಲ ಶ್ರೇಷ್ಠ ನಾಯಕರಾದುದರಿಂದ ಅಪಹರಿಸಲ್ಪಡುವವರು ಈಗಾಗಲೇ ಅಪಹರಿಸುವವರ ಪರವಾಗಿರುತ್ತಾರೆ. ಆದರೆ ಮೈಲಾರನ ಪರಿಸ್ಥಿತಿಯೇ ಬೇರೆ. ಒಬ್ಬ ಕುರಿಕಾಯುವ ಅಮಾಯಕ ತನ್ನ ಆಸೆ ನೆರವೇರಿಸಿಕೊಳ್ಳಲು ಅತ್ಯಂತ ಸಹಜವಾಗಿ ಒಂದು ಹೆಣ್ಣಿಗೆ ಗಂಟು ಬಿದ್ದಿದ್ದಾನೆ. ಉಗಿದರೆ ಉಗಿಸಿಕೊಳ್ಳುತ್ತಾನೆ, ಒದೆದರೆ ಒದೆಸಿಕೊಳ್ಳುತ್ತಾನೆ. ಆದರೂ ಅವಳು ಸಿಗುವವರೆಗೂ ಬಿಡುವವನಲ್ಲ. ಲಿಖಿತ ಮಹಾಕಾವ್ಯಗಳು ಒಪ್ಪಿಕೊಂಡಿರುವ ಅಷ್ಟಾದಶ ವರ್ಣನೆ ಜನಪದ ಕಾವ್ಯದ ಉದ್ದೇಶವಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳುವ ಪರಿಪಾಠ ಇವರದು. ಇದು ಬಾಣನ ‘ಕಾದಂಬರಿ’ ಕಾವ್ಯ ಲೋಕವಲ್ಲ. ಹಾಗೆಯೇ ಕುವೆಂಪು ಅವರ ಲಂಕೆಯ ವರ್ಣನೆಯೂ ಅಲ್ಲ. ಬದಲಾಗಿ ಕಾಡಿನ ಜನರ ಅವಿಭಾಜ್ಯ ಅಂಗವಾದ ಬೇಟೆ, ಆಹಾರ ಸಂಗ್ರಹಣೆ, ಪಶು ಸಂಗೋಪನೆ, ಹುಲಿ, ಚಿರತೆ, ಹಾವು, ಚೇಳುಗಳ ಸಹಜಲೋಕ. ಇಷ್ಟೆಲ್ಲದರ ಹಿನ್ನೆಲೆಯಲ್ಲಿ ಒಂದು ಮಾತು ಹೇಳುವ ಅವಶ್ಯಕತೆ ಇದೆ,. ಇಡೀ ರಾಮಾಯಣ ಒಂದು ಸಾಮ್ರಾಜ್ಯದ ವಿಸ್ತರಣೆಗೆ ಸಂಬಂಧಿಸಿದ್ದು. ರಾಮನ ಪಯಣವೇ ಸಾಮ್ರಾಜ್ಯ ವಿಸ್ತರಣೆಯ ತವಕದಿಂದ ಕೂಡಿದ್ದು. ಮಹಾಭಾರತ ಅಂಥ ಒಂದು ಸಾಮ್ರಾಜ್ಯವನ್ನು ಹಂಚಿಕೊಳ್ಳುವ ತವಕಕ್ಕೆ ಸಂಬಂಧಿಸುತ್ತದೆ. ಒಂದು ಕಡೆ ನೆಲೆಗೊಂಡು ಒಂದು ನಾಗರೀಕತೆಯನ್ನು ಕಟ್ಟಿದ ನಂತರದ ಸ್ಥಿತಿಯನ್ನು ರಾಮಾಯಣ ಮಹಾಭಾರತಗಳು ಹೇಳುತ್ತವೆ. ಆದರೆ ಈ ಮೌಖಿಕ ಮಹಾ ಕಾವ್ಯಗಳಲ್ಲಿನ ಮೂಲತಃ ಅಲೆಮಾರಿಗಳೂ ಭೈರಾಗಿಗಳೂ ಆದ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರರು ಒಂದು ಕಡೆ ನೆಲೆಗೊಳ್ಳುವ ತವಕದಲ್ಲಿ ಇರುವವರು. ಹೀಗಾಗಿ ಈ ಮಹಾಕಾವ್ಯಗಳ ವಸ್ತುವೇ ಒಂದು ಕಡೆ ನೆಲೆಗೊಳ್ಳುವ ಪೂರ್ವದ ಸ್ಥಿತಿಯನ್ನೂ ಮತ್ತು ಆ ಸಂದರ್ಭದ ಘರ್ಷಣೆಗಳನ್ನೂ ಹೇಳುವಂಥದ್ದು. ಇರುವುದನ್ನು ವೈಭವಿಸುವ ಲಿಖಿತ ಮಹಾಕಾವ್ಯಗಳು ಒಪ್ಪಿಕೊಂಡಿರುವ ಅಷ್ಟಾದಶ ವರ್ಣನೆ ಜನಪದ ಕಾವ್ಯದ ಉದ್ದೇಶವಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳುವ ಪರಿಪಾಠ ಇವರದು. ಇದು ಬಾಣನ ‘ಕಾದಂಬರಿ’ ಕಾವ್ಯ ಲೋಕವಲ್ಲ. ಹಾಗೆಯೇ ಕುವೆಂಪು ಅವರ ಲಂಕೆಯ ವರ್ಣನೆಯೂ ಅಲ್ಲ. ಬದಲಾಗಿ ಕಾಡಿನ ಜನರ ಅವಿಭಾಜ್ಯ ಅಂಗವಾದ ಬೇಟೆ, ಆಹಾರ ಸಂಗ್ರಹಣೆ, ಪಶು ಸಂಗೋಪನೆ, ಹುಲಿ, ಚಿರತೆ, ಹಾವು, ಚೇಳುಗಳ ಸಹಜಲೋಕ. ಇಷ್ಟೆಲ್ಲದರ ಹಿನ್ನೆಲೆಯಲ್ಲಿ ಒಂದು ಮಾತು ಹೇಳುವ ಅವಶ್ಯಕತೆ ಇದೆ. ಇಡೀ ರಾಮಾಯಣ ಒಂದು ಸಾಮ್ರಾಜ್ಯದ ವಿಸ್ತರಣೆಗೆ ಸಂಬಂಧಿಸಿದ್ದು. ರಾಮನ ಪಯಣವೇ ಸಾಮ್ರಾಜ್ಯ ವಿಸ್ತರಣೆಯ ತವಕದಿಂದ ಕೂಡಿದ್ದು. ಮಹಾಭಾರತ ಅಂಥ ಒಂದು ಸಾಮ್ರಾಜ್ಯವನ್ನು ಹಂಚಿಕೊಳ್ಳುವ ತವಕಕ್ಕೆ ಸಂಬಂಧಿಸುತ್ತದೆ. ಒಂದು ಕಡೆ ನೆಲೆಗೊಂಡು ಒಂದು ನಾಗರೀಕತೆಯನ್ನು ಕಟ್ಟಿದ ನಂತರದ ಸ್ಥಿತಿಯನ್ನು ರಾಮಾಯಣ ಮಹಾಭಾರತಳು ಹೇಳುತ್ತವೆ. ಆದರೆ ಈ ಮೌಖಿಕ ಮಹಾ ಕಾವ್ಯಗಳಲ್ಲಿನ ಮೂಲತಃ ಅಲೆಮಾರಿಗಳೂ ಭೈರಾಗಿಗಳೂ ಆದ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರರು ಒಂದು ಕಡೆ ನೆಲೆಗೊಳ್ಳುವ ತವಕದಲ್ಲಿ ಇರುವವರು. ಹೀಗಾಗಿ ಈ ಮಹಾಕಾವ್ಯಗಳ ವಸ್ತುವೇ ಒಂದು ಕಡೆ ನೆಲೆಗೊಳ್ಳುವ ಪೂರ್ವದ ಸ್ಥಿತಿಯನ್ನೂ ಮತ್ತು ಆ ಸಂದರ್ಭದ ಘರ್ಷಣೆಗಳನ್ನೂ ಹೇಳುವಂಥದ್ದು. ಇರುವುದನ್ನು ವೈಭವಿಸುವ ಲಿಖಿತ ಮಹಾಕಾವ್ಯಗಳು ಕಾವ್ಯ ಸತ್ಯದ ಕಡೆಗೆ ಹೆಚ್ಚು ಗಮನ ಕೊಟ್ಟರೆ, ಇಲ್ಲದಿರುವುದಕ್ಕೆ ತುಡಿಯುವ ಜನಪದ ಮಹಾಕಾವ್ಯಗಳು ಜೀವನ ಸತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿವೆ ಎನ್ನಿಸುತ್ತದೆ.

