ಗುರುವೇ ಇಕ್ಕಿರುವ ಮಾಂಸನೆಲ್ಲವೂ ಗುರುವು
ಹಿಸುಕಿ ಹಿಸುಕಿ ಗುರುವೂ ನೋಡವ್ರೆ ನನ್ನಪ್ಪ
ಏನಪ್ಪ ಕಂದ ಏನು ನನ್ನ ಮಗನೇ ಮಾಡಿವಾಳು ಮಾಚಪ್ಪ
ಮಗನೇ ಎಲ್ಲಾ ಮಾಂಸನೂವೆ ನಾನು ಹಿಸುಕಿ ಹಿಸುಕಿ ನೋಡಿವ್ನಿ
ಎಲ್ಲಾ ಮಾಂಸನೂವೆ ನಾ ಕಣ್ಣಿಂದ ನೋಡಿವ್ನಿ
ನೀನು ಇಕ್ಕಿರುವ ಮಾಂಸದಲ್ಲಿ
ಒಂದೂವೆ ರುಚಿಯಿಲ್ಲ || ಸಿದ್ಧಯ್ಯ ||

ಮಾಚಪ್ಪ
ನೀನು ಪಡಿಸಿರ್ತಕ್ಕಂಥ ಮಾಂಸಸಾರುಗಳು ಎಲ್ಲಾನು ನೋಡುದ್ನಲ್ಲಪ್ಪ
ಮಾಚಯ್ಯ ನೀನು ಪಡಿಸ್ತಿರ್ತಕ್ಕಂಥ ಮಾಂಸದ ಸಾರಿನಲ್ಲಿ
ರುಚಿಯಾದ ಮಾಂಸ ಇಲ್ಲಿ ಒಂದೂ ಇಲ್ಲ
ನೀನು ಪಡಿಸಿರ್ತಕ್ಕಂಥ ಮಾಂಸ ಸಾರುಗಳು ಎಲ್ಲಾನು ನೋಡುದ್ನಲ್ಲಪ್ಪ
ಮಾಚಯ್ಯ ನೀನು ಪಡಿಸಿರ್ತಕ್ಕಂಥ ಮಾಂಸದ ಸಾರಿನಲ್ಲಿ
ರುಚಿಯಾದ ಮಾಂಸ ಇಲ್ಲಿ ಒಂದೂ ಇಲ್ಲ ಕಂದ ಎಂದರು
ಗುರುದೇವ ಬಾಳ ರುಚಿಯಾಗದೆ ಬುದ್ಧಿ
ಬಾಳ ರುಚಿಯಾಗದೆ ನನ್ನಪ್ಪ
ಊಟ ಮಾಡಿ ಭಿನ್ನ ಅಳೀರಿ ಗುರುದೇವ ಎಂದರು
ಮಾಚಯ್ಯ ಪುನಃ ರುಚಿಯಾಗದೆ ಊಟ ಮಾಡು ಅಂಥ ಕೇಳ್ತೀಯಲ್ಲ

ಇಲ್ಲಿ ಕಾಲಿನ ಸೇರ್ವ ಇಲ್ಲ
ಲೋ ಕೈನ ಮಾಂಸ ಇಲ್ಲ
ಕಂದಾ ತಲೇ ಮಾಂಸ ಇಲ್ಲ
ತಲೆ ಮಿದಿಲಡ ಕಂದಾ
ಮೊದಲಿಲ್ಲ ಮಾಚಪ್ಪ
ಕಂದಾ ನಾಲಿಗೆ ಸ್ವರ ಇಲ್ಲ
ಮಗನೆ ಕಣ್ಣಿನ ಗುರುಳೆ ಇಲ್ಲ
ಕೇಳಪ್ಪ ನನ್ನ ಮಗನೆ
ಕಂದಾ ಇಷ್ಟೊಂದು ಮಾಂಸದಲ್ಲಿ
ಒಂದೂ ಇಲ್ಲ ಎಂದರಂತೆ || ಸಿದ್ಧಯ್ಯ ||

ಏನು ಮಗನೆ ಮಡಿವಾಳು ಮಾಚಯ್ಯ
ನೀನು ಇಕ್ಕಿರುವಂಥ ಮಾಂಸದಲ್ಲಿ ಕಂದ
ಕಾಲಿನ ಮಾಂಸವೇ ಇಲ್ಲ
ಕೈಯ್ಯಿನ ಮಾಂಸ ಕೂಡ ಇಲ್ಲ
ತಲೆ ಮಾಂಸವೇ ಮೊದಲಿಲ್ಲ
ತಲೆ ಮಿದಿಲೆ ಕೂಡ ಇಲ್ಲ ನಾಲಿಗೆ ಸ್ವರ ಕೂಡ ಇಲ್ಲ ಮಾಚಪ್ಪ
ಕಣ್ಣಿನ ಗುಳ್ಳೆ ಕೂಡ ಇಲ್ವಲ್ಲ ಕಂದ
ಮಾಚಯ್ಯ ಹೇಳ್ತೀನಿ ಕೇಳು

