ಗಜಮುಖಿ ಗರ್ಭಾಧಿಪನೆ ನಿನಗೆ ಶರಣೋ
ಜೊತೆಗೆ ಬಾಪುರೀs
ಮತಿಗೆ ಮಂಗಳಂ
ಅತಿರುದ್ರ ಗಣನಾಯಕ
ವಂದಿಪೆ ಶರಣು ದೇವಾss
ದೇವಾss
ನಿನಗೆ ಎತ್ತುಬಾರದ ಹೊಟ್ಟೆ
ಸುತ್ತ ಸರ್ಪನ ಕಟ್ಟುs
ಪಟ್ಟದ ಪರ್ವತಿಯ ಮಗನೆ
ವೀರುಭದ್ರ ವಿನಿನಾಯಕ
ಜೋಲುಸುವ ಕರ್ಣಕ್ಕೆ
ಕಾಲಾರು ಕಂಗಳಾರು ದೇವಾss
ಲಾಲಿಸಿ ಪೇಳ್ದವರಿಗೆ
ಮುಕ್ತಿ ಫಲವುಂಟು ಗಣನಾಯ್ಕಾss
ಶರಣುss
ನಿನಗೆ ಕೈ ಎರಡು ಕಾಲೆರಡು
ಕೋಟಿ ಮಾರ್ಬಲದಂಡು
ಪಾತಾಳ ಲೋಕಕಿಳಿಯಲು
ಮೀರಿದಾ ದಂಡು
ಕೈಲಾಸದಲಿರುವ ಲಾದವಿಲ್ಲದ ಗಂಟೆ
ಲಾದ ಶಬ್ದವ ಕೇಳಿ
ನರಲೋಕದಲಿ ನರಮಾನವರು ಪಂಚೈದು
ಜಗುಲಿಯನು ಏರಿ
ಪಂಚೈದು ಲಿಂಗವನು ಪೂಜೆ ಮಾಡಿ
ಶಿವನತ್ರ ಮೋಕ್ಷ ಪಡೆದವರು ಯಾರು ಶಂಕರಾss
ಶಂಕರಾss
ಒಂಬತ್ತು ಬಾಗಿಲೊಳು ಬಂದಂತ
ಸೊಂಡಿಲ ಭೀಮಯ್ಯ
ಅಲಕದೆ ಗಿಲಕದೆ ಗೆಲಿಸದೆ ಉಂಟೆ ಗಣನಾಯ್ಕಾss
ದೇವಾss

ನಮ್ಮಯ ಗಣೆನಾಯಾಕಾss
ಗೌರಿಕುಮಾರ ನಮ್ಮೆಯ ಗಣೆನಾಯಕಾss || ನಮ್ಮಯ||

ಎತ್ತು ಬಾರದ ಹೊಟ್ಟೆ
ಸುತ್ತ ಸರಪನ ಕಟ್ಟು
ಪಟ್ಟದ ಪಾರ್ವತಿಯ ಮಗನೆ
ವೀರುಭದ್ರ ವಿನಿನಾಯಕ || ನಮ್ಮಯ||

ಹಾಲು ಅನ್ನ ಜೇನು ಸಕ್ಕರೆ ಎಳ್ಳುಂಡೆ ಜೇನುತುಪ್ಪ
ಕಡುಬು ಕಜ್ಜಾಯಗಳು ಎಡೆಯಾದೂ ಗಣಪತಿಗೆ || ನಮ್ಮಯ||

ಆದಿ ಬ್ರಹ್ಮನ ರಾಣಿ
ವೇದದಲ್ಲಿ ಕರಚಲುವೆ
ಓ ದೇವಿ ತಾಯಿ ನಮಗೆ
ಜಪಸರ ಮಂತ್ರ ಮಾಯಾ || ನಮ್ಮಯ||

ವಿದ್ಯ ಗುರುವಿಗೆ ಶರಣು
ಬುದ್ದಿ ಗುರುವಿಗೆ ಶರಣು
ವಿದ್ಯೆ ಕಲಿಸಿದ ನಮ್ಮ
ಗುರುಗಳ ಪಾದಕ್ಕೆ ಶರಣು || ನಮ್ಮಯ||