* * *

ಕರ್ನಾಟಕದಲ್ಲಿ ನಡೆದ ಹನ್ನೆರಡನೇ ಶತಮಾನದ ಶರಣರ ಚಳುವಳಿ ಕನ್ನಡಿಗರ ಆಲೋಚನೆಯ ದಿಕ್ಕನ್ನೇ ಬದಲಾಯಿಸಿದ ಒಂದು ಮಹತ್ವದ ಘಟ್ಟ. ಜನಸಾಮಾನ್ಯರ ಸ್ವಾಭಿಮಾನಕ್ಕೆ, ಕೆಳವರ್ಗದ ಜನರ ಆತ್ಮ ವಿಶ್ವಾಸಕ್ಕೆ ಹೊಸ ಬೆಳಕನ್ನು ನೀಡಿದ ಆ ಮಹಾ ಸಾಂಸ್ಕೃತಿಕ ಸಂಘರ್ಷ ಜನ ಭಾಷೆಗೆ ಕೂಡ ತನ್ನ ಮಾನ್ಯತೆಯನ್ನು ನೀಡಿತಲ್ಲದೆ ಉತ್ಕೃಷ್ಟ ಕಾವ್ಯ ಸೃಷ್ಟಿಗೂ ಕಾರಣವಾಯಿತು. ವೈಚಾರಿಕ ಚಿಂತನೆಯ ಪರಾಕಾಷ್ಟೆಯನ್ನು ತಲುಪಿದ ಆ ಸಂದರ್ಭ ಲಕ್ಷಾಂತರ ಮನಸ್ಸುಗಳಲ್ಲಿ ತನ್ನ ತಾ ತಿಳಿವ ಜ್ಯೋತಿಯನ್ನು ಹಚ್ಚಿತ್ತು. ಬಸವಣ್ಣನವರ ಮತ್ತು ಅಲ್ಲಮ ಪ್ರಭುಗಳ ಮಾರ್ಗದರ್ಶನ ಆ ಚಳುವಳಿಯನ್ನು ನೈತಿಕವಾಗಿ ಕರೆದೊಯ್ದದಲ್ಲದೆ ಲಕ್ಷಾಂತರ ಜನರು ಅವರಿಂದಾಗಿಯೇ ಆಕರ್ಷಿತರಾಗಿದ್ದರು.

ಹನ್ನೆರಡನೇ ಶತಮಾನದ ಶರಣರ ಚಳುವಳಿ, ಅಲ್ಲಿ ನಡೆದ ವರ್ಣಸಂಕರ, ಆ ಮೂಲಕ ಆಶಿಸಲಾಗಿದ್ದ ಕೆಳಜಾತಿಗಳ ಒಗ್ಗಟ್ಟು ಅನೇಕ ವಿಪ್ಲವಗಳ ಕಾರಣ ವಿಫಲವಾದ ನಂತರ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಕ್ಷುಬ್ಧ ವಾತಾವರಣವೇ ತಲೆದೋರಿಬಿಟ್ಟಿತ್ತು. ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಹರಳಯ್ಯ, ಕಕ್ಕಯ್ಯಾದಿಗಳ ನಂತರದ ಮೇಲ್ವರ್ಗಗಳಗೆ ಸೇರಿದ ಶರಣರ ಗುಂಪು ಕೆಳವರ್ಗಗಳನ್ನು ನಿರ್ಲಕ್ಷಿಸಿದುವೇ ಎಂಬ ಅನುಮಾನವೂ ಇದೆ. ಅಥವಾ ಹನ್ನೆರಡನೇ ಶತಮಾನದ ಕಾಲಕ್ಕೆ ಅತ್ಯಂತ ಪ್ರಗತಿಪರವಾಗಿದ್ದ ಆ ಗುಂಪು ನಂತರ ಕ್ರಮೇಣ ಒಂದು ಜಾತಿಯಾಗಿ ಮಾರ್ಪಟ್ಟು, ಕೆಲವು ಕಟ್ಟುಪಾಡುಗಳನ್ನು ವಿಧಿಸಿಕೊಂಡು, ತನ್ನ ಕಂದಕವನ್ನು ತಾನೇ ತೋಡಿಕೊಳ್ಳತೊಡಗಿದಾಗ ಇದರಿಂದ ಬೇಸತ್ತ ಕೆಳವರ್ಗದ ಕೆಲವು ನಾಯಕರು ಆ ಒಕ್ಕೂಟದಿಂದ ಸಿಡಿದು ನಿಂತರೇ? ಎಂಬ ವಿಚಾರವನ್ನು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಶರಣರ ಜನಪರ ಚಳುವಳಿಯ ಮೂಲಕ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಬೀದಿಗೆ ಬಂದ ಕೆಳವರ್ಗದ ಜನ ನಂತರದ ಅನಿರೀಕ್ಷಿತ ಸೋಲಿನಿಂದಾಗಿ ಹತಾಶರಾಗಿ ತಮ್ಮ ತಮ್ಮ ದಾರಿಗಳನ್ನು ತಾವು ಹಿಡಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಮಾದೇಶ್ವರ ಮತ್ತು ಮಂಟೇಸ್ವಾಮಿಯವರನ್ನು ನಾವು ನೋಡಬೇಕಾಗಿದೆ. ಈ ಇಬ್ಬರು ‘ಉತ್ತರ ದೇಸ’ ದಿಂದ ಬಂದವರು ಎಂಬ ಮಾತು ಈ ಎರಡೂ ಕಾವ್ಯಗಳ ಅನೇಕ ಕಡೆ ಉಲ್ಲೇಖಿತವಾಗುತ್ತದೆ. ಅಲ್ಲದೆ, ಬಸವಣ್ಣನವರ ಜೊತೆಗೂ ಸಂಬಂಧ ಕಲ್ಪಿಸುವ ಕಥಾ ಭಾಗಗಳೂ ಸಿಗುತ್ತವೆ. ಆದರೆ ಮಾದೇಶ್ವರ ಮತ್ತು ಮಂಟೇಸ್ವಾಮಿ ಆ ಚಳುವಳಿಯ ಒಂದು ಭಾಗವಾಗಿದ್ದರು ಎಂಬುದಕ್ಕಾಗಲೀ ಅಥವಾ ಇವರು ಬಸವಣ್ಣ ಅಲ್ಲಮಾದಿಗಳ ಸಮಕಾಲೀನರಾಗಿದ್ದರು ಎಂಬುದಕ್ಕಾಗಲೀ ಯಾವುದೇ ಆಧಾರಗಳೂ ಸಿಕ್ಕುವುದಿಲ್ಲ. ಆದರೆ ಈ ಎರಡೂ ಮಹಾಕಾವ್ಯಗಳ ನಾಯಕರು ಆ ಮಹಾನ್‌ಚಳುವಳಿಯ ನಂತರದ ಘಟ್ಟಗಳಲ್ಲಿ ಇದ್ದವರು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಮಾದೇಶ್ವರ ಮತ್ತು ಮಂಟೇಸ್ವಾಮಿ ಕೆಳವರ್ಗಕ್ಕೆ ಸೇರಿದ್ದವರು ಎಂಬುದರಲ್ಲಿ ಯಾವುದೇ ಅನುಮಾನವೂ ಇರುವಂತಿಲ್ಲ. ಈಗಲೂ ಅಸ್ತಿತ್ವದಲ್ಲಿರುವ ಈ ಪಂಥಗಳ ಗುಡ್ಡರ ಸಂಪ್ರದಾಯಗಳು ಹಾಗೂ ಅವರ ಆಚರಣೆಗಳು ಈ ವಾದಕ್ಕೆ ಪುಷ್ಟಿ ನೀಡುತ್ತವೆ. ಆದರೂ ಇವರುಗಳ ಹುಟ್ಟಿನ ಬಗ್ಗೆ ಅನೇಕ ವಾದ ವಿವಾದಗಳಿವೆ. ಮಾದೇಶ್ವರ ಮತ್ತು ಮಂಟೇಸ್ವಾಮಿ ಹುಟ್ಟಿನಿಂದ ಯಾವುದೇ ಜಾತಿಯವರಾಗಿರಲಿ, ಕೆಳವರ್ಗಗಳ ವೀರಪುರಷರಾಗಿ ಆರಾಧಿಸಲ್ಪಟ್ಟದ್ದು ಮಾತ್ರ ನಿಜ. ಈ ಅರಣ್ಯವಾಸಿ ಬೈರಾಗಿಗಳು ಕೇವಲ ಹೊಟ್ಟೆ ಹೊರೆಯುವ ಸನ್ಯಾಸಿಗಳಾಗಿರಲಿಲ್ಲ. ಪಟ್ಟಭದ್ರ ಸಂಸ್ಕೃತಿಗೆ ವಿರುದ್ಧವಾದ ಕೆಳವರ್ಗಗಳ ಅಸ್ತಿತ್ವವನ್ನು ಪುನ್‌ಸ್ಥಾಪಿಸುವ ಪ್ರತಿಸಂಸ್ಕೃತಿಯೊಂದರ ನಿರ್ಮಾಣ ಇವರ ಉದ್ದೇಶವಾಗಿದ್ದಂತೆ ತೋರುತ್ತದೆ. ಈ ಉದ್ದೇಶದಿಂದಾಗಿಯೇ ಈ ಇಬ್ಬರೂ ಆರಿಸಿಕೊಂಡದ್ದು ಬುಡಕಟ್ಟುಗಳು ಮತ್ತು ಶೂದ್ರಾತಿ ಶೂದ್ರರೇ ಅಧಿಕವಾಗಿದ್ದ ಕರ್ನಾಟಕದ ದಕ್ಷಿಣದ ತುದಿಯನ್ನು. ದಕ್ಷಿಣದ ಹಲವು ಭಾಗಗಳಲ್ಲಿ ಇವರ ಗುರುಪೀಠ ಮತ್ತು ಗದ್ದುಗೆಗಳಿವೆ.