ಕಂದಾ ಕಾಲಿನ ಶೇರ್ವ ಕುಡಿದರೆ
ಕಾಲಿಗೆ ಶಕುತಿ ಮಗನೇ
ಕಂದಾ ಕೈಯ್ಯಿನ ಶೇರ್ವ ಕುಡಿದರೆ
ಕೈಯಿಗೆ ಶಕುತಿ ಕಂದಾ
ಲೋ ತಲೆ ಮಾಂಸ ತಿಂದರೆ
ತಲೆಗೆ ಶಗುತಿ ಕಂದಾ
ತಲೆ ಮಿದಿಲೆ ತಿಂದರೆ
ಮಿದಿಲೆಗೆ ಶಕ್ತಿ ಕಂದಾ
ಲೋ ನಾಲಿಗೆ ಸ್ವರ ತಿಂದರೆ
ಮಾತಾಡುವುದಕ್ಕೆ ನನಗೆ ನಾಲಿಗೆ ಓಡ್ತದೆ
ಮಗನೆ ಕಣ್ಣು ಗುಳ್ಳೆ ತಿಂದರೆ
ನನಗೆ ಕಣ್ಣು ದೃಷ್ಟಿ ಬರುತದೆ
ಮಗನೇ ಇಷ್ಟೊಂದು ಮಾಂಸದಲ್ಲಿ
ಒಂದೂ ಇಲ್ಲ ಎಂದರಲ್ಲ || ಸಿದ್ಧಯ್ಯ ||

ಇಷ್ಟೊಂದು ಮಾಂಸದಲ್ಲಿ ಮಡುವಾಳು ಮಾಚಯ್ಯ
ಒಂದೂ ಇಲ್ವಲ್ಲ ನನ್ನ ಕಂದ ಮಾಚಪ್ಪ ಎಂದರು
ಧರೆಗೆ ದೊಡ್ಡವರ ಮಾತನ್ನು ಕೇಳ್ಕೊಂಡು ಮಡುವಾಳು ಮಾಚಪ್ಪ
ಗುರುದೇವಾಸ
ಎಲ್ಲಾನು ಒಂದಿಗೆ ಅಡಿಗೆ ಸಾರು ಮಾಡ್ಬುಟ್ಟಿದ್ದೀನಿ ಬುದ್ಧಿ
ಊಟ ಮಾಡಿ ಭಿನ್ನ ಆಳೀರಿ ನನ್ನಪ್ಪ ಎಂದರು
ಮಾಚಪ್ಪ ಸಾಕು ಬಾಯ್ಮುಚ್ಚು
ಒಳ್ಳೊಳ್ಳೆ ಮಾಂಸಾಹಾರಗಳ ಎಲ್ಲಾನು ತಕೊಂಡು ಮಗನೇ
ಪೊಟ್ಟಣಾ ಕಟ್ಟಿ ಅಟ್ಟದ ಮೇಲೆ ಮಡೀಕೊಂಡು
ಈ ಕೆಟ್ಟ ಮಾಂಸಾಹಾರಗಳೆಲ್ಲಾನು ಅಡಿಗೆ ಮಾಡಿ ನನಗೆ ಎಡೆ ಪಡಿಸಿದ್ದೀಯ ಕಂದ
ಮಾಚಯ್ಯ ಈಗಲೀಗ ಇದೇ ಮಾಂಸ
ನಾನು ಊಟ ಮಾಡುಕೊಂಡು
ನಿನ್ನ ಮನೆವೊಳಗೆ ಭಿನ್ನ ಅಳಿದುಬಿಟ್ಟು
ನಿನ್ನಟ್ಟಿ ಅರಮನೆ ಬಿಟ್ಟು
ಹೊರಗೊಂಟೋಯ್ತೀನಿ ಕಂದಾ
ನೀವು ಸತಿ ಪತಿ ಗಂಡ ಹೆಂಡ್ತೀರು
ಅತೀ ಸಂತೋಷದಲ್ಲಿ ಎತ್ತು ಮಡೀಕೊಂಡುರುವಂಥ ಮಾಂಸ ಬಿಚ್ಚಿ ನೋಡುವುದರೊಳಗಾಗಿ

ನಾನು ಕಾಲಿನ ಮಾಂಸದಲ್ಲಿ
ಲೋ ಕಾಲಿನ ಹುಳುವಾಗುತೀನಿ
ಲೋ ಕೈಯ್ಯಿನ ಮಾಂಸದಲ್ಲಿ
ನಾನು ಹುಳುವಾಗುತೀನಿ
ನಾ ತಲೆ ಮಾಂಸದಲ್ಲಿ ಕಂದ
ತಲೆಹುಳುವಾಗುತೀನಿ
ನಾ ಇಲ್ಲಿ ಮಾಡದ ಊಟ ಕಂದ
ಅಲ್ಲೇ ಊಟ ಮಾಡುತೀನಿ || ಸಿದ್ಧಯ್ಯ ||