ಏಳೂ ಹೊತ್ತಲಿ ಎದ್ದು
ಯಾರ್ಯಾರ ನೆನದೇವು
ಎಳ್ಳು ರಾಜಣ ತಾಯಿ
ಬೆಳೆವಂತ ಭೂಮಿತಾಯಿ || ನಮ್ಮಯ||

ಬಲಿದ ಮಗ್ಗುಲಲಿ ಎದ್ದು
ಮತ್ಯಾರ ನೆನದೇವು
ಎಡದ ಮಗ್ಗಲಲಿರುವ
ನಮ್ಮ ಬಲಗೋಲು ಬಸವಣ್ಣ || ನಮ್ಮಯ||

ಅಲ್ಲಿಗೆ ಹರಹರಾ
ಇಲ್ಲಿಗೆ ಶಿವಾ ಶಿವಾ
ಮಲ್ಲಿಕಾರ್ಜುನ ದೇವಾ
ನಿಮ್ಮ ಮಠದಲ್ಲಿ ಶಿವತಾಳ ಬಹುತಾಳ || ನಮ್ಮಯ||

ಕಲ್ಯಾಣಕೆ ಶರಣಯ್ಯ
ಕೈಲಾಸಕೆ ಶರಣಯ್ಯ
ಕಲ್ಯಾಣ ಕಟ್ಟಾಳುವಂತ
ಕತೃ ಬಸವಣ್ಣಗೆ ಶರಣು || ನಮ್ಮಯ||

ಆದಿ ಗುರುವಿಗೆ ಶರಣು
ಅಲಾದಿ ಗುರುವಿಗೆ ಶರಣು
ವಿದ್ಯಾ ಹೇಳಿದ ನಮ್ಮ
ಗುರುಪಾದಕೆ ಶರಣು || ನಮ್ಮಯ||

ಆರೆಲೆ ಮಾವಿನವಳೆ
ತಾಳಿನಲ್ಲಾಡವಳೆ
ತಾಳ ತಂಬೂರಿ ಗತಿಗೆ
ನಲಿಯವಳೆ ಸರಸ್ವತಿಯೆ || ನಮ್ಮಯ||

ತಾಳ ತಂಬೂರಿ ಗತಿಗೆ
ನಲಿಯವಳೆ ಸರಸ್ವತಿಯೆ
ತಾಳಿಂದ ಹೇಳಿಕೊಡಮ್ಮ
ಮಕ್ಕಳಿಗೆ ವಚನಗಳ || ನಮ್ಮಯ||

ಎಂಟೆಲೆ ಮಾವಿನವಳೆ
ದಂಟಿನಲ್ಲಾಡವಳೇ
ಗಂಟೇಯ ಸ್ವರಕೆ ತಾಯಿ
ನಲಿಯುವಳೆ ಸರಸ್ವತಿಯೆ || ನಮ್ಮಯ||

ಗಂಟೇಯ ಸ್ವರಕೆ
ತಾಯಿ ನಲಿಯವಳೆ ಸರಸ್ವತಿಯೆ
ಗಂಟಲ ತೊಡಕ ತಾಯಿ
ತಾನಾಗಿ ಬಿಡುಸಮ್ಮ || ನಮ್ಮಯ||

ಒಂಬತ್ತು ಎಲೆಯವಳೆ
ತುಂಬಿದಾ ತಲಿಯವಳೆ
ತುಂಬಿ ತುಳುಕುತಾ
ಬಾಮ್ಮ ಮಕ್ಕಳ ಹೃದಯಕೆ || ನಮ್ಮಯ||

ಹತ್ತೆಲೆ ಮಾವಿನವಳೆ
ಕೆತ್ತಿದುಂಗುರದವಳೆ
ರತ್ನದ ಹಲಗೆಯ ತಾಯಿ
ಬಲಗೈಲಿ ಹಿಡಕೊಂಡು || ನಮ್ಮಯ||

ರತ್ನದ ಹಲಗೆಯ ತಾಯಿ
ಬಲಗೈಲಿ ಹಿಡಕೊಂಡು
ಬರದೋದು ತಾಯಿ ನಮಗೆ
ಶಿವನುಡಿ ಶಿವ ವಚನ || ನಮ್ಮಯ||