ನಾನು ಇದುವರೆಗೆ ಮಾದೇಶ್ವರ ಮತ್ತು ಮಂಟೇಸ್ವಾಮಿ ಇವರಿಬ್ಬರನ್ನು ಒಟ್ಟೊಟ್ಟಿಗೇ ಇಟ್ಟು ನೋಡುತ್ತಾ ಬಂದೆ. ಆದರೆ ಇವರಿಬ್ಬರೂ ಸಮಕಾಲೀನರೆ? ಇವರಿಬ್ಬರ ಗುರಿ ಒಂದೇ ಆಗಿತ್ತೇ ? ಎಂಬ ಪ್ರಶ್ನೆಗಳೂ ಏಳುತ್ತವೆ. ವಾಸ್ತವವಾಗಿ ಇವರಿಬ್ಬರ ಅಂತರಂಗಗಳು ಒಂದೇ ರೀತಿ ತುಡಿದಿರಬಹುದಾದರೂ ಇವರಿಬ್ಬರೂ ಬೇರೆ ಬೇರೆ ಸಂದರ್ಭದಲ್ಲಿ ಹುಟ್ಟಿಕೊಂಡ ಸಾಂಸ್ಕೃತಿಕ ನಾಯಕರು. ಎರಡೂ ಗುರುಪರಂಪರೆಗಳು ಒಂದಕ್ಕೊಂದು ಪೂರಕವಾಗಿ ಕಂಡರೂ ಆಚರಣೆಗಳಲ್ಲಿ ವ್ಯತ್ಯಾಸಗಳಿವೆ. ಮಾದೇಶ್ವರನ ಗುಡ್ಡರಾದ ಕಂಸಾಳೆ ಗಾಯಕರಿಗೂ ಮಂಟೇಸ್ವಾಮಿ ಗುಡ್ಡರಾದ ನೀಲಗಾರರಿಗೂ ಅನೇಕ ವ್ಯತ್ಯಾಸಗಳಿವೆ. ಒಟ್ಟಾರೆ ಅಂದಿನ ದಟ್ಟಾರಣ್ಯದ ಹಲವು ಬುಡಕಟ್ಟುಗಳ ನಡುವೆ ಆರಂಭವಾದ ಈ ಸಾಂಸ್ಕೃತಿಕ ಮಂಥನ ದೀರ್ಘ ಕಥನಗಳಾಗಿ ರೂಪುಗೊಂಡದ್ದು ಮಾತ್ರ ಕುತೂಹಲಕಾರಿ. ಈ ದೃಷ್ಟಿಯಿಂದ ಈಗ ಮಂಟೇಸ್ವಾಮಿ ಕಾವ್ಯವನ್ನು ನೋಡಬಹುದು.

ಮಂಟೇಸ್ವಾಮಿಯನ್ನು ‘ಧರೆಗೆ ದೊಡ್ಡವರು’ ಎಂದು ಕರೆಯುವುದರಲ್ಲಿಯೇ ಒಂದು ತರ್ಕ ಅಡಗಿದೆ. ಸಾಮಾನ್ಯವಾಗಿ ಇಂಥ ಮಹಾತ್ಮರು ತ್ರಿಮೂರ್ತಿಗಳ ವರದಿಂದಲೋ ಇಲ್ಲ ಅವರ ಶಾಪದಿಂದಲೋ, ಇಲ್ಲವೇ ಅವರ ಬೆವರಿಂದಲೋ ಹುಟ್ಟುವುದು ಸಾಂಪ್ರದಾಯಿಕ ಪುರಾಣಗಳ ವಾಡಿಕೆ. ಆದರೆ ಮಂಟೇಸ್ವಾಮಿ ಹುಟ್ಟಿನ ಪುರಾಣ ಇದೆಲ್ಲವನ್ನೂ ಮೀರಿದ್ದು. ಇವನೇ ಜಗತ್ತಿನ ಸೃಷ್ಟಿಕರ್ತ. ತ್ರಿಮೂರ್ತಿಗಳು, ಭೂಮಿ ತಾಯಿ, ಸೂರ್ಯ ಚಂದ್ರರನ್ನು ಸ್ವತಃ ಪಡೆದು ಇಡೀ ವಿಶ್ವದ ಸೃಷ್ಟಿಗೆ ಕಾರಣನಾಗುತ್ತಾನೆ. ಸಾಮಾಜಿಕವಾಗಿ ಎದುರು ನಿಂತಿರುವ ಒಂದು ಪ್ರತಿಷ್ಠಿತ ಧರ್ಮವನ್ನು ಎದುರು ಹಾಕಿಕೊಳ್ಳಲು ಸಾಧ್ಯವಾಗದಾದಾಗ ತಮ್ಮ ಸಾಂಸ್ಕೃತಿಕ ನಾಯಕನೊಬ್ಬನನ್ನು ಅತಿಮಾನುಷನನ್ನಾಗಿ ಸೃಷ್ಟಿಸಿ ಬಸವಣ್ಣನಿಗಿಂತ, ಶಿವನಿಗಿಂತ ಅಥವಾ ಸೂರ್ಯಚಂದ್ರಿಗಿಂತ ತಮ್ಮವನೇ ದೊಡ್ಡವನೆಂದು ಕರೆದುಕೊಳ್ಳುವ ಸಮಾಧಾನಕರ ಆಶಯ ಇಲ್ಲಿರುವಂತಿದೆ. ಆದ್ದರಿಂದಲೇ ಅವನು ಬ್ರಹ್ಮಾಂಡವನ್ನೇ ಸೃಷ್ಟಿಸಬಲ್ಲ ಮಾಯಕಾರನಗಿ ಅವನ ಭಕ್ತರಿಗೆ ತೋಚುತ್ತಾನೆ.

ಮಂಟೇಸ್ವಾಮಿಗೂ ಶರಣ ಚಳುವಳಿಯ ಅಲ್ಲಮ ಪ್ರಭುವಿಗೂ ಕಾವ್ಯದಲ್ಲಿ ಅವಿನಾಭಾವ ಸಂಬಂಧವಿದೆ. ಅನೇಕ ಬಾರಿ ಅಲ್ಲಮಾಪ್ರಭು, ಜಗಂಜ್ಯೋತಿ, ಪರಂಜ್ಯೋತಿ ಎಂಬಂಥ ಪದಗಳು ಪುನರಾವರ್ತಿತವಾಗಿತ್ತಿರುತ್ತವೆ. ಅಲ್ಲಮ ಅಂದಿನ ಶರಣರ ಗುಂಪಿನಲ್ಲಿದ್ದೂ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದ ನಿಷ್ಠುರವಾದಿ. ಕಟ್ಟಿದ ಲಿಂಗಕ್ಕಿಂತ ಆತ್ಮಲಿಂಗಕ್ಕೆ ಒತ್ತು ಕೊಟ್ಟವನು. ಮಂಟೇಸ್ವಾಮಿಯ ತತ್ವವೂ ಇದೇ. ಅವನು ಜ್ಯೋತಿರ್ಲಿಂಗಯ್ಯ. ಹಾಗೆ ನೋಡಿದರೆ ಶೈವ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಒಂದು ಚರ್ಚೆ ವಾಗ್ವಾದ ಇಲ್ಲಿ ಅಡಗಿದೆ. ಲಿಂಗದ ಕಲ್ಪನೆಯನ್ನು ಪುನ್‌ನಿರ್ವಚನಕ್ಕೆ ಮಂಟೇಸ್ವಾಮಿ ಒಳಪಡಿಸುತ್ತಾನೆ. ಲಿಂಗ ಎನ್ನುವುದು ಕಟ್ಟಿದ ಲಿಂಗವೇ? ಅಥವಾ ತತ್ವವೇ? ಈ ಕಲ್ಪನೆ ಅಲ್ಲಮನ ಮುಂದುವರಿಕೆಯಾಗಿಯೇ ಮಂಟೇಸ್ವಾಮಿ ಕಾವ್ಯದಲ್ಲಿ ವ್ಯಕ್ತವಾಗುವಂತಿದೆ. ಅಲ್ಲಮನ ತತ್ವಗಳು ಮಂಟೇಸ್ವಾಮಿ ಎಂಬ ವ್ಯಕ್ತಿಯ ರೂಪದಲ್ಲಿ ಬಂದಂತೆ ಕೆಲವು ಬಾರಿ ತೋರುತ್ತದೆ.