ಇಲ್ಲಿ ನಿನ್ನೊಂದಿಗೆ ಊಟ ಮಾಡುವ ಊಟ
ಅಲ್ಲಿ ನಾನು ಊಟ ಮಾಡ್ತೀನಿ ಮಾಚಪ್ಪ ಎಂದರು
ತೆಪ್ಪುದುವಲ್ಲೋ ಗುರುದೇವ ತೆಪ್ಪುದುವಲೋ ನನ್ನಪ್ಪ ಅಂತ್ಹೇಳಿ
ಮಡುವಾಳು ಮಾಚಪ್ಪ ಮಲ್ಲಿಗದೇವಿ
ತೆಪ್ಪಿದೀ ತೆಪ್ಪಿದೀ ಗುರುದೇವ ಎನುತೇಳಿ
ಐದು ಹಣ ಕಾಣಿಕೆ ತಕೊಂಡೋಗಿ
ಭಾರಿ ಕಂಡಾಯ್ಕೆ ತಪ್ಪು ಗಾಣಿಕೆ ಕಟ್ಕೊಂಡು
ಈಗಲೀಗ ಜಗತ್ತು ಗುರುಗಳ
ಮೊಕಾ ಕಣ್ಣಿಂದ ನೋಡುವಾಗ ಮಾಚಪ್ಪ
ಈ ರೀತಿ ಹರಿಸೇವೆ ನೀನ್ಯಾತಕ್ಕೇ ಮಾಡಿದೆ
ಈ ರೀತಿ ಮೋಸದ ಸೇವೆ ಯಾಕೆ ಮಾಡ್ಬುಟ್ಟೆ ಕಂದಾ
ನನ್ನ ಕೆಟ್ಟು ದೇವರು ಎನ್ನುವುದು
ನಿನಗೆ ಇನ್ನೂವೆ ಗೊತ್ತಾಗಲಿಲ್ವಾ || ಸಿದ್ಧಯ್ಯ ||

ನನ್ನ ಕೆಟ್ಟ ದೇವ್ರು ಎನ್ನುವುದು
ನನ್ನ ದೃಷ್ಟ ದೇವ್ರು ಎನ್ನುವುದು
ನನ್ನ ಮೈಮೆ ಮೈತ್ಗಾರ
ಇನ್ನೂವೆ ಗೊತ್ತಾಗಲಿಲ್ವ ಮಗನೇ
ನನ್ನ ಮೈಮೆ ಎನ್ನುವುದು
ಇನ್ನೂವೆ ನಿನಗೆ ತಿಳಿಯಲಿಲ್ವ
ನಾನು ಕಡಿದು ಕೆತ್ತಿದ ಲಿಂಗವಲ್ಲ
ಒಡೆದುಮೂಡಿದ ಲಿಂಗವಲ್ಲ || ಸಿದ್ಧಯ್ಯ ||

ಭೂಲೋಕ ಪಡೆದವರು
ಕಂದಾ ಭೂಮಿ ಭೂಲೋಕ
ಕಲ್ಯಾಣದ ಕೈಲಾಸ
ಈ ಮರ್ತ್ಯಲೋಕವ ಕಂದ
ತಂದಂಥ ನಾವು
ಮುನಿಗೋಳು ನನ್ನ ಕಂದ
ನನ್ನ ಯಾವ ದೇವರು ಎನ್ನುವುದು
ಇನ್ನೂ ಗೊತ್ತಾಗಲಿಲ್ವ || ಸಿದ್ಧಯ್ಯ ||

ಯಾವ ದೇವರು ಎನ್ನುವುದು ಕಂದಾ
ನನ್ನ ಮೈಮೆ ಮೈತ್ಗಾರ ಕಂದ
ಇನ್ನೂ ಗೊತ್ತಾಗ್ಲಿಲ್ವ ಮಗನೆ
ಮಡುವಾಳು ಮಾಚಪ್ಪ ಎಂದರು
ತೆಪ್ಪದೇ ಗುರುದೇವ ತೆಪ್ಪದೇ ನನ್ನಪ್ಪ ಹಾಗಂದು
ಶಿವಶರಣನಾದ ಮಾಚಪ್ಪ
ಎತ್ತುಮಡೀಕೊಂಡಿರ್ತಕ್ಕಂಥ
ಕಾಲು ಕೈಯ್ಯಿ ತಲೆ ತಗದು
ಮಡಿವಾಳ ಮಾಚಪ್ಪ ತಾಯಿ ಮಲ್ಲಿಗದೇವಿ

ಒರಳಲ್ಲಿ ಮಡಗವರೆ
ಗುರುವೇ ಒನಕೇಲಿ ಹಿಡಿದವರೆ
ಅವರು ತಲೆ ಮಾಂಸದಲ್ಲಿ ಗುರುವೆ
ಕೈಮ ಸಾರು ಮಾಡುತಾರೆ || ಸಿದ್ಧಯ್ಯ ||

ಗುರುವೇ ತಲೆ ಮಾಂಸ ತಗದು
ಕಾಲಿನ ಮಾಂಸದೊಳಗೆ
ಕೈಯ್ಯಿನ ಮಾಂಸದೊಳಗೆ
ಅಡಿಗೆಯ ದುಡುಗವರೆ
ನನ್ನ ಮಡುವಾಳ ಮಾಚಪ್ಪ
ತಾಯಿ ಮಾದೇವಮ್ಮ
ಅವರು ಧರೆಗೆ ದೊಡ್ಡವರಿಗೆ
ತಂದು ಎಡೆಯ ಮಾಡುತಾರೆ || ಸಿದ್ಧಯ್ಯ ||