ಮಂಟೇಸ್ವಾಮಿ ಕಲ್ಯಾಣ ಪಟ್ಟಣವನ್ನು ಪ್ರವೇಶ ಮಾಡುವ ರೀತಿಯೇ ರೋಚಕ. ಅಸಹ್ಯಕರ ವೇಶದ ರೋಗಿಯಾಗಿ ಕಲ್ಯಾಣ ಪ್ರವೇಶ ಮಾಡಿ ಎಲ್ಲರನ್ನು ದಿಗ್ಘ್ರಮೆಗೊಳಿಸುವುದರಿಂದ ಹಿಡಿದು ‘ರಂಡಪುಂಡ ಜಂಗಮ’ರು ಕಟ್ಟಿದ ಲಿಂಗಗಳನ್ನು ಕಲ್ಯಾಣಿಯಲ್ಲಿ ಮಾಯ ಮಾಡುವವರೆಗಿನ ದೃಶ್ಯ ಅನೇಕ ಸಾಂಸ್ಕೃತಿಕ ಚರ್ಚೆಗಳಿವೆ ದಾರಿ ಮಾಡಿಕೊಡುತ್ತದೆ. ಇಲ್ಲಿ ಎರಡು ವಿಚಾರಗಳು ಬಹಳ ಪ್ರಮುಖವಾಗುತ್ತವೆ. ಆತ್ಮದಲ್ಲಿ ಶುದ್ಧಿ ಇಲ್ಲದ ಕೆಲವರು ಕಟ್ಟಿದ ಲಿಂಗದ ಕಲ್ಪನೆಯನ್ನು ಹುಸಿಗೊಳಿಸುವ ಆಶಯ ಒಂದನೆಯದಾದರೆ, ಕಲ್ಯಾಣದಲ್ಲಿ ಉಳಿಯಲು ಯೋಗ್ಯರಾದ ಶರಣರೆಂದರೆ ಕೇವಲ ಕೆಳವರ್ಗದವರು ಮಾತ್ರ ಎಂಬ ಆಶಯ ಎರಡನೆಯದು. ಕಡೆಗೆ ಮಂಟೇಸ್ವಾಮಿಯ ಪರೀಕ್ಷೆಯಲ್ಲಿ ಪಾಸಾಗಿ ಉಳಿಯುವವರೆಂದರೆ ಹೊಲೆಯರ ಹೊನ್ನಪ್ಪ, ಮಾದಿಗರ ಚನ್ನಯ್ಯ, ಮಡಿವಾಳ ಮಾಚಪ್ಪ, ಗಾಣುಗರ ದಾಸಪ್ಪ, ಅಂಬುಗರ ಚೌಡಯ್ಯ, ಈಡಿಗರ ಕ್ಯಾತಪ್ಪ, ಕುರುಬರ ಬೀರಯ್ಯ ಇತ್ಯಾದಿ ಶೂದ್ರಾತಿಶೂದ್ರರು ಮಾತ್ರ. ನಿಜವಾದ ಶಿವಶರಣರೆಂದರೆ ಇವರೇ ಎಂಬುದು ಅವನ ಪ್ರತಿಪಾದನೆ. ಇದು ಒಂದು ರೀತಿಯಲ್ಲಿ ಕಲ್ಯಾಣದ ಶರಣ ಸಂಸ್ಕೃತಿಯ ಜೊತೆಗೆ ಜನಪದರು ನಡೆಸಿದ ಸಂವಾದ. ಇವರ ದೃಷ್ಟಿಯಲ್ಲಿ ಕಲ್ಯಾಣ ಪೂಜನೀಯವಲ್ಲ ಎಂದಲ್ಲ. ಕಲ್ಯಾಣವನ್ನು ಗೌರವಿಸುತ್ತಲೇ ಕೆಳಜಾತಿಯವರ ಸಂಬಂಧಲ್ಲಿ ಅದಿನ್ನೂ ಅಪರಿಪೂರ್ಣವಾಗಿತ್ತು ಎಂಬುದನ್ನು ಪ್ರತಿಪಾದಿಸುತ್ತಿರುವಂತೆ ಕಂಡುಬರುತ್ತದೆ. ಒಟ್ಟಾರೆ ಮಂಟೇಸ್ವಾಮಿ ಕಾವ್ಯದ ‘ಕಲ್ಯಾಣ ಪಟ್ಟಣದ ಸಾಲು’ ಚಳುವಳಿಯ ನಂತರದ ಕಲ್ಯಾಣ ಪಟ್ಟಣದ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿ, ಅಲ್ಲಿನ ಅಜ್ಞಾನಕ್ಕೆ, ತಾರತಮ್ಯಕ್ಕೆ ಬರೆದ ಭಾಷ್ಯವಾಗಿ ಕಾಣಿಸುತ್ತದೆ.

ಮಂಟೇಸ್ವಾಮಿಯ ಪರ್ಯಟನೆಯ ಜೊತೆಗೇ ಸಾಗುವ ಈ ಕಥಾನಕ ಮುಖ್ಯವಾಗಿ ಶಿಶು ಮಕ್ಕಳನ್ನ ಸಂಪಾದಿಸುತ್ತಾ ಹೋಗುತ್ತದೆ. ಶಿಶು ಮಕ್ಕಳನ್ನು ಪಡೆಯುವುದು ಇಲ್ಲಿ ಸಾಂಕೇತಿಕ. ಅವರ ಮೂಲಕ ಒಂದೊಂದು ಜನವರ್ಗವೇ ಮಂಟೇಸ್ವಾಮಿಯ ಧಾರ್ಮಿಕ ಪರಿಧಿಯ ಒಳಕ್ಕೆ ಸೇರಿಬಿಡುತ್ತಾರೆ. ರಾಚಪ್ಪಾಜಿ, ತೋಪಿನ ದೊಡ್ಡಮ್ಮ, ಚನ್ನಾಜಮ್ಮ, ಮಡಿವಾಳ ಮಾಚಯ್ಯ, ಫಲಾರದಯ್ಯ, ಸಿದ್ದಪ್ಪಾಜಿ ಇವರೆಲ್ಲ ಮಂಟೇಸ್ವಾಮಿ ಪಂಥದ ಪ್ರಮುಖ ಅನುಯಾಯಿಗಳು. ಇವರನ್ನು ಶಿಶುಮಕ್ಕಳನ್ನಾಗಿ ಪಡೆಯುವುದೇ ಒಂದೊಂದು ಕಥನವಾಗಿ ರೂಪುಗೊಳ್ಳುತ್ತದೆ. ಮೋಡಿ, ಮಾಟ, ಮಂತ್ರ ಮಾಯಕಾರ ವಿದ್ಯೆಗಳು ಇಲ್ಲಿ ಸರಾಗವಾಗಿ ಬಂದು ಹೋಗುತ್ತವೆ. ಮಂಟೇಸ್ವಾಮಿ ಕಾವ್ಯದ ಬಹಳ ಮುಖ್ಯ ಅಂಶವೆಂದರೆ ಎಲ್ಲಿಯೂ ಅದು ಹಿಂಸೆಯ ರೂಪ ತಾಳುವುದಿಲ್ಲ. ಆದರೆ ಮಂಟೇಸ್ವಾಮಿ ಅಹಂಕಾರಿಗಳನ್ನು ಬಿಡುವವನಲ್ಲ. ಅವರು ಎಷ್ಟೇ ದೊಡ್ಡವರಾದರೂ ಅಂಥವರ ಅಸ್ತಿತ್ವವನ್ನು ಪಲ್ಲಟಗೊಳಿಸಬಲ್ಲ ಶಕ್ತಿ ಅವನಿಗಿದೆ. ಎಂಥದ್ದನ್ನೂ ಅಧೀನ ಮಾಡಿಕೊಳ್ಳಬಲ್ಲ ಚಾತುರ್ಯವಿದೆ. ಇಂಥ ಇಕ್ಕಟ್ಟು ಬಂದಾಗಲೆಲ್ಲ ಮಲೆಮಾದೇಶ್ವರ ಒಬ್ಬ ಸಾಂಸ್ಕೃತಿಕ ನಾಯಕನಾಗಿ ಕಂಡರೆ ಮಂಟೇಸ್ವಾಮಿ ಒಬ್ಬ ಅಧ್ಯಾತ್ಮಿಕ (ಸ್ಪಿರಿಚಯುಲ್‌) ನೇತಾರನಾಗಿ ಕಾಣಿಸಿಕೊಳ್ಳುತ್ತಾನೆ.ಸೌಮ್ಯವಾಗಿಯೇ ಎಲ್ಲವನ್ನೂ ಅಧೀನಕ್ಕೆ ತೆಗೆದುಕೊಳ್ಳುತ್ತಾನೆ. ಯಾವುದಾದರೂ ಸಾಧ್ಯವಾಗದಿದ್ದಾಗ ಅವನು ಮೌನಿಯಾಗುತ್ತಾನೆ; ಕುಂತೂರು ಬೆಟ್ಟ ಹತ್ತುತ್ತಾನೆ, ಅದರ ತುತ್ತ ತುದಿಯಲ್ಲಿ ಕುಂತು ತನ್ನ ಭಂಗಿ ಚಿಲುಮೆ ತೆಗೆಯುತ್ತಾನೆ. ಮಂಟೇಸ್ವಾಮಿಯ ಭಂಗಿಸೇವನೆ ಕೇವಲ ಹೊಗೆ ಬಿಡುವ ಕ್ರಿಯೆ ಅಲ್ಲ. ಸಮಸ್ತ ವ್ಯಾಪಾರಗಳೂ ಅದರಲ್ಲಿ ಅಡಗಿವೆ. ‘ಖಂಡುಗ’ ಗಟ್ಟಲೆ ಭಂಗಿಯನ್ನು ಇಲ್ಲವಾಗಿಸಿ ವಾಲುತ್ತ ಜೋಲುತ್ತ ಇರುವಾಗ ಅವನಿಗೆ ಪರಿಹಾರಗಳು ಹೊಳೆಯುತ್ತವೆ. ಜ್ಞಾನೋದಯವಾಗುತ್ತದೆ. ಆ ಕ್ಷಣದಲ್ಲಿ ತೆಗೆದುಕೊಂಡ ತೀರ್ಮಾನಗಳು ಫಲಿಸುತ್ತವೆ. ಇದು ಕಾವ್ಯದ ದೃಷ್ಟಿಯಲ್ಲಿಯೂ ಮುಖ್ಯ. ಎಲ್ಲೆಲ್ಲಿ ಕಾವ್ಯ ಬಡವಾಗತೊಡಗುತ್ತದೆಯೋ ಏಕತಾನವಾಗತೊಡುತ್ತದೋ ಅಂಥ ಸಂದರ್ಭಗಳಿಂದ ರೋಚಕತೆಗೆ ಎಳೆದೊಯ್ಯುವುದು ಈ ಭಂಗಿಸೇವನೆಯೇ.