ಜಗತ್ತು ಗುರು ಧರೆಗೆ ದೊಡ್ಡವರಿಗೆ ದೇವಾ
ತಂದು ಎಡೆ ಪಡುಸ್ಬುಟ್ಟು
ಶಿವಶರಣನಾದ ಮಾಚಪ್ಪ ತಾಯಿ ಮಲ್ಲಿಗದೇವಿ
ಗುರುದೇವ ಈಗ ಎಲ್ಲಾ ಮಾಂಸ ಸಾರನ್ನು ಅಡಿಗೆ ಮಾಡಿ
ಎಡೇಪಡಿಸೀವಿ ತಂದೆ
ಎಡೇಪಡಿಸಿವ್ನಿ ನನ್ನಪ್ಪ

ಗುರುವೇ ಈಗಲಾದರೂ ಗುರುವು
ನೀವು ಭಿನ್ನ ಅಳಿಯಪ್ಪ ಗುರುವೇ || ಸಿದ್ಧಯ್ಯ ||

ಈಗಲಾದರೂ ನನ್ನ ದೇವಾ
ಭಿನ್ನ ಅಳಿ ನನ್ನ ದೇವಾ
ಊಟ ಮಾಡಿ ಗುರುದೇವ
ಭಿನ್ನ ಅಳಿರಿ ಗುರುವೇ ಎಂದರು
ಮಾಚಪ್ಪನ ಮಾತು ಕೇಳ್ಕೊಂಡು ಮಾಗುರು ಮಂಟೇಸ್ವಾಮಿ

ಮಾಚಯ್ಯ ಈಗ ನಿಮ್ಮ ಮನೆವೊಳಗೆ ನನಗೆ ರುಚಿಯಾದ ಅಡಿಗೆ
ನಿಮ್ಮ ಮನೇವೊಳಗೆ ನನ್ನ ಕಂದ
ರುಚಿಯಾದ ಊಟ ನನ್ನ ಕಂದ
ಮಾಚಪ್ಪ ಈಗ ನಿಮ್ಮ ಮನೇವೊಳಗೆ
ಭಿನ್ಯ ಅಳಿತೇನಿ ಊಟ ಮಾಡ್ತೀನಿ
ನಾನು ಹುಟ್ಟಿ ಬೆಳೆದ ಕಾಲದಿಂದ ಕಂದಾ
ಇಕ್ಕಿದಂಥ ಎಲೆ ಮುಂಭಾಗದಲ್ಲಿ ನಾನು ಒಬ್ಬನೇ ಕುಳಿತು
ಯಾವಾಗಲೂ ಭಿನ್ನ ಅಳಿದಿಲ್ಲ ಮಗನೆ
ನೀನಾದರೂ ಸರಿಯೇ ನನ್ನ ಕಂದ
ನಿನ್ನ ಮಡದಿಯಾದರೂ ಸರಿ ಮಗನೆ

ಕಂದಾ ಇಬ್ಬರಲ್ಲಿ ಒಬ್ಬರು ಬಂದು
ಒಂದುಗೂಟವ ಮಾಡಿರಪ್ಪ|| ಸಿದ್ಧಯ್ಯ ||

ಕಂದ ಇಬ್ಬುರಲ್ಲಿ ಕಂದಾ
ಒಬ್ಬರು ಬಂದು
ಒಂದಿಗೆ ಕಂದ ನೀವು
ಊಟವ ಮಾಡಿರಪ್ಪ
ನನ್ನ ಒಂದಿಗೆ ಕಂದ ನೀವು
ಭಿನ್ನ ಅಳೀರಪ್ಪ
ಅಯ್ಯಾ ನಿಮ್ಮೊಂದಿಗೆ ಕಂದ ನಾನು
ಹಗಲು ಭಿನ್ನ ಅಳಿಯುತೇನಿ || ಸಿದ್ಧಯ್ಯ ||

ಮಾಚಪ್ಪ
ಹುಟ್ಟಿ ಬೆಳೆದ ಕಾಲದಿಂದ
ಒಂದು ಎಡೆ ಮುಂಭಾಗದಲ್ಲಿ ನಾನು ಒ‌ಬ್ನೆ ಕುಳಿತು
ಭಿನ್ನ ಅಳೀದಿಲ್ಲ ಕಂದ
ನೀನಾದರೂ ಸರಿಯೇ ನಿನ್ನ ಮಡದಿಯಾದರು ಸರಿಯೇ
ಇಬ್ರಲ್ಲಿ ಯಾರಾದರೂ ಒಬ್ಬರು ಬಂದು
ನನ್ನ ಒಂದಿಗೆ ಕೂತ್ಕಂಡು ಭಿನ್ನ ಅಳಿಯಪ್ಪ ಊಟಮಾಡು ಕಂದ ಎಂದರು
ಧರೆಗೆ ದೊಡ್ಡವರ ಮಾತನ್ನೇ ಕೇಳಿಕೊಂಡು
ಶಿವಶರಣ ಮಡುವಾಳು ಮಾಚಪ್ಪ ಮಲ್ಲಿಗದೇವಿ
ಧರೆಗೆ ದೊಡ್ಡವರ ಜೊತೆವೊಳಗೆ
ನಾನೂ ಕೂಡ ಊಟಮಾಡಿ ಭಿನ್ಯ ಅಳೀಬೇಕಂತಲ್ಲ ಮಡದಿ

ಜಲ್ಮ ಕೊ‌ಟ್ಟ ತಂದೆ ನಾನು
ಕೇಳೆಣ್ಣೆ ಮಡಿದೀಯೆ
ನನ್ನ ಮಗನ ಮಾಂಸ ನಾನು
ಸೇವಿಸಬಹುದಾ || ಸುವ್ವಾ ಬಾ ||

ನನ್ನ ಮಗ ಈರಣ್ಣನ ಮಾಂಸಾಹಾರಗಳಾs
ಖಂಡಿತವಾಗಿ ನಾನು ಸೇವಿಸಲಾರಿ ಮಡದಿ
ನಾನು ಭಿನ್ನ ಅಳೀಲಾರಿ ಮಡದಿ ಎಂದುರು
ಪತೀ ದೇವರೆ ಮಾಚಪ್ಪ
ನೀವು ಭಿನ್ನ ಅಳಿಯದಿಲ್ಲ ಊಟ ಮಾಡುದಿಲ್ಲ ಅಂತ ಹೇಳ್ತೀರಿ ಗುರುವು
ಜಲ್ಮ ಕೊಟ್ಟವರು ನೀವಾದರೆ
ನವನಾರು ತಿಂಗಳು ಹೊತ್ತಿ ತಟ್ಟಿ ಸಾಕಿ
ಸಲುಗಿರುವ ಹೆತ್ತ ತಾಯಿ ನಾನಲ್ವ ಗುರುವು

ನನ್ನ ಮಗನ ಮಾಂಸಾರವ
ನಾನು ಊಟ ಮಾಡಲಾರಿ || ಸಿದ್ಧಯ್ಯ ||

ನನ್ನ ಮಗನ ಮಾಂಸಾಹಾರವ ಸ್ವಾಮಿ
ಖಂಡಿತವಾಗಿ ನಾನು ಸಲ್ಲಿಸಲಾರಿ ಊಟಮಾಡಲಾರಿ ಗುರುದೇವಾ ಎಂದರು
ಆಗ ಮಡುವಾಳು ಮಾಚಪ್ಪ
ಧರೆಗೆ ದೊಡ್ಡವರು ಮುಂಭಾಗದಲ್ಲಿ ಮಾತಾಡ್ತವರೆ
ನೀವು ನೋಡಿದರೆ ಭೂಮಿ ಭೂಲೋಕಕ್ಕೆ ದೊಡ್ಡವರ
ಈ ನರಲೋಕಕ್ಕೆ ಹಿರಿಯವರು
ನಾವು ನೋಡಿದ್ರೆ ಸ್ವಾಮಿ
ಸತೀ ಪತಿ ಉಳ್ಳಾದವರು
ನಾವು ಭಿನ್ನಕ್ಕೆ ಒಳಗಾಗಿವಿ ಸ್ವಾಮಿ
ಸತ್ಯು ಪುರುಷರ ಜೊತೇವೊಳಗೆ ನಾವು ಊಟ ಮಾಡಬಾರ್ದು
ಗುರುವೇ
ನೀವೇ ಊಟ ಮಾಡಿ ತಂದೆ ಎಂದರು
ಹೌದೌದು ಮಾಚಪ್ಪ ನೀವು ಸತೀಪತಿ ಆದಮೇಲೆ
ಭಿನ್ನ ಆಗ್ಬುಟ್ಟಿದ್ದೀರಿ ಕಂದ
ಮುಟ್ಟು ತಟ್ಗೆ ಒಳಗಾಗ್ಬುಟ್ಟಿದ್ದೀರಿ
ನಮ್ಮ ಸತ್ಯು ಪುರುಷರ ಜೊತೆವೊಳಗೆ ಊಟ ಮಾಡಬಾರದು
ನೀವು ಭಿನ್ನ ಅಳೀಬಾರ್ದು ನನ್ನ ಕಂದ
ಮಾಚಯ್ಯ ಮುಟ್ಟು ತಟ್ಗೆ ಒಳಗಾಗದೇ ಇರುವವರು ಅಂದ್ರೆ
ನಿನ್ನ ಹೊಟ್ಟೇಲಿ ಒಬ್ಬ ಮಗ ಹುಟ್ಟಿದಾನಲ್ಲ
ನಿನ್ನ ಮಗನು ವೀರಣ್ಣ ಕಂದಾ
ಅವನು ಮುಟ್ಟು ತಟ್ಟಿಗೆ ಒಳಗಾಗಿಲ್ಲ ಮಾಚಪ್ಪ
ಭಿನ್ನಕ್ಕೆ ಗುರಿಯಾಗಿಲ್ಲ
ಏಳು ವರ್ಷದ ಮಗನು ಎಳೆಯ ಈರಣ್ಣ