ಇಲ್ಲಿಯ ರಾಚಪ್ಪಾಜಿಯ ಸಾಲಿನಲ್ಲಿ ಬರುವ ಮೋಡಿಯ ವಿಚಾರಗಳು, ಫಲಾರದಯ್ಯನ ಸಾಲಿನ ರೋಚಕ ನರಬಲಿ ಮತ್ತು ಬಲಿಯಾಗುವ ಹುಡುಗ ಫಲಾರದಯ್ಯನಾಗಿ ಪರಿವರ್ತಿತವಾಗುವ ಸಾಂಸ್ಕೃತಿಕ ಸಂದರ್ಭ, ದೊಡ್ಡಮ್ಮ ತಾಯಿಗೆ ಹೇಳುವ ಕಾಲಜ್ಞಾನ ವಿಚಾರಗಳು ಇವೆಲ್ಲವೂ ಅಧ್ಯಯನಕ್ಕೆ ಯೋಗ್ಯವಾದ ವಿಚಾರಗಳು. ಆದರೂ ಬಹುಮುಖ್ಯವಾಗಿ ಇಲ್ಲಿ ನಾನು ಪ್ರಸ್ತಾಪಿಸಬೇಕಾಗಿರುವ ವಿಚಾರ ಕೆಂಪಾಚಾರಿ ಮತ್ತು ಸಿದ್ದಪ್ಪಾಜಿಯದು. ಕೆಂಪಾಚಾರಿಯಾಗಿದ್ದವನು ಸಿದ್ದಪ್ಪಾಜಿಯಾಗಿ ಪರಿವರ್ತಿತವಾಗುವ ಅವಧಿ ಕಾವ್ಯದ ದೃಷ್ಟಿಯಿಂದ, ಸಾಂಸ್ಕೃತಿಕವಾದ ಕಾಲಘಟ್ಟಗಳ ದೃಷ್ಟಿಯಿಂದ ಅತ್ಯಂತ ಮುಖ್ಯವಾಗುತ್ತದೆ. ಪಾಂಚಾಳ ಜನವರ್ಗವನ್ನು ತನ್ನ ಪರಿಧಿಗೆ ಸೇರಿಸಿಕೊಳ್ಳುವ ಮೂಲಕ ಕಬ್ಬಿಣ ಉತ್ಪಾದಿಸುವ ವರ್ಗವೊಂದನ್ನು ಒಲಿಸಿಕೊಳ್ಳುವುದು ಮಂಟೇಸ್ವಾಮಿಯ ಅಪೇಕ್ಷೆ ಇದ್ದಂತೆ ಕಾಣುತ್ತದೆ. ಅವನು ಕೇಳುವ ಕಬ್ಬಿಣದ ಭಿಕ್ಷೆ ತೀರಾ ಸಾಂಕೇತಿಕವಾಗಿದೆ. ಕಾಡು ನಾಡಾಗಿ ಪರಿವರ್ತಿತವಾಗುತ್ತಿರುವ, ಆಹಾರ ಸಂಗ್ರಾಹಕರು ಮತ್ತು ಪಶುಸಂಗೋಪಕರು ಕೃಷಿಯ ಕಡೆಗೆ ವಾಲುವ ಮತ್ತು ಈಗಾಗಲೇ ಕೃಷಿಕರಾಗಿದ್ದವರು ತಮ್ಮ ವ್ಯವಸಾಯಕ್ಕೆ ಕಬ್ಬಿಣದ ಉಪಯೋಗ ಮಾಡಿಕೊಳ್ಳುವ ಸಂಕ್ರಮಣ ಕಾಲದಲ್ಲಿ ಕಬ್ಬಿಣಕ್ಕೆ ಇದ್ದ ಬೇಡಿಕೆಯನ್ನು ಹಾಗೂ ಕಬ್ಬಿಣ ಉತ್ಪಾದಿಸುವವರಿಗೆ ಇದ್ದ ಹೆಚ್ಚುಗಾರಿಕೆಯನ್ನು ನಾವು ಗಮನಿಸಬೇಕಾಗುತ್ತದೆ. ಹೀಗಾಗಿಯೇ ಪಾಂಚಾಳರು ದೊರೆಗಳಾಗಿ ಮೆರೆಯುತ್ತಿರುತ್ತಾರೆ. ಇಂಥವರಿಂದ ಕಬ್ಬಿಣದ ಭಿಕ್ಷೆ ಪಡೆಯುವುದೆಂದರೆ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೆಂದೇ ಅರ್ಥ. ಒಂದು ರೀತಿಯಲ್ಲಿ ಇದು ಕಬ್ಬಿಣವನ್ನು ಕಂಡುಹಿಡಿದು ಅದನ್ನು ಉತ್ಪಾದಿಸುವ ಜನವರ್ಗಕ್ಕೂ ಹಾಗೂ ಕಬ್ಬಿಣದ ಅವಶ್ಯಕತೆ ಇರುವ ಜನವರ್ಗಕ್ಕೂ ಇರುವ ವ್ಯವಹಾರದ ಕಥೆ. ಕೆಂಪಾಚಾರಿಯೂ ಉತ್ಪಾದನಾ ವರ್ಗವೊಂದರ ಧೋರಣೆಯಾಗಿಯೇ ಕಂಡು ಬರುತ್ತವೆ. ಆದರೆ ಅಂಥ ಕೆಂಪಾಚಾರಿ ಎಂಬ ಬಿಸಿರಕ್ತದ ಹುಡುಗನನ್ನು ಪಳಗಿಸಿ ತನ್ನಂಥ ಬೈರಾಗಿಯನ್ನಾಗಿ ಮಾಡುವುದು ಸುಲಭವೇ? ಮಂಟೇಸ್ವಾಮಿಯನ್ನು ಹಾಡುವ ಕಲಾವಿದರಿಗೆ ಈ ಕುಲುಮೆ ಕೇವಲ ಕುಲುಮೆಯಲ್ಲ, ಕೆಂಪಾಚಾರಿ ಎಂಬ ಅಹಂಕಾರಿಯೊಬ್ಬ ತನ್ನ ದರ್ಪ ಕಳೆದುಕೊಂಡು ತನ್ನದೆಂಬ ಸರ್ವಸ್ವವನ್ನು ನಿರಾಕರಿಸಬಲ್ಲ ತ್ಯಾಗಮೂರ್ತಿಯನ್ನಾಗಿ ಎರಕಗೊಳಿಸುವ ಕುಲುಮೆ ಅದು. ಹಾಗೆಯೇ ಕೆಂಪಾಚಾರಿ ಎಂಬ ಬಿಸಿರಕ್ತದ ಹುಡುಗನನ್ನು ಪಳಗಿಸಿ ತನ್ನಂಥ ಬೈರಾಗಿಯನ್ನಾಗಿ ಮಾಡುವುದು ಸುಲಭವೆ? ಮಂಟೇಸ್ವಾಮಿಯನ್ನು ಹಾಡುವ ಕಲಾವಿದರಿಗೆ ಈ ಕುಲುಮೆ ಕೇವಲ ಕುಲುಮೆಯಲ್ಲ, ಕೆಂಪಾಚಾರಿ ಎಂಬ ಅಹಂಕಾರಿಯೊಬ್ಬ ತನ್ನ ದರ್ಪ ಕಳೆದುಕೊಂಡು ತನ್ನದೆಂಬ ಸರ್ವಸ್ವವನ್ನು ನಿರಾಕರಿಸಬಲ್ಲ ತ್ಯಾಗಮೂರ್ತಿಯನ್ನಾಗಿ ಎರಕಗೊಳಿಸುವ ಕುಲುಮೆ ಅದು. ಹಾಗೆಯೇ ಕೆಂಪಾಚಾರಿ ಎಂಬ ಪಾಂಚಾಳ ಹುಡುಗ ಹನ್ನೆರಡು ವರ್ಷ ಕಾಳಿಂಗನ ಗುಹೆಯಲ್ಲಿದ್ದು ಸಿದ್ದಪ್ಪಾಜಿಯಾಗಿ ಪರಿವರ್ತಿತನಾಗಿ ಹೊರ ಬರುವ ದೃಶ್ಯ ಒಂದು ರಸಘಳಿಗೆ. ಚಾಮರಸನ ಪ್ರಭುಲಿಂಗ ಲೀಲೆಯ ಅಲ್ಲಮ ಗುಹೆಯಲ್ಲಿ ಜ್ಞಾನೋದಯ ಪಡೆಯುವ ಕ್ರಿಯೆಗೂ, ಇಲ್ಲಿ ಸಿದ್ಧಪ್ಪಾಜಿಯ ಜ್ಞಾನೋದಯ ಕ್ರಿಯೆಗೂ ಸಾಮ್ಯತೆಗಳಿವೆ. ಗುಹಾವಾಸದ ವರ್ಣನೆ, ಅಲ್ಲಿನ ಹಾವು ಚೇಳುಗಳನ್ನೇ ಆಹಾರವನ್ನಾಗಿ ಸೇವಿಸುವ ರೀತಿಗಳು ಅನಾದಿ ಕಾಲದ ಜೀವನವೊಂದರ ಪಳೆಯುಳಿಕೆಗಳಂತೆ ಕಾಣುತ್ತವೆ. ಹಾಗೆಯೇ ಹಲಗೂರು ಪವಾಡದ ಸಂದರ್ಭದಲ್ಲಿ ನಿರ್ಮಿಸಲಾಗುವ ನಾನಾ ಬಗೆಯ ಉಕ್ಕಿನ ವಸ್ತುಗಳು ಅಂದಿನ ಕಬ್ಬಿಣ ತಯಾರಿಕೆಯ ವಿವಿಧ ಹಂತಗಳನ್ನು ಸಾಂಕೇತಿಕವಾಗಿ ಚಿತ್ರಿಸುತ್ತವೆ.