ನಿನ್ನ ಕಂದನ ಕರಕೊಂಡು
ಅವನ ಒಂದಿಗೂಟ ಮಾಡತೀನಿ || ಸಿದ್ಧಯ್ಯ ||

ನಿನ್ನ ಕಂದನ ಕರಕೊಂಡು ಕಂದ
ಒಂದಿಗೆ ಊಟ ನಾ ಮಾಡ್ತೀನಿ
ನನ್ನ ಕಂದ ಮಡುವಾಳು ಮಾಚಪ್ಪ
ನಿನ್ನ ಮಗನ ಈರಣ್ಣನವರ
ಕಳುಗಪ್ಪ ಎಂದರಲ್ಲ

ನಿಮ್ಮ ಮಗನು ವೀರಣ್ಣನ ಕರ್ಕೊಂಡು ಮಾಚಪ್ಪs
ಅವನಾ ಒಂದಿಗೆ ಭಿನ್ನ ಅಳಿತೀನಿ ಕಂದ
ಊಟ ಮಾಡುತೀನಿ ಮಡಿವಾಳ ಮಾಚಯ್ಯ
ನಿಮ್ಮ ಮಗನಾರು ಕಳುಗು ಕಂದಾ ಎಂದರು
ಗುರುದೇವ ನನ್ನ ಮಗನಾದ ವೀರಣ್ಣನ ಕೇಳಿದ್ರಿಯಾ
ಏನು ಅಂದರೆ ನಿಮ್ಮ ಜೊತೇವೊಳಗೆ ಏನಂಥ ಹೇಳುಬೇಕು ಗುರುವೂ
ನಾನಾಗಿ ಹೇಳುಬಾರದು ನೀವಾಗಿ ಕೇಳುಬಾರದು ನನ್ನಪ್ಪ
ಗುರುದೇವ, ಆರ್ತಿಂಗಳು ಕಾಲದಿಂದ
ಅಜ್ಜಮ್ಮನ ಮನೆಗೆ ನಾನು ಹಬ್ಬಕ್ಕೋಗದಿಲ್ಲ ಅಂತ್ಹೇಳಿ
ಅವನ ತಾಯಿ ಒಂದಿಗೆ ಹೋಗಲಿಲ್ಲ ನನೊಂದಿಗೆ ಕೂಡ ಬರ್ಲಿಲ್ಲ

ಅಟ್ಟಿ ಅರಮನೇಲಿ ಇದ್ದಂಥ ಮಗನು ಈರಣ್ಣ
ಇವತ್ತು ತಾಯಿ ತಂದೆ ಇಬ್ಬರೂ ಮಾತನ್ನು ಮೀರ್ಬುಟ್ಟು

ಅವನು ಅಜ್ಜಮ್ಮನ ಮನೆಗೆ ಸ್ವಾಮಿ
ಹೊರಟೋದ ಮಾಯಕಾರ

ಅವರ ಅಜ್ಜಮ್ಮನ ಮನೆಗೆ
ಹಬ್ಬಕ್ಕೆ ದೇವ
ಹೊರಟೋದ ನನ್ನ ಗುರುವು
ಅವನು ಈ ಹೊತ್ತು ಬಂದಾನೋ
ನಾಳಿಕೆ ಬಂದಾನೋ
ನಾಳಿದ್ದೇ ಬಂದಾನೋ
ನನಗೆ ಗೊತ್ತಿಲ್ಲ ಗುರುವು
ನನ್ನ ಮಗನು ಮನೇಲಿಲ್ಲ
ಊಟನಾದರೆ ಮಾಡಿಗುರುವು

ನನ್ನ ಮಗ ವೀರಣ್ಣ ನನ್ನ ಮನೇಲಿಲ್ಲ ಸ್ವಾಂಇ
ಊಟ ಮಾಡಿ ಭಿನ್ಯ ಅಳೀರಿ ನನ್ನಪ್ಪ ಸ್ವಾಮಿಭಿನ್ಯಳೀರಿ ಸ್ವಾಮಿ ಎಂದರು
ಮಾಚಯ್ಯ ನಿನ್ನ ಮಗ ಹಾಗಾದರೆ ಖಂಡತವಾಗೂ ಮನೇಲಿಲ್ವ?
ಖಂಡಿತವಾಗೂ ಇಲ್ಲ ಸ್ವಾಮಿ
ಮಾಚಪ್ಪ ನನ್ನ ಮಗ ಮನೇಲಿಲ್ಲ
ಭಿನ್ಯ ಅಳುದ್ಬುಟ್ಟು ಊಟ ಮಾಡ್ಬುಡಿ ಅಂತ ಕೇಳಿದ್ಯಲ್ಲೋ ಕಂದ ಮಾಚಪ್ಪ
ಈಗಲೀಗ ನೀವು ಸತೀ ಪತಿ ಅಂದ್ರೆ ಕಂದ ನನಗೆ ಬೇಕಿಲ್ಲದ ಮಕ್ಕಳು
ನನಗೆ ಬೇಕಾಗ್ತಿರಕ್ಕಂಥವ್ನೆ ಕಂದ ವೀರಣ್ಣ

ನಿನ್ನ ಮಗ ಬರೂಗಂಟ ನಾನು
ಆಗಲು ಭಿನ್ನ ಅಳಿಯೋದಿಲ್ಲ

ನಿನ್ನ ಮಗನು ಬರುವ ತನಕ
ಭಿನ್ನ ಅಳಿಯೋದಿಲ್ಲ
ನಾ ಊಟ ಮಾಡೋದಿಲ್ಲ
ನಾ ವೀಳ್ಯ ಸೇವ್ಸೊದಿಲ್ಲ ಕೇಳಪ್ಪ ಮಾಚಯ್ಯ
ನಿನ್ನ ಮಗನು ಬರೂತನಕ
ನಿನ್ನ ಮನೇಬಿಟ್ಟು ಹೊಗೋದಿಲ್ಲ

ಕೇಳಪ್ಪ ನನ ಕಂದಾ
ನಿನ್ನ ಮಗ ಈರಣ್ಣನವರು ಬರೂತನಕ
ನಾನು ಮಾತ್ರ ಮನೇಬಿಟ್ಟು ಹೊರಗೋಗೋದಿಲಲ
ನಾನು ಮಾತ್ರ ಖಂಡಿತವಾಗ್ಲೂ ಭಿನ್ಯಅಳಿಯುವುದಿಲ್ಲ ಕಂದ ಎಂದರು
ಆಗ ಮಡುವಾಳ ಮಾಚಪ್ಪ
ತನ್ನವೆರಡು ಕೈ ತಗದು ತನ್ನ ತಲೇ ಮೇಲೆ ಇಟ್ಟುಕೊಂಡು
ಭೂಮೀಲಿ ಕೂತಕೊಂಡು
ಯೋಚ್ನೆ ಚಿಂತೆ ಮಾಡ್ತಿದ್ದ
ಚಿಂತೆ ಮಾಡುವಂಥ ಪತಿ ದೇವರು ಮಾಚಪ್ನ ನೋಡ್ಕಂಡು
ತಾಯಿ ಮಲ್ಲಿಗದೇವಿ ತನ್ನ ಮನ್ಸಲ್ಲಿ ಯೋಚ್ನೆ ಮಾಡ್ತಾವ್ಳೆ
ನನ್ನ ಪತೀ ದೇವರು ಮಾಚಪ್ಪ
ಧರೆಗೆ ದೊಡ್ಡವರಿಗೆ ಸುಳ್ಳು ಮಾತೇಳ್ಬುಟ್ರು
ಅದ್ರಿಂದ ನನ್ನ ಪತಿದೇವ್ರು
ಆಡಿದ ಮಾತಿಗೆ ಜಗತ್ತು ಗುರುಗಳು ಭಿನ್ನ ಅಳಿಯೋದಿಲ್ಲ
ಈಗ ನಿಜವಾದ ಮಾತನ್ನಾದರೂ ನಾ ಆಡಿಬುಟ್ಟು
ಈಗ ಊಟ ಮಾಡಿಸ್ಬುಟ್ಟು
ಧರೆಗೆ ದೊಡ್ಡವರ ಮನಿಂದಾಚೆಗೆ ಕಳುಗಿಸ್ಬುಡಬೇಕು ಅಂತೇಳಿ
ಆಗ ತಾಯಾದ ಶಿವಶರಣೆ ಮಲ್ಲಿಗಮಾದೇವಿಮ್ಮ ಬಂದು
ಏನಂಥ ಮಾತಾಡ್ತಳೆ ಅಂದರೆ
ಕೇಳಪ್ಪ ಜಗದೊಡೆಯಾ
ಕೇಳಿ ಸ್ವಾಮಿ ಪರಂಜ್ಯೋತಿ ಪಾವನ ಮೂರುತಿ
ಗುರುದೇವಾ
ಅಂಜಿ ಭಿನ್ನಮಾಡಬೇಕೋ
ಅಂಜದೆ ಭಿನ್ನ ಮಾಡಬೇಕೋ ನನ್ನಪ್ಪ ಎಂದರು
ಮಲ್ಲಿಗಮಾದೇವಮ್ಮ
ಯಾತುಕ್ಕೆ ಅಂಜಿ ಅಳಿಕಿ ಭಿನ್ನಮಾಡಿಯವ್ವ
ಅಂಜದೆ ಭಿನ್ನ ಮಾಡ್ಬುಡು ಎಂದರು
ಸ್ವಾಮಿ ನನ್ನ ಪತೀ ದೇವ್ರು ಮಾಚಪ್ಪಂದೂ ತಪ್ಪಲ್ಲ ಸ್ವಾಮಿ
ನನ್‌ ಪತೀ ಮಾಚಪ್ಪನಿಗೆ
ನಾನೇ ಹೇಳ್ಬುಟ್ಟು ಗುರುದೇವ