* * *

ಮಂಟೇಸ್ವಾಮಿಯ ಶಿಷ್ಯ ಪರಂಪರೆ ಅಂದಿನಿಂದ ಇಂದಿನವರೆಗೂ ಮುಂದುವರೆದು ಬಂದಿದೆ. ಇವರನ್ನು ನೀಲಗಾರರು ಎಂದು ಕರೆಯಲಾಗುತ್ತದೆ. ನೀಲಗಾರರು ಎಂದರೆ ‘ಲೀಲೆ’ಗಾರರು ಎಂದು ಕೆಲವರು ಅರ್ಥೈಸಿದ್ದಾರೆ. ಆದರೆ ‘ನೀಲ’ ಪದ ಬಹುಶಃ ‘ಮತ್ತು ತರಿಸುವ ಕ್ರಿಯೆ’ಗೆ ಸಂಬಂಧಿಸಿದ್ದಿರಬಹುದು. ಹಾವಿನ ಹೆಡೆಯ ಆಕಾರದ ತಂಬೂರಿ, ತಾಳ, ದಮ್ಮಡಿ, ಗಗ್ಗರ ಇವರ ಸಾಥಿಗಳು. ಮುಖ್ಯಗಾಯಕನ ಸೊಲ್ಲಿಗೆ ಸ್ವರ ಕೊಡುವುದು, ಹೂಗಟ್ಟುವುದು, ಪ್ರತಿಕ್ರಿಯಿಸುವುದು ಹಾಗೂ ಇತರೆ ತಾಳಗಳನ್ನು ಬಳಸುವುದು ಸಹಗಾಯಕರ ಕೆಲಸ. ಮಂಟೇಸ್ವಾಮಿ ಮತ್ತು ಮಲೆಮಾದೇಶ್ವರ ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಒಂದು ವಿಶೇಷ ಗುಣವನ್ನು ಗುರುತಿಸಬಹುದಾಗಿದೆ. ಮಂಟೇಸ್ವಾಮಿಯ ನೀಲಗಾರ ಗಾಯಕನಾಗಿರಲಿ ಇಲ್ಲವೇ ಮಾದೇಶ್ವರನ ಕಂಸಾಳೆ ಗಾಯಕನಾಗಿರಲಿ ಎರಡೂ ಕಥನಗಳನ್ನು ಹಾಡುವುದು ಅವರ ರೂಢಿ. ಮಾದೇಶ್ವರನ ಭಕ್ತರಲ್ಲಿ ಅನೇಕರು ಮಂಟೇಸ್ವಾಮಿ ಕಾವ್ಯವನ್ನು ಸೊಗಸಾಗಿ ಹಾಡುತ್ತಾರೆ. ಮಂಟೇಸ್ವಾಮಿ ಭಕ್ತರು. ಮಾದೇಶ್ವರ ಕಥಾನಕವನ್ನು ಅಷ್ಟೇ ಸೊಗಸಾಗಿ ಹಾಡುತ್ತಾರೆ.

ಈ ಮಂಟೇಸ್ವಾಮಿ ಮಹಾ ಕಾವ್ಯವನ್ನು ಹಾಡಿರುವ ಕಲಾವಿದ ಮೈಸೂರು ಹತ್ತಿರದ ಹಿನಕಲ್ಲಿನ ಮಹದೇವಯ್ಯನವರು ವಾಸ್ತವವಾಗಿ ಮಾದೇಶ್ವರನ ಗುಡ್ಡರು. ಆದರೆ ಅವರಿಗೆ ಒಲಿದಿದ್ದು ತಂಬೂರಿ ಮತ್ತು ಗಗ್ಗರ. ಕಂಸಾಳೆಯನ್ನು ಹೆಚ್ಚಾಗಿ ಬಳಸಲೇ ಇಲ್ಲ. ಯಾವುದೇ ಕಥನವನ್ನಾಗಲೀ ನೀಲಗಾರರ ಶೈಲಿಯಲ್ಲಿ ಸುಶ್ರಾವ್ಯವಾಗಿ ತಾಳ್ಮೆಯಿಂದ ಹಾಡುವ ಇವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಭೂಮಿ ತೂಕದ ಮನುಷ್ಯ. ನನಗಂತೂ ಮಂಟೇಸ್ವಾಮಿಯ ಇನ್ನೊಂದು ರೂಪವಾಗಿ ಕಂಡ ಮಹಾನುಭಾವ ಇವರು. ಕಿತ್ತು ತಿನ್ನುವ ಬಡತನದ ನಡುವೆಯೂ ವಿಚಲಿತರಾಗದೆ ತಾಳ್ಮೆಯಿಂದ ಜೀವನವನ್ನು ಎದುರಿಸುವ ಅನುಭವಿ. ಇವರ ಜೊತೆಗೆ ಹಾಡಿದ ಶಿವಣ್ಣ ಮತ್ತು ನಂಜಯ್ಯನವರು ಕೂಡ ಉತ್ತಮ ಕಲಾವಿದರು. ಹಾಡುವ ಕಾಯಕಕ್ಕೇ ಅಂಟಿಕೊಂಡ ನಿಜ ಭಕ್ತರು. ಈ ಮೂವರು ಕಲಾವಿದರ ಒಂದು ಸಂಕ್ಷಿಪ್ತ ಸಂದರ್ಶನವನ್ನು ಅನುಬಂಧದಲ್ಲಿ ನೀಡಲಾಗಿದ್ದು ಇವರುಗಳ ಜೀವನದ ಮೇಲೆ ಅದು ಸ್ವಲ್ಪ ಮಟ್ಟಿನ ಬೆಳಕು ಚೆಲ್ಲಬಲ್ಲದೆಂದು ನಾನು ನಂಬಿದ್ದೇನೆ. ಮತ್ತೊಂದು ಮಾತು, ಈ ಕಾವ್ಯವನ್ನು ವಾಚಿಸ ಬಯಸುವವರು ತಮ್ಮ ಮನಸ್ಸಿನಲ್ಲಿಯಾದರೂ ಒಂದು ಲಯ ಹಿಡಿದು ಆ ಲಯದಲ್ಲಿಯೇ ಹಾಡಿಕೊಂಡಾಗ ಮಾತ್ರ ಅರ್ಥವಾಗುತ್ತದೆ. ಲಯ ತಪ್ಪಿದರೆ ಕಾವ್ಯದ ಮೂಲ ಸೆಲೆ ಕೈಗೆ ಸಿಗುವುದು ಕಷ್ಟ.

ಮಂಟೇಸ್ವಾಮಿಯ ಕಥೆಯನ್ನು ಈಗಾಗಲೇ ಕೆಲವರು ಕಾವ್ಯ ರೂಪದಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಜಾನಪದದ ಬಹುಮುಖ್ಯ ವ್ಯಕ್ತಿಯಾಗಿ ಅತಿ ಹೆಚ್ಚು ಕ್ಷೇತ್ರಕಾರ್ಯ ನಡೆಸಿದ ದಿ|| ಜೀ. ಶಂ. ಪರಮಶಿವಯ್ಯನವರು ‘ಶ್ರೀ ಮಂಟೇಸ್ವಾಮಿ’ ಕಾವ್ಯ ಎಂಬ ಹೆಸರಿನಲ್ಲಿ ಮಂಟೇಸ್ವಾಮಿಯ ಸಂಕ್ಷಿಪ್ತ ಕಾವ್ಯವೊಂದನ್ನು ಬಹಳ ವರ್ಷಗಳ ಹಿಂದೆ ಸಂಪಾದಿಸಿದ್ದರು. ಆದರೆ ಈಗ ಅದು ಸಮಗ್ರವಾಗಿರಲಿಲ್ಲ. ಇತ್ತೀಚೆಗೆ ನನ್ನ ಸಹೋದ್ಯೋಗಿ ಗೆಳೆಯ ಶ್ರೀವೆಂಕಟೇಶ ಇಂದ್ವಾಡಿ ಅವರು ‘ಧರೆಗೆ ದೊಡ್ಡವರ ಕಥೆ’ ಎಂಬ ಕಥಾನಕವನ್ನು ಸಂಪದಾದಿಸಿದ್ದಾರೆ. ಮಂಟೇಸ್ವಾಮಿ ಕ್ಷೇತ್ರವನ್ನು ಹತ್ತಿರದಿಂದ ಕಂಡಿರುವ ಇವರು ತೀವ್ರಾಸಕ್ತಿಯಿಂದ ಈ ಕೆಲಸವನ್ನು ಮಾಡಿದ್ದಾರೆ. ಆದರೆ ಈ ಕಾವ್ಯ ಕೂಡ ಸಮಗ್ರವಾಗಿಲ್ಲ. ಹಾಗೂ ಹೆಚ್ಚು ಗದ್ಯಾತ್ಮಕವಾಗಿದೆ. ಡಾ|| ಬಸವಲಿಂಗ ಸೊಪ್ಪಿನಮಠ ಅವರು ತಮ್ಮ ‘ಕೊಡೆಕಲ್ಲ ಬಸವಣ್ಣ- ಒಂದು ಅಧ್ಯಯನ’ ಎಂಬ ಸಂಶೋಧನ ಪ್ರಬಂಧದಲ್ಲಿ ಮಂಟೇಸ್ವಾಮಿಯ ಇತಿಹಾಸ ಹೇಳುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಕಾರ ಮಂಟೇಸ್ವಾಮಿ ಕೊಡೇಕಲ್ಲ ಬಸವಣ್ಣನ ಶಿಷ್ಯ. ಇಂಥ ವಿಚಾರಗಳನ್ನು ನಾನು ಚರ್ಚೆಗೆ ಎತ್ತಿಕೊಂಡಿಲ್ಲ. ನನ್ನ ಗಮನ ಕಾವ್ಯದ ಕಡೆಗಿದೆಯಷ್ಟೆ.

ಇನ್ನೂ ಒಬ್ಬಿಬ್ಬರು ಈ ಕ್ಷೇತ್ರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿರಬಹುದು. ಆದರೆ ಪ್ರಸ್ತುತ ಮಂಟೇಸ್ವಾಮಿ ಮಹಾಕಾವ್ಯದ ವಿಶೇಷತೆ ಏನು ಎಂಬುದನ್ನು ನಾನು ಹೇಳಲೇಬೇಕಾಗಿದೆ. ಮೊದಲನೆಯದಾಗಿ, ಇದು ಸಮಗ್ರವಾದ ಕಥೆಯನ್ನೊಳಗೊಂಡು ಸುದೀರ್ಘ ಕಥಾನಕವಾಗಿ ನಮಗೆ ದೊರೆತಿದೆ. ಇಷ್ಟು ಬೃಹತ್‌ ಪ್ರಮಾಣದ ಸಮಗ್ರಕಾವ್ಯ ಇದುವರೆಗೆ ಎಲ್ಲೂ ಪ್ರಕಟವಾಗಿಲ್ಲ. ಅಲ್ಲದೆ ಕಾವ್ಯಗುಣದ ದೃಷ್ಟಿಯಿಂದಲೂ ಇದು ಉಳಿದವುಗಳಿಗಿಂತ ಎತ್ತರದಲ್ಲಿದೆ. ಈ ಕಾವ್ಯದ ಮತ್ತೊಂದು ವಿಶೇಷವೆಂದರೆ ಇಡೀ ಕಾವ್ಯವನ್ನು ಒಬ್ಬನೇ ಮುಖ್ಯಗಾಯಕನಿಂದ ಸಂಗ್ರಹಿಸಲಾಗಿದೆ. ಅನುಭವೀ ಹಾಗೂ ಉತ್ತಮ ಕಲಾವಿದನನ್ನು ಹುಡುಕಿ ಈ ಕಾರ್ಯ ಕೈಗೊಳ್ಳಲಾಗಿದೆ. ಹೀಗಾಗಿ ಎಲ್ಲಿಯೂ ಯಾವುದೇ ಗೊಂದಲಗಳಿಲ್ಲದಂತೆ ಕಥೆ ಸ್ಪಷ್ಟವಾಗಿ ನಿರೂಪಿತವಾಗಿದೆ.

ಕೆಲವು ವಿದ್ವಾಂಸರ ಪ್ರಕಾರ, ಹಲವು ಗಾಯಕರಿಂದ ಹಲವು ಪಠ್ಯಗಳನ್ನು ಸಂಗ್ರಹಿಸಿ ಬೇರೆ ಬೇರೆ ಪಠ್ಯದ ಉತ್ತಮಾಂಶಗಳನ್ನು ಹೆಕ್ಕಿ ಒಂದು ಕಾವ್ಯವನ್ನಾಗಿ ಸಂಪಾದಿಸಿ ಉಳಿಕೆ ಭಾಗಗಳನ್ನು ಅನುಬಂಧದಲ್ಲಿ ನೀಡುವುದು ಅಧ್ಯಯನದ ದೃಷ್ಟಿಯಿಂದ ಉತ್ತಮವಂತೆ. ಆದರೆ ನಿಜವಾಗಿಯೂ ಸಂಬಂಧಪಟ್ಟ ಪರಂಪರೆಯ ಅತ್ಯುತ್ತಮ ಗಾಯಕರನ್ನು ಗುರುತಿಸಿ ಇದೇ ಪಠ್ಯವನ್ನು ಸಮಗ್ರವಾಗಿ ಸಂಪಾದಿಸಿದಾಗ ಅಧ್ಯಯನಕ್ಕೆ ಆಗುವ ಅನುಕೂಲ ನಿಜಕ್ಕೂ ಹೆಚ್ಚು ಎಂದು ನನ್ನ ನಂಬಿಕೆ. ಇಂಥ ಸಮಗ್ರ ಪಠ್ಯಗಳು ನಾಲ್ಕಾರು ಪ್ರಕಟವಾದರೆ ಸಂಶೋಧನೆ ನಡೆಸುವವರು ಅವೆಲ್ಲವನ್ನು ಬಳಸಿಕೊಳ್ಳಬಹುದಲ್ಲವೇ?

ಈ ಮೌಖಿಕ ಮಹಾಕಾವ್ಯಗಳನ್ನು ‘ಜನಪದ ಮಹಾಕಾವ್ಯ’ಗಳು ಎಂತಾಗಲೀ ಇಲ್ಲವೇ ‘ಬುಡಕಟ್ಟು ಮಹಾಕಾವ್ಯ’ಗಳು ಎಂತಾಗಲೀ ಏಕೆ ಕರೆಯುತ್ತೀರಿ. ಹೀಗೆ ಕರೆಯುವುದೇ ಕೀಳರಿಮೆ, ಬದಲಾಗಿ ಕನ್ನಡದ ಮಹಾಕಾವ್ಯಗಳೆಂದೇ ಏಕೆ ಪರಿಗಣಿಸಬಾರದು ಎಂದು ಕೆಲವು ಗೆಳೆಯರು ವಾದಿಸುತ್ತಾರೆ. ಜನಪದ ಕಾವ್ಯಗಳ ಬಗ್ಗೆ ಹಲವರ ತಾತ್ಸಾರ ಇದ್ದ ಸಂದರ್ಭದಲ್ಲಿ ಕೀಳರಿಮೆ ಇದ್ದುದು ನಿಜ. ಆದರೆ ಈಗ ಅಂಥ ಸ್ಥಿತಿ ಇಲ್ಲ. ಆದರೆ ಆಯಾ ಕಾವ್ಯಗಳಿಗೆ ಇರುವ ಅನನ್ಯತೆಯ ದೃಷ್ಟಿಯಿಂದ ಹೀಗೆ ಕರೆದರೆ ತಪ್ಪೇನಾಗುತ್ತದೆ? ಜನಪದ ಕಾವ್ಯವೆಂದರೆ ಅದೊಂದು ಮೌಖಿಕ ಪರಂಪರೆಯಿಂದ ಬಂದುದಾಗಿದ್ದು, ಜನಸಾಮಾನ್ಯರ ಪರವಾದದ್ದು, ಅನ್ನುವ ಕಾರಣಕ್ಕಾದರೂ ನಾವು ಹಾಗೆ ವಿಂಗಡಿಸಿ ಹೇಳಬೇಕೇ ಹೊರತು ಕೀಳರಿಮೆಯ ಕಾರಣಕ್ಕೆ ಖಂಡಿತ ಅಲ್ಲ.