ನಾನು ಹೆತ್ತ ಮಗನ ಕೂದು
ಅಡಿಗೆ ನಾನು ದುಡುಗದನಪ್ಪ

ಜಲುಮ ಕೊಟ್ಟ ತಂದೆ ಹೆತ್ತತಾಯಿ
ನಾವು ಗಂಡ ಹೆಂಡ್ತೀರು ಇಬ್ರೂ ಸೇರಿ
ಮಗನ ಕೂದು ಅಡುಗೆ ಮಾಡ್ಬುಟ್ಟೊ ಸ್ವಾಮಿ ಎಂದುರು
ಮಲ್ಲಿಗಮಾದೇವಮ್ಮ
ಮಗನ್ನೇ ಕೂದು ಅಡಿಗೆ ಮಾಡ್ಬುಟ್ರಿಯಾ
ಖಂಡಿತವಾಗು ಮಾಡ್ಬುಟ್ಟೊ ಸ್ವಾಮಿ ಎಂದರು
ಮಾದೇವಿ ನಿನ್ನ ಪತೀದೇವ್ರು ಮಾಚಪ್ಪನ ನೋಡಿದ್ರೆ
ಅಜ್ಜಮ್ಮನ ಮನೆಗೆ ಮಗ ಹಬ್ಬಕ್ಕೋಗವ್ನೆ ಅಂತ ಹೇಳ್ತರೆ
ನೀನು ನೋಡಿದ್ರೆ ನನ್ನ ಮಗನ್ನೇ ಕೂದು ಅಡಿಗೆ ಮಾಡ್ಬುಟ್ಟೊ ಅಂಥ ನೀ ಹೇಳ್ತೀಯೆ ಕಂದ

ನಿಮ್ಮ ಗಂಡ ಹೆಂಡ್ತೀರ ಮಾತ
ನಾ ಒಪ್ಪೋದಿಲ್ಲ ಎಂದರಂತೆ

ನಿಮ್ಮ ಗಂಡ ಹೆಂಡ್ತೀರs
ನಿಮ್ಮಗಳ ಮಾತ ನಾನು ಒಪ್ಪೋದಿಲ್ಲ
ನೆಂಬೋದಿಲ್ಲ ನನ್ನ ಕಂದ ಎಂದರು
ಗುರುದೇವ ನನ್ನ ಪತಿ ಆಡಿದ ಮಾತು ಸುಳ್ಳು
ನಾನಾಡ್ತಕದ್ದೆ ಮಾತು ನಿಜಾ ಸ್ವಾಮಿ
ನನ್ನ ಮಗನ ನಾನೇ ಕುಯ್ಸಿ ಅಡಿಗೆ ದುಡುಗ್ಬುಟ್ಟೆ ಗುರುವೇ ಎಂದರು
ಮಲ್ಲಿಗಮಾದೇವಮ್ಮ ಮಡಿವಾಳ ಮಾಚಪ್ಪ
ನಿಮ್ಮ ಮಗನ ಕೂದು ಅಡಿಗೆ ಮಾಡಿದ ಪಕ್ಷದಲ್ಲಿ
ನಿಮ್ಮ ಮಗ ಸತ್ತು ಸ್ವರ್ಗ ಸೇರ್ಬುಟ್ಟವ್ನೆ
ಸತ್ತ ಮಗ ಆಗಲೀಗ ನೀವು ಎಷ್ಟು ಸಾರಿ ಕೂಗುದ್ರು ಕೂಡ ಬರಲಿಲ್ಲ
ಈಗಲೀಗ ನಿಮ್ಮ ಗಂಡ ಎಡ್ತೀರ ದುಡಾ ನೋಡ್ಬೇಕಾದರೆ
ನಿಮ್ಮ ಗಂಡ ಎಡ್ತೀರ ಸತ್ಯು ನೋಡ್ಬೇಕಾದರೆ ಕಂದ

ವೀರಣ್ಣ ವೀರಣ್ಣ ಅಂತ
ನೀವು ಮೂರುಸಲ ಕರೀರಪ್ಪ || ಸಿದ್ಧಯ್ಯ ||
ಅಯ್ಯೋ ವೀರಣ್ಣ ಎನುತೇಳಿ ಕಂದ
ಮೂರು ಸಲ ಕರಿಯಿರಪ್ಪ || ಸಿದ್ಧಯ್ಯ ||

ವೀರಣ್ಣ ವೀರಣ್ಣ ಎಂದುs
ಮೂರು ಸಲ ಕರದ್ಬುಡಿ
ನಿಮ್ಮ ಮಗ ಬಂದರೆ ಕರ್ಕೊಂಡು ಭಿನ್ನ ಅಳಿದು ಊಟಮಾಡ್ತೀನಿ
ನಿಮ್ಮ ಮಗ ಬರ್ದೇ ಹೋಗ್ಬುಟ್ರೆ ಕಂದಾ
ನಾನು ಒಬ್ನೇ ಊಟ ಮಾಡಿಬುಟ್ಟು
ನಿಮ್ಮಟ್ಟಿ ಅರಮನೆ ಬುಟ್ಟು ಹೊಂಟೋಯ್ತೀನಿ ಕಂದ

ನಿಮ್ಮ ಮಗನು ವೀರಣ್ಣನವರ
ಕೂಗುರಪ್ಪ ಎಂದರಲ್ಲ || ಸಿದ್ಧಯ್ಯ ||