ಇನ್ನೊಂದು ಮುಖ್ಯ ವಿಚಾರ, ಇವುಗಳನ್ನು ‘ಬುಡಕಟ್ಟು ಮಹಾಕಾವ್ಯ’ ಎಮದು ನಾವು ಕರೆದಿರುವುದಕ್ಕೆ ಕುಡ ಕಾರಣಗಳಿವೆ. ಬುಡಕಟ್ಟು ಜನರೇ ಹಾಡಿದ ಕಾವ್ಯ ಬುಡಕಟ್ಟು ಕಾವ್ಯವಾಗುತ್ತದೆ ನಿಜ. ಹಾಗೆಯೇ ಯಾವುದೇ ಕಾವ್ಯದಲ್ಲಿ ಬುಡಕಟ್ಟು ಸಂಸ್ಕೃತಿಯ ಹೇರಳವಾದ ಅಂಶಗಳಿದ್ದಲ್ಲಿ ಅದು ಬುಡಕಟ್ಟು ಕಾವ್ಯ ಆಗುವುದಿಲ್ಲವೇ? ಈ ಹಿನ್ನೆಲೆಯಲ್ಲಿ ಮಲೆಮಾದೇಶ್ವರ ಕಾವ್ಯವಾಗಲೀ, ಮಂಟೇಸ್ವಾಮಿ ಕಾವ್ಯವಾಗಲೀ, ಜುಂಜಪ್ಪನ ಕಾವ್ಯವಾಗಲೀ, ಕುಮಾರ ರಾಮ ಅಥವಾ ಸಿರಿ ಕಾವ್ಯವಾಗಲೀ ಒಂದು ಕಾಲದ ಬುಡಕಟ್ಟು ಸಂಸ್ಕೃತಿಗಳ ನಡುವಿನ ಮೌಲ್ಯಗಳ ಸಂಘರ್ಷದ ಕಥಾನಕಗಳೇ ಆಗಿವೆ. ನಾವು ಸಂಗ್ರಹಿಸುತ್ತಿರುವ ಇತರ ಕಥನಗಳು ಕೂಡ ಇದೇ ತಿಳುವಳಿಕೆಯ ಮೇಲೆ ಸಂಗ್ರಹಿತವಾಗುತ್ತಿವೆ. ಹಾಗೆಂದಾಕ್ಷಣ ಇವು ಕೇವಲ ಬುಡಕಟ್ಟು ಸಂಸ್ಕೃತಿಗೆ ಸಂಬಂಧಿಸಿದವುಗಳು ಎಂದು ಹೇಳಬೇಕಾಗಿಲ್ಲ. ಆಯಾ ಪರಿಸರದ ಇತರೆಲ್ಲ ಅಂಶಗಳೂ ಇಲ್ಲಿ ಬಂದೇ ಬರುತ್ತವೆ. ನಮ್ಮ ವಿಭಾಗದ ಅಧ್ಯಯನದ ದೃಷ್ಟಿಯಿಂದ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಕಾವ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಅಷ್ಟೆ. ದಕ್ಷಿಣಭಾಗದ ಸೋಲಿಗರು, ಕುರುಬರು, ಬೇಡರು, ಉಪ್ಪಾರರು, ಪರಿವಾರದವರು ಮತ್ತು ಆದಿ ಕರ್ನಾಟಕದವರೂ ಆದಿ ದ್ರಾವಿಡರೂ ಆದ ಹೊಲೆಯರು, ಮಾದಿಗರು ಮಲೆಮಾದೇಶ್ವರ ಮತ್ತು ಮಂಟೇಸ್ವಾಮಿ ಕಥನಕ್ಕೆ ಸಂಬಂಧಿಸಿದ ವರ್ಗಗಳಾದರೆ, ಮಧ್ಯ ಕರ್ನಾಟಕದ ಕಾಡು ಗೊಲ್ಲರು ಜುಂಜಪ್ಪನ ಕಾವ್ಯಕ್ಕೆ ಸಂಬಂಧಿಸಿದವರು. ಕುಮಾರರಾಮ ಹಾಗೂ ಕೃಷ್ಣಗೊಲ್ಲನ ಕಾವ್ಯ ಹಾಡಿದವರು ಬಳ್ಳಾರಿ ಜಿಲ್ಲೆಯ ಬುಡಗ ಜಂಗಾಲರು ಅಥವಾ ವೇಶಗಾರರು. ‘ಸಿರಿ’ ಕಾವ್ಯವನ್ನು ಹಾಡಿದಾಕೆ ದಕ್ಷಿಣ ಕನ್ನಡದ ಮೇರರ ಹೆಣ್ಣು ಮಗಳು. ಈ ಐದು ಮಹಾಕಾವ್ಯಗಳಲ್ಲದೆ, ಉತ್ತರ ಕನ್ನಡದ ಗೊಂಡರು, ಹಾಲಕ್ಕಿ ಒಕ್ಕಲಿಗರು, ಕೊಡಗಿನ ಯರವರು ಹಾಗೂ ಅಲೆಮಾರಿಗಳಾದ ಕಿನ್ನರಿ ಜೋಗಿಗಳು ಹಾಗೂ ಮೈಲಾರಲಿಂಗನ ಭಕ್ತರಿಂದಲೂ ಕಥಾನಕಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಮ್ಮ ವಿಭಾಗ ತೊಡಿಗಿದೆ. ಇದೀಗ ಮೊದಲ ಹಂತವಾಗಿ ಐದು ಮಹಾಕಾವ್ಯಗಳು ಬೃಹತ್‌ರೂಪದಲ್ಲಿ ಹೊರಬರುತ್ತಿವೆ. ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರರು ಸ್ವತಃ ಕವಿಗಳು ಹಾಗೂ ಸಹೃದಯರು. ಅವರ ತೀವ್ರಾಸಕ್ತಿಯೇ ನಮಗೆ ಚೈತನ್ಯ ಮತ್ತು ಶಕ್ತಿಯನ್ನು ತುಂಬಿದೆ. ಇಂಥ ಒಂದು ಉತ್ತಮ ಯೋಜನೆ ಕಾರ್ಯಗತಗೊಳ್ಳುವುದು ಅಷ್ಟು ಸುಲಭವಲ್ಲ. ಸಂಗ್ರಹಿಸಿದರೂ ಪ್ರಕಟಿಸುವುದು ಮತ್ತೂ ಕಷ್ಟವಾದ ಕೆಲಸ. ಆದರೆ ಇಂಥ ಮೌಲ್ಯಯುತ ಕೆಲಸಗಳ ಮೂಲಕವೇ ಕನ್ನಡ ವಿಶ್ವವಿದ್ಯಾಲಯಕ್ಕೆ ದೇಶಾದ್ಯಂತ ಖ್ಯಾತಿ ತಂದುಕೊಟ್ಟ ನಮ್ಮ ಮೊದಲ ಕುಲಪತಿ ಚಂದ್ರಶೇಖರ ಕಂಬಾರರ ಸೃಜನಶೀಲ ಗುಣ ಈ ಕಾವ್ಯಗಳ ಪ್ರಕಟಣೆಗೆ ಕಾರಣವಾಯಿತು ಎಂದರೆ ಅದು ಅತಿಶಯೋಕ್ತಿ ಆಗಲಾರದು. ಕಾವ್ಯಾಸಕ್ತರಿಗೆ, ಅಧ್ಯಯನಕಾರರಿಗೆ ಹಾಗೂ ಸಂಸ್ಕೃತಿ ಚಿಂತಕರಿಗೆ ಈ ಕಾವ್ಯ ಒಂದು ಮಹತ್ವದ ಆಕರವಾಗಬಲ್ಲದು ಎಂಬುದು ನಮ್ಮೆಲ್ಲರ ಆಶಯ. ಅಷ್ಟಾದರೆ ಈ ಶ್ರಮ ಸಾರ್ಥಕ.

ಹಿ.ಚಿ. ಬೋರಲಿಂಗಯ್ಯ[1] ನೋಡಿ: ಡಾ. ಜಿ.ಎಸ್‌.ಶಿವರುದ್ರಪ್ಪ : ಮಹಾಕಾವ್ಯ ಸ್ವರೂಪ